ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ … ಬಿ ಎ ವಿವೇಕ ರೈ

          ಬಿ ಎ ವಿವೇಕ ರೈ  

ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ  : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ  ಪದಭೂತಗಳ ನಲಿಕೆ

  ಜರ್ಮನಿಯಲ್ಲಿ ದಶಂಬರ ೨೩ ರಿಂದ ಜನವರಿ ೮ ವರೆಗೆ ವಿಶ್ವವಿದ್ಯಾಲಯಗಳಿಗೆ ಕ್ರಿಸ್ಮಸ್ ರಜೆ.ಎಲ್ಲರೂ ಕುಟುಂಬ ಅಥವಾ ಸ್ನೇಹಿತರ ಸಂಗದಲ್ಲಿ ವಿರಾಮವಾಗಿ ತಿರುಗಾಡುವ ಬಿಡುವಿನ ಕಾಲ.ಆದರೆ ನಾನು ಮತ್ತು ಪ್ರೊ.ಹೈದ್ರೂನ್ ಬ್ರೂಕ್ನರ್ ವ್ಯೂರ್ತ್ಸ್ ಬುರ್ಗ್ ನಲ್ಲಿ ದೇವುಪೂಂಜ ಮತ್ತು ಜುಮಾದಿಯರ ಜೊತೆಗೆ ಪ್ರತೀದಿನ ಸುಮಾರು ಆರು ಗಂಟೆಗಳ ಕಾಲ ಒದ್ದಾಡುತ್ತಿದ್ದೇವೆ.ಈಗ ಜನವರಿ ೯ಕ್ಕೆ ಮತ್ತೆ ವಿಶ್ವವಿದ್ಯಾನಿಲಯದ ತರಗತಿಗಳು ಆರಂಭ ಆಗಿವೆ.ಫೆಬ್ರವರಿ ೧೦ಕ್ಕೆ ಚಳಿಗಾಲದ ಸೆಮೆಸ್ಟರ್ ಮುಗಿಯುತ್ತದೆ.ಮತ್ತೆ ರಜೆಯಲ್ಲಿ ನನ್ನ ನಾಡಿಗೆ ನನ್ನ ಬೀಡಿಗೆ ಹೋಗುವೆನು ನಾನು.ಅಷ್ಟರ ಒಳಗೆ ಜುಮಾದಿಯ ನೇಮ ಮುಗಿದು ,ಬೂಳ್ಯ ಪ್ರಸಾದ ಕೊಟ್ಟು ಮುಗಿಸಬೇಕು.ಆದರೆ ಅದು ಸುಲಭ ಅಲ್ಲ.ಗಳಿಗೆ ಗಳಿಗೆಗೆ ಎದುರಾಗುವ ಕಟ್ಟ್ ಗಳನ್ನು ಬಿಡಿಸುತ್ತಾ ಮುಂದೆ ಸಾಗಬೇಕು.ಮ್ಯಾನರ್,ಯು.ಪಿ.ಉಪಾಧ್ಯಾಯರು,ಕಿಟ್ಟೆಲ್,ಮರಿಯಪ್ಪ ಭಟ್ಟರು, ಆಕ್ಶ್ ಫರ್ಡ್,ಇಂಗ್ಲಿಷ್,ಜರ್ಮನ್ ,ಕನ್ನಡ -ಹೀಗೆ ಅನೇಕ ನಿಘಂಟುಗಳ ಕಾಡುಗಳಲ್ಲಿ ಭೂತ ಮತ್ತು ವರ್ತಮಾನಗಳ ನಡುವೆ ಸುತ್ತಾಡಬೇಕು.ನನ್ನ ಸುಮಾರು ಅರುವತ್ತು ವರ್ಷಗಳನ್ನು ಮೀರಿದ ತುಳು ಭಾಷೆಯ ತಿಳುವಳಿಕೆ,ನಲುವತ್ತು ವರ್ಷಗಳ ತುಳು ಜಾನಪದ -ಸಂದಿ ಪಾದ್ದನಗಳ ಒಡನಾಟ,ಸುಮಾರು ಎಂಟು ವರ್ಷಗಳ ಅವಧಿಯ ಸಿರಿ ಮಹಾಕಾವ್ಯದ ಇಂಗ್ಲಿಶ್ ಅನುವಾದದ ಅನುಭವ -ಈ ಎಲ್ಲ ಭೂತಗಳ ನಡುವೆ ಕೂಡಾ ಜರ್ಮನಿಯಲ್ಲಿ ಸಿಕ್ಕಿದ ನಮ್ಮ ಜುಮಾದಿ ಇನ್ನೂ ನಮಗೆ ಬಾಮಗದ ಬೂಳ್ಯವನ್ನು ಕೊಟ್ಟಿಲ್ಲ. ೧೯೮೯ರ ಮೇ ತಿಂಗಳು : ನನ್ನ ಮೊದಲ ವಿದೇಶ ಪ್ರವಾಸ ಜರ್ಮನಿಯ ಹೈಡಲ್ ಬೆರ್ಗ್ ಗೆ.ಹೈಡಲ್ ಬೆರ್ಗ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಸಂಸ್ಥೆಯಲ್ಲಿ ನನ್ನ ಎರಡು ಉಪನ್ಯಾಸಗಳು :ಒಂದು ,’ಕನ್ನಡ ಕಾದಂಬರಿಗಳ ಮೊದಲ ಘಟ್ಟ ‘ .ಇನ್ನೊಂದು ,’ತುಳು ಜನಪದ ಸಾಹಿತ್ಯದ ಪ್ರಕಾರಗಳು ‘. ಹೀಗೆ ಜರ್ಮನಿಯೊಂದಿಗೆ ನನ್ನ ಸಂಬಂಧ ಮೊದಲಾದದ್ದು ಕನ್ನಡ ಮತ್ತು ತುಳುಗಳ ಜೊತೆಜೊತೆಯಲ್ಲಿ. ಅಲ್ಲಿನ ಇಂಡಾಲಜಿ ವಿಭಾಗದಲ್ಲಿ ಆಗ ಪ್ರಾಧ್ಯಾಪಕಿ ಆಗಿದ್ದ ಪ್ರೊ.ಹೈದ್ರೂನ್ ಬ್ರೂಕ್ನರ್ ಅವರ ಆಹ್ವಾನ ಮತ್ತು ಆತಿಥ್ಯ. ಆ ಸಂದರ್ಭದಲ್ಲಿ ಒಂದು ದಿನ ಅವರೊಂದಿಗೆ ತ್ಯೂಬಿಂಗನ್ ನಗರಕ್ಕೆ ಭೇಟಿ ಕೊಟ್ಟೆ.ತ್ಯೂಬಿಂಗನ್ ವಿಶ್ವವಿದ್ಯಾಲಯದ ಬಗ್ಗೆ ಆವರೆಗೆ ಕೇಳಿದ ಓದಿದ ನೆನಪು ಕನ್ನಡಕ್ಕೆ ಸಂಬಂಧ ಪಟ್ಟದ್ದು.ಕನ್ನಡದ ಪ್ರಾಚೀನ ಕಾವ್ಯಗಳನ್ನು ಮೊದಲಬಾರಿ ಸಂಗ್ರಹಿಸಿ ಸಂಪಾದನೆ ಮಾಡಿ ಪ್ರಕಟಿಸಿದ ಹರ್ಮನ್ ಮೊಗ್ಲಿಂಗ್ (೧೮೧೧-೧೮೮೧), ಮೊಗ್ಲಿಂಗ್ ಸಮಕಾಲೀನರಾಗಿ ಅವರ ಜೊತೆಜೊತೆಗೆ ಮಂಗಳೂರಿನಲ್ಲಿ ಕನ್ನಡದ ಕೆಲಸವನ್ನು ಮಾಡಿದ ಗಾಡ್ ಫ್ರೆ ವೈಗ್ಲೆ (೧೮೧೬-೧೮೫೫ ),ಕನ್ನಡ -ಕನ್ನಡ-ಇಂಗ್ಲಿಷ್ ನಿಘಂಟು ಸಹಿತ ಪ್ರಾಚೀನ ಶಾಸ್ತ್ರ ಗ್ರಂಥಗಳನ್ನು ಮೊದಲ ಬಾರಿ ಸಂಪಾದನೆ ಮಾಡಿ ಪ್ರಕಟಿಸಿದ ಫರ್ಡಿನಾಂಡ್ ಕಿಟ್ಟೆಲ್ (೧೮೩೨-೧೯೦೩ ) ಇವರು ಬದುಕಿದ ಪರಿಸರ ಹಾಗೂ ನಡೆಸಿದ ಕನ್ನಡ ಸಂಶೋದನೆಗಳ ಕಾರಣವಾಗಿ ತ್ಯೂಬಿಂಗನ್ ವಿಶ್ವವಿದ್ಯಾಲಯ ನನಗೆ ಪವಿತ್ರ ಯಾತ್ರಾಸ್ಥಳವಾಗಿತ್ತು .ಕನ್ನಡದ ಕೆಲಸಕ್ಕಾಗಿ ಮೊತ್ತಮೊದಲ ಎರಡು ಡಾಕ್ಟರೇಟ್ ಗೌರವ ಪದವಿಗಳನ್ನು ಕೊಟ್ಟದ್ದು ಜರ್ಮನಿಯ ತ್ಯೂಬಿಂಗನ್ ವಿಶ್ವವಿದ್ಯಾಲಯ- ಮೊಗ್ಲಿಂಗ್ ಗೆ ೧೮೫೮ರಲ್ಲಿ ಮತ್ತು ಕಿಟ್ಟೆಲ್ ಗೆ ೧೯೦೬ರಲ್ಲಿ.   ೧೯೮೯ರ ನನ್ನ ಒಂದು ದಿನದ ಭೇಟಿಯಲ್ಲಿ ತ್ಯೂಬಿಂಗನ್ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಇರುವ ಕನ್ನಡ ಹಸ್ತಪ್ರತಿಗಳನ್ನು ಅವಲೋಕಿಸುತ್ತಿದ್ದಾಗ , ಗುಂದರ್ತ್ ಅವರ ಮಲಯಾಳಂ ಹಸ್ತಪ್ರತಿಗಳ ಜೊತೆಗೆ ಸೇರಿಹೋಗಿದ್ದ ಕನ್ನಡ ಲಿಪಿಯಲ್ಲಿ ಇದ್ದ ಒಂದು ಹಸ್ತಪ್ರತಿ ನನ್ನ ಗಮನ ಸೆಳೆಯಿತು.ಅದು ಆವರೆಗೆ ಎಲ್ಲೂ ದಾಖಲಾಗಿರಲಿಲ್ಲ.ಗ್ರಂಥಾಲಯದ ಹಸ್ತಪ್ರತಿ ಸೂಚಿಯಲ್ಲಿ ಅದು ಸೇರ್ಪಡೆ ಆಗಿರಲಿಲ್ಲ.ಕುತೂಹಲದಿಂದ ಅಕ್ಷರಗಳ ಮೇಲೆ ಕಣ್ಣಾಡಿಸಿದೆ. ಆಶ್ಚರ್ಯ -ಅದು ತುಳು ಭಾಷೆಯ ಒಂದು ಸಂಧಿ /ಪಾಡ್ದನ.ಲಿಪಿ -ಕನ್ನಡದ ಹಳೆಯ ಮಾದರಿ.ಕೂಡಲೇ ಬ್ರೂಕ್ನರ್ ಅವರ ಗಮನಕ್ಕೆ ತಂದೆ.ಗ್ರಂಥಾಲಯದವರಿಗೆ ವಿಷಯ ತಿಳಿಸಿದಾಗ ಅವರು ಸಂಭ್ರಮ ಪಟ್ಟರು.ಅದರ ವಿವರಗಳನ್ನು ಬರೆದುಕೊಡಲು ಹೇಳಿದರು.ಇಡೀ ಹಸ್ತಪ್ರತಿ ಓದಲು ಬಿಡುವು ಆಗ ಇರಲಿಲ್ಲ.ಸಂಕ್ಷಿಪ್ತ ಟಿಪ್ಪಣಿ ಕೊಟ್ಟೆ.ಕನ್ನಡ ಲಿಪಿಯಲ್ಲಿ ಬರೆಯಲಾದ ಒಟ್ಟು ನಾಲ್ಕು ತುಳು ಪಾಡ್ದನಗಳು ಈ ಹಸ್ತಪ್ರತಿಯಲ್ಲಿ ಇವೆ.ಕನ್ನಡ ಲಿಪಿಯ ಮಾದರಿಯಿಂದ ಹತ್ತೊಂಬತ್ತನೆಯ ಶತಮಾನದ ನಡುಭಾಗದ ಆರಂಭದ ಕಾಲದ್ದು ಎಂದು ಭಾವಿಸಬಹುದು.ಈಗಿನ ದಾಖಲೆಗಳ ಪ್ರಕಾರ ತುಳು ಪಾಡ್ದನಗಳ ಮೊದಲ ಸಂಪಾದಿತ ಪ್ರಕಟಣೆ -ಜರ್ಮನ್ ಮಿಷನರಿ ಆಗಸ್ಟ್ ಮ್ಯಾನರ್ ( ೧೮೨೮-೧೮೯೧) ಅವರ ‘ತುಳು ಪಾಡ್ದನೊಳು ‘ (೧೮೮೬ ).ಆ ಸಂಗ್ರಹದ ೨೧ ಪಾಡ್ದನಗಳಲ್ಲಿ ಇದು ಸೇರ್ಪಡೆ ಆಗಿಲ್ಲ.ಆ ಕಾಲದ ಬೇರೆ ಯಾವುದೇ ಸಂಗ್ರಹದಲ್ಲಿ ಇಲ್ಲ.ತ್ಯೂಬಿಂಗನ್ ವಿಶ್ವವಿದ್ಯಾನಿಲಯದ ಕನ್ನಡ ಹಸ್ತಪ್ರತಿಗಳು ಬಹುತೇಕ ಮೊಗ್ಲಿಂಗ್ ಅವರವು.ಕೆಲವು ವೈಗ್ಲೆಯದ್ದು.ಆದ್ದರಿಂದ ಈ ತುಳು ಪಾಡ್ದನ ಕೂಡಾ ಮೊಗ್ಲಿಂಗ್ ಸಂಗ್ರಹದ್ದು ಎಂದು ಊಹಿಸಬಹುದು.ಅಂದರೆ ಸುಮಾರು ೧೮೪೦ರ ಕಾಲದ್ದು ಆಗಿರಬೇಕು.ಬಹುಶಃ ತುಳು ಪಾಡ್ದನದ ಮೊದಲ ಹಸ್ತಪ್ರತಿ ಎಂದು ಭಾವಿಸಬಹುದು.ಮೊದಲನೆಯ ಸಂಧಿ -ಕಾಂತಣ ಅತಿಕಾರಿ ದೈವ -ಜುಮಾದಿಯ ಹುಟ್ಟು ಮತ್ತು ಕಲ್ಲಕಬೆಕೊಂಡಾ ಜನನದಲ್ಲಿ ಕಾಂತೆರಿ ಜುಮಾದಿ ನೆಲೆವೂರಿದ ಕಥಾನಕ.ಎರಡನೆಯ ಸಂಧಿ-ಕಡೆಕಾರ್ಲದಲ್ಲಿ ಜುಮಾದಿ ನೆಲೆವೂರಿದ ವೃತ್ತಾಂತ.ಮೂರನೆಯ ಸಂಧಿ-ದೇವು ಪೂಂಜನ ಕಥೆ.ಜುಮಾದಿಯ ಶಕ್ತಿಯನ್ನು ಮತ್ತು ದೇವು ಪೂಂಜನ ದುರಂತವನ್ನು ಹೇಳುವ ಕಥಾನಕ.ಈ ಮೂರು ಸಂಧಿಗಳು ಜುಮಾದಿ ಭೂತಕ್ಕೆ ಸಂಬಂಧಿಸಿದ ಒಂದೇ ದೀರ್ಘ ಪಾಡ್ದನದ ಭಾಗಗಳಂತೆ ಇವೆ.ನಾಲ್ಕನೆಯ ಸಂಧಿ -ಮಲರಾಯ ಭೂತದ್ದು.ಈ ಭೂತವು ಮಲಾರು ಬೀಡಿನಲ್ಲಿ ನೆಲೆವೂರಿದ ಕಥಾನಕ.( ಈ ಹಸ್ತಪ್ರತಿಯ ಮೊದಲ ಎರಡು ಪುಟಗಳನ್ನು ಸ್ಕೇನ್ ಮಾಡಿ ಮೇಲೆ ಕೊಟ್ಟಿದ್ದೇನೆ .) ತ್ಯೂಬಿಂಗನ್ ವಿವಿ ಗ್ರಂಥಾಲಯದಲ್ಲಿ ಇರುವ ಈ ತುಳು ಪಾಡ್ದನದ ಹಸ್ತಪ್ರತಿ ಮತ್ತು ಇತರ ಕನ್ನಡ ಹಸ್ತಪ್ರತಿಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವ ನನ್ನ ಸಂಶೋಧನಾ ಯೋಜನೆಗೆ ಜರ್ಮನ್ ಸಂಶೋಧನಾ ಸಂಸ್ಥೆ DAAD ಒಪ್ಪಿಗೆ ಕೊಟ್ಟ ಕಾರಣ ,ನಾನು ೧೯೯೩ರ ಜುಲೈ ,ಆಗಸ್ಟ್ ,ಸಪ್ಟಂಬರ -ಈ ಮೂರು ತಿಂಗಳ ಕಾಲ ತ್ಯೂಬಿಂಗನ್ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸುವ ಮತ್ತು ಗ್ರಂಥಾಲಯದ ಕನ್ನಡ ಹಸ್ತಪ್ರತಿಗಳನ್ನು ಅಧ್ಯಯನ ಮಾಡುವ ಕೆಲಸಮಾಡಲು ಸಾಧ್ಯವಾಯಿತು. ಇಲ್ಲಿ ಇರುವ ಕನ್ನಡ ಸಾಹಿತ್ಯದ ಹಸ್ತಪ್ರತಿ ಸಾಮಗ್ರಿಗಳ ಬಗ್ಗೆ ನನ್ನ ಬ್ಲಾಗಿನ ಎರಡು ಬರಹಗಳಲ್ಲಿ ವಿವರಗಳನ್ನು ಕೊಟ್ಟಿದ್ದೇನೆ.   ನೋಡಿರಿ :’ಜರ್ಮನಿಯ ತ್ಯೂಬಿಂಗನ್ ನಲ್ಲಿ ಕನ್ನಡ ಹಸ್ತಪ್ರತಿಗಳು ‘. ೯ ಜೂನ್ ೨೦೧೦.   ‘ತ್ಯೂಬಿಂಗನ್ ಕನ್ನಡ ಹಸ್ತಪ್ರತಿಗಳು : ಶಬ್ದಮಣಿ ಮತ್ತು ಕಾವ್ಯಗನಿ ‘ . ೧೩ ಜೂನ್ ೨೦೧೦   ಹರ್ಮನ್ ಮೊಗ್ಲಿಂಗ್ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒಂದು ಲೇಖನ ಇದೆ : ‘ಹರ್ಮನ್ ಮೊಗ್ಲಿಂಗ್ :ನೆಕ್ಕರ್ ನಿಂದ ನೇತ್ರಾವತಿಗೆ ‘.೧೪ ಸಪ್ಟಂಬರ ೨೦೧೧   ತುಳು ಪಾಡ್ದನದ ಹಸ್ತಪ್ರತಿ ಕೈಬರಹದಲ್ಲಿ ಉದ್ದನೆಯ ಕಾಗದದ ಹಾಳೆಯಲ್ಲಿ ಅರುವತ್ತು ಪುಟಗಳಲ್ಲಿ ಇದೆ.೧೯೯೩ರ ಮೂರು ತಿಂಗಳ ನನ್ನ ತ್ಯೂಬಿಂಗನ್ ವಾಸ್ತವ್ಯದಲ್ಲಿ ಈ ಹಸ್ತಪ್ರತಿಯನ್ನು ಈಗಿನ ಕನ್ನಡ ಲಿಪಿಯಲ್ಲಿ ನನ್ನ ಕೈಬರಹದಲ್ಲಿ ಉದ್ದನೆಯ ನೋಟ್ ಪುಸ್ತಕದಲ್ಲಿ ಬರೆದೆ. ಆಗ ಕಂಪ್ಯೂಟರ್ ಬಳಕೆ ಇರಲಿಲ್ಲ.ನನ್ನ ಕೈಬರಹದಲ್ಲಿ ಅದು ಒಟ್ಟು ೫೭ ಪುಟ ಆಯಿತು.ಮೂಲ ಹಸ್ತಪ್ರತಿಯಲ್ಲಿ ದಂಡಾಕಾರವಾಗಿ ಬರೆದಿದ್ದರೂ ,ಪಾಡ್ದನದ ಹಾಡುವಿಕೆಗೆ ಅನುಸಾರವಾಗಿ ,ನಡುನಡುವೆ ಅಡ್ಡ ಗೆರೆಗಳನ್ನು ಹಾಕಲಾಗಿತ್ತು.ಅವುಗಳ ಆಧಾರದಲ್ಲಿ ಕಾವ್ಯದ ಸಾಲುಗಳನ್ನು ಗುರುತಿಸಿ ,ನಾನು ಪ್ರತಿಮಾಡಿದ ಹಸ್ತಪ್ರತಿಯಲ್ಲಿ ಈ ಎಲ್ಲ ಪಾಡ್ದನಗಳ ಒಟ್ಟು ಸಾಲುಗಳು-೧೮೧೭. ಆಮೇಲೆ ಕನ್ನಡ ಲಿಪಿಯಲ್ಲಿ ಇರುವ ತುಳು ಪಾಡ್ದನಗಳ ಈ ಹಸ್ತಪ್ರತಿಯನ್ನು ರೋಮನ್ ಲಿಪಿಯಲ್ಲಿ -ಅಂತಾರಾಷ್ಟ್ರೀಯ ಧ್ವನಿ ಲಿಪಿ-ಯಲ್ಲಿ ಲಿಪ್ಯಂತರ ( Transliteration ) ಮಾಡಿದೆ.ಲಿಪ್ಯಂತರದ ಬಗ್ಗೆ ಮುಂದೆ ಸ್ವಲ್ಪ ವಿವರಣೆ ಕೊಟ್ಟಿದ್ದೇನೆ.ಬಳಿಕ ಈ ಪಾಡ್ದನಗಳನ್ನು ತುಳುವಿನಿಂದ ಇಂಗ್ಲಿಷಿಗೆ ಅನುವಾದ ಮಾಡಿದೆ.ಇಷ್ಟೆಲ್ಲವನ್ನು ತ್ಯೂಬಿಂಗನ್ ನಲ್ಲಿ ಇರುವಾಗಲೇ ೧೯೯೩ರಲ್ಲಿ ಮುಗಿಸಿದೆ.ಆದರೆ ಇವೆಲ್ಲ ಮೊದಲ ಕರಡು ಮಾತ್ರ.ತುಳು ಪಾಡ್ದನಗಳ ಈ ಮೊದಲ ಹಸ್ತಪ್ರತಿಯನ್ನು ಇಂಗ್ಲಿಶ್ ಅನುವಾದ ,ಟಿಪ್ಪಣಿಗಳು ಮತ್ತು ಪ್ರಸ್ತಾವನೆಯೊಂದಿಗೆ ಒಂದು ಪ್ರಕಟಣೆಯನ್ನು ನಾನು ಮತ್ತು ಪ್ರೊ.ಬ್ರೂಕ್ನರ್ ಜೊತೆಯಾಗಿ ತರುವ ಯೋಚನೆಯನ್ನು ಆಗಲೇ ನಾವು ಮಾಡಿದ್ದೆವು.ಆದರೆ ೧೯೯೩ ರಿಂದ ಸುಮಾರು ಹದಿನೆಂಟು ವರ್ಷಗಳ ಕಾಲ ನಾವು ಇಬ್ಬರೂ ಜೊತೆಯಾಗಿ ನಿರಂತರವಾಗಿ ಕೆಲಸ ಮಾಡಲು ಅವಕಾಶ ದೊರೆಯಲಿಲ್ಲ.ನಾನು ಒಂದು ರೀತಿಯಲ್ಲಿ ಜುಮಾದಿ ಭೂತದಂತೆ ನನ್ನ ಬೀಡಿನಲ್ಲಿ ಮತ್ತು ಬೇರೆ ಬೇರೆ ನಾಡುಗಳಲ್ಲಿ ಸಂಚಾರ ಮಾಡುತ್ತಾ ಕೋಲ ನೇಮಗಳಲ್ಲಿ ಕಾಲ ಕಳೆದೆ.ಕೊನೆಗೂ ಜರ್ಮನಿಯ ತ್ಯೂಬಿಂಗನ್ ನಲ್ಲಿ ಎಣ್ಣೆ ಬೂಳ್ಯ ಪಡೆದು ಗಗ್ಗರದೆಚ್ಚಿ ಆದದ್ದು ,ಅಣಿ ಕಟ್ಟಿ ಬಿರಿಯಲು , ಬಾಮಗದ ಬೂಳ್ಯ ತೆಗೆದುಕೊಳ್ಳಲು ಮತ್ತೆ ಜರ್ಮನಿಯ ಇನ್ನೊಂದು ಸಾನ ವ್ಯೂರ್ತ್ಸ್ ಬುರ್ಗ್ ಗೆ ಬರಬೇಕಾಯಿತು.   ಲಿಪ್ಯಂತರ ( Transliteration ) ಎಂದರೆ ಮೌಖಿಕ ಪರಂಪರೆಯ ಧ್ವನಿಗಳನ್ನು ಲಿಖಿತ ಪರಂಪರೆಗೆ ವರ್ಗಾಯಿಸುವುದು.ಧ್ವನಿ ಪಾತಳಿಯಿಂದ ಅಕ್ಷರ ಪಾತಳಿಗೆ ತರುವುದು.ಧ್ವನಿಗೆ ಮತ್ತು ಬರಹಕ್ಕೆ ಎಂದೂ ಪೂರ್ಣ ಹೊಂದಾಣಿಕೆ ಅಸಾಧ್ಯ.ಯಾವುದೇ ಅಕ್ಷರವಾದರೂ ಅದು ಸಂಕೇತ ಮಾತ್ರ.ಮತ್ತೆ ಅದು ಜೀವ ತಾಳುವುದು ನಮ್ಮ ದೈಹಿಕ ಧ್ವನ್ಯಂಗಗಳ ಬಳಕೆಯ ಮೂಲಕ ಮಾತ್ರ.ಆದರೆ ದಾಖಲೆಗೆ ಅಕ್ಷರ ,ಬರಹ ಬೇಕು.ಮೌಖಿಕ ಸಾಹಿತ್ಯದ ಈರೀತಿಯ ದಾಖಲೀಕರಣಕ್ಕೆ ಜಾನಪದ ವಿಜ್ಞಾನದಲ್ಲಿ ಈಗ ಬಳಕೆ ಆಗುತ್ತಿರುವ ಪಾರಿಭಾಷಿಕ ಪದ -‘ Textualisation ‘ .ತುಳು ಧ್ವನಿಯ ಪದಗಳನ್ನು ಯಾವುದೇ ಲಿಪಿಯಲ್ಲಿ ಬರೆಯಬಹುದು -ಅದರ ಬಳಕೆಯ ಸಾಧ್ಯತೆಗಳ ಉದ್ದೇಶಗಳಿಗೆ ಅನುಸಾರವಾಗಿ.ಒಂದು ಭಾಷೆಯ ವಿಶಿಷ್ಟ ಧ್ವನಿಗಳನ್ನು /ಧ್ವನಿಮಾಗಳನ್ನು ಲಿಪಿಯಲ್ಲಿ ತೋರಿಸುವುದಕ್ಕೆ ಕೆಲವು ವಿಶಿಷ್ಠ ಸಂಕೇತಗಳನ್ನು ರೂಪಿಸಿಕೊಳ್ಳುತ್ತಾರೆ   ತುಳು ಜನಪದ ಸಾಹಿತ್ಯವನ್ನು ನನ್ನ ಪಿ.ಎಚ್ ಡಿ.ಸಂಶೋಧನೆಗೆ ಆರಿಸಿಕೊಂಡಾಗ ೧೯೭೦ರ ಕಾಲದಲ್ಲಿ ಆಗಿನ ಕಾಲದ ಮಾದರಿಯ ಒಂದು ಟೇಪ್ ರೆಕಾರ್ಡರ್ ನಲ್ಲಿ ಧ್ವನಿ ಮುದ್ರಣ ಮಾಡಿಕೊಂಡು,ಮತ್ತೆ ಅವನ್ನು ಬರಹಕ್ಕೆ ಇಳಿಸುವಾಗ ಬಹಳ ಕಷ್ಟಪಡಬೇಕಾಗಿತ್ತು. ತುಳುವಿನ ಸಂಧಿ ಪಾಡ್ದನಗಳು,ಕಬಿತಗಳು,ಹಾಡುಗಳು,ಅಜ್ಜಿಕತೆಗಳು -ಇವನ್ನೆಲ್ಲ ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಧ್ವನಿಮುದ್ರಣ ಮಾಡಿ ,ಕನ್ನಡ ಲಿಪಿಯಲ್ಲಿ ಲಿಪ್ಯಂತರ ಮಾಡಿ ,ಕೈಯಲ್ಲಿ ಬರೆದುಕೊಂಡ ಆಗಿನ ಸಾಹಸಗಳನ್ನು ನೆನಸಿಕೊಂಡರೆ ಈಗಲೂ ಧನ್ಯತೆಯ ಭಾವ ಮೊಳೆಯುತ್ತದೆ.ಚಪ್ಪಟೆಯ ಆಯಾತಾಕಾರದ ,ಹಾರ್ಮೋನಿಯಂ ಮಾದರಿಯ ಒತ್ತುವ ದೊಡ್ಡ ಬಟನ್ ಗಳಿದ್ದ ಆ ಟೇಪ್ ರೆಕಾರ್ಡರ್ ನಲ್ಲಿ ಮತ್ತೆ ಮತ್ತೆ ಕೇಳಬೇಕಾದಾಗ ಬಟನ್ ಗಳನ್ನು ಹಿಂದಕ್ಕೆ ಮುಂದಕ್ಕೆ ಒತ್ತುವ ,ನಡುನಡುವೆ ಒಂದೊಂದು ಸಾಲು ಬರೆದುಕೊಳ್ಳುವ ಪ್ರಯಾಸದ ಮತ್ತು ಅಪಾರ ತಾಳ್ಮೆಯನ್ನು ಬಯಸುವ ಇಂತಹ ಕೆಲಸದ ಶ್ರಮ ಇವತ್ತು ಅಗತ್ಯ ಇಲ್ಲ.   ತುಳು ಜನಪದ ಕಾವ್ಯದ ಸಂಗ್ರಹ ,ಲಿಪ್ಯಂತರ , ಅನುವಾದ -ಇದರ ನಿಜವಾದ ಪಾಠಗಳನ್ನು ನಾನು ಕಲಿತದ್ದು ಬಹಳ ತಡವಾಗಿ ೧೯೮೯ ರಿಂದ .ಫಿನ್ ಲೆಂಡ್ ನ ತುರ್ಕು ವಿಶ್ವವಿದ್ಯಾನಿಲಯದ ಜಾನಪದ ಪ್ರಾಧ್ಯಾಪಕ ,ಅಂತಾರಾಷ್ಟ್ರೀಯ ಪ್ರಸಿದ್ಧಿಯ ಜಾನಪದ ವಿದ್ವಾಂಸರಾದ ಪ್ರೊ.ಲೌರಿ ಹಾಂಕೋ ಅವರ ಸಂಪರ್ಕಕ್ಕೆ ಬಂದ ಬಳಿಕ. ೧೯೯೦ರಲ್ಲಿ ಲೌರಿ ಹಾಂಕೋ ಅವರ ನೇತೃತ್ವದ ‘ಮೌಖಿಕ ಮಾಹಾಕಾವ್ಯ ಯೋಜನೆ’ ಯಲ್ಲಿ ತುಳುನಾಡಿನ ಉಜಿರೆ ಬಳಿಯ ಮಾಚಾರಿನ ಗೋಪಾಲ ನಾಯ್ಕ ಅವರು ಹಾಡಿದ ತುಳುವಿನ ‘ಸಿರಿ ಸಂಧಿ’ ಮಹಾಕಾವ್ಯವನ್ನು ದಾಖಲಾತಿ ಮಾಡಲಾಯಿತು. ಈ ತಂಡದಲ್ಲಿ ನಾವು ನಾಲ್ಕು ಜನರು ಸುಮಾರು ಎಂಟು ವರ್ಷಗಳ ಕಾಲ ಬೇರೆ ಬೇರೆ ರೀತಿಯ ಕೆಲಸ ಮಾಡಿದೆವು. ಫಿನ್ ಲೆಂಡ್ ನಿಂದ ಲೌರಿ ಹಾಂಕೋ ಮತ್ತು ಅವರ ಹಂಡತಿ ಭಾಷಾವಿಜ್ಞಾನಿ ಅನೆಲಿ ಹಾಂಕೋ ,ತುಳುನಾಡಿನಿಂದ ನಾನು ಮತ್ತು ನನ್ನ ಸಹೋದ್ಯೋಗಿ ಆಗಿದ್ದ ಡಾ.ಕೆ.ಚಿನ್ನಪ್ಪ ಗೌಡರು ಈ ಯೋಜನೆಯಲ್ಲಿ ತೊಡಗಿಸಿಕೊಂಡೆವು. ಧ್ವನಿ ಮುದ್ರಣ ಮಾಡಿದ ಸಿರಿ ಸಂಧಿಯನ್ನು ಅಕ್ಷರರೂಪದಲ್ಲಿ ರೋಮನ್ ಲಿಪಿಯ ಮಾದರಿಯ ಧ್ವನಿಲಿಪಿಯಲ್ಲಿ ದಾಖಲಾತಿ ಮಾಡುವ ಹೊಣೆಗಾರಿಕೆ ನನ್ನದು ಮತ್ತು ಚಿನ್ನಪ್ಪ ಗೌಡರದ್ದು ಆಗಿತ್ತು.ನಾವು ಇಬ್ಬರು ೧೯೯೧ ರಿಂದ ಸುಮಾರು ಐದು ವರ್ಷಗಳ ಕಾಲ ಪ್ರತೀ ಬೇಸಗೆಯಲ್ಲಿ ಫಿನ್ ಲೆಂಡ್ ನಲ್ಲಿ ಒಂದರಿಂದ ಎರಡು ತಿಂಗಳ ಕಾಲ ಇದ್ದು ,ಸಿರಿಕಾವ್ಯದ ಲಿಪ್ಯಂತರ ಮತ್ತು ಅನುವಾದ ಹಾಗೂ ಸಂಪಾದನೆಯ ಇತರ ಕೆಲಸಗಳನ್ನು ಮಾಡುತ್ತಿದ್ದೆವು.ಲಿಪ್ಯಂತರ ಮಾಡುವಾಗ ೧೯೯೧-೯೨ರಲ್ಲಿ ಫಿನ್ ಲೆಂಡ್ ನಲ್ಲಿ ನನಗೆ ಅನುಕೂಲವಾಗಿ ಸಿಕ್ಕಿದ್ದು ,ಕಾಲಲ್ಲಿ ಬಟನ್ ಒತ್ತಿ ನಿಯಂತ್ರಣ ಮಾಡುವ ಒಂದು   ದೊಡ್ಡ ಗಾತ್ರದ ದಾಖಾಲಾತಿ ಉಪಕರಣ.ನೀಲಿ ಬಣ್ಣದ ಆ ಸಾಧನ ಆ ಕಾಲದಲ್ಲಿ ನನ್ನ ಆತ್ಮೀಯ ಒಡನಾಡಿ ಆಗಿತ್ತು.ನಾನು ಆಡಿಯೋ ಕ್ಯಾಸೆಟ್ ಗಳನ್ನು ಅದರಲ್ಲಿ ಹಾಕಿಕೊಂಡು ಕೇಳಿ ,ಸಿರಿ ಸಂಧಿಯ ಹಾಡುಗಳನ್ನು ಕೈಬರಹದಲ್ಲಿ ರೋಮನ್ ಲಿಪಿಯಲ್ಲಿ ಬರೆದುಕೊಳ್ಳುತ್ತಿದ್ದೆ.ಕೆಲವೊಮ್ಮೆ ನಾನು ಹೇಳುವುದು ,ಚಿನ್ನಪ್ಪ ಗೌಡರು ಬರೆದುಕೊಳ್ಳುವುದು ನಡೆಯುತ್ತಿತ್ತು. (ಅ ಕಾಲದ ನಮ್ಮ ಲಿಪ್ಯಂತರ ಸಂದರ್ಭದ ಒಂದು ಹಳೆಯ ಫೋಟೋವನ್ನು ಮೇಲೆ ಕೊಟ್ಟಿದ್ದೇನೆ.) ಹೀಗೆ ನಾವಿಬ್ಬರು ಸೇರಿ ಸಿರಿ ಕಾವ್ಯದ ಒಟ್ಟು ೧೫೬೮೨ ಸಾಲುಗಳನ್ನು ಧ್ವನಿ ಲಿಪಿಗೆ ಇಳಿಸಿದೆವು.   ಸಿರಿಕಾವ್ಯವನ್ನು ತುಳುವಿನಿಂದ ಇಂಗ್ಲಿಷಿಗೆ ಅನುವಾದ ಮಾಡಿದ ಅನುಭವ ನನ್ನ ಬದುಕಿನ ಅತ್ಯಂತ ಸವಾಲಿನ ಮತ್ತು ಸಂತೃಪ್ತಿಯ ಹಂತ.ಜಗತ್ತಿನ ಅನೇಕ ಭಾಷೆಗಳ ಅನೇಕ ದೇಶಗಳ ಜನಪದ ಮಹಾಕಾವ್ಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಅಂತಾರಾಷ್ಟ್ರೀಯ ನೆಲೆಯಲ್ಲಿ ಜಾನಪದ ಮತ್ತು ತೌಲನಿಕ ಧರ್ಮದ ಹಿರಿಯ ವಿದ್ವಾಂಸ ಆಗಿದ್ದ ಲೌರಿ ಹಾಂಕೋ ಮತ್ತು ಭಾಷಾವಿಜ್ಞಾನ ಹಾಗೂ ಕೃತಿಗಳ ಪಾಠಗಳ ಅತಿ ಸೂಕ್ಷ್ಮ ನೋಟ ಇದ್ದ ಅವರ ಹೆಂಡತಿ ಅನೆಲಿ ಹಾಂಕೋ ಅವರ ಜೊತೆಗೆ ತುಳು ಮಾತೃ ಬಾಷೆಯ ನಾನು ಮತ್ತು ಚಿನ್ನಪ್ಪ ಗೌಡರು -ನಾವು ನಾಲ್ವರು ಸುಮಾರು ಹದಿನಾರು ಸಾವಿರ ಸಾಲುಗಳ ಸಿರಿ ಕಾವ್ಯವನ್ನು ಮೂಲದ ಒಂದು ಅಕ್ಷರ ಬಿಡದೆ ,ಮೂಲದ ಅರ್ಥಕ್ಕೆ ಭಂಗ ಬಾರದಂತೆ ,ಆದರೆ ಇಂಗ್ಲಿಶ್ ಓದುಗರಿಗೆ ಅರ್ಥ ಆಗುವಂತೆ ಅನುವಾದ ಮಾಡಿ ಮುಗಿಸಿದಾಗ ನನ್ನದೇ ಭಾಷೆಯ ಬಗ್ಗೆ ನನ್ನ ತಿಳುವಳಿಕೆ ಎಷ್ಟು ಮಿತವಾದದ್ದು ಎಂದು ಮನವರಿಕೆ ಆಯಿತು.ಜ್ಞಾನದ ಗರ್ವರಸ ಸೋರಿಹೋಯಿತು.ಪಾಡ್ದನದ ತುಳು ಪದಗಳ,ನುಡಿಗಟ್ಟುಗಳ,ಸಾಲುಗಳ,ಅಭಿವ್ಯಕ್ತಿಯ ಅರ್ಥಗಳನ್ನು ಹೇಳಲು ಅನೇಕ ಬಾರಿ ನಾನು ತಿಣುಕಾಡಬೇಕಾಯಿತು.ನಮ್ಮ ನಾಲ್ಕು ಮಂದಿಯ ಸಮಾಲೋಚನೆಯ ಸಭೆಗಳಲ್ಲಿ ಮೇಜಿನ ಮೇಲೆ ‘ತುಳು ನಿಘಂಟು ‘ವಿನ ಆರು ಸಂಪುಟಗಳು ಸದಾ ಪುಟಗಳನ್ನು ತೆರೆದುಕೊಂಡು ಕಾಯುತ್ತಿದ್ದುವು. ಡಾ.ಯು.ಪಿ.ಉಪಾಧ್ಯಾಯರ ಪ್ರಧಾನ ಸಂಪಾದಕತ್ವದ ,ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಈ ಪ್ರಕಟಣೆಗಳು ನನ್ನ ತಿಳುವಳಿಕೆಯ ಮಟ್ಟದಲ್ಲಿ ತುಳುವಿನಂತಹ ಒಂದು ಮೌಖಿಕ ಭಾಷೆಯ ಸಮಗ್ರತೆಯ ಪ್ರಮಾಣದಲ್ಲಿ ಜಾಗತಿಕ ಮಹತ್ವದವು.ಪ್ರೊ.ಕುಶಿ ಹರಿದಾಸ ಭಟ್ಟರ ದೂರದರ್ಶಿತ್ವ ಮತ್ತು ಕರ್ತೃತ್ವ ಶಕ್ತಿ, ಡಾ.ಪದ್ಮನಾಭ ಮತ್ತು ಸುಶೀಲಾ ಉಪಾಧ್ಯಾಯ ದಂಪತಿಗಳ ಅಪಾರ ವಿದ್ವತ್ತು ಮತ್ತು ಸಮರ್ಪಣ ಭಾವದ ದುಡಿಮೆ ,ತಜ್ಞ ಹಿರಿಯರ -ವಿದ್ವಾಂಸರ ಅನುಭವ -ಹೀಗೆ ರೂಪು ತಾಳಿದ ‘ತುಳು ನಿಘಂಟು ‘ ತುಳುವಿನ ಪಾಲಿಗೆ ‘ಸಾರೊ ಜಾಲ ಪೊಲಿ ತುಳುವೆರೆ ಜಾಲ್ ಗ್ ಬತ್ತುದ್ ಬೂರಿ ಲೆಕ್ಕೋ ‘, ಅದೊಂದು ಸಮೃದ್ಧಿಯ ಕಣಜ.೧೯೭೯ರಲ್ಲಿ ಆರಂಭವಾಗಿ ೧೯೯೭ರಲ್ಲಿ ಪೂರ್ಣಗೊಂಡ ಆರು ಸಂಪುಟಗಳ ತುಳು ನಿಘಂಟು ಯೋಜನೆಯಲ್ಲಿ ಸಂಪಾದಕ ಮಂಡಳಿಯ ಒಬ್ಬ ಸದಸ್ಯನಾಗಿ ಅನೇಕ ಹಿರಿಯರ ಜೊತೆಗೆ ತುಳುವಿನ ಪದಗಂಟುಗಳನ್ನು ಬಿಡಿಸುವ ಕಷ್ಟದ ಮತ್ತು ಸ್ವಾರಸ್ಯದ ದಿನಗಳನ್ನು ಕಳೆದ ಭಾಗ್ಯ ನನ್ನದು.ಕುಶಿ ,ಉಪಾಧ್ಯಾಯ ದಂಪತಿಗಳ ಜೊತೆಗೆ ಕಯ್ಯಾರ ,ಏರ್ಯ ಲಕ್ಷ್ಮೀನಾರಾಯಣ ಆಳ್ವ,ಅಮೃತ ಸೋಮೇಶ್ವರ ,ವೆಂಕಟರಾಜ ಪುಣಿಂಚಿತ್ತಾಯ, ರಾಮಕೃಷ್ಣ ಶೆಟ್ಟಿ,ಎ.ಶ್ರೀರಮಣ ಆಚಾರ್ಯ -ಇಂತಹ ತುಳು ದಿಗ್ಗಜರ ಒಡನಾಟದ ತುಳು ನಿಘಂಟು ಸಭೆಗಳಲ್ಲಿ ನಾನು ನನ್ನ ಭಾಷೆ ತುಳುವನ್ನು ಹೆಚ್ಚು ಹೆಚ್ಚು ಕಲಿತುಕೊಂಡೆ .( ತುಳು ನಿಘಂಟು ಸಭೆಯೊಂದರ ಹಳೆಯ ಫೋಟೋ ಒಂದು ಇತ್ತೀಚಿಗೆ ದೊರೆಯಿತು.ನನ್ನ ಹಳೆಯ ಜನ್ಮವೊಂದರ ಹಳೆಯ ಚಿತ್ರವನ್ನು ಮೇಲೆ ಕೊಟ್ಟಿದ್ದೇನೆ.ಕುಶಿ ಹರಿದಾಸ ಭಟ್ಟರು,ಉಪಾಧ್ಯಾಯರು,ಅಮೃತ ಸೋಮೇಶ್ವರರ ಜೊತೆಗೆ ಇದ್ದೇನೆ.ಕುಶಿ ಅವರು ಅಗಲಿ ಹತ್ತು ವರ್ಷಗಳು ಸಂದುವು.) ಸಿರಿ ಕಾವ್ಯದ ಇಂಗ್ಲಿಶ್ ಅನುವಾದದ ನಮ್ಮ ಸಭೆಗಳಲ್ಲಿ ಅದರಲ್ಲಿನ ತುಳು ಪದಗಳಿಗೆ ನುಡಿಗಟ್ಟುಗಳಿಗೆ ನಾನು ಕೊಟ್ಟ ಅರ್ಥವು ಲೌರಿ -ಅನೆಲಿ ಹಾಂಕೋ ಅವರಿಗೆ ಒಪ್ಪಿಗೆ ಆಗದೆ ಕೆಲವೊಮ್ಮೆ ಮಧ್ಯರಾತ್ರಿಯ ವರೆಗೆ ಚರ್ಚೆ ನಡೆದು, ತೀರ್ಮಾನವಾಗದೆ ಸ್ವಲ್ಪ ಅಸಮಾಧಾನದಿಂದಲೇ ನಾವು ಅಲ್ಲಿಗೆ ನಿಲ್ಲಿಸಿದ ನಿದರ್ಶನಗಳೂ ಇವೆ.ಮರುದಿನ ಬೆಳಗ್ಗೆ ಮತ್ತೆ ಇನ್ನಷ್ಟು ಸಿದ್ದತೆ ಮಾಡಿಕೊಂಡು ,ನಾನು ಹೇಳಿದ ಅರ್ಥ ಸರಿಹೊಂದುವುದಿಲ್ಲ ಎಂದು ಮನವರಿಕೆ ಆದ ಸಂದರ್ಭಗಳೂ ಸಾಕಷ್ಟು ಇವೆ.ನಮ್ಮ ಭಾಷೆಯ ಬಳಕೆ ಮತ್ತು ಅದರ ಅರ್ಥಗಳು ನಮ್ಮ ಪೂರ್ವ ಕಲ್ಪಿತ ಗೃಹೀತಗಳಿಂದ ಮುಚ್ಚಿಹೋಗಿರುತ್ತವೆ. ನಾವು ಅವನ್ನು ವಿಮರ್ಶಾತ್ಮಕವಾಗಿ ನೋಡಲು ಹೋಗುವುದಿಲ್ಲ.ಹಾಗಾಗಿ ವಯಸ್ಸು ಹೆಚ್ಚಾದ ಮಾತ್ರಕ್ಕೆ ,ಆ ಕ್ಷೇತ್ರದಲ್ಲಿ ಕೆಲಸಮಾಡಿದ ಮಾತ್ರಕ್ಕೆ ನಾವು ಎಲ್ಲವನ್ನೂ ಬಲ್ಲವರು ಆಗಬೇಕಾಗಿಲ್ಲ.ತುಳು ಗೊತ್ತಿಲ್ಲದ ,ಫಿನ್ನಿಶ್ ಮಾತೃ ಭಾಷೆಯ ಹಾಂಕೋ ಅವರ ಜೊತೆಗಿನ ಸೂಕ್ಸ್ಮ ಸಂವಾದದಿಂದ ನಾನು ನನ್ನ ತುಳುಭಾಷೆಯನ್ನು ಇನ್ನಷ್ಟು ಚೆನ್ನಾಗಿ ತಿಳಿದುಕೊಳ್ಳಲು ಅನುಕೂಲ ಆಗಿದೆ. .ಪಾಡ್ದನದಂತಹ ಒಂದು ಮೌಖಿಕ ಕಾವ್ಯವನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎನ್ನುವ ಪಾಠವನ್ನು ಅವರಿಂದ ಕಲಿತಿದ್ದೇನೆ.ಅದೇ ರೀತಿ ಅನೇಕ ಬಾರಿ ನಮಗೆ ಯಾರಿಗೂ ಬಿಡಿಸಲಾಗದ ಭಾಷಿಕ ಸಮಸ್ಯೆಗಳನ್ನು ನಮ್ಮ ಸಿರಿ ಕಾವ್ಯದ ಗಾಯಕ ಕಲಾವಿದ ಮಾಚಾರು ಗೋಪಾಲ ನಾಯ್ಕರಿಂದ ಪರಿಹರಿಸಿಕೊಂಡಿದ್ದೇನೆ.ಅವರ ಜೊತೆಗೆ ನಮ್ಮ ‘ಸಿರಿ ಮಹಾಕಾವ್ಯ ಯೋಜನೆ’ಯ ತಂಡವು ವೀಡಿಯೋ ದಾಖಲಾತಿಯನ್ನು ಉಡುಪಿಯ ಆರ್.ಆರ್.ಸಿ.ಯಲ್ಲಿ ನೋಡುತ್ತಿರುವ ಒಂದು ಅಪೂರ್ವ ಫೋಟೋವನ್ನು ಮೇಲೆ ಕೊಟ್ಟಿದ್ದೇನೆ . ಈ ಚಿತ್ರದಲ್ಲಿ ಇರುವ ಲೌರಿ ಹಾಂಕೋ ನಮ್ಮನ್ನು ಅಗಲಿ ಸುಮಾರು ಹತ್ತು ವರ್ಷಗಳು ಸಂದುವು.( Photo courtesy -The book mentioned below.)   ಸಿರಿ ಪಾಡ್ದನದ ಮೂಲ ತುಳುವಿನ ಪಾಠದ ಲಿಪ್ಯಂತರ ಮತ್ತು ಇಂಗ್ಲಿಶ್ ಅನುವಾದ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ : ‘The Siri Epic as Performed by Gopala Naika.I,II. : Lauri Honko in collaboration with Chinnappa Gowda ,Anneli Honko and Viveka Rai. (FF Communications 265,266.) 1998.Helsinki:Academia Scientiarum Fennica.   ಜರ್ಮನಿಯಲ್ಲಿ ಈಗ ಸೇವೆಯಲ್ಲಿ ಇರುವ ಅತಿ ಹಿರಿಯ ಇಂಡಾಲಜಿ ಪ್ರಾಧ್ಯಾಪಕಿ ಪ್ರೊ.ಹೈದ್ರೂನ್ ಬ್ರೂಕ್ನರ್ ಸಂಸ್ಕೃತ ,ಕನ್ನಡಗಳ ಜೊತೆಗೆ ತುಳು ಭಾಷೆ ಮತ್ತು ಜಾನಪದದಲ್ಲಿ ಕಳೆದ ಸುಮಾರು ಮೂವತ್ತು ವರ್ಷಗಳಿಂದ ಗಣನೀಯ ಅದ್ಯಯನ ನಡೆಸಿದ್ದಾರೆ.ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ತುಳುನಾಡಿನ ಸಂಪರ್ಕಕ್ಕೆ ಬಂದು ,ಭೂತದ ಪಾಡ್ದನಗಳಲ್ಲಿ ಆಸಕ್ತಿಯನ್ನು ತಾಳಿ ,ಐತ್ತಪ್ಪ ಪಂಬದರಂತಹ ಹಿರಿಯ ಕಲಾವಿದರಿಂದ ಜುಮಾದಿ ಮತ್ತು ಕನ್ನಲ್ಲಾಯ ಪಾಡ್ದನಗಳನ್ನು ಸಂಗ್ರಹಿಸಿ ,ಅವನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.ಮುಂದೆ ತಮ್ಮ ಹ್ಯಾಬಿಲಿಟೆಶನ್ ಮಹಾಪ್ರಬಂಧಕ್ಕಾಗಿ (ಜರ್ಮನ್ ವಿವಿಗಳ ಎರಡನೆಯ ಪಿ.ಎಚ್ ಡಿ .) ತುಳುವಿನ ಇಪ್ಪತ್ತೈದು ಪಾಡ್ದನಗಳನ್ನು ಜರ್ಮನ್ ಭಾಷೆಗೆ ಅನುವಾದಮಾಡಿ,ಭೂತಾರಾಧನೆ ಮತ್ತು ತುಳು ಪಾದ್ದನಗಳ ಬಗ್ಗೆ ಜರ್ಮನ್ ಭಾಷೆಯಲ್ಲಿ ತಮ್ಮ ಥೀಸಿಸ್ ಬರೆದು ಪ್ರಕಟಿಸಿದ್ದಾರೆ.ಇದು ಜರ್ಮನ್ ಭಾಷೆಗೆ ಅನುವಾದ ಆದ ತುಳು ಪಾದ್ದನಗಳ ಮೊದಲ ಗ್ರಂಥ : Fuerstliche Feste. Texte und Rituale der Tulu-Volksreligion an der Westkueste Suedindians.(Neuindische Studien.Band 12.) Weisbaden : Harrassowitz Verlag, 1995.   ಹೀಗೆ ತ್ಯೂಬಿಂಗನ್ ಜುಮಾದಿ ಪಾಡ್ದನಗಳನ್ನು ಬ್ರೂಕ್ನರ್ ಮತ್ತು ನಾನು ತುಳುವಿನಿಂದ ಇಂಗ್ಲಿಷಿಗೆ ಅನುವಾದ ಮಾಡುವಾಗ ಹಿಂದೆಂದಿಗಿಂತಲೂ ಈಗ ಹೆಚ್ಚು ‘ಕಟ್ಟ್ ‘ ಗಳು ಎದುರಾಗುತ್ತವೆ.( ‘ಕಟ್ಟ್ ‘ ಎನ್ನುವುದಕ್ಕೆ ಭೂತಾರಾಧನೆಯ ಪರಿಭಾಷೆಯಲ್ಲಿ ‘ಅಡ್ಡಿ ಬರುವ ಆಪತ್ತುಗಳು’ ಎನ್ನುವ ಅರ್ಥ ಇದೆ.) ಇದಕ್ಕಿಂತ ಮೊದಲು ಬಂದ ಉತ್ತಮ ಅನುವಾದಗಳು,ಹಿಂದಿನ ಅನುವಾದಗಳ ಅನುಭವಗಳಿಂದ ನಾವು ಕಲಿತ ಪಾಠಗಳು,ನೂರ ಐವತ್ತು ವರ್ಷಗಳ ಹಿಂದೆ ಬೇರೆಯವರು ಸಂಗ್ರಹಿಸಿ ,ತಮ್ಮ ಗ್ರಹಿಕೆಯಿಂದ ಬರಹಕ್ಕೆ ಇಳಿಸಿದ ಹಸ್ತಪ್ರತಿಯನ್ನು ಈಗ ನಾವು ಅರ್ಥಮಾಡಿಕೊಳ್ಳುವ ಸಮಸ್ಯೆ ,ಕಳೆದ ಕೆಲವು ವರ್ಷಗಳಿಂದ ಸಂಗ್ರಹವಾಗಿ ಪ್ರಕಟವಾಗಿರುವ ತುಳು ಪಾಡ್ದನಗಳ ಸಂಕಲನಗಳ ಭಾಷಾ ವೈವಿಧ್ಯ ,ಪದಗಳ ಅರ್ಥಗಳು ಭೂತಗಳಂತೆ ಮಾಯ ಮತ್ತು ಜೋಗಗಳಲ್ಲಿ ಒಮ್ಮೆಲೇ ಸಂಚರಿಸುವುದು,ನಮ್ಮ ಹೆಚ್ಚಿದ ವಯಸ್ಸು ಮತ್ತು ವರ್ಚಸ್ಸಿನ ಕಾರಣವಾಗಿ ಎಲ್ಲೂ ಪದ ಮತ್ತು ಪಾದ ತಪ್ಪಬಾರದೆಂಬ ಕಟ್ಟೆಚ್ಚರ – ಎಲ್ಲವೂ ಹೊಸ ಭೂತಗಳು.   ತುಳುವಿನಲ್ಲಿ ಒಂದು ಗಾದೆ ಇದೆ : ‘ಕಟ್ಟ್ ದ್ ನೆ ಕಲ್ಲುರ್ಟಿ ಗ್ ,ನುಡಿಗಟ್ಟ್ ಮಲ್ ರಾಯನ ‘ ( ಭೂತ ಕಟ್ಟಿದ್ದು -ಅಲಂಕಾರ ಆದದ್ದು -ಕಲ್ಲುರ್ಟಿ ಭೂತದ್ದು ,ಆದರೆ ನುಡಿಗಟ್ಟು ಹೇಳುವುದು ಮಲರಾಯ ಭೂತದ್ದು ).ಅಂದರೆ ಧರಿಸಿದ ವೇಷಕ್ಕೂ ಆಡುವ ಮಾತಿಗೂ ಸಂಬಂಧ ಇಲ್ಲದಿರುವುದು.   ಆಡುವ ಭಾಷೆಯು ಬರಹದ ಭಾಷೆ ಆಗುವುದು , ಒಂದು ಭಾಷೆಯು ಇನ್ನೊಂದು ಭಾಷೆಯ ವೇಷ ತೊಡುವುದು ,ತುಳು ಭಾಷೆಯು ಕನ್ನಡವಾಗಿ ಇಂಗ್ಲಿಶ್ ಆಗಿ ರೂಪ ಧರಿಸುವುದು ಅಂದರೆ -ತುಳುವಿನ ಭೂತಗಳು ಊರು ಊರು ಹೋಗಿ ,ಸಾನ ಕಟ್ಟಲು ಉಯ್ಯಾಲೆ ತೂಗಲು ಕೇಳಿದಂತೆ .ಹೋದ ಊರುಗಳಲ್ಲೆಲ್ಲ ಅದು ನೆಲೆವೂರುತ್ತದೆ, ಆದರೆ ಅದಕ್ಕೆ ಮೂಲಸ್ಥಾನವೂ ಇರುತ್ತದೆ .          ]]>

‍ಲೇಖಕರು G

January 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This