ಜಾರ್ಜ್ ಬುಶ್ ಕೇವಲ 259 ಸುಳ್ಳು ಹೇಳಿದರು…

gali.gif

ಗಾಳಿ ಬೆಳಕು

ನಟರಾಜ್ ಹುಳಿಯಾರ್

“ಅಮೆರಿಕಾ ಅಧ್ಯಕ್ಷಗಿರಿಯಿಂದ ಇನ್ನೇನು ಇಳಿಯಲಿರುವ ಜಾರ್ಜ್ ಬುಶ್ ಸುಮಾರು ೨೫೯ ಸುಳ್ಳು ಹೇಳಿದ್ದಾರೆ” ಎಂದು ವಾಷಿಂಗ್ಟನ್ನಿನ ಎರಡು ಸುದ್ದಿ ಸಂಸ್ಥೆಗಳ ಅಧ್ಯಯನ ಹೇಳುತ್ತದೆ. ಈ ಅಧ್ಯಯನದ ಪ್ರಕಾರ ೨೦೦೧ರಲ್ಲಿ ಅಮೆರಿಕಾದ ಮೇಲೆ ಭಯೋತ್ಪಾದಕರ ದಾಳಿಯಾದ ಮೇಲೆ ಇರಾಕಿನಿಂದ ಅಮೆರಿಕಾದ ಭದ್ರತೆಗೆ ಎಷ್ಟು ಅಪಾಯದ ಬಗ್ಗೆ ಬುಶ್ ಮತ್ತು ಅಮೆರಿಕಾದ ಉನ್ನತ ಆಡಳಿತದಲ್ಲಿರುವ ಅಧಿಕಾರಿಗಳು ೯೩೫ ಹುಸಿ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ ಜಾರ್ಜ್ ಬುಶ್ ೨೫೯ ಹುಸಿ ಹೇಳಿಕೆ ನೀಡಿ ಅಗ್ರಸ್ಥಾನದಲ್ಲಿದ್ದರೆ, ಅವರ ರಾಷ್ಟ್ರೀಯ ಕಾರ್ಯದರ್ಶಿ ಕಾಲಿನ್ ಪೊವೆಲ್ ೨೪೪ ಸುಳ್ಳು ಹೇಳಿ ಎರಡನೇ ಸ್ಥಾನದಲ್ಲಿದ್ದಾರೆ.

೧೧ ಸೆಪ್ಟೆಂಬರ್ ೨೦೦೧ರ ನಂತರದ ಎರಡು ವರ್ಷಗಳಲ್ಲಿ ಪ್ರಕಟವಾದ ಸಾರ್ವಜನಿಕ ಹೇಳಿಕೆಗಳು ೨೫ಕ್ಕೂ ಹೆಚ್ಚು ಸರ್ಕಾರಿ ವರದಿಗಳ ಮಾಹಿತಿ, ಪುಸ್ತಕಗಳು, ಭಾಷಣಗಳು ಹಾಗೂ ಸಂದರ್ಶನಗಳನ್ನು ಆಧರಿಸಿದ ಈ ಅಧ್ಯಯನ ತಲುಪಿರುವ ತೀರ್ಮಾನ ಇದು: “ಈ ಸುಳ್ಳುಗಳು ಸಾರ್ವಜನಿಕ ಅಭಿಪ್ರಾಯವನ್ನು ಪರಿಣಾಮಕಾರಿಯಾಗಿ ರೂಪಿಸಿದ ಯೋಚಿತ ಪ್ರಚಾರಗಳ ಭಾಗಗಳಾಗಿದ್ದವು ಹಾಗೂ ಅಮೆರಿಕಾವನ್ನು ಸುಳ್ಳು ಹೇಳಿಕೆಗಳ ಆಧಾರದ ಮೇಲೆ ಯುದ್ಧದತ್ತ ಕೊಂಡೊಯ್ದವು.”

ಜಾರ್ಜ್ ಬುಶ್ ಮತ್ತು ಆಡಳಿತಾಧಿಕಾರಿಗಳು “ಕೊನೇ ಪಕ್ಷ ೫೩೨ ಸಲ ಇರಾಕಿನಲ್ಲಿ ಸಮೂಹ ವಿನಾಶದ ಆಯುಧಗಳಿವೆ ಅಥವಾ ಇರಾಕ್ ಅಂಥ ಆಯುಧಗಳನ್ನು ಪಡೆಯಲೆತ್ನಿಸಿದೆ ಅಥವಾ ಹೊಂದಿದೆ” ಎಂದು ಹೇಳಿದರು. ಆದರೆ ನಂತರ ತಿಳಿದು ಬಂದದ್ದೇನೆಂದರೆ, ಇರಾಕಿನಲ್ಲಿ ಅಂಥ ಆಯುಧಗಳು ಇಲ್ಲ ಹಾಗೂ ಅಲ್ ಖೈದಾ ಜೊತೆಗಿನ ಇರಾಕ್ ಸಂಬಂಧ ಕೂಡ ಆ ರೀತಿ ಇಲ್ಲ. ಇದು ಈ ಅಧ್ಯಯನ ಮಾಡಿದ ಸಂಸ್ಥೆಯ ಚಾರ್ಲ್ಸ್ ಲೀವಿಸ್ ಹಾಗೂ ಮಾರ್ಕ್ ರೀಡಿಂಗರ ತೀರ್ಮಾನ. ಅಂದರೆ ೨೦೦೩ರಲ್ಲಿ ಇರಾಕ್ ವಿರುದ್ಧ ಯುದ್ಧ ಶುರು ಮಾಡುವುದಕ್ಕೆ ಬುಶ್ ಮತ್ತವರ ಅಧಿಕಾರಿಗಳು ಇಡೀ ದೇಶಕ್ಕೆ ಸುಳ್ಳು ಹೇಳಿದ್ದರು.

ಈ ಸುಳ್ಳುಗಳ ಪರಿಣಾಮ ಇದು: ಪೇಪರುಗಳು, ರೇಡಿಯೋಗಳು, ಟೆಲಿವಿಷನ್ ಚಾನಲ್ ಗಳು ಈ ಸುಳ್ಳುಗಳ ಆಧಾರದ ಮೇಲೆ ಕತೆಗಳನ್ನು ಬಿತ್ತರಿಸತೊಡಗಿ ಯಾರೂ ಇದನ್ನು ಪ್ರಶ್ನಿಸಿದಂಥ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆನಂತರ ಕೆಲವು ಪತ್ರಕರ್ತರು ಹಾಗೂ ಸುದ್ದಿ ಸಂಸ್ಥೆಗಳು ತಾವು ಸುಳ್ಳನ್ನು ಬಿಂಬಿಸಿದ್ದರ ಬಗ್ಗೆ ಕೊಂಚ ಆತ್ಮವಿಮರ್ಶೆ ಮಾಡಿಕೊಂಡಿವೆ. ಆದರೆ ಅಷ್ಟರಲ್ಲಿ ಅನೇಕ ಪ್ರಮಾದಗಳು ಜರುಗಿ ಹೋಗಿದ್ದವು. ಇರಾಕಿಗೆ ಅಪಾರ ನಷ್ಟವಾಗಿತ್ತು. ಈ ಬಗೆಗಿನ ವರದಿಯನ್ನು ಮೊನ್ನೆ “ಏಷ್ಯನ್ ಏಜ್” ಪ್ರಕಟಿಸಿದೆ.

ಅಮೆರಿಕಾದ ಪ್ರಜಾಪ್ರಭುತ್ವದಲ್ಲಿ ವಿಧವಿಧವಾದ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಅಮೆರಿಕಾವನ್ನು ಹೊಗಳುವವರಿಗೆ ಅದರ ಸುಳ್ಳು ಅರ್ಥವಾಗುವುದಿಲ್ಲ. ಹಾಗೆಯೇ ಅಮೆರಿಕಾವನ್ನು ಸುಮ್ಮನೆ ಬಯ್ಯುವವರಿಗೆ ಮೇಲೆ ಹೇಳಿದಂಥ ಸಂಸ್ಥೆಗಳು ಮಾಡುವ ಕ್ರಮಬದ್ಧ ಸಂಶೋಧನೆಯ ಪರಿಣಾಮ ಎಂಥದು ಎಂಬುದು ಹೊಳೆಯುವುದಿಲ್ಲ. ಅದೇ ಇಂಡಿಯಾದಲ್ಲಿ ನೋಡಿ: “ರಾಷ್ಟ್ರೀಯ ಭದ್ರತೆ”, “ಭಯೋತ್ಪಾದನೆ”, “ಉಗ್ರಗಾಮಿಗಳು”, “ಪಾಕಿಸ್ತಾನ” – ಇವೇ ಮುಂತಾದ ಪರಿಕಲ್ಪನೆಗಳನ್ನು ತೇಲಿಬಿಟ್ಟು ಬುಶ್ ನನ್ನು ಮೀರಿಸುವಂತೆ ದಿನನಿತ್ಯ ಸುಳ್ಳು ಹೇಳಬಹುದು. “ರಾಷ್ಟ್ರಭಕ್ತಿ”ಯ ಹೆಸರಿನಲ್ಲಿ ಬೊಗಳೆಗಳನ್ನು ಬಿಡಬಹುದು. ಇವತ್ತಿಗೂ ಇಂಡಿಯಾದಲ್ಲಿ ಕಾರ್ಗಿಲ್ ಯುದ್ಧ, ಪಾರ್ಲಿಮೆಂಟಿನ ಮೇಲೆ ದಾಳಿ… ಮುಂತಾದ ಪ್ರಕರಣಗಳ ಬಗ್ಗೆ ನಮ್ಮ ಮಾಧ್ಯಮಗಳು ತನಿಖಾ ವರದಿ ಇರಲಿ, ನಿಖರವಾದ ವರದಿ ಕೂಡ ಪ್ರಕಟಿಸಿದಂತಿಲ್ಲ. ಇಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಕೋಟ್ಯಂತರ ರೂಪಾಯಿಗಳ ಹಗರಣವಾದರೂ ದೇಶದ ಭದ್ರತೆಯ ಶಂಖ ಊದಿದರೆ ಸಾಕು, ಎಲ್ಲವೂ ಮಾಫಿ. “ಜನ ಸಮೂಹ ಸಣ್ಣಪುಟ್ಟ ಸುಳ್ಳಿಗಿಂತ ದೊಡ್ಡ ಸುಳ್ಳಿಗೆ ಸುಲಭವಾಗಿ ಬಲಿಯಾಗುತ್ತದೆ” ಎಂದು ಹಿಟ್ಲರ್ ತನ್ನ ಅನುಭವದ ಮೂಲಕ ಹೇಳಿದ್ದು ನಿಮಗೆ ನೆನಪಿರಬಹುದು; ಆದರೆ ಇಂಡಿಯಾದಲ್ಲಿ ದಿನನಿತ್ಯ ಅದನ್ನು ಪ್ರಯೋಗಿಸಲಾಗುತ್ತಿದೆ.

ಆದರೆ, ಆಡಳಿತಗಾರರ ಇಂಥ ಹುನ್ನಾರ ತಿಳಿಯುವ ಹೊತ್ತಿಗೆ ಹೊತ್ತು ಮೀರಿರುತ್ತದೆ. ಅಥವಾ ತಿಳಿದರೂ ಜನ ಅಸಹಾಯಕರೋ, ಸಿನಿಕರೋ ಆಗಿಬಿಡಬಹುದು. ಇಂಡಿಯಾದ ಮತೀಯವಾದಿಗಳು ಹಾಗೂ ಬಗೆಬಗೆಯ ಭ್ರಷ್ಟ ರಾಜಕಾರಣಿಗಳು ಎಂತೆಂಥ ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ ಎಂಬುದನ್ನು ನೆನೆಸಿಕೊಂಡರೆ ದಿಗ್ಭ್ರಮೆಯಾಗುತ್ತದೆ. ಇಂಥ ಸುಳ್ಳುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ವಿಶ್ಲೇಷಣೆ ಮಾಡಬಲ್ಲ ಸವಲತ್ತು ಇಂಡಿಯಾದಲ್ಲಿದ್ದರೂ ಬದ್ಧತೆ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಅಥವಾ ಸುಳ್ಳು ಬಹಿರಂಗವಾದರೂ ಸುಳ್ಳುಗಾರನಿಗಾಗಲೀ, ಜನರಿಗಾಗಲೀ ದಿಗ್ಭ್ರಮೆಯಾಗಲಿಕ್ಕಿಲ್ಲ. ಬುಶ್ ಎರಡು ವರ್ಷಗಳಲ್ಲಿ ಕೇವಲ ಇನ್ನೂರ ಐವತ್ತೊಂಬತ್ತು ಸುಳ್ಳು ಹೇಳಿದ್ದರೆ ನಮ್ಮ ರಾಜಕಾರಣಿಗಳಿಂದ ಹಿಡಿದು ಎಲ್ಲ ಬಗೆಯ ಜನ ಎರಡೇ ದಿನಗಳಲ್ಲಿ ಈ ಸುಳ್ಳಿನ ದಾಖಲೆಯನ್ನು ಹಿಂದಿಕ್ಕಬಲ್ಲರು…
“ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು” ಎಂಬ ಗಾದೆಯನ್ನು ಇಂಡಿಯಾದಲ್ಲಿ ಎಲ್ಲದಕ್ಕೂ ಅನ್ವಯಿಸುವುದರಿಂದ ಇಲ್ಲಿನ ಜನ ಬುಶ್ ನ ಸುಳ್ಳುಗಳು ಜುಜುಬಿ ಎಂದುಕೊಂಡರೆ ಆಶ್ಚರ್ಯವಲ್ಲ. ಆದರೆ ಬುಶ್ ನ ಸುಳ್ಳುಗಳು ಇನ್ನೊಂದು ದೇಶವನ್ನು ನಾಶ ಮಾಡಲು ಬಳಸಿದಂಥವು. ಆದರೆ ನಮ್ಮ “ದೇಶಭಕ್ತ” ನಾಯಕರು ಉದುರಿಸುವ ಸುಳ್ಳುಗಳು ತಮ್ಮ ದೇಶವನ್ನೇ ನಾಶ ಮಾಡಲು ಬಳಸುವಂಥವು.

ಬುಶ್ ಗಿಂತ ಯಾರು ಅಪಾಯಕಾರಿ ಹೊಳೆಯಿತೆ?

‍ಲೇಖಕರು avadhi

February 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

 1. chandina

  ಸಾಹೇಬರೇ,
  ನಮ್ಮ ನಾಯಕರು ಸುಳ್ಳಿನ ಬಾಣಗಳು ಬೀಸದಿದ್ದರೆ,
  ಮಾಧ್ಯಮಗಳು ಉಪ್ಪು ಹುಳಿ ಹಿಂಡಿ ಬಿಂಬಿಸದಿದ್ದರೆ,
  ಸಾಮಾನ್ಯ ಜನತೆಗೆ ಆಘಾತವಾಗುವುದಂತೂ ಕಚಿತ.

  ದೇಶದ ವಿನಾಶಕ್ಕೆ ನಮ್ಮ ನಾಯಕರೊಂದಿಗೆ
  ಎಲ್ಲರ ಸಹಕಾರ, ಸಮ್ಮತಿ ಯಾವುದಾದರು ಒಂದು
  ರೀತಿಯಲ್ಲಿ ಇರುವುದರಿಂದ ಆಗುತ್ತಿದೆ ಎಂದು ನನ್ನ ಅನಿಸಿಕೆ.

  ಧನ್ಯವಾದಗಳೊಂದಿಗೆ,
  ಚಂದಿನ
  http://www.koogu.blogspot.com

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: