ಜರ್ಮನಿಯ ಎರಡು ಊರುಗಳ ಹೆಸರುಗಳ ಕತೆ: ’ಎಲ್ಲಿದ್ದೀಯೆ..?’

ಜರ್ಮನಿಯಿಂದ ಬಿ ಎ ವಿವೇಕ ರೈ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಈ ಶೈಕ್ಷಣಿಕ ವರ್ಷದ ಚಳಿಗಾಲದ ಸೆಮೆಸ್ಟರ್ ನಲ್ಲಿ (ಅಕ್ಟೋಬರ್ ೨೦೧೧-ಫೆಬ್ರವರಿ ೨೦೧೨ ) ನಾನು ನಿರ್ವಹಿಸುವ ಒಂದು ಬ್ಲಾಕ್ ಸೆಮಿನಾರ್ ನ ವಿಷಯ ‘ ಮೌಖಿಕ ಪರಂಪರೆಗಳು’ ( Oral Traditions ).ಇಬ್ಬರು ಜರ್ಮನ್ ಹುಡುಗಿಯರು ಈ ಸೆಮಿನಾರ್ ನ್ನು ಆಯ್ಕೆಮಾಡಿಕೊಂಡಿದ್ದಾರೆ -ಕತ್ರಿನ್ ಹೊಲ್ಜ್ ಮತ್ತು ಲಲಿತ ದೀಕರ್ಸ್ .ಆರಂಭದ ತರಗತಿಗಳಲ್ಲಿ ಮೌಖಿಕ ಪರಂಪರೆಯ ಸ್ವರೂಪ,ಬಗೆಗಳು,ಅವುಗಳ ಬಳಕೆಯ ಸಂದರ್ಭಗಳು,ಒಂದು ಸಮುದಾಯದ ಅನನ್ಯತೆಯ ರೂಪಕವಾಗಿ ಅವುಗಳ ಬಳಕೆ ,ನೆನಪಿನ ಸಂಸ್ಕೃತಿ, ಮಾನಸಿಕ ಪಾಠ ,ಭಿನ್ನ ರೂಪಗಳು,ಆಧುನಿಕತೆಯ ಪ್ರಭಾವ-ಹೀಗೆ ವಿಷಯಗಳ ಕುರಿತು ಚರ್ಚೆಮಾಡಿದೆ. ಮುಂದೆ ಕರ್ನಾಟಕದ ಮೌಖಿಕ ಪರಂಪರೆ ಮತ್ತು ಜನಪದ ಮೌಖಿಕ ಕಾವ್ಯಗಳ ಕುರಿತು ಪ್ರಸ್ತಾವ ಮಾಡುವ ಮೊದಲು, ಅವರ ಸಂಸ್ಕೃತಿಯ ಮೌಖಿಕ ಪರಂಪರೆಯ ಬಗ್ಗೆ ಅವರ ಅಭಿಪ್ರಾಯ ಕೇಳಿದೆ.ಅವರ ಭಾಷೆಯ ಅವರ ಸಂಸ್ಕೃತಿಯ ಗಾದೆ ( Sprichwort ) ಮತ್ತು ಒಗಟು (Raetsel)ಗಳನ್ನು ಸಂಗ್ರಹಿಸಿ ತರಲು ಹೇಳಿದೆ.ಇಬ್ಬರೂ ತಲಾ ಐದೈದು ಜರ್ಮನ್ ಗಾದೆ ಮತ್ತು ಒಗಟುಗಳನ್ನು ಸಂಗ್ರಹಿಸಿ ತಂದರು.ಅವುಗಳನ್ನು ಮೂಲ ಜರ್ಮನ್ ಭಾಷೆಯಲ್ಲಿ ಹೇಳಿ ,ಆಮೇಲೆ ಅವುಗಳ ಇಂಗ್ಲಿಶ್ ಅನುವಾದ ತಿಳಿಸಿ,ಮತ್ತೆ ಅವುಗಳ ಅರ್ಥ ,ಸಂದರ್ಭ ಮತ್ತು ಪ್ರಯೋಗಗಳ ಬಗ್ಗೆ ತರಗತಿಯಲ್ಲಿ ಚರ್ಚಿಸಿದೆವು.ಈ ಗಾದೆ ಮತ್ತು ಒಗಟುಗಳನ್ನು ಯಾರಿಂದ ಸಂಗ್ರಹಿಸಿದಿರಿ ಎಂದು ಕೇಳಿದೆ.’ಇಂಟರ್ ನೆಟ್ ನಿಂದ ಸಂಗ್ರಹಿಸಿದ್ದು ‘ ಎಂದು ಪ್ರಾಮಾಣಿಕವಾಗಿ ಹೇಳಿದರು.ಆದರೂ ಅವುಗಳು ಈಗಲೂ ಅವರ ಪರಿಸರದಲ್ಲಿ ಬಳಕೆಯಾಗುತ್ತಿರುವ ಸನ್ನಿವೇಶಗಳ ಬಗ್ಗೆ ವಿವರಗಳನ್ನು ಕೊಟ್ಟರು. ‘ಈಗ ನಿಮ್ಮದೇ ಪರಂಪರೆಯಿಂದ ನಿಮ್ಮ ಊರಿನ ಹೆಸರುಗಳು ಹೇಗೆ ಬಂದುವು ಎನ್ನುವ ವಿವರಣೆ ಕೊಡುವ ಸ್ಥಳ ಐತಿಹ್ಯ ( Legenda ) ಗಳನ್ನು ಸಂಗ್ರಹಿಸಿಕೊಂಡು ಬರಬೇಕು ‘ ಎನ್ನುವ ಹೊಸ ಕೆಲಸ ಕೊಟ್ಟೆ.ಕ್ಷೇತ್ರಕಾರ್ಯದ ವಿಧಾನದ ಬಗ್ಗೆ ಕೆಲವು ಪ್ರಾಥಮಿಕ ವಿವರಗಳನ್ನು ತಿಳಿಸಿದೆ.ಈ ಐತಿಹ್ಯಗಳ ಜೊತೆಗೆ ಅವರ ಊರಿನ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ಕೂಡಾ ಸಂಗ್ರಹಿಸಿ ,ಪ್ರಬಂಧ ರೂಪದಲ್ಲಿ ತಂದು ತರಗತಿಯಲ್ಲಿ ಮಂಡಿಸಲು ತಿಳಿಸಿದೆ.ಇಲ್ಲಿ ವಿವಿಯ ಪದ್ಧತಿಯಂತೆ ವಿದ್ಯಾರ್ಥಿಗಳು ತಮ್ಮ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಆಯ್ದ ಸಂಗತಿಗಳ ಬಗ್ಗೆ ಪ್ರಬಂಧಗಳನ್ನು ಸಿದ್ಧಪಡಿಸಿ ,ತರಗತಿಯಲ್ಲಿ ಮಂಡಿಸಬೇಕು.ಅಲ್ಲಿ ಅದರ ಬಗ್ಗೆ ಚರ್ಚೆ ಇರುತ್ತದೆ.ಈ ಸೆಮಿನಾರ್ ಗಳು ಅವರ ಕ್ರೆಡಿಟ್ ಗಳಿಗೆ ಸೇರ್ಪಡೆಯಾಗುತ್ತವೆ.ದಶಂಬರದಲ್ಲಿ ಕ್ರಿಸ್ ಮಸ್ ರಜೆಯ ಮೊದಲು ಕತ್ರಿನ್ ಮತ್ತು ಲಲಿತ ತಮ್ಮ ಊರುಗಳ ಹೆಸರುಗಳ ವಿವರಣೆಯ ಐತಿಹ್ಯಗಳ ಜೊತೆಗೆ ಇನ್ನಷ್ಟು ವಿವರಗಳನ್ನು ಸಂಗ್ರಹಿಸಿ ,ಅಚ್ಚುಕಟ್ಟಾಗಿ ಪ್ರಬಂಧ ಸಿದ್ದಪಡಿಸಿ ,ತರಗತಿಯಲ್ಲಿ ಮಂಡಿಸಿದರು .ಬಳಿಕ ನಾನು ಕೆಲವು ಪ್ರಶ್ನೆಗಳನ್ನು ಕೇಳಿದೆ.ಸಾಕಷ್ಟು ಚರ್ಚೆ ಮಾಡಿದೆವು.ಕತ್ರಿನ್ ಅವಳ ಪ್ರಬಂಧದ ವಿವರಗಳನ್ನು ಈ ಲೇಖನದಲ್ಲಿ ಕೊಡುತ್ತಿದ್ದೇನೆ . ಲಲಿತಳ ಊರಿನ ಐತಿಹ್ಯದ ಅಧ್ಯಯನವನ್ನು ಇನ್ನೊಂದು ಬರಹದಲ್ಲಿ ವಿವರಿಸುತ್ತೇನೆ. ಕತ್ರಿನ್ ಹೊಲ್ಜ್ ಅವಳ ಊರು – ಮಾರ್ಗೆತ್ಸ್ ಹ್ಯೂಶ್ ಹೈಮ್ ( Margetshoechcheim ).ಇದು ಒಂದು ಚಿಕ್ಕ ಹಳ್ಳಿ , ಮಾಯಿನ್ ನದಿಯ ಎಡದಂಡೆಯಲ್ಲಿ ಇದೆ. ವ್ಯೂರ್ತ್ಸ್ ಬುರ್ಗ್ ನಗರದಿಂದ ಹತ್ತು ಕಿಲೋಮೀಟರ್ ದೂರದಲ್ಲಿ ವಾಯವ್ಯ ದಿಕ್ಕಿನಲ್ಲಿ ಇದೆ.ಕ್ರಿ.ಶ.೧೨೨೭ರ ದಾಖಲೆಯಂತೆ ಮಾಯಿನ್ ನದಿಯ ಎಡದಂಡೆಯ ಹ್ಯೂಶ್ ಹೈಮ್ ನಲ್ಲಿ ಜನವಸತಿಯ ಉಲ್ಲೇಖ ಇದೆ.ಈಗ ಹಳ್ಳಿಯ ಜನಸಂಖ್ಯೆ ಸುಮಾರು ೩೨೦೦.ಇಲ್ಲಿ ಈಗ ಒಂದೊಂದು ಬಾಲವಾಡಿ,ನರ್ಸರಿ,ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಮತ್ತು ಯುವ ಕೇಂದ್ರ ಇವೆ.ಒಂದು ಚರ್ಚ್ , ಪುರಭವನ ( Rathaus ) ಮತ್ತು ಒಂದು ಜೀನಸಿನ ಅಂಗಡಿ,ಎರಡು ಬೇಕರಿಗಳು , ಒಂದು ಫಾರ್ಮಸಿ ,ಎರಡು ಮಾಂಸ ಪದಾರ್ಥಗಳ ಅಂಗಡಿಗಳು ಇವೆ.ಕೆಲವು ಡಾಕ್ಟರ್ ಗಳು ಇದ್ದಾರೆ.ಪರಂಪರಾಗತವಾಗಿ ಇಲ್ಲಿನ ಜನರು ಕೃಷಿಕರು.ದ್ರಾಕ್ಷಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.ಸ್ವಲ್ಪ ಪ್ರಮಾಣದಲ್ಲಿ ತರಕಾರಿಗಳನ್ನೂ ಬೆಳೆಯುತ್ತಾರೆ.ಇತ್ತೀಚೆಗೆ ಉದ್ಯೋಗಕ್ಕಾಗಿ ಅನೇಕರು ಪಕ್ಕದ ನಗರ ವ್ಯೂರ್ತ್ಸ್ ಬುರ್ಗ್ ಗೆ ಬೆಳಗ್ಗೆ ಹೋಗಿ,ಸಂಜೆ ಹಿಂದಿರುಗುತ್ತಾರೆ.   ಮಾಯಿನ್ ನದಿಯ ಆಚೆಯ ದಂಡೆಯಲ್ಲಿ ,ಮಾರ್ಗೆತ್ಸ್ ಹ್ಯೂಶ್ ಶೈಮ್ ಗೆ ಎದುರಾಗಿ ಇರುವ ಊರು ,ಫಾಯಿತ್ ಹ್ಯೂಶ್ ಶೈಮ್ ( Veitshoechcheim ).ಒಂದು ಕಾಲಕ್ಕೆ ಚಿಕ್ಕ ಗ್ರಾಮವಾಗಿದ್ದ ಇದರ ಉಲ್ಲೇಖ ಮೊತ್ತಮೊದಲ ಬಾರಿಗೆ ಕ್ರಿ.ಶ.೭೭೯ರಲ್ಲಿ ದೊರೆಯುತ್ತದೆ.ಪ್ರಿನ್ಸ್ ಬಿಷಪ್ ಪೀಟರ್ ಫಿಲಿಪ್ಪ್ ನ ಕಾಲದಲ್ಲಿ ೧೬೮೦ರಲ್ಲಿ ಇಲ್ಲಿ ಒಂದು ಸುಂದರವಾದ ಅರಮನೆಯನ್ನು ಕಟ್ಟಲಾಯಿತು.೧೭೫೦ರಲ್ಲಿ ಈ ಅರಮನೆಯನ್ನು ಪ್ರಸಿದ್ಧ ವಾಸ್ತುಶಿಲ್ಪಿ ಬಾಲ್ಥಸರ್ ನ್ಯೂಮನ್ ವಿಸ್ತರಿಸಿ ಚಂದಮಾಡಿದನು.ಈ ಅರಮನೆಯ ಪರಿಸರದಲ್ಲಿ ಮನಮೋಹಕವಾದ ಹೂವಿನ ತೋಟ ಇದೆ.ವಸಂತ ಕಾಲದಲ್ಲಿ ಮತ್ತು ಬೇಸಗೆಯಲ್ಲಿ ಇಲ್ಲಿನ ಬಗೆಬಗೆಯ ಹೂವುಗಳ ಉದ್ಯಾನವನವನ್ನು ನೋಡಲು ಪ್ರವಾಸಿಗರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಈ ತೋಟದ ಬಳಿ ಎರಡು ಆಕರ್ಷಕ ಸರೋವರಗಳಿವೆ. ಕಲ್ಲಿನ ವಿಗ್ರಹಗಳು ಇರುವ ಇಲ್ಲಿನ ತೋಟವನ್ನು Rococo Gardens ಎಂದು ಕರೆಯುತ್ತಾರೆ.ಅನೇಕ ನಾಗರಿಕ ಸೌಲಭ್ಯಗಳನ್ನು ಹೊಂದಿರುವ ಫಾಯಿತ್ ಹ್ಯೂಶ್ ಶೈಮ್ ಈಗ ಒಂದು ಸಣ್ಣ ಪಟ್ಟಣವಾಗಿದೆ.ಬೇಸಗೆಯಲ್ಲಿ ವ್ಯೂರ್ತ್ಸ್ ಬುರ್ಗ್ ನಿಂದ ಇಲ್ಲಿಗೆ ಬರಲು ಪ್ರವಾಸಿಗರಿಗಾಗಿ ದೊಡ್ಡ ದೋಣಿಗಳು ಸಂಚರಿಸುತ್ತವೆ.ಈ ಪಟ್ಟಣದ ಈಗಿನ ಜನಸಂಖ್ಯೆ ಸುಮಾರು ಹತ್ತು ಸಾವಿರ . ಮಾಯಿನ್ ನದಿಯ ಎರಡು ಬದಿಗಳಲ್ಲಿ ಎದುರುಬದುರಾಗಿ ಇರುವ ಈ ಎರಡು ಊರುಗಳು -ಮಾರ್ಗೆತ್ಸ್ ಹ್ಯೂಶ್ ಶೈಮ್ ಮತ್ತು ಫಾಯಿತ್ ಹ್ಯೂಶ್ ಶೈಮ್ -ಈ ಹೆಸರುಗಳು ಹುಟ್ಟಿಕೊಂಡ ಕತೆ -ಕತ್ರಿನ್ ಹೇಳಿದ್ದು: ಮಾಯಿನ್ ನದಿಯಲ್ಲಿ ಒಂದು ಚಿಕ್ಕ ದೋಣಿ ತೇಲುತ್ತಿತ್ತು.ಅದರಲ್ಲಿ ಒಂದು ಗಂಡು ,ಒಂದು ಹೆಣ್ಣು.ಅವರಿಬ್ಬರೂ ಜೊತೆಗಾರರು. ಗಂಡ ಹೆಂಡತಿ ಎನ್ನುವ ಪಾಠ ಕೂಡಾ ಇದೆ.ಗಂಡಿನ ಹೆಸರು -’ಫಾಯಿತ್ ‘, ಹೆಣ್ಣಿನ ಹೆಸರು-’ಮಾರ್ಗರೇತ್’. ಬಹಳ ಸಂತೋಷದಿಂದ ಅವರು ದೋಣಿಯಲ್ಲಿ ಮುಂದೆ ಮುಂದೆ ಸಾಗುತಿದ್ದಾರೆ.ಅಷ್ಟರಲ್ಲಿ ಜೋರು ಬಿರುಗಾಳಿಯೊಂದು ಬೀಸಲುತೊಡಗಿತು.ಗುಡುಗು ಸಿಡಿಲಿನ ಆರ್ಭಟ ಕೇಳಿಸಿತು.ಎಲ್ಲೆಲ್ಲೂ ಕಾರ್ಗತ್ತಲೆ ಆವರಿಸಿತು.ಧಾರಾಕಾರ ಮಳೆ ಸುರಿಯಲು ಆರಂಭವಾಯಿತು.ಕಣ್ಣಿಗೆ ಏನೂ ಕಾಣಿಸುತ್ತಿರಲಿಲ್ಲ.ದೋಣಿಯಲ್ಲಿ ಇದ್ದ ಅವರಿಬ್ಬರೂ ಗಟ್ಟಿಯಾಗಿ ದೋಣಿಯನ್ನು ಹಿಡಿದುಕೊಂಡು ,ದೋಣಿ ಅಡಿಮೇಲಾಗದಂತೆ ನೋಡಿಕೊಳ್ಳಲು ತಮ್ಮ ಶಕ್ತಿಮೀರಿ ಸೆಣಸಾಡಿದರು .ಆದರೆ ಕೊನೆಗೂ ಏನೂ ಮಾಡಲಾಗಲಿಲ್ಲ.ಅ ದೋಣಿ ಅಡಿಮೇಲಾಯಿತು.ಫಾಯಿತ್ ಮತ್ತು ಮಾರ್ಗರೇತ್ ನೀರು ಪಾಲಾದರು.ಒಬ್ಬರನ್ನೊಬ್ಬರು ಕಾಣಲು ಸಾಧ್ಯವಾಗಲಿಲ್ಲ.ಇಬ್ಬರೂ ಬೇರೆ ಬೇರೆಯಾದರು.ಫಾಯಿತ್ ಈಜುತ್ತಾ ಈಜುತ್ತಾ ಮಾಯಿನ್ ನದಿಯ ಒಂದು ದಡವನ್ನು ಸೇರಿದ.ಮಾರ್ಗರೇತ್ ಈಜುತ್ತಾ ಈಜುತ್ತಾ ನದಿಯ ಇನ್ನೊಂದು ತೀರವನ್ನು ಸೇರಿದಳು.ಮಾರ್ಗರೇತ್ ಎಲ್ಲಿದ್ದಾಳೆ ಎಂದು ಫಾಯಿತ್ ಗೆ ಗೊತ್ತಿಲ್ಲ.ಫಾಯಿತ್ ಎಲ್ಲಿದ್ದಾನೆ ಎಂದು ಮಾರ್ಗರೇತ್ ಗೆ ಪತ್ತೆ ಇಲ್ಲ.ಒಂದು ಕಡೆಯಿಂದ ಫಾಯಿತ್ ನ ಕೂಗು ,’ಎಲ್ಲಿದ್ದೀಯೇ ಮಾರ್ಗರೇತ್ ?’ ಆದರೆ ಆ ಕೂಗು ಮಾರ್ಗರೇತ್ ಗೆ ಕೇಳಿಸುತ್ತಿಲ್ಲ.ಇನ್ನೊಂದು ಕಡೆಯಿಂದ ಮಾರ್ಗರೇತ್ ಳ ಹುಡುಕಾಟದ ಕೂಗು,’ಎಲ್ಲಿದ್ದೀಯೇ ಫಾಯಿತ್ ?’ ಜರ್ಮನ್ ಭಾಷೆಯಲ್ಲಿ ಆ ಕೂಗು ಹೀಗಿತ್ತಂತೆ :” Ich muss die Margreth soeche!” ( ನನಗೆ ಮಾರ್ಗರೇತ್ ಳನ್ನು ನೋಡಬೇಕು ) .”Ich muss den Viet soeche!” ( ನನಗೆ ಫಾಯಿತ್ ನ್ನು ನೋಡಬೇಕು ). ಹಾಗೆ ಆ ಎರಡು ಊರುಗಳಿಗೆ ಆ ದಂಪತಿಗಳ ಹೆಸರು -ಮಾರ್ಗರೇತ್ ಮತ್ತು ಫಾಯಿತ್ ,ಸೇರಿಕೊಂಡಿತಂತೆ.ಜರ್ಮನ್ ಭಾಷೆಯಲ್ಲಿ ಈ ಎರಡು ಊರಿನ ಹೆಸರುಗಳ ಉತ್ತರ ಪದಗಳನ್ನು ವಿಂಗಡಿಸುವಾಗ ,ವ್ಯಕ್ತಿಗಳ ಹೆಸರುಗಳ ಜೊತೆಗೆ ಅರ್ಥಗಳ ಶ್ಲೇಷೆಯನ್ನು ತರುತ್ತಾರೆ: Marget-s-hoechcheim , Viet-s-hoechcheim. ಕತ್ರಿನ್ ಹೊಲ್ಜ್ ಈ ಐತಿಹ್ಯವನ್ನು ಮೊದಲು ಕೇಳಿದ್ದು ಚಿಕ್ಕ ಹುಡುಗಿಯಾಗಿ ಇದ್ದಾಗ ತನ್ನ ಅಜ್ಜನಿಂದ.ಅವಳ ಅಜ್ಜ ತೀರಿಹೋಗಿ ಸುಮಾರು ಹತ್ತು ವರ್ಷ ಆಯಿತಂತೆ.ಅವಳ ಅಜ್ಜಿ ,ಅಪ್ಪ ಅಮ್ಮ ಈಗಲೂ ಊರಲ್ಲೇ ಇದ್ದಾರೆ.ಆದರೆ ಅವರಿಗೆ ಈ ಊರಿನ ಹೆಸರಿನ ಕತೆ ಗೊತ್ತಿರಲಿಲ್ಲ.ಅವಳ ಅಜ್ಜ ಈ ಹಳ್ಳಿಯವರು; ಅಜ್ಜಿ ಪಕ್ಕದ ವ್ಯೂರ್ತ್ಸ್ ಬುರ್ಗ್ ನವರು.ಚಿಕ್ಕಂದಿನಲ್ಲಿ ಕೇಳಿದ ತನ್ನ ಹಳ್ಳಿಯ ಹೆಸರಿನ ಕತೆ ಯಾಕೆ ಇನ್ನೂ ಕತ್ರಿನ್ ಳ ನೆನಪಿನಲ್ಲಿ ಗಾಢವಾಗಿ ಉಳಿದುಕೊಂಡಿದೆ ಎಂದು ನಾನು ಆಕೆಯನ್ನು ಪ್ರಶ್ನಿಸಿದೆ.ಅದಕ್ಕೆ ಕತ್ರಿನ್ ಕೊಟ್ಟ ಉತ್ತರ ,ಮೌಖಿಕ ಪರಂಪರೆಯ ನಮ್ಮ ಸಿದ್ಧಾಂತಕ್ಕೆ ಪೂರಕವಾಗಿತ್ತು. ‘ಕತ್ರಿನ್ ತನ್ನ ಅಜ್ಜನನ್ನು ತುಂಬಾ ಪ್ರೀತಿಸುತ್ತಿದ್ದಳು ,ಅವಳು ತನ್ನ ಹಳ್ಳಿಯನ್ನು ಈಗಲೂ ತುಂಬಾ ಪ್ರೀತಿಸುತ್ತಾಳೆ.’ ಪ್ರೀತಿಯಿದ್ದಲ್ಲಿ ಮಾತ್ರ ನೆನಪುಗಳು ‘ಅನನ್ಯತೆ’ ಯಾಗಿ ಉಳಿಯಲು ಸಾಧ್ಯ. ‘ಎಲ್ಲಿದ್ದೀಯೇ ……’ ಎನ್ನುವುದು ಒಂದು ಊರಿನ ಹೆಸರಿನ ಮೂಲಕ ನಮ್ಮ ಅನನ್ಯತೆಯನ್ನು ಮತ್ತೆ ಮತ್ತೆ ಕೇಳಿಕೊಳ್ಳುವ ಬಗೆ.ಅದು ನಮ್ಮನ್ನು ಕಾಡುವ ದಾರ್ಶನಿಕ ಪ್ರಶ್ನೆಯೂ ಹೌದು. ಕತ್ರಿನ್ ಳ ಪ್ರಬಂಧವನ್ನು ಓದಿದ ಮೇಲೆ ಅವಳ ಊರನ್ನು ನೋಡಬೇಕು ಎನ್ನುವ ಬಯಕೆ ಉತ್ಕಟವಾಯಿತು.ಮೊನ್ನೆ ಭಾನುವಾರ ,ಜನವರಿ ೨೨ ರಂದು ಮಾರ್ಗೆತ್ಸ್ ಹ್ಯೂಶ್ ಶೈಮ್ ಗೆ ಹೋದೆ.ಕತ್ರಿನ್ ಸಂಭ್ರಮದಿಂದ ತನ್ನ ಹಳ್ಳಿಯಲ್ಲಿ ಸುತ್ತಾಡಿಸಿದಳು.ಬಳಿಕ ಮಾಯಿನ್ ನದಿಯ ಬದಿಗೆ ಹೋದೆವು.ಎದುರು ಬದಿಯಲ್ಲಿ ಫಾಯಿತ್ ಹ್ಯೂಶ್ ಶೈಮ್ ಕಾಣಿಸುತ್ತಿತ್ತು.ಬಳಿಕ ಸೇತುವೆ ದಾಟಿ ,ನದಿಯ ಆಚೆ ಕಡೆಯ ಫಾಯಿತ್ ಹ್ಯೂಶ್ ಹೈಮ್ ಗೆ ಹೋದೆವು.ಸಣ್ಣಗೆ ಮಳೆ ಹನಿಯುತ್ತಿತ್ತು.ಎಂದಿನಂತೆ ಮಳೆಯಲ್ಲಿ ನೆನೆಯುತ್ತಲೇ ,ಮಾರ್ಗರೇತ್-ಫಾಯಿತ್ ರನ್ನು ನೆನೆಯುತ್ತಲೇ ನನ್ನ ಕ್ಯಾಮರಾದಲ್ಲಿ ಕೆಲವು ಫೋಟೋಗಳನ್ನು ತೆಗೆದೆ. ಮಾಯಿನ್ ನದಿಯ ಎರಡೂ ತೀರಗಳಲ್ಲಿ ದಂಡೆಯ ಮೇಲೆ ಏರಿ ಫೋಟೋ ತೆಗೆಯುವಾಗ ತಣ್ಣನೆಯ ಗಾಳಿ ಮೈಮೇಲೆ ಬಡಿಯುತ್ತಾ ನನ್ನನ್ನು ಕೇಳುತ್ತಿತ್ತು : ‘ಎಲ್ಲಿದ್ದಿಯೇ …….’]]>

‍ಲೇಖಕರು G

January 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This