ಜಿ ಪಿ ಬಸವರಾಜು ಕಾಲ೦ : ಮರ್ಯಾದೆ ಮತ್ತು ಹತ್ಯೆ

ಮರ್ಯಾದೆ ಮತ್ತು ಹತ್ಯೆ -ಜಿ.ಪಿ.ಬಸವರಾಜು ‘ಮರ್ಯಾದೆ’ ಎನ್ನುವುದು ಒಂದು ಮೌಲ್ಯ. ಪ್ರತಿಯೊಂದು ನಾಗರಿಕ ಸಮಾಜವೂ ತನಗೆ ಸರಿಕಂಡ ರೀತಿಯಲ್ಲಿ ಈ ಪದವನ್ನು ಅರ್ಥೈಸುತ್ತ, ವ್ಯಾಖ್ಯಾನಿಸುತ್ತ, ಇದರ ಸುತ್ತ ಒಂದು ಪ್ರಭಾವಳಿಯನ್ನು ಸೃಷ್ಟಿಸುತ್ತ ‘ಮರ್ಯಾದೆ’ಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿದೆ. ‘ಪ್ರಾಣಕ್ಕಿಂತ ಮಾನ ಮುಖ್ಯ’ ಎನ್ನುವ ಮಾತೇ ನಾವು ‘ಮಾನ’ಕ್ಕೆ ಅಥವಾ ‘ಮರ್ಯಾದೆ’ಗೆ ಕೊಡುತ್ತ ಬಂದಿರುವ ಬೆಲೆಯನ್ನು ತಿಳಿಸಿ ಹೇಳುತ್ತದೆ. ಆದರೆ ಮರ್ಯಾದೆ ಕಟ್ಟಿಕೊಡುವ ಅರ್ಥವನ್ನು, ಪ್ರತಿಪಾದಿಸುವ ಮೌಲ್ಯವನ್ನು ನಾವು ಸರಿಯಾಗಿ ವಿಶ್ಲೇಷಿಸಿರುವುದು, ಅದರ ಒಳ-ಹೊರಗುಗಳನ್ನು ಉಜ್ಜಿ ನೋಡಿರುವುದು ತೀರ ಅಪರೂಪ. ಧರ್ಮವನ್ನು ನಾವು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಅದನ್ನು ಪ್ರಶ್ನಿಸುವವರನ್ನು ಧರ್ಮಲಂಡರೆಂದು ಕರೆದು ಅವರನ್ನು ಹೊರಗಿಡುತ್ತೇವೆ. ಆ ಮೂಲಕ ಧರ್ಮವನ್ನು ಪ್ರಶ್ನಾತೀತ ಸಂಗತಿಯಾಗಿ ಉಳಿಸಲು ನೋಡುತ್ತೇವೆ. ಹಾಗೆಯೇ ಮರ್ಯಾದೆ ಎನ್ನುವುದಕ್ಕೊಂದು ಕೋಟೆಕಟ್ಟಿ ಅದರೊಳಕ್ಕೆ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದೇವೆ. ದೇವರಾಗಲಿ, ಧರ್ಮವಾಗಲಿ, ಮೌಲ್ಯವಾಗಲಿ ನಿರಂತರವಾದ ಚರ್ಚೆಗೆ ಒಳಗಾಗದೇ ಹೋದರೆ ಅದು ಕೇವಲ ನಂಬಿಕೆಯ ಮೇಲೆ ನಿಲ್ಲುವಂತಾಗುತ್ತದೆ. ನಂಬಿಕೆ ಕುರುಡು ನಂಬಿಕೆಯೂ ಆಗಬಹುದು. ಕುರುಡು ನಂಬಿಕೆಯನ್ನು ಆಧರಿಸಿದ ಸಂಗತಿಗಳು ಬಹಳ ದೂರ ಚಲಿಸುವುದಿಲ್ಲ ಮತ್ತು ಸಮಾಜದ ನಿಜವಾದ ಮುನ್ನಡೆಗೆ ತಡೆಹಾಕುತ್ತವೆ. ಇಂಥ ಕುರುಡು ನಂಬಿಕೆಯ ಮೇಲೆ ‘ಮರ್ಯಾದೆ’ ಎನ್ನುವ ಮೌಲ್ಯ ನಿಂತಿರುವುದು ಕಾಣಿಸುತ್ತಿದೆ. ಧರ್ಮ, ದೇಶ, ಕಾಲ, ಜನಾಂಗಗಳನ್ನು ಮೀರಿ ಜಗತ್ತಿನ ಎಲ್ಲ ಭಾಗಗಳಲ್ಲೂ ನಡೆಯುತ್ತಿರುವ ಮರ್ಯಾದೆ ಹತ್ಯೆಗಳನ್ನೇ ನೋಡಿ; ಇವುಗಳ ಹಿಂದಿರುವ ಮನೋಧರ್ಮವನ್ನು ಗಮನಿಸಿ. ಮರ್ಯಾದೆ ಯಾವುದು, ಹತ್ಯೆ ಯಾವುದಕ್ಕಾಗಿ ಎನ್ನುವ ಪ್ರಶ್ನೆಗಳನ್ನು ಎದುರಿಸುವುದಕ್ಕೆ ಈ ಕೃತ್ಯಗಳಲ್ಲಿ ತೊಡಗಿರುವವರು ಸಿದ್ಧರಿರುವುದಿಲ್ಲ. ಮರ್ಯಾದೆ ಹತ್ಯೆಗಳು ಯಾಕಾಗಿ ನಡೆಯುತ್ತಿವೆ? ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೂಡಾಯಿಸಂ ಹೀಗೆ ಎಲ್ಲ ಧರ್ಮಗಳಲ್ಲೂ ಈ ಹತ್ಯೆಗಳು ನಡೆಯುತ್ತಿವೆ. ಎಲ್ಲ ದೇಶಗಳಲ್ಲೂ ನಡೆಯುತ್ತಿವೆ. ಇದಕ್ಕೆ ಮುಖ್ಯವಾದ ಕಾರಣ, ತರುಣರು ತಮಗೆ ಬೇಕಾದ ಜೀವನ ಸಂಗಾತಿಯನ್ನು ಧರ್ಮ, ಪ್ರದೇಶ ಇತ್ಯಾದಿ ಗಡಿಗಳನ್ನು ಮೀರಿ ಆಯ್ಕೆಮಾಡಿಕೊಂಡಾಗ. ಇಂಥ ಆಯ್ಕೆಯನ್ನು ಸಮಾಜ ಬೆಂಬಲಿಸಬೇಕು. ತರುಣ ಜನಾಂಗದ ಇಂಥ ಆಯ್ಕೆ ಜಾತ್ಯತೀತ ಅಥವಾ ಧರ್ಮಾತೀತ ನೆಲೆಯಲ್ಲಿ ಸಮಾಜವನ್ನು ರೂಪಿಸಲು ನೋಡುತ್ತದೆ. ಇದು ನಿಜಕ್ಕೂ ದೊಡ್ಡ ಮೌಲ್ಯವೇ. ಆದರೆ ಇಂಥ ವಿಚಾರದತ್ತ ಕಣ್ಣೆತ್ತಿ ನೋಡುವುದಕ್ಕೂ ಸಿದ್ಧವಿಲ್ಲದ ವ್ಯಕ್ತಿಗಳು ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಮರ್ಯಾದೆ ಹೆಸರಿನಲ್ಲಿ ತರುಣರನ್ನು ಬಲಿಕೊಡಲು ನೋಡುತ್ತಾರೆ. ಇಂಥವರು ಪ್ರತಿಪಾದಿಸುವ ‘ಮರ್ಯಾದೆ’ಯ ಅರ್ಥವೇನು? ನಿಜಕ್ಕೂ ಅವರು ‘ಮರ್ಯಾದೆ’ಯನ್ನು ಒಂದು ಮೌಲ್ಯವಾಗಿ ಪರಿಭಾವಿಸುತ್ತಾರೆಯೇ? ಕರ್ನಾಟಕದ ಉದಾಹರಣೆಯನ್ನೇ ನೋಡಿದರೆ ಈ ಹತ್ಯೆಗಳ ಹಿಂದಿನ ಸಂಕೀರ್ಣ ಸ್ವರೂಪ ಅರ್ಥವಾಗಬಹುದು. ಇವತ್ತಿಗೂ ನಮ್ಮ ಮನಸ್ಸುಗಳು ಜಾತಿಯ ಕೊಳಕಿನಿಂದ ಮುಕ್ತವಾಗಿಲ್ಲ. ಕೆಳಜಾತಿಯ ಹುಡುಗನನ್ನು ಮೇಲ್ಜಾತಿಯ ಹುಡುಗಿಯೊಬ್ಬಳು ಪ್ರೇಮಿಸಿದರೆ ಸಂಬಂಧಿಸಿದ ಕುಟುಂಬಗಳು ಹೇಗೆ ನಡೆದುಕೊಳ್ಳುತ್ತವೆ? ಬದುಕು ಮುಖ್ಯ, ಪ್ರೀತಿ ಮುಖ್ಯ, ಎಳೆಯ ಜೀವಗಳು ಮುಖ್ಯ, ವಿಶಾಲ ತಳಹದಿಯ ಮೇಲೆ ಪ್ರತಿಪಾದಿಸುವ ಮೌಲ್ಯಗಳು ಮುಖ್ಯ ಎನ್ನುವ ಅರಿವಿದ್ದವರು ಇಂಥ ಎಳೆಯರನ್ನು ಪ್ರೋತ್ಸಾಹಿಸಿ, ಹೊಸ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಹಾಗಾಗಬೇಕು. ಇಂಥ ಎಳೆಯರಿಂದ ಆರೋಗ್ಯಪೂರ್ಣ ಸಮಾಜವೊಂದು ಸೃಷ್ಟಿಯಾಗುತ್ತದೆ. ಆದರೆ ನಮ್ಮಲ್ಲಿ ವೈಚಾರಿಕ ಶಕ್ತಿಯೇ ಬೆಳೆಯದಂತೆ ಮಾಡಲಾಗಿದೆ. ನಮ್ಮ ವಿದ್ಯೆ ಎನ್ನುವುದು ಕೇವಲ ಅಕ್ಷರ, ಅಂಕಿಸಂಖ್ಯೆಗಳಿಗೆ ಸೀಮಿತವಾಗಿದೆ. ಈ ರೀತಿಯ ವಿದ್ಯೆ ನಮಗೆ ಉದ್ಯೋಗಗಳನ್ನು ಒದಗಿಸಬಹುದೇ ಹೊರತು, ವೈಚಾರಿಕ ಚಿಂತನೆಯತ್ತ ನಮ್ಮನ್ನು ಕರೆದೊಯ್ಯುವುದಿಲ್ಲ. ಹೀಗಾಗಿಯೇ ಇವತ್ತು ನಾವು ಜಾತಿಗಳ ಬಂಧನದಲ್ಲಿ ಸಿಕ್ಕಿಬಿದ್ದಿದ್ದೇವೆ. ಧರ್ಮವನ್ನು ಒಂದು ನಿಗೂಢವಸ್ತುವಿನಂತೆ ನೋಡುತ್ತ, ವೈಚಾರಿಕ ನಿಲುವಿಗೆ ಅದನ್ನು ತರದೆ ದೂರದಲ್ಲಿಯೇ ಉಳಿಸಿ, ನಮ್ಮ ನಮ್ಮ ಕತ್ತಲ ಕೂಪಗಳಲ್ಲಿ ಉಳಿದುಬಿಟ್ಟಿದ್ದೇವೆ. ಸಮಾನತೆಯನ್ನು ತಂದುಕೊಡುವ ಜಾತ್ಯತೀತ ಸಮಾಜವನ್ನು ಅಂತರಂಗದಲ್ಲಿ ವಿರೋಧಿಸುತ್ತ, ಮೇಲು ಕೀಳು ಸೃಷ್ಟಿಸುವ ಜಾತಿ ವ್ಯವಸ್ಥೆಗೆ ಅಂಟಿಕೊಂಡಿದ್ದೇವೆ. ಈ ಜಾತಿವ್ಯವಸ್ಥೆ ಸೃಷ್ಟಿಸುವ ಮಹಾ ದುರಂತಗಳನ್ನು ನಾವು ಕಣ್ಣೆತ್ತಿ ನೋಡುವುದಕ್ಕೂ ಸಿದ್ಧರಿಲ್ಲ. ಹೀಗಾಗಿಯೇ ನಮ್ಮ ಮಕ್ಕಳು ಜಾತಿಯ ಚೌಕಟ್ಟನ್ನು ಮುರಿದಾಗ ನಾವು ಸಿಟ್ಟಿಗೇದ್ದು ಅವರನ್ನು ಕೊಚ್ಚಿ ಹಾಕುತ್ತೇವೆ. ಹೀಗೆ ಎಳೆಯ ಜೀವಗಳನ್ನು, ಅವುಗಳ ಆರೋಗ್ಯಕರ ಮನಸ್ಸನ್ನು ಚಿವುಟಿ ಹಾಕುವುದರಲ್ಲೇ ನಮ್ಮ ‘ಮರ್ಯಾದೆ’, ನಮ್ಮ ಕುಟುಂಬದ ಮರ್ಯಾದೆ, ನಮ್ಮ ಜಾತಿಯ ಮರ್ಯಾದೆ, ನಮ್ಮ ಧರ್ಮದ ಮರ್ಯಾದೆ ಉಳಿಯುತ್ತದೆಂದು ತಪ್ಪಾಗಿ ಭಾವಿಸುತ್ತೇವೆ. ಈ ಮರ್ಯಾದಾ ಹತ್ಯೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಕನಿಷ್ಠ ಒಂದು ಸಾವಿರ ಎಳೆಯ ಜೀವಗಳು ನಂದಿಹೋಗುತ್ತಿವೆ. ಜೀವಕೊಡುವ ಸಾಮಥ್ರ್ಯ ನಮಗಿಲ್ಲದಿದ್ದರೂ, ಜೀವ ತೆಗೆದುಕೊಳ್ಳುವ ಅಮಾನುಷ ಕೃತ್ಯದ ಹಕ್ಕು ನಮಗಿದೆಯೆಂದು ಭಾವಿಸುತ್ತೇವೆ. ಇಡೀ ಭಾರತದಲ್ಲಿಯೇ ಹೆಚ್ಚು ಮಯರ್ಾದಾ ಹತ್ಯೆಗಳು ನಡೆಯುತ್ತಿರುವುದು ಪಂಜಾಬ್ ರಾಜ್ಯದಲ್ಲಿ ಎಂದರೆ ಆಶ್ಚರ್ಯವಾಗುತ್ತದೆ. ಪಂಜಾಬಿಗಳು ಧರ್ಮದ ವಿಚಾರದಲ್ಲಿ ಬಹಳ ಉದಾರಿಗಳೆಂದು ನಾವೆಲ್ಲ ನಂಬಿಕೊಂಡದ್ದೇ ಸುಳ್ಳೇ? ಪಂಜಾಬಿನ ನಂತರದ ಸ್ಥಾನಗಳು ಹರ್ಯಾಣ, ಉತ್ತರ ಪ್ರದೇಶ, ಹಿಮಾಲಯ ಪ್ರದೇಶ ಮತ್ತು ಮಧ್ಯ ಪ್ರದೇಶಗಳಿಗೆ ದಕ್ಕುತ್ತಿವೆ. ನಮ್ಮದು ‘ಸೆಕ್ಯುಲರ್’ ರಾಷ್ಟ್ರ. ಅಂದರೆ ಮತಧರ್ಮ ನಿರಪೇಕ್ಷ ರಾಷ್ಟ್ರ. ಇದನ್ನೊಂದು ಪ್ರಮುಖ ಮೌಲ್ಯವಾಗಿ ಮಾನ್ಯಮಾಡಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಅವುಗಳನ್ನು ಸಮರ್ಥವಾಗಿ ತಡೆಯಲು ತಕ್ಕ ವ್ಯವಸ್ಥೆ ಇಲ್ಲ. ಕೆಳ ಜಾತಿಗೆ ಸೇರಿದ ಬಡವರು ದೂರು ಸಲ್ಲಿಸಲು ಹೋದರೆ ದೂರು ದಾಖಲಿಸಿಕೊಳ್ಳುವುದಕ್ಕೂ ನಮ್ಮ ಪೊಲೀಸ್ ವ್ಯವಸ್ಥೆ ಸಿದ್ಧವಿರುವುದಿಲ್ಲ. ದೂರು ದಾಖಲಿಸದಂತೆ ನೋಡಿಕೊಳ್ಳಲು ಪ್ರಭಾವೀ ವ್ಯಕ್ತಿಗಳೊ, ಜಾತಿಗಳೊ, ಧರ್ಮಗಳೊ, ‘ಮರ್ಯಾದೆ’ಗಳೊ ಕೆಲಸ ಮಾಡುತ್ತಿರುತ್ತವೆ. ಪೊಲೀಸರ ಅಂತರಾಳದಲ್ಲಿಯೂ ಈ ಜಾತಿಯ ಬೇರುಗಳು ಇರುತ್ತವೆ. ಇನ್ನು ನಮ್ಮನ್ನು ಪ್ರತಿನಿಧಿಸುವ ಪ್ರತಿನಿಧಿಗಳೊ, ಇವತ್ತಿಗೂ ಜಾತಿಯನ್ನು ನಗದು ಮಾಡಿಕೊಳ್ಳುವುದಕ್ಕೆ ಪ್ರತಿ ಚುನಾವಣೆಯಲ್ಲಿಯೂ ಪೈಪೋಟಿ ನಡೆಸುತ್ತಿರುತ್ತಾರೆ. ಮೂಢನಂಬಿಕೆಗಳು, ಯಜ್ಞಯಾಗಗಳು, ಜ್ಯೋತಿಷಿಗಳು, ರಾಹುಕಾಲ ಗುಳಿಕಕಾಲಗಳು ಸವಾರಿ ಮಾಡುತ್ತಿರುವುದು ಹೆಚ್ಚಾಗಿ ಈ ನಮ್ಮ ಪ್ರತಿನಿಧಿಗಳ ಮೇಲೆಯೇ. ಇಂಥವರು ಜಾತ್ಯತೀತ, ಧರ್ಮಾತೀತ ತತ್ವಗಳನ್ನು ಪ್ರತಿಪಾದಿಸುವ ಎಳೆಯ ಜೀವಗಳ ಪ್ರೇಮವನ್ನು ಬೆಂಬಲಿಸುವುದು ಉಂಟೇ? ಧರ್ಮ, ಸಂಸ್ಕೃತಿ, ಮೌಲ್ಯ, ವಿದ್ಯೆ ಎಲ್ಲವೂ ಒಂದು ರಾಷ್ಟ್ರವನ್ನು ಕಟ್ಟುವುದಕ್ಕೆ ಅಗತ್ಯವಾದ ಪೂರಕ ವಸ್ತುಗಳಂತಿರಬೇಕು; ಬದುಕನ್ನು ಆರೋಗ್ಯಪೂರ್ಣ ನೆಲೆಯಲ್ಲಿ ಮುನ್ನಡೆಸುವ ತತ್ವಗಳಾಗಿರಬೇಕು. ಇಲ್ಲವಾದರೆ ಮರ್ಯಾದೆ ಹತ್ಯೆಗಳು ಒಂದು ಆಚರಣೆಯಂತೆ ನಿರಂತರವಾಗಿ ನಡೆಯುತ್ತಿರುತ್ತವೆ. ನಾವೆಲ್ಲ ಕಣ್ಮುಚ್ಚಿಕೊಂಡು ಎಳೆಯ ಜೀವಗಳ ಅನಾಮಧೇಯ ಸಮಾಧಿಗಳ ಮೇಲೆ ಹೆಜ್ಜೆ ಹಾಕುತ್ತಾ ನಡೆಯುತ್ತಿರಬೇಕಾಗುತ್ತದೆ. ಈ ಘೋರ ದುರಂತದ ಅರಿವನ್ನು ಮೂಡಿಸುವ ಶಕ್ತಿಗಳ ಧ್ವನಿಯೂ ಕೇಳಿಸದಷ್ಟು ಗದ್ದಲ ಈಗ ಎಲ್ಲೆಲ್ಲೂ ತುಂಬಿಹೋಗಿದೆ. ನಮ್ಮ ಶಾಲೆಗಳಲ್ಲಿ, ನಮ್ಮ ಮಕ್ಕಳಿಗೆ ಈಗ ನಾವು ಕಲಿಸಬೇಕಾಗಿರುವುದು ‘ಭಗವದ್ಗೀತೆ’ಯನ್ನಲ್ಲ; ‘ವಿಶ್ವಮಾನವ ಗೀತೆ’ಯನ್ನು. ಜಾತಿ ಮತ ಗುಡಿ ಚರ್ಚ್ ಮಸೀದಿಗಳನ್ನು ಮೀರಿದ, ಎಲ್ಲ ಜೀವಗಳನ್ನೂ ಸಮಾನವಾಗಿ ಕಾಣುವ, ಮೇಲು ಕೀಳಿನ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುವ ‘ವಿಶ್ವಮಾನವ ಗೀತೆ’ಯನ್ನು ನಾವೆಲ್ಲರೂ ಸರಿಯಾಗಿ ಗ್ರಹಿಸುವುದು ಸಾಧ್ಯವಾದರೆ, ‘ಭಗವದ್ಗೀತೆ’ಯ ಓಟಿನ ಒಳದಾರಿ ರಾಜಕೀಯ ಮತ್ತು ಅದರ ಕುಬ್ಜತೆ ಸುಲಭವಾಗಿ ಅರ್ಥವಾಗುತ್ತದೆ. ಹಾಗಾದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವ ಸರಿಯಾದ ಹಳಿಯ ಮೇಲೆ ಓಡುತ್ತದೆ.]]>

‍ಲೇಖಕರು G

June 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: