‘ಜಲ್ಗಿನ್ ಗುದ್ರದ ಕೆಂತರ್ಲು’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಹೊಸ ಹೂವಿನ ಕಂಪು ಹಸುರು
ಎಲರಿನ ತಂಪು  ಹಸುರು!
ಹಕ್ಕಿಯ ಕೊರಲಿಂಪು ಹಸುರು;
ಹಸುರು ಹಸುರಿಳೆಯುಸಿರೂ!
ಹಸುರತ್ತಲ್!ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ!

(ಕುವೆಂಪು)

ಅತ್ಯಂತ ತೀವ್ರವಾದ ಅನುಭವವೊಂದನ್ನು ನೈಜವಾದ ಭಾವಜೀವಂತಿಕೆಯಲ್ಲಿ ವಿಶಾಲಗೊಳಿಸುವ ಮಹಾಚೇತನ ಪ್ರಜ್ಞೆ ನಿಸರ್ಗಕ್ಕೊಲಿದ ಮನಸುಗಳಿಗಷ್ಟೇ ಸಾಧ್ಯ. ತಾದಾತ್ಮ್ಯಾನುಭವ್ಯತೆಯ ಅನುಸಂಧಾನವನ್ನು ಪ್ರಕೃತಿಯೊಂದಿಗೆ ನಡೆಸಿಕೊಂಡು ಬಂದ ಕುವೆಂಪು ಅವರನ್ನು ಓದುವಾಗಲೆಲ್ಲ ನನ್ನ ಊರಿನ ಇಂಚಿಂಚು ನೆಲವನ್ನು ಹೊಸದಾಗಿ ನೋಡಲು ನನಗಾಗುತ್ತದೆ.

ನನ್ನ ಹಳ್ಳಿಯನ್ನು ಸುತ್ತುವರಿದ ಮೀಸಲು ಅರಣ್ಯ ಪ್ರದೇಶದಲ್ಲಿ ಒಂದು ಕಾಲಕ್ಕೆ ಮಲೆನಾಡಿನ ದಟ್ಟ ಬನಗಳಲ್ಲಿ ಇರುವಂತೆಯೇ ಶರತ್ಕಾಲದ ಸೂರ್ಯೋದಯವನ್ನು ಹುಡುಕುತ್ತಾ ಅಲೆದಿದ್ದೇನೆ. ಮೀಸಲು ಅರಣ್ಯಕ್ಕೆ ರಕ್ಷಣೆಯಂತೆ ಸುತ್ತುವರಿದ ಗುಡ್ಡಗಳು ಮೌನದೊಳಗೆ ಅನಂತವನ್ನು ಧ್ವನಿಸುತ್ತವೆ.

‘ಅಂದು ನೀ ವನಗಳಲಿ ನುಡಿದ ಪಿಸುಮಾತು ಇಂದಿಗೂ ಮೊರೆಯುತಿದೆ ಕರ್ಣಗಳಲಿ’ ವಾಲಿ ಮಕ್ಕಳಾಟದೊಂದಿಗೆ ತನ್ನ ಬಾಳನ್ನು ಕಂಡುಕೊಳ್ಳುವಾಗ ‘ಶ್ರೀ ರಾಮಾಯಣ ದರ್ಶನಂ’ ಅಲ್ಲಿ ಬರುವ ಮೇಲಿನ ಮಾತು ಆಕ್ಷಿಗೆ ತಳಿರಸಿರ ತೋರಣದಂತೆ ನನಗೆ. ಊರ ದಾರಿ ಹಿಡಿದರೆ ಕಾಡು ಕರೆಯುತ್ತದೆ. ಹಗಲಿಡೀ ಕಾಡಲೆಯುವ ವಿಸ್ಮಯವೇ ಅದ್ವಿತೀಯ.

ಗ್ರಾಮಪಂಚಾಯಿತಿ ಚುನಾವಣೆ ನಡೀತು. ನಾನು ಇದೇ ದಿನ ನನ್ನ ಹಳ್ಳಿಗೆ ಹೋದೆ. ಜೋಡ್ಗುಡ್ಡಗಳ ನಡುವೆ ಅರ್ಕನಿಳಿದು ಕಣ್ಮರೆಯಾಗುತ್ತಿರುವ ಹೊತ್ತಿಗೆ ಸರಿಯಾಗಿ ಕೆಂಪೇರಿದ ಮುಗಿಲ ಅಸ್ಮಿತೆಯ ಮೌನದೊಳಗೆ ದಿವ್ಯತೆಯ ಲೋಚನಗಳರಳಿದ್ದವು. ಸೂರ್ಯಾಸ್ತದ ಭವ್ಯ ಕಾಂತಿಗೆ ಒಲಿದು ನಮ್ಮೂರಿನಲ್ಲಿ ಕಾಡಲೆದೇ ಕುರಿಕಾಯುತ್ತಿದ್ದ ರಂಗಣಯ ಅನ್ನೋರು ಕಾಡ ನಡುವೆ ಅಪ್ಪ ಕಟ್ಟಿಸಿದ ಕೆರೆಯ ಅರ್ಗಿನಲ್ಲಿ ನೂರಾರು ಹೂಗಿಡಗಳನ್ನು ಮಣ್ಣಿಗಿಳಿಸಿಹೋಗಿದ್ದಾರೆ. ಅವೆಲ್ಲ ಬೇರಬ್ಬಿಸಿಕೊಂಡು ಹೂ ಬಿರಿದು ನಳನಳಿಸುತ್ತಿವೆ. ಹೊಸದಾಗಿ ಪ್ಲಾಂಟೇಶನ್ ಆಗಿರುವ ಉದೇದ್ ಗಿಡ, ಮೂಕರ್ತಿ ಗಿಡ, ಸುರಹೊನ್ನೆ, ಜಾಣೆ ಗಿಡ, ಸಿಮರುಬ, ಒಟ್ಲೊಯ್ದಂಗೆ ದಟ್ಟವಾಗಿ ಬೆಳೆಯುತ್ತಿರುವ ಕಂಬ್ರದ ಗಿಡಗಳು ಹೆಸರೇ ಗೊತ್ತಿಲ್ಲದ ಹಲವಾರು ಪ್ರಭೇದಗಳ ಹಸಿರ ಮೌನ ಅಪೂರ್ವದಂತೆ ಹರಡಿದೆ. ಓಬ್ಲುಮಲ್ಡಿ ಹತ್ತಿ ಇಳಿದು ಕೆಂಪಗೆ ಸೆಳೆಯುವ ಜಲ್ಗಿನ ಗುದ್ರವಂತು ಸುಮ್ಮನೆ ತನ್ನ ಬಯಲಲ್ಲಿ ನಿಲ್ಲಿಸಿಕೊಂಡು ಬಿಡುತ್ತದೆ.

ಕೆಂಪನೆಯ ನೆಲದ ಜೀವಬೇರು ಹಚ್ಚ ಹಸಿರು. ಕಿರಿಯರಿದ್ದಾಗ ಮಳೆಹೊಯ್ದ್ರೆ ಸಾಕು ಜಲ್ಲಿನ ಗುದ್ರುದಗೆ ನಿಂತ ನೀರನ್ನು ನೋಡಲು ಓಡ್ತಿದ್ವಿ. ಸುತ್ತಲಿನ ಸರಗಳ ನೀರಿಳಿದು ಜಲ್ಗಿನ ಗುದ್ರುದಗೆ ಕೆಂಪಗೆ ಕಣ್ಣಿಗೆ ರಾಚುವಂತೆ ನಿಂತಿರವು. ಮಳೆನಿಂತ ಮೇಲೆ ಸಣ್ಣಗೆ ಸುಳಿಯುವ ಸಮೀರದ ತಣ್ಣನೆಯ ಗಾಳಿಯಲೆಗಳನ್ನು ಸುಮ್ಮನೆ ಆಲಿಸುತ್ತಾ ಹಿಗ್ಗಬೇಕು.

ಚುನಾವಣೆಯ ಗೌಜುಗದ್ದಲಗಳು ಹೆಂಡದ ಜೊತೆಗೂಡಿ ಊರಿನಲ್ಲಿ ಕೇಡು ಬಿತ್ತಲು ಸಜ್ಜಾದ ಹೊತ್ತಿಗೆ ಹಳೆಯ ನೆನಪುಗಳ ಹೊತ್ತುಕೊಂಡು ಜಲ್ಗಿನ ಗುದ್ರದ ದಿಬ್ಬದಲ್ಲಿ ಕುಳಿತಿದ್ದೆ. ಸಮೀಪ ನೆಲವಿಡಿದು ಹುಣ್ಸೇಗಿಡ್ಕೆ ಬಂದ್ರೆ ಗೂಡು ಕಟ್ಟುತ್ತಿದ್ದ ಹಿರಿಯರೆಲ್ಲ ಅಮಣಿ ಅಪ್ರೂಪ್ಕೆ ಊರ್ಕಡಿಗೆ ಬಂದಿದೀಯ; ಬಾ ಕಾಪಿ ಕುಡ್ದೋಗು ನಾವು ಒಲ್ದಗೆ ಗುಡ್ಲಾಕ್ಕೆಂಡು ಇಲ್ಲೇ ಇರ್ತೀವಿ ಕಣಮ್ಮ. ಊರ್ಕಡಿಕೆ ಹೆಚ್ಚಾಗಿ ಓಗಲ್ಲ. ಊರಾಗ್ಳುಡುಗ್ರೆಲ್ಲ ಯಲಕ್ಷನ್ ಬಂತು ಅಂದ್ರೆ ಪಂಡ್ರು ಪಟ್ಟಾಗಿ ಏಳರು ಕೇಳರು ಇಲ್ದಂಗೆ ಗಲಾಟ್ಗುಳ್ ಮಾಡ್ಕಮ್ತವೆ. ನಮ್ಕಾಲ್ದಗೆ ಯಾರನ ನೇರೂಪಾದರು ನಿಂತ್ಕಂಡ್ರೆ ಓಟಾಕಿ ತೆಪ್ಪುಗ್ ಮನೆಗ್ಬತ್ತಿದ್ವಿ. ಇವಗ್ನುಡುಗ್ರಿಗೆ ಏನೇಳಿರು ತಿಳ್ಕಮಲ್ಲ. ಒಲ್ತ್ಕಡಿಕನ ಬಂದ್ರೆ ಅಚ್ಗು ಅಚ್ಗಲೆ ಹಸ್ರುನೀರ್ ಕಕ್ಕಂಗೆ ಬೆಳ್ಸಿರೋ ಗಿಡ ಮರ ನೋಡ್ಕಂಡು ಬುಡ ಕುರ್ಪಾಡ್ಕಂಡಿದ್ರೆ ಬ್ಯಾಡ ಅಂಬುತ್ತೆ. ನಾಕಕ್ಷರ ಕಲ್ತಿರ ನೀವನ ಊರ್ಕಡಿಕೆ ಬಂದಾಗ ಬುದ್ಧಿ ಏಳೋಗ್ರಿ ಅಮ್ತರೆ. ಮಣ್ಣು ಮರಕ್ಕೆ ಆತುಕೊಂಡೇ ಬದುಕಿದ ಇಂಥಾ ಹಿರಿಯರನ್ನೆಲ್ಲಾ ನೋಡಿಕೊಂಡೇ ನಮಗೊಂದಿಷ್ಟು ಅರಿವು ಒಲಿದಿದ್ದು.

ಅರವತ್ತು ದಾಟಿದ ಅನೇಕ ಹಿರಿಜೀವಗಳು ಮಣ್ಣು ಬಿಟ್ಟು ಕದ್ಲಲ್ಲ. ಗಂಟೆ ಅವರೊಟ್ಟಿಗೆ ಕುಂತದ್ದಕ್ಕೆ ಊರು ಬದಲಾಗುತ್ತಿರುವ ಕುರಿತು ನೊಂದ್ಕಂಡ್ರು. ಅಮಣಿ ಈ ದರಿದ್ರುದೆಲಕ್ಷನ್ ಬಂದ್ಮೇಲೆ ಯಾರ್ ಮನೆಗನ ನೋಡು ಎಂಡುದ್ ಬುಲ್ಡೆ ಇರ್ತವೆ ಕಣಮ್ಮ. ಓಟಾಕಿ ಊರ್ ಬಿಡವತ್ಗೆ ಅಲ್ಲಲ್ಲೆ ಒಯ್ದಾಡದ್ನ ನೋಡ್ಬೇಕು ಕಣಮ್ಮ. ಉತ್ತುಮ್ರೆಲ್ಲ ಬಾಳ್ಬದುಕ್ದೂರಗೆ ಎಂಡ್ದ್ವಾಸ್ನೆ ಮೂಗಿಗ್ಬಡುದ್ರೆ ಭಯ್ವಾಗುತ್ತೆ. ಹೆಂಡ್ತಿ ಮಕ್ಳುನ್ನ ಅಬ್ಬೇಪಾರ್ಗುಳ್ನ ಮಾಡಿ ಊರ್ ಮಾನ ಕಳಿತವೆ. ಕೋಟ್ಗೊಬ್ರು ನ್ಯಾಯ್ವಾದರ್ಸಿಗಲ್ಲ. ಎಂಡುದ್ ಬುಲ್ಡೆ ತೋರ್ಸಿ ಬಾಚಾಕ್ಕೆಂಡು ಗೆದ್ದು ಅವ್ರೆಣ್ತಿಮಕ್ಳು ಸುಕ್ವಾಗಿ ಇರಕೆ ಇವ್ರೆಲ್ಲಾ ಕುಡುಕ್ರಾಗಿ ರಸ್ತೆಗಡ್ಡಿಗ್ ಬೀಳ್ತವೆ. ಈ ಬಿಡ್ಗೆಟ್ಟವ್ಕೆ ಯಾರನ ಬುದ್ಧಿ ಏಳಕಾದತೆನಮಣಿ? ಗಡಿಗ್ಗೆದ್ದು ಎಂಟ್ದಿನ ಮೆರ್ದುಮೆಟ್ಟಿಕ್ಕಿವು; ಹೀಗೆ ಒಂದೇ ಸಮನೆ ಅಲವತ್ಕಂಡು ಬೇಸರಗೊಂಡವರಿಗೆ ಊರುಗಳಲ್ಲಿ ಮುಗಿದುಹೋದ ಹೊಸತನದ ಮರುಹುಟ್ಟಿಗೆ ಏನಾದರೂ ಮಾಡಬೇಕೆನಿಸಿತು.

ಕಾಡು ದಾಟಿ ಹೊಲ್ಮಾಳ್ದಗೆ ವಾಸ ಇರೋ ಅಳುಬ್ರುನ್ನ ಮಾತಾಡ್ಸಿ ಬರುವಾಗ ಕಾಲಕಾಲಕ್ಕೆ ಮಣ್ಣಿಗೊಲಿದು ಮರಗಳಿಗೆ ಬೆಸೆದುಕೊಂಡ ಎಲ್ಲ ಮಣ್ಣಿನ ಜೀವಗಳು ಕಣ್ಮುಂದೆ ಹಾದು ಹೋದವು. ಜಲ್ಗಿನ ಗುದ್ರದ ಕೆಂತರ್ಲು ಅಗಾಧ ಕೆಂಪೊತ್ತು ಸೋಜಿಗ ತಂದ ಪರಿಯಂತು ಹೊಸ ಲಾವಣ್ಯವೊತ್ತ ಹಾದಿ.

ಹಸಿರ ಬಯಲ ನಡುವೆ ಏನೆಲ್ಲಾ ವಿಸ್ಮಯಗಳನ್ನು ಎದುರುಗೊಂಡು ಮತ್ತೆ ಊರಿನಾದಿ ಹಿಡಿವ ಹೊತ್ತಿಗೆ ಗ್ರಾಮಗಳ ಚುನಾವಣೆಯ ಬಿಸಿಗಾಳಿ ಎದುರಾಯ್ತು. ಫಲಿತಾಂಶದ ನಿರೀಕ್ಷೆಗಳನ್ನು ತಲೆಗೊತ್ತುಕೊಂಡು ಅಲ್ಲಲ್ಲೆ ಗುಂಪುಗಳು ಕಾಣಿಸಿದವು. ಯಾರ ಮೋರೆ ನೋಡಿದರು ಗುಟ್ಟುಗಳ ಬಾರವೇ ಕಾಣ್ತಿತ್ತು. ಆತ್ಮರತಿಯ ಧಾರ್ಮಿಕ ಘರ್ಷಣೆಯನ್ನು ಪುಷ್ಟೀಕರಿಸುವ ಊದ್ರಾಡ್ತಿರೋದು ಯಾರಿಗಾದರೂ ತಿಳಿಯುವಂತಿತ್ತು. ಕೆಲವು ಮನೆಗಳಲ್ಲಿ ಗಂಟೆ ಶಬುದ. ಅಲ್ಲಲ್ಲಿ ಗಲಬೆ ಎಬ್ಬಿಸಲು ಪ್ರೇರೇಪಿಸುವ ಬಣ್ಣದ ಝಂಡಾಗಳು; ಎಲ್ಲಾ ಒಳ್ಳೆದಾದ್ರೆ ಸಾಕು ಅನ್ನೋ ನಿರ್ಮಲ ದಿಟ್ಟಿಗಳು ಎಲ್ಲವೂ ಒಂದುಗೂಡಿ ಏನೋ ಅಪಾಯಗಳಾಗುವಂತ ಶಂಕೆ ಕಾಣ್ತಿತ್ತು.

ಪ್ರತೀ ಚುನಾವಣೆಗಳು ಹಳ್ಳಿಗಳ ಮುಗುದ ವಿವೇಕವನ್ನು ಕೊಲ್ಲುತ್ತಿವೆ. ಸಂವಿಧಾನದ ಮೂಲ ಆಶಯಗಳು ದಮ್ಮದ ಉರಿಯಲ್ಲಿ ನರಳಿದರೆ ಆಗುವ ಅನಾಹುತಗಳ ಕುರಿತು ಎಲ್ಲಾ ಮನಸುಗಳಿಗೂ ವರ್ಣ, ಗುಡಿ, ಗಂಟೆಗಳ ಆಚೆಗೆ ನಿಲ್ಲುವ ಸಮಾನತೆಯ ನನ್ನಿಯನ್ನು ಕಲಿಸಲೇಬೇಕಿದೆ. ನನ್ನ ಊರಿನಲ್ಲಿ ಸಂವಿಧಾನ ಇಷ್ಟು ವರ್ಷ ಜೀವಂತ ಇತ್ತು. ಈ ಕಾರಣದಿಂದಲೇ ಊರಿಗೆ ನೆಮ್ಮದಿ ದಕ್ಕಿದ್ದು. ಯಾವಾಗ ಅಸಹಜ ವರ್ಣದ ನೆರಳು ಊರಿನ ಮೇಲೆ ಬಿತ್ತೋ ಗೊತ್ತಿಲ್ಲ. ನಿಧಾನಕ್ಕೆ ಊರಿನ ವದನದಲ್ಲಿ ಬಿಲ್ಲು, ಬಾಣ, ಅರಮನೆ, ಗಂಟೆ, ಗುಡಿ ಎಲ್ಲವೂ ಮಿಸುಕಾಡಿ ವಿಕಾರಗಳು ಕಾಣಲು ಮೊದಲಾಗಿವೆ. ಆದರೂ ವರ್ಣ ಪ್ರಜ್ಞೆಯನ್ನು ಸೀಳಿ ಊರನ್ನು ಮಣ್ಣೊಳಗಿನ ದುಡಿಮೆಯ ಮಹತ್ವದೊಳಗೆ ಜತನ ಮಾಡಿಕೊಳ್ಳುವ ಹಿರಿಯ ಜೀವಗಳಿವೆ. ಎಂತೆಂಥದೋ ರೂಪ ಹೊತ್ತು ಊರಿಗೆ ನುಗ್ಗಿದ ವರ್ಣ ವಿಕೃತಿಗಳು ಹೆಂಡದ ಸಂಗ ಬಿಟ್ಟು ಹಿತ್ತಿಲಿನ ಚಪ್ಪರಕ್ಕೆ ಹಬ್ಬಿದ ಅವರೆಯ ಹೂಗಳನ್ನು ಪ್ರೀತಿಸುವಷ್ಟು ವ್ಯವಧಾನ ಅರಳಬೇಕಾದ ಕಿರಿಮನಸುಗಳಿಗೆ ಪ್ರಥಮದ್ದಾಗಬೇಕು. ಆಗಲೇ ಊರಿನುದರದ ಕರುಳಲ್ಲಿ ದಮ್ಮದಾಚೆಗಿನ ಸಮಾನತೆಯ ತಳಿರೊಡೆದು ಎಲ್ಲಕ್ಕೂ ಆಸರೆಯಾಗುವ ಉಸಿರಾಧಾರದ ತರು ಉಳಿದೀತು.

‘ಮಹಾರಾತ್ರಿ’ ನಾಟಕದ ಸಾಲುಗಳು ಜಲ್ಗಿನ ಗುದ್ರದ ಕೆಂಬುವಿಯ ಚೆಲುವಿನ ಮೌನದ ಅನಂತತೆಯಲ್ಲಿ ಲೀನವಾಗಿ ಬುದ್ಧ ದೇವನ ದರ್ಶನ ಮಾಡಿಸಿದವು.

‘ಹೊರಗಿನ ಬೆಳಕೆ ಆತ್ಮದ ಬೆಳಕಾಗು’ (ಮಹಾರಾತ್ರಿ. ಕುವೆಂಪು)

December 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

೧ ಪ್ರತಿಕ್ರಿಯೆ

  1. ಶೈಲಜ ನಾಗರಘಟ್ಟ

    ಚಂದ ನಿರೂಪಣೆಯುಂಟು….ಜೊತೆಗೆ ಹಳ್ಳಿಗಾಡ ಪುಡಿ ಹೈಕ್ಳು ಪ್ರಜಾಪ್ರಭುತ್ವದ ನೈಜ ಅಥ೬ ತಿಳಿಯದೆ…ಚುನಾವಣೆ ಹೆಸ್ರಲ್ಲಿ ಗುಂಪುಗಾರಿಕೆ ಮಾಡ್ಕೊಂಡು ಪೋಲಿತನವನ್ನು ಮೈಗೂಡಿಸಿಕೊಂಡು ಬದುಕು ಬರಡಾಗಿಸಿಕೊಳ್ಳುತ್ತಿರುವ ಮುಗ್ಧ ಜೀವಗಳ ಬಗ್ಗೆ ಈ ಹೊತ್ತಿನಲ್ಲಿ ವಿಷಾದವಿದ್ದದ್ದೇ ..ಎಲ್ಲಾ ಊರುಗಳ ಪಾಡಿದೆ….ಈ ಕಾಲದ ತಿಳಿಗೇಡಿಗಳಿಗೆ ತಿಳಿ ಹೇಳಲಾದೀತೆ……ಆಗಿನ ಪ್ರಾಕೃತಿಕ ಪರಿಸರದೊಂದಿಗೆ ಬೆಸೆದುಕೊಂಡಿದ್ದ ಜೀವದ ಅಂಟು-ನಂಟು ನೆನೆವುದೇ ವಿಸ್ಮಯ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: