ಜರ್ಮನಿಯ ಮೆರವಣಿಗೆಯಲ್ಲಿ ಕನ್ನಡದ ಫಲಕ

ಜರ್ಮನಿಯಿಂದ ವಿವೇಕ ರೈ
ಕುವೆಂಪು ಕವನ ‘ಅನಿಕೇತನ ‘ದ ಬಳಿಕ ಈ ವಾರ ಬೇಂದ್ರೆ ಅವರ ‘ಕುರುಡು ಕಾಂಚಾಣ ‘ಪಾಠ ಮಾಡಿದೆ.ಇದಕ್ಕೆ ಹಿನ್ನೆಲೆಯಾಗಿ ಮೊದಲು ಮೈಸೂರಿನ ಸಿ ಐ ಐ ಎಲ್ ನ ಭಾಷಾ ಮಂದಾಕಿನಿ ಯೋಜನೆಯ ‘ಬೇಂದ್ರೆ’ ಡಿವಿಡಿ ತೋರಿಸಿದೆ. ಬಳಿಕ ಬೆಂಗಳೂರಿನಿಂದ ಜಿ ಎನ್.ಮೋಹನ್ ಇ ಮೇಲ್  ನಲ್ಲಿ ಕಳುಹಿಸಿದ್ದ, ಸಿ.ಅಶ್ವಥ್ ಮತ್ತು ಯಶವಂತ ಹಳಬಂಡಿ ಹಾಡಿರುವ ‘ಕುರುಡು ಕಾಂಚಾಣ ‘ ಹಾಡನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕೇಳಿಸಿದೆ. ಆ ಹಾಡಿಗಂತೂ ಅವರು ಮೈಮರೆತ ಹಾಗಿತ್ತು. ಅಶ್ವಥ್ ಮೋಡಿಗೆ ತಲೆ ಆಡಿಸುತ್ತಾ ಹಾಡನ್ನು ಗುನುಗುನಿಸಲು ಶುರುಮಾಡಿದರು.

ಅವರಲ್ಲಿ ಹೆಚ್ಚಿನವರು ಕರ್ನಾಟಕ ನೋಡಿದ ಜರ್ಮನ್ ವಿದ್ಯಾರ್ಥಿಗಳು.ಸ್ಟೆಫನ್ ಪಾಪ್, ಗುಲ್ಬರ್ಗದಲ್ಲಿ ಮುಸ್ಲಿಂ ಸಂಸ್ಕೃತಿ ಬಗ್ಗೆ ಕೆಲಸ ಮಾಡಿದವನು. ಚೆನ್ನಾಗಿ ಉರ್ದು ಮಾತಾಡುತ್ತಾನೆ. ಈಗಾಗಲೇ ಎಂ.ಎ. ಮುಗಿಸಿರುವ ಆತ ಆಸಕ್ತ ವಿದ್ಯಾರ್ಥಿಗಳಿಗೆಉರ್ದು ಪಾಠವೂ ಮಾಡುತ್ತಾನೆ. ಅವನಿಗೆ ಶಾಯಿರಿಗಳ ಧಾಟಿ ಚೆನ್ನಾಗಿ ಗೊತ್ತು. ಹಾಗಾಗಿ ಬೇಂದ್ರೆ ಹಾಡು ಕೇಳುತ್ತಲೇ ತುಂಬಾ ಖುಷಿ ಪಡುತ್ತಿದ್ದ .ಉಳಿದ ಎಲ್ಲ ಹುಡುಗಿಯರು ,ಆ ಹಾಡಿಗೆ ಕುಣಿಯಲು ಮಾನಸಿಕವಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದ ಹಾಗಿತ್ತು.ಇವರನ್ನು ಹೀಗೆಯೇ ಬಿಟ್ಟರೆ ಇವರು ನನ್ನ ಶಿಷ್ಯರಾಗುವ ಬದಲು ಅಶ್ವಥ್ ಮೋಡಿಯಿಂದ ಹೊರಬರಲಾರರು ಅನ್ನಿಸಿ, ಕವನ ಓದಿ, ಅರ್ಥ ಹೇಳಿ ವಿವರಿಸಲು ಸುರುಮಾಡಿದೆ.
ಜರ್ಮನ್ ವಿದ್ಯಾರ್ಥಿಗಳು ವ್ಯಾಕರಣದಲ್ಲಿ ಬಹಳ ಗಟ್ಟಿಗರು.ಹಾಗಾಗಿ ಶಬ್ದಗಳ ಅರ್ಥ,ವ್ಯಾಕರಣ ಪ್ರಕ್ರಿಯೆ ,ಭಾವಾರ್ಥ, ವಿಮರ್ಶೆ -ಹೀಗೆ ಎಲ್ಲವನ್ನೂ ವಿವರಿಸಬೇಕು.’ಬಾಣಂತಿಯೆಲುಬ ಸಾಬಾಣದ ಬಿಳುಪಿನಾ ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ ‘ಈ ಸಾಲು ವಿವರಿಸುವಾಗ ಸಾರಾ ಕೇಳಿದಳು : ‘ಅದು ಎಲುಬಿನ ಸಾಬೂನಿನ ಬಿಳುಪು ‘ಎಂದು ಅಲ್ಲವೇ ?’ ಒಂದು ಕ್ಷಣ ಮೌನವಾದೆ. ಸಾರಾ ತುಂಬಾ ಬುದ್ದಿವಂತೆ. ಕನ್ನಡ ಚೆನ್ನಾಗಿ ಕಲಿತು ಈ ಹಂತಕ್ಕೆ ಬಂದಿದ್ದಾಳೆ..ಮೊದಲ ವರ್ಷದ ಜರ್ಮನ್ ವಿದ್ಯಾರ್ಥಿಗಳಿಗೆ ನನ್ನ ಕನ್ನಡ ಪಾಠಕ್ಕೆ ಪೂರಕವಾಗಿ ಟ್ಯುಟೋರಿಯಲ್ ಮಾಡುತ್ತಾಳೆ . ಕನ್ನಡ ಲಿಪಿ ವ್ಯಾಕರಣ ಹೇಳಿಕೊಡುವುದು ಅವಳೇ. ತನ್ನ ಲ್ಯಾಪ್ ಟಾಪಿನಲ್ಲಿ ಕನ್ನಡ ಸಾಫ್ಟವೇರ್ ಹಾಕಿಕೊಂಡು ಕನ್ನಡದಲ್ಲೇ ಟೈಪು ಮಾಡುತ್ತಾಳೆ . ‘ಎಲುಬಿನಿಂದ ಸಾಬೂನು ಮಾಡುತ್ತಾರೆಯೇ ? ‘ಅವಳಲ್ಲಿ ಕೇಳಿದೆ.’ ಹೌದು ಇಲ್ಲೂ ಮಾಡುತ್ತಾರೆ ‘ಎಂದಳು. ‘ಯಾರ ಎಲುಬಿನಿಂದ ?’ ಎಂದು ಕೇಳುವ ಧೈರ್ಯ ಆಗಲಿಲ್ಲ. ‘ಗುಡಿಯೊಳಗೆ ಗಣಣ ,ಮಹಡಿಯೊಳಗೆ ತನನ ,ಅಂಗಡಿಯೊಳಗೆ ಜ್ಹಣಣಣ ನುಡಿಗೊಡುತ್ತಿತ್ತೋ ‘ -ಧರ್ಮ, ಸಂಪತ್ತು ಮತ್ತು ವ್ಯಾಪಾರ ಇವುಗಳ ಅಂತರಸಂಬಂಧ ಹೇಗಿತ್ತು ಎನ್ನುವುದನ್ನು ಬಹಳ ಹಿಂದೆಯೇ ಕವಿ ಬೇಂದ್ರೆ ಕಂಡ ಬಗೆಗಳನ್ನು ವಿವರಿಸಿದೆ. ಇದು ಎಲ್ಲ ಕಾಲ ಮತ್ತು ದೇಶಗಳಲ್ಲೂ ಕಾಣಬಹುದಾದ ವಿದ್ಯಮಾನ ಎನ್ನುವ ನನ್ನ ಎಂದಿನ ಮಾತುಗಳನ್ನೇ ಆಡಿದೆ. ನನಗೆ ಅದು ಹಳೆಯ ಮಾತಾದರೂ ಇಲ್ಲಿಗೆ ಹೊಸತು ಎನ್ನುವುದು ನನ್ನ ಗ್ರಹಿಕೆ. ಅವರ ಪ್ರತಿಕ್ರಿಯೆ ಕೇಳಲು ಸಮಯ ಇರಲಿಲ್ಲ. ಮುಂದಿನ ವಾರ ಚರ್ಚಿಸೋಣ ಎಂದು ಹೊರಗೆ ಬಂದೆ.
ಸಂಜೆಯ ವೇಳೆಗೆ ವಿವಿಯಿಂದ ನನ್ನ ವಸತಿಯ ಗೆಸ್ಟ್ ಹೌಸ್ ಗೆ ಬರುವ ದಾರಿಯಲ್ಲಿ ಬೀದಿ ಉದ್ದಕ್ಕೂ ಬೃಹತ್ ಮೆರವಣಿಗೆ. ಘೋಷಣೆಗಳು ಕೇಳುತ್ತಿವೆ, ಬ್ಯಾನ್ನರ್ ಗಳು ಕಾಣಿಸುತ್ತಿವೆ. ಕುತೂಹಲದಿಂದ ಮಾರ್ಗದ ಬದಿಯಲ್ಲೇ ನಿಂತುಕೊಂಡೆ. ಮೆರವಣಿಗೆ ಹತ್ತಿರ ಬಂತು. ನೋಡಿದರೆ ಅದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಪಕ್ಕದಲ್ಲಿ ನಿಂತಿದ್ದವರಲ್ಲಿ ವಿಚಾರಿಸಿದೆ, ‘ಅದು ಏನು ಘೋಷಣೆ, ಅದು ಏನು ಬರೆದಿರುವುದು ಬ್ಯಾನರಿನಲ್ಲಿ..?’
‘ಧಿಕ್ಕಾರ ಧಿಕ್ಕಾರ ಅಸಮಾನತೆಗೆ,ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ’. ಇಲ್ಲಿಗೆ ಬಂದ ಮೊದಲ ವಾರದಲ್ಲಿ ನಾನು ಪಾಠ ಮಾಡಿದ ಸಿದ್ದಲಿಂಗಯ್ಯ ನವರ ‘ಸಾವಿರಾರು ನದಿಗಳು’ ಕವನದ ಸಾಲುಗಳು ಇವರಿಗೆ ಹೇಗೆ ಸಿಕ್ಕಿದವು ಎಂದು ಯೋಚಿಸುತ್ತಿರುವಾಗಲೇ ಮೆರವಣಿಗೆಯಲ್ಲಿ ಕಂಡದ್ದು ಇವತ್ತು ನಾನು ‘ಕುರುಡು ಕಾಂಚಾಣ ‘ಪಾಠ ಮಾಡಿದ ನನ್ನ ಜರ್ಮನ್ ಕನ್ನಡ ವಿದ್ಯಾರ್ಥಿಗಳನ್ನು. ಸಾರಾ ಕೂಡ ಇದ್ದಳು. ತರಗತಿಯಲ್ಲಿ ಕಂಡ ಹಸನ್ಮುಖಗಳು ಈಗ ಕಾಣಿಸುತ್ತಿಲ್ಲ. ಮುಖದಲ್ಲಿ ಸಿಟ್ಟು ,ದ್ವನಿಯಲ್ಲಿ ಗಡಸು -ನನಗೆ ಆಶ್ಚರ್ಯ. ಕುಣಿಯಲು ಹಾಡನ್ನು ಗುನುಗುನಿಸುತ್ತಿದ್ದ ಹುಡುಗಿಯರೆಲ್ಲಿ? ಹೋರಾಟದ ಸಾಗರದ ಕಡೆ ಚಲಿಸುವ ಭೋರ್ಗರೆಯುವ ಈ ನದಿಗಳೆಲ್ಲಿ? ಮೆರವಣಿಗೆ ಮುಂದೆ ಸಾಗಿತು.
ನಾನು ಗೆಸ್ಟ್ ಹೌಸಿಗೆ ಬಂದು, ಸುದ್ದಿ ಏನಾದರೂ ಇದೆಯೇ ಎಂದು ಲ್ಯಾಪ್ಟಾಪ್ ಕುಟುಕಿದರೆ, ದುಬೈ ನಡುಕದ್ದೆ ಸುದ್ದಿ. ನಮ್ಮ ಅರ್ಥ ಸಚಿವರು ಎಂದಿನಂತೆ ನಮ್ಮ ದೇಶದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದು ಓದಿದೆ.ಆದರೆ ನನ್ನ ನಡುಕ ನಿಲ್ಲಲಿಲ್ಲ. ದುಬೈಯಲ್ಲಿರುವ ನಮ್ಮ ಕಡೆಯ ‘ಕೂಲಿ ಕುಂಬಳಿಯವರ ‘ ಗತಿ ಏನಾಗಬಹುದು ಎನ್ನುವ ಚಿಂತೆ ಕಾಡಲು ಸುರು ಆಯಿತು. ಬೇಜಾರಾಗಿ ಹೊರಗೆ ಬಂದು ನಡೆದುಕೊಂಡು ಬರುತ್ತಿದ್ದಾಗ ದಾರಿಯಲ್ಲಿ ಸಾರಾ ಸಿಕ್ಕಿದಳು.ಮೆರವಣಿಗೆ ಮುಗಿಸಿ ಬರುತ್ತಿದ್ದಳು.ನನ್ನನ್ನು ಕಂಡೊಡನೆಯೇ ಕನ್ನಡದಲ್ಲಿ ‘ನಮಸ್ಕಾರ’ಎಂದಳು.ನಾನು ವಿಚಾರಿಸಿದೆ, ವಿವಿ ವಿದ್ಯಾರ್ಥಿಗಳ ಕೋರಿಕೆ ಏನು, ಯಾಕೆ ಈ ಪ್ರತಿಭಟನೆ ಎಂದು. ಅವಳು ಕೊಟ್ಟ ವಿವರ ಕುರುಡು ಕಾಂಚಾಣದ ಸುಡು ಸುಡು ಪಂಜಿನ ಬೆಂಕಿಯ ಬಿಸಿ ಮುಟ್ಟಿಸಿತು.
ಮುಖ್ಯವಾಗಿ ಅವರ ಮೇಲೆ ಎರಡು ತುಳಿತಗಳು. ವಿದ್ಯಾರ್ಥಿಗಳ ಶುಲ್ಕವನ್ನು ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಏರಿಸಿದ್ದು ಒಂದು. ವಿದ್ಯಾರ್ಥಿಗಳ ಸ್ವಂತಿಕೆ , ಸ್ವಂತ ಓದಿನ ಮೂಲಕ ಸ್ವತಂತ್ರ ಚಿಂತನೆ ಬೆಳೆಸುವ ಅವಕಾಶವನ್ನು ಬದಲಿಸಿ, ಕೇವಲ ಪರೀಕ್ಷೆಗಳಿಗೆ ಸಿದ್ದತೆ ಮಾಡುವುದರಲ್ಲೇ ಪರ್ಯವಸಾನ ಆಗುವ ಶಿಕ್ಷಣ ವ್ಯವಸ್ಥೆಯನ್ನು ಹೊಸತಾಗಿ ಆರಂಭಿಸಿದ್ದು. ಹೀಗೆ ಆರ್ಥಿಕವಾಗಿ ದುರ್ಬಲವಾಗಿ ಪರಾವಂಬಿಗಳಾಗುವಂತೆ ಮಾಡುವುದು ಒಂದು ಕಡೆಯಾದರೆ ,ಇನ್ನೊಂದೆಡೆ ಬೌದ್ದಿಕವಾಗಿ ಬೆಳೆಯಲು ಅವಕಾಶ ಇಲ್ಲದಂತೆ ಮಾಡುವುದು. ಮೊದಲು ಒಂದು ಸೆಮೆಸ್ಟರಿಗೆ ನೂರ ಮೂವತ್ತು ಯೂರೋ ಶುಲ್ಕ ಇದ್ದರೆ , ಈಗ ಅದರ ಜೊತೆಗೆ ಐದು ನೂರು ಯೂರೋ ಹೆಚ್ಚಿಗೆ ಕಟ್ಟಬೇಕಂತೆ. ಸರಕಾರ ಶುಲ್ಕ ಪಾವತಿಗೆ ಸಹಾಯ ಮಾಡುವುದಿಲ್ಲವಂತೆ. ಈ ಶುಲ್ಕದ ಹಣ ಸಂಗ್ರಹಕ್ಕಾಗಿ ವಿದ್ಯಾರ್ಥಿಗಳು ಕೆಲಸ ಮಾಡಿಕೊಂಡು ಓದಲು ಸಮಯ ಸಿಗುತ್ತಿಲ್ಲವಂತೆ. ಅವರ ರಾಜ್ಯದ ಸಚಿವರೊಬ್ಬರು ಬಂದವರು, ನಮಗೆ ಹಣದ ಕೊರತೆ ಇದೆ, ಶುಲ್ಕ ಕಡಮೆ ಮಾಡಲು ಸಾಧ್ಯ ಇಲ್ಲ ಎಂದು ಹೇಳಿ ಹೋಗಿದ್ದಾರಂತೆ..ಹಾಗಾಗಿಯೇ ಅವರ ಪ್ರತಿಭಟನೆಯ ಬ್ಯಾನರಿನಲ್ಲಿ ಬರೆದ ಒಂದು ಘೋಷಣೆ ,’ಹಣಕ್ಕಾಗಿ ವಿದ್ಯೆಯನ್ನು ಮಾರಬೇಡಿ ‘ ವಿದ್ಯಾಥಿಗಳು ಸಚಿವರ ಮಾತುಗಳನ್ನು ನಂಬುವುದಿಲ್ಲ. ರಾಜಕಾರಣಿಗಳು ತಮ್ಮ ಖರ್ಚುವೆಚ್ಚ ಕಡಿಮೆ ಮಾಡುವುದಿಲ್ಲ,ಆದರೆ ವಿದ್ಯಾರ್ಥಿಗಳ ಮೇಲೆ ಹೊರಲಾರದ ಹೊರೆ ಹಾಕುತ್ತಾರೆ. ಹೆತ್ತವರ ಮೇಲೆ ಅವಲಂಬನೆ ಇಲ್ಲದ ಸ್ವಾಭಿಮಾನದಿಂದ ಕಲಿತು ಬದುಕು ಸಾಗಿಸಲು ಇನ್ನು ಸಾಧ್ಯವಿಲ್ಲ ಎನ್ನುವುದು ಅವರ ಅಳಲು, ಆಕ್ರೋಶ. ನಮ್ಮ ದೇಶದ ರಾಜಕಾರಣಿಗಳ ಅನುಕರಣೆಯನ್ನು ಈ ದೃಷ್ಟಿಯಲ್ಲಿ ಇವರೂ ಮಾಡುತ್ತಿದ್ದಾರಲ್ಲ ಅನ್ನಿಸಿತು.
ಸಾರಾಳನ್ನು ಬೀಳ್ಕೊಟ್ಟು ನನ್ನ ಎಂದಿನ ಸೂಪರ್ ಮಾರ್ಕೆಟ್ ಬಳಿ ಬಂದಾಗ ಕಣಕಣ ಸದ್ದು ಕೇಳಿಸಿತು. ಒಬ್ಬ ಮುದುಕ ಹಳೆಯ ಬಾಟಲಿಗಳ ಕಸದ ತೊಟ್ಟಿಯೊಳಗೆ ಕೈ ಹಾಕಿ ಪ್ರಯಾಸದಿಂದ ಒದ್ದಾಡುತ್ತಿದ್ದ. ಸಾಮಾನ್ಯವಾಗಿ ಹಳೆಯ ಬಾಟಲಿಗಳನ್ನು ಆ ತೊಟ್ಟಿಯಲ್ಲಿ ಹಾಕುವುದನ್ನು ಕಂಡಿದ್ದೆ. ಆದರೆ ಇವನು ಯಾಕೆ ಇಷ್ಟು ಒದ್ದಾಡುತ್ತಿದ್ದಾನೆ ನೋಡೋಣ ಎಂದು ಹತ್ತಿರ ಹೋದೆ. ಬೇರೆಯವರು ಎಸೆದ ಹಳೆಯ ಬಾಟಲಿಗಳನ್ನು ಈ ಮುದುಕ ಹೊರಗೆ ತೆಗೆದು ರಾಶಿ ಹಾಕಿದ್ದಾನೆ.ಈಗ ಇಲ್ಲಿ ಚಳಿಗಾಲದ ಒಳಗೆ ಮಳೆಗಾಲ. ಎರಡು ದಿನದಿಂದ ಹನಿ ಕಡಿಯದೆ ಮಳೆ. ‘ಏನಿದು ಹಳೆಯ ಬಾಟಲಿ ಎಲ್ಲಿಗೆ ‘ಎಂದೆ. ‘ಇಲ್ಲಿ ಅಂಗಡಿಯಲ್ಲಿ ಕೊಟ್ಟರೆ ಒಂದು ಬಾಟಲಿಗೆ ಎರಡು ಪೆನ್ನಿ ಕೊಡುತ್ತಾರೆ. ರಾತ್ರಿಗೆ ಬ್ರೆಡ್ ಇಲ್ಲ ಈ ಮಳೆ ಚಳಿಗೆ ಹೊಟ್ಟೆ ಕೇಳುತ್ತದೆಯೇ ?’ಎಂದ. ತಕ್ಷಣ ಇಂದಿನ ಕವನದ ಸಾಲು ನೆನಪಾಯಿತು: ‘ಬಡವರ ಒಡಲಿನ ಬಡಬಾನಲದಲ್ಲಿ ಸುಡು ಸುಡು ಪಂಜು ಕೈಯೋಳಗಿತ್ತೋ ‘
ಮಳೆ ಛಳಿಯ ಶೀತದ ನಡುವೆಯೂ ಒಡಲಿನ ಬಡಬಾನಳ ನೆನಪಾಗಿ ಕೋಣೆಗೆ ಬಂದೆ. ಕನ್ನಡದ ಹಾಡು ಕೇಳಿಯಾದರೂ ಮನಸ್ಸಿಗೆ ನೆಮ್ಮದಿ ದೊರೆಯಲಿ ಎಂದು ಎಂಪಿ ಮೂರರ ಮೇಲೆ ಕರ್ಸರ್ ಒತ್ತಿದರೆ, ಸಿ ಆಶ್ವಥ್ ದ್ವನಿ : ‘ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ,ಅಂಗಾತ ಬಿತ್ತೋ ,ಹೆಗಲಲಿ ಎ

‍ಲೇಖಕರು avadhi

December 7, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

 1. dinakar moger

  ಸುಂದರ ಲೇಖನ…… ಸುಲಲಿತವಾಗಿ ಓದಿಸಿಕೊಂಡು ಹೋಯಿತು………….. ನಿಮ್ಮ ಬರವಣಿಗೆ ಶೈಲಿ ಸೂಪರ್……………

  ಪ್ರತಿಕ್ರಿಯೆ
 2. ನರಸಿಂಹಮೂರ್ತಿ. ಆರ್

  ನಮಸ್ಕಾರ ಸಾರ್, ತಮ್ಮ ಲೇಖನಗಳನ್ನು ಓದುತ್ತಿದ್ದೇನೆ. ಖುಶಿಯಾಗ್ತಿದೆ.

  ಪ್ರತಿಕ್ರಿಯೆ
 3. JOGI

  ನೀವು ತೋರಿಸುತ್ತಿರುವ ಜರ್ಮನಿ ನಮ್ಮೂರಿನ ಹಾಗೇ ಇದೆ ಅನ್ನಿಸುತ್ತಿದೆ. ಅವರ ಆಕ್ರೋಶ, ಆತಂಕ, ಕುತೂಹಲ ಮತ್ತು ತಳಮಳಗಳ ಅಲೆಗಳನ್ನು ಇಲ್ಲೀತನಕ ದಾಟಿಸುತ್ತಿದ್ದೀರಿ. ತುಂಬ ಆಸಕ್ತಿಯಿಂದ ನಿಮ್ಮ ಸರಣಿಯನ್ನು ಓದುತ್ತಿದ್ದೇನೆ. ನಮಸ್ಕಾರ

  ಪ್ರತಿಕ್ರಿಯೆ
 4. ಅನಿಕೇತನ ಸುನಿಲ್

  ನಮಸ್ಕಾರ ಸರ್,
  ಹೃತ್ಪೂರ್ವಕ ಧನ್ಯವಾದ ಈ ಲೇಖನಕ್ಕೆ.
  ಅಶ್ವಥರು ಅಲ್ಲಿನವರನ್ನ ನಲಿಸಿದ್ದು ಖುಶಿತರುವ ವಿಚಾರವಾದರೆ ಎಲ್ಲೆಲ್ಲೂ ಅದೇ ಅನ್ನುವ ಸತ್ಯ ಮನ ಕಲಕಿತು.

  ಪ್ರತಿಕ್ರಿಯೆ
 5. ಡಾ.ಬಿ.ಆರ್.ಸತ್ಯನಾರಾಯಣ

  ಕುವೆಂಪು ಅವರ ಅನಿಕೇತನದಿಂದ ಆರಂಭಿಸಿ, ಬೇಂದ್ರೆಯವರ ಕುರುಡುಕಾಂಚಣದ ಮಹಿಮೆಯನ್ನು ಜರ್ಮನಿಯಲ್ಲೂ ಪಸರಿಸಿದ್ದೀರಿ. ಭಾಷೆ ಧರ್ಮಗಳ ಗಡಿದಾಟಿ ವಿಶ್ವಮಾನವರಾಗುವ ಹಾದಿಯಲ್ಲಿ ಇಂತಹ ಪ್ರಯತ್ನಗಳು ಪ್ರಥಮ ಸೋಪಾನಗಳಾಗಿವೆ.

  ಪ್ರತಿಕ್ರಿಯೆ
 6. byregowda

  ಸರ್
  ನಿಮ್ಮ ಬರವಣಿಗೆಯನ್ನು ಓದಿದೆ. ಕನ್ನಡಿಗರ ಬಗೆಗೆ ಹೆಮ್ಮೆ ಹುಟ್ಟುವ ಕೆಲಸ
  ಮಾಡುತ್ತಿದ್ದೀರಿ. ನಿಜಕ್ಕೂ ಖುಷಿಯಾಗಿದೆ. ಯುಗದ ಕವಿ-ಜಗದ ಕವಿಗಳನ್ನು
  ಕಡಲಾಚೆಗೆ ಕೊಂಡೊಯ್ದು ಅವರ ಕವಿತೆಗಳ ಸಾಲುಗಳನ್ನು ಗುನುಗುವಂತೆ ಮಾಡಿದ್ದೀರಿ.
  ಸಮಸ್ತ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನಿಮ್ಮ ಎಲ್ಲ ಆಲೋಚನೆಗಳೂ
  ಜರ್ಮನಿಯಲ್ಲಿ ಕನ್ನಡ ಕಲಿಯುವವರಿಗೆ ದಕ್ಕಲಿ. ಆ ಮೂಲಕ ನಮ್ಮ ಸಂಸ್ಕ್ರುತಿಯ ಅರಿವು
  ಮೂಡಲಿ. ಮತ್ತೊಮ್ಮೆ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.
  ನಿಮ್ಮವ
  ಡಾ. ಎಂ. ಬೈರೇಗೌಡ
  ಬೆಂಗಳೂರು.

  ಪ್ರತಿಕ್ರಿಯೆ
 7. ಪಂಡಿತಾರಾಧ್ಯ

  ಪ್ರೀತಿಯ ವಿವೇಕ ರೈ ಅವರಿಗೆ ನಮಸ್ಕಾರಗಳು.
  ನಿಮ್ಮ ಜರ್ಮನ್ ತರಗತಿಯ ಚಿತ್ರ ನೋಡಿ ತುಂಬ ಸಂತೋಷವಾಯಿತು. ಜರ್ಮನಿಯ ಮೆರವಣಿಗೆಯಲ್ಲಿನ ಕನ್ನಡ ಫಲಕದ ಚಿತ್ರವನ್ನೂ ಪ್ರಕಟಿಸಿದ್ದರೆ ನೋಡಬಹುದಿತ್ತು. ಅದು ಜರ್ಮನ್ ಭಾಷೆಯಲ್ಲಿತ್ತೆ? ಕನ್ನಡವೇ ಜರ್ಮನ್ ಲಿಪಿಯಲ್ಲಿತ್ತೆ ಗೊತ್ತಾಗಲಿಲ್ಲ.
  ಪ್ರೀತಿಯಿಂದ
  ಪಂಡಿತಾರಾಧ್ಯ

  ಪ್ರತಿಕ್ರಿಯೆ
 8. B.A.Viveka Rai

  pratikriye kotta ella snehitarige vandanegalu.banner kannadadalli ittu endu naanu baredilla.shirshikeyinda aa artha bandide ashte.taragati ,meravanige ellavu nadedavu.ghoshane mattu bannergala atrhavannu naanu paatha maadida kavanada muulaka kathanavaagi balasikondiddene.ide lekhana nanna blognallu ide .viveka rai

  ಪ್ರತಿಕ್ರಿಯೆ
 9. B.A.Viveka Rai

  banner kannadadalli ide endu naanu baredilla.shiirshikeyinda aa artha bandide.kannada taragati,pratibhataneya meravanige ellavoo nadedavu.ghoshanegala arthavannu naanu paatha maadida siddalngiah avaraa kavanagala moolaka kannda odugarige helalu kathanatantravaagi balasiddene.
  ella geleyarige namaskaara.Viveka Rai

  ಪ್ರತಿಕ್ರಿಯೆ
 10. Srinivas Deshpande

  adbhuta paatha sir namma convent makkalige
  ega idannu yaaru kalisuttare?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: