‘ಜೀರೋ ಬ್ಯಾಲೆನ್ಸಿ’ನ ತೂಗುಯ್ಯಾಲೆಯಲಿ ಕೂರುವ ಮುನ್ನ…

ಅವಧಿ’ಯ ಕವಯತ್ರಿ ಶ್ರುತಿ ಬಿ ಆರ್ ಅವರ ಹೊಸ ಸಂಕಲನ ನಾಳೆ ಬಿಡುಗಡೆಯಾಗುತ್ತಿದೆ.

ಜೀರೋ ಬ್ಯಾಲೆನ್ಸ್’ ಸಂಕಲನಕ್ಕೆ ಶ್ರುತಿ ಬರೆದ ಮಾತುಗಳು ಇಲ್ಲಿವೆ-

ಶ್ರುತಿ ಬಿ ಆರ್

ನನ್ನ ಪಾಲಿಗೆ ಕವಿತೆಯೆಂಬುದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡದಲ್ಲ, ಅದೊಂದು ತೀರಗಳ ಹಂಗಿರದ ಸ್ವಚ್ಛಂದವಾಗಿ ಹರಿವ ನದಿ ಒಮ್ಮೊಮ್ಮೆ ಭರಪೂರ ಪ್ರವಾಹ, ಕೆಲವೊಮ್ಮೆ ಅಭಾವ. ನದಿಯು ಮೆಕ್ಕಲು ಮಣ್ಣನ್ನು ಸಾಗಿಸಿ ನೆಲವ ಫಲವತ್ತಾಗಿಸುವಂತೆಯೇ, ಪ್ರವಾಹದಲ್ಲಿ ಅದೇ ನೆಲವ ಮುಳುಗಿಸಲೂ ಬಲ್ಲದು, ಅದನ್ನು ಹರಿಯದಂತೆ ತಡೆಯಲಾಗಲೀ ಅಥವಾ ಇನ್ನಷ್ಟು ತೀವ್ರವಾಗಿ ಹರಿಯುವಂತೆ ನೂಕುವುದಾಗಲಿ ಅಸಾಧ್ಯ.

ಕವಿತೆಯ ಸಾಂಗತ್ಯ ದೊರಕಿದ್ದು ಬಾಲ್ಯದಲ್ಲಿಯೇ, ಐದು ಆರನೇಯ ತರಗತಿಯಲ್ಲೇ ಒಂದಷ್ಟು ಶಿಶು ಪ್ರಾಸಗಳನ್ನು ಬರೆದ ನೆನಪು. ಮುಂದೆ ಬರೆಯಲು ಸ್ಪೂರ್ತಿ ನೀಡಿದ್ದು ಪುಸ್ತಕಗಳ ಓದು, ನನ್ನೂರು ತರೀಕೆರೆಯ ನಗರ ಕೇಂದ್ರ ಗ್ರಂಥಾಲಯಗಳಿಂದ ಅಮ್ಮ ತಂದುಕೊಡುತ್ತಿದ್ದ ಪುಸ್ತಕಗಳು ಓದಿನ ಹವ್ಯಾಸವನ್ನು ಎದೆಗಿಳಿಸಿತ್ತು, ಈಗಲೂ ಯಾವುದೇ ಸಂಕಷ್ಟದಲ್ಲಿ, ಸಂತೋಷದಲ್ಲಿ, ಗೊಂದಲಗಳಲ್ಲಿ, ಜಂಜಾಟಗಳಲ್ಲಿ ನೆಮ್ಮದಿ ಕೊಡುವುದು ಒಳ್ಳೆಯ ಪುಸ್ತಕಗಳೇ, ಅದನ್ನು ಹೊರತು ಪಡಿಸಿದರೆ ಏಕಾಂತ-ಲೋಕಾಂತಗಳ ವಿಭವಾನುಭವಗಳ ಅಭಿವ್ಯಕ್ತಿಗೆ ಕಾವ್ಯವೇ ಆತ್ಮಸಖಿ.

ಯಾವುದೋ ಎರಡು ಭಿನ್ನ ಅಂಶಗಳ ನಡುವಿನ ಅಸಂತುಲನಗಳು, ಸಮತೋಲನಕ್ಕಾಗಿ ನಿರಂತರ ಯತ್ನಗಳು ಕಟ್ಟಿಕೊಡುವ ಕವಿತೆಗಳು, ಎಲ್ಲವೂ ಇದ್ದು ಏನೂ ಇರದಿರುವ ಅನೂಹ್ಯ ಖಾಲಿತನಗಳು, ಯಾವುದನ್ನೂ ಉಳಿಸಿಕೊಳ್ಳಲಾಗದಿದ್ದಾಗಲೂ ಮನಸ್ಸು ಅನುಭವಿಸುವ ನಿರಾಳ ಭಾವ, ಎಲ್ಲವನ್ನೂ ಹೇಳದೆಯೂ ಹೇಳಿ ಹಗುರವಾಗುವ ಕವಿತೆಯ ಚಾಳಿ, ನಾವು ಬೆಳೆದಂತೆಲ್ಲಾ ಏರುಪೇರಾಗುತ್ತಲೇ ಹೋಗುವ ಅಭಿಪ್ರಾಯ, ಆಯ್ಕೆಗಳ ವೈಚಿತ್ರ್ಯಗಳು, Imbalance ನಲ್ಲೂ ಇರಬಹುದಾದ ಮಾರ್ದವತೆಗಳೇ (ವಕ್ರತೆಯಲ್ಲಿಯೇ ಕಾವ್ಯ ಸೌಂದರ್ಯವಿದೆ ಎಂಬ ಕುಂತಕನ ಮಾತು ನನಗಿಲ್ಲಿ ನೆನಪಾಗುತ್ತಿದೆ) ಈ ಸಂಕಲನವನ್ನು ‘ಜೀರೋ ಬ್ಯಾಲೆನ್ಸ್’ ಎಂದು ಕರೆಯಲು ಕಾರಣ.

ಕುಟುಂಬ ಮತ್ತು ಸ್ನೇಹಿತರ ಒತ್ತಾಸೆಯಿಂದ ನನ್ನ ಮೊದಲ ಕವನ ಸಂಕಲನ ರೂಪುಗೊಂಡಿದೆ, ನನ್ನ ಕವಿತೆಗಳ ಹಸ್ತಪ್ರತಿಯನ್ನು ಪ್ರೋತ್ಸಾಹ ಧನಕ್ಕೆ ಆಯ್ಕೆಮಾಡಿ ಪುಸ್ತಕ ಪ್ರಕಟಣೆಗೆ ಇಂಬು ಕೊಟ್ಟ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಕೃತಜ್ಞತೆಗಳು, ಕವಿತೆಗಳು ಅರ್ಥವಾಗುವುದಿಲ್ಲ ಎನ್ನುತ್ತಲೇ, ನನ್ನ ಕವಿತೆಗಳ ಕೇಳುಗಳು ಮತ್ತು ಅನೇಕ ವೇಳೆ ಕಟು ವಿಮರ್ಶಕಳೂ ಆದ ನನ್ನ ಅಕ್ಕನಿಗೆ, ಒಳ್ಳೆಯದೆಲ್ಲವನ್ನೂ ಹುಡುಕಿ ತಾನೂ ಓದಿ ನಮಗೂ ಓದಿಸುವ ನನ್ನ ಮುದ್ದು ಅಮ್ಮ ರೇಣುಕಾಗೆ, ಮಗಳು ಬರೆದುದೆಲ್ಲವೂ ಚಂದವೆನ್ನುವ, ಮತ್ತಷ್ಟು ಬರಿ ಎಂದು ಸದಾ ಹುರಿದುಂಬಿಸುವ, ಕಾಳಜಿಯ ಮಹಾಪೂರ ನನ್ನ ಅಪ್ಪನಿಗೆ ಪ್ರೀತಿಯ ಸಿಹಿಮುತ್ತುಗಳು. ನಾನು ಏನೇ ಬರೆದರೂ ಕಾತರದಿಂದ ಓದುತ್ತಿದ್ದ ಜೀವನೋತ್ಸಾಹದ ಪ್ರತೀಕವಾಗಿದ್ದ ನನ್ನ ಅಜ್ಜಿ ನಾಗರತ್ನಮ್ಮನವರನ್ನು ಪ್ರೀತಿಯಿಂದ ಸ್ಮರಿಸುತ್ತೇನೆ.

ಬಿಡಿ ಕವಿತೆಗಳು ಸೇರಿ ಸಂಕಲನವಾಗುವುದ ಬೆರಗುಗಣ್ಣಿನಿಂದ ಕಂಡು ಸಮಯೋಚಿತ ಸಲಹೆ ಸೂಚನೆಗಳನ್ನು ನೀಡಿ ‘ಇವನು ನನ್ನ ಬದಿಗಿದ್ದರೆ ಎಲ್ಲವೂ ಸುಲಭ ಸಾಧ್ಯವೆಂಬ’ ಭರವಸೆ ಮೂಡಿಸುವ ಜೀವದ ಗೆಳೆಯ ಆದರ್ಶನಿಗೆ ರಾಶಿ ಪ್ರೀತಿ. ನನ್ನ ಸಾಹಿತ್ಯದ ಚಟುವಟಿಕೆಗಳಿಗೆಲ್ಲ ಮನಸಾರೆ ಒಳಿತು ಹಾರೈಸುವ ನನ್ನ ವೀಣಾ ಅತ್ತೆ ಮತ್ತು ಮಾವನಿಗೆ ಶರಣು.

ಸ್ವತಹ ಕವಯಿತ್ರಿಯೂ, ಬಸವ ಮಾರ್ಗದ ಪಥಿಕರೂ ಆಗಿರುವ ಸೋದರತ್ತೆ ಸರೋಜಮ್ಮನವರಿಗೂ ನನ್ನ ನೆನಕೆಗಳು ಸಲ್ಲುತ್ತವೆ.  ತಮ್ಮ ಅನುಕರಣೀಯ ವ್ಯಕ್ತಿತ್ವದಿಂದ ನನ್ನನ್ನು ಎಂದಿಗೂ ಪ್ರಭಾವಿಸುತ್ತಲೇ ಇರುವ ನನ್ನ ಗುರುಗಳೂ, ಪಿ.ಹೆಚ್.ಡಿ ಮಾರ್ಗದರ್ಶಕರೂ ಆದ ಪ್ರೊ. ಉಮಾ ಮಹೇಶ್ ಅವರ ಅಸೀಮ ಪ್ರೀತಿಗೆ ನಾನು ಚಿರಋಣಿ. ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಬಹುಶಃ 2006ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನದೊಂದು ಬರಹವನ್ನು ಓದಿ ಪತ್ರದ ಮೂಲಕ ಪರಿಚಿತರಾಗಿ, ಈಗ ಕುಟುಂಬದ ಸ್ನೇಹಿತರೂ ಮತ್ತು ಹಿತೈಷಿಗಳೂ ಆಗಿರುವ ಪುಸ್ತಕ ಪ್ರೇಮಿ ಕೃಷ್ಣಮೂರ್ತಿ ಅಂಕಲ್ ಅಂದಿನಿಂದಲೂ ನನ್ನ ಪ್ರತಿ ಹುಟ್ಟುಹಬ್ಬಕ್ಕೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ನನ್ನ ಅಭಿರುಚಿಯನ್ನು ತಿದ್ದಿದ್ದಾರೆ ಇವರ ಪ್ರತಿಫಲಾಪೇಕ್ಷೆ ಇಲ್ಲದ ಈ ಪ್ರೀತಿ ನನ್ನನ್ನು ಯಾವತ್ತಿಗೂ ಬೆರಗುಗೊಳಿಸುತ್ತಲೇ ಇರುತ್ತದೆ.

ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ನನ್ನಂತಹ ಹೊಸಬಳ ಮನವಿಯನ್ನು ಪುರಸ್ಕರಿಸಿ, ಕವಿತಗಳನ್ನು ಓದಿ ವಿಮರ್ಶಾತ್ಮಕ ಒಳನೋಟಗಳ, ತೂಕವಾದ ಮುನ್ನುಡಿಯನ್ನು ಬರೆದುಕೊಟ್ಟ ಖ್ಯಾತ ಬರಹಗಾರರು ಮತ್ತು ವಿಮರ್ಶಕರಾದ ಡಾ. ಎಂ. ಎಸ್. ಆಶಾದೇವಿಯವರಿಗೆ ನಾನು ಋಣಿ, ಪ್ರೀತಿಯಿಂದ ಕಿವಿಮಾತುಗಳನ್ನೂ ಹೇಳಿ ನನ್ನ ಮುಂದಿನ ಕವಿತೆಗಳಿಗೆ ದೊರಕಬೇಕಾದ ಹೊಸ ಆಯಾಮಗಳತ್ತ ಬೊಟ್ಟು ಮಾಡಿ ಮಾರ್ಗದರ್ಶನ ಮಾಡಿರುವ ಸರಳತೆ ಮತ್ತು ವಿದ್ವತ್ತುಗಳ ಸಾಕಾರವಾಗಿರುವ ಡಾ. ಎಂ. ಎಸ್. ಆಶಾದೇವಿಯವರಿಗೆ ಧನ್ಯವಾದಗಳು.

ನನ್ನ ಕವಿತೆಗಳನ್ನು ಓದಿ ಆತ್ಮೀಯವಾಗಿ ಬೆನ್ನುಡಿಯನ್ನು ಬರೆದು ಕೊಟ್ಟ ಸಜ್ಜನರು, ಸಹೃದಯರೂ, ಹಿರಿಯ ಕವಿಗಳೂ ಆದ ಡಾ. ಹೆಚ್. ಎಲ್. ಪುಷ್ಪ ರವರಿಗೆ ನನ್ನ ಕೃತಜ್ಞತೆಗಳು, ಇವರ ಪ್ರೋತ್ಸಾಹದ ಮಾತುಗಳೇ ನನ್ನೊಳಗೆ ಮೊದಲ ಸಂಕಲನ ಪ್ರಕಟಿಸುವ ಬಗ್ಗೆ ಇದ್ದ ಆತಂಕ, ಹಿಂಜರಿಕೆಗಳನ್ನು ಬಹುಮಟ್ಟಿಗೆ ಕಡಿಮೆ ಮಾಡಿದವು.

ನನ್ನ ಎಲ್ಲಾ ಕವಿತೆಗಳ ಮೊದಲ ಓದುಗನಾಗಿದ್ದು, ಪುಸ್ತಕದ ಮುಖಪುಟ ಮತ್ತು ಒಳಪುಟಗಳ ಚಿತ್ರಗಳನ್ನು ಬರೆದು ಮೊದಲ ಸಂಕಲನವೆಂಬ ಸಂಭ್ರಮದಲ್ಲಿ ಭಾಗಿಯಾದ ಅಣ್ಣನಂತಹ ಗೆಳೆಯ, ಪ್ರತಿಭಾನ್ವಿತ ಕಲಾವಿದ ಮಹಾಂತೇಶ ದೊಡ್ಡಮನಿಗೆ ಹೃದಯ ತುಂಬಿದ ಧನ್ಯವಾದಗಳು.

ಕವನ ಸಂಕಲನ ಸಿದ್ಧವಾಗುವ ಪ್ರತಿ ಹಂತದಲ್ಲೂ ಜೊತೆಗಿದ್ದು ಸ್ಥೈರ್ಯ ತುಂಬಿದ ಸ್ನೇಹಿತರು ಎಡೆಯೂರು ಪಲ್ಲವಿ ಮತ್ತು ದಾದಾಪೀರ್ ಜೈಮನ್, ನನ್ನ ಯಾವುದೇ ಒಳ್ಳೆಯ ಕೆಲಸಕ್ಕೂ ಸಹಕರಿಸುವ ತಮ್ಮ ಪುನೀತ್, ನನ್ನ ಹಲವು ಕವಿತೆಗಳ ಮೊದಲ ಓದುಗ ಮತ್ತು ವಿಶ್ಲೇಷಕ ಮಂಜು ನಾಯಕ್, ತಾವು ಬರೆದ ಚಿತ್ರವೊಂದನ್ನು ಬಳಸಲು ಖುಷಿಯಿಂದ ಅನುಮತಿಯಿತ್ತ ಸಹೋದ್ಯೋಗಿ ಸಿದ್ಧಗಂಗಾ, ಇವರೆಲ್ಲರಿಗೂ ಒಲವು ತುಂಬಿದ ಧನ್ಯವಾದಗಳು.

ಕವನ ಸಂಕಲನಕ್ಕೆ ನಾಮಕರಣವಾಗುವುದರಿಂದ ಹಿಡಿದು ಪುಸ್ತಕವಾಗಿ ಕೈಸೇರುವವರೆಗೂ ಹಲವು ತಿರುವುಗಳಲ್ಲಿ ಹಾದಿಗೆ ದೀಪವಾಗಿ ಬೆಳಕು ಚೆಲ್ಲಿದ ಟಿ, ಎಸ್, ಗೊರವರ, ವೀರಣ್ಣ ಮಡಿವಾಳರ್, ಶಿವಪ್ರಸಾದ್ ಪಟ್ಟಣಗೆರೆ, ಧನಂಜಯ ಎನ್, ಶಂಕರ್ ಸಿಹಿಮೊಗೆ, ರಾಮಕೃಷ್ಣ ಸುಗತ, ಸುಮಿತ್ ಮೇತ್ರಿ ಎಲ್ಲರಿಗೂ ಸಂದರ್ಭೋಚಿತ ಸಲಹೆಗಳು ಮತ್ತು ಕಾಳಜಿಗೆ ನಾನು ಕೃತಜ್ಞಳು. ಪುಸ್ತಕದ ಒಳಪುಟ ವಿನ್ಯಾಸ ಮಾಡಿಕೊಟ್ಟ ಹೆಚ್. ಕೆ. ಶರತ್ ಅವರಿಗೂ ಧನ್ಯವಾದಗಳು.

ನನ್ನ ಕವಿತೆಗಳನ್ನು ಆಗಾಗ್ಗೆ ಪ್ರಕಟಿಸಿ ಮತ್ತಷ್ಟು ಬರೆಯಲು ಉತ್ತೇಜನ ನೀಡಿದ ಪ್ರಜಾವಾಣಿ, ಮಯೂರ, ಉದಯವಾಣಿ, ಕರ್ಮವೀರ ಪತ್ರಿಕೆಗಳಿಗೆ ಮತ್ತು ವೆಬ್ ಮ್ಯಾಗಜೀನ್ ಅವಧಿಗೆ ನಾನು ಆಭಾರಿ. ಈ ಕವನ ಸಂಕಲನ ಪ್ರಕಟಣೆಗೆ ಅನುಮತಿಯಿತ್ತು ಪ್ರೋತ್ಸಾಹಿಸಿದ ಸಜ್ಜನರೂ, ಸಾಹಿತ್ಯಾಸಕ್ತರೂ ಆದ ವಾಣಿಜ್ಯ ತೆರಿಗೆ ಅಪರ ಆಯುಕ್ತರಾದ ಶ್ರೀಯುತ ಪದ್ಮಾಕರ ಕುಲಕರ್ಣಿಯವರಿಗೆ ಧನ್ಯವಾದಗಳು. ನನ್ನ ಮೊದಲ ಸಂಕಲನದೊಂದಿಗೆ ತನ್ನ ಮೊದಲ ಹೆಜ್ಜೆಯನ್ನೂ ಇಡುತ್ತಿರುವ ಅರ್ನವ ಸೂರ್ಯ ಪ್ರಕಾಶನಕ್ಕೆ ಶುಭಕಾಮನೆಗಳು.

“ನಾನು ಒಬ್ಬ ಕವಿ,

ನನಗೆ ಬೇಕಾದದ್ದು ಹೃದಯವಿರುವಂಥ

ಐದೋ ಆರೋ ಕಿವಿ!”

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಈ ಸಾಲುಗಳು ಕವಿತೆಯನ್ನು ಕವಿ ಏಕೆ ಬರೆಯುತ್ತಾನೆಂಬ ಪ್ರಶ್ನೆಗೆ ಉತ್ತರಿಸುತ್ತದೆ, ಕವಿ ತನ್ನ ಆತ್ಮತೃಪ್ತಿಗಾಗಿಯೇ ಬರೆದರೂ ಸಹ, ಐದಾರು ಸಹೃದಯರಿಗಾಗಿ ಹಾತೊರೆಯುತ್ತಾನೆ, ತನ್ನ ಕಾವ್ಯ ಓದುಗನಲ್ಲಿ ವಿಶೇಷವಾದ ಅನುಭೂತಿಯನ್ನುಂಟು ಮಾಡಿದರೆ ಕವಿಗೆ ಸಂತೋಷ. ನನ್ನ ಮೊದಲ ಕವನ ಸಂಕಲನದ ಪ್ರಕಟಣೆಯ ಉದ್ದೆಶವೂ ಹೀಗೆಯೇ ಇದೆ. ಸುಮಾರು ಹತ್ತು ವರ್ಷಗಳಿಂದ ಕವಿತೆ ಬರೆಯುತ್ತಿದ್ದರೂ, ಸಂಖ್ಯೆಯ ದೃಷ್ಟಿಯಿಂದ ನಾನು ಬರೆದದ್ದು ಕಡಿಮೆಯೇ, ನನ್ನೊಳಗೆ ಹರಳುಗಟ್ಟಿ ಕವಿತೆಯಾಗಿ ಹೊರಬರದೇ ಅನ್ಯ ಮಾರ್ಗವಿಲ್ಲ ಎಂಬಂತಹ ಸಂದರ್ಭಗಳು ಮಾತ್ರ ನನ್ನಿಂದ ಬರೆಸಿಕೊಂಡಿವೆ.

ಕವಿತೆ ಹುಟ್ಟುವ ಪರಿ ನನಗೆ ಎಂದಿಗೂ ಸೋಜಿಗ. ನನ್ನ ಕವಿತೆಗಳು ಪ್ರಕಟಣೆಗೆ ಯೋಗ್ಯವಾಗಿವೆಯೇ ಎಂಬ ಅಳುಕು ಕಡಿಮೆಯಾದದ್ದು ಅಲ್ಲಲ್ಲಿ ಪ್ರಕಟವಾದ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವ ಸಹೃದಯರಿಂದಲೇ. ಈ ಸಂಕಲನದಲ್ಲಿನ ಕೆಲವಾದರೂ ಕವಿತೆಗಳು ಸಹೃದಯರ ‘ಕಲ್ಲು ಸಕ್ಕರೆಯಂಥ’ ಮನಸ್ಸನ್ನು ಮುಟ್ಟಿದರೆ ನನ್ನ ಈ ಮೊದಲ ಪ್ರಯತ್ನ ಸಾರ್ಥಕವೆಂದು ಭಾವಿಸುತ್ತೇನೆ.

‍ಲೇಖಕರು Avadhi

December 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This