ಜುಗಾರಿ ಕ್ರಾಸ್ : ’ಟಿ ಎನ್ ಸೀತಾರಾ೦ ಅವರೇ…’ – ದಿನೇಶ್ ಕುಮಾರ್

ನಿನ್ನೆ  ಟಿ ಎನ್ ಸೀತಾರಾ೦ ಅವರು ’ಡಬ್ಬಿ೦ಗ್ ಬೇಕು ಅನ್ನುವ  ಗೆಳೆಯರು  ಕೆಲವು ತಪ್ಪು ಅಭಿಪ್ರಾಯಗಳನ್ನು ಇಟ್ಟುಕೊ೦ಡಿದ್ದಾರೆ ಅನ್ನಿಸುತ್ತೆ’ ಎ೦ದು ಬರೆದಿದ್ದರು. (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಅದಕ್ಕೆ ಪ್ರತಿಕ್ರಯಿಸಿದ ದಿನೇಶ್ ಕುಮಾರ್ ಅವರ ಲೇಖನ ಇಲ್ಲಿದೆ. ನಿಮ್ಮ ಪ್ರತಿಕ್ರಿಯೆ/ಅಭಿಪ್ರಾಯಗಳಿಗೆ ಸ್ವಾಗತ.

– ದಿನೇಶ್ ಕುಮಾರ್

  ಟಿ.ಎನ್.ಸೀತಾರಾಮ್ ಅವರೇ, ಅಪಾರ ಗೌರವಗಳೊಂದಿಗೆ ನಿಮ್ಮ ಅಭಿಪ್ರಾಯ ಕುರಿತಂತೆ ನನ್ನದೂ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಕನ್ನಡಕ್ಕೆ ಡಬ್ ಆಗುವ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿರುತ್ತವೆ ಎಂದು ಡಬ್ಬಿಂಗ್ ಪರವಾಗಿ ಮಾತನಾಡುವವರು ಭಾವಿಸಿದ್ದಾರೆ ಎಂದು ನೀವು ನಿಮ್ಮ ಲೇಖನ ಶುರು ಮಾಡುತ್ತೀರಿ. ನಿಮ್ಮ ಗ್ರಹಿಕೆ ಸರಿಯಲ್ಲ. ಡಬ್ಬಿಂಗ್ ಕಾರ್ಯಕ್ರಮಗಳೆಲ್ಲವೂ ಉತ್ತಮವಾಗಿರುತ್ತವೆ ಎಂದು ನಾವ್ಯಾರೂ ಹೇಳುತ್ತಲೇ ಇಲ್ಲ, ಮುಂದೆಯೂ ಹೇಳೋದೂ ಇಲ್ಲ. ನಮ್ಮನ್ನು ನಂಬಿ ಪ್ಲೀಸ್! ಇನ್ನೊಮ್ಮೆ ಡಬ್ಬಿಂಗ್ ವಿಷಯ ಮಾತಾಡುವಾಗ ಈ ತಪ್ಪುಗ್ರಹಿಕೆಯನ್ನು ಬಿಟ್ಟುಕೊಟ್ಟೇ ಮಾತಾಡಿ. ಡಬ್ಬಿಂಗ್ ಶುರುವಾದರೆ ಒಳ್ಳೆಯ ಗುಣಮಟ್ಟದ ಶೇ.೧೦ರಷ್ಟು ಕಾರ್ಯಕ್ರಮಗಳು ಡಬ್ ಆಗೋದಿಲ್ಲ ಎನ್ನುತ್ತಿದ್ದೀರಿ. ಹೇಗೆ ಈ ತೀರ್ಮಾನಕ್ಕೆ ಬಂದಿರಿ? ಅದಕ್ಕೆ ಏನು ಆಧಾರ? ಏನಾದರೂ ಸಮೀಕ್ಷೆ ಮಾಡಿದ್ದೀರಾ? ಕನ್ನಡದಲ್ಲಿ ಡಬ್ಬಿಂಗ್ ನಿಂತು ದಶಕಗಳೇ ಕಳೆದಿವೆ. ಡಬ್ಬಿಂಗ್ ಶುರುವಾದರೆ ಒಳ್ಳೆಯದು ಬರೋದೇ ಇಲ್ಲ ಎಂದು ಕಣ್ಣುಮುಚ್ಚಿಕೊಂಡು ಹೇಗೆ ಹೇಳುತ್ತೀರಿ? ನಾವಂತೂ ತ್ರಿಕಾಲ ಜ್ಞಾನಿಗಳಲ್ಲ. ಡಬ್ಬಿಂಗ್ ಆಗುವುದರಿಂದ ತಡೆಯಲಾದ ರಾಮಾಯಣ-ಮಹಾಭಾರತ-ಸ್ವೋರ‍್ಡ್ ಆಫ್ ಟಿಪ್ಪು ಸುಲ್ತಾನ್-ಮಾಲ್ಗುಡಿ ಡೇಸ್- ಸತ್ಯಮೇವ ಜಯತೆ ಇತ್ಯಾದಿಗಳು ಕಳಪೆ ಎಂದು ನಮಗೆ ಅನಿಸಿಲ್ಲ. ನೀವು ಬರೆಯುತ್ತೀರಿ: ಅವರು ಡಬ್ ಮಾದಲು ಸಾಧ್ಯ ಇರುವುದು ತಮಿಳ್ ಮತ್ತು ಹಿಂದಿ ಧಾರಾವಾಹಿಗಳನ್ನು ಮಾತ್ರ. ಕನ್ನಡ ಧಾರಾವಾಹಿಗಳ ಜಾಗದಲ್ಲಿ ಅವು ಬರುತ್ತವೆ. ಅದೇ ವ್ಯಾಂಪ್‌ಗಳು, ಅದೇ ವಿವಾಹದ ಹೊರಗಿನ ಸ೦ಬಂಧಗಳು, ಅದೇ ಅತಿ ಅಲಂಕಾರದ ಕೃತಕ ಹೆಣ್ಣುಗಳು, ಅದೇ ದೆವ್ವಗಳು, ಮಾಟ ಮಂತ್ರಗಳು, ಮೂಢನಂಬಿಕೆಗಳು, ಕನ್ನಡ ಕಳಪೆ ಎಂದು ನೀವು ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳಿಗೆ ಮತ್ತು ತಾಯಂದಿರಿಗೆ ತೋರಿಸಲು ಸಾಧ್ಯವಾಗುವುದು ಇಂತಹ ಧಾರಾವಾಹಿಗಳನ್ನು ಮಾತ್ರ ತಾನೆ?… ಹೌದು ಸರ್, ನೀವ್ ಹೇಳೋದು ನಿಜ. ಆದರೆ ಕನ್ನಡದ ಟಾಪ್ ಟೆನ್ ಧಾರಾವಾಹಿಗಳು ಇಂಥದ್ದೇ ಕಾರ್ಯಕ್ರಮಗಳ ರೀಮೇಕು ಅನ್ನೋದನ್ನು ಬರೆಯಲು ಯಾಕೆ ಪ್ರಜ್ಞಾಪೂರ್ವಕವಾಗಿ ಮರೆಯುತ್ತೀರಿ? ಅದೇ ಅನೈತಿಕ ಸಂಬಂಧಗಳು, ಅದೇ ಕೃತಕ ಅಲಂಕಾರದ ಹೆಣ್ಣುಗಳು, ಅದೇ ಮಾಟಮಂತ್ರ-ಮೌಢ್ಯ ರೀಮೇಕ್, ಸ್ವಮೇಕ್ ಗಳಲ್ಲಿ ಕಾಣಿಸಿಕೊಂಡಿಲ್ಲವೇ? ಇದೆಲ್ಲ ಗೊತ್ತಿದ್ದೂ ಕನ್ನಡದ ಧಾರಾವಾಹಿಗಳನ್ನು ಡಬ್ಬಿಂಗ್ ಹೆಸರಿನಲ್ಲಿ ನಾಶ ಮಾಡುವುದು ಸರಿಯೆ ಎಂದೇಕೆ ಪ್ರಶ್ನಿಸುತ್ತೀರಿ? ಅಷ್ಟಕ್ಕೂ ಕನ್ನಡ ಧಾರಾವಾಹಿಗಳು ನಾಶವಾಗುತ್ತವೆ ಎಂಬ ಭೀತಿ, ಅಂಜುಬುರುಕುತನ ನಿಮಗೇಕೆ? ಏನೇ ಡಬ್ಬಿಂಗ್ ಧಾರಾವಾಹಿಗಳು ಬಂದರೂ ನಿಮ್ಮಂಥವರು ಮುಕ್ತ ಮುಕ್ತದಂಥ ಧಾರಾವಾಹಿಗಳು ಮಾಡಿದರೆ ಜನ ನೋಡಲ್ಲ ಅಂತೀರಾ? ಜನರ ಅಭಿರುಚಿಯ ಮೇಲೆ ಅಷ್ಟೊಂದು ಗುಮಾನಿನಾ ನಿಮಗೆ? ಒಂದು ವಿಷಯ ನಿಮಗೆ ಹೇಳಬೇಕು, ಹಿಂದೆ ಕರ್ನಾಟಕದ ಹೆಣ್ಣುಮಕ್ಕಳು ಕಾದಂಬರಿಗಳನ್ನು ಓದುತ್ತಾ ಇದ್ದರು. ನಾನೂ ಸಹ ಲೈಬ್ರರಿಗೆ ಹೋಗಿ ತ್ರಿವೇಣಿ, ಸಾಯಿಸುತೆಯವರ ಕಾದಂಬರಿಗಳನ್ನು ತಂದು ನನ್ನ ಮನೆಗೆ ತಗೊಂಡು ಹೋಗುತ್ತಿದೆ. ನಿಮ್ಮ ಧಾರಾವಾಹಿಗಳು ಬಂದ ನಂತರ ಹೆಣ್ಣುಮಕ್ಕಳು ಕಾದಂಬರಿ ಓದೋದನ್ನೇ ಬಿಟ್ಟರು. ಹಾಗಂತ ಕಾದಂಬರಿಕಾರರು ಸೀರಿಯಲ್ ಗಳನ್ನು ನಿಷೇಧಿಸಿ ಅಂತ ಚಳವಳಿ ಮಾಡಿದರಾ? ಸೀರಿಯಲ್ ಗಳನ್ನು ನೋಡಕೂಡದು ಅಂತ ಫತ್ವಾ ಹೊರಡಿಸಿದ್ದರಾ? ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಯಥಾವತ್ತು ಇಂಗ್ಲಿಷ್ ಆವೃತ್ತಿಯನ್ನು ಕನ್ನಡಕ್ಕೆ ಅನುವಾದ ಮಾಡಿ (ಡಬ್ಬಿಂಗ್) ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕೆ ನಿಲ್ಲಿಸಿ ಎಂದು ಇತರ ಪತ್ರಿಕೆಗಳ ಪತ್ರಕರ್ತರು ಟೈಮ್ಸ್ ಕಚೇರಿ ಮುಂದೆ ಧರಣಿ ಕೂತಿದ್ದರಾ? ಡಬ್ಬಿಂಗ್ ತಾತ್ವಿಕ ಒಪ್ಪಿಗೆ ಕೊಟ್ಟ ತಕ್ಷಣ…. ಅಂತೇನೋ ಬರೀತೀರಿ? ಯಾರು ಈ ತಾತ್ವಿಕ ಒಪ್ಪಿಗೆ ಕೊಡುವವರು? ಒಪ್ಪಿಗೆ ಕೊಡುವ ತಿರಸ್ಕರಿಸುವ ಅಧಿಕಾರವನ್ನು ಕನ್ನಡ ವೀಕ್ಷಕನೇನಾದರೂ ಇವರಿಗೆ ಕೊಟ್ಟಿದ್ದಾನೆಯೇ? ಅಷ್ಟಕ್ಕೂ ಡಬ್ಬಿಂಗ್ ಕಾರ್ಯಕ್ರಮ ಅನ್ನೋದು ಸಮಾಜಬಾಹಿರ, ಸಂವಿಧಾನಬಾಹಿರ, ಅನೈತಿಕ ಉತ್ಪನ್ನವೇ? ಕಳಪೆ ಯಾವುದು, ಗುಣಮಟ್ಟದ್ದು ಯಾವುದು ಅನ್ನೋದನ್ನು ನಿರ್ಧರಿಸುವವನು ಪ್ರೇಕ್ಷಕ, ಅದು ನಿಮಗೂ ಗೊತ್ತಿದೆ. ಕನ್ನಡದಲ್ಲಿ ವರ್ಷಕ್ಕೆ ಬಿಡುಗಡೆಯಾಗುವ ೧೩೦ರ ಆಜುಬಾಜಿನ ಸಿನಿಮಾಗಳಲ್ಲಿ ಎಷ್ಟನ್ನು ಗೆಲ್ಲಿಸಿದ್ದಾನೆ ಕನ್ನಡ ಪ್ರೇಕ್ಷಕ? ಇಷ್ಟವಾಗದ್ದನ್ನು ತಿಪ್ಪೆಗೆಸೆದಿದ್ದಾನಲ್ಲವೇ? ಹಾಗೆಯೇ ಡಬ್ಬಿಂಗ್ ನಿಂದ ಬರುವ ಕಾರ್ಯಕ್ರಮ, ಸಿನಿಮಗಳು ಕಳಪೆಯಾಗಿದ್ದರೆ ಅವುಗಳನ್ನೂ ತಿರಸ್ಕರಿಸುತ್ತಾನೆ. ನಿಮಗೇಕೆ ಧಾವಂತ? ನೀವು ಏನು ನೋಡಬೇಕು ಎಂದು ಹೇಳುವ ಸ್ವಾತಂತ್ರ್ಯ ಇರುವುದು ಚಾನಲ್ ಗಳನ್ನು ನಡೆಸುತ್ತಿರುವ ಬೇರೆ ಭಾಷೆಯ ಚಾನಲ್‌ನವರಿಗೆ ಎನ್ನುತ್ತೀರಿ. ಹಾಗೆಲ್ಲ ನಾವು ಏನನ್ನು ನೋಡಬೇಕು ಎನ್ನುವುದನ್ನು ಚಾನಲ್‌ಗಳೂ ಹೇಳುವಂತಿಲ್ಲ, ಸಿನಿಮಾಮಂದಿಯೂ ಹೇಳುವಂತಿಲ್ಲ, ಸಿನಿಮ-ಟಿವಿ ಕ್ಷೇತ್ರದ ಪಂಡಿತರೂ ಹೇಳುವಂತಿಲ್ಲ. ಅವರವರ ಆಯ್ಕೆ ಅವರವರಿಗೆ ಇರುತ್ತದೆ. ಜೀವನಪರ್ಯಂತ ಒಂದೂ ಸಿನಿಮಾ ನೋಡದೇ ಇರೋರು ಕೂಡ ಈ ಜಗತ್ತಿನಲ್ಲಿ ಜೀವಿಸಿದ್ದಾರೆ ಅನ್ನೋದನ್ನು ಮರೆಯಬೇಡಿ. ಅಷ್ಟಕ್ಕೂ ಡಬ್ಬಿಂಗ್ ಬೇಡ ಎನ್ನುತ್ತಿರುವ ಸಿನಿಮಾ-ಟಿವಿ ಮಂದಿ ಯಾಕಿಷ್ಟು ರಕ್ಷಣೆಯನ್ನು ಬಯಸುತ್ತಾರೆ? ಹಾಗೆ ರಕ್ಷಣೆ ಬಯಸಲು ಅವರಿಗೆ ಇರುವ/ಇರಬಹುದಾದ ವಿಶೇಷ ಅರ್ಹತೆಗಳಾದರೂ ಏನು? ನಾನು ಏನನ್ನು ನೋಡಬೇಕು ಎಂಬುದನ್ನು ನಿರ್ಧರಿಸುವ ಸಾಂಸ್ಕೃತಿಕ ಯಜಮಾನಿಕೆಯನ್ನು ಶಿವರಾಜಕುಮಾರ್ ಅವರಿಗಾಗಲಿ, ಟಿ.ಎನ್.ಸೀತಾರಾಂ ಅವರಿಗಾಗಲೀ, ಬಿ.ಸುರೇಶ ಅವರಿಗಾಗಲಿ, ಮತ್ಯಾರಿಗಾಗಲೀ ನಾನು ನೀಡಿಲ್ಲ. ಅಂಥ ಸಾಂಸ್ಕೃತಿಕ-ಸಾಮಾಜಿಕ ಹೊಣೆಗಾರಿಕೆಯನ್ನು ಸುಖಾಸುಮ್ಮನೆ ನಿಮ್ಮಗಳ ಹೆಗಲ ಮೇಲೆ ಯಾಕೆ ಹೊತ್ತುಕೊಂಡು ಓಡಾಡುತ್ತೀರಿ? ನಿಮ್ಮ ಲಾಭ-ನಷ್ಟದ ವಿಷಯಗಳನ್ನು ಮಾತನಾಡಿ, ನಮ್ಮ ಅಭಿರುಚಿಗಳ ಬಗ್ಗೆ ನಿಮ್ಮ ಪ್ರೌಢಪ್ರಬಂಧಗಳನ್ನೇಕೆ ಹೇರುವಿರಿ? ಕನ್ನಡ ಪ್ರೇಕ್ಷಕನನ್ನು ನೀವು ಅಷ್ಟೊಂದು ಅಂಡರ್ ಎಸ್ಟಿಮೇಟ್ ಮಾಡಿರುವಿರಾ? ನಾವು ತಿರುಗಿ ಬಿದ್ದರೆ ಡಬ್ಬಿಂಗ್ ಬೇಕು ಅನ್ನೋರೆಲ್ಲ ಇಲ್ಲದಂತಾಗುತ್ತಾರೆ ಎಂದು ಶಿವರಾಜ ಕುಮಾರ್ ಅಂಥವರು ಬಹಿರಂಗವಾಗೇ ಬೆದರಿಕೆ ಒಡ್ಡುತ್ತಾರೆ. ನನ್ನ ಇಷ್ಟದನ್ನು ನಾನು ಬೇಕು ಅಂದರೆ ನಮ್ಮನ್ನು ಮುಗಿಸಿಯಾದರೂ ಅದನ್ನು ತಡೆಯುತ್ತೇವೆ ಎನ್ನುವವರಿಗೆ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಂದು ಕರೆಯಬಹುದು? ಚಿತ್ರರಂಗದ ಪರವಾಗಿ ಬಡಿದಾಡಲು ಗೂಂಡಾಗಿರಿಯ ಭಾಷೆ-ಕ್ರಿಯೆ ಅನಿವಾರ್ಯವಾಗಿದೆಯೇ? ಅಥವಾ ಸೀತಾರಾಂ ಅಂಥವರ ಜಾಣತರ್ಕ- ವೀಕ್ಷಕನನ್ನು ತನಗಿಂತ ಕೆಳಗೆ ಇಟ್ಟು ನೋಡುವ ಅಹಂಕಾರದ ಭಾಷೆ ಅನಿವಾರ್ಯವೇ? ಇನ್ನೂ ಹತ್ತಾರು ವಿಷಯಗಳಿವೆ. ಆಗಲೇ ಉದ್ದವಾಗಿದೆ, ನಿಮ್ಮ ಧಾರಾವಾಹಿಗಳಂತೆ!   ನಮಸ್ಕಾರ.  ]]>

‍ಲೇಖಕರು G

May 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

40 ಪ್ರತಿಕ್ರಿಯೆಗಳು

 1. Bhairav Kodi

  ದಿನೇಶ್ ಚಾಟಿಯನ್ನ ಸರಿಯಾಗಿ ಬೀಸಿದ್ದೀರ ಆದ್ರೆ ಚೂಟಿ ಮಂದಿಗೆ ಅರ್ಥವಾಗೊದಾದ್ರು ಹೇಗ್ ಹೇಳಿ, ಚಿತ್ರರಂಗದ ಈ ಗೂ೦ಡಗಳಿಗೇಕೆ ಇಷ್ಟೊಂದು ಭಯ ಅನ್ನೋದು ಅರ್ಥವಾಗ್ತಿಲ್ಲ

  ಪ್ರತಿಕ್ರಿಯೆ
  • Ravi

   ಪರಭಾಷೆಯೆಧು ಎಲ್ಲ ಮೇಲು, ನಮ್ಮದು ಕೀಳು ಅಂತ ತಿಳ್ಕೊಂಡಿರೋ ನಿನಂಥ ಕನ್ನಡಿಗರು ಇಧರೆ ಅಂತ ಭಯ ಅನ್ಸುತ್ತೆ…

   ಪ್ರತಿಕ್ರಿಯೆ
   • har.sri.ga

    nammali irodu yella olledu, bere avardu kettadu antha helo janarige innu yenu helake agate..
    adu allede, yella kannada dalli beku andre ; nimage yenu kasta.. nive beku adana nodi, yava bashe nalli beku adru nodi..
    namage yella mahiti mathe content na kannada dalli kodi..

    ಪ್ರತಿಕ್ರಿಯೆ
   • ಜೋಗಿ ಜಂಗಮ

    ಡಬ್ಬಿಂಗ್ ಅಂದಾಕ್ಷಣ ಕನ್ನಡ ನುಡಿ ಸಂಸ್ಕ್ರುತಿ ನೆನಪು ಮಾಡಿಕೊಳ್ಳುವ ಜನರಿಗೆ ಏನು ಹೇಳಿ ಏನು ಪ್ರಯೋಜನ? ಇವರುಗಳಿಗೆ ನಾವು ಪ್ರಜಾಪ್ರಬುತ್ವದಲ್ಲಿ ಇದ್ದೀವಿ ಅನ್ನೊದೆ ತಿಳಿದಿಲ್ಲ ಅನ್ನಿಸುತ್ತೆ. ಅವಕಾಶವಾದಿಗಳು!!

    ಪ್ರತಿಕ್ರಿಯೆ
 2. SUBRAMANYAM B

  ಅಬ್ಬಾ! ಒಳ್ಳೆ ಕಸುವು ಇರುವ ಲೇಖನ ಇದು!ದಿನೇಶ್ ಕುಮಾರ್ ಅವರಿಗೆ ಹ್ಯಾಟ್ಸ್ ಆಫ್!
  ವೀಕ್ಷಕರನ್ನು ಕುರಿಗಳ೦ತೆ ನಡೆಸಿಕೊಳ್ಳುವವರು ಇವರು ಎ೦ಬುದು ಡಬ್ಬಿ೦ಗ್ ವಿರೋಧಿಗಳ ವಾಕ್ ಸರಣಿಯಲ್ಲಿ ನಿಚ್ಚಳವಾಗಿದೆ.
  ಡಜನ್ ಗಟ್ಟಲೆ ಕೀಳು ಅಭಿರುಚಿಯ ಸಿನಿಮಾಗಳನ್ನು, ಟಿವಿ ಸೀರಿಯಲ್ ಗಳನ್ನು ದೂರವಿಟ್ಟು ಈಚಿನ ವರ್ಷಗಳಲ್ಲಿ ತೆರೆಗೆ ಬ೦ದ ಹೊಸಮುಖಗಳು ನಟಿಸಿರುವ, ಉತ್ತಮ ಅಭಿರುಚಿಯ ಕಥಾವಸ್ತುವಿರುವ, ಇ೦ಪಾದ ಗೀತೆಗಳಿರುವ ಚಿತ್ರಗಳನ್ನು ಮನೆಮ೦ದಿಯ ಸಮೇತ ಥಿಯೇಟರ್ ನಲ್ಲಿ ವೀಕ್ಷಿಸಿರುವವನು ನಾನು. ನನ್ನ೦ಥಹ ಸಹಸ್ರಾರು ವೀಕ್ಷಕರ ಮೇಲೆ ಇವರಿಗೆ ವಿಶ್ವಾಸ ಇಲ್ಲದಿರುವುದು ನಮ್ಮ ದೌರ್ಭಾಗ್ಯವೋ, ಕನ್ನಡ ಚಿತ್ರರ೦ಗದ, ಕನ್ನಡ ಟಿವಿ ಚ್ಯಾನೆಲ್ ಗಳ ದೌರ್ಭಾಗ್ಯವೋ?

  ಪ್ರತಿಕ್ರಿಯೆ
 3. Somashekar BR

  ಬಡ್ಕೊಂಡ್ ಬಡ್ಕೊಂಡ್ ಬಾಯ್ ನೋವ್ ಆಯ್ತು. ಮುಠ್ಠಾಳರಿಗೆ ಬುದ್ಧಿ ಬರ್ಲಿಲ್ಲ… ತಾವೇ ಬುದ್ಧಿವಂತರು ಅನ್ನೋ ಅಹಂ ಇದಕ್ಕೆ ಕಾರಣ… ಏನಾದ್ರು ಆಗ್ಲಿ, ಚೆನ್ನಾಗೇ ಕೌಂಟರ್ ಬರ್ದಿದ್ದೀರ…

  ಪ್ರತಿಕ್ರಿಯೆ
 4. Ravi

  “ಡಬ್ಬಿಂಗ್ ಶುರುವಾದರೆ ಒಳ್ಳೆಯ ಗುಣಮಟ್ಟದ ಶೇ.೧೦ರಷ್ಟು ಕಾರ್ಯಕ್ರಮಗಳು ಡಬ್ ಆಗೋದಿಲ್ಲ ಎನ್ನುತ್ತಿದ್ದೀರಿ. ಹೇಗೆ ಈ ತೀರ್ಮಾನಕ್ಕೆ ಬಂದಿರಿ? ಅದಕ್ಕೆ ಏನು ಆಧಾರ? ಏನಾದರೂ ಸಮೀಕ್ಷೆ ಮಾಡಿದ್ದೀರಾ?”
  ದಿನೇಶ್ ಅವರೇ, ಕನ್ನಡದಲ್ಲಿ ಒಳ್ಳೆಯಧು, ಡಬ್ ಮಾಡಬಹುದಾದ cartoon netwrok, pogo, discovery, History ಚಾನೆಲ್ ಗಳು ಏಕೆ ಡಬ್ ಆಗಿಲ್ಲ (or voice over) ಅಂತ ತಿಳುಸುತ್ತಿರ? ಇವುಗಳ್ಳನು ಡಬ್ ಮಾಡಬೇಡಿ ಅಂತ ಶಿವರಾಜ್ಕುಮಾರ್ ಸಹಿತ ಯಾರು ಹೇಳಿಲ್ಲ…ಇ ಚಾನೆಲ್ ಗಳನ್ನೂ ಕನ್ನಡಕ್ಕೆ ತರಲು ಯಾಕೆ ಪ್ರಯತ್ನಿಸಬಾರಧು? ಸೀತಾರಾಮ್ ಅವರು ಹೇಳಿರೋ ಉದ್ದೇಶ ಇದೆ…ನಮಗೆ ಮುಕ್ಯವಾಗಿ ಬೇಕಿರೋ ಇ ಕಾರ್ಯಕ್ರಮಗಳು ಡಬ್ ಆಗ್ಲಿಲ್ಲ ಅಂದ್ರೆ, ಡಬ್ಬಿಂಗ್ ಯಾಕೆ ಬೇಕು ? ಏಕ್ತ ಕಪೂರ್ ದಾರವಹಿಗಳು ನೋಡೋದಕ್ಕ?.

  ಪ್ರತಿಕ್ರಿಯೆ
 5. Amar

  ಟಿ.ಎನ್.ಸೀತಾರಾಂ ಅವರು ಇಷ್ಟೊಂದು ತಲೆ ಕೆಡಿಸಿಕೊಂಡಿರುವುದು ನೋಡಿ ನಿಜಕ್ಕೂ ಆಶ್ಚರ್ಯವಾಯಿತು.
  ಸೀತಾರಾಂ ಸಾರ್ – ನೀವು ಮಾಡಿದ ಮಾಯಾಮೃಗ, ಕಾಲೇಜು ತರಂಗ, ಮನ್ವಂತರ ,ಮುಕ್ತ, ಮುಕ್ತ ಮುಕ್ತ ಮುಂತಾದ ಹಲವಾರು ಸೀರಿಯಲ್ಲುಗಳನ್ನು ನಾವು ಮನಸಾರೆ ಮೆಚ್ಚಿ ನೋಡಿ ಅದನ್ನು ಗೆಲ್ಲಿಸಿದ್ದೆವು.
  ಅದೇ ರೀತಿ ನಿಮ್ಮ ಮತದಾನ ಚಿತ್ರವನ್ನು ಮೆಚ್ಚಿದ್ದೆವು. ಅದಕ್ಕೆ ಹತ್ತು ಹಲವಾರು ಪ್ರಶಸ್ತಿಗಳೂ ಬಂದವು.
  ನೀವು ಇತ್ತೀಚಿಗೆ ಮಾಡಿದ ಮೀರ ಮಾಧವ ರಾಘವ ಚಿತ್ರವನ್ನ ನಾನು ಅದು ತಮ್ಮ ನಿರ್ದೇಶನ ಅನ್ನುವ ಒಂದೇ ಕಾರಣಕ್ಕೆ ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೆ. ಆದರೆ ದುರದೃಷ್ಟವಶಾತ್ ಅದು ಗಲ್ಲಾ ಪೆಟ್ಟಿಗೆಯಲ್ಲಿ ಸೋಲನುಭವಿಸಿತು. ಅಂದ್ರೆ ಯಾವುದು ಗೆಲ್ಲುವುದಕ್ಕೆ ಅರ್ಹವಾಗಿರುತ್ತದೋ ಅದನ್ನು ಪ್ರೇಕ್ಷಕ ಗೆಲ್ಲಿಸಿಯೇ ತೀರುತ್ತಾನೆ. ಕಳಪೆ ಸರಕನ್ನು ಸಹ ಸೋಲಿಸಿಯೇ ತೀರುತ್ತಾನೆ
  ಒಟ್ಟಾರೆಯಾಗಿ ಇದರಿಂದ ಅರ್ಥವಾಗೋದು ಏನು ಅಂದ್ರೆ, ಪ್ರೇಕ್ಷಕ ಮಹಾಪ್ರಭುವಿಗಿಂತ ಒಳ್ಳೆಯ ಜಡ್ಜ್ ಮತ್ತೊಬ್ಬನ್ನಿಲ್ಲ. ಒಳ್ಳೆಯ ಸರಕು ಅದು ಸ್ವಂತವಾದದ್ದು ಆದರು ಸರಿ, ರೀಮೇಕ್ ಆದರೂ ಸರಿ, ಡಬ್ಬ್ ಆದರೂ ಸರಿ ಜನ ಒಪ್ಪುತ್ತಾರೆ.
  ಒಂದು ಪಕ್ಷ ಕಾರ್ಯಕ್ರಮಗಳು ಕಳಪೆ ಆಗಿದ್ದು ಅದರ ಟಿ.ಆರ್.ಪಿ ಕೆಟ್ಟದಾಗಿದ್ದರೆ, ಆಯಾ ಚಾನಲ್ಲುಗಳೇ ಜಾಗ ಖಾಲಿ ಮಾಡಿ ಅಂತ ಹೇಳುತ್ತಾರೆ.
  ಆರು ಕೋಟಿ ಕನ್ನಡಿಗರ ಆಯ್ಕೆಯ ಸ್ವಾತಂತ್ರವನ್ನು ಕಸಿದುಕೊಳ್ಳುವಷ್ಟು ದೊಡ್ಡವರಲ್ಲ ನೀವು, ನಾನಂತು ಅಲ್ಲವೇ ಅಲ್ಲ.

  ಪ್ರತಿಕ್ರಿಯೆ
 6. AB

  ಸತ್ಯಮೇವ ಜಯತೇ ಡಬ್ಬಿಂಗ್‌ಗೆ ಪುನೀತ್ ತೀವ್ರ ವಿರೋಧ
  ಅಮೀರ್ ಖಾನ್ ಪ್ರಾಯೋಜಿಸಿ, ನಡೆಸಿಕೊಡುತ್ತಿರುವ ‘ಸತ್ಯಮೇವ ಜಯತೇ’ ಟಿವಿ ಟಾಕ್ ಶೋವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅವಕಾಶ ಮಾಡಿಕೊಡಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗುಡುಗಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
  ಕೆಲದಿನಗಳ ಹಿಂದೆ ಅಮೀರ್ ಖಾನ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸತ್ಯಮೇವ ಜಯತೇ ಕನ್ನಡ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಕೆಫಿಸಿಸಿ ಅಧ್ಯಕ್ಷರಾದ ಕೆವಿ ಚಂದ್ರಶೇಖರ್ ಅವರು ಮಂಡಳಿ ನಿಯಮಗಳಿಗೆ ವಿರುದ್ಧ ಎಂದು ಹೇಳಿ ಡಬ್ಬಿಂಗ್‌ಗೆ ನಕಾರ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
  ಆದರೆ ಸತ್ಯಮೇವ ಜಯತೇ ಕನ್ನಡ ಡಬ್ಬಿಂಗ್ ಆವೃತ್ತಿ ಅದು ಹೇಗೋ ಏನೋ ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್‍‌ಗೆ ಸೇರಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ ಡಬ್ಬಿಂಗ್ ವಿರುದ್ಧ ಗುಡುಗಿದ್ದಾರೆ.
  ತಮ್ಮ ಅಣ್ಣಾಬಾಂಡ್ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಕಾರಣ ಅವರು ಹುಬ್ಬಳ್ಳಿ, ಧಾರಾವಾಡ ಹಾಗೂ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಕಲಾವಿದನಿಗೆ ಪ್ರತಿ ಚಿತ್ರವೂ ಹೊಸ ಅನುಭವ ನೀಡುತ್ತದೆ. ಉತ್ತಮ ಚಿತ್ರಗಳನ್ನು ನೀಡಲು ಪ್ರಯತ್ನಿಸುತ್ತಾನೆ. ಒಪ್ಪುವುದು ಬಿಡುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ ಎಂದರು.

  ಪ್ರತಿಕ್ರಿಯೆ
 7. ಜೋಗಯ್ಯ

  ಡಬ್ಬಿಂಗ್ ಬೇಡ ಅನ್ನುವವರು ಬೇಕು ಅನ್ನುವವರ ಮೇಲೆ ಬೇಕು ಬೇಕಾದ ಆರೋಪ ಮಾಡುತ್ತಿದ್ದಾರೆ. ಅವರ ಮುಂದಿನ ಆರೋಪ ಹೀಗಿರಬಹುದೇ?
  >ಅವಧಿ ಬ್ಲಾಗ್ ನಡೆಸುವ ಮೋಹನ್ ಅವರು ಒಂದು ಚಾನೆಲ್ ನಡೆಸುತ್ತಾರೆ. ಅವರ ಚಾನೆಲ್ ನಡೆಸಲು ಡಬ್ ಆದ ಸರಕು ಬೇಕು. ಆದ್ದರಿಂದ ಅವಧಿಯಲ್ಲಿ ಡಬ್ಬಿಂಗ್ ಬೇಕು ಅನ್ನುವ ವಾದ ನಡೆಸುತ್ತಿದ್ದಾರೆ.<
  🙂
  -ಜೋಗಯ್ಯ

  ಪ್ರತಿಕ್ರಿಯೆ
  • Ravi

   Though irony it’s the fact…otherwise, why would Suvarna taking dubbing issue so seriously…becasue of Satya Meva Jayathe :)…why were they mum before?…It doesn’t look good to dub programs like KBC, otherwise, they would have raised the issue long back.

   ಪ್ರತಿಕ್ರಿಯೆ
   • ಜೋಗಿ ಜಂಗಮ

    ರವಿ, ಸುವರ್ಣ ಚಾನೆಲ್ ನವರು ಡಬ್ಬಿಂಗ್ ಬಗ್ಗೆ ಒಂದೆರಡು ಕಾರ್ಯಕ್ರಮ ನಡೆಸಿದ್ರು ಅಲ್ಲಿ ಬಂದ ಡಬ್ಬಿಂಗ್ ಪರವಾದವರಿಗೆ ಸರಿಯಾಗಿ ಯಾಕೆ ಡಬ್ಬಿಂಗ್ ಬೇಡ ಅನ್ನೊದಕ್ಕೆ ಉತ್ತರಿಸೋಕ್ಕೆ ಆಗಲಿಲ್ಲ ಬರಿ ಸುವರ್ಣ ಚಾನೆಲ್ ಅಲ್ಲ ಟಿವಿಯ ಕಾರ್ಯಕ್ರಮದಲ್ಲಿ ಡಬ್ಬಿಂಗ್ ಬೇಡ ಎನ್ನುವವರ ಬೇಳೆಕಾಳೇನು ಅನ್ನೊದು ಎಲ್ಲರಿಗೂ ಗೊತ್ತಾಗಿದೆ ಅದಕ್ಕೆ ಅದಕ್ಕೆ ಹೀಗೆ ಚಾನೆಲ್ ಗಳ ಹಿಂದೆ ಬಿದ್ದಿದ್ದಾರೆ.

    ಪ್ರತಿಕ್ರಿಯೆ
 8. Ravi

  ಬರಿ TRP ಮೇಲೆ ಕಾರ್ಯಕ್ರಮಗಳು ನಿರ್ಧಾರವಗೋಧು ಅಂದ್ರೆ, ಇವತ್ತು ಎಲ್ಲ ಟಿವಿ ಚಾನೆಲ್ ಗಳು ೩ ಗಂಟೆ ಗಿಂತ ಹೆಚ್ಚು ಪ್ರಸಾರ ಆಗಬಾರದು…ಒಳ್ಳೆ TRP ಇಲ್ಧೆ ಇರೋ ಎಷ್ಟೋ ಕಾರ್ಯಕ್ರಮಗಳು ವರ್ಷಗಳಿಂದ ಬರ್ತಾನೆ ಇದೆ…ಡಬ್ಬಿಂಗ್ ಬಂದ್ರು ಅಧೆ ಆಗೋದು…ನಾವು ಹಾಕಿಧಿವಿ, ನೋಡಿದ್ರೆ ನೋಡಿ, ಬಿಟ್ಟರೆ ಬಿಡಿ, ನಮಗೆ ಧಿನದ ೨೪ ಗಂಟೆ slot ಇದೆ, ನಾವು ಅದನ್ನು fill ಮಾಡಿದ್ರೆ ಸಾಕು ಅನ್ನೋ ಮನೋಭಾವ.

  ಪ್ರತಿಕ್ರಿಯೆ
 9. soori

  Dinesh avaree
  Do not make such a baseless and illogical comments,its who folks who are cooking lies and acting like anti social and anti kannada people.

  ಪ್ರತಿಕ್ರಿಯೆ
 10. Ananyakumar,

  ಪ್ರಿಯ ದಿನೇಶ್, ಅಭಿನಂದನೆಗಳು. ಒಮ್ಮೆ ಸುಮ್ಮನೆ ಕನ್ನಡ ಸಿನಿಮಾ ಹೆಸರುಗಳನ್ನ ಗಮನಿಸಿ, ಪಾಗಲ್, ವಿಲನ್,ಜಾನು, ಜಾಕಿ, ಹೀಗೆ ಹೆಸರಿಸಬಹುದು. ಒಂದು ಸಿನಿಮಾಕ್ಕೆ ಚಂದನೆಯ ಕನ್ನಡದ ಹೆಸರು ಕೊಡಲಾರದ ಈ ಕನ್ನಡ ಕಂಠೀರವ ಪುತ್ರರ ಕನ್ನಡದ ಅಭಿಮಾನವನ್ನು ನೋಡಿದರೆ, ಕನ್ನಡಿಗರು ಕಿವಿಗೆ ಹೂ ಮುಡಿಯುವ ಕುರಿಗಳು ಎಂದು ನಂಬಿದಂತಿದೆ.
  ಅದೆಲ್ಲಾ ಸರಿ, ಕನ್ನಡಕ್ಕೆ ಯಾವುದೇ ಡಬ್ಬಿಂಗ್ ಬರಬಾರದು ಎಂದು ಎನ್ನುವ ಪರ್ಮಾನು ಹೊರಡಿಸುವ ಅಧಿಕಾರವನ್ನು ಈ ನೆಲದಲ್ಲಿ ಯಾರೂ ಯಾರಿಗೂ ಕೊಟ್ಟಿಲ್ಲ. ಕೆಲವು ಕಲಾವಿದರು ಮಾತನಾಡುವ ರೀತಿಯನ್ನು ಗಮನಿಸಿದರೆ, ಕರ್ನಾಟಕವನ್ನು ಅದರ ಸಂಸ್ಕೃತಿಯನ್ನು ಕನ್ನಡ ಚಿತ್ರರಂಗಕ್ಕೆ ಗುತ್ತಿಗೆ ನೀಡಲಾಗಿದೆ ಎನ್ನುವಂತಿದೆ ಅವರ ಧೋರಣೆ.
  ಈಗ ನಾನು ಸೇರಿ ಕೆಲವರು ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಕನ್ನಡದ ಡಬ್ಬಿಂಗ್ ಸರಣಿಯನ್ನು ಅಂತರ್ಜಾಲದ ಮೂಲಕ ನೋಡುತಿದ್ದೇವೆ. ಇದನ್ನು ಯಾವ ದೊಣ್ಣೆ ನಾಯಕ ತಡೆಯಲಿ ಸಾಧ್ಯ?

  ಪ್ರತಿಕ್ರಿಯೆ
 11. ultimate

  Most of the pro dubbing folks lacks sensible and pro Kannada stances.God bless them well.

  ಪ್ರತಿಕ್ರಿಯೆ
 12. Rashi

  ಅನನ್ಯಕುಮಾರ್ ಅವರೇ, ನಿಮಗೆ ಜಾನು, ಜಾಕಿ, ಪಾಗಲ್ ಚಿತ್ರಗಳ ಹೆಸರು ಅಸಹ್ಯ ಎನಿಸಿಧರೆ, ದಮ್ಮು, ರಚ್ಚು, business man, bodyguard, Mr Nokia, Lovely ಅನ್ನೋ ಸಿನಿಮಾ ಗಳನ್ನೂ ನೋಡಿ ಕುಶಿ ಪಡಿ…ಏನು ಕನ್ನಡದಲ್ಲೇ ಮಾತ್ರಾನ ಇಂಥ ಸಿನಿಮಾ title ಬರೋಧು ? ಸತ್ಯ ಮೇವ ಜಯತೆ ಕಾರ್ಯಕ್ರಮನ ಅಂತರ್ಜಾಲದಲ್ಲೇ ನೋಡಿ ಕುಶಿ ಪಡಿ. ಸುವರ್ಣ ವಾಹಿನಿಯವರು ಬೇಕಾದರೆ ಕನ್ನಡ ನಟರನ್ನು ಹಾಕಿಕೊಂಡು ಅಧೆ ಮಾಧರಿಯ ಕಾರ್ಯಕ್ರಮ ಇಲ್ಲಿ ಕೊಡಲಿ…ಕನ್ನಡ ಕೊಟ್ಯಧಿಪಥಿಯ ಹಾಗೆ ಅದು ಆಗ ಇನ್ನು ಹೆಚ್ಚು ವೀಕ್ಷಕರಿಗೆ ತಲುಪುತ್ತೆ. ಇಲ್ಲಿ ಇರೋ ಕೆಲವರು ಸಿನಿಮಾ ಹಾಗು ದಾರಾವಹಿಯನ್ನೇ ಕನ್ನಡ ಸಂಸ್ಕೃತಿ ಅಂಧು ಕೊಂಡಿರೋ ಹಾಗಿಧೆ 🙂

  ಪ್ರತಿಕ್ರಿಯೆ
 13. pranav

  ??? ಪ್ರಿಯ ದಿನೇಶ್, ಅಭಿನಂದನೆಗಳು. ಒಮ್ಮೆ ಸುಮ್ಮನೆ ಕನ್ನಡ ಸಿನಿಮಾ ಹೆಸರುಗಳನ್ನ ಗಮನಿಸಿ, ಪಾಗಲ್, ವಿಲನ್,ಜಾನು, ಜಾಕಿ, ಹೀಗೆ ಹೆಸರಿಸಬಹುದು. ಒಂದು ಸಿನಿಮಾಕ್ಕೆ ಚಂದನೆಯ ಕನ್ನಡದ ಹೆಸರು ಕೊಡಲಾರದ ಈ ಕನ್ನಡ ಕಂಠೀರವ ಪುತ್ರರ ಕನ್ನಡದ ಅಭಿಮಾನವನ್ನು ನೋಡಿದರೆ, ಕನ್ನಡಿಗರು ಕಿವಿಗೆ ಹೂ ಮುಡಿಯುವ ಕುರಿಗಳು ಎಂದು ನಂಬಿದಂತಿದೆ.
  Here is hindi, telugu and tamil film titles. So beautiful:
  Gabbar Singh, dammu, dirty picture, Neeku Naaku Dash Dash, Ding Dong Bell, Mr. Nokia, Love Failure, rushi, Second Marriage Dot Com, Rowdy Rathore, Rakhtbeej. Wonderffull alva Mt Ananyakumar.

  ಪ್ರತಿಕ್ರಿಯೆ
 14. Priyank

  ಡಬ್ಬಿಂಗ್ ಬಂದರೆ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಎಂದು ಸುಧಾ ಪತ್ರಿಕೆಯ ರಘುನಾಥ್. ಚ. ಹ. ಅವರು ಹೇಳಿದ್ದರು.
  ಈ ವಾರದ ಸುಧಾ ಪತ್ರಿಕೆಯಲ್ಲಿ, ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಬಗ್ಗೆ ಮುಖಪುಟದ ಅಂಕಣ ಹೊರತಂದಿದ್ದಾರೆ.
  ಕನ್ನಡ ನಾಡಲ್ಲಿ ಬಾಲಿವುಡ್ ಪೋಷಣೆ ಮಾಡಿದರೆ,
  – ಕನ್ನಡ ಸಂಸ್ಕೃತಿ ಉಳಿಯುತ್ತದೆಯೇ?
  – ಕನ್ನಡ ಸಿನೆಮಾ ಕಾರ್ಮಿಕರಿಗೆ ಕೆಲಸ ಸಿಗುತ್ತದೆಯೇ?
  – ಕನ್ನಡಿಗರು ಹೆಚ್ಚು ಹೆಚ್ಚು ಹಿಂದಿ ಸಿನೆಮಾ ನೋಡುವುದು ಕನ್ನಡ ಪರವೇ?
  ಇನ್ನು, ಹಾಲಿವುಡ್ಡಿನಿಂದ ಸನ್ನಿ ಲಿಯೋನ್ ಕನ್ನಡದಲ್ಲಿ ನಟಿಸಲು ಬರ್ತಿದಾರೆಂಬ ಸುದ್ದಿ ಇದೆ.
  – ಕನ್ನಡ ನಟಿಯರಿಗೆ ಕೆಲಸ ಹೋಗುವುದಿಲ್ಲವೇ?
  – ಸನ್ನಿ ಲಿಯೋನ್ ಅವರಂತಹ ನಟಿಯರು ಇಟಂ ಹಾಡುಗಳಿಗೆ ಕುಣಿಯುವ ಮೂಲಕ, ಕನ್ನಡ ಸಂಸ್ಕೃತಿ ರಕ್ಷಣೆ ಆಗುತ್ತದೆಯೇ?
  ಇನ್ನು, ಪಾಕಿಸ್ತಾನದ ವೀಣಾ ಮಲಿಕ್ ಅವರೂ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಇದರಿಂದ, ಕನ್ನಡ ನಟಿಯರಿಗೆ ಕೆಲಸ ಹೋಗುವುದಿಲ್ಲವೇ?

  ಪ್ರತಿಕ್ರಿಯೆ
  • ravi

   ಪ್ರಿಯಾಂಕ್ ಅವರೇ, ಕನ್ನಡದಲ್ಲಿ ಇರುವ ನಟಿ ಮಣಿಯರು ಮೂರು , ಮತ್ತೊಬ್ಬರು…ನಟಿಯರನ್ನು ಅಮಧು ಮಾಡಿ ಕೊಳ್ಳಧ ಚಿತ್ರರಂಗವೇ ಇಲ್ಲ…ವರ್ಷಕ್ಕೆ ೧೨೦-೧೩೦ ಚಿತ್ರ ತಯಾರಾಗುತ್ತೆ, ಅಲ್ಲಿಗೆ ನಮಗೆ ೩೦-೪೦ ಕನ್ನಡ ನಟಿಯರು ಬೆಕಗ್ತಾರೆ. ಯಾರದ್ರು ಇದ್ರೆ ತಿಳಿಸಿ…ಒಬ್ಬಳು ವೀಣಾ ಮಲಿಕ್, ಸನ್ನಿ ಲೆಯನ್ಗೆ ಇಲ್ಲಿ ಕೆಲಸ ಸಿಗಬಹುದು, ಆಧರೆ ಅಧರ ಹಿಂದೆ ನೂರಾರು ಸ್ಥಳೀಯ ಕಾರ್ಮಿಕರು ಇರ್ತಾರೆ. ಡಬ್ಬಿಂಗ್ ಮಾಡೋದ್ರಿಂದ ಅಥವಾ ಮಾಡಧೆ ಇರೋದ್ರಿಂದ ಕನ್ನಡ ಸಂಸ್ಕೃತಿ ಉಳಿಯುತ್ತೆ ಅನ್ನೋಧೆ ಬೊಗಳೆ…ಅದು ಪ್ರೇಂ ಅಧ್ರು ಹೇಳಲಿ, ಶಿವಣ್ಣ ಅಧ್ರು ಹೇಳಲಿ. ಸಿನೆಮಾದಿಂದ ಸಂಸ್ಕೃತಿ ಉಳಿಯೋಧು ಅಣ್ಣಾವ್ರ ಕಾಲಕ್ಕೆ ಕೊನೆ.

   ಪ್ರತಿಕ್ರಿಯೆ
   • har.sri.ga

    kannada chitra dalli act madake kannada hudugari ge ready illa.. 😀
    adake bashe gotu ilade irorana karedu kondu bandu , chikka chikka batte hakisi ; navu kuda ondu cinema madidvi antha heli kolla jana..

    ಪ್ರತಿಕ್ರಿಯೆ
  • ಜೋಗಿ ಜಂಗಮ

   ಪ್ರಿಯಾಂಕ್ ರವರೆ, ಇವರ ಬೇಳೇಕಾಳೇನು ಅನ್ನೊದು ಇದರಿಂದಲೇ ಗೊತ್ತಾಗುತ್ತೆ. ಇವರು ಏನ್ ಮಾಡಿದ್ರು ಸರಿ… ಅದನ್ನು ಕನ್ನಡಿಗರು ಬಾಯಿ ಮುಚ್ಚಿಕೊಂಡು ನೋಡಬೇಕು ಎಲ್ಲ ಅಂದ್ರೆ ಇಲ್ಲಾ ಅನ್ನಿಸಿಬಿಡ್ತಾರೆ 🙂

   ಪ್ರತಿಕ್ರಿಯೆ
 15. anoopa

  The beliefs and opinions expressed by the dubbing wanted people are too immatured and kiddish which doesnt reflect them as a educated and professional.Feel pity about them.

  ಪ್ರತಿಕ್ರಿಯೆ
 16. ಜೋಗಯ್ಯ

  ರವಿ ಭಿಕ್ಷೆ ಬೇಡಿದ್ದು ಸಾಕು.. ಇಷ್ಟ ಇಲ್ಲ ಅಂದ್ರೆ ಡಬ್ಬಿಂಗ್ ನೋಡಬೇಡಪ್ಪ. ನಾವು ನೋಡ್ತಿವಿ ಅಂದ್ರೆ ಹೊಟ್ಟೆಕಿಚ್ಚು ಪಡಬೇಡ ಕಂದ. ಒಳ್ಳೆ ಕವನ ಬರಿತಿಯಾ.. ಇನ್ನು ಚೆನ್ನಾಗಿ ಬರಿ,, ಒಳ್ಳೆ ಭವಿಷ್ಯ ಇದೆ. ಸುಮ್ನೆ ಈ ಸ್ವಹಿತಾಸಕ್ತಿಗೆ ಕನ್ನಡ ಅನ್ನೋ ಚಿತ್ರರಂಗದ ಕೆಲವರನ್ನು ನಂಬಿಕೊಂಡು ಮೋಸ ಹೋಗಬೇಡ ಕಂದ.

  ಪ್ರತಿಕ್ರಿಯೆ
  • ravi

   ಬಿಕ್ಷೆ ಬೇಡ್ತ್ಹಿರೋಧು ಯಾರು ಅಂತ ನಿಮಗೂ ಗೊತ್ತು…ಡಬ್ಬಿಂಗ್ ಬೇಕು ಅನ್ನೋ ನೆಪದಲ್ಲಿ ಕನ್ನಡ ಚಿತ್ರರಂಗವನ್ನೇ ಮೂರು ಕಾಸಿಗೆ ಹರಾಜು ಹಾಕೋ ಮಾನ ಗೆಡಿಗಳು ಕೆಲವರು…ನಾವೇನು ಕನ್ನಡ ಚಿತ್ರರಂಗ ಕೇವಲ ಒಳ್ಳೆ ಸಿನಿಮಾ ಕೊಡುತ್ತೆ ಅಂತ ಹೇಳ್ತಿಲ್ಲ…ಇಲ್ಲಿ ತರ ಎಲ್ಲ ಕಡೆ ಕಳಪೆ ಚಿತ್ರಗಳೇ ಜಾಸ್ತಿ…ನಮ್ಮಲ್ಲಿ ಮಲ್ಲಿಕಾ ಶೆರಾವತ್ ನ ಒಂದು ಸಾಂಗ್ ನಲ್ಲಿ ತೋರ್ಸಿದ್ರೆ, ಬೇರೆ ಕಡೆ ಅವಳ ಅನ್ಗಂಗವನ್ನು ಪ್ರೇಕ್ಷಕರಿಗೆ ದಾರೆ ಏರಿತಾರೆ ಸಿನಿಮಾ ಪೂರ್ತಿ. ಡಬ್ಬಿಂಗ್ ಇಂದ ನಮ್ಮ ಸಂಸ್ಕೃತಿ ಹಾಳಾಗುತ್ತೆ ಅನ್ನೋದು ಹೇಗೆ ಮುಟ್ಟಲತನವೋ, ಹಾಗೆ ಡಬ್ಬಿಂಗ್ ಇಂದ ನಮಗೆ ಒಳ್ಳೆ ಸಿನಿಮಾ, ಕಾರ್ಯಕ್ರಮ ಸಿಗುತ್ತೆ ಅನ್ನೋಧು ಕೂಡ ಮುಟ್ಟಳತನ. ಪುಡಿ ಗಾಸಿನ ಮನರಂಜನೆಗೆ ಕನ್ನಡ, ಕನ್ನಡಿಗ, ಕನ್ನಡ ತನವನ್ನು ಹಿಯಾಳಿಸದಿರು ಕಂಧ…ಕನ್ನಡದ ಜೊತೆ ಕನ್ನಡಿಗರು ಕೂಡ ಬೆಳೆಯಲಿ. ಹಿಂದಿ, ತಮಿಳ್, ತೆಲುಗು ಸಿನೆಮಾಗಳ ಮೂಲ ಬಾಷೆಯ ಜೊತೆಗೆ, ಕನ್ನಡಕ್ಕೂ ಡಬ್ ಆಗಿ ಬಂದರೆ, ನಮ್ಮ ಸಣ್ಣ ಪುಟ್ಟ ಸಿನಿಮಾಗಳು ಉಳಿಯೋದು ಕಷ್ಟ…ದೊಡ್ಡ ನಟರ ಸಿನಿಮಾಗಳು ಹೇಗೋ ಗೆಲ್ಲುತ್ತೆ. ಡಬ್ ಬಂದರೆ ಅದರ ಮೂಲ ಬಾಷೆಯ ಸಿನಿಮಾ ಬರೋದಿಲ್ಲ ಅಂದ್ರೆ ಡಬ್ಬಿಂಗ್ ಗೆ ನನ್ನ ಫುಲ್ ಸಪೋರ್ಟ್.

   ಪ್ರತಿಕ್ರಿಯೆ
 17. ಪ್ರವೀಣ್

  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ಕನ್ನಡದ ಸಿನಿಮಾ ರಂಗದೋರಿಗೆ,
  ಮನರಂಜನೆ ಕೊಡೊ ಯೋಗ್ಯತೆ ಇಲ್ಲ ,
  ಕನ್ನಡ ಕಲಾವಿದರಾದ ನಾವು ಭಿಕ್ಷುಕರಾದೇವು
  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ಸುದೀಪು, ಉಪ್ಪಿ, ದರ್ಶನ್ ವೇಸ್ಟು
  ಬರಿ ರೀಮೇಕು ಮಾಡೊ ಕಳ್ಳರು
  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ಕನ್ನಡ ನಿರ್ಮಾಪಕರ ಚೇಲ ನಾನು
  ಬೇರೆ ಭಾಷೆ ನಟರು ಬಂದ್ರೆ ನನ್ ಗತಿ?
  ಅಮ್ಮ – ತಾಯಿ ಡಬ್ಬಿಂಗ್ ಬೇಕು
  ಕನ್ನಡ ಪ್ರೇಕ್ಷಕರು ಹಾಳಾಗ್ ಹೋಗ್ಲಿ
  ಕನ್ನಡ ಉದ್ದಾರ ಆಗೋದು ಬೇಡ ಡಬ್ಬಿಂಗ್ ಬೇಡ
  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ನಮ್ಮ ಮಕ್ಳು ಇಂಗ್ಲಿಷ್ ಓದ್ಲಿ
  ನಾನು ಮನರಂಜನೆ ಎಲ್ಲಾ ಭಾಷೆಲು ತಗೋತೀನಿ
  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ಇದು ಕಲೆ ಇಲ್ಲದ ರಂಗ, ನಾವು ಇದರ ಚೇಲ
  ನನಗೆ ಚೇಳ ನಾಗಲು ಸಹಕರಿಸಿದ ನಿರ್ಮಾಪಕರು ಬೀದಿಗೆ ಬೀಳ್ತಾರೆ,
  ಡಬ್ಬಿಂಗ್ ಮಾತ್ರ ಬಂದ್ರೆ ನಾನು ಭಿಕಾರಿ
  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ಕನ್ನಡ – ಕನ್ನಡಿಗರು ಹೇ ಸುಮಾರು
  ತಮಿಳು, ತೆಲುಗು, ಹಿಂದಿ ಸೂಪರ್ರು
  ಉಪ್ಪಿ ಸುದೀಪ್ ಮಾಡಲಿ ರಿಮೇಕು,
  ಕರೆಸೋಣ ಬ್ಲೂ ಸಿನಿಮಾ ಹೀರೋಯಿನ್
  ಅಮ್ಮ – ತಾಯಿ ಡಬ್ಬಿಂಗ್ ಬೇಡ
  ನಾವು ನಿರ್ಮಾಪಕರ ಚೇಲ,
  ಮನರಂಜನೆಯ ಕೊಡಲಾಗದ ಮುಠ್ಠಾಳ,
  ಡಬ್ಬಿಂಗ್ ಬಂದ್ರೆ ನಮ್ಮನ್ನು ರಕ್ಷಿಸೋರು ಯಾರು,
  ದುಡ್ ಇಲ್ಲದೆ ಜನ್ಮ ಯಾಕಿನ್ನು?
  ಆಮ್ಮಾಅಅಅಅ – ತಾಯಿಯಿಯಿಯಿ ಡಬ್ಬಿಂಗ್ ಬೇಡ
  ಬಟ್ಟೆ ಇಲ್ಲದ ಮಾಡಲ್ ಬೇಕು ಅಮ್ಮ ತಾಯಿ ಬಟ್ಟೆ ಇಲ್ಲದ ಮಾಡಲ್ ಬೇಕು
  ಡಬ್ಬಿಂಗ್ ಬೇಡ

  ಪ್ರತಿಕ್ರಿಯೆ
  • ravi

   ಪ್ರವೀಣ್, ಒಳ್ಳೆ ಪ್ರಯತ್ನ…Thanks for getting inspired 🙂

   ಪ್ರತಿಕ್ರಿಯೆ
 18. ಜೋಗಿ ಜಂಗಮ

  ನಾನು ಏನನ್ನು ನೋಡಬೇಕು ಎಂಬುದನ್ನು ನಿರ್ಧರಿಸುವ ಸಾಂಸ್ಕೃತಿಕ ಯಜಮಾನಿಕೆಯನ್ನು ಶಿವರಾಜಕುಮಾರ್ ಅವರಿಗಾಗಲಿ, ಟಿ.ಎನ್.ಸೀತಾರಾಂ ಅವರಿಗಾಗಲೀ, ಬಿ.ಸುರೇಶ ಅವರಿಗಾಗಲಿ, ಮತ್ಯಾರಿಗಾಗಲೀ ನಾನು ನೀಡಿಲ್ಲ. ಅಂಥ ಸಾಂಸ್ಕೃತಿಕ-ಸಾಮಾಜಿಕ ಹೊಣೆಗಾರಿಕೆಯನ್ನು ಸುಖಾಸುಮ್ಮನೆ ನಿಮ್ಮಗಳ ಹೆಗಲ ಮೇಲೆ ಯಾಕೆ ಹೊತ್ತುಕೊಂಡು ಓಡಾಡುತ್ತೀರಿ? — ಸರಿಯಾದ ಮಾತು. ಆದರೆ ನೀವು ಒಂದು ಗಮನಿಸಿರಬೇಕು ಡಬ್ಬಿಂಗ್ ಬೇಕು ಎನ್ನುವವರನ್ನು ಇಲ್ಲಾ ಅನ್ನಿಸುವರು ಡಬ್ಬಿಂಗ್ ಅಂದಾಕ್ಷಣ ಓಡಿ ಬಂದು ಸಾಂಸ್ಕ್ರುತಿಕ ಯಜಮಾನಿಕೆಯನ್ನು ಹೊತ್ತುಕೊಳ್ಳುತ್ತಿರುವುದನ್ನು ನೊಡಿದ್ರೆ ನಗು ಬರ್ತಿದೆ. ಅವರು ಹೊತ್ತಿರುವ ಹೊರೆಯನ್ನು ಯಾರಾದ್ರು ಕೆಳಗೆ ಇಳಿಸಿದರೆ ಕನ್ನಡಿಗರು ನಿಟ್ಟುಸಿರು ಬಿಡಬಹುದು.

  ಪ್ರತಿಕ್ರಿಯೆ
 19. ಪ್ರವೀಣ್

  ಕನ್ನಡದಲ್ಲಿ ಇರುವ ನಟಿ ಮಣಿಯರು ಮೂರು , ಮತ್ತೊಬ್ಬರು….. ತೂ ಏನಾಗಿದೆ ಈ ಜನಕ್ಕೆ. ಯಾಕ್ರಿ ಕನ್ನಡದ ಹೆಣ್ಣು ಮಕ್ಕಳಲ್ಲಿ ಕಲೆ ಇಲ್ವ? ಹೊಸಬರಿಗೆ ಅವಕಾಶ ಕೊಟ್ರೆ ರಾಧಿಕ ಪಂಡಿತ್, ಪೂರ್ಣಚ್ಚ ಅಂತೋರು ಬರಲ್ವ? ಬಟ್ಟೆ ಬಿಚ್ಚೊ ಮಲ್ಲಿಕಗಳೆ ಬೇಕ ನಿಮ್ಗೆ? ಇದಕ್ಕಿಂತ ಡಬ್ಬಿಂಗ್ ವಾಸಿ

  ಪ್ರತಿಕ್ರಿಯೆ
  • ravi

   ಹೊಸಬರಿಗೆ ಅವಕಾಶ ಕೊಡೋಲ್ಲ ಅಂತ ಯಾರದ್ರು ಹೇಳಿಧರ ? ಇವರು ಕೂಡ ಅವಕಾಶ ಕೊಟ್ಟಿದಕ್ಕೆ ಅಲ್ವೇ ಮಿಂಚ್ತಿರೋಧು nh

   ಪ್ರತಿಕ್ರಿಯೆ
 20. ವಿಶ್ವಾಸ್

  ಡಬ್ಬಿಂಗ್ ಬೇಡ ಅನ್ನೊ ಎಲ್ಲಾ ಕಲಾಭಿಮಾನಿ ಅಲ್ಲದ ಕಲಾವಿದರೆ, ನಿಮ್ಮಲ್ಲಿ ಒಂದು ನೇರ ಪ್ರಶ್ನೆ… ಸಂಸ್ಕೃತಿ ಅಂತ ಬೊಬ್ಬೆಹಾಕೊರು ಯಾವ ಸಂಸ್ಕೃತಿ ಉಳಿಸೊ ಸಿನಿಮಾಗಳನ್ನ ನೀವು ಕನ್ನಡಿಗರಿಗೆ ಕೊಡ್ತಾ ಇದಿರ ಹೇಳಿ? ಇಂದು 100ಕ್ಕೆ 90 ಸಿನಿಮಾ ನೀವು ಹೇಳೊ ಪ್ರಕಾರ ನಮ್ ಸಂಸ್ಕೃತಿಯ ಲಕ್ಷಣನ? ಹಂಗು ಇವತ್ತು ನ್ನಡದ ನಿಜವಾದ ಸಂಸ್ಕೃತಿಯನ್ನ ಬಿಂಬಿಸೊ ಗುಲಾಭಿ ಟಾಕೀಸ್, ಬೆಟ್ಟದ ಜೀವ, (ಇನ್ನು ಸುಮಾರು) ಜನಕ್ಕೆ ತಲುಪಿಸೊ ಕೆಲಸ ಯಾಕೆ ಮಾಡೊದಿಲ್ಲ ನೀವುಗಳು? ಪೋಸ್ಟರ್ ತುಂಬ ರಕ್ತ, ಅಶ್ಲೀಲ (ನಮ್ ಅಂತ ಜನರ ಪ್ರಕಾರ) ಇರೊ ಸಿನಿಮಾದ ಪ್ರಚಾರಕ್ಕೆ ಸಾಥ್ ಕೊಡೊ ಸ್ಟಾರ್ ಗಳು ಇಂತ ಸದಾಭಿರುಚಿ ಸಿನಿಮಾಗಳಿಗೆ ಯಾಕ್ ಪ್ರೋಮೋಟ್ ಮಾಡೋಕೆ ಸಹಕರಿಸೊಲ್ಲ?

  ಪ್ರತಿಕ್ರಿಯೆ
 21. ಜೋಗಿ ಜಂಗಮ

  ನಾವು ತಿರುಗಿ ಬಿದ್ದರೆ ಡಬ್ಬಿಂಗ್ ಬೇಕು ಅನ್ನೋರೆಲ್ಲ ಇಲ್ಲದಂತಾಗುತ್ತಾರೆ ಎಂದು ಶಿವರಾಜ ಕುಮಾರ್ ಅಂಥವರು ಬಹಿರಂಗವಾಗೇ ಬೆದರಿಕೆ ಒಡ್ಡುತ್ತಾರೆ. ನನ್ನ ಇಷ್ಟದನ್ನು ನಾನು ಬೇಕು ಅಂದರೆ ನಮ್ಮನ್ನು ಮುಗಿಸಿಯಾದರೂ ಅದನ್ನು ತಡೆಯುತ್ತೇವೆ ಎನ್ನುವವರಿಗೆ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಂದು ಕರೆಯಬಹುದು? ಸಿಂಪಲ್ ಆಗಿ ಗೂಡಾಗಿರಿ ಎನ್ನಬಹುದು.

  ಪ್ರತಿಕ್ರಿಯೆ
 22. K. S. Rajaji

  ನಾನು ಡಬ್ಬಿಂಗ್ ಬಂದರೆ ಬರಲಿ ಅನ್ನುತ್ತಿದ್ದೆ. ಆದರೆ ಈ ಬನವಾಸಿ ಬಳಗದವರು ಅದಕ್ಕಾಗಿ ಪಟ್ಟುಹಿಡಿದಿರುವುದನ್ನು ನೋಡಿದರೆ, ಇಡೀ ಒತ್ತಾಯದ ಹಿಂದೆ ಪಿತೂರಿಯೊಂದು ಇದ್ದಂತಿದೆ. ಅದನ್ನೊಂದು ಹೋರಾಟ ಮಾಡಿಯಾದರೂ ಪಡಕೊಳ್ಳುವ ಆತುರ, ಅವರ ಸಿಟ್ಟು ಸೆಡವು ಮತ್ತು ಹಿರಿಯರಿಗೆ ತೋರುವ ಅಗೌರವದ ಹಿಂದೆ ಲಾಭದಾಯಕ ಅಂಶಗಳನ್ನು ಮನಗಾಣುತ್ತಿದ್ದೇನೆ. ಡಬ್ಬಿಂಗು ಬೇಡವೆಂದು ಈಗ ಅನ್ನಿಸುತ್ತಿದೆ.

  ಪ್ರತಿಕ್ರಿಯೆ
 23. Rashi

  ಅಮೀರ್‌ಖಾನ್ ಬುರುಡೆ ಪುರಾಣ
  ಆಸಿಡ್ ದಾಳಿಯಿಂದ ಶೇ ಅರವತ್ತರಷ್ಟು ಸುಟ್ಟು ಹೋದ ಮುಖ ಹೊತ್ತ ಜಯಲಕ್ಷ್ಮಿ ಮತ್ತು ಸಯ್ಯದ್ ರಹತ್ತುನ್ನೀಸಾ ಅವರ ಕರುಣಾಜನಕ ಕತೆ, ದಕ್ಷಿಣ ಭಾರತ ಮೂಲದ ರಾಷ್ಟ್ರೀಯ ವಾರಪತ್ರಿಕೆಯೊಂದರಲ್ಲಿ ಮುಖಪುಟದ ಲೇಖನವಾಗಿ ಪ್ರಕಟವಾಗಿತ್ತು. ಗಂಡನಿಂದಲೇ ಆಸಿಡ್ ದಾಳಿಗೆ ಒಳಗಾಗಿ ಅರವತ್ತು ಸೆಕೆಂಡುಗಳಲ್ಲಿ ವಿಕಾರವಾಗಿ ಪರಿವರ್ತನೆಯಾದ ಕತೆಯನ್ನು, ಆ ಗಳಿಗೆಯ ಯಾತನೆಯನ್ನು ದಾಳಿಗೆ ತುತ್ತಾದವರೇ ಖುದ್ದು ವರದಿಗಾರನ ಮುಂದೆ ನಿವೇದಿಸಿದ್ದರು.
  ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಉಳಿದುಕೊಂಡಿರುವ ಭಾರತೀಯರು ಅನುಭವಿಸುತ್ತಿರುವ ವೇದನೆ, ಅಲ್ಲಿನ ಯುವತಿಯರು ಅಪಹರಣಕ್ಕೊಳಗಾಗಿ, ಅತ್ಯಾಚಾರಕ್ಕೊಳಗಾಗಿ, ಬಲವಂತ ಮತಾಂತರಕ್ಕೊಳಗಾಗುತ್ತಿರುವ ಚಿತ್ರಣವನ್ನು ದೆಹಲಿಯಿಂದ ಪ್ರಕಟವಾಗುವ ಮತ್ತೊಂದು ವಾರಪತ್ರಿಕೆ ಕವರ್ ಸ್ಟೋರಿ ರೂಪದಲ್ಲಿ ನೀಡಿತು.
  ರಿಂಕಲ್‌ಕುಮಾರಿ ಎಂಬ ಯುವತಿಯನ್ನು ಅಪಹರಿಸಿ, ನವೀದ್ ಶಾ ಎಂಬ ಯುವಕ ಬಲವಂತವಾಗಿ ಮದುವೆಯಾದ ಕತೆ, ರಿಂಕಲ್‌ಗೆ ಮದುವೆ ಇಷ್ಟವಿಲ್ಲದಿದ್ದರೂ, ಪಾಕ್ ಗೂಂಡಾಗಳ, ಅಲ್ಲಿನ ಸಂಸದನ ಬೆದರಿಕೆಯಿಂದ, ನ್ಯಾಯಾಲಯದಲ್ಲಿ ಆಕೆಗೆ ನಿಜ ಹೇಳಲು ಆಗಲೇ ಇಲ್ಲ. ಆಕೆಯ ಅಜ್ಜನನ್ನು ಗುಂಡಿಟ್ಟು ಕೊಲ್ಲಲಾಯಿತು. ಬಲವಂತ ಮತಾಂತರ ವಿಷಯ ಹೇಳಿದರೆ ಇಡೀ ಕುಟುಂಬವನ್ನು ಹೀಗೆಯೇ ಮುಗಿಸುವುದಾಗಿ ಬೆದರಿಕೆ ಒಡ್ಡಿ ರಿಂಕಲ್ ಬಾಯಿ ಮುಚ್ಚಿಸಲಾಯಿತು. ಸಿಂದ್ ಪ್ರಾಂತ್ಯದ ನೂರಾರು ಭಾರತೀಯ ಕುಟುಂಬದ ಮಹಿಳೆಯರ ಮೌನರೋದನವನ್ನು ಈ ಸಂದರ್ಶನ ಮನಕರಗುವಂತೆ ಚಿತ್ರ ಸಹಿತ ವಿವರಿಸಿತ್ತು.
  ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಂಗತಿ, ಹೆಬ್ಬಾಳ ಕೆರೆಯ ಬಳಿ ಹೆಣ್ಣು ಶಿಶು ಭ್ರೂಣಗಳ ರಾಶಿ ಬಿದ್ದಿದ್ದುದು ಎಲ್ಲವೂ ನಮ್ಮ `ಪ್ರಜಾವಾಣಿ` ಸೇರಿದಂತೆ ಎಲ್ಲ ಪತ್ರಿಕೆಗಳಲ್ಲೂ ಬಂದಿವೆ. ವೃತ್ತ ಪತ್ರಿಕೆಗಳು, ವಾರ ಪತ್ರಿಕೆಗಳು ಇಂತಹ ಮಾನವೀಯ ವರದಿಗಳನ್ನು ಸದಾ ಪ್ರಕಟಿಸುತ್ತಲೇ ಬಂದಿವೆ.
  ಮೂರು ವಾರಗಳಿಂದ ಚಿತ್ರ ನಟ ಅಮೀರ್‌ಖಾನ್, ಸ್ಟಾರ್ ಟಿವಿಯ ಏಳು ಚಾನಲ್‌ಗಳು ಹಾಗೂ ದೂರದರ್ಶನದ್ಲ್ಲಲಿ ನೀಡುತ್ತಿರುವ ರಿಯಾಲಿಟಿ ಶೋ ಮಾಡುತ್ತಿರುವುದು ಏನು? ಮುದ್ರಣ ಮಾಧ್ಯಮಗಳು ಮಾಡುತ್ತಿರುವ ಕೆಲಸವನ್ನು, ಅಮೀರ್‌ಖಾನ್ ದೃಶ್ಯ ಮಾಧ್ಯಮದ ಮೂಲಕ ಮಾಡುತ್ತಿದ್ದಾರೆ. ಇದನ್ನು ವೈಭವೀಕರಿಸುತ್ತಿರುವ ವ್ಯವಸ್ಥಿತ ರೀತಿಯನ್ನು ಗಮನಿಸಿದರೆ ನನಗೆ ಜನಮರುಳೋ ಜಾತ್ರೆ ಮರುಳೋ ಎನಿಸುತ್ತಿದೆ.
  ತಾನು ನಡೆಸುತ್ತಿರುವ ಈ ಧಾರಾವಾಹಿಯನ್ನು ಅತ್ಯಂತ ಜನಪ್ರಿಯಗೊಳಿಸಬೇಕು. ಚಾನಲ್‌ನ ಟಿಆರ್‌ಪಿ ರೇಟನ್ನು ಆ ಮೂಲಕ ಅತಿ ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಏಕಮೇವ ಉದ್ದೇಶ `ಸತ್ಯಮೇವ ಜಯತೇ` ಹಿಂದೆ ರಹಸ್ಯವಾಗಿ ಅಡಗಿ ಕೂತಿರುವಂತೆ ಕಾಣಿಸುತ್ತಿದೆ. ಸ್ಟಾರ್ ಮಹಿಮೆ ಹಾಗೂ ಅಮೀರ್‌ಖಾನ್ ಜನಪ್ರಿಯತೆಯಿಂದಾಗಿ ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕಂಪೆನಿಗಳಿಂದ ಪ್ರಾಯೋಜಕತ್ವ ದೊರಕಿದ್ದು ಅದರ ಮೊತ್ತವೇ ಆರು ನೂರು ಕೋಟಿ ರೂಪಾಯಿಗಳನ್ನು ದಾಟಿದೆಯಂತೆ.
  ಸತ್ಯಮೇವ ಜಯತೆ ಹೀಗೆ, ಸಾಮಾಜಿಕ ಬದ್ಧತೆ ಹೊಂದಿರುವ ವೃತ್ತ ಪತ್ರಿಕೆಯೊಂದು ಮಾಡುವ ಕೆಲಸವನ್ನು ದೃಶ್ಯ ಮಾಧ್ಯಮದಲ್ಲಿ ಮತ್ತಷ್ಟು ವಿಸ್ತೃತವಾಗಿ, ಅಚ್ಚುಕಟ್ಟಾಗಿ ಮಾಡುತ್ತಿದೆ. ಜ್ವಲಂತ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಮೀರ್‌ಖಾನ್ ಅದನ್ನು ಪ್ರಸ್ತುತ ಪಡಿಸುತ್ತಿರುವ ರೀತಿ, ಆತ್ಮೀಯವಾಗಿ ಜನರೊಂದಿಗೆ ಬೆರೆಯುತ್ತಿರುವುದು, ಸರಳ ಭಾಷೆ ಎಲ್ಲವೂ ಈ ಕಾರ್ಯಕ್ರಮವನ್ನು ಆಪ್ಯಾಯಮಾನವನ್ನಾಗಿಸಿದೆ.
  ಈಗಾಗಲೇ ಬಿತ್ತರಗೊಂಡಿರುವ ಮೂರು ವಿಷಯಗಳು ಮಹಿಳೆಯರ ಸಮಸ್ಯೆಗಳೇ. ಹೆಣ್ಣು ಭ್ರೂಣ ಹತ್ಯೆಯ ಜಟಿಲತೆಯನ್ನು ಮೊದಲ ಕಂತಿನಲ್ಲಿ ಚರ್ಚಿಸಿದ ಅಮೀರ್‌ಖಾನ್, ನಂತರ ಬಾಲಕಿಯರ ಲೈಂಗಿಕ ಶೋಷಣೆ, ವರದಕ್ಷಿಣೆಗಾಗಿ ಕಿರುಕುಳ ಸಮಸ್ಯೆಗಳನ್ನು ತೆಗೆದುಕೊಂಡು ಚರ್ಚಿಸಿದ್ದಾರೆ.
  ಇದು ಮನೆ ಮನೆ ಕಥೆ. ರಾಜಸ್ತಾನದ ಇಬ್ಬರು ಪತ್ರಕರ್ತರು ಮಾರುವೇಷದ ಕಾರ್ಯಾಚರಣೆ ಮಾಡಿ, ಹೆಣ್ಣು ಭ್ರೂಣ ಪತ್ತೆ ಹಚ್ಚಿ ಅದನ್ನು ತೆಗೆದು ಹಾಕುವ ದಂಧೆಯಲ್ಲಿರುವುದನ್ನು ಚಿತ್ರಿಸಿಕೊಂಡಿದ್ದವರು. ಸಹರಾ ಸಮಯ್ ಚಾನಲ್‌ನಲ್ಲಿ ಈ ವರದಿ ಪ್ರಸಾರಗೊಂಡು ಕೋಲಾಹಲವಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಅಮೀರ್‌ಖಾನ್ ಅಹಮದಾಬಾದಿನ ಮಹಿಳೆಯೊಬ್ಬರ ಸಂದರ್ಶನ ಮಾಡಿದರು.
  ಮಧ್ಯಪ್ರದೇಶದ ಪರ್ವಿನ್‌ಳ ದುಃಖದ ಕತೆಯನ್ನು ಜನರ ಮುಂದೆ ಹೇಳಿಸಿದರು. ಹೆಣ್ಣು ಮಗು ಎಂದ ಕೂಡಲೇ ಗಂಡನೂ, ಗಂಡನ ಮನೆಯವರೂ ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ್ದನ್ನು, ಗಂಡ ಪತ್ನಿಯನ್ನೇ ಬಿಟ್ಟು ಹೋದದ್ದು, ಆನಂತರ ಜೀವನದಲ್ಲಿ ತಾವು ಪಟ್ಟ ಕಷ್ಟಗಳನ್ನು ಪರ್ವೀನ್ ಬಾಬಿ ವಿವರಿಸುತ್ತಿದ್ದಂತೆಯೇ, ಎದುರು ಕುಳಿತಿದ್ದ ಅನೇಕ ಮಹಿಳೆಯರು ಕಣ್ಣೀರೊರೆಸಿಕೊಳ್ಳುತ್ತಿದ್ದ ದೃಶ್ಯಗಳನ್ನು ಕ್ಯಾಮರಾ ಕ್ಲೋಸಪ್‌ನಲ್ಲಿ ತೋರಿಸುತ್ತಿತ್ತು.
  ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ಅಮೆರಿಕದಲ್ಲಿರುವ ಗಂಡನನ್ನು ಬಿಟ್ಟು ಬಂದಿರುವ ಯುವತಿಯ ಕತೆಯನ್ನು ಕೇಳುತ್ತಿರುವಾಗಲೂ ಮಹಿಳೆಯರ ಕಣ್ಣೀರಿಗೆ ಬರವಿರಲಿಲ್ಲ. ಭಾರತೀಯ ಚಿತ್ರರಂಗದಲ್ಲಿ ಕಣ್ಣೀರ ಕತೆಗಳು ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುವುದು ಗ್ಯಾರಂಟಿ ಎನ್ನುವುದು ನೂರು ವರ್ಷದ ಇತಿಹಾಸ ಗಮನಿಸಿದರೆ ಸಾಬೀತಾಗುತ್ತದೆ.
  ಇದನ್ನು ಅಮೀರ್‌ಖಾನ್ ಚೆನ್ನಾಗಿಯೇ ಅರಿತಿದ್ದಾರೆ ಎನ್ನುವುದು `ಸತ್ಯಮೇವ ಜಯತೆ`ಯಲ್ಲಿ ಗೊತ್ತಾಗುತ್ತದೆ. ಭಾರತೀಯ ಚಿತ್ರರಂಗದ ಮೊದಲ ಚಿತ್ರ `ಹರಿಶ್ಚಂದ್ರ`ದಲ್ಲಿ ದಾದಾಸಾಹೇಬ್ ಫಾಲ್ಕೆ ಚಂದ್ರಮತಿಯ ಮೂಲಕ ಕಣ್ಣೀರಿನ ಕತೆ ಹೇಳಿದ್ದರು. ಭಾರತದ ಮೊದಲ ವಾಕ್ಚಿತ್ರ ಆಲಂ ಆರಾ ಕೂಡ ಕಣ್ಣೀರಿನ ಕತೆ.
  ಕನ್ನಡದ್ದೇ ಮೊದಲ ವಾಕ್ಚಿತ್ರ ಸತಿ ಸುಲೋಚನದಲ್ಲಿ ಸುಲೋಚನೆಯ ಸಹಗಮನ ಕಂಡು ಪ್ರೇಕ್ಷಕರು ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ತೆರೆಯ ಮೇಲಿನ ಕತೆಯೊಳಗೆ ತಲ್ಲೆನವಾಗಿ, ಪಾತ್ರಗಳಲ್ಲಿ ತಮ್ಮನ್ನೇ ಕಂಡುಕೊಳ್ಳುವ ಪ್ರೇಕ್ಷಕ ಸಮೂಹ ಅಂದಿನಿಂದ ಇಂದಿನವರೆಗೆ ಒಂದೇ ಮನೋಭಾವದಲ್ಲಿರುವುದರಿಂದಲೇ ಸಿನಿಮಾ ಆಗಲಿ, ಕಿರುತೆರೆಯಲ್ಲಾಗಲಿ ಮಹಿಳಾ ಕೇಂದ್ರೀಕೃತ ಕಥಾಹಂದರ ಎದ್ದು ಕಾಣುತ್ತದೆ. ಅಮೀರ್‌ಖಾನ್, ಪದೇ ಪದೇ ಮ್ಲಾನವದನರಾಗುವುದು, ತಾನೂ ಕಣ್ಣೊರೆಸಿಕೊಳ್ಳುವುದು, ಜನರೂ ಅಳುತ್ತಿರುವುದನ್ನು ತೋರಿಸುವುದು ಇವೆಲ್ಲಾ ಗಿಮಿಕ್ ಆಗಿಯೂ ಕಾಣುತ್ತದೆ. ಅಮೀರ್‌ಖಾನ್ ಟಿವಿ ಪರದೆಗೇ ಗ್ಲೀಸರಿನ್ ಹಾಕಿ ಬಿಟ್ಟಂತೆ ಕಾಣುತ್ತದೆ.
  ಟಿ ವಿ ಧಾರಾವಾಹಿಗಳು ನಮ್ಮ ಜನರ ಮನಸ್ಸನ್ನು ಹೇಗೆ ಹಾಳುಗೆಡವಿದೆ ಎನ್ನುವುದನ್ನು ನೋಡುತ್ತಲೇ ಬಂದಿದ್ದೇವೆ. ಮನೆಮುರುಕುತನವನ್ನು ಹೇಳಿಕೊಡುವ, ಅತ್ತೆಯನ್ನು ವಿಲನ್‌ಗಳಂತೆ ಬಿಂಬಿಸುವ ಅತಿರಂಜಕ, ಅತಿರೇಕಗಳ ನಡುವೆ ಎಳೆದಾಡುವ ಕತೆಗಳು ವರ್ಷಗಟ್ಟಲೆ ಕಿರುತೆರೆಯ ಮೇಲೆ ಕಾಣಿಸಿಕೊಂಡಿವೆ. ಇಂತಹ ನಿರರ್ಥಕ ಕತೆಗಳ ನಡುವೆ `ಸತ್ಯಮೇವ ಜಯತೆ` ವಿಭಿನ್ನವಾಗಿರುವುದು ಮೊದಲ ನೋಟದಲ್ಲೇ ಕಾಣುತ್ತದೆ.
  ಜನಪ್ರಿಯತೆಯ ತುತ್ತತುದಿಯಲ್ಲಿರುವ ನಟರು ಇಂತಹ ಕೆಲಸಗಳನ್ನು ಮಾಡುವುದು ಸ್ವಾಗತಾರ್ಹ. ಅಮಿತಾಭ್ ಬಚ್ಚನ್ ಕಿರುತೆರೆಯಲ್ಲಿ ಈಗಾಗಲೇ ಮೆಚ್ಚುಗೆ ಪಡೆದ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸತ್ಯಮೇವ ಜಯತೆ ಭಾರತದ ಕಿರುತೆರೆಯಲ್ಲೇ ವಿನೂತನ ಪ್ರಯೋಗ, ಇಂತಹ ಪ್ರಯತ್ನವನ್ನು ಯಾರೂ ಇದುವರೆಗೆ ಮಾಡಿಲ್ಲ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಅಗತ್ಯವಿಲ್ಲ.
  ಆರು ನೂರು ಕೋಟಿ ರೂಪಾಯಿಗಳನ್ನು ಪ್ರಾಯೋಜಕತ್ವ ಕೊಡುವವರು, ಬ್ಲಾಗುಗಳಲ್ಲಿ ಪುಕ್ಕಟೆ ಅಭಿಪ್ರಾಯಗಳನ್ನು ಹಂಚುವವರು ಅಮೀರ್‌ಖಾನ್ ಪರವಾಗಿ ಪ್ರಚಾರಕ್ಕೆ ನಿಂತಿದ್ದಾರೆ. ಸತ್ಯಮೇವ ಜಯತೆಗೆ ಪ್ರಚಾರ ತಾನಾಗಿಯೇ ಹರಿದು ಬರುತ್ತಿದೆ. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ಈಗಾಗಲೇ ಬಂದಿರುವುದನ್ನು ಎಲ್ಲರೂ ಕ್ಷಣಕ್ಕೆ ಮರೆಯುತ್ತಾರೆ.
  ತಮಿಳಿನಲ್ಲಿ ಖ್ಯಾತ ತಾರೆಯರು ಈ ರೀತಿಯ ಕೌನ್ಸೆಲಿಂಗ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಾರೆ. ನಟಿ ಲಕ್ಷ್ಮಿ, ಕಿರುತೆರೆ ನಟಿ ಮಾಳವಿಕಾ ಇವರೆಲ್ಲಾ ಕನ್ನಡದ ಕಿರುತೆರೆಯಲ್ಲಿ ಜನರ ಸಮಸ್ಯೆಗಳನ್ನು ಹೇಳುವುದು, ಗಂಡ – ಹೆಂಡಿರ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಯತ್ನಿಸಿ, ಒಂದುಗೂಡಿಸುವ ಪರಿಹಾರ ನೀಡುವುದು ಮೊದಲಾದವನ್ನೆಲ್ಲಾ ಚೆನ್ನಾಗಿಯೇ ನಿರ್ವಹಿಸಿದ್ದಾರೆ.
  ನಮ್ಮವರು ಮಾಡಿದ್ದು ನಮಗೆ ಕಾಣುವುದೇ ಇಲ್ಲ. ಅಮೀರ್‌ಖಾನ್‌ಗೆ ಪ್ರಚಾರದ ಬಲ ಎಷ್ಟು ಪ್ರಬಲವಾಗಿದೆ ಎಂದರೆ ಸತ್ಯಮೇವ ಜಯತೆಯನ್ನು ಭಾರತದ ಎಲ್ಲ ಭಾಷಾ ಚಾನಲ್‌ಗಳಲ್ಲಿ ಡಬ್ ಮಾಡಿ ಪ್ರಸಾರ ಮಾಡಬೇಕು ಎಂಬ ಒತ್ತಡವಿದೆ (ಟಿ. ಆರ್. ಪಿ., ಜಾಹೀರಾತು ಲೂಟಿ ಮಾಡುವ ತಂತ್ರ ಇದು ಎನ್ನುವುದನ್ನು ಅಮೀರ್‌ಖಾನ್‌ನ ಗುಣಗಾನದಲ್ಲಿ ಎಲ್ಲರೂ ಮರೆಯುತ್ತಾರೆ).
  ಟಿ ವಿ ಲೋಕದ ಮೇಲೆ ಸ್ವಾಮ್ಯ ಹೊಂದಿದ ಸ್ಟಾರ್ ಸಮೂಹದ ಚಾನಲ್‌ಗೆ ಇದು ಸುಲಭದ ಕೆಲಸ. ಕನ್ನಡದಲ್ಲೂ ಅಮೀರ್‌ಖಾನ್ ಅವರ ಈ ವರದಿಗಳನ್ನು ಡಬ್ ಮಾಡುವ ವಾಹಿನಿಯೊಂದರ ಪ್ರಯತ್ನಕ್ಕೆ ಶಿವರಾಜ್ ಕುಮಾರ್ ಕತ್ತರಿ ಹಾಕಿದರು. ಆದರೆ ಇದು ಕನ್ನಡದಲ್ಲಿ ಡಬ್ಬಿಂಗ್ ಬೇಕು, ಬೇಡ ಎನ್ನುವ ವಿವಾದ ಮತ್ತೆ ಭುಗಿಲೆದ್ದು ಚರ್ಚೆಗೆ ಒಳಗಾಗುವಂತೆ ಮಾಡಿತು.
  ಪುನೀತ್ ಕೋಟ್ಯಾಧಿಪತಿಯನ್ನು ಸಮರ್ಥವಾಗಿಯೇ ನಿಭಾಯಿಸಬಹುದಾದರೆ, ಅಮಿತಾಭ್‌ರ ಕೌನ್ ಬನೇಗಾ ಕರೋಡ್‌ಪತಿಯನ್ನು ಡಬ್ ಮಾಡಬೇಕೇಕೆ? ಸಾಮಾಜಿಕ ಕಾಳಜಿಯ ವಸ್ತುಗಳನ್ನು ತೆಗೆದುಕೊಂಡು ಕನ್ನಡದ ನಟ – ನಟಿಯರೇ ಸಮಾಜ ಸುಧಾರಣೆಯ ಚಳವಳಿ ಆರಂಭಿಸುವುದಾದರೆ ಹಿಂದಿಯ ಅಮೀರ್‌ಖಾನ್ ಕನ್ನಡದಲ್ಲೇಕೆ ಮಾತನಾಡುವ ಶ್ರಮ ತೆಗೆದುಕೊಳ್ಳಬೇಕು?
  ಹೆಣ್ಣು ಮಗು ಬೇಡ ಎಂದು ಮನೆಯಿಂದ ಹೊರದಬ್ಬಿದರು ಎಂದು ಮಹಿಳೆ ಅಳುವಾಗ, ಅಮೀರ್‌ಖಾನ್: `ಹೆಣ್ಣು ಮಗು ಆದರೆ ಅದರಲ್ಲಿ ಹೆಣ್ಣಿನ ದೋಷವೇನಿಲ್ಲ. ಇದು ಗಂಡನಿಂದ ಆಗುವ ಕ್ರಿಯೆ` ಎಂದು ವಿವರಿಸುವುದು, ಭಾರತ ಮಾತೆ ಬರೀ ಗಂಡು ಮಕ್ಕಳೇ ಬೇಕೆನ್ನುತ್ತಾಳೆಯೇ?` ಎನ್ನುವುದೆಲ್ಲಾ ಮನಮುಟ್ಟುವಂತೇ ಇದೆ. ವೈದ್ಯರ ಸಲಹೆ, ತಜ್ಞರ ಜೊತೆ ವೀಡಿಯೋ ಕಾನ್ಫರೆನ್ಸ್ ಮೊದಲಾದವನ್ನೆಲ್ಲಾ ವರದಿಗೆ ಪೂರಕವಾಗಿ ಅಮೀರ್‌ಖಾನ್ ಬಳಸುತ್ತಲೇ ಹೋಗುತ್ತಾರೆ.
  ರಾಜಸ್ತಾನದ ಭ್ರೂಣ ಹತ್ಯೆಗೆ ಸಂಬಂಧಪಟ್ಟಂತೆ, ಸರ್ಕಾರಕ್ಕೆ ನಾನು ಪತ್ರ ಬರೆಯುತ್ತೇನೆ ಎಂದು ಹೇಳುತ್ತಾರೆ. ಜೊತೆಯಲ್ಲೇ `ನೀವೂ ಏರ್‌ಟೆಲ್ ಮೂಲಕ ಎಸ್.ಎಂ.ಎಸ್. ಕಳುಹಿಸಿ, ಕೇವಲ ಒಂದು ರೂಪಾಯಿ ಮಾತ್ರ` ಎಂದು ಏರ್‌ಟೈಲ್ ಪರವಾಗಿ ವ್ಯಾಪಾರವನ್ನೂ ಮಾಡುತ್ತಾರೆ.
  ರಿಲೆಯನ್ಸ್ ಫೌಂಡೇಷನ್, ಆ್ಯಕ್ಸಿಸ್ ಬ್ಯಾಂಕ್‌ಗಳ ಪರ ಪ್ರಚಾರವೂ ಇದರ ನಡುವೆ ಬರುತ್ತದೆ. ಸಮಸ್ಯೆಗಳನ್ನು ಅಮೀರ್‌ಖಾನ್ ಹೇಳುವಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಯೋಚನೆ ಮಾಡಿ. ಒಂದು ಹೆಣ್ಣು ಅಮೀರ್‌ಖಾನ್ ಮುಂದೆ ಕುಳಿತು ತನ್ನ ಜೀವನದ ಘೋರ ಕತೆಯನ್ನು ನಿರೂಪಿಸುತ್ತಾ ಹೋಗುವುದು, ಅದಕ್ಕೆ ಅಮೀರ್ ಲೊಚಗುಟ್ಟುವುದು, ಎದುರು ಕುಳಿತ ಆಹ್ವಾನಿತ ಸಾರ್ವಜನಿಕರು ಕಣ್ಣೀರು ಒರೆಸಿಕೊಳ್ಳುತ್ತಲೇ ಇರುವುದು ಸಮಸ್ಯೆಯ ಸರಳೀಕರಣವಾಗುತ್ತದೆಯೇ ಹೊರತು ಪರಿಹಾರದ ಹಾದಿಯನ್ನು ಹುಡುಕಿ ಕೊಡುವುದಿಲ್ಲ.
  -ಗಂಗಾಧರ ಮೊದಲಿಯಾರ್

  ಪ್ರತಿಕ್ರಿಯೆ
 24. ramanatha

  ಕಾನೂನಿನ ವಿಚಾರ ಮಾತಾಡುವ ಶೂರರಲ್ಲಿ ಒಂದು ಸ್ಪಷ್ಟನೆ. ಬ್ರಿಟಿಷರಿದ್ದಾಗ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತಪ್ಪು ಎನ್ನುವ ಕಾನೂನು ಇತ್ತು. ಆದರೆ ಗಾಂಧೀಜಿ, ಬೋಸ್, ಪಟೇಲ್ ಮುಂತಾದ ದೇಶಭಕ್ತರು ಹೋರಾಡಿದ್ದರಿಂದ ಸ್ವಾತಂತ್ರ್ಯ ಸಿಕ್ಕಿತು. ನಮ್ಮತನ ಉಳಿಸಿಕೊಳ್ಳಲು ಕಾನೂನನ್ನು ಮುರಿದಿದ್ದರಿಂದಲೇ ಸ್ವತಂತ್ರ ರಾಷ್ಟ್ರಗಳು ಹುಟ್ಟಿಕೊಂಡದ್ದು. ಎಲ್ಲಾ ದಂಗೆಗಳ ಮೂಲವೂ ಅದೇ. ನಮಗೆ, ನಮ್ಮ ಭಾಷೆಗೆ ಆ ಕಾನೂನು ಬೇಕಾಗಿಲ್ಲ ಅಂತ ಒತ್ತಾಯ ಮಾಡಿದರೆ ಹೊಸ ಠರಾವು ಮಂಡನೆ ಆಗುತ್ತೆ. ತಿದ್ದುಪಡಿ ತರುವಂತೆ ಮಾಡುವುದು ನಮ್ಮ ಕರ್ತವ್ಯ. ಭಾಷಾವಾರು ಪ್ರಾಂತ್ಯಗಳನ್ನು ಮಾಡಿದ್ದು, ಆಯಾ ಭಾಷೆಗೆ ಪ್ರಾಧಾನ್ಯ ಕೊಟ್ಟದ್ದು ನಮ್ಮ ಸಂವಿಧಾನವೇ. ಶಾಸ್ತ್ರೀಯ ಭಾಷೆಗೆ ಡಬ್ಬಿಂಗ್ ಬೇಕಾ…..
  Guest | 25 May 2012 12:29 pm | Reply »
  ಡಬ್ಬಿಂಗ್ ಬೇಕು ಅಂತ ಸಾರ್ವಜನಿಕವಾಗಿ ಕೇಳೋದಕ್ಕೆ ಕನಿಷ್ಠ ನಾಚ್ಕೇನೂ ಆಗೋಲ್ವಾ ಇವರಿಗೆ. ಇದುವರೆಗೆ ಡಬ್ಬಿಂಗ್ ಬೇಕು ಅಂತ ಯಾರೂ ಅಂದಿರಲಿಲ್ಲ. ನಾಡು ನುಡಿಯ ಬಗ್ಗೆ ಹೆಮ್ಮೆ ಇಲ್ಲದವರು ಮಾತ್ರ ಹೀಗೆ ಮಾತಾಡಬಲ್ಲರು. ಕಾನೂನು ಡಬ್ಬಿಂಗ್ ಮಾಡಿ ಅಂತ ಹೇಳಿಲ್ಲ. ಮಾಡೋದು ತಪ್ಪಲ್ಲ ಅಂತಷ್ಟೇ ಹೇಳಿರೋದು. ಮಾಡೋದು ಬಿಡೋದು ನಮ್ಮ ಸ್ವಾಭಿಮಾನದ ಪ್ರಶ್ನೆ, ಹೆಮ್ಮೆಯ ಪ್ರಶ್ನೆ. ಗೌರವದ ಪ್ರಶ್ನೆ. ಮುಂದೊಂದು ದಿನ ಕನ್ನಡ ಇಂಡಸ್ಟ್ರಿ ಅಂದ್ರೆ ಗೊತ್ತು ಬಿಡಲೇ, ಬರೀ ಡಬ್ಬಿಂಗ್ ಮಾಡ್ತವೆ ಅಂತ ಪರಭಾಷೆ ಮಂದಿ ನಗಬೇಕು ಅಂತ ಇವರ ಆಸೆ ಇದ್ದ ಹಾಗಿದೆ. ಇವರು ಆದಷ್ಟು ಬೇಗ ಆರೋಗ್ಯವಂತರಾಗಲಿ.. PLZ GET WELL SOON….

  ಪ್ರತಿಕ್ರಿಯೆ
 25. raghunath

  Grow up dudes.Dubbing is deadly cancer and it has already made the people in the other states beggars in thier own land.People who are telling lies and talking nonsense are big goondas.

  ಪ್ರತಿಕ್ರಿಯೆ
 26. mohan

  Ppl who work in film and serial industry have more rights than viewers to voice their opinion on dubbing….For them its their livelihood and if dubbing makes them go jobless or makes their life difficult, then they have every right to protest against it. But on the other hand for majority of us(viewers) movies are just a form of entertainment and definitely not a basic necessity!!!!!! ….. Moreover there are many ways to get entertained than just watching movies or serials and there is no need to defend dubbing by saying ours is a democratic country and other bullshit..LOLS!!!!!

  ಪ್ರತಿಕ್ರಿಯೆ
 27. ragvendra

  Satya meva jayate is not an extraordinary new concept in the reality show domains,such kind of programmnes have been coming in our tv channels from so many years.Its our people’s ignorance,inferiority complex by default that making them to believe that its something new and novel.As such many of these handful people wanted dubbbing are not having any authentic informations about the tv prgms and KFI.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: