ಜಿ ಪಿ ಕಾಲಂ : ಬೊಳುವಾರರ ’ಧರ್ಮ ಮತ್ತು ಸ್ವಾತ೦ತ್ರ್ಯ’

ಧರ್ಮ ಮತ್ತು ಸ್ವಾತಂತ್ರ್ಯ

-ಜಿ.ಪಿ.ಬಸವರಾಜು

ಎಲ್ಲ ಧರ್ಮಗಳೂ ಮನುಷ್ಯನ ಹಿತವನ್ನೇ ಬಯಸುತ್ತವೆ; ಅದಕ್ಕಾಗಿಯೇ ಅವು ಹುಟ್ಟಿಕೊಂಡಿರುವುದು ಎಂದು ಧರ್ಮಪಂಡಿತರು ಹೇಳುತ್ತಾರೆ. ಕಾಡುಪ್ರಾಣಿಯ ಸ್ಥಿತಿಯಲ್ಲಿದ್ದ ಮನುಷ್ಯನನ್ನು ಪಳಗಿಸುವುದು ಮತ್ತು ಅವನನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡುವುದು ಅನಿವಾರ್ಯವಾದ ಘಟ್ಟದಲ್ಲಿ ಧರ್ಮ ಅನೇಕ ಕಟ್ಟುಕಟ್ಟಳೆಗಳನ್ನು ರೂಪಿಸಿದ್ದು ಸಹಜವಾಗಿರಬಹುದು. ಆದರೆ ಈ ಕಟ್ಟುಪಾಡುಗಳು ಶಾಸನದಂತೆ ರೂಪಗೊಂಡು, ಅವು ಧರ್ಮಗ್ರಂಥಗಳಾಗಿ ಮಾರ್ಪಟ್ಟಕೂಡಲೇಪರಮಾಧಿಕಾರ ಈ ಗ್ರಂಥಗಳಿಗೆ ಸಿಕ್ಕದ್ದು ಅವುಗಳ ಸ್ವರೂಪವನ್ನು ಬದಲಾಯಿಸಿತು. ತಾನು ಹಾಕಿದ ಚೌಕಟ್ಟನ್ನು ಮೀರುವ, ಪ್ರಶ್ನಿಸುವ ವ್ಯಕ್ತಿಯನ್ನು ಅದು ಸಹಿಸದಾಯಿತು. ಸಮುದಾಯದ ಹಿತವನ್ನು ಕಾಯುವಂತೆ ತೋರುವ ಈ ಧರ್ಮಗ್ರಂಥಗಳು ವ್ಯಕ್ತಿಹಿತವನ್ನು ಕಾಯುವುದಿಲ್ಲ. ವ್ಯಕ್ತಿಸ್ವಾತಂತ್ರ್ಯವನ್ನು ಧರ್ಮಗ್ರಂಥಗಳು ಮಾನ್ಯ ಮಾಡಿದ ಉದಾಹರಣೆಗಳೇ ಇಲ್ಲ. ಹೀಗಾಗಿ ಧರ್ಮ ಮತ್ತು ಸ್ವಾತಂತ್ರ್ಯಗಳು ಒಟ್ಟೊಟ್ಟಿಗೆ ಹೋಗುವ ಸಂದರ್ಭತೀರ ಅಪರೂಪ. ಬೋಳುವಾರು ಮೊಹಮದ್ ಕುಞ್ಞ ಅವರ ಒಂದು ಸಾವಿರ ಪುಟವನ್ನು ಮೀರಿರುವ ಕಾದಂಬರಿ ‘ಸ್ವಾತಂತ್ರದ ಓಟ’ ಒಂದರ್ಥದಲ್ಲಿ ಧರ್ಮನಿಷ್ಠವಾದ ಕಾದಂಬರಿ. ಧರ್ಮನಿಷ್ಠ ಎಂದಕೂಡಲೇ ಅಲ್ಲಿ ಸ್ವಾತಂತ್ರವೂ ಇರುವುದಿಲ್ಲ; ಓಟವೂ ಇರುವುದಿಲ್ಲ. ಆದರೆ ಬೋಳುವಾರು ತಮ್ಮ ಈ ಕಾದಂಬರಿಯಲ್ಲಿ ಧರ್ಮನಿಷ್ಠತೆಯನ್ನು ಇಟ್ಟುಕೊಂಡೂ ಸ್ವಾತಂತ್ರ್ಯದ ಓಟವನ್ನು ಸಾಧಿಸಿರುವುದು ಅವರ ದೊಡ್ಡ ಸಾಧನೆಯಂತೆಯೇ ಕಾಣಿಸುತ್ತಿದೆ. ಇದು ಹೇಗೆ ಸಾಧ್ಯವಾಯಿತು? ಈ ಮುಖ್ಯವಾದ ಪ್ರಶ್ನೆ ಕಾದಂಬರಿಯ ಮೌಲ್ಯಮಾಪನವನ್ನೂ ಮಾಡುತ್ತದೆ. ಈ ಕಾದಂಬರಿಯಲ್ಲಿ ಮುಸ್ಲಿಯಾರರಿದ್ದಾರೆ. ಮೌಲ್ವಿಗಳಿದ್ದಾರೆ. ಅವುಲಿಯಾರಿದ್ದಾರೆ. ವಿಚಿತ್ರ ವರ್ತನೆಯಂತೆ ಕಾಣುವ ಆದರೆ ಜೀವನ ಸಿದ್ಧಾಂತವನ್ನು ಅತ್ಯಂತ ಸಮರ್ಥವಾದ ರೀತಿಯಲ್ಲಿ, ತಮ್ಮದೇ ಆದ ಗ್ರಹಿಕೆಯಿಂದ ರೂಪಿಸಿಕೊಂಡ ಬಾಬಾರಿದ್ದಾರೆ. ಕುರಾನಿನ ದಟ್ಟ ನೆರಳು ಕಾದಂಬರಿಯ ಉದ್ದಕ್ಕೂ ಚಾಚಿಮಲಗಿದೆ. ಹದೀಸುಗಳು, ಪ್ರಾರ್ಥನೆಗಳು, ನಮಾಜುಗಳು, ಮತಪ್ರಸಂಗಗಳು ಎಲ್ಲವೂ ಈ ಕಾದಂಬರಿಯಲ್ಲಿ ಸಮೃದ್ಧವಾಗಿಯೇ ಕಾಣಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಮುತ್ತುಪ್ಪಾಡಿಯ ಜನ ಕುರಾನಿನ ಗೆರೆಗಳನ್ನು ಮೀರುವವರಲ್ಲ. ಅವರ ಬದುಕಿನ ಮಾರ್ಗದಶರ್ಿ ಸೂತ್ರಗಳು ಇರುವುದೇ ಈ ಧರ್ಮಗ್ರಂಥ ಕುರಾನ್ನಲ್ಲಿ. ಮುತ್ತುಪ್ಪಾಡಿಯಲ್ಲಿ ಕುರಾನಿನಂತೆ ಗೀತೆಯೂ ಇದೆ. ಪುರಾಣಗಳೂ ಇವೆ. ‘ಮಾಲಿಂಗೇಶ್ವರ’ನೂ ಇದ್ದಾನೆ. ಇವೆಲ್ಲ ಸೇರಿದ ಧಾಮರ್ಿಕ ಚೈತನ್ಯವೇ ಮುತ್ತುಪ್ಪಾಡಿಯ ಜನತೆಯನ್ನು ಮುನ್ನಡೆಸುತ್ತದೆ. ಈ ಧಾಮರ್ಿಕ ಚೈತನ್ಯವಿಲ್ಲ ಎಂದರೆ ಮುತ್ತುಪ್ಪಾಡಿಯ ಬದುಕಿಗೆ ಅರ್ಥವೇ ಇಲ್ಲ; ಸ್ಪಷ್ಟ ಗುರಿಯೂ ಇಲ್ಲ. ಧರ್ಮವನ್ನು ಪ್ರಶ್ನಿಸುವವರು, ಅದನ್ನು ಮೀರುವವರು ಮುತ್ತುಪ್ಪಾಡಿಯಲ್ಲಿ ಇಲ್ಲವೆಂದಲ್ಲ; ಕೆಲವು ಹುಡುಗರು ಅಂಥವರಿದ್ದಾರೆ. ಕುರಾನು ‘ಹರಾಮು’ ಎಂದು ಹೇಳುವುದನ್ನು ಮಾಡಿ, ಕುರಾನನ್ನು ಉಲ್ಲಂಘಿಸಿ ತಮ್ಮ ಬದುಕಿನ ಲಯವನ್ನು ಕಳೆದುಕೊಂಡವರು ಮತ್ತೆ ಆ ಲಯವನ್ನು ಪಡೆಯುವುದು ಈ ಧಾಮರ್ಿಕ ಚೌಕಟ್ಟಿನಲ್ಲಿಯೇ. ಬೇಕಾದಾಗ ಬುಖರ್ಾವನ್ನು ಹಾಕಿ, ಬೇಡವಾದಾಗ ಮಡಚಿಟ್ಟು ಕೌಟುಂಬಿಕ ಸಮತೋಲವನ್ನು ಕಾಯ್ದುಕೊಳ್ಳುವ ಮಹಿಳೆಯರೂ ಇದ್ದಾರೆ. ಇವರು ಧರ್ಮವನ್ನು, ಕುರಾನನ್ನು ಗೌರವಿಸುವವರೇ. ಆದರೆ ಕುರಾನನ್ನು ಒಂದು ಅಗ್ನಿಪಥದಂತೆ ಭಾವಿಸಿ, ಅದನ್ನೊಂದು ಬೆಂಕಿಯ ಕುಂಡದಂತೆ ಪರಿಗಣಿಸಿ ಅದನ್ನು ದಾಟುವ ಕಠೋರವ್ರತಿಗಳು ಇಲ್ಲಿಲ್ಲ. ಕುರಾನ್ ಇರಲಿ, ಯಾವುದೇ ಧರ್ಮ ಸೂತ್ರವಿರಲಿ, ಅದನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಬದುಕಿನ ಸಂಪಕಷ್ಟುಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರೌಢ ನೋಟ ನಿಲುವುಗಳನ್ನು ಈ ಜನ ಗಳಿಸಿಕೊಂಡವರು. ಹೀಗಾಗಿಯೇ ಇಲ್ಲಿ ಧರ್ಮಗ್ರಂಥ ಎಂಬುದು ಕೊರಳಿಗೆ ಹಾಕಿಕೊಂಡ ಉರುಳು ಎಂದು ಭಾಸವಾಗುವುದಿಲ್ಲ. ಧರ್ಮನಿಷ್ಠ ಕಾದಂಬರಿಕಾರರು ಕನ್ನಡದಲ್ಲಿ ಇಲ್ಲವೆಂದಲ್ಲ. ಮುಖ್ಯ ಕಾದಂಬರಿಕಾರರೂ ಇದ್ದಾರೆ. ಆದರೆ ಬೋಳುವಾರು ಭಿನ್ನವಾಗುವುದು ತಮ್ಮ ಹುಡುಕಾಟದಲ್ಲಿ. ಧರ್ಮದ ಬಗ್ಗೆ, ಧರ್ಮ ಗ್ರಂಥಗಳ ಬಗ್ಗೆ ಪ್ರೀತಿಗೌರವಗಳನ್ನು ಉಳಿಸಕೊಂಡೂ ಸತ್ಯವನ್ನು ಹುಡುಕುವಾಗ ಲೇಖಕನೊಬ್ಬ ಕರ್ಮಠನಾಗದೆ ತೆರೆದ ಮನಸ್ಸಿನವನಾಗಿದ್ದರೆ ಇಡೀ ಸಮುದಾಯದ ಬದುಕಿಗೆ ಅದರಿಂದ ಇಷ್ಟೊಂದು ಪ್ರಯೋಜನವಾಗುತ್ತದೆ ಎಂಬುದನ್ನು ಈ ಕೃತಿ ತೋರಿಸಿಕೊಡುತ್ತದೆ. ಧರ್ಮಗ್ರಂಥಗಳ ಅಕ್ಷರಗಳ ಮಧ್ಯೆ, ಸಾಲುಗಳ ಮಧ್ಯೆ, ಅರ್ಥಗಳ ಮಧ್ಯೆ ತೊಳಲಾಡುತ್ತ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದ ಧರ್ಮಪಂಡಿತರ ಧರ್ಮಸಂಕಟವನ್ನೇ ಭೂತಗಾಜಿನಲ್ಲಿ ನೋಡುವ ಕಾದಂಬರಿಕಾರರು ತಲುಪುವುದು ಎಲ್ಲಿಗೆ? ಬೋಳುವಾರರ ಹುಡುಕಾಟ ಆ ದಿಕ್ಕಿನದಲ್ಲ. ಅವರಿಗೆ ಸದ್ಯದ ಸಮಸ್ಯೆ ಮುಖ್ಯ; ಅದರಲ್ಲಿ ಸಿಕ್ಕಿಬಿದ್ದ ಜೀವಗಳು ಮುಖ್ಯ. ಈ ಸಮಸ್ಯೆಗಳನ್ನು ಸುಲಭದಲ್ಲಿ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದು ಮುಖ್ಯ. ಈ ಕಾರಣಕ್ಕಾಗಿಯೇ ಇಲ್ಲಿನ ಮುಸ್ಲಿಯಾರರು ಕುರಾನಿಗೇ ಅಂಟಿಕೊಂಡು ಇದು ಹೀಗೆಯೇ ಆಗಬೇಕು ಎಂದು ಪಟ್ಟುಹಿಡಿಯುವವರಲ್ಲ. ಜಮಾನಿತಿನವರು ಸಮಸ್ಯೆಯ ಸೂಕ್ಷ್ಮವನ್ನು ಗಂಭೀರವಾಗಿ ಪರಿಗಣಿಸಿ ಸಿಟ್ಟಿನ ಭರದಲ್ಲಿ ನೀಡಿದ ತಲಾಖ್ ಸಿಂಧುವಾಗದಂತೆ ನೋಡಿಕೊಳ್ಳುತ್ತಾರೆ. ಈ ಕಾರಣ ಮುಖ್ಯವಾಗುವುದರಿಂದ ಮುಸ್ಸಿಯಾರರು ಕುರಾನ್ನಲ್ಲಿ ಏನಿದೆ ಎಂಬುದನ್ನು ಹೇಳಲಾಗದೆ ಮೌನವಾಗಿರಬಹುದು. ಬೇರೆಯ ಮಸೀದಿಯಿಂದ ಬಂದ ಪಂಡಿತರು ತಮ್ಮ ವಿಭಿನ್ನ ವ್ಯಾಖ್ಯೆಯಿಂದ ಕುರಾನಿನಲ್ಲಿ ಇರುವುದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿಲ್ಲ, ಒಡೆದು ಹೋಗಬಹುದಾದ ಸಂಸಾರಗಳನ್ನು ಕೂಡಿಸುವುದು ಹೇಗೆ ಎಂಬುದನ್ನು ವಿವರಿಸುವದಕ್ಕೇ ತಮ್ಮ ಪಾಂಡಿತ್ಯವನ್ನು ಬಳಸಬಹುದು. ಇಲ್ಲಿ ಮುಸ್ಲಿಯಾರರಾಗಲಿ, ಮೌಲವಿಗಳಾಗಲೀ ತಪ್ಪು ಮಾಡುತ್ತಿದ್ದಾರೆ ಎಂದು ಅನಿಸುವುದಿಲ್ಲ. ಇಂಥ ‘ತಪ್ಪುಗಳು’ ಒಂದು ಬದುಕನ್ನು ಕಟ್ಟಲು ನೆರವಾಗುತ್ತವೆ ಎಂಬುದು ತಿಳಿದಾಗ ಅಂಥ ತಪ್ಪುಗಳಾಗುವುದಿದ್ದರೆ ಆಗುತ್ತಿರಲಿಎಂಬ ಉದಾರವಾದೀ ಮನೋಭಾವ ತನಗೆ ತಾನೇ ಮೈದಳೆದುಬಿಡುತ್ತದೆ. ಬೋಳುವಾರರು ನಂಜನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುವ ಲೇಖಕರಲ್ಲ. ಅವರಲ್ಲಿ ಸಿಟ್ಟು ಇದೆಯಾದರೂ ಆ ಸಿಟ್ಟು ಉರಿದು ಬೂದಿಮಾಡುವ ಸಿಟ್ಟಲ್ಲ. ಅದರ ಹಿಂದೆ ಜೀವನಪ್ರೀತಿ ಇದೆ. ಸಮಾಜದ ಬಗೆಗಿನ ಕಳಕಳಿ ಇದೆ. ಬೋಳುವಾರು ವ್ಯಂಗ್ಯದ ಲೇಖಕರೂ ಅಲ್ಲ. ಚುಚ್ಚಿ ಚುಚ್ಚಿ ಸುಖಿಸುವ ಮನೋಭಾವವೂ ಅವರಲ್ಲಿ ಇಲ್ಲ. ಹೀಗಾಗಿ ಈ ಕಾದಂಬರಿಗೆ ಬೇರೆಯದೇ ಆದ ಆಯಾಮ ಪ್ರಪ್ತವಾಗಿಬಿಡುತ್ತದೆ. ಜಮಾತೆ ಇಸ್ಲಾಮ್, ಆರ್ಎಸ್ಎಸ್ಗಳನ್ನೂ ಸಹನೆಯಿಂದ ನೋಡಬಲ್ಲ. ಅದರೊಳಕ್ಕಿಳಿದು ಅವುಗಳ ಹಿಂದಿರುವ ಸಿದ್ಧಾಂತವನ್ನು, ಮನೋಭಾವವನ್ನು ಅರ್ಥಮಾಡಿಕೊಳ್ಳಲು ಯತ್ನಿಸುವ ಬೋಳುವಾರು ಈ ಕಾರಣದಿಂದಾಗಿಯೇ ಇಂಥ ಸಂಸ್ಥೆಗಳ ಒಳ-ಹೊರಗಿನ ಟೀಕಾಕಾರರಾಗಿ, ವಿಮರ್ಶಕರಾಗಿ ವಸ್ತುನಿಷ್ಠ ದೂರದಿಂದ ಬರೆಯಬಲ್ಲ ಸಾಮಥ್ರ್ಯವನ್ನು ಪಡೆಯುತ್ತಾರೆ. ಒಂದು ಸಾಹಿತ್ಯ ಕೃತಿ ಎಂದರೆ ಅದು ಸಕಾರಣ ವಿವಾದಗಳನ್ನು ಹುಟ್ಟುಹಾಕಬಹುದು. ಅಥವಾ ಮೌನವಾಗಿ ನೋಡುವ ಮೂಲಕ ವಿವಾದಗಳ ಬಗೆಗೆ ಆಸಕ್ತಿಯನ್ನು ತಳೆಯದೆ ತನ್ನ ಅರ್ಥವನ್ನು ಹೆಚ್ಚಿಸಿಕೊಳ್ಳಬಹುದು. ವಿವಾದವನ್ನು ಹುಟ್ಟಿಸದೆಯೇ ಒಂದು ಸಮಾಜದ ಆಳಕ್ಕೆ ಇಳಿಯುವ ಶಕ್ತಿಯನ್ನೂ ಇಂಥ ಕೃತಿ ಪಡೆದಿರಬಹುದು. ಬೋಳುವಾರರ ಈ ಕೃತಿ ಇಂಥ ಶಕ್ತ ಕೃತಿ. ಮನೆಯಲ್ಲಿ ಅಥವಾ ಮಸೀದಿಯಲ್ಲಿ ಇರಬೇಕಾದ ಪವಿತ್ರಗ್ರಂಥ ಕುರಾನನ್ನು ಕೈಯಲ್ಲಿ ಹಿಡಿದು ಏಕಾಏಕಿ ಬೀದಿಗೆ ಬಂದು ಜನರ ಮಧ್ಯದಲ್ಲಿ ನಿಂತುಬಿಡುವ ಬೋಳುವಾರರಿಗೆ ಜನರೇ ಮುಖ್ಯ. ಯಾವುದೇ ಒಂದು ಧರ್ಮದ ಜನರೇ ಆಗಬೇಕೆಂದಿಲ್ಲ. ಎಲ್ಲ ಧರ್ಮಗಳು, ಎಲ್ಲ ನಂಬಿಕೆಗಳು, ಎಲ್ಲ ಆಚರಣೆಗಳ ಮಧ್ಯದಲ್ಲಿ, ಮನುಷ್ಯಧರ್ಮದ ಮೂಲಸೆಲೆಯನ್ನು ಬತ್ತದಂತೆ ನೋಡಿಕೊಳ್ಳುವ ಎಲ್ಲ ಸಾಮಾನ್ಯರೂ ಈ ಕೃತಿಕಾರನ ಆಸಕ್ತಿಯ ಕೇಂದ್ರವೇ. ಹೀಗಾಗಿಯೇ ಈ ಕೃತಿ ಮನುಷ್ಯರ ನಡುವೆ ಏಳುವ ಸಮಸ್ಯೆಗಳನ್ನು, ಮನುಷ್ಯನ ಲೋಕ ವಿವೇಕ ಮತ್ತು ಲೋಕ ಪ್ರೀತಿಯ ಮೂಲಕವೇ ಪರಿಹರಿಸಲು ಪ್ರಯತ್ನಿಸುತ್ತದೆ. ಧರ್ಮಗ್ರಂಥವನ್ನು ಒಂದು ರೆಫರೆನ್ಸ ಪಾಯಿಂಟ್ ಮಾಡಿಕೊಂಡರೂ, ಅದಕ್ಕೇ ಕಟ್ಟುಬಿದ್ದು ಉಳಿದೆಲ್ಲ ಅಂಶಗಳನ್ನು ಗಾಳಿಗೆ ತೂರುವ ಕೆಲಸವನ್ನು ಈ ಕೃತಿ ಮಾಡುವುದಿಲ್ಲ. ಮುತ್ತುಪ್ಪಾಡಿ ಎಂಥ ಸುಂದರ ಊರು; ನಂಜಿಲ್ಲದ, ಧರ್ಮಕ್ಕೆ ಅಂಟಿಕೊಂಡೂ ಅಲ್ಲಿಯೇ ಉಳಿಯದೆ ಅದರಾಚೆಗೆ ಸರಿದು ಮತ್ತೊಂದು ಜೀವವನ್ನು ನೋಡಬಲ್ಲ ಈ ಮುತ್ತುಪ್ಪಾಡಿಯ ಜನ ಎಂಥ ಅದ್ಭುತ ವಿವೇಕಿಗಳು. ಈ ಮುತ್ತುಪ್ಪಾಡಿಯಲ್ಲಿ ಬೆಳೆದ ಲೇಖಕ ಜನವಿರೋಧಿಯಾಗಲು ಹೇಗೆ ಸಾಧ್ಯ?    ]]>

‍ಲೇಖಕರು G

August 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

೧ ಪ್ರತಿಕ್ರಿಯೆ

 1. v.n.laxminarayana

  ಪ್ರಿಯ ಬೋಳುವಾರ್
  ನನ್ನದೇ ಕಾರಣಗಳಿಂದಾಗಿ ತುಂಬಾ ನಿಧಾನವಾಗಿ,ಇಂದು ನಿಮ್ಮ ಕಾದಂಬರಿಯನ್ನು ಓದಿ ಮುಗಿಸಿದೆ. ನೀವು ಒಂದೊಂದು ಅಕ್ಷರವನ್ನೂ ಕೆತ್ತಿದಂತೆ ನಾನು ಒಂದೊಂದು ಅಕ್ಷರವನ್ನೂ ಕಾಗುಣಿತದ ಪಲ್ಲಟಗಳೊಂದಿಗೆ ಓದಿದ್ದೇನೆ. ಪ್ರಾರಂಭದ ಐನೂರು ಪುಟಗಳನ್ನು (ನನಗೆ ಗೊತ್ತಿಲ್ಲದ)ಹೊಸ ಪದಗಳ ಗುರುತು, ಮುದ್ರಣ ದೋಷ, ತೇಪೆ, ಪುನರುಕ್ತಿ, ಸೂಚ್ಯತೆಯ ಅವಗಣನೆ, ರಾಚನಿಕ ಶಿಥಿಲತೆ ಮುಂತಾದ ‘ದೋಷ’ ಗಳನ್ನು ಗೆರೆ ಎಳೆದು ಗುರುತಿಸುತ್ತಲೇ ನನ್ನ ಪೆನ್ನಿಗೆ ದಕ್ಕದ ಕಣ್ಣೀರನ್ನು ಹತ್ತಿಕ್ಕುತ್ತಲೇ ಓದಿದೆ. ಮುಂದಿನ ಪುಟಗಳು ನನ್ನ ಯತ್ನವನ್ನು ನಿರರ್ಥಕವೆನಿಸುವಂತೆ ಮಾಡಿದ್ದರಿಂದ ಕೈಬಿಟ್ಟು ಸುಮ್ಮನೆ ಓದಿಕೊಂಡು ಹೋದೆ.
  ತುಂಬಾ ಆಕಸ್ಮಿಕಗಳು ಕತೆಯ ಹೆಣಿಗೆಯಲ್ಲಿ ಇರುವುದು ನಿಜ. ಸ್ವಲ್ಪ ಎಡಿಟ್ ಮಾಡಿದರೆ ಬಹಳಷ್ಟು ತೇಪೆಗಳು ಇಲ್ಲವಾಗಬಹುದು. ಓದುಗನ ಸಂವೇದನೆಯ ಮೇಲೆ ಪೂರ್ಣ ನಂಬಿಕೆಯಿರಿಸಿದರೆ ‘ಸಕಾರಣ ವಿವರಣೆ’ಯೂ ನಿವಾರಣೆಯಾಗಬಹುದು. ಇಷ್ಟಾದರೂ ನಿಮ್ಮ ಪಾತ್ರಗಳ ತಿಳುವಳಿಕೆ, ಜ್ಞಾನ, ಜಾಣ್ಮೆ, ನಿಮ್ಮ ಪಾತ್ರಗಾರಿಕೆ, ಸಂಬಂಧಗಳ ಜೋಡಣೆ, ಘಟನೆಗಳ ಹೆಣಿಗೆಯ ಮುಂದೆ ಅವೆಲ್ಲಾ ನಗಣ್ಯವಾಗುತ್ತವೆ. ‘ನಿಮ್ಮ ದೇವರಿಗೆ ಹೆಂಡತಿ ಇದ್ದಿದ್ದರೆ … ‘ಧಾಟಿಯಲ್ಲಿ ಹೇಳುವುದಾದರೆ ವ್ಯಾಸ, ವಾಲ್ಮೀಕಿ ನಮ್ಮ ಮಧ್ಯೆ ಇದ್ದಿದ್ದರೆ ಅವರು ನಿಮ್ಮ ಹಾಗೆಯೇ ಇರುತ್ತಿದ್ದರೇನೋ ಅನ್ನಿಸುತ್ತದೆ. ನಿಮ್ಮ ಕಾದಂಬರಿಯನ್ನು ಅದರ ಎಲ್ಲ ಓರೆ-ಕೋರೆಗಳೊಂದಿಗೆ ಪೂರ್ಣವಾಗಿ ಅನುಭವಿಸಬೇಕಿದ್ದರೆ ತುಂಬಾ ವ್ಯಾಪಕವಾದ, ಆಳವಾದ ತಿಳುವಳಿಕೆ ಬೇಕಾಗುತ್ತದೆ. ಹಾಗೆಂದು ಅದಿಲ್ಲದ ಓದುಗರಿಗೆ ನಿಲುಕುವುದಿಲ್ಲ ಎಂದು ಹೇಳಲಾಗದು. ಅವರವರಿಗೆ ದಕ್ಕುವಷ್ಟು ಸಿಗಬಲ್ಲ ಪಾತಳಿಗಳು ನಿಮ್ಮ ಕಾದಂಬರಿಯಲ್ಲಿ ಇವೆ. ಒಟ್ಟಿಗೆ ತಾತ್ವಿಕ-ಜನಪ್ರಿಯ ಬರಹ ಇದು.
  ಈಚೆಗೆ ಲೇಖನವೊಂದರಲ್ಲಿ, ‘ಜೀವನನಿಷ್ಠರಾದ’ ಕಾರಂತರ ಬರವಣಿಗೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಡವರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಎಡರಾಜಕಾರಣಕ್ಕೆ ಸ್ಥಳಾವಕಾಶ ಸಿಗದ ‘ಆಯ್ದ ಮರೆವು’ ಅಥವಾ ‘ಬಲಪಕ್ಷಪಾತ’ವನ್ನು ಕಮ್ಯೂನಿಸಂ ಕುರಿತಾದ ಅವಜ್ಞೆಯ ಪ್ರಶ್ನೆಯ ಸಂದರ್ಭದಲ್ಲಿ ಗುರುತಿಸಲಾಗಿತ್ತು. ನಿಮ್ಮ ಕಾದಂಬರಿಯಲ್ಲಿ ಮಹಮದೀಯ ಮತ್ತು ಮನುವಾದಿ ಪಾತ್ರಗಳ ಜೊತೆ/ಎದುರುನಿಲ್ಲಬಹುದಾದ ಎಡಪಂಥೀಯ ಮನಸ್ಸುಗಳಿಗೆ ಜಾಗಸಿಕ್ಕಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಇದು ಎಡ-ಬಲಗಳ ‘ಕೋಟಾ’ ದ ಪ್ರಶ್ನೆಯಲ್ಲ. ಬೀಡಿ ಸುತ್ತುವ ಬಡವರ ಜೀವನವನ್ನು ಚಿತ್ರಿಸುವಾಗ ದಕ್ಷಿಣ ಕನ್ನಡದ ಜನಜೀವನದ ಈ ಆಯಾಮ ಹೇಗೆ ಹೊರಗುಳಿಯಿತು ಎಂಬ ಪ್ರಶ್ನೆ ಕಾಡುತ್ತದೆ. ಮತ-ಧರ್ಮ-ಮಾನವತೆಯ ಕೇಂದ್ರಬಿಂದುವಿನ ಜೀವನಭಾಗ ಇದೂ ಅಲ್ಲವೆ? ನಿಮ್ಮ ಆಲೋಚನಾಕ್ರಮದಲ್ಲಿ ಇದಕ್ಕೆ ಕಾರಣ ಸಿಗುತ್ತದೆಯೆ?
  ತೆಲುಗು ಭಾಷಿಕರು ಮಾತನಾಡುವಾಗ ಕನ್ನಡಕ್ಕೆ ಹೋಲಿಸಿದರೆ ತಲೆಕೆಳಗೆನ್ನಿಸುವ ವಾಕ್ಯ ರಚನೆಯನ್ನು ಬಳಸುವುದನ್ನು ಗಮನಿಸಿದ್ದೇನೆ. ಸಂಸ್ಕೃತದ ವಾಕ್ಯರಚನೆಗೆ ಮೊದಲು-ಕೊನೆಯೆಂಬುದಿಲ್ಲ. ‘ಸಾಬಿ’ ವಾಕ್ಯರಚನೆ ಯಾವಾಗಲೂ ಹೀಗಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ ನಿಮ್ಮ ನಿರೂಪಣೆ ಮಾತ್ರ ಮೊದಲಿಂದ ಕೊನೆಯ ಕಡೆ ಹರಿಯದೆ ಕೊನೆಯಿಂದ ಮೊದಲಿಗೆ,ಮುಂದಿನಿಂದ ಹಿಂದಕ್ಕೆ ಅಥವಾ ಎಲ್ಲಿಂದ ಎಲ್ಲಿಗೆ ಬೇಕಾದರೂ ಹರಿಯುತ್ತದೆ. ತೊಂದರೆಯೇನಿಲ್ಲ. ನಾನು ನಿರೂಪಣಾ ತಂತ್ರಗಳ ಬಗ್ಗೆ ಹೇಳುತ್ತಿಲ್ಲ. ಜಯಂತಕಾಯ್ಕಿಣಿಯ ಕತೆಗಳಲ್ಲಿ ಹಿಂದಿ ಸಿನಿಮಾ ಕತೆಯಂತೆ ಎಲ್ಲಿ ಯಾವಾಗ ಏನು ಬೇಕೋ ಅದು ಸಿದ್ಧವಾಗಿ ಸಿಕ್ಕಿಬಿಡುತ್ತದೆ. ‘ಹಾಂ ಹೇಳಲು ಮರೆತಿದ್ದೆ’ ಎಂದು ಜೋಡಿಸಿಕೊಳ್ಳುವ ವಿವರಗಳು ಓದುಗನಿಂದ ರಿಯಾಯತಿಯನ್ನು ಬೇಡುತ್ತವೆ. ಇಲ್ಲವೇ ಯಾಮಾರಿಸಲು ನೋಡುತ್ತವೆ. ನಿಮ್ಮ ಬರವಣಿಗೆಗೆ ಈ ಗುಣ/ದೋಷವೂ ಇದೆ.
  ಕನ್ನಡದಲ್ಲಿ ಸ್ವಮೋಹವನ್ನು ಸಮುದಾಯದ ಪ್ರೀತಿಯಾಗಿ ವಿಸ್ತರಿಸಿಕೊಂಡು ಬರೆದ ಲೇಖಕರು ಬಹಳ ವಿರಳ. ಇಷ್ಟು ದೊಡ್ಡ ಭಿತ್ತಿಯನ್ನು ನಿರ್ಮಿಸಿಕೊಂಡು ಪ್ರಾರಂಭ-ಮಧ್ಯೆ-ಕೊನೆಗಳನ್ನು ನಿಮ್ಮದೇ ಆದ ವಿನ್ಯಾಸದಲ್ಲಿ ನಿಭಾಯಿಸಿರುವ ನಿಮ್ಮ ಕಥನ ಸಾಮರ್ಥ್ಯದ ಬಗ್ಗೆ ಹೆಮ್ಮೆಯಾಗುತ್ತದೆ. ಹಣಕ್ಕಾಗಿ ಬರೆದದ್ದಲ್ಲ ಎಂಬ ನಿಮ್ಮ ಮಾತಿನಲ್ಲಿ ಅಪ್ರಾಮಾಣಿಕತೆ ಕಾಣಿಸುವುದಿಲ್ಲ. ಇಂಥ ಇನ್ನಷ್ಟು ಕಾದಂಬರಿಗಳನ್ನು ಕೊಡಿ ಎಂದು ಕೇಳಲಾರೆ. ಈ ಕಾದಂಬರಿಯನ್ನು ಕೊಟ್ಟ ನಿಮ್ಮ ಬಗ್ಗೆ ಪ್ರೀತಿ-ಮೆಚ್ಚುಗೆಗಳಿವೆ.
  ವಂದನೆಗಳೊಂದಿಗೆ
  ವಿ.ಎನ್.ಲಕ್ಷ್ಮೀನಾರಾಯಣ
  ಮೈಸೂರು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: