ಜುಗಾರಿ ಕ್ರಾಸ್ ನಲ್ಲಿ ಎರಡು ನೋಟದ ಢಿಕ್ಕಿ…

‘ಜುಗಾರಿ ಕ್ರಾಸ್’ ಚರ್ಚೆಗಾಗಿಯೇ ಇರುವ ಅಂಕಣ. ಸದ್ಯದ ಆಗುಹೋಗುಗಳಿಗೆ ಹಿಡಿಯುವ ಕನ್ನಡಿ.
ಕುಂದಾಪುರದ ಒತ್ತಿನೆಣೆಯಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ‘ಆತ ಕ್ರಿಶ್ಚಿಯನ್’ ಎಂಬ ನೆಪ ಒಡ್ಡಿ ಬಂದ ಆರೋಪ ಕುರಿತು ಜೋಗಿ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಬೈಗುಳಗಳು ಸಾಕಷ್ಟು.
ಒಂದು ಮಿತಿಯಾಚೆ ಇದ್ದ ಪ್ರತಿಕ್ರಿಯೆಗಳನ್ನು ದೂರವೇ ಇಟ್ಟು, ಇನ್ನು ಕೇವಲ ಹೊಗಳಿಕೆಯನ್ನೂ ಕೈಬಿಟ್ಟು ಕೆಲವನ್ನು ಪತ್ರಗಳನ್ನು ಪ್ರಕಟಿಸಿದ್ದೆವು. ಆ ಪತ್ರಗಳಿಗೆ ಬಂದ ಎರಡು ಭಿನ್ನ ದಿಕ್ಕಿನಲ್ಲಿ ನಿಂತ ಪ್ರತಿಕ್ರಿಯೆಗಳು ಇಲ್ಲಿವೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ
ಜೋಗಿ ಸರ್,
kaligudadurಬಲು ಜೋರು ಬರೆದಿದ್ದೀರಿ. ಇನ್ನೂ ನಾವೆಲ್ಲಾ ಒಂದಾಗಿ ಈ ಸನಾತನಿ ಸುಡೋ ಹಿಂದೂವಾದಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಲಾವಿದ, ಸಾಹಿತಿ, ಹೋರಾಟಗಾರ, ಪತ್ರಕರ್ತರನ್ನು ಅಷ್ಟಾಗಿಯೂ ಜನಸಾಮಾನ್ಯರು ಅವನ ಜಾತಿಯಿಂದ ಗುರುತಿಸಲು ಇಷ್ಟಪಡಲಾರರು. ಅದರಲ್ಲೂ ಲೆಜೆಂಡ್ಗಳನ್ನು ಅದ್ಹೇಗೆ ಜಾತಿ, ಜನಾಂಗ, ಬಣ್ಣ, ಪ್ರದೇಶ, ಧರ್ಮ, ದೇಶ ಎಂದು ಗುರುತಿಸಲಾದೀತು.
ಈ ಮೂರ್ಖರು ಕೇವಲ ದಕ್ಷಿಣ ಕನ್ನಡದಲ್ಲಷ್ಟೆ ಅಲ್ಲ; ಅಂಥವರನ್ನು ಪೋಷಿಸುವ ಪಕ್ಷ, ಸಕರ್ಾರಗಳೇ ಇರುವಾಗ ಇವರು ಇಲ್ಲದ ಜಾಗೆಯಿಲ್ಲ. ಕೆಲವೇ ದಿನಗಳಲ್ಲಿ ಮಹಾನ್ ರಾಷ್ಟ್ರ ನಾಯಕರ ಸಾಲಿನಲ್ಲಿ ಯಡಿಯೂರಪ್ಪ, ಅಡ್ವಾಣಿ, ವಾಜಪೇಯಿ, ಮೋದಿ, ಬಾಳಠಾಕ್ರೆ, ಮುತಾಲಿಕ್, ತೊಗಾಡಿಯಾ ಸೇರಿದಂತೆ ಸಂಘ ಪರಿವಾರದ ಮುಖಂಡರ ಫೋಟೊಗಳನ್ನು ಎಲ್ಲಾ ಸಕರ್ಾರಿ ಮತ್ತು ಸಾರ್ವಜನಿಕ ಕೇಂದ್ರ ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಜೋತುಬೀಳಿಸಬೇಕು ಎಂಬ ಆರ್ಡರ್ ಬಂದರೂ ಅಚ್ಚರಿಪಡಬೇಕಿಲ್ಲ.
ನಿಮ್ಮ ನೇರ, ಇರಿಯುವ ಬರೆಹದಿಂದ ನಮ್ಮೆಲ್ಲರಲ್ಲೂ ಚೈತನ್ಯ ತುಂಬಿದೆ. ಕೇವಲ ಬರೆಹದ ಮೂಲಕ ಸಾವಿರ ಪುಟಗಳಲ್ಲಿ ಬರೆದರೂ ಇಂಥಹ ಮೂಢರ ಮನಸ್ಸು ಬದಲಾದೀತು ಎಂದು ಬಯಸುವುದೂ ತಪ್ಪು. ಸಾಧ್ಯವಿದ್ದರೆ ನಾವೆಲ್ಲರೂ ಬೀದಿಗಿಳಿದು ಸನಾತನಿಗಳ ಕಿವಿಹಿಂಡುವ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದರೆ ಕೇವಲ ಹೇಮಂತ ಹೆಗಡೆಗೆ ಕೇಳಿದ ಪ್ರಶ್ನೆ ನಮ್ಮ ಪ್ರತಿ ಮಾತಿಗೂ, ಅಕ್ಷರ, ಸೀನು, ಉಗುಳು ಏನೆಲ್ಲಾ ಕ್ರಿಯೆಗಳಿಗೂ ಅನ್ವಯಿಸಿದರೂ ಅಚ್ಚರಿಪಡಬೇಕಿಲ್ಲ.
ನೋಡಿ, ಆಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇಲ್ಲವಾದರೆ ನಮ್ಮನ್ನೆಲ್ಲಾ ಏನೋ ಬರೆತಾವೆ… ಬೊಗಳ್ತಾವೆ… ನಮಗೇನೂ ಆಗಲ್ಲ ಎಂದು ಉಗುಳಿದರೂ ಮುಖ ಒರೆಸಿಕೊಳ್ಳುವ ಭಂಡರು ಭಾವಿಸುವುದರಲ್ಲಿ ಅನುಮಾನವಿಲ್ಲ.
ಅನ್ನಿಸಿದ್ದನ್ನೆಲ್ಲಾ ಬರೆದುಬಿಟ್ಟೆ…
-ಕಲಿಗಣನಾಥ ಗುಡದೂರು
rh101_bcharly-chaplin-posters1
ಜೋಗಿ,
11‘ಸನಾತನಿ’ಗಳಾಗಲೀ ’ವಾನರ ಸೇನ’ಯವರಾಗಲೀ ’ಚಡ್ಡಿ’ಮಂದಿಯಾಗಲೀ ಅಲ್ಲದ ಸ್ನೇಹಿತರಿಂದ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಮಾತಾಡಿದ್ದೆ.
ಯಾಕೆ ಜೋಗಿ? ಹಾದಿ ತಪ್ಪಿಸುವ ಆರೋಪಗಳನ್ನು ಹೊರಿಸುವ ಕೆಲಸ ಯಾಕೆ ನಡೆಯುತ್ತಿದೆ ಈಚೀಚೆಗೆ? ಹೀಗೆ ಜನರನ್ನು ಒಡೆಯುವ ಕೆಲಸ ಈ ಮೊದಲು ವಿಜಯ ಕರ್ನಾಟಕ (ಕೆಲವು ಲೇಖಕರು-ಲೇಖನಗಳ ಮೂಲಕ) ಮಾತ್ರ ಮಾಡುತ್ತಿತ್ತು. ಅವರಿಗೆ ಪೈಪೋಟಿ ನೀಡುವ ಹೊಣೆ ಯಾಕೆ ಹೊತ್ತಿರಿ? ಜನರನ್ನ ಒಡೆಯುವ ಖುಷಿ ಆ ಕ್ಷಣದ್ದು ಮಾತ್ರ. ದಯವಿಟ್ಟು ಇಂಥದನ್ನ ಮಾಡಬೇಡಿ ಅನ್ನೋದು ನನ್ನ ಕಳಕಳಿಯ ವಿನಂತಿ.
ಚಾರ್ಲಿಯಂತಹ ಜಗತ್ಪ್ರತಿಭೆಯನ್ನು ಜಾತಿ- ದೇಶಗಳ ಅಳತೆಗೋಲಿನಿಂದ ಅಳೆಯುವುದಾದರೆ ಅಂತಹವರನ್ನ ಕ್ಯಾಕರಿಸಿ ಉಗಿದೇನು (ಅಕ್ಷರಶಃ). ಹಾಗೆಂದು ಅನಿಷ್ಠಕ್ಕೆಲ್ಲ ಶನೀಶ್ವರ ಕಾರಣ ಎನ್ನುತ್ತ ಮಾತುಮಾತಿಗೂ ’ಹಿಂದುತ್ವ’ದತ್ತ ಬೊಟ್ಟು ಮಾಡುತ್ತ ’ಅವಾಸ್ತವ’ಸಂಗತಿ, ಸುಳ್ಳು ಮಾಹಿತಿಗಳನ್ನು ಸಾಂಕ್ರಾಮಿಕ ರೋಗದಂತೆ ಹಬ್ಬಿಸುತ್ತ ಹೋಗುವುದನ್ನು, ಹೋಗುವವರನ್ನು ಕಂಡೂ ಸುಮ್ಮನಿರಲು ಸಾಧ್ಯವೇ ಇಲ್ಲ ನನ್ನಿಂದ.
ಅಭಿಪ್ರಾಯ ಸ್ವತಂತ್ರ್ಯ ಕಸಿದುಕೊಂಡಿರುವ ಬ್ಲಾಗಿಗರ ಮಧ್ಯೆ ಇರುವುದು ಬೇಡವೆಂದು, ಬ್ಲಾಗಿನಲ್ಲಿ ವಿಚಾರಕ್ಕೆ ಬದಲಾಗಿ ದೊರೆತ ವೈಯಕ್ತಿಕ ನಿಂದನೆಗಳಿಂದ ನೊಂದು, ಬ್ಲಾಗ್ ಸಹವಾಸದಿಂದ ದೂರವಾಗಿದ್ದೆ.
ಏನು ಮಾಡಲಿ? ಇದು ಸರಿ ಅನಿಸದೆ ಹೋದಮೆಲೂ ಪ್ರತಿಕ್ರಿಯಿಸದೆ ಇರುವುದು ಸಾಧ್ಯವಾಗಲಿಲ್ಲ.
ನೀವೂ ಒಡೆಯುವ ಕೆಲಸ ಮಾಡುತ್ತ ಹೋದರೆ ವ್ಯತ್ಯಾಸ ಉಳಿಯುವುದಿಲ್ಲ.
ದಯವಿಟ್ಟು ಈ ಬಗ್ಗೆ ಯೋಚಿಸಿ (ಸಮಯವಿದ್ದರೆ).
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

‍ಲೇಖಕರು avadhi

March 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

15 ಪ್ರತಿಕ್ರಿಯೆಗಳು

 1. neelanjala

  ನಂಗೆ ಜೋಗಿಯವರ ಬರಹ ಓದುತ್ತಾ ಇದ್ದ ಹಾಗೆ ಬೇಜಾರು ಆಗಿ ಹೋಯಿತು.
  ತಾಳೆಗರಿ ಕಾಲವಾದ ಮೇಲೆ ನಾವು ಹಿಂದೂಗಳು ಏನನ್ನೂ ಕಂಡೂ ಹಿಡಿಯಲೇ ಇಲ್ವಾ,
  ಹರಳೆಣ್ಣೆಯ ದೀಪದಿಂದ ಮುಂದೆ ನಾವು ಬೆಳೆಯಲೇ ಇಲ್ವಾ,
  ನಿಜ ನನ್ನ ಸುತ್ತ ಮುತ್ತ ಇದ್ದಿದ್ದೆಲ್ಲ ಕ್ರಿಶ್ಚಿಯನ್ನರೇ ಮೊದಲು ಕಂಡೂ ಹಿಡಿದದ್ದು. ಅಂದರೆ ನನ್ನ ಹಿಂದೂ ಧರ್ಮ ಜಗತ್ತಿನ ಎಲ್ಲ ಧರ್ಮಕ್ಕಿಂತಾ ಹಿರಿದು ಅಲ್ಲ. ಅದೂ ಉಳಿದವರ ಜೊತೆ ಒಂದು ಅಷ್ಟೆ. 🙁
  ಇಷ್ಟೆಲ್ಲಾ ಕಂಡು ಹಿಡಿದದ್ದು ಕ್ರಿಶ್ಚಿಯನ್ನರು ಎಂದು ನಾನು ಯಾವತ್ತು ಗಮನಿಸಿರಲಿಲ್ಲ. ಇನ್ನು ಮುಂದೆ ಅವರ ಈ ಪರಿಯ ಶ್ರೀಮಂತ ಪರಂಪರೆಯ ಕಾರಣಕ್ಕೆ ಆ ಧರ್ಮಕ್ಕೆ ಇಡೀ ಜಗತ್ತು ತಲೆಬಾಗುವುದರಲ್ಲಿ ತಪ್ಪಿಲ್ಲವೆಂದು ನನಗೆ ಅನ್ನಿಸುತ್ತಿದೆ.
  ಜೋಗಿಯವರೇ, ನನ್ನ ಕಣ್ಣು ತೆರೆಸಿದ್ದಕ್ಕೆ ನಿಜಕ್ಕೂ ಥ್ಯಾಂಕ್ಸ್

  ಪ್ರತಿಕ್ರಿಯೆ
 2. ಸಂದೀಪ್ ಕಾಮತ್

  ನಿನ್ನೆ ಮಂಗಳೂರಿನಲ್ಲಿ ನ್ಯೂಸ್ ಪೇಪರ್ ಓದಿದಾಗ ” ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪಿಸಿದರೆ ಈ ಸ್ಥಳ ಒಂದು ಟೂರಿಸಂ ಕೇಂದ್ರಿತ ಸ್ಥಳವಾಗಿ ಸ್ಥಳದ ಪಾವಿತ್ರ್ಯತೆ ಕೆಡುತ್ತೆ ” ಅಂತ ಸ್ಥಳೀಯರು ಪ್ರತಿಭಟಿಸಿದರು ಅಂತ ಓದಿದ ಹಾಗೆ ನೆನಪು.
  ಇವತ್ತು ಬೆಂಗಳೂರಿನಲ್ಲಿ ಓದಿದಾಗ ಅದಕ್ಕೆ ’ಹಿಂದುತ್ವ’ ದ ಟಚ್ ಬಂದಿದೆ !
  ಓಹ್ ಮರೆತೆ ಹೋಗಿತ್ತು ಎಲೆಕ್ಶನ್ ಬಂತಲ್ವ ?
  ಹ್ಯಾಪಿ ಚುನಾವಣೆ….

  ಪ್ರತಿಕ್ರಿಯೆ
 3. ಅಜಯ್

  from – ಕ್ಷಕಿರಣ http://kshakirana.blogspot.com/2009/03/blog-post.html
  ಎಲ್ಲಾ ಮಾಧ್ಯಮ ಗೆಳೆಯರಂತೆ ಕನ್ನಡ ಬ್ಲಾಗ್ ಲೋಕ ಅರಮನೆಯ ಸ್ವಘೋಷಿತ ರಾಜ ಜೋಗಿಯವರೂ ಬೈಂದೂರಿನ ಮರವಂತೆ ಬೀಚಿನ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪನೆ ವಿವಾದದ ಬಗ್ಗೆ ಬರೆದಿದ್ದಾರೆ .
  ದೇವಸ್ಥಾನದ ಎದುರು ಕರಾವಳಿ ಕರ್ನಾಟಕಕ್ಕೇ ಸಂಬಂಧವೇ ಇರದ ಯಾರೋ ವಿದೇಶೀ ನಟನ ಪ್ರತಿಮೆಗೆ ವಿರೋಧಿಸಿದವರನ್ನು ಇಂದಿನ ಎಲ್ಲಾ ಮಾಧ್ಯಮದವರಂತೆ “ಹಿಂದುತ್ವವಾದಿಗಳು” ಎಂದು ಲೇಬಲ್ ಹಚ್ಚಿಬಿಟ್ಟಿದ್ದಾರೆ, ಹಾಸ್ಯದ ಹೆಸರಲ್ಲಿ ಕರಾವಳಿ ಕರ್ನಾಟಕದ ಜನರ ಮೇಲೆ ಉಗಿದಿದ್ದಾರೆ, ತಮ್ಮ ಬ್ಲಾಗ್ ಪೋಸ್ಟಿಗೆ ಫ್ಯಾನ್ ಬಾಯ್ಗಳಿಂದ (Fan Bois) ಹೊಗಳಿಕೆಯನ್ನೂ ಪಡೆದಿದ್ದಾರೆ.
  ಆದರೆ ಇಲ್ಲಿ ನಿಜವಾಗಿ ನಡೆದಿದ್ದೇನೆಂದು ನೋಡ ಹೊರಟರೆ ಇದೊಂದು ಪಬ್ಲಿಸಿಟಿ ಸ್ಟಂಟೆಂದು ಎಲ್ಲರಿಗೂ ಗೊತ್ತಾಗುತ್ತದೆ. ಮರವಂತೆಯಲ್ಲಿ ಚಾಪ್ಲಿನ್ ಮೂರುತಿ ಪ್ರತಿಷ್ಠಾಪನೆ ಮಾಡಲು ಹೊರಟಿರುವ ಯಾರೂ ಇದುವರೆಗೆ ಹೆಸರೇ ಕೇಳದಿರುವ “ಸಿನೆಮಾ ನಿರ್ದೇಶಕ” ಹೇಮಂತ ಹೆಗಡೆ ತನ್ನ ಖಾಸಾ ಗೆಳೆಯನೆಂದು ಜೋಗಿಯವರು ಬ್ಲಾಗಿನಲ್ಲೇ ಹೇಳಿಕೊಂಡಿದ್ದಾರೆ. ಈ ಇಡೀ ನಾಟಕ ಪ್ರಚಾರಕ್ಕಾಗಿ ಜೋಗಿ ಮತ್ತವರ ಮಾಧ್ಯಮ ಮಿತ್ರರ ಕಿತಾಪತಿಯೆಂದೂ ಕಂಡು ಬರುತ್ತಿದೆ.
  ಇನ್ನು ಚಾಪ್ಲಿನ್ ವಿರೋಧದ ವಿಷಯಕ್ಕೆ ಬಂದರೆ:
  ೧. ಸ್ಥಳೀಯರು ಚಾಪ್ಲಿನ್ ವಿಗ್ರಹ ವಿರೋಧಿಸುತ್ತಿರುವುದು ಅದು ಸೋಮೇಶ್ವರ ದೇವಸ್ಥಾನದ ಬಳಿ ಇದೆಯೆಂದು. ಇಡೀ ಗ್ರಾಮಸ್ಥರೇ ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ – ಹಿಂದೂಗಳು ಮಾತ್ರವಲ್ಲ, ಕ್ರೈಸ್ತ ಮುಸ್ಲಿಂ ಬಾಂಧವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
  ೨. ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯಿತುಗಳಿಗೆ ಇದು ಸಿನೆಮಾ ಶೂಟಿಂಗಿಗೆ ಪ್ರತಿಮೆ ಎಂದು ಮೊದಲು ಹೇಳಿ ನಂತರ ಪರ್ಮನೆಂಟ್ ಪ್ರತಿಮೆ ಸ್ಥಾಪಿಸಲು ಈ ಭೂಪತಿಗಳು ಹೊರಟಿದ್ದರು. ಸಿನೆಮಾ ಶೂಟಿಂಗಿಗೆ ಮಾತ್ರ ಪರ್ಮಿಟ್ ಇದೆ ಇವರಲ್ಲಿ, ಶಾಶ್ವತ ಪ್ರತಿಮೆಗೆ ಅಲ್ಲವೆಂಬುದು ವಾಸ್ತವ.
  ೩. ಅಷ್ಟಕ್ಕೂ ಪ್ರತಿಮೆ ಸ್ಠಾಪಿಸಲು ಹೊರ್‍ಅಟಿರುವ ಪ್ರದೇಶ “ಸಿ.ಆರ್.ಜ಼ೆಡ್” (CRZ – Coastal Regulatory Zone) ಅಡಿ ಬರುವ ಪ್ರದೇಶ – ಹಾಗಾಗಿ ಜಿಲ್ಲಾಡಳಿತವೂ ಶಾಶ್ವತ ಕಟ್ಟಡ, ಪ್ರತಿಮೆ ಕಟ್ಟಲು ಕೊಡುವ ಸಾಧ್ಯತೆಯೇ ಇಲ್ಲ!
  ೪. ಇಂದು ಕರಾವಳಿ ಕರ್ನಾಟಕಕ್ಕೆ ಸಂಬಂಧವಿರದ ಚಾರ್ಲೀ ಚಾಪ್ಲಿನ್, ಇನ್ನು ನಾಳೆ ಮೈಕೆಲ್ ಜಾಕ್ಸನ್ / ಬಾಕ್ಸರ್ ಮೊಹಮ್ಮದ್ ಆಲಿ ಪ್ರತಿಮೆಗಳನ್ನು ವಿಧಾನಸೌಧ ಅಥವಾ ಮೈಸೂರು ಅರಮನೆಯೆದುರು ಸ್ಥಾಪಿಸುತ್ತೇವೆಯೆಂದು ಬಂದರೆ ಜನರು ಸುಮ್ಮನಿರುತ್ತಾರೆಯೇ?
  ೫. ಅಷ್ಟಕ್ಕೂ ನಮ್ಮ ನಾಡಲ್ಲಿ ಹಾಸ್ಯಗಾರರ ಬರ ಇದೆಯೇ? ಚಾರ್ಲಿ ಚಾಪ್ಲಿನ್ ಬದಲು ತೆನಾಲಿ ರಾಮಕೃಷ್ಣ ಪ್ರತಿಮೆ ಯಾಕೆ ಬೇಡ?
  ಹೀಗೆ ವಾಸ್ತವಗಳನ್ನು ನೋಡ ಹೊರಟರೆ, ಇದು ಮತ್ತೇನೂ ಅಲ್ಲ ಚಲನಚಿತ್ರಕ್ಕೆ ಪಬ್ಲಿಸಿಟಿ ಸ್ಟಂಟೆಂಬುದು ಸ್ಪಷ್ಟವಾಗುತ್ತದೆ.
  ಈವರೆಗೆ ಯಾರೂ ಕಂಡು ಕೇಳರಿಯದ ಸಿನೆಮಾದವರು ಒಂದು ದಿನ ಮರವಂತೆಗೆ ಬಂದು “ಗಿನೆಸ್ ರೆಕಾರ್ಡ್ ಚಾರ್ಲಿ ಚಾಪ್ಲಿನ್ ಪ್ರತಿಮೆ ಮಾಡುತ್ತೇವೇ”ಯೆಂದು ಹೇಳಿದಾಗಲೀ ಕರಾವಳಿಯ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಿನೆಮಾದವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಲಂಡನಿನಿಂದ ಗಿನೆಸ್ ದಾಖಲೆ ಪುಸ್ತಕದ ಮೈಕೆಲ್ ಅನ್ನುವವರು ಬರುತ್ತಾರೆ, ವೀಡಿಯೋ ಮಾಡಲಿದ್ದಾರೆಂದೆಲ್ಲಾ ಬುರುಡೆ ಬಿಟ್ಟಾಗ “ಉಂದು ಆಪಿನಿ ಪೋಪಿನಿ ಅತ್ತು ಮಾರ್ರೇ” (ಇದು ಆಗುವುದು ಹೋಗುವುದಲ್ಲ ಮಾರಾಯರೇ) ಎಂದು ನಕ್ಕು ಅಲ್ಲೇ ಅದನ್ನು ಮರೆತು ಬಿಟ್ಟಿದ್ದರು.
  ಈ ಚಿತ್ರದವರ ಸಹಾಯಕ್ಕೆ ಟೊಂಕ ಕಟ್ಟಿದ್ದ ಸ್ಥಳೀಯರಲ್ಲಿ ಜನಾರ್ಧನ ಮರವಂತೆಯೆಂಬ ಪತ್ರಕರ್ತ ಇದ್ದರೆಂಬುದು ಉಲ್ಲೇಖನೀಯ. ಕೊಲ್ಲೂರಿಗೆ ದೇವರ ಬಳಿ ಕೆಲಕಾಲ ಕಳೆಯಲು ಭಕ್ತಿಯಿಂದ ಬರುವ ದಕ್ಷಿಣ ಭಾರತದ ಸಿನಿಮಾ ಉದ್ದಿಮೆಯವರನ್ನು ಪಾಫರಾಜಿಯಾಗಿ ಹಿಂಸಿಸಿ ಅವರ ಎರಡು ನುಡಿ ಮುತ್ತುಗಳನ್ನು ಬರೆದುಕೊಂಡು “ಪತ್ರಕರ್ತ”ನೆಂದಾದವರು ಈ ಜನಾರ್ಧನ ಮರವಂತೆ.
  ಆರ್ಥಿಕ ತಾಪತ್ರಯದಿಂದಲೋ ಅಥವಾ ಪ್ರತಿಮೆಗೆ ಪರ್ಮಿಶನ್ ಸಿಗುವುದು ಅಸಾಧ್ಯವೆಂದು ತಿಳಿದ ಮೇಲೆ ಕೆಲಸ ಕೈಬಿಟ್ಟ ಈ ಸಿನೆಮಾದವರು ಮುಖ ಉಳಿಸಿಕೊಳ್ಳಲು ಮೊರೆ ಹೊಕ್ಕಿದ್ದು ಇದೇ ಜನಾರ್ಧನ ಮರವಂತೆ ಮತ್ತು ಜೋಗಿಯವರನ್ನು!
  ಹೇಗೂ ಕರಾವಳಿ ಕರ್ನಾಟಕದ ಜನರನ್ನು ಅನಾಗರಿಕರು, ಮೂಲಭೂತವಾದಿಗಳು, ಅಭಿವೃದ್ಧಿ ವಿರೋಧಿಗಳು, ಹಿಂದುತ್ವವಾದಿಗಳು ಎಂದೆಲ್ಲಾ ಎಲ್ಲಾ ಮಾಧ್ಯಮಗಳು ಹೀಗಳಿಸಿಯಾಗಿರುವಾಗ ಇದನ್ನೂ “ಹಿಂದುತ್ವವಾದಿಗಳ” ಮುಖಕ್ಕೆ ಹಚ್ಚಿದರೆ ಚಿತ್ರಕ್ಕೆ ಬಿಟ್ಟಿ ಪಬ್ಲಿಸಿಟಿಯೂ ದೊರಕುತ್ತದೆ, ತಮ್ಮ ಮುಖವೂ ಉಳಿಯುತ್ತದೆ, ಅತ್ತ ಸ್ಥಳೀಯರನ್ನು ಅನಾಗರಿಕರೆಂದು, ಹಿಂದುತ್ವವಾದಿಗಳೆಂದು ಹೀಗಳಿಸಲೂ ಆಗುತ್ತದೆಯೆಂದು ಸ್ಕೆಚ್ ಹಾಕಿತು ಜನಾರ್ಧನ ಮತ್ತು ಜೋಗಿಯ ಮಾಧ್ಯಮ ಪಡೆ! ತಾವೇ ಕೆಲ ಬಾಡಿಗೆ ವಿರೋಧಿಗಳನ್ನು ಕರೆಸಿ, ಅವರು ಬರುವ ಸಮಯಕ್ಕೆ ತಕ್ಕಾಗಿ ಟಿವಿ೯ ಮತ್ತಿತರ ಟಿವಿ/ಪತ್ರಕರ್ತರ ದಂಡು ಇರುವಂತೆಯೂ ನೋಡಿಕೊಂಡು ಪಬ್ಲಿಸಿಟಿಗಾಗಿ ಪ್ರತಿಭಟನೆಯೂ ನಡೆಯಿತು.
  ಅಲ್ಲಾ ಸ್ವಾಮೀ, ಒಂದು ಎರಡು ಕೋಟಿ ಬಜೆಟ್ ಮೀರದ, ದಿನಬೆಳಗಾದರೆ ತೋಪೆದ್ದು ಹೋಗುವ ಕನ್ನಡ ಚಿತ್ರರಂಗದಲ್ಲಿ – ಅದೂ ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ – ಯಕ:ಶ್ಚಿತ್ ಒಂದು ಚಾರ್ಲಿ ಚಾಪ್ಲಿನ್ ಪ್ರತಿಮೆಗಾಗಿ ೩೫ ಲಕ್ಷ ಖರ್ಚು ಮಾಡಲು ಹೊರಟಿದ್ದರೆಂದರೆ ಯಾರು ನಂಬುತ್ತಾರೆ?
  ಆ ಪ್ರಶ್ನೆಯನ್ನು ಬದಿಗಿಟ್ಟು, ಸರಕಾರಿ ಜಾಗದಲ್ಲಿ ಅದರಲ್ಲೂ ದೇವಸ್ಥಾನದ ಎದುರು ಒಬ್ಬ ವಿದೂಷಕನ ಪ್ರತಿಮೆ ಮಾಡಲು ಹೊರಟಿದ್ದವರು ಬಿಜಾಪುರದ ಗೋಳಗುಂಬಜಿನೆದುರು ನಮ್ಮದೇ ದ್ವಾರಕೀಶ್ ಅಥವಾ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚಿನೆದುರು ಕರ್ನಾಟಕದ ಹಾಸ್ಯಗಾರ ನರಸಿಂಹ ರಾಜು ಪ್ರತಿಮೆ ಸ್ಥಾಪಿಸಲು ಧೈರ್ಯಮಾಡಲಿ ನೋಡೋಣ?
  ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರನ್ನು ಮೇಲೆ ಹೇಳಿದಂತೆ ಅನಾಗರಿಕರು, ಹಿಂದೂ ಮೂಲಭೂತವಾದಿಗಳೆಂದು ಹೀಯಳಿಸಲು ವ್ಯವಸ್ಥಿತ ಸಂಚೇ ನಡೆದಂತೆ ಕಾಣುತ್ತದೆ. ಕರಾವಳಿ ಕರ್ನಾಟಕ ಹಿಂದೆದಿಗಿಂತಲೂ ಇಂದು ಬೃಹತ್ ಉದ್ದಿಮೆಗಳನ್ನು, ವಿಶೇಷ ಆರ್ಥಿಕ ವಲಯ, ಉತ್ತಮ ದರ್ಜೆಯ ವಿದ್ಯಾಸಂಸ್ಥೆಗಳಿಂದಾಗಿ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನೂ ಕೈ ಬೀಸಿ ಕರೆಯುತ್ತಿದೆ. ಪ್ರಾಯಷ: ಈ ಆರ್ಥಿಕ ಬೆಳವಣಿಗೆ ಬಯಸದವರು ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಈ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಒಂದೇ ಸಮಧಾನದ ಸಂಗತಿಯೆಂದರೆ ಸ್ಥಳೀಯ ಮಾಧ್ಯಮಗಳು ಈ ಜಾಲಕ್ಕೆ ಬಿದ್ದಂತಿಲ್ಲ – ಇದು ಅಭಿವೃದ್ಧಿ ವಿರೋಧಿಗಳಿಗೆ ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ – “ಕರಾವಳಿ ಕರ್ನಾಟಕದ ಮಾಧ್ಯಮಗಳೂ ಮೂಲಭೂತ ಸಂಘಟನೆಗಳ ಹಿಡಿತಕ್ಕೆ ಸಿಲುಕಿವೆ” ಯೆಂದೆಲ್ಲಾ ಮೈ ಪರಚಿಕೊಳ್ಳುತ್ತಿದ್ದಾರೆ!
  ಪಬ್ಬು ಧಾಳಿ, ತೆಹೆಲ್ಕಾದ ಸೂಸನ್ ಪ್ರಾಯೋಜಿತ “ಪಿಂಕ್ ಚೆಡ್ಡಿ” ಅಭಿಯಾನ, ಕೇರಳದ ಕಮ್ಯೂನಿಸ್ಟ ಎಂ.ಎಲ್.ಎ., ತನ್ನ ಮಗಳು ಮುಸ್ಲಿಂ ಹುಡುಗನೊಂದಿಗೆ ತಿರುಗಾಡುವುದನ್ನು ನಿಲ್ಲಿಸಲು ತನ್ನ ಭಂಟರಿಗೇ ಆತನ ಮೇಲೆ ಹಲ್ಲೆ ಮಾಡಲು ಹೇಳಿ ಕಡೆಗೆ ಅದನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿದ್ದು, ೨೭ ವರ್ಷದ ಬಸ್ ಕ್ಲೀನರ್ ಸಲೀಂನಿಂದಾಗಿ ಹದಿಹೆರೆಯದ ಅಶ್ವಿನಿಯ ಆತ್ಮಹತ್ಯೆಯನ್ನೂ ಹಿಂದು ಸಂಘಟನೆಗಳ ಮೇಲೆ ಹೇರಿದ್ದ ಘಟನೆಗಳ ಸಾಲಿಗೇ “ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ಹಿಂದೂ ಸಂಘಟನೆಗಳ ಅಡ್ಡಿ”ಯೆಂಬ ಪ್ರಕರಣವೂ ದಾಖಲಾಗಿದೆ.
  ಪುಂಖಾನುಪುಂಖವಾಗಿ ಬ್ಲಾಗುಗಳು (ಇಲ್ಲಿದೆ ನೋಡಿ ಇನ್ನೊಬ್ಬ ಪತ್ರಕರ್ತನ ಬ್ಲಾಗು – ಚುರುಮುರಿ ಇಂಗ್ಲಿಷ್ ಬ್ಲಾಗ್ ಪ್ರಕಾರ ದೇವಸ್ಥಾನದ ಎದುರು ಚಾಪ್ಲಿನ್ ಪ್ರತಿಮೆ ವಿರೋಧಿಸುವವರು ಹಿಂದೂ ಜೋಕರುಗಳಂತೆ, ಹಿಂದೂ ಡಿಕ್ಟೇಟರುಗಳಂತೆ), ಪತ್ರಿಕೆಗಳು, ಟಿವಿ ಮಾಧ್ಯಮಗಳು ಕರಾವಳಿ ಕರ್ನಾಟಕದ ಜನರು ಅನಾಗರೀಕರೆಂದು ಈ ಚಾಪ್ಲಿನ್ ಘಟನೆಯ ಮೂಲಕ ಹೀಯಳಿಸಲು, ವಾಸ್ತವ ಬಚ್ಚಿಡಲು ಜೋಗಿ ಮತ್ತು ಜನಾರ್ಧನ ಸಿನಿ ಪತ್ರಕರ್ತ ಜೋಡಿ ಸದ್ಯಕ್ಕೆ ಯಶಸ್ವಿಯಾಗಿದೆ.
  ಜೋಗಿ ಮತ್ತವರ ಸಿನಿಮಾ ಮಿತ್ರರು ತಮ್ಮ ಮನೆಯಲ್ಲಿ ಅಥವಾ ಸ್ವಂತ ಜಾಗದಲ್ಲಿ ಚಾಪ್ಲಿನ್ ಅಥವಾ ಮೈಕೆಲ್ ಜಾಕ್ಸನ್ ಮೂರ್ತಿ ಸ್ಥಾಪಿಸಲಿ, ಯಾರೂ ಬೇಡವೆನ್ನುವುದಿಲ್ಲ. ಆದರ ಸರಕಾರೀ ಜಾಗದಲ್ಲಿ, ಅದರಲ್ಲೂ ರಮಣೀಯ ಕಡಲತಡಿಯಲ್ಲಿ ಸಂಬಂಧವೇ ಇಲ್ಲದ ನಟನ ಪ್ರತಿಮೆ ಸ್ಥಾಪನೆ ಆಗಬೇಕು, ಅದನ್ನು ವಿರೋಧಿಸುವವರು ಮೂಲಭೂತವಾದಿಗಳು, ತಾಲಿಬಾನಿಗಳೆಂದೆಲ್ಲಾ ಆರೋಪ ಮಾಡುವ ಪ್ರವೃತ್ತಿಯನ್ನು ಖಂಡಿಸಬೇಕಾಗಿದೆ.

  ಪ್ರತಿಕ್ರಿಯೆ
 4. chandrashekhar aijoor

  ಪ್ರಿಯ ಚಾಪ್ಲಿನ್,
  ಹೇಗಿದ್ದಿ ಮಾರಾಯ? ಮಳೆಯಲ್ಲಿ ಕಣ್ಣೀರಾದರೆ ಬೇರೆಯವರಿಗೆ ಕಾಣದೆಂದು ತಿಳಿದು ನಡೆದ ನೀನು ಸ್ವರ್ಗವನ್ನು ಕ್ಷಣಕ್ಕೂ ಇಷ್ಟಪಟ್ಟಿರಲಾರೆ ಬಿಡು. ನಾನು ಸಣ್ಣ ಹುಡುಗನಾಗಿದ್ದಾಗ ಈ ರಾಮಾಯಣ ಮಹಾಭಾರತಗಳನ್ನು ಅತಿ ರಂಜಕವಾಗಿ ಟಿವಿಗಳಲ್ಲಿ ತೋರಿಸುತ್ತಿದ್ದ ದಿನಗಳಲ್ಲೇ ನಿನ್ನನ್ನು ಮೊದಲು ಕಂಡದ್ದು.ಅವತ್ತು ನೋಡಿದ ರಾಮಾಯಣ ಮಹಾಭಾರತಗಳ ಪುಣ್ಯ ಪುರುಷರು ನನ್ನೊಳಗೆ ಎಷ್ಟು ಉಳಿದಿದ್ದಾರೋ ಗೊತ್ತಿಲ್ಲ? ಆದರೆ ಚಾಪ್ಲಿನ್ ಹೇಳಿ ಕೇಳಿ ಇದು ತಾಯಾಣೆ ದೇವ್ರುದಿಂಡ್ರಾಣೆ ಇಟ್ರೆ ಎಂಥ ಕೊಲೆಪಾತಕತನವು ಮಾಫಿಯಾಗುವಂಥ ದೇಶ. ಎಲ್ಲೋ ನಮ್ಮ ನೆನಪುಗಳಲ್ಲಿ ತನ್ನಪಾಡಿಗೆ ತಾನಿದ್ದ ನಿನ್ನನ್ನು ಈಗ ಇಲ್ಲಿನವರು statue ಮಾಡಲು ಹೊರಟಿದ್ದಾರೆ, ಜೊತೆಗೊಂದು ಕಂಡೀಷನ್: ಗೋಲ್ಗುಂಬಜ್ ಎದುರು ನಟ ನರಸಿಂಹರಾಜುವನ್ನೋ , ದ್ವಾರಕೀಶರನ್ನೋ ಅಥವಾ ತೆನಾಲಿ ರಾಮಕ್ರಿಷ್ಣನನ್ನೋ ಅಡ್ಡಡ್ಡ ಉದ್ದುದ್ದಾ ಪ್ರತಿಷ್ಠಾಪಿಸಿದರೆ ನಿನ್ನನ್ನು ಎಲ್ಲಿಬೇಕಾದ್ರು ಎಷ್ಟುದ್ದ ಬೇಕಾದ್ರೂ ನಿಲ್ಲಿಸಬಹುದಂತೆ. ಖಂಡಿತ ನೀನಿದನ್ನು ಬಯಸಿರಲಾರೆ. ನಿನ್ನ ಪ್ರತಿಮೆ ರೂಪುಗೊಂಡ ತಕ್ಷಣ ಅದನ್ನು ವಿರೂಪಗೊಳಿಸುವ ಇಲ್ಲವೇ ನಿನಗೊಂದು ಹೊಸ ಚೆಡ್ಡಿ, ಜನಿವಾರ ತೊಡಿಸಿ ನಿನ್ನ ಹೆಸರನ್ನೇ ಬದಲಿಸಿ ಒಂದು ಹೊಸ ಬಗೆಯ ಅಫಿಡವಿಟ್ ತಯಾರುಮಾಡುವ ಕೆಲಸಗಳು ಇಲ್ಲಿ ಎಗ್ಗಿಲ್ಲದೆ ನಡೆಯುತ್ತವೆ. ನಿನಗಿದೆಲ್ಲ ಬೇಕಾ ಚಾಪ್ಲಿನ್? ಹಿಟ್ಲರ್ನನ್ನು ಅಣಕಿಸಿ ಅಂಗಿಸಿ ಗೆದ್ದ ನಿನಗೆ ಇಲ್ಲಿನ ನಿಸ್ಸೀಮರನ್ನು ಅಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ. ಮನುಷ್ಯರನ್ನು ವಂಚಿಸುವ, ಸುಟ್ಟು ಸುಲಿದು ತಿಂದುಹಾಕುವ ಹೊಸಬಗೆಯ ಕಲೆಗಳನ್ನು ಜಗತ್ತಿನ ಎಲ್ಲ ಮೂಲೆಯ ನೀಚರು ಇಲ್ಲಿಂದ ಈ ದೇಶದಿಂದ ಕಲಿಯುವುದು ಸಾಕಷ್ಟಿದೆ.
  ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ.
  ನಮ್ಮ ನೆನಪುಗಳಲ್ಲಿ ಮಾತ್ರ ನೀನು evergreen…

  ಪ್ರತಿಕ್ರಿಯೆ
 5. Gopikavallabha

  ಪ್ರಿಯ ಕಲಿಗಣನಾಥ,
  ಜೋಗಿಯವರನ್ನು ನೀವು ತಪ್ಪು ಅರ್ಥ ಮಾಡಿಕೊಂಡಂತಿದೆ. ಕಳೆದ ಬಾರಿಯ ಅಂಕಣದಲ್ಲಿ, ಇದೇ ಅವಯಲ್ಲಿ ಜೋಗಿ ಪ್ರಗತಿಪರ ಸಾಹಿತಿಗಳ ಮೇಲೂ ವಿಮರ್ಶಕರ ಮೇಲೂ ನಂಜು ಕಾರಿದ್ದನ್ನು ಮರೆತುಬಿಟ್ಟಿರಾ ? ‘ತಲೆಗಟ್ಟಿನವರು- ಮೊಲೆಗಟ್ಟಿನವರು’ ಎಂದೆಲ್ಲಾ ಹಂಗಿಸಿ ಬರೆದದ್ದನ್ನು ಬಹುಶಃ ನೀವು ಓದಿರಲಾರಿರಿ. ಜೋಗಿ ಆಕ್ಟಿವಿಸ್ಟೂ ಅಲ್ಲ, ಲೆಫ್ಟಿಸ್ಟೂ ಅಲ್ಲ, ರೈಟಿಸ್ಟೂ ಅಲ್ಲ. ಅವರು ಕೇವಲ ಅಪಾರ್ಚುನಿಸ್ಟು- ಅವಕಾಶವಾದಿ. ಅವರನ್ನು ನಂಬಿ ನೀವು ಚಳವಳಿಗಿಳಿದರೆ ಹಳ್ಳ ಹತ್ತುತ್ತೀರಿ ಅಷ್ಟೆ.
  -ಗೋಪಿಕಾವಲ್ಲಭ

  ಪ್ರತಿಕ್ರಿಯೆ
 6. r t sharan

  ಚೇತನಾ, ನಿಮ್ಮ ಅಭಿಪ್ರಾಯ ಸರಿ. ಬಹು ಸಂಖ್ಯಾತರ ಮೇಲೆ ಆರೋಪ ಮಾಡುವ ವಿಷಯದಲ್ಲಿ ಇಲಿಯೂ ಹುಲಿಯಾಗುತ್ತೆ ಈ ದೇಶದಲ್ಲಿ. ನಮ್ಮ ಪ್ರಗತಿಪರ ಬುದ್ಧಿಜೀವಿಗಳು ತಾಲಿಬಾನ್ ಹಾಗು ಅದು ಹಂತ ಹಂತವಾಗಿ ಅಮಾನವೀಯ ರೀತಿಯಲ್ಲಿ ಮಾನವ ಹಕ್ಕುಗಳನ್ನು ತುಳಿಯುತ್ತಿರುವುದರ ಬಗ್ಗೆ ಬರೆಯಲಿ ನೋಡುವಾ

  ಪ್ರತಿಕ್ರಿಯೆ
 7. ಸಂದೀಪ್ ಕಾಮತ್

  “ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ”
  ಯಾವ ದೇಶ ಧರ್ಮವನ್ನು ಬಿಟ್ಟು ಬದುಕಿದೆ ಅಂತ ನನಗಿನ್ನೂ ಅರ್ಥ ಆಗಿಲ್ಲ!
  For Chaplin’s entire career, some level of controversy existed over claims of Jewish ancestry. Nazi propaganda in the 1930s prominently portrayed him as Jewish (named Karl Tonstein) relying on articles published in the U.S. press before,[30] and FBI investigations of Chaplin in the late 1940s also focused on Chaplin’s ethnic origins. There is no documentary evidence of Jewish ancestry for Chaplin himself. For his entire public life, he fiercely refused to challenge or refute claims that he was Jewish, saying that to do so would always “play directly into the hands of anti-semites.” Although baptised in the Church of England, Chaplin was thought to be an agnostic for most of his life.[31] ಅಂತ ವಿಕಿಪೀಡಿಯಾದಲ್ಲಿದೆ.ಚಾರ್ಲಿ ಚಾಪ್ಲಿನ್ ನ ಧರ್ಮದ ಬಗ್ಗೆಯೆ ದೊಡ್ಡ controversy ಇದೆಯಂತೆ.
  ಇಲ್ಲಿ ನೋಡಿದ್ರೆ ಅವನು ಕ್ರಿಶ್ಚಿಯನ್ ಅನ್ನೋ ಕಾರಣಕ್ಕೆ ಮೂರ್ತಿ ಸ್ಥಾಪನೆ ಆಗಲ್ವಂತೆ!
  ಇಂಥ ಕೀಳು ಮಟ್ಟದ ಮನಸ್ಥಿತಿ ಬರೀ ಭಾರತದಲ್ಲಷ್ಟೇ ಇರೋದು ಅನ್ನೋದು ’ಕೆಲವರ ’ ಭಾವನೆ ಅನ್ನಿಸುತ್ತೆ.
  ಮೊನ್ನೆ ಅಮೆರಿಕಾದಲ್ಲಿರೋ ಕಲೀಗ್ ಗೆ ’ಏನಪ್ಪಾ ಓಟ್ ಹಾಕಿದ್ಯಾ ?’ಅಂದ್ರೆ ’ಹೆಂಗ್ ಹಾಕೋದಯ್ಯ ನಾನು ಹೋಗೋದಕ್ಕೆ ಮುಂಚೆನೆ ಯಾರೋ ನನ್ ಓಟ್ ಹಾಕಿ ಬಿಟ್ಟಿದ್ರು !’ ಅನ್ನೋದಾ.
  ದೇವರಾಣೆಗೂ ಅಮೆರಿಕಾದಲ್ಲೂ ಹಾಗಾಗುತ್ತೆ ಅನ್ನೋದು ನನಗೆ ಗೊತ್ತಿರಲಿಲ್ಲ.
  ಮೇಲೆ ಬರೆದಿರೋದನ್ನು ನೋಡಿದ್ರೆ ಎಲ್ಲ ದರಿದ್ರದ ಕೆಲಸ ಭಾರತದಲ್ಲಷ್ಟೇ ಆಗೋದು ಅನ್ನೋ ರೀತಿ ಬರೆದಿದ್ದಾರೆ.
  India is great but all Indians are not.

  ಪ್ರತಿಕ್ರಿಯೆ
 8. chetana chaitanya

  ಹೌದು. ಚಾಪ್ಲಿನ್ನನ ಪ್ರತಿಮೆ ನಿಲ್ಲಿಸೋದ್ರಿಂದ ಅದೊಂದು ಪಿಕ್ನಿಕ್ ಸ್ಪಾಟ್ ಆಗಿ, ದೇವಸ್ಥಾನದ ವಾತಾವರಣಕ್ಕೆ ಧಕ್ಕೆಯಾಗಿ ಎಲ್ಲವೂ ಹದಗೆಡುತ್ತದೆಂದು ಅಲ್ಲಿನ ಬೆರಳೆಣಿಕೆಯಷ್ಟು ಮಂದಿ ಪ್ರತಿರೋಧ ತೋರಿದ್ದು ಹೌದು. ‘ದೇವಸ್ಥಾನಗಳಲ್ಲಿ ಹೆಚ್ಚಿನವುಗಳೆಲ್ಲ ಕಮರ್ಷಿಯಲ್ ಕಾಂಪ್ಲೆಕ್ಸ್ ಆಗುತ್ತಿರುವ ಈ ದಿನಗಳಲ್ಲಿ ಅದರ ಪಾವಿತ್ರ್ಯ ಕೆಡಿಸಲು ಚಾಪ್ಲಿನ್ನೇ ಆಗಬೇಕಾ?’ ಅಂತ ನಾನು ಈ ಹುಸಿ ಹಿಂದುತ್ವವಾದಿಗಳ ಮೇಲೆ ಖಂಡಾಪಟ್ಟೆ ಸಿಟ್ಟು ಬಂದು ವಾಚಾಮಗೋಚರ ಬಯ್ದುಕೊಂಡಿದ್ದೂ ನಿಜ.
  ಆದರೆ,
  ಹಾಗಂದ ಮಾತ್ರಕ್ಕೆ ಜೋಗಿಯ ಲೇಖನಕ್ಕೆ ಸಹಮತ ಎಂದಿಗೂ ಇಲ್ಲ, ಖಂಡಿತ ಇಲ್ಲ. ಜೊತೆಗೇ, ಕೆಲವು ಮಿತ್ರರ ಪ್ರತಿಕ್ರಿಯೆಗಳಿಗೂ.
  ಅತ್ತಲಿಂದ ಸಂತೋಶ್ ವರ್ಗೀಸ್ ‘ಅಂಥದ್ದೇನೂ ಇಲ್ಲ ಕಣೇ’ ಅಂತ ಫೋನ್ ಮಾಡಿದ್ದಾನೆ. ಶ್ರೀಪತಿ ಪ್ರತಿಮೆ ನಿಲ್ಲಿಸುವುದರ ಹಿಂದಿನ ಕಾನೂನು ತೊಡಕು ಮತ್ತು ಸ್ಥಳೀಯರ ವಿರೋಧದ ಕಾರಣ ಹೆಕ್ಕಿಟ್ಟು ಹೇಳುತ್ತಿದ್ದಾರೆ. ಮತ್ತೊಂದು ಕಡೆ (ಮಾಧ್ಯಮ ವರದಿಗಳ ಪ್ರಕಾರ) ಹೇಮಂತ್ ಗೋಕರ್ಣ ಬೀಚಿನತ್ತ ಮುಖ ಮಾಡಿದ್ದಾರೆ. ಬೈಂದೂರು ತಣ್ಣಗೆ ಕುಳಿತಿದೆ, ಮತ್ತು ಮಾಧ್ಯಮಗಳಲ್ಲಿ ಹೊತ್ತುರಿಯುತ್ತಿದೆ.
  ಉಜಿರೆ ವಿದ್ಯಾರ್ಥಿಯೊಬ್ಬನ ವಿಷಯ ಎರಡು ಬ್ಲಾಗುಗಳಲ್ಲಿ ಬಂದಿದ್ದನ್ನೇ ನಾನೂ ಹಾಕಿಕೊಂಡಿದ್ದಾಗ ಒಂದಿಬ್ಬರು, ‘ಇದು ಬೆಂಕಿ ಹಚ್ಚುವ ಕೆಲಸ, ಮೊದಲೇ ಕರಾವಳಿ ಸೂಕ್ಷ್ಮ. ಇಂಥವನೆಲ್ಲ ಒಳಗೊಳಗಿನ ಹೋರಾಟದಿಂದ ಸರಿದೂಗಿಸಬೇಕು’ ಅಂತೆಲ್ಲ ಕಮೆಂಟಿಸಿದ್ದರು. ಅರೆ! ಈಗೆಲ್ಲಿ ಹೋದರೋ? ಪದ್ಮಪ್ರಿಯ ಪ್ರಕರಣ, ಕೊನೆಗೆ ಭಯೋತ್ಪಾದಕರ ದಾಳಿ ಸಮಯದಲ್ಲೂ ‘ಮಾಧ್ಯಮ ಅವನ್ನೆಲ್ಲ ತೋರಿಸಿ ಜನರನ್ನ ಉದ್ವಿಗ್ನರಾಗಿಸಬಾರದು’ ಅಂತೆಲ್ಲ ಅಂದವರು, ಈಗ ಮಾಧ್ಯಮಗಳ ಮಸಾಲಾ ವರದಿಗಳನ್ನ ಚಪ್ಪರಿಸುತ್ತಿದ್ದಾರೆ ಅನಿಸುತ್ತದೆ.
  “ಚಾಪ್ಲಿನ್ ಪ್ರತಿಮೆ ಮುಟ್ಟುವ ಯೋಗ್ಯತೆ ಭಾರತಕ್ಕಿದೆಯೇ?” ಈ ಪ್ರಶ್ನೆಯನ್ನ ಅರಗಿಸ್ಕೊಳ್ಳಲಾಗುತ್ತಿಲ್ಲ. ಭಾರತದ ಯೋಗ್ಯತೆ ಅರಿತವರು ಇದಕ್ಕೆ ಸರಿಯಾದ ಉತ್ತರ ನೀಡಬಲ್ಲರು.
  ಇಷ್ಟಕ್ಕೂ ಪಕ್ಕದ ತಮಿಳುನಾಡಿನ ತಿರುವಳ್ಳುವರ್ ಪ್ರತಿಮೆಯನ್ನ ಇಲ್ಲಿ ನಿಲ್ಲಿಸಲಿಕ್ಕೆ, ನಮ್ಮ ಸರ್ವಜ್ಞನನ್ನ ಅಲ್ಲಿನಿಲ್ಲಿಸಲಿಕ್ಕೆ ಇಷ್ಟೆಲ್ಲ ತೊಡಕುಗಳು ಬಂದು ರಂಪಾಟವಾಗುತ್ತಿರುವಾಗ, ಚಾರ್ಲೀ ಪ್ರತಿಮೆ ಸ್ಥಾಪನೆಯ ಕಾನೂನು ತೊಡಕುಗಳ ಬಗ್ಗೆ ಹೇಳುವುದು ಕೂಡ ಮುಖ್ಯವಲ್ಲವೆ? ಈ ಹುಸಿ ಹಿಂದುತ್ವವಾದಿಗಳ ಮಾತಿಗೆ ಬೆಲೆಕೊಟ್ಟು ಯಾರೂ ಪ್ರತಿಮೆ ಸ್ಥಾಪನೆಗೆ ತಡೆಯೊಡ್ಡುವುದಿಲ್ಲ. ಕಾನೂನಿನ ಅಡ್ಡಿಯಿಂದ ಅದು ಸ್ಥಾಪನೆಯಾಗದೆ ಹೋದರೂ ನಾಳೆ ದಿನ ಈ ಮಾಧ್ಯಮಗಳು, ಬರಹಗಾರರು ಬಿಂಬಿಸಿದ ಇಮೇಜಿನ ಹಿಂದೆ ಬೀಳುವ ಜನ, ‘ಹಿಂದುತ್ವವಾದಿಗಳೇ ಅದನ್ನು ತಡೆದರು’ ಅಂತ ಬೊಬ್ಬಿಡುವುದಿಲ್ಲವೆ?
  ಕೊನೆಯಲ್ಲಿ ಒಂದು ಮಾತು.
  ಎದ್ದರೆ ಬಿದ್ದರೆ ‘ಸನಾತನಿಗಳು’ ಅಂತ ಗಿಳಿಪಾಠ ಒಪ್ಪಿಸುವುದು ಹೇಗೋ, ‘ಚಾಪ್ಲಿನ್ ಬದಲು ವಿವೇಕಾನಂದರನ್ನೋ ನರಸಿಂಹರಾಜುವಿನದೋ, ದ್ವಾರಕೀಶರದೋ ಪ್ರತಿಮೆ ನಿಲ್ಲಿಸಿ’ ಅಂತ ಅಗ್ರಹಿಸುವುದಿದೆಯಲ್ಲ, ಅದು ಕೂಡ ಹಾಸ್ಯಾಸ್ಪದ, ವಿಕೃತ.
  ಒಬ್ಬ ಜಾಗತಿಕ ಖ್ಯಾತಿಯ, ಪ್ರೀತಿಯ ಕಲಾವಿದ ನಮ್ಮ ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾನೆ ಅಂತ ಕೇಳುವುದಂತೂ ಶುದ್ಧ ಮೂರ್ಖತನ.
  ‘ಅವಧಿ’ಯ ಇಷ್ಟು ದೊಡ್ಡ ಸ್ಪೇಸನ್ನು ಆವರಿಸಿದ್ದಕ್ಕೆ ಕ್ಷಮೆಯಿರಲಿ.
  ಈ ವಿಷಯದ ಬಗ್ಗೆ ಮತ್ತೆ ಮಾತಾಡಲಾರೆ.
  ಧನ್ಯವಾದ.
  ಚೇತನಾ ತೀರ್ಥಹಳ್ಳಿ.

  ಪ್ರತಿಕ್ರಿಯೆ
 9. ravi

  ಚಲನಚಿತ್ರದ ಪ್ರಚಾರಕ್ಕಾಗಿ ಹೇಮಂತ ಹೆಗಡೆ ಹೇಳಿದ್ದು ಎಂದು ಯಾರಿಗೂ ಅರ್ಥವಾಗಲಿಲ್ಲವೇ?

  ಪ್ರತಿಕ್ರಿಯೆ
 10. ಸಂದೀಪ್ ಕಾಮತ್

  ರೀ ಗೋಪಿ ,
  ಬೆಂಗಳೂರಲ್ಲಿ ಸೈಟ್ ಬೆಲೆಯಷ್ಟೇ ಏರಿರೋದು .ಬ್ಲಾಗ್ ಗಳಿಗೆ wordpress ಹಾಗೂ blogspot ನವರೇ ಬೇಕಾದಷ್ಟು ಬಿಟ್ಟಿ space ಕೊಟ್ಟಿದ್ದಾರೆ,ನಿಮಗೇನ್ರಿ ಪ್ರಾಬ್ಲೆಮ್?

  ಪ್ರತಿಕ್ರಿಯೆ
 11. ಅಜಯ್

  ಚಂದ್ರಶೇಖರ ಐಜೂರರೇ, ಅಲ್ಲಿ ದ್ವಾರಕೀಶನ ಪ್ರತಿಮೆ ಮಾಡಿದರೆ ಇಲ್ಲ್ಲಿ ಚಾಪ್ಲಿನ್ ಪ್ರತಿಮೆ ಮಾಡಬಹುದು ಅಂತ ಹೇಳಿದ್ದಲ್ಲ ಅದು. ಆ ರೀತಿ ಮಾಡಿದರೆ ಎಷ್ಟು ಅಸಂಬದ್ಧವಾಗುವುದೋ ಅದೇ ರೀತಿ ಇದೂ ಕೂಡ ಎಂಬ ಹೋಲಿಕೆ. ಸುಮ್ಮನೇ ಅರೆಬರೆ ತಿಳುವಳಿಕೆಯಿಂದ ಮಾತಾಡುವುದನ್ನು ಬಿಡಿ.

  ಪ್ರತಿಕ್ರಿಯೆ
 12. Tejaswini

  ಚೇತನಾ ಅವರೆ,
  ನೀವು ಹೇಳಿದ್ದರಲ್ಲಿ ನನ್ನದೂ ಸಹಮತವಿದೆ. ಬೆಂಕಿ ಹಚ್ಚ ಬೇಡಿ.. ಹಚ್ಚ ಬೇಡಿ ಎನ್ನುತ್ತಲೇ ಹಚ್ಚುವ ಕೆಲಸ ಮಾಡುತ್ತಿರುತ್ತಾರೆ ಕೆಲವರು.
  ಇನ್ನು “ಚಾಪ್ಲಿನ್ ಪ್ರತಿಮೆ ಮುಟ್ಟುವ ಯೋಗ್ಯತೆ ಭಾರತಕ್ಕಿದೆಯೇ?”- ಈ ಪ್ರಶ್ನೆಗೆ ನಾನು ಅವರ ಪತ್ರದಲ್ಲೇ(“ಚಾಪ್ಲಿನ್‌ಗೊಂದು ಪತ್ರ”) ಪ್ರತಿಕ್ರಿಯಿಸಿದ್ದೇನೆ. ನಿಜಕ್ಕೂ ಇಂತಹ ಒಂದು ಪ್ರಶ್ನೆ ಕೇಳಿರುವುದೇ ತುಂಬಾ ಖೇದಕರ ಹಾಗೂ ಹಾಸ್ಯಾಸ್ಪದ.
  ನೀಲಾಂಜಲ, ಸಂದೀಪ್ – ನಿಮ್ಮ ಅಭಿಪ್ರಯಾಗಳಿಗೆ ನನ್ನದೂ ಸಂಪೂರ್ಣ ಅಭಿಮತವಿದೆ.

  ಪ್ರತಿಕ್ರಿಯೆ
 13. mahathi

  ಇಷ್ಟಕ್ಕೂ ತಮಾಶೆ ಅಂದರೆ, ನಮ್ಮ ಜರ್ಮನ್ ಸರ್ ಹೇಳ್ತಾ ಇದ್ರು ’ಚಾಪ್ಲಿನ್ ಒಬ್ಬ ಯಹೂದಿ’! Just for the sake of information!

  ಪ್ರತಿಕ್ರಿಯೆ
 14. Sathya S

  Lets us go a little beyond what is obvious. If this is supposed to be Hemant Hegde’s publicity stunt, he is only utilising the existing situation of intolerance. So the root cause is the situation and the Chaplin issue is an effect of it. What is desirable? treating the cause or the effects?
  Jogi avare, your write up reminded me of Mr.Satyanarayan’s (Kannada Prabha) editorial the day after Babri Masjid was demolished.
  It is time Chaplin should cover all the public spaces in words and images. Chaplin everywhere-on t shirts, in News papers, on bill boards-posters, Cinema halls, Chaplin masks, Chaplin costumes, Chaplin clubs, Chaplin Chaplin….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: