ಜಿ ಪಿ ಬಸವರಾಜು ಕಾಲ೦ : ಗೆಳೆಯ ಕವಿತೀರ್ಥ-ಶಿವತೀರ್ಥ

-ಜಿ.ಪಿ.ಬಸವರಾಜು

ಕಾಲವನ್ನು ಮೆಟ್ಟಿನಿಂತವರಂತೆ ಗೆಳೆಯರೊಂದಿಗೆ ಹರಟುತ್ತ, ಸುಖಿಸುತ್ತ, ಪದ್ಯವನ್ನು ಓದುತ್ತ, ಲೋಕವನ್ನು ಗೇಲಿಮಾಡುತ್ತ ಸದಾ ಹಸನ್ಮುಖಿಯಾಗಿರುತ್ತ, ತಮ್ಮ ಸುತ್ತ ನಗೆಯ ತರಂಗಗಳನ್ನು ಏಳಿಸುತ್ತಿದ್ದ ಕವಿ ಶಿವತೀರ್ಥನ್ ಅವರನ್ನು ಕೊನೆಗೂ ಕಾಲ ನುಂಗಿ ಹಾಕಿದೆ. ಅದಮ್ಯ ಜೀವಚೈತನ್ಯಕ್ಕೆ ರೂಪಕದಂತಿದ್ದ, ಕನರ್ಾಟಕದ ಎಲ್ಲ ಬರಹಗಾರರ ಆತ್ಮೀಯ ಸಖನಂತಿದ್ದ, ಮಾತಿನಲ್ಲಿಯೇ ಮೋಡಿಹಾಕುತ್ತ ಹಗಲು ರಾತ್ರಿಗಳನ್ನು ಮರೆತಂತಿದ್ದ ಈ ಕವಿಗೆ ಮಾತು ಕೈಕೊಟ್ಟು ಮೂರ್ನಾಲ್ಕು ವರ್ಷವಾಗಿತ್ತು. ಸದಾ ಪುಟಿಯುತ್ತಿದ್ದ ಈ ಚೈತನ್ಯವನ್ನು ಹಿಡಿದಿಟ್ಟು ತನ್ನ ಸೇಡನ್ನು ತೀರಿಸಿಕೊಳ್ಳುತ್ತಿದ್ದ ಈ ಕಾಲದ ಮುಂದೆ ಶಿವತೀರ್ಥನ್ ಅಸಹಾಯಕರಾಗಿದ್ದರು. ಹೊಳೆಯುವ ಎರಡು ಕಣ್ಣುಗುಡ್ಡೆಗಳನ್ನು ಆಡಿಸುವುದರ ಹೊರತಾಗಿ ಬೇರೇನೂ ಮಾಡಲಾಗದ ಸ್ಥಿತಿಯಲ್ಲಿದ್ದ ಈ ತೀರ್ಥನ್ ಸ್ಮೃತಿ ಎಷ್ಟು ಗಟ್ಟಿಮುಟ್ಟಾಗಿತ್ತೊ ಹೇಳುವುದು ಕಷ್ಟ. ಆದರೂ ಜೀವನಪ್ರೀತಿಯ ಆರಾಧಕ ಸಂತನಂತೆ ಈತ ಕಳೆದ ಮೂರ್ನಾಲ್ಕು ವರ್ಷಗಳು ಶಿವತೀರ್ಥನ್ ಗೆಳೆಯರಿಗೆ ಮರೆಯಲಾಗದ ಒಂದು ದೊಡ್ಡ ಯಾತನೆಯ ಪರ್ವ. ಶಿವತೀರ್ಥನ್ ಪದ್ಯವನ್ನು, ಮದ್ಯವನ್ನು ಗಾಢವಾಗಿ ಪ್ರೀತಿಸಿದವರು. ಬದುಕನ್ನು, ಗೆಳೆಯರ ಬಳಗವನ್ನು ಅಷ್ಟೇ ಉತ್ಕಟವಾಗಿ ಆಲಂಗಿಸಿಕೊಂಡವರು. ತೀವ್ರ ಕುಟುಂಬ ವ್ಯಾಮೋಹಿಯಾಗಿದ್ದ ಈ ಕವಿ, ತುಂಬು ಸಂಸಾರವನ್ನು ಕಂಡವರು; ಪ್ರೀತಿಸುವ ಮೂವರು ಮಕ್ಕಳು, ಮೊಮ್ಮಕ್ಕಳು, ಪತ್ನಿ ಇವರೆಲ್ಲರ ನಡುವೆಯೇ ಜಗತ್ತನ್ನು ಪ್ರೀತಿಸಿದವರು; ಬದುಕನ್ನು ಉತ್ಕಟವಾಗಿ ಆರಾಧಿಸಿದವರು; ಕೊನೆಯ ಹನಿಯವರೆಗೂ ಹೀರುವ ಉನ್ಮಾದತೆಯನ್ನು ಪಡೆದವರು. ಶಿವತೀರ್ಥನ್ ಅವರ ಮಾತುಗಳು ಪದ್ಯದಂತೆಯೇ ಇರುತ್ತಿದ್ದವು. ತಮ್ಮ ಮಾತಿಗೆ ತಾವೇ ಮೋಹಿತರಾಗಿ ಅದನ್ನವರು ಸದಾ ಹಿಡಿದೆಳೆಯುತ್ತಿದ್ದ ಕಾರಣ ಆ ಮಾತುಗಳು ಸೃಜಿಸುತ್ತಿದ್ದ ಕಾವ್ಯ ತನ್ನ ಕಾವನ್ನು, ಬೆಚ್ಚನೆಯ ಗುಣವನ್ನು ಕಳೆದುಕೊಂಡು ಕೇವಲ ಪ್ರಾಸದ ಜೋಡಣೆಯಾಗಿ ಶಿವತೀರ್ಥನ್ ಅವರನ್ನೇ ಗೇಲಿಗೆ ಒಳಗುಮಾಡುತ್ತಿದ್ದವು. ಆದರೂ ಅಧೀರರಾಗದೆ, ಮಿತ್ರರಿಂದ ದೂರವಾಗದೆ ನಗುತ್ತ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಉಳಿಸಿಕೊಂಡವರು ಅವರು. ದೊಡ್ಡ ಗಂಟಲಿನ ಶಿವತೀರ್ಥನ್ ಪದ್ಯವನ್ನು ಓದುತ್ತಿದ್ದ ರೀತಿ ಬಹಳ ಆಕರ್ಷಕವಾಗಿತ್ತು. ಕಾವ್ಯದ ಲಯ ಗತಿಗಳನ್ನು ಅರಿತು, ಏರಿಳಿತಗಳಿಗೆ ಧ್ವನಿಯನ್ನು ಹಿಗ್ಗಿಸಿ ಕುಗ್ಗಿಸಿ, ಅರ್ಥ-ಭಾವಗಳನ್ನು ಕೇಳುವವರ ಹೃದಯಗಳಿಗೆ ಭಟ್ಟಿ ಇಳಿಸುವವರಂತೆ ತನ್ಮಯತೆಯಿಂದ ಶಿವತೀರ್ಥನ್ ಕವಿತೆಯನ್ನು ಓದುತ್ತಿದ್ದರೆ ಕೇಳುವವರು ಮಾತಿಲ್ಲದೆ ಮೈಮರೆಯಬೇಕಾಗುತ್ತಿತ್ತು. ಸಭೆ, ಸಮಾರಂಭ, ಅಷ್ಟೇಕೆ ಖಾಸಗೀ ಕೂಟಗಳು, ಗೆಳೆಯರು ನಿಂತ ಕೂಡುರಸ್ತೆಗಳು, ಪಾಕರ್ುಗಳು ಎಲ್ಲಿಯಾದರೂ ಸರಿ ಅವರ ಪದ್ಯ ಓದುವ ಉತ್ಸಾಹ ಕಡಿಮೆಯಾಗುತ್ತಿರಲಿಲ್ಲ. ಅವರ ಕಾವ್ಯಶ್ರದ್ಧೆ ಮತ್ತು ನಿಷ್ಠೆಗಳು ಪ್ರಶ್ನಾತೀತವಾಗಿದ್ದವು. ಅವರ ಸ್ನೇಹನಿಷ್ಠೆಯೂ ಅಷ್ಟೇ ಪ್ರಶ್ನಾತೀತ ಮತ್ತು ನಿಷ್ಕಲ್ಮಷ. ಅವರಿಗೆ ಯಾರು ಗೆಳೆಯರು, ಯಾರಲ್ಲ ಎನ್ನವಂತೆ, ಕನರ್ಾಟಕದ ಉದ್ದಗಲಕ್ಕೂ ತನ್ನ ಬಾಹುಗಳನ್ನು ಚಾಚಿ ಈ ಗೆಳೆಯ ತೋರುತ್ತಿದ್ದ ಪ್ರೀತಿ ಹೋಲಿಕೆಗೆ ಸಿಕ್ಕುವಂಥದ್ದಲ್ಲ. ಮಿತ್ರರಿಗಾಗಿ ಎಂಥದನ್ನೂ ಮಾಡಲು ಮುಂದಾಗುತ್ತಿದ್ದ, ಮಹಾತ್ಯಾಗಿಯಂತೆ ಕಾಣಿಸುತ್ತಿದ್ದ ಶಿವತೀರ್ಥನ್ ಮಹಾ ಉದಾರಿಯೂ ಆಗಿದ್ದರು. ‘ಬಿಟ್ಟು ಹೊರಡಬೇಕೆ/ ಈ ಮನೆಯ-ಅದಕ್ಕಂಟಿರುವ ನಂಟು/ ಮನೆಯಿರುವ ಮೊಹಲ, ಮೊಹಲಗಳಿರುವ ಊರು/ ಊರು ಕೇರಿ ಸೇರಿ ಆಗಿರುವ ನಗರ/ ನಗರದಲ್ಲಿ ಗರಿಗಟ್ಟಿರುವ ನಾಗರಿಕತೆ/ ನರನರದಲ್ಲಿ ಹರಿವ ಸಂಸ್ಕೃತಿ/ ಅದರ ಹೆಸರಿನಲ್ಲಿ ಉಸಿರಾಡುವ ದೇಶ/ ಅದನ್ನಾವರಿಸಿರುವ ಈ ಭಾವಕೋಶ/ ಆಕಾಶ/ ತೊರೆದು ಹೊರಡಬೇಕೆ?’ ಇಂಥ ಪ್ರಶ್ನೆಗಳಿದ್ದಾಗಲೂ ಈ ಕವಿ ಹೊರಟು ಹೋದರು. ನಿಜ ಅರ್ಥದಲ್ಲಿನ ಅಪಾರವನ್ನು ತೊರೆದು ಹೋದರು. ಅಲೆಮಾರಿ ಬೆಸ್ತ ಕುಟುಂಬದಿಂದ ಬಂದ ಶಿವತೀರ್ಥನ್, ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಮೈಸೂರಿನ ಗಂಗೋತ್ರಿಯವರೆಗೆ ನಡೆದು ಬಂದದ್ದೇ ಒಂದು ರೋಚಕ ಅಧ್ಯಾಯ. ಸಾಕುತಂದೆ ಮತ್ತು ಸಾಕುತಾಯಿಯ ಅದಮ್ಯ ಪ್ರೀತಿಯನ್ನು ಉಂಡುಬೆಳೆದ ಶಿವತೀರ್ಥನ್ ಪ್ರೀತಿಯ ಸಾಗರವನ್ನೇ ತಮ್ಮೊಳಗೆ ತುಂಬಿಕೊಂಡಿದ್ದರು. ಎಲ್ಲರಿಗೂ ಅದನ್ನೇ ಹಂಚಿದರು.

ಇಂಥ ಹಿನ್ನೆಲೆಯ ಕವಿ ಎಡಪಂಥೀಯ ಬಂಡಾಯಗಾರನಾಗುವುದರಲ್ಲಿ ಸೋಜಿಗವೇನೂ ಇಲ್ಲ. ಅಧ್ಯಾಪಕರಾಗಿ ಮೈಸೂರಿನಲ್ಲಿ ನೆಲೆಸಿದ್ದ ಶಿವತೀರ್ಥನ್ ನಿರಂತರ ಬಂಡಾಯಗಾರ. ಎಲ್ಲ ಹೋರಾಟಗಳಲ್ಲೂ ಅವರು ಮುಂಚೂಣಿಯಲ್ಲಿಯೇ ಇರುತ್ತಿದ್ದರು. ಒಂದು ಬಗೆಯ ಹುಂಬತನ, ವೀರಾವೇಶ, ಮುಗ್ಧತೆ, ಹಳ್ಳಿಗನ ಒರಟುತನಗಳ ಶಿವತೀರ್ಥನ್ ಕೆಲವೊಮ್ಮೆ ಏಕಾಂಗಿಯಾಗಿಯೂ ಸತ್ಯಾಗ್ರಹ ನಡೆಸಿದ ಸಂದರ್ಭಗಳೂ ಇವೆ. ಗಂಗೋತ್ರಿಯ ಗಾಂಧೀ ಪ್ರತಿಮೆಯ ಮುಂದೆ ಒಬ್ಬರೇ ಕುಳಿತು ಶಿವತೀರ್ಥನ್ ಸತ್ಯಾಗ್ರಹ ನಡೆಸಿದ್ದರು. ಮೈಸೂರಿನಲ್ಲಿ ಪ್ಲೇಗಿನ ಭೀತಿ ಇದ್ದ ಸಂದರ್ಭದಲ್ಲಿಯೂ ದಸರಾ ವೈಭವದಿಂದ ನಡೆಯುತ್ತಿರುವುದನ್ನು ನೋಡಿ ಸಿಟ್ಟಿಗೆದ್ದಿದ್ದ ಶಿವತೀರ್ಥನ್, ಜಗನ್ಮೋಹನ ಅರಮನೆಯಲ್ಲಿ ಕವಿಗೋಷ್ಠಿ ನಡೆಯುತ್ತಿದ್ದಾಗ ವೇದಿಕೆ ಏರಿ ಘೋಷಣೆ ಕೂಗಿ ತಮ್ಮ ಪ್ರತಿಭಟನೆಯನ್ನು, ಸಿಟ್ಟನ್ನು ತೋರಿಸಿದ್ದರು. ಶಿವತೀರ್ಥನ್ ಬಂಡಾಯ ಸಹಜವಾಗಿಯೇ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಂಡಾಯಗಾರ ಅಂಥದಕ್ಕೆಲ್ಲ ಎಂದೂ ಸೊಪ್ಪು ಹಾಕಿದ್ದೇ ಇಲ್ಲ. ‘ಸೊಪ್ಪೂ ಹಾಕುವುದಿಲ್ಲ, ಉಪ್ಪೂ ಹಾಕುವುದಿಲ್ಲ’ ಎಂದು ಪ್ರಾಸ ಕೂಡಿಸಿ ನಗೆಯ ಅಲೆಯನ್ನು ಏಳಿಸಿ ಎಂಥ ಸಂದರ್ಭವನ್ನೂ ತಿಳಿಹಾಸ್ಯಕ್ಕೆ ತಿರುಗಿಸುವ ಗುಣ ಅವರ ರಕ್ತಕ್ಕಂಟಿಕೊಂಡಿತ್ತು. ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸೇರಿದಂತೆ ಅನೇಕ ರಾಜಕಾರಣಿಗಳ ಸಖ್ಯ, ಒಡನಾಟ ಇದ್ದರೂ, ರಾಜಕೀಯದ ಅಂಚಿನಲ್ಲಿ ನಿಭರ್ಿಡೆಯಿಂದ ಓಡಾಡಿದರೂ, ಶಿವತೀರ್ಥನ್ ರಾಜಕೀಯವನ್ನು ಎಂದೂ ಪ್ರವೇಶಿಸಲಿಲ್ಲ. ಅವರು ಅದನ್ನು ಬಯಸಲೂ ಇಲ್ಲ. ಸ್ನೇಹದಲ್ಲಿ ಅವರಿಗೆ ಯಾವುದೂ ವಜ್ರ್ಯವಾಗಿರಲಿಲ್ಲ; ಯಾರನ್ನೂ ಅವರು ಸ್ನೇಹವಲಯದಿಂದ ದೂರವಿಟ್ಟಿರಲಿಲ್ಲ. ನವ್ಯಚಳವಳಿಯ ಇಳಿಹೊತ್ತಿನಲ್ಲಿ ತಮ್ಮ ಮೊದಲ ಕವನ ಸಂಕಲನ (1979ರಲ್ಲಿ) ‘ಬೆಸ್ತ’ವನ್ನು ಪ್ರಕಟಿಸಿದ ಶಿವತೀರ್ಥನ್ ನವ್ಯದ ಸಖ್ಯವನ್ನು ಅರ್ಥಪೂರ್ಣತೆಯ ಕಡೆಗೆ ತಿರುಗಿಸಿದವರು. ಭಾಷೆಯ ನಿಖರತೆ, ಸ್ಫಟಿಕ ಸ್ಪಷ್ಟತೆ, ಪ್ರತಿಮಾ ವಿಧಾನ, ಕೃತಿಯ ಶಿಲ್ಪ ಸೌಂದರ್ಯ ಇತ್ಯಾದಿ ನವ್ಯದ ಉತ್ತಮಾಂಶಗಳನ್ನೆಲ್ಲ ಶಿವತೀರ್ಥನ್ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ತಮ್ಮ ಕಾವ್ಯವನ್ನು ಅದೇ ದಾರಿಯಲ್ಲಿ ಮುನ್ನಡೆಸಲು ನೋಡಿದರು. ಮುಂದೆ ಅವರು ಪ್ರಕಟಿಸಿದ ‘ಗೆರೆಗಳು’ ಸಂಕಲನದಲಿ ನವ್ಯದ ಈ ಎಲ್ಲ ಉತ್ತಮಾಂಶಗಳನ್ನು ಸಮೃದ್ಧಿಯಾಗಿ ಕಾಣಬಹುದು. ಆದರೆ ಶೂದ್ರನೊಬ್ಬನ ದಟ್ಟ ಅನುಭವದ ವಿನ್ಯಾಸಕ್ಕೆ ನವ್ಯದ ಈ ಸೀಮಿತ ಪರಿಧಿ ಸಾಲುವುದಿಲ್ಲ ಎಂಬ ಸತ್ಯ ಕೂಡಾ ಶಿವತೀರ್ಥನ್ ಅವರಿಗೆ ಈ ಹೊತ್ತಿಗೆ ಹೊಳೆದಿತ್ತು. ಬಂಡಾಯದ ಆಶಯವನ್ನು ಸದ್ದುಗದ್ದಲವಿಲ್ಲದೆ ತಮ್ಮೊಳಕ್ಕೆ ತಂದುಕೊಂಡಿದ್ದ ಈ ಕವಿ, ತಮ್ಮ ಕಾವ್ಯದ ಪರಿಧಿಯನ್ನು ವಿಸ್ತರಿಸುವವರಂತೆ, ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದ ‘ಗೆಂಡಗಯ್ಯ’ ಕವಿತೆಯನ್ನು ಸೃಷ್ಟಿಸಿ ‘ಗೆರೆಗಳು’ ಸಂಕಲನದ ಕೊನೆಯಲ್ಲಿ ಸೇರಿಸಿದ್ದರು. ‘ಗೆಂಡಗಯ್ಯ’ ಶಿವತೀರ್ಥನ್ ಕಾವ್ಯದಲ್ಲಿಯೇ ಎತ್ತರದ ಸ್ಥಾನವನ್ನು ಪಡೆದ ಪದ್ಯ. ಅಷ್ಟೇ ಅಲ್ಲ, ಕನ್ನಡ ಸಾಹಿತ್ಯದಲ್ಲಿಯೂ ಅದಕ್ಕೆ ಮುಖ್ಯವಾದ ಸ್ಥಾನವಿದೆ. (ಮಳವಳ್ಳಿ ಪ್ರದೇಶದ) ಪ್ರಾದೇಶಿಕ ಭಾಷೆಯ ಜೀವಧಾತುವನ್ನು ಚಿಮ್ಮಿಸುತ್ತ, ಬೆಸ್ತ ಕುಲದ ನೋವಿಗೆ ಮಿಡಿಯುವ ಪ್ರಾಣಮಿತ್ರನಂತೆ ಆರಂಭವಾಗುವ ಈ ಕವಿತೆ ಒಂದು ಕುಲಗೀತೆಯಾಗುತ್ತ, ಮನುಕುಲದ ಗೀತೆಯೂ ಆಗುವುದು, ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟುತ್ತಲೇ ಇತಿಹಾಸವಾಗುವುದು, ಪುರಾಣವಾಗುವುದು, ವರ್ತಮಾನದ ನೆಲೆಯಲ್ಲೆ ನಿಂತು ಭೂತ ಭವಿಷ್ಯತ್ತುಗಳನ್ನು ಅವಲೋಕಿಸುವುದು ಇತ್ಯಾದಿ ಅನೇಕ ಗುಣಗಳಿಂದಾಗಿ ಈ ಕೃತಿ ಒಂದು ಅನನ್ಯ ಕೃತಿಯಾಗಿದೆ. ಇದರ ಭಾಷೆ, ಬೆಡಗು, ವಿನ್ಯಾಸಗಳು, ಆಶಯ, ಹಂಬಲಗಳು, ಇದರ ತುಡಿತ, ತನ್ಮಯತೆ, ಧ್ಯಾನಗಳು ಇದನ್ನೊಂದು ಅಪರೂಪದ ಸೃಷ್ಟಿಯಾಗಿ ಮಾಡಿವೆ. ಒಂದು ಸಮುದಾಯದ ಆಡುನುಡಿಯೊಂದು ತನ್ನೆಲ್ಲ ಚೆಲುವನ್ನು ಪ್ರಕಟಿಸುತ್ತ ಅತ್ಯಂತ ಕ್ರಿಯಾಶೀಲವಾಗಿ ಮತ್ತು ಸೃಷ್ಟಿಶೀಲವಾಗಿ ಬಳಕೆಯಾಗಿರುವ ಪರಿಯನ್ನು ಈ ‘ಗೆಂಡಗಯ್ಯ’ ಪರಿಣಾಮಕಾರಿಯಾಗಿ ತೋರಿಸುತ್ತದೆ. ಕನ್ನಡದ ಅನೇಕ ಮುಖ್ಯ ಮನಸ್ಸುಗಳು ಈ ಕವಿತೆಗೆ ಸ್ಪಂದಿಸಿರುವ ರೀತಿಯನ್ನು ‘ಗೆಂಡಗಯ್ಯ: ಒಳವು’ ಎಂಬ ಕೃತಿ ದಾಖಲಿಸಿದೆ. ಅಪಾರವಾದ ಮೆಚ್ಚುಗೆಯನ್ನು ಸೂಚಿಸಿ, ಕವಿತೆಯ ಅರ್ಥವಲಯಗಳನ್ನು ಎಳೆಎಳೆಯಾಗಿ ಬಿಚ್ಚಿ ತೋರಿಸುವ ವಿಶ್ಲೇಷಣೆಯನ್ನು ಉತ್ಸಾಹದಿಂದ ಮಾಡಿದ ನಮ್ಮ ವಿಮಶರ್ಾ ಲೋಕ ಈ ಕವಿತೆ ಬಗ್ಗೆ ಅನಾದರವನ್ನೂ ತೋರಿಸಿರುವುದು ಸೋಜಿಗ ಹುಟ್ಟಿಸುತ್ತದೆ. ಕನ್ನಡದಲ್ಲಿ ಪ್ರಕಟವಾಗಿರುವ ಅನೇಕ ಆಂಥಾಲಜಿಗಳಲ್ಲಿ ಶಿವತೀರ್ಥನ್ ಅವರ ‘ಗೆಂಡಗಯ್ಯ’ ಸೇರದಿರುವುದಕ್ಕೆ ಕಾರಣಗಳೇನು? ಇದು ಕೂಡಾ ಸಾಂಸ್ಕೃತಿಕ ಚಚರ್ೆಗೆ ಯೋಗ್ಯವಾದ ಸಂಗತಿಯೇ ಆಗಿದೆ. ಮಿತ್ರಕೂಟಗಳಲ್ಲಿ, ಕೊನೆಯಿರದ ಮಾತುಗಳಲ್ಲಿ, ಪಾನಗೋಷ್ಠಿಗಳಲ್ಲಿ ಕಳೆದುಹೋಗುತ್ತಿದ್ದ ಶಿವತೀರ್ಥನ್ ಹೆಚ್ಚು ಬರೆಯಲಿಲ್ಲ. ಹಾಗೆಂದು ವಿಷಾದಿಸುವ ಅಗತ್ಯವೂ ಇಲ್ಲ. ಅವರು ‘ಗೆಂಡಗಯ್ಯ’ ಕವಿತೆಯನ್ನು ಕೊಟ್ಟು ಹೋಗಿದ್ದಾರೆ. ನಾಲ್ಕು ವರ್ಷಗಳ ಕಾಲ ಹಾಸಿಗೆಹಿಡಿದು ಮಲಗಿದ ಈ ಕವಿ ಗೆಳೆಯನನ್ನು ‘ಕರುಣಾ’ದಲ್ಲಿ ಕಾಳಜಿಯಿಂದ ನೋಡಿಕೊಂಡ ಶಿವತೀರ್ಥನ್ ಅವರ ಪತ್ನಿ ಡಾ.ನಿರ್ಮಲಾ ಮತ್ತು ಅವರ ಕುಟುಂಬದ ಸದಸ್ಯರ ಪ್ರೀತಿಯೂ ದೊಡ್ಡದಲ್ಲವೇ?

ಕೃಪೆ : ವಿಜಯ ಕರ್ನಾಟಕ

]]>

‍ಲೇಖಕರು G

May 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

2 ಪ್ರತಿಕ್ರಿಯೆಗಳು

 1. ವಿ.ಎನ್.ಲಕ್ಷ್ಮೀನಾರಾಯಣ

  ಶಿವತೀರ್ಥನ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ತೆಗೆದ ಚಿತ್ರ ಅವಧಿ ಇ ಮೇಲ್ ಗೆ ಕಳಿಸಿದ್ದೇನೆ

  ಪ್ರತಿಕ್ರಿಯೆ
 2. ಸೂರಿ

  ಮತ್ತೆ ಮತ್ತೆ ನನ್ನನ್ನು ಕಾಡುವ ಹಲವಾರು ಶಿವತೀರ್ಥನ್ ಕವಿತೆಗಳಲ್ಲಿ ಈ ಚುಟುಕೂ ಒಂದು.
  ‘ಮರದ ಕೆಳಗೆ ನಿಂತೆ.
  ಮರಕು
  ನೆರಳಿನ ಚಿಂತೆ.’
  ಅದೇ ಆಸುಪಾಸಿನಲ್ಲಿ ಹಂಸಲೇಖ ಒಂದು ಹಾಡು ಬರೆದರು.
  ಅದರ ಕೆಲವು ಸಾಲುಗಳು ಹೀಗಿವೆ.
  ‘ಗಿಳಿಗಳಿಗೆ ನೆರಳಾಗಿ
  ನೆರಳಿಗೆ ಅಲೆಯುವಾ ಎಲೆ.’
  ಶಿವತೀರ್ಥನ್ ಅವರ ನೆರಳು ಎಷ್ಟರ ಮಟ್ಟಿಗೆ ಹರಡಿಕೊಂಡಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: