ಜಿ ಪಿ ಕಾಲಂ : ನಮ್ಮ ಪರಂಪರೆಯ ‘ಬೀಜ’ಮಾತು

ನಮ್ಮ ಪರಂಪರೆಯ ‘ಬೀಜ’ಮಾತು

ಹದ ಮಳೆ ಬಿದ್ದು ಭೂಮಿ ಬಿತ್ತನೆಗೆ ಸಿದ್ಧವಾಗುತ್ತಿದ್ದಂತೆ ನಮ್ಮೂರಿನಲ್ಲಿ ತರಹೇವಾರಿ ಬೀಜಗಳು ಹೊರಬರುತ್ತಿದ್ದವು. ರಾಗಿ, ನವಣೆ, ಜೋಳ, ಸೇಂಗಾ, ಅವರೆ, ಉದ್ದು, ತೊಗರಿ, ಹಲಸಂದೆ ಇತ್ಯಾದಿ. ತೀರ ಭೀಕರ ಬರಗಾಲದ ದಟ್ಟ ನೆರಳು ನಮ್ಮೂರಿನ ಮೇಲೆ ಕವಿದು ಹೋಗಿದ್ದರೂ, ಜನ ಹೇಗೋ ಬಿತ್ತನೆಯ ಬೀಜಗಳನ್ನು ಉಳಿಸಿಕೊಂಡಿರುತ್ತಿದ್ದರು. ತಮ್ಮ ಹೊಟ್ಟೆಗಳಿಗೆ ಬರಿ ಮಾತಿನ ಸಮಾಧಾನ ಹೇಳಿ ಮಳೆಗಾಗಿ ಕಾದಿರುತ್ತಿದ್ದ ರೈತ ಕುಟುಂಬಗಳು ಎಲ್ಲಿಯೋ ರಕ್ಷಿಸಿಕೊಂಡಿರುತ್ತಿದ್ದ ಬೀಜಗಳನ್ನು ಹೊರತೆಗೆಯುತ್ತಿದ್ದರು. ಮನುಷ್ಯರು ಮಾತ್ರವಲ್ಲ, ಇಲಿ ಹೆಗ್ಗಣಗಳು, ಕೀಟಗಳು, ನುಸಿ ಎಲ್ಲದರಿಂದಲೂ ಈ ಬೀಜಗಳನ್ನು ಉಳಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಆದರೂ ಬೀಜಗಳು ಸುರಕ್ಷಿತವಾಗಿ ಬಿತ್ತನೆಯ ಕಾಲಕ್ಕೆ ಹೊರಗೆ ಬರುತ್ತಿದ್ದವು.

ದೊಡ್ಡ ಪ್ರಮಾಣದಲ್ಲಿ ಬಿತ್ತನೆ ಕೆಲಸ ನಡೆಯುವಾಗ ಮಾತ್ರ ಬೀಜಗಳನ್ನು ಕೊಳ್ಳುವ ಪದ್ಧತಿ ಇತ್ತೇ ಹೊರತು ಉಳಿದಂತೆ ಬೀಜ ಕೊಳ್ಳುವುದು ನಮ್ಮೂರಲ್ಲಿ ಅಪರೂಪವೇ ಆಗಿತ್ತು. ಬಯಲು ಸೀಮೆಯೆಂದರೆ ಮಳೆಗಾಲದಿಂದ ಮಳೆಗಾಲಕ್ಕೆ ಮುನ್ನಡೆಯುವ ಕೃಷಿ. ಮಳೆ ಕೈಕೊಟ್ಟರೆ ವರ್ಷದ ಅನ್ನಕ್ಕೇ ಕಲ್ಲು. ಇಂಥ ಸ್ಥಿತಿಯಲ್ಲೂ ರೈತರು ಬೀಜಗಳನ್ನು ಪೊರೆಯುತ್ತಿದ್ದರು.

ಈ ಬೀಜಗಳೆಂದರೆ ಮಣ್ಣು, ಗಾಳಿ, ಸ್ಥಳೀಯ ಗೊಬ್ಬರ, ಮಳೆಯ ನೀರು ಇವುಗಳನ್ನು ಆಧರಿಸಿ ಪಲ್ಲವಿಸುವ ಶಕ್ತಿಯನ್ನು ತಮ್ಮೊಡಲಲ್ಲಿ ಉಳಿಸಿಕೊಂಡು ಬಂದ ಜೀವಸತ್ವಗಳು. ಯಾವ ರೋಗ ರುಜಿನಗಳಿಗೂ ಬಗ್ಗದೆ, ಹದವಾದ ಮಳೆ ನೀರನ್ನು ಉಂಡು, ತನ್ನ ಮಿತಿಯಲ್ಲಿಯೇ ಇಳುವರಿಯನ್ನು ಕೊಡುವ ಬೆಳೆಗಳ ಹಿಂದೆ ಈ ಬೀಜಗಳ ಪಾತ್ರ ಮಹತ್ವದ್ದು. ಈ ಕಾರಣಕ್ಕಾಗಿಯೇ ತಮ್ಮ ನೆಲಕ್ಕೆ ಒಗ್ಗುವ ಬೀಜಗಳನ್ನು ಕಂಡುಕೊಂಡಿದ್ದ ನಮ್ಮೂರ ಜನ ಪ್ರತಿವರ್ಷ ಅವೇ ಬೀಜಗಳನ್ನು ಬಳಸುತ್ತಿದ್ದರು. ಸುಗ್ಗಿಯ ಕಾಲದಲ್ಲಂತೂ ಬೀಜ ಧಾನ್ಯಕ್ಕಾಗಿ ತೋರುವ ಶ್ರದ್ಧೆ, ಧಾನ್ಯಗಳ ಆಯ್ಕೆ ಎಲ್ಲ ನಿಖರವಾಗಿ ನಡೆಯುತ್ತಿತ್ತು.

ಒಂದು ಬೊಗಸೆ ತೊಗರಿ, ಹಲಸಂದೆ, ಅಕ್ಕಡಿಕಾಳು, ಹತ್ತಿಬೀಜ ಇವುಗಳಿಗಾಗಿ ಹಣ ತೆಗೆದುಕೊಳ್ಳುವ ಪದ್ಧತಿಯೂ ಇರಲಿಲ್ಲ. ಈ ಬೊಗಸೆ ಬೀಜವನ್ನು ಉದಾರವಾಗಿ, ತುಂಬು ಮನಸ್ಸಿನಿಂದಲೇ ಕೊಡುತ್ತಿದ್ದರು. ಎಷ್ಟು ಕಾಲದಿಂದ ಈ ಬೀಜಗಳು ನಮ್ಮೂರಲ್ಲಿ ಉಳಿದುಬಂದಿದ್ದವು ಎಂಬುದು ಲೆಕ್ಕಕ್ಕೇ ಸಿಕ್ಕುವುದಿಲ್ಲ. ನಮ್ಮೆಲ್ಲರ ನೆನಪುಗಳ ಹಿಂದಕ್ಕೆ ಹಾರುವುದೆಂದರೆ ಅಜ-ಅಜ್ಜಿಯರ ಕಾಲಕ್ಕೆ ಮಾತ್ರ. ಹೆಚ್ಚಿನ ಜಿಗಿತಕ್ಕೆ ನೂರು ವರ್ಷಗಳ ವ್ಯಾಪ್ತಿ ದಕ್ಕಬಹುದೇನೋ. ಆದರೆ ಈ ಬೀಜಗಳ ಇತಿಹಾಸ ಅಷ್ಟಕ್ಕೆ ಮಾತ್ರ ಸೀಮಿತವೇ?

ಉತ್ತರ ಕನರ್ಾಟಕದ ಬೂದಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಉತ್ಖನನ ಈ ಬೀಜಗಳ ಇತಿಹಾಸವನ್ನೇ ಸಾರುತ್ತದೆ. ಸುಮಾರು ಇಪ್ಪತ್ತು ಸಾವಿರ ವರ್ಷಗಳ ಹಿಂದೆ ರಾಗಿ, ನವಣೆ ಮತ್ತು ಹುರುಳಿಯನ್ನು ಅಲ್ಲಿನ ಜನ ಬಳಸುತ್ತಿದ್ದರು, ಈ ಧಾನ್ಯಗಳು ಅವರ ಮುಖ್ಯ ಆಹಾರದಲ್ಲಿ ಸೇರಿದ್ದವು. ಇಪ್ಪತ್ತು ಸಾವಿರ ವರ್ಷಗಳ ಹಿಂದಿನ ಬದುಕು ನಮ್ಮ ಕಲ್ಪನೆಗೂ ಸಿಕ್ಕುವುದಿಲ್ಲ. ಆಗಿನಿಂದಲೂ ಈ ಧಾನ್ಯಗಳು ನಮ್ಮಲ್ಲಿ ಉಳಿದುಬಂದಿರುವುದು, ಈಗಲೂ ನಮ್ಮ ಆಹಾರ ಪದ್ಧತಿಯಲ್ಲಿ ಜಾಗ ಉಳಿಸಿಕೊಂಡಿರುವುದು ಎಂಥ ರೋಚಕ ಸಂಗತಿ.

ನಮ್ಮ ಆಹಾರ ಪದ್ಧತಿಯಲ್ಲಿ ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಪರಂಪರಾಗತ ವಸ್ತುಗಳನ್ನು ಅಲ್ಲಾಡಿಸಿದೆ; ಮಾಪರ್ಾಟುಗಳನ್ನು ಮಾಡಿದೆ; ಹೊಸ ಹೊಸ ವಿಧಾನಗಳನ್ನು ನಮ್ಮ ಕೃಷಿ ಕ್ಷೇತ್ರಕ್ಕೆ ಅಳವಡಿಸಿದೆ; ಇದೆಲ್ಲದರ ಪರಿಣಾಮವಾಗಿ ನಮ್ಮ ಆಹಾರ ಬದಲಾವಣೆಗೊಂಡಿದೆ. ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಉಳಿಸಿಕೊಂಡು ಬಂದಿದ್ದ ಅತ್ಯಂತ ಮುಖ್ಯವಾದ ಆಹಾರ ಧಾನ್ಯಗಳನ್ನು ನಾವು ಬಲಿಗೊಟ್ಟಿದ್ದೇವೆ. ಹೊಸ ಧಾನ್ಯಗಳನ್ನು ಆಹ್ವಾನಿಸಿದ್ದೇವೆ. ಜಗತ್ತಿಗೆ ಮುಖಾಮುಖಿಯಾದ ಯಾವುದೇ ಸಮಾಜದಲ್ಲಿ ಇಂಥ ಬದಲಾವಣೆಗಳು ಅನಿವಾರ್ಯ. ಆದರೆ ಈ ಬದಲಾವಣೆಗಳು ನಮ್ಮಲ್ಲಿರುವ ಮಹತ್ವದ ವಸ್ತುಗಳನ್ನು ಕಳೆದುಕೊಳ್ಳಲು ಕಾರಣವಾಗಬಾರದು. ಆ ಎಚ್ಚರ ನಮಗೆ ನಿರಂತರವಾಗಿ ಇದ್ದರೆ ಮಾತ್ರ ಇದು ಸಾಧ್ಯ.

ನಮ್ಮ ರೈತರೇನೋ ಈ ಎಚ್ಚರವನ್ನು ನಿರಂತರವಾಗಿಯೇ ಉಳಿಸಿಕೊಂಡು ಬಂದಿದ್ದರು. ಇಲ್ಲವಾದರೆ ತಮಗೆ ಅಗತ್ಯವಾದ ಬೀಜವನ್ನು ಅವರು ರಕ್ಷಿಸಿಕೊಂಡು ಬರುತ್ತಿರಲಿಲ್ಲ. ಈ ಬೀಜಗಳ ರಕ್ಷಣೆಯ ಹೆಸರಿನಲ್ಲಿ ಅವರು ಪರಂಪರಾಗತ ಜ್ಞಾನವನ್ನು, ಸಂರಕ್ಷಣೆಯ ತಂತ್ರಜ್ಞಾನವನ್ನು, ಅದ್ಭುತ ಗ್ರಾಮೀಣ ವಿವೇಕವನ್ನು ಪೊರೆದುಕೊಂಡೇ ಬಂದಿದ್ದರು. ಆದರೆ ನಾವು ಆಧುನಿಕ ಜ್ಞಾನದ ಹೆಸರಿನಲ್ಲಿ, ಅಧಿಕ ಇಳುವರಿಯ ಆಸೆ ತೋರಿಸಿ ಹಳೆಯದನ್ನು ತೊರೆಯಲು ಕಾರಣರಾದೆವು. ಆಧುನಿಕ ರಾಸಾಯನಿಕ ಗೊಬ್ಬರ, ಔಷಧಿಗಳು, ಅಧಿಕ ಇಳುವರಿಯ ಬೀಜಗಳು ಹೀಗೆ ಅನೇಕ ಮಾರ್ಗಗಳನ್ನು ತೋರಿಸಿ ಹಳೆಯ ಪದ್ಧತಿಗೆ ವಿದಾಯ ಹೇಳಿಸಿದೆವು. ಈಗ ರೈತರಲ್ಲಿ ಪರಂಪರಾಗತ ಬೀಜಗಳಿಲ್ಲ. ತಲೆಮಾರುಗಳ ಇತಿಹಾಸವನ್ನು ಹೊತ್ತ ಅಮೂಲ್ಯ ಜೀವಸತ್ವಗಳಿಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನು ತನ್ನೊಡಲಲ್ಲಿಟ್ಟುಕೊಂಡ ಬೀಜಗಳು ಕಣ್ಮರೆಯಾಗಿವೆ.

ನಮ್ಮ ಆಹಾರ ಪದ್ಧತಿಯಲ್ಲಿಯೂ ಪುರಾತನ ಧಾನ್ಯಗಳಿಗೆ ಎಡೆಯಿಲ್ಲ. ನವಣೆ, ಸಾಮೆ, ಸಜ್ಜೆ, ಊದಲು, ರಾಗಿ, ಜೋಳ ಮೊದಲಾದ ಪುರಾತನ ಧಾನ್ಯಗಳು ನಿಧಾನಕ್ಕೆ ಕಾಲ್ತೆಗೆಯುತ್ತಿವೆ. ಹೊಸ ತಲೆಮಾರು ಇವುಗಳ ರುಚಿಯನ್ನು ನೋಡುವುದೂ ಸಾಧ್ಯವಾಗದ ಆಧುನಿಕ ಕಾಲ ಸಂದರ್ಭದಲ್ಲಿ ನಾವಿದ್ದೇವೆ. ನಿಸರ್ಗಕ್ಕೆ ಹಾನಿ ಮಾಡದಂತೆ, ಎಲ್ಲ ಹವಾಮಾನಕ್ಕೂ ಹೊಂದಿಕೊಂಡು, ತನ್ನ ನೆಲದ ಸತ್ವಕ್ಕೇ ತನ್ನನ್ನು ಹೊಂದಿಸಿಕೊಂಡು, ರೋಗ ರುಜಿನಗಳನ್ನು ಎದುರಿಸಿ ಬೆಳೆಯುವ ಈ ಧಾನ್ಯಗಳಲ್ಲಿ ಪೌಷ್ಠಿಕಾಂಶ, ಜೀವಸತ್ವಗಳು, ಖನಿಜಾಂಶಗಳು ಅಗತ್ಯ ಪ್ರಮಾಣದಲ್ಲಿ ಇರುವುದನ್ನು ಆಹಾರ ತಜ್ಞರು ಗುರುತಿಸಿದ್ದಾರೆ. ಕೆಲವು ಧಾನ್ಯಗಳ ಬಳಕೆ, ಕೆಲವು ನಿದರ್ಿಷ್ಟ ರೋಗಗಳ ನಿವಾರಣೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ ಎಂದು ವೈದ್ಯರು ಹೇಳುವುದೂ ಉಂಟು. ಈ ಕಾರಣಕ್ಕಾಗಿಯೇ ಆಯುವರ್ೇದ ಮತ್ತು ಹೋಮಿಯೋಪತಿ ಪದ್ಧತಿಗಳಲ್ಲಿ ಕೆಲವು ಧಾನ್ಯಗಳ ಬಳಕೆಯನ್ನೂ ಸೂಚಿಸುವುದಿದೆ. ಇಷ್ಟು ಮಹತ್ವ ಇದ್ದರೂ ನಾವು ಈ ಧಾನ್ಯಗಳನ್ನು ಉಪೇಕ್ಷಿಸಿದ್ದೇವೆ.

ಗಾತ್ರದಲ್ಲಿ ಕಿರಿದಾದ ಕಾರಣಕ್ಕೊ ಅಥವಾ ಇತ್ತೀಚಿನ ವರ್ಷಗಳಲ್ಲಿ ಮೂಲೆಗುಂಪಾದ ಕಾರಣಕ್ಕೋ ಇವುಗಳನ್ನು ‘ಕಿರುಧಾನ್ಯಗಳು’ ಎಂದು ಕರೆಯಲಾಗುತ್ತಿದೆ. ಒಂದೊಂದು ನೆಲದ ಗುಣಕ್ಕನುಗುಣವಾಗಿ ಈ ಧಾನ್ಯಗಳು ಬೆಳೆದು, ಉಳಿದು ಬಂದಿರುವುದನ್ನು ನಮ್ಮ ನೆಲ ಪುರಾಣ ಹೇಳುತ್ತದೆ. ಹರಪ್ಪ ಮತ್ತು ಮಹೆಂಜೊದಾರೋ ಉತ್ಖನನಗಳಲ್ಲಿ ಈ ಧಾನ್ಯಗಳು ದೊರೆತಿವೆ ಎಂದೂ ಹೇಳಲಾಗುತ್ತಿದೆ. ಈ ಮಹತ್ವವನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ ನಾವು ಈ ಧಾನ್ಯಗಳನ್ನು ದೂರಸರಿಸಿದೆವು.

ಆದರೆ ಇತ್ತೀಚಿನ ವರ್ಷಗಳಲ್ಲಿ ಮೂಡುತ್ತಿರುವ ಹೊಸ ಎಚ್ಚರ ಮತ್ತು ವಿವೇಕ ಈ ಧಾನ್ಯಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದೆ. ಈ ಕಿರುಧಾನ್ಯಗಳನ್ನು ‘ಸಿರಿಧಾನ್ಯಗಳು’ ಎಂದು ಕರೆಯಲಾಗಿದೆ. ಈ ಧಾನ್ಯಗಳನ್ನು ಮತ್ತೆ ಸಮೃದ್ಧವಾಗಿ ಬೆಳೆಯುವ ಮತ್ತು ಆ ಮೂಲಕ ಆಧುನಿಕ ರೈತನನ್ನು ಹಲ ಬಗೆಯ ಸಂಕಟಗಳಿಗೆ ಈಡುಮಾಡುವ ರಸಗೊಬ್ಬರ, ಔಷಧಿಗಳು, ಹೊಸ ಬೀಜಗಳು, ಹುಸಿ ಇಳುವರಿ ಇತ್ಯಾದಿಗಳಿಂದ ಮುಕ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ಸಿರಿಧಾನ್ಯಗಳ ಪ್ರದರ್ಶನ, ಈ ಧಾನ್ಯಗಳನ್ನು ಬಳಸಿ ತಯಾರಿಸುವ ರುಚಿರುಚಿಕರವಾದ ಮತ್ತು ಪೌಷ್ಠಿಕಾಂಶಗಳಿಂದ ಕೂಡಿದ ತಿನಿಸುಗಳು (ಇವೆಲ್ಲ ನಮ್ಮ ಪರಂಪರೆಯ ಅಡುಗೆಯಲ್ಲಿ ಇದ್ದಂಥವೇ), ಇವುಗಳನ್ನು ತಯಾರಿಸುವ ಸ್ಪಧರ್ೆಗಳು ಇತ್ಯಾದಿ ಪ್ರಯತ್ನಗಳ ಮೂಲಕ ಮತ್ತೆ ನಮ್ಮ ಪರಂಪರೆಯತ್ತ ಹೊರಳುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಪ್ರದರ್ಶನಗಳಿಗೆ, ತಿನಿಸುಗಳಿಗೆ ಜನ ಮುಗೆ ಬೀಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೇ.

ನಗರ ಕೇಂದ್ರಿತ ಮಧ್ಯಮ ವರ್ಗಗಳನ್ನು ದಾಟಿ ಈ ಸಿರಿಧಾನ್ಯಗಳು ನಡೆಯಬೇಕಾಗಿದೆ. ಮತ್ತೆ ನಮ್ಮ ಗ್ರಾಮೀಣ ರೈತರ ಬಾಗಿಲುಗಳನ್ನು ತಟ್ಟಬೇಕಾಗಿದೆ. ಅವರು ಮತ್ತೆ ‘ಸಿರಿಧಾನ್ಯ’ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಸಾಧ್ಯವಾದರೆ ನಮ್ಮ ಸಮಾಜ ಹೊಸ ನೆಲೆಯಲ್ಲಿ ರೂಪಗೊಳ್ಳುವುದಕ್ಕೆ ಅವಕಾಶವಿದೆ. ಅಂಥ ಸಮಾಜವನ್ನು ಮಧುಮೇಹ, ಹೃದಯಸಂಬಂಧೀ ರೋಗಗಳು ಕಾಡುವ ಸಂಭವ ಕಡಿಮೆ. ಅಷ್ಟೇ ಅಲ್ಲ ರಸಗೊಬ್ಬರ, ಆಧುನಿಕ ಔಷಧಿಗಳನ್ನು ದೂರವಿರಿಸುವ, ಆ ಮೂಲಕ ಸಾಲಗಳ, ಆತ್ಮಹತ್ಯೆಗಳ ಬಲೆಯಿಂದ ಹೊರಬರುವ ಅವಕಾಶವನ್ನು ನಮ್ಮ ರೈತರು ಪಡೆದುಕೊಳ್ಳುತ್ತಾರೆ.

 

 

‍ಲೇಖಕರು G

September 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: