ಜಿ ಪಿ ಬಸವರಾಜು ಕಾಲ೦ : 'ಶಿವಾಪುರ'ದ ಹುಡುಕಾಟದಲ್ಲಿ

‘ಶಿವಾಪುರ’ದ ಹುಡುಕಾಟದಲ್ಲಿ

– ಜಿ.ಪಿ.ಬಸವರಾಜು

1 ಭಾರತೀಯ ಸಾಹಿತ್ಯ ಕೃತಿಗಳನ್ನು ಬೆಲೆಕಟ್ಟುವಲ್ಲಿ ಮೌಲಿಕ ಪಾತ್ರವಹಿಸುತ್ತಿರುವ, ಭಾರತೀಯ ಬರಹಗಾರರಿಗೆ ರಾಷ್ಟ್ರಮಟ್ಟದಲ್ಲಿ ಅರ್ಹ ಮನ್ನಣೆಯನ್ನು ದೊರಕಿಸಿಕೊಡುತ್ತಿರುವ ಜ್ಞಾನಪೀಠ ಪ್ರಶಸ್ತಿ ಎಂಟನೆಯ ಬಾರಿಗೆ ಕನ್ನಡಕ್ಕೆ ಲಭಿಸಿದೆ. ಘೋಡಗೇರಿಯ ಡಾ.ಚಂದ್ರಶೇಖರ ಕಂಬಾರ ಈ ಜ್ಞಾನಶಿಖರವನ್ನು ಏರುವ ಮೂಲಕ ಕನ್ನಡದ ಹಿರಿಮೆಯನ್ನು ಎತ್ತರಿಸಿದ್ದಾರೆ. ಕಂಬಾರರ ಮೂಲಕ ಆಧುನಿಕ ಸ್ಪರ್ಶ ಮತ್ತು ಚಿಂತನೆಗಳನ್ನು ಪಡೆದುಕೊಂಡಿದ್ದ ‘ಶಿವಾಪುರ’ ಈಗ ರಾಷ್ಟ್ರದ ಭೂಪಟದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಅಕ್ಷರಗಳ ಆಚೆಗೂ ಇರುವ ಲೋಕವೊಂದು ತನ್ನ ಮಣ್ಣಿನ ಸತ್ವ ಮತ್ತು ಕಲಾತ್ಮಕ ಮೌಲ್ಯಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ, ಸಹಜವಾಗಿ ಬೀಗುವ ಅವಕಾಶವನ್ನೂ ಈ ಪ್ರಶಸ್ತಿ ಒದಗಿಸಿಕೊಟ್ಟಿದೆ. 2 ‘ಶಿವಾಪುರ’ದ ಕಂಬಾರರಿಗೆ ಹಲವು ಮುಖಗಳಿವೆ. ಇವರು ಕವಿ, ಕತೆಗಾರ, ಹಾಡುಗಾರ, ನಾಟಕಕಾರ, ಕಾದಂಬರಿಕಾರ, ಚಲನಚಿತ್ರ ನಿದರ್ೇಶಕ ಇತ್ಯಾದಿ. ಮುಖ ಯಾವುದೇ ಇರಲಿ ಇವರು ಹುಟ್ಟಾ ಕತೆಗಾರ. ಇವರು ಮಾತನಾಡಲಿ, ಕತೆ ಹೇಳಲಿ, ಹಾಡು ಹೇಳಲಿ, ಲಾವಣಿ ಕಟ್ಟಲಿ, ಅಟ್ಟ ಏರಿ ಕುಣಿಯಲಿ, ಪಟಗ ಕಟ್ಟಿ ನಟನೆ ಮಾಡಲಿ ಅಲ್ಲಿ ಕತೆ ಹುಟ್ಟುತ್ತದೆ, ಬೆಳೆಯುತ್ತದೆ, ಸಾಯುತ್ತದೆ. ಕತೆ ಸತ್ತರೆ ಕಂಬಾರರು ಕಣ್ಣೀರು ಹಾಕುವುದಿಲ್ಲ; ಪಕಪಕ ನಗುತ್ತಾರೆ. ಈ ನಗೆಯಲ್ಲಿಯೇ ಇನ್ನೊಂದು ಕತೆ ಹುಟ್ಟುತ್ತದೆ; ಹಾಡು ಹುಟ್ಟುತ್ತದೆ. ಇದು ಕಂಬಾರತ್ವ, ಕಂಬಾರ ಸತ್ವ. ‘ನನ್ನ ಮಟ್ಟಿಗೆ ಶಿವಾಪುರ ಒಂದು ಸ್ವಗರ್ೀಯ ಸ್ಥಳ. ನಾವು ಈಗ ಆ ಸ್ವರ್ಗವನ್ನು ಕಳೆದುಕೊಂಡಿದ್ದೇವೆ’ ಎನ್ನುತ್ತಾರೆ ಕಂಬಾರರು. ‘ನನ್ನ ಎಲ್ಲ ಹಾಡುಗಳು ಈ ಕಳೆದುಹೋದ ಸ್ವರ್ಗದ ಬಗ್ಗೆ ಪರಿತಪಿಸುವಂಥವು’ ಎಂಬುದನ್ನೂ ಅವರು ಸೇರಿಸುತ್ತಾರೆ. ಕಂಬಾರರ ಈ ಮಾತು ಏನನ್ನು ಮತ್ತು ಯಾವುದನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯಲು ಕಷ್ಟವಾಗಬೇಕಾಗಿಲ್ಲ. ಇಷ್ಟಾದರೂ, ಕಂಬಾರರ ಬರಹವೆಂದರೆ ಅದೊಂದು ಸಮೃದ್ಧಿ; ಅದೊಂದು ಗಾಢಾನುಭವ, ಅದ್ಧೂರಿಯ ವೈಭವ; ಮಹಾದುರಂತ; ಅದೊಂದು ಸಿರಿ; ಸಿರಿಸಂಪಿಗೆ. ಹಾಡು, ಕುಣಿತ, ಲಯ ವಿನ್ಯಾಸ, ಸೊಬಗು ಸೂರೆಯಾಡುವ ಮೈಮಣಿತ. ಅದು ಧುಮ್ಮಿಕ್ಕುವ ಜಲಪಾತವೂ ಹೌದು; ಮುಖ ತೋರಿಸುವ ಕನ್ನಡಿಯ ತಿಳಿಗೊಳವೂ ಹೌದು. 3 ಕಂಬಾರರು ತಮ್ಮ ಬರವಣಿಗೆಯನ್ನು ಆರಂಭಿಸಿದಾಗ ನವ್ಯ ಸಾಹಿತ್ಯ ತನ್ನ ಪ್ರೇರಣೆ, ಪ್ರಭಾವಗಳನ್ನು ಪಶ್ಚಿಮದಿಂದ ಪಡೆಯುತ್ತಿತ್ತು. ಆಧುನಿಕ ಮನಸ್ಸು, ಆಧುನಿಕ ಚಿಂತನೆ, ಪಶ್ಚಿಮದ ಮಾದರಿಗಳು, ಅಲ್ಲಿಂದಲೇ ಬಂದ ಗತಿ ವಿನ್ಯಾಸಗಳು ಕನ್ನಡದ ಲೇಖಕರಲ್ಲಿ ಸ್ಫೂತರ್ಿಯ ಚಿಲುಮೆಯನ್ನು ಉಕ್ಕಿಸುತ್ತಿದ್ದವು. ಅದೇ ಸ್ಫೂತರ್ಿಯಲ್ಲಿ ಅವೇ ಮಾದರಿಗಳನ್ನು ಕನ್ನಡದಲ್ಲಿ ತರುವ, ಕನ್ನಡ ಸಾಹಿತ್ಯಕ್ಕೆ ಹೊಸ ನೀರನ್ನು ಹರಿಸುವ ಹುಮ್ಮಸ್ಸಿನಲ್ಲಿ ಅನೇಕರು ಬರೆಯುತ್ತಿದ್ದರು; ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು. ಸಹಜವಾಗಿಯೇ ತರುಣ ಕಂಬಾರರ ಮನಸ್ಸು ತಿರುಗಿದ್ದು ಈ ಕಡೆಗೇ. ಆಧುನಿಕ ಚಿಂತನೆಯನ್ನು, ಅದರ ಪ್ರಭಾವವನ್ನು ಅವರು ಪಡೆದದ್ದೂ ನಿಜ. ಆದರೆ ಕಂಬಾರರನ್ನು ಹೆಚ್ಚಾಗಿ ಪ್ರಭಾವಿಸಿದ್ದು ಬೆಳಗಾವಿಯ, ಘೋಡಗೇರಿಯ ಮಣ್ಣು. ಈ ಮಣ್ಣಿನ ಸತ್ವ, ಮಾತಿನ ಸತ್ವ, ಜನಪದದ ಸತ್ವ. ಭಾಷೆಯ ಸೊಗಡು, ಬದುಕಿನ ಲಯ ವಿನ್ಯಾಸಗಳು ಕಂಬಾರರನ್ನು ಹಿಡಿದು ನಿಲ್ಲಿಸಿದವು. ಇವೆಲ್ಲ ಕಂಬಾರರ ಕಿವಿಯೊಳಗೆ ಇಳಿದು ಹಾಡಾಗಿ ನುಡಿದು ಗುಂಗಾಗಿ ಕಾಡಿದವು. ಸಣ್ಣಾಟ, ದೊಡ್ಡಾಟ, ಲಾವಣಿ, ಗೀಗೀ ಪದಗಳು, ಡೊಳ್ಳಿನ ಹಾಡು ಹೀಗೆ ಸಕಲ ಜಾನಪದ ಸಂಪತ್ತು ಕಂಬಾರರನ್ನು ಆವರಿಸಿತು. ಅದರ ಒಳ ಸತ್ವವನ್ನು, ಹೊರ ವಿನ್ಯಾಸವನ್ನು ಹಿಡಿಯಲು ಅವರ ಬರಹಗಳು ಹುಡುಕಾಟ ನಡೆಸಿದವು. ಜಾನಪದ ರೂಪಗಳಿಗೆ, ರೂಪಕಗಳಿಗೆ ಕಂಬಾರರು ಮರುಳಾದರೂ ಅವರ ಆಧುನಿಕ ಚಿಂತನೆ ಅವರನ್ನು ಅಲ್ಲಿಯೇ ಮೈಮರೆಯಲು ಬಿಡಲಿಲ್ಲ. ಹಾಗಾಗಿದ್ದರೆ ಅನೇಕ ಜಾನಪದ ಕತೆಗಳ ಭಂಡಾರದಲ್ಲಿ ಕಂಬಾರರ ಕತೆಗಳೂ ಸೇರಿಕೊಂಡುಬಿಡುತ್ತಿದ್ದವು. ಈ ಆಧುನಿಕಪ್ರಜ್ಞೆಯೇ ಕಾರಣವಾಗಿ ಕಂಬಾರರು, ಅಸ್ತಿತ್ವದ ಪ್ರಶ್ನೆ, ಗಂಡು-ಹೆಣ್ಣಿನ ಸಂಬಂಧದ ಸ್ವರೂಪ, ಕಾಮ-ಪ್ರೇಮ-ಹಾದರ, ಸಂಸಾರ ಚಕ್ರ, ಅರ್ಥವಿಲ್ಲದೆ ಸುತ್ತಿದಲ್ಲಿಯೇ ಸುತ್ತುವ ಗಾಣದೆತ್ತಿನ ಯಾಂತ್ರಿಕ ಬದುಕು, ನಿಗೂಢದ ಶೋಧ, ದೇವರೆಂಬ ನಂಬಿಕೆಯ ಹುಡುಕಾಟ, ಮನಸ್ಸು-ದೇಹವೆಂದು ಸೀಳಿಕೊಂಡ ಮನುಷ್ಯನ ಪ್ರಶ್ನೆ, ಡಿಕ್ಷನರಿಯ ಅರ್ಥಗಳು ಸೃಷ್ಟಿಸುವ ಚೌಕಟ್ಟು, (‘ಶಬ್ದದ ಲಜ್ಜೆಯ ನೋಡಾ’, ‘ಈ ಮಾಯೆ’, ‘ಆ ಮರ ಈ ಮರ’, ‘ಕನ್ನಡಿಯೇ ಕನ್ನಡಿಯೇ’ ‘ಸಿರಿಸಂಪಿಗೆ’) ಇತ್ಯಾದಿ ಪ್ರಶ್ನೆಗಳನ್ನು ಎತ್ತಿಕೊಂಡು ಉತ್ತರಕ್ಕಾಗಿ ಹುಡುಕಾಡುವುದು ಸಾಧ್ಯವಾಗಿದೆ. ತನ್ನನ್ನು ತಾನೇ ಹುಡುಕಿಕೊಳ್ಳಲು ಕಂಬಾರರನ್ನು ತೊಡಗಿಸಿದ್ದು ಈ ಆಧುನಿಕ ಪ್ರಜ್ಞೆಯೇ. 4 1964ರಲ್ಲಿ ಪ್ರಕಟವಾದ ‘ಹೇಳತೇನ ಕೇಳ’ (ಇದು ಅವರ ಎರಡನೆಯ ಕವನ ಸಂಕಲನ; ಮೊದಲನೆಯ ಸಂಕಲನ ‘ಮುಗುಳು’ 1958ರಲ್ಲಿ ಪ್ರಕಟವಾಯಿತು.) ಒಂದರ್ಥದಲ್ಲಿ ಕಂಬಾರರ ಸತ್ವವನ್ನು ಮತ್ತು ಪ್ರತಿಭೆಯನ್ನು ಸೂಚಿಸುವಂತಿದೆ. ಹಾಗೆಯೇ ಕಂಬಾರರು ಮುಂದೆ ಹಿಡಿಯಬಹುದಾದ ದಾರಿಯನ್ನು ಕೂಡಾ ಅದು ತೋರಿಸುತ್ತದೆ. ಕಂಬಾರರ ಆಯ್ಕೆ, ನೋಟ, ಚಿಂತನ ಮತ್ತು ದರ್ಶನಗಳನ್ನು ಹಿಡಿದುಕೊಡುವ ಅನೇಕ ಎಳೆಗಳು ಈ ಕೃತಿಯಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತವೆ. ಇದೆಲ್ಲದಕ್ಕಿಂದ ಮುಖ್ಯವಾದ ಇನ್ನೊಂದು ಸಂಗತಿಯೂ ಇಲ್ಲಿದೆ. ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ ನನಮುಂದ ಕುಂಡ್ರ ಹೀಂಗ ತೆರದ ಮನಾ// ಗೀ//   ಇದು ಜಾನಪದದಲ್ಲಿ ಬಹಳ ಮುಖ್ಯವಾದದ್ದು. ಹೇಳುವವನು ಮತ್ತು ಕೇಳುವವರ ನಡುವಿನ ಸಂಬಂಧವನ್ನು ಮೊದಲು ಸ್ಥಾಪಿಸಿಕೊಳ್ಳುವುದು. ಇದು ಕೇಳುವವರ ಬಗ್ಗೆ ಹೇಳುವವನು ತೋರಿಸುವ ಗೌರವ ಮಾತ್ರವಲ್ಲ, ಅದು ಕೇಳುವವರನ್ನು ತನ್ನೆಡೆಗೆ ಸೆಳೆದುಕೊಂಡು, ಸಂಬಂಧ ಬೆಳೆಸುವ ಕಳಕಳಿಯೂ ಹೌದು. ಇದೊಂದು ಅರ್ಥಪೂರ್ಣ ಸಂಬಂಧ. ಹೇಳುವವನು ಮತ್ತು ಕೇಳುವವರು ಸಮುದಾಯದ ಒಂದು ಭಾಗ ಎಂಬುದನ್ನು ಸೂಚಿಸುವ ವಿಧಾನವೂ ಹೌದು. ಕೇಳುವವರಿಲ್ಲದಿದ್ದರೆ ಹೇಳುವವನಿಗೆ ಅರ್ಥವಿಲ್ಲ. ಕೇಳುವವರಲ್ಲಿ ಕಥೆ ಮೈಪಡೆಯಬೇಕು; ಹಾಡು ಕುಡಿಯೊಡೆಯಬೇಕು. ಅದೇ ಅದರ ಫಲವಂತಿಕೆ. ಜಾನಪದ ಎನ್ನುವುದು ಸಮುದಾಯದ ಅಭಿವ್ಯಕ್ತಿ. ಅಕ್ಷರಸ್ಥರೇ ಕಡಿಮೆಯಿದ್ದ ನಮ್ಮ ನಾಡಿನಲ್ಲಿ ಪುರಾಣಗಳು, ‘ಪುಣ್ಯ’ಕತೆಗಳು, ಯಕ್ಷಗಾನ ಬಯಲಾಟಗಳು, ಲಾವಣಿ, ತತ್ವಪದಗಳು, ಜಾನಪದ ಮಹಾಕಾವ್ಯಗಳು ಹುಟ್ಟಿ, ಬೆಳೆದು ಜನಮನದಲ್ಲಿ ನೆಲೆನಿಂತದ್ದರ ಹಿಂದೆ ಈ ಗಾಢ ಸಂಬಂಧ ಕ್ರಿಯಾಶೀಲವಾಗಿತ್ತು. ಜಾನಪದ ಕವಿ ಎನಿಸಿರುವ ಕುಮಾರವ್ಯಾಸನಲ್ಲಿಯೂ ಈ ಸಂಬಂಧ ಇದ್ದದ್ದು ಹೀಗೆಯೇ. ಇವತ್ತಿನ ಕವಿ ಕಂಬಾರರಲ್ಲಿಯೂ ಈ ಸಂಬಂಧ ಕುಡಿಯೊಡೆಯಲು ಜಾನಪದವೇ ಕಾರಣ. ‘ಹೇಳತೇನ ಕೇಳ’ ಒಂದು ಕಥನ ಕವನ. ಇದನ್ನು ಕಂಬಾರರು ಲಾವಣಿಯ ಮಟ್ಟಿನಲ್ಲಿ ಬರೆದಿದ್ದಾರೆ. ಗುರು, ಲಘು, ಗಣ, ಮಾತ್ರೆ, ಛಂದೋಕ್ರಮ ಇತ್ಯಾದಿ ಅನೇಕ ವ್ಯಾಕರಣ ಸಂಗತಿಗಳತ್ತ ಕಂಬಾರರು ಇಲ್ಲಿ ಗಮನ ಹರಿಸಿರುವುದನ್ನು ಈ ಕಾವ್ಯ ತೊರಿಸುತ್ತದೆ. ಹಾಗೆಯೇ ಲಾವಣಿಯ ಜಾನಪದ ವೈಶಿಷ್ಟ್ಯವನ್ನು ಅವರು ಇಲ್ಲಿ ಅನುಸರಿಸಿದ್ದಾರೆ. ಛಂದಸ್ಸಿನ ನಿಯಮಗಳಿಗೆ ಬದ್ಧರಾಗದೆ ಮುಕ್ತಛಂದದಲ್ಲಿ ಬರೆಯುವುದರ ಕಡೆಗೆ ಹೆಚ್ಚಿನ ಆಸಕ್ತಿಯನ್ನು ನವ್ಯ ಸಾಹಿತಿಗಳು ತೋರಿಸುತ್ತಿದ್ದ ಸಂದರ್ಭದಲ್ಲಿ ಕಂಬಾರರು ಜಾನಪದ ಕಾವ್ಯದ ರೂಪಕ್ಕೆ, ಲಯ ವಿನ್ಯಾಸಗಳಿಗೆ, ಅದರ ಪ್ರಧಾನ ಆಶಯಗಳಿಗೆ ಮಾರುಹೋದದ್ದು ಮತ್ತು ಅದನ್ನು ಅತ್ಯಂತ ಶ್ರದ್ಧೆಯಿಂದ ತಮ್ಮ ಕಾವ್ಯದ ಒಳಕ್ಕೆ ತಂದುಕೊಂಡದ್ದು ಕಂಬಾರರ ಕಾಳಜಿಯ ಕೇಂದ್ರವನ್ನು ಸೂಚಿಸುವಂತಿದೆ. ಈ ಹಾಡುಗಬ್ಬದಲ್ಲಿ ಕಂಬಾರರು ಮಂಡಿಸಿರುವುದು ಒಂದು ಜಾನಪದ ಕತೆಯನ್ನು. ಕಂಬಾರರ ಮೂಲಕವೂ ಈ ಕತೆ ಕನ್ನಡದಲ್ಲಿ ಈಗ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಈ ಕತೆ ಸ್ಥೂಲವಾಗಿ ಹೀಗಿದೆ: ಏಳುಪಟ್ಟೆ ಹುಲಿಯನ್ನು ಕೊಲ್ಲಲೆಂದು ಕಾಡಿಗೆ ಹೋಗುವ ಊರಗೌಡನನ್ನು ಹುಲಿ ಕೊಂದು ಹಾಕಿದೆ. ಇದು ಕೇವಲ ಹುಲಿಯಲ್ಲ; ಇದೊಂದು ಮಾಯಾವಿ ರಾಕ್ಷಸ. ಈ ರಾಕ್ಷಸ ಗೌಡನ ರೂಪವನ್ನು ಪಡೆದುಕೊಂಡು ಊರಿಗೆ ಮರಳಿಬರುತ್ತದೆ. ಮೃತಗೌಡನ ಹೆಣವನ್ನು ಗುಟ್ಟಾಗಿ ತಂದು ಹಾಳುಬಾವಿಗೆ ಎಸೆದು ತಾನು ಗೌಡನ ಮನೆಗೆ ಬರುತ್ತದೆ…ಊರು ಒಂದು ಬಗೆಯ ನೆಮ್ಮದಿಗೆ ಮರಳುತ್ತದೆ. ಕರೆವ್ವನ ಗಿಡದ ನೆರಳಲ್ಲಿ ಗೌಡ ‘ಸಾಲೆ’ಯನ್ನು ಆರಂಭಿಸುತ್ತಾನೆ. ಕಂಬಾರರೇನೋ ಈ ಕವಿತೆಗೆ ನೀಡಿರುವ ಟಿಪ್ಪಣಿಯಲ್ಲಿ, ‘ದಂತಕತೆಗಳ, ಧರ್ಮಶ್ರದ್ಧೆಯ, ರಹಸ್ಯ ನಂಬಿಕೆಗಳ ವಿಸ್ಮಯವೇ ಈ ಲಾವಣಿಯ ಸ್ಥಾಯಿಯಾಗಿ ಉಳಿದ ಲೌಕಿಕ ಭಾವಭಾವನೆಗಳು ಸಂಚಾರಿಯಾಗಿವೆ’ ಎಂದು ವಿವರಣೆ ನೀಡಿದ್ದಾರೆ. ‘ಇಡೀ ಕವನದ ಮೂಲನಂಬಿಕೆ ಜನ್ಮಾಂತರ ಸಂಬಂಧವನ್ನು ಕುರಿತದ್ದಾಗಿದೆ’ ಎಂದೂ ಹೇಳುತ್ತಾರೆ. ಆದರೆ ವಿಮರ್ಶಕ ಕೀತರ್ಿನಾಥ ಕುರ್ತಕೋಟಿ ಅವರು, ‘ಹುಲಿಯೇ ಗೌಡನಾಗಿ ಕರೆವ್ವನ ಗಿಡದ ನೆರಳಲ್ಲಿ ಸಾಲೆಯನ್ನು ಪ್ರಾರಂಭಿಸಿ ಊರವರನ್ನು ಇದ್ದಲ್ಲಿಯೇ ಬಂಧನದಲ್ಲಿಟ್ಟ ಕತೆ ವರ್ತಮಾನದ ಇತಿಹಾಸದ ಒಂದು ಭಾಗ’ ಎಂದು ಈ ಕವಿತೆಯನ್ನು ವಿಶ್ಲೇಷಿಸುತ್ತಾರೆ. ಆಧುನಿಕ ಶಾಲೆ ಅಥವಾ ಆಧುನಿಕ ವಿದ್ಯೆ ನಮ್ಮ ಸಮಾಜದಲ್ಲಿ ಅನೇಕ ಪಲ್ಲಟಗಳಿಗೆ ಕಾರಣವಾಗಿದೆ; ಧನಾತ್ಮಕ ಬೆಳವಣಿಗೆಗಳನ್ನೂ ತಂದಿದೆ. ಒಂದರ್ಥದಲ್ಲಿ ಇಡೀ ಜಗತ್ತನ್ನು ಹೊಸ ಬೆಳಕಿನಲ್ಲಿ ನಮಗೆ ಕಾಣಿಸಿ, ನಮ್ಮನ್ನು ಇತರ ರಾಷ್ಟ್ರಗಳ ಜೊತೆ ಹೆಜ್ಜೆಹಾಕಲು ಪ್ರೇರೇಪಿಸಿರುವ ಈ ವಿದ್ಯೆ ಮಾಡಿರುವ ದುಷ್ಪರಿಣಾಮಗಳೂ ಇಂದು ಚಚರ್ೆಗೆ, ಚಿಂತನೆಗೆ ಒಳಗಾಗಿವೆ. ಈಗ ನಾವು ದೇಸೀ ಚಿಂತನೆಯ ಕಡೆಗೆ ಹೊರಳಿರುವುದರ ಮತ್ತು ಈ ಚಿಂತನೆಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದರ ಹಿನ್ನೆಲೆಯಲ್ಲಿ ಆಧುನಿಕ ವಿದ್ಯೆಯ ದುಷ್ಪರಿಣಾಮಗಳಿವೆ ಎಂಬುದನ್ನು ಮರೆಯುವಂತಿಲ್ಲ. ಒಂದು ಗುಲಾಮಗಿರಿಯಿಂದ ನಮ್ಮನ್ನು ಮುಕ್ತಗೊಳಿಸಿದ ಆಧುನಿಕ ವಿದ್ಯೆ ಇನ್ನೊಂದು ಬಗೆಯ ಗುಲಾಮಗಿರಿಗೆ ನಮ್ಮನ್ನು ತಳ್ಳಿದೆ ಎಂಬ ಸೂಚನೆಯೂ ಕಂಬಾರರ ಈ ಕವಿತೆಯಲ್ಲಿರುವುದನ್ನು ಗಮನಿಸಬಹುದು. ಆಧುನಿಕ ವಿದ್ಯೆಯೇ ಕಾರಣವಾಗಿ ಇವತ್ತು ಅನೇಕ ಕ್ಷೇತ್ರಗಳಲ್ಲಿ ಮಹತ್ವದ್ದನ್ನು ಸಾಧಿಸಿ ಭಾರತ ತಲೆ ಎತ್ತಿ ನಿಂತಿದೆ. ಈ ಆಧುನಿಕ ವಿದ್ಯೆಯ ಇನ್ನೊಂದು ಅಡ್ಡ ಪರಿಣಾಮವಾಗಿ ನಮ್ಮ ಹಳ್ಳಿಗಳು ಒಡೆದಿವೆ. ಅವುಗಳಲ್ಲಿದ್ದ ಬದುಕು, ಸಮುದಾಯಗಳ ಸಾಮರಸ್ಯ ಬಿರುಕುಬಿಟ್ಟಿವೆ. ತಮ್ಮಲ್ಲಿದ್ದ ಅಮೂಲ್ಯವಾದ ಪರಂಪರಾಗತ ಜ್ಞಾನವನ್ನು ಕಳೆದುಕೊಂಡು ಬರಿದಾಗಿರುವ ಗ್ರಾಮಗಳು, ಸಮೃದ್ಧಿ, ಉಮೇದು, ಅಪಾರ ಚೈತನ್ಯ, ಜೀವನೋತ್ಸಾಹ, ಕಲೆಗಳನ್ನು ಕಳೆದುಕೊಂಡು ಒಣಗಿಕೊಂಡಿವೆ. ಇದು ನಮ್ಮ ‘ವರ್ತಮಾನದ ಇತಿಹಾಸ.’ ಈ ಇತಿಹಾಸವನ್ನು ಹಿಡಿಯಲು ‘ಹೇಳತೇನ ಕೇಳ’ ಆಗಲೇ ಯತ್ನಿಸಿತ್ತು ಎಂಬುದು ಮಹತ್ವದ ಸಂಗತಿ; ಹಾಗೆಯೇ ಕಂಬಾರರು ನಮ್ಮ ದೇಸೀಯ ಸತ್ವಕ್ಕೆ ಬಹಳ ಹಿಂದೆಯೇ ಒಲಿದಿದ್ದರು ಎಂಬುದೂ ಗಮನಾರ್ಹ ಸಂಗತಿಯೇ. ‘ನನ್ನ ಮಟ್ಟಿಗೆ ಶಿವಾಪುರ ಒಂದು ಸ್ವಗರ್ೀಯ ಸ್ಥಳ. ನಾವು ಈಗ ಆ ಸ್ವರ್ಗವನ್ನು ಕಳೆದುಕೊಂಡಿದ್ದೇವೆ’ ಎಂದ ಕಂಬಾರರ ಮಾತಿಗೆ ಇವತ್ತು ಹೊಸ ಹೊಸ ಆಯಾಮಗಳು ಸೇರಿಕೊಳ್ಳುತ್ತವೆ ಎಂಬುದೂ ಗಮನಾರ್ಹ ಸಂಗತಿಯೇ. ಕಳೆದುಹೋದ ‘ಶಿವಪುರ’ವೂ ಕಂಬಾರರನ್ನು ಮತ್ತೆ ಮತ್ತೆ ಕಾಡಿದೆ. ಅವರ ಸಾಹಿತ್ಯವೆಂದರೆ ಈ ‘ಶಿವಾಪುರ’ದ ನಿರಂತರ ಹುಡುಕಾಟವೇ. ಕವಿ ಏಟ್ಸ್ಗೆ ‘ಬೈಜಾಂಟಿಯಂ’ ಇದ್ದಂತೆ ಕಂಬಾರರಿಗೆ ಈ ‘ಶಿವಾಪುರ’. ‘ಭೋಳೇಶಂಕರ’ ನಾಟಕದಲ್ಲಿ ಬರುವ ‘ಶಿವಾಪುರದ ಹಾಡ’ನ್ನು ಗಮನಿಸಿದರೆ ಈ ಅಂಶ ಇನ್ನಷ್ಟು ನೇರವಾಗಿ, ಸ್ಪಷ್ಟವಾಗಿ ಕಾಣಿಸುತ್ತದೆ. ಕಂಬಾರರ ಅನುಮಾನಕ್ಕೆ, ಅವ್ಯಕ್ತ ಭಯಕ್ಕೆ ಕಾರಣವಾಗಿರುವ ಆಧುನಿಕ ವಿದ್ಯೆ ಎನ್ನುವುದು ಅಕ್ಷರಸ್ಥ ಮನುಷ್ಯನನ್ನು ಸೀಳಿಹಾಕಿದ್ದರೆ, ‘ಶಿವಾಪುರ’ ಎನ್ನುವ ಪರಿಪೂರ್ಣ ಊರನ್ನು ಒಡೆದು ಛಿದ್ರಗೊಳಿಸಿದೆ. ಕತೆ, ಕಾವ್ಯ, ನಾಟಕ, ಕಾದಂಬರಿ ಇತ್ಯಾದಿ ಅಭಿವ್ಯಕ್ತಿಗಳಲ್ಲಿ ಕಂಬಾರರು ಮತ್ತೆ ಮತ್ತೆ ಹೇಳುವ ಸಂಗತಿ ಇದೇ.   5 ‘ಶಿವಾಪುರ’ ಎನ್ನುವುದು ಕಂಬಾರರ ಒಂದು ಸಮಗ್ರ ಗ್ರಾಮೀಣ ಸಮುದಾಯ. ಅದು ತನಗೇ ತಾನು ಪೂರ್ಣ; ಸಮೃದ್ಧ. ಅದರ ಕಲೆ, ಸಂಸ್ಕೃತಿ. ಸಾಮರಸ್ಯ, ಜೀವಚೈತನ್ಯ ಅಪೂರ್ವವಾದುದು. ಅದನ್ನು ಇಡಿಯಾಗಿ, ಸಮಗ್ರವಾಗಿ, ಪರಿಪೂರ್ಣವಾಗಿ ಪರಿಭಾವಿಸುವ ಕಂಬಾರರು ಅದರೊಳಗಿನ ಪರಿವರ್ತನೆಯನ್ನು ಮಾನ್ಯಮಾಡುತ್ತಾರಾದರೂ, ಹೊರಗಿನ ಶಕ್ತಿಗಳು ಅದರ ಪರಿವರ್ತನೆಗೆ ಕಾರಣವಾಗುವುದಾದರೆ ಅದನ್ನವರು ವಿರೋಧಿಸುತ್ತಾರೆ; ದ್ವೇಷಿಸುತ್ತಾರೆ. ಅವರ ‘ಕರಿಮಾಯಿ’ ಕಾದಂಬರಿಯನ್ನೇ ಇದಕ್ಕೆ ನಿದರ್ಶನವಾಗಿ ನೋಡಬಹುದು. ಆಧುನಿಕ ಶಿಕ್ಷಣವೂ ಒಂದು ಹೊರಗಿನ ಪರಿವರ್ತಕ ಶಕ್ತಿಯೇ. ಪಟ್ಟಣ ಸಂಸ್ಕೃತಿಯೂ ಇಂಥದೇ ಇನ್ನೊಂದು ಶಕ್ತಿ. ಈ ಶಕ್ತಿಗಳ ಪ್ರವೇಶದಿಂದ ಗ್ರಾಮ ಸಂಸ್ಕೃತಿ ವಿನಾಶದ ಹಾದಿ ಹಿಡಿಯುತ್ತದೆ ಎಂದು ಕಂಬಾರರು ನಂಬುತ್ತಾರೆ. ಇಂಥ ನಂಬಿಕೆಯಿಂದಲೇ ‘ಕರಿಮಾಯಿ’ ಕಾದಂಬರಿ ಹುಟ್ಟಿರುವುದನ್ನು ಡಾ.ಶಾಂತಿನಾಥ ದೇಸಾಯಿ ಅವರು ಗುರುತಿಸಿರುವುದನ್ನು ಒಪ್ಪಬಹುದಾಗಿದೆ. ಕಂಬಾರರ ಸೃಜನಶೀಲ ಕೃತಿಗಳಲ್ಲಿ ‘ಶಾಲೆಗಳು’, ಆಧುನಿಕ ಶಿಕ್ಷಣ ಇದೇ ರೂಪದಲ್ಲಿ ಗ್ರಾಮೀಣ ಜಗತ್ತನ್ನು ಪ್ರವೇಶಿಸಿದಂತೆ ಕಂಡುಬಂದರೂ ಕೆಲವು ಸಂದಿಗ್ಧಗಳನ್ನು ಅದು ಉಳಿಸುತ್ತದೆ. ‘ಹೇಳತೇನ ಕೇಳ’ ಕೃತಿಯಲ್ಲಿ (ರಾಕ್ಷಸ) ಗೌಡ ಕರೆವ್ವನ ಗಿಡದ ನೆಳಲಲ್ಲಿ ಶಾಲೆ ಆರಂಭಿಸಿ ಜನರ ಮೇಲೆ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳುತ್ತಾನೆ. ಒಂದರಿಂದ ಮುಕ್ತಿಪಡೆವ ಜನಪದರು ಇನ್ನೊಂದು ಬಂಧನಕ್ಕೆ ಸಿಕ್ಕಿಕೊಳ್ಳುತ್ತಾರೆ ಎಂಬ ಸೂಚನೆಯನ್ನು ಇದರಲ್ಲಿ ಕಾಣಬಹುದಾದರೂ, ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯಲ್ಲಿಯೂ ಈ ಅರಮನೆ ಕೊನೆಗೆ ಹೈಸ್ಕೂಲಾಗಿ ಪರಿವರ್ತನೆಯಾಗುವುದನ್ನು ಹೀಗೆ ಅಥರ್ೈಸಲು ಬರುವುದಿಲ್ಲ. ಖಾಸಗೀ ಒಡೆತನದ ಆಸ್ತಿ ಶಿಕ್ಷಣದ ರೂಪದಲ್ಲಿ ಸಮುದಾಯಕ್ಕೆ ಸೇರಿಹೋಗುತ್ತದೆ. ಹಾಗೆ ಸೇರುವುದರ ಮೂಲಕವೇ ಅದಕ್ಕೊಂದು ಸರಿಯಾದ ನೆಲೆಯೂ ಸಿಕ್ಕುತ್ತದೆ ಎಂಬ ನಂಬಿಕೆಯೂ ಇದರ ಹಿಂದೆ ಕ್ರಿಯಾಶೀಲವಾಗಿರುವ ಸಾಧ್ಯತೆಯೂ ಇದೆ. ಗ್ರಾಮೀಣ ಬದುಕನ್ನು, ಸಂಸ್ಕೃತಿಯನ್ನು ಇಡಿಯಾಗಿ, ಸಮೃದ್ಧವಾಗಿ, ಚೈತನ್ಯಪೂರ್ಣವಾಗಿ ನೋಡುವ ಆರಾಧಕ ಭಾವನೆ ಕಂಬಾರರಲ್ಲಿ ಇರುವುದು ನಿಜ. ಜೊತೆಗೆ ದೇಸೀ ಸತ್ವವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೂ ಇಲ್ಲಿ ಕಾಣಿಸುತ್ತದೆ.   6 ಕಂಬಾರರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತು ಅಧಿಕಾರ ಮತ್ತು ಲೈಂಗಿಕತೆಯನ್ನು ಕುರಿತದ್ದು. ಇಲ್ಲಿನ ಅಧಿಕಾರವೆಂದರೆ ಫ್ಯೂಡಲ್ ವ್ಯವಸ್ಥೆಯ ಕೇಂದ್ರೀಕೃತ ಅಧಿಕಾರ. ಇಲ್ಲಿ ಗೌಡರಿದ್ದಾರೆ; ದೇಸಾಯರು ಇದ್ದಾರೆ. ಅವರ ವಾಡೆಗಳು, ಅರಮನೆಗಳು ಇವೆ. ಆಳು ಕಾಳುಗಳು, ಸಂಪತ್ತು, ದೌಲತ್ತುಗಳಿವೆ. ಫಲವಂತಿಕೆಯ ರಾಣಿಯರೂ ಇದ್ದಾರೆ. ಇಲ್ಲಿ ಅಧಿಕಾರವೂ ಇದೆ. ಜನರನ್ನು ಆಳುವ ಈ ಗೌಡರ, ದೇಸಾಯರ ದರ್ಪವೆಂದರೆ ದರ್ಪ; ಕ್ರೌರ್ಯವೆಂದರೆ ಕ್ರೌರ್ಯ. ಆದರೆ ಈ ಗೌಡರು ಅಥವಾ ದೇಸಾಯರು ನಪುಂಸಕರು, ರೋಗಿಗಳು. ಇವರು ಲೈಂಗಿಕ ಶಕ್ತಿಯನ್ನು ಕಳೆದುಕೊಂಡವರು, ಸಂತಾನವನ್ನು ಕೊಡಲಾಗದ ದುರ್ಬಲರು. ಆದರೆ ವಂಶ ಬೆಳೆಯಬೇಕು. ರಾಣಿ ಏಕಾಂಗಿಯಾಗಿ ನರಳಲಾರಳು. ಅವಳ ಲೈಂಗಿಕ ತೃಷೆ ಹಾಗೆಯೇ ಅಡಗಿ ಹೋಗಲಾರದು. ಅದಕ್ಕಾಗಿಯೇ ಬರುತ್ತಾನೆ ‘ಜೋಕುಮಾರಸ್ವಾಮಿ.’ ಈ ಜೋಕುಮಾರರೆಲ್ಲ ಕೆಳವರ್ಗದವರೇ. ಅಲ್ಲಿ ಅಧಿಕಾರವಿಲ್ಲ, ದರ್ಪವಿಲ್ಲ. ಅವರು ಆಳುವ ಅವಕಾಶವನ್ನು ಪಡೆದವರಲ್ಲ. ಆದರೆ ಫಲವಂತಿಕೆಯನ್ನು ನೀಡುವ ಶಕ್ತರು. ಈ ಸಂಘರ್ಷದಲ್ಲಿಯೇ ಹುಟ್ಟುತ್ತವೆ ಕಂಬಾರರ ಕೃತಿಗಳು. ಒಂದು ವ್ಯವಸ್ಥೆಯ ನಾಶಕ್ಕೆ ಇಂಥ ಸಂಘರ್ಷಗಳು ಬೇಕಾಗುತ್ತವೆ; ಅನಿವಾರ್ಯವೂ ಆಗುತ್ತವೆ. ನಮ್ಮ ಜಾನಪದ ಕೃತಿಗಳ ಹುಟ್ಟಿನ ಹಿಂದೆಯೂ ಇಂಥ ಆಶಯಗಳೇ ಕ್ರಿಯಾಶೀಲವಾಗಿರುವುದನ್ನು ನೋಡಬಹುದಾಗಿದೆ. ಜಾನಪದ ಕೃತಿಗಳ ರೂಪಗಳಲ್ಲಿ ಮೈಪಡೆಯುವ ಕಂಬಾರರ ಕೃತಿಗಳು ತಮ್ಮೊಡಲಲ್ಲಿ ಈ ಆಶಯವನ್ನೂ ಧರಿಸುತ್ತವೆ. ಈ ಕಾರಣಕ್ಕಾಗಿಯೇ ಇವುಗಳ ವಿಶ್ಲೇಷಣೆ ಸರಳ ಗ್ರಹಿಕೆಗೆ ಸಿಕ್ಕುವುದಿಲ್ಲ. ಸೂಕ್ಷ್ಮವೂ ಸಂಕೀರ್ಣವೂ ಆದ ನೋಟ ಈ ಕೃತಿಗಳಿಗೆ ಬೇರೆಬೇರೆಯ ಆಯಾಮವನ್ನು ತಂದುಕೊಡುತ್ತದೆ. ಮೈ-ಮನಸ್ಸು ಎರಡನ್ನೂ ತೊಡಗಿಸಬಲ್ಲ ನಿಜವಾದ ಪ್ರೇಮಕ್ಕೆ ಹಾತೊರೆಯುವ ಹೆಣ್ಣು, ಅದು ಸಾಧ್ಯವಾಗದ ದಾಂಪತ್ಯವನ್ನು ತೊರೆದುಹೋಗಬಲ್ಲ ಛಾತಿಯನ್ನು ಪಡೆದವಳು ಎಂಬ ಅಂಶವನ್ನೂ ಕಂಬಾರರು ತಮ್ಮ ಕೃತಿಗಳಲ್ಲಿ ಸಾಬೀತುಪಡಿಸಿರುವುದೂ ಇದೆ. ಅವರ ‘ನವಿಲೇ ನವಿಲೇ’ ಎನ್ನುವ ಕವಿತೆ ಇದನ್ನು ಅತ್ಯಂತ ಕಲಾತ್ಮಕವಾಗಿ ತೋರಿಸುತ್ತದೆ. ಒಂದು ಜಾನಪದ ಗೀತೆಯಂತೆ, ಕಥನದಂತೆ ಈ ಕೃತಿಯ ಹೊರಮೈ ಕಾಣಿಸಿದರೂ, ಇದರ ಆಶಯ ಈ ಬಗೆಯದು. ಈ ಕವಿತೆಯ ತೀವ್ರತೆಯೂ ತಟ್ಟುವಂತಿದೆ.   7 ಕಂಬಾರರು ನಮ್ಮ ಜಾನಪದ ಸಾಹಿತ್ಯವನ್ನು ಅದಮ್ಯ ಪ್ರೀತಿ ಮತ್ತು ಆಸ್ಥೆಗಳಿಂದ ಗಮನಿಸಿರುವಂತೆಯೇ ಅಕ್ಷರ ರೂಪದಲ್ಲಿರುವ ಕನ್ನಡ ಸಾಹಿತ್ಯ ಚರಿತ್ರೆಯನ್ನೂ ಗಾಢ ಶ್ರದ್ಧೆಯಿಂದ ನೋಡಿದ್ದಾರೆ. ನಮ್ಮ ಪುರಾಣಗಳು, ಚಂಪೂ ಕಾವ್ಯಗಳು, ಜಾನಪದ ಮಹಾಕಾವ್ಯಗಳಾದ ಮಲೆ ಮಹದೇಶ್ವರ, ಮಂಟೆಸ್ವಾಮಿ ಕಾವ್ಯಗಳನ್ನು, ದೊಡ್ಡಾಟ, ಸಣ್ಣಾಟಗಳನ್ನು, ಜಾನಪದದ ಹಲವು ಪ್ರಕಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಈ ಕೃತಿಗಳ ಹೊರ ರೂಪ ಮತ್ತು ಒಳ ಆಶಯಗಳನ್ನು ಹಿಡಿಯಲೂ ಅವರು ನೋಡಿದ್ದಾರೆ. ಅವರ ನಾಟಕ, ಕಾವ್ಯ, ಕಾದಂಬರಿ, ಮಹಾಕಾವ್ಯ, ಸಿನಿಮಾ ಇತ್ಯಾದಿ ಎಲ್ಲ ಪ್ರಯತ್ನಗಳೂ ಈ ದಿಕ್ಕಿನಲ್ಲಿಯೇ ನಡೆದಿವೆ. ಅವರ ‘ಚಕೋರಿ’ಯನ್ನು ಮಹಾಕಾವ್ಯ ಎನ್ನುವವರಿದ್ದಾರೆ; ಕಾದಂಬರಿ ಎನ್ನುವವರಿದ್ದಾರೆ. ಕಂಬಾರರಿಗೆ ಗದ್ಯ ಬೇರೆಯಲ್ಲ, ಪದ್ಯ ಬೇರೆಯಲ್ಲ. ಒಂದರೊಳಗೊಂದು ಬೆರೆಯುತ್ತ, ಹೊಸ ಅರ್ಥಕ್ಕೆ ತುಡಿಯುತ್ತ, ಭಾಷೆಯನ್ನು ಹೊಸ ಸಾಧ್ಯತೆಯಲ್ಲಿ ನೋಡುತ್ತ, ಹೊಸ ಹೊಸ ಪ್ರಶ್ನೆಗಳಿಗೆ ಮತ್ತು ಮನುಷ್ಯನ ಮೂಲ ಹುಡುಕಾಟಕ್ಕೆ ಎದುರಾಗುತ್ತ ಸಾಗುವ ಕಂಬಾರರಿಗೆ ಸಾಹಿತ್ಯವೆನ್ನುವುದು ನಿರಂತರ ಶೋಧ. ಪ್ರಕಾರಗಳ ಹಂಗಿಲ್ಲದ ಮುಕ್ತ ಮಾರ್ಗ. ಮನುಷ್ಯನ, ಸಂಸ್ಕೃತಿಯ ಮೂಲ ಪ್ರಶ್ನೆಗಳ ಹುಡುಕಾಟದಲ್ಲಿ ಕಂಬಾರರು ಜಾನಪದದ ವಿವಿಧ ರೂಪಗಳನ್ನು ಧರಿಸಿದ್ದಾರೆ; ಪುರಾಣಗಳನ್ನು, ದಂತಕತೆಗಳನ್ನು, ಸಮುದಾಯದ ನಂಬಿಕೆಗಳನ್ನು, ಜಾನಪದದ ಮೂಲ ಮಟ್ಟುಗಳನ್ನು ಮುಟ್ಟಲು ಯತ್ನಿಸಿದ್ದಾರೆ. ಹೊಸ ಪುರಾಣಗಳನ್ನು ಸೃಷ್ಟಿಸಿದ್ದಾರೆ (‘ಮಂದಾರ ಮರ’, ‘ಚಕೋರಿ’ ಇತ್ಯಾದಿ); ಜಾನಪದದ ಮೂಲ ಆಶಯಕ್ಕೆ ನಿಷ್ಠರಾಗಿದ್ದಾರೆ. ಕಂಬಾರರ ಈ ನಿಷ್ಠೆ ಪ್ರಶ್ನಾತೀತವಾದದ್ದು.

(ಅರುಹು – ಕುರುಹುವಿನಲ್ಲಿ ಪ್ರಕಟವಾದ ಬರಹ)

   ]]>

‍ಲೇಖಕರು G

May 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This