ಜಿಪಿ ಕಾಲ೦ : ಹರಕೆಯ ಕಥೆ

ಒಂದು ಹರಕೆಯ ಆಟ   – ಜಿ.ಪಿ.ಬಸವರಾಜು ನಾವು ಆಟಕ್ಕೆಂದು ಗದ್ದೆಯ ಬಯಲಿಗೆ ಇಳಿದಾಗ ನಡುರಾತ್ರಿ ಸಮೀಪಿಸುತ್ತಿತ್ತು. ಹೆದ್ದಾರಿಯ ಸದ್ದು ಕಡಿಮೆಯಾಗಿದ್ದರೂ, ಆಗೊಂದು ಈಗೊಂದು ವಾಹನಗಳ ಓಡಾಟ ಸಾಗಿಯೇ ಇತ್ತು. ಹೆದ್ದಾರಿ ಕೆಳಗಿನ ಗದ್ದೆ ಬಯಲು ಹರಕೆಯ ಆಟಕ್ಕೆ ಸಿದ್ಧವಾಗಿತ್ತು. ಕಟೀಲು ಮೇಳದವರು ‘ದೇವೀಮಹಾತ್ಮೆ’ಯನ್ನು ಆರಂಭಿಸಿದ್ದರು. ಬ್ರಹ್ಮ ವಿಷ್ಣ ರಂಗದ ಮೇಲಿದ್ದರು. ಚಿಕ್ಕದಾದ ರಂಗಸ್ಥಳದಲ್ಲಿಯೇ ಪಾತ್ರಧಾರಿಗಳು ಸೊಗಸಾಗಿ ಕುಣಿಯುತ್ತಿದ್ದರು. ಇರುವಷ್ಟೇ ಜಾಗದಲ್ಲಿ ಕುಣಿತದ ಎಲ್ಲ ಸಂಭ್ರಮ ಬಿಚ್ಚಿಕೊಳ್ಳುವಂತೆ ಕುಣಿಯುವುದು ಒಂದು ಸವಾಲು. ಆದರೆ ಯಕ್ಷಗಾನ ಕಲಾವಿದರಿಗೆ ಇದೊಂದು ಸವಾಲೇ ಅಲ್ಲ. ಅವರ ಕುಣಿತ ಹಾಗಿರುತ್ತದೆ. ಪಾತ್ರಧಾರಿಯ ಕುಣಿತಕ್ಕೆ ಜೀವ ತುಂಬುವವ ಭಾಗವತ. ಈತನ ಕಂಠದ ಸಿರಿ, ಅದರ ಏರಿಳಿವು, ಲಯಬದ್ಧ ವಿನ್ಯಾಸ ಪಾತ್ರಧಾರಿಯನ್ನು ಪ್ರಚೋದಿಸುತ್ತಿರುತ್ತದೆ. ಈ ಪ್ರಚೋದನೆಯನ್ನು ತುತ್ತತುದಿಗೆ ಮುಟ್ಟಿಸುವುದು ಚಂಡೆಯ ಬಡಿತ. ಚಂಡೆಯ ಅಬ್ಬರ ಹೆಚ್ಚಾದಷ್ಟೂ ಪಾತ್ರಕ್ಕೆ ಜೀವ ತುಂಬಿಕೊಳ್ಳುತ್ತದೆ. ರಾಕ್ಷಸರ ಪಾತ್ರಕ್ಕಂತೂ ಚಂಡೆಯೇ ಜೀವಾಳ. ಭಾಗವತರು ಕಂಠವನ್ನು ಎತ್ತರಿಸಿ ಹಾಡುತ್ತಿದ್ದರೆ, ಚಂಡೆ ಬಾರಿಸುವವನು, ಭಾರವಾದ ಚಂಡೆಯನ್ನು ಹೆಗಲಿಗೇರಿಸಿಕೊಂಡು ನಿಂತು, ದಶದಿಕ್ಕುಗಳೂ ನಡುಗುವಂತೆ ಚಂಡೆಯನ್ನು ಬಾರಿಸುತ್ತಾನೆ. ಚಂಡೆಯ ಸದ್ದು ಕೇಳಿಕೊಂಡೇ ದೂರದ ಪ್ರೇಕ್ಷಕರು ಆಟಕ್ಕೆ ಓಡಿಬರುವುದೂ ಉಂಟು. ಮನದಾಳದ ಭಾವಗಳನ್ನು ಬಡಿದೆಬ್ಬಿಸುವಂತೆ ಚಂಡೆ ನುಡಿಯುತ್ತಿರುತ್ತದೆ. ಮದ್ದಳಗೆ ಈ ಶಕ್ತಿ ಇಲ್ಲದಿದ್ದರೂ, ಅದು ಕೋಮಲವಾಗಿ ಮಿಡಿಯುತ್ತ ಹೃದಯ ಪ್ರವೇಶಿಸಬಲ್ಲದು. ಸ್ತ್ರೀ ಪಾತ್ರಗಳು ಅಥವಾ ಮಾತೃಹೃದಯದ ಸಂವಾದಗಳು ಅರ್ಥಪೂರ್ಣವಾಗಬೇಕಾದರೆ ಈ ಮದ್ದಳೆಯ ಪಾತ್ರ ಮುಖ್ಯವಾಗುತ್ತದೆ.

ಒ೦ದು ಮೇಳದ ಚಿತ್ರ, ಕೃಪೆ : ಅ೦ತರ್ಜಾಲ

  ಈ ಹರಕೆಯ ಆಟದ ವಿಶೇಷವೆಂದರೆ ಭಕ್ತಿ ಎಲ್ಲೆಲ್ಲೂ ಹರಿಯುತ್ತಿರುತ್ತದೆ. ಮನದಾಳದ ಭಕ್ತಿ ತೋರಿಕೆಯದಾಗಿರುವುದಿಲ್ಲ ಎನ್ನುವುದು ನಿಜ. ಆದರೆ ಈ ಹರಕೆಯ ಆಟದಲ್ಲಿ ಭಕ್ತಿಯ ಪ್ರದರ್ಶನಕ್ಕೇ ಹೆಚ್ಚಿನ ಅವಕಾಶ. ಹರಕೆಯ ಆಟವನ್ನು ಆಡಿಸುವವರು ಮತ್ತು ಇಂಥ ಆಟವನ್ನು ನೋಡಲು ಬರುವವರು ಸೇರಿ ಭಕ್ತಿಯ ಪ್ರದರ್ಶಕ್ಕೆ ಅವಕಾಶವನ್ನು ಸೃಷ್ಟಿಸಿರುತ್ತಾರೆ. ರಂಗಸ್ಥಳದ ಒಂದು ಬದಿಗೆ ದೇವಿಯ ಚಿಕ್ಕ ಮಂಟಪವನ್ನು ರೂಪಿಸಿರುತ್ತಾರೆ. ಅದು ರಂಗಸ್ಥಳದ ಒಂದು ಭಾಗವೇ. ಹಾಗೆ ನೋಡಿದರೆ ರಂಗದ ಸುತ್ತಲಿನ ಜಾಗದಲ್ಲಿಯೂ ‘ಆಟ’ನಡೆಯುತ್ತಲೇ ಇರುತ್ತದೆ. ಹಾಗೆ ನಡೆದಾಗಲೇ ಅದು ಕಳೆಗಟ್ಟುವುದು. ನಾನು ಮತ್ತು ನನ್ನ ಮಿತ್ರ ರೆಡ್ಡಿಯವರು ಮುಂಡಾಸು ಸುತ್ತಿರಲಿಲ್ಲ. ಆದರೆ ಮುಂಡು ಕಟ್ಟಿಕೊಂಡಿದ್ದೆವು. ನಮ್ಮ ಮುಂಡು ಎಂದರೆ ಉದ್ದನೆಯ ಪಂಚೆ. ಇಂಥ ದೇಸೀಯ ಉಡುಗೆಯಲ್ಲಿದ್ದರೆ ನಮಗೆ ಹೆಚ್ಚಿನ ‘ಮಯರ್ಾದೆ’ ಸಿಕ್ಕಬಹುದೆಂಬ ಅಂದಾಜು. ಆದರೆ ಯಾರೂ ನಮಗೆ ಬೆಲೆಕೊಟ್ಟದ್ದೇ ಕಾಣಿಸಲಿಲ್ಲ. ಆದರೆ ನಾವೇನೂ ಕುಗ್ಗಲಿಲ್ಲ. ನಮಗೆ ನಾವೇ ಮಯರ್ಾದೆ ಕೊಟ್ಟುಕೊಳ್ಳುತ್ತ ಚೌಕಿಗೆ ನುಗ್ಗಿದೆವು. ರಂಗಸ್ಥಳದ ಮುಂಭಾಗದಲ್ಲಿ ನೂರಾರು ಜನ ಪ್ರೇಕ್ಷಕರು ನಾಟಕವನ್ನು ವೀಕ್ಷಿಸುತ್ತ ಮೈಮರೆತಿದ್ದರೆ, ರಂಗಸ್ಥಳದ ಹಿಂಭಾಗದಲ್ಲಿರುವ ಚೌಕಿಯೇ ಬೇರೆ. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲೊಂದು ದೇವರು; ಅದಕ್ಕೊಬ್ಬ ಪೂಜಾರಿ. ಭಕ್ತರು ಒಳಬರುತ್ತ ದೇವರಿಗೆ ಕೈಮುಗಿದು, ಹುಂಡಿಯಲ್ಲಿ ಹಣಹಾಕಿ, ತೀರ್ಥ ಪ್ರಸಾದ ಪಡೆಯುತ್ತಿದ್ದರು. ಹರಕೆಯ ಆಟ ವ್ಯವಸ್ಥೆ ಮಾಡಿದ್ದವರು, ಒಳ ಹೊರಗೆ ಓಡಾಡುತ್ತ, ಅಲ್ಲಿಗೆ ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ಮುಸಂಬಿಯನ್ನು ಕೊಡಲು ವ್ಯವಸ್ಥೆ ಮಾಡುತ್ತಿದ್ದರು. ಪರಿಚಿತರಾಗಿರುವವರನ್ನು ಮಾತನಾಡಿಸುತ್ತ, ಕುಶಲ ವಿಚಾರಿಸುತ್ತ, ಮುಸುಂಬಿಯನ್ನು ತೆಗೆದುಕೊಂಡು ಹೋಗಿ ಎಂದು ಒತ್ತಾಯಿಸುತ್ತಿದ್ದರು. ದೇವರ ಮುಂಭಾಗದಲ್ಲಿ ಎರಡು ಸಾಲುಗಳಲ್ಲಿ ಎದುರುಬದರಾಗಿ ಕುಳಿತ ಪಾತ್ರಧಾರಿಗಳ ಲೋಕವೇ ಭಿನ್ನವಾದದ್ದು. ಪ್ರತಿಯೊಬ್ಬ ಪಾತ್ರಧಾರಿಯ ಮುಂದೆಯೂ ಒಂದೊಂದು ಪೆಟ್ಟಿಗೆ. ಅದರಲ್ಲಿ ಅವನ ವೇಷ ಭೂಷಣಗಳು; ಅಲಂಕಾರದ ಸರಕು. ಕೈಯಲ್ಲಿ ಒಂದು ಕನ್ನಡಿಯನ್ನು ಹಿಡಿದು, ಮುಖಕ್ಕೆ ಬಣ್ಣ ಬಳಿದುಕೊಳ್ಳುವುದರಲ್ಲಿ ಮಗ್ನರಾಗಿದ್ದವರು. ದೇವಿಯ ಪಾತ್ರಧಾರಿಯ ಸಿದ್ಧತೆ ಪೂರ್ಣಗೊಂಡಿತ್ತು. ಅವನು ಇನ್ನೊಬ್ಬ ಪಾತ್ರಧಾರಿಯ ಬಳಿಗೆ ಬಂದು, ತೊಂದರೆಯಾಗದ ರೀತಿಯಲ್ಲಿ, ಅವನಿಂದ ಪುಟ್ಟ ಸಂದೂಕವನ್ನು ಪಡೆದು ಅದರಲ್ಲಿದ್ದ ಅಡಿಕೆಯನ್ನು ತೆಗೆದು ಹೋಳುಮಾಡಿ ಬಾಯಿಗೆ ಎಸೆದು, ಅದನ್ನು ಜಗಿಯುತ್ತ, ಎಲೆಯನ್ನು ಒರೆಸಿ, ಸುಣ್ಣ ಸವರಿ, ಮಡಿಚಿ ಬಾಯಿಯೊಳಗೆ ತುರುಕಿಕೊಂಡು, ಸಂದೂಕವನ್ನು ಮುಚ್ಚಿ, ವಾಪಸ್ಸು ಮಾಡಿ ತನ್ನ ಸ್ಥಾನಕ್ಕೆ ಹೊರಟುಹೋದ. ಎಲ್ಲರೂ ತಮ್ಮ ಅಲಂಕಾರಗಳಲಿ, ಉಡುಗೆ ತೊಡುಗೆಗಳಲ್ಲಿ ಮಗ್ನರಾಗಿದ್ದರು. ಯಾವ ಪಾತ್ರದ ಪ್ರವೇಶ ಎಷ್ಟು ಹೊತ್ತಿಗೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುವಂತಿತ್ತು. ಸದ್ದಿಲ್ಲದೆ, ಶಿಸ್ತಿನಿಂದ ಈ ಕಲಾವಿದರು ನಡೆಸುತ್ತಿದ್ದ ತಯಾರಿಯನ್ನು ನೋಡುವುದೇ ಒಂದು ಅನುಭವವಾಗಿತ್ತು. ಹೊರಗೆ ಬಂದರೆ ಚಂಡೆಯ ಸದ್ದು ಜೋರಾಯಿತು. ರಂಗದ ಕೆಳಗಡೆಯ ಬದಿಯಲ್ಲಿ ಒಂದು ಮುಳಿಹುಲ್ಲಿನ ರಾಶಿ. ರಾಕ್ಷಸ ಪಾತ್ರವೊಂದು ಅಬ್ಬರಿಸುತ್ತ ಅಲ್ಲಿಗೆ ಬಂದು ಮುಳಿಹುಲ್ಲಿಗೆ ಸೀಮೆಣ್ಣೆ ಸುರಿದು ಧಗ್ಗನೆ ಬೆಂಕಿಹೊತ್ತಿಸಿ ಅಬ್ಬರಿಸುತ್ತ ರಂಗವೇರಿತು. ನಾಲ್ಕು ಹೆಜ್ಜೆ ಕುಣಿದು ಮತ್ತೆ ರಂಗದಿಂದ ಕೆಳಗೆ ಹಾರಿ ತನಗಾಗಿ ಹಿಡಿದಿದ್ದ ದೊಂದಿಗೆ ಮತ್ತಿಷ್ಟು ಎಣ್ಣೆ ಸುರಿದು ಧಗ್ಗನೆ ಬೆಳಗುವಂತೆ ಮಾಡಿತು. ಪ್ರೇಕ್ಷಕರ ಮಧ್ಯದಲ್ಲಿ ಕುಳಿತಿದ್ದ ಮಕ್ಕಳೆಲ್ಲ ಓಡಿ ರಂಗದ ಮುಂಭಾಗಕ್ಕೆ ಬಂದಿದ್ದರು. ಕುತೂಹಲ ಮತ್ತು ಭಯಗಳು ಆ ಕಣ್ಣುಗಳಲ್ಲಿ ಕಣಿಯುತ್ತಿರುವುದು ದೊಂದಿ ಬೆಳಕಿನಲ್ಲಿ ಕಾಣಿಸುತ್ತಿತ್ತು. ಅದೇ ಹೊತ್ತಿಗೆ ರಂಗದ ಒಂದು ಪಾಶ್ರ್ವದಿಂದ ಪಟಾಕಿಗಳ ಅಬ್ಬರ. ಕಿವಿಯ ತಮಟೆಯನ್ನೇ ಹರಿದು ಹಾಕುವಂತಿದ್ದ ಈ ಸದ್ದಿಗೆ ನಿದ್ರೆಯ ಮಂಪರಿನಲ್ಲಿದ್ದ ಅನೇಕರು ಬೆಚ್ಚಿಬಿದ್ದು ಎದ್ದು ಕಣ್ಣು ಅಗಲಿಸಿದರು. ಹರಕೆಯ ಆಟದಲ್ಲಿ ಭಕ್ತಿಯೂ ಇದೆ; ಕಲೆಯೂ ಇದೆ. ಆಚರಣೆಯೂ ಇದೆ; ಕುಣಿತವೂ ಇದೆ. ಶ್ರದ್ಧೆಯೂ ಇದೆ; ತೋರಿಕೆಯೂ ಇದೆ. ಅದ್ಧೂರಿಯ ಖಚರ್ೂ ಇದೆ; ಅಬ್ಬರದ ಗದ್ದಲವೂ ಇದೆ. ಅನೇಕ ಶ್ರೀಮಂತರಿಗೆ ಹರಕೆಯ ಆಟವೆಂದರೆ ತಮ್ಮ ಅಂತಸ್ತನ್ನು ಮೆರೆಸುವ ಆಟವೂ ಹೌದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಆಟ ಎಷ್ಟು ಜನಪ್ರಿಯ ಎಂದರೆ ಹರಕೆಯ ಆಟ ಆಡುವ ತಂಡಗಳೆಲ್ಲ ಮುಂದಿನ ಐದು ವರ್ಷಕ್ಕೆ ಬುಕ್ಕಾಗಿವೆಯಂತೆ. ಕಟೀಲು ಮೇಳ, ಮಂದತರ್ಿ ಮೇಳ, ಧರ್ಮಸ್ಥಳ ಮೇಳ ಇತ್ಯಾದಿ ಮೇಳಗಳು ಹರಕೆಯ ಆಟವನ್ನು ಆಡುತ್ತಿದ್ದರೂ, ಆಟದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಒಂದು ಆಟಕ್ಕೆ ಹತ್ತರಿಂದ ಹದಿನೈದು ಸಾವಿರ ರೂಪಾಯಿಯಷ್ಟು ಮೇಳದ ತಂಡಕ್ಕೆ ಕೊಡಬೇಕು. ಆದರೆ ಇತರ ಖಚರ್ುಗಳಿಗೆ ಮಿತಿ ಎಂಬುದೇ ಇಲ್ಲ. ರಂಗಸ್ಥಳದ ಸಿದ್ಧತೆ, ಚೌಕಿ ಮನೆಯ ಪೂಜೆ, ಪ್ರಸಾದ, ಪಟಾಕಿಯ ಗೌಜು ಇತ್ಯಾದಿ ಸಾವಿರಾರು ರೂಪಾಯಿ ಧೂಳಿಪಟವಾಗುತ್ತವೆ. ಕೆಲವರು ಪ್ರೇಕ್ಷಕರಿಗೆ ಊಟ ಕೊಡುವುದೂ ಉಂಟು. ಇತರ ಅನೇಕ ಆಚರಣೆಗಳು, ನಂಬಿಕೆಗಳೂ ಉಂಟು. ಇವೆಲ್ಲ ಮುಗಿಯುವ ವೇಳೆಗೆ ಹರಕೆ ಸಾವಿರಗಳನ್ನು ದಾಟಿ ಲಕ್ಷಗಳ ಗಡಿಯಲಿ ಓಡುತ್ತಿರುತ್ತದೆ. ಈ ಅರ್ಥದಲ್ಲಿಯೇ ಭಕ್ತಿ ಎನ್ನುವುದು ಒಂದು ಗರಗಸ. ಅದು ಹೋಗುತ್ತ ಕೊಯ್ಯುವುದು, ಬರುತ್ತ ಕೊಯ್ಯುವುದು. ಅದು ಕೊಯ್ಯಲಿ, ಬಿಡಲಿ, ಹರಕೆಯ ಆಟದಲ್ಲಿ ‘ಆಟ’ಕ್ಕಿಂತ ತೋರಿಕೆಯ ಭಕ್ತಿಯೇ ಅಧಿಕವಾಗಿರಲಿ, ಹರಕೆಯ ಆಟಗಳಂತೂ ಉಳಿದುಕೊಂಡು ಬಂದಿವೆ. ಈ ಆಟಗಳನ್ನಾಡುವ ತಂಡಗಳಲ್ಲಿ ನೂರಾರು ಕಲಾವಿದರು ‘ಆಟ’ಗಳನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಪ್ರೇಕ್ಷಕರೂ ಉಳಿದುಕೊಂಡು ಬಂದಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಕಂಡರೂ ಯಕ್ಷಗಾನ ಕರಾವಳಿಯಲ್ಲಿ ಉಳಿದುಕೊಂಡು ಬಂದಿದೆ. ಇದು ಕನರ್ಾಟಕದ ಹೆಮ್ಮೆ.  ]]>

‍ಲೇಖಕರು G

August 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

೧ ಪ್ರತಿಕ್ರಿಯೆ

  1. ಕೆ. ಕುಮಾರ ವಿಜಯನ್

    ಯಕ್ಷಗಾನ ಇಂದು ಬೆಳೆದು ನಿಂತ ಸ್ಥಿತಿಯಲ್ಲಿ ಇಂಥಾ ಬರಹ ಪುಟ ತುಂಬಿಸಲು ಮಾತ್ರ ಎಂದು ವಿಷಾದಪೂರ್ವಕವಾಗಿ ಹೇಳಬೇಕಾಗುತ್ತದೆ. “ಹರಕೆಯ ಆಟದಲ್ಲಿ ಭಕ್ತಿಯೂ ಇದೆ; ಕಲೆಯೂ ಇದೆ. ಆಚರಣೆಯೂ ಇದೆ; ಕುಣಿತವೂ ಇದೆ. ಶ್ರದ್ಧೆಯೂ ಇದೆ; ತೋರಿಕೆಯೂ ಇದೆ.., ದೊಂದಿಗೆ ಮತ್ತಿಷ್ಟು ಎಣ್ಣೆ ಸುರಿದು ಧಗ್ಗನೆ ಬೆಳಗುವಂತೆ ಮಾಡಿತು” ಹೀಗೆ ಹಲವು ಉಲ್ಲೇಖಗಳು ಲೇಖಕರ ಅನಧ್ಯಯನ, ಗೊಂದಲ ಮಾತ್ರ ಕಾಣಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: