ಜುಗಾರಿ ಕ್ರಾಸ್ : ಆರ್ ಕೆ ನಾರಾಯಣ್ ಸ್ಮಾರಕ ಅಂದ್ರೆ…

ಗುರುಪ್ರಸಾದ್ ಅವರು ಬರೆದ ಆರ್ ಕೆ ನಾರಾಯಣ್ ಕನ್ನಡಿಗರಲ್ಲವೆ? ಎಂಬ ಲೇಖನವನ್ನು ಅವಧಿಯಲ್ಲಿ ಪ್ರಕಟಿಸಿದ್ದೆವು.  (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ) ಅವರ ಮನೆಯನ್ನು ಸ್ಮಾರಕವಾಗಿಸುವ ಪರ ಹಾಗು ವಿರೋಧ ಎರಡೂ ದನಿಗಳನ್ನೂ ದಾಖಲಿಸಿ, ಒಂದು ಆರೋಗ್ಯಕರ ಚರ್ಚೆ ನಡೆಯುವ ವೇದಿಕೆ ನಿರ್ಮಿಸುವುದು ನಮ್ಮ ಆಶಯ.  ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ

  ಅಶೋಕವರ್ಧನ ಜಿ.ಎನ್ : ತಾತ್ತ್ವಿಕ ನೆಲೆಗಟ್ಟಿಲ್ಲದ ಯಾವುದೇ `ಇಸಮು’ ಜಾತೀಯತೆ, ಕೋಮುವಾದಗಳಷ್ಟೇ ಭೀಕರ;ಇಂದು ಪ್ರಚಾರದಲ್ಲಿರುವ ಕನ್ನಡತನ ಭಿನ್ನವಲ್ಲ. ನಾರಾಯಣ್ ಕನ್ನಡಿಗರೋ ಅಲ್ಲವೋ ಎನ್ನುವುದು ಇಲ್ಲಿ ನಿರ್ಧಾರವಾಗಬೇಕಾದ ಮೌಲ್ಯವೇ ಅಲ್ಲ. ಪ್ರಜಾ ಸರಕಾರಗಳು ಭಾವನಾತ್ಮಕ ವಿನಿಯೋಗಗಳಲ್ಲಿ ಉತ್ಸಾಹಿಗಳಾಗದೇ ಶುದ್ಧ ಭೌತಿಕ ವ್ಯವಸ್ಥೆಗಳನ್ನು ಸರಿ ಮಾಡಿದರೆ ಬಹಳ ದೊಡ್ಡ ಉಪಕಾರವಾಗುತ್ತದೆ. ಆಡಳಿತ ಭದ್ರವಾಗಿರುವ ರಾಜ್ಯಗಳಲ್ಲಿ ಸಾಹಿತ್ಯ ಕಲೆಗಳು ತಂತಾನೇ ಅರಳುತ್ತವೆ ಎನ್ನುವುದಕ್ಕೆ ಇತಿಹಾಸ, ಪುರಾಣಗಳಲ್ಲಿ ಎಷ್ಟೂ ಉದಾಹರಣೆಗಳು ಸಿಗುತ್ತವೆ. ಆದರಿಂದು ಅವಕಾಶವಾದೀ ಸರಕಾರಗಳು (ಇದರಲ್ಲಿ ಕೇಂದ್ರ, ರಾಜ್ಯ ಎಂದು ಹೆಸರಿಸುವುದಕ್ಕಿಲ್ಲ)ಭಾವನಾತ್ಮಕ ಗೊಂದಲಗಳಲ್ಲೇ ವಿನಿಯೋಗದ ನಾಟಕವಾಡುತ್ತಾ ಸಾರ್ವಜನಿಕ ಖಜಾನೆಗಳನ್ನು ಸೂರೆಗೊಳ್ಳುತ್ತವೆ. ಈಗಾಗಲೇ ಇರುವ ಕವಿಮನೆಗಳು `ಹುಚ್ಚು ಅಭಿಮಾನ’ದಿಂದ ಹೊರಗೆ ತಮ್ಮ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಕಾರಂತರ ಬಾಲವನ, ಗೋವಿಂದ ಪೈಯವರ ಮಂಜೇಶ್ವರ, ಕುವೆಂಪು ಕುಪ್ಪಳ್ಳಿ, ಪುತಿನ ಮೇಲುಕೋಟೆ, ಬೇಂದ್ರೆ ಮನೆ ಇತ್ಯಾದಿ ಯಾಕೆ ಕನ್ನಡ, ಕನ್ನಡಜನಪದಗಳೆಂದೇ ಕಟ್ಟಿದ ವಿವಿನಿಲಯಗಳು, ಸಂಸ್ಥೆಗಳೂ ಇಂದು ಅತೃಪ್ತರ ಅಥವಾ ಅಲ್ಪತೃಪ್ತರ ಅರವಟ್ಟಿಗೆಗಳಾಗಿ ಮೆರೆಯುತ್ತಿರುವಾಗ ಆರ್.ಕೆ ನಾರಾಯಣ್ ಹೆಸರಿನಲ್ಲಿ ಒಂದು ಬರುವುದು ಬೇಕಾಗಿಲ್ಲ, ಬೇಡವೇ ಬೇಡ. ಪ್ರಸಾದ್ ರಕ್ಷಿದಿ: ಹೌದು ಸ್ಮಾರಕಗಳು, ಪ್ರತಿಮೆಗಳು, ಮಾಡಿದ್ದು ಸಾಕು… ವರ್ಷಾ ಸಾಗರ್ : ಪಂಡಿತಾರಾಧ್ಯ ಮೈಸೂರು : ಆರ್ ಕೆ ನಾರಾಯಣ್ ಅವರ ಮನೆಯನ್ನು ಅವರ ಮಕ್ಕಳು ಖಾಸಗಿ ಸ್ವತ್ತೆಂದು ವಿತರಣೆ ಮಾಡಿದ ಮೇಲೆಯೂ ಅದನ್ನು ರಾಜ್ಸ ಸರಕಾರ ಕೊಂಡುಕೊಂಡು ಸ್ಮಾರಕವಾಗಿ ಉಳಿಸುವ ಅಗತ್ಯ ಇಲ್ಲ. ಕೇಂದ್ರ ಸರಕಾರ. ಕೇಂದ್ರ ಸಾಹಿತ್ಯ ಅಕಾಡೆಮಿಗಳು ಆ ಕೆಲಸ ಮಾಡಬಹುದು. ಯಾವುದೇ ಲೇಖಕರ ಜೀವಂತ ಸ್ಮಾರಕ ಅವರ ಕೃತಿಗಳೇ. ಅವನ್ನು ಓದಲು ಸಿಗುವಂತೆ ಮಾಡುವುದು ಮುಖ್ಯ. ನಾ ದಿವಾಕರ : ಸ್ಮಾರಕಗಳು ಯಾವುದೇ ಒಬ್ಬ ಸಾಹಿತಿ, ಕಲಾವಿದ ಅಥವಾ ಸಾಧಕನಿಕೆ ಸಲ್ಲಬೇಕಾದ ಗೌರವ ಎಂದಾದಲ್ಲಿ ಸ್ಮಾರಕಗಳ ಪರಿಕಲ್ಪನೆ ಜಂಗಮ ರೂಪದಲ್ಲಿರಲಿ, ಸ್ಥಾವರ ರೂಪದಲ್ಲಿ ಬೇಡ. ಸ್ಮಾರಕ ನಿರ್ಮಾಣ ಸಂಕುಚಿತ ಮನೋಭಾವದಿಂದ ಕೂಡಿದ ಪ್ರಕ್ರಿಯೆ.ನಾರಾಯಣ್ ಸ್ಮಾರಕದ ವಿರೋಧ ಇನ್ನೂ ಹೆಚ್ಚು ಸಂಕುಚಿತ ಭಾವನೆಯ ದ್ಯೋತಕ. ನಾರಾಯಣ್ ಕನ್ನಡದಲ್ಲಿ ಮಾತನಾಡಲಿಲ್ಲ, ಕನ್ನಡ ಕಲಿಯಲಿಲ್ಲ, ಕನ್ನಡ ಸಾಹಿತ್ಯ ರಚಿಸಲಿಲ್ಲ ಎಂದು ಅವರ ಸ್ಮಾರಕವನ್ನು ವಿರೋಧಿಸುವುದು ತರವಲ್ಲ. ಕನ್ನಡದ ಗಂಧವೇ ಇಲ್ಲದ ಗಾಂಧಿ, ಅಂಬೇಡ್ಕರ್, ವಿವೇಕಾನಂದರ ಸ್ಮಾರಕಗಳಿಲ್ಲವೇ ? ಸ್ಮಾರಕ ಪ್ರತಿಮೆಗಳಿಂದಾಚೆಗೆ ನೋಡುವ ಉನ್ನತ ಧ್ಯೇಯ ಬೆಳೆಸಿಕೊಳ್ಳುವುದು ಒಳಿತು. ಅಲಕ್ಷಿತ ಸ್ಮಾರಕಕ್ಕಿಂತಲೂ ನಿರ್ಮಿತವಾಗದ ಸ್ಮಾರಕ ಎಷ್ಟೋ ಲೇಸಲ್ಲವೇ ? ಪಂಡಿತಾರಾಧ್ಯರು ಹೇಳಿದಂತೆ ಸಾಹಿತಿಯ ಕೃತಿಗಳೇ ಅವರ ಸ್ಮಾರಕಗಳು. ಉಳಿದೆಲ್ಲವೂ ಆಡಂಭರ. ಬೀ ಸುರೇಶ್ ಗುರುಪ್ರಸಾದ್ ಅವರ ಮಾತುಗಳನ್ನು ನಾನು ಒಪ್ಪುತ್ತೇನೆ. ಈ ನಾಡಿನ ಒಳಗೆ ಇದ್ದು, ಹೋದ ಒಬ್ಬ ಲೇಖಕ ಯಾವ ಭಾಷೆಯವನೇ ಆಗಿರಲಿ ಆತನ ಸ್ಮಾರಕವನ್ನು ಮಾಡುವುದು ಒಳಿತು. ಆತ ಯಾವ ಭಾಷೆಯಲ್ಲಿ ಬರೆದರು ಎಂಬುದು ಮುಖ್ಯವಲ್ಲ. ಆತನ ಕೃತಿಗಳಿಂದ ಸಿಕ್ಕಿರುವ ಸಾಂಸ್ಕೃತಿಕ ಲಾಭವನ್ನು ಗಮನಿಸಬೇಕು. ಆರ್‌.ಕೆ,ನಾರಾಯಣ್ ಅವರು ಬದುಕಿದ್ದ ಮನೆಯನ್ನು ಸ್ಮಾರಕ ಮಾಡುವುದಕ್ಕೆ ನನ್ನ ತೆರಿಗೆ ಹಣ ಬಳಕೆಯಾದರೆ ನಾನು ಬೇಡ ಎನ್ನುವುದಿಲ್ಲ. ಮಹೇಶ್ ಬಿ ಆರ್ ನಾರಾಯಣ್ ಕನ್ನಡಿಗರು ಹೌದೋ ಅಲ್ಲವೋ ಎಂಬ ಪ್ರಶ್ನೆಗಿಂತ ನಾರಾಯಣ್ ಅವರ ಸ್ಮರಣೆ ಈ ರೀತಿ ಆಗಬೇಕೇ ಎಂಬ ಪ್ರಶ್ನೆ ಮುಖ್ಯವಾದದ್ದು. ಸಾರಸ್ವತ ಲೋಕಕ್ಕೆ ಒಬ್ಬ ಲೇಖಕನ ಕೊಡುಗೆಯನ್ನು ಗುರುತಿಸಿ, ನೆನಪಿಸಿಕೊಳ್ಳುವ ಅಗತ್ಯವಿದ್ದಲ್ಲಿ, ಆ ಲೇಖಕನ ಬರವಣಿಗೆಯನ್ನು ಓದಿ, ನಾನಾ ರೂಪಗಳಲ್ಲಿ ಆನಂದಿಸಿ, ಇತರರೊಡನೆ ಹಂಚಿಕೊಳ್ಳಬೇಕು. ಮೇಲೆಬಿದ್ದುಗೊಂಡು ಹೋಗಿ, ಆ ಲೇಖಕನ ಮನೆಯನ್ನು ಒಂದು ಸ್ಮಾರಕವನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಸರ್ಕಾರಿ ಸ್ಮಾರಕಗಳು ಹೇಗೆ ಪಾಳು ಬೀಳುತ್ತವೆ ಎಂದು ನಾನು ನೇರವಾಗಿ ನೋಡಿ ಮನಗಂಡಿದ್ದೇನೆ. ಭೌತಿಕ ವಸ್ತುಗಳಿಗೆ ಸ್ಮಾರಕದ ಗೌರವ ದೊರಕಬೇಕಾದರೆ, ಆ ಭೌತಿಕ ವಸ್ತುಗಳಿಗೆ ಅಲೌಕಿಕ ಗುಣ ಇರಬೇಕು. ಉದಾಹರಣೆ: “ಕುವೆಂಪು ಅವರು ಇಲ್ಲಿ ಕುಳಿತು, ಈ ಪೆನ್ನಿನಲ್ಲಿ ರಾಮಾಯಣ ದರ್ಶನವನ್ನು ಬರೆದರು” ಎಂಬ ರೀತಿಯ ಸ್ಮಾರಕಕ್ಕೆ ಹೆಚ್ಚು ಅರ್ಥವಿಲ್ಲ. ಏಕೆಂದರೆ ಅದ್ಭುತ ಕೃತಿಯ ಸೃಷ್ಟಿಗೆ ಆ ಸ್ಥಳದ ಕೊಡುಗೆಗೆ ಸ್ವಲ್ಪ ಅರ್ಥವಿದ್ದರೂ, ಪೆನ್ನಿನ ಕೊಡುಗೆಗೆ ಹೆಚ್ಚು ಮೌಲ್ಯವಿಲ್ಲ. ಅದೇ “ಶ್ರೀ. ಸಿ. ವಿ. ರಾಮನ್ ಅವರು ಈ ಅನೂಹ್ಯ ಉಪಕರಣ ಉಪಯೋಗಿಸಿ, ಆಕಾಶದಲ್ಲಿ ನೀಲಿಯ ಬಣ್ಣದ ಚದುರುವಿಕೆಯನ್ನು ಕುರಿತು ಚಿಂತಿಸಿದರು” ಎಂಬ ರೀತಿಯ ಸ್ಮಾರಕಕ್ಕೆ ಸ್ವಲ್ಪ ಅರ್ಥವಿದೆ. ಏಕೆಂದರೆ ಆ ಉಪಕರಣದ ವೈಶಿಷ್ಟ್ಯ ಗೌಣ ಅಲ್ಲ. ಕವಿಶೈಲಕ್ಕೆ ನಮಸ್ಕಾರ ಮಾಡುವವರನ್ನು ಕಂಡಾಗ ನನಗೆ ಕನಿಕರ ಉಂಟಾಗುತ್ತದೆ. ಇಂಗ್ಲೆಂಡಿನಲ್ಲಿ ಶೇಕ್ಸ್ ಪಿಯರನ ಮನೆಯನ್ನು ನೋಡಿದಾಗ ನನಗೆ ಹೆಚ್ಚೇನೂ ಅನ್ನಿಸಲಿಲ್ಲ. ಏಕೆಂದರೆ ಆ ಮನೆಯಲ್ಲಿ ಶೇಕ್ಸ್ ಪಿಯರನ ಕೃತಿಯನ್ನು ಪ್ರೇರೇಪಿಸಿದ ಹೆಚ್ಚಿನ ವೈಶಿಷ್ಟ್ಯಗಳು ಇರಲಿಲ್ಲ. ಚೌಕಾಕಾರದ ಮಂಚ ಮತ್ತು ಅದರ ಮೇಲೆ ವಿಕಾರವಾಗಿ ಉಬ್ಬಿದ್ದ ಅವನ ಹಾಸಿಗೆಯನ್ನು ನೋಡಿದಾಗ “ಇಂತಹ ಮಂಚದ ಮೇಲೆ ಯಾವ ಗೂಬೆ ಮಲಗಿ ನಿದ್ರಿಸಲು ಸಾಧ್ಯ? ಇಂತಹ ಮಂಚ ಇದ್ದುದರಿಂದ, ನಿದ್ದೆ ಮಾಡಲಾಗದ ಶೇಕ್ಸ್ ಪಿಯರ್, ರಾತ್ರಿ ಎದ್ದು ಕುಳಿತು ಅಷ್ಟೊಂದು ಕೃತಿ ಬರೆದ” ಎಂಬ ಕೊಂಕು ಯೋಚನೆ ಮೂಡಿತ್ತು ಅಷ್ಟೇ. ಮೇಧಾವಿ ಐನ್‌ಸ್ಟೈನ್ “ಸಾಪೇಕ್ಷ ನಿಯಮ” ಬರೆದಾಗ ಬದುಕಿದ್ದ ಮನೆಯನ್ನು ಹುಡುಕಲು ನಾನು ಸ್ವಿಟ್ಸರ್ಲೆಂಡಿನ ಬರ್ನ್ ನಗರದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೆ. ಕೊನೆಗೆ ಅದು ದೊರಕಿತು. ಆದರೆ ಅದು ಒಂದು ಸ್ಮಾರಕ ಆಗಿರಲಿಲ್ಲ. ಪಿಟ್ಸಾ ಹೊಟೆಲ್ ಆಗಿ ಬದಲಾಗಿತ್ತು. ಅದರ ಗಾಜಿನ ಬಾಗಿಲಿನ ಮೇಲೆ “ಐನ್‌ಸ್ಟೈನ್ ಈ ಮನೆಯಲ್ಲಿ ಸಾಪೇಕ್ಷ ನಿಯಮದ ಬಗ್ಗೆ ಪ್ರಬಂಧ ಬರೆದ” ಎಂದು ಬರೆದಿತ್ತು. ಅಷ್ಟೇ. ಇದೇ ರೀತಿಯ ಸಣ್ಣ ಫಲಕ ನನಗೆ ಲಂಡನ್ನಿನಲ್ಲಿ ಕಂಡಿತ್ತು. ಅದು “ಈ ಕಿಟಕಿಯ ಮೇಲಿರುವ ಕೋಣೆಯಲ್ಲಿಯೇ ಅಲೆಕ್ಸಾಂಡರ್ ಫ್ಲೆಮಿಂಗ್ ಪೆನಿಸಿಲಿನ್ ಕಂಡು ಹಿಡಿದದ್ದು” ಎಂದು ಬರೆದಿತ್ತು. ಆದರೆ ಆ ಕೋಣೆ ಸ್ಮಾರಕ ಆಗಿರಲಿಲ್ಲ. ಟೈಟಾನಿಕ್ ಹಡಗನ್ನು ಕಟ್ಟಲು ಉಪಯೋಗಿಸಿದ ಮುನ್ನೂರು ಮೀಟರ್ ಉದ್ದ, ಅದೆಷ್ಟೋ ಮೀಟರ್ ಆಳದ ಗುಂಡಿ ಹಾಗೇ ಸ್ಮಾರಕವಾಗಿ ಉಳಿದಿದೆ. ಹೀಗೆ ಯಾವ ಸಂದರ್ಭಗಳಲ್ಲಿ ಭೌತಿಕ ಸ್ಮಾರಕಗಳು ಪ್ರಸ್ತುತವಾಗುತ್ತವೆ ಎಂದು ಯೋಚಿಸಬೇಕು. ನನ್ನ ತೆರಿಗೆ ಹಣವನ್ನು ನಾರಾಯಣ್ ಅವರ ಕೃತಿಗಳನ್ನು ತರ್ಜುಮೆ ಮಾಡಿಸಲು, ಕಾರ್ಟೂನು ಬರೆಸಲು, ಪಠ್ಯ ಪುಸ್ತಕಗಳಲ್ಲಿ ಹಾಕಿಸಲು, ನಾಟಕಗಳನ್ನು ಆಡಿಸಲು, ಪುಸ್ತಕಗಳ ಮರುಮುದ್ರಣ ಮಾಡಿ, ಅವರಂತೆ ಬರೆವವರನ್ನು ಗುರುತಿಸಿ ಪ್ರೋತ್ಸಾಹಿಸಲು ಉಪಯೋಗಿಸಲಿ. ನಿಮ್ಮ ಅಭಿಪ್ರಾಯ ಅನಿಸಿಕೆಗಳಿಗೆ ಸ್ವಾಗತ..]]>

‍ಲೇಖಕರು G

September 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

6 ಪ್ರತಿಕ್ರಿಯೆಗಳು

 1. ಅಶೋಕವರ್ಧನ ಜಿ.ಎನ್

  ಬಿ. ಸುರೇಶರೇ
  ನಮ್ಮ ಮತ ಯಾರಿಗೇ ಹೋಗಲಿ, ಬಂದದ್ದು ಯಾವುದೇ ಪಕ್ಷ ಇರಲಿ, ಕೊನೆಗೆ ಸರಕಾರ ನಮ್ಮದು. ಹಾಗೇ ಕರಸಂಗ್ರಹಣೆ ಹೇಗೇ ಇರಲಿ, ವಿನಿಯೋಗದ ನೆಲೆ ಮಾತ್ರ ಸಮಷ್ಟಿಯ ಹಿತಕ್ಕೇ ಆಗಬೇಕು ಮತ್ತು ಹಾಗೆ ಮಾಡುವುದು ಸರಕಾರಗಳ ಕರ್ತವ್ಯ ಕೂಡಾ. ಕಟ್ಟಡದಂಥ ಅಸ್ಥಿರ ಸ್ಮರಣಿಕೆಗಳ ಹೆಸರಲ್ಲಿ ಸ್ಮಾರಕ ಬೇಡ ಎನ್ನುವುದಕ್ಕೆ ಸೋದಾಹರಣ ಚರ್ಚೆ ನಡೆದಿರುವಲ್ಲಿ `ನನ್ನ ತೆರಿಗೆ ಹಣ’ ಎಂಬ ಅಧಿಕಾರ ಉಳಿಸಿಕೊಂಡು ನೀವು ಕೊಟ್ಟ ಸಲಹೆ ಅನುಚಿತ.
  ಅಶೋಕವರ್ಧನ

  ಪ್ರತಿಕ್ರಿಯೆ
 2. Guruprasad D N

  ಆರ್ ಕೆ ನಾರಾಯಣ್ ಕನ್ನಡಿಗರಲ್ಲ ಎಂಬ ವಾದದಲ್ಲಿ ಹುರುಳಿಲ್ಲ, ಆ ನೆಪದಲ್ಲಿ ಅವರ ಸ್ಮಾರಕಕ್ಕೆ ತಡೆ ಹಾಕುವುದು ಉಚಿತವಲ್ಲ ಎಂಬ ವಾದಕ್ಕೆ ಬಹುಮಿಶ್ರಿತ ಪ್ರತಿಕ್ರಿಯೆಗಳು ಬಂದಿದ್ದು, ಚರ್ಚೆಯ ದಿಕ್ಕು ಈಗ ಬದಲಾಗಿದೆ. ಸ್ಮಾರಕಗಳು ಅಗತ್ಯವೇ ಎಂಬುದು ಚರ್ಚೆ. ಕೆಲವರು ತಮ್ಮ ತೆರಿಗೆ ಹಣ ಸ್ಮಾರಕದ ಬಳಕೆಗೆ ಸೂಕ್ತ ಎಂದರೆ, ಸ್ಮಾರಕದ ಅಗತ್ಯವೇ ಇಲ್ಲ, ನನ್ನ ತೆರಿಗೆ ಹಣ ಬಳಸುವುದಾದರೆ ಅವರ ಕೃತಿಗಳ ಕನ್ನಡೀಕರಣಕ್ಕೋ, ಅವುಗಳ ಪ್ರಚಾರಕ್ಕೋ ಆಗಲಿ ಎಂಬುದು ಹಲವರ ವಾದ. ಸ್ಮಾರಕಗಳ, ಪ್ರತಿಮೆಗಳ ಸ್ಥಾಪನೆಗೆ ಯಾವುದೇ ಉನ್ನತವಾದ ತಾರ್ಕಿಕ ಚಿಂತನೆ ಇಲ್ಲವಾದರೂ, ಜನರಿಗೆ ದೊರಕುವ ಇನ್ಸ್ಪಿರೇಶನ್ ಗೂ, ಉತ್ತೇಜನಕ್ಕೂ ಯಾವುದೇ ತಾರ್ಕಿಕ ಆಧಾರಗಳಿಲ್ಲ. ಆರ್ ಕೆ ನಾರಾಯಣ್ ಅವರು ಇಂಗ್ಲಿಷ್ ನಲ್ಲಿ ಅನುತ್ತೀರ್ಣರಾಗಿದ್ದರೂ ಕೂಡ ಅವರು ಅದೇ ಭಾಷೆಯಲ್ಲಿ ಅತ್ಯುತ್ತಮ ಕೃತಿಗಳನ್ನು ರಚಿಸಿದರು ಎಂಬ ಒಂದು ವಿಶೇಷ ಅಂಶ, ಜನರಿಗೆ ಸ್ಪೂರ್ಥಿ ತುಂಬಬಲ್ಲುದು. ಹಾಗೆಯೇ ಅವರು ಬರೆಯುತ್ತಿದ್ದ ಪೆನ್ನು, ಪೇಪರ್, ಅವರಿಗೆ ಒಲಿದ ಪ್ರಶಸ್ತಿಗಳು, ಅವರು ಬರೆದ ಟೇಬಲ್, ಕುರ್ಚಿ ಕೂಡ. ಮತ್ತೆ ಇವ್ಯಾವಕ್ಕೂ ತಾರ್ಕಿಕ ವಾದಗಳಿಲ್ಲ. ಎಲ್ಲವೂ ವೈಯಕ್ತಿಕವಾದವೇ! ಇಂದು ತಮ್ಮ ಕೃತಿಗಳ ಮೂಲಕ, ಇಂದಿನ ಪೀಳಿಗೆ ಯುವಜನದ ಮಧ್ಯೆ ಚಾಲ್ತಿಯಲ್ಲಿದ್ದರೂ, ಮುಂದೊಂದು ದಿನ ಅವರು ಮರೆತು ಹೋಗುವ ಸಂದರ್ಭ ಬಂದಾಗ, ಈ ಸ್ಥಾವರ ಸಂಸ್ಥೆಗಳು ಅವರ ನೆನಪನ್ನು , ಅವರ ಲೆಗಸಿಯನ್ನು ಜೀವಂತವಾಗಿಡುವಲ್ಲಿ ಸಹಾಯವಾಗಬಹುದು.
  ಇನ್ನು ಉಳಿದಂತೆ ತೆರಿಗೆ ಹಣವನ್ನು ಪೋಲು ಮಾಡುವುದು ಸರಿಯೇ?ಐತಿಹಾಸಿಕ ದೃಷ್ಟಿಯಿಂದಲೋ, ಪ್ರವಾಸಿ ದೃಷ್ಟಿಯಿಂದಲೋ ರಬೀಂದ್ರನಾಥ ಟ್ಯಾಗೋರ್ ಇದ್ದ ಶಾಂತಿನಿಕೇತನವನ್ನೋ, ರಾಮಕೃಷ್ಣರಿದ್ದ ಬೇಲೂರು ಮಠವನ್ನು ನೋಡಲು ಜನ ಈಗಲೂ ಉತ್ಸುಕ. ಎರಡೂ ವಿಶ್ವವಿಖ್ಯಾತ. ತಮ್ಮ ಸಾಹಿತ್ಯದ ಮೂಲಕ ಜಗದ್ವಿಖ್ಯಾತರಾಗಿರುವ ಆರ್ ಕೆ ನಾರಯಣ್ ಹುಟ್ಟಿದ ಮನೆ, ಬೆಳೆದ ಪರಿಸರವನ್ನು ನೋಡಲು ದೇಶ ವಿದೇಶಗಳಿಂದ ಜನರು ಖಂಡಿತಾ ಬರುತ್ತರೆ. ಪ್ರವಾಸೋದ್ಯಮ ದೃಷ್ಟಿಯಿಂದ ಈ ಅವಕಾಶವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಮುಂದಾಗಬೇಕು. ಇದನ್ನು ತಮ್ಮ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಬಿಂಬಿಸಿಕೊಂಡರೆ, ಖಂಡಿತಾ ಸರ್ಕ್ರಾದ ಬೊಕ್ಕಸೆಗೆ ಪ್ಲಸ್ ಪಾಯಿಂಟ್.
  ಕೊನೆಗೆ (ಸಂಬಂಧವಿಲ್ಲದ್ದು ) : ಖ್ಯಾತ ಹಾಸ್ಯ ಲೇಖಕ ಪಿ ಜಿ ವುಡ್ ಹೌಸ್ ಒಮ್ಮೆ ಮೈಸೂರಿಗೆ ಬಂದು ನೆಲೆಸಿದ್ದರಂತೆ. ತಾವು ನೆಲೆಸಿದ್ದ ವಸತಿಗೃಹದ ವ್ಯವಸ್ಥಾಪಕನಿಗೋ/ಒಡೆಯನಿಗೋ, ಇಲ್ಲಿ ಆರ್ ಕೆ ನಾರಾಯಣ್ ಇರುವ ಸ್ಥಳ ಯಾವುದು ಎಂದು ಕೇಳಿದರಂತೆ. ಆರ್ ಕೆ ನಾರಾಯಣ್ ಹೆಸರೇ ಕೇಳದ ಅವನು ತನಗೆ ಗೊತ್ತಿಲ್ಲವೆಂದಾಗ, ಪಿ ಜಿ ವುಡ್ ಹೌಸ್ ಆ ವಸತಿಗೃಹದಲ್ಲಿರಲು ನಿರಾಕರಿಸಿದ್ದರಂತೆ.

  ಪ್ರತಿಕ್ರಿಯೆ
  • ಅಶೋಕವರ್ಧನ ಜಿ.ಎನ್

   ಗುರುಪ್ರಸಾದರೇ
   ನನ್ನ ಮೊದಲ ಪತ್ರದ ಈ ವಾಕ್ಯಗಳನ್ನು ತಾವು ಗಮನಿಸಿದಂತಿಲ್ಲ: “ಈಗಾಗಲೇ ಇರುವ ಕವಿಮನೆಗಳು `ಹುಚ್ಚು ಅಭಿಮಾನ’ದಿಂದ ಹೊರಗೆ ತಮ್ಮ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಕಾರಂತರ ಬಾಲವನ, ಗೋವಿಂದ ಪೈಯವರ ಮಂಜೇಶ್ವರ, ಕುವೆಂಪು ಕುಪ್ಪಳ್ಳಿ, ಪುತಿನ ಮೇಲುಕೋಟೆ, ಬೇಂದ್ರೆ ಮನೆ ಇತ್ಯಾದಿ ಯಾಕೆ ಕನ್ನಡ, ಕನ್ನಡಜನಪದಗಳೆಂದೇ ಕಟ್ಟಿದ ವಿವಿನಿಲಯಗಳು, ಸಂಸ್ಥೆಗಳೂ ಇಂದು ಅತೃಪ್ತರ ಅಥವಾ ಅಲ್ಪತೃಪ್ತರ ಅರವಟ್ಟಿಗೆಗಳಾಗಿ ಮೆರೆಯುತ್ತಿರುವಾಗ ಆರ್.ಕೆ ನಾರಾಯಣ್ ಹೆಸರಿನಲ್ಲಿ ಒಂದು ಬರುವುದು ಬೇಕಾಗಿಲ್ಲ, ಬೇಡವೇ ಬೇಡ.”

   ಪ್ರತಿಕ್ರಿಯೆ
 3. D.RAVI VARMA

  ಸ್ಮರಕಗಲೇ ಒಬ್ಬ ವ್ಯಕ್ಕ್ತಿಯ ಯೋಗ್ಯತೆ ಯಾ ಸಂಕೇತಗಳಲ್ಲ ,ಸಿಸುನಾಲ ಶರೀಫ .ಸೂಫಿ ,ಹಾಗೆ ಜನಪದ ಕವಿಗಳು ಕೊಟ್ಟ ಅನನ್ಯ ಕೊಡುಗೆ ಎಲ್ಲೂ ಅವಾರ ಹೆಸರು ದಾಖಲಾಗಿಲ್ಲ, ಆದರೆ ಅರ್.ಕೆ ನಾರಾಯಣ ಕನ್ನದಡಿಗರಲ್ಲ ಅನ್ನೋ ಮಾತು ನನಗೆ ಬೇಸರ ಬರ್ತಿದೆ, ಅವರ ಬದುಕು,ಚಿಂತನೆ ,ಅವರ ಬರಹ ಮುಕ್ಯವೇ ಹೊರತು ಅವರು ಎಲ್ಲಿಂದ ಅನ್ನೋದು ಮುಕ್ಯವಲ್ಲ, ಹಾಗೆ ನೋಡಿದ್ರೆ ಸ್ಮಾರಕ ಬೇಕಾಗಿಲ್ಲ ,ಆದರೆ ಅವರ ಚಿಂತನೆ,ಅವರ ಬದುಕು ,ಎಲ್ಲರಿಗು ತಲುಪಬೇಕಾಗಿದೆ,ಅದು ಒಂದು ಮಾಲ್ಗುಡಿ ಡೇಸ್ ಅಸ್ತೆ ಅಲ್ಲ ಅವರ ಅನನ್ಯ ಚಿಂತನೆ ,ಬದುಕಿನ ಬಗ್ಗೆ ಅನನ್ಯ ಪ್ರೀತಿ ,ಎಲ್ಲವು ನಾವು ತಿಳಿಯಬೇಕಸ್ತೆ…..ಅವರ ಓದು,ಚಿಂತನೆ ,ಕಳಕಳಿ, ಬದುಕಿನ ವ್ಯಾಮೋಹ .ಸಾಮಾಜಿಕ ಕಳಕಳಿ ,ಅದು ಮುಕ್ಯ ,,ಅಸ್ತೆ ಅವರನೆಲ ಹುಟ್ಟಿದೂರು ಅವು ಯಾವು ಮುಕ್ಯವಲ್ಲ.ಬಸವಣ್ಣ,ಅಂಬೇಡ್ಕರ್,ಸೂಫಿಗಳು, ಬುದ್ಧ ಶಂಕರ ಇವರ ಹುಟ್ಟೂರು ಎಲ್ಲೋ ಗೊತ್ತಿಲ್ಲ ಆದರೆ ಇವರು ಇಡಿ ದೇಶಕ್ಕೆ ಒಂದು ಸಮುದಾಯಕ್ಕೆ ನಾಯಕರು .. ನಾವ್ಯಾಕೆ ಇಷ್ಟು ಸಂನವರುಗುತಿದ್ದೇವೆ …ಮನುಸ್ಯ ಮನುಸ್ಯ ಸಂಭಂದಗಳ ಮದ್ಯೆ ಇದೇಕೆ ನಾಡಿನ ಸಮಸ್ಯೆ ….

  ಪ್ರತಿಕ್ರಿಯೆ
 4. Adithya

  @GRUPRASAD just like PG Wodehouse refused to stay in a place, where R K Narayan was unknown, Kannadigas do not want their tax money to be spent on someone for whom Kannada was unknown, in Kannada’s cultural capital. Had PG Wodehouse asked about Kuvempu he would have got a free-ride till Udayaravi. I’m not saying RKN should have worked in Kannada, I’m talking about the cosmopolitan myth, and assimilation. If this is the response from a well read laureate like RKN towards the land on which he lived and prospered, what level of respect can a local society like mysooru expect from other layman outsider who have come here to get a life.
  As RK Narayan was only an Indian and cosmopolitan Mysoorian, why dont they spend some cosmoplitan or central govt money for his monument.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: