ಜಿ ಪಿ ಕಾಲಂ : ಮಹಾಸ೦ತನ೦ತಹ ಗುಲ್ಬರ್ಗ

ಮಹಾ ಸಂತನ ಗುಲ್ಬರ್ಗಾ -ಜಿ.ಪಿ.ಬಸವರಾಜು ಗುಲ್ಬರ್ಗಾ ಎಂದಕೂಡಲೇ ಅನೇಕರಿಗೆ ನೆನಪಾಗುವುದು ಅಲ್ಲಿನ ಸುಡುವ ಬಿಸಿಲು; ಉರಿಯುವ ಧಗೆ; ಯಾವುದಕ್ಕೂ ಬಗ್ಗದೆ ಜಾಲಿ ಕೊರಡಿನಂತೆ ಬದುಕುವ ಜನ. ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಜನರಿಗಂತೂ ಗುಲ್ಬರ್ಗಾ ಅಂಡಮಾನ್ ನಿಕೋಬಾರ್ಗಳಂತೆಯೇ ಕಾಣಿಸುತ್ತದೆ. ಗಲ್ಬರ್ಗಾಕ್ಕೆ ನೌಕರರನ್ನು ವರ್ಗಮಾಡುವುದೆಂದರೆ ಅದನ್ನೊಂದು ಕರಿನೀರಿನ ಶಿಕ್ಷೆಯೆಂದೇ ಭಾವಿಸುವ ಪರಿಸ್ಥಿತಿ ಇನ್ನೂ ಜೀವಂತವಾಗಿದೆ. ದಕ್ಷಿಣ ಪ್ರಸ್ತಭೂಮಿಯಲ್ಲಿರುವ ಗುಲ್ಬರ್ಗಾ ಜಿಲ್ಲೆ ಎಂಥ ಅದ್ಭುತ ನೆಲವೆಂದರೆ ನೀವು ಇಲ್ಲಿ ಎಲ್ಲಿಯೇ ಕಾಲಿಟ್ಟರೂ ಅಲ್ಲೊಂದು ಸ್ಮಾರಕವಿರುತ್ತದೆ; ಕೋಟೆ ಅಥವಾ ದರ್ಗಾ, ಮಸೀದಿ, ಮಠ, ಮಂದಿರ, ಜೈನ ಬಸದಿ, ಬುದ್ಧ ವಿಹಾರ ಯಾವುದಾದರೂ ಇರುತ್ತದೆ. ಇತಿಹಾಸದ ಅವಶೇಷಗಳಿಂದ ದೂರ ಓಡಬೇಕೆಂದರೂ ವರ್ತಮಾನದ ಜನ ಸಿಕ್ಕುತ್ತಾರೆ. ಅವರ ಉಡುಗೆ ತೊಡುಗೆ, ಭಾಷೆ ಬಣ್ಣ, ಆಹಾರ, ನಡೆ ನುಡಿ, ಅಪ್ಪಟ ಮಾನವೀಯ ಗುಣ ನಿಮ್ಮನ್ನು ಸೆಳೆದುಬಿಡುತ್ತವೆ. ಜನರನ್ನೂ ಬದಿಗೆ ಸರಿಸಿ ಹೊರಟರೆ, ಭೀಮಾ ಮತ್ತು ಕೃಷ್ಣಾ ನದಿಗಳು ಸಿಕ್ಕುತ್ತವೆ. ಸಮೃದ್ಧ ಹಸಿರು ಎದುರಾಗುತ್ತದೆ. ಇದು ಜಗತ್ತಿಗೆ ದಖ್ಖನಿ ಉರ್ದುವನ್ನು ಕೊಟ್ಟ ನೆಲ. ಅತ್ಯಂತ ಪ್ರಾಚೀನವಾದ ದ್ರಾವಿಡ ನಾಗರಿಕತೆಯ ತಾಣವೂ ಹೌದು. ಖಾಜಾ ಬಂದೇ ನವಾಜರಂಥ ಜನರ ಹೃದಯಗಳನ್ನು ಬೆಸೆದ ಸೂಫಿಸಂತರು, ತತ್ವಪದಕಾರರು, ಈ ನೆಲವನ್ನು ಆಳಿದ ನಿಜಾಮರು, ಚಾಲುಕ್ಯರು, ರಾಷ್ಟ್ರಕೂಟರು, ಶಾತವಾಹನ ಮೊದಲಾದವರು, ಪರ್ಷಿಯನ್ ಅರೇಬಿಕ್ ಸಂಸ್ಕೃತಿಯನ್ನು ಇಲ್ಲಿಗೆ ತಂದ ಕಲಾವಿದರು, ಸಂಗೀತಗಾರರು, ವಿರಕ್ತರು ಹೀಗೆ ವೈವಿಧ್ಯಮಯ ವ್ಯಕ್ತಿಗಳ ಐತಿಹಾಸಿಕ ಜಾಗವೂ ಇದೇ. ಬಂದೇ ನವಾಜ್ ದರ್ಗಾಕ್ಕೆ ಹೊರಟಿದ್ದೆವು. ಅದು ಗೋಧೂಳಿಯ ಹೊತ್ತು. ಇಕ್ಕಟ್ಟಾದ ಗಲ್ಲಿಗಳು, ಕಿಕ್ಕಿರಿದ ವಾಹನಗಳು, ದಟ್ಟ ಜನಸಂದಣಿ, ಸಂಜೆಯ ಧೂಳು: ಬಂದೇನವಾಜ್ ದರ್ಗಾದ ದಾರಿಯೆಂದರೆ ಹೀಗೆಯೇ. ಜನಗಳ ನಡುವೆಯೇ ಸಾಗಿ ಹೋಗಬೇಕು. ನಿತ್ಯದ ನೂರಾರು ವ್ಯವಹಾರಗಳನ್ನು ಹಾದೇ ಹೋಗಬೇಕು. ಬದುಕಿನ ಕಷ್ಟ ಸುಖಗಳನ್ನು ದಾಟಬೇಕು. ಹಾಗೆ ಹೋದರೆ ಮಾತ್ರ ನಮಗೆ ಈ ಸಂತ, ಇವನ ಸೂಪಿಸಿದ್ಧಾಂತ ಸಿಕ್ಕುತ್ತದೆ. ಇಲ್ಲವಾದರೆ ದಾರಿ ತಪ್ಪುತ್ತದೆ. ನೂರಾ ಎರಡು ಸಂವತ್ಸರಗಳನ್ನು (ಜುಲೈ13, 1321-ನವೆಂಬರ್1, 1422) ಕಂಡ ಈ ಸೂಫಿ ಸಂತ ಬದುಕಿದ್ದೂ ಜನರ ನಡುವೆಯೇ; ಜನರಿಗಾಗಿಯೇ. ಈತನ ತತ್ವ, ಅನುಭಾವ, ಧರ್ಮ ಎಲ್ಲವೂ ಸ್ಪಂದಿಸಿದ್ದು ಜನಕ್ಕಾಗಿ ಮತ್ತು ಅವರ ಸುಖ ಸಂತೋಷಕ್ಕಾಗಿ. ಎತ್ತರವಾದ, ವಿಸ್ತಾರವಾದ ಈ ದರ್ಗಾದಲ್ಲಿ ನೂರಾರು ಜನ ನಿತ್ಯ ನೆರೆಯುತ್ತಾರೆ. ಹಣತೆ, ಗಂಧದಕಡ್ಡಿ ಹಚ್ಚುತ್ತಾರೆ. ಬಂದೇ ನವಾಜನ, ಆತನ ಇಬ್ಬರು ಮಕ್ಕಳ, ಪತ್ನಿಯ ಸಮಾಧಿಯ ಮುಂದೆ ನಿಂತು ಧ್ಯಾನಿಸುತ್ತಾರೆ. ಹಾಸುಗಲ್ಲುಗಳ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಾರೆ. ಬೀಸಿ ಬರುವ ತಂಗಾಳಿಗೆ ಅಲ್ಲಿಯೇ ಮಲಗಿ ರಾತ್ರಿಕಳೆಯುತ್ತಾರೆ. ಖವ್ವಾಲಿ ಹಾಡುತ್ತಾರೆ. ಮನಸ್ಸಿನ ಶಾಂತಿಯನ್ನು ಹುಡುಕುತ್ತಾರೆ. ವಾಸಿಯಾಗದ ಖಾಯಿಲೆಗಳು ಗುಣವಾಗುತ್ತವೆಂದು ನಂಬುತ್ತಾರೆ. ಯಾರಿಗೂ ಮತಧರ್ಮಗಳು ಅಡ್ಡಿಯಾಗುವುದಿಲ್ಲ. ಬಂದೇ ನವಾಜ್ ಗುಲ್ಬರ್ಗಾಕ್ಕೆ ಬಂದಾಗ ಆತನಿಗೆ 76 ವರ್ಷ. ಆ ಹೊತ್ತಿಗೆ ದಿಲ್ಲಿ, ಮೇವತ್, ಗ್ವಾಲಿಯರ್, ಬರೋಡ ಇತ್ಯಾದಿ ಊರುಗಳನ್ನಲ್ಲದೆ ಆಫ್ಘಾನಿಸ್ತಾನ್, ಬಲೂಚಿಸ್ತಾನಗಳಲ್ಲೂ ಸುತ್ತಾಡಿ ತನ್ನ ಸೂಫಿ ಧರ್ಮವನ್ನು ಜನರಿಗೆ ಬೋಧಿಸಿದ್ದ. ತನ್ನ ನಂಬಿಕೆ, ಸಿದ್ಧಾಂತಗಳ ಬಗ್ಗೆ ಜನರಲ್ಲಿ ಒಲವು ಮೂಡಿಸಿದ್ದ. ಆಫ್ಘಾನಿಸ್ತಾನದಲ್ಲಿ ಪಠಾಣ್ ಮಹಿಳೆಯನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದ್ದ ಈ ಸೂಫಿ ಗುಲ್ಬರ್ಗಾಕ್ಕೆ ಬರುವ ಹೊತ್ತಿಗೆ ಒಂದರ್ಥದಲ್ಲಿ ಬದುಕಿನ ಸಂಭ್ರಮದ ಕಾಲವನ್ನು ಮುಗಿಸಿದ್ದ.

ಆಗ ಗುಲ್ಬರ್ಗಾದಲ್ಲಿ ಬಹಮನಿ ಸುಲ್ತಾನ ಫಿರೋಜ್ ಷಾನ ಆಡಳಿತ ನಡೆಯುತ್ತಿತ್ತು. ಫಿರೋಜ್ಷಾ ಈ ಸೂಫಿಸಂತನ ಹೆಸರನ್ನು ಕೇಳಿ, ಮೆಚ್ಚಿಕೊಂಡಿದ್ದ. ಮನುಷ್ಯರ ನಡುವೆ ಪರಸ್ಪರ ತಿಳುವಳಿಕೆ, ತಾಳ್ಮೆ ಮತ್ತು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಸಾಮರಸ್ಯ ಬೆಳಸುವಂತಿದ್ದ ಈ ಸೂಫಿಯ ಚಿಂತನೆ ತನ್ನ ಜನರಿಗೆ ಸುಖ ಶಾಂತಿ ನೆಮ್ಮದಿ ತರಬಹುದೆಂದು ಆಶಿಸಿದ್ದ. ಷಾನ ಆಹ್ವಾನದ ಮೇರೆಗೆ ಗುಲ್ಬರ್ಗಾಕ್ಕೆ ಬಂದು (1397ರಲ್ಲಿ) ಇಲ್ಲಿಯೇ ನೆಲಸಿದ ಈ ಬರಿಗೈ ಸಂತ ಬಹಮನಿ ಸುಲ್ತಾನರ ರಾಜಗುರುವಾದ. ರಾಜಕೀಯ ಮತ್ತು ಆಧ್ಯಾತ್ಮಿಕ ಸಲಹೆಗಾರನಾಗಿ ಪ್ರಮುಖ ಸ್ಥಾನವನ್ನು ಪಡೆದುಕೊಂಡ. ಇದಕ್ಕಿಂತ ಹೆಚ್ಚಾಗಿ ಈ ಸಂತ ಎಲ್ಲ ಸಮುದಾಯಗಳ ಪ್ರೀತಿ ಗೌರವಗಳನ್ನು ಗಳಿಸಿದ; ಮುಸ್ಲಿಂ ಸಮುದಾಯವಲ್ಲದೆ ಅನ್ಯ ಮತೀಯ ಅನುಯಾಯಿಗಳನ್ನೂ ಪಡೆದುಕೊಂಡ. ಮನುಷ್ಯರನ್ನು ಒಡೆದು ತನ್ನ ಧರ್ಮ, ಸಿದ್ಧಾಂತಗಳನ್ನು ಬೆಳಸದೆ, ಎಲ್ಲರನ್ನೂ ಒಂದುಗೂಡಿಸಿ, ಆನುಭಾವಿಕ ನೆಲೆಯನ್ನು ಮುಟ್ಟಿಸಲು ಯತ್ನಿಸಿದ. ಇದರಿಂದಾಗಿಯೇ ಈ ಸಂತ ಶತಶತಮಾನಗಳನ್ನೂ ದಾಟಿ ಮನುಷ್ಯರ ಅಂತರಂಗದಲ್ಲಿ ಉಳಿಯಬಲ್ಲವನಾದ. ಹದಿನಾಲ್ಕನೇ ಶತಮಾನದ ಗುಲ್ಬರ್ಗಾ ನೆಲದಲ್ಲಿ ಬಿತ್ತಿದ ಪರಮತ ಸಹಿಷ್ಣತೆಯ ಈ ಬೋಧೆ ಮುಂದೆ ದೊಡ್ಡ ಪರಂಪರೆಯಾಗಿ ಬೆಳೆಯಿತು. ಹಲವಾರು ಜನ ಸೂಫಿಗಳು, ತತ್ವಪದಕಾರರು, ಲಾವಣಿಕಾರರು, ಮೊಹರಂಪದಕಾರರು ಈ ಮಣ್ಣಿನಲ್ಲಿ ಸಾಲುಸಾಲಾಗಿ ಬಂದರು. ರಾಮಪುರ ಬಕ್ಕಪ್ಪ (17ನೇ ಶತಮಾನ), ಕಡಕೋಳ ಮಡಿವಾಳಪ್ಪ (1761-1855), ಚನ್ನೂರ ಜಲಾಲಸಾಹೇಬ (1770-1850), ದೇವಾಂಗ ಹಜರತ ಸಾಹೇಬ (1897-1987), ಮೋಟನಳ್ಳಿ ಹಸನ ಸಾಹೇಬ (1819-1914), ಸಾವಳಗಿ ಮಹಮ್ಮದ್ ಸಾಹೇಬ (1917-1987), ಬೇನೂರ ಕಾಕಿಪೀರ (1820-1878)-ಎಷ್ಟೊಂದು ತತ್ವಪದಕಾರರು! ಇದು ಕಾರಣವಾಗಿ ಗುಲ್ಬರ್ಗಾ, ಪಕ್ಕದ ಬಿಜಾಪುರ, ಬೀದರ ಜಿಲ್ಲೆಗಳು ಸೇರಿದಂತೆ ಈ ಭಾಗದಲ್ಲಿ ಹಬ್ಬಗಳು, ಧಾರ್ಮಿಕ ಆಚರಣೆಗಳು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ; ಎಲ್ಲ ಜನ ಸಮುದಾಯಕ್ಕೆ ವಿಸ್ತರಿಸಿಕೊಂಡಿವೆ; ಕೂಡಿಬಾಳಲು ಕಲಿಸಿವೆ. ಈ ಭಾಗದಲ್ಲಿ ಮುಸ್ಲಿಮರೂ ಲಕ್ಷ್ಮೀಪೂಜೆ ಮಾಡುತ್ತಾರೆ; ಗಣಪತಿಯನ್ನು ಕೂಡಿಸುತ್ತಾರೆ. ಹಿಂದೂ ಮೂರ್ತಿಗಳನ್ನು ಮಾಡುವವರೂ ಮುಸ್ಲಿಮರೇ. ಮುಸ್ಲಿಮರ ಮೊಹರಂನಲ್ಲಿ ಹಿಂದೂಗಳು ಭಾಗವಹಿಸುತ್ತಾರೆ. ಬಂದೇ ನವಾಜನ ಉರಸನ್ನು ಎಲ್ಲರೂ ಹಬ್ಬದಂತೆಯೇ ಆಚರಿಸುತ್ತಾರೆ. ಇಲ್ಲಿನ ಹಿಂದೂ ದೇವಾಲಯಗಳಿಗೆ, ಮಠಗಳಿಗೆ ಗಂಧ ಬರುವುದು ದರ್ಗಾಗಳಿಂದ. ದರ್ಗಾಗಳಿಗೆ ನೈವೇದ್ಯ ಹೋಗುವುದು ಹಿಂದೂ ದೇವಾಲಯಗಳಿಂದ. ಮಠವಾಗಲಿ, ದೇವಾಲಯವಾಗಲಿ, ದರ್ಗಾ-ಮಸೀದಿಗಳಾಗಲಿ ಇಲ್ಲಿ ಎಲ್ಲ ಧರ್ಮದವರ ಭಕ್ತಿಯ ಕೇಂದ್ರಗಳಾಗಿವೆ. ಬಂದೇನವಾಜ್ ದರ್ಗಾದ ಸುತ್ತಮುತ್ತಲ ಈ ಗಲ್ಲಿಗಳಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದರೂ, ಅನ್ಯಧರ್ಮೀಯರಿಗೂ ಇಲ್ಲಿ ನೆಲೆ ಇದೆ. ಅನೇಕ ಹಿಂದೂ ಕುಟುಂಬಗಳು ಈ ಗಲ್ಲಿಗಳಲ್ಲಿಯೇ ಇವೆ. ಹಿಂದೂ-ಮುಸ್ಲಿಂ ಎಂಬ ಭಾವನೆಗೆ ಬದಲು ನೆರೆಹೊರೆಯವರು ಎಂಬ ಭಾವವೇ ಇಲ್ಲಿ ಪ್ರಧಾನ. ಉರ್ದು-ಕನ್ನಡಗಳಲ್ಲಿಯೂ ಭೇದವಿಲ್ಲ. ಎಲ್ಲರಿಗೂ ಈ ಎರಡೂ ಭಾಷೆಗಳು ಆಡಲು ಬರುತ್ತವೆ. ಮರಾಠಿ ಭಾಷೆಯೂ ಬರುತ್ತದೆ. ಶಾಲೆಗಳಲ್ಲಿ ಇಂಗ್ಲಿಷ್, ಹಿಂದಿ ಭಾಷೆಗಳನ್ನೂ ಕಲಿಯುತ್ತಾರೆ. ಇಲ್ಲಿ ಅನೇಕ ಭಾಷೆಗಳು ಸಹಬಾಳ್ವೆ ನಡೆಸುತ್ತಿವೆ. ರಾಷ್ಟ್ರಾದ್ಯಂತ ಹಿಂದೂ ಮುಸ್ಲಿಂ ನಡುವಣ ಕೋಮು ಸಾಮರಸ್ಯ ಕದಡಿದ ದಿನಗಳಲ್ಲಿಯೂ (ಬಾಬ್ರಿಮಸೀದಿ ಧ್ವಂಸವಾದ ದಿನಗಳಲ್ಲಿ)ಇಲ್ಲಿ ಧರ್ಮಕಾರಣದಿಂದ ಜನ ಬಡಿದಾಡಲಿಲ್ಲ. ಮನೆಗಳಿಗೆ ಬೆಂಕಿಯನ್ನು ಹಚ್ಚಿಕೊಳ್ಳಲಿಲ್ಲ. ಹಿಂದೂಗಳ ಬಾಹುಗಳಲ್ಲಿ ಮುಸ್ಲಿಮರು, ಮುಸ್ಲಿಮರ ಬಾಹುಗಳಲ್ಲಿ ಹಿಂದೂಗಳು ಬೆಚ್ಚಗೆ ಬದುಕಿ ಗುಲ್ಬರ್ಗಾದ ವೈಶಿಷ್ಟ್ಯವನ್ನು, ಪರಂಪರೆಯನ್ನು ಕಾಯ್ದುಕೊಂಡರು. ಇಲ್ಲಿನ ಹೆಸರುಗಳಲ್ಲಿಯೂ ಹಿಂದೂ ಮುಸ್ಲಿಂ ಎಂಬ ಭೇದಗಳನ್ನು ಗುರುತಿಸಲು ಸಾಧ್ಯವಿಲ್ಲ. ಮಸ್ತಾನಪ್ಪ, ಹುಸೇನಪ್ಪ, ಲಾಲಪ್ಪ, ಲಾಲ್ಸಾಬ್, ಹುಸೇನಮ್ಮ, ಪೀರಪ್ಪ ದಾವಲಪ್ಪ, ಪೀರಪ್ಪ ಹೀಗೆ ಹೆಸರುಗಳಿವೆ. ಜಾತಿ, ಧರ್ಮ, ಭಾಷೆಗಳ ಹೆಸರಿನಲ್ಲಿ ದೇಶವನ್ನು, ಜನ ಸಮುದಾಯವನ್ನು ಒಡೆಯಲು ಹವಣಿಸುತ್ತಿರುವ ಶಕ್ತಿಗಳೇ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಗುಲ್ಬರ್ಗಾ ವಿಶೇಷವಾಗಿ ಕಾಣಿಸುತ್ತಿದೆ. ಬಂದೇ ನವಾಜ್ ಮಹಾ ಸಂತನಂತೆ, ದೊಡ್ಡ ಪರಂಪರೆಯಾಗಿ ಕಾಣಿಸುತ್ತಾನೆ.  ]]>

‍ಲೇಖಕರು G

August 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ ಅವರ ‘ಅಕ್ಷರ ಹೊಸಕಾವ್ಯ’ ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

ಲಂಕೇಶ್ ಅವರ 'ಅಕ್ಷರ ಹೊಸಕಾವ್ಯ' ದೊಡ್ಡ ವಿವಾದವನ್ನೇ ಏಳಿಸಿದ ಕಾವ್ಯ ಸಂಚಯ

ಜಿ.ಪಿ.ಬಸವರಾಜು 1970ರ ದಶಕದ ಆರಂಭದಲ್ಲಿ ಕತೆಗಾರ ಪಿ.ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಕನ್ನಡದಲ್ಲಿ ದೊಡ್ಡ ವಿವಾದವನ್ನೇ ಏಳಿಸಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This