ಜಿ ಪಿ ಬಸವರಾಜು ಕಾಲ೦ : ಉಗ್ರ ಚಳವಳಿಯ ಸೌಮ್ಯ ನಾಯಕ

ಉಗ್ರ ಚಳವಳಿಯ ಸೌಮ್ಯ ನಾಯಕ

-ಜಿ.ಪಿ.ಬಸವರಾಜು

ಚರಿತ್ರೆಯಲ್ಲಿ ದಾಖಲಾಗದ ಒಂದು ಪುಟ್ಟ ಘಟನೆಯನ್ನು ಇಲ್ಲಿ ಕಾಣಿಸುವುದರ ಮೂಲಕ ಈ ಲೇಖನವನ್ನು ಆರಂಭಿಸಬೇಕೆನ್ನಿಸುತ್ತದೆ. ಅದು ರೈತ ಚಳವಳಿ ಬಿರುಸಾಗಿದ್ದ ಕಾಲ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈತರು ರಸ್ತೆ ತಡೆ ಚಳವಳಿಯನ್ನು ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಂತೂ ಈ ಚಳವಳಿ ಎಷ್ಟು ಜೋರಾಗಿತ್ತೆಂದರೆ, ಒಂದೇ ಒಂದು ವಾಹನವೂ ರೈತರ ಕಣ್ಣುತಪ್ಪಿಸಿ ಹೋಗುವುದು ಸಾಧ್ಯವಿರಲಿಲ್ಲ. ರೋಗಿಗಳಿಗೆ, ಮಕ್ಕಳಿಗೆ, ಅಗತ್ಯ ಸೇವಾ ಸಿಬ್ಬಂದಿಗೆ ಒಂದಿಷ್ಟು ಕರುಣೆಯನ್ನು ತೋರಿಸಿ ಅಂಥ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡುವಷ್ಟು ರೈತರು ಉದಾರಿಗಳಾಗಿದ್ದರು. ಉಳಿದಂತೆ ಯಾವ ವಾಹನವನ್ನೂ ಬಿಡುತ್ತಿರಲಿಲ್ಲ. ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಂತಿರುವುದು ರೈತ ಚಳವಳಿಯ ಶಕ್ತಿಯನ್ನು ಸೂಚಿಸುವಂತಿರುತ್ತಿತ್ತು. ಆಗ ನಾನು ಶಿವಮೊಗ್ಗದಲ್ಲಿ ಪ್ರಜಾವಾಣಿಯ ವರದಿಗಾರ. ನಮ್ಮ ಸಂಪಾದಕರಾದ ವೈಯನ್ಕೆ (ವೈ. ಎನ್.ಕೃಷ್ಣಮೂರ್ತಿ) ತೀರ್ಥಹಳ್ಳಿಯಲ್ಲಿ ಕೆಲಸವಿತ್ತೆಂದು ಬಂದು ಶಿವಮೊಗ್ಗದ ಜ್ಯುಯೆಲ್ ರಾಕ್ ಹೋಟೆಲಿನಲ್ಲಿ ತಂಗಿದ್ದರು. ಅವರು ಬೆಂಗಳೂರಿಗೆ ವಾಪಸು ಹೋಗಬೇಕಾಗಿತ್ತು. ಒಂದು ಬೆಳಗ್ಗೆ ಅವರು ಬೆಂಗಳೂರಿಗೆ ಹೊರಟು, ಭದ್ರಾವತಿಯನ್ನೂ ಮುಟ್ಟಲಾಗದೆ ಶಿವಮೊಗ್ಗಕ್ಕೆ ವಾಪಸು ಬಂದು, ಮತ್ತೆ ಅದೇ ಹೋಟೆಲಿನಲ್ಲಿ ವಾಸ್ತವ್ಯ ಮಾಡಿದರು. ಪೊಲೀಸರ ನೆರವು, ಸಂಪಾದಕರ ಹುದ್ದೆ ಇದು ಯಾವುದೂ ವೈಯನ್ಕೆ ಅವರ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿಲ್ಲ. ಅವರು ನನ್ನನ್ನು ಕರೆದು ಏನು ಮಾಡುವುದೆಂದು ಕೇಳಿದರು. ನಾನು ನಿಮ್ಮ ನಿರಾತಂಕ ಪ್ರಯಾಣಕ್ಕೆ ಒಂದು ಪಾಸ್ ಪೋರ್ಟ್ ಅಗತ್ಯ ಎಂದೆ. ಎಂಥ ಪಾಸ್ ಪೋರ್ಟ್ ಎಂದರು ಕುತೂಹಲದಿಂದ. ಈ ಪಾಸ್ ಪೋರ್ಟ್ ಕೊಡುವ ಅಧಿಕಾರ ಇರುವುದು ಒಬ್ಬರಿಗೇ; ಅದು ರೈತ ಸಂಘದ ಅಧ್ಯಕ್ಷ ಎಚ್.ಎಸ್. ರುದ್ರಪ್ಪನವರಿಗೆ ಎಂದೆ. ಇದು ವೈಯನ್ಕೆ ಅವರಿಗೆ ತಮಾಷೆಯಾಗಿ ಕಾಣಿಸಿರಬೇಕು. ‘ಅದೇನು ಮಾಡುತ್ತೀರೋ ಮಾಡಿ, ನಾನು ಬೆಂಗಳೂರಿಗೆ ನಾಳೆ ಹೋದರೆ ಸಾಕು’ ಎಂದರು. ನಾನು ಸೀದಾ ರುದ್ರಪ್ಪನವರ ಹತ್ತಿರ ಹೋಗಿ ಈ ಪಾಸ್ಪೋರ್ಟನ್ನು ಕೊಡಲು ವಿನಂತಿಸಿಕೊಂಡೆ. ರುದ್ರಪ್ಪನವರು ನಕ್ಕರು. ಪ್ರಜಾವಾಣಿಯ ಬಗ್ಗೆ ರುದ್ರಪ್ಪನವರೂ ಸೇರಿದಂತೆ ರೈತಮುಖಂಡರಿಗೆಲ್ಲ ಒಳ್ಳೆಯ ಅಭಿಪ್ರಾಯವಿತ್ತು. ರೈತ ಚಳವಳಿ ಒಂದು ಬಲಿಷ್ಠ ಚಳವಳಿಯಾಗಿ ರೂಪಗೊಳ್ಳಲು ಪ್ರಜಾವಾಣಿಯ ಕೊಡುಗೆಯೂ ಮುಖ್ಯವಾಗಿತ್ತು. ಆರಂಭದ ಹಂತದಿಂದಲೂ ರೈತ ಚಳವಳಿಯನ್ನು ನಾನು ಗ್ರಹಿಸಿದ ರೀತಿ ಮತ್ತು ನೀಡುತ್ತಿದ್ದ ವರದಿಗಳು ಪ್ರಜಾವಾಣಿಯಲ್ಲಿ ಪ್ರಮುಖವಾಗಿಯೇ ಪ್ರಕಟವಾಗುತ್ತಿದ್ದವು. ಇದರಿಂದಾಗಿ ರೈತರಲ್ಲಿ ಪ್ರಜಾವಾಣಿಯ ಬಗ್ಗೆ ಒಂದು ರೀತಿಯ ಪ್ರೀತಿಯೂ ಬೆಳೆದು, ಪ್ರಜಾವಾಣಿಯ ಪ್ರಸಾರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಿತ್ತು. ರೈತಮುಖಂಡರಂತೂ ಪ್ರಜಾವಾಣಿಯನ್ನು ತುಂಬ ವಿಶ್ವಾಸದಿಂದಲೇ ನೋಡುತ್ತಿದ್ದರು. ರುದ್ರಪ್ಪನವರು ಸಂಘದ ಲೆಟರ್ಹೆಡ್ನಲ್ಲಿ ನಾಲ್ಕು ಸಾಲು ಬರೆದರು. ಪ್ರಜಾವಾಣಿಯ ಮತ್ತು ರೈತ ಚಳವಳಿಯ ಸಂಬಂಧವನ್ನು ಹೇಳಿ, ರೈತ ಚಳವಳಿ ಬೆಳೆಯಲು ಅದರ ಕೊಡುಗೆಯನ್ನೂ ಪ್ರಸ್ತಾಪಿಸಿ, ಪ್ರಜಾವಾಣಿಯ ಸಂಪಾದಕರಾದ ವೈಯನ್ಕೆ ಅವರ ವಾಹನವನ್ನು ತಡೆಯಬಾರದು; ಅವರ ಓಡಾಟ ನಿರಾತಂಕವಾಗಿರಬೇಕೆಂದು ಚಳವಳಿಗಾರರಿಗೆ ಸೂಚಿಸಿ, ಸಹಿ ಹಾಕಿಕೊಟ್ಟರು. ಈ ಕಾಗದವನ್ನು ವೈಯನ್ಕೆ ಅವರಿಗೆ ಕೊಟ್ಟೆ. ಇದೊಂದು ಪಾಸ್ ಪೋರ್ಟ್ ರೀತಿಯಲ್ಲಿ ಕೆಲಸ ಮಾಡಬಹುದೆಂಬ ನಂಬಿಕೆ ಅವರಿಗೆ ಹುಟ್ಟಿದಂತೆ ಕಾಣಲಿಲ್ಲ. ಅಂತೂ ಕಾಗದವನ್ನು ತಮ್ಮ ಬ್ಯಾಗ್ನಲ್ಲಿ ಹಾಕಿಕೊಂಡರು. ನನಗಂತೂ ನಂಬಿಕೆ ಇತ್ತು. ಆದರೂ ಮರುದಿನ ಬೆಳಗ್ಗೆ ವೈಯನ್ಕೆ ಅವರು ಹೊರಡುವ ಹೊತ್ತಿಗೆ ಸರಿಯಾಗಿ ನಾನೂ ಹೊರಟು ಅವರನ್ನು ಹಿಂಬಾಲಿಸಿದೆ. ಭದ್ರಾವತಿಯವರೆಗೂ ತಡೆಯಂತೂ ಇತ್ತು. ಅಲ್ಲೆಲ್ಲ ವೈಯನ್ಕೆ ಈ ಕಾಗದವನ್ನು ತೋರಿಸುತ್ತಿದ್ದರು. ಹಸಿರು ಟವಲಿನ ಚಳವಳಿಗಾರರು ಕಾಗದವನ್ನು ಓದಿಕೊಂಡು, ತಮ್ಮಲ್ಲೇ ಚರ್ಚಿಸಿಕೊಂಡು, ವಾಹನವನ್ನು ಹೋಗಲು ಬಿಡುತ್ತಿದ್ದರು. ಹಳ್ಳಿಹಳ್ಳಿಗೂ ಈ ವಾಹನ ನಿಲ್ಲುತ್ತಿತ್ತು. ಆದರೆ ಓಡಾಟಕ್ಕೆ ತಡೆಯಂತೂ ಎಲ್ಲೂ ಆಗಲಿಲ್ಲ. ಹಿಂದೆ ಹಿಂದೆಯೇ ಹೋಗುತ್ತ, ದೂರದಿಂದಲೇ ಇದನ್ನೆಲ್ಲ ಗಮನಿಸುತ್ತಿದ್ದ ನಾನು, ವೈಯನ್ಕೆ ಅವರು ಭದ್ರಾವತಿಯನ್ನು ದಾಟಿದ ನಂತರ ಶಿವಮೊಗ್ಗಕ್ಕೆ ಮರಳಿ ಬಂದೆ. ಅಂದು ರಾತ್ರಿ ಫೋನ್ನಲ್ಲಿ ವಿಚಾರಿಸಿಕೊಂಡಾಗ ವೈಯನ್ಕೆ ನಗುನಗುತ್ತಾ, ಹೌದು ಅದು ಪಾಸ್ಪೋರ್ಟೇ, ಎಲ್ಲಿಯೂ ತೊಂದರೆಯಾಗಲಿಲ್ಲ ಎಂದು ಉತ್ತರಿಸಿದರು. 2 ಕನರ್ಾಟಕ ರಾಜ್ಯ ರೈತ ಸಂಘ ರುದ್ರಪ್ಪನವರನ್ನು ತಮ್ಮ ನೇತಾರ ಎಂದು ಪರಿಭಾವಿಸುವ ಹೊತ್ತಿಗೆ ರುದ್ರಪ್ಪನವರ ಬದುಕಿನ ಹಲವು ಮಜಲುಗಳು ಮುಗಿದು ಹೋಗಿದ್ದವು. ರಾಜ್ಯ ಸಕರ್ಾರದಲ್ಲಿ ಅವರು ಮಂತ್ರಿ ಪದವಿಯನ್ನು ನಿಭಾಯಿಸಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮರಳಿ ಸಾಕಷ್ಟು ಕಾಲವಾಗಿತ್ತು. ಒಮ್ಮೆ ಮಂತ್ರಿಯಾದವರು ಬೆಂಗಳೂರಿನಲ್ಲಿಯೇ ಬೇರುಬಿಟ್ಟು ಸಕಲ ವೈಭೋಗಗಳಲ್ಲಿಯೇ ಮೈಮರೆಯುವ ರಾಜಕಾರಣ ಪರಂಪರೆಯೇ ನಮ್ಮಲ್ಲಿರುವಾಗ ರುದ್ರಪ್ಪನವರು ಶಿವಮೊಗ್ಗಕ್ಕೆ ಮರಳಿದ್ದು, ಒಂದರ್ಥದಲ್ಲಿ ಅವರ ಜೀವನ ತತ್ವವನ್ನು ಸ್ವಯಂ ನಿವೇದಿಸುತ್ತದೆ. ತೆಳ್ಳಗೆ ತಾಳೆಮರದಂತಿದ್ದ ರುದ್ರಪ್ಪನವರು ಸರಳ ಜೀವಿ. ಬಿಳಿ ಪಂಚೆ, ಜುಬ್ಬ, ಗಾಂಧೀ ಟೋಪಿಯ ಅವರು ಗಾಂಧೀ ತತ್ವಕ್ಕೆ ಹತ್ತಿರವಿದ್ದಂತೆ ಕಾಣುತ್ತಿದ್ದರು. ಅವರ ಸುತ್ತ ಮಾಜಿ ಮಂತ್ರಿಯ ವೈಭವದ ಪ್ರಭಾವಳಿ ಇರಲಿಲ್ಲ; ಅಂಥ ಗತ್ತೂ ಅವರಿಂದ ಬಹಳ ದೂರವಿತ್ತು. ಹಳ್ಳಿಯ ರೈತನೂ ಅವರನ್ನು ಸುಲಭವಾಗಿ ಸಂಪಕರ್ಿಸಬಹುದಾದ, ಸಹಜವಾಗಿ ಮಾತುಕತೆಯಾಡಲು ಸಾಧ್ಯವಾಗಬಹುದಾದ, ಹಿಂದೊಂದು ಮುಂದೊಂದು ಇಲ್ಲದ ನೇರ, ಸರಳ, ಸಜ್ಜನ ನಡವಳಿಕೆ ಅವರದು. ಅವರೊಂದಿಗೆ ಯಾರೂ ಕಷ್ಟ ಸುಖಗಳನ್ನು ಹೇಳಿಕೊಳ್ಳಬಹುದಾಗಿತ್ತು. ಅಂಥ ಆಪ್ತ ವ್ಯಕ್ತಿತ್ವ ಅವರದು. ಜೊತೆಗೆ ರುದ್ರಪ್ಪನವರದು, ಅವರ ಉಡುಗೆಯಂತೆಯೇ, ಶುಭ್ರ ಶೀಲ. ಯಾವ ಹಗರಣಗಳೂ ಅವರ ಸುತ್ತ ಇರಲಿಲ್ಲ. ಭ್ರಷ್ಟಾಚಾರದ ಪ್ರಕರಣಗಳಂತೂ ಅವರಿಂದ ದೂರವೇ. ಹೀಗಾಗಿಯೇ ಅವರು ಜನತೆಯ ಪ್ರೀತಿ, ವಿಶ್ವಾಸ, ಗೌರವಗಳಿಗೆ ಪಾತ್ರರಾಗಿದ್ದರು. ರೈತ ಸಂಘ ಅಧ್ಯಕ್ಷತೆಯ ಪಟ್ಟವನ್ನು ರುದ್ರಪ್ಪನವರಿಗೆ ಕಟ್ಟಲು ಇದೂ ಮುಖ್ಯ ಕಾರಣವಾಗಿರಬಹುದು. ರುದ್ರಪ್ಪನವರದು ಬಹಳ ಸೌಮ್ಯ ಮತ್ತು ಶಾಂತ ಸ್ವಭಾವ. ಪ್ರೊ.ನಂಜುಂಡಸ್ವಾಮಿ ಅವರ ಭಾಷಣಗಳು ಕೆಂಡದುಂಡೆಯನ್ನೇ ಉಗುಳುತ್ತಿದ್ದರೆ ರುದ್ರಪ್ಪನವರ ಭಾಷಣಗಳು ಅದಕ್ಕೆ ತೀರ ತದ್ವಿರುದ್ಧ. ಹಾಗೆ ನೋಡಿದರೆ ರುದ್ರಪ್ಪನವರು ಭಾಷಣಕಾರರೇ ಆಗಿರಲಿಲ್ಲ. ತಮಿಳ್ನಾಡಿನ ನಾರಾಯಣಸ್ವಾಮಿ ನಾಯ್ಡು ಅವರಂತೆ ಅಥವಾ ಉತ್ತರ ಭಾರತದಿಂದ ಬರುತ್ತಿದ್ದ ಟಿಕಾಯತ್ ಮೊದಲಾದ ರೈತ ನಾಯಕರಂತೆ ರುದ್ರಪ್ಪನವರು ರೈತರನ್ನು ಬಡಿದೇಳಿಸುವಂತೆ ಮಾತನಾಡುತ್ತಿರಲಿಲ್ಲ. ಅಂಥ ಮಾತುಗಾರಿಕೆಯೂ ಅವರಿಗೆ ತಿಳಿದಿರಲಿಲ್ಲ. ಸುಂದರೇಶ್ ಅವರ ಉಕ್ಕುವ ಯೌವನ ಮತ್ತು ಪಟ್ಟುಬಿಡದೆ ಕೆಲಸ ಮಾಡುವ ಕ್ರಿಯಾಶಕ್ತಿ ಅಥವಾ ಕಡಿದಾಳು ಶಾಮಣ್ಣನವರ ವ್ಯಂಗ್ಯವಿಲ್ಲದ ತಮಾಷೆ -ಇವು ಯಾವುವೂ ರುದ್ರಪ್ಪನವರಲ್ಲಿ ಇರಲಿಲ್ಲ. ಪ್ರೊ.ನಂಜುಂಡಸ್ವಾಮಿಯವರಂತೆ ಜಗತ್ತಿನ ಎಲ್ಲ ಸಂಗತಿಗಳನ್ನು ರುದ್ರಪ್ಪ ಬಲ್ಲವರಾಗಿರಲಿಲ್ಲ. ಮಾಕ್ಸರ್್, ಲೋಹಿಯಾ, ಪೆರಿಯಾರ್, ಗೋಪಾಲಗೌಡ ಇತ್ಯಾದಿ ಚಿಂತಕರನ್ನು ಅರೆದುಕುಡಿದಿದ್ದ ನಂಜುಂಡಸ್ವಾಮಿಯವರ ಮುಂದೆ ರುದ್ರಪ್ಪನವರು ಕಳಾಹೀನರಾಗಿಯೇ ಕಾಣಿಸುತ್ತಿದ್ದರು. ಅವರ ಮಾತಿನಲ್ಲಿ ಗುಡುಗಾಗಲಿ, ಸಿಡಿಲಾಗಲಿ, ತತ್ವಚಿಂತನೆಯಾಗಲಿ ಇರಲಿಲ್ಲ. ಆದರೆ ರುದ್ರಪ್ಪನವರ ಜೀವನಾನುಭವ ಸಮೃದ್ಧವಾಗಿತ್ತು. ಅವರ ಲೋಕಜ್ಞಾನ ಅಪಾರವಾಗಿತ್ತು. ಅಹಿಂಸಾ ತತ್ವದಲ್ಲಿ ಅವರಿಟ್ಟ ನಂಬಿಕೆ ಅಚಲವಾಗಿತ್ತು. ಗ್ರಾಮೀಣ ಜನತೆಯ ಸರಳ ಜೀವನವನ್ನೇ ಮೈದುಂಬಿಕೊಂಡಂತಿದ್ದ ರುದ್ರಪ್ಪನವರನ್ನು ನೋಡಿದ ಕೂಡಲೇ ಎಂಥವರಿಗೂ ವಿಶ್ವಾಸ ಹುಟ್ಟಿಬಿಡುತ್ತಿತ್ತು. ಅವರ ಶಾಂತ ಸ್ವಭಾವ ಇಡೀ ರೈತ ಚಳವಳಿಯನ್ನು ಹಿಂಸೆಯ ಹಾದಿ ಹಿಡಿಯದಂತೆ ನೋಡಿಕೊಂಡಿತ್ತು. ಎಂಥ ಸಂದರ್ಭದಲ್ಲಿಯೂ ರುದ್ರಪ್ಪನವರು ಹಿಂಸೆಯನ್ನು ಒಪ್ಪುತ್ತಿರಲಿಲ್ಲ; ಪ್ರಚೋದಿಸುತ್ತಿರಲಿಲ್ಲ. ರೈತರನ್ನು ಪೊಲೀಸರು ಹಿಂಸಿಸಿದಾಗ, ದೂರದೂರದ ಜೈಲುಗಳಿಗೆ ಕಳುಹಿಸಿದಾಗ, ಪ್ರೊ.ನಂಜುಂಡಸ್ವಾಮಿ ಮತ್ತು ಪ್ರೊ.ರವಿವರ್ಮ ಕುಮಾರ್ ಅವರಂಥವರನ್ನೂ ಪೊಲೀಸ್ ಠಾಣೆಯಲ್ಲಿ ಬಟ್ಟೆಬಿಚ್ಚಿಸಿ ಅವಮಾನಗೊಳಿಸಿದ ಸಂದರ್ಭದಲ್ಲಿಯೂ ರುದ್ರಪ್ಪನವರು ಉದ್ರೇಕಗೊಂಡು ಹಿಂಸೆಯನ್ನು ಪ್ರಚೋದಿಸಲಿಲ್ಲ. ಶಾಂತರೀತಿಯಲ್ಲಿಯೇ ದಿಟ್ಟವಾಗಿ ಪ್ರತಿಭಟಿಸುವ ಅವರ ಛಲ ಮತ್ತು ಮಾರ್ಗಗಳು ರೈತ ಸಮುದಾಯವನ್ನು ನಿಯಂತ್ರಣದಲ್ಲಿಟ್ಟಿದ್ದವು ಮತ್ತು ರೈತ ಚಳವಳಿಯನ್ನು ಮುನ್ನಡೆಸಿದ್ದವು. ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ರೈತ ಚಳವಳಿಯ ಅದ್ಭುತ ಶಕ್ತಿಗೆ ಬೆಚ್ಚಿಬಿದ್ದು, ಪೊಲೀಸರ ನೆರವಿಂದ ಅಥವಾ ಅನ್ಯ ಮಾರ್ಗಗಳಿಂದ ಈ ಚಳವಳಿಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಾಗ ಸಂಧಾನ ಮಾರ್ಗವೊಂದು ಉಳಿದಿರುವ ಆಯ್ಕೆ ಎಂದು ತೀರ್ಮಾನಿಸಿದರು. ಆಗ ಸಂಧಾನಕ್ಕೆ, ಗುಂಡೂರಾವ್ ಅವರ ಸಂಪುಟದಲ್ಲಿದ್ದ ವೀರಪ್ಪ ಮೊಯ್ಲಿ, ಕಾಗೋಡು ತಿಮ್ಮಪ್ಪ ಮೊದಲಾದವರು ಸಂಧಾನಕಾರರಾಗಿ ರೈತ ಸಂಘದ ಬಳಿಗೆ ಬಂದಾಗ ಅವರಿಗೆ ಮೊದಲು ಕಂಡದ್ದು ರೈತ ಸಂಘದ ಅಧ್ಯಕ್ಷ ರುದ್ರಪ್ಪನವರೇ. ನಂಜುಂಡಸ್ವಾಮಿ, ಸುಂದರೇಶ್ ಮೊದಲಾದವರ ಹತ್ತಿರ ಸುಳಿಯುವ ಧೈರ್ಯ ಯಾವ ಮಂತ್ರಿಗೂ ಇರಲಿಲ್ಲ. ಅಲ್ಲದೆ ನಂಜುಂಡಸ್ವಾಮಿಯವರ ವಾದಕ್ಕೆ ಪ್ರತಿವಾದ ಒಡ್ಡುವ ಭೌದ್ಧಿಕ ಸಾಮಥ್ರ್ಯವೂ ಅನೇಕರಿಗೆ ಇರಲಿಲ್ಲ. ಕಡ್ಡಿ ಮುರಿದಂತೆ ಮಾತನಾಡುತ್ತಿದ್ದ ನಂಜುಂಡಸ್ವಾಮಿಯವರ ಮುಂದೆ ಯಾವ ಸಂಧಾನವೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ನಂಜುಂಡಸ್ವಾಮಿ, ಸುಂದರೇಶ್ ಮೊದಲಾದ ನಾಯಕರು ಹಳ್ಳಿಹಳ್ಳಿಯ ಸುತ್ತಾಟದಲ್ಲಿ ಯಾವ ಸಂಧಾನಕಾರರ ಕೈಗೂ ಸಿಕ್ಕುವುದು ಕಷ್ಟವಾಗುತ್ತಿತ್ತು. ಅಥವಾ ಜೈಲುಗಳಲ್ಲಿರುತ್ತಿದ್ದ ಅವರೊಂದಿಗೆ ಸಂಧಾನ ನಡೆಸುವುದು ಸುಲಭವೂ ಆಗುತ್ತಿರಲಿಲ್ಲ. ಇಂಥ ಸಂದರ್ಭಗಳಲ್ಲೆಲ್ಲ ಸಮಾಧಾನದಿಂದ ಮಾತನಾಡುತ್ತಿದ್ದ, ಆದರೆ ರೈತರ ಬಗ್ಗೆ ಸಂಪೂರ್ಣ ಕಾಳಜಿಯಿಂದ, ಕಳಕಳಿಯಿಂದ, ಅವರ ಬೇಡಿಕೆಗಳ ಬಗ್ಗೆ ಪೂರ್ಣ ಅರಿವನ್ನಿಟ್ಟುಕೊಂಡು ಮಾತನಾಡುತ್ತಿದ್ದ ಏಕೈಕ ‘ಯಜಮಾನ’ರೆಂದರೆ ರುದ್ರಪ್ಪನವರೇ. ರುದ್ರಪ್ಪನವರನ್ನು ರೈತಸಂಘದಲ್ಲಿ ‘ಯಜಮಾನ’ರೆಂದೇ ಕರೆಯುತ್ತಿದ್ದರು. ಸಮಾಜವಾದೀ ಸಿದ್ಧಾಂತದಲ್ಲಿ ನಂಬಿಕೆಯಿಟ್ಟ, ಊಳಿಗಮಾನ್ಯ ಪದ್ಧತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ಅನೇಕರು ರುದ್ರಪ್ಪನವರ ವಿಚಾರದಲ್ಲಿ ಮಾತ್ರ ಉದಾರಿಗಳಾಗಿದ್ದರು. ಪ್ರೀತಿಯಿಂದ ಯಜಮಾನರೆಂದೇ ಕರೆಯುತ್ತಿದ್ದರು. ಹಾಸನದ ದತ್ತ, ವೆಂಕಟೇಶಮೂರ್ತಿ ಎಲ್ಲರಿಗೂ ಈ ಯಜಮಾನರ ಬಗ್ಗೆ ತುಂಬ ಪ್ರೀತಿಯಿತ್ತು. ಅಂಥ ಪ್ರೀತಿ ಗೌರವಗಳನ್ನು ಅವರು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು. ಸಂಧಾನಕಾರರು ಬಂದಾಗ ಪ್ರೊಫೆಸರ್ ಸೇರಿದಂತೆ ಹಲವು ರೈತಮುಖಂಡರಿಗೆ, ಯಜಮಾನರು ಹೇಗೆ ನಿಭಾಯಿಸುತ್ತಾರೊ, ಎಲ್ಲಿ ತಾವು ಸಿಕ್ಕಿಬಿದ್ದು ಕೈಕಟ್ಟಿಸಿಕೊಳ್ಳುತ್ತಾರೋ ಎಂಬ ಬಗ್ಗೆ ಒಂದು ಬಗೆಯ ಅಳುಕು ಇರುತ್ತಿತ್ತು. ಆದರೆ ರುದ್ರಪ್ಪನವರು ರೈತಸಂಘದ ಹಿತಕ್ಕೆ ಧಕ್ಕೆ ಬರುವಂತೆ ಯಾವ ಸಂದರ್ಭದಲ್ಲೂ ನಡೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ತಮ್ಮ ನಿಲುವಿನಿಂದ ಹಿಂದೆ ಸರಿದು ಸರ್ಕಾರದ ಸಂಧಾನ ಬಲೆಯಲ್ಲಿ ಬೀಳಲಿಲ್ಲ. ತಾವು ಏಕಾಂಗಿಯಾಗಿದ್ದಾಗಲೂ ರುದ್ರಪ್ಪನವರ ವಿಚಾರದಲ್ಲಾಗಲಿ, ನಿಲುವಿನಲ್ಲಾಗಲೀ ಏರುಪೇರುಗಳಾಗುತ್ತಿರಲಿಲ್ಲ. ಸಂಧಾನಕಾರರ ಮಾತಿನ ಮೋಡಿ ಹೇಗೆ ಇದ್ದರೂ ರುದ್ರಪ್ಪನವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲವನ್ನೂ ಗೆದ್ದುಬಿಡುತ್ತಿತ್ತು. ಈ ಸರಳತೆ ಮತ್ತು ಪ್ರಾಮಾಣಿಕತೆಗಳೇ ರೈತಸಂಘದ ಶಕ್ತಿಯಾಗಿದ್ದವು. ರೈತ ಮುಖಂಡರಲ್ಲಿ ಕೆಲವರು ಒರಟರಂತೆ ಮಾತನಾಡಿದರೂ, ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಗಾಂಧಿ, ಲೋಹಿಯಾ, ಗೋಪಾಲಗೌಡ ಹೀಗೆ ಅನೇಕರ ತತ್ವ ಸಿದ್ಧಾಂತಗಳು ರೈತ ಸಂಘದ ಬೆನ್ನಿಗಿದ್ದದ್ದಕ್ಕೆ ಈ ರೈತಮುಖಂಡರೇ ಕಾರಣ. ರುದ್ರಪ್ಪನವರು ಗಾಂಧಿಯನ್ನು ಇಡಿಯಾಗಿಯೇ ತಂದು ರೈತಸಂಘಕ್ಕೆ ಸೇರಿಸಿದ್ದರು. ಸಹನೆ, ಶಾಂತಿ, ಸತ್ಯಾಗ್ರಹ ಇವುಗಳನ್ನು ರುದ್ರಪ್ಪನವರು ಎಂದೂ ಬಿಟ್ಟುಕೊಡಲಿಲ್ಲ. ರೈತ ಸಂಘದ ಪಾದಯಾತ್ರೆಗಳಲ್ಲಿ ಭಾಗವಹಿಸಲು ರುದ್ರಪ್ಪನವರಿಗೆ ತ್ರಾಣವಿರಲಿಲ್ಲ. ಅವರಾಗಲೇ ವೃದ್ಧಾಪ್ಯದಲ್ಲಿದ್ದರು. ಹೀಗಾಗಿ ರೈತರ ಜೊತೆಜೊತೆಗೆ ಮೊದಲಿನಿಂದ ಕೊನೆಯವರೆಗೆ ಪಾದಯಾತ್ರೆಗಳಲ್ಲಿ ಹೆಜ್ಜೆಹಾಕುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಆರಂಭದಲ್ಲಿದ್ದು ರೈತರಿಗೆ ನೈತಿಕ ಧೈರ್ಯ ತುಂಬುತ್ತಿದ್ದ ರುದ್ರಪ್ಪನವರು ಕೊನೆಯಲ್ಲಿ ಬಂದು ಕೂಡಿಕೊಳ್ಳುತ್ತಿದ್ದರು. ರುದ್ರಪ್ಪನವರ ಉಪಸ್ಥಿತಿಯೇ ರೈತರಿಗೆ ಹುಮ್ಮಸ್ಸನ್ನು, ಘನತೆಯನ್ನು ತಂದುಕೊಡುತ್ತಿತ್ತು. ಇತರ ರೈತ ಮುಖಂಡರೂ ರುದ್ರಪ್ಪನವರ ಈ ಉಪಸ್ಥಿತಿಯನ್ನು ಗೌರವದಿಂದ ನೋಡುತ್ತಿದ್ದರು. ರೈತರ ವಿಭಿನ್ನ ಹೋರಾಟಗಳಲ್ಲಿ ಭಾಗವಹಿಸಿ ಜೈಲು ಸೇರುವುದು ಕೂಡಾ ಅವರ ಆರೋಗ್ಯದ ದೃಷ್ಟಿಯಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ರೈತಸಂಘದ ‘ಯಜಮಾನ’ರಾಗಿ ಅವರು ಜೈಲಿನ ಹೊರಗಿರಲಿ, ಒಳಗಿರಲಿ ರೈತಸಮುದಾಯದ ಜೊತೆಯಲ್ಲಿದ್ದರು. ಈ ನಂಬಿಕೆ ಇಡೀ ರೈತ ಸಮುದಾಯದಲ್ಲಿತ್ತು. ಈ ನಂಬಿಕೆಯೇ ಚಳವಳಿಯನ್ನು ಮುನ್ನಡೆಸಿತ್ತು. ರುದ್ರಪ್ಪನವರು ತಳೆಯುತ್ತಿದ್ದ ಶಾಂತಿಯ ನಿಲುವು ಕೆಲವು ಬಾರಿ ಎಳೆಯ ತಲೆಮಾರಿನ ತರುಣರನ್ನು ಸಿಟ್ಟಿಗೇಳಿಸುತ್ತಿತ್ತು. ಹೀಗಿದ್ದರೆ ಸರ್ಕಾರವನ್ನು ಮಣಿಸುವುದು ಸಾಧ್ಯವಾಗುವುದಿಲ್ಲ. ಇನ್ನೆಷ್ಟು ವರ್ಷಗಳ ಕಾಲ ಚಳವಳಿಗಳನ್ನೇ ಮಾಡಿಕೊಂಡಿರುವುದು ಎಂದು ರೇಗುವವರೂ ಇದ್ದರು. ಆದರೆ ಈ ರೇಗಾಟ, ಕೂಗಾಟಗಳೆಲ್ಲ ತಣ್ಣಗಾದ ಮೇಲೆ ‘ಯಜಮಾನರ’ ನಿಲುವಿಗೆ ಎಲ್ಲರೂ ಬದ್ಧರಾಗುತ್ತಿದ್ದರು. ಯಜಮಾನರ ನಿಲುವಿನ ಹಿಂದೆ ಪ್ರೊ.ನಂಜುಂಡಸ್ವಾಮಿಯವರ ಚಿಂತನೆಯೂ ಇರುತ್ತಿತ್ತು. ಸುಂದರೇಶ್ ಮತ್ತು ಶಾಮಣ್ಣನವರ ಕ್ರಿಯಾಶೀಲತೆಯೂ ಇರುತ್ತಿತ್ತು. ದತ್ತ, ವೆಂಕಟೇಶಮೂರ್ತಿ ಅವರ ಯೌವನದ ಕಸುವೂ ಇರುತ್ತಿತ್ತು. ಕರ್ನಾಟಕದ ಬಹುದೊಡ್ಡ ಚಾರಿತ್ರಿಕ ಚಳವಳಿಯ ನೇತೃತ್ವವನ್ನು ವಹಿಸುವ ಮೂಲಕ ರುದ್ರಪ್ಪನವರ ವ್ಯಕ್ತಿತ್ವವೂ ಹಿಗ್ಗಿತು. ಅವರ ಸುತ್ತ ಪ್ರಭಾವಳಿಯೊಂದು ಇದ್ದರೆ ಅದು ಈ ಚಳವಳಿಯಿಂದಲೇ ಬಂದದ್ದು. ಇಂಥ ಪ್ರಭಾವಳಿಯನ್ನು ಪಡೆದೂ ರುದ್ರಪ್ಪನವರು ಬೀಗಲಿಲ್ಲ. ಅಷ್ಟು ಸರಳತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ತನ್ನನ್ನು ಒಬ್ಬ ಸಾಮಾನ್ಯ ರೈತನ ಪ್ರತಿನಿಧಿಯೆಂದು ಪ್ರಾಮಾಣಿಕವಾಗಿ ಭಾವಿಸುತ್ತಿದ್ದ ರುದ್ರಪ್ಪನವರು ಕೊನೆಯವರೆಗೂ ಹಾಗೆಯೇ ನಡೆದುಕೊಂಡರು; ರೈತ ಸಂಘವನ್ನು ಅದೇ ನಂಬಿಕೆಯಿಂದ ಮುನ್ನಡೆಸಿದರು.  ]]>

‍ಲೇಖಕರು G

May 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್ ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು...

2 ಪ್ರತಿಕ್ರಿಯೆಗಳು

  1. nepedevaraj

    jiipi basavarajravra rudrappanavara bagegina baraha nannantaha kayryakartara meele beeirida parinama bahudoddadu. jiipi basavaraju shivamoggada prajaavaani varadigaararaagiraddiddare chalavali ee pramaanadlli beleyuttirlillavooo eenoo? rudrappanvru nammellara palige yajamanaragiddaruu aroogyayuta manassina pragati pararaneekaru ooligamanya vyavsteya rudrappa relavent aagaballare emba anumaana vyaktapadisidaru. rudrappanavara talmeya bhashanagalallina satvikateglu haguu shudda manassu ella anumaanaglige uttaravaguttittu. ee sandarbada avantaragalalli tumbaa tumba prastutavenisuttaare. ugra svaruupada chalavali emba namankita gandhi phootoo hididukondee chalavali ruupisida snghatanege beedavaagittu,

    ಪ್ರತಿಕ್ರಿಯೆ
  2. mahadev

    ಎಲ್ಲರನ್ನೊಳಗೊಂಡ ಒಂದು ಮಹತ್ತಾದ ಮೌನ ಸಂಪತ್ತೊಂದನ್ನು ವಿವರಿಸಿದ್ದೀರಿ… ಸಾರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: