ಜಿ ಪಿ ಕಾಲಂ : ಉಳಿಸಿಕೊಳ್ಳಬೇಕಾದ ಪಶ್ಚಿಮ ಘಟ್ಟಗಳು

ಉಳಿಸಿಕೊಳ್ಳಬೇಕಾದ ಪಶ್ಚಿಮ ಘಟ್ಟಗಳು

-ಜಿ.ಪಿ.ಬಸವರಾಜು

ನಮ್ಮೆಲ್ಲರ ಹೆಮ್ಮೆಯ ಪಶ್ಚಿಮ ಘಟ್ಟಗಳಿಗೆ ವಿಶ್ವಮಾನ್ಯತೆ ದೊರೆತಿದೆ. ಜೀವ ಜಗತ್ತಿನ, ಸಸ್ಯ ಸಂಪತ್ತಿನ ವೈವಿಧ್ಯವನ್ನು, ಸೂಕ್ಷ್ಮವನ್ನು, ಇತಿಹಾಸ ಪರಂಪರೆಗಳನ್ನು ಬಲ್ಲವರಿಗೆ ಈ ಪಶ್ಚಿಮ ಘಟ್ಟಗಳು ಇವತ್ತಿಗೂ ಬಹುದೊಡ್ಡ ವಿಸ್ಮಯವೇ. ಭಾರತ ಮಾತ್ರವಲ್ಲದೆ, ಇಡೀ ಭೂಮಂಡಲವೇ ಪಶ್ಚಿಮ ಘಟ್ಟಗಳೆಂದರೆ ರೋಮಾಂಚನಗೊಳ್ಳುವುದು ಈ ಕಾರಣದಿಂದಾಗಿಯೇ. ಗುಜರಾತ್ ಗಡಿಯಿಂದ ಆರಂಭಿಸಿ 1600 ಕಿ.ಮೀ.ಉದ್ದಕ್ಕೆ ಚಾಚಿಕೊಂಡು ಕನ್ಯಾಕುಮಾರಿಯ ಭೂಸಿರದಲ್ಲಿ ಕೊನೆಗೊಳ್ಳುವ ಈ ಪರ್ವತ ಸಾಲುಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹಾದುಹೋಗುತ್ತವೆ. ಮಳೆ ಮಾರುತಗಳನ್ನು ತಡೆದು ಮಳೆಯನ್ನು ಪಡೆದುಕೊಳ್ಳಬಲ್ಲ ಸಾಮರ್ಥ್ಯವಿರುವ ಈ ಪರ್ವತಸಾಲು ಸೃಷ್ಟಿಸಿರುವ ಜೀವ ವಿಸ್ಮಯ ಅಗಾಧವಾದದ್ದ. ಈ ಶಿಖರಸಾಲಿನ ಸುತ್ತಮುತ್ತ ಹಬ್ಬಿ ನಿಂತಿರುವ ಅರಣ್ಯಗಳ ಇತಿಹಾಸವೇ ಬಹು ಪ್ರಾಚೀನಕ್ಕೆ ಚಾಚಿಕೊಳ್ಳುತ್ತದೆ. ಹಿಮಾಲಯದಲ್ಲಿರುವ ಕಾಡುಗಳಿಗಿಂತ ಈ ಸಹ್ಯಾದ್ರಿ ಶ್ರೇಣಿಯ ಕಾಡುಗಳೇ ಬಹಳ ಪುರಾತನವಾದುವೆಂದು ತಜ್ಞರು ಹೇಳುತ್ತಾರೆ. ಈ ಸಹ್ಯಾದ್ರಿಯನ್ನು ಆವರಿಸಿರುವ ಕಾಡು, ಕಣಿವೆ, ನದಿಗಳು, ಜೀವ ಸಂಪತ್ತು, ಖನಿಜ ಸಂಪತ್ತು, ಎತ್ತರದ ಗಿರಿಶಿಖರಗಳು ಮನುಕುಲದ ಹೆಮ್ಮೆಯೇ ಆಗಿವೆ. ಪಶ್ಚಿಮ ಘಟ್ಟಗಳ ಭೂ ಚರಿತ್ರೆಗೆ 360 ಕೋಟಿ ವರ್ಷಗಳ ಇತಿಹಾಸವಿದೆ ಎಂದು ಭೂ ಇತಿಹಾಸ ತಜ್ಞರು ಅಭಿಪ್ರಾಯ ಪಡುವುದೂ ಉಂಟು. ಪಶ್ಚಿಮ ಘಟ್ಟಗಳಲ್ಲಿರುವ 39 ವಿಶಿಷ್ಟ ತಾಣಗಳನ್ನು ಆಯ್ಕೆಮಾಡಿಕೊಂಡಿರುವ ಯುನೆಸ್ಕೊ ಈ ತಾಣಗಳಿಗೆ (ಕನರ್ಾಟಕದಲ್ಲಿ ಹತ್ತು ತಾಣಗಳು) ವಿಶ್ವ ಪರಂಪರೆಯ ತಾಣಗಳು ಎಂದು ಗೌರವಿಸಿದೆ. ಈ ಮಾನ್ಯತೆಯಿಂದ ಇಡೀ ಜಗತ್ತಿನ ಪರಿಸರ ಪ್ರೇಮಿಗಳು ಖುಷಿಗೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಇಡೀ ಮನುಕುಲವೇ ಹೆಮ್ಮೆಪಡುವ ಪಶ್ಚಿಮ ಘಟ್ಟಗಳಲ್ಲಿನ ಇತ್ತೀಚಿನ ಬೆಳವಣಿಗೆ ತೀರ ಕಳವಳಕಾರಿಯಾದದ್ದು. ಆಧುನಿಕ ಮನುಷ್ಯನ ದಾಹ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ನಡೆಯುವ ಹಲ ಬಗೆಯ ಚಟುವಟಿಕೆಗಳು ಈ ಪಶ್ಚಿಮ ಘಟ್ಟಗಳ ಪರಿಸರಕ್ಕೆ, ಅಲ್ಲಿನ ಜೀವ ವೈವಿಧ್ಯಕ್ಕೆ, ಸಸ್ಯ ಸಂಪತ್ತಿಗೆ ಬಹುದೊಡ್ಡ ಪೆಟ್ಟು ಕೊಡುವ ದಿಕ್ಕಿನಲ್ಲಿ ಸಾಗಿವೆ. ಇದು ಹೀಗೆಯೇ ಮುಂದುವರಿದರೆ, ಮನುಕುಲವೇ ಅಪರೂಪದ ಜೀವ ಸಂಪತ್ತನ್ನು ಕಳೆದುಕೊಳ್ಳಬಹುದೆಂಬ ಕಳವಳವೂ ಉಂಟಾಗಿತ್ತು. ಇಂಥ ಹೊತ್ತಿನಲ್ಲಿ ವಿಶ್ವಮಾನ್ಯತೆ ದೊರೆತಿರುವುದು ಪಶ್ಚಿಮ ಘಟ್ಟಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದೇನೋ ಎಂಬ ಪುಟ್ಟ ಆಸೆ ಹುಟ್ಟಲು ಕಾರಣವಾಗಿದೆ. ಈ ‘ವಿಶ್ವ ಪರಂಪರೆಯ ತಾಣ’ ಎನ್ನುವ ಮಾನ್ಯತೆ ಸುಲಭವಾಗಿ ಸಿಕ್ಕುವಂಥದ್ದಲ್ಲ. ಯುನೆಸ್ಕೊ ಪ್ರತಿವರ್ಷ 25-30 ತಾಣಗಳನ್ನು ತನ್ನ ಪಟ್ಟಿಗೆ ಸೇರಿಸುತ್ತದೆ ಎಂಬುದು ನಿಜ. ಮನುಕುಲವೇ ಹೆಮ್ಮೆ ಪಟ್ಟುಕೊಳ್ಳಬಹುದಾದ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಆಯ್ಕೆ ಮಾಡಿ ಅವುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಒಪ್ಪಿಸುವುದು ಈ ಮಾನ್ಯತೆಯ ಹಿಂದಿರುವ ಮುಖ್ಯ ಉದ್ದೇಶ. ಈ ಸಂಬಂಧವಾಗಿ 1972ರಲ್ಲಿ ಯುನೆಸ್ಕೊ ನಡೆಸಿದ ಮಹಾ ಅಧಿವೇಶನದಲ್ಲಿ ರೂಪಿಸಲಾದ ಅಂತರ ರಾಷ್ಟ್ರೀಯ ಒಪ್ಪಂದಕ್ಕೆ ಸಹಿಹಾಕಿದ ರಾಷ್ಟ್ರಗಳಿಂದ ಕಡ್ಡಾಯ ದೇಣಿಗೆಯನ್ನು ಪಡೆಯಲಾಗುತ್ತಿದೆ. ಹೀಗೆ ಪ್ರತಿವರ್ಷ ಬಂದು ಕೂಡುವ ಮೊತ್ತ ನಾಲ್ಕು ಮಿಲಿಯನ್ ಅಮೆರಿಕನ್ ಡಾಲರ್. ವಿಶ್ವ ಪರಂಪರೆಯ ತಾಣಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳು, ಸಂಶೋಧನೆಗಳು, ಶೈಕ್ಷಣಿಕ ಕಾರ್ಯಕ್ರಮಗಳು, ಕಾವಲುಪಡೆಯ ಕ್ರಿಯೆ ಇತ್ಯಾದಿ ಹಲಬಗೆಯ ಚಟುವಟಿಕೆಗಳಿಗೆ ಈ ಹಣವನ್ನು ವಿನಿಯೋಗಿಸಲಾಗುವುದು. ವಿಶ್ವಪರಂಪರೆಯ ಮಾನ್ಯತೆಯನ್ನು ಪಡೆದಿರುವ ತಾಣಗಳ ಸಂಖ್ಯೆ ಈಗ 962. ಇವು 151 ರಾಷ್ಟ್ರಗಳಲ್ಲಿವೆ. j ಯುನೆಸ್ಕೊ ಚಟುವಟಿಕೆಗಳು ಒಂದು ರಾಷ್ಟ್ರದ ನೀತಿ ನಿಯಮಗಳನ್ನು ಗೌರವಿಸಿಯೇ ನಡೆಯುತ್ತವೆ. ಒಂದು ತಾಣದ ಮಹತ್ವವನ್ನು ಗುರುತಿಸುವ ಯಾರೂ ಅದನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ಸೂಚಿಸಬಹುದು. ಇಂಥ ಸೂಚನೆಗಳನ್ನೆಲ್ಲ ಗಮನಿಸಿ, ಪರಿಣತರ ವರದಿಯನ್ನು ಆಧರಿಸಿ ಆಯಾ ರಾಷ್ಟ್ರ ಶಿಫಾರಸು ಯುನೆಸ್ಕೊಗೆ ಶಿಫಾರಸು ಮಾಡುತ್ತದೆ. ಈ ಶಿಫಾರಸನ್ನು ಗಮನಿಸಿ, ಚರ್ಚಿಸಿ, 21 ರಾಷ್ಟ್ರಗಳ ಸಮಿತಿ ಮಾನ್ಯತೆಯನ್ನು ನೀಡುವ ನಿರ್ಧಾರ ಕೈಗೊಳ್ಳುತ್ತದೆ. ಭಾರತ ಆರು ವರ್ಷಗಳಿಂದ ಈ ಬಗ್ಗೆ ಪ್ರಯತ್ನವನ್ನು ಮಾಡುತ್ತಲೇ ಬಂದು ಇದೀಗ ಯಶಸ್ವಿಯಾಗಿದೆ. ಭಾರತದ ಈ ಪ್ರಯತ್ನಕ್ಕೆ 18 ರಾಷ್ಟ್ರಗಳ ಬೆಂಬಲ ದೊರಕಿತು. ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಈ ಶಿಫಾರಸನ್ನು ಮಾಡುವ ಮುನ್ನ ಭಾರತ ಸರ್ಕಾರದ ಪರಿಸರ ಇಲಾಖೆ ಪರಿಣತರ ವರದಿಯನ್ನು ತರಿಸಿಕೊಂಡಿತ್ತು. ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಎಲ್ಲ ರಾಜ್ಯಗಳ ಜೊತೆಯಲ್ಲೂ ಚರ್ಚೆ ನಡೆಸಿ ಒಪ್ಪಿಗೆಯನ್ನು ಪಡೆದುಕೊಂಡಿತ್ತು. ಈಗ ದೊರೆತಿರುವ ವಿಶ್ವಮಾನ್ಯತೆಯಿಂದ ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳು ಸಂತೋಷಗೊಂಡಿವೆ. ಆದರೆ ಕರ್ನಾಟಕ ಮಾತ್ರ ತಕರಾರು ತೆಗೆದಿದೆ. ಬಿಜೆಪಿ ನೇತೃತ್ವವಿರುವುದು ಇದಕ್ಕೆ ಕಾರಣವೇ? ಸ್ವಲ್ಪ ಹಿಂದಿನ ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ, ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿದ್ದಾಗಲೇ ಪಶ್ಚಿಮ ಘಟ್ಟಗಳ ಈ ವಿಶ್ವಮಾನ್ಯತೆಯ ಪ್ರಯತ್ನ ಆರಂಭಗೊಂಡಿತ್ತು. ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ರಾಜ್ಯ ಸರ್ಕಾರದ ವಿರೋಧ ಯಾಕಾಗಿ, ಈ ವಿರೋಧದ ಹಿಂದಿರುವ ಹಿತಾಸಕ್ತಿಗಳೇನು ಎಂಬುದು ಸ್ಪಷ್ಟವಾಗುತ್ತದೆ. ಭೂ ಮಾಫಿಯಾ, ಅರಣ್ಯ ಸಂಪತ್ತನ್ನು ಕೊಳ್ಳೆಹೊಡೆಯುವ ಶಕ್ತಿಗಳು, ಗಣಿ ಸಂಪತ್ತನ್ನು ಲಪಟಾಯಿಸುತ್ತಿರುವ ಮಾಫಿಯಾ ಹೀಗೆ ಅನೇಕ ದುಷ್ಟಶಕ್ತಿಗಳು ಈ ಮಾನ್ಯತೆಯನ್ನು ವಿರೋಧಿಸುತ್ತಿವೆ. ಬಿಜೆಪಿ ಮಾತ್ರವಲ್ಲ, ಹಿಂದಿದ್ದ ಸಕರ್ಾರಗಳ ಅವಧಿಯಲ್ಲೂ ಮೇಲೆ ಹೇಳಿದ ಮಾಫಿಯಾಗಳು ಇರಲಿಲ್ಲವೆಂದಲ್ಲ; ಬಿಜೆಪಿ ಸಕರ್ಾರದ ಈ ಅವಧಿಯಲ್ಲಿ ಈ ಮಾಫಿಯಾಗಳ ಅಬ್ಬರ ಹೆಚ್ಚಾಗಿದೆ. ಇದು ಗಮನಿಸಬೇಕಾದ ಅಂಶ. ಅಲ್ಲದೆ ಮಿನಿ ಜಲ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿಭಾಯಿಸುತ್ತಿರುವ ಕಂಪೆನಿಗಳು, ಅವು ಚೆಲ್ಲುತ್ತಿರುವ ಹಣ, ಅದು ಹೆಚ್ಚಿಸುತ್ತಿರುವ ಭ್ರಷ್ಟತೆ ಇವೆಲ್ಲವೂ ಸದ್ಯದ ವಿಶ್ವಮಾನ್ಯತೆಯ ವಿರೋಧಿಗಳಾಗಿವೆ. ವಿಶ್ವಮಾನ್ಯತೆಯನ್ನು ಒಪ್ಪಿಕೊಂಡರೆ ಸಕರ್ಾರಗಳು ಬೇಕಾಬಿಟ್ಟಿಯಾಗಿ ವ್ಯವಹರಿಸಲು ಅವಕಾಶವಿರುವುದಿಲ್ಲ. ಒಂದು ಬಗೆಯ ಕಡಿವಾಣವಂತೂ ಇದ್ದೇ ಇರುತ್ತದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನಡೆಯುತ್ತಿರುವ ಇಂಥ ಚಟುವಟಿಕೆಗಳಲ್ಲದೆ ಸಕರ್ಾರವೇ ಕೈಗೆತ್ತಿಕೊಂಡಿರುವ ಯೋಜನೆಗಳೂ ಇವೆ. ಇವುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಮುನ್ನಡೆಸಲಾಗುತ್ತಿದೆ. ಅಭಿವೃದ್ಧಿ ಎನ್ನುವುದನ್ನು ಬೇರೆಯ ದಿಕ್ಕಿನಿಂದ ನೋಡುವುದು, ಮನುಕುಲದ ಕ್ಷೇಮವನ್ನು ಗಮನದಲ್ಲಿಟ್ಟುಕೊಳ್ಳುವುದು ಸಾಧ್ಯವಾದಾಗ, ನಮ್ಮ ಅಗತ್ಯಗಳನ್ನು ಸ್ಥಳೀಯವಾಗಿ ಮತ್ತು ಸಣ್ಣಪುಟ್ಟ ಯೋಜನೆಗಳ ಮೂಲಕವೂ ಕಂಡುಕೊಳ್ಳಬಹುದು. ಆದರೆ ಆ ದಿಕ್ಕಿನಲ್ಲಿ ಚಿಂತಿಸುವ ಮನಸ್ಸು ಯಾರಿಗಿದೆ? ಇದು ಗಾಂಧೀ ತೋರಿಸಿಕೊಟ್ಟ ರಾಜಮಾರ್ಗ. ಆದರೆ ಗಾಂಧೀಜಿಯನ್ನೇ ಅಪ್ರಸ್ತುತ, ಪುರಾತನ ಎಂದು ಭಾವಿಸುವ ‘ಆಧುನಿಕರೇ’ ಎಲ್ಲೆಲ್ಲೂ ತುಂಬಿರುವಾಗ ಗಾಂಧೀ ಚಿಂತನೆಗೆ ಚಾಲನೆ ಸಿಕ್ಕುವುದು ಸಾಧ್ಯವೇ? ಸದ್ಯದ ಸಕರ್ಾರ ಮತ್ತು ಖಾಸಗಿಯ ಯೋಜನೆಗಳಿಂದ ದಟ್ಟ ಅರಣ್ಯಗಳು ಉಳಿಯುವುದಿಲ್ಲ. ಸಸ್ಯ ಮತ್ತು ಜೀವ ಸಂಪತ್ತು ನಾಶವಾಗುತ್ತದೆ; ನದಿಗಳು ಬತ್ತಿಹೋಗುವ ಸ್ಥಿತಿಯನ್ನು ತಲುಪುತ್ತವೆ. ಡ್ಯಾಂಗಳು, ಸಂಪರ್ಕ ರಸ್ತೆಗಳು, ವಿದ್ಯುತ್ ಸಾಗಣೆಯ ವ್ಯವಸ್ಥೆ, ಜನವಸತಿಗಳ ನಿಮರ್ಾಣ, ವಾಹನಗಳ ಓಡಾಟ, ಡೈನಮೈಟ್ಗಳ ಬಳಕೆ ಹೀಗೆ ಅಗಾಧವಾದ ಚಟುವಟಿಕೆಗಳು ಪರಿಸರ ನಾಶಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತವೆ. ಸಸ್ಯ ಮತ್ತು ಪ್ರಾಣಿಸಂಪತ್ತನ್ನು ಗಮನಿಸಿದರೆ ವಿನಾಶದ ಅಂಚಿನಲ್ಲಿರುವ ಅನೇಕ ಸಸ್ಯಗಳು ಮತ್ತು ಪ್ರಾಣಿಗಳು ಇಲ್ಲಿ ಮಾತ್ರ ಉಳಿದುಕೊಂಡಿವೆ. ಸ್ಥಳೀಯವಾಗಿ ಮಾತ್ರ ಉಳಿದಿರುವ ಅನೇಕ ಪ್ರಭೇದಗಳೂ ಇಲ್ಲಿವೆ. ಲಕ್ಷಾಂತರ ವರ್ಷಗಳಿಂದ ಉಳಿದುಕೊಂಡು ಬಂದಿರುವ ಜೀವ ವೈವಿಧ್ಯ ಈ ಪಶ್ಚಿಮ ಘಟ್ಟಗಳಲ್ಲಿ, ಜೀವ ಸಂಕುಲದ ಕೊನೆಯ ಕೊಂಡಿಯಾಗಿ ಕುಟುಕು ಜೀವ ಹಿಡಿದುಕೊಂಡಿದೆ. ಹೀಗಿರುವಾಗ ವಿಶ್ವ ಮಾನ್ಯತೆಯ ನೆಪದಲ್ಲಾದರೂ ಇದೆಲ್ಲದರ ಸಂರಕ್ಷಣೆ ಸಾಧ್ಯವಾದರೆ ಮುಂದಿನ ತಲೆಮಾರು ಹೆಮ್ಮೆಪಡಲು ಸಾಧ್ಯ. ಆದರೆ ನಮ್ಮಲ್ಲಿರುವ ಮಾಫಿಯಾಗಳು ಎಷ್ಟು ಪ್ರಬಲಶಾಲಿಯಾಗಿವೆ ಎಂದರೆ ಅವು ಸಕರ್ಾರಗಳನ್ನೂ ನಿಯಂತ್ರಿಸಬಲ್ಲವು. ಈ ಮಾಫಿಯಾಗಳ ದೆಸೆಯಿಂದಾಗಿ ಹರಿದಾಡುತ್ತಿರುವ ಕೋಟ್ಯಂತರ ರೂಪಾಯಿಗಳ ಕಪ್ಪುಹಣ ಯಾವುದನ್ನೂ ನಾಶಮಾಡಬಲ್ಲಷ್ಟು ಶಕ್ತಿಶಾಲಿಯಾಗಿದೆ. ಇಂಥ ಸನ್ನಿವೇಶದಲ್ಲಿ ನಮ್ಮ ಅರಣ್ಯ, ನಮ್ಮ ನದಿ, ಗುಡ್ಡಬೆಟ್ಟಗಳು, ಕಣಿವೆ ಕಂದರಗಳು, ಜೀವ ವೈವಿಧ್ಯ ಉಳಿಯುವುದು ಸಾಧ್ಯವೇ? ಅರಣ್ಯ ಸಂರಕ್ಷಣೆ ನಮಗೆ ಹೊಸದೇನಲ್ಲ ಎಂದು ಕನರ್ಾಟಕ ಸಕರ್ಾರ ಹೇಳುತ್ತಿದೆ. ಅರಣ್ಯ ಸಂರಕ್ಷಣೆಗೆ ನಮ್ಮಲ್ಲಿರುವ ಕಾನೂನುಗಳೇ ಸಾಕು ಎಂದೂ ಈ ಸಕರ್ಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ನಮ್ಮ ಅರಣ್ಯ ಸಂರಕ್ಷಣೆ ಹೇಗಾಗುತ್ತಿದೆ ಎಂಬುದನ್ನು ನಾವೆಲ್ಲ ನೋಡುತ್ತ ಬಂದಿದ್ದೇವೆ. ನಮ್ಮ ಕಾನೂನುಗಳು ಯಾರ ಕೈಯಲ್ಲಿವೆ ಎಂಬುದನ್ನೂ ನಾವು ಬಲ್ಲೆವು. ಇಂಥ ಸಕರ್ಾರಗಳ ಮೇಲೆ ಎಷ್ಟು ಭರವಸೆಯನ್ನಿಡಬಹುದು? ಈವರೆಗೆ ಇಟ್ಟ ನಂಬಿಕೆಗಳೆಲ್ಲ ಏನಾಗಿವೆ? ಇವೆಲ್ಲ ಈ ಹೊತ್ತಿನಲ್ಲಿ ಗಂಭೀರ ಚಿಂತನೆಗೆ ಒಳಗಾಗಬೇಕಾದ ಸಂಗತಿಗಳು.    ]]>

‍ಲೇಖಕರು G

September 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This