ಗೂಗಲ್ ಬಿಚ್ಚಿಟ್ಟ ಸತ್ಯಗಳು

ಜಿ ಎನ್  ಮೋಹನ್

ಗೂಗಲ್ ಸಂಸ್ಥೆ ಇತ್ತೀಚಿಗೆ ತನ್ನ ನಾಲ್ಕನೆಯ ದ್ವೈವಾರ್ಷಿಕ ಪಾರದರ್ಶಕ ವರದಿ’ಯನ್ನು ಪ್ರಕಟಿಸಿದೆ. ಈ ವರದಿ ಈಗ ಪ್ರಕಟವಾಗಿದ್ದರೂ ಅದು 2011ರ ಜನವರಿ- ಜೂನ್ ಅವಧಿಯದ್ದು. ಈ ವರದಿ ಪ್ರಕಟವಾದದ್ದೇ ತಡ ಜಗತ್ತಿನ ಕಣ್ಣಲ್ಲಿ ಭಾರತದ ಸ್ಥಾನಮಾನಕ್ಕೆ ಒಂದಿಷ್ಟು ಹಿನ್ನಡೆಯಂತೂ ಆಗಿದೆ. ಭಾರತ, ಬಹು ಅಭಿಪ್ರಾಯವನ್ನು, ಬಹು ಸಂಸ್ಕೃತಿಯನ್ನು, ಬಹು ನೋಟವನ್ನು ಗೌರವಿಸುವ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು ಎನ್ನುವ ಗೌರವ ಹೊಂದಿದೆ. ಆದರೆ, ಈ ವರದಿ ಅದಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ಸ್ವಾತಂತ್ರ್ಯದ ಬಗ್ಗೆ ದೇಶಕ್ಕಿರುವ ಅಸಹನೆಯನ್ನು ಬಯಲು ಮಾಡಿದೆ.

ಗೂಗಲ್ ಈ ಪಾರದರ್ಶಕ ವರದಿ’ಯನ್ನು ಮಂಡಿಸುತ್ತ ಬಂದಿರುವುದು ಕಳೆದ ಎರಡು ವರ್ಷದಿಂದ ಮಾತ್ರ. ತನ್ನ ವ್ಯಾಪ್ತಿಯ ಸರ್ಚ್ ಎಂಜಿನ್, ಆರ್ಕುಟ್, ಯು ಟ್ಯೂಬ್, ಪಿಕಾಸ, ಬ್ಲಾಗ್ ಪೋಸ್ಟ್‌ನಲ್ಲಿರುವ ಮಾಹಿತಿ, ವಿಡಿಯೊ, ಆಡಿಯೋಗಳನ್ನು ತೆಗೆದು ಹಾಕಬೇಕೆಂದು ನಾನಾ ದೇಶಗಳು ಮೇಲಿಂದ ಮೇಲೆ ಒತ್ತಡ ಹೇರಲು ಆರಂಭಿಸಿದಾಗ ಇನ್ನೇನೂ ಮಾಡಲು ತೋಚದ ಗೂಗಲ್ ಕನಿಷ್ಠ ಈ ಒತ್ತಡ ಎಷ್ಟರ ಮಟ್ಟಿನದ್ದು ಹಾಗೂ ತಾನು ಇದಕ್ಕೆ ಎಷ್ಟು ಬಾಗಿದ್ದೇನೆ ಎನ್ನುವ ಅಂಕಿ-ಅಂಶಗಳನ್ನು ನೀಡಲು ಆರಂಭಿಸಿತು. 2010ರಲ್ಲಿ ಬುಡಾಪೆಸ್ಟ್‌ನಲ್ಲಿ ಜರುಗಿದ Internet At Liberty ಸಮಾವೇಶದಿಂದ ಈ ವರದಿ ಪ್ರಕಟಣೆ ಆರಂಭವಾಯಿತು. ತೀವ್ರ ಸ್ಪರ್ಧೆಯ ದಿನಗಳಲ್ಲಿ ಎಲ್ಲ ದೇಶಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಗೂಗಲ್‌ಗೆ ಆಯಾ ಸರಕಾರಗಳು ನೀಡುತ್ತಿದ್ದ ನಿರ್ದೇಶನವನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿರಲಿಲ್ಲ. ಹಾಗೇನಾದರೂ ನಿರಾಕರಿಸಿದರೆ ಅದು ಗೂಗಲ್‌ನ ಬೆಳವಣಿಗೆಗೇ ಅಡ್ಡಿಯಾಗುತ್ತಿತ್ತು. ಇಂತಹ ಉಭಯ ಸಂಕಟದ ಮಧ್ಯೆ ಸಿಕ್ಕಿ ಹಾಕಿಕೊಂಡ ಗೂಗಲ್ ಕನಿಷ್ಠ ಈ ಒತ್ತಡ ಎಷ್ಟರ ಮಟ್ಟಿನದ್ದು ಎನ್ನುವುದನ್ನು ಜನರ ಮುಂದೆ ಮಂಡಿಸಲು ಆರಂಭಿಸಿತು. ಈ ಪಾರದರ್ಶಕ ವರದಿ ಹೇಳುವುದು ತನಗೆ ಬಂದ ಮನವಿಗಳು ಎಷ್ಟು ಹಾಗೂ ಈ ಮನವಿ ಎಷ್ಟು ಅಂಶಗಳನ್ನು ತೆಗೆದು ಹಾಕಲು ಬಯಸಿತ್ತು, ತಾನು ಎಷ್ಟು ಪ್ರಮಾಣದಲ್ಲಿ ಅದನ್ನು ಈಡೇರಿಸಿದ್ದೇನೆ ಎಂಬ ಮೂರು ವಿಷಯಗಳನ್ನು ಮಾತ್ರ. ಆದರೆ, ತನ್ನ ಮೂರನೆಯ ಪಾರದರ್ಶಕ ವರದಿಯಿಂದ ಗೂಗಲ್ ಒಂದು ಸಣ್ಣ ಬದಲಾವಣೆ ಮಾಡಿತು. ನಾನಾ ದೇಶಗಳು ಎಂತಹ ವಿಷಯಗಳನ್ನು ತೆಗೆದು ಹಾಕಲು ಬಯಸಿತ್ತು ಎಂಬುದರ ಪ್ರಮಾಣವನ್ನೂ ನೀಡಲು ಆರಂಭಿಸಿತು. ಏನನ್ನು ತೆಗೆಯಲಾಗಿದೆ?, ಯಾರಿಗೆ ಸಂಬಂಧಿಸಿದ್ದು?, ಯಾರು ಹೇಳಿ ತೆಗೆಸಿದ್ದು?’ ಎಂಬುದರ ವಿವರಗಳನ್ನು ನೀಡದಿದ್ದರೂ ಈಗ ಕೊಡುತ್ತಿರುವ ಕನಿಷ್ಠ ಮಾಹಿತಿಯೇ ಭಾರತದಲ್ಲಿನ ಇಂಟರ್ನೆಟ್ ಸ್ವಾತಂತ್ರ್ಯದ ಕಲ್ಪನೆಯನ್ನೇ ಬದಲಿಸುವಂತಿದೆ. ಗೂಗಲ್ ಇದುವರೆಗೆ ಮಂಡಿಸಿರುವ ನಾಲ್ಕು ವರದಿಯ ಪ್ರಕಾರ ತನ್ನ ಸೇವೆಯ ವ್ಯಾಪ್ತಿಯಲ್ಲಿರುವ ವಿವಿಧ ತಾಣಗಳಿಂದ ಭಾರತ ತನಗೆ ಸರಿಯಲ್ಲ ಎನಿಸಿದ ವಿಷಯಗಳನ್ನು ತೆಗೆದುಹಾಕುವಂತೆ ಕ್ರಮವಾಗಿ 142, 30, 67, 68 ಮನವಿಗಳನ್ನು ಕಳೆದ ಎರಡು ವರ್ಷದಲ್ಲಿ ಸಲ್ಲಿಸಿದೆ. ಸಾಮಾಜಿಕ ತಾಣ, ಬ್ಲಾಗ್‌ಗಳು, ವಿಡಿಯೊ, ಫೋಟೊಗಳಿಗೆ ಸಂಬಂಧಿಸಿದಂತೆ ಭಾರತ ಅಷ್ಟು ಅಸಹನೆಯನ್ನು ಹೊಂದಿದೆಯೇ? ಕೇಂದ್ರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಕಪಿಲ್ ಸಿಬಲ್ ಮಾನಹಾನಿ, ದ್ವೇಷ ಬಿತ್ತುವ ಭಾಷಣಗಳ ವಿರುದ್ಧ ಈ ಕ್ರಮ ಎಂದು ಮೇಲಿಂದ ಮೇಲೆ ಸ್ಪಷ್ಟಪಡಿಸಿದ್ದಾರೆ. ಅದೇ ವೇಳೆ ತಮ್ಮ ಕಚೇರಿಗೆ ಗೂಗಲ್, ಫೇಸ್‌ಬುಕ್, ಯಾಹೂ, ಮೈಕ್ರೋಸಾಫ್ಟ್ ಅಧಿಕಾರಿಗಳನ್ನು ಕರೆಸಿಕೊಂಡು ಅವರ ಮುಂದೆ ತಮ್ಮನ್ನು ಆಕ್ರೋಶಕ್ಕೀಡುಮಾಡಿದ ಫೋಟೊ ಒಂದನ್ನು ಇರಿಸಿ ಇದನ್ನು ಸಹಿಸಲು ಹೇಗೆ ಸಾಧ್ಯ ಹೇಳಿ?’ ಎಂದು ಕೇಳುತ್ತಾರೆ. ಕಪಿಲ್ ಸಿಬಲ್ ಹೇಳಿದ ಎರಡು ಕಾರಣಗಳಿಗಷ್ಟೇ ಇಂಟರ್ನೆಟ್ ಲೋಕದ ಬಗ್ಗೆ ಅಸಹನೆ ಮೊಳೆತಿದೆ ಎನ್ನುವುದು ತಪ್ಪು ಎಂಬುದು ಗೂಗಲ್‌ನ ಪಾರದರ್ಶಕ ವರದಿಯನ್ನು ಅಭ್ಯಾಸ ಮಾಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಗೂಗಲ್‌ನ ಇತ್ತೀಚಿನ ವರದಿಯ ಪ್ರಕಾರ ಸರಕಾರ ವಿವಿಧ ವಿಷಯಗಳನ್ನು ತೆಗೆದು ಹಾಕುವಂತೆ 68 ಮನವಿಯನ್ನು ಮಾಡಿತ್ತು. ಈ ಪೈಕಿ ಮಾನಹಾನಿಯ 39 ಹಾಗೂ ದ್ವೇಷ ಕದಡುವ ಭಾಷಣಗಳ ಪ್ರಕರಣಗಳು 8 ಮಾತ್ರ. ಆದರೆ, ಅದೇ ವೇಳೆ ಸರಕಾರವನ್ನು ಟೀಕಿಸುವ 255 ವಿಷಯಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿತ್ತು. ಇದರಿಂದ ಸರಕಾರ ಯಾವುದಕ್ಕಾಗಿ ಇಂಟರ್ನೆಟ್ ಲೋಕದ ಮೇಲೆ ತನ್ನ ಗಮನವನ್ನು ತೀವ್ರಗೊಳಿಸಿದೆ ಎನ್ನುವುದು ಗೊತ್ತಾಗುತ್ತದೆ. ಗೂಗಲ್‌ನ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಪ್ರತಿ ತಿಂಗಳು 42.5 ವಿಷಯಗಳನ್ನು ತೆಗೆದುಹಾಕುವ ಸೂಚನೆ ಬರುತ್ತಿದೆ. ಅಂದರೆ, ಮೂರು ದಿನಕ್ಕೊಮ್ಮೆ ಎರಡು ವಿಷಯಗಳು ಅಂತರ್ಜಾಲ ಲೋಕದಲ್ಲಿ ಕಾಣೆಯಾಗುತ್ತಿವೆ. ಈ ಕಾಣೆಗೆ ನಿರ್ದೇಶನ ಹೋಗುತ್ತಿರುವುದು ಕೇಂದ್ರ ಸರಕಾರದಿಂದ ಮಾತ್ರವಲ್ಲ, ರಾಜ್ಯ ಸರಕಾರಗಳು, ನ್ಯಾಯಾಲಯ, ಪೊಲೀಸ್ ವ್ಯವಸ್ಥೆ ಎಲ್ಲವೂ ನೇರವಾಗಿ ಗೂಗಲ್ ಅನ್ನು ತನಗೆ ಇಷ್ಟವಿಲ್ಲದ ವಿಷಯಗಳನ್ನು ತೆಗೆದುಹಾಕುವಂತೆ ಹೇಳಬಹುದು. ಈ ಮಧ್ಯೆ ಇನ್ನೂ ಕಳವಳಕಾರಿಯದ ಬೆಳವಣಿಗೆ ಜರುಗಿದೆ. ಅದು ಅಂತರ್ಜಾಲದ ಬಳಕೆದಾರರ ವಿವರವನ್ನು ಕೊಡುವಂತೆ ಕೇಳುವುದು. ಅಂದರೆ ಪಾಸ್‌ವರ್ಡ್ ಒಂದನ್ನು ಹೊರತುಪಡಿಸಿ ಎಲ್ಲ ವಿವರಗಳನ್ನು ಕೇಳಿದವರಿಗೆ ನೀಡುವುದು. ಜಗತ್ತು ಭಾರತದ ಅಂತರ್ಜಾಲ ವ್ಯವಸ್ಥೆಯ ಬಗ್ಗೆ ಗುಮಾನಿ ಹೊಂದಲು ಇದೂ ಮುಖ್ಯ ಕಾರಣ. ಭಾರತ ಸದ್ದಿಲ್ಲದಂತೆ ಆರಂಭಿಸಿರುವ ಇಂಟರ್ನೆಟ್ ಸ್ವಾತಂತ್ರ್ಯದ ಹರಣ ಈಗ ಜಗತ್ತಿನ ಸ್ವಾತಂತ್ರ್ಯದ ಕಾವಲುನಾಯಿ’ಗಳ ಕಣ್ಣಿಗೂ ಬಿದ್ದಿದೆ. reporters without borders ಸಂಸ್ಥೆ ಈ ಕಾರಣಕ್ಕಾಗಿಯೇ ಭಾರತವನ್ನು ತೀವ್ರ ನಿಗಾ’ದಲ್ಲಿಡಬೇಕಾದ ದೇಶ ಎಂಬ ಪಟ್ಟಿಗೆ ಸೇರಿಸಿದೆ. ಈ ಸಂಸ್ಥೆ ನೀಡುವ ಸ್ವಾತಂತ್ರದ rank ಪಟ್ಟಿಯಲ್ಲಿ ಭಾರತ ಮೊದಲಿಗಿಂತ 9 ಸ್ಥಾನ ಹಿಂದೆ ಜಾರಿದೆ. 178 ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 131. ಆಯ್ದ ಇಂಟರ್ನೆಟ್ ಮಾಹಿತಿಗಳನ್ನು ಇಲ್ಲವಾಗಿಸುವ’ ವ್ಯವಸ್ಥೆಯನ್ನು ಭಾರತ ಹೊಂದಿದೆ ಎಂದು open net initiative ಗುರುತಿಸಿದೆ. Frreedom house ಮಂಡಿಸುವ ‘ಅಂತರ್ಜಾಲದಲ್ಲಿ ಸ್ವಾತಂತ್ರ್ಯ’ ಕುರಿತ ವರದಿಯಲ್ಲಿ ಭಾರತ 36 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಇದು ಗೂಗಲ್ ನ ಅಂಕಿ ಅಂಶ ಮಾತ್ರ. ಫೇಸ್‌ಬುಕ್‌ನ ಜನಪ್ರಿಯತೆಯ ಮುಂದೆ ಆರ್ಕುಟ್ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಹಾಗಾಗಿ ಫೇಸ್‌ಬುಕ್‌ನ ಅಂಕಿ-ಅಂಶಗಳು ಭಾರತದ ಇನ್ನೊಂದು ಮುಖವನ್ನೇ ಅನಾವರಣ ಮಾಡಬಹುದು. ಭಾರತ ಫೇಸ್‌ಬುಕ್, ಯಾಹೂ, ಮೈಕ್ರೋಸಾಫ್ಟ್ ಗಳಿಗೂ ಸಲ್ಲಿಸಿರುವ ಮನವಿಯ ಅಂಕಿ-ಅಂಶ ನಮ್ಮಲ್ಲಿಲ್ಲ. 2008ರವರೆಗೆ ಭಾರತ ಇಂಟರ್ನೆಟ್ ಬಗ್ಗೆ ಅಸಹನೆ ಹೊಂದಿರಲಿಲ್ಲ. ಆದರೆ, ಆ ವರ್ಷ ಮುಂಬಯಿಯಲ್ಲಿ 171 ಮಂದಿಯ ಹತ್ಯೆಗೆ ಕಾರಣವಾದ ಭಯೋತ್ಪಾದಕರ ದಾಳಿಯ ನಂತರ ಇಂಟರ್ನೆಟ್ ಕುರಿತ ಭಾರತದ ನೋಟವೇ ಬದಲಾಗಿದೆ. ಈ ಪ್ರಕರಣ ಭಾರತ ಮಾಹಿತಿ ತಂತ್ರಜ್ಞಾನ ಕಾಯಿದೆ (ಐಅ)ಯನ್ನು ಜಾರಿಮಾಡಲು ಕಾರಣ ಮಾಡಿಕೊಟ್ಟಿತು. ದೇಶದ ಭದ್ರತೆ, ಕೋಮು ಸಾಮರಸ್ಯ, ಬಹು ಧರ್ಮಕ್ಕೆ ಗೌರವ- ಹೀಗೆ ಭಾರತ ತಾನು ಹೇಳಿದ ಕಾರಣಗಳಿಗೆ ಮಾತ್ರ ಬದ್ಧವಾಗಿದ್ದಿದ್ದರೆ ಇಂಟರ್ನೆಟ್ ಸ್ವಾತಂತ್ರ್ಯದ ಮಧ್ಯಪ್ರವೇಶ ಚರ್ಚೆಗೆ ಕಾರಣವಾಗುತ್ತಿರಲಿಲ್ಲ. ದೇಶದ ಭದ್ರತೆ ಹಾಗೂ ಇತರ ಪ್ರಾಮಾಣಿಕ ಕಾರಣಗಳಿಗಾಗಿಯೇ ಸರಕಾರ ಇಂಟರ್ನೆಟ್ ಸ್ವಾತಂತ್ರದಲ್ಲಿ ಮಧ್ಯಪ್ರವೇಶಿಸುವ ಹಕ್ಕನ್ನು ಪಡೆದುಕೊಂಡರೂ ಇನ್ನೊಂದು ದಿಕ್ಕಿನಿಂದ ಸಾಮಾಜಿಕ ತಾಣಗಳ ಜನಪ್ರಿಯತೆ ಹೆಚ್ಚುತ್ತ ಹೋದದ್ದು ಅದರ ಕಸಿವಿಸಿಗೆ ಕಾರಣವಾಯಿತು. ಆ ವೇಳೆಗಾಗಲೇ ತನ್ನ ಬಳಿ ಇದ್ದ ಕಾಯಿದೆಯ ಚಾಟಿಯನ್ನು ಬೇರೆಲ್ಲದರ ಮೇಲೂ ಬೀಸಲು ಅವಕಾಶ ಮಾಡಿಕೊಟ್ಟಿತು. ಯುಪಿಎ ಸರಕಾರದ ಬಗ್ಗೆ ಆರಂಭವಾದ ಟೀಕೆ, ಇದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಗುರಿಯಾದದ್ದು, ಈ ಸಂದರ್ಭದಲ್ಲಿಯೇ ಅಣ್ಣಾ ಚಳವಳಿ ರೂಪುಗೊಂಡಿದ್ದು ಕೇಂದ್ರ ಸರಕಾರ ಇಂಟರ್ನೆಟ್ ಸ್ವಾತಂತ್ರ್ಯದ ಬಗ್ಗೆ ಅಸಹನೆ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ. ಸಾಮಾಜಿಕ ತಾಣಗಳೇ ಈಗಿನ ಅಸಹನೆಗೆ ಮುಖ್ಯ ಕಾರಣ ಎನ್ನುವುದರಲ್ಲಿ ಅನುಮಾನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಗೂಗಲ್ ಮಂಡಿಸಿರುವ ಪಾರದರ್ಶಕ ವರದಿ ಮತ್ತೆ ಅದನ್ನೇ ಪರೋಕ್ಷವಾಗಿ ಹೇಳುತ್ತಿದೆ. ಅದರ ವರದಿಯಲ್ಲಿ ಬ್ಲಾಗ್‌ಗಳು, ಯು ಟ್ಯೂಬ್, ಪಿಕಾಸ, ಗೂಗಲ್ ಅರ್ಥ್, ಗೂಗಲ್ ಮ್ಯಾಪ್ ಸೇವೆಗೆ ಹೋಲಿಸಿದರೆ ಅತಿ ಹೆಚ್ಚು ಮನವಿ ಸಲ್ಲಿಕೆಯಾಗಿರುವುದು ಆರ್ಕುಟ್ ಜಾಲತಾಣದಲ್ಲಿನ ವಿಷಯಗಳನ್ನು ತೆಗೆದು ಹಾಕುವ ಬಗ್ಗೆ. ಸರಕಾರ ಸಲ್ಲಿಸಿರುವ 358 ವಿಷಯಗಲ್ಲಿ 264 ಆರ್ಕುಟ್‌ಗೇ ಸಂಬಂಧಿಸಿದ್ದು. ಅದರ ಪೈಕಿ ಸರಕಾರದ ಟೀಕೆ’ಯ ವಿಭಾಗವೊಂದರಲ್ಲೇ 236 ವಿಷಯಗಳು ಸರಕಾರಕ್ಕೆ ಒಪ್ಪಿಗೆಯಾಗಿಲ್ಲ. ಇವತ್ತು ಸಾಮಾಜಿಕ ಜಾಲ ತಾಣಗಳು ಜನರನ್ನು ಒಂದುಗೂಡಿಸುತ್ತಿವೆ, ಜನರನ್ನು ಬೇರ್ಪಡಿಸುತ್ತಲೂ ಇದೆ. ಮದುವೆ ಮಾಡಿಸುತ್ತಿದೆ, ಮದುವೆ ಒಡೆಯುತ್ತಿದೆ. ಚಳವಳಿ ಹುಟ್ಟುಹಾಕುತ್ತಿದೆ, ಚಳವಳಿಯನ್ನು ಒಡೆಯುತ್ತಿದೆ, ಅಣ್ಣಾ ಹಜಾರೆ ಚಳವಳಿ ಸಾಮಾಜಿಕ ಜಾಲತಾಣದಲ್ಲಿ ಉಂಟು ಮಾಡಿದ ಪ್ರತಿಕ್ರಿಯೆಯನ್ನು ನೋಡಿದವರು activist ಪದಕ್ಕೆ ಪರ್ಯಾಯವಾಗಿ clickist ಎಂಬ ಪದವನ್ನು ಹುಟ್ಟುಹಾಕಿದರು. ಕ್ಲಿಕ್ ಮಾಡಿ ಅಭಿಪ್ರಾಯ ಬದಲಿಸುವ ಕಾಲ ಇದು. ಹಾಗಾಗಿಯೇ ಈ ‘ಕ್ಲಿಕ್” ಸರಕಾರದ ಕಣ್ಣಿಗೂ ಬಿದ್ದಿದೆ.

(ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ)

]]>

‍ಲೇಖಕರು G

June 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ಎಂಬ ‘ಜೋತಮ್ಮ’

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This