ಜಯಶ್ರೀ ಕಾಸರವಳ್ಳಿ: ಪ್ರೀತಿಯೆಂದರೇನು ಎಂಬುದಕ್ಕೆ ಇಲ್ಲಿದೆ ಉತ್ತರ..

ಪ್ರೀತಿಯ ಅಮರತ್ವವನ್ನು ಸಾರುವ ಓರ್ಹಾನ್ ಪಾಮುಕ್ನ ‘ದ ಮ್ಯೂಸಿಯಂ ಆಫ್ ಇನ್ನೊಸೆನ್ಸ್’  

– ಜಯಶ್ರೀ ಕಾಸರವಳ್ಳಿ

ನೊಬೆಲ್ ಪ್ರಶಸ್ತಿ ಬಂದ ನಂತರ ಪ್ರಕಟಗೊಂಡ ಓರ್ಹಾನ್ ಪಾಮುಕ್ ನ ಬೃಹತ್ ಕಾದಂಬರಿಯೇ ‘ದ ಮ್ಯೂಸಿಯಂ ಆಫ್ ಇನ್ನೊಸೆನ್ಸ್’. ಒಂದು ಪ್ರೇಮಪ್ರಕರಣದ ಅತಿರೇಕದ ಪರಮಾವಧಿಯಂತೆ ಮೇಲುನೋಟಕ್ಕೆ ಕಾಣುವ ಈ ಮಹಾಕತೆ ಪ್ರೀತಿಯ ಅಮರತ್ವವನ್ನು, ಮಮ್ತಾಜ್ ಮೇಲಿನ ಪ್ರೀತಿಯನ್ನು ಶಹಜಾನ್ ತಾಜಮಹಲ್ ಕಟ್ಟಿ ಜಗತ್ತಿಗೆ ತೋರಿಕೊಟ್ಟಂತೆ, ಪ್ರೀತಿಮತ್ತನಾದ ಕೆಮಾಲ್ ಆಗೀಗ ತಾನು ಸಂಗ್ರಹಿಸಿದ್ದ ತನ್ನ ಪ್ರಿಯತಮೆಯ ಆಪ್ತ ವಸ್ತುಗಳಾದ ಹೇರ್ ಪಿನ್ ಗಳನ್ನು, ಬಾಚಣಿಗೆ, ಕಿವಿಯ ಲೋಲಾಕು, ಸಿನಿಮಾ ಟಿಕೇಟುಗಳನ್ನು, ಅವಳು ಸೇದಿ ಎಸೆದ ಸಿಗರೇಟಿನ ತುಂಡುಗಳನ್ನು, ಅವಳು ಸತ್ತ ನಂತರ ಅವಳು ವಾಸವಿದ್ದ ಮನೆಯನ್ನು ಕೊಂಡು, ಅವಳು ಉಪಯೋಗಿಸಿದ್ದ ಬಟ್ಟೆಬರೆ-ಪಾತ್ರೆಪದಾರ್ಥಗಳನ್ನು ಕಲೆಹಾಕಿ ಅವಳ ನೆನಪಿನಲ್ಲಿ ಒಂದು ಮ್ಯೂಸಿಯಂ ತೆರೆದು, ನಂತರ ತಾನು ಕಂಡ ಸುಂದರ ಬದುಕನ್ನ ಬರೆದು ಪ್ರಪಂಚಕ್ಕೆ ತೋರು ಎಂದು ಓರ್ಹಾನ್ ಪಾಮುಕ್ ನನ್ನು ಕರೆದು ‘ಲೆಟ್ ಎವೆರಿಒನ್ ನೊ ಐ ಹಾವ್ ಲಿವ್ಡ್ ಎ ವೆರಿ ಹ್ಯಾಪಿ ಲೈಪ್- ಆ ಕುರಿತು ಒಂದು ಕಾದಂಬರಿ ಬರೆಯುವಂತೆ ಕೇಳಿಕೊಳ್ಳುತ್ತಾನೆ. ಇದು ಕಾದಂಬರಿಯ ಮೂಲಾಂಶ. ನಮ್ಮ ಹಿಂದಿ ಸಿನಿಮಾಗಳನ್ನು ಸ್ವಲ್ವಮಟ್ಟಿಗೆ ಜ್ಞಾಪಕಕ್ಕೆ ತರುವ, ಪ್ರೀತಿ ಹುಚ್ಚನಾಗಿ ಪಾನಮತ್ತನಾದ ದೇವದಾಸ್ ನನ್ನು ನೆನಪಿಗೆ ತರುವ, ಬಡಕುಟುಂಬದಿಂದ ಬಂದ ತನ್ನ ದೂರದ ಸಂಬಂಧಿ, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಇದೀಗ ಒಂದು ಅಂಗಡಿಯಲ್ಲಿ ಶಾಪ್ ಗರ್ಲ್ ಆಗಿರುವ ಹದಿನೆಂಟು ವರುಷದ ಫ್ಯುಸುನ್ ನ ಅಪ್ರತಿಮ ಸೌಂದರ್ಯದ ಮಾಂತ್ರಿಕ ಬಲೆಯೊಳಗೆ ಅಚಾನಕವಾಗಿ ಬೀಳುವ ಪ್ರತಿಷ್ಠಿತ ಮನೆತನದಿಂದ ಬಂದ ಕೆಮಾಲ್ ಗೆ ಆಗಲೇ ಮತ್ತೊಂದು ಪ್ರತಿಷ್ಠಿತ ವಂಶದ ಹುಡುಗಿ ಸಿಬಿಲ್ ಜೊತೆ ಮದುವೆ ಗೊತ್ತಾಗಿ, ಇನ್ನೇನು ನಿಶ್ಚಿತಾರ್ಥವಾಗಲಿದೆ. ಆದರೆ ಅವನ ದುರಾದೃಷ್ಟಕ್ಕೆ ತನಗೆ ಗೊತ್ತಾದ ಹುಡುಗಿ ಯಾವುದೋ ಅಂಗಡಿಯಲ್ಲಿ ಕಂಡ ಒಂದು ಯಃಕಶ್ಚಿತ್ ಬ್ಯಾಗನ್ನು ಮೆಚ್ಚಿ, ಕೇಳಿದಾಗ ಕೇವಲ ಆ ಬ್ಯಾಗ್ ತರಲು ಅಂಗಡಿಗೆ ನುಗ್ಗುವ ಕೆಮಾಲ್ ನ ಬದುಕಿನ ದಿಕ್ಕೇ ಹೇಳಹೆಸರಿಲ್ಲದಂತೆ ಬದಲಾಗುತ್ತದೆ; ದಿಕ್ಕಾಪಾಲಾಗಿ ಹೋಗುತ್ತದೆ…. ಆಮೇಲೇನಿದ್ದರೂ ಹುಡುಗಿಯ ಬೆನ್ನೇರಿ ಹುಚ್ಚಾಪಟ್ಟೆ ತಿರುಗುವ ಕೆಮಾಲ್ ನ ಕತೆ – ಒಂದು ರೀತಿಯ ‘ಫೇಟಲ್ ಅಟ್ರಾಕ್ಷನ್’ ತರ. ಹುಚ್ಚು ಪ್ರೇಮ, ಚಡಪಡಿಕೆ, ಸಂಧಿಸುವ ಕಾತುರ, ಕಾಯುವ ನೋವು, ಕಾಣದಾಗಿನ ಹಪಾಹಪಿ, ಪ್ರೇಮಜ್ವರ…ಅವಳು ಕೂತ ರೀತಿ, ನಿಂತ ಭಂಗಿ, ಅವಳು ತೊಟ್ಟಿದ್ದು, ಮುಟ್ಟಿದ್ದು, ಹಿಡಿದಿದ್ದು, ಕುಡಿದಿದ್ದು, ಹಾಕಿಕೊಂಡಿದ್ದು, ಇಟ್ಟಿದ್ದು, ಬಿಟ್ಟಿದ್ದು- ಪ್ರತಿಯೊದರಲ್ಲೂ ಅವನು ಪ್ರೀತಿಯನ್ನೇ ಕಾಣುತ್ತಾನೆ. ಪಾಶ್ಚಾತ್ಯ ಸಂಸ್ಕೃತಿಗೆ ಆಗಷ್ಟೇ ತೆರೆದುಕೊಳ್ಳುತ್ತಿರುವ 1975ರ ಇಸ್ತಾನ್ಬುಲ್, ಒಂದು ಕಡೆ ಐರೋಪ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಂತೆ ಕಾಣುವ ಶ್ರೀಮಂತ ವರ್ಗ, ಮತ್ತೊಂದೆಡೆ ಒಂದು ಗಂಡಿನೊಡನೆ ಮದುವೆಗೆ ಮುಂಚೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದಕ್ಕೆ ಅಡ್ಡಿ ಬರುವ ಸಂಪ್ರದಾಯ ಮನೋಬುದ್ಧಿ. ಕನ್ಯತ್ವ ಎಷ್ಟು ದೊಡ್ಡ ಸವಾಲಾಗಿ ಹೆಣ್ಣಿಗೆ ಕಾಡಬಲ್ಲದು, ಗಂಡು-ಹೆಣ್ಣಿನ ನಡುವಿನ ಸಹಜ ಸಂಬಂಧ ಹೇಗೆ ಹಲವಾರು ಕಟ್ಟುಪಾಡುಗಳನ್ನು ಹೇರಿಕೊಂಡು ಅಸಹಜವಾಗುತ್ತದೆ – ಶ್ರೀಮಂತವರ್ಗಗಳಲ್ಲಿ ಪ್ರಚಲಿತದಲ್ಲಿರುವ ಇಂತಹ ಹಲವಾರು ಒಣಪ್ರತಿಷ್ಠೆಗಳೊಂದೂ ಇರದ, ಯಾವ ಕಟ್ಟುಪಾಡಿಗೂ ಸಿಗದ ಫ್ಯುಸುಲ್ ನೊಂದಿಗಿನ ನಲವತ್ತಮೂರು ದಿನಗಳ ಸಹಜ ಸಂಬಂಧವೇ ಅವನ ಬದುಕಿನ ನಿರ್ಣಾಯಕ ಸಂಬಂಧವಾಗುತ್ತದೆ. ತನ್ನಮ್ಮನ ಖಾಲಿ ಬಿದ್ದಿದ್ದ ಮನೆಗೆ ತನ್ನ ಪ್ರಿಯತಮೆಯನ್ನು ಆಹ್ವಾನಿಸುತ್ತಾನೆ. ಪರಿಚಯ ಯಾವ ಮುನ್ಸೂಚನೆಯೂ ಇಲ್ಲದೆ ಹುಚ್ಚುಪ್ರಣಯಕ್ಕೆ ತಿರುಗುತ್ತದೆ, ಚಾಚೂತಪ್ಪದೆ ನಲವತ್ತಮೂರು ದಿನ ಅವಳನ್ನು ನಿರ್ಧಿಷ್ಟ ಗಳಿಗೆಯಲ್ಲಿ, ನಿಶ್ಚಿತ ಜಾಗದಲ್ಲಿ ದಿನವೂ ಸಂಧಿಸಿ, ಪ್ರಣಯದಲ್ಲಿ ತೊಡಗಿರುವಾಗಲೇ ನಿಶ್ಚಯವಾದ ಹುಡುಗಿಯೊಡನೆ ಅವನ ನಿಶ್ವಿತಾರ್ಥವೂ ನಡೆದುಹೋಗುತ್ತದೆ. ಈ ಹುಡುಗಿಯೂ ಅವನ ನಿಶ್ಚಿತಾರ್ಥಕ್ಕೆ ಬರುತ್ತಾಳೆ. ಆದರೆ ನಿಶ್ಚಿತಾರ್ಥದ ನಂತರ ಅವನ ಗುಪ್ತ ಪ್ರಿಯತಮೆ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಆನಂತರವೇ ಅವನಿಗೆ ತನ್ನ ಪ್ರೀತಿಯ ಅರಿವಾಗುತ್ತದೆ. ಫ್ಯುಸುನ್ ಇಲ್ಲದ ಬಾಳು ನಿರರ್ಥಕ ಅನ್ನಿಸತೊಡಗುತ್ತದೆ. ಊಟ-ತಿಂಡಿ-ನಿದ್ರೆ ಯಾವುದೂ ರುಚಿಸುವುದಿಲ್ಲ. ನಿಶ್ಚಿತಾರ್ಥವಾದ ಹುಡುಗಿಯೂ ಬೇಡವಾಗುತ್ತಾಳೆ. ತನ್ನ ಬ್ಯುಸಿನೆಸ್, ದೇಶದ ರಾಜಕೀಯ, ಮನೆಯ ಸ್ಥಿತಿ-ಗತಿ, ಗೆಳೆಯರ ಸಹವಾಸ ಯಾವುದೂ ಬೇಕೆನ್ನಿಸದೆ, ಕಾಣದ ಹುಡುಗಿಗಾಗಿ ಪರಿತಪಿಸುತ್ತಾ, ಕೇವಲ ಅವಳನ್ನು ಹುಡುಕುವುದಷ್ಟೇ ತನ್ನ ಬದುಕಿನ ಪರಮ ಧ್ಯೇಯ ಎಂಬಂತೆ ಪ್ರಣಯಮತ್ತ ಹುಚ್ಚನಂತೆ ಇಸ್ತಾನ್ಬುಲ್ ನ  ಬೀದಿಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ, ಸಂದಿಗೊಂದಿಗಳಲ್ಲಿ ಹಗಲೆನ್ನದೆ, ರಾತ್ರಿಯೆನ್ನದೆ ಅಲೆಯುತ್ತಾನೆ.. ಈ ಮಧ್ಯೆ ಅವನ ನಿಶ್ಚಿತಾರ್ಥ ಮುರಿದುಬೀಳುತ್ತೆ, ಗೆಳೆಯರು ದೂರವಾಗುತ್ತಾರೆ. ತಂದೆಯನ್ನು ಕಳೆದುಕೊಳ್ಳುತ್ತಾನೆ, ಬ್ಯುಸಿನೆಸ್ ಎತ್ತೆತ್ತಲೋ ಸಾಗುತ್ತೆ, ತಾಯಿ ಅಣ್ಣನಿಗೆ ಅವನ ಮೇಲೆ ಅನುಮಾನ. ಆದರೆ ಇತ್ತ ಕಡೆ ಅವನಿಗೆ ಗಮನವಿಲ್ಲ. ಅವನೇನಿದ್ದರೂ ತನ್ನ ಪ್ರೀತಿಗೆ ಉತ್ತರ ಹುಡುಕುತ್ತಾ ಅಲೆಯುತ್ತಿದ್ದಾನೆ… ಅನೇಕ ಪುಟಗಳವರೆಗೆ ಈ ಹುಡುಕಾಟವೇ ತುಂಬಿದೆ.. ಮತ್ತೆ ಅವಳಿಂದಲೇ ಅಚಾನಕವಾಗಿ ತನ್ನ ಸುಳಿವು ನೀಡಿ ಅವನಿಗೊಂದು ಪತ್ರ ಬರುತ್ತದೆ. ಸ್ವರ್ಗಕ್ಕೆ ಮೂರೇ ಗೇಣೆಂಬಂತೆ ಅವಳ ಪತ್ರ ಹಿಡಿದು ಇವನು ಅವಳ ಮನೆಗೆ ಹಾರುತ್ತಾನೆ. ಆದರೆ ಅವಳಾಗಲೆ ಸಿನಿಮಾಗಳಿಗೆ ಸ್ಕ್ರೀನ್ ಪ್ಲೇ ಬರಿಯುವ ಒಬ್ಬನನ್ನು ಮದುವೆಯಾಗಿ ಸಿನಿಮಾ ನಟಿಯಾಗುವ ಕನಸು ಕಾಣುತ್ತಿರುತ್ತಾಳೆ… ಮತ್ತೊಂದು ಎಂಟು ವರುಷ ಹೆಚ್ಚೂಕಮ್ಮಿ ದಿನಂಪ್ರತಿ ಅವಳ ಮನೆಗೆ ಇವನು ಹೋಗುವ ಕತೆ, ಸರಿರಾತ್ರಿಯವರೆಗೂ ಅವಳ ಮನೆಯವರೊಡನೆ ಕಾಲ ಕಳೆಯುವ ಕತೆ, ಕಡೆಗೆ ತನ್ನ ಗಂಡನಿಂದ ಅವಳು ಡೈವೋರ್ಸ್ ಪಡೆಯುವ ಕತೆ-ಉದೋ ಎಂದು ಕಾದಂಬರಿ ಸಾಗುತ್ತದೆ… ಇನ್ನೇನು ಎಲ್ಲಾ ಸುಖಾಂತ್ಯದಲ್ಲಿ ಮುಗಿಯಿತು ಎನ್ನುವಷ್ಟರಲ್ಲಿ ವಿಧಿಯ ಕೈವಾಡವೂ ಮಹತ್ವದ ಪಾತ್ರ ವಹಿಸಿಕೊಂಡು ಬರುತ್ತದೆ. ಮದುವೆಗೆ ಮುಂಚೆ ಕೆಮಾಲ್ ತನ್ನ ಪ್ರಿಯತಮೆಗೆ ಪ್ಯಾರಿಸ್ ತೋರಿಸಲು ಕಾರಿನಲ್ಲಿ ಕರೆದೊಯುತ್ತಾನೆ. ಆದರೆ ಯಾವುದೋ ಒಂದು ದುರ್ಘಳಿಗೆಯಲ್ಲಿ ಫ್ಯುಸುನ್ ಕೆಮಾಲ್ ನೊಡನೆ ಜಗಳವಾಡಿ ತಾನೇ ಡ್ರೈವ್ ಮಾಡುವುದಾಗಿ ಹೇಳಿ ಕಾರನ್ನ ತೆಗೆದುಕೊಂಡು ಒಂದು ಬೆಳ್ಳಂಬೆಳಗ್ಗೆ ಹೊರಟವಳು ಮರಕ್ಕೆ ಡಿಕ್ಕಿ ಹೊಡೆದು ಸಾಯುತ್ತಾಳೆ…… ಕೆಮಾಲ್ ಒಬ್ಬ ದುರಂತ ನಾಯಕನಾಗಿ ನಮ್ಮ ಮುಂದೆ ನಿಲ್ಲುತ್ತಾನೆ. ಇಡೀ ಕಾದಂಬರಿಯಲ್ಲಿ ಕೆಮಾಲ್ ಒಬ್ಬ ನತದೃಷ್ಟನಾಗಿ ಉದ್ದಕ್ಕೂ ನಮ್ಮ ಅನುಕಂಪಕ್ಕೆ ಪಾತ್ರನಾಗುತ್ತಾ ಹೋಗುತ್ತಾನೆ. ಒಂದು ಅಕಸ್ಮಾತ್ ಸಂಬಂಧಕ್ಕೆ ಅಚಾನಕವಾಗಿ ಸಿಕ್ಕಿಕೊಳ್ಳುವ ಕೆಮಾಲ್ ನ ಬದುಕು ವಿಧಿ ಹಾಸಿಟ್ಟ ಹಾಸಿಗೆ ಇದ್ದ ಹಾಗೆ. ತನ್ನ ಅತೀ ಪ್ರೀತಿಗೆ ಉತ್ತರ ಹುಡುಕುತ್ತಾ ಅರೆಹುಚ್ಚನಂತೆ ಸಾಗುವ ಕೆಮಾಲ್ ಗೆ ತಾನು ಪಡೆದದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚೆಂದು ಅನ್ನಿಸುವುದೇ ಇಲ್ಲ. ಒಂದಕ್ಕೊಂದರಂತೆ ತಳಕು ಹಾಕಿಕೊಳ್ಳುತ್ತಾ ಹರಿಯುವ ಅವನ ಪ್ರೀತಿಯ ಗೀಳಿಗೆ, ಅಬ್ಸೆಷನ್ ಗೆ ಒಂದು ಶಾಶ್ವತ ರೂಪ ಕೊಟ್ಟು ಅಮರತ್ವವನ್ನು ಕಲ್ಪಿಸುವ ಉದ್ದೇಶದಿಂದ ಮ್ಯೂಸಿಯಂ ರಚಿಸಿ, ತಾನು ಬಾಳಿದ ಬದುಕನ್ನ ಅತ್ಯಂತ ಹೆಮ್ಮೆಯಿಂದಲೇ ನಮ್ಮ ಮುಂದೆ ತೆರೆದಿಡುತ್ತಾನೆ ಹಾಗೂ ‘ಆಲ್ ದ ಪೀಪಲ್ ಆಫ್ ದ ವರ್ಲ್ಡ್  ಟು ಟೇಕ್ ಪ್ರೈಡ್ ಇನ್ ದ ಲೈವ್ಸ್ ದೇ ಲೀವ್’ -ಎಂಬ ಸಂದೇಶದೊಂದಿಗೆ, ‘ದ ಹ್ಯಾಪಿಯಷ್ಟ್ ಮುಮೆಂಟ್ ಆಫ್ ಮೈ ಲೈಫ್’ ಎಂದು ಕಾದಂಬರಿ ಶುರುಮಾಡಿ, ‘ಐ ಹ್ಯಾವ್ ಲೀವ್ಡ್ ಎ ವೆರಿ ಹ್ಯಾಪಿ ಲೈಫ್’ ಎಂದು ಮುಗಿಸುತ್ತಾನೆ. ಒಬ್ಬ ನೋಬಲ್ ಪ್ರಶಸ್ತಿ ವಿಜೇತ ಬರಹಗಾರನಿಂದ ಸಾಮಾನ್ಯವಾಗಿ ನಾವು ಉತ್ಕೃಷ್ಠವಾದುದನ್ನೇ ನಿರೀಕ್ಷಿಸುತ್ತಿರುತ್ತೇವೆ. ಪಾಮುಕ್ ನ ಉಳಿದ ಕಾದಂಬರಿಗಳ ಮಟ್ಟಕ್ಕೆ ಇದಿಲ್ಲ ಎನ್ನಿಸಿದರೂ ಕಾದಂಬರಿ ಮಾತ್ರ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 531 ಬೃಹತ್ ಪುಟಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆಗಾಗ ಪ್ರೀತಿಯನ್ನು ಒರೆಗೆ ಹಚ್ಚಿ ವಿನಾಕಾರಣ ಮಾನವಸಂಬಂಧಗಳನ್ನು ಆನ್ವೇಷಿಸುವ ಮನೋಭಾವದವರಿಗೆ ಪ್ರೀತಿಯೆಂದರೇನು ಎಂಬುದಕ್ಕೆ ಇದೋ ಇಲ್ಲಿದೆ ಉತ್ತರ.]]>

‍ಲೇಖಕರು G

April 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

4 ಪ್ರತಿಕ್ರಿಯೆಗಳು

 1. Ramesh Megaravalli

  Thanks to jayashree Kasaravalli for introducing Orhan Pamuk’s n0bel prize winning novel “The museoum of innocence
  -Ramesh Megaravalli

  ಪ್ರತಿಕ್ರಿಯೆ
 2. D.RAVI VARMA

  ‘ಆಲ್ ದ ಪೀಪಲ್ ಆಫ್ ದ ವರ್ಲ್ಡ್ ಟು ಟೇಕ್ ಪ್ರೈಡ್ ಇನ್ ದ ಲೈವ್ಸ್ ದೇ ಲೀವ್’ -ಎಂಬ ಸಂದೇಶದೊಂದಿಗೆ, ‘ದ ಹ್ಯಾಪಿಯಷ್ಟ್ ಮುಮೆಂಟ್ ಆಫ್ ಮೈ ಲೈಫ್’ ಎಂದು ಕಾದಂಬರಿ ಶುರುಮಾಡಿ, ‘ಐ ಹ್ಯಾವ್ ಲೀವ್ಡ್ ಎ ವೆರಿ ಹ್ಯಾಪಿ ಲೈಫ್’ ಎಂದು ಮುಗಿಸುತ್ತಾನೆ. ಒಬ್ಬ ನೋಬಲ್ ಪ್ರಶಸ್ತಿ ವಿಜೇತ ಬರಹಗಾರನಿಂದ ಸಾಮಾನ್ಯವಾಗಿ ನಾವು ಉತ್ಕೃಷ್ಠವಾದುದನ್ನೇ ನಿರೀಕ್ಷಿಸುತ್ತಿರುತ್ತೇವೆ. ಪಾಮುಕ್ ನ ಉಳಿದ ಕಾದಂಬರಿಗಳ ಮಟ್ಟಕ್ಕೆ ಇದಿಲ್ಲ ಎನ್ನಿಸಿದರೂ ಕಾದಂಬರಿ ಮಾತ್ರ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. 531 ಬೃಹತ್ ಪುಟಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆಗಾಗ ಪ್ರೀತಿಯನ್ನು ಒರೆಗೆ ಹಚ್ಚಿ ವಿನಾಕಾರಣ ಮಾನವಸಂಬಂಧಗಳನ್ನು ಆನ್ವೇಷಿಸುವ ಮನೋಭಾವದವರಿಗೆ ಪ್ರೀತಿಯೆಂದರೇನು ಎಂಬುದಕ್ಕೆ ಇದೋ ಇಲ್ಲಿದೆ ಉತ್ತರ.ಒಂದು ಅತ್ಯತ್ತಮ ಪುಸ್ತಿಕೆ ಪರಿಚಯಿಸಿ adorottige ತುಂಬಾ ಅರ್ಥಪೂರ್ಣವಾಗಿ ಹಾಗು ವೈಚಾರಿಕವಾಗಿ ಪುಸ್ತಿಕೆಯ ಅಂತರಂಗವನ್ನು ,ಅದರ ನಾಡಿಬದಿತವನ್ನು ಮನಮುಟ್ಟುವಂತೆ ಚಿತ್ರಿಸಿದ್ದೆರಿ ನಾನು ಈಗಲೇ swapnabookstall ನಿಂದ ಪುಸ್ತಿಕೆ ತರಿಸಿಕೊಳ್ಳುವೆ.ನಿಮಗೂ ,ಅವಧಿಗೂ ವಂದನೆಗಳು
  ರವಿ ವರ್ಮ hospet

  ಪ್ರತಿಕ್ರಿಯೆ
 3. sumathi

  ನಿಮ್ಮ ಈ ರಿವ್ಯೂ ಓದಿ ಸ೦ತೋಷ! ಈ ಪುಸ್ತಕವನ್ನ ಸಧ್ಯಕ್ಕೆ ಓದುತ್ತಿರುವೆ. ನನಗೂ ಈ ಪುಸ್ತಕ ಈತನ “ಮೈ ನೇಮ್ ಈಸ್ ರೆಡ್”ನಷ್ಟು ಚನ್ನಾಗಿ ಬರುತ್ತಿಲ್ಲ ಅನ್ನಿಸುತ್ತಿದೆ. ಮೈ ನೇಮ್ ಓದಿದಾಗ ತಿ೦ಗಳುಗಟ್ಟಲೇ ಅದರ ಗು೦ಗಿನಲ್ಲೇ ಇದ್ದೆ. ಆದ್ರೂ ಆ ಮ್ಯೂಸಿಯಮ್ ಕಾನ್ಸೆಪ್ಟ್ ವಿಶೇಷವಾಗಿದೆ ಅಲ್ವಾ. ವ೦ದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: