ಜಿ.ಪಿ.ಬಸವರಾಜು
ಕಣ್ಣ ನೋಟವ ಕರೆದು
ಹೇಳುತ್ತೇನೆ- ನೋಡಿಬಿಡು
ಎಲ್ಲವನು, ಕೊನೆಯೆಂಬುದೊಂದು
ಬಂದು, ನಿನ್ನ ಮುಚ್ಚಿಬಿಡುವ
ಮುನ್ನ-ನೋಡಿಬಿಡು ಎಲ್ಲವನು
ಅವು ಇರುವಂತೆ, ನಿನ್ನಳವಿಗೆ
ತೋರುವಂತೆ; ಉಬ್ಬಿಸಬೇಡ
ಕುಗ್ಗಿಸಬೇಡ, ನೇರಾನೇರ
ಒಗರು, ಹುಳಿ, ಸಿಹಿ, ಖಾರ
ಯಾವುದೂ ಬೇಡ; ರುಚಿಯೆಂಬುದು
ನಾಲಗೆಯ ನೆನಪು; ಇರುವುದು
ಜಗವು ಅದು ಇರುವ ಹಾಗೆ
ಕಾಲಚಕ್ರ ತಿರುಗಿದರೂ ಸುಮ್ಮನೆ

ಕಾಣಲಾಗುವುದಿಲ್ಲ ಎಲ್ಲವನ್ನೂ ಇಡಿಯಾಗಿ
ನೀನು ನೋಡಬೇಕು-ಬಿಡಿಯಾಗಿ
ಬಿಡಿಬಿಡಿಯಾಗಿ; ಹಗಲು ರಾತ್ರಿಗಳು
ಬಂದು ಹೋಗುವವು; ನೋಟವೆಂಬುದು
ಕತ್ತಲೆ-ಬೆಳಕಿನ ಆಟ, ಮುಚ್ಚುವುದು
ತೆರೆಯುವುದು, ಮರೆಯಾಗುವುದು
ಸಹಜ ಪಾಠ; ನೋಡಿಕೋ ಮನವಿಟ್ಟು
ಕಟ್ಟು ಕಂಡದ್ದರ ಅರ್ಥಗಳ, ಚಿತ್ರಗಳ
ಕಣ್ಣೆಂಬುದು ಸಣ್ಣ ಗೋಲ, ನೋಟ
ನೆಲದಿಂದ ನಭಕೆ ಚಾಚುವ ಆಟ
ತೆರೆದಿಡು ಎಲ್ಲವನು ಖುಲ್ಲಂಖುಲ್ಲ
0 ಪ್ರತಿಕ್ರಿಯೆಗಳು