'ಜುಗಾರಿ ಕ್ರಾಸ್' ನಲ್ಲಿ ಗೋರಿಯೂ..? ಕೃತಿಯೋ..?

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಬಿ ಎಂ ಬಷೀರ್ ಗುಜರಿ ಅಂಗಡಿ ರಸ್ತೆ ಅಗಲೀಕರಣಕ್ಕೆ ಶಿವರಾಮಕಾರಂತರ ಮನೆ ನೆಲಸಮ! ಈ ಕುರಿತಂತೆ ಕಾರಂತರ ಅಭಿಮಾನಿಯೊಬ್ಬರು ಗೋಳಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ರಸ್ತೆ ಅಗಲೀಕರಣ, ಸೆಝ್, ಕೈಗಾರಿಕೆ ಇತ್ಯಾದಿಗಳ ಹೆಸರು ಸಹಸ್ರಾರು ಮನೆಗಳು ನೆಲ ಸಮವಾಗಿವೆ. ಹಸಿರು ತೋಟಗಳು ಬುಡ ಕಳಚಿ ಬಿದ್ದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಬಡ ಕುಟುಂಬಗಳು ಬೀದಿ ಪಾಲಾಗಿವೆ. ಶಿವರಾಮಕಾರಂತರ ಮನೆ ನೆಲಸಮವಾಗಿರುವುದು ಇವೆಲ್ಲಕ್ಕಿಂತ ಭಿನ್ನವೆಂದು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಒಂದು ರೀತಿಯಲ್ಲಿ, ಪ್ರದರ್ಶನಕ್ಕಷ್ಟೇ ಇದ್ದ ಈ ಮನೆ ಬಿದ್ದರೂ, ಹೋದರು ದೊಡ್ಡ ನಷ್ಟವೆಂದು ಅನ್ನಿಸುತ್ತಿಲ್ಲ. ಕಾರಂತರ ಸಾಹಿತ್ಯಕ್ಕೂ ಆ ಮನೆಗೂ ಯಾವ ಸಂಬಂಧವನ್ನೂ ಕಲ್ಪಿಸಲು ನನಗೆ ಸಾಧ್ಯವಾಗುತ್ತಿಲ್ಲ. ಕರಾವಳಿಯ ಸಹಸ್ರಾರು ಜನರ ಬದುಕೇ ಈ ಅಭಿವೃದ್ಧಿಯ ಪಾಲಾಗುತ್ತಿರುವಾಗ, ಸ್ಮಾರಕದಂತಿರುವ ಈ ಮನೆ ಹೋದರೆಷ್ಟು ಬಿದ್ದರೆಷ್ಟು? ಎಲ್ಲಿಯವರೆಗೆ ನಮ್ಮ ನಾಡುವೆ ಕಾರಂತರ ಕೃತಿಗಳು, ಚಿಂತನೆಗಳು ಜೀವಂತವಿರುತ್ತದೋ ಅಲ್ಲಿಯವರೆಗೆ ನಾವು ಈ ಸ್ಮಾರಕಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ತುಂಬಾ ವರ್ಷಗಳ ಹಿಂದೆ ಮೂಡಿಗೆರೆಯ ತೇಜಸ್ವಿ ಅಭಿಮಾನಿಯೊಬ್ಬರು ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡುತ್ತಾ, ತೇಜಸ್ವಿ ಅವರ ಮನೆ, ತೋಟವನ್ನು ಮಾರುತ್ತಿದ್ದಾರಂತೆ ಎಂದು ಆತಂಕದಿಂದ ನುಡಿದರು. ‘ನಾವು ಈ ಕುರಿತಂತೆ ಅವರ ಕುಟುಂಬದ ಜೊತೆಗೆ ವಿಚಾರಿಸಿದೆವು. ಅಂತಹ ಪ್ರಸ್ತಾಪವಿಲ್ಲ ಎಂದು ಅವರು ನಮಗೆ ಸಮಜಾಯಿಶಿ ನೀಡಿದರು. ಅವರ ಸಮಜಾಯಿಶಿ ಕೇಳಿ ಒಂದಿಷ್ಟು ಸಮಾಧಾನವಾಯಿತು ’ ಎಂದೆಲ್ಲ ಬಡಬಡಿಸಿದರು. ಈ ಹಿಂದೆ ಲಂಕೇಶರ ಮಾವಿನ ತೋಟವನ್ನು ಅವರ ಪುತ್ರ ಮಾರಿದ್ದಾರಂತೆ ಎಂದು ಲಂಕೇಶ್ ಅಭಿಮಾನಿಯೊಬ್ಬರು, ಅಘಾತದಂದ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ‘ನೋಡಿ ಸಾರ್, ಲಂಕೇಶ್‌ಗೆ ಎಂತಹ ಅವಮಾನ ಮಾಡಿ ಬಿಟ್ರು…?’ ಎಂದು ಗೋಳಾಡಿದ್ದರು. ಲಂಕೇಶರ ಅಲೋಚನೆಗಳಿಗೆ, ಚಿಂತನೆಗಳಿಗೆ ದ್ರೋಹವಾದಾಗ ಇದೇ ಮನುಷ್ಯ ಲಂಕೇಶ್ ವಿರೋಧಿಗಳ ಗುಂಪಿನಲ್ಲಿ ನಿಂತು ಮಾತನಾಡಿದ್ದು, ನಂತರದ ವಿಷಯ. ಒಬ್ಬ ಸಾಹಿತಿಯ ಆಸ್ತಿ, ಮನೆ ಇತ್ಯಾದಿಗಳನ್ನು ಅವರ ಕುಟುಂಬ ಮಾರುವುದನ್ನು ತಡೆಯುವುದರಿಂದ ಸಾಹಿತ್ಯಕ್ಕೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ತೋಟ, ಆಸ್ತಿ ಇತ್ಯಾದಿಗಳನ್ನು ಮಾಡುವುದು ಸಾಹಿತ್ಯಿಕ ಕಾರಣಗಳಿಗಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣಗಳಿರುತ್ತವೆ. ತೇಜಸ್ವಿ, ಲಂಕೇಶರು ಪಕ್ಕಾ ವ್ಯವಹಾರಿಗಳೂ ಆಗಿದ್ದರು. ತೇಜಸ್ವಿಯಲ್ಲಿ ಯಾವುದೇ ಭೂಮಾಲಕನಿಗೆ ಸಲ್ಲುವ ಸಿಟ್ಟು, ಸಿಡುಕು, ಅಹಂಕಾರ ಅವರಲ್ಲಿತ್ತು. ಅವರ ‘ಪುಸ್ತಕ ಪ್ರಕಾಶನ’ ಮತ್ತು ಅವರ ತೋಟ ಪಕ್ಕಾ ವ್ಯಾವಹಾರಿಕ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ರೂಪುಗೊಂಡದ್ದು. ತೇಜಸ್ವಿಯವರ ತೋಟವನ್ನು ಮಾರಬೇಕೋ ಬೇಡವೋ ಎಂದು ತೀರ್ಮಾನಿಸುವವರು ತೇಜಸ್ವಿಯ ನಂತರದ ವಾರಸುದಾರರೇ ಹೊರತು ಸ್ವಯಂಘೋಷಿತ ತೇಜಸ್ವಿ ಅಭಿಮಾನಿಗಳಲ್ಲ. ತನ್ನ ತೋಟದ ವಿಷಯದಲ್ಲಿ ‘ಅಭಿಮಾನಿ’ಗಳೆಂದು ಕರೆಸಿಕೊಂಡವವರು ಮೂಗು ತೂರಿಸುವುದು ತೇಜಿಸ್ವಿಗೆ ಇಷ್ಟವಾಗುವ ವಿಷಯವೂ ಅಲ್ಲ. ನಾವು ಭೂಮಾಲಕ ತೇಜಸ್ವಿ ಮತ್ತು ಸಾಹಿತಿ ತೇಜಸ್ವಿಯನ್ನು ಈ ಸಂದರ್ಭದಲ್ಲಿ ಬೇರೆ ಬೇರೆಯಾಗಿ ನೋಡಲೇ ಬೇಕಾಗುತ್ತದೆ. ತೇಜಸ್ವಿಯ ತೋಟದಲ್ಲಿ ಒಂದು ವೇಳೆ, ಅವರ ಗೋರಿ ಇದ್ದಿದ್ದರೂ ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿದ್ದಿರಲಿಲ್ಲ. ನಾವು ನಿಜವಾಗಿಯೂ ತೇಜಸ್ವಿಯ ಅಭಿಮಾನಿಗಳಾಗಿದ್ದರೆ, ನಾವು ತೇಜಸ್ವಿಯನ್ನು ಹುಡುಕಬೇಕಾದದ್ದು, ತೇಜಸ್ವಿಯನ್ನು ಉಳಿಸಬೇಕಾದದ್ದು ಅವರ ಚಿಂತನೆ, ಬರಹಗಳು, ಕೃತಿಗಳ ಮೂಲಕ. ತೇಜಸ್ವಿ ಬೆಳೆಸಿದ ವಾಣಿಜ್ಯ ತೋಟದಲ್ಲಿ ಸಾಹಿತ್ಯಾಭಿಮಾನಿಗಳಿಗೇನು ಕೆಲಸ? ಆ ತೋಟದಲ್ಲಿ ತೇಜಸ್ವಿಯ ಬೆವರಿಗಿಂತ ಹೆಚ್ಚು ಅನಾಮಿಕ ಕಾರ್ಮಿಕರ ಬೆವರೇ ಹರಿದಿದೆ. ತೋಟದ ಒಡೆಯ ತೇಜಸ್ವಿಯೇ ಆಗಿರಬಹುದು. ಆದರೆ ಆ ಮರಗಿಡಗಳನ್ನು ಕೇಳಿದರೆ ಅದು ತನಗೆ ನೀರುಣಿಸಿದ ಯಾವನೋ ಕಾರ್ಮಿಕನನ್ನು, ತನಗೆ ನೆರಳು ಕೊಟ್ಟ ಯಾವುದೋ ಕೂಲಿಯವನ ಹೆಸರನ್ನು ಪಿಸುಗುಟ್ಟಬಹುದು. ತೇಜಸ್ವಿ ಎಂಬ ಮಹಾನ್ ಸಾಹಿತಿಯ ಹೆಸರು ಆ ತೋಟದ ಮರಗಿಡಗಳಿಗೆ ಗೊತ್ತಿದೆಯೋ ಇಲ್ಲವೋ ಎನ್ನುವುದನ್ನು ಅರಿತವರು ಯಾರು? ತೇಜಸ್ವಿ ತಮ್ಮ ತೋಟದ ಪ್ರತಿ ಗಿಡಗಳನ್ನು ಪ್ರೀತಿಸಿರಬಹುದು. ಆದರೆ ಯಾರು ಯಾರನ್ನು ಹೆಚ್ಚು ಪ್ರೀತಿಸಿರಬಹುದು? ಆ ಮರಗಿಡಗಳು ತೇಜಸ್ವಿಯನ್ನು ಅಷ್ಟೇ ಪ್ರೀತಿಯಿಂದ ಕಾಣುವುದಕ್ಕೆ ಅವುಗಳ ಬಳಿಯೂ ಒಂದಿಷ್ಟು ಕಾರಣಗಳು ಬೇಡವೇ? ಯಾವ ಕೂಲಿ ಕಾರ್ಮಿಕನ ಬೆರಳ ಸ್ಪರ್ಶದಿಂದ ಆ ಗಿಡಗಳು ಅರಳಿದವೋ, ಯಾವ ರೈತನ ಬೆವರ ಪರಿಮಳದಿಂದ ಗಿಡಗಳು ಚಿಗುರಿದವೋ, ಯಾವ ಕೆಲಸದಾಳು ಸುರಿದ ನೀರಿನಿಂದ ಆ ಗಿಡಗಳು ತಮ್ಮ ದಾಹ ಇಂಗಿಸಿಕೊಡವೋ ಆ ಜನರ ಸ್ಮಾರಕ ಆ ಗಿಡಗಳು. ಅಷ್ಟೇ ಹೊರತು, ಆ ತೋಟ ಯಾವ ಕಾರಣಕ್ಕೂ ತೇಜಸ್ವಿಯ ಸ್ಮಾರಕವಾಗಲಾರದು. ತೇಜಸ್ವಿ ಅದರ ಮಾಲಕರು ಅಷ್ಟೇ. ಸದ್ಯ ತೇಜಸ್ವಿ ಇಲ್ಲ. ಅದರ ವಾರಸುದಾರರು ತೇಜಸ್ವಿ ಕುಟುಂಬ. ಸಹಜವಾಗಿಯೇ ಅದನ್ನು ಮಾರಲು ಹೊರಟಿದ್ದಾರೆ. ಇಲ್ಲಿ ಸಾಹಿತ್ಯ, ಭಾವನೆ ಇತ್ಯಾದಿಗಳ ಪ್ರಶ್ನೆ ಎಲ್ಲಿ ಬಂತು? ಸಾಹಿತಿ, ಚಿಂತಕನೊಬ್ಬ ಸತ್ತಾಕ್ಷಣ ಅವರು ಬದುಕಿದ ಮನೆ, ತೋಟ ಅವನನ್ನು ಮಣ್ಣು ಮಾಡಿದ ಸ್ಥಳ ಇತ್ಯಾದಿಗಳಲ್ಲಿ ಆತನನ್ನು ಹುಡುಕುವ ಪ್ರಯತ್ನ ನಡೆಸುತ್ತೇವೆ. ಒಂದು ಸಂಸಾರ ಬಾಳಿ ಬದುಕಿ, ಜೀವ ತುಂಬ ಬೇಕಾದ ಮನೆಯನ್ನು ಸಾಹಿತಿಯ ಹೆಸರಿನಲ್ಲಿ ನಾವು ‘ಗೋರಿ’ಯನ್ನಾಗಿ ಪರಿವರ್ತಿಸುತ್ತೇವೆ. ಯಾವ ಸಾಹಿತಿಯೂ ತಾನು ಬದುಕಿ, ಬಾಳಿದ ಮನೆ ಮನುಷ್ಯರಿಲ್ಲದ, ಮಕ್ಕಳ ಚಿಲಿಪಿಲಿಯಿಲ್ಲದ, ನಗು, ಅಳುವಿಲ್ಲದ ಶ್ಮಶಾನವಾಗಲು ಬಯಸುವುದಿಲ್ಲ. ನಾವು ಯಾವ ಕಾರಣಕ್ಕಾಗಿ ಆತ ಬದುಕಿದ ಮನೆಯನ್ನು ನೋಡಬೇಕು. ಒಬ್ಬ ಸಾಹಿತಿಯ ಕುರಿತಂತೆ ನಮಗೆ ನಿಜಕ್ಕೂ ಕಾಳಜಿಯಿದ್ದರೆ, ನಾವು ಉಳಿಸಬೇಕಾದದ್ದು ಆತನ ಚಿಂತನೆಗಳನ್ನು, ಆಲೋಚನೆಗಳನ್ನು ಆತನ ಕೃತಿಗಳನ್ನು, ಸಾಹಿತಿಗಳ ಆಲೋಚನೆ, ಚಿಂತನೆಗಳು, ಆತನ ಸಾಹಿತ್ಯಕ ಕೊಡುಗೆಗಳು ನಮ್ಮ ಕಣ್ಮುಂದೆಯೇ ಇಲ್ಲವಾಗುತ್ತಿರುವಾಗ, ನಾವು ಆತನ ಮನೆ, ಕಕ್ಕಸು, ಬಚ್ಚಲು ಮನೆ, ತೋಟ ಇತ್ಯಾದಿಗಳನ್ನು ಉಳಿಸಿ, ಅದನ್ನು ಸ್ಮಾರಕವಾಗಿಸಿ ಸಾಧಿಸುವುದಾದರೂ ಏನನ್ನು? ಈ ನಾಡನ್ನು ನಾವು ಸಾಹಿತಿಗಳ ಗೋರಿಗಳ ತೋಟವನ್ನಾಗಿಸಲು ಹೊರಟಿದ್ದೇವೆಯೇ? ಎಲ್ಲಿ ಕವಿಯನ್ನು ಜೀವಂತವಾಗಿ ಉಳಿಸಲು ನಮಗೆ ಸಾಧ್ಯವಿತ್ತೋ ಅಲ್ಲಿ ಆತನನ್ನು ಉಳಿಸುವ ಪ್ರಯತ್ನ ಮಾಡದೇ, ಆತನ ಮನೆ, ತೋಟ ಇತ್ಯಾದಿಗಳನ್ನು ಗೋರಿಗಳನ್ನಾಗಿಸಿ ಆರಾಧಿಸಲು ಹೊರಟಿರುವ ನಾವು ಕವಿ, ಸಾಹಿತಿಗಳಿಗೆ ನಿಜಕ್ಕೂ ಗೌರವ ಸಲ್ಲಿಸುತ್ತಿದ್ದೇವೆ ಎಂದೆನಿಸುತ್ತದೆಯೇ? ತೇಜಸ್ವಿ, ಲಂಕೇಶ್ ಇಲ್ಲದ ಈ ದಿನಗಳ ಕುರಿತಂತೆ ನಾವು ಒಂದಿಷ್ಟು ಯೋಚಿಸೋಣ. ಅವರು ಯಾವ ಶಕ್ತಿಯನ್ನು ವಿರೋಧಿಸುತ್ತಿದ್ದರೋ ಆ ಶಕ್ತಿ ಇಂದು ಕರ್ನಾಟಕದಲ್ಲಿ ವಿಜೃಂಭಿಸುತ್ತಿದೆ. ಬಿಜೆಪಿಯ ವಿರುದ್ಧ ತನ್ನ ಜೀವಮಾನದುದ್ದಕ್ಕೂ ತೇಜಸ್ವಿ ಮಾತನಾಡಿದರು.. ಆದರೆ ಇಂದು ಆಗುತ್ತಿರುವುದೇನು? ತೇಜಸ್ವಿಯ ನೆಲದಲ್ಲಿ ಸಂಘಪರಿವಾರ ತನ್ನ ಹೆಡೆಯನ್ನು ಬಿಚ್ಚಿದೆ. ಲಂಕೇಶ್, ರಾಮ್‌ದಾಸ್, ತೇಜಸ್ವಿ ಇಲ್ಲದ ಈ ದಿನಗಳಲ್ಲಿ ‘ಗಬ್ಬು’ ಸಾಹಿತಿಗಳಿಗೆ ಹುಚ್ಚು ಧೈರ್ಯ ಬಂದಿದೆ. ಕೆ.ವಿ.ತಿರುಮಲೇಶ್, ಸರಜೂಕಾಟ್ಕರ್, ಚಿದಾನಂದ ಮೂರ್ತಿ, ಟಿ.ಎನ್.ಸೀತಾರಾಂ, ಭೈರಪ್ಪ… ಹೀಗೆ… ಪರಸ್ಪರರ ನಡುವಿನ ಪರದೆ ತೆಳುವಾಗಿದೆ. ಇಂತಹ ದಿನಗಳಲ್ಲಿ ನಾವು ತೇಜಸ್ವಿ, ಲಂಕೇಶ್, ಕಾರಂತರ ಬರಹಗಳನ್ನು, ಕೃತಿಗಳನ್ನು ಜೀವಂತವಾಗಿಡಲು ಶ್ರಮಿಸಬೇಕು ಹೊರತು ಅವರ ಗೋರಿಗಳನ್ನಲ್ಲ. ಶಿವರಾಮ ಕಾರಂತರು ಬಾಳಿ ಬದುಕಿದ ಕರಾವಳಿಯ ಇಂದಿನ ಸ್ಥಿತಿ ಹೇಗಿದೆ? ಅಭಿವೃದ್ಧಿ ದಾಪುಗಾಲಿಡುತ್ತಿದೆ. ಪರಿಸರ ಕೆಟ್ಟು ಕೆರಹಿಡಿಯುತ್ತಿದೆ. ಇಂತಹ ವಾತಾವರಣದಲ್ಲಿ ಶಿವರಾಮಕಾರಂತರ ಮನೆ ನೆಲಸಮವಾಗುವುದು ಒಂದು ರೂಪಕದಂತಿದೆ. ಅಷ್ಟೇ. ನಾವು ಈ ನಾಡಿನಲ್ಲಿ ಸಾಹಿತಿಗಳ, ಕವಿಗಳ, ಚಿಂತಕರ ಗೋರಿಗಳ ತೋಟವನ್ನು ಬೆಳೆಯುವುದು ಬೇಡ. ಅದರ ಕಾವಲುಗಾರರಾಗುವುದು ಬೇಡ. ಕುವೆಂಪು ಬಾಳಿದ ಮನೆಗೂ, ಮಲೆನಾಡಿನ ಒಬ್ಬ ‘ಗುತ್ತಿ’ ಬಾಳಿದ ಮನೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಬರೇ ಕಲ್ಲು ಗೋಡೆಗಳವು. ಈ ನಾಡಿನಲ್ಲಿ ಎಲ್ಲ ಸಾಹಿತಿಗಳ ಸ್ಮಾರಕಗಳು, ಮನೆಗಳು ಬಿದ್ದು ಹೋಗಲಿ. ಉಳಿವುದಿದ್ದರೆ ಅವರ ಆಲೋಚನೆಗಳು, ಚಿಂತನೆಗಳು, ಬರಹಗಳು, ಕೃತಿಗಳು ಉಳಿಯಲಿ. ಅವುಗಳ ತಳಹದಿಯಲ್ಲಿ ಸುಭದ್ರ ಕನ್ನಡ ನಾಡು ರೂಪು ಪಡೆಯಲಿ. ಕವಿ, ಸಾಹಿತಿಗಳ ಗೋರಿಗಳ ಮೇಲೆ ಈ ನಾಡನ್ನು ಕಟ್ಟುವ ಆಲೋಚನೆಗಳನ್ನು ಬಿಟ್ಟು ಬಿಡೋಣ. ಒಂದು ವೇಳೆ ಒಬ್ಬ ಕವಿಯ ಗೋರಿ, ಮನೆ, ತೋಟ ಮಹತ್ವವನ್ನು ಪಡೆಯುತ್ತದೆಯೆಂದಾದರೆ ಆ ಮಹತ್ವ ಆ ಕವಿಯ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿ. ಅದರ ಮಹತ್ವವನ್ನು ನಿರ್ಧರಿಸುವ ಸ್ವಾತಂತ್ಯ ಅವರಿಗೆ ಮಾತ್ರ ಇರಲಿ.]]>

‍ಲೇಖಕರು G

March 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This