'ಜುಗಾರಿ ಕ್ರಾಸ್'ನಲ್ಲಿ ಡಬ್ಬಿಂಗ್

ಹೇಳಿಕೇಳಿ ‘ಜುಗಾರಿ ಕ್ರಾಸ್’ ಚರ್ಚೆ, ವಾದ, ವಿವಾದಕ್ಕಾಗಿಯೇ ಇರುವ ವೇದಿಕೆ. ಈ ಬಾರಿ ಎಸ್ ಸಿ ದಿನೇಶ್ ಕುಮಾರ್ ಡಬ್ಬಿಂಗ್ ಕುರಿತ ವಿವಾದವನ್ನು ಕೈಗೆತ್ತಿಕೊಂಡಿದ್ದಾರೆ. ಅಮೀರ್ ಖಾನ್ ಅವರ ‘ಸತ್ಯಮೇವ ಜಯತೆ’ ಕನ್ನಡಕ್ಕೆ ಡಬ್ ಆಗಬಾರದು ಎಂದು ದನಿ ಎತ್ತಿರುವ ಸಂದರ್ಭದಲ್ಲಿ ದಿನೇಶ್ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ. ಚರ್ಚೆಗೆ ಸ್ವಾಗತ. ನೀವೂ ಭಾಗವಹಿಸಿ.

ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ….

ಎಸ್ ಸಿ ದಿನೇಶ್ ಕುಮಾರ್ ಹೆಸರಾಂತ ಚಿತ್ರನಟ ಅಮೀರ್ ಖಾನ್ ಅವರ ಬಹುನಿರೀಕ್ಷೆಯ ಉದ್ದೇಶಿತ ಟೆಲಿವಿಷನ್ ಶೋ `ಸತ್ಯಮೇವ ಜಯತೆ’ಯಿಂದಾಗಿ ಕನ್ನಡ ಸಿನಿಮಾ-ಕಿರುತೆರೆಯಲ್ಲಿ ಚಾಲ್ತಿಯಲ್ಲಿರುವ ಡಬ್ಬಿಂಗ್ ನಿಷೇಧದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಾದವಿವಾದಗಳು ಬಿರುಸಾಗಿಯೇ ನಡೆಯುತ್ತಿದೆ. ಸತ್ಯಮೇವ ಜಯತೆಯನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಯಾರಿಸುತ್ತೇವೆ ಎಂದು ಆಯೋಜಕರು ಘೋಷಿಸುತ್ತಿದ್ದಂತೆ, ಸಿನಿ-ಟಿವಿ ಸಂಘಟನೆಗಳು ತಮ್ಮ ಏಕತೆಯನ್ನು ಪ್ರದರ್ಶಿಸಿ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ. ಸಣ್ಣಪುಟ್ಟದಕ್ಕೂ ಕಾದಾಡಿಕೊಂಡು ಬಂದು ನ್ಯೂಸ್ ಟೆಲಿವಿಷನ್ಗಳ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ಅಸಭ್ಯವಾಗಿ ಜಗಳವಾಡುವ ಈ ಮಂದಿ ಡಬ್ಬಿಂಗ್ ಧಾರಾವಾಹಿಯ ಕುರಿತಂತೆ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ಒಂದು ವಿಶೇಷ ಬೆಳವಣಿಗೆಯೆಂದೇ ಪರಿಗಣಿಸಬಹುದು! ಆದರೆ ಮುಖ್ಯವಾಗಿ ಸಿನಿಮಾ-ಟವಿ ಸಂಘಟನೆಗಳ ಈ ಅಭೂತಪೂರ್ವ ಒಗ್ಗಟ್ಟಿಗೆ ಕಾರಣ ಹುಡುಕಿಕೊಂಡು ಹೋದರೆ ನಿರಾಶೆಯೇ ಕಾದಿರುತ್ತದೆ. ಕನ್ನಡದ ಸೂಕ್ಷ್ಮಮತಿ ನಟಿ, ಹಾಲಿ ರಾಜಕಾರಣಿಯೊಬ್ಬರು ಅಮೀರ್ ಖಾನ್ ಶೋ ಬಗ್ಗೆ ಹೇಳಿದ ಮಾತು ಗಾಬರಿ ಹುಟ್ಟಿಸುವಂತಿದೆ. ಅವರು ಶೋ ಡಬ್ ಮಾಡಿದರೆ ಮಾಡಿಕೊಳ್ಳಲಿ, ಪ್ರಸಾರ ಮಾಡಲು ಬಿಡುವವರು ಯಾರು? ಇದು ಅವರ ಮಾತು. ಉದ್ಯಮದ ಪ್ರತಿಕ್ರಿಯೆ ಈ ಧಾಟಿಯ ಪಾಳೆಗಾರಿಕೆ ಭಾಷೆಯಲ್ಲಿದ್ದರೆ ಅವುಗಳಿಗೆ ಉತ್ತರಿಸುವುದು ಕಷ್ಟ. ಆದರೂ ಕೆಲವು ಮುಖ್ಯವಾದ ಅಂಶಗಳನ್ನುಚರ್ಚಿಸಲೇಬೇಕಾಗಿದೆ. ಡಬ್ಬಿಂಗ್ ವಿರುದ್ಧ ಕತ್ತಿ-ಗುರಾಣಿ ಹಿಡಿದು ನಿಂತಿರುವ ಸಿನಿಮಾ-ಟಿವಿ ಸಂಘಟನೆಗಳ ವಲಯದ ಬುದ್ಧಿಜೀವಿಗಳು ಬಳಸುತ್ತಾ ಇರುವುದು ಜಾಗತೀಕರಣದ ಭೂತವನ್ನು. ಹೀಗೆ ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ಜಾಗತೀಕರಣಕ್ಕೆ ಕನೆಕ್ಟ್ ಮಾಡುವುದು ಬಲು ಸುಲಭ. ಇದು ಅತ್ಯಂತ ಬುದ್ಧಿವಂತಿಕೆಯ ಸಮರ್ಥನೆ. ಯಾಕೆಂದರೆ ಜಾಗತೀಕರಣ ಪ್ರತಿ ಮನೆಯನ್ನೂ ಪ್ರವೇಶಿಸಿದೆ. ಕುಡಿಯುವ ನೀರಿನಿಂದ ಹಿಡಿದು, ಉಸಿರಾಡುವ ಗಾಳಿಯವರೆಗೆ ಅದು ಎಲ್ಲವನ್ನೂ ಪ್ರಭಾವಿಸುತ್ತಿದೆ. ಸಮಸ್ಯೆಯನ್ನು ವಿಸ್ತಾರಗೊಳಿಸಿ ಅದಕ್ಕೊಂದು ಜಾಗತಿಕ ಆಯಾಮ ಕೊಡಲು ಸಿನಿ ಬುದ್ಧಿಜೀವಿಗಳು ಈಗ ಡಬ್ಬಿಂಗ್ ಜಾಗತೀಕರಣದ ಪಿಡುಗು ಎಂದು ಬಿಂಬಿಸುತ್ತಿದ್ದಾರೆ. ಅಸಲಿಗೆ ಹೀಗೆ ಜಾಗತೀಕರಣವನ್ನು ಗುರಾಣಿಯನ್ನಾಗಿ ಬಳಸುವವರ ಧಾರಾವಾಹಿಗಳಿಗೆ ಜಾಹೀರಾತು ನೀಡುವವು ಬಹುರಾಷ್ಟ್ರೀಯ ಕಂಪೆನಿಗಳೇ ಆಗಿರುತ್ತವೆ. ಇವರ ಸಿನಿಮಾ ನಿರ್ಮಾಣಕ್ಕೆ ಸಹಯೋಗ ನೀಡುವ ಸಂಸ್ಥೆಗಳೂ ಅವೇ ಆಗಿರುತ್ತವೆ. ಈ ದ್ವಂದ್ವದಿಂದ ಹೊರಬರಲಾರದವರು ಡಬ್ಬಿಂಗ್ ಜಾಗತೀಕರಣದ ಉತ್ಪನ್ನ ಎಂದು ಹೇಳುವುದೇ ಒಂದು ತಮಾಶೆಯಾಗಿ ಕೇಳಿಸುತ್ತದೆ. ಡಬ್ಬಿಂಗ್ ಏಕಸಂಸ್ಕೃತಿಯನ್ನು ಹೇರುವ ಪ್ರಯತ್ನ, ಇದು ಬಹುಸಂಸ್ಕೃತಿಗಳನ್ನು ನಾಶಪಡಿಸುತ್ತವೆ ಎಂಬುದು ಸಿನಿ ಬುದ್ಧಿಜೀವಿಗಳ ಮತ್ತೊಂದು ಗೋಳು. ಅಸಲಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಯೋಗ್ಯತೆ ಸಿನಿಮಾ ಮಂದಿಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ. ಕನ್ನಡದಲ್ಲಿ ನಿರ್ಮಾಣವಾಗುವ ಅರ್ಧದಷ್ಟು ಸಿನಿಮಾಗಳ ಹೀರೋಗಳಿಗೆ ಸಿಗುವ ಪಾತ್ರ ರೌಡಿಯದ್ದೇ ಆಗಿರುತ್ತದೆ. ಮಿಕ್ಕ ಸಿನಿಮಾಗಳಲ್ಲೂ ರೌಡಿಜಂದೇ ಕಾರುಬಾರು. ಇದೇನು ಕನ್ನಡದ ಸಂಸ್ಕೃತಿಯೇ? ಮಚ್ಚು ಲಾಂಗು ಐಟಮ್ ಸಾಂಗುಗಳಿಲ್ಲದೆ ಸಿನಿಮಾ ಮಾಡೋದೇ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಕನ್ನಡ ಸಿನಿಮಾ ರಂಗ ತಲುಪಿದೆ. ಕನ್ನಡದ ಜನರು ಮಚ್ಚು ಸಂಸ್ಕೃತಿಯಿಂದ ಬಂದವರಾ? ಸಾಲು ಮೇರೆ ಈ ಥರಹದ ಸಿನಿಮಾಗಳು ತೋಪಾಗುತ್ತಿದ್ದರೂ ಇದೇ ಫಾನಿರ್ಮಾಣ ಲಾ ಹಿಡಿದುಕೊಂಡು ಸಿನಿಮಾ ಮಾಡುವುದಾದರೂ ಯಾಕೆ? ಇವತ್ತು ಕನ್ನಡದ ಧಾರಾವಾಹಿಗಳ ಪೈಕಿ ಟಾಪ್ ಟೆನ್ ನಲ್ಲಿರುವ ಎಲ್ಲ ಧಾರಾವಾಹಿಗಳು ರೀಮೇಕ್ ಧಾರಾವಾಹಿಗಳು. ಅಂದರೆ ಬೇರೆ ಭಾಷೆಗಳಲ್ಲಿ ಬಂದ ಧಾರಾವಾಹಿಗಳನ್ನೇ ಕಾಪಿ ಹೊಡೆದು ನಿರ್ಮಿಸಿದ ಧಾರಾವಾಹಿಗಳು. ಇವು ಯಾವ ಸಂಸ್ಕೃತಿಯನ್ನು ಬಿಂಬಿಸುತ್ತವೆ? ವರ್ಷಗಟ್ಟಲೆ ನಡೆಯುವ ಕನ್ನಡ ಸೀರಿಯಲ್ಲುಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಹೆಣ್ಣೇ ನಾಯಕಿ, ಹೆಣ್ಣೇ ವಿಲನ್. ಎಲ್ಲ ಸೀರಿಯಲ್ಲುಗಳು ವಿಲನ್ ಹೆಣ್ಣುಗಳು ಸಾಲುಸಾಲು ಹೆಣಗಳನ್ನು ಉರುಳಿಸುವಷ್ಟು ವಿಕೃತ ಮನಸ್ಸಿನವರು. ಇವರು ಕನ್ನಡದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಾರಾ? ಇದು ಕನ್ನಡ ಸಂಸ್ಕೃತಿಯಾ? ಡಬ್ಬಿಂಗ್ ನಿಂದ ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಘೋಷಿಸುವವರು ಮೊದಲು ಕನ್ನಡ ಸಿನಿಮಾಗಳು, ಧಾರಾವಾಹಿಗಳು ಯಾವ ಸಂಸ್ಕೃತಿಯನ್ನು ಪೋಷಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳುವಂತವರಾಗಬೇಕು. ಹಾಗೆ ನೋಡಿದರೆ ಬಹುಸಂಸ್ಕೃತಿಗಳು ಇವೆ ಎಂಬುದನ್ನೇ ಕನ್ನಡ ಸಿನಿಮಾಗಳು-ಧಾರಾವಾಹಿಗಳು ನಿರಾಕರಿಸುತ್ತವೆ. ಅಲ್ಲಿರುವುದು ಕಪ್ಪು ಬಿಳುಪು ಸಂಸ್ಕೃತಿ ಮಾತ್ರ. ಆದರ್ಶದ ಪಾತ್ರಗಳಿಗೆ ಮೇಲ್ವರ್ಗದ ಹೆಸರುಗಳಿದ್ದರೆ, ಕೇಡಿಗಳ ಹೆಸರುಗಳೆಲ್ಲ ಕೆಳವರ್ಗದವರ ಹೆಸರುಗಳೇ ಆಗಿರುತ್ತವೆ. ಹೀಗೆ ಕಪ್ಪು ಬಿಳುಪಾಗಿ ನೋಡುವ ಹಿನ್ನೆಲೆಯಲ್ಲಿ ಕೆಲಸ ಮಾಡುವ ಮನಸ್ಸುಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ಮಾಡಬಹುದು. ಆದರೆ ನಾಡಿನ ನೂರಾರು, ಸಾವಿರಾರು ಸಂಸ್ಕೃತಿ-ಉಪಸಂಸ್ಕೃತಿಗಳಿಗೆ ಈತನಕ ಕುರುಡಾಗೇ ಇರುವ, ಆ ಕಡೆಗೆ ಕಣ್ಣುಹಾಯಿಸಿಯೂ ನೋಡದ ಜನರು ಬಹುಸಂಸ್ಕೃತಿಗಳು ನಾಶವಾಗುತ್ತವೆ ಎಂಬ ಅಸ್ತ್ರ ಹಿಡಿದು ಡಬ್ಬಿಂಗ್ ವಿರೋಧ ಸಮರ್ಥಿಸಿಕೊಳ್ಳುವುದೇ ನಾಚಿಕೆಗೇಡು. ಇವತ್ತಿಗೂ ಕನ್ನಡ ಸಿನಿಮಾ-ಧಾರಾವಾಹಿಗಳಿಗೆ ಇತರ ಭಾಷೆಗಳ ಸಿನಿಮಾ-ಧಾರಾವಾಹಿಗಳೇ ಕಚ್ಚಾ ಸರಕು. ಇತರೆ ಭಾಷೆ ಸಿನಿಮಾ-ಧಾರಾವಾಹಿಗಳನ್ನು ಒಂದೋ ನಿರ್ಭಿಡೆಯಿಂದ ಮಕ್ಕೀಕಾಮಕ್ಕೀ ರೀಮೇಕ್ ಮಾಡುತ್ತಾರೆ. ಅಥವಾ ಅವುಗಳ ದೃಶ್ಯಗಳನ್ನು ಕದಿಯುತ್ತಾರೆ. ಆಗ ಯಾವ ಸಂಸ್ಕೃತಿನಾಶ ಆಗುವುದಿಲ್ಲವೋ? ಈ ಸಿನಿ-ಟಿವಿ ಸಂಘಟನೆಗಳ ತರ್ಕ, ವಾದ ಏನೇ ಇರಲಿ ಕೆಲವು ಮಹತ್ವದ ಕಾರಣಗಳಿಗಾಗಿ ಡಬ್ಬಿಂಗ್ ನಿಷೇಧವನ್ನು ತೆರವುಗೊಳಿಸಲೇಬೇಕಾದ ಅನಿವಾರ್ಯತೆ ಇದೆ. ಈಗಲಾದರೂ ಸಿನಿಮಾ-ಟಿವಿ ರಂಗ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ಡಬ್ಬಿಂಗ್ಗಳಿಗೆ ಅವಕಾಶ ನೀಡುವುದು ಒಳ್ಳೆಯದು. ಡಬ್ಬಿಂಗ್ ಯಾಕೆ ಬೇಕು ಎಂಬುದಕ್ಕೆ ನನಗೆ ಹೊಳೆದ ಕಾರಣಗಳು ಹೀಗಿವೆ. 1. ಮೊದಲನೆಯದಾಗಿ ಡಬ್ಬಿಂಗ್ ನಿಷೇಧ ಎಂಬ ಪದಪ್ರಯೋಗವೇ ತಪ್ಪು. ಡಬ್ಬಿಂಗ್ ನಿಷೇಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ, ಅದರ ಉಪ ಸಂಘಟನೆಗಳಿಗಾಗಲಿ ಡಬ್ಬಿಂಗ್ ನಿಷೇಧಿಸುವ ಯಾವ ತರಹದ ಹಕ್ಕೂ ಇಲ್ಲ. ಡಬ್ಬಿಂಗ್ ನಿಷೇಧವಾಗಲೇಬೇಕೆಂದಿದ್ದರೆ ಅದು ಕಾನೂನಾಗಿ ಜಾರಿಗೆ ಬರಬೇಕು. ಅಂಥ ಕಾನೂನುಗಳು ದೇಶದ ಯಾವ ಮೂಲೆಯಲ್ಲೂ ನಿರ್ಮಾಣವಾಗಿಲ್ಲ. 2. ಜ್ಞಾನ-ಮನರಂಜನೆಯನ್ನು ತಮಗೆ ಇಷ್ಟವಾದ ಭಾಷೆಯಲ್ಲಿ ಪಡೆದುಕೊಳ್ಳುವುದು ಎಲ್ಲರ ಮೂಲಭೂತ ಹಕ್ಕು. ಜಗತ್ತಿನ ಯಾವುದೇ ಭಾಷೆಯಲ್ಲಿ ನಿರ್ಮಾಣವಾಗಬಹುದಾದ ಸಿನಿಮಾ, ಧಾರಾವಾಹಿ, ಡಾಕ್ಯುಮೆಂಟರಿ ಇತ್ಯಾದಿಗಳು ನನಗೆ ಕನ್ನಡ ಭಾಷೆಯಲ್ಲೇ ಬೇಕು. ಜಗತ್ತನ್ನು ನಾನು ಕನ್ನಡದ ಕಣ್ಣಿನಿಂದಲೇ ನೋಡಲು ಬಯಸುತ್ತೇನೆ. ನನ್ನ ಹಕ್ಕನ್ನು ಮೊಟಕುಗೊಳಿಸುವ ಸ್ವಾತಂತ್ರ್ಯವನ್ನು, ಅಧಿಕಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾನು ನೀಡಿಲ್ಲ. 3. ಪರಭಾಷಾ ಸಿನಿಮಾಗಳು ಮಿತಿ ಮೀರಿವೆ. ಇದಕ್ಕೆ ಕಾರಣ ಕನ್ನಡ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನೇ ಆಕರ್ಶಿಸದೇ ಇರುವುದು. ಒಳ್ಳೆಯ ಸಿನಿಮಾಗಳು ಬಂದಾಗ (ಮುಂಗಾರುಮಳೆ, ಆಪ್ತಮಿತ್ರ) ಕನ್ನಡ ಪ್ರೇಕ್ಷಕರು ಅವುಗಳನ್ನು ಗೆಲ್ಲಿಸಿದ್ದಾರೆ. ಕಳಪೆ ಸಿನಿಮಾಗಳು ಬಂದಾಗ ತಿರಸ್ಕರಿಸಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬಾರದೇ ಹೋದಾಗ ಭಾಷೆ ಬಾರದಿದ್ದರೂ ಬೇರೆ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಆ ಸಿನಿಮಾಗಳು ಕನ್ನಡದಲ್ಲೇ ಬರುವಂತಾದರೆ ಕನ್ನಡಿಗರು ಕನ್ನಡ ಸಿನಿಮಾಗಳನ್ನೇ ನೋಡುತ್ತಾರೆ, ಕನ್ನಡ ವಾತಾವರಣವೂ ನಿರ್ಮಾಣವಾಗುತ್ತದೆ. 4. ಡಬ್ಬಿಂಗ್ ಚಾಲ್ತಿಗೆ ಬಂದರೆ ಒಂದು ಆರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಕನ್ನಡ ನಿರ್ಮಾಪಕರು-ನಿರ್ದೇಶಕರು ಒಳ್ಳೆಯ ಸಿನಿಮಾ-ಧಾರಾವಾಹಿಗಳನ್ನು ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಪೈಪೋಟಿ ಹೆಚ್ಚಿದಾಗಲೇ ಗುಣಮಟ್ಟವೂ ಹೆಚ್ಚಲು ಸಾಧ್ಯವಿದೆ. ಕನ್ನಡಿಗರು ಒಳ್ಳೆಯ ಗುಣಮಟ್ಟದ ಸಿನಿಮಾ-ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. 5. ಕನ್ನಡವೊಂದೇ ಗೊತ್ತಿರುವ, ಬೇರೆ ಯಾವ ಭಾಷೆಗಳೂ ಬಾರದ ಕನ್ನಡ ಪ್ರೇಕ್ಷಕರು ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶವನ್ನು ಪಡೆಯುತ್ತಾನೆ. ಟೈಟಾನಿಕ್, ಅವತಾರ್ ನಂಥ ಸಿನಿಮಾಗಳನ್ನು ಭಾಷೆಯ ಕಾರಣಕ್ಕಾಗಿ ನೋಡದೇ ಉಳಿದಿರುವ ಕನ್ನಡಿಗರಿಗೆ ಆಗುವ ಅನ್ಯಾಯಗಳು ತಪ್ಪುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಪಾಳೇಗಾರಿಕೆಯ ಕಾಲವಲ್ಲ. ಜನರು ತಮಗೆ ಇಷ್ಟವಾಗಿದ್ದನ್ನು ನೋಡುವ, ಕೇಳುವ ಹಕ್ಕನ್ನು ಕಾನೂನುಬದ್ಧವಾಗಿ ಹೊಂದಿದ್ದಾರೆ. ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಡಬ್ಬಿಂಗ್ ವಿರೋಧಕ್ಕೆ ಕಾರಣವಾಗಿ ತಮ್ಮ ಹೊಟ್ಟೆಪಾಡನ್ನು ವಿವರಿಸಿದರೆ ಸಿನಿ-ಟಿವಿ ಸಂಘಟನೆಗಳಿಗೆ ಪರ್ಯಾಯ ಮಾರ್ಗ ದೊರಕಿಸಿಕೊಡಲು ಸರ್ಕಾರ, ಜವಾಬ್ದಾರಿಯುತ ಸಮಾಜದ ಗಣ್ಯರು ಚಿಂತಿಸಬಹುದು. ಅದನ್ನು ಬಿಟ್ಟು, ಡಬ್ಬಿಂಗ್ ಮೂಲಕ ಜಾಗತೀಕರಣ ಪ್ರವೇಶ ಪಡೀತಾ ಇದೆ, ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಎಳಸು ಎಳಸಾಗಿ ಮಾತನಾಡುವುದನ್ನು ಈ ಜನರು ಬಿಡಬೇಕಿದೆ. ಡಬ್ಬಿಂಗ್ ಇಂದಲ್ಲ ನಾಳೆ ಬರಲೇಬೇಕು, ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ತಡೆಯುವುದಕ್ಕೆ ಯಾವ ಸಕಾರಣಗಳೂ ಯಾರ ಬಳಿಯೂ ಇಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.]]>

‍ಲೇಖಕರು G

April 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

16 ಪ್ರತಿಕ್ರಿಯೆಗಳು

 1. ಆನಂದ್

  ದಿನೇಶ್ ಕುಮಾರ್,
  ನಿಮ್ಮ ಮಾತುಗಳಿಗೆ ನನ್ನ ಬೆಂಬಲವಿದೆ. ಸಂಸ್ಕ್ರುತಿ ರಕ್ಷಣೆಯ ಭಾರದ ಮಾತುಗಳನ್ನಾಡೊ ಜನರ ನಿಜ ಆಸಕ್ತಿ ತಮ್ಮ ಚಿತ್ರರಂಗಕ್ಕೆ ಸ್ಪರ್ಧೆ ಇರಬಾರದು ಎನ್ನುವುದು ಮಾತ್ರವೇ ಆಗಿರುವಂತಿದೆ. ಡಬ್ಬಿಂಗ್ ನಿಷೇಧ ತೆರವಾಗಲೀ ಎನ್ನುವವರೆಲ್ಲಾ ಇಲ್ಲಿ ಸಹಿ ಮಾಡಿ!
  https://www.change.org/petitions/suvarna-tv-telecast-satyameva-jayate-in-kannada

  ಪ್ರತಿಕ್ರಿಯೆ
 2. Amarnath Shivashankar

  ಬಹಳ ಸಮಂಜಸವಾದ ಲೇಖನ. ಡಬ್ಬಿಂಗ್ ಬೇಡ ಅಂತ ಅರಚಾಡುವವರು ಈ ಪ್ರಶ್ನೆಗಳಿಗೆ ಉತ್ತರಿಸಲಿ. ಬಹಿರಂಗವಾಗಿ ಉತ್ತರಿಸಲು ಉತ್ತರಗಳಿದೆಯೇ? ಹೋಗಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಲಿ.

  ಪ್ರತಿಕ್ರಿಯೆ
 3. ರಾಘವೇಂದ್ರ ಜೋಶಿ

  ಇಷ್ಟಕ್ಕೂ ಕನ್ನಡಕ್ಕೆ ಡಬ್ಬಿಂಗ್ ಬೇಕಾಗಿಲ್ಲ ಅಂತ ಇಂಡಸ್ಟ್ರಿಯವರು ನಿರ್ಧರಿಸುವದು ಸರಿ ಕಾಣಲಿಲ್ಲ.ಹಾಗೊಂದು ವೇಳೆ ಈ ನಿರ್ಧಾರ ಸರಿ ಅಂತ ಅನ್ನುವದಾದರೆ “ಟೈಟಾನಿಕ್” ನಂಥ ಚಿತ್ರವನ್ನು ಕನ್ನಡದಲ್ಲೇ ಮಾಡಿ ನೋಡುವ.ಆಗ ಈ ನಿರ್ಧಾರವನ್ನು ಮೆಚ್ಚಿಕೊಳ್ಳಬಹುದೇನೋ..ಒಳ್ಳೆಯದು,ಆಸಕ್ತಿಕರವಾದದ್ದು,ಅಮೋಘವಾದದ್ದು-ಇದೆಲ್ಲವನ್ನೂ ನಾನು ನನ್ನ ಕನ್ನಡ ಭಾಷೆಯಲ್ಲೇ ನೋಡಬಯಸುತ್ತೇನೆ.ಕನ್ನಡದಲ್ಲೇ ನೋಡುವದರ ಮೂಲಕ ನನ್ನ ಖುಷಿಯನ್ನು ದ್ವಿಗುಣಗೊಳಿಸಲು ಬಯಸುತ್ತೇನೆ.ಮತ್ತು ಕನ್ನಡದಲ್ಲೇ ನೋಡುವದರ ಮೂಲಕ ನಾನು ಜಾಸ್ತಿ relate ಆಗಬಲ್ಲೆ ಅಂತ ನನ್ನ ವೈಯಕ್ತಿಕ ಭಾವನೆ..ಈಗ ಹೇಳಿ: ಕನ್ನಡದ ಮಾರುಕಟ್ಟೆ ಸೀಮಿತ ಅಂತ ಹೇಳಿಕೊಂಡು,ಡಬ್ಬಿಂಗ್ ಎಂಬ ಗುರಾಣಿ ಹಿಡಿದು ಮಾಡಬಹುದಾದ ಈ ಎಲ್ಲ ಸಾಧ್ಯತೆಗಳನ್ನು ನಾಶ ಮಾಡಬೇಕೆ? ಬಜೆಟ್ ಇಲ್ಲ,ಮಾರುಕಟ್ಟೆ ಇಲ್ಲ,ಕತೆ ಇಲ್ಲ,ಇದಿಲ್ಲ-ಅದಿಲ್ಲ ಅಂತೆಲ್ಲ ಹೇಳಿ,ಸುಮ್ಮನೇ ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ ಹೇಳಿಕೊಂಡು ಸುಮ್ಮನಿರಬೇಕೆ? ಇಲ್ಲಿ ನನಗೊಂದು ತಮಾಷೆ ನೆನಪಾಗುತ್ತಿದೆ: ಇರುವೆಯೊಂದು ಸಕ್ಕರೆ ತುಣುಕಿನ ಸುತ್ತ ಗಿರಗಿಟ್ಲೆ ತಿರುಗುತ್ತಿದೆ.ಪಹರೆ ಕಾಯುತ್ತಿದೆ.ಬೇರೆ ಯಾವ ಇರುವೆಗೂ ಈ ಸಕ್ಕರೆಯನ್ನು ತಿನ್ನಲು ಬಿಡುತ್ತಿಲ್ಲ ತಾನೂ ತಿನ್ನುತ್ತಿಲ್ಲ.ಯಾಕೆಂದರೆ ಆ ಇರುವೆಗೆ ಡಯಾಬಿಟೀಸ್! ಇದು ಇವತ್ತಿನ ಪರಿಸ್ಥಿತಿಯ ವ್ಯಂಗ್ಯ… 🙂
  -RJ

  ಪ್ರತಿಕ್ರಿಯೆ
  • Sunil

   ಇರುವೆಯೊಂದು ಸಕ್ಕರೆ ತುಣುಕಿನ ಸುತ್ತ ಗಿರಗಿಟ್ಲೆ ತಿರುಗುತ್ತಿದೆ.ಪಹರೆ ಕಾಯುತ್ತಿದೆ.ಬೇರೆ ಯಾವ ಇರುವೆಗೂ ಈ ಸಕ್ಕರೆಯನ್ನು ತಿನ್ನಲು ಬಿಡುತ್ತಿಲ್ಲ ತಾನೂ ತಿನ್ನುತ್ತಿಲ್ಲ.ಯಾಕೆಂದರೆ ಆ ಇರುವೆಗೆ ಡಯಾಬಿಟೀಸ್!
   🙂

   ಪ್ರತಿಕ್ರಿಯೆ
 4. ರಾಜಾರಾಂ ತಲ್ಲೂರು

  ನಿಜಕ್ಕೆಂದರೆ ನನಗೆ “ಸಂಸ್ಕೃತ ಭಾಷೆ ಉಳಿಸಿ” ಹೋರಾಟಕ್ಕೂ “ಡಬ್ಬಿಂಗ್ ಸಾರಾಸಗಟು ಬೇಡ” ವಾದಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಸಿನಿಮಾ ಭಾಷೆಯನ್ನು ಮೀರಿದ ಮಾಧ್ಯಮ. ಜಗತ್ತಿನ ಯಾವುದೇ ಭಾಷೆಯಲ್ಲಿನ ಅತ್ಯುತ್ತಮ ಎನ್ನಿಸುವ ಸಿನಿಮಾಗಳನ್ನು ನಾವು ಡಬ್ಬಿಂಗ್ ಇಲ್ಲದೇ ಹೆಚ್ಚೆಂದರೆ ಸಬ್ ಟೈಟಲ್ ಗಳ ಸಹಾಯದಿಂದ ಆನಂದಿಸಿದ್ದೇವೆ. ಸಿನಿಮಾದಲ್ಲಿ ಕಾಳು-ಜೊಳ್ಳು ಆರಿಸುವವರು ಅಂತಿಮವಾಗಿ ಪ್ರೇಕ್ಷಕರೇ ಹೊರತು ಸಿನಿ ಉದ್ದಿಮೆದಾರರಾಗಲೀ ಸಿನಿ ಕಸುಬುದಾರರಾಗಲೀ ಅಲ್ಲ. ಹಾಗಾಗಿ, ಡಬ್ಬಿಂಗ್ ಸಾರಾಸಗಟು ಬೇಡ ಎಂದರೆ, ಅದು “ಸಂಸ್ಕೃತ ಉಳಿಸಿ” ಎಂದು ಗೋಗರೆದಂತೆಯೇ ಕೇಳಿಸುತ್ತದೆ.
  ಬಹು ಸಂಸ್ಕೃತಿ ಡಬ್ಬಿಂಗ್ ನಿಂದ ನಾಶ ಆಗುತ್ತದೆ ಎಂಬ ವಾದ ಮೇಲ್ನೋಟಕ್ಕೆ ಹೌದು ಅನ್ನಿಸುತ್ತದಾದರೂ, ಕಳೆದ ೧೦೦ ವರ್ಷಗಳ ಇತಿಹಾಸ ಗಮನಿಸಿದರೆ ಈ ರೀತಿಯ ಆಯ್ಕೆಗಳಲ್ಲಿ ನಾವು ನಮ್ಮ ಅನುಕೂಲಕ್ಕೆ ಬೇಕಾದ್ದನ್ನು ಆರಿಸಿಕೊಂಡು ಬೇಡದ್ದನ್ನು ಬಿಟ್ಟದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಉದಾಹರಣೆಗೆ ಅಟೊಮೊಬೈಲ್ ಉದಾರೀಕರಣದ ಹೆಸರಲ್ಲಿ ಅಂಬಾಸೆಡರ್ ಕಾರು ಮೂಲೆಗೆ ಸರಿದದ್ದು. ಹಾಗಾಗಿ, ಒಂದು ದಿಕ್ಕನ್ನು ಹಿಡಿದು ಹೊರಟಿರುವ ಪ್ರವಾಹಕ್ಕೆ (ಅದು ಸರಿಯೋ ತಪ್ಪೋ ಎಂಬುದು ಈಗ ನಮ್ಮ ಹಿಡಿತದಲ್ಲಿಲ್ಲ) ಅಡ್ಡ ತಡೆ ಕಟ್ಟುವ ಪ್ರಯತ್ನಗಳು ಒಟ್ಟಂದದಲ್ಲಿ ನೋಡಿದಾಗ ಕೇವಲ ಗೊಣಗುವಿಕೆಯ ಮಟ್ಟಕ್ಕೆ ಸೀಮಿತವಾಗುತ್ತವೆ.

  ಪ್ರತಿಕ್ರಿಯೆ
 5. Jayapal H R

  ನನ್ನ ಪ್ರಕಾರ ನಮ್ಮ ಹಕ್ಕುಗಳನ್ನ ಪಡೆಯಲು ಹಾಗು ಈ ಪಾಳೆಗಾರರ ದಬ್ಬಾಳಿಕೆಯಿಂದ ಮುಕ್ತರಾಗಲು ನ್ಯಾಯಾಲಯಕ್ಕೆ ಹೋಗುವುದೇ ಸೂಕ್ತ…

  ಪ್ರತಿಕ್ರಿಯೆ
 6. ರಾಘವೇಂದ್ರ ತೆಕ್ಕಾರ್

  ದೇಶಕ್ಕೆ ಅನ್ನ ಕೊಡುವ ರೈತ ಜಾಗತಿಕ ಮಾರುಕಟ್ಟೆಯ ಎದುರು ಸ್ಪರ್ಧೆಗೆ ಬಿದ್ದಿದ್ದಾನೆ, ಆ ಮೂಲಕ ತಾನು ಬೆಳೆಯುತಿದ್ದಾನೆ,ಹಾಗಿರಬೇಕಾದರೆ ಇವರಿಗೇನು ಕಷ್ಟ, ಸ್ಪರ್ಧೆಗೆ ಬಿದ್ದು ಜಯಿಸಲಿ, ಆ ಮೂಲಕ ತಮ್ಮ ಅಭಿರುಚಿಯನ್ನ ಬೆಳೆಸಿ ಕನ್ನಡ ಚಿತ್ರ ಮಾಧ್ಯಮಕ್ಕೆ ಕೊಡುಗೆಯನ್ನ ನೀಡಲಿ. ಗೆಳೆಯನೊಬ್ಬ ಹೇಳುತಿದ್ದ ಶಿವರಾಜ್ ಕುಮಾರ್ ಪುನೀತ್ ಇತರ ನಾಯಕರ ಜಾಗದಲ್ಲಿ ಬೇರೆ ನಟ ನಟಿಯರ ಕಟೌಟುಗಳು ಎದ್ದು ನಿಲ್ಲುತ್ತಲ್ಲ ಅಂತ? ತಪ್ಪೇನು ನಾವು ಖುಷಿ ಪಡಬೇಕಾದ್ದು ಆ ಕಟೌಟು ಬರಹಗಳು ಕನ್ನಡದಲ್ಲಿದೆಯೆಂದು. ಡಬ್ಬಿಂಗ್ ವಿರೋಧಿ ನೀತಿ ಪ್ರಜಾಪ್ರಭುತ್ವ ವಿರೋಧಿ, ನಮ್ಮ ಹಕ್ಕುಗಳನ್ನು ಇವರ ಸ್ವಾರ್ಥಕ್ಕಾಗಿ ಕಸಿದುಕೊಳ್ಳಲು ಇವರ್ಯಾರು.? ತಮ್ಮ ಚಿತ್ರಗಳನ್ನು ಪರಭಾಷೆಗೆ ಡಬ್ ಮಾಡಿ ಕಾಸು ಮಾಡೊ ಇವರಿಗೆ ಕನ್ನಡದಲ್ಲಿ ಡಬ್ಬಿಂಗ್ ವಿರೋಧ ಮಾಡಕ್ಕೆ ನೈತಿಕತೆಯಾದರು ಏನಿದೆ?

  ಪ್ರತಿಕ್ರಿಯೆ
 7. Harshini

  ನನ್ನ ಪ್ರಕಾರ ಒಂದು ಚಿತ್ರವನ್ನು ಬೇರೆ ಭಾಷೆಗೆ ಭಾಷಾಂತರಿಸಿ , ನಕಲು ಪಡೆದಂತಾಗುವುದಲ್ಲದೆ, ಅವರ ವಾಣಿಜ್ಯಿ ಕರಣ ಮನೋಭಾವಕ್ಕೆ ನಾವೇ ಇಂಬು ಕೊಟ್ಟಂತಾಗುತ್ತದೆ. ನಮ್ಮ ಕನ್ನಡಿಗರೇ ತಮ್ಮತನ ಬಳಸಿ , ಸಂಸ್ಕೃತಿಯ ಮೆರುಗು ಹಚ್ಚಿ ಕಾರ್ಯಕ್ರಮ ಮಾಡಿದರೆ …ಚೆನ್ನಲ್ಲವೇ..?? ಸರ್ ..

  ಪ್ರತಿಕ್ರಿಯೆ
 8. ಅರುಣ್

  @Harshini, ಸಿನೆಮಾ ಒಂದು ಉದ್ಯಮವೇ ಪ್ರತಿ ವರ್ಶ ತಯಾರಾಗುವ ೯೯.೯೯% ಚಿತ್ರಗಳು ವಾಣಿಜ್ಯದ ದ್ರುಶ್ಟಿಯಿಂದಲೇ ತಯಾರಾಗುವುದು. ಇದು ತಪ್ಪಲ್ಲ. ಸಿನೆಮಾ ಸಂಸ್ಕ್ರುತಿಯನ್ನು ಪ್ರತಿನಿದಿಸುತ್ತೆ ಅಂತ ಹೇಳೊಕ್ಕೆ ಆಗಲ್ಲ. ಇವತ್ತಿನ ಕನ್ನಡದ ಹಲವಾರು ಸಿನೆಮಾಗಳನ್ನು ನೋಡಿದ್ರೆ ಸಿನೆಮಾದಲ್ಲಿ ಇರುವ ಸಂಸ್ಕ್ರುತಿಗೂ ಕನ್ನಡಿಗರ ಸಂಸ್ಕ್ರುತಿಗೂ ಸಂಬಂದಾನೆ ಇಲ್ಲದಿರುವುದು ಕಾಣುತ್ತೆ. ಅದ್ದರಿಂದ ಸಿನೆಮಾ ಸಂಸ್ಕ್ರುತಿಯನ್ನು ಪ್ರತಿನಿದಿಸುತ್ತೆ ಅನ್ನೊದು ಸುಳ್ಳು. ಇವೆಲ್ಲಕ್ಕಿಂತ ಹೆಚ್ಚಾಗಿ. ಯಾವ ಸಿನೆಮಾ ನೋಡಬೇಕು ಯಾವ ಸಿನೆಮಾ ನೋಡಬಾರದು ಎನ್ನುವುದನ್ನು ಚಿತ್ರರಂಗದವರು ನಿರ್ದರಿಸಿದರೆ ಹೇಗೆ? ಅದನ್ನು ನೋಡುಗ ನಿರ್ದರಿಸಬೇಕು ಅಲ್ಲವೇ? ನೀವು ಯಾವ ಸಿನೆಮಾ ನೋಡಬೇಕು ಎನ್ನುವುದನ್ನ ನಾನು ನಿರ್ದರಿಸಿದರೆ ನಿಮಗೆ ಏನನ್ನಿಸಬೇಡ. ಅದೇ ರೀತಿ ನಾನು ಯಾವ ಸಿನೆಮಾ ನೋಡಬೇಕು ಎನ್ನುವುದನ್ನು ಇನ್ನೊಬ್ಬರು ಯಾಕೆ ನಿರ್ದರಿಸುತ್ತಿದ್ದಾರೆ. ಹೀಗೆ ನಿರ್ದರಿಸುವುದು ಪಾಳೇಗಾರಿಕೆ ನೀತಿಯಲ್ಲವೇ?

  ಪ್ರತಿಕ್ರಿಯೆ
 9. ಟೀನಾ ಶಶಿಕಾಂತ್ (@tinashashikanth)

  ದಿನೇಶ, ಬಹಳ ಉತ್ತಮವಾದ ಲೇಖನ. ಬಹುಶಃ ಈ ರೀತಿಯ ದೃಷ್ಟಿಕೋನದಿಂದ ಯೋಚಿಸುವ ಕಷ್ಟವನ್ನೂ ನಮ್ಮ ಸಿನೆರಂಗದವರು ತೆಗೆದುಕೊಂಡಿಲ್ಲ. ಅದಕ್ಕೇ ಈ ದುರ್ಗತಿ ನಮಗೆ. ಇತ್ತೀಚಿನ ಹೆಚ್ಚಿನಮಟ್ಟಿಗಿನ ಸಿನೆಮಾಗಳನ್ನಂತೂ ನನ್ನ ಭಾಷೆಯವು ಎಂದು ಹೇಳಿಕೊಳ್ಳಲೇ ಬೇಸರವಾಗುತ್ತದೆ. ’ಏನೋ ಇದೆ’ ಎಂದು ಭರವಸೆ ಹುಟ್ಟಿಸಿದವರೆಲ್ಲ ಕ್ರಮೇಣ ಇತರರ ಹಾಗೆ ಪೊಳ್ಳಾಗುತ್ತ ನಿರಾಶೆಗೆ ದೂಕುತ್ತ ಇದಾರೆ. ಡಬ್ಬಿಂಗ್ ಅನ್ನ ಒಳಗೊಂಡಿರುವ ನಮ್ಮ ಇತರ ಭಾರತೀಯ ಭಾಷೆಗಳಾ ಸಿನೆಮಾಗಳಿಗೆಲ್ಲೂ ತೊಂದರೆಯಾಗಿಲ್ಲ, ಬದಲಾಗಿ ಅಲ್ಲಿನ ಪ್ರೇಕ್ಷಕರಿಗೆ ಹೆಚ್ಚಿನದು ದೊರಕಿದೆ ಮತ್ತು ಹೀಗೆ ಹೊಸದನ್ನು ಕಂಡ ಅವರ ಅನುಭವ ತಮ್ಮ ಭಾಷಾ ಸಿನೆಮಾದಿಂದ ಹೆಚ್ಚಿನದನ್ನು ಬಯಸುವಂತೆ ಮಾಡಿದೆ. ಅಲ್ಲಿನ ಸಿನೆತಂತ್ರಜ್ಞಾನವನ್ನ ಉತ್ತಮಗೊಳಿಸಿದೆ. ಅಲ್ಲೆಲ್ಲೂ ಪ್ರಾದೇಶಿಕ ಸಿನೆಮಾ ಮುಳುಗಿಹೋಗಲಿಲ್ಲ. ಹಾಗಿದ್ದಾಗ ನಮಗೇಕೆ ಡಬ್ಬಿಂಗ್ ಅಂದರೆ ಕೈಕಾಲು ನಡುಕ? ನಮ್ಮ ಹುಳುಕು ಮುಚ್ಚುವ ಧಾವಂತವಿದು. ಹೊಸದನ್ನು ಬೇಡ ಎಂದರೆ ಕಳೆದುಕೊಳ್ಳುವವರು ನಾವೇನೆ. ಆಲ್ಲವೆ? ಯಾರೋ ಒಂದಿಷ್ಟು ಜನ ಎಲ್ಲೋ ಕೂತು ನಮ್ಮ ಪ್ರೇಕ್ಷಕರಿಗೇನು ಬೇಕು, ಬೇಡ ಎಂದು ಅದು ಹೇಗೆ ನಿರ್ಧಾರ ಮಾಡುತ್ತಾರೆ? ನಮ್ಮನ್ನು ಕೇಳಿ ಸ್ವಾಮೀ.. ನಾವು ಹೇಳುತ್ತೇವೆ!!

  ಪ್ರತಿಕ್ರಿಯೆ
 10. ತಿಪ್ಪೇಸ್ವಾಮಿ

  ಕನ್ನಡ ಚಿತ್ರರಂಗದಲ್ಲಿ ತುಂಬಿಕೊಂಡಿರುವ ಆತ್ಮವಿಶ್ವಾಸವಿಲ್ಲದ, ಕ್ರಿಯಾಶೀಲತೆಯನ್ನೇ ಕಳೆದುಕೊಂಡು ಇತರರು ಮಾಡುವುದನ್ನೆ ಕನ್ನಡಕ್ಕೆ ಬಟ್ಟಿ ಇಳಿಸುವ ಥರ್ಡ್ ಕ್ಲಾಸ್ ಜನಗಳಿಂದ ಡಬ್ಬಿಂಗ್ ವಿರೋಧವನ್ನಲ್ಲದೇ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಫ್ಯಾಮಿಲಿ ಬ್ಯುಸಿನೆಸ್ ಆಗಿಹೋಗಿರುವ ನಮ್ಮ ಚಿತ್ರರಂಗದಲ್ಲಿ ಸ್ವಹಿತಾಸಕ್ತಿಯನ್ನು ಮೆರೆಸುವ ಏಕೈಕ ಉದ್ದೇಶದಿಂದ ಇಂಥಾ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಕುಟುಂಬ ರಾಜಕಾರಣದಂತೆಯೇ ಕುಟುಂಬ-ಸಿನೆಮಾಮಂದಿಯೂ ನಮ್ಮ ರಾಜ್ಯಕ್ಕೆ ನಮ್ಮ ಜನಗಳಿಗೆ ಮಾರಕ.
  ತಿಪ್ಪೇಸ್ವಾಮಿ

  ಪ್ರತಿಕ್ರಿಯೆ
 11. rwiAravind S

  @ರಾಜಾರಾಂ ತಲ್ಲೂರು, ಸ್ವಲ್ಪ ಸಮಾಧಾನ, ಎಲ್ಲೆಲ್ಲೋ ಹೋಗಬೇಡಿ, ಚರ್ಚೆ ಬೇರೆಲ್ಲೋ ಹೋಗುವಂತೆ ಮಾಡಬೇಡಿ, ಸಂಸ್ಕೃತ ಭಾಷೆಯಷ್ಟೇ ಅಲ್ಲವೆಂಬುದನ್ನು ಅರ್ಥಮಾಡಿಕೊಳ್ಳಿ, ಸಾಧ್ಯವಾದರೆ ಸಂಸ್ಕೃತವನ್ನೂ ನಮ್ಮ ಸಂಸ್ಕೃತಿಯನ್ನೂ ಒಂದಿಷ್ಟು ಒಳಹೊಕ್ಕು ನೋಡಿ, U will love it. ಹಾಗೆಯೇ ಡಬ್ಬಿಂಗ್ ಬೇಕೋ ಬೇಡವೋ ಎನ್ನುವುದರ ರಾಜಕೀಯ ಸ್ವಾರ್ಥ್ಯಗಳು ಬೇರೆಯೇ ಇದೆ, ಜನರಿಗೆ ಏನು ಬೇಕೆಂಬುದು ಬೇರೆಯೇ ಇದೆ.
  -Aravind S

  ಪ್ರತಿಕ್ರಿಯೆ
 12. sathishbabu

  ಒಂದು ವೇಳೆ ಡಬ್ಬಿಂಗ್ ವಿರೋಧಕ್ಕೆ ಕಾರಣವಾಗಿ ತಮ್ಮ ಹೊಟ್ಟೆಪಾಡನ್ನು ವಿವರಿಸಿದರೆ ಸಿನಿ-ಟಿವಿ ಸಂಘಟನೆಗಳಿಗೆ ಪರ್ಯಾಯ ಮಾರ್ಗ ದೊರಕಿಸಿಕೊಡಲು ಸರ್ಕಾರ, ಜವಾಬ್ದಾರಿಯುತ ಸಮಾಜದ ಗಣ್ಯರು ಚಿಂತಿಸಬಹುದು. ಅದನ್ನು ಬಿಟ್ಟು, ಡಬ್ಬಿಂಗ್ ಮೂಲಕ ಜಾಗತೀಕರಣ ಪ್ರವೇಶ ಪಡೀತಾ ಇದೆ, ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಎಳಸು ಎಳಸಾಗಿ ಮಾತನಾಡುವುದನ್ನು ಈ ಜನರು ಬಿಡಬೇಕಿದೆ

  ಪ್ರತಿಕ್ರಿಯೆ
 13. Raghav Chandra

  Dubbing bedve beda…!! :X
  dubbing na prabhaava enu anta nimage ivaag artha aagalla…..
  mundond dina nimge artga aago hotthige kaala minchi hogirutte..!! 🙁
  ಬೇರೆ ಭಾಷೆಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ಅದರ ಡಬ್ಬಿಂಗ್ ಆವೃತ್ತಿಗಳನ್ನು ನಾವು ನೋಡುತ್ತೇವೆ. ಚೆನ್ನಾಗಿಲ್ಲದಿದ್ದರೆ ತಿರಸ್ಕರಿಸುತ್ತೇವೆ.ಕನ್ನಡದ ಕಥೆಗಳೆಷ್ಟು, ರೀಮೇಕ್ ಸಿನಿಮಾಗಳೆಷ್ಟು? ಎಷ್ಟು ಸಿನಿಮಾಗಳಿಗೆ ಪರಭಾಷಾ ನಟಿಯರನ್ನು ಕರೆತರಲಾಗಿದೆ? ಎಷ್ಟು ಸಿನಿಮಾಗಳಲ್ಲಿ ಬೇರೆ ಭಾಷೆ ಸಿನಿಮಾಗಳ ತುಣುಕುಗಳನ್ನು ಕದ್ದು ತೂರಿಸಲಾಗಿದೆ? ee thara Cool AAGI BAREYODU TUMBA SULABHA SIR…!! 😛
  .
  Namma market enthadu…?
  Namma kannadigara Manastithi enthadu…?
  Kannadigara audaaryate tamil, telugu janaralli ideya…?
  ivelladara bagge yochne maadi sir…!!
  .
  Shivanna we Love You..!!
  Nim jote “Appata Kannadigaraada naavu “BELAGAAVI JANA” idivi..
  Neev Munduvaresi…!!
  .
  JAI KARNAATAKA MAATHE…

  ಪ್ರತಿಕ್ರಿಯೆ
 14. Shivaraj

  @Raghav Chandra you are almost the only guy who supported dubbing and you cant even type Kannada.. isn’t that ironical.. all others who said dubbing has nothing to do with our culture and language did write in good Kannada.. 🙂

  ಪ್ರತಿಕ್ರಿಯೆ

Trackbacks/Pingbacks

 1. ‘ಜುಗಾರಿ ಕ್ರಾಸ್’ ಬಿಸಿಯಾಗಿದೆ..ನೀವೂ ಬನ್ನಿ « ಅವಧಿ / avadhi - [...] ಔಚಿತ್ಯದ ಬಗ್ಗೆ ಗಮನ ಸೆಳೆದಿದ್ದರು. ಆ ಲೇಖನ ಇಲ್ಲಿದೆ. ಅಮೀರ್ ಖಾನ್ ಅವರ ‘ಸತ್ಯಮೇವ ಜಯತೆ’ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: