ಕಾಸು ಕುಡಿಕೆ:ಜರಾಸಂಧನ ಕ್ರೆಡಿಟ್ ಕಾರ್ಡ್…

ಕಾಸು ಕುಡಿಕೆ -27

-ಜಯದೇವ ಪ್ರಸಾದ ಮೊಳೆಯಾರ
The best way to get credit is to get into a position of not needing any!. . . Anon
ಸಾಲ ಪಡೆಯುವ ಅತ್ಯಂತ ಉತ್ತಮ ಮಾರ್ಗವೆಂದರೆ ಅದು ಅಗತ್ಯವಿಲ್ಲದ ಸ್ಥಿತಿಗೆ ಬರುವುದು!. . . ಅನಾಮಿಕ.
ಸಾಲದ ಬಗ್ಗೆ ಮಾತನಾಡುತ್ತ ಇರುವಾಗ ಕ್ರೆಡಿಟ್ ಕಾರ್ಡ್ ಬಗ್ಗೆ ಮಾತನಾಡದೆ ಮಾತು ಮುಗಿಸುವಂತೆಯೇ ಇಲ್ಲ. ಅದರ ಹೆಸರೇ ಸೂಚಿಸುವಂತೆ ಅದೊಂದು ಸಾಲದ ಕಾರ್ಡ್ – ಕಳೆದ ಶತಮಾನದ ಒಂದು ಅತ್ಯಂತ ಉಪಯುಕ್ತ ವಿತ್ತೀಯ ಅನ್ವೇಷಣೆ. ಇದರ ಉಪಯುಕ್ತತೆಯ ಬಗ್ಗೆ ಕಾಲಿಗೆ ಗಾಲಿಕಟ್ಟಿದಂತೆ ವಾರಗಟ್ಟಲೆ ತಿರುಗಾಡುವ ನನ್ನಂತವರು ಚೆನ್ನಾಗಿ ತಿಳಿದಿದ್ದಾರೆ. ಊರೂರು ಸುತ್ತಾಡುವಾಗ ಸಾವಿರಾರು ರೂಪಾಯಿಯ ನಗದು ದುಡ್ಡನ್ನು ತೆಗೆದುಕೊಂಡೂ ಹೋಗುವುದು ಬಲುಕಷ್ಟ. ಅದೆಲ್ಲದರ ಬದಲು ಒಂದೇ ಒಂದು ಕಾರ್ಡ್ – ಕ್ರೆಡಿಟ್ ಕಾರ್ಡ್ ಮೂಲಕ ಎಲ್ಲಾ ಪಾವತಿಗಳನ್ನೂ ಮಾಡಬಹುದಾಗಿದೆ.
ನೀವು ಒಂದು ಬ್ಯಾಂಕಿನ ಮೂಲಕ ನಿಮ್ಮ ಎಲ್ಲಾ ಆದಾಯದ, ಅರ್ಥಿಕ ಸ್ಥಿತಿಗತಿಗಳ ವಿವರಗಳನ್ನು ನೀಡಿ ಅದಕ್ಕಿರುವ ಪ್ರವೇಶ, ವಾರ್ಷಿಕ ಶುಲ್ಕ ನೀಡಿ ಒಂದು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತೀರಿ.
ಅಂತಹ ಕಾರ್ಡ್‌ಗಳನ್ನು ಸ್ವೀಕರಿಸುವಂತಹ ಅಂಗಡಿಗಳಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಡನ್ನು ಕೌಂಟರಿನಲ್ಲಿ ಕೊಡುತ್ತೀರಿ. ಕೌಂಟರಿನಲ್ಲಿ ಕುಳಿತ ವ್ಯಕ್ತಿ ನಿಮ್ಮ ಕಾರ್ಡನ್ನು ಒಂದು ಮೆಶೀನಿನಲ್ಲಿ ಉಜ್ಜಿ (swipe) ಬ್ಯಾಂಕಿಂಗ್ ವ್ಯವಸ್ಥೆಯ ಕಂಪ್ಯೂಟರಿಗೆ ಡಯಲ್ ಮಾಡುತ್ತಾನೆ.
ಆ ಕಂಪ್ಯೂಟರ್ ನೀವು ಕೊಡಬೇಕಾದ ದುಡ್ಡನ್ನು ಆ ಅಂಗಡಿಯವರ ಖಾತೆಗೆ ನೀಡಿ ಅಷ್ಟು ದುಡ್ಡನ್ನು ಬ್ಯಾಂಕು ನಿಮಗೆ ಕೊಟ್ಟ ಸಾಲ ಎಂದು ನಿಮ್ಮ ಖಾತೆಯಲ್ಲಿ ನಮೂದಿಸುತ್ತದೆ.
ಅಷ್ಟು ದುಡ್ಡನ್ನು ನೀವು ಅದರ ಮಾಸಿಕ ಬಿಲ್ ದಿನಾಂಕದಿಂದ ಸುಮಾರು ೨೦ ದಿನಗಳಲ್ಲಿ (due date) ಕೊಡಬೇಕಾಗುತ್ತದೆ. ಅಂದರೆ ಯಾವುದೇ ತಿಂಗಳಿನುದ್ದಕ್ಕೂ ಮಾಡಿದ ಖರ್ಚಿನ ಮರುಪಾವತಿಗೆ ಒಟ್ಟು ೨೦-೫೦ ದಿನಗಳವರೆಗೆ ಫ್ರೀ ಸಮಯ ಸಿಕ್ಕಂತಾಯಿತು. ಆ ಅವಧಿಯೊಳಗೆ ಪಾವಿತಿ ಮಾಡಿದಲ್ಲಿ ನಿಮ್ಮಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡಲಾಗುವುದಿಲ್ಲ.
ಬದಲಿಗೆ ಅಂಗಡಿಯವನಿಂದ ಈ ಸೇವೆಗಾಗಿ ಸ್ವಲ್ಪ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆ ಫ್ರೀ ಅವಧಿಯನ್ನು ಮೀರಿದರೆ ಮಾತ್ರ ಅದಕ್ಕೆ ಹೇರಳವಾದ ತಡಪಾವತಿಯ ಶುಲ್ಕ, ಬಡ್ಡಿದರ, ತೆರಿಗೆಗಳು ಇತ್ಯಾದಿ ಚಾರ್ಜುಗಳು ಬೀಳುತ್ತವೆ.

‘ದಂಡಿಯಾಗಿ honeyಸುವ ದುಂಡಿ’ಯ ಪ್ರಕಾರ ದುಡ್ಡು ಎಂದಿಗೂ ನಗದು. ಅದಕ್ಕಾಗಿಯೇ ಬ್ಯಾಂಕಿನ ದುಡ್ಡುಕಿಂಡಿಗಳಲ್ಲೆಲ್ಲಾ ‘CASH ನಗದು’ ಎಂಬ ಬೋರ್ಡ್ ಹಾಕಿದ್ದಾರಂತೆ. ಹಾಗೆಯೇ, ಅಕ್ಕಸಾಲಿಗನ ಬಳಿ ಇರುವ ದುಡ್ಡೂ ಕೂಡಾ ನಗದ ದುಡ್ಡು. ಅದು ಕೂಡಾ ನಗುವುದೇ ಇಲ್ಲ. ಆದರೆ ನಮ್ಮ ಕಿಸಿಯಲ್ಲಿರುವ ಕ್ರೆಡಿಟ್ ಕಾರ್ಡ್ ಮಾತ್ರ ನಗುವ ದುಡ್ಡು. ಜೇಬು, ಎಕೌಂಟು ಎಷ್ಟೇ ಖಾಲಿಯಿದ್ದರೂ ಸ್ವೈಪ್ ಮಾಡಿದಾಕ್ಷಣ ನಗು ನಗುತ್ತಾ ಬರುವ ದುಡ್ಡು;
ನಿಮಗೂ ಕೂಡಾ ನಗೆಯೋ ನಗೆ! ಇಲ್ಲದ ದುಡ್ಡು ಪ್ರತ್ಯಕ್ಷವಾಗುವಾಗ ಯಾರಿಗೆ ತಾನೇ ನಗು ಬಾರದು? – well, ಅದರ ಬಿಲ್ ಮಾತ್ರ ತನ್ನ ಬಾಣಗಳೊಂದಿಗೆ ಬರುವ ವರೆಗೆ !!! ಮತ್ತೆ, Credit card billನ ಆ ಬಾಣಗಳೋ. . . ಆಹಾ, ಏನೆಂದು ಬಣ್ಣಿಸಲಿ? ಒಂದೊಂದು ಬಾಣಗಳೂ ದಿವ್ಯಾಸ್ತ್ರಗಳು! ಪ್ರತಿತಿಂಗಳು ನಮ್ಮ ಮನೆಗೆ ಅಂಚೆಯಲ್ಲಿ ಬರುವ ಆ ಬಿಲ್ಲನ್ನು ಅಳುಕುತ್ತಲೇ ಎತ್ತಿ ಹೆದೆಯೇರಿಸಿದಾಗ ಒಂದೊಂದೇ ಅಸ್ತ್ರಗಳ ಮುಖಪರಿಚಯವಾಗುತ್ತದೆ. ಉದಾಹರಣೆಗೆ,

ಆಗ್ನೇಯಾಸ್ತ್ರ: ಅರ್ಥಾತ್ ಬೆಂಕಿ! ಇದನ್ನು ಕಂಡೊಡೆ ನಿಮಗೆ ನಖಶಿಖಾಂತ ಬೆಂಕಿಹತ್ತಿದಂತೆ ಉರಿಯುತ್ತದೆ. ಇದನ್ನು ಸಾಲಕಾರ್ಡಿನ ಭಾಷೆಯಲ್ಲಿ ‘ಲೇಟ್ ಶುಲ್ಕಾಸ್ತ್ರ’ ಅಂತಲೂ ಹೇಳುತ್ತಾರೆ. ಮಾಸಿಕ ಬಿಲ್ಲಿನಲ್ಲಿ ನೀವು ಖರ್ಚು ಮಾಡಿ ಈಗ ಕೊಡಬೇಕಾಗಿರುವ ಒಟ್ಟು ಮೊತ್ತವನ್ನು total due ಎಂದು ನಮೂದಿಸಿರುತ್ತಾರೆ. ಜೊತೆಗೆ ಅಷ್ಟು ಕೊಡಲಾಗದಿದ್ದಲ್ಲಿ ಕನಿಷ್ಟ ಮೊತ್ತ (minimum due) ವನ್ನಾದರೂ ಕೊಡುವಂತೆ ನಮೂದಿಸಿರುತ್ತಾರೆ. ಬಿಲ್ಲಿನ ಕನಿಷ್ಟ ಮೊತ್ತವನ್ನೂ ನಿಗದಿತ ದಿನದೊಳಗೆ ಪಾವತಿಸದ ಅಪರಾಧ ಮಾಡಿದ್ದರೆ ಈ ಅಸ್ತ್ರದ ಶಿಕ್ಷೆಯನ್ನು ಅನುಭವಿಸಬೇಕಾದೀತು. ಇದೇ ಪ್ರತಿ ಸಲಕ್ಕೆ ಕನಿಷ್ಟ ೪೦೦-೬೦೦ ರೂಗಳಷ್ಟು ಆದೀತು.
ಬ್ರಹ್ಮಾಸ್ತ್ರ: ಅಥವ ಬಡ್ಯಾಸ್ತ್ರ. ಇದು ಇದ್ದೂದರಲ್ಲಿ ಅತ್ಯಂತ ಕತರ್ನಾಕ್ ಅಸ್ತ್ರ. ಪಾವತಿಸಬೇಕಾದ ಮೊತ್ತವನ್ನು ನಿಗದಿತ ದಿನಾಂಕದೊಳಗೆ ಪಾವತಿಸದಿದ್ದಲ್ಲಿ ತಿಂಗಳೊಂದರ ೩-೩.೫% ದಂತೆ ೩೬-೪೨% ವಾರ್ಷಿಕದ ಆಸುಪಾಸಿನ ಬಡ್ಡಿದರವೇ ಕ್ರೆಡಿಟ್ ಕಾರ್ಡಿನ ಅತ್ಯಂತ ಭಯಾನಕ ಅಸ್ತ್ರ. ಯಾವುದೇ ನಕ್ರಾಗಳಿಲ್ಲದೆ ಕಾರ್ಡನ್ನು ಝಳಪಿಸಿದರೆ ನಗು ನಗುತ್ತಾ ಬರುವ ಕ್ರೆಡಿಟ್ ರಾಣಿಗೆ ಇಷ್ಟಾದರೂ ಮರ್ಯಾದೆ ಕೊಡದಿದ್ದರೆ ಹೇಗೆ ಸ್ವಾಮೀ? ಇನ್ನು, ATM ಎಂಬ ಕಲ್ಪವೃಕ್ಷಕ್ಕೆ ಕಾರ್ಡು ತೂರಿ ನಗುವ ಲಕ್ಷ್ಮಿಯನ್ನು ಸಾಕ್ಷಾತ್ಕಾರಗೊಳಿಸಿದರೆ (cash withdrawal) ಅದಕ್ಕೆ ಇನ್ನೂ ಒಂದು ೬% ದಷ್ಟು (ವಾರ್ಷಿಕ) ಜಾಸ್ತಿ ಮಾರ್ಯಾದೆ!
ವರುಣಾಸ್ತ್ರ: ಅಷ್ಟೆಲ್ಲಾ ಕಟ್ಟಿದ್ದು ಸಾಲದೋ ಎಂಬಂತೆ ಭಾರತ ಸರಕಾರದ ಸೇವಾ ಚಾರ್ಜುಗಳ ಮೇಲಿನ ೧೦.೩% ದ ಸೇವಾ ತೆರಿಗಾಸ್ತ್ರ ನಿಮ್ಮ ಕಣ್ಣುಗಳಲ್ಲಿ ನೀರನ್ನೇ ತರಿಸೀತು. ಅದಕ್ಕೇ ಅದನ್ನು ವರುಣಾಸ್ತ್ರ ಎಂದು ಅನುಭವಸ್ಥರು ಕರೆಯುತ್ತಾರೆ.
ಸರ್ಪಾಸ್ತ್ರ: a.k.a ಸರ್ಚಾರ್ಜಾಸ್ತ್ರ. ರೈಲ್ವೇ ಬುಕಿಂಗ್ ಅಥವಾ ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡನ್ನು ಝಳಪಿಸಿದರೆ ಈ ಹೆಚ್ಚುworry ಸರ್ಚಾರ್ಜ್ ಇದ್ದೇ ಇರುತ್ತದೆ. ಇದು ಸುಮಾರು ೨.೫% ದಷ್ಟು ಇರುತ್ತದೆ.
ವಜ್ರಾಸ್ತ್ರ, ಇಂದ್ರಾಸ್ತ್ರ, ಚಂದ್ರಾಸ್ತ್ರ, ರುದ್ರಾಸ್ತ್ರ, ನಾರಾಯಣಾಸ್ತ್ರ ಹೀಗೆಲ್ಲ ನಿಂತದ್ದಕ್ಕೆ, ಕೂತದ್ದಕ್ಕೆ ನೂರಾರು ರುಪಾಯಿಗಳ ಫೀಸ್ ಬರುತ್ತದೆ. Overlimit charges, Card replacement fee, Pin replacement, Charge slip retrival, Returned cheque, Duplicate statement, Rewards handling, Cash advance fee, Overseas transaction, Cheque/cash pick up fee, ಇತ್ಯಾದಿಗಳೇ ಕೆಲವು ಉದಾಹರಣೆಗಳು. ಇನ್ನು ಕೆಲವು ಬ್ಯಾಂಕುಗಳಲ್ಲಿ ಕಾರ್ಡ್ ತೆಗೆದುಕೊಂಡು ಇವೆಲ್ಲ ಅಸ್ತ್ರಗಳ ಪೀಡನೆಗೆ ಬಲಿಯಾಗಿ ‘ಇದರ ಸಹವಾಸವೇ ಬೇಡ’ ಎಂದು ಸುಮ್ಮನೆ ಕುಳಿತರೆ ‘non-usage fees’ ಎಂಬ ಇನ್ನೊಂದು ಬಾಣ ಗೈಡೆಡ್ ಮಿಸೈಲ್‌ನಂತೆ ನಿಮ್ಮನ್ನು ಎಲ್ಲಿದ್ದರೂ ಹುಡುಕಿಕೊಂಡು ಬರುತ್ತದೆ. ಈ ವಿವರಗಳನ್ನು ಅರಿಯದೆ ರಜಿನಿಯಂತೆ ಸ್ಟೈಲಿನಲ್ಲಿ ಕಾರ್ಡನ್ನು ಬಳಸಿ, ಬಳಿಕ ಹತ್ತು ಹಲವು ಬಾಣಗಳಿಂದ ಜರ್ಜರಿತರಾಗಿ ಭೀಷ್ಮನಂತೆ ಅಡ್ಡ ಮಲಗಿದವರಿದ್ದಾರೆ.
ಬ್ಯಾಂಕುಗಳು ಹಲವಾರು ಕಂಪೆನಿಗಳೊಂದಿಗೆ ಜಂಟಿಯಾಗಿ ಕಾರ್ಡುಗಳನ್ನು ನೀಡುತ್ತವೆ. ಉದಾ: ಜೆಟ್ ಏರ್‌ವೇಸ್, ಎಚ್.ಪಿ.ಸಿ.ಎಲ್, ಇತ್ಯಾದಿ ಕಂಪೆನಿಗಳೊಂದಿಗೆ ಬ್ಯಾಂಕುಗಳ ಕೋ-ಬ್ರಾಂಡೆಡ್ ಕಾರ್ಡುಗಳು ಸಿಗುತ್ತವೆ. ಅಂತಹ ಕಾರ್ಡುಗಳಲ್ಲಿ ಕಂಪೆನಿ ವತಿಯಿಂದ ಏನಾದರು ಫ್ರೀ ಆಫರ್‌ಗಳು ಇರುತ್ತವೆ.
ಏರ್‌ವೇಸ್‌ಗಳು ಆಮೇಲೆ ಪ್ರಯಾಣಕ್ಕೆ ಉಪಯೋಗಿಸಿಕೊಳ್ಳಬಹುದಾದ ಮೈಲೇಜ್ ಪಾಯಿಂಟುಗಳನ್ನು ನೀಡಿದರೆ, ಪೆಟ್ರೋಲ್ ಬಂಕ್‌ಗಳು ಹೆಚ್ಚುವರಿ ಸರ್ಚಾರ್ಜ್ ಇಲ್ಲದೆ ಪೆಟ್ರೋಲ್ ನೀಡುತ್ತವೆ. ಈ ರೀತಿಯ ಪಾಯಿಂಟುಗಳನ್ನು ಕೂಡಿಹಾಕುವ ಐ-ಮಿಂಟ್‌ನಂತಹ ಕಂಪೆನಿಗಳೂ ಹುಟ್ಟಿಕೊಂಡಿವೆ. ಕ್ರೆಡಿಟ್ ಕಾರ್ಡ್‌ಗಳು ಉಚಿತವಾಗಿ ಜೀವವಿಮೆಯನ್ನು ನೀಡುತ್ತದೆ. ಆದರೆ ಇದು ಬರೇ ಕಾರ್ಡ್ ಕೊಂಡು ಉಪಯೋಗಿಸದೇ ಇಟ್ಟವರಿಗೆ ಸಿಗುವುದಿಲ್ಲ. ಅಲ್ಲದೆ ಬೇರೆ ಬೇರೆ ವಸ್ತುಗಳ ಖರೀದಿಗೆ ಕಡಿತದ ಆಫರ್ ಇತ್ಯಾದಿ ಹಲವು ಸೌಲಭ್ಯಗಳು ಸಿಗುತ್ತವೆ.
ನಾನು ಯಾವತ್ತೂ ಹೇಳುವಂತೆ ಈ ಎಲ್ಲಾ ವಿಷಯಗಳು/ವಿವರಗಳು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ಕ್ರೆಡಿಟ್ ಕಾರ್ಡಿನ ಬಗ್ಗೆ ಇನ್ನೂ ಎಷ್ಟೋ ಮಾಹಿತಿಗಳಿವೆ. ಎಲ್ಲವನ್ನೂ ಇಲ್ಲಿ ಹೇಳಿಲ್ಲ. ಇಲ್ಲಿ ಕೆಲವೇ ಕೆಲವು ವಿಷಯಗಳನ್ನು ಸ್ಥೂಲವಾಗಿ ಚರ್ಚೆಯ ದೃಷ್ಟಿಯಿಂದ ಎತ್ತಿಕೊಳ್ಳಲಾಗಿದೆ. ಕ್ರೆಡಿಟ್ ಕಾರ್ಡಿನ ಬಗ್ಗೆ ಯಾವುದೇ ನಿರ್ಧಾರವನ್ನು ಬ್ಯಾಂಕಿನಲ್ಲಿ ಆಮೂಲಾಗ್ರವಾಗಿ ಚರ್ಚಿಸಿದ ಮೇಲೆಯೇ ತೆಗೆದುಕೊಳ್ಳುವುದೊಳಿತು.
ಕಳೆದ ವಾರ ಹೇಳಿದಂತೆ ಗ್ಯಾರಂಟಿ ಕಡಿಮೆಯಾದಂತೆ ಬ್ಯಾಂಕಿಗೆ ರಿಸ್ಕ್ ಜಾಸ್ತಿ ಹಾಗೂ ಅವರು ಅದನ್ನು ಸರಿದೂಗಿಸಲು ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತಾರೆ. ಕ್ರೆಡಿಟ್ ಕಾರ್ಡ್ ಬಿಸಿನೆಸ್ ಬ್ಯಾಂಕಿಗೆ ಬಹಳ ರಿಸ್ಕಿ. ಹಲವು ಬಾರಿ ಸಾಲದ ವಾಪಸಾತಿ ಸ್ವಲ್ಪ ಕಷ್ಟವೇ. ಅದಕ್ಕಾಗಿ ಜಾಸ್ತಿ ಬಡ್ಡಿದರ. ಹಾಗಾಗಿ ಗ್ರಾಹಕರಾದ ನಾವು ಯಾವತ್ತೂ ಮರುಪಾವತಿ ಮಾಡಲಾರದಷ್ಟು ಮೊತ್ತವನ್ನು ಹಾಸಿಗೆ ಮೀರಿ ಕಾಲು ಚಾಚಬಾರದು.
ಹಾಗೂ ಮರುಪಾವತಿಯನ್ನು ನಿಗದಿತ ದಿನಾಂಕದೊಳಗೆಯೇ ಮಾಡಿ ತಡಪಾವತಿ ಶುಲ್ಕ, ಬಡ್ಡಿ ಇತ್ಯಾದಿ ಖರ್ಚುಗಳಿಂದ ತಪ್ಪಿಸಿಕೊಳ್ಳಬೇಕು. ಬೆಟ್ಟದಷ್ಟು ಏರಿದ ಸಾಲವನ್ನು ಹಿಂಪಡೆಯಲು ಬ್ಯಾಂಕುಗಳು ‘ರಿಕವರಿ ಏಜೆನ್ಸಿ’ಯ ಸಹಾಯ ಪಡೆಯಬಾರದೆಂಬ ಆರ್.ಬಿ.ಐ ಅಪ್ಪಣೆ ಇದ್ದರೂ ಹಲವು ಗ್ರಾಹಕರ ಅನುಭವ ಬೇರೆಯೇ ಇದೆ.
ಉತ್ತಮ ವಿತ್ತಶಿಸ್ತಿನಿಂದ ಉಪಯೋಗಿಸಿದರೆ ಇದೊಂದು ಅತ್ಯಂತ ಸುಲಭ ಹಾಗೂ ಉಪಯೋಗೀ ಕಾರ್ಡ್. ಪ್ರಯಾಣ, ಬಿಸಿನೆಸ್ ಸಂದರ್ಭಗಳಲ್ಲಂತೂ ಇದು ಅತ್ಯಂತ ಉಪಕಾರಿ.
ಅಟ್ಯಾಚ್‌ಮೆಂಟ್:
ನಾನು ಅಗಾಗ್ಗೆ ಕುಳಿತುಕೊಂಡು ಈ ರೀತಿ ಆಲೋಚಿಸುವುದು ಇದೆ.
ಎಷ್ಟೋ ಜನ ಕ್ರೆಡಿಟ್ ಕಾರ್ಡ್ ಪಡೆದು ಬ್ಯಾಂಕುಗಳಿಗೆ ಟೋಪಿ ಹೊಲಿದು ಎಡ್ರೆಸ್ ಇಲ್ಲದೆ ಪರಾರಿಯಾಗುತ್ತಾರೆ. ಅವೆಲ್ಲಾ ಬ್ಯಾಂಕುಗಳ ಖಾತೆಗೆ ಖೋತವೇ ಸರಿ. ಈ ನಷ್ಟವನ್ನು ಬ್ಯಾಂಕುಗಳು ಎಲ್ಲಿಂದ ಮತ್ತು ಹೇಗೆ ತುಂಬಿಸಿಕೊಳ್ಳುತ್ತವೆ? ಅಥವಾ ತುಂಬಿಸಿಕೊಳ್ಳದೆಯೇ ಹಾಗೆಯೇ ನಷ್ಟವನ್ನು ಅನುಭವಿಸುತ್ತಾ ಬಾಳುತ್ತವೆಯೇ? – ಜಸ್ಟ್ ಜಗಿತಕ್ಕಾಗಿ ಒಂದು ಚೂಯಿಂಗ್ ಗಮ್ ಅಷ್ಟೆ!
ಅದಿರಲಿ, ಸಧ್ಯಕ್ಕೆ ಸಾಲಗಳ ಬಗ್ಗೆ ಬರೆದಿರುವ ಈ ಮಾಲಿಕೆ ಮುಗಿಯುತ್ತದೆ. ಕಾಸುಕುಡಿಕೆಯಲ್ಲಿ ವಿಶ್ಲೇಷಣಾತ್ಮಕ ವಿಚಾರಗಳನ್ನು ಮಾತ್ರ ಎತ್ತಿಕೊಳ್ಳಲಾಗುತ್ತದೆ. ಯಾವುದೇ ಸ್ಕೀಂಗಳ ಬಗ್ಗೆ ಬ್ರೋಶರ್‌ಗಳಂತೆ ವಿವರಗಳನ್ನು ಕೊಡುವುದು ನಮ್ಮ ಉದ್ಧೇಶವಲ್ಲ. ಅಂತಹ ವಿವರಗಳು ಬೇರೆಡೆಗಳಲ್ಲಿ ಲಭ್ಯ.

‍ಲೇಖಕರು avadhi

September 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: