ಜುಗಾರಿ ಕ್ರಾಸ್ : ಜೋಗಿ ಮತ ಮತ್ತು ಕೆಲವು ಅಭಿಮತ

ಡಬ್ಬಿ೦ಗ್ ವಿರೋಧಿಸಿ ಟಿ ಎನ್ ಸೀತಾರ೦ ಬರೆದ ಲೇಖನವನ್ನು ಓದಿದ ಜೋಗಿ, ಸೀತಾರಾ೦ ಅವರ ಅಭಿಪ್ರಾಯವನ್ನು ಅನುಮೋದಿಸಿ ಬರೆದಿದ್ದರು.

ಸೀತಾರಾ೦ ಅವರ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ. ಅದಕ್ಕೆ ಪ್ರತಿಕ್ರಯಿಸಿದ ಓದುಗರ ಪ್ರತಿಕ್ರಿಯೆ ಮತ್ತು ಅದಕ್ಕೆ ಜೋಗಿಯವರ ಉತ್ತರ ಇಲ್ಲಿದೆ.

– ಜೋಗಿ

ಜೋಗಿ: ಸರ್, ಸರಿಯಾಗಿ ಹೇಳಿದ್ದೀರಿ. ಇಷ್ಟನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಯಾವ ಕನ್ನಡಿಗನೂ ಡಬ್ಬಿಂಗು ಬೇಕು ಎಂದು ಹೇಳಲಾರ. ಮೊನ್ನೆ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಡಬ್ಬಿಂಗ್ ಬೇಕೋ ಬೇಡವೋ ಅಂತ ಶ್ರೋತೃಗಳಿಗೆ ಪ್ರಶ್ನೆ ಹಾಕಿದ್ದರು. ಒಂದು ಗಂಟೆಯಲ್ಲಿ ಬಂದ ಕರೆಗಳ ಪೈಕಿ ಒಬ್ಬನೇ ಒಬ್ಬ ಮಾತ್ರ ಡಬ್ಬಿಂಗ್ ಬೇಕು ಅಂದಿದ್ದ. ಉಳಿದವರೆಲ್ಲ ಡಬ್ಬಿಂಗು ಸಿನಿಮಾ ನೋಡಕ್ಕಾಗಲ್ಲ, ಡಬ್ಬಿಂಗು ಧಾರಾವಾಹಿ ಬೇಕಾಗಿಲ್ಲ ಅಂತ ಮಾತಾಡಿದರು. ಇವತ್ತು ಡಬ್ಬಿಂಗು ಬೇಕಾಗಿರುವುದು ಪರಭಾಷೆಯ ಮಾಲಿಕರು ನಡೆಸುತ್ತಿರುವ ಚಾನಲ್ಲುಗಳ ಮಾಲೀಕರಿಗೆ ಮತ್ತು ಅವರ ಕೃಪಾಪೋಷಿತ ಹೋರಾಟಗಾರರಿಗೆ ಮತ್ತು ಮೂರುಕಾಸಿಗೆ ಹಳೇ ತಮಿಳು ತೆಲುಗು ಸಿನಿಮಾಗಳ ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಿಟ್ಟುಕೊಂಡ ಒಂದಷ್ಟು ನಿರ್ಮಾಪಕರಿಗೆ ಮಾತ್ರ. ಕನ್ನಡವನ್ನು ಉಳಿಸೋದಕ್ಕೆ ಅಮೀರ್ ಖಾನ್ ಬರಬೇಕು ಅನ್ನುವವರು ಮೊನ್ನೆ ಕಮಲ್ ಹಾಸನ್ ಆಡಿದ ಸ್ವಾಭಿಮಾನದ ಮಾತುಗಳನ್ನು ಕೇಳಬೇಕಾಗಿತ್ತು. (http://www.youtube.com/watch?v=x0vK71BDOCM) ಹಾಗೆ ನೋಡಿದರೆ ಸತ್ಯಮೇವ ಜಯತೆ-ಯಂಥ ಕಾರ್ಯಕ್ರಮ ಝೀ ಟೀವಿಯಲ್ಲಿ ಎಂದೋ ಪ್ರಸಾರವಾಗಿದೆ. ಶಿವರಾಜ್ ಕುಮಾರ್ ಅದನ್ನು ನಡೆಸಿಕೊಟ್ಟಿದ್ದಾರೆ. ಕನ್ನಡದಲ್ಲಿ ಕಳಪೆ ಸಿನಿಮಾಗಳು ಬರುತ್ತಿವೆ ಅನ್ನುವ ಭಾವನೆಯನ್ನು ಮೊದಲು ಬಿಡಬೇಕು. ಕನ್ನಡವೇ ಕಳಪೆ ಅಂತ ಅನ್ನಿಸುವುದು ಇತ್ತೀಚಿನ ಷೋಕಿ ಸರ್.   ಅರುಣ್ : ಜೋಗಿಯವರೆ, ಡಬ್ಬಿಂಗ್ ಬೇಕು ಎನ್ನುವವರನ್ನು ಚಾನಲ್ಲುಗಳ ಕೃಪಾಪೋಷಿತ ಹೋರಾಟಗಾರು ಎಂದಿದ್ದೀರ ತಾವು ಇಲ್ಲಿ ಕಮೆಂಟ್ ಬರೆಯುವುದಕ್ಕೆ ಮುಂಚೆ ತಮ್ಮ ಕಮೆಂಟ್ ಗೆ ಬೆಂಬಲಿಸುವ ಮಾಹಿತಿಯನ್ನು ಕಲೆ ಹಾಕೆ ಬರೆದಿದ್ದೀರೆ? ದಯವಿಟ್ಟು ಹೇಗೆ ಡಬ್ಬಿಂಗ್ ಬೇಕು ಎನ್ನುವವರು ಚಾನೆಲ್ ಗಳ ಕೃಪಾಪೋಶಿತರು ಎನ್ನುವುದನ್ನು ತಿಳಿಸಿ. ಇಲ್ಲವಾಗಿದ್ದಲ್ಲಿ ಮೇಲಿನ ಕಮೆಂಟ್ ಅನ್ನು ತೆಗೆದುಹಾಕಿ… ಡಬ್ಬಿಂಗ್ ಬೇಕು ಎನ್ನುವವರನ್ನು ಚಾನೆಲ್ ಗಳ ಕೃಪಾಪೋಶಿತರು ಎನ್ನುವ ಶೋಕಿಯನ್ನು ನಿಲ್ಲಿಸಿ. ದನ೦ಜಯ ಕುಲಕರ್ಣಿ : ಡಬ್ಬಿಂಗ್ ಬೇಡ ಎನ್ನುವವರು ಯಾವುದೇ ತರ್ಕವಿಲ್ಲದೇ ಮಾತನಾಡುತ್ತಿದ್ದಾರೆ…ನಿಮ್ಮ ಕ್ರಿಯೇಟಿವಿಟಿಯ ಬಗ್ಗೆ, ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿಲ್ಲದಿದ್ದಾಗ ಇಂತಹ ಹುಂಬುತನದ ವಾದಗಳು ಹುಟ್ಟಿಕೊಳ್ಳುತ್ತವೆ. ಕನ್ನಡಕ್ಕೆ ಇತರೆ ಭಾಷೆಯ ಸಿನೆಮಾಗಳು, ದಾರಾವಾಹಿಗಳು ಡಬ್ ಆಗಬಾರದು ಎಂತಾದರೆ, ನೀವು ಪರಭಾಷಾ ಕಲಾವಿದರಿಗೆ ಏಕೆ ಮಣೆ ಹಾಕುತ್ತಿದ್ದೀರಿ? ಕನ್ನಡದ ಪ್ರತಿಭೆಗಳನ್ನು ಬೆಳೆಸುತ್ತಿಲ್ಲ ಏಕೆ? ಕನ್ನಡದ ಹಾಡುಗಳನ್ನು ಹಾಡಲು ಸೋನು ನಿಗಮ್, ಶ್ರೇಯಾ ಘೋಶಲ್ ಅವರೇ ಬೇಕಾ? ಕನ್ನಡದಲ್ಲಿ ಗಾಯಕರು ಯಾರೂ ಇಲ್ಲವೇ? ಕನ್ನಡದಲ್ಲಿ ನೀವು ಸರಿಯಾಗಿ ಅವಕಾಶ ನೀಡುತ್ತಿಲ್ಲ ಎಂದು ಅನೇಕ ಕಲಾವಿದರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಅವರನ್ನ ಮತೆ ಕನ್ನಡದ ಸೇವೆ ಮಾಡಲು ನೀವು ಯಾವ ಪ್ರಯತ್ನ ಮಾಡಿದ್ದೀರಿ? ಸುಮ್ಮನೇ ಸ್ಟಾರ್ ಕಲಾವಿದರೆನಿಸಿಕೊಂಡವರನ್ನ ಮುಂದಿಟ್ಟುಕೊಂಡು ಮೊಂಡುವಾದ ಮಾಡದೇ ವಾಸ್ತವಕ್ಕೆ ಹತ್ತಿರವಾಗುವಂತೆ ಮಾತನಾಡಿ…. ಜಯಂತ : ಅಲ್ಲ Jogi, ಕನ್ನಡವನ್ನು ಉಳಿಸೋದಕ್ಕೆ ಅಮೀರ್ ಖಾನ್ ಬರಬೇಕು ಬಿಡಬೇಕೋ ಅನ್ನೋದರ ಬಗ್ಗೆ ಆಮೇಲೆ ಮಾತಾಡಣ..ಮೊದ್ಲು ಡಬ್ಬಿಂಗ್ ಬೇಡ ಅನ್ನೋ ನಮ್ಮ ಸಿನಿಮ ಜೋಗಿ “ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ” http://www.youtube.com/watch?v=MxWctRXFtZk ಅಂತ ಹೇಳ್ತಾರಲ್ಲ ಅದು ಕನ್ನಡ ಪರನ ..?? ತಾವು ಮತ್ತು ಡಬ್ಬಿಂಗ್ ವಿರೋದಿಗಳು ಪರಭಾಷೆಯ ಸಿನಿಮಾ ನೋಡ್ತಾರೆ ಬೇಡ ಅನ್ನೋಕ್ಕೆ ನನಗೆ ಅಥವಾ ಡಬ್ಬಿಂಗ್ ಪರ ಇರೋರಿಗೆ ಅದಿಕಾರ ಇಲ್ಲ ಆದ್ರೆ ನಾನು ಮತ್ತು ಅದೇ ಜನ ಮಗದಿರ ಸಿನೆಮಾನ ಕನ್ನಡದಲ್ಲಿ ನೋಡಿದ್ರೆ ಯಾಕೆ ತಪ್ಪು ಆಗುತ್ತೆ ? ಹರ್ಷ : ಶಿವರಾಜ್ ಕುಮಾರ್ ಝೀ ಟಿವಿಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಕ್ಕೂ ಸತ್ಯ ಮೇವ ಜಯತೆಗೂ ಬಹಳ ವ್ಯತ್ಯಾಸವಿದೆ ಸರ್. ಅದು ವ್ಯಕ್ತಿಕೇಂದ್ರಿತವಾದದ್ದು. ಇದು ಸಾಮಾಜಿಕ ಜಾಗೃತಿಯ ಗುರಿ ಹೊಂದಿರುವಂತದ್ದು ಅಲ್ಲದೇ ಸರ್ಕಾರದ ನೀತಿಗಳ ಮೇಲೆ ಒತ್ತಡ ಹೇರುವಂತದ್ದು. ಮೊನ್ನೆ ಅಮೀರ್ ಖಾನ್ 2 ನೇ ಎಪಿಸೋಡ್ ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಈ ದೇಶದಲ್ಲಿ ಒಂದು ಕಾನೂನು ಇಲ್ಲದ್ದರ ನಗ್ಗೆ ಒತ್ತು ಕೊಟ್ಟು ಹೇಳಿದ್ದರು. ನೆನ್ನೆ ಸರ್ಕಾರ ಈ ಕುರಿತು ಮಸೂದೆಯನ್ನು ಪಾಸ್ ಮಾಡಿದೆ. ಗಮನಿಸಿ. ನೀಲಾಂಜನ್ :   ಮಾನ್ಯ ಹರ್ಷರವರೆ ನಿಮ್ಮ ಮಾತಿಗೆ ನನ್ನದೊಂದು ಲೈಕು. ಅಮೀರ್ ಖಾನರು ಚಲನ ಚಿತ್ರದ ಮೂಲಕ ಹಮ್ಮಿಕೊಂಡ ದೇಶದ ಸಾಮಾಜಿಕ ಕಳಕಳಿಯ ಜಾಗೃತಿ ಮೂಡಿಸುವ೦ತಹ ಚಳವಳಿ , ಡಬ್ಬಿಂಗು ಬೇಡ ಅಂತ ಪ್ರೇಕ್ಷಕರ ಸ್ವಾತಂತ್ರ್ಯವನ್ನ , ಜ್ಜಾನದ ಅಭಿಲಾಷೆಯನ್ನ ಗುತ್ತಿಗೆ ತೆಗೆದುಕೊಂಡ ಕನ್ನಡ ಚಲಚಿತ್ರ ಮಾಧ್ಯಮದಿಂದ ಸಾಧ್ಯಾನಾ ? ಸಾಧ್ಯವಾದರೆ ನಾವು ಡಬ್ಬಿಂಗ್ ಬೇಡ ಅನ್ನುತ್ತೇವೆ. ದೇಶವೇ “ಸತ್ಯ ಮೇವ ಜಯತೆ” ಯ ಒಂದು ಚಿತ್ರದಿಂದ ಎಚ್ಚೆತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಒಂದು ಕಾನೂನು ಜಾರಿ ಮಾಡಬೇಕಾದರೆ ಅದರ ಪರಿಣಾಮವೇನು ಅಂತ ಆಲೋಚಿಸಬೇಕು.ಇದು ಸುಮಾರು 1200 ಕೋಟಿ ಜನರಿಗೆ ಸಂಬಂಧಿಸಿದ್ದು. ಇದನ್ನು ಸುಮಾರು 10 ಕೋಟಿ ಜನ ಸಂಖ್ಯೆ ಇರುವ ಕನ್ನಡಿಗರಿಗೆ 5000 ಸಾವಿರ ಮಂದಿ ನಂಬಿಕೊಂಡಿರುವ ಕನ್ನಡ ಚಲನ ಚಿತ್ರ ಮಾಧ್ಯಮದಿಂದ ಸಾಧ್ಯಾನಾ ?     ಹಂಸ :   ಜೋಗಿಯವರೆ, ಕನ್ನಡಕ್ಕೆ ಡಬ್ಬಿಂಗ್ ಬೇಕು ಎನ್ನೊರನ್ನು ಕನ್ನಡ ವಿರೋದಿಗಳು ಕನ್ನಡ ಚಿತ್ರವನ್ನು ನೋಡದವರು….ಕನ್ನಡವೇ ಕೀಳು ಎನ್ನುವವರು ಎಂದು ಟ್ಯಾಗ್ ಮಾಡುವ ಶೋಕಿಯಿಂದ ಆಚೆ ಬನ್ನಿ. ಡಬ್ಬಿಂಗ್ ಹೇಗೆ ಕನ್ನಡಕ್ಕೆ ಮಾರಕ ಎನ್ನುವುದನ್ನು ತಿಳಿಸಿ. ನೀವೆಷ್ಟು ಕನ್ನಡವನ್ನು ಪ್ರೀತಿಸುವಿರೋ ಅಷ್ಟೇ ನಾನು ಪ್ರೀತಿಸುತ್ತೇನೆ. ನನ್ನ ಮನೆಭಾಷೆ ತಮಿಳಾದರೂ ಕನ್ನಡವೇ ನನ್ನ ಮನದ ಮಾತಾಗಿದೆ, ನಾನು ಕನ್ನಡ ಮಾದ್ಯಮದಲ್ಲೇ ಓದಿ ಬಂದಿದ್ದೇನೆ, ನನ್ನ ಮಗುವನ್ನು ಕನ್ನಡ ಮಾದ್ಯಮದಲ್ಲೇ ಓದಿಸುತ್ತೇನೆ. ಕನ್ನಡ ಪ್ರೇಮದ ಬಗ್ಗೆ ತಮ್ಮಿಂದ ಟ್ಯಾಗ್ ಮಾಡಿಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ನಿಮ್ಮಂತೆಯೇ ನಾನೂ ಸೇರಿದಂತೆ ಡಬ್ಬಿಂಗ್ ಬೇಕು ಎನ್ನುವವರೂ ಸಹ ನಿಮ್ಮನ್ನು ಬೇರೆ ಬೇರೆ ರೀತಿಯಲ್ಲಿ ಟ್ಯಾಗ್ ಮಾಡಬಹುದು. ಆದರೆ ನನಗೆ ಅಥವಾ ಡಬ್ಬಿಂಗ್ ಬೇಕು ಎನ್ನುವರಿಗೆ ಬೇಕಾಗಿದ್ದು ಡಬ್ಬಿಂಗ್ ಬೇಡ ಎನ್ನುವವರನ್ನು ಟ್ಯಾಗ್ ಮಾಡುವ ಶೋಕಿಯಲ್ಲ. ಜೋಗಿ : @ಅರುಣ್ : ಡಬ್ಬಿಂಗ್ ಬೇಕು ಅನ್ನುವ ವಾದ ಶುರುವಾಗಿದ್ದು ಸುಮಾರು ವರ್ಷಗಳ ಹಿಂದೆ. ಅದನ್ನು ಶುರುಮಾಡಿದ್ದು ಚಾನಲ್ಲುಗಳೇ. ಇವತ್ತೂ ಡಬ್ಬಿಂಗು ಮಾಡುವ ಅವಕಾಶ ಸಿಕ್ಕರೆ ಚಾನಲ್ಲುಗಳಿಗೇ ಲಾಭ. ಅದು ಹೇಗೆ ಅಂತ ಮತ್ತೆ ವಿವರಿಸಬೇಕಾಗಿಲ್ಲ. ಹೀಗಾಗಿ ಆ ಚಾನಲ್ಲುಗಳಿಗೆ ಸಂಬಂಧಪಟ್ಟವರು, ಅದರೊಳಗಿರುವವ ಕೃಪಾಪೋಷಿತರೇ ಆ ಹುಯಿಲೆಬ್ಬಿಸಿದ್ದು.ಇತ್ತೀಚಿನ ಪ್ರಯತ್ನಗಳೂ ಅಂಥವೇ. @ All friends: ಹೀಗೆ ಮಾತಾಡುತ್ತಿರುವ ಹೊತ್ತಿಗೆ ಇವತ್ತು ಬೆಳಗ್ಗೆ ನನ್ನ ಮಗಳು ಪೋಗೋ ಚಾನಲ್ಲು ಹಾಕಿದಳು. ಅಲ್ಲಿ ನಿನ್ನೆಯ ತನಕ ಇಂಗ್ಲಿಷಿನಲ್ಲಿ ಬರುತ್ತಿದ್ದ ಛೋಟಾ ಭೀಮ್ ಇವತ್ತು ತಮಿಳಿನಲ್ಲಿ ಬಂತು. ಯಾಕೋ ತುಂಬ ಬೇಸರ ಆಯ್ತು. ನನ್ನ ಮಗಳು ಅದು ಯಾವ ಭಾಷೆ ಅಂತ ಕೇಳಿ ಒಂದೆರಡು ನಿಮಿಷ ನೋಡಿ ಚಾನಲ್ ಬದಲಾಯಿಸಿದಳು. ಕೇಬಲ್ ಆಪರೇಟರಿಗೆ ಕೇಳಿದರೆ ಇಂಗ್ಲಿಷ್ ವರ್ಷನ್ ಬರುತ್ತಿಲ್ಲ ಅಂದ. ನಮಗೆ ಬೇಕಾದದ್ದೇ ಬರುತ್ತದೆ ಅಂತೇನಿಲ್ಲ. ಬೇಡದ್ದೂ ಬರುತ್ತದೆ. ಡಬ್ಬಿಂಗ್ ಬೇಕು ಅನ್ನುವವರೂ ಬೇಡ ಅನ್ನುವವರೂ ಇಬ್ಬರೂ ಕನ್ನಡಿಗರೇ. ನನ್ನ ನಿಲುವು ಡಬ್ಬಿಂಗ್ ಬೇಡ ಅನ್ನುವುದು. ಬೇಕು ಅನ್ನುವವರ ನಿಲುವನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ ಎಂಬುದನ್ನೂ ನಾನು ಬಲ್ಲೆ. ಹಾಗೇ ಬೇಡ ಅನ್ನುವ ನನ್ನ ವೈಯಕ್ತಿಕ ನಿಲುವನ್ನೂ ಯಾರೂ ಪ್ರಶ್ನಿಸುವ ಹಾಗಿಲ್ಲ. ನಾನು ಡಬ್ಬಿಂಗ್ ಕಾರ್ಯಕ್ರಮಗಳನ್ನು ನೋಡುವುದಿಲ್ಲ ಎಂದು ಕೂತುಬಿಟ್ಟರೆ, ನನ್ನಂಥವರು ತುಂಬ ಸಂಖ್ಯೆಯಲ್ಲಿದ್ದರೆ ಡಬ್ಬಿಂಗ್ ತಾನೇ ತಾನಾಗಿ ಬಿದ್ದು ಹೋಗುತ್ತದೆ. ಆ ನ್ಯಾಚುರಲ್ ಡೆತ್ ಸಂಭವಿಸುವುದಕ್ಕೆ ಒಂದು ತಲೆಮಾರು ಹಿಡಿಯಬಹುದು, ಎರಡು ಶತಮಾನ ಬೇಕಾಗಬಹುದು, ಯಾರಿಗೆ ಗೊತ್ತು. ಇವತ್ತು ನಮ್ಮ ಪರವಾಗಿ ಯೋಚಿಸುವುದಕ್ಕೆ ಯಾರೂ ಬೇಕಾಗಿಲ್ಲ ಅನ್ನುವ ತೀರ್ಮಾನಕ್ಕೆ ಬಹುತೇಕರು ಬಂದಿದ್ದೇವೆ. ನಾಯಕತ್ವದ ಅಗತ್ಯ ಕಾಣಿಸುತ್ತಿಲ್ಲ. ಹೀಗಾಗಿ ಸೀತಾರಾಮ್ ಸರ್ ಹೇಳಿದ್ದಾಗಲೀ, ಸುರೇಶ್ ಹೇಳುತ್ತಿರುವುದಾಗಲೀ, ಶಿವರಾಜ್ ಮಾತಾಡುತ್ತಿರುವುದಾಗಲೀ, ಅನಕೃ, ರಾಮಮೂರ್ತಿ, ರಾಜ್ ಕುಮಾರ್ ಸೇರಿ ಮಾಡಿದ್ದಾಗಲೀ, ಅವರ ಅನುಭವದ ಆಧಾರದ ಮೇಲೆ. ಒಂದು ಸಮಸ್ಯೆಯ ಎರಡೂ ಮಗ್ಗಲನ್ನು ನೋಡಿ ತೆಗೆದುಕೊಂಡ ನಿರ್ಧಾರ. ಅದನ್ನು ಸುಮ್ಮನೆ ಬೆಂಬಲಿಸಬೇಕು ಎಂಬ ಐಕಮತ್ಯ ಕಾಣಿಸುತ್ತಿಲ್ಲ. ಚಿಂತನೆ ಕೂಡ ವಿಕೇಂದ್ರೀಕರಣಗೊಂಡಿದೆ. ನಾವು ಕಾನೂನನ್ನು ನಂಬುತ್ತೇವೆ. ಧರ್ಮದ ಸ್ಥಾನಕ್ಕೆ ಕಾನೂನು, ಕಟ್ಟಳೆಯ ಸ್ಥಾನಕ್ಕೆ ನ್ಯಾಯಾಲಯ ಬಂದುಕೂತಿದೆ. ಇಂಥ ಹೊತ್ತಲ್ಲಿ ಹೊರಗಿನಿಂದ ನೋಡುವವರಿಗೆ ನಾವು ಕಿತ್ತಾಡುತ್ತಿದ್ದೇವೇನೋ ಎಂಬ ಭಾವನೆ ಬರುವಂತಿದೆ. ಇದು ಯಾವುದೇ ಭಾಷೆಗೂ ಸೊಗಸಲ್ಲ. ಒಂದು ಸ್ಪಷ್ಟೀಕರಣವನ್ನಂತೂ ನೀಡಲೇಬೇಕಾಗಿದೆ. ನನ್ನ ನಿಲುವು ಕೇವಲ ನನ್ನದು. ಇದರಲ್ಲಿ ನಾನು ಕೆಲಸ ಮಾಡುವ ಪತ್ರಿಕೆಯ ಒತ್ತಾಯವಾಗಲಿ, ಒತ್ತಡವಾಗಲೀ ಇಲ್ಲ. ಅಷ್ಟಕ್ಕೂ ಡಬ್ಬಿಂಗ್ ಬಂದರೂ ಜಾಹೀರಾತು ಬಂದೇ ಬರುತ್ತದೆ.ಸಿನಿಮಾ ಯಾವುದೇ ಆದರೂ ಪ್ರಚಾರ ಬೇಕೇ ಬೇಕು. ಒಂದೇ ವಿಚಾರವನ್ನಿಟ್ಟುಕೊಂಡು ತುಂಬ ಮಾತಾಡಿದರೆ, ಮತ್ತೆ ಮತ್ತೆ ಅದನ್ನೇ ಹೇಳುತ್ತಿರುತ್ತೇವೆ. ಹೀಗಾಗಿ ನನ್ನ ನಿಲುವಿಗೆ ಬದ್ಧನಾಗಿದ್ದುಕೊಂಡು, ನಾನು ಚರ್ಚೆಯಿಂದ ಹಿಂದೆ ಸರಿಯುತ್ತಿದ್ದೇನೆ. ಒಂದಂತೂ ನಿಜ. ಕಳೆದ ನಲವತ್ತು ಚಿಲ್ಲರೆ ವರ್ಷಗಳಲ್ಲಿ ನಾನು ಐದೋ ಆರೋ ತಮಿಳು ಸಿನಿಮಾಗಳನ್ನು, ಒಂದೆರಡು ತೆಲುಗು ಸಿನಿಮಾಗಳನ್ನು, ಹತ್ತಿಪ್ಪತ್ತು ಹಿಂದಿ ಸಿನಿಮಾಗಳನ್ನು ನೋಡಿರಬಹುದು. ಆದರೆ, ಸಾವಿರಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಅದು ನನಗೆ ಸಂತೋಷ ಕೊಟ್ಟಿದೆ. ಜಗತ್ತಿನ ಮಾಹಿತಿಯನ್ನೆಲ್ಲ ತಂದು ಕಲೆಹಾಕುವ, ಅತ್ಯುತ್ತಮವಾದದ್ದನ್ನು ನಾನು ಎಲ್ಲಿದ್ದರೂ, ನನ್ನ ಭಾಷೆಯನ್ನು ಬಲಿಕೊಟ್ಟಾದರೂ, ನೋಡಬೇಕೆನ್ನುವ ಆಸೆ ನನಗಂತೂ ಖಂಡಿತಾ ಇಲ್ಲ. ನಮ್ಮಮ್ಮನಿಗೆ ಇಂಗ್ಲಿಷ್ ಬರುವುದಿಲ್ಲ, ಹಾಗಂತ ಕೊರಗಲಾರೆ. ನನ್ನ ಮಗಳು ಇಂಗ್ಲಿಷಲ್ಲೇ ಮಾತಾಡುತ್ತಾಳೆ. ಅದನ್ನೂ ತಡೆಯಲಾರೆ. ನಾನು ಕನ್ನಡ ಮಾತಾಡುತ್ತೇನೆ ಎನ್ನುವ ನಿರ್ಧಾರವಷ್ಟೇ ನನ್ನದು. ಇದೂ ಹಾಗೆಯೇ. ಸದ್ಯಕ್ಕಂತೂ, ಹತ್ತು ವರ್ಷಗಳ ನಂತರ ಇಡೀ ಚಿತ್ರಣ ಹೇಗಿರಬಹುದು ಎಂಬ ಊಹೆಯಲ್ಲಿ ವಿರಮಿಸುತ್ತಿದ್ದೇನೆ. ನಮಸ್ಕಾರ.  ]]>

‍ಲೇಖಕರು G

May 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

4 ಪ್ರತಿಕ್ರಿಯೆಗಳು

 1. ಜೋಗಯ್ಯ

  ಜೋಗಿ ಅವರ ಬರಹದ ಅಭಿಮಾನಿಯಾಗಿದ್ದೆ ಇಷ್ಟು ದಿನ. ಆದರೆ ಡಬ್ಬಿಂಗ್ ಬಗೆಗಿನ ಚರ್ಚೆಯಲ್ಲಿ ಅವರ ಮಾತು ಗಮನಿಸುತ್ತಾ ಅವರ ಯೋಚನೆ ಎಷ್ಟು ಸೀಮಿತವಾಗಿದೆ ಅನ್ನಿಸುತ್ತಿದೆ. ರೇಡಿಯೋ ಕಾರ್ಯಕ್ರಮದಲ್ಲಿ ಡಬ್ಬಿಂಗ್ ಬೇಡ ಅಂದವರೇ ಜಾಸ್ತಿ, ಡಬ್ಬಿಂಗ್ ಚೆನ್ನಾಗಿಲ್ಲ, ನೋಡೊಕಾಗಲ್ಲ ಅಂತೆಲ್ಲ ಅಂದ ಮೇಲೆ ಡಬ್ಬಿಂಗ್ ಬಂದ್ರೂ ಅದನ್ನು ಯಾರೂ ನೋಡಲ್ಲ ಅಂತ ತಾನೇ ಅರ್ಥ? ಅಲ್ಲಿಗೆ ಡಬ್ಬಿಂಗ್ ಬಂದ ದಾರಿಗೆ ಸುಂಕವಿಲ್ಲ ಅಂತ ಹೊರಟು ಹೋಗಲ್ವಾ? ಮತ್ಯಾಕೆ ಜೋಗಿ ಸಾಹೇಬರಿಗೆ ಈ ಪರಿ ನಡುಕ?
  ಡಬ್ಬಿಂಗ್ ಬೇಕು, ಬೇಡ ಅನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಚರ್ಚೆಯ ಸರಕು ಮುಗಿದವರು ಮಾತ್ರವೇ ಡಬ್ಬಿಂಗ್ ಬೇಕು ಅನ್ನುವವರು ಅಮೇರಿಕದ ಏಜೆಂಟ್ಸ್, ಅಮಿರ್ ಖಾನ್ ಏಜೆಂಟ್ಸ್, ಪರ ಭಾಷಾ ಏಜೆಂಟ್ಸ್ ಅಂತೆಲ್ಲ ಕೀಳು ಪ್ರಚಾರಕ್ಕೆ ಇಳಿಯುವವರು. ಇವರ ಕೈಯಲ್ಲಿರುವ ಪತ್ರಿಕೆಯಲ್ಲಿ ಪ್ರತಿ ವಾರವೂ ಡಬ್ಬಿಂಗ್ ಬೇಡ, ಕಿಲ್ ಡಬ್ಬಿಂಗ್ ಅಂತೆಲ್ಲ ಅಭಿಯಾನವನ್ನೇ ಮಾಡುವವರ ಬಗ್ಗೆಯೂ “ಚಿತ್ರರಂಗದವರ ಹತ್ತಿರ ಕಾಸು ಪಡೆದು, ಡಬ್ಬಿಂಗ್ ಬೇಡ ಅನ್ನುತ್ತಿದ್ದಾರೆ” ಅಂತ ಯಾರಾದರೂ ಅಂದರೆ ಜೋಗಿಯವರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ? ಫೇಸ್ ಬುಕ್ ಅಲ್ಲಿ, ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ಈ ಬಗ್ಗೆ ಬರೆಯುತ್ತಿರುವವರು ಸಾಮಾನ್ಯ ಜನರು. ಇವರ ಪ್ರಕಾರ ಚಾನೆಲ್ ನವರು ಅವರಿಗೆಲ್ಲ ದುಡ್ಡು ಕೊಟ್ಟು ಬರೆಸುತ್ತಿದ್ದಾರಾ? ಡಬ್ಬಿಂಗ್ ಬೇಕು ಅಂದ ಕುಂ.ವೀ, ಅನಂತ ನಾಗ್, ಉಷಾ ಕಟ್ಟೆಮನೆ, ಕೆ.ವಿ.ತಿರುಮಲೇಶ್ ಇವರೆಲ್ಲರೂ ಚಾನೆಲ್ ಗಳ ಕೃಪಾಪೋಶಿತರೇ? ಒಳ್ಳೆಯ ಬರಹಗಾರ ಎಂದು ನಾನು ತುಂಬಾ ಗೌರವಿಸುತ್ತಿದ್ದ, ನದಿಯ ನೆನಪಿನ ಹಂಗು, ಹಾಯ್ ಬೆಂಗಳೂರಿನಲ್ಲಿನ ಜೋಗಿ ಅವರ ಬರಹಗಳಿಂದ ಪ್ರೇರಿತನಾಗಿದ್ದ ನನಗೆ ಇವತ್ತು ಇವರ ಆಲೋಚನೆ ಕಂಡು ಭ್ರಮ ನಿರಸನವಾಗುತ್ತಿದೆ. ತಾತ್ವಿಕ ವ್ಯತ್ಯಾಸಗಳನ್ನು ಚರ್ಚಿಸುವಷ್ಟು ತೆರೆದ ಮನಸ್ಸಿಲ್ಲದ ಯಾವುದೇ ಸಾಹಿತಿ ಬೇಗನೇ ತನ್ನ ಬೆಲೆ, ನೆಲೆ ಎರಡೂ ಕಳೆದುಕೊಳ್ಳುತ್ತಾನೆ ಅನ್ನುವುದು ಇವರಿಗೆ ಅರ್ಥವಾದರೆ ಸಂತೋಷ..
  -ಜೋಗಯ್ಯ

  ಪ್ರತಿಕ್ರಿಯೆ
 2. Dhananjaya Kulkarni

  ಈ ಎಲ್ಲ ವಾದಗಳನ್ನು ನೋಡುತ್ತಿದ್ದರೆ ಇದರಲ್ಲಿ ಯಾವುದೋ ಸ್ವ-ಹಿತಾಸಕ್ತಿ ಅಡಗಿರುವುದು ಸ್ಪಷ್ಟವಾಗುತ್ತದೆ. ಡಬ್ಬಿಂಗ್ ಬೇಡ ಎನ್ನುವವರು ಯಾವುದೇ ರೀತಿಯ ಕನ್ವಿನ್ಸಿಂಗ್ ಆದ ನಿಲುವುಗಳನ್ನ ಹೇಳುತ್ತಿಲ್ಲ. ತಮ್ಮ ಲಾಭದ ಗಂಟು ಕರಗಬಹುದು ಎಂಬ ಭಯದೊಂದಿದೆ, ಕನ್ನಡದ ಪ್ರೇಕ್ಷಕ ಇಂತಹ ಕಾರ್ಯಕ್ರಮವನ್ನೇ ನೋಡಬೇಕು ಎಂದು ಕಟ್ಟಪ್ಪಣೆ ಹೊರಡಿಸುವ ಹಿಟ್ಲರ್ ಮನೋಭಾವದವರಂತೆ ಕಾಣುತ್ತಿದ್ದಾರೆ.
  ಜೋಗಿ ಬರೆದಿರುವ ಪುಸ್ತಕವಾಗಲಿ, ಸಿತಾರಾಮ್ ಅವರ ದಾರಾವಾಹಿಯಾಗಲೀ, ಸುರೇಶ್ ಅವರ ಚಲನಚಿತ್ರವಾಗಲೀ ಬೇರೆಭಾಷೆಯವರು ಡಬ್ ಮಾಡಲು ಮುಂದೆ ಬಂದರೆ ಇವರು ಕನ್ನಡದ ಮೇಲಿನ “ಪ್ರೀತಿ”ಯಿಂದ ಇಲ್ಲ ಎಂದು ಹೇಳುತ್ತಾರೆಯೇ? ತಮಗೆ ಬರುವ ಲಾಭದಿಂದ ಹಿಂದೆ ಸರಿಯಲು ಇವರ್ಯಾರೂ ತಯಾರಿಲ್ಲ. ಕನ್ನಡದ ಸಿನೇಮಾಗಳು ಸರಿಯಿಲ್ಲ ಎನ್ನುವುದು ಶೋಕಿಯಾಗಿದೆ ಎಂದು ಹೇಳಿರುವ ಜೋಗಿಯವರ ವಾದವೇ ನನಗಿಲ್ಲಿ ಶೋಕಿಯಾಗಿ ಕಾಣುತ್ತಿದೆ. ಮುಂದಿನ ಹತ್ತುವರ್ಷಗಳ ನಂತರ ಕನ್ನಡ ಚಲನಚಿತ್ರರಂಗ ಹೇಗಿರುತ್ತದೆ ಎಂದು ಚಿಂತಿಸುತ್ತ ವಿರಮಿಸುತ್ತಿದ್ದೇನೆ ಎನ್ನುವ ಜೋಗಿಯವರಿಗೆ ಒಂದು ನೇರವಾದ ಪ್ರಶ್ನೆ…”ನೀವು ನಲವತ್ತು ಚಿಲ್ಲರೆ ವರ್ಷದಲ್ಲಿ ನೋಡಿರುವ ಚಿತ್ರಗಳಿಗೂ, ಈಗ ನೋಡುತ್ತಿರುವ ಚಿತ್ರಗಳಿಗೂ ನಿಮಗ್ಯಾವ ವ್ಯತ್ಯಾಸ ಕಾಣುತ್ತಿಲ್ಲವೇ? ರಿಮೇಕ್ ಚಿತ್ರಗಳನ್ನ ಒಪ್ಪುವ ನೀವು ಡಬ್ಬಿಂಗ್ ಯಾಕೆ ಬೇಡ ಅಂತೀರಾ? ಡಬ್ಬಿಂಗ್ ಸರಕು ಓದುತ್ತದೋ ಬಿಡುತ್ತದೋ ಅದು ಪ್ರೇಕ್ಷಕನ ನಿರ್ಧಾರಕ್ಕೆ ಬಿಟ್ಟ ವಿಚಾರ ಮತ್ತು ನಿರ್ಮಾಪಕನ ಹಣೆಬರಹ….ಅದನ್ನು ನಿರ್ಧರಿಸುವ ಹಕ್ಕನ್ನು ನಿಮಗೆ ಕೊಟ್ಟವರಾರು?

  ಪ್ರತಿಕ್ರಿಯೆ
 3. ಮೂರ್ತಿ

  ಜೋಗಿ ಹಾಗು ಸೀತಾರಾಂ ಸರ್:
  ಈ ಡಬ್ಬಿಂಗ್ ಪರ ವಾದಗಳೇ ನನಗೆ ಅರ್ಥವಾಗುತ್ತಿಲ್ಲ. ನಮ್ಮ ಕನ್ನಡದ ಕಲೆಗಳನ್ನೆಲ್ಲ ವಶಪಡಿಸಿಕೊಂಡು ಅದಕ್ಕೆ ಸಾಮ್ರಾಟರಾದ ನಿರ್ದೇಶಕರೊಬ್ಬರು ತಮಿಳಿನ ಚಿತ್ರಗಳನ್ನು ಯಥಾವತ್ತಾಗಿ ಕನ್ನಡಕ್ಕಿಳಿಸಿದರು. ಅದರಲ್ಲಿಯ ಪಾತ್ರಗಳು….ಸನ್ನಿವೇಶಗಳನ್ನು ನೆನೆಸಿಕೊಂಡರೆ ವಾಕರಿಕೆ ಬರುತ್ತೆ.! ಇನ್ನು ಆ ಭಾಷೆಯ ಧಾರಾವಾಹಿಗಳು…ಚಲನಚಿತ್ರಗಳು…ಕನ್ನಡಕ್ಕೆ ಡಬ್ ಆಗಿ ಬಂದರೆ.!!
  ನನಗೆ “ಮುಕ್ತ ..ಮುಕ್ತ” ದ ಮೇಲೆ ನೂರಾರು ಕಂಪ್ಲೇನ್ಗಳಿವೆ….ಆದರೆ ಇತರೆ ಭಾಷೆಯ ಧಾರಾವಾಹಿಗಳಿಗೆ ಹೋಲಿಸಿದರೆ ನನಗೆ ಮುಕ್ತವೇ ಇಷ್ಟ. ಮುಕ್ತದ ಮೇಲಿನ ಅಸಮಾಧಾನಗಳು ನನ್ನ ಮಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದಿಲ್ಲ ಎಂಬ ಕೊರಗಿನಂತೆ ಅಷ್ಟೇ.
  ಇಲ್ಲಿ ಡಬ್ಬಿಂಗ್ ಪರ ವಾದ ಮಾಡುವವರೆಲ್ಲ..ನೀವೆಂದ ಹಾಗೆ ” ಕ್ರಪಾಪೋಷಿತರೆ” . ಅವರಿಗೆ ಡಬ್ಬಿಂಗ್ ಬರಲಿ ಬಿಡಲಿ…ಅಷ್ಟೇನೂ ವ್ಯತಾಸ ಆಗಲಾರದು. ನಾಳೆ ಡಬ್ಬಿಂಗ್ ಬಂತೆಂದರೆ ಅವರೇನೂ ಕನ್ನಡ ಅವತರಣಿಕೆಯನ್ನು ನೋಡುವ ಮಹಾನುಭಾವರೇನಲ್ಲ…ಅದನ್ನು ಮೂಲ ಭಾಷೆಯಲ್ಲೇ ನೋಡಿ ಆನಂದಿಸುವವರು ಅವರು. ಇವರು ಡಿಸ್ಕವರಿಯಲ್ಲಿಯ ಕಾರ್ಯಕ್ರಮದ ಬಗ್ಗೆ ಹೇಳುತ್ತಾರೆ, ಡಿಡಿ ಚಂದನದಲ್ಲಿ ಬರುವ ಎಷ್ಟು ಕಾರ್ಯಕ್ರಮಗಳನ್ನು ಇವರುಗಳು ನೋಡುತ್ತಾರೆ, ನೋಡಿದ್ದಾರೆ ಸ್ವಾಮಿ? ಹಲಸಿನ ಸೊಳೆಯನ್ನು ಬಂಗಾರದ ಬಟ್ಟಲಲ್ಲಿ ಕೊಟ್ಟರೆ ಮಾತ್ರ ಸವಿಯೇ; ಮಣ್ಣಿನ ಕುಡಿಕೆಯಲ್ಲಿ ತಿಂದರೆ ಕಹಿಯೇ?
  ನೀವಂದದ್ದು ಸರಿ…ಕನ್ನಡವೇ ಕಳಪೆ ಅಂದಾದ ಮೇಲೆ….ಡಬ್ಬಿಂಗ್ ಬಂದರೆಷ್ಟು ..ಬಿಟ್ಟರೆಷ್ಟು? ಕೊನೆಯಲ್ಲಿ ” ಕನ್ನಡ ಪಿಕ್ಚರ್ ನೋಡದೆ ಬಯ್ಯಿ…..ಲೈಫು ಇಷ್ಟೇನೆ….”
  ಮೂರ್ತಿ

  ಪ್ರತಿಕ್ರಿಯೆ
 4. Dhananjaya Kulkarni

  ಮೂರ್ತಿ ಅವರೇ,
  “ನಮ್ಮ ಕನ್ನಡದ ಕಲೆಗಳನ್ನೆಲ್ಲ ವಶಪಡಿಸಿಕೊಂಡು ಅದಕ್ಕೆ ಸಾಮ್ರಾಟರಾದ ನಿರ್ದೇಶಕರೊಬ್ಬರು ತಮಿಳಿನ ಚಿತ್ರಗಳನ್ನು ಯಥಾವತ್ತಾಗಿ ಕನ್ನಡಕ್ಕಿಳಿಸಿದರು. ಅದರಲ್ಲಿಯ ಪಾತ್ರಗಳು….ಸನ್ನಿವೇಶಗಳನ್ನು ನೆನೆಸಿಕೊಂಡರೆ ವಾಕರಿಕೆ ಬರುತ್ತೆ.!” ಅಂತ ಹೇಳಿದಿರಲ್ಲ..ಅದರ ಹಣೆಬರಹವೂ ಸಹ ಅಷ್ಟೇ ಆಗಿದೆ..ಅಂದರೆ ಪ್ರೇಕ್ಷಕ ನೇರವಾಗಿ ಅದನ್ನ ತಿರಸ್ಕರಿಸಿಬಿಟ್ಟ….ಇಲ್ಲಿ ವಾದ ಮಾಡುತ್ತಿರುವುದೂ ಅದನ್ನೇ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ತೀರ್ಮಾನಿಸುವವರು ಪ್ರೇಕ್ಷಕರು..ಅದು ಉತ್ತಮವಾಗಿದ್ದರೆ ಅದನ್ನ ನೋಡುತ್ತಾರೆ, ಇಲ್ಲದಿದ್ದಲ್ಲಿ ಅದೂ ಸಹ ನೀವು ಹೇಳಿದ ತಮಿಳು ಅವತರಿಣಿಕೆಯ ಕನ್ನಡ ಚಿತ್ರದಂತೆ ಡಬ್ಬ ಸೇರುತ್ತದೆ…ಡಬ್ಬಿಂಗ್ ಮಾಡುವುದನ್ನು ತಡೆಯುವುದರ ಮೂಲಕ ಇವರು ಪ್ರೇಕ್ಷಕನ ಆಯ್ಕೆಯ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ…ಆ ಅಧಿಕಾರವನ್ನು ಇವರಿಗೆ ನೀಡಿದವರು ಯಾರು? ನಾವು ಮಾಡಿದ್ದೇ ಶ್ರೇಷ್ಠ, ನೀವು ಅದನ್ನೇ ನೋಡಬೇಕು ಎಂಬಂತಹ ಮೊಂಡುವಾದ ಯಾವ ಕಾಲಕ್ಕೂ ಸರಿಯಲ್ಲ…ಡೆಮಾಕ್ರಟಿಕ್ ಆಗಿ ಡಬ್ಬಿಂಗನ್ನು ವಿರೋಧಿಸುತ್ತಿರುವುದಾಗಿ ಹೇಳುವ ಇವರುಗಳು ಅನ್-ಡೆಮಾಕ್ರಟಿಕ್ ಆಗಿ ಪ್ರೇಕ್ಷಕನ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಅಸಹನೀಯ….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: