ಜಾನಕಿ ವೈದೇಹಿ ಯಾಕೆ ಆಗುತಾರೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ?

ಕಾವ್ಯನಾಮಗಳ ಕಾರ್ಯಕಾರಣ

ಗುರುಪ್ರಸಾದ್ ಕಾಗಿನೆಲೆ

ಸಮಶೀತೋಷ್ಣ

freud_gross

ಒಬ್ಬ ವ್ಯಕ್ತಿ ಕಾವ್ಯನಾಮದಿಂದ ಯಾಕೆ ಬರೆಯುತ್ತಾನೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ? ಅಂಬಿಕಾತನಯದತ್ತ, ಕಾವ್ಯಾನಂದ, ಮುದ್ದಣ, ಚದುರಂಗ, ಎಂಬ ಹೆಸರುಗಳು ಆಯಾ ವ್ಯಕ್ತಿಗಳ ನಿಜವಾದ ಹೆಸರುಗಳ ಅಸ್ತಿತ್ವದ ಜತೆಗೂ ಯಾಕೆ ಪ್ರಚಲಿತವಾಗಿರುತ್ತದೆ? ಎರಿಕ್ ಬ್ಲೇರ್ ಯಾಕೆ ಜಾರ್ಜ್ ಆರ್ವೆಲ್ ಆಗುತ್ತಾನೆ? ಜಾನಕಿ ವೈದೇಹಿ ಯಾಕೆ ಆಗುತಾರೆ? ತಮ್ಮ ಹುಟ್ಟುಹೆಸರುಗಳ ಜತೆಜತೆಗೂ ಕಾವ್ಯನಾಮಗಳೂ ಉಳಿದುಕೊಳ್ಳುವುದು ಹೇಗೆ?

ಈ ಕಾವ್ಯನಾಮ ಅನ್ನುವುದು ಮೇಲುನೋಟಕ್ಕೆ ವ್ಯಾವಹಾರಿಕ ಅಥವಾ ಕಾರ್ಯಕಾರಣ ಅನಿವಾರ್ಯ ಅನಿಸಬಹುದು. ಒಬ್ಬ ವ್ಯಕ್ತಿ ತನ್ನ ಅನಾಮಿಕತೆಯನ್ನು ಉಳಿಸಿಕೊಳ್ಳುವ ಜರೂರು ಹಲವಾರಿರಬಹುದು. ಕೆಲವರಿಗೆ ತಾವು ಕೆಲಸ ಮಾಡುವ ಸಂಸ್ಥೆಗೆ ನಿಷ್ಠನಾಗಿ ಇರುವ ಜವಾಬ್ದಾರಿಯೂ ಇರಬಹುದು. ಇನ್ನೂ ಹಲವರು ಅನೇಕ ಪ್ರಕಾರಗಳಲ್ಲಿ ಬರೆಯತೊಡಗಿದಾಗ ಆಯಾ ಪ್ರಕಾರಕ್ಕೆ ಬೇಕಾದ ಅಂಕಿತನಾಮಗಳನ್ನು ಇಟ್ಟುಕೊಳ್ಳುವುದು ಸಹಜವೂ ಅನಿಸಬಹುದು.

ಡಾನಾಲ್ಡ್ ವೆಸ್ಟ್‌ಲೇಕ್ ಅನ್ನುವ ಅನೇಕ ಕ್ರೈಮ್ ಥ್ರಿಲ್ಲರ್‌ಗಳನ್ನು ರೆಯುವ ಕಾದಂಬರಿಕಾರನೊಬ್ಬ ತಾನು ಬೇರೆಬೇರೆ ಹೆಸರಿನಲ್ಲಿ ಏಕೆ ಬರೆದೆ ಎಂದು ಸಮಾಜಾಯಿಷಿಗಳನ್ನು ಸ್ವಾರಸ್ಯಕರವಾಗಿ ಸಮರ್ಥಿಸಿಕೊಳ್ಳುತ್ತಾನೆ. “ನಾನು ಬರೆಯಲು ಶುರುಮಾಡಿದ ಹೊಸತರಲ್ಲಿ ಬರಹವನ್ನು ಬಹಳ ಪ್ರೀತಿಸುತ್ತಿದ್ದೆ. Like any new lover I used to do it a lot ,ಒಂದೇ ಸಂಚಿಕೆಯಲ್ಲಿ ನನ್ನ ಎರಡು ಅಥವಾ ಮೂರು ಕಥೆಗಳು ಪ್ರಕಟವಾಗಲು ಶುರುವಾದಾಗ ಸಂಪಾದಕರಿಗೆ ಬೇರೆಬೇರೆ ಹೆಸರಿನಲ್ಲಿ ನನ್ನ ಬರಹಗಳನ್ನು ಪ್ರಕಟಿಸುವುದು ಅನಿವಾರ್ಯವಾಯಿತು. ಅವರಿಗೆ ಅದು ಅಷ್ಟು ಕಷ್ಟ ಅಥವಾ ಕೂಡದು ಅನಿಸಲೇ ಇಲ್ಲ. ಒಟ್ಟು ಸ್ವಾರಸ್ಯಕರವಾದ ಕತೆಯಿದ್ದು ಆಯಾ ಹೆಸರಿಗೂ ಮತ್ತು ಶೈಲಿಗೂ ಇದ್ದ ಸಂಬಂಧದ ಎಳೆ ಮುಂದುವರೆಯುತ್ತಾ ಹೋದರೆ ಸಾಕಾಗಿತ್ತು”

ಆತ ಕೊಡುವ ಇನ್ನೊಂದು ಕಾರಣ ಇನ್ನೂ ಕುತೂಹಲಕರವಾಗಿದೆ. ಅವನ ಪ್ರಕಾರ ಇದೊಂದು ಮಾರುಕಟ್ಟೆಯ ತಂತ್ರ. ಕಾರುಕಂಪೆನಿಗಳ ಮಾರುಕಟ್ಟೆಯ ಸ್ಟ್ರಾಟೆಜಿಯಷ್ಟೇ ತರ್ಕಬದ್ಧವಾದದ್ದು. ಉದಾಹರಣೆಯನ್ನು ನಮ್ಮ ಸಂದರ್ಭಕ್ಕೆ ಸಮೀಕರಿಸಿಕೊಂಡರೆ ಸ್ಥೂಲವಾಗಿ ಹೀಗೆ ಹೇಳಬಹುದೇನೋ-ಟಾಟಾ ಕಂಪೆನಿಯವರೇ ಸಫಾರಿಯನ್ನೂ ಮಾಡುವುದು ಸುಮೋವನ್ನೂ ಮಾಡುವುದು, ಇಂಡಿಕಾ, ಇಂಡಿಗೋ,ನ್ಯಾನೋಗಳನ್ನೂ ಮಾಡುವುದು. ಹಾಗೆಯೇ ಟೊಯೋಟಾದವರೇ ಲ್ಯಾಂಡ್ ಕ್ರುಯ್‌ಸರ್ ಅನ್ನೂ ಮಾಡುತ್ತಾರೆ, ಕರೋಲಾವನ್ನೂ ಮಾಡುತ್ತಾರೆ. ಬೇರೆಬೇರೆ ಕಾರುಗಳನ್ನು ಬೇರೆಬೇರೆ ವರ್ಗದ ಜನ ಉಪಯೋಗಿಸುತ್ತಿದ್ದರೂ ಗ್ರಾಹಕರೆಲ್ಲರಿಗೂ ಇದರ ತಯಾರಕ ಟೊಯೋಟ ಕಂಪೆನಿಯೇ ಎಂದು ಗೊತ್ತಿರುತ್ತದೆ. ತಮಗೆ ಬೇಕಾದನ್ನು ಕಂಪೆನಿ ಕೊಟ್ಟಿರುವುದರಿಂದ ಎಲ್ಲರೂ ಆದಷ್ಟು ಈ ಕಂಪೆನಿಗೆ ನಿಷ್ಟರಾಗಿರುತ್ತಾರೆ. ಟೊಯೋಟಾ ಕಂಪೆನಿಗೂ ಎರಡೂ ವರ್ಗದ ಗ್ರಾಹಕರನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ಇಬ್ಬರನ್ನೂ ತೃಪ್ತಿಪಡಿಸಲು ತಮ್ಮ ಪ್ರಯತ್ನವನ್ನು ಕಂಪೆನಿ ಕೂಡ ಮಾಡುತ್ತಿದೆ. ಗ್ರಾಹಕರೂ ಖುಷಿಯಾಗಿದ್ದಾರೆ. ಇದೊಂದು ರೀತಿಯ ಗೆಲ್ಲು-ಗೆಲ್ಲು ಸನ್ನಿವೇಶ.

ಆಗ ಟೊಯೋಟಾ ಕಂಪೆನಿಯವರು ತಮ್ಮ ಕರೋಲಾ, ಕ್ಯಾಮ್ರಿ ಅಥವಾ ಲ್ಯಾಂಡ್ ಕ್ರೂಸರ್‌ಗಳ ಜನಪ್ರಿಯತೆಯನ್ನು ನಂಬಿ ಇದ್ದಕ್ಕಿದ್ದಹಾಗೆ ಲೆಕ್ಸಸ್‌ನ ಅರ್ ಎಕ್ಸ್ ೩೩೦ ಯಂತಹ ಒಂದು ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡುತ್ತಾರೆ. ಈ ರೀತಿಯ ತಂತ್ರ ಬೇರೊಂದು ಗುಂಪಿನ ಗ್ರಾಹಕವರ್ಗವನ್ನೇ ಸೃಷ್ಟಿಸುತ್ತದೆ. ತನ್ನ ಬೇರೆ ಉತ್ಪನ್ನಗಳ ಗುಣಮಟ್ಟದಿಂದ ಜನಪ್ರಿಯವಾಗಿರುವ ಟೊಯೋಟಾದವರದ್ದೇ ಕಾರೆಂದು ಮಿನಿಮಮ್ ಗ್ಯಾರಂಟಿ ಲೆಕ್ಸಸ್ಸಿಗೆ ಇದ್ದೇ ಇರುತ್ತದೆ.

ಆದರೆ ಟೊಯೋಟಾ ಕಂಪೆನಿಯವರಿಗೂ ಗೊತ್ತು, ತಮ್ಮ ಕಂಪೆನಿಯ ಉಳಿಗಾಲವಿರುವುದು ಹೆಚ್ಚುಹೆಚ್ಚು ಕರೋಲ ಬ್ರಾಂಡನ್ನು ಮಾರಿದಾಗ ಮಾತ್ರ ಎಂದು. ಈ ಹೊಸಾ ಕಾರು ತಮ್ಮ ಶ್ರೀಮಂತ ಗ್ರಾಹಕರ ತೃಪ್ತಿಗೆ ಮಾತ್ರ.

ಡಾನಲ್ಡ್ ಬರೆಯುವುದು ಥ್ರಿಲ್ಲರ್‌ಗಳನ್ನು. ಶುದ್ಧ, ಉದ್ದಾಮ ಸಾಹಿತಿಗಳು ಇವನನ್ನು ಸಾಹಿತಿ ಎಂದೂ ಒಪ್ಪಿಕೊಳ್ಳುವುದಿಲ್ಲ. ಇರಲಿ, ನನಗೆ ಕುತೂಹಲವೆನಿಸಿದ್ದು ಈತನ ನಾನಾ ರೀತಿಯ ಪರಕಾಯ ಪ್ರವೇಶ. ಈತ ಅರವತ್ತರ ದಶಕದಲ್ಲಿ ಬೇರೆಬೇರೆ ಹೆಸರುಗಳಲ್ಲಿ ಸಣ್ಣಕತೆಗಳನ್ನು ಬರೆಯುತ್ತಿದ್ದ. ನಂತರ ಈತನಿಗೆ ಒಂದು ಕಾದಂಬರಿಯನ್ನು ಬರೆಯಬೇಕು ಅನ್ನಿಸಿದಾಗ ರಿಚರ್ಡ್ ಸ್ಟಾರ್ಕ್ ಎಂಬ ಹೆಸರಿನಲ್ಲಿ “ದಿ ಹಂಟರ್” ಎಂಬ ಹೆಸರಿನ ಕಾದಂಬರಿಯನ್ನು ಬರೆದು ಗೋಲ್ಡ್ ಮೆಡಲ್ ಎಂಬ ಆಗಿನ ಒಂದು ಪ್ರಸಿದ್ಧ ಪ್ರಕಾಶನ ಸಂಸ್ಥೆಗೆ ಕಳಿಸಿದ್ದನಂತೆ. ಆದರೆ, ಆ ಪ್ರಕಾಶನ ಸಂಸ್ಥೆಯವರು ಈ ಕಾದಂಬರಿಯನ್ನು ತಿರಸ್ಕರಿಸಿದರು. ಇದರ ಕೇಂದ್ರ ಪಾತ್ರದ ಹೆಸರು ಪಾರ್ಕರ್ ಎಂದು. ಇದೇ ಪುಸ್ತಕವನ್ನು ಪಾಕೆಟ್ ಬುಕ್ಸ್ ಎಂಬ ಪ್ರಕಾಶನ ಸಂಸ್ಥೆ ಕಾದಂಬರಿಯನ್ನಾಗಿ ಪ್ರಕಟಿಸಿದ್ದೇ ಅಲ್ಲದೇ , ಪಾರ್ಕರನನ್ನೇ ಕೇಂದ್ರಪಾತ್ರವಾಗಿಟ್ಟುಕೊಂಡು ವರ್ಷಕ್ಕೆ ಮೂರು ಕಾದಂಬರಿ ಬರೆದುಕೊಡುತ್ತೀರಾ ಎಂದು ಕೇಳಿದರಂತೆ. ಆದರೆ ಆ ಪ್ರಕಾಶನ ಸಂಸ್ಥೆಯ ಒಂದು ಕರಾರೆಂದರೆ ಈ ಪಾರ್ಕರ್ ಸರಣಿಯ ಕಾದಂಬರಿಗಳೆಲ್ಲಾ ರಿಚರ್ಡ್ ಸ್ಟಾರ್ಕ್ ಎಂಬುವವನ ಹೆಸರಿನಲ್ಲಿಯೇ ಬರೆಯಬೇಕು ಎಂದು. ಈತ ಅದೇ ಹೆಸರಲ್ಲಿ ಅನೇಕ ಜನಪ್ರಿಯ ಕಾದಂಬರಿಗಳನ್ನು ಬರೆದ. (ಹಾಲಿವುಡ್ಡಿನ ಬ್ಲಾಕ್‌ಬಸ್ಟರ್ “ಪಾಯಿಂಟ್ ಬ್ಲಾಂಕ್” ಎನ್ನುವ ಸಿನೆಮಾ ಇವನ ಕಾದಂಬರಿಯನ್ನೇ ಅದರಿಸಿದ್ದು. ನಂತರ ಇತ್ತೀಚಿನ ದಿನಗಳಲ್ಲಿ ಮೆಲ್ ಗಿಬ್ಸನ್ ಇದೇ ಕಾದಂಬರಿಯನ್ನು ರ‍್ಯಾನ್ಸಮ್ ಎಂಬ ಹೆಸರಲ್ಲಿ ತಯಾರಿಸಿದ್ದ)

ಹನ್ನೆರಡು ವರ್ಷ ರಿಚರ್ಡ್ ಸ್ಟಾರ್ಕ್ ಎನ್ನುವ ಹೆಸರಿನಲ್ಲಿ ಈತ ಎಷ್ಟು ಬರೆದಿದ್ದ ಎಂದರೆ ಈತ ತನ್ನ ಹೆಸರಿಗಿಂತಲೂ ರಿಚರ್ಡ್ ಸ್ಟಾರ್ಕ್ ಎಂಬ ಹೆಸರಿನಲ್ಲಿಯೇ ಎಲ್ಲ ಕಡೆ ಪರಿಚಿತನಾಗಿದ್ದ. ಈತ ಎಲ್ಲಿಗೆ ಹೋದರೂ ಪಾಯಿಂಟ್ ಬ್ಲಾಂಕ್ ಬರೆದ ರಿಚರ್ಡ್ ಸ್ಟಾರ್ಕ್ ನಾನೇ ಎಂದು ಪರಿಚಯಮಾಡಿಕೊಳ್ಳುವ ಅನಿವಾರ್ಯತೆ ಇವನಿಗೆ ಬಂದಿತ್ತು.

ಎಲ್ಲ ಸೃಜನಶೀಲ ಕ್ರಿಯೆಯಂತೆ ರಿಚರ್ಡ್ ಸ್ಟಾರ್ಕನ ಬರವಣಿಗೆಗೂ ಒಂದು ಮಿತಿಯಿತ್ತು. ಈತನ ಹೀರೋ ಪಾರ್ಕರ್ ಬಡವಾಗಹತ್ತಿದ್ದ. ಸ್ಟಾರ್ಕ್ ತನ್ನ ಬರವಣಿಗೆಯ ಮಜಾ ಕಳೆದುಕೊಂಡಿದ್ದ. ನಂತರ ಇನ್ನು ಬರೆಯಲಾರೆ ಎನ್ನಿಸಿದಾಗ ರಿಚರ್ಡ್ ಸ್ಟಾರ್ಕ್ ಎನ್ನುವ ಹೆಸರಿನಲ್ಲಿ ಬರೆಯುವುದನ್ನು ಈತ ನಿಲ್ಲಿಸಿದ.

ಇಷ್ಟು ಹೊತ್ತಿಗೆ ವೆಸ್ಟ್‌ಲೇಕ್‌ನ ಹೆಸರು ಬೇರೇ ಇನ್ನಿತರ ಬರಹಗಳಿಂದ ಜನಪ್ರಿಯವಾಗಿತ್ತು. ಅಷ್ಟೇ ಅಲ್ಲ ಇನ್ನೂ ಬೇರೆಬೇರೆ ಹೆಸರುಗಳಲ್ಲಿ ಈತ ಬರೆಯುವುದನ್ನು ಮುಂದುವರೆಸಿದ್ದ. ಆದರೆ ಸ್ಟಾರ್ಕ್ ತನ್ನ ಬರಹದ ಹದವನ್ನು ಕಳೆದುಕೊಂಡಿದ್ದ. ಆಗ ಏವನ್ ಅನ್ನುವ ಪ್ರಕಾಶನ ಸಂಸ್ಥೆ ಈ ಸ್ಟಾರ್ಕ್ ಬರೆದ ಕಾದಂಬರಿಗಳನ್ನು ಪ್ರಕಟಿಸಲು ಮುಂದಾಯಿತು. ಆದರೆ ಅವರು ವೆಸ್ಟ್‌ಲೇಕ್ ನ ಮೂಲಹೆಸರಿನಲ್ಲಿಯೇ ಪ್ರಕಟಿಸುತ್ತೇವೆ ಎಂದು ಹಟಹಿಡಿದಿದ್ದರು. ಅವರ ಪ್ರಕರ ಸ್ಟಾರ್ಕ್‌ನ ಹೆಸರಿನ ಜಾದೂ ಮುಗಿದಿತ್ತು ಅದೇ ಪಾರ್ಕರ್ ಸರಣಿಯ ಕಾದಂಬರಿಗಳು ವೆಸ್ಟ್‌ಲೇಕ್‌ನ ಹೆಸರಲ್ಲಿ ಪ್ರಕಟಿಸಲ್ಪಟ್ಟವು.

ನಂತರ ಹದಿನೈದು ವರ್ಷಗಳ ನಂತರ ಯಾವುದೋ ಒಂದು ಪಾರ್ಕರ್ ಪಾತ್ರವಿರುವ ಚಿತ್ರಕ್ಕೆ ಚಿತ್ರಕತೆ ಬರೆದ ವೆಸ್ಟ್‌ಲೇಕ್‌ಗೆ ಆ ಚಿತ್ರದ ನಿರ್ದೇಶಕ ಈ ಚಿತ್ರದ ಚಿತ್ರಕತೆಗಾರನ ಹೆಸರನ್ನು ರಿಚರ್ಡ್ ಸ್ಟಾರ್ಕ್ ಎಂದೇ ಹಾಕಬೇಕು ಎಂದು ಒತ್ತಾಯಿಸಿದ. ಏಕೆಂದರೆ ಪಾರ್ಕರ್ ಸರಣಿಯ ಕಾದಂಬರಿಗಳು ಸ್ಟಾರ್ಕನ ಹೆಸರಿನ ಜತೆಗೆ ಥಳಕು ಹಾಕಿಕೊಂಡುಬಿಟ್ಟಿಯಾಗಿತ್ತು. ಆದರೆ ಒಂದು ಸಣ್ಣ ತೊಂದರೆಯಿತ್ತು. ಹಾಲಿವುಡ್ ಚಿತ್ರಕ್ಕೆ ಚಿತ್ರಕತೆ ಬರೆಯುವವರ”ರೈಟರ್ಸ್ ಗಿಲ್ದ್” ಅನ್ನುವ ಬರಹಗಾರರ ಸಂಘದ ಸದಸ್ಯರಾಗಬೇಕು. ಅದಕ್ಕೆ ವೆಸ್ಟ್‌ಲೇಕ್ ಸದಸ್ಯನಾಗಿದ್ದನೇ ಹೊರತು ಸ್ಟಾರ್ಕ್ ಅಲ್ಲ. ಹೀಗೆ ಯಾವ ಜನಪ್ರಿಯ ಹೆಸರಿನಲ್ಲಿ ಆತ ಈ ಪಾರ್ಕರ್ ಎಂಬ ಪಾತ್ರವನ್ನು ಸೃಷ್ಟಿಸಿದ್ದನೋ ಅದೇ ಹೆಸರಿನಲ್ಲಿ ಈತ ತನ್ನದೇ ಸಿನೆಮಾಕ್ಕೆ ಚಿತ್ರಕತೆ ಬರೆಯಲಾಗಲಿಲ್ಲವಂತೆ. (ನಂತರ ಈ ಸಣ್ಣ ತೊಡಕನ್ನು ಆತ ಹೇಗೋ ನಿವಾರಿಸಿಕೊಂಡ)

ಒಬ್ಬ ವ್ಯಕ್ತಿ ತಾನು ಬರೆದ ಬರಹಗಳ, ಕಾದಂಬರಿಗಳ ಮೇಲೆ ಹಕ್ಕು ಸಾಧಿಸಲು ಒದ್ದಾಡಬೇಕಾಗಿತ್ತು. ಈತ ಹೇಳುತ್ತಾನೆ. “ಕೆಲವೊಮ್ಮೆ ನನಗನಿಸುತ್ತದೆ, ನನಗೆ ನಾನು ರಿಚರ್ಡ್ ಸ್ಟಾರ್ಕ್ ಎಂದುಕೊಂಡಿದ್ದಾಗ ಮಾತ್ರ ಆ ಪಾರ್ಕರ್ ಪಾತ್ರವನ್ನು ಸೃಷ್ಟಿಸಲಾಗುತ್ತಿತ್ತೇನೋ. ಹೆಚ್ಚು ಹೆಚ್ಚು ವೆಸ್ಟ್‌ಲೇಕ್ ನಾನಾಗುತ್ತಿದ್ದಾಗ ಈ ಸ್ಟಾರ್ಕ್ ಅನ್ನುವ ಬರಹಗಾರನೊಳಗೆ ನನಗೆ ಪರಕಾಯ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ, ನಾನು ಹೆಚ್ಚು ಸ್ಟಾರ್ಕ್ ಆಗಿದ್ದಾಗ ಬಹಳ ಸಮಯ ನನ್ನ ಹೀರೋ ಪಾರ್ಕರನ ಜತೆ ಕಾಲ ಕಳೆಯುತ್ತಿದ್ದ ಕಾರಣವೇನೋ, ನಾನು ವೆಸ್ಟ್‌ಲೇಕ್ ಆಗಲು ಸಾಧ್ಯವೇ ಆಗಲಿಲ್ಲ. ಒಂದರ ಅಸ್ತಿತ್ವವನ್ನು ಪಡೆಯಲು ಇನ್ನೊಂದನ್ನು ಕೊಲ್ಲಬೇಕಾಗಿತ್ತು.”

ಬರಹವನ್ನೇ ವೃತ್ತಿಮಾಡಿಕೊಂಡವರಿಗೆ ಈ ಅಂಕಿತನಾಮಗಳು, ಕಾವ್ಯನಾಮಗಳು ಹೀಗೆ ಕೆಲವೊಮ್ಮೆ ಅನಿವಾರ್ಯವಾಗಬಹುದು. ಮೊದಲೇ ಹೇಳಿದಹಾಗೆ ಅನೇಕ ವ್ಯಾವಹಾರಿಕ ಕಾರಣಗಳು ಇಲಿ ಮುಖ್ಯವಾಗಬಹುದು. ಆದರೆ ತನ್ನ ಅಸ್ಮಿತೆಯನ್ನೇ ಮರೆಸುವ ಎರಡೆರಡು ಆತ್ಮಗಳನ್ನು ಜೀವಿಸುವ ಈ ವೆಸ್ಟ್‌ಲೇಕನ ಕತೆ ಒಂದು ವಿಚಿತ್ರ ಎನಿಸಬಹುದು. ಇನ್ನೂ ರೋಚಕವಾದ ವಿಷಯವೆಂದರೆ ವೆಸ್ಟ್‌ಲೇಕೇ ಸ್ಟಾರ್ಕ್ ಎನ್ನುವುದು ಬಹಳ ಜನಕ್ಕೆ ಗೊತ್ತಿತ್ತು.

ಶ್ರೀನಿವಾಸ, ಕಾವ್ಯಾನಂದ, ಚದುರಂಗ, ಶ್ರೀರಂಗ-ಈ ಕಾವ್ಯನಾಮಗಳು ಹೇಗೆ ಬಂದ ಸಂದರ್ಭ ನನಗೆ ಗೊತ್ತಿಲ್ಲ. ಆದರೆ ಈ ರೀತಿಯ ಅಸ್ಮಿತೆಯ ಪ್ರಶ್ನೆ ಈ ಕಾವ್ಯನಾಮಗಳನ್ನಿಟ್ಟುಕೊಂಡವರನ್ನು ಕಾಡಿತ್ತೋ ಇಲ್ಲವೋ ಎನ್ನುವುದೂ ನನಗೆ ಗೊತ್ತಿಲ್ಲ. ಮಾಸ್ತಿಯವರಿಗೆ ಶ್ರೀನಿವಾಸ ಎಂಬ ಹೆಸರು ಕತೆ ಬರೆಯುವ ತುರ್ತಿಗೆ ಇನ್ನೊಂದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕೆನ್ನುವ ಜರೂರಿಗಾಗಿ ಸೃಷ್ಟಿಯಾಯಿತು ಅನ್ನಿಸುವುದಿಲ್ಲ. (ಇದು ನನ್ನ ತಪ್ಪುಗ್ರಹಿಕೆಯಾಗಿದ್ದರೆ ಕ್ಷಮಿಸಿ) ಇದು ಭಾವನಾತ್ಮಕವಾಗಿ ಮುಖ್ಯವಾಗಿತ್ತು ಎಂದು ಮಾತ್ರ ನನಗೆ ಅನಿಸುತ್ತದೆ. ಹಾಗೆಯೇ ಕೂಡಸಂಗಮದೇವ, ಗಿರಿಧರ ಗೋಪಾಲ, ಪುರಂದರ ವಿಠಲ ಎನ್ನುವ ಕಾವ್ಯನಾಮಗಳು ಭಕ್ತಿಭಾವಗಳ ತುರ್ತೇ ಹೊರತು ಮೇಲೆ ಹೇಳಿದ ವ್ಯಾವಹಾರಿಕ ತುರ್ತಲ್ಲ.

ಕಾವ್ಯನಾಮಗಳನ್ನಿಟ್ಟುಕೊಂಡು ಬರೆಯುವುದರ ಚರಿತ್ರೆ ಬಹಳ ಹಳೆಯದು. ಹೆಂಗಸರು ಅಪರಾಧ ತನಿಖೆಗಳ ಬಗ್ಗೆ ಬರೆಯುವಾಗ ಅಥವಾ ತಮ್ಮನ್ನು ಗಂಡು ವಿಮರ್ಶಕರು ಸ್ವಲ್ಪ ಗಂಭೀರವಾಗಿ ಪರಿಗಣಿಸಲಿ ಎಂದೂ ತಮ್ಮ ನಿಜನಾಮದಲ್ಲಿ ಬರೆಯುತ್ತಿದ್ದ ಕಾಲ ಒಂದಿತ್ತು. ಔಟ್ ಆಫ್ ಆಫ್ರಿಕಾದಂತ ಕಾದಂಬರಿ ಬರೆದ ಕ್ಯಾರೆನ್ ಬ್ಲಿಕ್ಸೆನ್ ಅಥವಾ ಜನಪ್ರಿಯ ಹ್ಯಾರಿ ಪಾಟರ್ ಸರಣಿ ಬರೆದ ಜೆ.ಕೆ. ರೌಲಿಂಗ್ (ಹೆಣ್ಣು ಅಥವಾ ಗಂಡು ಎಂದು ಗೊತ್ತಾಗದೇ ಇರಲು ಈಕೆ ಜೆ.ಕೆ. ಎಂಬ ಇನಿಶಿಯಲ್‌ಗಳನ್ನು ಬಳಸಿದ್ದಳು) ಕೂಡ ಇದಕ್ಕೆ ಅಪವಾದವಲ್ಲ. ಹಾಗೆಯೇ ಪ್ರೇಮಕಥೆಗಳನ್ನು ಗಂದಸರು ಬರೆಯಬೇಕಾದರೆ ಹೆಣ್ಣು ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದ ನಿದರ್ಶನಗಳೂ ಇವೆ.

ಸದ್ಯ ಕನ್ನಡದಲ್ಲಿ ಜೋಗಿ ಎಂಬ ಹೆಸರಿನಲ್ಲಿ ಬರೆಯುತ್ತಿರುವ ಗಿರೀಶ್ ರಾವ್‌ರವರ ನದಿಯ ನೆನಪಿನ ಹಂಗು ಕಾದಂಬರಿಯಲ್ಲಿ ಕಾದಂಬರಿಯ ನಾಯಕ ರಘುನಂದನ “ಮನುಷ್ಯನಿಗೆ ಒಂದು ಹಂಬಲವಿರುತ್ತೆ. ಅಜ್ಞಾತವಾಗಿ ಉಳಿಯುವುದು ಅವನಿಗೆ ಆಗದ ಕೆಲಸ. ತಾನು ತಾನಾಗಿಯೇ ಪ್ರಕಟಗೊಳ್ಳಬೇಕು ಎನ್ನುವ ಅದಮ್ಯ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ” ಎಂದು ಒಂದು ಸಂದರ್ಭದಲ್ಲಿ ಸ್ವಗತಪಡುತ್ತಾನೆ. ಇದು ನನಗೆ ಯಾಕೆ ನೆನಪಾಗುತ್ತಿದೆಯೆಂದರೆ ಜೋಗಿಯವರು ಬೇರೆಬೇರೆ ಹೆಸರುಗಳಿಂದ ಬರೆಯುತ್ತಿದ್ದಾಗಲೇ ಅವರ ಜಾನಕಿ ಕಾಲಂ ಪುಸ್ತಕ ಪ್ರಕಟವಾಯಿತು. ಅದರ ಪುಟ್ಟ ಪರಿಚಯದಲ್ಲಿ “ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಸಾಹಿತಿ ಈಗ ಇಂvಪ್ಪಲ್ಲಿ ವಾಸಿಸುತ್ತಿದ್ದಾರೆ ಎಂಬ ಇತ್ಯೋಪರಿಗಳಿಂದ ಮುಕ್ತವಾಗುವ ಹಂಬಲ ಮತ್ತು ಅನಿವಾರ್ಯತೆಯ ಕಾರಣಗಳಿಂದ ಪರಿಚಯವನ್ನು ಜಾನಕಿ ಎಂಬಲ್ಲಿಗೆ ಸೀಮಿತಗೊಳಿಸಲಾಗಿದೆ” ಎಂದು ಬರೆಯುತ್ತಾರೆ. ಹೀಗೆ ಬರೆಯುವಾಗ ನಾವು ಕೇವಲ ಬರಹದಿಂದ ಮಾತ್ರ ಬರಹಗಾರನನ್ನು ಪ್ರೀತಿಸುತ್ತೇವೆ. ಸಾಹಿತಿಯ ನಿಜವಾದ ಅಸ್ಮಿತೆ ಯಾರಿಗೂ ಗೊತ್ತಿರದ ಕಾರಣ ಬರಹ ಮತ್ತು ಓದುಗನ ನಡುವೆ ಈ “ಸಾಹಿತಿ” ಎನ್ನುವ ಮಾನುಷಿಕ ಫ್ಯಾಕ್ಟರ್ ಅಳಿಸೇ ಹೋಗುತ್ತದೆ. ಸಾಹಿತಿಗೂ ತನ್ನನ್ನು ಮತ್ತು ತನ್ನ ಲೇಖಕರನ್ನು ಬಂಧಿಸುವುದು ತನ್ನ ಬರಹಗಳು ಮಾತ್ರ ಎಂಬ ಅರಿವು ಮಾತ್ರ ಇದ್ದಾಗ ಬರಹಕ್ಕೆ ಒಂದು ವಿಚಿತ್ರ ಅಗೋಚರ ಆಪ್ತತೆ ಬಂದುಬಿಡುತ್ತದೆ. ಆಗ ಜಾನಕಿ ಯಾರು ಅನ್ನುವುದು ಮುಖ್ಯವಾಗುವುದೇ ಇಲ್ಲ. ಜಾನಕಿಯನ್ನು ಜನ ಪ್ರೀತಿಸಿದ್ದು ಇದೇ ಕಾರಣಕ್ಕೆ.

ಬಹಳ ವರ್ಷಗಳ ಕೆಳಗೆ ಸುಧಾ ವಾರಪತ್ರಿಕೆಯ”ನೀವು ಕೇದಿರಿ?” ವಿಭಾಗದ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಿದ್ದರು ಎಂಬುದನ್ನು ಬಹಳ ಗುಪ್ತವಾಗಿಡುತ್ತಿದ್ದರು. ಉತ್ತರಿಸುವ ವ್ಯಕ್ತಿ ಸತ್ತಾಗ ಮಾತ್ರ ಆ ವ್ಯಕ್ತಿಯ ಪರಿಚಯವನ್ನು ಬಹಿರಂಗಪಡಿಸುತ್ತಿದ್ದರು. ಒಂದಿಷ್ಟುಕಾಲ ಜಿ ಪಿ ರಾಜರತ್ನಂರವರು ಈ ವಿಭಾಗಕ್ಕೆ ಉತ್ತರ ಕೊಡುತ್ತಿದ್ದರು. ಒಂದು ವಾರ ಯಾರೋ ಪ್ರಶ್ನಿಸಿದ್ದರು “ನೀವು ಸತ್ತಾಗ ಮಾತ್ರ ನೀವು ಯಾರು ಎಂದು ನಮಗೆ ಗೊತ್ತಾಗುತ್ತದೆ. ನೀವು ಯಾವಾಗ ಸಾಯುತ್ತೀರಿ?” ರಾಜರತ್ನಂರವರೂ ತುಂಟತನದಿಂದ ಏನೋ ಉತ್ತರಿಸಿದ್ದರು. ಆದರೆ ಮುಂದಿನವಾರವೇ ರಾಜರತ್ನಂರವರು ತೀರಿಕೊಂಡಿದ್ದು ತೀರ ಆಕಸ್ಮಿಕವಾದರೂ ಈ ಪ್ರಶ್ನೆಯನ್ನು ಕೇಳಿದವರ ಪಾಡು ಹೇಗಾಗಿರಬೇಡ. ಬಹಳ ನೊಂದುಕೊಂಡು ನಂತರ ಪ್ರಶ್ನೆ ಕೇಳಿದವರು ಒಪ್ಪೋಲೆಯನ್ನು ಬರೆದಿದ್ದರು. ಪಾಪ, ಇದರಲ್ಲಿ ಅವರ ತಪ್ಪೇನೂ ಇರಲಿಲ್ಲ.

ಈ ಕಾವ್ಯನಾಮಗಳ ಮೇಲೆ ನನ್ನ ಗೌರವ ಈಗ ಇನ್ನೂ ಜಾಸ್ತಿಯಾಗಿದೆ. ಒಂದು ಕಾಲದಲ್ಲಿ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಇಟ್ಟುಕೊಂಡ ಹೆಸರನ್ನು ಜನಪ್ರಿಯವಾದ ಮೇಲೆ ಮುಚ್ಚಿಟ್ಟುಕೊಳ್ಳುವುದು ಇನ್ನೂ ದೊಡ್ದ ಕೆಲಸ. ಅದು ಕೆಲವೊಮ್ಮೆ ದುಸ್ತರ ಕೂಡ

‍ಲೇಖಕರು avadhi

July 3, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

 1. akshatha.k

  ಸುಧಾದಲ್ಲಿ ನೀವು ಕೇಳಿದಿರಿ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುತಿದ್ದವರು ಜಿ.ಪಿ.ರಾಜರತ್ನಂ ಅಲ್ಲ ನವರತ್ನರಾಮ್. ಅವರಿಗೆ ಆ ಪ್ರಶ್ನೆ ಎದುರಾಗಿದ್ದು. ಚಿತ್ತ ಹೆಸರಲ್ಲಿ ಉತ್ತರ ನೀಡುತಿದ್ದ ಅವರ ನಿಜ ನಾಮಧೇಯ ತಿಳಿಯಲು ಅಭಿಮಾನಿ ಓದುಗರು ತಿಣುಕುವಂತೆ ಕೆಣಕುವಂತ ಪ್ರಶ್ನೆಗಳನ್ನು ಹಾಕುತಿದ್ದರು. ಹಾಗಾದರೂ ಚಿತ್ತ ತಮ್ಮ ನಿಜ ಹೆಸರು ಬಯಲು ಮಾಡಲಿ ಎಂದು. ಆದರೆ ನವರತ್ನರಾಮ್ ಪ್ರತಿಬಾರಿಯೂ ತಮ್ಮ ಹೆಸರು ಬಹಿರಂಗವಾಗಲು ಬಿಡದೆ ಚಾಣಾಕ್ಕ್ಷತೆಯಿಂದ ಉತ್ತರಿಸುತಿದ್ದರು. ಓದುಗರಲ್ಲಿ ತಮ್ಮ ಬಗ್ಗೆ ಕುತುಹಲ ಹೆಚ್ಚುವಂತೆ ಮಾಡುತಿದ್ದರು.

  ಪ್ರತಿಕ್ರಿಯೆ
  • Guruprasad

   ತಪ್ಪನ್ನು ತಿದ್ದಿದ್ದಕ್ಕೆ ಥ್ಯಾಂಕ್ಸ್. ಆದರೆ ನಾನು ಹೇಳಿದ ಘಟನೆ ನಡೆದದ್ದು ಬೀಚಿಯವರು ’ನೀವು ಕೇಳಿದಿರಿ?’ ವಿಭಾಗಕ್ಕೆ ಉತ್ತರಿಸುತ್ತಿದ್ದಾಗ ಎಂದು ನನ್ನ ನೆನಪು. ಸರಿಯಾಗಿ ಪರಾಂಬರಿಸದೆ ಬರೆದದ್ದಕ್ಕೆ ಕ್ಷಮೆಯಿರಲಿ. ಯಾರಾದರೂ ಸರಿಯಾಗಿ ಮಾಹಿತಿ ಗೊತ್ತಿದ್ದಲ್ಲಿ ತಿದ್ದಿ,ಮತ್ತೆ ತಪ್ಪಾಗಿ ತಿದ್ದದೇ ಸರಿಮಾಡುತ್ತೇನೆ.

   ಗುರುಪ್ರಸಾದ್

   ಪ್ರತಿಕ್ರಿಯೆ
   • laxmi machina

    navaratnaram avaru chitta hesarinalli uttarisuttiddagale prashne bandaddu. beechi samayadalli alla.

    ಪ್ರತಿಕ್ರಿಯೆ
 2. sritri

  ಜಿ.ಪಿ.ರಾಜರತ್ನಂ ಅವರು ‘ಸುಧಾ’ದಲ್ಲಿ ಬರೆಯುತ್ತಿದ್ದುದು “ವಿಚಾರ ರಶ್ಮಿ” ಎಂಬ ಅಂಕಣವನ್ನು.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ GuruprasadCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: