ಜಿ ಎಸ್ ಎಸ್ ನೇರನುಡಿ: ಮನುಷ್ಯನಾಗಿ ಬದುಕುವುದಕ್ಕೆ ದೇವರು ಬೇಕಾಗಿಲ್ಲ

ಎಂ.ಎನ್.ಅಹೋಬಳಪತಿ

ಕೃಪೆ : ದ ಸ೦ಡೆ ಇ೦ಡಿಯನ್

ನೀವು ಕುವೆಂಪು ಚಿಂತನೆಯ ಹಿನ್ನೆಲೆಯವರು. ನವೋದಯ ಸಂದರ್ಭದಲ್ಲಿ ಬರವಣಿಗೆ ಆರಂಭಿಸಿದವರು. ಆ ಕುರಿತು ಏನು ಹೇಳುತ್ತೀರಿ? ಕುವೆಂಪು ಚಿಂತನೆಯ ಹಿನ್ನೆಲೆ ಅನ್ನೋ ಮಾತು ಬಹಳ ಚೆನ್ನಾಗಿದೆ. ಕವಿಗಳನ್ನು ಯಾವಾಗಲೂ ಅವರ ಕಾಲದ ದೊಡ್ಡಕವಿಗಳ ಹಿನ್ನೆಲೆಯಲ್ಲಿ ನೋಡೋದು ಒಳ್ಳೆಯದು. ಯಾಕೆಂದರೆ ನಾನು ಕುವೆಂಪು ಹಿನ್ನೆಲೆಯಿಂದಲೇ ಬಂದವನು. ಹಾಗಂತ ಹೇಳಿಕೊಳ್ಳುವುದು ಪ್ರಿಯವಾದ ವಿಚಾರ ಕೂಡ. ಇವತ್ತಿಗೂ ಕುವೆಂಪು ಅಂದರೆ ಏನು ಅಂತ ನನ್ನ ಮನಸ್ಸಿನಲ್ಲಿ ಗಾಢವಾಗಿದೆಯೋ ಅದೆಲ್ಲವನ್ನೂ ಇದು ಒಳಗೊಳ್ಳುತ್ತದೆ. ಕುವೆಂಪು ಭಾರತೀಯ ಪುನರುಜ್ಜೀವನ ಕಾಲದ ಬಹುದೊಡ್ಡ ಕವಿ. ಈ ಪುನರುಜ್ಜೀವನವನ್ನು ಕುವೆಂಪು ಅವರು ನವೋದಯ ಅಂತ ಕರೆದರು. ನವೋದಯ ಅಂದರೆ ಹೊಸತರ ಉದಯ. ಪುನರುಜ್ಜೀವನ ಪದವನ್ನು ಬೇರೆ ಬೇರೆ ಭಾಷೆಗಳವರು ತಮ್ಮ ಭಾಷೆಗಳಿಗೆ ಅನುವಾದ ಮಾಡಿಕೊಂಡರು. ಆದರೆ ಕನ್ನಡದಲ್ಲಿ ನವೋದಯ ಪದಕ್ಕಿರುವಷ್ಟು ವ್ಯಾಪ್ತಿ ಯಾವುದಕ್ಕೂ ಇಲ್ಲ. ನವೋದಯ ಅಂದರೆ ಪ್ರಜಾಪ್ರಭುತ್ವವಾದಿ ಮೌಲ್ಯಗಳು ಉಳ್ಳದ್ದು. ವಿಜ್ಞಾನ, ವೈಜ್ಞಾನಿಕ ದೃಷ್ಟಿಕೋನ, ರಾಷ್ಟ್ರೀಯ ಮನೋಧರ್ಮ… ಹೀಗೆ ಇಂಡಿಯಾದ ಚರಿತ್ರೆಯಲ್ಲಿ ಅದುವರೆಗೂ ನವೋದಯ ಸಂದರ್ಭದಲ್ಲಿ ಆದ ಎಚ್ಚರ, ಬಹುದೊಡ್ಡ ಪ್ರಮಾಣದ ಬದಲಾವಣೆ ಎಂದೂ ಆಗಿರಲಿಲ್ಲ. ನವೋದಯದ ಇಂಥಾ ಉತ್ಕರ್ಷ ಕಾಲದಲ್ಲೇ ನಾನು ಬರವಣಿಗೆ ಆರಂಭಿಸಿದೆ. ನಾಲ್ಕು ಸಾಹಿತ್ಯ ಪಂಥಗಳ ಹಾದು ಹೋಗುವಿಕೆಯ ಸಂದರ್ಭದಲ್ಲೂ ಸಕ್ರಿಯವಾಗಿದ್ದೂ ಯಾವ ಪಂಥದ ಚೌಕಟ್ಟಿನಲ್ಲೂ ತಮ್ಮನ್ನು ಗುರುತಿಸಲಾಗದ ಹಿನ್ನೆಲೆ ಪ್ರಜ್ಞಾಪೂರ್ವಕವಾದುದೇ? ಹೌದು. ನಾನು ಎಲ್ಲ ಸಾಹಿತ್ಯ ಚಳವಳಿಗಳ ಮೂಲಕ ಹಾದು ಬಂದವನು. ಆದರೆ ಯಾವುದೇ ಸಾಹಿತ್ಯ ಚಳವಳಿಗೆ ಬದ್ಧವಾದವನಲ್ಲ. ಪ್ರತಿಯೊಂದು ಸಾಹಿತ್ಯ ಚಳವಳಿಯಿಂದಲೂ ನನ್ನ ಸೃಜನಶೀಲತೆಗೆ ತಕ್ಕಷ್ಟನ್ನು ಸ್ವೀಕರಿಸಿದವನು. ಇದು ಪ್ರಜ್ಞಾಪೂರ್ವಕವಾಗಿಯೂ ಇತ್ತು. ನನ್ನ ಬರವಣಿಗೆಯ ಸಂವೇದನೆಗಳೂ ಹಾಗಿದ್ದವು. ಯಾಕೆಂದರೆ ಯಾವುದೇ ಒಂದು ಪಂಥಕ್ಕೆ ಒಳಗಾಗಲು ನನ್ನ ಮನಸ್ಸು ಇಷ್ಟಪಡಲಿಲ್ಲ. ಹೀಗಾಗಿ ನನ್ನನ್ನು ಅಂದಿನ ವಿಮರ್ಶಕರು ಯಾವ ಪಂಥಕ್ಕೆ ಸೇರಿಸಬೇಕೆಂದು ಗೊತ್ತಾಗದೇ ಗೊಂದಲಕ್ಕೆ ಬಿದ್ದರು. ಒಂದು ಹಿನ್ನೋಟವಾಗಿ ನೋಡಿದಾಗ ಯಾವ ಪಂಥದ ಕೊಡುಗೆ ಮಹತ್ವದ್ದು ಅನಿಸುತ್ತೆ? ಯಾವ ಪಂಥ ಮಹತ್ವದ್ದು ಎಂದು ಹೇಳುವುದು ಕಷ್ಟ. ಪ್ರತಿಯೊಂದಕ್ಕೂ ಮಹತ್ವ ಇದೆ. ಹಾಗೆ ಹೇಳಬೇಕೆಂದರೆ ನಾನು ನವೋದಯವೇ ಎಲ್ಲಕ್ಕಿಂತ ಹೆಚ್ಚು ಪ್ರಭಾವಶಾಲಿಯಾದದ್ದು ಎಂದು ಹೇಳುತ್ತೇನೆ. ಕುವೆಂಪು ನಂತರ ತಾವು ರಾಷ್ಟ್ರಕವಿ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದೀರಿ. ಈ ಗೌರವ ದೊರೆತದ್ದಕ್ಕೆ ಇಂಥಾದ್ದೇ ಎನ್ನುವ ಮುಖ್ಯ ಕಾರಣ ಇದೆ ಎಂದು ಅನ್ನಿಸಿದೆಯಾ? ನನಗೆ ಗೊತ್ತಿಲ್ಲ. ಹಿಂದಿನ ರಾಷ್ಟ್ರಕವಿಗಳಾದ ಗೋವಿಂದ ಪೈ ಮತ್ತು ಕುವೆಂಪು ಅವರ ಸಾಧನೆಗೆ ಹೋಲಿಸಿದರೆ ನನ್ನದೇನೂ ಅಲ್ಲ. ಅತ್ಯಂತ ಮಹತ್ವದ ಕವಿ ಮತ್ತು ಮಹತ್ವದ ಸಂಶೋಧಕರಾದ ಈ ಇಬ್ಬರಿಗೂ ಸಿಕ್ಕ ಆ ಗೌರವ ನನಗೂ ಸಿಕ್ಕಿತು ಎಂಬುದು ನನ್ನಲ್ಲಿ ಒಂದು ಬಗೆಯ ಧನ್ಯತಾಭಾವವನ್ನು ಮೂಡಿಸುತ್ತದೆ. ರಾಷ್ಟ್ರಕವಿ ಪ್ರಶಸ್ತಿಗೆ ಅರ್ಹರಾದ ಬೇರೆ ಕೆಲವು ಸಾಹಿತಿಗಳು ನನ್ನ ಕಾಲದಲ್ಲೇ ಇದ್ದರು ಎಂಬುದು ನನಗೆ ಗೊತ್ತಿದೆ. ಆದರೆ ರಾಷ್ಟ್ರಕವಿಯಾಗಿ ನನ್ನ ಆಯ್ಕೆ ಯಾವುದೇ ತಕರಾರನ್ನು ಸೃಷ್ಟಿ ಮಾಡಲಿಲ್ಲ. ಯಾವ ಅಪಸ್ವರವೂ ಬರಲಿಲ್ಲ. ಅದು ಬಹಳ ಮುಖ್ಯ. ಬಹಳ ಸಂತೋಷದ ವಿಚಾರ. ಕುವೆಂಪು ಮತ್ತು ಗೋವಿಂದ ಪೈ ಇವರಿಗೆ ಬಂದ ಗೌರವ ನನಗೂ ಬಂತು ಎನ್ನುವುದು ಸಂಭ್ರಮದ ವಿಷಯ. ಕನ್ನಡ ಭಾಷೆ, ಶಿಕ್ಷಣದ ಕುರಿತು ಸರ್ಕಾರದ ನಡೆ ನುಡಿಗಳ ಬಗ್ಗೆ ನಿಮ್ಮ ಅಭಿಪ್ರಾಯ? ಕನ್ನಡ ಅನುಷ್ಠಾನದ ವಿಚಾರದಲ್ಲಿ ಸರ್ಕಾರ ಬಹಳ ಚಮತ್ಕಾರ ಮಾಡುತ್ತಿದೆ. ಕನ್ನಡದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದ್ದಕ್ಕಿದ್ದಂತೆ ಯಾರನ್ನೂ ಕೇಳದೆ ಗ್ರಾಮಾಂತರ ಪ್ರದೇಶಗಳಲ್ಲಿ ೬ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸ್ತೀವಿ ಅಂತ ಹೇಳ್ಬಿಟ್ರೆ ಹೇಗೆ? ಅದು ಇಡೀ ಜನಜೀವನಕ್ಕೆ ಸಂಬಂಧಪಟ್ಟ ವಿಷಯ ಅದರ ಬಗ್ಗೆ ಚರ್ಚೆ ಮಾಡಬೇಕು. ತಜ್ಞರ ಅಭಿಪ್ರಾಯ ಪಡೆಯಬೇಕು. ಶಾಲೆಗಳನ್ನು ಮುಚ್ಚುವ ಕ್ರಮವೂ ಅಷ್ಟೇ. ಒಂದು ಕಡೆ ಕನ್ನಡಕ್ಕೆ ಪ್ರೋತ್ಸಾಹ ಚೆನ್ನಾಗಿ ಕೊಡ್ತಾರೆ. ಇನ್ನೊಂದು ಕಡೆ ಈ ಥರ ಕೆಲಸಗಳನ್ನು ಮಾಡ್ತಾರೆ. ಕನ್ನಡ ಅಭಿವೃದ್ಧಿಗೆ ಕರ್ನಾಟಕದಲ್ಲಿರುವಷ್ಟು ಸಾಂಸ್ಥಿಕ ಬೆಂಬಲ ಯಾವ ರಾಜ್ಯದಲ್ಲೂ ಇಲ್ಲ. ಕನ್ನಡ ಸಂಸ್ಕೃತಿ ಇಲಾಖೆ, ಅಕಾಡೆಮಿಗಳು, ಪರಿಷತ್ತು, ವಿಶ್ವವಿದ್ಯಾಲಯಗಳು ಇತ್ಯಾದಿ. ಎಲ್ಲ ಚಳವಳಿಗಳವರನ್ನು ಒಂದೇ ವೇದಿಕೆಗೆ ತರುವ ನಿಮ್ಮ ಆಗಿನ ಪ್ರಯತ್ನಗಳು ಯಶಸ್ವಿಯಾಗಿದ್ದವೇ? ಕನ್ನಡ ಅಧ್ಯಯನ ಕೇಂದ್ರದಲ್ಲಿ ನಾನು ಮಾಡಿದ ಬಹಳ ಮುಖ್ಯವಾದ ಕೆಲಸ ಅಂದರೆ ಆಧುನಿಕ ವಿಮರ್ಶೆಗೆ ತಕ್ಕ ವಾತಾವರಣವನ್ನು ನಿರ್ಮಾಣ ಮಾಡಿದ್ದು. ಹಾಗೂ ಎಲ್ಲ ಚಳವಳಿಗಳವರನ್ನು ಒಂದು ಸಮಾನ ವೇದಿಕೆಗೆ ತರುವುದು. ಅಭಿಪ್ರಾಯ ಬೇರೆ ಇರಬಹುದು. ಆದರೆ ಎಲ್ಲ ಚಳವಳಿಗಳ ಉದ್ದೇಶ ಒಳ್ಳೆಯ ಸಾಹಿತ್ಯ ನಿರ್ಮಿತಿ ತಾನೇ? ಆದ್ದರಿಂದ ಎಲ್ಲ ಸಾಹಿತ್ಯ ಚಳವಳಿಗಳವರನ್ನು ಒಂದು ಸಮಾನ ವೇದಿಕೆಗೆ ತಂದು ವೈಚಾರಿಕ ಚರ್ಚೆಗೆ ಆರೋಗ್ಯ ಪೂರ್ಣವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು ಅನ್ನೋದು ನನ್ನ ಉದ್ದೇಶವಾಗಿತ್ತು. ಈಗ ಅದು ಸಾಧ್ಯವಿಲ್ಲ. ಅದು ಸಾಧ್ಯವಾದದ್ದು ಒಂದು ಚಾರಿತ್ರಿಕ ಆಕಸ್ಮಿಕ ಅಷ್ಟೆ. ಯಾವ ಚಳವಳಿಗಳೂ ಈಗ ಸಕ್ರಿಯವಾಗಿಲ್ಲವೆಂಬ ಸನ್ನಿವೇಶದ ಕುರಿತು ನಿಮ್ಮ ಅಭಿಪ್ರಾಯ? ಈಗ ದೇಶದಲ್ಲಿ ಯಾವುದೇ ಚಳವಳಿ ಸಕ್ರಿಯವಾಗಿಲ್ಲ. ಎಲ್ಲ ಚಳವಳಿಗಳೂ ನಿಲುಗಡೆಗೆ ಬಂದ ಸಂಧಿಕಾಲದ ಸಂದರ್ಭ ಇದು. ಯಾವುದೇ ಸಾಹಿತ್ಯ ಚಳವಳಿ ತಾನು ಮಾಡಬೇಕಾದ್ದನ್ನು ಮಾಡಿದ ಮೇಲೆ ತನ್ನ ಮೊದಲಿನ ನಿಲುವನ್ನು ಕಾಲ ದೇಶಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳಬೇಕಾಗುತ್ತೆ. ಇವತ್ತು ದಲಿತ ಬಂಡಾಯದ ಎಷ್ಟೋ ಆಶಯಗಳು ಸಾಮಾಜಿಕ ನ್ಯಾಯದ ನೆಲೆಯಲ್ಲ್ಲಿ ಈಡೇರಿವೆ. ಆದರೂ ಕೆಳವರ್ಗದವರ ಮೇಲೆ ದಿನ ನಿತ್ಯ ನಡೆಯುವ ಶೋಷಣೆಗಳು ಕಡಿಮೆಯಾಗಿವೆ ಎಂದು ಹೇಳುವಂತಿಲ್ಲ. ಜಾತೀಯತೆ, ಕೋಮುವಾದ, ಭಯೋತ್ಪಾದನೆಯಂಥ ಸವಾಲುಗಳನ್ನು ಪರಿಹರಿಸಿಕೊಳ್ಳುವುದು ಹೇಗೆ? ಜಾತೀಯತೆ ಮತ್ತು ಕೋಮುವಾದ ಈ ಎರಡೂ ಪಿಡುಗುಗಳು ನಮ್ಮ ವಾತಾವರಣವನ್ನು ಕಾಡಿವೆ. ಜಾತೀಯತೆ ಮೊದಲಿಂದ ಇದ್ದೇ ಇತ್ತು. ಕೋಮುವಾದ ಈಚೆಗೆ ಹುಟ್ಟಿಕೊಂಡದ್ದು, ಬಾಬರೀ ಮಸೀದಿಯ ಧ್ವಂಸ ಆದಮೇಲೆ. ಕೋಮುವಾದ ಮತ್ತು ಅದರಿಂದ ಹುಟ್ಟಿದ ಭಯೋತ್ಪಾದನೆ. ಇದು ರಾಜಕಾರಣದ ಪ್ರಭಾವದಿಂದ ಆದದ್ದು. ಧರ್ಮ ಮತ್ತು ರಾಜಕೀಯದ ಅಪವಿತ್ರ ಮೈತ್ರಿಯಿಂದ ಆದ ಅನಾಹುತಗಳನ್ನು ಇನ್ನೂ ನಾವು ಪಟ್ಟಿ ಮಾಡಬೇಕಾಗಿದೆ. ಕುವೆಂಪುರವರು ’ನೂರು ದೇವರುಗಳನ್ನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ ಅಂತ ೧೯೩೫ರಲ್ಲೇ ಹೇಳಿದರು. ’ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳ ಬನ್ನಿ, ವಿಜ್ಞಾನ ದೀವಿಗೆಯ ಹಿಡಿಯಬನ್ನಿ’ ಅಂತ ಕರೆ ನೀಡಿದರು. ಇವತ್ತಿಗೂ ಈ ಮಾತುಗಳು ಎಷ್ಟೊಂದು ಪ್ರಸ್ತುತ ಅಲ್ಲವೇ? ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ವಿಜ್ಞಾನ, ತಂತ್ರಜ್ಞಾನ, ಭೌತಿಕ ಪ್ರಗತಿ ಬಗ್ಗೆ ಹೇಳ್ತೀರಾ? ಮೂಲವಿಜ್ಞಾನವನ್ನು ಎಲ್ಲ ಕೈಬಿಡ್ತಾ ಇದಾರೆ. ವಿಜ್ಞಾನಕ್ಕೆ ಸಮಾನಾಂತರವಾಗಿ ವೈಜ್ಞಾನಿಕ ದೃಷ್ಟಿಕೋನ ಬೆಳೆದಿಲ್ಲ. ವಿಜ್ಞಾನದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾದ ನಮಗೆ ಅದಕ್ಕೆ ಮೂಲವಾದ ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅಮಾನವೀಯವಾದ ಮಡೆಸ್ನಾನದಂತಹ ಆಚರಣೆಗಳು ಇಂದು ರೂಢಿಯಲ್ಲಿವೆ. ಅದು ಏಕ ಕಾಲಕ್ಕೆ ಜಾತೀಯತೆಯನ್ನು ಪೋಷಿಸುವುದಷ್ಟೇ ಅಲ್ಲದೆ, ಅವೈಜ್ಞಾನಿಕತೆಯನ್ನು, ಅವೈಚಾರಿಕತೆಯನ್ನು ಭದ್ರವಾಗಿ ನೆಲೆಗೊಳಿಸುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಎದುರಾಗಿರುವ ಆತಂಕಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳುವುದು? ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಾವು ಅನುಭವಿಸುತ್ತಿರುವ ತಲ್ಲಣಗಳಿಗೆ ಕೊನೆಯೇ ಇಲ್ಲವಾಗಿದೆ. ಈ ದೇಶ ಸ್ವತಂತ್ರವಾದ ಮೇಲೆ ಗಾಂಧೀಜಿ ಕನಸು ಕಂಡ ಗ್ರಾಮ ಕೇಂದ್ರಿತವೂ ಸರ್ವೋದಯ ಮೂಲವೂ ಆದ ಅಭಿವೃದ್ಧಿ ಯೋಜನೆಗಳು ಮೂಲೆಗುಂಪಾಗಿ, ಪಾಶ್ಚಾತ್ಯ ತಂತ್ರಜ್ಞಾನ ಮೂಲವಾದ ಯೋಜನೆಗಳು ಜಾರಿಗೆ ಬಂದ ಕಾರಣದಿಂದ, ಈ ದೇಶ ಸಾಕಷ್ಟು ಪ್ರಗತಿಯನ್ನು ಸಾಧಿಸಿದಂತೆ ಮೇಲುನೋಟಕ್ಕೆ ಕಂಡರೂ, ಈ ಮಾದರಿಯ ಯೋಜನೆಗಳಿಂದ ನಮ್ಮ ಪರಿಸರದ ಮೇಲೆ ಹಾಗೂ ಅದನ್ನವಲಂಬಿಸಿದ ಅರಣ್ಯ ಸಂಸ್ಕೃತಿಯ ಮೇಲೆ ಆಗಿರುವ ಮತ್ತು ಆಗುತ್ತಿರುವ ದುಷ್ಪರಿಣಾಮಗಳು ಗಾಬರಿಗೊಳಿಸುವಂತಿವೆ. ಮನುಷ್ಯ ಒಂದು ಕಾಲಕ್ಕೆ ನಿಸರ್ಗದೊಂದಿಗೆ ಬೆಳೆಯಿಸಿಕೊಂಡ ಪ್ರೀತಿಯ, ಆರಾಧನೆಯ ಪ್ರಾಣಮಯ ಸಂಬಂಧವನ್ನು ಕಡಿದುಕೊಂಡು, ಅದೊಂದು ಕೇವಲ ತನ್ನ ಉಪಭೋಗದ ವಸ್ತು ಎಂಬಂತ ನಿಲುವಿಗೆ ಬಂದಿರುವುದು ಒಂದು ದುರಂತ ಸಂಗತಿಯಾಗಿದೆ. ಗಾಂಧಿ ಹೇಳಿದರು, ’ಈ ಭೂಮಿ ಪ್ರತಿಯೊಬ್ಬರ ಅಗತ್ಯವನ್ನು ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ’ ಎಂದು. ಆದರೆ ಇಂದಿನ ವಿಜ್ಞಾನ ಯುಗದಲ್ಲಿ ಮನುಷ್ಯ ಪ್ರಗತಿಯ ಹೆಸರಿನಲ್ಲಿ ಈ ನೆಲದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾನೆ. ಇಂದು ನಮ್ಮ ಸಂದರ್ಭದಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ದೇಶಾದ್ಯಂತ ನಡೆಯುತ್ತಿರುವ ಗಣಿಗಾರಿಕೆ ನಿಸರ್ಗದ ಮೇಲೆ ನಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಅತ್ಯಾಚಾರಕ್ಕೆ ಸಾಕ್ಷಿಯಾಗಿದೆ. ನಮ್ಮ ಕವಿಗಳು ಕಲಾವಿದರು ಶ್ರೀಸಾಮಾನ್ಯರು ಉತ್ಕಟವಾಗಿ ಪ್ರೀತಿಸಿದ ನಿಸರ್ಗ ಇಂದು ಕೇವಲ ಮಾರುಕಟ್ಟೆಯ ವಸ್ತುವಾಗಿದೆ. ಹೀಗಾಗಿ ನಾವು ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಮಲಿನವಾಗಿದೆ. ಈ ಹಿನ್ನೆಲೆಯಲ್ಲಿ ನಿಸರ್ಗವನ್ನು ಪ್ರೀತಿಸುವುದು ಬಹು ದೊಡ್ಡ ಮೌಲ್ಯ ಎಂಬುದನ್ನು ನಾವು ಮರೆತಿದ್ದೇವೆ. ನಿಸರ್ಗಪ್ರೀತಿ ಎನ್ನುವುದು ಜೀವನ ಪ್ರೀತಿಯ ವಿಸ್ತರಣೆ ಎಂಬ ಪ್ರಥಮ ಪಾಠವನ್ನು ನಮ್ಮ ಮಕ್ಕಳಿಗೆ ನಾವು ಹೇಳಿ ಕೊಡಬೇಕಾಗಿದೆ. ಯಾಕೆಂದರೆ ಒಂದು ಗಿಡವನ್ನು, ಮರವನ್ನು, ಹೂವನ್ನು, ಹಕ್ಕಿಯನ್ನು, ಗುಡ್ಡವನ್ನು, ಬೆಟ್ಟವನ್ನು, ಹರಿಯುವ ಹೊಳೆಯನ್ನು ಪ್ರೀತಿಸಲಾರದವನು ಮನುಷ್ಯರನ್ನು ಪ್ರೀತಿಸಲು ಹೇಗೆ ಸಾಧ್ಯ? ನಮ್ಮ ಮುಂದಿರುವ ಸವಾಲು ಯಾವುದೆಂದರೆ ನಿಸರ್ಗವನ್ನು ನಿರ್ದಯವಾಗಿ ಕೊಳ್ಳೆ ಹೊಡೆಯುವುದೇ ಪ್ರಗತಿ ಎಂದು ತಿಳಿದ ಈ ದಿನಗಳಲ್ಲಿ ನಿಸರ್ಗ ಸಂರಕ್ಷಣೆಯನ್ನೂ ಅಭಿವೃದ್ಧಿಶೀಲತೆಯನ್ನೂ ಹೊಂದಿಸಿಕೊಂಡು ಹೋಗುವುದು ಹೇಗೆ ಎನ್ನುವುದೇ ಆಗಿದೆ. ಈ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ. ಮಠ ಮಾನ್ಯಗಳಿಗೆ ಸರ್ಕಾರ ಹಣ ನೀಡುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ? ಜಾತಿ-ಮತಾಧಾರಿತ ಮಠಗಳಿಗೆ ಹಣಕೊಡುವ ಸರ್ಕಾರದ ಕ್ರಮ ಸರಿಯಾದುದಲ್ಲ. ಇದುವರೆಗಿನಂತೆ ಆ ವಿಷಯವನ್ನು ಸಾರ್ವಜನಿಕರಿಗೆ ಬಿಡುವುದು ಉಚಿತವಾದದ್ದು. ನಾನು ಕೂಡ ಮಠದಲ್ಲೇ ಬೆಳೆದವನು. ಈ ಮಾತನ್ನು ಮಠ ಮಾನ್ಯಗಳ ವಿಚಾರದಲ್ಲಿ ಗೌರವವನ್ನಿಟ್ಟುಕೊಂಡೇ ಹೇಳ್ತಾ ಇದೀನಿ. ಇಂದಿನ ಮಠಗಳು ರಾಜಕೀಯ ವಿದ್ಯಮಾನಗಳಿಗೆ ಕೈ ಹಾಕುವುದು ಅಷ್ಟು ಸೂಕ್ತವಲ್ಲ. ಪುಸ್ತಕೋದ್ಯಮದ ಬೆಳವಣಿಗೆ ತುಂಬಾ ಆಶಾದಾಯಕವಾಗಿದೆಯಲ್ಲ? ಪುಸ್ತಕಕ್ಕೂ ನಮ್ಮ ಅಂತರಂಗಕ್ಕೂ ಇರುವ ಸಂಬಂಧ ಅತ್ಯಂತ ಮಹತ್ವದ್ದು. ಪುಸ್ತಕೋದ್ಯಮ ಈಗ ಬೆಳೆದಷ್ಟು ಹಿಂದೆಂದೂ ಬೆಳೆದಿರಲಿಲ್ಲ. ಪುಸ್ತಕಗಳು ಅಪ್ರಸ್ತುತವಾಗುತ್ತವೆ ಅನ್ನೋ ಭಯ ನಿರಾಧಾರವಾದದ್ದು. ಕನ್ನಡದಲ್ಲಿ ವರ್ಷಕ್ಕೆ ಸುಮಾರು ೪೦೦೦ ಪುಸ್ತಕಗಳು ಪ್ರಕಟವಾಗುತ್ತವೆ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ. ಆದರೆ ಅದೇ ಸಂಖ್ಯೆಯಲ್ಲಿ ಓದುಗರ ಸಂಖ್ಯೆ ವೃದ್ಧಿಸುತ್ತಿದೆಯೇ ಎಂಬುದರ ಬಗ್ಗೆ ಮಾತ್ರ ನನಗೆ ಅನುಮಾನಗಳಿವೆ. ಇಂದಿನ ರಾಜಕೀಯ ಬೆಳವಣಿಗೆಗಳನ್ನು ಕಂಡರೆ ಏನನ್ನಿಸುತ್ತದೆ? ಇಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಸುಭದ್ರವಾದ, ಭ್ರಷ್ಟಾಚಾರ ರಹಿತವಾದ ಆಡಳಿತ ಬಂದೀತೇ ಎನ್ನುವುದು ಅನುಮಾನಾಸ್ಪದವಾಗಿದೆ. ಸಾಹಿತಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೋ ಅಥವಾ ಬೇಡವೋ? ಮುಖ್ಯವಾಗಿ ಸಾಹಿತಿ ಬದುಕಿಗೆ ಬದ್ಧವಾಗಿ ತನ್ನ ನಿಲುವುಗಳನ್ನು ರೂಪಿಸಿಕೊಳ್ಳಬೇಕು. ಜೀವನಕ್ಕೆ ಬದ್ಧವಾಗಿರಬೇಕು. ಯಾವುದೇ ಬದ್ಧತೆಗೆ ಒಳಗಾಗುವುದು ವ್ಯಕ್ತಿತ್ವದ ವಿಕಾಸಕ್ಕೆ ಒಂದು ಮಿತಿಯನ್ನು ಕಲ್ಪಿಸಿಕೊಂಡ ಹಾಗೆ. ಹೊಸ ತಲೆಮಾರಿನ ಯುವ ಬರಹಗಾರರ ಸಾಹಿತ್ಯ ಸೃಷ್ಟಿ ತೃಪ್ತಿಕರವಾಗಿದೆಯೇ? ಹೊಸ ತಲೆಮಾರಿನ ಬರಹಗಾರರಿಗೆ ಪರಂಪರೆಯ ಪ್ರಜ್ಞೆ ಅತ್ಯಂತ ಅಗತ್ಯವಾಗಿದೆ. ಅವರಿಗೆ ಹಿಂದಿನ ಸಾಹಿತ್ಯಾನೇ ಗೊತ್ತಿಲ್ಲ. ಅಂದರೆ ತಮ್ಮ ಹಿಂದೆ ಇರುವ ಸಾಹಿತ್ಯದೊಂದಿಗೆ ನಿರಂತರವಾಗಿ ಅನು ಸಂಧಾನವನ್ನು ಮಾಡಿಕೊಳ್ಳದ ಹೊರತು ಅವರ ಬರವಣಿಗೆಗೆ ಗಟ್ಟಿಯಾದ ನೆಲೆ ಪ್ರಾಪ್ತವಾಗುವುದಿಲ್ಲ. ಹೊಸ ತಲೆಮಾರಿನ ಬರಹಗಾರರೇನೋ ಸಾಹಿತ್ಯಕ್ಕೆ ಪ್ರವೇಶಿಸುತ್ತಿದ್ದಾರೆ. ಹಿಂದಿನಂತೆ ಕೇವಲ ವಿಶ್ವವಿದ್ಯಾಲಯಗಳಿಂದ ಮತ್ತು ಇತರೆ ಕ್ಷೇತ್ರಗಳಿಂದ ಬರುತ್ತಿದ್ದ ಲೇಖಕರಿಗೆ ಹೋಲಿಸಿದರೆ ಇಂದು ಪತ್ರಿಕೋದ್ಯಮ, ಮಾಹಿತಿ ತಂತ್ರಜ್ಞಾನ ಹೀಗೆ ಬೇರೆ ಬೇರೆ ನಾನ್ ಅಕಾಡೆಮಿಕ್ ಫೀಲ್ಡ್‌ನಿಂದ ಲೇಖಕರು ಬರುತ್ತಿದ್ದಾರೆ. ಹೀಗಾಗಿ ಅನೇಕ ಅನುಭವ ಪ್ರಪಂಚಗಳು ಸಾಹಿತ್ಯದಲ್ಲಿ ಮೂಡುತ್ತಿವೆ. ಆದರೆ ಒಂದು ಕೊರತೆಯಿದೆ. ಹೊಸ ಬರಹಗಾರರಿಗೆ ತಮ್ಮ ಪರಂಪರೆಯೊಂದಿಗೆ ಸಂಬಂಧವಾಗಲೀ, ಸಂಘರ್ಷವಾಗಲೀ ಇರುವಂತೆ ತೋರುವುದಿಲ್ಲ. ನಿಮ್ಮ ದಿನಚರಿ ಹೇಗಿದೆ? ಓದು, ಬರಹ…. ಓದೋದು ಮಾತ್ರ ಸಾಧ್ಯ ಆಗ್ತಾ ಇದೆ. ಬರವಣಿಗೆ ಆಗ್ತಾ ಇಲ್ಲ. ಕವಿತೆ ಬರೆಯೋದು ನಿಂತು ಹೋಗಿದೆ. ಸಂಬಡಿ ಹ್ಯಾಸ್ ಲಾಕ್ಡ್‌ಇಟ್ ಆಲ್‌ರೆಡಿ. (ಲೋಕಾಭಿರಾಮದ ನಗು) ಎಲ್ರೂ ಬಂದು ಹೊಸ ಪದ್ಯ ಕೊಡಿ ಎನ್ನುತ್ತಾರೆ. ನನ್ನ ಅಷ್ಟೊಂದು ಪದ್ಯ ಇದೆ. ಯಾವುದನ್ನು ಬೇಕಾದರೂ ಹಾಕ್ಕೊಳ್ಳಿ ಅಂದ್ರೆ ಹೊಸ ಪದ್ಯ ಬೇಕೆನ್ನುತ್ತಾರೆ. ಓದುಗರಿಗೆ ವ್ಯತ್ಯಾಸ ಇದೆಯಾ? ನನ್ನ ಬರವಣಿಗೆ ಸ್ಥಗಿತವಾಯಿತು ಅಂತ ವ್ಯಥೆ ಇಲ್ಲ. ನನ್ನ ಸುತ್ತ ಅನೇಕರು ಹೊಸ ಭರವಸೆಗಳೊಂದಿಗೆ ಬರೀತಿದಾರೆ. ಅದನ್ನು ನೋಡೋದೆ ಒಂದು ಸಂತೋಷ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಿಮ್ಮ ಪಾಲಿನ ಅತ್ಯಂತ ಶ್ರೇಷ್ಠ ಕವಿಗಳು ಯಾರು? ಪಂಪ ಮತ್ತು ಕುವೆಂಪು ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡೇತರ ಸಾಹಿತಿ, ಚಿಂತಕರು? ರಾಮ ಮನೋಹರ ಲೋಹಿಯಾ, ವರ್ಡ್ಸ್‌ವರ್ತ್, ಈಲಿಯೆಟ್. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ… ಮಾಗಿದ ವಯಸ್ಸಲ್ಲೂ ದೇವರು- ಬದುಕಿನ ಬಗ್ಗೆ ನಿಮ್ಮ ಗ್ರಹಿಕೆ ಹಾಗೇ ಇದೆಯಾ? ದೇವರು ಮತ್ತು ಬದುಕಿನ ಬಗ್ಗೆ ನನ್ನ ಗ್ರಹಿಕೆ ಹಾಗೇ ಇದೆ. ನೋ ಚೇಂಜ್. ಸಾಂಪ್ರದಾಯಿಕ ದೇವರ ಕಲ್ಪನೆ ನನಗೆ ಸಮ್ಮತವಲ್ಲ. ಮನುಷ್ಯನ ಒಳ್ಳೇತನಗಳು, ಪ್ರೀತಿ-ವಿಶ್ವಾಸ ಇತ್ಯಾದಿ ಮೌಲ್ಯಗಳೇ ನನ್ನ ಪಾಲಿನ ದೇವರು. ಮನುಷ್ಯ-ಮನುಷ್ಯನಾಗಿ ಬದುಕುವುದಕ್ಕೆ ದೇವರು ಬೇಕಾಗಿಲ್ಲ. ]]>

‍ಲೇಖಕರು G

April 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

4 ಪ್ರತಿಕ್ರಿಯೆಗಳು

 1. prakash hegde

  ತುಂಬಿದ ಕೊಡ ತುಳುಕುವದಿಲ್ಲ…
  ನಾಡಿನ ಹೆಮ್ಮೆಯ ಕವಿವರ್ಯರ ನೇರತನ ಸರಳತೆ ಮತ್ತು ಅವರ ವಿಚಾರಧಾರೆಗಳು ಇಷ್ಟವಾಗಿಬಿಡುತ್ತವೆ….

  ಪ್ರತಿಕ್ರಿಯೆ
 2. -ರವಿ ಮೂರ್ನಾಡು, ಕ್ಯಾಮರೂನ್.

  ಚಿಂತಾತ್ಮಕ ವಿಚಾರದ ಮಾನ್ಯ ಜಿ.ಎಸ್.ಎಸ್. ಅವರ ಮಾತುಗಳನ್ನು ಅಂತರ್ಜಾಲದ ಮೂಲಕ ಹೊರನಾಡ ಕನ್ನಡಿಗರಾದ ನಮಗೂ ಉಣಬಡಿಸಿದ ಅವಧಿಗೆ ಧನ್ಯವಾದಗಳು. ಸೌಮ್ಯ ನೆಲೆಗಟ್ಟಿನ ಕವಿಯ ಮನದಾಳದ ಮಾತುಗಳು ಮುತ್ತಿನಂಥವು. ಮನಸಾರೆ ಓದಿ , ಮತ್ತಷ್ಟು ಓದಿ ಮನಸ್ಸಿಗೆ ಗೀಚಿಕೊಂಡಿದ್ದೇನೆ. ಕವಿ ಹೃದಯಕೆ ಕವಿ ಹೃದಯ ಕವಿತೆ ಬರೆಸುವುದು. ಇನ್ನಷ್ಟು ಇಂತಹ ಮಾತುಗಳನ್ನು ಪ್ರಕಟಿಸಿ ಮಾನವತೆಯ ಚಿಮ್ಮಿಸುವ ಕವಿತೆಗೆ ಪ್ರೋತ್ಸಾಹಿಸಿ ಎಂದು ಅವಧಿ ಬಳಗವನ್ನು ವಿನಂತಿಸುತ್ತೇನೆ.

  ಪ್ರತಿಕ್ರಿಯೆ
 3. R T SHARAN

  yes…….. indina barahagaararige saahitya parampareya sambandha-sangharsha bekee beku….. aaavaagale gatti kaaalugalu uliyodu……….illandre Kuvempu, Bendre, GSS, KSN, Lamkesh hesarugala pattige hosa hesarugalu seruvudu kashta….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: