ಜಿ ಪಿ ಕಾಲ೦ : ಕತೆಯೆಂಬ ಕಾಮನಬಿಲ್ಲು

ಕತೆಯೆಂಬ ಕಾಮನಬಿಲ್ಲು

-ಜಿ.ಪಿ.ಬಸವರಾಜು

ಕೃಪೆ : ವಿಜಯ ಕರ್ನಾಟಕ

ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿವೆ ಎಂದು ನಾವೆಲ್ಲ ಹೇಳುತ್ತೇವೆ. ನಿಜಕ್ಕೂ ಏಳು ಬಣ್ಣಗಳು ಇವೆಯೇ? ಎಣಿಸಲು ಹೋದರೆ ಗೊಂದಲವಾಗುತ್ತದೆ. ಒಂದು ಬಣ್ಣದೊಳಗೆ ಮತ್ತೊಂದು ಬಣ್ಣ ಕಲಸಿಕೊಂಡಿರುತ್ತದೆ. ಯಾವ ಬಣ್ಣ ಎಲ್ಲಿ ಮುಗಿಯುತ್ತದೆ, ಎಲ್ಲಿ ಆರಂಭವಾಗುತ್ತದೆ ಎಂಬುದು ತಿಳಿಯುವುದೇ ಇಲ್ಲ. ಬಣ್ಣಗಳು ಇರುವುದು ಸತ್ಯವಾದರೂ, ಬಣ್ಣಗಳ ಪ್ರತ್ಯೇಕತೆಯನ್ನು ನಿಖರವಾಗಿ ಗುರುತಿಸಲು ಆಗುವುದಿಲ್ಲ. ಕತೆಯೂ ಹೀಗೆಯೇ. ಬದುಕಿನ ನಿಜ ಘಟನೆ ಯಾವುದು, ಕತೆಗಾರನ ಕಲ್ಪನೆ, ಚಿಂತನೆ ಯಾವುದು, ವಾಸ್ತವ-ಊಹೆ ಯಾವುದರಲ್ಲಿ ಯಾವುದು ಬೆರೆತಿದೆ ಎಂಬುದು ಸುಲಭಕ್ಕೆ ತಿಳಿಯುವುದಿಲ್ಲ. ಸ್ವತಃ ಕತೆಗಾರನೂ ಇದನ್ನು ಸಮರ್ಪಕವಾಗಿ ಹೇಳಲಾರ. ಒಂದು ಶಬ್ದ, ಒಂದು ಸಾಲು, ಒಂದು ಲಯವಿನ್ಯಾಸ ಇಡೀ ಕವಿತೆಯ ಹುಟ್ಟಿಗೆ ಕಾರಣವಾಗಬಹುದು. ಹಾಗೆಯೇ ಮನದಲ್ಲಿ ಸುಳಿದು ಹೋಗುವ ಒಂದು ಪಾತ್ರದ ಎಳೆಯನ್ನೇ ಹಿಡಿದು ಹೊರಟಾಗ ಒಂದು ಕತೆ ಹುಟ್ಟಿಕೊಂಡಿರಬಹುದು; ಒಂದು ತಾತ್ವಿಕ ಚಿಂತನೆಯ ಮಿಂಚು ಇಡೀ ಕತೆಯನ್ನು ಕಟ್ಟಿಬಿಡಬಹುದು. ಯಾವುದು ಎಲ್ಲಿ ಹೇಗೆ ರೂಪ ಪಡೆಯಿತು; ಯಾವುದರೊಳಗೆ ಯಾವುದು ಬೆರೆತು ಕತೆಯ ಕಾಮನಬಿಲ್ಲು ಮೂಡಿತು? ಒಂದು ನಿಜ ಘಟನೆಯನ್ನೇ ಆಧರಿಸಿ ಬರೆದ ಕತೆಯಲ್ಲಿಯೂ ಆ ಘಟನೆ ಮಾತ್ರ ಇರುವುದಿಲ್ಲ. ಅದಿಷ್ಟೇ ಆದರೆ ಅದು ಕತೆಯಾಗುವುದೂ ಇಲ್ಲ. ಇದರಲ್ಲಿ ಯಾವುದು ಬದುಕಿನ ಗೆರೆ, ಯಾವುದು ಊಹೆಯ ಬಣ್ಣ, ಯಾವುದು ಚಿಂತನೆ, ಯಾವುದು ಹೊಳಹು? ಪ್ರತ್ಯೇಕಿಸಿ ಗುರುತಿಸುವುದು ಕಷ್ಟ.

2

ಆಗ ನಾನು ತೀರ ಸಣ್ಣವನಿದ್ದೆ. ನಮ್ಮ ಕೇರಿಯಲ್ಲಿ ಆಗಲೇ ಸಂಜೆ ಬಂದು ಹೋಗಿತ್ತು. ಮೇಯಲು ಹೋದ ದನಕರುಗಳು ಕೊಟ್ಟಿಗೆ ಸೇರಿದ್ದವು. ಹೊಲದಲ್ಲಿ ದುಡಿದು ದಣಿದು ಬಂದವರು ಊಟ ಮಾಡಿ ಅಂಗಳಕ್ಕೆ ಬಂದು ಬೀಡಿ ಎಳೆಯುತ್ತಿದ್ದರು. ಬೆಳದಿಂಗಳು ಬೀದಿತುಂಬ ಹಿಟ್ಟು ಚೆಲ್ಲಿತ್ತು. ಇದು ಹೀಗೆಯೇ ಇದ್ದಿದ್ದರೆ ಅಂಗಳದ ಜನ ಹಾಗೆಯೇ ಚಾಪೆಗಳ ಮೇಲೆ ಮಲಗಿ ಗೊರಕೆ ಹೊಡೆಯುತ್ತಿದ್ದರು. ಬೀದಿನಾಯಿಗಳ ಬೊಗಳಾಟ ಬಿಟ್ಟರೆ ಊರು ತಣ್ಣಗೆ ನಿದ್ರಿಸುತ್ತಿತ್ತು. ಆದರೆ ಏಕಾಏಕಿ ಹುಟ್ಟಿಕೊಂಡ ಆ ಜಗಳ ಊರನ್ನು ಮಲಗಲು ಬಿಡಲಿಲ್ಲ. ಈ ಗಲಾಟೆ ಕೇಳಿಬಂದದ್ದು, ಎರಡು ಬೀದಿಗಳು ಕೂಡುವ ಮಂಜಪ್ಪನ ಅಂಗಡಿಯ ಕಡೆಯಿಂದ. ಎಲ್ಲರೂ ಆ ಕಡೆ ಓಡಿದರು. ಆಗಲೇ ಅಲ್ಲಿ ಜನ ಸೇರಿದ್ದರು. ಈರವ್ವ ಮತ್ತು ಆಕೆಯ ಮಗಳು ಬಸಕ್ಕ ಅಂಗಳದಲ್ಲಿ ಕುಳಿತು, ನಿಂತು, ಓಡಾಡಿಕೊಂಡು ಜಗಳ ಆರಂಭಿಸಿದ್ದರು. ಜಗಳ ಏನೆಂಬುದನ್ನು, ಯಾಕಾಗಿ ಎಂಬುದನ್ನು ಯಾರು ಯಾರಿಗೂ ವಿವರಿಸುವ ಪ್ರಮೇಯವೇ ಇರಲಿಲ್ಲ. ಇಡೀ ಜಗಳದ ಸಾರಾಂಶವನ್ನು ಬಿತ್ತರಿಸುವಂತೆ ಈ ತಾಯಿ ಮಗಳ ಮಾತುಗಳು ಪ್ರಸಾರವಾಗುತ್ತಿದ್ದವು. ಕೋಪವೊ, ವ್ಯಂಗ್ಯವೋ, ದುಃಖವೋ, ಜನ ಸೇರಿದ ಕಾರಣದಿಂದಾಗಿ ಹುಟ್ಟಿಕೊಂಡ ಉಮೇದೊ ಅಥವಾ ಅದೆಲ್ಲವೂ ಬೆರತು ಹುಟ್ಟಿಕೊಂಡ ವಿಚಿತ್ರ ಮನಃಸ್ಥಿತಿಯೋ ಅಂತೂ ತಾಯಿ ಮಗಳು ಇಡೀ ಸಂಜೆಗೆ ರಂಗೇರಿಸಿದ್ದರು. ‘ನನ್ನ ಆಟ್ಗಳ್ಳ, ಒರಗ್ಬಾರೋ, ಉಟ್ಟಿದ್ದಿನ ಕಾಣ್ಸದಿದ್ದರೆ ನಮ್ಮಪ್ಪಗುಟ್ಟಿದ ಮಗಳೇ ಅಲ್ಲಕಣೋ’ ಎಂದು ಈರವ್ವ ಆ ಸಂಜೆಯ ತನ್ನ ಕಡುವೈರಿ ಮಂಜಪ್ಪನಿಗೆ ಪಂಥಾಹ್ವಾನ ನೀಡುತ್ತಿದ್ದಳು. ಇವರಿಬ್ಬರ ಆಟಾಟೋಪಕ್ಕೆ ಹೆದರಿ ಮಂಜಪ್ಪ ಮನೆಯ ಒಳಗೆ ಅಡಗಿ ಕುಳಿತಿದ್ದ. ಮಂಜಪ್ಪನ ಹೆಂಡತಿ ಒಳ ಹೊರಗೆ ಓಡಾಡುತ್ತ, ಅಂಗಡಿಗೆ ಬಂದ ಗಿರಾಕಿಗಳಿಗೆ ಬೀಡಿಯನ್ನೊ, ಬೆಲ್ಲವನ್ನೊ, ಚಾಪುಡಿಯನ್ನೊ ಮಾರುತ್ತ ಅಂಗಡಿ ನಡೆಸುತ್ತಿದ್ದಳು. ಲಾಟೀನು ಬೀರುತ್ತಿದ್ದ ಮಂದ ಬೆಳಕಿನ ನೆರವಿನಿಂದ ಆ ಅಂಗಡಿಯ ಒಳಗೆ (ಅದು ಮಂಜಪ್ಪನ ಮನೆಯೂ ಹೌದು) ಮಂಜಪ್ಪ ಇದ್ದಾನೊ, ಇಲ್ಲವೊ ಹೇಳುವುದು ಕಷ್ಟವಾಗಿತ್ತು. ಸಾಮಾನು ಕೊಳ್ಳಲೆಂದು ಅಂಗಡಿಯ ಒಳಗೆ ಹೋಗುವವರು ಕಣ್ಣಲ್ಲೇ ಮಂಜಪ್ಪನ ತಲಾಶ್ ಮಾಡುತ್ತಿದ್ದರು. ಅವರ ಕಣ್ಣನೋಟ ಎಷ್ಟೇ ಚುರುಕಾಗಿದ್ದರೂ, ಮಂಜಪ್ಪ ಕಂಡದ್ದು ವರದಿಯಾಗುತ್ತಿರಲಿಲ್ಲ. ಈರವ್ವ ಮತ್ತು ಬಸಕ್ಕ ಹಾಕುತ್ತಿದ್ದ ಸವಾಲುಗಳನ್ನು ಕೇಳಿದರೆ ಮಂಜಪ್ಪ ಒಳಗಡೆ ಇರುವುದು ಗ್ಯಾರಂಟಿಯಾಗುತ್ತಿತ್ತು. ‘ಹೊಲದಾಗ ನನ್ ಹಿಡಕಳ್ಳಾಕ್ ಬಂದಿದ್ಯಾ, ಬಾಡ್ಖಾವ್. ಬಾರೋ ಈಗ ಹಿಡಕಾಬಾರೋ, ಗಂಡ್ಸಾದ್ರೆ ಬಾರೋ, ತೋರುಸ್ತೀನಿ’ ಎಂದು ಬಸಕ್ಕ ತಾರಕದಲ್ಲಿ ಎತ್ತುತ್ತಿದ್ದ ಸೊಲ್ಲಿಗೆ ಮತ್ತೊಂದು ಸೊಲ್ಲನ್ನು ಜೋಡಿಸಿ ಈರವ್ವ ಕಥಾನಕವನ್ನು ಮುಂದುವರಿಸುತ್ತಿದ್ದಳು. ಬಸಕ್ಕನನ್ನು ಹಿಡಿದುಕೊಳ್ಳುವುದು ಅಂಥ ದೊಡ್ಡ ವಿಷಯವಾಗಿರಲಿಲ್ಲ. ಊರಲ್ಲಿ ಅನೇಕರು ಆಗಲೇ ಆಕೆಯನ್ನು ಹಿಡಿದುಕೊಂಡಿದ್ದರು. ಅದು ಇಡೀ ಊರಿಗೇ ಗೊತ್ತಿತ್ತು. ಆದರೆ ಈ ಜಗಳ ಯಾಕೆ? ಮಂಜಪ್ಪ ಮಾಡಿದ ತಪ್ಪಾದರೂ ಏನು ಎಂಬುದು ನಮಗೆ ತಿಳಿಯದೆ ಗೊಂದಲವಾಗುತ್ತಿತ್ತು. ಆದರೆ ಬಯಲಾಟದ ಪಾತ್ರಗಳಂತೆ ಈ ತಾಯಿ-ಮಗಳು ಆಡುತ್ತಿದ್ದ ಮಾತುಗಳು ನಮ್ಮಲ್ಲಿ ಪ್ರಚಂಡ ಕುತೂಹಲವನ್ನು ಕೆರಳಿಸಿದ್ದವು. ಮಂಜಪ್ಪನನ್ನು ಕೆರಳಿಸುವ ರೀತಿಯಲ್ಲಿ ಇವರಿಬ್ಬರು ಹಾಡುಗಳನ್ನೂ ಹೇಳುತ್ತಿದ್ದರು. ಅವು ಆ ಕ್ಷಣಕ್ಕೆ ಅವರೇ ಕಟ್ಟಿದ್ದ ಹಾಡುಗಳು. ಅವನ್ನು ಲಯಬದ್ಧವಾಗಿ ಹಾಡುತ್ತ, ತಮ್ಮ ಕಾಲಿನ ಕೆರಗಳನ್ನು ಕೈಗೆ ತೆಗೆದುಕೊಂಡು ನೆಲಕ್ಕೆ ಬಡಿದು ತಾಳಹಾಕುತ್ತ ಮೈಮರೆಯುತಿದ್ದರು. ಮಂಜಪ್ಪನೇನಾದರೂ ಕೆರಳಿ ಹೊರಗೆ ಬಂದರೆ ಈ ತಾಯಿ ಮಗಳು ಹಸಿದ ಹುಲಿಗಳಂತೆ ಅವನ ಮೇಲೆರಗುವುದು ಖಚಿತವಾಗಿತ್ತು. ಅದಕ್ಕಿಂತಲೂ ಹೆಚ್ಚಿನದೇನೆಂದರೆ ಮಂಜಪ್ಪನನ್ನು ಕೆರದಲ್ಲಿ ಹೊಡೆದು ‘ಜಾತಿಕೆಡಿಸುವುದು’ ಇವರ ಹುನ್ನಾರವಾಗಿತ್ತು. ಅದನ್ನವರು ತಮ್ಮ ಮಾತು, ಹಾಡು, ಅಭಿನಯಗಳಲ್ಲಿ ಜನರಿಗೆ ಮನದಟ್ಟು ಮಾಡಿದ್ದರು. ಈ ಇಬ್ಬರು ಹೆಣ್ಣು ಹೆಂಗಸರ ಹೊಡೆತಗಳ ಹೆದರಿಕೆಗಿಂತ, ‘ಜಾತಿ ಕೆಡುವ’ ಭೀತಿಯೇ ಹೆಚ್ಚಾಗಿ ಮಂಜಪ್ಪ ಹೊರಗೆ ಅಡಿ ಇಟ್ಟಿರಲಿಲ್ಲ. ಅವನ ಹೆಂಡತಿ ಮಾತ್ರ ಆಗೊಮ್ಮೆ ಈಗೊಮ್ಮ ಕಂಕುಳಲ್ಲಿ ಮಗುವನ್ನು ಇರುಕಿಕೊಂಡು ಹೊರ ಒಳಗೆ ಸುಳಿಯುತ್ತ, ಪರಿಸ್ಥಿತಿಯ ಅವಲೋಕನ ಮಾಡುತ್ತ, ಗಂಡನಿಗೆ ಗುಟ್ಟಾಗಿ ವರದಿ ಒಪ್ಪಿಸುತ್ತಿದ್ದಂತೆ ನಡೆದುಕೊಳ್ಳುತ್ತಿದ್ದಳು. ವಿಶೇಷವೆಂದರೆ ಊರಿನ ಯಾರೂ ಈ ಜಗಳದಲ್ಲಿ ಮಧ್ಯಪ್ರವೇಶಿಸಿರಲಿಲ್ಲ. ‘ಇಲ್ಲೇನು ಮಂಗ್ಯಾ ಕುಣಿತತಾ, ನಡಿರಲೇ’ ಎಂದು ಅಬ್ಬರಿಸುತ್ತ ಮಕ್ಕಳನ್ನು ಅಟ್ಟಿಸಿಕೊಂಡು ಹೋಗುವುದನ್ನು ಆಗಾಗ ಮಾಡಿದರೂ, ಜಗಳವನ್ನು ನಿಲ್ಲಿಸುವ ದಿಕ್ಕಿನಲ್ಲಿ ಯಾರೂ ಪ್ರಯತ್ನ ಮಾಡಿರಲಿಲ್ಲ. ಮಕ್ಕಳನ್ನು ಬೆದರಿಸಿ ಅತ್ತ ಕಳುಹಿಸಲು ಹೋದವರೂ, ಕುತೂಹಲ ಹತ್ತಿಕ್ಕಲಾಗದೆ ಮರಳಿಬಂದು ತಾಯಿ-ಮಗಳ ಈ ಆಟವನ್ನು ನೋಡುತ್ತಿದ್ದರು. ಹಿರಿಯರ ಬೆದರಿಕೆಗೆ ನಾವೆಲ್ಲ ದೂರ ಹೋದಂತೆ ಮಾಡಿದರೂ, ಅವರ ಬೆನ್ನ ಹಿಂದೆಯೇ ಬಂದು ನಂನಮ್ಮ ಮೊದಲಿನ ಜಾಗಗಳನ್ನೇ ಹಿಡಿದು ಮುಂದಿನ ಆಟ ನೋಡಲು ಸಿದ್ಧರಾಗುತ್ತಿದ್ದೆವು. ಈರವ್ವನಿಗೆ ವಯಸ್ಸಾಗಿತ್ತು. ಆದರೆ ಬಸಕ್ಕ ಇನ್ನೂ ಹರೆಯದ ಹರಾಮಿ. ಜಗಳದಲ್ಲಿ ಮಾತ್ರ ಯಾರು ವಯಸ್ಸಾದವರು, ಯಾರು ಹರೆಯದ ಹುಮ್ಮಸ್ಸಿನವರು ಎಂದು ಹೇಳುವುದು ಕಷ್ಟವಾಗುವಂತೆ ಇಬ್ಬರೂ ಸಮಾನ ಹುರುಪನ್ನು ಪ್ರದಶರ್ಿಸುತ್ತಿದ್ದರು. ಮಂಜಪ್ಪನೇನಾದರೂ ಹೊರಗೆ ಬಂದರೆ ಅವನು ಚಿಂದಿ ಚೂರಾಗುವುದು ನಿಶ್ಚಿತವಾಗಿತ್ತು. ಮಂಜಪ್ಪ ಹೊರಗೆ ಬರಲಿಲ್ಲ. ರಾತ್ರಿ ಬೆಳೆಯುತ್ತಿತ್ತು. ಗುಂಪಿನಲ್ಲಿದ್ದವರು ಹೋಗುತ್ತಿದ್ದರು; ಬರುತ್ತಿದ್ದರು. ಮಂಜಪ್ಪ ಹೊರಬರದೆ, ರೋಚಕ ಅಧ್ಯಾಯವೊಂದು ಮುಂದೆ ಮುಂದೆ ಹೋಗುತ್ತಿರುವುದು ಅನೇಕರನ್ನು ನಿರಾಶೆಗೊಳಿಸಿತ್ತು. ಆದರೂ ಆ ಕ್ಷಣ ಬಂದೇ ಬರುತ್ತದೆಂಬ ಅಖಂಡ ವಿಶ್ವಾಸದಲ್ಲಿ ಅನೇಕರು ಬೀಡಿ ಎಳೆಯುತ್ತ ರಭಸದಿಂದ ಆಕಾಶಕ್ಕೆ ಹೊಗೆಯನ್ನು ಉಗುಳುತ್ತಿದ್ದರು. ತಾಯಿ ಮಗಳದು ಚಂಪೂ ಕಾವ್ಯ. ಒಮ್ಮೆ ಗದ್ಯದಲ್ಲಿ; ಒಮ್ಮೆ ಪದ್ಯದಲ್ಲಿ. ಒಮ್ಮೆ ಅಭಿನಯದಲ್ಲಿ; ಮತ್ತೊಮ್ಮೆ ಮಾತಿನಲ್ಲಿ. ಒಮ್ಮೊಮ್ಮೆ ಎದ್ದು ಅಬ್ಬರಿಸುವುದು, ಮಂಜಪ್ಪನ ಮನೆಯ ಬಾಗಿಲವರೆಗೆ ಹೋಗುವುದು ಮತ್ತೆ ಹಿಂದಕ್ಕೆ ಬಂದು ಸಭಾಸದರನ್ನು ಉದ್ದೇಶಿಸಿ ಮಾತನಾಡುವುದು; ದೇಹ ಒಂದಿಷ್ಟು ದಣಿದಿದೆ ಎನಿಸಿದ ಕೂಡಲೇ ಅಲ್ಲಿಯೇ ಕುಳಿತು ಕತೆಯನ್ನು ಮುಂದುವರಿಸುವುದು. ಬೆಳಗಿನವರೆಗೂ ಈ ಆಟ ನಡೆಯುವುದೇ? ಅಥವಾ ಸ್ವಲ್ಪ ಹೊತ್ತಿನಲ್ಲಿಯೇ ಮುಕ್ತಾಯದ ಘಟ್ಟ ಬಂದುಬಿಡುವುದೇ? ಅದನ್ನು ಯಾರು ಹೇಳಲು ಸಾಧ್ಯವಿತ್ತು? ಅದು ಸಾಧ್ಯವಿದ್ದದ್ದು ಮಂಜಪ್ಪನಿಗೆ ಮಾತ್ರ. ಸುಳಿವೇ ಕೊಡದಂತೆ ಆತ ಮನೆಯೊಳಗೇ ಅಡಗಿ ಕುಳಿತಿದ್ದ. ಮೂತ್ರ ವಿಸರ್ಜನೆಗಾದರೂ ಅವನು ಹೊರಗೆ ಬರಲೇ ಬೇಕು. (ಮನೆಯೊಳಗೇ ಮೂತ್ರವಿಸಜರ್ಿಸುವ ಸೌಲಭ್ಯ ಆಗ ನಮ್ಮೂರಿನಲ್ಲಿ ಯಾರ ಮನೆಯಲ್ಲೂ ಇರಲಿಲ್ಲ) ಹಾಗೆ ಬಂದುಬಿಟ್ಟರೆ ತಕ್ಷಣ ಕೆರದಲ್ಲಿ ಅವನನ್ನು ತದಕಿ ತಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳಲು ಈ ತಾಯಿ ಮಗಳು ಕಾದು ಕುಳಿತಿದ್ದರು. ಪ್ರತಿಜ್ಞೆ ಮುಗಿಯದೆ ಅವರು ಆ ಜಾಗದಿಂದ ಕದಲುವಂತಿರಲಿಲ್ಲ. ಈ ನಾಟಕ ಮುಗಿಯದೆ ನಾವ್ಯಾರು ಮನೆಗಳನ್ನು ಸೇರುವಂತಿರಲಿಲ್ಲ. ಇದೆಂಥ ವಿಚಿತ್ರ ಪರಿಸ್ಥಿತಿ! ಮಂಜಪ್ಪ ಆ ರಾತ್ರಿ ಹೊರಬಂದನೆಂದೂ, ಇವರಿಬ್ಬರು ಅವನನ್ನು ಕೆರದಿಂದ ಹೊಡೆದರೆಂದೂ ಮರುದಿನ ಬೆಳಗ್ಗೆ ವರದಿಗಳು ಹಾರಾಡಿದವು. ಆ ರಸ ಸನ್ನಿವೇಶವನ್ನು ನೋಡುವ ಭಾಗ್ಯ ಅನೇಕರಿಗೆ ಸಿಕ್ಕಲಿಲ್ಲ. ನಿದ್ರೆಯನ್ನು ತಡೆಯಲಾರದವರೆಲ್ಲ ಮನೆಗಳಿಗೆ ಹೋಗಿ ಮಲಗಿದ್ದರು. ನಮಗೇನೂ ಹಾಗೆ ಮಲಗುವ ಮನಸ್ಸಿರಲಿಲ್ಲ. ಆದರೆ ಮನೆಯವರ ಒತ್ತಡಕ್ಕೆ ಮಣಿದು ನಾವೆಲ್ಲ ಹುಡುಗರು ಮನೆಗಳನ್ನು ಸೇರಿಕೊಂಡಿದ್ದೆವು. ನನಗಂತೂ ನಿದ್ರೆ ಎಚ್ಚರಗಳ ತೂಗುಯ್ಯಾಲೆ; ಕನಸಿನಲ್ಲಿಯೂ ಅವೇ ಚಿತ್ರಗಳು ಮೂಡುತ್ತಿದ್ದವು; ಅವೇ ಪಾತ್ರಗಳು ಜೀವಂತವಾಗಿ ಅಭಿನಯಿಸುತ್ತಿದ್ದವು.

3

ಈ ಘಟನೆ ನಡೆದು ಅನೇಕ ವರ್ಷಗಳೇ ಕಳೆದುಹೋಗಿವೆ. ಇದನ್ನು ನೆನಪಿಟ್ಟುಕೊಂಡಿರುವವರು ಯಾರೂ ನಮ್ಮೂರಲ್ಲಿ ಇದ್ದಂತಿಲ್ಲ. ನೆನಪಿರಬಹುದಾದವರು ದೇಶಾಂತರ ಹೋಗಿರಬೇಕು. ಮಂಜಪ್ಪನಿಗಾಗಲಿ, ಈರವ್ವ, ಬಸಕ್ಕ ಮೊದಲಾದವರಿಗಾಗಲೀ ಈ ನೆನಪು ಇರಬಹುದೇ? ಅಥವಾ ಅವರ ನೆನಪಿನ ಪುಟದಿಂದ ಅದು ಎಂದೋ ಮರೆಯಾಗಿರಬಹುದೊ? ಅವರ ಮುಂದೆ ನಿಂತು ನಾನೇ ಈ ಘಟನೆಯನ್ನು ಹೇಳಿದರೆ, ‘ಔದಾ’, ‘ಅಂಗಾ’ ಎಂದು ಬೆರಗಾಗಬಹುದು. ನನ್ನ ನೆನಪಿನಲ್ಲಿ ಈ ಘಟನೆ ಎಷ್ಟು ಚಿತ್ರವತ್ತಾಗಿ ಉಳಿದುಕೊಂಡಿದೆ ಎಂದರೆ, ಇದೇ ಈಗ ಕಣ್ಮುಂದೆ ನಡೆಯುತ್ತಿದೆಯೇನೊ ಎನಿಸುವಷ್ಟರ ಮಟ್ಟಿಗೆ ಚಿತ್ರಗಳು ಮೂಡುತ್ತವೆ. ಮೇಲಿಂದ ಮೇಲೆ ಕಾಡುತ್ತಿದ್ದ ಈ ಘಟನೆಯನ್ನು ಆಧರಿಸಿ ನಾನೊಂದು ಕತೆಯನ್ನು ಬರೆದೆ. ಅದರ ಹೆಸರು-ಶುದ್ಧೀಕರಣ. ಅದು ಅನಂತಮೂತರ್ಿ ಅವರು ಸಂಪಾದಿಸುತ್ತಿದ್ದ ‘ರುಜುವಾತು’ ತ್ರೈಮಾಸಿಕದಲ್ಲಿ ಪ್ರಕಟವಾಗಿ, ನಂತರ ನನ್ನದೇ ಸಂಕಲನ ‘ಒಂದು ಗುಲಾಬಿ’ಯಲ್ಲಿಯೂ ಕಾಣಿಸಿಕೊಂಡಿತು. ಆ ಕತೆಯನ್ನು ಓದಿ ಇಡೀ ಕತೆಯೇ ಘಟಿಸಿತು, ನಾನು ಬಾಲ್ಯದಲ್ಲಿ ಕಂಡ ವ್ಯಕ್ತಿಗಳೇ ಯಥಾವತ್ ಇಲ್ಲಿ ಮೈದಳೆದಿವೆ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಈ ಘಟನೆಯೇ ಶುದ್ಧೀಕರಣ ಕತೆಯ ಬೀಜ. ಈ ಬೀಜ ನನ್ನೊಳಗೆ ಎಷ್ಟೋ ವರ್ಷ ಇದ್ದದ್ದು ನಿಜ. ಅದು ಒಂದು ದಿನ ಕತೆಯಾಗಿ ಹೊರಬಂದದ್ದೂ ಸತ್ಯ. ಈ ಬೀಜ ಮೊಳೆತದ್ದು ಹೇಗೆ ಎನ್ನುವುದು ಸೃಜನಶೀಲ ಬರಹಗಾರನ ಅಂತರಂಗದ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರ. ಇದನ್ನು ವಿವರಿಸುವುದಕ್ಕೆ ಸ್ಪಷ್ಟ ಮಾತುಗಳು ಸಿಕ್ಕುವುದಿಲ್ಲ. ಎಲ್ಲ ಕತೆಗಳಂತೆ ಈ ಕತೆಯೂ ಒಂದು ಕಾಮನಬಿಲ್ಲು. ಈ ಕಾಮನಬಿಲ್ಲನ್ನು ನೋಡಿ ಸಂತೋಷಿಸಬೇಕೇ ಹೊರತು, ಅದರಲ್ಲಿರುವ ಬಣ್ಣಗಳನ್ನು ಎಣಿಸಬಾರದು; ಒಂದು ಬಣ್ಣದಿಂದ ಇನ್ನೊಂದು ಬಣ್ಣವನ್ನು ಪ್ರತ್ಯೇಕಿಸಲೂ ಬಾರದು.  ]]>

‍ಲೇಖಕರು G

July 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This