ಜಾಲಿಗರಿಗೆ ನಮಸ್ಕಾರ…

ಬದಲಾಗುತ್ತಿದೆ ಅಂತರ್ಜಾಲ ಲೋಕ….
ಸತೀಶ್ ಚಪ್ಪರಿಕೆ
ನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಡೇ ಇಂಡಿಯನ್ ಹೊರತಂದಿರುವ ವಿಶೇಷ ಸಂಚಿಕೆಯಲ್ಲಿ ಅದರ ಸಂಪಾದಕ ಸತೀಶ್ ಚಪ್ಪರಿಕೆ ಅಂತರ್ಜಾಲದಲ್ಲಿ ನಡೆಯುತ್ತಿರುವ ಕನ್ನಡ ಸಾಹಸದ ಬಗ್ಗೆ ಕಣ್ಣೋಟ ಹರಿಸಿದ್ದಾರೆ. ಅಂತರ್ಜಾಲವೇ ದ್ವಿಮುಖವಾದ ಮಾಧ್ಯಮ ಎಂದಿದ್ದರೆ. ಅದರ ಆಯ್ದ ಭಾಗ ಇಲ್ಲಿದೆ. ಸಂಪೂರ್ಣ ಓದಿಗಾಗಿ ಇಲ್ಲಿಗೆ ಭೇಟಿ ಕೊಡಿ..

technology_main.jpg

ಅಂತರ್ಜಾಲ ಲೋಕ ಸದಾ ದ್ವಿಮುಖ. ಕೆಲವೊಂದು ತಾಂತ್ರಿಕ ಅಡೆ-ತಡೆಗಳನ್ನು ಹಾಕಿದರೂ, ಸಾರ್ವಜನಿಕವಾದ ಒಂದು ಅಂತರ್ಜಾಲ ತಾಣದಲ್ಲಿ ಓದುಗರು-ನೋಡುಗರು ಮುಕ್ತವಾಗಿ ಅಭಿಪ್ರಾಯ ಮಂಡಿಸಬಹುದು. ಇದರಿಂದ ಪ್ರಭಾವಿತಗೊಂಡಿರುವ ಕನ್ನಡ ಸಾಹಿತ್ಯ ಲೋಕದ ಹಲವಾರು ಪ್ರತಿಭೆಗಳು ಈಗಾಗಲೇ ಅವರದ್ದೇ ಅಂತರ್ಜಾಲ ತಾಣಗಳನ್ನು ಮತ್ತು ಬ್ಲಾಗ್‌ಗಳನ್ನು ಕನಸಿನ ಲೋಕದಲ್ಲಿ ನಿರ್ಮಿಸಿಯಾಗಿದೆ.
ಉದಾಹರಣೆಗೆ ದಟ್ಸ್ ಕನ್ನಡ ಡಾಟ್ ಕಾಂ, ಕನ್ನಡ ಸಾಹಿತ್ಯ ಡಾಟ್ ಕಾಂ… ಮುಂತಾದ ಅಂತರ್ಜಾಲ ತಾಣಗಳು ಈಗ ಜಗತ್ತಿನಾದ್ಯಂತ ಕನ್ನಡಿಗರು ಇರುವಲ್ಲೆಲ್ಲ ಚಿರಪರಿಚಿತ. ಇನ್ನು ಒಎಲ್‌ಎನ್‌ಸ್ವಾಮಿ, ಅವಧಿ , ಮೈಸೂರು ಪೋಸ್ಟ್, ಜೋಗಿಮನೆ…ಯಂತಹ ಬ್ಲಾಗ್‌ಗಳು ಅವುಗಳದ್ದೇ ಆದ ವಲಯದಲ್ಲಿ ವ್ಯಕ್ತಿಗತವಾಗಿ ಜನಪ್ರಿಯಗೊಳ್ಳುತ್ತಿವೆ. ಈ ನಡುವೆ ಕನ್ನಡದ ಬಹುತೇಕ ಪತ್ರಿಕೆಗಳು, ನಿಯತಕಾಲಿಕಗಳು ಅವುಗಳದ್ದೇ ಆದ ಅಂತರ್ಜಾಲ ತಾಣಗಳನ್ನು ಹೊಂದಿವೆ. ಈ ಎಲ್ಲ ಉದಾಹರಣೆಗಳ ಓದುಗ-ನೋಡುಗನಿಗೆ ಇರುವ ಒಂದು ಅತ್ಯುತ್ತಮ ಅವಕಾಶವೆಂದರೆ ಆತ ಕೂಡ ಮುಕ್ತವಾಗಿ ಅವನ ಅಭಿಪ್ರಾಯಗಳನ್ನೂ ಈ ತಾಣಗಳಲ್ಲಿ ಮಂಡಿಸಬಹುದು.

ಒಂದು ಅಂತರ್ಜಾಲ ತಾಣ ಅಥವಾ ಒಂದಷ್ಟು ಬ್ಲಾಗ್‌ಗಳನ್ನು ಮಾಡಿದ ಕೂಡಲೇ ಕನ್ನಡ ಭಾಷೆ ಇದ್ದಕ್ಕಿದ್ದಂತೆ ಉದ್ಧಾರವೇನೂ ಆಗುವುದಿಲ್ಲ. ಆದರೆ, ಜಾಗತಿಕ ಭಾಷೆಯಾಗಿ ಮೆರೆಯಬೇಕು ಎಂದು ಹೊರಟಿರುವ ಇಂಗ್ಲಿಷ್ ಓಟಕ್ಕೆ ಈ ಮೂಲಕ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದಂತಾಗುತ್ತದೆ. ಅದರೊಂದಿಗೆಯೇ ಜಾಗತಿಕ ನೆಲೆಯಲ್ಲಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಕೂಡ ಕನ್ನಡಕ್ಕೆ ಸಾಧ್ಯವಾಗುತ್ತದೆ. ಜಗತ್ತಿನ ಮೂಲೆ-ಮೂಲೆಯಲ್ಲಿ ಕೂತಿರುವ ಕನ್ನಡದ ಮನಸ್ಸುಗಳನ್ನು ಒಂದು ಮಾಡಲು ಕೂಡ ಆ ಮೂಲಕ ಸಾಧ್ಯವಾಗುತ್ತದೆ. ಇದು ಯಾವುದೇ ಭಾಷೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ವಿಷಯ.

ಮಾಹಿತಿ ತಂತ್ರಜ್ಞಾನ ಮತ್ತು ಅಂತರ್ಜಾಲ ಲೋಕದ ಮತ್ತೊಂದು ಸೊಬಗೆಂದರೆ ಅದಕ್ಕಿರುವ ಕೊಡು ಕೊಳ್ಳುವಿಕೆಯ ಗುಣ. ಒಂದು ದೇಶ, ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಇರುವ ವಿಶೇಷವಾದ ಶಕ್ತಿ. ಉದಾಹರಣೆಗೆ ಇಂಗ್ಲಿಷ್ ಮತ್ತು ಕನ್ನಡವನ್ನೇ ತೆಗೆದುಕೊಳ್ಳೋಣ. ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದಲ್ಲಿ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಕ್ರೀಡೆ ಮುಂತಾದ ಸಾಹಿತ್ಯ ಪ್ರಕಾರ ಇದುವರೆಗೆ ಪ್ರಬುದ್ಧವಾಗಿಲ್ಲ. ಏಕೆಂದರೆ ಅಂತರ್ಜಾಲ ಅದರ ವ್ಯಾಪ್ತಿ ಹಿಗ್ಗುವವರೆಗೆ ಅಂತಹ ಸಾಹಿತ್ಯ ಪ್ರಕಾರಗಳ ರಚನೆಗೆ ಅಗತ್ಯವಾದ ಮೂಲದ್ರವ್ಯವೇ ಲೇಖಕರಿಗೆ ಲಭ್ಯವಾಗುತ್ತಿರಲಿಲ್ಲ. ಆದರೀಗ ಕನ್ನಡದಲ್ಲಿಯೂ ಕೆಲವು ಅತ್ಯುತ್ತಮ ವಿಜ್ಞಾನ, ವೈದ್ಯ ವಿಜ್ಞಾನ ಹಾಗೂ ಕ್ರೀಡಾ ಲೇಖನಗಳು ಪ್ರಕಟವಾಗಲಾರಂಭಿಸಿವೆ. ಅದಕ್ಕೆ ಮೂಲ ಕಾರಣ ಅಂತರ್ಜಾಲದಲ್ಲಿರುವ ಮಾಹಿತಿ ಸಾಗರ.

ಒಂದು ಕಾಲದಲ್ಲಿ ಯಾವುದಾದರೂ ಲೇಖಕ ಏಡ್ಸ್ ಬಗ್ಗೆ ಒಂದು ಲೇಖನ ಬರೆಯಬೇಕಿದ್ದರೆ ಅದಕ್ಕೆ ಅಗತ್ಯವಾದ ಮಾಹಿತಿ ಸಂಗ್ರಹಿಸಲು ವಾರಗಟ್ಟಲೇ ಅಲ್ಲಿಂದ ಇಲ್ಲಿಗೆ ಓಡಬೇಕಾಗುತ್ತಿತ್ತು. ಆದರೀಗ ‘ಗೂಗಲ್’ ಅನ್ವೇಷಣಾ ಕಿಂಡಿಯಲ್ಲಿ ‘ಏಡ್ಸ್’ ಎಂದು ಟೈಪ್ ಮಾಡಿ ಹುಡುಕು ಎಂದು ಆದೇಶ ನೀಡಿದ 0.13 ಸೆಕೆಂಡುಗಳಲ್ಲಿ 3,53,00,000 ಕೊಂಡಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಆ ಪೈಕಿ ಹೆಚ್ಚಿನವು ಅಧಿಕೃತ ಮಾಹಿತಿಯಾಗಿರುವುದರಿಂದ ಮೂಲದ್ರವ್ಯವನ್ನು ಸುಲಭವಾಗಿ ಬಳಸಿಕೊಂಡು ಪರಿಣಾಮಕಾರಿಯಾದ ಲೇಖನ ಬರೆಯಬಹುದು. ಪತ್ರಿಕೋದ್ಯಮದ ಭಾಷೆಯಲ್ಲಿಯೇ ಹೇಳುವುದಾದರೆ, ಈಗ ‘ಗೂಗಲ್ ಜರ್ನಲಿಸಂ’ ಎಂಬ ಹೊಸ ಪ್ರಾಕಾರವೇ ಹುಟ್ಟಿಕೊಂಡಾಗಿದೆ. ಸಂಶೋಧನಾ ವಿದ್ಯಾರ್ಥಿಗಳ ಪಾಲಿಗೆ ಅಂತರ್ಜಾಲ ಮಾಹಿತಿಯ ಕಣಜವೇ ಸರಿ.

ಇಂತಹ ಅಸಾಧ್ಯ ಸಾಧ್ಯತೆಗಳ ನಡುವೆಯೇ ಮಾಹಿತಿ ತಂತ್ರಜ್ಞಾನ ಇ-ಪುಸ್ತಕದಂತಹ ವಿನೂತನ ಪ್ರಯೋಗಗಳಿಗೆ ಕೂಡ ಅವಕಾಶ ಮಾಡಿಕೊಟ್ಟಿದೆ.

ಇ-ಪುಸ್ತಕದ ಪರಿಕಲ್ಪನೆಯನ್ನು ಮೊದಲು ಸಾಕಾರಗೊಳಿಸಿದಾತ ಸ್ಟೀಫನ್ ಕಿಂಗ್ ಎಂಬ ಇಂಗ್ಲಿಷ್ ಲೇಖಕ. ಆತ ‘ರೈಡಿಂಗ್ ಬುಲ್ಲೆಟ್’ ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ನೇರವಾಗಿ ಇ-ಪುಸ್ತಕದ ರೂಪದಲ್ಲಿ ಪ್ರಕಟಿಸಿದ. ಕೇವಲ 48 ಗಂಟೆಗಳ ಅವಧಿಯಲ್ಲಿ ‘ರೈಡಿಂಗ್ ಬುಲ್ಲೆಟ್’ನ 5 ಲಕ್ಷ ಪ್ರತಿಗಳು ಅಂತರ್ಜಾಲದಲ್ಲಿ ಬಿಕರಿಯಾದವು. ತಲಾ ಒಂದು ಪ್ರತಿಗೆ ಕೇವಲ 2.5 ಡಾಲರ್ ಬೆಲೆ ವಿಧಿಸಿದ ಸ್ಟೀಫನ್ ಕಿಂಗ್ ಪುಸ್ತಕ ಪ್ರಕಟಣಾ ಲೋಕದಲ್ಲಿ ಹೊಸದೊಂದು ದಾಖಲೆಯನ್ನೇ ನಿರ್ಮಿಸಿದರು. ಈಗ ಇಂಗ್ಲಿಷ್‌ನಲ್ಲಿ ಕೇವಲ ಇ-ಪುಸ್ತಕವಲ್ಲ, ಮಾತನಾಡುವ ಪುಸ್ತಕಗಳು, ಸಿ.ಡಿ.ರೂಪದ ಕೃತಿಗಳು ಮಾರುಕಟ್ಟೆಯನ್ನು ಆಕ್ರಮಿಸಿಯಾಗಿದೆ.

ಕನ್ನಡದ ಬರಹಗಾರರ ಪೈಕಿ ಅಂತಹ ಒಂದು ವಿನೂತನ ಪ್ರಯೋಗ ಮಾಡಿದ ಕೀರ್ತಿ ವಸುಧೇಂದ್ರ ಅವರಿಗೆ ಸಲ್ಲಬೇಕು. ಅವರ ‘ಯುಗಾದಿ’, ‘ಮಿಥುನ’ ಮತ್ತು ‘ಕೋತಿಗಳು…’ ಕಥಾ ಸಂಕಲನಗಳು ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದವು. ನಂತರ ಆ 3 ಪುಸ್ತಕಗಳು ಸಿ.ಡಿ. ಮೂಲಕ ಪ್ರಕಟವಾದವು. ಮಾತ್ರವಲ್ಲ ಅವುಗಳು ಈಗ ಅಮೆರಿಕದಲ್ಲೂ ಲಭ್ಯವಿವೆ.

ಇತ್ತೀಚೆಗೆ ಕನ್ನಡದ ಲೇಖಕ ಜಿ.ಎನ್.ಮೋಹನ್ ಅವರ ಕವನ ಸಂಕಲನ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಪ್ರಕಟವಾಗಿದೆ. ಆ ಕವನ ಸಂಕಲನದಲ್ಲಿರುವ ಕವನಗಳನ್ನು ಬೇರೆ, ಬೇರೆ ಹಿರಿ-ಕಿರಿಯ ಸಾಹಿತಿಗಳು ವಾಚಿಸಿದ್ದಾರೆ. ಆ ಪುಸ್ತಕವೀಗ ಒಂದರ್ಥದಲ್ಲಿ ಮಾತನಾಡುವ ಪುಸ್ತಕವೇ ಆಗಿ ಬಿಟ್ಟಿದೆ.
ಹೀಗೆ ವೈಯಕ್ತಿಕ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಮತ್ತು ತಂತ್ರಜ್ಞಾನ ಲೋಕದಲ್ಲಿ ಗಟ್ಟಿಯಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ, ನಮಗಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ‘ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ’ದ ಸ್ಥಾಪನೆಯಾಗ ಬೇಕಾಗಿರುವುದು ಅತ್ಯಗತ್ಯ. ಅಂತಹ ಪ್ರಯತ್ನ ಇದುವರೆಗೆ ಇಂಗ್ಲಿಷನ್ನು ಒಳಗೊಂಡು ಯಾವುದೇ ಭಾಷೆಯಲ್ಲಿ ನಡೆದಿಲ್ಲ. ಪಂಪನಿಂದ ಹಿಡಿದು ಪೂರ್ಣಚಂದ್ರ ತೇಜಸ್ವಿಯವರೆಗೆ ಪ್ರತಿಯೊಬ್ಬ ಕನ್ನಡ ಸಾಹಿತಿ ಬರೆದಿರುವ ಕೃತಿಗಳನ್ನು (ಕನಿಷ್ಠ ಮೌಲ್ಯಯುತ) ಆ ‘ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ’ದಲ್ಲಿ ಸೇರಿಸಬೇಕು. ಇನ್ನು ಮೇಲೆ ಪ್ರಕಟವಾಗುವ ಎಲ್ಲ ಕನ್ನಡ ಕೃತಿಗಳನ್ನು ಆ ಗ್ರಂಥಾಯಲಕ್ಕೆ ಸೇರಿಸುತ್ತಾ ಹೋಗಬೇಕು. ಆಗ ಭವಿಷ್ಯದ ಪೀಳಿಗೆಗೆ ಕನ್ನಡ ಸಾಹಿತ್ಯವನ್ನು ನಾವು ಶಾಶ್ವತವಾಗಿ ಉಡುಗೊರೆಯ ರೂಪದಲ್ಲಿ ನೀಡಿದಂತಾಗುತ್ತದೆ. ಕನ್ನಡ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ… ಹೀಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯ ಹೊಣೆ ಹೊತ್ತ ಸರ್ಕಾರದ ಅಧೀನದಲ್ಲಿರುವ ಹಲವಾರು ಸಂಸ್ಥೆಗಳು ನಮ್ಮಲ್ಲಿವೆ. ಅವೆಲ್ಲ ಒಂದಾಗಿ ‘ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ’ ಸ್ಥಾಪನೆ-ನಿರ್ವಹಣೆಯ ಹೊಣೆ ಹೊರಬೇಕು.
ಎಂತಹ ಸುಂದರ ಕನಸು!? ರಾಜ್ಯದ ಎಷ್ಟೋ ಹಳ್ಳಿಗಳನ್ನು ವಿದ್ಯುತ್ ಇನ್ನೂ ತಲುಪಿಲ್ಲ. ಕೋಟಿಗಟ್ಟಲೆ ಜನರು ಇನ್ನೂ ಕಂಪ್ಯೂಟರ್ ಮುಟ್ಟಿಯೇ ನೋಡಿಲ್ಲ. ಅಂತರ್ಜಾಲ ಎಂದರೆ ಏನು ಎಂಬ ಅರಿವು ಶೇಕಡಾ 80ರಷ್ಟು ಮಂದಿಗೆ ಇಲ್ಲವೇ ಇಲ್ಲ. ಹಾಗಿರುವಾಗ ಇಂತಹ ಕನಸು ಎಷ್ಟರ ಮಟ್ಟಿಗೆ ಫಲಪ್ರದವಾಗಲು ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಆದರೆ, ಹಾಗೆಂದುಕೊಂಡು ನಾವು ಕೈಕಟ್ಟಿ ಕುಳಿತರೆ ಇಂಗ್ಲಿಷ್ ಉಳಿದ ಹಲವಾರು ಭಾಷೆಗಳನ್ನು ಆಪೋಶನ ಮಾಡಿಕೊಂಡಂತೆ ಕನ್ನಡವನ್ನೂ ನುಂಗಿ ನೀರು ಕುಡಿದು ಬಿಟ್ಟೀತು. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಯ ನಿಟ್ಟಿನಲ್ಲಿ ತಂತ್ರಜ್ಞಾನದ ಮೊರೆ ಹೋಗಿ ಅದನ್ನು ಬಳಸಿಕೊಳ್ಳುವುದು ಅನಿವಾರ್ಯ.

‍ಲೇಖಕರು avadhi

December 16, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

೧ ಪ್ರತಿಕ್ರಿಯೆ

 1. shankar

  ಅಂತರ್ಜಾಲವನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸುವಲ್ಲಿ, ಒಎಲ್‍ಪಿಸಿ,ಪ್ರತಿ ಮಗುವಿಗೊಂದು ಲ್ಯಾಪ್‍ಟ್ಯಾಪ್ (ಒನ್ ಲ್ಯಾಪ್‍ಟಾಪ್ ಪರ್ ಚೈಲ್ಡ್‍) ಒಂದು ವರದಾನವಾಗಬಲ್ಲದೇ!?
  ಈಗಿನ ಜನಾಂಗಕ್ಕೆ ಇದು ಅಷ್ಟೇನು ಸಹಕಾರಿಯಾಗದಿದ್ದರೂ ಮುಂಬರುವ ಪೀಳಿಗೆಗೆ ಅಂತರ್ಜಾಲವು ಗಗನ ಕುಸುಮವಾಗಿರದೆ ಕೈಗೆಟುಕುವಂತಾಗಲಿ ಎಂಬ ಆಶಯ.

  ಇದಕ್ಕೆ ಪೂರಕವಾದ ರೀತಿ ಮುಕ್ತ ಹಾಗು ಉಚಿತ ತಂತ್ರಾಂಶಗಳಲ್ಲಿ ಕನ್ನಡೀಕರಣ ಸಹ ಬೆಳೆದಲ್ಲಿ, ಅಂತರ್ಜಾಲದಲ್ಲಿ ಕನ್ನಡ ರಾಜ್ಯದ ಮೂಲೆ ಮೂಲೆಗೂ ತಲುಪಬಲ್ಲದು ಎನ್ನುವುದು ನನ್ನ ಆಶಯ.
  ವಿಷಾದದ ಸಂಗತಿ ಎಂದರೆ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಉದ್ದಿಮೆಯ ಕ್ರಾಂತಿಯೇ ಆಗಿದ್ದರೂ ಸಹ, ತಮಿಳು, ಹಿಂದಿ, ಬಂಗಾಲಿ, ಗುಜರಾತಿಗೆ ಹೋಲಿಸಿದಲ್ಲಿ ಈಗ ಲಭ್ಯವಿರುವ
  ಕನ್ನಡಕ್ಕೆ ಅನುವಾದಗೊಂಡ ತಂತ್ರಾಂಶಗಳ ಲಭ್ಯತೆ/ಬೆಳವಣಿಗೆ ಕಡಿಮೆಯೆ ಎನ್ನಬಹುದು. ಸಂಪದದಲ್ಲಿ ಒಂದಿಷ್ಟು ಕೆಲಸಗಳಾಗುತ್ತಿದ್ದರೂ ಈ ಕೆಲಸಕ್ಕಾಗಿ ಹಲವಾರು ಸಮಾನ ಮನಸ್ಕ ಅನುವಾದಕರ ಅಗತ್ಯವಿದೆ. ಆಸಕ್ತರು ನನ್ನನ್ನು ಸಂಪರ್ಕಿಸಬಹುದಾಗಿದೆ. ಈ ಕಮೆಂಟನ್ನು ಒಂದು ಪ್ರಚಾರಕ್ಕಾಗಿ ಬಳಸಿಕೊಂಡಿದ್ದಕ್ಕೆ,ಲೇಖಕರಲ್ಲಿ ಕ್ಷಮೆ ಕೋರುತ್ತೇನೆ..
  [email protected]

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: