ಜಿ ಪಿ ಕಾಲಂ : ಅಗಾಧವಾಗಿ ಬೆಳೆದಿರುವ ಮಾಧ್ಯಮಕ್ಕೆ ಇನ್ನೊಂದು ಮುಖವೂ ಇದೆ

ಜನರಿಗೆ ಜವಾಬು ಹೇಳುವುದು ಹೇಗೆ? -ಜಿ.ಪಿ.ಬಸವರಾಜು ರಾಜ್ಯಾಂಗ, ಕಾರ್ಯಾ೦ಗ, ನ್ಯಾಯಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿನಿಲ್ಲಿಸಿದ ಮೂರು ಸ್ತಂಭಗಳಾದರೆ, ಮಾಧ್ಯಮ ನಾಲ್ಕನೆಯ ಸ್ತಂಭ ಎನ್ನುವ ಮಾತು ತೀರ ಹಳೆಯದು. ದಿವಂಗತ ಡಿ.ವಿ.ಗುಂಡಪ್ಪನವರ ಕಾಲದಲ್ಲಿ ಈ ಮಾತನ್ನು ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಅರ್ಥವನ್ನು ಮತ್ತು ಮಹತ್ವವನ್ನು ಬಲ್ಲ ಅನೇಕರು ಮಾಧ್ಯಮಗಳಲ್ಲಿ, ವಿಶೇಷವಾಗಿ ಪತ್ರಿಕೆಗಳಲ್ಲಿ ದುಡಿಯುತ್ತಿದ್ದ ಕಾರಣ ಅವರಿಗೆ ನಾಲ್ಕನೆಯ ಸ್ತಂಭದ ಮಾತನ್ನು ಆಡುವುದು ಹೆಮ್ಮೆಯ ಸಂಗತಿಯಾಗಿತ್ತು. ಈ ಸಮಾಜವನ್ನು ಕಟ್ಟುವಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ಅವರ ಪಾತ್ರವೂ ಮಹತ್ವದ್ದಾಗಿತ್ತು. ಈಗ ನಮ್ಮ ಪ್ರಜಾಪ್ರಭುತ್ವ ಅನೇಕ ಅವಸ್ಥಾಂತರಗಳನ್ನು ದಾಟಿ ಬಂದಿದೆ. ಅತ್ಯಂತ ಬಿಕ್ಕಟ್ಟಿನ ದಿನಗಳನ್ನೂ ಎದುರಿಸಿದೆ; ಅತ್ಯಂತ ಉದಾರತೆಯ ದಿನಗಳನ್ನೂ ನೋಡಿದೆ. ಹಲವು ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನೂ ನಮ್ಮ ರಾಷ್ಟ್ರ ಕಂಡುಕೊಂಡಿದೆ. ಮಾಧ್ಯಮ ಕ್ಷೇತ್ರವೂ ಅತ್ಯಾಧುನಿಕವಾಗಿ ಪ್ರಗತಿಯನ್ನು ಕಂಡಿದೆ. ಮುದ್ರಣ ಮಾಧ್ಯಮವಲ್ಲದೆ, ವಿದ್ಯುನ್ಮಾನ ಮಾಧ್ಯಮವೂ ಪ್ರಬಲವಾಗಿ ಬೆಳೆದು ನಿಂತಿದೆ. ಹೊಸ ರಕ್ತ, ಹೊಸ ತಲೆಮಾರು, ಹೊಸ ಹೊಸ ಕನಸುಗಳು. ಇಡೀ ರಾಷ್ಟ್ರವೇ ಉತ್ಸಾಹದಿಂದ ಮುನ್ನುಗ್ಗುತ್ತಿರುವಾಗ ಪ್ರಬಲ ಶಕ್ತಿಯಾದ ಮಾಧ್ಯಮ ಉತ್ಸಾಹವನ್ನು ತೋರದೇ ಇರುವುದು ಹೇಗೆ ಸಾಧ್ಯ? ಸಹಜವಾಗಿಯೇ ರಾಕೆಟ್ ವೇಗದಲ್ಲಿ ಓಡುತ್ತಿರುವ ಈ ಮಾಧ್ಯಮ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಎಂಥದನ್ನೂ ಬಯಲಿಗೆಳೆಯಬಲ್ಲದು; ಯಾರನ್ನೂ ನ್ಯಾಯದ ಕಟಕಟೆಗೆ ತಂದು ನಿಲ್ಲಿಸಬಲ್ಲದು. ಅದರ ಸಾಮಥ್ರ್ಯ ಅಷ್ಟು ಜೋರಾಗಿದೆ. ‘ಭೂಮಿಯ ಮೇಲೆ ಅತ್ಯಂತ ಶಕ್ತಿಶಾಲಿಯಾಗಿರುವ ಮಾಧ್ಯಮ ಮುಗ್ಧರನ್ನು ತಪ್ಪಿತಸ್ಥರನ್ನಾಗಿ ಮಾಡಬಲ್ಲದು; ತಪ್ಪಿತಸ್ಥರನ್ನು ಮುಗ್ಧರನ್ನಾಗಿ ಮಾಡಬಲ್ಲದು. ಯಾಕೆಂದರೆ ಜನ ಸಮುದಾಯವನ್ನು ನಿಯಂತ್ರಿಸುವ ಶಕ್ತಿ ಅದಕ್ಕಿದೆ’ ಎಂದು ಹೇಳುವ ಮಾಲ್ಕಮ್ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಿಸುವುದಿಲ್ಲ. ಇಂಥ ಶಕ್ತಿಯನ್ನು ಪಡೆದುಕೊಂಡಿರುವ ಮಾಧ್ಯಮ ಇವತ್ತು ನಮ್ಮ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೀತಿ ಸೋಜಿಗ ಹುಟ್ಟಿಸುತ್ತಿದೆ. ಮುಚ್ಚಿಹೋಗಬಹುದಾಗಿದ್ದ ಅನೇಕ ಪ್ರಕರಣಗಳು, ಭ್ರಷ್ಟ ವ್ಯವಹಾರಗಳು, ಗುಟ್ಟುಗಳು, ರಾಜಕೀಯ ಕುತಂತ್ರಗಳು, ಜನದ್ರೋಹಿ ಕೃತ್ಯಗಳು ಬಯಲಾಗುತ್ತಿವೆ. ಇತ್ತೀಚಿನ ಇನ್ನೊಂದು ಪ್ರಬಲ ಅಸ್ತ್ರವಾಗಿರುವ ಮಾಹಿತಿ ಹಕ್ಕು ಕಾಯ್ದೆಯೂ ಕಾರಣವಾಗಿ ಮಾಧ್ಯಮಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನೇಕ ವ್ಯವಹಾರಗಳನ್ನು ಬಯಲುಮಾಡುತ್ತಿವೆ. ನಡೆದು ಹೋದ ಘಟನೆಗಳನ್ನು ಜನರ ಮುಂದೆ ಪುನರ್ ಸೃಷ್ಟಿಸುತ್ತವೆ. ಮಾಧ್ಯಮಗಳೇ ಕಾರಣವಾಗಿ ಬಹಳ ಮಹತ್ವದ ವಿಚಾರಗಳು ಸಾರ್ವಜನಿಕ ಚಚರ್ೆಯ ವಿಷಯಗಳಾಗಿ, ಸಾರ್ವಜನಿಕ ಅಭಿಪ್ರಾಯ ರೂಪಗೊಳ್ಳುವ ವ್ಯವಸ್ಥೆಯೂ ಚಲಾವಣೆಗೆ ಬರುತ್ತಿದೆ. ಮಾಧ್ಯಮಗಳ ಕಣ್ಣುತಪ್ಪಿಸಿ ವ್ಯವಹರಿಸುವುದೇ ಭ್ರಷ್ಟರಿಗೆ ದುಸ್ಸಾಧ್ಯವಾಗುತ್ತಿದೆ. ಮಾಧ್ಯಮದ ಕಣ್ಣು ಅಷ್ಟೊಂದು ಸೂಕ್ಷ್ಮವಾಗುತ್ತಿದೆ; ನೋಟ ಹರಿತವಾಗುತ್ತಿದೆ; ಕಾರ್ಯವಿಧಾನ ಅಷ್ಟೊಂದು ಚುರುಕಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಎಂಥ ಕೋಟೆಯನ್ನೂ ಭೇದಿಸಬಲ್ಲ ಸಾಮಥ್ರ್ಯವನ್ನು ಮಾಧ್ಯಮಗಳು ಪಡೆದುಕೊಂಡಿದೆ. ಅನೇಕ ರಹಸ್ಯ ವ್ಯವಹಾರಗಳನ್ನು ರಹಸ್ಯವಾಗಿಯೇ ದಾಖಲಿಸಿಕೊಂಡು ಜನರ ಮುಂದೆ ನಾಟಕೀಯವಾಗಿ ಮಂಡಿಸುವ ಅದ್ಭುತ ಸಾಮಥ್ರ್ಯವೂ ಮಾಧ್ಯಮಗಳ ಕೈವಶವಾಗಿದೆ. ಈ ಕಾರಣದಿಂದಾಗಿಯೇ ಇವತ್ತು ರಾಜ್ಯಾಂಗ, ಕಾರ್ಯಾ೦ಗ ಮತ್ತು ನ್ಯಾಯಾಂಗಗಳೂ, ನಾಲ್ಕನೆಯ ಅಂಗವಾದ ಈ ಮಾಧ್ಯಮವನ್ನು ಹೆದರಿಕೆಯಿಂದ, ಗಾಬರಿಯಿಂದ, ಮೆಚ್ಚುಗೆಯಿಂದ ನೋಡುತ್ತಿವೆ. ಯಾವುದೇ ಪ್ರಜಾಪ್ರಭುತ್ವದ ಪರಿಣಾಮಕಾರೀ ಕಾರ್ಯನಿರ್ವಹಣೆಗೆ, ಬೆಳವಣಿಗೆಗೆ, ಮಾಧ್ಯಮಗಳ ಈ ರೀತಿಯ ಕಾರ್ಯದಕ್ಷತೆ ನೆರವಾಗಬಲ್ಲದು. ಆದರೆ ಅಗಾಧವಾಗಿ ಬೆಳೆದಿರುವ ಈ ಮಾಧ್ಯಮಕ್ಕೆ ಇನ್ನೊಂದು ಮುಖವೂ ಇದೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ನೀತಿ, ನಿಷ್ಠೆ, ನಿಲುವು, ಮನೋಧರ್ಮಗಳು ಒಂದೇ ರೀತಿ ಇರಲು ಸಾಧ್ಯವಿಲ್ಲದ ಕಾರಣ ಈ ಇನ್ನೊಂದು ಮುಖ ಕಾಣಿಸಿದೆ. ಮಾಧ್ಯಮಗಳ ಕಾರ್ಯನಿರ್ವಹಣೆಯಲ್ಲಿ ಒಂದಿಷ್ಟು ಏರುಪೇರಾದರೆ ಏನಾಗಬಹುದು ಎಂಬುದನ್ನೂ ನಮ್ಮ ಇವತ್ತಿನ ಸಂದರ್ಭ ತೋರಿಸಿಕೊಡುತ್ತಿದೆ. ಕನರ್ಾಟಕದ ಉದಾಹರಣೆಯನ್ನೇ ಎತ್ತಿಕೊಳ್ಳುವುದಾದರೆ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರು ಮಾತುಗಳನ್ನೇ ಪರಿಶೀಲಿಸಬಹುದು. ರಾಜಕಾರಣಿಯಲ್ಲದ, ಶುದ್ಧ ವ್ಯಕ್ತ್ತಿತ್ವದವರು ಎಂದು ಹೇಳಬಹುದಾದ, ಸಮಾಜದ ಬಗ್ಗೆ ತೀವ್ರ ಕಾಳಜಿಯನ್ನು ತೋರುತ್ತಿರುವ ಈ ನ್ಯಾಯಮೂತರ್ಿ, ‘ಅಕ್ರಮ ಗಣಿ ಹಗರಣದಲ್ಲಿ ಗಣಿ ದೊರೆಗಳಿಂದ ಕಪ್ಪ ಪಡೆದಿರುವ ಪತ್ರಕರ್ತರ ವಿರುದ್ಧ ರಾಜ್ಯ ಸಕರ್ಾರ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಪಡಿಸುತ್ತಾರೆ. ಹೆಗ್ಡೆಯವರ ಈ ಆಪಾದನೆ ಆಧಾರ ರಹಿತವಾದುದಲ್ಲ. ಲೋಕಾಯುಕ್ತ ಪ್ರಾಥಮಿಕ ಹಂತದ ತನಿಖೆ ನಡೆಸಿ ಸಲ್ಲಿಸಿರುವ ವರದಿಯಲ್ಲಿ ಈ ಅಂಶವಿದೆ ಎಂದು ಹೆಗ್ಡೆಯವರು ಹೇಳುತ್ತಾರೆ. ಗಣಿವ್ಯವಹಾರದಲ್ಲಿ ರಾಜಕಾರಣಿಗಳಿರುವುದನ್ನು ಅರಗಿಸಿಕೊಂಡ ಈ ಸಮಾಜಕ್ಕೆ ಪತ್ರಕರ್ತರಿರುವ ಸಂಗತಿ ಆಘಾತಕಾರಿಯಾದದ್ದು. ಪತ್ರಿಕೆಗಳು, ಮಾಧ್ಯಮ ಈ ದಾರಿ ಹಿಡಿದರೆ ಸಮಾಜ ಉಳಿಯುವುದು ಹೇಗೆ ಎಂಬ ಪ್ರಶ್ನೆ ಸೂಕ್ಷ್ಮ ಸಂವೇದನೆಯ ಎಲ್ಲರನ್ನು ಕಾಡುತ್ತಿದೆ. ಇದು ಅತ್ಯಂತ ಮಹತ್ವದ ಪ್ರಶ್ನೆ ಕೂಡಾ. ಇದು ಒಂದು ಉದಾಹರಣೆಯಷ್ಟೆ. ಮಾಧ್ಯಮದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಇಂಥ ಅನೇಕ ಪ್ರಕರಣಗಳು ಎದುರಾಗಬಹುದು. ಮಾಧ್ಯಮದ ಕೆಲವರು ಸಕರ್ಾರದ, ರಾಜಕೀಯ ಪಕ್ಷವೊಂದರ ವಕ್ತಾರರಂತೆ ನಡೆದುಕೊಳ್ಳುವುದು, ಪ್ರಭಾವೀ ರಾಜಕಾರಣಿಗಳ ಸಲಹೆಗಾರರಂತೆ ವತರ್ಿಸುವುದು, ರಾಜಕಾರಣಿಗಳ ನಿತ್ಯದ ವ್ಯವಹಾರದಲ್ಲಿ ಪಾಲುದಾರರಂತೆ ಕಾರ್ಯನಿರ್ವಹಿಸುವುದು ಇತ್ಯಾದಿ ಅನೇಕ ಸಂಗತಿಗಳನ್ನು ನೋಡಬಹುದು. ಸಂವಿಧಾನದ ಮೂಲ ಆಶಯಗಳಿಗೇ ಮಾರಕವಾಗುವ ರೀತಿಯಲ್ಲಿ, ಜನರನ್ನು ಒಡೆಯುವ, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟಲು ನೋಡುವ, ಮತಧರ್ಮಗಳನ್ನು ಹಿಂಸೆಯತ್ತ ತಿರುಗಿಸುವ ಕೃತ್ಯಗಳೂ ಮಾಧ್ಯಮದ ಕೆಲವರಿಂದ ನಡೆದಾಗ ಅದನ್ನು ಹೇಗೆ ವಿಶ್ಲೇಷಿಸಬೇಕು. ವಿಶ್ಲೇಷಿಸುವವರು ಯಾರು? ವೈಜ್ಞಾನಿಕವಾಗಿ ಸಮಾಜವನ್ನು ಮುನ್ನಡೆಸುವ ಆಶಯವನ್ನು ನಮ್ಮ ಸಂವಿಧಾನವೇ ತನ್ನ ಒಡಲಲ್ಲಿ ಇರಿಸಿಕೊಂಡಿರುವಾಗ, ಮಾಧ್ಯಮಗಳು ಮೌಢ್ಯಗಳನ್ನು ಬೆಳೆಸುವ, ಅವೈಜ್ಞಾನಿಕ ಮತ್ತು ಅವೈಚಾರಿಕ ಆಚರಣೆಗಳನ್ನು ಮೆರೆಸುವ ರೀತಿಯಲ್ಲಿ ವರದಿಗಳನ್ನು, ಚಿತ್ರಗಳನ್ನು ನೀಡುತ್ತ ಹೋಗುವುದು ಎಷ್ಟು ಸರಿ? ಇಂಥ ಹೊತ್ತಿನಲ್ಲಿಯೇ ಮಾಧ್ಯಮಗಳ ಮೇಲೆ ನಿಯಂತ್ರಣ ಇರಬೇಕೇ ಬೇಡವೇ ಎನ್ನುವ ಪ್ರಶ್ನೆ ಎದುರಾಗುವುದು. ಈ ನಿಯಂತ್ರಣ ಎಂದ ಕೂಡಲೇ ಈ ಅವಕಾಶವನ್ನು ಬಳಸಿಕೊಂಡು, ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳೂ ನಡೆದುಬಿಡುತ್ತವೆ. ಯಾವ ಕಾರಣಕ್ಕೂ ಮಾಧ್ಯಮಗಳ ಸ್ವಾತಂತ್ರ್ಯ ಹರಣವಾಗ ಕೂಡದು. ಪ್ರಜಾಪ್ರಭುತ್ವದ ಶಕ್ತಿಯೇ ಈ ಸ್ವಾತಂತ್ರ್ಯ. ಅದರಲ್ಲೂ ಮಾಧ್ಯಮಗಳ ಸ್ವಾತಂತ್ರ್ಯ ಬಹಳ ಮಹತ್ವದ್ದು. ಆದರೆ ಮಾಧ್ಯಮಗಳ ಹೊಣೆಗಾರಿಕೆಯನ್ನು ತೋರಿಸಿಕೊಡುವವರು ಯಾರು? ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾಕರ್ಾಂಡೇಯ ಕಟ್ಜು ಕೇಳುತ್ತಿರುವುದು ಇದೇ ಪ್ರಶ್ನೆಯನ್ನೇ. ಪತ್ರಿಕೆಗಳ ಹೊಣೆಗಾರಿಕೆಯನ್ನು ಪ್ರಶ್ನಿಸಲು ಈ ಪತ್ರಿಕಾ ಮಂಡಳಿ ಇದೆ. ಆದರೆ ಇದರಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಸೇರುವುದಿಲ್ಲ. ಹೀಗಾಗಿ ಈ ಮಾಧ್ಯಮಗಳ ಹೊಣೆಗಾರಿಕೆನ್ನು ಪ್ರಶ್ನಿಸುವವರು ಯಾರು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಂಸ್ಥೆಯೂ ಜನರಿಗೆ ಹೊಣೆಯಾಗಿರಬೇಕು. ಆದರೆ ಹೇಗೆ? ವಿದ್ಯುನ್ಮಾನ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಕಟ್ಜು ಇನ್ನೊಂದು ಮಾತನ್ನೂ ಹೇಳುತ್ತಾರೆ. ‘ನಿಜ. ಮಾಧ್ಯಮಗಳು ಜನರಿಗೆ ಸ್ವಲ್ಪ ಮನರಂಜನೆಯನ್ನೂ ನೀಡಬೇಕು. ಆದರೆ ಅವರ ಪ್ರಸಾರದ ಶೇ 90 ಭಾಗ ಮನರಂಜನೆಗೇ ಮೀಸಲಾದರೆ ಹೇಗೆ?’ ಯಾವುದಕ್ಕೆ ಎಷ್ಟು ಆದ್ಯತೆ ಎನ್ನುವ ತಾರತಮ್ಯ ಜ್ಞಾನ ಬೇಡವೇ? ಇದು ಬಹಳ ದೊಡ್ಡ ಪ್ರಶ್ನೆ. ಸಮಾಜದ ಎಲ್ಲರನ್ನೂ ಹಿಡಿದು ನಿಲ್ಲಿಸಿ ಪ್ರಶ್ನಿಸುವ ಹಕ್ಕನ್ನು ಪಡೆದುಕೊಂಡಿರುವ ಮಾಧ್ಯಮ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬಾರದೇ? ಈ ಸಮಾಜಕ್ಕೆ, ಈ ಪ್ರಜಾಪ್ರಭುತ್ವಕ್ಕೆ ತನ್ನ ಹೊಣೆಗಾರಿಕೆ ಏನು, ತನ್ನ ಉತ್ತರದಾಯಿತ್ವ ಎಂಥದು? ಈ ಪ್ರಶ್ನೆಗೆ ಹೇಗೆ ಎದುರಾಗಬೇಕು? ಇದು ಸಾರ್ವಜನಿಕ ಚಚರ್ೆಗೆ ಒಳಪಡಬೇಕು. ಮಾಧ್ಯಮದಲ್ಲಿರುವವರು ತಮ್ಮ ಹೊಣೆಗಾರಿಕೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಅದಕ್ಕಿಂತ ಮುಖ್ಯವಾಗಿ ತಮ್ಮ ಅಂತಸ್ಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳಬೇಕು.    ]]>

‍ಲೇಖಕರು G

July 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This