ಜಿ ಪಿ ಕಾಲಂ : ಪಕ್ಷ ಸ೦ಘಟನೆ ಎ೦ದರೆ ಪ್ರವಾಸವೇ?

ಪ್ರವಾಸವೆಂಬ ಪ್ರಹಸನವೂ, ಪಕ್ಷ ಸಂಘಟನೆಯೂ

– ಜಿ ಪಿ ಬಸವರಾಜು

ರಾಜಕೀಯ ಪಕ್ಷವೊಂದನ್ನು ಕಟ್ಟುವುದು ಹೇಗೆ? ರಾಜಕೀಯವನ್ನು ಪ್ರವೇಶಿಸಬಯಸುವ ಕ್ರಿಯಾಶೀಲರು ಈ ಬಗ್ಗೆ ಚಿಂತಿಸಬಹುದು. ಆದರೆ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿ ತೊಡಗಿರುವವರು ಇಂಥ ಪ್ರಶ್ನೆಗೆ ಮುಖಾಮುಖಿಯಾಗುವುದಿಲ್ಲ. ತಮ್ಮ ಪಕ್ಷವನ್ನು ಬಲಪಡಿಸುವ, ಸಂಘಟಿಸುವ ಸುಲಭ ಹಾಗೂ ಸಿದ್ಧ ಮಾದರಿಗಳು ಅವರ ಬಳಿಯಲ್ಲಿ ಸದಾ ಇರುತ್ತವೆ. ಮಾಜಿ ಮುಖ್ಯಮಂತ್ರಿ, ಬಿಜೆಪಿಯ ನಾಯಕ ಯಡಿಯೂರಪ್ಪನವರು ತಮ್ಮ ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸವನ್ನು ಮಾಡುವುದಾಗಿ ಹೇಳಿದ್ದಾರೆ. ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರೂ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಕೇಳಿದರೆ ಅವರ ಪ್ರವಾಸವೂ ಸಿದ್ಧವಾಗಿರಬಹುದು. ಕನರ್ಾಟಕದಲ್ಲಿ, ಅಷ್ಟೇಕೆ ಇಡೀ ಭಾರತದಲ್ಲಿ ಪಕ್ಷ ಸಂಘಟನೆ ಎಂದರೆ ನಾಯಕರು ಮಾಡುವ ಕೆಲಸ ಎಂದರೆ ‘ಪ್ರವಾಸವೇ.’ ಜನ ಸಂಕಷ್ಟಕ್ಕೆ ಸಿಕ್ಕಿ ಕಂಗೆಟ್ಟಾಗ ರಾಜಕೀಯ ನಾಯಕರಿಗೆ ಜನರ ಬಳಿಗೆ ಹೋಗುವ ಜರೂರು ಕಾಣುವುದಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಭೀಕರ ಬರಗಾಲ ಇತ್ಯಾದಿ ಸಂಕಷ್ಟಗಳಿಂದ ಜನ ದಿಕ್ಕೆಟ್ಟಾಗಲೂ ನಮ್ಮ ರಾಜಕೀಯ ನಾಯಕರು ಜನರ ಬಳಿಗೆ ಹೋಗುವುದಿಲ್ಲ. ಪರಿವಾರದವರು ಅಟ್ಟಹಾಸದಿಂದ ಅಮಾಯಕ ಯುವಕ ಯುವತಿಯರ ಮೇಲೆ ಹಲ್ಲೆ ನಡೆಸಿ, ‘ಸಂಸ್ಕೃತಿಯ ಪಾಠ’ ಬೋಧಿಸಿದಾಗ ರಾಜಕೀಯ ನಾಯಕರು ಅಲ್ಲಿಗೆ ಹೋಗಲಾರರು. ಕನ್ನಡ ಶಾಲೆಗಳು ಮುಚ್ಚಿ ಕನ್ನಡ ಮಕ್ಕಳು ಶಾಲೆಗಳಿಂದ ದೂರವಾದಾಗ, ನಮ್ಮ ರಾಜಕೀಯ ನಾಯಕರು ಅಂಥ ಶಾಲೆಗಳ ಹತ್ತಿರವೂ ಸುಳಿಯುವುದಿಲ್ಲ. ಜನರ ಜೊತೆಯಲ್ಲಿದ್ದು ಅವರ ವಿಶ್ವಾಸವನ್ನು ಗಳಿಸುವ, ನಂಬಿಕೆಯನ್ನು ಉಳಿಸಿಕೊಳ್ಳುವ, ಆ ಮೂಲಕ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ, ಪಕ್ಷವನ್ನು ಕಟ್ಟುವ ಚಿಂತನೆಯೂ ಅವರಿಗೆ ಬರುವುದಿಲ್ಲ. ಅಪರೂಪಕ್ಕೆ ಜನರ ಬಳಿಗೆ ಹೋದರೂ, ಅದು ಮಾಧ್ಯಮದವರಿಗಾಗಿ; ಕ್ಯಾಮರಾಗಳಿಗಾಗಿ. ಪಕ್ಷ, ರಾಜಕೀಯ, ಎಲ್ಲ ದೊಂಬರಾಟಗಳನ್ನು ಮರೆತು, ಸರಳವಾಗಿ ನೊಂದ ಜನರ ಜೊತೆಯಲ್ಲಿದ್ದು, ಅವರ ನೋವಿನ ಬಿಸಿಯನ್ನು ತಾವೂ ಅನುಭವಿಸುವ ನಾಯರಂತೂ ಕಾಣುವುದೇ ಇಲ್ಲ. ತಾವು ನಂಬಿದ ತತ್ವಕ್ಕಾಗಿ ಆಗ್ರಹಿಸಿ ಪಾದಯಾತ್ರೆಯನ್ನು ಮಾಡಿದವರು, ಗಾಂಧೀ ಸಾಕ್ಷಿಪ್ರಜ್ಞೆಯ ಎದುರಲ್ಲಿ ಉಪವಾಸ ಮಾಡಿ ಆತ್ಮನಿರೀಕ್ಷೆ ಮಾಡಿಕೊಂಡವರು ಅಪರೂಪ. ಪಾದಯಾತ್ರೆಗಳು, ಉಪವಾಸಗಳು ಆಗಾಗ ನಡೆದರೂ ಅವು ಕೇವಲ ಸಾಂಕೇತಿಕ ರೂಪದಲ್ಲಿರುತ್ತವೆ. ಯಾವ ನಿಷ್ಠೆ, ನಂಬಿಕೆಗಳೂ ಇಲ್ಲದೆ ಅದನ್ನೊಂದು ಔಪಚಾರಿಕ ಕಾರ್ಯವಾಗಿ, ಪಕ್ಷದ ಹೈ ಕಮಾಂಡ್ ನಿದರ್ೇಶನದ ಪಾಲನೆಯಾಗಿ ಮಾಡುವವರೇ ಹೆಚ್ಚು. ರಾಜಕೀಯ ನಾಯಕರ ಪ್ರವಾಸ ಎಂದರೆ ಏನು? ವಾಯುವೇಗದ ಸುತ್ತಾಟಗಳು. ನಿಲ್ಲದ ಭಾಷಣಗಳು. ಈ ಭಾಷಣಗಳನ್ನು ಕೇಳುವವರೂ ಪಕ್ಷದ ಕಾರ್ಯಕರ್ತರೇ; ಅಥವಾ ಸಭೆಗಳಿಗೆ ತಂದ ಬಾಡಿಗೆಯ ಜನ. ಭಾಷಣಗಳನ್ನು ಕೇಳುವುದಕ್ಕಾಗಿ ಜನ ತಾವಾಗಿಯೇ ಉತ್ಸಾಹದಿಂದ ಬರುತ್ತಿದ್ದುದು ನನಗೆ ನೆನಪಿರುವಂತೆ ಒಂದೇ ಒಂದು ಸಂದರ್ಭದಲ್ಲಿ. ಅದು ತುತರ್ು ಪರಿಸ್ಥಿತಿಯ ನಂತರ ಇಂದಿರಾಗಾಂಧಿಯವರು ಚುನಾವಣೆಯನ್ನು ನಡೆಸಲು ಮುಂದಾದ ಸಂದರ್ಭದಲ್ಲಿ. ಆಗ ಭಾಷಣಗಳನ್ನು ಕೇಳುವುದೊಂದು ರೋಮಾಂಚನದ ಸಂಗತಿಯಾಗಿರುತ್ತಿತ್ತು. ಜನ ತಾವಾಗಿಯೇ ಬಂದು ಮೈದಾನಗಳನ್ನು ತುಂಬುತ್ತಿದ್ದರು. ಆಗ ಮಾತಿಗೆ ಶಕ್ತಿಯೂ ಇತ್ತು; ಅರ್ಥವೂ ಇತ್ತು. ಇವತ್ತು ಪ್ರವಾಸ ಮಾಡಲು ಹೊರಡುವ ನಾಯಕರ ಸ್ಥಿತಿಗತಿಗಳನ್ನಾದರೂ ನೋಡಿ. ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪವನ್ನು ಹೊತ್ತವರು ನಿರ್ಲಜ್ಜರಾಗಿ, ಜನರ ಅಂಜಿಕೆಯೇ ಇಲ್ಲದೆ ಪ್ರವಾಸ ಮಾಡುತ್ತಾರೆ. ಈ ಆರೋಪಗಳ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಈ ಜಡ್ಡುಗಟ್ಟಿದ ನಾಯಕರು ನಗುನಗುತ್ತಲೇ ಉತ್ತರಗಳನ್ನು ಕೊಡುತ್ತಾರೆಂಬುದನ್ನೂ ನಾವು ಊಹಿಸಬಹುದು. ಜಾಮೀನಿನ ಮೇಲೆ ಬಿಡುಗಡೆಯಾದರೆ, ಅದನ್ನೊಂದು ವಿಜಯೋತ್ಸವದಂತೆ ಆಚರಿಸುವ ನಾಯಕರಿಗೆ ಲಜ್ಜೆ ಎಂಬುದು ಇರಲು ಸಾಧ್ಯವೇ? ಅಮೆರಿಕದಂಥ ರಾಷ್ಟ್ರಗಳಲ್ಲಾದರೆ ಭ್ರಷ್ಟಾಚಾರದ ಆರೋಪ ಹೊತ್ತ ನಾಯಕರನ್ನು ಜನ ಪ್ರಶ್ನಿಸಿ ನೀರಿಳಿಸಬಹುದು. ಆದರೆ ನಮ್ಮಂಥ ದೇಶಗಳಲ್ಲಿ ಪ್ರಶ್ನಿಸುವ ಜನ ಎಲ್ಲಿದ್ದಾರೆ? ಮೌನವಾಗಿ ಎಲ್ಲವನ್ನೂ ನೋಡುತ್ತ, ಸಹಿಸುತ್ತ, ಚುನಾವಣೆಗಳಲ್ಲಿ ಮತಚಲಾಯಿಸುತ್ತ, ಅದೇ ಅದೇ ಕಳಂಕಿತರನ್ನು ಮತ್ತೆ ಮತ್ತೆ ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆಮಾಡುತ್ತ ಕಾಲ ಚಕ್ರವನ್ನು ಹಿಂದಕ್ಕೊ, ಮುಂದಕ್ಕೊ ಉರುಳಿಸುತ್ತಿರುವ ನಮ್ಮ ಮತದಾರರ ನಿಜ ಸ್ವರೂಪ ಏನು? ಪ್ರತಿಯೊಂದು ಪಕ್ಷವೂ ತನ್ನದೇ ಆದ ನೀತಿ, ಸಿದ್ಧಾಂತ, ಪ್ರಣಾಳಿಕೆಯನ್ನು ಇಟ್ಟುಕೊಂಡಿರುವುದು ನಿಜ. ಆದರೆ ಅದೆಲ್ಲ ಕಾಗದದ ಮೇಲೆ; ನಾಯಕರೆನ್ನಿಸಿಕೊಂಡವರ ಭಾಷಣಗಳಲ್ಲಿ. ನಿಜಕ್ಕೂ ಇವತ್ತು ಪಕ್ಷಗಳು ಸಂಘಟಿತವಾಗುತ್ತಿರುವುದು ಹಣದ ಬಲದಿಂದ; ಜಾತಿಯ ಬಲದಿಂದ. ಚುನಾವಣೆಯ ನಿರ್ವಹಣೆಗೆಂದು ಪ್ರತಿಯೊಂದು ಪಕ್ಷವೂ ಹಣ ಸಂಗ್ರಹಿಸುವುದು, ಅದು ಪಕ್ಷಗಳನ್ನು ಭ್ರಷ್ಟಾಚಾರದತ್ತ ತಳ್ಳುವುದು ನಮ್ಮಲ್ಲಿ ಸಾಮಾನ್ಯ ಸಂಗತಿಯಾಗಿದೆ. ಹಣವಿಲ್ಲದಿದ್ದರೆ ಚುನಾವಣೆಗಳನ್ನು ಎದುರಿಸುವುದು ಹೇಗೆ ಎಂದು ಬಹುಪಾಲು ಪಕ್ಷಗಳು, ನಾಯಕರು ಕೇಳುತ್ತಿದ್ದಾರೆ. ಜನಬಲದಿಂದ, ತತ್ವ ಸಿದ್ಧಾಂತಗಳ ನೆಲೆಯಿಂದ ಪಕ್ಷವನ್ನು ಕಟ್ಟುವುದು, ಚುನಾವಣೆಗಳನ್ನು ಗೆಲ್ಲುವುದು ಇವತ್ತು ಹಂಬಲವಾಗಿಯೇ ಉಳಿದಿದೆ. ಕಾಮರ್ಿಕರ, ರೈತರ, ಹಿಂದುಳಿದವರ ಮಧ್ಯೆ ಹುಟ್ಟಿ, ಬೆಳೆಯಬೇಕಾದ ಪಕ್ಷಗಳೂ ಇವತ್ತು ಹಣ ಮತ್ತು ಜಾತಿಬಲದಿಂದ ಪಕ್ಷ ಕಟ್ಟಲು ನೋಡುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ದುರಂತ. ಎಲ್ಲ ಪಕ್ಷಗಳೂ ಒಂದೇ ಆಗಿ ಕಾಣುವುದರಿಂದ ಹೊಂದಾಣಿಕೆ ಸುಲಭವಾಗಿದೆ. ಕಟ್ಟುವ ಕೆಲಸ ಸುಲಭದ್ದಲ್ಲ. ಕೇವಲ ಒಂದು ಪ್ರವಾಸದಿಂದ ಸಾಧ್ಯವಾಗುವಂಥದ್ದೂ ಅಲ್ಲ. ರಾಜ್ಯವನ್ನು ಒಂದು ಸುತ್ತು ಹಾಕಿ, ತಮ್ಮ ಮಾತಿನ ಮಾಂತ್ರಿಕ ಶಕ್ತಿಯಿಂದಲೇ ಜನರನ್ನು ಸೆಳೆದು ಪಕ್ಷವನ್ನು ಕಟ್ಟಬಲ್ಲ ಛಾತಿ ನಮ್ಮ ರಾಜಕೀಯ ನಾಯಕರಿಗಿದೆಯೇ? ಜನ ನಂಬುವುದು ಮಾತನ್ನಲ್ಲ; ಕೃತಿಯನ್ನು. ಜಾತ್ಯತೀತ ತತ್ವಕ್ಕೆ ಬದ್ಧವಾದದ್ದು ನಮ್ಮ ಸಂವಿಧಾನ. ಜಾತಿ ಪದ್ಧತಿ ನಿಧಾನಕ್ಕಾದರೂ ಹೋಗಬೇಕು. ಜಾತಿಗಳನ್ನು ಗೌಣವಾಗಿಸುವ, ಜಾತ್ಯತೀತ ಬದುಕನ್ನು ರೂಪಿಸುವ ಹೊಣೆ ಯಾರದು? ಕೋಮು ಸೌಹಾರ್ದ, ಧರ್ಮ ಸಾಮರಸ್ಯ, ಜಾತ್ಯತೀತ ತತ್ವ ಇತ್ಯಾದಿ ಮಾತುಗಳನ್ನು ಆಡುತ್ತಲೇ ಜಾತಿಯ ವಿಷವನ್ನು, ಧರ್ಮದ ಅಮಲನ್ನು ಸಾಮಾನ್ಯ ಪ್ರಜೆಗಳಲ್ಲಿ ತುಂಬುವ ಕೆಲಸವನ್ನು ಎಲ್ಲರೂ ಮಾಡುತ್ತಲೇ ಬಂದಿದ್ದಾರೆ. ನಮ್ಮ ರಾಜಕೀಯ ವ್ಯವಸ್ಥೆಯೇ ಜಾತಿಬಲದ ಮೇಲೆ ನಿಂತಿದೆ. ಅದರಿಂದ ಹೊರಬರುವ ಪ್ರಯತ್ನವನ್ನು ಯಾವ ಪಕ್ಷವೂ ಮಾಡುತ್ತಿಲ್ಲ. ಚುನಾವಣೆಗಳು ಎದುರಾದ ಕೂಡಲೇ ರಾಜಕೀಯ ಪಕ್ಷಗಳ ಜಾತಿ ಲೆಕ್ಕಾಚಾರ ಆರಂಭವಾಗುತ್ತದೆ. ಟಿಕೆಟ್ ಹಂಚಿಕೆ, ಅಭ್ಯಥರ್ಿಗಳ ಆಯ್ಕೆ, ಚುನಾವಣೆಯಲ್ಲಿ ಗೆಲುವು, ಸಕರ್ಾರ ರಚನೆ ಇತ್ಯಾದಿ ಎಲ್ಲವೂ ಜಾತಿ ಮತ್ತು ಹಣದ ಆಧಾರದ ಮೇಲೆಯೇ ನಡೆಯುತ್ತದೆ. ಅರ್ಹರು, ಪ್ರತಿಭಾವಂತರು, ಜಾತಿಬಲ ಇಲ್ಲದವರು, ಹಣ, ಪ್ರಭಾವ ಇಲ್ಲದವರು ಚುನಾವಣೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಆಗದ ಸ್ಥಿತಿಯನ್ನು ಇವತ್ತಿನ ರಾಜಕಾರಣ ನಿಮರ್ಾಣ ಮಾಡಿದೆ. ಇದೇ ಹಳಿಯ ಮೇಲೆ ಎಲ್ಲ ರಾಜಕೀಯ ಪಕ್ಷಗಳೂ ಓಡುತ್ತಿವೆ. ಇದರಿಂದ ಬಿಡುಗಡೆ ಇಲ್ಲವೇ? ಹೊಸ ವ್ಯವಸ್ಥೆಯೊಂದು ರೂಪಗೊಳ್ಳುವುದು, ನಮ್ಮ ಸಂವಿಧಾನದ ಆಶಯಗಳಿಗೆ ಅಲ್ಲಿ ಇಂಬು ಸಿಕ್ಕುವುದು ಯಾವಾಗ? ಈ ಕೆಲಸವನ್ನು ಮಾಡುವವರು ಯಾರು? ಹೊಸ ತಲೆಮಾರೆಂಬುದು ಪ್ರತಿಯೊಂದು ರಾಜಕೀಯ ಪಕ್ಷದಲ್ಲಿ ಇದ್ದರೂ, ಅದು ಕೂಡಾ ತತ್ವ ಸಿದ್ಧಾಂತಗಳ ನೆಲೆಯ ಮೇಲೆ, ಹೊಸ ಹೊಸ ಕನಸುಗಳ ಮೇಲೆ ನಿಂತಿಲ್ಲ ಎಂಬುದು ವಿಷಾದದ ಸಂಗತಿ. ಆದರೂ ಜನಶಕ್ತಿಯನ್ನು ಕಡೆಗಣಿಸಲಾಗದು. ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಪ್ರಾಮುಖ್ಯತೆಯನ್ನೂ ಹಗುರವಾಗಿ ನೋಡಲಾಗದು. ನಾವೆಲ್ಲ ಈಗಲಾದರೂ ಈ ಬಗ್ಗೆ ಚಿಂತಿಸಬೇಕು.  ]]>

‍ಲೇಖಕರು G

August 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

೧ ಪ್ರತಿಕ್ರಿಯೆ

  1. Shanthala Damle

    ಜಿ.ಪಿ.ಯವರೇ, ತುಂಬಾ ಗಹನವಾದ ಪ್ರಶ್ನೆಗಳನ್ನೇ ಎತ್ತಿದ್ದೀರಿ. ಮತದಾರರು ವರ್ಷವೆಲ್ಲಾ ಮನೆಯವರ ಜೊತೆ, ಸ್ನೇಹಿತರ ಜೊತೆ ಕೂತು, ರಾಜಕಾರಣಿಗಳನ್ನು ಬೈಯುತ್ತಾ, ಚುನಾವಣೆ ಬಂದಾಗ ಮತ್ತದೇ ಅಭ್ಯರ್ಥಿಗಳಿಗೆ ಮತ ಹಾಕುತ್ತಾರಲ್ಲವೇ? ಇದು ಹೇಗೆ? ’ಸ್ಟಾಕ್ ಹೋಮ್ ಸಿಂಡ್ರೋಮ್’ ನಿಂದಲೋ? ಅಥವಾ ’ಇದು ಸರಿಹೋಗುವಂತಹದಲ್ಲ’ ಎಂಬ ನಿರಾಶಾಭಾವದಿಂದಲೋ? ಅಥವಾ ಸಿನಿಕತನದಿಂದಲೋ? ಗೊತ್ತಿಲ್ಲ. ಆದರೂ ನಾವು ನಿರಾಶರಾಗುವ ಅವಶ್ಯಕತೆಯಿಲ್ಲ. ಹೊಸ ಪಕ್ಷಗಳಿಂದ ಮಾತ್ರ ಹೊಸ ದಾರಿ ಸಾಧ್ಯ. ಜಾತಿಯಿಂದಲ್ಲದೇ ನೀತಿಯ ಆಧಾರದ ಮೇಲೆ ಮತ ಕೇಳುವ, ಹಣದಿಂದಲ್ಲ, ಗುಣದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಿದ್ಧಾಂತಗಳಿಗಾಗಿಯೇ ನಿರ್ಮಿತವಾದಂತಹ ಪಕ್ಷಗಳು ಮಾತ್ರ ನಮ್ಮ ಜನರಲ್ಲಿ ಮತ್ತೆ ಭರವಸೆಗಳನ್ನು ಮೂಡಿಸಬಹುದು. ಅಂತಹ ಪಕ್ಷ ಕಟ್ಟಲು ಸಹೃದಯರೆಲ್ಲರೂ ಭಾಗವಹಿಸುವ ಅವಶ್ಯಕತೆಯಿದೆ. ಲೋಕಸತ್ತಾ ಪಕ್ಷ ನಿಮ್ಮಂತವರನ್ನು ಆಹ್ವಾನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: