ಜಿಪಿ ಕಾಲಂ : ಮತ್ತೆ ಮತ್ತೆ ಜಟಾಯು

ಮತ್ತೆ ಮತ್ತೆ ಜಟಾಯು

ಜಿ.ಪಿ.ಬಸವರಾಜು

ಅದು ಗೊತ್ತಿರುವ ಕತೆಯೇ. ಅದೇ ರಾಮ, ಅದೇ ಸೀತೆ. ಮುಂದೆ ಹೇಳುವುದೇ ಬೇಡ, ಲಕ್ಷ್ಮಣನೂ ಅವನೇ. ನಮಗೆಲ್ಲ ಗೊತ್ತಿರುವವನೇ. ಆದರೂ ನಾವೆಲ್ಲ ಎಷ್ಟು ಮೈಮರೆತು ನೋಡುತ್ತಿದ್ದೆವೆಂದರೆ, ನಮ್ಮ ನೆತ್ತಿಗಳ ಮೇಲೆ ಸಣ್ಣಗೆ ಸುರಿಯುತ್ತಿದ್ದ ಮಂಜಿನ ಪರಿವೇ ನಮಗಿರಲಿಲ್ಲ. ಮರಗಳ ಕೊಂಬೆರೆಂಬೆಗಳಿಂದ, ಎಲೆಎಲೆಗಳ ಸಂದಿನಿಂದ ಸುರಿಯುತ್ತಿದ್ದ ಮಂಜು ನೆತ್ತಿಯನ್ನು ಆವರಿಸುತ್ತ, ನಿಧಾನಕ್ಕೆ ದೇಹಗಳನ್ನು ತಣ್ಣಗಾಗಿಸುತ್ತಿದ್ದರೂ ಅದನ್ನೆಲ್ಲ ಮರೆತು ನಾವೆಲ್ಲ ಆ ನಾಟಕ ನೋಡುತ್ತಿದ್ದೆವು. ಅದು ಜನವರಿಯ ರಾತ್ರಿ. ಅತ್ಯಂತ ಕಡಿಮೆ ಉಷ್ಣಾಂಶವನ್ನು ಕಂಡು ಮೈಸೂರು ನಡುಗಿದ ಅನುಭವ ಇನ್ನೂ ಮರೆಯಾಗಿರಲಿಲ್ಲ. ಆದರೂ ಬಹುರೂಪಿಯ ಆಕರ್ಷಣೆಗೆ ಸಿಕ್ಕು ಜನ ರಂಗಾಯಣಕ್ಕೆ ಘೇರಾಯಿಸಿದ್ದರು. ವನರಂಗ ಬಯಲು ರಂಗವಾದರೂ, ಜನ ಜಮಾಯಿಸಿದ್ದ ರೀತಿ ನೋಡಿದರೆ ಅವರಿಗೆ ನಾಟಕ ಮುಖ್ಯವಾಗಿತ್ತೇ ಹೊರತು, ಸುರಿಯುವ ಮಂಜಾಗಲೀ, ಕೊರೆಯುವ ಚಳಿಯಾಗಲೀ ಲೆಕ್ಕಕ್ಕೇ ಇದ್ದಂತೆ ಕಾಣಲಿಲ್ಲ. ಅದೊಂದು ಯಕ್ಷಗಾನ; ಉಡುಪಿಯ ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್ ತಂಡದ್ದು. ಅವತ್ತಿನ ಪ್ರಸಂಗ ಪಾತರ್ಿಸುಬ್ಬ ಬರೆದ ‘ಜಟಾಯು ಮೋಕ್ಷ.’ (ನಿದರ್ೇಶನ-ಸಂಜೀವ ಸುವರ್ಣ).ಜಟಾಯು ಪ್ರಾಣಬಿಡುವುದೂ ಪ್ರೇಕ್ಷಕರಿಗೆ ಗೊತ್ತು. ಸೀತೆಯ ಅಪಹರಣ ನಡೆಯುವುದೂ ಗೊತ್ತು. ಆದರೂ ಅತ್ಯಂತ ಶ್ರದ್ಧೆಯಿಂದ, ಮೊದಲ ಬಾರಿಗೆ ನೋಡುವವರ ಕುತೂಹಲದಲ್ಲಿಯೇ ನೋಡುತ್ತಿದ್ದರು. ಮಕ್ಕಳು, ದೊಡ್ಡವರು, ಮುದುಕರು, ನಡುವಯಸ್ಸಿನವರು. ಎಲ್ಲರಿಗೂ ಇಂಗದ ಕುತೂಹಲ. ಮತ್ತೆ ಮತ್ತೆ ನೋಡುವ ತವಕ. ಹೌದು, ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಆ ಯಕ್ಷಗಾನ ಪ್ರಸಂಗವನ್ನು ಅವತ್ತು ಜನ ನೋಡಿದ್ದೇ ಹಾಗೆ. ಗೊತ್ತಿರುವ ಕತೆಯ ಬಗೆಗೂ ಯಾಕಿಂಥ ಕುತೂಹಲ. ಅವರನ್ನು ಹಿಡಿದು ನಿಲ್ಲಿಸುವ ಶಕ್ತಿ ಯಾವುದು? ಕಲೆಯ ಶ್ರೇಷ್ಠತೆಯೇ ಅದು. ಮತ್ತೆ ಮತ್ತೆ ಕಣ್ತುಂಬಿಕೊಳ್ಳುವ, ಕಿವಿ ತುಂಬಿಕೊಳ್ಳುವ, ಮತ್ತೆ ಮತ್ತೆ ಬುದ್ಧಿಯನ್ನು ಜಾಗೃತಗೊಳಿಸಿಕೊಳ್ಳುವಂತೆ ಮಾಡುವ ಈ ಶಕ್ತಿ ಕಲೆಗಿದೆ. ಕಲೆಗಳಿರುವುದೇ ಈ ಕಾರಣಕ್ಕಾಗಿ. ಗಂಡಸೊಬ್ಬ ಸೀತೆಯ ಪಾತ್ರವನ್ನು ಮಾಡಿದ್ದ ಎಂಬುದು ಮಕ್ಕಳಿಗೂ ತಿಳಿಯುತ್ತಿತ್ತು. ಆದರೂ ಆ ಪುರುಷನಲ್ಲಿ ಸೀತೆಯನ್ನು ಕಾಣುವ, ಗಂಡನ್ನು ಹೆಣ್ಣಾಗಿ ಒಪ್ಪಿಕೊಳ್ಳುವ, ದೇಶ ಕಾಲಗಳನ್ನು ದಾಟಿ ಆ ‘ಯುಗ’ಕ್ಕೆ ಹೋಗಿ ಮೈಮರೆಯುವಂತೆ ಮಾಡಿಬಿಡುವ ಆ ಮಾಂತ್ರಿಕ ಶಕ್ತಿ ಕಲೆಗಿರುತ್ತದೆ. ಮಾಯಾಜಿಂಕೆ ಕುಣಿದು ಬರುವ ರೀತಿ ಅದ್ಭುತವಾಗಿತ್ತು. ಅದರ ಹೆಜ್ಜೆಯ ಸದ್ದು ಕಿವಿಯಲ್ಲಿ ಅನುರಣಿಸುವಂತಿತ್ತು. ಚಂಡೆ ಮದ್ದಳೆಗಳ ನಾದ ಮಾಧರ್ಯವೇ ಒಂದು ಮಾಯಾ ಪ್ರಪಂಚವನ್ನು ಸೃಷ್ಟಿಸುತ್ತಿತ್ತು. ಆ ಜಿಂಕೆ ರಾಮನ ಬಾಣಕ್ಕೆ ಗುರಿಯಾಗಿ, ‘ಹಾ! ಸೀತೆ’, ‘ಹಾ! ಲಕ್ಷ್ಮಣಾ’ ಎಂದು ಗೋಳಿಡುವುದು, ಭಾಗವತರ ಪದ್ಯ ಆ ಭಾವಕೋಶವನ್ನು ಕಟ್ಟಿಕೊಡುವುದು, ಜಿಂಕೆಯ ಧ್ವನಿಯನ್ನೇ ರಾಮನ ಧ್ವನಿಯಾಗಿ ನಂಬಿದ ಸೀತೆ ರಾಮನಿಗೇ ಕೇಡುಂಟಾಯಿತೆಂದು ಭಾವಿಸಿ, ಪ್ರಲಾಪಿಸುವುದು, ಲಕ್ಷ್ಮಣನನ್ನು ಹೋಗೆಂದು ಒತ್ತಾಯಿಸುವುದು ಎಲ್ಲ ಎಲ್ಲ ಅದೇ ಕಣ್ಮುಂದೆ ಬಿಚ್ಚಿಕೊಳ್ಳುತ್ತಿತ್ತು. ಲಕ್ಷ್ಮಣ ಕೊನೆಗೂ ಹೊರಡುತ್ತಾನೆ. ಹೋಗುವ ಮುನ್ನ ಅವನು ತನ್ನ ಬಾಣದ ಮೊನೆಯಲ್ಲಿ ಗೆರೆಯ ಬರೆಯಬೇಕು, ಬರೆಯುತ್ತಾನೆ. ಆಹಾ! ಈ ಕ್ರಿಯೆಯನ್ನು ಇದೀಗ ನಡೆಯುವಂತೆ ತೋರಿಸುವುದೇ ನಾಟಕ. ಅಲ್ಲಿ ನಟನ ಭಾವ, ಅಭಿನಯ, ಭಾಗವತರ ಪದ್ಯದ ಏರಿಳಿತ, ಚಂಡೆಮದ್ದಳೆಯ ಧ್ವನಿ ಅಲ್ಲಿ ಗೆರೆಯನ್ನು ಮೂಡಿಸುತ್ತದೆ. ಆ ಗೆರೆ ನೆಲದ ಮೇಲೆ ಮೂಡಿರುವುದಿಲ್ಲ. ಪ್ರೇಕ್ಷಕರ ಮನದಂಗಳದಲ್ಲಿ ಸ್ಪಷ್ಟವಾಗಿ ಮೂಡಿರುತ್ತದೆ. ಮುಂದೇನಾಗುವುದು? ಎಲ್ಲರ ನಿರೀಕ್ಷೆಯಂತೆಯೇ ರಾವಣ ಸನ್ಯಾಸಿಯಾಗಿ ಬರುತ್ತಾನೆ; ಬೇಡುತ್ತಾನೆ; ಸೀತೆಯನ್ನು ಗೆರೆ ದಾಟಿಸುತ್ತಾನೆ; ಅಪಹರಿಸುತ್ತಾನೆ. ಯಕ್ಷ ತಂಡದ ಕೌಶಲವನ್ನು ಪ್ರದಶರ್ಿಸುವ ದೃಶ್ಯ ಮುಂದಿನದು. ರಾವಣ, ಸೀತೆಯನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ರಂಗದ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವ ಸನ್ನಿವೇಶ ಅದ್ಭುತವಾದದ್ದು. ಇದನ್ನು ಯಕ್ಷಗಾನ ಕಲಾವಿದರು ಅತ್ಯಂತ ಪರಿಣಾಮಕಾರಿಯಾಗಿ, ಆದರೆ ಹೆಚ್ಚಿನ ಶ್ರಮವಿಲ್ಲದ ತಂತ್ರಗಾರಿಕೆಯಲ್ಲಿ ತೋರಿಸಿಬಿಡುತ್ತಾರೆ. ಅದು ನಿಜಕ್ಕೂ ರಥವಲ್ಲ. ಗಾಲಿಗಳಿರುವ, ಚಲಿಸುವ, ಒಂದು ಪುಟ್ಟ ಮೇಜು. ಅದರ ಮೇಲೆ ರಾವಣ ಮತ್ತು ಸೀತೆಯರು ನಿಂತಿದ್ದರೆ ಇಬ್ಬರು ಬಗ್ಗಿಕೊಂಡು ಅದನ್ನು ತಳ್ಳುತ್ತಾರೆ. ಇದು ಯಾವುದೂ ಪ್ರೇಕ್ಷಕರಿಗೆ ಕಾಣದಂತೆ ಇಬ್ಬರು ನಟರು ಅರ್ಧಕ್ಕೆ ಒಂದು ಪರದೆಯನ್ನು ಹಿಡಿದಿರುತ್ತಾರೆ. ಪರದೆಯ ಮೇಲ್ಭಾಗವಷ್ಟೇ ಕಾಣಿಸುತ್ತಿರುತ್ತದೆ. ಇಷ್ಟನ್ನೇ ನೋಡುವ ಪ್ರೇಕ್ಷಕರಿಗೆ ರಥದಲ್ಲಿ ರಾವಣ, ಸೀತೆ ಕುಳಿತಿರುವುದು, ರಥ ಓಡುವುದು ಕಾಣಿಸುತ್ತಿರುತ್ತದೆ. ಇದನ್ನು ನೋಡಿದ್ದೇ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ. ಮೆಚ್ಚುಗೆಯ ಉದ್ಗಾರಗಳೂ ಹೊಮ್ಮುತ್ತವೆ. ಚಪ್ಪಾಳೆ ಅನೇಕ ಅರ್ಥಗಳನ್ನು ಹೊಮ್ಮಿಸುತ್ತದೆ. ಅಭಿನಯಕ್ಕೆ, ಭಾಗವತರ ಹಾಡಿನ ಮೋಡಿಗೆ, ಚಂಡೆಮದ್ದಳೆಯ ಸೊಗಸಿಗೆ, ರಂಗದ ಮೇಲೆ ಸೃಷ್ಟಿಸುವ ಬಗೆಬಗೆಯ ಚಮತ್ಕಾರಗಳಿಗೆ, ತಾಂತ್ರಿಕ ಕೌಶಲಗಳಿಗೆ. ಇದನ್ನೂ ಮೀರಿದ ಅರ್ಥ ಹೊಮ್ಮಿದ್ದು. ಜಟಾಯುವಿನ ಪ್ರವೇಶವಾದಾಗ. ರೆಕ್ಕೆಯನ್ನು ಕಟ್ಟಿಕೊಂಡ ಜಟಾಯುವಿನ ಬಗ್ಗೆ ಪ್ರೇಕ್ಷಕರಲ್ಲಿ ಈ ಮೊದಲೇ ಒಂದು ಸ್ಥಾಯೀ ಭಾವ ಸ್ಥಾಪನೆಯಾಗಿರುತ್ತದೆ. ಅದನ್ನು ಪರಿಪೋಷಿಸುವ ರೀತಿಯಲ್ಲಿ ಈ ಪ್ರಸಂಗವನ್ನು ರೂಪಿಸಲಾಯಿತು. ನಟನ ಕುಣಿತ, ಅಭಿನಯವೂ ಅದಕ್ಕೆ ಪೂರಕವಾಗಿತ್ತು. ಜಟಾಯು ರಾವಣನ ಜೊತೆ ಯುದ್ಧಕ್ಕೆ ಇಳಿದಾಗಲಂತೂ ಚಪ್ಪಾಳೆಯ ಸುರಿಮಳೆ. ರೆಕ್ಕೆ ಕತ್ತರಿಸಿಕೊಂಡು ಜಟಾಯು ನೆಲಕ್ಕೊರಗಿದಾಗ ಪ್ರೇಕ್ಷಕರ ಅಂತರಂಗದಲ್ಲಿ ಭಾವತರಂಗಗಳ ಮಹಾಪೂರವೇ ಏರಿಳಿಯುತ್ತಿತ್ತು. ಜಟಾಯು ಒಂದು ಹಕ್ಕಿ. ಅದು ಮಹಾ ಪರಾಕ್ರಮಿ ರಾವಣನ ಜೊತೆ ಕಾದಲಾರದು. ಆದರೆ ಅದು ರಾವಣನ ದುಷ್ಟ ಶಕ್ತಿಯನ್ನು, ಅನ್ಯಾಯದ ವರ್ತನೆಯನ್ನು ಕಂಡು ಮೌನವಾಗಿ ಕುಳಿತುಕೊಳ್ಳಲಾರದು. ತನ್ನ ಪ್ರಾಣವನ್ನು ಪಣವಾಗಿಟ್ಟು ಅದು ಕಾದುತ್ತದೆ. ಈ ಕಾದಾಟವನ್ನು ಪ್ರೇಕ್ಷಕರು ಮೆಚ್ಚುತ್ತಾರೆ. ಇದು ಸಾಮಾನ್ಯ ಕಾದಾಟವಲ್ಲ. ಕೆಡುಕಿನ ವಿರುದ್ಧ ನಡೆಯುವ ಕಾದಾಟ; ಅನ್ಯಾಯದ ವಿರುದ್ಧ ನಡೆಯುವ ಹೋರಾಟ. ಅದು ಗೆಲುವು ಸೋಲಿನ ಪ್ರಶ್ನೆಯಲ್ಲ. ದುರ್ಬಲ-ಪ್ರಬಲರ ಪ್ರಶ್ನೆಯಲ್ಲ; ಹೋರಾಟದ ಹಿಂದಿರುವ ನೈತಿಕತೆಯ ಪ್ರಶ್ನೆ. ಪ್ರೇಕ್ಷಕರ ಚಪ್ಪಾಳೆ ಮತ್ತು ಜಟಾಯುವಿನ ಬಗ್ಗೆ ತೋರುವ ಅನುಕಂಪೆ ಈ ಅರ್ಥಗಳನ್ನು ಹೊಮ್ಮಿಸುತ್ತದೆ. ನೈತಿಕತೆಯನ್ನು ಬೆಂಬಲಿಸಬೇಕಾದ ಸಮಾಜದ ಹೊಣೆಗಾರಿಕೆಯನ್ನು ಈ ಚಪ್ಪಾಳೆ ಧ್ವನಿಸುತ್ತದೆ. ಪ್ರೇಕ್ಷಕರು ಮತ್ತೆ ಮತ್ತೆ ಚಪ್ಪಾಳೆ ತಟ್ಟುವ ಮೂಲಕ ಜಟಾಯುವಿನ ಹೋರಾಟವನ್ನು ಬೆಂಬಲಿಸುತ್ತಾರೆ. ಈ ಹೊತ್ತಿನಲ್ಲಿ ನಮ್ಮ ಮುಂದಿರುವ ಪ್ರಶ್ನೆ ಇದೇ. ದುಷ್ಟಶಕ್ತಿಗಳು ವಿಜೃಂಭಿಸುತ್ತಿರುವಾಗ ನಾವು ಮೌನ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕೇ? ಅಥವಾ ಜಟಾಯುವಿನ ಪಾತ್ರವನ್ನು ನಾವು ನಿರ್ವಹಿಸಬೇಕೇ? ಈ ಕಾರಣಕ್ಕಾಗಿಯೇ ನಾವು ಗೊತ್ತಿರುವ ಕತೆಯನ್ನು ಮತ್ತೆ ಮತ್ತೆ ಕೇಳುತ್ತೇವೆ; ಗೊತ್ತಿರುವ ಕತೆಯನ್ನೇ ಹೇಳಿದರೂ ಅಂಥ ನಾಟಕಗಳನ್ನು ಮತ್ತೆ ಮತ್ತೆ ನೋಡುತ್ತೇವೆ. ವಾಲ್ಮೀಕಿಯ ರಾಮಾಯಣವೂ ನಮಗೆ ಬೇಕು; ಕುವೆಂಪು ಅವರ ರಾಮಾಯಣ ದರ್ಶನವೂ ಬೇಕು. ನೂರಾರು ರಾಮಾಯಣಗಳು ಆಗಿ ಹೋಗಿದ್ದರೂ, ಹೊಸದೊಂದು ರಾಮಾಯಣ ಬೇಕು. ಮತ್ತೆ ಮತ್ತೆ ಕರ್ಣ, ಅಜರ್ುನ, ಏಕಲವ್ಯರ ಕತೆ ಬೇಕು. ಜೂಜಿನಲ್ಲಿ ಧರ್ಮರಾಯ ಸೋಲುತ್ತಾನೆಂಬುದು ಗೊತ್ತಿದ್ದರೂ, ಅವನು ಮತ್ತೆ ಮತ್ತೆ ನಮ್ಮ ಕಣ್ಮುಂದೆ ಜೂಜಾಡಿ ಸೋತು ಕಾಡಿಗೆ ಹೋಗುವುದು ಬೇಕು. ಇದೆಂಥ ವಿಚಿತ್ರ. ಸತ್ಯ ಸೋಲುತ್ತದೆ; ಅಸತ್ಯ ಗೆಲ್ಲುತ್ತದೆ. ‘ಸತ್ಯ’ ಯಾವುದು ಎಂಬುದೇ ಸಂಕೀರ್ಣ ಪ್ರಶ್ನೆಯಾಗಿದ್ದರೂ ನಾವು ಸತ್ಯ ಗೆಲ್ಲುತ್ತದೆಂದು ಕಾಯುತ್ತೇವೆ. ಈ ಕಾಯುವ ನಂಬಿಕೆಯೇ ತಲೆಮಾರುಗಳನ್ನು ಮುನ್ನಡೆಸುತ್ತದೆ; ಸಮಾಜಗಳನ್ನು ಮತ್ತೆ ಮತ್ತೆ ಕಟ್ಟುತ್ತದೆ. ಸಣ್ಣದಿರಲಿ, ದೊಡ್ಡದಿರಲಿ ಹೋರಾಟಕ್ಕೆ ನೈತಿಕ ಸ್ಪೂತರ್ಿಯನ್ನು ತುಂಬುತ್ತದೆ.]]>

‍ಲೇಖಕರು G

July 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

3 ಪ್ರತಿಕ್ರಿಯೆಗಳು

 1. D.RAVI VARMA

  ಜಟಾಯು ಒಂದು ಹಕ್ಕಿ. ಅದು ಮಹಾ ಪರಾಕ್ರಮಿ ರಾವಣನ ಜೊತೆ ಕಾದಲಾರದು. ಆದರೆ ಅದು ರಾವಣನ ದುಷ್ಟ ಶಕ್ತಿಯನ್ನು, ಅನ್ಯಾಯದ ವರ್ತನೆಯನ್ನು ಕಂಡು ಮೌನವಾಗಿ ಕುಳಿತುಕೊಳ್ಳಲಾರದು. ತನ್ನ ಪ್ರಾಣವನ್ನು ಪಣವಾಗಿಟ್ಟು ಅದು ಕಾದುತ್ತದೆ. ಈ ಕಾದಾಟವನ್ನು ಪ್ರೇಕ್ಷಕರು ಮೆಚ್ಚುತ್ತಾರೆ. ಇದು ಸಾಮಾನ್ಯ ಕಾದಾಟವಲ್ಲ. ಕೆಡುಕಿನ ವಿರುದ್ಧ ನಡೆಯುವ ಕಾದಾಟ; ಅನ್ಯಾಯದ ವಿರುದ್ಧ ನಡೆಯುವ ಹೋರಾಟ. ಅದು ಗೆಲುವು ಸೋಲಿನ ಪ್ರಶ್ನೆಯಲ್ಲ. ದುರ್ಬಲ-ಪ್ರಬಲರ ಪ್ರಶ್ನೆಯಲ್ಲ; ಹೋರಾಟದ ಹಿಂದಿರುವ ನೈತಿಕತೆಯ ಪ್ರಶ್ನೆ. ಪ್ರೇಕ್ಷಕರ ಚಪ್ಪಾಳೆ ಮತ್ತು ಜಟಾಯುವಿನ ಬಗ್ಗೆ ತೋರುವ ಅನುಕಂಪೆ ಈ ಅರ್ಥಗಳನ್ನು ಹೊಮ್ಮಿಸುತ್ತದೆ. ನೈತಿಕತೆಯನ್ನು ಬೆಂಬಲಿಸಬೇಕಾದ ಸಮಾಜದ ಹೊಣೆಗಾರಿಕೆಯನ್ನು ಈ ಚಪ್ಪಾಳೆ ಧ್ವನಿಸುತ್ತದೆ. ಪ್ರೇಕ್ಷಕರು ಮತ್ತೆ ಮತ್ತೆ ಚಪ್ಪಾಳೆ ತಟ್ಟುವ ಮೂಲಕ ಜಟಾಯುವಿನ ಹೋರಾಟವನ್ನು ಬೆಂಬಲಿಸುತ್ತಾರೆ
  ಈ ಹೊತ್ತಿನಲ್ಲಿ ನಮ್ಮ ಮುಂದಿರುವ ಪ್ರಶ್ನೆ ಇದೇ. ದುಷ್ಟಶಕ್ತಿಗಳು ವಿಜೃಂಭಿಸುತ್ತಿರುವಾಗ ನಾವು ಮೌನ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕೇ? ಅಥವಾ ಜಟಾಯುವಿನ ಪಾತ್ರವನ್ನು ನಾವು ನಿರ್ವಹಿಸಬೇಕೇ?
  ಇದೆಂಥ ವಿಚಿತ್ರ. ಸತ್ಯ ಸೋಲುತ್ತದೆ; ಅಸತ್ಯ ಗೆಲ್ಲುತ್ತದೆ. ‘ಸತ್ಯ’ ಯಾವುದು ಎಂಬುದೇ ಸಂಕೀರ್ಣ ಪ್ರಶ್ನೆಯಾಗಿದ್ದರೂ ನಾವು ಸತ್ಯ ಗೆಲ್ಲುತ್ತದೆಂದು ಕಾಯುತ್ತೇವೆ. ಈ ಕಾಯುವ ನಂಬಿಕೆಯೇ ತಲೆಮಾರುಗಳನ್ನು ಮುನ್ನಡೆಸುತ್ತದೆ; ಸಮಾಜಗಳನ್ನು ಮತ್ತೆ ಮತ್ತೆ ಕಟ್ಟುತ್ತದೆ. ಸಣ್ಣದಿರಲಿ, ದೊಡ್ಡದಿರಲಿ ಹೋರಾಟಕ್ಕೆ ನೈತಿಕ ಸ್ಪೂತರ್ಿಯನ್ನು ತುಂಬುತ್ತದೆ.
  ಬಸು ಸರ್ ನಮಸ್ಕಾರ. ನಿಮ್ಮಬರಹ ಮತ್ತೆ ಮತ್ತೆ ಜಟಾಯು, ಒಂದಿಸ್ತೊತ್ತು ನನ್ನನ್ನು ತುಂಬಾ ಕಾಡಿತು,ಕಾಡುತ್ತಲೇ ಇದೆ,ದೈತ್ಯ ದುಸ್ತಶಕ್ತಿಗಳ ಜೊತೆ ಹೋರಾಡುವ ಶಕ್ತಿ, ಸಾಮರ್ಥ್ಯ illadiddagalu ಕೂಡ , ಜಟಾಯು ತನ್ನ ಪಾಲಿನ ಕೆಲಸವನ್ನು ಮಾಡಿ ಪ್ರಾಣಕಳೆದು ಕೊಳ್ಳುತ್ತದೆ, ಅಸ್ತೆ ಅಲ್ಲ ಅದು ತನ್ನ ಸ್ವಾಮಿ ನಿಸ್ಟೆಯನ್ನು,ಹಾಗು ತನ್ನ ಬದ್ದತೆಯನ್ನು ಎತ್ತಿ ಹಿಡಿಯುತ್ತದೆ.ಪಶು,ಪ್ರಾಣಿ,ಪಕ್ಷಿ ಗಳಲ್ಲಿರುವ ನಿಸ್ಟೆ,ಸಂವೇದನೆ ,ಮನುಸ್ಯನಲ್ಲಿ ಇಲ್ಲವಗುತ್ತಿದೇ ಏನೋ ಎನ್ನುವ ಆತಂಕ ಕೂಡ ಕಾಡುತ್ತಿದೆ. ನಾನು highschool ನಲ್ಲಿದ್ದಾಗ ಓದಿದ ಒಂದು ಹಾಡು ಕೂಡ ನೆನಪಿಗೆ ಬರ್ತಿದೆ, ಮುಂಗುಸಿ ಯೊಂದು ಹಾವಿನಜೋತೆ ಸೆಣಸಾಡಿ ಕೊಂದು ಮಗುವಿನ ಪ್ರಾಣ ಉಳಿಸುವ, ಆದರೆ, ಆ ಮುಂಗುಸಿಯ ಬಾಯಿಯ ರಕ್ತ ನೋಡಿ ,ಅದೇ ಮಗುವನ್ನು ಸಾಯಿಸಿದೆ ಎಂದು ಬ್ರಮಿಸಿ ಅದರ ಮೇಲೆ ಕೊಡ ಎತ್ತಿ ಹಾಕಿ ಸಾಯಿಸುವ ,ನಂತರ ಪರಿತಪಿಸುವ ಕಥೆ ಅದು .
  ಈ ಸತ್ಯ ಅಸತ್ಯದ ತಾಕಲಾಟದ ಮದ್ಯೆ ಸಾವಿರಾರು ನೋವು,ಸಾವು ಉಂಟಾಗುತಿದ್ದರು ,ಮತ್ತೆ ಮತ್ತೆ ಸತ್ಯ ಗೆಲ್ಲುತದೆ ಎನ್ನುವ ನಂಬಿಕೆ, ಬದುಕು ಇಂದಲ್ಲ ನಾಳೆ ಹಸನಾಗುತ್ತದೆ ಎನ್ನುವ ಒಂದು ಸಣ್ಣ ಆಶೆ ಈ ಬದುಕನ್ನು ಎಳೆದೊಯ್ಯುತ್ತದೆ. ಮುಂದಿನ ಬದುಕಿನ ಕನಸಿನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾ …….. ಕನಸು ಕಾಣುತ್ತ………
  ಈ ಕ್ಷಣದಲ್ಲಿ ಚಲಂ ಬೆನ್ನುರ್ಕರ್ ಅವರ ಕವನದ ಸಾಲುಗಳು ನನಗೆ ನೆನಪು ಬರುತ್ತಿವೆ, ಬಿಹಾರಿನ ಏಲಗಿರಿ ತಪ್ಪಲಿನ ಜನನಾಯಕ ಅಲ್ಲ್ರುವ ದೈತ್ಯ ಶಕ್ತಿಗಳ ವಿರುದ್ಧ ಜನಪರ ಹೋರಾಟ ಮಾಡುತ್ತಿದ್ದಾಗ ಆ ಶಕ್ತಿ ಪೋಲಿಸ್ ವ್ಯವಸ್ತೆಯನ್ನು ಬಳಸಿಕೊಂಡು ,ಅವನ ಮೆಮೆ ದೊರ್ಜನ್ಯ,ದಬ್ಬಾಳಿಕೆ ನಡೆಸಿ ಅವನು ಸಂಶಯಾತ್ಮಕ ಸಾವಿಗೆ ಆಸ್ಪತ್ರೆಯಲ್ಲಿ ಈಡಾಗುತ್ತಾನೆ.ಆಗ ಅವನ ಬಳಿ ಬಂದ ಗೆಳೆಯನೊಬ್ಬನಿಗೆ ಹೇಳಿದ ಒಡಲಾಳ ದ ಕವನದ ಸಾಲುಗಳು .
  “ನನ್ನ ಸಾವಿನ ಸುದ್ಧಿ ನಿನ್ನ ಬಳಿ ಬಂದಾಗ,
  ಬೇಕಿಲ್ಲ ಗೆಳೆಯ ನಿನ್ನ ಮರುಖ ,
  ಸತ್ತ ಗೆಳೆಯನ ಆಣೆ,ಹರಿದ ರಕ್ತದ ಆಣೆ ,
  ಉರಿದು ಏಳಲಿ, ನಿನ್ನ ಒಡಲ ಕಿಚ್ಚು .
  ಮರೆಯದಿರು ಗೆಳೆಯಾ,
  ಕಳ್ಲಿಸಾಲಿನ ಹಿಂದೆ, ಮುಳ್ಳು ಬೇಲಿಯ ಹಿಂದೆ ,
  ನನ್ನಕ್ಕ ತಂಗಿಯರು ,
  ಗೌಡನ ತೋಳತೆಕ್ಕೆಯಲ್ಲಿ ಸಿಕ್ಕು ,
  ನರಳಿ ,ಅತ್ತದ್ದ ,ಸತ್ತದ್ದ,
  ಮರೆಯದಿರು ಗೆಳೆಯಾ …. ಹೀಗೆ ಹೀಗೆ ಹೇಳುತ್ತಾ ಈ ದಮನಕಾರಿ ವ್ಯವಸ್ತೆಯ ವಿರುದ್ಧದ ದ್ವನಿಯನ್ನು , ತಾನು ಸಾಯುವಾಗ ತನ್ನ ಒಡಲಾಳದ ನೋವನ್ನು ಕಾವ್ಯದಲ್ಲಿ ಹೇಳಿಕೊಂಡ ಪರಿ ನಿಜಕ್ಕೂ ಅನನ್ಯ…. ಅದರ ಇನ್ನೆರಡು ಪ್ಯಾರಗಳು ನನಗೆ ನೆನಪು ಬರುತ್ತಿಲ್ಲ ….
  ಬಸು , ನಿಮ್ಮ ಬರಹ ದ ಮೊನಚು, ಅದರ ಸಂವೇದನೆ, ಅದು ನಮ್ಮನ್ನು ಬರಿ ಓಡಿಸುವುದಿಲ್ಲ, ಅದು ಒಂದಿಸ್ತು ಯೋಚನೆಗೆ ಹಚ್ಚುತ್ತದೆ, ಅಸ್ತೆ ಅಲ್ಲ ಅದು ಕಾಡುತ್ತಲೇ ಇರುತ್ತದೆ, ನಿಮ್ಮ ಚಿಂತನೆಗೆ ನನ್ನ ಪ್ರೀತಿಯ ನಮಸ್ಕಾರ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. lalitha siddabasavaiah

  ಲೇಖನ , ರವಿವರ್ಮರ ಪ್ರತಿಕ್ರಿಯೆ ಎರಡೂ ತುಂಬ ದಿನ ನೆನಪಲ್ಲಿದ್ದು ಕುಕ್ಕುವ ಹಾಗಿವೆ.ಜಟಾಯು ಮಾಡಿದ್ದನ್ನು ನಾವೂ ಮಾಡಬಹುದು, ಮಾಡುವುದಿಲ್ಲ. ಸಮರ್ಥನೆಗೆ ನಿಂತರೆ ನೂರಾರು ಕಾರಣ ಪೋಣಿಸುತ್ತಾ ಇರಬಹುದು. ಇಂಥದ್ದಕ್ಕೆ ಇಂಥ ನಾಜೂಕಾದ ಸಮರ್ಥನೆಗಳಿಗೆ ನಮ್ಮ ಬುದ್ಧಿವಂತಿಕೆ ಸದಾ ಜೊತೆ ನೀಡುತ್ತದೆ!!

  ಪ್ರತಿಕ್ರಿಯೆ
 3. D.RAVI VARMA

  ಸರ್,ನಮಸ್ಕಾರ, ನಾನು ನಿಮ್ಮ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಕನ್ನಡ bloggers ನ ನನ್ನ ಬ್ಲಾಗ್ ಗೆ ಹಾಕಲು ಹೋದಾಗ ಅದು ಸೆಲೆಕ್ಟ್ ಮಾಡುವಾಗ ಪ್ರಮಾದವಶಾಥ್ ನಿಮ್ಮ lekhadottige ಸೆಲೆಕ್ಟ್ ಹಾಗಿ ಕಾಪಿ ಹಾಗಿ ಪೇಸ್ಟ್ ಹಾಗಿದೆ, ನಾನಿನ್ನು ಈ ಸಿಸ್ಟಮ್ ಜೊತೆ ಕೆಲಸ ಕಲಿಯುತ್ತಿದ್ದೇನೆ, ನುಡಿ ಬಳಸಲು ಸಾಧ್ಯವಾಗದೆ, ಅವಧಿ ಸಂಪಾದಕರು ಹೇಳಿಕೊಟ್ಟ ನಂತರ ಗೂಗಲ್ transliteration ಬಳಸಿ ಬರೆಯುತ್ತಿರುವೆ, ನಿಮ್ಮ ಲೇಖನ ಕನ್ನಡ ಬ್ಲೋಗ್ಗೆರ್ಸ್ ಗೆ ನಿಮ್ಮ ಅನುಮತಿ ಇಲ್ಲದೆ ಹಾಕಿದ್ದಕ್ಕೆ ಕ್ಷಮೆ ಯಾಚಿಸುವೆ . ಇನ್ನೊಮ್ಮೆ ಈಗಾಗದಂತೆ ನೋಡಿಕೊಳ್ಳುವೆ .
  ರವಿ ವರ್ಮ ಹೊಸ್ಪೆತ್ ೯೯೦೨೫೯೬೬೧೪

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: