-ವಿ ಗಾಯತ್ರಿ ವಿ ಗಾಯತ್ರಿ ಸಹಜ ಸಾಗುವಳಿಯ ಸಂಪಾದಕರು. ಹೊಸ ಸಂಚಿಕೆ ಹೊರಬಂದಿದ್ದು ಅದರ ಆಯ್ದ ಒಂದು ಲೇಖನ ಇಲ್ಲಿದೆ- ಕಳೆದ ವರ್ಷ ಉಜ್ಜಿನಿಯ ಮರುಳು ಸಿದ್ದೇಶ್ವರನ ತೈಲಾಭಿಷೇಕದಂದು ೨೫ಕ್ಕೂ ಹೆಚ್ಚು ಗ್ರಾಮಗಳ ಎರಡು ಸಾವಿರಕ್ಕೂ ಮಿಕ್ಕಿ ಕುಟುಂಬಗಳು ಸಾಮೂಹಿಕವಾಗಿ ತರಕಾರಿ ಬೀಜ ಹಾಕಿ ಕೈತೋಟದ ಹಬ್ಬ ಆಚರಿಸಿದ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ಬರೆಯಲಾಗಿತ್ತು. ನಂತರದ ದಿನಗಳಲ್ಲಿ ಪ್ರತಿಯೊಂದು ಕುಟುಂಬಗಳಿಗೂ ಅವರಿಗೆ ಲಭ್ಯವಿರುವ ಸಂಪನ್ಮೂಲ, ಜಾಗಗಳನ್ನು ಆಧರಿಸಿ ತಮ್ಮದೇ ಕೈತೋಟದ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಒತ್ತಾಸೆ ನೀಡಿದ ಪರಿಣಾಮವಾಗಿ ಪ್ರತಿ ಕುಟುಂಬಕ್ಕೂ ಕನಿಷ್ಟ ೬ ತಿಂಗಳು ತರಕಾರಿ ಪೂರೈಕೆಯಾಗಿತ್ತು.
ಅನೇಕರು ವ್ಯವಸ್ಥಿತ ಕೈತೋಟ ನಿರ್ಮಾಣ ಮಾಡಿಕೊಂಡು ವರ್ಷವಿಡೀ ಒಂದಲ್ಲಾ ಒಂದು ತರಕಾರಿ ಪಡೆದದ್ದೇ ಅಲ್ಲದೆ ಹೆಚ್ಚುವರಿ ತರಕಾರಿ ಮಾರಾಟ ಮಾಡಿ ಕೆಲ ಸಾವಿರ ರೂಪಾಯಿಗಳ ಆದಾಯವನ್ನೂ ಗಳಿಸಿದ್ದ ಕುರಿತು ಕೂಡ ಮುಂದಿನ ಸಂಚಿಕೆಗಳಲ್ಲಿ ಬರೆದಿದ್ದೆವು. ವ್ಯವಸ್ಥಿತವಾಗಿ ತರಕಾರಿ ಬೀಜ ಸಂಗ್ರಹ ಮತ್ತು ಸಂಪರ್ಕ ಮಾಡಿದ್ದರ ಪರಿಣಾಮ ಒಂದೇ ವರ್ಷದಲ್ಲಿ ಈ ಪ್ರದೇಶದ ರೈತ ಕುಟುಂಬಗಳಲ್ಲಿ ಕಣ್ಮರೆಯಾಗಿದ್ದ ೨೫-೩೦ ಥರದ ಸೊಪ್ಪು ಮತ್ತು ತರಕಾರಿ ಬೀಜಗಳು ಪ್ರತಿಯೊಬ್ಬರಿಗೂ ದೊರೆತಿವೆ. ಈ ವರ್ಷ ೨೦೦ ಕೆಜಿಗೂ ಹೆಚ್ಚು ಬೀಜ ಸಂಗ್ರಹವಾಗಿ ಸುಮಾರು ೫೦೦೦ ಕುಟುಂಬಗಳ ನಡುವೆ ವಿನಿಮಯಗೊಂಡಿದೆ. ತಾವು ಬೆಳೆದು ಸಂಗ್ರಹಿಸಿಕೊಂಡ ಬೀಜಗಳನ್ನು ತಮ್ಮ ಗ್ರಾಮದ ಇತರರಿಗೆ ಹಾಗೂ ಪರಊರುಗಳಲ್ಲಿರುವ ತಮ್ಮ ನೆಂಟರಿಷ್ಟರಿಗೆಲ್ಲ ಹಂಚಿ, ಅವರಿಗೂ ಬೀಜ ಹಾಕುವಂತೆ ಪ್ರೇರೇಪಿಸಿದ್ದರ ಪರಿಣಾಮವಾಗಿ ಈ ವರ್ಷ ೫೦೦೦ಕ್ಕೂ ಹೆಚ್ಚು ಕುಟುಂಬಗಳು ಮೇ ೧೯ರಂದು ನಡೆದ ಮರುಳುಸಿದ್ದೇಶ್ವರನ ತೈಲಾಭಿಷೇಕದಂದು ತರಕಾರಿ ಬೀಜ ಹಾಕಿ ಕೈತೋಟದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಮಡಕೆ, ಬಕೇಟು, ಕಲ್ಲು ಪಿಚ್ಚಿಂಗ್ ಇತ್ಯಾದಿಗಳಲ್ಲಿ ಒಂದೊಂದು ಬೀಜ ಹಾಕಿ ಮನೆ ಮಾಡಿಗೆ, ಮರಗಳಿಗೆ, ಕೊಟ್ಟಿಗೆಗೆ, ಎರೆಹುಳು ತೊಟ್ಟಿಯ ಚಪ್ಪರಕ್ಕೆ ಬಳ್ಳಿ ಹಬ್ಬಿಸಿದವರಿಂದ ಹಿಡಿದು ಸಣ್ಣ ಸಣ್ಣ ಮಡಿಗಳು, ಹತ್ತು ಇಪ್ಪತ್ತು ಚದುರಡಿಗಳ ವ್ಯವಸ್ಥಿತ ಕೈತೋಟ ಮಾಡಿಕೊಂಡವರತನಕ ಪ್ರತಿಯೊಬ್ಬರದ್ದೂ ಒಂದೊಂದು ವಿನ್ಯಾಸವೇ. ಈಗವರಿಗೆ ಅತ್ಯಂತ ಸಣ್ಣ ಜಾಗದಲ್ಲೂ ವರ್ಷ ಪೂರ್ತಿ ತರಕಾರಿ ಬೆಳೆದುಕೊಳ್ಳಬಹುದಾದ ಕಲ್ಪನೆ ಮೂಡಿದೆ. ಪ್ರತಿಯೊಂದು ಜಾತಿಯ ಬೀಜಕ್ಕೆ ಅದರದ್ದೆ ಆದ ಸೂಕ್ತ ಸ್ಥಳ ಕೊಟ್ಟು ಹಾಕಿದರೆ ಹಿಂದಿನ ವರ್ಷ ಮಾಡಿದ್ದಕ್ಕಿಂತ ಹೆಚ್ಚು ತರಕಾರಿ ಬೆಳೆಯಬಹುದು ಎಂಬುದು ಅರ್ಥವಾಗಿದೆ. ಹಾಗೆಯೇ ನಿರಂತರವಾಗಿ ಫಲ ಕೊಡುವ ಪಪಾಯದಂತಹ ಒಂದು ಹಣ್ಣಿನ ಗಿಡ, ಕರಿಬೇವಿನ ಗಿಡ, ಬಾಳೆ ಗಿಡ ಸೇರ್ಪಡೆ ಮಾಡಬೇಕು. ಜೊತೆಗೆ ಸಾಧ್ಯವಾದಷ್ಟು ಔಷಧೀಯ ಸಸ್ಯಗಳನ್ನು ಅಲ್ಲಲ್ಲಿ ಹಾಕಬೇಕು ಹೀಗೆಲ್ಲಾ ಯೋಜನೆ ಮಾಡಿಕೊಂಡಿದ್ದಾರೆ. ಈಗ ಪ್ರತಿ ಕೈತೋಟ, ಅದು ಎಷ್ಟೇ ಸಣ್ಣದಿರಲಿ, ಇಡೀ ವರ್ಷ ತರಕಾರಿ ಪಡೆದುಕೊಳ್ಳಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗುತ್ತಿದೆ. ಮರುಳುಸಿದ್ದೇಶ್ವರನ ತೈಲಾಭಿಷೇಕ ಒಂದು ನಿಮಿತ್ತವಾಗಿ ಪ್ರಾರಂಭವಾದ ಕೈತೋಟದ ಆಂದೋಲನ ಒಂದೇ ವರ್ಷದಲ್ಲಿ ಇಷ್ಟೊಂದು ವ್ಯಾಪಕವಾಗಿ ಹರಡುತ್ತದೆಂದು ನಾವು ಎಣಿಸಿರಲಿಲ್ಲ. ತೈಲಾಭಿಷೇಕದಂದು ಬೀಜ ಹಾಕಬೇಕಾದರೆ ಈ ವರ್ಷ ಕೆಲ ತಿಂಗಳುಗಳ ಹಿಂದಿನಿಂದಲೇ ಜಾಗ ಒಪ್ಪ ಮಾಡಿಕೊಂಡು, ಬೀಜ ಸಂಗ್ರಹ ಮಾಡಿಕೊಂಡು ಕಾದಿದ್ದಾರೆ. ಈ ಕೈತೋಟ ಒಂದು ರೀತಿಯಲ್ಲಿ ರೈತ ಕುಟುಂಬಗಳ ಆತ್ಮ ವಿಶ್ವಾಸವನ್ನೇ ಹೆಚ್ಚಿಸಿದೆ. ಬೆಳೆ ನಷ್ಟವಾಗಿ ಆಹಾರ ಕೊರತೆಯಾದರೂ ಕೈತೋಟವೇ ನಮ್ಮನ್ನು ಉಳಿಸೀತು ಎನ್ನುವ ಮಟ್ಟಿಗಿನ ಆತ್ಮವಿಶ್ವಾಸ ಇದು (ನೀಲಮ್ಮ ಹೇಳೋದನ್ನು ಓದಿ). ‘ಜಾತ್ರೆಗೆ ಬಂದವರಿಗೆ ಬೀಜ ಪ್ರಸಾದ’ ತಮಗೆ ಅಗತ್ಯವಾದಷ್ಟು ಇಟ್ಟುಕೊಂಡು, ಗ್ರಾಮದ ಇತರರಿಗೆ, ಬೇರೆ ಗ್ರಾಮದ ನೆಂಟರಿಷ್ಟರಿಗೆ ಹಂಚಿದ ಮೇಲೂ ಇನ್ನೂ ಸಾವಿರಾರು ಮಂದಿಗೆ ಕೊಡುವಷ್ಟು ಬೀಜ ರೈತರಲ್ಲಿ ಇರುವುದನ್ನು ಕುರಿತು ಪ್ರಯೋಗ ಪರಿವಾರವು ಚರ್ಚಿಸಿತು. ಇದನ್ನು ತೈಲಾಭಿಷೇಕ ದಂದು ಸೇರುವ ನೂರಾರು ಗ್ರಾಮಗಳ ಬಂಧುಗಳಿಗೆ ‘ಪ್ರಸಾದ’ದ ರೂಪದಲ್ಲಿ ಏಕೆ ಕೊಡಬಾರದು ಎಂದು ಕೆಲವರು ವಿನೂತನ ಸಲಹೆಯೊಂದನ್ನು ನೀಡಿದರು. ಕೈತೋಟದ ಹಬ್ಬಕ್ಕೆ ಮರುಳುಸಿದ್ದೇಶ್ವರನ ತೈಲಾಭಿಷೇಕ ನಿಮಿತ್ತವಾಗುವದಾದರೆ ಬೀಜವು ಪ್ರಸಾದವಾಗುವುದರಲ್ಲಿ ತುಂಬಾ ಅರ್ಥವಿದೆ ಎಂದು ಅನೇಕ ರೈತರು ಅಭಿಪ್ರಾಯಪಟ್ಟರು. ೨೦-೩೦ ಕೆಜಿ ಹತ್ತಾರು ಥರದ ತರಕಾರಿ ಬೀಜಗಳನ್ನು ಮಿಶ್ರ ಮಾಡಿ ಹೊತ್ತುಕೊಂಡು ಪ್ರಯೋಗ ಪರಿವಾರದ ಕೆಲ ಸದಸ್ಯರು ಮತ್ತು ಇಕ್ರಾ ಕಾರ್ಯಕರ್ತರು ಜಾತ್ರೆಗೆ ನಡೆದೆವು. ಬೀಜ ಪ್ರಸಾದದ ಮಹತ್ವವನ್ನು ಹೇಳುವ ಕರಪತ್ರವನ್ನು ಸಿದ್ಧಪಡಿಸಿಕೊಂಡಿದ್ದೆವು. ತೈಲಾಭಿಷೇಕದಂದು ಉಜ್ಜಿನಿಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ನಾವು ಸಾವಿರ ಜನಕ್ಕಾದರೂ ‘ಬೀಜ ಪ್ರಸಾದ’ ಕೊಡಬಹುದು ಮತ್ತು ಅದರ ಮಹತ್ವವನ್ನು ಕುರಿತು ಹೇಳಬಹುದು ಎಂಬುದು ನಮ್ಮ ಯೋಚನೆಯಾಗಿತ್ತು. ಇದೊಂದು ಅಪೂರ್ವ ಅನುಭವ. ನಮ್ಮಿಂದ ಪಡೆದ ನಾಲ್ಕು ಬೀಜವನ್ನು ಜನ ಅಕ್ಷರಶಃ ಪ್ರಸಾದದಂತೆಯೇ ಸ್ವೀಕರಿಸಿ ಕಣ್ಣಿಗೆ ಒತ್ತಿಕೊಂಡರು. ಅಷ್ಟಕ್ಕೂ ಬೀಜವೆಂಬುದು ರೈತರಿಗೆ ಪವಿತ್ರವಾದದ್ದೇ. ಕಾಲಾಂತರದಲ್ಲಿ ಕೊಂಡು ತರುವ/ಹೈಬ್ರಿಡ್ ಬೀಜಗಳಿಗೆ ಒಗ್ಗಿ ಹೋದ ಜನರಲ್ಲಿ ಅದರ ಪಾವಿತ್ರ್ಯದ ಕಲ್ಪನೆ ಮಾಸಿದಂತಾಗಿದೆ ಅಷ್ಟೆ. ಅಂದು ತಾವು ಪಡೆದ ಒಂದೇ ಒಂದು ತರಕಾರಿ ಬೀಜವನ್ನೂ ಅತ್ಯಮೂಲ್ಯವೆಂಬಂತೆ ಅವರು ಒಯ್ಯುತ್ತಿದ್ದ ರೀತಿ ಇದಕ್ಕೆ ನಿದರ್ಶನವಾಗಿತ್ತು. ಬೀಜದ ಬಗ್ಗೆ ರೈತರಲ್ಲಿರುವ ಪವಿತ್ರ ಭಾವನೆ ಕಣ್ಣ ಮುಂದೆ ಸಾಕಾರಗೊಂಡಿತ್ತು. ಬೀಜ ಕೊಟ್ಟವರ, ಪಡೆದವರ ಮನಸ್ಸುಗಳು ತುಂಬಿಬಂದಿದ್ದವು. ನೂಕು ನುಗ್ಗಲಲ್ಲಿ ಕೆಳಗಡೆ ಬಿದ್ದ ಒಂದೇ ಒಂದು ಬೀಜವನ್ನೂ ಬಿಡದೆ ಸಾಕ್ಷಾತ್ ದೇವರೇ ಕೊಟ್ಟ ಪ್ರಸಾದವೇನೋ ಎಂಬಷ್ಟು ಭಕ್ತಿಯಿಂದ ಆರಿಸಿಕೊಂಡು ಇಟ್ಟುಕೊಳ್ಳುತ್ತಿದ್ದರು.ಇವರೆಲ್ಲರಿಗೂ ಈ ಬೀಜವನ್ನು ಹಾಕಿ ಬೆಳೆಸಿ ತರಕಾರಿಯನ್ನು ಸಂತೃಪ್ತಿಯಾಗಿ ಉಂಡು ಹೆಚ್ಚಿಗೆ ಸಿಕ್ಕಿದ ನಾಲ್ಕು ಬೀಜವಾದರೂ ಸರಿ, ಮುಂದಿನ ವರ್ಷದ ಹಂಚಿಕೆಗಾಗಿ ತಂದು ಕೊಡುವಂತೆ ಪ್ರಯೋಗ ಪರಿವಾರದವರು ಹೇಳುತ್ತಿದ್ದರು. ಹೀಗಾಗಿ ಬೀಜ ಪ್ರಸಾದ ಸಿಕ್ಕದೆ ನಿರಾಶರಾದ ಎಲ್ಲರಿಗೂ ಮುಂದಿನ ವರ್ಷ ತಪ್ಪದೆ ಬೀಜ ಸಿಗುತ್ತದೆಯೆಂಬುದು ಇವರ ಇಂಗಿತವಾಗಿತ್ತು. ಹಾಗೆಯೇ ಮುಂಬರುವ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಇನ್ನೂ ನೂರಾರು ಕೈತೋಟಗಳು ಮೈದುಂಬಿ ಬರುವುದನ್ನು ಕೂಡ ನಿರೀಕ್ಷಿಸಬಹುದಾಗಿದೆ. ಬೆಳೆ ಹೋದರೆ ಏನಂತೆ? ಕೈತೋಟ ಇದೆಯಲ್ಲ! ನನಗೆ ಇರುವುದು ಒಂದೂವರೆ ಎಕರೆ ಒಣ ಜಮೀನು. ಕಳೆದ ಎರಡು ವರ್ಷದಲ್ಲಿ ಮಳೆ ಬರುವುದು, ಹೋಗುವುದು ಏನೂ ನಂಬಿಕೆ ಇಲ್ಲದ ಹಾಗೆ ಆಗಿ ನಮಗೆ ಪೈರುಗಳು ಕೈಸೇರಿಲ್ಲ. ಕುಟುಂಬಕ್ಕೆ ಬೇಕಾದ ಆಹಾರ ಪದಾರ್ಥಗಳು ಸಿಗುವುದು ಬಲು ಕಷ್ಟವಾಗುತ್ತಿದೆ. ಇನ್ನು ಮನೆಗೆ ಬೇಕಾದ ತರಕಾರಿಯನ್ನೂ ಕೊಂಡು ತರಬೇಕಾದರೆ ಜೀವನ ನಡೆಸುವುದೇ ಕಷ್ಟ. ಆದರೆ ಕಳೆದ ವರ್ಷ ನಾವು ಮರುಳುಸಿದ್ದೇಶ್ವರನ ತೈಲಾಭಿಷೇಕದಂದು ಏನು ತರಕಾರಿ ಬೀಜಗಳನ್ನು ಹಾಕಿ ಕೈತೋಟದ ಹಬ್ಬ ಆಚರಿಸಿದೆವೋ ಆಗಿಲಿಂದ ನಮ್ಮ ಮನೆಯ ಹತ್ತಿರ ಒಂದು ಒಳ್ಳೆಯ ಕೈತೋಟ ನಿರ್ಮಾಣವಾಗಿದೆ. ಮೊದಲು ಬರೀ ಬಳ್ಳಿ ತರಕಾರಿ ಬೀಜ ಹಾಕಿ ಪ್ರಾರಂಭ ಮಾಡಿದ್ದು ನಂತರ ಇದರಲ್ಲಿ ಟೊಮಾಟೊ, ಬೆಂಡೆ, ಬದನೆ, ಹುಳಿಪಾಲಕ್, ಸಿಹಿಪಾಲಕ್, ಪುದಿನ, ಸಾರಿನ ಸೊಪ್ಪು, ಮೆಂತ್ಯೆ ಎಲ್ಲ ಹಾಕಿಕೊಂಡೆ. ಮೊದಲು ಪಾತಿಮಾಡಿ, ಆ ಪಾತಿಯಲ್ಲಯೇ ಒಂದು ವರ್ಷ ಪೂರ್ತಿ ತರಕಾರಿ ಸಿಗುವ ಹಾಗೆ ಮಾಡಿಕೊಂಡಿದ್ದೇನೆ. ಈಗ ಮನೆಗೆ ಬೇಕಾಗುವ ಎಲ್ಲ ತರಕಾರಿ ಹಾಕುತ್ತಿದ್ದೇನೆ. ನಮ್ಮಲ್ಲಿ ತರಕಾರಿಗೆ ಒಂದು ತಿಂಗಳಿಗೆ ೫೦೦-೬೦೦ ರೂ ಖರ್ಚಾಗುತ್ತಿತ್ತು. ನಾವು ವಾರದಲ್ಲಿ ೩ ದಿನ ದುಡಿದಿದ್ದು ಬರೀ ತರಕಾರಿಗೇ ಖರ್ಚಾಗುತ್ತಿತ್ತು. ಆದರೆ ಈವತ್ತು ನಾನು ತರಕಾರಿ ಕೊಳ್ಳುತ್ತಿಲ್ಲ. ನಮ್ಮ ಮನೆಗೆ ಬೇಕಾಗುವ ಎಲ್ಲಾ ತರಕಾರಿಗಳನ್ನು ನನ್ನ ಕೈತೋಟದಲ್ಲಿ ಸಮೃದ್ಧವಾಗಿ ಬೆಳೆದುಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ, ನಮ್ಮ ಮನಗೆ ಬೇಕಾದಷ್ಟು ಇಟ್ಟುಕೊಂಡು ಹೆಚ್ಚಾದದ್ದನ್ನು ಬೇರೆಯವರಿಗೆ ಕೊಡುತ್ತೇನೆ, ಮಾರಾಟ ಕೂಡ ಮಾಡುತ್ತೇನೆ. ಹೀಗೆ ನಾನು ತಿಂಗಳಿಗೆ ೫೦೦-೬೦೦ ರೂ. ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದೇನೆ. ಇದೆಲ್ಲಾ ಸಾಧ್ಯವಾಗಿರುವುದು ಪ್ರಯೋಗ ಪರಿವಾರದಲ್ಲಿ ಕೈತೋಟದ ಹಬ್ಬ ಮಾಡಲು ಕೈಗೊಂಡ ತೀರ್ಮಾನದಿಂದ. ಆ ನಂತರ ಉತ್ತಮ ಕೈತೋಟ ಮಾಡಲು ‘ಇಕ್ರಾ’ದವರಿಂದ ಸಿಕ್ಕಿದ ಮಾರ್ಗದರ್ಶನ. ಮೊದಲು ನನ್ನ ಹತ್ತಿರ ತರಕಾರಿ ಬೀಜಗಳಿರಲಿಲ್ಲ. ಕಳೆದ ವರ್ಷ ಇಕ್ರಾ ಕಾರ್ಯಕರ್ತರು ಬೀಜ ಇರುವವರಿಂದ ಸಂಗ್ರಹಿಸಿ ಅಲ್ಲದೆ ಬೇರೆ ಕಡೆಯಿಂದ ಬೀಜ ತರಿಸಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಬೀಜ ದೊರಕುವಂತೆ ಮಾಡಿದರು. ಈಗ ನನ್ನ ಹತ್ತಿರ ೧೩, ೧೪ ತರಹದ ತರಕಾರಿ ಬೀಜಗಳಿವೆ. ಕಳೆದ ವರ್ಷ ಬೆಳೆದದ್ದನ್ನು ಈ ವರ್ಷ ಕಾಪಾಡಿಕೊಂಡು ಇನ್ನಷ್ಟು ಹೆಚ್ಚಿಗೆ ಹಾಕಿದ್ದೇನೆ.
ಧಾರ್ಮಿಕ ಕೃತಿಗಳಿಂದಲೂ ಕ್ರಾಂತಿ ಅಗುವುದು ಸಾಧ್ಯವೆಂಬುವುದಕ್ಕೆ ಸ್ಪಷ್ಟ ಉದಾಹರಣೆ- ‘ಜಾತ್ರೆಗೆ ಬಂದವರಿಗೆ ಬೀಜ ಪ್ರಸಾದ’
ನಿಜಕ್ಕೂ ಇಂತಹ ಕಾರ್ಯಕ್ರಮಗಳು ಅಗತ್ಯ ಮತ್ತು ಪರಿಸ್ಥಿತಿಯ ಅನಿವಾರ್ಯತೆ ಕೂಡಾ..
ಇಂಥಹ ಕ್ರಾಂತಿಗೆ ಕಾರಣಿಭೂತರು ಅಭಿನಂದನೆಗರ್ಹರು.
ಅದ್ಭುತ ಕಾರ್ಯಕ್ರಮ….
very good for literature interested people.