ಜುಗಾರಿ ಕ್ರಾಸ್ : ’ಜನಪರತೆಯ ಸೋಗು ಹಾಗೂ ..’ – ಬಿ ಸುರೇಶ್

ಜನಪರತೆಯ ಸೋಗು ಹಾಗೂ ‘ಜನಪ್ರಿಯ ಮುಖ’ ಹೊತ್ತ ಸೋಗಲಾಡಿಗಳು

– ಬಿ ಸುರೇಶ್

ಈಚೆಗೆ ಅನೇಕ ಜನಪ್ರಿಯ ನಾಯಕರು ಕಿರುತೆರೆಯ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಏಕಕಾಲಕ್ಕೆ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಕಾಣಸಿಗುತ್ತಿರುವ ಪ್ರಕ್ರಿಯೆ. ಮೇಲ್ನೋಟಕ್ಕೆ ಇದು ಉತ್ತಮ ಕೆಲಸವೇ. ‘ಜನಪ್ರಿಯ ಎನಿಸಿಕೊಂಡ ವ್ಯಕ್ತಿಗಳು ಆಡುವ ಮಾತನ್ನು ಕೇಳುವ ಕಿವಿಗಳು ಹೆಚ್ಚಾಗಿರುತ್ತವೆ. ಅದರಿಂದಾಗಿ ಸಮಾಜಕ್ಕೆ ಒಳ್ಳೆಯದಾದರೆ ಆಗಲಿ’ ಎಂದು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಆದರೆ ಇಂತಹ ಪ್ರಕ್ರಿಯೆಗಳ ಹಿಂದೆ ಇರುವ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ. ಸಾಮಾನ್ಯವಾಗಿ ಮನರಂಜನೆಗೆ ಮೀಸಲಾದ ಕಿರುತೆರೆಯ ವಾಹಿನಿಗಳು ಯಾವುದೇ ಕಾರ್ಯಕ್ರಮವನ್ನು ಆರಂಭಿಸುವಾಗಲೂ ಆಯಾ ಕಾರ್ಯಕ್ರಮ ಜನಪ್ರಿಯವಾಗಲು ಏನೇನು ಬೇಕಾಗುತ್ತದೆ ಎಂದು ಗಮನಿಸುತ್ತವೆ. ಈ ಹುಟುಕಾಟದಲ್ಲಿ “ರಿಯಾಲಿಟಿ ಷೋ”ಗಳಿಗೆ ಎರಡು ದಶಕಗಳ ಹಿಂದೆ ಅಮೇರಿಕಾದಲ್ಲಿ ಸಿಕ್ಕ ಜನಪ್ರಿಯತೆಯನ್ನು ಆಧರಿಸಿ ಭಾರತದಲ್ಲಿ ಅವೇ ರಿಯಾಲಿಟಿ ಷೋಗಳ ನಕಲುಗಳು ಆದುದನ್ನು ನಾವು ಕಾಣುತ್ತಾ ಇದ್ದೇವೆ. ‘ಕೌನ್ ಬನೇಗಾ ಕರೋಡ್‌ಪತಿ’ಗೆ ಅಮಿತಾಬ್ ಮತ್ತು ‘ಕನ್ನಡದ ಕೋಟ್ಯಾಧಿಪತಿ’ಗೆ ಪುನೀತ್ ಅವರ ಆಗಮನ ಆಗಿದ್ದರ ಹಿಂದೆ ಇದ್ದದ್ದು ಆಯಾ ವಾಹಿನಿಯ ಕಾರ್ಯಕ್ರಮವನ್ನು ಜನಪ್ರಿಯವಾಗಿಸುವ ತಂತ್ರವೇ. ಏಕೆಂದರೆ ಈ ಹಿಂದೆ ಇಂತಹುದೇ ಕ್ವಿಜ್ (ರಸಪ್ರಶ್ನೆ) ಕಾರ್ಯಕ್ರಮವನ್ನು ಸಿದ್ಧಾರ್ಥ ಬಸು ಅವರು ನಡೆಸಿಕೊಡುತ್ತಾ ಇದ್ದರು. ಆ ಕಾರ್ಯಕ್ರಮವೂ ಸಹ ಸಾಕಷ್ಟು ಜನಪ್ರಿಯವಾಗಿತ್ತು. ಆದರೆ ಅಂತಹ ಕಾರ್ಯಕ್ರಮದ ನಿರೂಪಕರಾಗಿ ಸಿನಿಮಾದಲ್ಲಿ ಜನಪ್ರಿಯರಾದವರನ್ನು ಕೂರಿಸುವ ಮೂಲಕ ಸಿದ್ಧಾರ್ಥ ಬಸು ಅಂತಹವರನ್ನು ಕೇವಲ ಕಾರ್ಯಕ್ರಮ ತಯಾರಕರನ್ನಾಗಿಸುವ ಪ್ರಕ್ರಿಯೆ ಹೊಸ ಶತಮಾನದ ಆರಂಭದಲ್ಲಿ ಆಗತೊಡಗಿತು. ಅದು ಈಗ ಅಮೀರ್‌ಖಾನರು ನಡೆಸುತ್ತಾ ಇರುವ “ಸತ್ಯಮೇವಜಯತೇ’ವರೆಗೆ ಹರಿದು ಬಂದಿದೆ.

ಚಿತ್ರ : ಅ೦ತರ್ಜಾಲ

ಇಂತಹ ಕಾರ್ಯಕ್ರಮಗಳನ್ನು ಅದಾಗಲೇ ‘ಸ್ಟಾರ್’ ಆಗಿರುವ ವ್ಯಕ್ತಿ ಒಪ್ಪಿಕೊಳ್ಳುವುದು ಹೆಚ್ಚುವರಿ ಆದಾಯಕ್ಕಾಗಿಯೇ. ಹೀಗೆ ಹಣದ ಕಾರಣಕ್ಕಾಗಿಯೇ ರಿಯಾಲಿಟಿ ಷೋಗಳ ನಿರೂಪಕರಾದವರ ದೊಡ್ಡ ಪಟ್ಟಿಯೇ ನಿಮಗೆ ಸಿಗುತ್ತದೆ. ಆದರೆ ಹಣಕ್ಕಾಗಿ ಕಾರ್ಯಕ್ರಮದ ನಿರೂಪರಾದವರು ತಾವು ಇದನ್ನು ಸಮಾಜಸೇವೆಗೆ ಮಾಡುತ್ತಾ ಇದ್ದೇನೆ ಎಂದಾಗ ಇಂತಹ ಕಾರ್ಯಕ್ರಮ ತಯಾರಿಕೆಯ ಹಿಂದಿರುವ ಕಾರಣ ಬಲ್ಲವರು ತುಟಿಯಂಚಲ್ಲಿ ನಗುವುದನ್ನು ಸಹ ನಾವು ಕಾಣಬಹುದು. ಇಂತಹ ಕಾರ್ಯಕ್ರಮಗಳನ್ನು ನಿಜವಾದ ಸಾಮಾಜಿಕ ಕಳಕಳಿಯಿಂದ ನಡೆಸಿಕೊಡಲು ಪ್ರಯತ್ನಿಸಿದ ಹಲವರೂ ನಮ್ಮಲ್ಲಿ ಇದ್ದಾರೆ. ‘ಜನಪ್ರಿಯತೆಯ ಪೋಷಾಕು’ ತೊಟ್ಟವರ ಆಗಮನದಿಂದ ಅಂತಹ ಅನೇಕ ಒಳ್ಳೆಯ ಪ್ರಯತ್ನಗಳು ಮಸುಕಾಗಿವೆ ಎಂಬುದೂ ಸತ್ಯ. ಉದಾಹರಣೆಗೆ ಶಿವರಾಜ್‌ಕುಮಾರ್ ಅವರು ನಡೆಸಿಕೊಟ್ಟ ‘ನಾನಿರುವುದೇ ನಿಮಗಾಗಿ’, ಮಾಳವಿಕ ನಡೆಸಿಕೊಟ್ಟ ‘ಬದುಕು ಜಟಕಾ ಬಂಡಿ’ ತರಹದ ಕಾರ್ಯಕ್ರಮಗಳು ನೇರವಾಗಿ ಹಲವರಿಗೆ ಸಹಾಯ ಮಾಡಿದ್ದವು. ಅಮೇರಿಕಾದ ಓಫ್ರಾ ವಿನ್‌ಫ್ರೇ ನಡೆಸಿಕೊಡುವ ಕಾರ್ಯಕ್ರಮಗಳು ಸಹ ಆರಂಭ ಕಾಲದಲ್ಲಿ ಅನೇಕ ಒಡೆದ ಕುಟುಂಬಗಳನ್ನು ಕೂಡಿಸಿದ್ದವು. ಆದರೆ ಅವೇ ಕಾರ್ಯಕ್ರಮಗಳು ನಂತರ ಸೋಗಿನ ಸಾಮಾಜಿಕ ಕಾಳಜಿಯನ್ನು ಮಾತ್ರ ಬಿಂಬಿಸುವಂತೆ ಆಗಿದ್ದು ಅವೇ ವಾಹಿನಿಗಳ ಕಾರ್ಯಕ್ರಮ ತಯಾರಕರಿಂದ. ಅದು ಹೇಗೆ ಆರಂಭದಲ್ಲಿ ಇದ್ದ ಒಳ್ಳೆಯತನ ನಂತರ ಮಾಸುತ್ತದೆ ಎಂಬುದನ್ನು ಗಮನಿಸೋಣ. ಜನಪರ ಕಾಳಜಿಯ ಸೋಗು ಜನಪ್ರಿಯತೆ ಪಡೆಯುವ, ಆ ಮೂಲಕ ರೇಟಿಂಗ್ ಪಡೆಯುವ, ಆ ಮೂಲಕ ಅತಿ ಹೆಚ್ಚಿನ ಜಾಹೀರಾತು ಪಡೆಯುವ, ಆ ಮೂಲಕ ಲಾಭ ಹೆಚ್ಚಿಸಿಕೊಳ್ಳು ಕಾರಣಕ್ಕಾಗಿಯೇ ಯಾವುದೇ ವಾಹಿನಿಯ ಯಾವುದೇ ಕಾರ್ಯಕ್ರಮ ತಯಾರಿಸುವವರು ತಮ್ಮ ‘ಪ್ರೋಗ್ರಾಮ್’ ರೂಪಿಸುತ್ತಾರೆ. ಇದು ವ್ಯಾಪಾರೀ ತತ್ವ. ಆ ತತ್ವವು ಸಮಾಜದ ಏಳಿಗೆಯ ಸೋಗನ್ನು ಹಾಕಿಕೊಂಡೇ ಲಾಭ ಪಡೆಯುವ ಹಾದಿಯಲ್ಲಿರುತ್ತವೆ. ಯಾರಾದರೂ ಲಾಭ ಮಾಡುವುದನ್ನು ಇನ್ಯಾರಾದರೂ ಬೇಡ ಅನ್ನುತ್ತಾರೆಯೇ? ಖಂಡಿತಾ ಇಲ್ಲ. ಆದರೆ ಕಾರ್ಯಕ್ರಮದ ಆರಂಭಿಕ ಹಂತದಲ್ಲಿ ಇರುವ ಜನಪರತೆಯು ರೇಟಿಂಗ್‌ನಲ್ಲಿ ಸಂಖ್ಯೆಗಳಾಗಿ ಕಾಣುವುದಿಲ್ಲ. ಆಗ ಕಾರ್ಯಕ್ರಮ ತಯಾರಕ ತಲ್ಲಣಗೊಳ್ಳುತ್ತಾನೆ. ರೇಟಿಂಗ್ ಬರದೆ ಆದಾಯವಿಲ್ಲ. ಹಾಗಾಗಿ ರೇಟಿಂಗ್ ಬರುವುದಕ್ಕಾಗಿ ಏನು ಮಾಡಲಿ ಎಂಬ ಪ್ರಶ್ನೆಗಳು ಅವನನ್ನು ಕಾಡುತ್ತವೆ. ಆಗ ‘ಜನಪರತೆ’ ಎಂಬುದು ಕೇವಲ ಸೋಗು ಮಾತ್ರ ಆಗಿ ಅದೇ ಕಾರ್ಯಕ್ರಮಗಳಲ್ಲಿ ನಾಟಕೀಯತೆ, ಮೆಲೋಡ್ರಾಮ ಮತ್ತು ಶರಂಪರ ಜಗಳಗಳು ಸೇರಿಕೊಳ್ಳುತ್ತವೆ. ‘ಜನಪ್ರಿಯ’ಮುಖವು ತಂದುಕೊಡದ ರೇಟಿಂಗನ್ನು ಈ ಎಲ್ಲಾ ನಾಟಕೀಯ ಅಂಶಗಳ ಮೂಲಕ ಪಡೆಯುವ ಹಾಗೆ ಕಾರ್ಯಕ್ರಮದ ಸ್ವರೂಪ ಬದಲಾಗುತ್ತದೆ. ‘ಕೌನ್ ಬನೇಗಾ ಕರೊಡ್‌ಪತಿ’ಯಲ್ಲಿ ಕಣ್ಣೀರು ಹಾಕುವ ದೃಶ್ಯಗಳು ಸೇರಿಕೊಳ್ಳುವುದು ಇಂತಹ ಸಂದರ್ಭಗಳಲ್ಲಿ. ‘ಅರೆ! ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಣ್ಣೀರೇಕೆ?’ ಎಂದರೆ ‘ಕೇವಲ ಪ್ರಶ್ನೋತ್ತರದ ಏಕತಾನತೆಯನ್ನು ತಪ್ಪಿಸಲು ದೃಶ್ಯಗಳನ್ನು ನಾಟಕೀಯಗೊಳಿಸಲಾಯಿತು’ ಎಂಬ ಸಿದ್ಧ ಉತ್ತರ ಕಾರ್ಯಕ್ರಮ ತಯಾರಕರಲ್ಲಿ ಇರುತ್ತದೆ. ‘ಬದುಕು ಜಟಕಾ ಬಂಡಿ’ ‘ಇದು ಕತೆಯಲ್ಲ ಜೀವನ’ದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ನೋಡುಗನೇ ಗಾಬರಿಯಾಗುವಂತೆ ಜಗಳ ಆಡಿಕೊಳ್ಳಲು ಆರಂಭಿಸಿದ್ದು ಮಾತ್ರ ಅದಾಗಲೇ ಸೂಚಿಸಿದ ರೇಟಿಂಗ್ ಪಡೆವ ಕಸರತ್ತೇ. ಇತ್ತೀಚೆಗೆ ವಾಹಿನಿಯೊಂದು ಮತ್ತೊಬ್ಬ ಪತ್ರಕರ್ತನ ಖಾಸಗಿ ಬದುಕನ್ನು ಅನಾವರಣಗೊಳಿಸಲು ಮಡಿದ ಅಪಸವ್ಯವೂ ಸಹ ಇದೇ ರೇಟಿಂಗ್ ಪಡೆವ ಕಸರತ್ತೇ. ಹೀಗಾದಾಗ ‘ಜನಪ್ರಿಯ ತಾರೆ’ಯ ಜನಪರತೆಯು ಸೋಗಿನದ್ದಾಗಿ ಬಿಡುತ್ತದೆ. ಹೆಂಗಸರ ಮೇಲೆ ಆಗುವ ದೌರ್ಜನ್ಯ ಎಂಬುದು ಅತ್ಯಂತ ಹೆಚ್ಚು ಜನ ನೊಡುಗರನ್ನು ಪಡೆವ ವಿಷಯ. ಆದರೆ ಅಂತಹ ವಿಷಯ ಕುರಿತು ಮಾತಾಡುವ ‘ಜನಪ್ರಿಯ ನಾಯಕ’ ಸ್ವತಃ ತನ್ನ ಮನೆಯನ್ನೇ ಸ್ವಚ್ಛಗೊಳಿಸಿಕೊಳ್ಳದೆ ಆ ಮಾತನ್ನಾಡುವುದು ಉದ್ದೇಶಿತ ಪರಿಣಾಮ ಮೂಡಿಸದೆ ನಗೆಪಾಟಲಾಗುತ್ತದೆ. ಅದೇ ‘ಜನಪ್ರಿಯ ನಾಯಕ’ ಹಿಂಸೆಯ ವೈಭವೀಕರಣದ ಸಿನಿಮಾ ತಯಾರಿಸಿ ಜನಪ್ರಿಯತೆ ಪಡೆದಿರುತ್ತಾನೆ. ನಂತರ ಅದೇ ವ್ಯಕ್ತಿಯು ದೇಶಪ್ರೇಮದ ಮಾತಾಡಿದಾಗ ಆತನ ಪ್ರೇಮ ಯಾವುದರ ಕಡೆಗೆ ಎಂಬ ಅನುಮಾನ ಹುಟ್ಟುತ್ತದೆ. ಇಂತಹ ಸೋಗುಗಳನ್ನು ತಪ್ಪಿಸಲು ಇರುವ ಏಕೈಕ ಮಾರ್ಗ ಎಂದರೆ ಜಾಹೀರಾತು ಆದಾಯ ಮೂಲವುಳ್ಳ ಕಾರ್ಯಕ್ರಮವನ್ನು ರೂಪಿಸುವ ಬದಲು ಜನಬೆಂಬಲದಿಂದಲೇ (ಅಥವಾ ಜನಕ್ಕಾಗಿ ಇರಿಸಲಾದ ಹಣದ ಸಹಾಯದಿಂದಲೇ) ಕಾರ್ಯಕ್ರಮ ರೂಪಿಸುವಂತಾಗಬೇಕು. ಆಗ ಇಂತಹ ಜನಪರ ಕಾರ್ಯಕ್ರಮಗಳು ಸೋಗಿನ ಕಾರ್ಯಕ್ರಮ ಆಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಹಿಂದೆ ಸಿಹಿಕಹಿ ಚಂದ್ರು ಅವರು ರೇವತಿ ಎಂಬಾಕೆಯನ್ನು ನಿರೂಪಕಿಯಾಗಿರಿಸಿ ಹೆಂಗಸರ ವೈದ್ಯಕೀಯ ಸಮಸ್ಯೆಗಳನ್ನು ಕುರಿತಂತೆ ತಯಾರಿಸಿದ್ದ ಕಾರ್ಯಕ್ರಮವನ್ನು ನೆನಪಿಸಿಕೊಳ್ಳಬಹುದು. ಆ ಕಾರ್ಯಕ್ರಮವು ರೇಟಿಂಗ್‌ಅನ್ನು ಗುರಿಯಾಗಿಸಿಕೊಂಡು, ಆ ಮೂಲಕ ಜಾಹೀರಾತಿನ ಆದಾಯ ಪಡೆಯಲೆಂದು ತಯಾರಾಗಿರಲಿಲ್ಲ. ಭಾರತೀಯ ಹೆಂಗಸರ ಸಮಸ್ಯೆಗಳನ್ನು ಅರಿತಿದ್ದ ಸಂಸ್ಥೆಯೊಂದು ಅಂತಹ ಕಾರ್ಯಕ್ರಮಕ್ಕೆ ಸಹಾಯಧನ ನೀಡಿತ್ತು. ಹಾಗಾಗಿ ಸಿಹಿಕಹಿ ಚಂದ್ರು ಅವರು ಮಾಡಿದ್ದ ಆ ರಿಯಾಲಿಟಿ ಷೋ ಸೋಗಿನ ಅಂಶ ಸೇರದಂತೆ ರೂಪಿತವಾಗಿತ್ತು. ಅಂತಹ ಪ್ರಯತ್ನಗಳನ್ನು ಈಗಲೂ ಸರ್ಕಾರೀ ವಾಹಿನಿಯಾದ ದೂರದರ್ಶನದಲ್ಲಿ ಆಗುತ್ತಿದೆ. ಸಾರ್ಕ್ ಸಮ್ಮೇಳನವು ಭಾರತದಲ್ಲಿ ಆದ ಸಂದರ್ಭದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ದೂರದರ್ಶನವು ನಾಡಿನ ಅನೇಕ ನಿರ್ದೇಶಕರಿಂದ ಚಿತ್ರಗಳನ್ನು ನಿರ್ಮಿಸಿತ್ತು. ಅವುಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರತ್ಯೇಕವಾಗಿ ತಯಾರಾಗಿದ್ದವು. ಹಾಗೆ ತಯಾರಾದ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲವು ಚಿತ್ರಗಳ ಸಾರ್ವಕಾಲಿಕ ಶ್ರೇಷ್ಟತೆಯನ್ನು ಸಹ ಹೊಂದಿದ್ದವು. ಆದರೆ ಕಳೆದೆರಡು ದಶಕದಲ್ಲಿ ಆ ಸರ್ಕಾರೀ ವಾಹಿನಿಯ ಭ್ರಷ್ಟತೆಯೇ ಇನ್ನಿತರ ಮಾಧ್ಯಮಗಳಲ್ಲಿ ಅತ್ಯಂತ ಪ್ರಬಲವಾಗಿ ಬಿಂಬಿತವಾಗಿರುವುದರಿಂದ ಮುದ್ರಣ ಮಾಧ್ಯಮವನ್ನು ಬಲ್ಲ ಪ್ರೇಕ್ಷಕರು ದೂರದರ್ಶನದಿಂದ ಬಹುತೇಕ ವಿಮುಖರಾಗಿರುವುದು ಸಹ ಅದೇ ರೇಟಿಂಗ್ ವ್ಯವಸ್ಥೆಯಿಂದ ತಿಳಿಯುವ ಸತ್ಯ. ಹೀಗಾಗಿ ಖಾಸಗಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಜನಪರ ಕಾಳಜಿಯ ಬಹುತೇಕ ಕಾರ್ಯಕ್ರಮಗಳು ಇಂದು ಸೋಗಿನ ಜನಪರತೆಯನ್ನು, ಸೋಗಿನ ದೇಶಪ್ರೇಮವನ್ನು ಬೋಧಿಸುತ್ತಿವೆ. ಈ ವಿಷಯವನ್ನು ಪ್ರಚುರ ಪಡಿಸಲು ‘ಜನಪ್ರಿಯ ಮುಖ’ಗಳನ್ನು ಬಳಸಲಾಗುತ್ತಿದೆಯಷ್ಟೆ. ಆ ‘ಜನಪ್ರಿಯ ಮುಖ’ಗಳಿಗೆ ಸ್ವತಃ ಒಂದು ರಾಜಕೀಯ ದೃಷ್ಟಿಕೋನ, ಸಾಮಾಜಿಕ ಕಾಳಜಿ ಇಲ್ಲವೆಂಬುದು ಸುಸ್ಪಷ್ಟ. ಇದರೊಂದಿಗೆ ಅದೇ ಖಾಸಗಿ ವಾಹಿನಿಯ ಮಾಲೀಕರು ಮುದ್ರಣ ಮಾಧ್ಯಮಗಳ ಮಾಲೀಕರು ಆಗಿರುವುದರಿಂದ ಈ ಸೋಗಿನ ಜನಪರತೆಯನ್ನು ‘ಶ್ರೇಷ್ಟ ಜನಪರ ಕೆಲಸ’ ಎಂದು ಪ್ರಚಾರ ಮಾಡಿ ಜನಾಭಿಪ್ರಾಯ ರೂಪಿಸುವ ಕೆಲಸವನ್ನೂ ಮಾಡುತ್ತಾ ಇರುತ್ತಾರೆ. ಇದು ಮತ್ತೊಂದು ಅಪಾಯ. ಯಾವುದು ಜನಪರವಲ್ಲ ಎಂಬುದು ಅದಾಗಲೇ ಸಾಬೀತಾಗಿದೆಯೋ ಅಂತಹುದನ್ನು ಮತ್ತೊಂದು ಮಾಧ್ಯಮದ ಮೂಲಕ ಜನಪರವಾದದ್ದು ಎಂಬ ವಾದವನ್ನು ಮಂಡಿಸುವ ‘ಬುದ್ಧಿವಂತ’ ಸಂಕುಲವನ್ನು ಅದೇ ಬಂಡವಾಳಶಾಹಿಗಳು ತಮ್ಮ ದುಡ್ಡಿನಿಂದ ಸೃಷ್ಟಿಸಿರುತ್ತಾರೆ. ಹೀಗಾಗಿ ಒಂದು ಸಮಾಜದ ಒಳಗೆ ಪರ-ವಿರೋಧಗಳ ಬಣಗಳು ಹುಟ್ಟುವಂತೆ ಮಾಡಿ, ಆ ಬಣಗಳ ಕಿತ್ತಾಟವನ್ನು ಸಹ ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳಲು ಬಳಸುವ ಹವಣಿಕೆ ಆ ವಾಹಿನಿಗಳ ಮತ್ತು ಮಾಧ್ಯಮಗಳ ಮಾಲೀಕರಿಗೆ ಇರುತ್ತದೆ. ಹೀಗಾಗಿ ಈ ಜನಪ್ರಿಯ ಮುಖಗಳನ್ನು ಬಳಸಿ ರೂಪಿಸಿದ ಜನಪರ ಎಂಬ ಸೋಗಿನ ಕಾರ್ಯಕ್ರಮವು ಅತ್ತ ತಾನು ಸಾಧಿಸಬೇಕಾದ್ದನ್ನು ಸಾಧಿಸದೆ, ಜನೋಪಯೋಗಿಯೂ ಆಗದೆ ಅಂತಿಮವಾಗಿ ಆಯಾ ವಾಹಿನಿಗೆ ಹಾಲು ಹಿಂಡಿಕೊಳ್ಳುವ ಕಾಮಧೇನು ಮಾತ್ರ ಆಗಿ ಉಳಿಯುತ್ತದೆ. ಜನಪರತೆ ಎಂಬುದೇ ಸೋಗಲಾಡಿತನವಾಗುವಂತಹ ವ್ಯವಸ್ಥೆಯೊಂದು ಈ ದೇಶದಲ್ಲಿ ಬರಲು ಕಾರಣವಾಗಿರುವುದು ಖಾಸಗೀಕರಣ ಹಾಗೂ ಮುಕ್ತ ಆರ್ಥಿಕ ನೀತಿ. ಈ ನೀತಿಗಳು ಲಾಭಬಡುಕರನ್ನು ಮಾತ್ರ ಸೃಷ್ಟಿಸಿವೆ. ಆ ಲಾಭಬಡುಕರಿಗೆ ಸಾಮಾಜಿಕ ಕಾಳಜಿ ಎಂಬ ಮಾತು ಸಹ ಕೇವಲ ರಾತ್ರಿಯ ಪಾರ್ಟಿಗೆ ಮುಂಚೆ ಕಳಚಿಡುವ ಪೋಷಾಕಾಗಿರುತ್ತದೆ. ಟಿಪ್ಪುಸುಲ್ತಾನನ ಖಡ್ಗ ಹಿಡಿದ ವಿಜಯ್‌ಮಲ್ಯ ನಾವು ಬದಲಾಗೋಣ ಎಂದರೆ ಹೇಗೆ ನಗೆಪಾಟಲಾಗುತ್ತದೆ ಎಂಬುದನ್ನು ನಾವು ಅದಾಗಲೇ ನೋಡಿದ್ದೇವೆ. ಅದು ಇನ್ಯವುದೇ ‘ಜನಪ್ರಿಯ ಮುಖ’ಕ್ಕೂ ಅನ್ವಯವಾಗಬಹುದಾದ ಮಾತು. ಇದು ತಪ್ಪಬೇಕಾದರೆ ಮಾಧ್ಯಮಗಳಲ್ಲಿ ಆಯಾ ರಾಜ್ಯಗಳ ಜನ ಮಾತ್ರ ಬಂಡವಾಳ ಹುಡುವಂತಹ ಹಾಗೂ ಆ ಮಾಧ್ಯಮಗಳು ಸಾಮಾಜಿಕ ನಿಷ್ಠತೆಯನ್ನು ಆಗಾಗ ಪರಿಶೀಲಿಸುವಂತಹ ವ್ಯವಸ್ಥೆಯೊಂದು ಬರಬೇಕು. ಇಲ್ಲವಾದರೆ ಅಮೀರ್‌ಖಾನ್ ಎಂಬಾತ ತಾನು ಪಡೆಯುವ ಹಣಕ್ಕಾಗಿ ‘ಕೋಕಾಕೋಲ ಕೊಳ್ಳಿ’, ‘ಆ ಗಡಿಯಾರ ಕೊಳ್ಳಿ’, ‘ಈ ಬಟ್ಟೆ ಹಾಕಿಕೊಳ್ಳಿ’ ಎಂದು ಹೇಳುತ್ತಲೇ ಸಮಾಜಮುಖಿ ಮಾತುಗಳನ್ನು ಸಹ ಹೇಳುತ್ತಾ ಸಾಮಾನ್ಯ ಜನರಲ್ಲಿ ಗೊಂದಲಗಳನ್ನು ಮಾತ್ರ ಸೃಷ್ಟಿಸುತ್ತಾನೆ. ಈ ಸೋಗಲಾಡಿತನಗಳನ್ನು ನಮ್ಮ ನಾಡಿನ ಜನಸಾಮಾನ್ಯರು ಎಚ್ಚರಿಕೆಯಿಂದ ಸ್ವೀಕರಿಸಬೇಕಷ್ಟೆ. ಇಷ್ಟೆಲ್ಲಾ ಮಾತಾಡುವ ಯಾವುದೇ ವ್ಯಕ್ತಿಯನ್ನು ಸಹ ನಾನು ಮೇಲೆ ತಿಳಿಸಿದ ಮಾಧ್ಯಮಗಳು ‘ಖಳ’ ಎಂಬಂತೆ ಚಿತ್ರಿಸಬಹುದಾದ ಸಾಧ್ಯತೆ ಇದೆ. ಈಚಿನ ದಿನಗಳಲ್ಲಿ ಒಟ್ಟಾಗಿರುವ ಮನಸ್ಸುಗಳನ್ನು ಒಡೆಯುವ ಕಾಯಕವನ್ನೇ ಈ ಬಂಡವಾಳಶಾಹಿ ಪ್ರೇರಿತ ಮಾಧ್ಯಮಗಳು ಮಾಡುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಜನ ಯಾವುದೇ ಸುದ್ದಿಯನ್ನು ಯಥಾವತ್ತಾಗಿ ನಂಬದೇ ಅದರ ಹಿಂದಿರಬಹುದಾದ ಎಲ್ಲ ವಿವರಗಳನ್ನೂ ಎಚ್ಚರಿಕೆಯಿಂದ ಗಮನಿಸುವಷ್ಟು ಜಾಗರೂಕರಾಗಬೇಕಿದೆ. ಇಂತಹ ಮಾಧ್ಯಮಗಳಲ್ಲಿ ಹೇಳಲಾಗುವ ದೇಶಪ್ರೇಮ, ಧಾರ್ಮಿಕ ನೀತಿಗಳು ಲಾಭಬಡುಕ ಹುನ್ನಾರದ್ದು ಎಮದರಿತು, ನಮ್ಮ ನಮ್ಮ ಬದುಕುಗಳು ನಮಗೆ ಕಲಿಸಿರುವ ಸತ್ಯಗಳೇ ಶ್ರೇಷ್ಟ ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ.]]>

‍ಲೇಖಕರು G

May 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

8 ಪ್ರತಿಕ್ರಿಯೆಗಳು

 1. kundurayya

  ಪರವಾಗಿಲ್ಲ ಸುರೇಶ್, ಶಿವರಾಜ್ ಕುಮಾರ್ ಮತ್ತು ಮಾಳವಿಕಾರ ಅವಿವೇಕತನವನ್ನು ಬಿಚ್ಚಿಡಲು ಕೊಂಚ ಮನಸ್ಸು ಮಾಡಿದ್ದೀರ. ಇನ್ನೂ ಹೆಚ್ಚಿನದು, ಒಳಗಿನದು, ನಡೆಯುತ್ತಿರುವುದು- ನಿಮಗೆ ಗೊತ್ತು. ಆದರೆ ಈ ಅಮೀರ್ ಖಾನ್ ನನ್ನು ಅಡ್ಡಡ್ಡ ಹರಿದು ಜಿಗಲಿ ಹಾಕಿರುವ ಪ್ರಜಾವಾಣಿಯ ಗಂಗಾಧರ್ ಮೊದಲಿಯಾರ್ ಮತ್ತಿತರರ ನಂತರ ನಿಮ್ಮದು ಬಂತಲ್ಲ, ಅದೇ ದೊಡ್ಡದು. ದಿನೇಶ್ ಕುಮಾರ್ ಕೂಡ ಈ ಮಾಳವಿಕಾರ ಬಣ್ಣ ಬಯಲು ಮಾಡಿದ್ದಾರೆ, ವರ್ತಮಾನ.ಕಾಂನಲ್ಲಿ. ಸಮಯವಿದ್ದರೆ ನೋಡಿ…

  ಪ್ರತಿಕ್ರಿಯೆ
 2. sunil rao

  naijya baraha….aadarooo naavu janareke heege??gottiddaru ade belakalli nodida bhaavige beelutteve??
  namma productive manassu naijyavannu…sathyavannu oppikollodilla yaake??allava….ishtella TV reality showgala bandavaala namage gottiddaru…namage kandavara maneya golannu nodi anandisuvude preeti…
  best writeup anna

  ಪ್ರತಿಕ್ರಿಯೆ
 3. Harsha Kugwe

  ‘ಸತ್ಯ ಮೇವ ಜಯತೆ’ ರಾಜ್ಯದಲ್ಲಿ ಡಬ್ಬಿಂಗ್ ಕುರಿತ ಚರ್ಚೆಗೆ ಹೊಸ ಆಯಮವನ್ನು ನೀಡಿದ ಕಾರಣ ಬಿ. ಸುರೇಶ್ ರಂತಹ ಹಿರಿಯರಯ ಹೀಗೆ ಬೇರೊಂದು ತರದಲ್ಲಿ ಅದನ್ನು ಹೊರಹಾಕುತ್ತಿರುವುದು ವಿಷಾಧನೀಯ. ಸುರೇಶ್ ಅವರು ಹೇಳಿದ್ದು ನಿಜವೇ ಇದ್ದರೂ ಇಲ್ಲಿ ಅವರು ತಿಳಿಸಿದ ಎಲ್ಲಾ ರಿಯಾಲಿಟಿ ಶೋಗಳಿಂದಲೂ ಸತ್ಯ ಮೇವ ಜಯತೆ ಮತ್ತು ಅಮೀರ್ ಖಾನ್ ಭಿನ್ನವಾಗಿ ನಿಲ್ಲತ್ತೆ. ತಾರೇ ಜಮೀನ್ ಪರ್, ಥ್ರೀ ಇಡಿಯಟ್ಸ್, ಮಂಗಲ್ ಪಾಂಡೆ, ಪೀಪ್ಲಿ ಲೈವ್ ನಂತಹ ಸಮಾಜಮುಖಿ ಸಿನಿಮಾಗಳನ್ನು ನೀಡಿರುವ ಅಮೀರ್ ಸಾಮಾಜಿಕ ಬದ್ಧತೆಬಗ್ಗೆ ನಾವು ಹೆಮ್ಮೆ ಪಡಲೇಬೇಕು. ಇಲ್ಲಿ ಅಮೀರ್ ಖಾನ್ ಏನು ಎನ್ನುವುದಕ್ಕಿಂತ ಎಲ್ಲರಿಗೂ ತಿಳಿದ ಸುದೀರ್ಘ ಕಾಲದ ಸಮಸ್ಯೆಗಳನ್ನು ಅಮೀರ್ ವಿಭಿನ್ನವಾಗಿ ಮನಮುಟ್ಟುವಂತೆ ನಿರೂಪಿಸುತ್ತಿರುವುದು ಮುಖ್ಯವಾಗಬೇಕು. ಪ್ರಕಾಶಿಸುತ್ತಿರುವ ಭಾರತದ ಮತ್ತೊಂದು ಮುಖವನ್ನು ಇಷ್ಟು ಚೆನ್ನಾಗಿ ಬಿಚ್ಚಿಡುತ್ತಿರುವ ಅಮೀರ್ ಖಾನ್ ಪ್ರಯತ್ನಗಳಿಗೆ ಸಾಧ್ಯವಾದರೆ ‘ಸೈ’ ಎನ್ನೋಣ. ಹೀಗೆ ಎಲ್ಲದಕ್ಕೂ ಸಿನಿಕರಾಗುತ್ತಾ ಹೋದರೆ ನಾಳೆ ಬಿ. ಸುರೇಶ್ ಅವರ ಉತ್ತಮ ಅಭಿರುಚಿಯ ಸಿನಿಮಾಗಳ ಬಗ್ಗೆ ಇಷ್ಟೇ ಸಿನಿಕತನದ ಕೊಂಕು ನುಡಿಗಳು ವ್ಯಕ್ತವಾಗುತ್ತವೆ ಎಂಬ ಬಗ್ಗೆ ಅರಿವಿರಲಿ.

  ಪ್ರತಿಕ್ರಿಯೆ
 4. Shivaraj

  How does it matter what he does in his private life? All that matters is what is the social impact the program has on common man. I am sure you know that it is getting broadcasted even in DD1 and I am sure that the intention was just to make more people aware of the issues. Sir neevu list maadidiralla TRP gagi Channelgalu nadesuva kasaratthugalendu, ironically nimma lekhanavu ade saalige serutthade.

  ಪ್ರತಿಕ್ರಿಯೆ
 5. D.RAVI VARMA

  ನಮ್ಮ ನಮ್ಮ ಬದುಕುಗಳು ನಮಗೆ ಕಲಿಸಿರುವ ಸತ್ಯಗಳೇ ಶ್ರೇಷ್ಟ ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ. ಇದು ಅಪ್ಪಟ ಸತ್ಯ ಆದರೆ ನಾವಿಂದು ಎಂಥ ದುರಂತ ಸ್ಥಿತಿಯಲ್ಲಿದ್ದೆವೆಂದರೆ ನಮ್ಮ, ಮಾತು, ನಮ್ಮ ಊಟ, ನಾವು ಕುಡಿಯುವ ನೀರು ನಮ್ಮ ಆಲೋಚನೆಗಳು ಎಲ್ಲದರ ಮೇಲೆ ಮತ್ತೊಬ್ಬರ ಹೇರಿಕೆ,ಮಾದ್ಯಮಗಳ ,ಸಿನೆಮಾಗಳ ಅತಿ ಹೆಚ್ಹಿನ ಪ್ರಭಾವ ವಿದೆ
  ಈ ಎಲ್ಲ ಒತ್ತಡ,ಪ್ರಭಾವದಿಂದ ಹೊರಗಿದ್ದು,ನಮ್ಮ ಬದುಕು ,ನಮ್ಮತನ ಉಳಿಸಿಕೊಳ್ಳುವುದು ಕಷ್ಟ ಸಾದ್ಯ ಆದರೆ ಕೊನೆಪಕ್ಷ ಆ ಎಚ್ಚರ ಸ್ತಿತಿಯಲ್ಲದರು ನಾವಿರಬೇಕು ನಿಮ್ಮ ಲೇಖನ ನನಗೆ ತುಂಬಾ ಹಿಡಿಸಿಟಿ ನಿಮ್ಮ ಕೊನೆಮಾತಂತು ಮನಮುಟ್ಟುವ ಹಾಗಿದೆ,
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 6. Harsha

  “ಜನಪರತೆ ಎಂಬುದೇ ಸೋಗಲಾಡಿತನವಾಗುವಂತಹ ವ್ಯವಸ್ಥೆಯೊಂದು ಈ ದೇಶದಲ್ಲಿ ಬರಲು ಕಾರಣವಾಗಿರುವುದು ಖಾಸಗೀಕರಣ ಹಾಗೂ ಮುಕ್ತ ಆರ್ಥಿಕ ನೀತಿ.”
  ಹೌದೇ? ಹಾಗಾದರೆ ಮುಕ್ತ ಆರ್ಥಿಕ ನೀತಿ ಮತ್ತು ಇಷ್ಟೆಲ್ಲಾ ಪ್ರೈವೇಟ್ ಚಾನೆಲ್ ಗಳು ಬರುವ ಮೊದಲು ದರಿದ್ರದರ್ಶನದಲ್ಲಿ “Over to Delhi ” ಎಂಬ ಅಸಂಭದ್ದ ಮೆಸೇಜ್ ಹಾಕಿ ಇಪ್ಪತ್ತಕ್ಕೂ ಹೆಚ್ಚು ನಿಮಿಷಗಳ ಕಾಲ ಬಣ್ಣ ಬಣ್ಣದ ಪಟ್ಟೆಗಳನ್ನ ತೋರಿಸುತ್ತಾ ನೋಡುಗರನ್ನ ಮಂಗ ಮಾಡುತ್ತಿದ್ದರಲ್ಲ, ಅದ್ಯಾವ ಜನಪರ? ನೀವು ಹೇಳುವ ಆ ಲಾಭಬಡುಕರು ಬಂದ ಮೇಲೆ ಈ ದೇಶದಲ್ಲಿ ಆಗಿರುವ ಒಂದು ಬಹುಮುಖ್ಯ ಬದಲಾವಣೆ ಬಹುಷಃ ನಿಮ್ಮ ಗಮನಕ್ಕೆ ಬಾರದೆ ಹೋಗಿರಬಹುದು. Quality ಎನ್ನುವ ಒಂದು ಮಾನದಂಡವನ್ನ ನಮ್ಮ ದೇಶಕ್ಕೆ ಪೂರ್ತಿ ಮರೆತೇ ಹೋಗುವಂತೆ ಮಾಡಿದ್ದ Socialism ಎನ್ನುವ elitist ಗಳ ಸಿದ್ಧಾಂತ ಬುಡಮೇಲಾಗಿ, ನಮ್ಮ ಬದುಕಿನಲ್ಲಿ ಪ್ರತಿಯೊಂದರಲ್ಲೂ ಅತ್ಯುತ್ತಮವಾದುದನ್ನ ಪಡೆಯುವ ಹಕ್ಕು ನಮಗಿದೆ ಅಂತ ನೆನಪು ಮಾಡಿಕೊಟ್ಟಿದ್ದೇ ಖಾಸಗೀಕರಣ. ರಾಜ್ಯದ ಜನರೇ ಬಂಡವಾಳ ಹೂಡಿ ನಡೆಯುವ ಮಾಧ್ಯಮಗಳು ಯಾವ ಕಾರ್ಯಕ್ರಮಗಳನ್ನ ಪ್ರಸಾರ ಮಾಡಬೇಕು ಎನ್ನುವ ನಿರ್ಧಾರ ಹೇಗೆ ಆಗುತ್ತದೆ? ಮತ್ತದೇ ಪಾಳೆಗಾರರು ಜನರಿಗೆ ಯಾವುದು ಬೇಕು ಯಾವುದು ಬೇಡ ಎಂದು ನಿರ್ಧರಿಸುವುದರ ಮೂಲಕ ತಾನೇ? ಇಷ್ಟೆಲ್ಲಾ ಕಷ್ಟ ಯಾಕೆ? ನಮ್ಮ ದೇಶದಲ್ಲೂ ತಾಲಿಬಾನ್ ವ್ಯವಸ್ಥೆಯನ್ನ ತಂದು ಮೂರೂ ಮತ್ತೊಂದು ಜನ ಉಳಿದ ನೂರು ಕೋಟಿ ಜನರ ಜೀವನವನ್ನ ನಿರ್ಧರಿಸುವ ಹಾಗೆ ಮಾಡಿ ಬಿಡೋಣ, ಸುಲಭವಾಯ್ತಲ್ಲ. ಮಾಧ್ಯಮಗಳನ್ನ ಸರ್ಕಾರ ನಿಯಂತ್ರಿಸಿ ಜನರಿಗೆ ಒಳ್ಳೆಯದನ್ನ (ಒಳ್ಳೆಯದು ಅನ್ನುವುದರ ನಿರ್ಧಾರ ಸರ್ಕಾರದ್ದು!) ಮಾತ್ರ ಕೊಡಬೇಕು ಅನ್ನುವುದು ಅಪ್ಪಟ ಕಮ್ಯುನಿಸ್ಟ್ ಸಿದ್ಧಾಂತ. ಇಂಟರ್ನೆಟ್, Facebook ಮುಂತಾದ free world ಮಾಧ್ಯಮಗಳನ್ನ ನಿಯಂತ್ರಿಸಬೇಕು ಎಂದು ಹೇಳುತ್ತಿರುವುದೂ ಇದೇ ಕಮ್ಯುನಿಸ್ಟ್ ಮನಸ್ತಿತಿಯ ಜನ.
  ನೀವು ಹೇಳಬಹುದು, ಪ್ರೈವೇಟ್ ಚಾನೆಲ್ ಗಳನ್ನ ನಿಯಂತ್ರಿಸೋದು ದುಡ್ಡಿರುವ ಬಂಡವಾಳಶಾಹಿ ಜನ, ಹಾಗಾಗಿ ಅದು ಜನಪರ ಅಲ್ಲ ಅಂತ. ಆದರೆ ಮುಕ್ತ ಆರ್ಥಿಕ ನೀತಿಯ ಸೌಂದರ್ಯ ಏನೆಂದರೆ ಆ ಬಂಡವಾಳಶಾಹಿ ಜನ ತಮ್ಮ ನಡೆಯನ್ನ ಹೇಗೆ ಇಡಬೇಕು ಅಂತ ಅತ್ಯಂತ ನೇರವಾಗಿ ನಿರ್ಧರಿಸೋದು ಸಾಮಾನ್ಯ ಜನರು! ನಮ್ಮಲ್ಲಿ ಮುಕ್ತ ಆರ್ಥಿಕ ನೀತಿ ಬಂದು, ಜನರಿಗೆ ತಮ್ಮ ಶಕ್ತಿಯ ಪರಿಚಯವಾಗಿ ಇನ್ನೂ ಇಪ್ಪತ್ತು ವರ್ಷ ಆಯಿತಷ್ಟೆ. ಯಾವುದೇ ಹೊಸ ನೀತಿಗೆ ಒಂದು maturity curve ಅನ್ನೋದು ಇರುತ್ತೆ. ಹೊಸ ಪದ್ಧತಿಗೆ ಹೊಂದುಕೊಳ್ಳುವಾಗ ಜನ ಎಡವುತ್ತಾರೆ, ತಪ್ಪು ಹೆಜ್ಜೆ ಇಡುತ್ತಾರೆ. ಮೆಟ್ಟು ತೆಗೆದುಕೊಂಡು ಹೊಡೆದುಕೊಳ್ಳುವ ಬದುಕು ಜಟಕಾ ಬಂಡಿಯಂತ ಕಾರ್ಯಕ್ರಮಗಳು ಜನಪ್ರಿಯವಾಗಿದ್ದು ಇದೇ ಕೆಲವು ತಪ್ಪು ನಡೆಗಳಿಂದ. ಜನರನ್ನ ಕೂಪ ಮಂಡೂಕಗಳನ್ನಾಗಿ ಮಾಡಿ, ಎಲ್ಲದಕ್ಕೂ ಸರ್ಕಾರದ ಕೃಪೆಯ ಮೇಲೆ ಬದುಕುವಂತೆ ಮಾಡಿ, ಸರಿ ತಪ್ಪುಗಳ ಪರಿವೆಯೇ ಇಲ್ಲದಂತೆ ಮಾಡಿದ್ದು ಜನರ ಮೇಲೆ ದಶಕಗಳ ಕಾಲ ಹೇರಲ್ಪಟ್ಟ ಎಡಪಂಥೀಯರ ಇವೇ failed ಸಿದ್ಧಾಂತಗಳು. ಜನರಿಗೆ ಸ್ವಲ್ಪ ಸಮಯ ಕೊಡಿ. ನಮ್ಮ ದೇಶದ democracy ಯಲ್ಲಿ maturity ಬಂದಂತೆಯೇ, ಜನ ಹೆಚ್ಚೆಚ್ಚು ವಿದ್ಯಾವಂತ, ಪ್ರಜ್ಞಾವಂತರಾಗಿ ಬದಲಾದಂತೆಯೇ ಜನರ ಅಭಿರುಚಿಯ ಗುಣಮಟ್ಟವೂ ಬದಲಾಗುತ್ತಾ ಹೋಗುತ್ತದೆ. ಸರಿ ಯಾವುದು, ತಪ್ಯಾವುದು, ಪ್ರಾಮಾಣಿಕತೆ ಯಾವುದು, ಸೋಗಲಾಡಿತನ ಯಾವುದು, ಇವನ್ನೆಲ್ಲಾ ಗುರುತಿಸುವಷ್ಟು ಜನ ಪ್ರಭುದ್ಧರಾಗುತ್ತಾ ಹೋಗುತ್ತಾರೆ. ಈ ಪ್ರಭುದ್ಧತೆಯನ್ನ ಜನರಿಗೆ ಆಯ್ಕೆಯ ಸ್ವಾತಂತ್ರ್ಯ ಕೊಟ್ಟು ಕಲಿಸಬೇಕೇ ಹೊರತು ಜನರನ್ನ ಮೂರ್ಖರಂತೆ ಕಂಡು ಆಯ್ಕೆ ಕಿತ್ತುಕೊಳ್ಳುವ ಮೂಲಕ ಅಲ್ಲ. ಮುಕ್ತ ಆರ್ಥಿಕ ನೀತಿಯಿಂದಾಗಿ ಕೋಟ್ಯಂತರ ಜನ ಬದುಕುವ ದಾರಿಯನ್ನ ಕಂಡುಕೊಂಡಿದ್ದಾರೆ. ಕೇವಲ ಸಿದ್ಧಾಂತಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಜನ ಸೀನಿದ್ದಕ್ಕೂ, ಕೆಮ್ಮಿದ್ದಕ್ಕೂ ಖಾಸಗೀಕರಣವನ್ನ ದೂರುವ ಚಾಳಿಯನ್ನ ಬಿಟ್ಟುಬಿಡಿ.
  ಅಷ್ಟಕ್ಕೂ, ಅಮೀರ್ ಖಾನ್ ಮಹಾನ್ ದೇಶಭಕ್ತ ಎಂಬ ಭ್ರಮೆಯಲ್ಲಿ ಯಾರೂ ಬದುಕುತ್ತಿಲ್ಲ. ಆತ ಒಬ್ಬ ನಟ. ಸಿನೆಮಾದಲ್ಲಿ ಕತೆಗೆ, ನಿರ್ದೇಶಕನ ಕಲ್ಪನೆಗೆ ಒಂದು ಮುಖ. ಹಾಗೆಯೇ ಇಲ್ಲಿ ಒಂದು ಕಾರ್ಯಕ್ರಮಕ್ಕೆ, ಕಾರ್ಯಕ್ರಮದ ನಿರೂಪಕರಿಗೆ ಆತ ಮುಖ. ಇದು ನನಗಿಂತ ತುಂಬಾ ಚೆನ್ನಾಗಿ ನಿಮಗೆ ಗೊತ್ತು. ಆತನ ಕೆಲಸಕ್ಕೆ ಆತ ಸಂಭಾವನೆ ಪಡೆಯುತ್ತಾನೆ. ಇದರಲ್ಲಿ ತಪ್ಪೇನಿಲ್ಲ. ಸತ್ಯಮೇವ ಜಯತೆ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿ ಎಂದು ಕೂಡ ಯಾರೂ ಹೇಳಿಲ್ಲ. ಚಪ್ಪಲಿಯಲ್ಲಿ ಬಡಿದಾಡುವ ಸಂಸಾರಗಳ ಗೋಳಿನ ಕತೆಯನ್ನ ನೋಡಿಯೋದಲ್ಲಿ (ಹಾಗಂದ್ರೆ ದೂರದರ್ಶನ!) ಪ್ರಸಾರ ಮಾಡುವ ಕಾರ್ಯಕ್ರಮಗಳಿಗಿಂತ ಒಂದು ಪಾಲು ಉತ್ತಮವಾಗಿದೆ ಎಂದು ಹೇಳಿದರಷ್ಟೇ.

  ಪ್ರತಿಕ್ರಿಯೆ
 7. Harsha

  ಮಾಧ್ಯಮಗಳಲ್ಲಿ ಜನ ಮಾತ್ರ ಬಂಡವಾಳ ಹೂಡುವಂತಹ ಈ ಎಡಪಂಥೀಯ ವಾದದಲ್ಲಿ ಇನ್ನೊಂದು ಮೂಲಭೂತ ಸಮಸ್ಯೆ ಇದೆ. ಕೇವಲ ಆಸಕ್ತಿ ಇರುವವರು ಮಾತ್ರ ಬಂಡವಾಳ ಹೂಡಿದರೆ ಮಾಧ್ಯಮವನ್ನ ನಡೆಸುವಷ್ಟು ಹಣ ಸಂಗ್ರಹವಾಗುವುದಿಲ್ಲ. ಹಾಗಾಗಿ ರಾಜ್ಯದ ಪ್ರತಿಯೊಂದು ಪ್ರಜೆಯೂ ಹಣ ಹೂಡಬೇಕಾದ ಪರಿಸ್ಥಿತಿ ಬರುತ್ತದೆ. ಅಂದರೆ ಜನರ ಮೇಲೆ ಇದು ಇನ್ನೊಂದು ರೀತಿಯ ಕಡ್ಡಾಯ ತೆರಿಗೆ. ಸಮಸ್ಯೆ ಇರುವುದೇ ಅಲ್ಲಿ. ನನಗೆ ಆಸಕ್ತಿಯೇ ಇಲ್ಲದ, ನಾನು ನೋಡುವುದೇ ಇಲ್ಲದ ಮಾಧ್ಯಮಕ್ಕೆ ನಾನೇಕೆ ನನ್ನ ಕಷ್ಟಪಟ್ಟು ದುಡಿದ ಹಣದಿಂದ ಪಾಲು ಕೊಡಲಿ? ಮಾಧ್ಯಮಗಳೇನೂ ಆಹಾರ, ಶಿಕ್ಷಣ, ಆರೋಗ್ಯದ ರೀತಿ ನಮ್ಮ ಮೂಲಭೂತ ಅಗತ್ಯಗಳಲ್ಲ. ಅಂದ ಮೇಲೆ ಇದಕ್ಕೆ ತೆರಿಗೆ ಏಕೆ? ಕೇಬಲ್ ಹಾಕಿಸಿಕೊಳ್ಳಲು ನನಗೆ ಇಷ್ಟವಿಲ್ಲದೆ ಇದ್ದರೆ ನಾನು ಹಣ ಕೊಡಬೇಕಿಲ್ಲ, ಜಾಹೀರಾತುಗಳನ್ನ ನೋಡುವುದಕ್ಕೆ ನಾನೇನೂ ಹಣ ಕೊಡುವುದಿಲ್ಲ, ಬೇಕಾದರೆ ನೋಡುತ್ತೇನೆ, ಬೇಡದಿದ್ದರೆ ಆಫ್ ಮಾಡುತ್ತೇನೆ. ಆದರೆ “ನೋಡು ನೋಡದೆ ಇರು, ನೀನು ಹಣ ಕೊಡಲೇ ಬೇಕು” ಎಂದು ಹೇಳುವುದು ಎಷ್ಟು ಸರಿ? ಈಗಾಗಲೇ ಎಡಪಂಥೀಯರ ಕೃಪೆಯಿಂದ ಸರ್ಕಾರಿ ಕೃಪಾಪೋಷಿತವಾಗಿ ಬದುಕುತ್ತಿರುವ ಬಿಳಿಯಾನೆಯಂತ ಇಲಾಖೆಗಳೇ ಸಾಕಷ್ಟಿವೆ. ನಾವು ಕಷ್ಟ ಪಟ್ಟು ದುಡಿದು ಕೊಡುವ ತೆರಿಗೆ ಹಣ ಹೀಗೆ ಪೋಲಾಗುವುದನ್ನು ನೋಡಿಯೂ ಎಡಪಂಥೀಯರ ಮೇಲಾಟದಿಂದಾಗಿ ಸುಮ್ಮನಿರಬೇಕಾದ ಪರಿಸ್ಥಿತಿ. ದಯವಿಟ್ಟು ಈ ಪಟ್ಟಿಗೆ ಇನ್ನೊಂದನ ಎಳೆದು ತರಬೇಡಿ ಸ್ವಾಮಿ. ಈಗಾಗಲೇ ಅಧಿಕಾರದಲ್ಲಿರುವ ಪಕ್ಷದ ಮುಖವಾಣಿಯಾದ, ಹಿಂದಿಯನ್ನ ಭಾರತದ ಮೇರೆ ಹೇರುವುದನ್ನೇ one point agenda ಮಾಡಿಕೊಂಡಿರುವ ದರಿದ್ರದರ್ಶನವನ್ನ ಸಾಕುತ್ತಿದ್ದೇವೆ. ಅಲ್ಲಿಗೇ ನಿಲ್ಲಲಿ.

  ಪ್ರತಿಕ್ರಿಯೆ
 8. ರಾಜಾರಾಂ ತಲ್ಲೂರು

  ಯಾರು ಮಾತಾಡಬಹುದು? ಮತ್ತು ಯಾರೂ ಮಾತಾಡಬಹುದು!
  ೧. ಆಮಿರ್ ಖಾನ್ ಎಂಬ ಸೋಗಲಾಡಿ, ಅಂಬಾನಿ ಬಳಗದ ಪ್ರಾಯೋಜಕತ್ವದಲ್ಲಿ ಸತ್ಯಕ್ಕೆ ಜಯ ತಂದುಕೊಡಲು ಹೊರಟಿದ್ದಾನೆ. ಇದನ್ನು ನೋಡಿ ನಮ್ಮ ಲಯನ್ಸು ರೋಟರಿಯಂತಹ ಸಮಾಜಸೇವೆಗಳಲ್ಲಿ ತೊಡಗಿರುವ ಒಂದು ಡ್ರಾಯಿಂಗ್ ರೂಮ್ ಸದ್ಗ್ರಹಸ್ಥ ವರ್ಗ ವಾಹ್ ವಾಹ್ ಎನ್ನತೊಡಗಿದೆ. ಇದರಲ್ಲಿ ವಿಶೇಷ ಏನೂ ನನಗೆ ಕಾಣುವುದಿಲ್ಲ. ನಾವೆಲ್ಲ ಒಂದೇ ವರ್ಗಕ್ಕೆ ಸೇರಿದವರು; ಈ ಸಮುದ್ರದಲ್ಲಿ ಕೆಲವು ದೊಡ್ಡ ಮೀನುಗಳು ಮತ್ತೆ ಕೆಲವು ಸಣ್ಣ ಮೀನುಗಳು.
  ೨. ಜನ ಹೇಳಿದ್ದನ್ನೆಲ್ಲ ಕುರುಡಾಗಿ ಕೇಳುತ್ತಾರೆಂದು ನಾನು ನಂಬುವುದಿಲ್ಲ. ಆಮೀರ್ ಖಾನ್ ಹೇಳಿದ್ದನ್ನೆಲ್ಲ ಅದರ ಮುಖಬೆಲೆಯಲ್ಲೇ ನಂಬಿಬಿಡುವಷ್ಟು ಹುಂಬರಲ್ಲ ನಾವು. ಜನಕ್ಕೆ ಕೇಳಿಸುವಂತೆ ಮಾತನಾಡಬಲ್ಲ ಆಯಕಟ್ಟಿನ ಜಾಗದಲ್ಲಿರುವ ಆತ ಹೇಳಿದ್ದನ್ನ ಕೇಳಿ, ಅದರಲ್ಲಿ ಬೇಕಾದದ್ದನ್ನ ಇಟ್ಟುಕೊಳ್ಳುವ – ಬೇಡದ್ದನ್ನು ಬಿಡುವ ಆಯ್ಕೆಯನ್ನು ಚಲಾಯಿಸುವಲ್ಲಿ, ತಮ್ಮದೇ ತೀರ್ಮಾನಗಳಿಗೆ ತಲುಪುವಲ್ಲಿ ನನಗೇನೂ ತಪ್ಪು ಕಾಣಿಸುತ್ತಿಲ್ಲ. ಡ್ರಾಯಿಂಗ್ ರೂಮಿನಲ್ಲಿ ಟೆಲಿವಿಷನ್ ಗೆ ಅಂಟಿಕೊಂಡಿರುವ ಜನ ಆಮೀರ್ ಕಾರ್ಯಕ್ರಮ ಅಲ್ಲದಿದ್ದರೆ ಇನ್ನೇನನ್ನಾದರೂ ನೋಡುತ್ತಿದ್ದರು.
  ೩. ಈ ರೀತಿಯ ವೀಕ್ಷಕವರ್ಗದ ಒಂದು ಕಮೆಂಟ್ (ನನ್ನ ಪರಿಸರದಲ್ಲಿ ನನ್ನ ಕಿವಿಗೆ ಬಿದ್ದದ್ದು) ನನ್ನ ಮೇಲಿನ ಮಾತನ್ನು ಸಮರ್ಥಿಸುತ್ತದೆ ಎಂದುಕೊಂಡಿದ್ದೇನೆ: ಹೆಣ್ಣುಮಕ್ಕಳ ಬಗ್ಗೆ ಇಷ್ಟೆಲ್ಲ ಕಳಕಳಿ ಇರುವ ಆಮೀರ್ ಖಾನ್ ತನ್ನ ಮೊದಲ ಪತ್ನಿಯನ್ನು ಬಿಟ್ಟು ಹಾಕಿದನಲ್ಲಾ! ಆಕೆಯನ್ನೂ ಕರೆದು ಡಿವೋರ್ಸ್ ಆದ ಹೆಣ್ಣುಮಕ್ಕಳ ಬಗ್ಗೆ ಒಂದು ಎಪಿಸೋಡ್ ಮಾಡ್ಬೇಕು ಆತ!!
  ೪. ಈ ರೀತಿಯ ಕಾರ್ಯಕ್ರಮಗಳನ್ನು “ಸಾವಿಲ್ಲದ ಮನೆಯ ಸಾಸಿವೆ ತಂದವರಿಂದ” ಮಾಡಿಸಲಂತೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ “ಯಾರೂ ಮಾತಾಡಬಹುದು”. ಯಾರು ಮಾತಾಡಬಹುದು? ಎಂದು ನಿರ್ಧರಿಸುವ ಹಕ್ಕು ನಮಗಿಲ್ಲ. ಆದರೆ ಮಾತಾಡಿದ್ದರಲ್ಲಿ ಏನನ್ನು ಹೆಕ್ಕಿಕೊಂಡು ಏನನ್ನು ತಿಪ್ಪೆಗೆಸೆಯಬೇಕು ಎಂಬ ನಿರ್ಧಾರ ನಮ್ಮ ಕೈಯಲ್ಲೇ ಇದೆ.
  ೫. ಪರಿಸ್ಥಿತಿ ಈಗೀಗ ಎಷ್ಟು ವಿಪರೀತಕ್ಕೆ ತಲುಪಿದೆ ಎಂದರೆ, ಈ ರೀತಿ ಆತನ ಕಾರ್ಯಕ್ರಮಕ್ಕೆ ಸಿಗುತ್ತಿರುವ ನೆಗೆಟಿವ್ ಪ್ರಚಾರದ ಹಿಂದೆ ಇರಬಹುದಾದ ಮಾರ್ಕೆಟಿಂಗ್ ಕುತಂತ್ರಗಳನ್ನೂ ಅಲ್ಲಗಳೆಯುವಂತಿಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: