ಜುಗಾರಿ ಕ್ರಾಸ್ : ಆರ್.ಕೆ.ನಾರಾಯಣ್ ಕನ್ನಡಿಗರಲ್ಲವೆ?

ಹೇಳಿಕೇಳಿ ‘ಜುಗಾರಿ ಕ್ರಾಸ್’ ಚರ್ಚೆ, ವಾದ, ವಿವಾದಕ್ಕಾಗಿಯೇ ಇರುವ ವೇದಿಕೆ.

ಆರ್ ಕೆ ನಾರಾಯಣ್ ಅವರ ಮನೆಯನ್ನು ಸ್ಮಾರಕವಾಗಿಸುವ ಪರ ಮತ್ತು ವಿರೋಧವಾಗಿ ಇಂದು ಹಲವಾರು ದನಿಗಳು ಕೇಳಿಬರುತ್ತಿವೆ, ಇದರ ಬಗ್ಗೆ ಒಂದು ಲೇಖನ ಅವಧಿಯಲ್ಲಿ.

ಚರ್ಚೆಗೆ ಸ್ವಾಗತ. ನೀವೂ ಭಾಗವಹಿಸಿ.

ಆರ್.ಕೆ.ನಾರಾಯಣ್ ಕನ್ನಡಿಗರಲ್ಲವೆ?

ಗುರುಪ್ರಸಾದ್ ಡಿ ಎನ್

ಆರ್ ಕೆ ನಾರಾಯಣ್ ಕನ್ನಡದವರಲ್ಲ. ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಅವರಿಗೆ ಕನ್ನಡ ಸಾಹಿತ್ಯದ ಗಂಧವಿರಲಿಲ್ಲ, ಎ ಕೆ ರಾಮಾನುಜನ್ ಇಂಗ್ಲಿಷಿಗೆ ಕನ್ನಡ ಸಾಹಿತ್ಯವನ್ನು ಪರಿಚಿಯಿಸಿದ ಹಾಗೆ ಆರ್ ಕೆ ನಾರಾಯಣ್ ಅವರು ಯಾವುದೇ ಕನ್ನಡ ಸಾಹಿತ್ಯವನ್ನು ಇಂಗ್ಲಿಷಿಗೆ ಪರಿಚಯಿಸಲಿಲ್ಲ, ತಮಿಳಿನ ಕಂಬ ರಾಮಾಯಣವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ತಮಿಳು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು ಎಂಬ ಇತ್ಯಾದಿ ಆರೋಪಗಳ ಮೇಲೆ, ಕನ್ನಡಿಗರ ತೆರಿಗೆ ಹಣವನ್ನು ಅಪವ್ಯಯ ಮಾಡಿ ಕನ್ನಡಿಗನಲ್ಲದ ಆರ್ ಕೆ ನಾರಾಯಣ್ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾರ್ಪಡಿಸುವ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂಬ ಹಲವು ಹಿರಿಯ ಕನ್ನಡ ಸಾಹಿತಿಗಳ ಒಕ್ಕೊರಲಿನ ಮನವಿ (ಪ್ರಜಾವಾಣಿ ವಾರ್ತೆ: ೧೮-೦೯-೨೦೧೨) ಓದಿ ಆರ್ ಕೆ ನಾರಾಯಣ್ ಕನ್ನಡದಲ್ಲಿ ಬರೆಯದಿದ್ದರೂ ಕನ್ನಡದವರೇ ಎಂದು ಹೆಮ್ಮೆಯಿಂದ ನಂಬಿದ್ದ ನಮ್ಮಂತ ಸಾಮಾನ್ಯರಿಗೆ ಆಘಾತ, ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಆದವು. ಆರ್ ಕೆ ನಾರಾಯಣ್ ಕನ್ನಡದವರು ಎಂದು ನಂಬಲು ಕೆಲವು ನಿದರ್ಶನಗಳು ನಮಗೆ ಸಿಗುತ್ತವೆ. ೧. ಆರ್ ಕೆ ನಾರಾಯಣ್ ಮೈಸೂರು ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದರು ಮತ್ತು ಕನ್ನದ ನಾಡಿನ ಭೂಗೋಳವನ್ನು ತಮ್ಮ ಕೃತಿಗಳಲ್ಲಿ ಅಪಾರವಾಗಿ ಬಳಸಿರುವುದು. ೨. ಕನ್ನಡದ ಹಿರಿಯ ಸಾಹಿತಿ ಅನಂತಮೂರ್ತಿ ಅವರು ಆಕಾಶವಾಣಿಗೆ ಆರ್ ಕೆ ನಾರಾಯಣ್ ಅವರನ್ನು ಸಂದರ್ಶಿಸಿದಾಗ, ಅವರ ಮಾತುಕಥೆ ಪ್ರಾರಂಭವಾಗುವುದು ಹೀಗೆ, “ಯು ಆರ್ ಎ: ನಾವಿಬ್ಬರೂ ಇಲ್ಲಿ ಭೇಟಿಯಾದಾಗ ಕನ್ನಡದಲ್ಲಿ ಮಾತಾಡಿದ್ದು, ನೀವು ನನಗೆ ಅಂದು ನಿಮ್ಮ ‘ನನ್ನ ದಿನಗಳು’ ಪುಸ್ತಕದ ಹಸ್ತಪ್ರತಿಯನ್ನು ಕೊಟ್ಟಿದು ನೆನಪಿಗೆ ಬರುತ್ತದೆ. ಆರ್ ಕೆ ನಾ: ಹೌದು, ಹೌದು”. (ಈ ಸಂದರ್ಶನ ಪುಸ್ತಕ ರೂಪದಲ್ಲೂ ಲಭ್ಯ, ಅನಂತಮೂರ್ತಿ ಮಾತುಕತೆ| ಹತ್ತು ಸಮಸ್ತರ ಜೊತೆ, ಅಹಿರ್ನಿಶಿ ಪ್ರಕಾಶನ). ೩. ಆರ್ ಕೆ ನಾರಾಯಣ್ ಅವರ ತಮ್ಮ ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರ ಆತ್ಮಕತೆ ‘ದ ಟನೆಲ್ ಆಪ್ ಟೈಮ್’ ನಲ್ಲಿ, ನಮ್ಮ ಅಣ್ಣಂದಿರು ಮನೆಯಲ್ಲಿ ಕನ್ನಡ ಅಥವಾ ತಮಿಳು ಮಿಶ್ರಿತ ಇಂಗ್ಲಿಷಿನಲ್ಲಿ ವ್ಯವಹರಿಸುತ್ತಿದ್ದರು ಎಂದು ಬರೆದುಕೊಳ್ಳುತ್ತಾರೆ. ಕನ್ನಡದ ಬಗ್ಗೆ ಅಸಡ್ಡೆ ಅಥವಾ ದ್ವೇಷ ಇದ್ದಿದ್ದರೆ ಅವರು ವ್ಯವಹರಿಸುವ ಭಾಷೆಯಲ್ಲಿ ಕನ್ನಡವನ್ನು ಸೇರಿಸಿಕೊಳ್ಳುವ ಅಗತ್ಯವಿರಲಿಲ್ಲ ಅಲ್ಲವೆ? ಆರ್ ಕೆ ಲಕ್ಷ್ಮಣ್ ಅವರು ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಹೋದಾಗ ಕೂಡ ಆರ್ ಕೆ ನಾರಾಯಣ್ ಅವರು ಸಮಾಧಾನ ಹೇಳುತ್ತಾರೆ, “ನಾನೂ ಇಂಗ್ಲಿಷ್ ಭಾಷೆಯಲ್ಲಿ ಫೇಲಾಗಿದ್ದೆ ,ಆದರೆ ಇಂದು ಅದೇ ಭಾಷೆಯಲ್ಲಿ ಕಾದಂಬರಿಗಳನ್ನು ಬರೆಯುತ್ತಿದ್ದೇನೆಂದು!”. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ತಮಿಳುನಾಡಿನಲ್ಲೇ ಆದದ್ದರಿಂದ, ತಮ್ಮ ಕನ್ನಡದ ಸಾಮರ್ಥ್ಯ ಅತ್ಯುತ್ತಮ ಮಟ್ಟದಲ್ಲಿ ಇಲ್ಲದ್ದರಿಂದ ಕನ್ನಡ ಸಾಹಿತ್ಯದ ವಿಚಾರಕ್ಕೆ ಕೈಹಾಕದೆ ಇರುವುದು ಸ್ವಾಭಾವಿಕ. ಅಲ್ಲದೇ ಇಂಗ್ಲಿಶ್ ಭಾಷೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದರೆ, ಆರ್ಥಿಕ ದೃಷ್ಟಿಯಿಂದ ಆಗಲೀ, ಜನಪ್ರಿಯತೆ ದೃಷ್ಟಿಯಿಂದಾಗಲೀ ಶೀಘ್ರ ಸಾಧನೆಯನ್ನು ಮಾಡಬಹುದು ಎಂಬ ನಿಲುವನ್ನು ತಳೆದಿದ್ದಿರಲೂಬಹುದು. ಅಷ್ಟಕ್ಕೇ ಅವರು ಕನ್ನಡಿಗರಲ್ಲ ಎನ್ನುವುದು ಉಚಿತವೇ? ಖ್ಯಾತ ಸಂಗೀತಕಾರ ಮೈಸೂರು ವಸುದೇವಾಚಾರ್ಯ ಅವರು ಕೂಡ ನನಗೆ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಲು ಸಾಮರ್ಥ್ಯವಿಲ್ಲ ಎಂದು ಹೇಳಿ ಮೈಸೂರು ರಾಜರ ಕೆಂಗಣ್ಣಿಗೆ ಗುರಿಯಾಗಿದ್ದರಂತೆ! ಇನ್ನು ಅವರು ಕನ್ನಡ ಸಾಹಿತ್ಯವನ್ನು ಪಶ್ಚಿಮದವರಿಗೆ ತಲುಪಿಸಲು, ಎ ಕೆ ರಾಮಾನುಜನ್, ಸಂಸ್ಕಾರ ಕಾದಂಬರಿ ಅಥವಾ ವಚನಗಳನ್ನು ಅನುವಾದಿಸಿ ಪರಿಚಯಿಸಿದ ಹಾಗೆ ಯಾವುದೇ ಪ್ರಯತ್ನ ಮಾಡಲಿಲ್ಲ ಎಂಬುದು. ತಮ್ಮ ಆತ್ಮಕಥೆಯಾದ “ಮೈ ಡೇಸ್” ಕೃತಿಯಲ್ಲಿ ನಾರಾಯಣ್ ಅವರು ಮೈಸೂರು, ಚಾಮುಂಡಿ ಬೆಟ್ಟ, ಜಯಚಾಮರಾಜೇಂದ್ರ ಕಲಾಸ್ಮಾರಕ, ಮೈಸೂರು ಅರಮನೆ, ಸಯ್ಯಾಜಿ ರಾವ್ ರಸ್ತೆ, ಬೆಂಗಳೂರು ಇತ್ಯಾದಿ ಕನ್ನಡ ನಾಡಿನ ಪರಿಚಯ ಮಾಡಿಕೊಡುತ್ತಾರಲ್ಲ, ಇದು ಸಾಹಿತ್ಯವನ್ನು ಪ್ರಚುರಪಡಿಸಿದಷ್ಟೇ ಪರಿಣಾಮಕಾರಿಯಲ್ಲವೇ? ನಾಡನ್ನು ಪರಿಚಯ ಮಾಡಿಕೊಡುವುದಕ್ಕಿಂತ ಪಾಶ್ಚ್ಯಾತರಿಗೆ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದೇ ಅತ್ಯುತ್ತಮ ಎಂಬುದಕ್ಕೆ ಏನಾದರೂ ಮಾನದಂಡಗಳು ಇವೆಯೇ? ಇನ್ನು ಅವರು ತಮಿಳಿನ ಕಂಬರಾಮಾಯಣವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಆಕ್ಷೇಪಗಳನ್ನು ಎತ್ತಿರುವ ಸಾಹಿತಿಗಳೇ ಒಪ್ಪಿಕೊಂಡಿದ್ದಾರೆ. ಇನ್ನು ಅವರು ತಮ್ಮ ಪುಸ್ತಕಗಳನ್ನು ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಾರಿಕೊಂಡರು ಎಂಬ ಆರೋಪ! ತಮ್ಮ ಕೃತಿಗಳಿಗೆ ಹೆಚ್ಚಿನ ಮೌಲ್ಯ ಸಿಗುವಲ್ಲಿ ಅವುಗಳನ್ನು ಮಾರಿಕೊಳ್ಳುವುದು ಸಹಜ ಗುಣ. ಆರೋಪಿಸಿದ ಸಾಹಿತಿಗಳಲ್ಲೂ ಈ ಸಹಜತನ ಇರಲಿಕ್ಕೆ ನಿದರ್ಶನಗಳಿವೆ. ಬಸವಣ್ಣನವರು ಹೇಳಿದಂತೆ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬಂತೆ ಸಾಮಾನ್ಯರ ತೆರಿಗೆ ಹಣವನ್ನು ಒಬ್ಬ ಸಾಧಕನಿಗೆ ಸ್ಮಾರಕವನ್ನು ಕಟ್ಟಲು ಉಪಯೋಗಿದುವುದು ಬೇಡ ಎಂಬುದು ನ್ಯಾಯಬದ್ಧವಾದ ವಾದ. ಚೆನ್ನಾಗಿ ಕನ್ನಡ ಮಾತನಾಡಿದರೆ, ಕನ್ನಡ ಚನ್ನಾಗಿ ಬರೆದರೆ ಮಾತ್ರ ಸ್ಮಾರಕಕ್ಕೆ ಯೋಗ್ಯ ಎಂಬ ವಾದವಾಗಲೀ, ನಿದರ್ಶನಗಳಿಲ್ಲದ ಆರ್ ಕೆ ನಾರಾಯಣ್ ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ ಎಂಬ ಆರೋಪಗಳಲ್ಲಾಗಲೀ ಯಾವುದೇ ಹುರುಳಿಲ್ಲ. ಅಸಡ್ದೆ ತೋರಿದರೆ ಪಕ್ಕದ ರಾಜ್ಯದವರು ಅದನ್ನು ಸ್ಮಾರಕವಾಗಿಸಿ ಅವರದೇ ಭಾಷೆಯಲ್ಲಿ ಅಲ್ಲಿ ಫಲಕಗಳನ್ನು ತೂಗಿ ಹಾಕಿಯಾರು!]]>

‍ಲೇಖಕರು G

September 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

8 ಪ್ರತಿಕ್ರಿಯೆಗಳು

 1. ಅಶೋಕವರ್ಧನ ಜಿ.ಎನ್

  ತಾತ್ತ್ವಿಕ ನೆಲೆಗಟ್ಟಿಲ್ಲದ ಯಾವುದೇ `ಇಸಮು’ ಜಾತೀಯತೆ, ಕೋಮುವಾದಗಳಷ್ಟೇ ಭೀಕರ;ಇಂದು ಪ್ರಚಾರದಲ್ಲಿರುವ ಕನ್ನಡತನ ಭಿನ್ನವಲ್ಲ. ನಾರಾಯಣ್ ಕನ್ನಡಿಗರೋ ಅಲ್ಲವೋ ಎನ್ನುವುದು ಇಲ್ಲಿ ನಿರ್ಧಾರವಾಗಬೇಕಾದ ಮೌಲ್ಯವೇ ಅಲ್ಲ. ಪ್ರಜಾ ಸರಕಾರಗಳು ಭಾವನಾತ್ಮಕ ವಿನಿಯೋಗಗಳಲ್ಲಿ ಉತ್ಸಾಹಿಗಳಾಗದೇ ಶುದ್ಧ ಭೌತಿಕ ವ್ಯವಸ್ಥೆಗಳನ್ನು ಸರಿ ಮಾಡಿದರೆ ಬಹಳ ದೊಡ್ಡ ಉಪಕಾರವಾಗುತ್ತದೆ. ಆಡಳಿತ ಭದ್ರವಾಗಿರುವ ರಾಜ್ಯಗಳಲ್ಲಿ ಸಾಹಿತ್ಯ ಕಲೆಗಳು ತಂತಾನೇ ಅರಳುತ್ತವೆ ಎನ್ನುವುದಕ್ಕೆ ಇತಿಹಾಸ, ಪುರಾಣಗಳಲ್ಲಿ ಎಷ್ಟೂ ಉದಾಹರಣೆಗಳು ಸಿಗುತ್ತವೆ. ಆದರಿಂದು ಅವಕಾಶವಾದೀ ಸರಕಾರಗಳು (ಇದರಲ್ಲಿ ಕೇಂದ್ರ, ರಾಜ್ಯ ಎಂದು ಹೆಸರಿಸುವುದಕ್ಕಿಲ್ಲ)ಭಾವನಾತ್ಮಕ ಗೊಂದಲಗಳಲ್ಲೇ ವಿನಿಯೋಗದ ನಾಟಕವಾಡುತ್ತಾ ಸಾರ್ವಜನಿಕ ಖಜಾನೆಗಳನ್ನು ಸೂರೆಗೊಳ್ಳುತ್ತವೆ. ಈಗಾಗಲೇ ಇರುವ ಕವಿಮನೆಗಳು `ಹುಚ್ಚು ಅಭಿಮಾನ’ದಿಂದ ಹೊರಗೆ ತಮ್ಮ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಕಾರಂತರ ಬಾಲವನ, ಗೋವಿಂದ ಪೈಯವರ ಮಂಜೇಶ್ವರ, ಕುವೆಂಪು ಕುಪ್ಪಳ್ಳಿ, ಪುತಿನ ಮೇಲುಕೋಟೆ, ಬೇಂದ್ರೆ ಮನೆ ಇತ್ಯಾದಿ ಯಾಕೆ ಕನ್ನಡ, ಕನ್ನಡಜನಪದಗಳೆಂದೇ ಕಟ್ಟಿದ ವಿವಿನಿಲಯಗಳು, ಸಂಸ್ಥೆಗಳೂ ಇಂದು ಅತೃಪ್ತರ ಅಥವಾ ಅಲ್ಪತೃಪ್ತರ ಅರವಟ್ಟಿಗೆಗಳಾಗಿ ಮೆರೆಯುತ್ತಿರುವಾಗ ಆರ್.ಕೆ ನಾರಾಯಣ್ ಹೆಸರಿನಲ್ಲಿ ಒಂದು ಬರುವುದು ಬೇಕಾಗಿಲ್ಲ, ಬೇಡವೇ ಬೇಡ.
  ಅಶೋಕವರ್ಧನ

  ಪ್ರತಿಕ್ರಿಯೆ
  • prasad raxidi

   ಹೌದು ಸ್ಮಾರಕಗಳು, ಪ್ರತಿಮೆಗಳು, ಮಾಡಿದ್ದು ಸಾಕು…

   ಪ್ರತಿಕ್ರಿಯೆ
 2. varsa sagar

  Enough of Memorials. If want, let RKN’s hardcore followers do it at their own cost and maintain it.

  ಪ್ರತಿಕ್ರಿಯೆ
 3. ಪಂಡಿತಾರಾಧ್ಯ ಮೈಸೂರು

  ಆರ್ ಕೆ ನಾರಾಯಣ್ ಅವರ ಮನೆಯನ್ನು ಅವರ ಮಕ್ಕಳು ಖಾಸಗಿ ಸ್ವತ್ತೆಂದು ವಿತರಣೆ ಮಾಡಿದ ಮೇಲೆಯೂ ಅದನ್ನು ರಾಜ್ಸ ಸರಕಾರ ಕೊಂಡುಕೊಂಡು ಸ್ಮಾರಕವಾಗಿ ಉಳಿಸುವ ಅಗತ್ಯ ಇಲ್ಲ. ಕೇಂದ್ರ ಸರಕಾರ. ಕೇಂದ್ರ ಸಾಹಿತ್ಯ ಅಕಾಡೆಮಿಗಳು ಆ ಕೆಲಸ ಮಾಡಬಹುದು. ಯಾವುದೇ ಲೇಖಕರ ಜೀವಂತ ಸ್ಮಾರಕ ಅವರ ಕೃತಿಗಳೇ. ಅವನ್ನು ಓದಲು ಸಿಗುವಂತೆ ಮಾಡುವುದು ಮುಖ್ಯ.

  ಪ್ರತಿಕ್ರಿಯೆ
 4. ನಾ ದಿವಾಕರ

  ಸ್ಮಾರಕಗಳು ಯಾವುದೇ ಒಬ್ಬ ಸಾಹಿತಿ, ಕಲಾವಿದ ಅಥವಾ ಸಾಧಕನಿಕೆ ಸಲ್ಲಬೇಕಾದ ಗೌರವ ಎಂದಾದಲ್ಲಿ ಸ್ಮಾರಕಗಳ ಪರಿಕಲ್ಪನೆ ಜಂಗಮ ರೂಪದಲ್ಲಿರಲಿ, ಸ್ಥಾವರ ರೂಪದಲ್ಲಿ ಬೇಡ. ಸ್ಮಾರಕ ನಿರ್ಮಾಣ ಸಂಕುಚಿತ ಮನೋಭಾವದಿಂದ ಕೂಡಿದ ಪ್ರಕ್ರಿಯೆ.ನಾರಾಯಣ್ ಸ್ಮಾರಕದ ವಿರೋಧ ಇನ್ನೂ ಹೆಚ್ಚು ಸಂಕುಚಿತ ಭಾವನೆಯ ದ್ಯೋತಕ. ನಾರಾಯಣ್ ಕನ್ನಡದಲ್ಲಿ ಮಾತನಾಡಲಿಲ್ಲ, ಕನ್ನಡ ಕಲಿಯಲಿಲ್ಲ, ಕನ್ನಡ ಸಾಹಿತ್ಯ ರಚಿಸಲಿಲ್ಲ ಎಂದು ಅವರ ಸ್ಮಾರಕವನ್ನು ವಿರೋಧಿಸುವುದು ತರವಲ್ಲ. ಕನ್ನಡದ ಗಂಧವೇ ಇಲ್ಲದ ಗಾಂಧಿ, ಅಂಬೇಡ್ಕರ್, ವಿವೇಕಾನಂದರ ಸ್ಮಾರಕಗಳಿಲ್ಲವೇ ? ಸ್ಮಾರಕ ಪ್ರತಿಮೆಗಳಿಂದಾಚೆಗೆ ನೋಡುವ ಉನ್ನತ ಧ್ಯೇಯ ಬೆಳೆಸಿಕೊಳ್ಳುವುದು ಒಳಿತು. ಅಲಕ್ಷಿತ ಸ್ಮಾರಕಕ್ಕಿಂತಲೂ ನಿರ್ಮಿತವಾಗದ ಸ್ಮಾರಕ ಎಷ್ಟೋ ಲೇಸಲ್ಲವೇ ? ಪಂಡಿತಾರಾಧ್ಯರು ಹೇಳಿದಂತೆ ಸಾಹಿತಿಯ ಕೃತಿಗಳೇ ಅವರ ಸ್ಮಾರಕಗಳು. ಉಳಿದೆಲ್ಲವೂ ಆಡಂಭರ.
  ನಾ ದಿವಾಕರ

  ಪ್ರತಿಕ್ರಿಯೆ
 5. Kanikiaraju

  kannadakke uttejana mattu gamana koduvudu bittu…avarivaru kannada balasidaro illovo ennuvudu estara mattige samarthniya….kannada-da belavanige, prachara hagu abhivruddi kaala grabhakke thakkanthe hecchisikondu hogabeku horathu nakaraathmakakke gamana seledare kannada beledantheye? kavi, sahiti,vimarshatmakaru…ellaru bhashe belesalu sahaya madidaru…aadare kannada-da janathe…kalakke takkanthe vistarsi, abhivruddi padiside…aaddarinda naavellaru kaanada abhivruddige vishala hrudayigalagabeku. kannada kevala lipigallirade…namma hagu mukyavagi itararalli neleyuri…samruddhiyagabekagide.

  ಪ್ರತಿಕ್ರಿಯೆ
 6. vasanth

  ಆರ್.ಕೆ. ನಾರಾಯಣ್ ರವರು ಕನ್ನಡಿಗರೇ, ಭೈರಪ್ಪನವರ ಜೊತೆ ಕೆಲ ಪ್ರಗತಿಪರರು ಆರ್.ಕೆ. ನಾರಾಯಣ್ ರವರನ್ನು ಭಾಷಾಭಿಮಾನದ ಹೆಸರಿನಲ್ಲ ಅವಮಾನಿಸುತ್ತಿರುವುದು ಸರಿಯಲ್ಲ.

  ಪ್ರತಿಕ್ರಿಯೆ
 7. kumararaitha

  ಲೇಖನ ಸೂಕ್ತವಾಗಿದೆ. ಸ್ಮಾರಕಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವುದು ನಿಜ. ಆದರೆ ಮುಂದಿನ ಪೀಳಿಗೆಗಳಿಗೆ ನಾಡಿಗೆ ಹೆಮ್ಮೆಯೆನ್ನಿಸುವ ಕವಿ-ಸಾಹಿತಿ ಬದುಕಿ ಬಾಳಿದ ಮನೆಗಳನ್ನು ಸ್ಮಾರಕ ಮಾಡುವುದು ಸೂಕ್ತ. ಇಲ್ಲಿ ಅವರು ಬರೆದ ಎಲ್ಲ ಕೃತಿಗಳು ರಿಯಾಯತಿ ದರದಲ್ಲಿ ದೊರೆಯುವಂತೆ ಮಾಡುವುದು ಸೂಕ್ತ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: