ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು

1
ಕಗ್ಗತ್ತಲೆಯ ಖಂಡದಲ್ಲಿ ಸಣ್ಣ ಹಣತೆಯ ಹಿಡಿದು
ದಾರಿಗಾಗಿ ತಡಕಾಡಿದ ಗಾಂಧಿಯ
ಕಣ್ಣ ಬೆಳಕಾಗಿದ್ದ ಈ ಕಸ್ತೂರ ಬಾ ಕಣ್ಣಿಂದ
ಹನಿದ ಎರಡು ತೊಟ್ಟು ಕಣ್ಣೀರಿಗೆ ಇಡೀ
ದಕ್ಷಿಣಾ ಆಫ್ರೀಕಾವೇ ಒದ್ದೆಯಾಗಬೇಕಾಗಿತ್ತು;
ಅಂಥದೇನೂ ಆದ ಇತಿಹಾಸ ಕಾಣಲಿಲ್ಲ ಎಲ್ಲೂ;
ಹರಿದು ಸುರಿದು ಜಲಪಾತವಾಗಿ ಭೋರ್ಗರೆದ ಆ ಕಣ್ಣೀರು
ಮಹಾತ್ಮನ ಆತ್ಮವನ್ನೇ ಕೊಚ್ಚಿ ಹಾಕಿದ್ದನ್ನು ಯಾರೂ ನೋಡಲಿಲ್ಲ
2
ಸಬರಮತಿಯಲ್ಲಿ ಮಸುಕು ಮಸುಕು ಬೆಳಕು, ಚುಮುಚುಮು ಚಳಿ,
ಅರೆಬರೆ ಬಟ್ಟೆಯಲ್ಲಿ ಪೊರಕೆ ಹಿಡಿದ ಗಾಂಧಿ ಕಸಗುಡಿಸುತ್ತಿದ್ದರು
ಕೊಳೆ ತೊಳೆದುಕೊಂಡು ಶುಭ್ರವಾದ ಕಸ್ತೂರ ಬಾ ನಗುತ್ತಿದ್ದರೆ
ಹೊಳೆಯುತ್ತಿದ್ದ ಮೂಡಣ ಬಾನಲ್ಲಿ ಸೂರ್ಯನಿಗೆ ಸಾವಿರ ಸಾವಿರ
ಬೆಳಕಿನ ಕಿರಣ; ಗಿಡಗಂಟೆ ಒಡಲಿಂದ ಹೊಮ್ಮಿದ ಗಂಧ ಮುಚ್ಚಿತ್ತು
ಆಶ್ರಮದ ಕಣಕಣವ; ದುಡಿವ ಜೀವಗಳ ಬೆವರ ಹನಿಗಳ ಕನ್ನಡಿಯಲ್ಲಿ
ಮೂಡಿದ ಬಿಂಬಗಳು ನೂಲುತ್ತಿದ್ದವು ಹೊಸ ಹೊಸ ಕನಸುಗಳನ್ನು

3
ಬೆಳಕಿಲ್ಲ ಒಳಗೆ; ಸೆರೆಮನೆಯ ಕಂಬಿಗಳಿಗೆ ಹಗಲಿರುಳು ಪಹರೆ
ಸುಡುವ ಜ್ವರ, ಕೆಮ್ಮು, ನೆಲಕ್ಕೊರಗಿದ ಸೊರಗಿದ ದೇಹ; ಮಂಪರು
ಮಂಪರು; ಬಂದು ಹೋದ ನೆರಳು-ಬೆಳಕಿನ ಆಟ ತಿಳಿಯುವುದಿಲ್ಲ
ಹರಿಹರಿ; ಮಗ್ಗುಲಾದರೆ ನೋವು; ಮತ್ತೆ ಮತ್ತೆ ಅದೇ ಕನಸು ಹರಿ

ಕೊನೆಗೊಮ್ಮೆ ನೆರಳು ಬಂದು ನಿಂತಂತೆ ಬಾ ತೆರೆದರೆ ಕಣ್ಣು
ನಿಂತಿದ್ದ ಅವನು: ಕೆದರಿದ ಕೂದಲು, ಹರಿದ ವಸ್ತ್ರ, ಕೆಂಗಣ್ಣು
ಜೀವ ಬೊಗಸೆಯಲಿ ಹಿಡಿದು ಕೊಡುವಂತೆ ಹತ್ತಿರ ಬಂದ ಹರಿ-
ಲಾಲ, ಮಂಪರು ಹರಿದು ಬೆಳಕು ಮೂಡಿ ದಿಗ್ಗನೆದ್ದು ನೋಡಿದಳು
ತಾಯಿ, ಮಗನನ್ನೇ ಮನದ ತುಂಬ ತುಂಬಿಕೊಂಡು; ‘ಬಂದೆಯಾ
ಕಂದ, ಬಾ’ ಎಂದು ತೋಳುತೆರೆದರೆ, ಲೋಕ ತುಂಬಿ ಬಂದಂತೆ
ಕಣ್ಣೀರ ಧಾರೆಯ ಎರಡು ಹೊಳೆಗಳು ಹತ್ತಿರ ಬಂದು ಒಂದಾದಂತೆ


4
ದೀಪ ಹಚ್ಚಿಟ್ಟು, ಕೋಲು ಹಿಡಿದು, ನಡೆದು ಹೋದರು ಗಾಂಧಿ
ಅವರ ಸಂಜೆಯ ದಾರಿ ಉದ್ದವಾಗಿತ್ತು, ನಿತ್ಯದ ನಡಿಗೆ ಕಾದಿತ್ತು
ಏಕಾಂಗಿ ‘ಬಾ’ ತನ್ನ ಪುಟ್ಟ ಕೋಣೆಯಲ್ಲಿ, ಕಾಣದ ಕನ್ನಡಿಯ ಹುಡುಕುತ್ತ
ತಡಕುತ್ತ ನರಳಿದರು ಹಾಸಿಗೆಯಲ್ಲಿ, ತಡೆತಡೆದು ಆಡುತ್ತಿತ್ತು ಉಸಿರು

ಗಂಡ ಮಕ್ಕಳು ಸಂಸಾರ ನಿತ್ಯ ನೂತರೂ ಕಾಣದು ಬಟ್ಟೆ, ವ್ರತ ನೇಮ
ನಡೆ ಎಲ್ಲವೂ ಗಾಂಧಿ, ಹನಿಹನಿ ಬೆವರು ನೆತ್ತರು ಹರಿದು ಹರಿದು ಹೊಳೆ
ಸಾಗರವ ಹುಡುಕಿ ಸಾಗಿದೆ, ಅಲ್ಲಿ ಇಲ್ಲಿ ಬಿದ್ದ ಹನಿಗೆ ನೆಲ ಫಲಿಸಿ ಬೆಳೆ
ಗಾಂಧಿಯೊ ಕಸ್ತೂರಿಯೊ, ಕಸ್ತೂರಿಯೊ ಗಾಂಧಿಯೊ; ಒಳ-ಹೊರಗು ತಿಳಿಯುವುದಿಲ್ಲ

‍ಲೇಖಕರು Avadhi

January 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್‌ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು...

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಲಲಿತಾ ಸಿದ್ಧಬಸವಯ್ಯ ಅಡ್ಡೆಸರು ಇಟ್ಟೋರು ಒಂಟೋದರುಹಿಂದೆಮುಂದೆ ಸಂತೆದಾರಿ ಅಂತ ಬೊಗಳಿಜೀವಬೆರಸೆ ಇರೋರ ಗತಿ ಏನೇಳಿನೀವು ಅಪ್ಪನಿಗುಟ್ಟಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This