‘ಜುಗಾರಿ ಕ್ರಾಸ್’ ನಲ್ಲಿ ‘ದೇಶಕಾಲ’ದ ಬಗ್ಗೆ ಚರ್ಚೆ

‘ಜುಗಾರಿ ಕ್ರಾಸ್’ ಹೇಳಿ ಕೇಳಿ ಚರ್ಚೆ, ಸಂವಾದಕ್ಕೆ ಇರುವ ವೇದಿಕೆ. ಕನ್ನಡದ ಸಾಹಿತ್ಯವನ್ನ, ಜಾತಿ, ಧರ್ಮ, ಲಿಂಗ ಆಧಾರಿತ ಚರ್ಚೆಯನ್ನ ಗಂಭೀರವಾಗಿ ನೋಡುತ್ತಾ ಬಂದಿರುವ, ಆ ಚರ್ಚೆಯನ್ನು ಜೀವಂತವಾಗಿಟ್ಟಿರುವ ಇಬ್ಬರು ಲೇಖಕರಾದ ಮಂಜುನಾಥ ಲತಾ ಹಾಗೂ ಚಂದ್ರಶೇಖರ ಐಜೂರು ಅವರು ಇಲ್ಲಿ ‘ದೇಶ ಕಾಲ’ ದ ವಿಶೇಷ ಸಂಚಿಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಅಭಿಪ್ರಾಯದ ಬಗ್ಗೆ ನೀವೇನಂತೀರಿ?? . ಈ ಚರ್ಚೆಗೆ ‘ಅವಧಿ’ ಪ್ರತಿಕ್ರಿಯೆಗಳನ್ನು ಎದುರು ನೋಡುತ್ತಿದೆ. ಚರ್ಚೆ ಸಂಯಮ ಕಳೆದುಕೊಳ್ಳದಂತಿರಲಿ...

-ಮಂಜುನಾಥ ಲತಾ

ಚಂದ್ರಶೇಖರ ಐಜೂರು

‘ದೇಶ’ವಿದೇನಹಾ! ‘ಕಾಲ’ವಿದೇನಹಾ!

ಉತ್ತರ ಕರ್ನಾಟಕದಲ್ಲಿ ನೆರೆಹಾವಳಿಗೆ ಸಿಕ್ಕಿ ಬದುಕು, ಮನೆ, ಕನಸುಗಳನ್ನೆಲ್ಲ ಆ ಜನ ಕಳೆದುಕೊಂಡು ವರ್ಷವಾಯಿತು. ಅವರ ಒಡಲ ಸಂಕಟಗಳಿಗೆ ಈಗ ವಾರ್ಷಿಕೋತ್ಸವ! ಆ ಜನ ಅಳಿದುಳಿದ ತಮ್ಮ ಬದುಕಿನ ಅವಶೇಷಗಳನ್ನು ಒಟ್ಟುಗೂಡಿಸಿ ಬದುಕುವ ಅನಿವಾರ್ಯ ಆಟವನ್ನು ಮತ್ತೆ ಶುರುಮಾಡಿಕೊಂಡಿದ್ದಾರೆ. ನಮ್ಮೆಲ್ಲ ಆಳುವ ವರ್ಗ ಆ ‘ಉತ್ತರ ದೇಶ’ವನ್ನೇ ಮರೆತು ತನ್ನ ಸರ್ಕಾರದ ಗ್ರ್ಯಾಂಡ್ ಪಾರ್ಟಿಗೆ ಸಿದ್ಧವಾಗುತ್ತಿದೆ. ಆಳುವ ಜನಗಳ ಧೋರಣೆ ಇದಾದರೆ, ಬೆಂಗಳೂರು ನಗರದಲ್ಲೆಲ್ಲ ಸೌಂದರ್ಯವನ್ನೇ ಕಾಣಬಯಸುವ, ಸಂತೋಷವನ್ನೇ ಹುಡುಕುವ ‘ಸುಸಂಸ್ಕೃತ ಸಾಂಸ್ಕೃತಿಕ ವರ್ಗ’ವೊಂದು ತನ್ನ ಸೃಜನಶೀಲತೆಯನ್ನು, ಸಂತೋಷ, ಸಂಭ್ರಮ, ಸಾಹಿತ್ಯಕ ಚಪಲಗಳನ್ನೆಲ್ಲ ವಿಶೇಷ ಸಂಚಿಕೆಗಳ ಮೂಲಕ ಉಣಬಡಿಸಲು ಎರಡನೇ,ಮೂರನೇ ಬಾರಿಗೆ ರೆಡಿಯಾಗುತ್ತಿದೆ.

ಹಾಗೆ ಕಳೆದುಹೋದ ತಮ್ಮ ಊರಿಗೆ, ಸದ್ಯಕ್ಕೊಂದು ಸೂರಿಗೆ, ಒಂದಿಷ್ಟು ಅನ್ನ ಸಾರಿಗೆ ದಿನವಿಡೀ ಹೋರಾಟಕ್ಕಿಳಿದಿರುವ ಆ ‘ಉತ್ತರ ದೇಶ’ದ ಜನರನ್ನು ‘ದೇಶ ಕಾಲ’ವೆಂಬೊಂದು ನಿಮ್ಮ ಮನೆಯಷ್ಟೇ ದೊಡ್ಡ ಗಾತ್ರದ ಪತ್ರಿಕೆಯೊಂದು ಬಂದಿದೆ; ನೋಡಿದಿರಾ? ಅಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ?’ ಎಂದು ಕೇಳಿದರೆ ಅವರು ಏನು ಉತ್ತರ ಹೇಳಬಲ್ಲರು? ಬಹುಶಃ ಅವರು ಹೇಳುವ ಉತ್ತರ ಇದಾಗಿರುತ್ತದೆ: ‘ನೆಟ್ಟಗೆ ಹೊಟ್ಟೆಗೆ ಅನ್ನ ಕಾಣದ ನಾವು ಇನ್ನಾವ ‘ದೇಶ’ವನ್ನು ಕಂಡೇವು, ಇನ್ನಾವ ‘ಕಾಲ’ವನ್ನು ಕಂಡೇವು’

ಹಾಗೆಯೇ ಈ ‘ದೇಶ ಕಾಲ’ದ ಮಂದಿಯನ್ನೂ ‘ಇದೇ ದೇಶದಲ್ಲಿ, ಇದೇ ‘ಕಾಲ’ದಲ್ಲಿ ಹೀಗೆ ಬದುಕು ಮೂರಾಬಟ್ಟೆಯಾಗುತ್ತಿರುವುದನ್ನು ನೀವು ಕಂಡಿರಾ? ಇದೇ ‘ದೇಶ’ದಲ್ಲಿ ಇದೇ ‘ಕಾಲ’ದಲ್ಲಿ ಅತ್ತು ಅತ್ತು ಸೊರಗಿದವರ, ಅಸ್ಪೃಶ್ಯತೆಯಲ್ಲಿ ನರಳಿದವರ ನೋವು ಕಂಡಿರಾ?, ನೀವು ಕಂಡಿರಾ?’ ಎಂದು ಕೇಳಿದರೆ ಬಹುಶಃ ಅವರ ಉತ್ತರ ಹೀಗಿರಬಹುದೇನೋ: ವಿವರಗಳಿಗೆ ಈ ಸಲದ ‘ದೇಶಕಾಲ’ ವಿಶೇಷಾಂಕ ನೋಡಿ; ಬಹುಶಃ ನಿಮಗೆ ಅದಿನ್ನೂ ಸಿಕ್ಕದಿದ್ದರೆ ಕೆಲ ದಿನ ಕಾಯಿರಿ-ಅದು ಅದ್ಧೂರಿಯಾಗಿ ಎರಡನೇ ಮುದ್ರಣಕ್ಕೆ ಅಣಿಯಾಗುತ್ತಿದೆ!

ಕೊನೆಗೂ ಇವರಿಂದ ಉತ್ತರ ಸಿಕ್ಕಿತಲ್ಲ ಎಂದು ಅಲ್ಲಿ, ಇಲ್ಲಿ, ಹುಡುಕಿ, ತಾಲ್ಲೂಕಾಫೀಸಿನಲ್ಲಿ ಕೊಳೆಯುತ್ತಿರುವ ನೆರೆಪರಿಹಾರದವರ ಬೃಹತ್ ಕಡತದಂತಿರುವ ‘ದೇಶ ಕಾಲ’ದ ವಿಶೇಷ ಸಂಚಿಕೆಯನ್ನು ಹೊತ್ತು ತಂದು ನೋಡಿದ್ದಾಯಿತು. ಅಲ್ಲಿ ಉತ್ತರವೂ ಸಿಕ್ಕಿತು. ಆ ಉತ್ತರದ ಆಧಾರದ ಮೇಲೆ ನಾವು ‘ದೇಶಕಾಲ’ದ ಲೆಕ್ಕಾಚಾರವನ್ನು ಹೀಗೆ ಕಂಡು ಹಿಡಿದೆವು:

ಇವರಿರುವ ಗ್ರಹವೇ ಬೇರೆ. ಈ ಗ್ರಹ ದಲ್ಲಿ ಮಳೆಗೆ ಸಿಲುಕಿ ಜೋಪಡಿಗಳು ಮುಳುಗುವ, ಬದುಕು ನಾಶವಾಗುವ ದುರಂತಗಳೆಲ್ಲ ಘಟಿಸುವುದಿಲ್ಲ. ನಳನಳಿಸುವ ಹೂತೋಟದಿಂದಲೇ ಶೃಂಗಾರಗೊಂಡಿರುವ ಈ ಗ್ರಹ ದಲ್ಲಿ ಲಕ್ಷ್ಮೀನಾರಾಯಣ ಭಟ್ಟರ ಗೀತೆಗಳನ್ನೂ, ಎಚ್ಚೆಸ್ವಿಯವರ ಕವಿತೆಗಳನ್ನೂ, ಲಕ್ಷ್ಮಣರಾಯರ ‘ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರ’ ಹಾಡುಗಳನ್ನು ತುಂಬಿದೆದೆಯ ಪಾಪ್ ಗಾಯಕಿಯೊಬ್ಬಳೋ, ಕ್ರಿಕೆಟಿಗನೊಬ್ಬನೋ ರಾಗವಾಗಿ ಪಾಡುತ್ತಾರೆ; ‘ಪಾಡಿ ಪೊಗಳಲ್ ಅದು ಅತಿಮೋದವೆನಿಪುದು!’

ಇರಲಿ, ಇಲ್ಲೊಂದು ಬಡವರ, ಶೋಷಿತರ ಮ್ಯೂಸಿಯಮ್ ಇದೆ. ಅವರನ್ನು ಯಾವತ್ತಿಗೂ ಮುಟ್ಟಿ ನೋಡಿ ಮಾತನಾಡಿಸಲು ಅಷ್ಟಾಗಿ ಇಷ್ಟಪಡದ ಇಲ್ಲಿನ ವಿಶ್ವವಿಖ್ಯಾತ ಲೇಖಕರು ಪ್ರವೇಶ ದರ ಎಷ್ಟೇ ದುಬಾರಿಯಾದರೂ ಸರಿ; ತೆತ್ತು ಬಡವರನ್ನು, ಶೋಷಿತರನ್ನು ವೀಕ್ಷಿಸಿ ಮರುಕಪಟ್ಟು ಕಿರುಬೆರಳಿನಿಂದ ಕಣ್ಣೀರು ಕೆಡವುತ್ತಾರೆ. ಇವರಿಗೆ ಹಸಿದವರ ಬಗ್ಗೆ, ದು:ಖ, ಸಂಕಟಗಳಲ್ಲಿರುವವರ ಬಗ್ಗೆ ಕತೆ, ಕಾವ್ಯ, ಕಾದಂಬರಿ ಬರೆಯುವ ಶತ ಶತಮಾನಗಳ ಚಟ. ಹೀಗಾಗಿ ಇವರು ತಾವು ಮ್ಯೂಸಿಯಮ್ನಲ್ಲಿ ನೋಡಿ ಬಂದ ಬಡವರ ಕುರಿತು ಕಂಪ್ಯೂಟರ್ ಮುಂದೆ ರೋದಿಸುತ್ತಾ ಸಾಹಿತ್ಯ ಕೃಷಿಗೆ ತೊಡಗುತ್ತಾರೆ. ಅವಮಾನಿತರು, ಬಡವರು, ನಿಕೃಷ್ಟರು, ರೋಗಪೀಡಿತರು, ಗಾಯಗೊಂಡವರು…. ಈ ಯಾರೊಬ್ಬರೂ ಕಾಣದ ಈ ಗ್ರಹದಲ್ಲಿ ಅಳುವನ್ನು ನಿಷೇಧಿಸಲಾಗಿದೆ; ಅಥವಾ ಅಳುವನ್ನು ಕೂಡ ಕತೆ, ಕಾವ್ಯದ ಮೂಲಕ ಸೃಜನಶೀಲ ನಗುವಾಗಿ ಪರಿವರ್ತಿಸಲಾಗುತ್ತಿದೆ. ಆ ನಗುವಿನಂಥ ಅಳು ಬೆಂಗಳೂ ರು ಕೇಂದ್ರಿತ, ಶನಿವಾರ-ಭಾನು ವಾರ ಮಾತ್ರ ಫ್ರೀ ಇರುವ ‘ಜಾಗತೀಕರಣದ ಸಖ’ರಿಗೆ ಸುಖ ತರುವಂತಿದ್ದರೆ ಸಾಕು. ‘ಸಾಮಾಜಿಕತೆ’ಯೂ ‘ವ್ಯಥೆ’ಯೂ ಅದರಿಂದ ಹುಟ್ಟುವುದು ಬೇಡ!

ಈ ಲೋಕದ ನಿಜಗಳಿಂದ ಬಹುದೂರ ಉಳಿದು ನವಿರಾಗಿ ಕತೆ, ಕಾವ್ಯ ಕೊರೆಯುವ ಇಂತಹ ಮಂದಿಗೆ ಈ ಗ್ರಹ ಕ್ಕೆ ಹೋಗಲು ಸುಲಭದ ರೇಟಿಗೆ ಪಾಸ್ ಪೋರ್ಟ್, ವೀಸಾಗಳು ದೊರಕುತ್ತವೆ ಹುಟ್ಟಿನಿಂದಲ್ಲದೆ ಈಗಲೂ ಬ್ರಾಹ್ಮಣ್ಯ ಕಾಪಾಡಿಕೊಂಡು ಬಂದಿರು ವವರಿಗೆಮಾತ್ರ ಇಲ್ಲಿ ಪ್ರವೇಶ! ಈ ವೀಸಾ, ಪಾಸ್ ಪೋರ್ಟ್ ಹಾಗೂ ಟಿಕೆಟ್ ಗಳಿಗೆ ಬಲುದೂರ ಹೋಗಬೇಕಿಲ್ಲ; ಬೆಂಗಳೂರಿನ ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಅವು ದೊರೆಯುತ್ತವೆ.

2

ಇದು ಈ ‘ಕಾಲ’ದ್ದಲ್ಲ ಪ್ಲಾನು!

ಮೂರು ವರ್ಷಗಳ ಹಿಂದೆ ಹಿಂದುತ್ವದ ಜೊತೆಗೆ ವೈದಿಕ ವಿಷವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಓದುಗರಿಗೆ ಉಣಬಡಿಸು ತ್ತಿದ್ದ ಕನ್ನಡದ ದಿನಪತ್ರಿಕೆಯೊಂದರಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚನೆಯಾದ ಕೃತಿಗಳನ್ನು ಟಾಪ್-20 ಹೆಸರಿನಲ್ಲಿ ಪೇರಿಸಿಡುವ ಹೊಸಬಗೆಯ ಕಾಯಿಲೆ ಶುರುವಾಯಿತು. ಈ ಕಾಯಿಲೆಯನ್ನು ಕಂಡು ಹಿಡಿದ ಖ್ಯಾತಿ ಆ ಪತ್ರಿಕೆಯ ಸಂಪಾದಕರಿಗೆ ಸಲ್ಲುತ್ತದೆ. ಈ ಕಾಯಿಲೆಗೆ ತುತ್ತಾದ ಬಹುಪಾಲು ಲೇಖಕರು ಬದುಕನ್ನು ಕಾಣುವ ಒಳಗಣ್ಣನ್ನು ಕಳೆದುಕೊಂಡು ನರಳುತ್ತಿದ್ದವರು ಮತ್ತು ಬಹುತೇಕ ಒಂದೇ ಕೋಮಿಗೆ ಸೇರಿದವರಾಗಿದ್ದುದು ಆಕಸ್ಮಿಕವೇನಲ್ಲ. ಇವರಲ್ಲಿ ಕೆಲವರು ಸಿದ್ಧಾಂತ, ಬದ್ಧತೆ, ಮಾನವೀಯ ಕಾಳಜಿಯೆಲ್ಲ ಬಸವನಗುಡಿಯ ಕಡಲೆಕಾಯಿ ಪರಿಶೆಯಂತೆ ಎಂದುಕೊಂಡವರು ; ಅವೆಲ್ಲಕ್ಕಿಂತ ತಮ್ಮ  ಸಾಹಿತ್ಯ ತುರಿಕೆಯೇ ಶ್ರೇಷ್ಠ ಎಂಬ ನಿಲುವಿನವರು. ಅಂತಹ ಲೇಖಕರನ್ನು ಆರಿಸಲು ಇದ್ದ ವಿದ್ವಾಂಸರೂ ಕೂಡ ಅವರ ಸ್ವಬಂಧುಗಳೇ ಆಗಿದ್ದುದೂ ಆಕಸ್ಮಿಕವೇನಲ್ಲ! ಹೀಗೆ ಅಕ್ಕಪಕ್ಕ ಕುಳಿತುಕೊಂಡ ಲೇಖಕರು ಮತ್ತು ವಿದ್ವಾಂಸರು ‘ನಿನ್ನ ಬೆನ್ನು ನಾನು ಕೆರೀತೀನಿ; ನನ್ನ ಬೆನ್ನು ನೀನು ಕೆರೆ’ ಎಂದು ಪರಸ್ಪರ ಅಂಗಿ ಬಿಚ್ಚಿ ಬೆನ್ನು ಕೆರೆದು ತಮ್ಮ ಸಾಹಿತ್ಯದ ತುರಿಕೆ

ನಿವಾರಿಸಿಕೊಂಡರು. ಹೀಗೆ ಬೆನ್ನು ಕೆರೆಯುವ ತಂತ್ರದ ಹಿಂದೆ ಇನ್ನೂ ಒಂದು ಅಜೆಂಡಾ ಇತ್ತು. ಬೆನ್ನು ಕೆರೆಯಬೇಕೆಂದರೆ ಅಂಗಿ ಬಿಚ್ಚಬೇಕು ತಾನೆ? ಹಾಗೆ ಅಂಗಿ ಬಿಚ್ಚಿದವರ ಮೈಯಲ್ಲಿ ದಾರವೇನಾದರೂ ಅಂಟಿಕೊಂಡಿದೆಯೇ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಲಾಯಿತು. ಬೆನ್ನು ಕೆರೆಯುವಾಗ ದಾರ ಕೈಗೆ ಸಿಕ್ಕವರನ್ನು ಒಂದು ಕಡೆ ಆಸನವಿಟ್ಟು ಕೂರಿಸಲಾಯಿತು. ಕೊನೆಗೆ ದಾರ-ನೂಲು ಏನೂ ಇಲ್ಲದೆ ಉಳಿದ ನಾಲ್ಕು ಮಂದಿ ಲೇಖಕರಲ್ಲಿ ದಲಿತರು , ಶೂದ್ರರು, ವು ಹಿಳೆಯರು , ಅಲ್ಪಸಂಖ್ಯಾತರನ್ನು ಆಯ್ಕೆ ಮಾಡಲಾಯಿತು ;

ಸಾಹಿತ್ಯದಲ್ಲಿ ಕನಿಷ್ಠವಾದರೂ ಮಾನವೀಯ ಕಾಳಜಿ ಇರುತ್ತದೆಯಲ್ಲವೆ ಎಂಬ ಕಾರಣಕ್ಕೆ!

ಈ ‘ಪರಸ್ಪರ ಬೆನ್ನು ಕೆರೆಯುವ ವಿಶೇಷ ಕಾಯಿಲೆ’ ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಮತ್ತು ಅವರ ಸಾಹಿತ್ಯದ ಒಡನಾಡಿಗಳಿಗೆ ‘ದೇಶಕಾಲ’ದ ವಿಶೇಷ ಸಂಚಿಕೆಯನ್ನು ರೂಪಿಸುವ ಸಂದರ್ಭದಲ್ಲಿ ಮಿಂಚಿನಂತೆ ಹೊಳೆದಿದೆ! ಅದನ್ನೇ ಮಾಡೆಲ್ಲಾಗಿಟ್ಟುಕೊಂಡು ತಯಾರಾದ ವಿಶೇಷವೇ ‘ದೇಶಕಾಲ’ ಸ್ಪೆಶಲ್!

ಮಣ್ಣು-ಬೇರು ಇಲ್ಲದ ಸಾಹಿತ್ಯ, ಜಾಗತೀಕರಣದ ಸ್ಪೆಶಲ್ ಕ್ವಾಲಿಟಿಯ ಥಿಯರಿ ಮತ್ತು ಸಾಫ್ಟ್ ವೇರ್ ನ ವೈದಿಕತೆ ಸೇರಿಕೊಂಡರೆ ಒಂದು ‘ದೇಶಕಾಲ’ದ ವಿಶೇಷ ಸಂಚಿಕೆಯನ್ನು ರೂಪಿಸಬಹುದೆಂಬುದು ಇವತ್ತಿನ ಸಾಹಿತ್ಯಿಕ ಪತ್ರಿಕೆಗಳಿಗೊಂದು ಹೊಸ ಫಾರ್ಮುಲಾ.

ಈ ವಿಶೇಷ ಸಂಚಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಸ್ವರ್ಗದಲ್ಲಿ ತಾಂಬೂಲವುಂಡು ಸುಖವಾಗಿರುವ ವೈದಿಕ ಆತ್ಮಗಳು ಧರೆಗಿಳಿದು ಬಂದು ‘ದೇಶ ಕಾಲ’ದ ಪ್ರವೇಶ ದ್ವಾರದಲ್ಲೇ ನಿಂತು ಓದುಗರ ಕೈ ಕುಲುಕುತ್ತವೆ.

ಚಿನ್ನದ ಲೇಪನದಂತಿರುವ ಸಂಚಿಕೆಯ ರಕ್ಷಾಪುಟಗಳನ್ನು ಕಂಡು, ಒಳಗಿನ ಪುಟಗಳ ಹೊಳಪನ್ನು ಕಂಡು ಇದನ್ನು ತಯಾರಿಸಲು ಎಷ್ಟು ಖರ್ಚಾಗಿರಬಹುದೆಂದು ಯೋಚಿಸಿದರೆ ಅದು ಮೂಟೆ ಹೊರುವ ಕಾರ್ಮಿಕನೊಬ್ಬನ ಹತ್ತು ದಿನದ ಕೂಲಿಯಷ್ಟು ಎಂಬ ಲೆಕ್ಕಾಚಾರ ಹೊಳೆಯುತ್ತದೆ! ಆದರೆ ಅದರ ಮಾರಾಟ ಬೆಲೆ ಕೇವಲ ಇನ್ನೂರೈವತ್ತು ರೂಪಾಯಿ ಮಾತ್ರ ಎಂದಿರುವುದನ್ನು ಕಂಡು ಇದರ ಮಾಲೀಕರು ಎಷ್ಟೊಂದು ಉದಾರಿಗಳಪ್ಪ, ಬಡ ಓದುಗರ ಮೇಲೆ ಇವರಿಗೇನಪ್ಪ ಇಷ್ಟೊಂದು ಕನಿಕರ ಎನ್ನಿಸಿ ಮನಸ್ಸು ಅವರ ಹೃದಯ ವೈಶಾಲ್ಯತೆಗೆ ತಲೆಬಾಗುತ್ತದೆ. ಹಾಗೆಯೇ  ಅವರು ಈ ‘ಸಾಹಿತ್ಯ ಪ್ರಸಾರ’ದ ಪೆಂಡಿಯನ್ನು ನಾಡಿಗೆಲ್ಲ ಹಂಚಲು; ಅದಕ್ಕಾಗಿ ಹಣವನ್ನು ಹೊಂಚಲು ಎಷ್ಟೆಲ್ಲಾ ಕಷ್ಟಪಟ್ಟಿರಬಹುದೆಂದು ಚಿಂತಿಸಿ ಅವರ ಬಗ್ಗೆ ಮರುಕವೂ ಆಗುತ್ತದೆ. ಹೀಗಿರುವ ‘ದೇಶಕಾಲ’ದ ಕ್ವಾಲಿಟಿ ಮತ್ತು ಕ್ವಾಂಟಿಟಿಗೆ ಬೆರಗಾಗಿ ಇಂತಹ ಸಾಹಸಗಳನ್ನು  ‘ಶಾನಭಾಗ’ರು ಮಾತ್ರ ಮಾಡಬಲ್ಲರು ಅನ್ನಿಸತೊಡಗಿ ಇಡೀ ‘ದೇಶಕಾಲ’ವನ್ನೆ ಒಂದು ರೌಂಡು ಸುತ್ತು ಹೊಡೆದು ಸುಸ್ತಾಗಿ ಕುಳಿತುಕೊಂಡಾಗ ಅನ್ನಿಸಿದ್ದು: ‘ದೇಶ ಕಾಲ’ದಲ್ಲಿರುವುದು ಬರಿಯ ಅಕ್ಷರವಲ್ಲೋ ಅಣ್ಣಾ…ಇದು ಅಗ್ರಹಾರದ  ಹಟ್ಟಿಗಳಿಗೆ ಹೊಡೆದಿರುವ ಸುಣ್ಣ ಬಣ್ಣ!’

ಇವತ್ತು ಈ ನಾಡಿನಲ್ಲಿ ಒಂದು ಕೆ.ಜಿ. ಅಕ್ಕಿಗೆ ಐನೂರು ರೂಪಾಯಿ ಆದರೂ ಅದು ‘ದೇಶಕಾಲ’ದ ಸಂಚಿಕೆಗೆ ತಕ್ಕುನಾದ ವಸ್ತುವಲ್ಲ. ಯಾಕೆಂದರೆ ‘ದೇಶಕಾಲ’ದ ಓದುಗರು ಹೊಟ್ಟೆಗೆ ಅನ್ನ ತಿನ್ನುವುದಿಲ್ಲ. ಅವರ ಆಹಾರವೇನಿದ್ದರೂ ಪಿಜ್ಜಾ, ಬರ್ಗರ್, ಸ್ಯಾಂಡ್ವಿಚ್, ಕೆ ಎಫ್ ಸಿ, ಸ್ಟ್ರಾಬೆರಿ ಜ್ಯೂಸು! ಹಾಗಾಗಿ ಅನ್ನ ದುಬಾರಿಯಾಗಿರುವುದರ ಕತೆ, ಕವಿತೆ ಕೊಟ್ಟರೆ ಅದರ ಓದುಗರು ಮೆಚ್ಚುವರೆ? ಮಳೆ ಮತ್ತು ಟ್ರಾಫಿಕ್ ಕಾರಣಗಳಿಂದಾಗಿ ತಪ್ಪಿಹೋದ ಸಾಹಿತ್ಯಿಕ ಕಾರ್ಯಕ್ರಮ, ನಗೆಕೂಟ, ತಮ್ಮ ಪು ಸ್ತಕದ ಮರು ಮುದ್ರಣಗಳಿಗೆ ದೊರಕದ 70 GSM N.S. light weight maplitho ಕಾಗದ, ತಮ್ಮ ಅಮೂಲ್ಯ ಕೃತಿಗಳನ್ನು ಕೇವಲ ಸತ್ಯನಾರಾಯಣ ಪೂಜಾ ಪ್ರವೀಣ ವಿಮರ್ಶಕರಷ್ಟೇ ಅಪ್ಪಿ ಮುತ್ತು ಕೊಡುತ್ತಿರುವುದು , ಸಾಹಿತ್ಯವನ್ನು ದಲಿತ, ಶೂದ್ರ, ಮುಸ್ಲಿಂ, ಮಹಿಳೆ ಎಂಬ ಚೌಕಟ್ಟಿನಲ್ಲಿಟ್ಟು ನೋಡುವುದು, ಇವರು ನೀರು ಗೊಬ್ಬರವಿಕ್ಕಿ ಬೆಳೆಸಿದ ಸಾಹಿತ್ಯದ ಸಿದ್ಧಮಾದರಿಗಳನ್ನು ಒಡೆದುರುಳಿಸುತ್ತಾ, ಕೋಸಂಬರಿ, ಪಾನಕ, ಪನಿವಾರದ ಕಾವ್ಯಾಸ್ಥಾನದಲ್ಲಿ ದನದಮಾಂಸ, ಕೋಣನ ಕೊರಬಾಡು, ಮಾರಿಗುಡಿಯ ಎಂಜಲನ್ನು ಗುಡ್ಡೆ ಹಾಕಿಕೊಂಡು ಅವೈದಿಕ ಬರವಣಿಗೆಯ ಕಾವಿನಲ್ಲಿ ಬ್ರಾಹ್ಮಣ್ಯದ ಬುಡಕ್ಕೆ ಬಿಸಿ ಮುಟ್ಟಿಸುತ್ತಿರುವ ಲೇಖಕರ ಹಾವಳಿ… ಇವೆಲ್ಲವೂ ‘ದೇಶಕಾಲ’ದ ಆತ್ಮಗಳನ್ನು ಕಾಡುತ್ತಿರುವ ಇವತ್ತಿನ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಅಂತಃಪುರದ ಸಮಸ್ಯೆಗಳು!

‘ದೇಶಕಾಲ’ದ ಆಯ್ಕೆಯ ಟ್ರಯಲ್ ಅಂಡ್ ಎರರ್

ಡಾಲರ್ಸ್ ಕಾಲನಿ, ವಿಕ್ಟೋರಿಯನ್ ವಿಲ್ಲಾ ಮನೆಗಳ ಮೂಲಕ ಹೊರಜಗತ್ತನ್ನು ಕಂಡವರು, ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ಘಮದೊಂದಿಗೆ, ಕಾಫಿಹೌಸಿನ ಟೇಬಲ್ಲುಗಳಲ್ಲಿ ಸಜ್ಜನಿಕೆಯ ಕೃತಕ ನಗೆ ಬೀರಿದವರು, ಗಾಂಧಿ ಬಜಾರಿನ ಪ್ರಕಾಶಕರುಗಳ ಪು ಸ್ತಕ ಬಿಡುಗಡೆ ಕಂ ಉಪನಯನದ ಆರ್ಕೆಸ್ಟ್ರಾಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡವರು, ‘ದೇಶಕಾಲ’ದ ಆಸ್ಥಾನ ವಿದ್ವಾಂಸರಿಂದ ಮುನ್ನುಡಿ, ಬೆನ್ನುಡಿ ಬರೆಸಿಕೊಂಡವರು ಮತ್ತು ಆ ಅರ್ಹತೆ ಪಡೆಯಲು ಸರತಿ ಸಾಲಿನಲ್ಲಿ ನಿಂತವರು, ‘ದೇಶಕಾಲ’ದ ಚೆಂದಕಿಂತ ಚೆಂದದ ಚಂದಾದಾರರು, ಖಾಕಿ ನಿಕ್ಕರು ತೊಟ್ಟವರು ಇವರೆಲ್ಲರನ್ನೂ ಕನ್ನಡದ 21ನೇ ಶತಮಾನದ ಬರಹಗಾರರೆಂದು ಪಟ್ಟಿ ಮಾಡಿ ‘ದೇಶಕಾಲ’ದ ಆತ್ಮಗಳು ಸಖತ್ ಖುಷಿಪಟ್ಟಿವೆ. ಅಷ್ಟೇನೂ ಮಹತ್ವದ ಬರಹಗಾರರಲ್ಲದಿದ್ದರೂ ಪರವಾಯಿಲ್ಲ; ‘ಫೋಟೋಝೆನಿಕ್ ಫೇಸ್’ ಇದ್ದರೆ ಸಾಕು, ಅಂತಹವರೂ 21ನೇ ಶತಮಾನದ ಬರಹಗಾರರ ಪಟ್ಟಿಯಲ್ಲಿ ಮಿಂಚಿದ್ದಾರೆ.

‘ದೇಶಕಾಲ’ ವಿಶೇಷ ಸಂಚಿಕೆ ರೂಪಿಸುವ ಕೆಲವು ತಿಂಗಳುಗಳ ಮುನ್ನ ಆಯ್ದ ಅನೇಕ ಲೇಖಕರಿಗೆ ಬರಹಗಳನ್ನು ರಚಿಸಿಕೊಡುವಂತೆ ’21ನೇ ಶತಮಾನದ ವಿಶೇಷ ಗರ್ಭಧಾರಣೆಯ ಇಂಜೆಕ್ಷನ್’ ಒಂದನ್ನು ‘ದೇಶಕಾಲ’ದ ವೆಚ್ಚದಲ್ಲಿ ಕೊಡಿಸಲಾಗಿತ್ತು. ಕೆಲವರಿಗೆ ಕೆಲವೇ ದಿನಗಳಲ್ಲಿ ಗರ್ಭ ಫಲಿಸಿ ಅರ್ಜೆಂಟಾಗಿ ತಮ್ಮ ಕಾವ್ಯವನ್ನೋ, ಕತೆಯನ್ನೋ, ಪುಡಿ ಲಹರಿಯನ್ನೋ ಹಡೆದು ಕೊಟ್ಟರು. ಕೆಲವರು ಗರ್ಭಪಾತಕ್ಕೀಡಾಗಿ, ಮತ್ತೆ ಗರ್ಭ ಧರಿಸುವ ಯಾವ ಸಾಧ್ಯತೆಗಳೂ ಇಲ್ಲವಾಗಿ ಹುಷಾರಿಲ್ಲದೆ ಮಲಗಿಬಿಟ್ಟರು. ಮತ್ತೆ ಕೆಲವರು ‘ಗುಪ್ತ ಸಮಾಲೋಚನೆ’ಯ ಸಲಹೆಗಳನುಸಾರ ಚೆಲ್ಲಾಪಿಲ್ಲಿಯಾದ ಭ್ರೂಣದ ತುಂಡುಗಳನ್ನೇ ಕೊಲಾಜ್ ಕಲಾಕೃತಿಯನ್ನಾಗಿ ರೂಪಿಸಿಕೊಟ್ಟರು . ಹಾಗೆ ಹಲವು ಬಗೆಯ ಸ್ವ-ಪ್ರಯತ್ನ, ವಿಶೇಷ ಪ್ರಯತ್ನ, ಕೃ ತಕ ಪ್ರಯತ್ನ ಮುಂತಾದವುಗಳ ಮೂಲಕ ಮೈತಳೆದ ‘ದೇಶಕಾಲ’ದ ವಿಶೇಷ ಸಂಚಿಕೆ ಸ್ವಜಾತಿಗೆ ಹುಟ್ಟಿದ ಅಂಗವಿಕಲ ಕೂಸಿನಂತೆ ಕನ್ನಡ ಸಾಹಿತ್ಯದ ಅಂಗಳದಲ್ಲಿ ಈಗ ಅಡ್ಡಾಡಿಕೊಂಡಿದೆ!

ಏನಂದ್ರಿ ಸಾರ್? ಎನ್ನಾರೈ ಪತ್ರಿಕೆಯಾ?

ಮೊನ್ನೆ ಬೆಂಗಳೂ ರಿನ ಮಾನವ ಮಂಟಪದ ಕಾರ್ಯಕ್ರಮದಲ್ಲಿ ಸಿಕ್ಕ ಡಾ.ರಾಜೇಂದ್ರ ಚೆನ್ನಿಯವರನ್ನು  ‘ಏನ್ಸಾರ್, ನೀವು ಕೂಡ 21ನೇ ಶತಮಾನ ‘ದೇಶಕಾಲ’ದ ಬ್ರಾಹ್ಮಣರದು ಎಂದು ಹೇಳಲು ಹೊರಟಿರಾ?’ ಎಂದು ಪ್ರಶ್ನಿಸಿ ಮಾತಿಗೆಳೆದಾಗ ಅವರು ‘ಕನ್ನಡದ ಸಾಹಿತ್ಯಕ ಪತ್ರಿಕೆಗಳಿಗೆ ಇಂತಹ ಸ್ಟಂಟುಗಳು ಬೇಕಿರಲಿಲ್ಲ, ಇದು ನಿಜಕ್ಕೂ vulgar display. ಇಡೀ ವಿಶೇಷಾಂಕ ರೂಪಿಸಿರುವುದು ಕನ್ನಡದ ಮನಸ್ಸುಗಳಿಗಲ್ಲ; ಎನ್ನಾರೈ ಮನಸ್ಸುಗಳಿಗೆ. ನಿಮ್ಮ ಇಷ್ಟದ ಕವಿಯೊಬ್ಬರ ಕುರಿತು ಒಂದೆರಡು ಪ್ಯಾರಾಗಳಲ್ಲಿ ಟಿಪ್ಪಣಿ ಬರೆದುಕೊಡಿ ಅಂದಿದ್ದರು. ಬರೆದುಕೊಟ್ಟೆ. ಅದು 21ನೇ ಶತಮಾನದ ಆಯ್ಕೆ ಎಂದು ‘ದೇಶಕಾಲ’ದ ಯಾರೊಬ್ಬರೂ ನನಗೆ ಹೇಳಲೇ ಇಲ್ಲ. ನನಗಂತೂ ವಿಶೇಷಾಂಕ ಕಂಡ ಮೇಲೆ ತೀವ್ರ ಬೇಸರವಾಯಿತು. ಇಂತಹ ಅಧ್ವಾನದೊಳಗೆ ನನ್ನ ಹೆಸರು ಬಂದದ್ದು ಮುಜುಗರಕ್ಕೀಡು ಮಾಡಿದೆ, ನನ್ನ ಅನೇಕ ಮಿತ್ರರಿಗೆ ಇದನ್ನು ಹೇಳಿ ಹೇಳಿ ಸಾಕಾಗಿ ಹೋಗಿದೆ’ ಎಂದು ಹೇಳಿ ತಾವು ಬರೆದುದಕ್ಕೆ ಕೈಕೈ ಹಿಚುಕಿಕೊಂಡರು.

ಡಾ. ರಾಜೇಂದ್ರ ಚೆನ್ನಿಯವರಂತೆ ಅನೇಕರಿಗೆ ಇದೇ ಬಗೆಯ ಅನುಭವಗಳಾಗಿರುವ ಸಂಗತಿ ಒಂದೊಂದಾಗಿ ಬೆಳಕಿಗೆ ಬರತೊಡಗಿವೆ. ಸಂಚಿಕೆಗೆ ಬರೆಯುವುದಕ್ಕೂ ಮುಂಚೆ ತಮಗೆ ‘ದೇಶಕಾಲ’ದಿಂದ ಬಂದ ‘ಸ್ಪೆಶಲ್ ಆಫರ್’ನ ರೋಮಾಂಚನದಿಂದಲೇ ಮೂರ್ಚೆ ಹೋಗಿದ್ದ ಕೆಲ ಶೂ ದ್ರ, ದಲಿತ ಲೇಖಕರು , ಸಂಚಿಕೆ ಹೊರಬರುತ್ತಲೇ ಈಗ ಅದರೊಳಗಿಂದ ಹೊರಹೊಮ್ಮುತ್ತಿರುವ ಜಾತೀಯತೆಯ ಪರಿಮಳಕ್ಕೆ ಮೂರ್ಚೆ ಹೋಗತೊಡಗಿದ್ದಾರೆ.

ಇಂತಹ ‘ದೇಶಕಾಲ’ವನ್ನು ಶ್ರದ್ಧೆಯಿಂದ ಕೂತು ಜಪವು ಣಿಯ ಹಾಗೆ ಪೋಣಿಸಿರುವ ತಪಸ್ವಿಗಳು ಯಾರು ಎಂದು ನೋಡಲು ಹೊರಟರೆ ಅವರು ‘ದೇಶಕಾಲ’ದ ಹೊಸ್ತಿಲಲ್ಲೇ ‘ಪಕ್ಕ ಚುಕ್ಕ’ರಂತೆ ಕುಂತ ವಿವೇಕ ಶಾನಭಾಗ ಮತ್ತು ಜಯಂತ ಕಾಯ್ಕಿಣಿ. ಈ ಇಬ್ಬರೂ ತಮ್ಮ ಪಕ್ಕದಲ್ಲೇ ಇರುವ ಯು.ಆರ್. ಅನಂತಮೂರ್ತಿಯವರಿಂದ ಏನನ್ನೂ ಕಲಿಯದಿದ್ದರೂ ಕನ್ನಡದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಮತ್ಯಾರಿಗೂ ಬರೆಯಲು ಬರುವುದಿಲ್ಲ ಎಂಬ ಸುಪ್ತಮನಸ್ಸಿನ ಸನಾತನಿಗಳು ರಚಿಸಿರುವ ವೈದಿಕ ಪಾಠಗಳನ್ನು ಉರುಹೊಡೆದು ಕಲಿತು ಕೊಂಡಂತಿರುವ  ವಿಶೇಷ ಪರಿಣಾವುವನ್ನು ‘ದೇಶಕಾಲ’ದ ಪ್ರತಿ ಪುಟದಲ್ಲೂ ಕಾಣಬಹುದಾಗಿದೆ. ಎಷ್ಟೇ ಟೀಕೆಗಳಿದ್ದರೂ ಅನಂತಮೂರ್ತಿಯವರು ಈ ಮಣ್ಣಿನ ಕಷ್ಟ ಸುಖಗಳ ಬಗ್ಗೆ ಲೇಖಕರಾಗಿ ಸಾರ್ವಜನಿಕವಾಗಿ, ಬದ್ಧತೆಯಿಂದ ಮಾತನಾಡಿದ್ದಾರೆ. ಮಾತನಾಡುತ್ತಲೂ ಇದ್ದಾರೆ. ಅನಂತಮೂರ್ತಿಯವರ ವಿವೇಕ ಈ ಹಾದಿಯಲ್ಲಿ ಅವರನ್ನು ಇವತ್ತಿಗೂ ಜೀವಂತವಾಗಿಟ್ಟಿದೆ.

ಅಂತಹ ಅನಂತಮೂರ್ತಿಯವರಿಂದ ಯಾವೊಂದು ಸ್ಫೂರ್ತಿಯನ್ನೂ ವಿವೇಕವನ್ನು ಪಡೆಯದ ಶಾನಭಾಗ, ಕಾಯ್ಕಿಣಿಗಳು ತಮಗನ್ನಿಸಿದ್ದಷ್ಟೇ ಸಾಹಿತ್ಯ ಎಂಬುದರ ಆಧಾರದ ಮೇಲೆ ವಿಶೇಷ ಸಂಚಿಕೆಯನ್ನು ರೂಪಿಸಿದ್ದಾರೆ. ‘ದೇಶಕಾಲ’ದಲ್ಲಿ ಬರೆಯುವವರನ್ನೂ ಮೀರಿಸುವಂತೆ ಇವತ್ತು ದಲಿತ ಶೂದ್ರರಿ ಗೆಲ್ಲ ಬರೆಯಲು ವಸ್ತು, ಸರಕು ಮತ್ತು ಶಕ್ತಿ ದೊರಕುತ್ತಿರುವುದು ‘ದೇಶ ಕಾಲ’ ಬಳಗದ ನಿದ್ರೆಗೆಡಿಸಿರುವ ಮಾಹಿತಿಗಳಿಗೆ. ಆರೀಫ್ ರಾಜಾನಂತಹ ಮನುಷ್ಯ  ಸಂವೇದನೆಯ ಕವಿಯ ಪಕ್ಕದಲ್ಲೇ ಯೋಗರಾಜ ಭಟ್ಟನಂಥ ಸಿನಿಮೀಯ ಮನುಷ್ಯನನ್ನು ಕವಿಯೆಂದು ಕರೆದು 21ನೇ ಶತಮಾನದ ಕವಿಗಳ ಪಟ್ಟಿಯ ಪಕ್ಕದಲ್ಲೇ ನಿಲ್ಲಿಸಿ ಫೋಟೋ ತೆಗೆಸಲಾಗಿದೆ. ಇದರ ಮರ್ಮವೇನೆಂದು ಕೇಳಿದರೆ ಅದಕ್ಕೆ ಕಾಯ್ಕಿಣಿಯವರಿಂದ ಬರಬಹುದಾದ ಉತ್ತರ:

‘ಅನಿಸುತಿದೆ ಯಾಕೋ ಇಂದು…ಭಟ್ಟರೆಲ್ಲ ಕವಿಗಳೇ ಎಂದು!’

‘ದೇಶಕಾಲ’ದ ತುಂಬಾ ‘ನಮ್ಮ ನಮ್ಮವರೇ’ ತುಂಬಿಕೊಂಡರೆ ಮತ್ತೆ ಯಾರಾದರೂ ‘ರೋಸ್ಟರ್ ಪದ್ಧತಿ’ಯ ಕು ರಿತು ಪ್ರಶ್ನೆ ಎತ್ತುವರೆಂಬ ಭೀತಿಯಲ್ಲಿ ಒಲ್ಲದ ಮನಸ್ಸಿನಿಂದಲೇ ಇಲ್ಲಿ ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಬಿ.ಟಿ.ಜಾಹ್ನವಿ, ಕಲಿಗಣನಾಥ ಗುಡದೂರು, ಆರೀಫ್ ರಾಜಾ, ರವಿ ದ್ರಾವಿಡ, ಅರುಣ್ ಜೋಳದಕೂಡ್ಲಿಗಿ ಮುಂತಾದ ಕೆಲವರನ್ನು ಕುಳ್ಳಿರಿಸಿ ‘ದೇಶಕಾಲ’ದ ಜಗಲಿ, ಪಡಸಾಲೆಗಳಲ್ಲಿ ಉಳಿದಿದ್ದ ಖಾಲಿ ಜಾಗವನ್ನು ಭರ್ತಿ ಮಾಡಿಕೊಳ್ಳಲಾಗಿದೆ. ‘ದೇಶಕಾಲ’ದ ಸಾಹಿತ್ಯ ಯಾಗಗಳಿಗೆ ತುಪ್ಪ, ಸಮಿತ್ತು ಸುರಿಯುವ ಪವಿತ್ರ ಕೈಂಕರ್ಯವನ್ನು ಅಲ್ಲಲ್ಲಿ ಟಿ.ಪಿ. ಅಶೋಕ್, ಓ.ಎಲ್. ನಾಗಭೂಷಣಸ್ವಾಮಿ, ಸಿ.ಎನ್. ರಾಮಚಂದ್ರನ್ ತರಹದ ವಿದ್ವಜ್ಜನ ಸಮರ್ಥವಾಗಿ ನಿಭಾಯಿಸಿದ್ದಾರೆ.

ಸಾಮಾನ್ಯವಾಗಿ ಮುಖ್ಯಕೃತಿಯೊಂದನ್ನು ಗುರುತಿಸಿ ಪರಿಚಯಿಸುವಾಗ ಆ ಕೃತಿಯ ಲೇಖಕರ ಫೋಟೋವನ್ನು ಪ್ರಕಟಿಸುವುದು ರೂಢಿ. ಆದರೆ ‘ದೇಶಕಾಲ’ದಲ್ಲಿ ಆ ಲೇಖಕರನ್ನು ಪರಿಚಯಿಸಿರು ವ ವಿದ್ವಾಂಸರ ಚಿತ್ರ ಹಾಕಲಾಗಿರುವುದು 21ನೇ ಶತಮಾನದ ವಿಶಿಷ್ಟ ಸಾಂಸ್ಕೃತಿಕ ಸಂಗತಿಗಳಲ್ಲೊಂದು . ಹಾಗಾಗಿ ಇಲ್ಲಿ ಟಿ.ಪಿ. ಅಶೋಕ ಪದೇ ಪದೇ ಮುಖದೋರುತ್ತಾರೆ. ಈ ಇಪ್ಪತ್ತೊಂದು ಬರಹಗಾರರಲ್ಲಿ ತಮ್ಮವೇ ಒಲವು-ನಿಲುವುಗಳುಳ್ಳ ಸಾಹಿತ್ಯಮುಖಗಳನ್ನು ಕೊಂಡಾಡುವ, ಆಕಸ್ಮಾತ್ ಉದ್ದವಾಗಿರುವ ಚೆಡ್ಡಿಗಳನ್ನು ತಮ್ಮ ಆಕಾರಗಳಿಗೆ ತಕ್ಕಂತೆ ಕತ್ತರಿಸಿ ‘ಸರಿಯಾದ ಚೆಡ್ಡಿ’ಗಳನ್ನಾಗಿಸುವ ಸಂಸ್ಕಾರ ಕಾರ್ಯವೂ ಅಲ್ಲಲ್ಲಿ ನಡೆದಿದೆ. ಹೊಸ ಒಳನೋಟಗಳನ್ನು ಕಾಣಿಸದ, ಏನನ್ನೂ ಹೇಳದ ಎಸ್.ಜಿ.ವಾಸು ದೇವ್, ಪ್ರತಿಭಾ ನಂದಕುಮಾರರ ‘ವರ್ಣರಂಜಿತ’ ಜುಗಲ್ಬಂದಿಯ ಅರ್ಥ-ಗಿರ್ಥವೇನು ಎಂದು ಕೇಳಲು ಸದ್ಯಕ್ಕೆ ಡಿ.ಆರ್. ನಾಗರಾಜ್ ದಿವಂಗತರಾಗಿದ್ದಾರೆ!

ಕನ್ನಡದ ಬಹುತೇಕ ಪತ್ರಿಕೆಗಳ ವಿಶೇಷಾಂಕಗಳಲ್ಲಿ ಸಾಕಷ್ಟು ಬರೆದು ಶತಮಾನದಷ್ಟು ಅನುಭವ ದಕ್ಕಿಸಿಕೊಂಡಿರುವ ವಿವೇಕ ಶಾನಭಾಗ ಮತ್ತು ‘ಭಾವನಾ’ತ್ಮಕವಾಗಿಯಷ್ಟೇ ಪತ್ರಿಕೆಯನ್ನು ರೂಪಿಸಿ ಗೊತ್ತಿರುವ ಜಯಂತ ಕಾಯ್ಕಿಣಿಯವರು ‘ದೇಶಕಾಲ’ದ ವಿಶೇಷ ಸಂಚಿಕೆಯನ್ನು ತಮ್ಮ ನೆಂಟರಿಷ್ಟರ ಅಗ್ರಹಾರವನ್ನಾಗಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ.

ಎರಡನೇ ದಿಬ್ಬಣಕ್ಕೆ ಹೊರಟ ‘ದೇಶಕಾಲ’ಕ್ಕೆರಡು ಕಿವಿ ಮಾತು

ಇಷ್ಟೆಲ್ಲಾ ಸ್ಪೆಷಾಲಿಟಿಗಳ ‘ದೇಶಕಾಲ’ ಈಗ ಎರಡನೇ ಮುದ್ರಣದ ದಿಬ್ಬಣಕ್ಕೆ ಸಜ್ಜಾಗುತ್ತಿರುವ ಸಮಾಚಾರ ಬಲ ಟೆಂಪಲ್ ಅಕ್ಕಪಕ್ಕದ ರಸ್ತೆಗಳಿಂದ ಹಿಡಿದು ಅಮೆರಿಕದ ‘ಅಕ್ಕ’ನವರೆಗೂ ತಲುಪಿದೆಯಂತೆ. ಹಾಗಾಗಿ ಮುಂದಿನ ಸಂಚಿಕೆಗೆ ಒಂದೆರಡು ಕಿವಿ ಮಾತುಗಳನ್ನು ಹೇಳುವುದು ನಮ್ಮ ‘ಸಾಂಸ್ಕೃತಿಕ ಜವಾಬ್ದಾರಿ’ಯೆಂದು ನಾವು ಭಾವಿಸಿದ್ದೇವೆ.

ಮೊದಲ ಮುದ್ರಣ ದ ‘ದೇಶಕಾಲ’ದೊಳಗೆ ಸಂಪಾದಕರಿಗೆ ಗೊತ್ತಿದ್ದೂ ಗೊತ್ತಿಲ್ಲಯೋ ಕೆಲವು ಹೆಸರುಗಳು ಬಿಟ್ಟುಹೋಗಿವೆ. ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುವ  ಪ್ರತಿಯೊಬ್ಬ ‘ಬಲವಾದ’ ಅಂಕಣಕಾರರ ಹೆಸರುಗಳು ಮತ್ತು ಅವರ ಬರಹಗಳು ಮುಂದಿನ ಸಂಚಿಕೆಯಲ್ಲಿ ಸೇರ್ಪಡೆಯಾಗಬೇಕಾಗಿದೆ. ಇವರ ಜೊತೆಗೆ ಕನ್ನಡದ ಖ್ಯಾತ ಕೆಸೆಟ್ ಕವಿಗಳನ್ನು, ಆಸ್ಥಾನ ಕವಿಗಳನ್ನು ಹಾಗೂ ಕಮ್ಯುನಿಸ್ಟ್ ಉಡಿದಾರದ ನೆರವಿನಿಂದ ಕಮ್ಯುನಲ್ ಚೆಡ್ಡಿಯನ್ನು ಉದುರಿ ಬೀಳದಂತೆ ಬಿಗಿಯಾಗಿ ಕಟ್ಟಿಕೊಂಡಿರುವ ಫಿಡೆಲ್ ಕ್ಯಾಸ್ಟ್ರೋ ಸೋದರ ಸಂಬಂಧಿಗಳನ್ನು ದಯಮಾಡಿ ಸೇರ್ಪಡೆ ಮಾಡಿಕೊಳ್ಳತಕ್ಕದ್ದು.

ಹಾಗೆಯೇ ವಿಶೇಷ ಸಂಚಿಕೆಯಲ್ಲಿ ಹೋಟೆಲ್ ಉದ್ಯಮಿಯೂ ಆಧುನಿಕ ತತ್ವಬ್ರಹ್ಮರೂ ಆದ ಷಡಕ್ಷರಿ, ದೈವಜ್ಞ ಸೋಮಯಾಜಿ, ಶತಾವಧಾನಿ ಗಣೇಶ್, ‘ಡುಂಡುಂ’ ಖ್ಯಾತಿಯ ಡುಂಡಿರಾಜ್, ‘ಮಡಿಪೂಜೆ’ಯ ಹಿರೇಮಗಳೂರು ಕಣ್ಣನ್, ಬನ್ನಂಜೆ ಅಂಡ್ ಫ್ಯಾಮಿಲಿ ಇಂತಹ ಅನೇಕ ‘ನಾಮಖ್ಯಾತ’ರ ಹೆಸರುಗಳು ಪ್ರಮಾದವಶಾತ್ ಬಿಟ್ಟುಹೋಗಿವೆ.

ಇಂತಹ ಇನ್ನೂ ಅನೇಕ ಗಣ್ಯಮಾನ್ಯರ ಹೆಸರು, ವಿಳಾಸ, ಫೋಟೋ -ಪ್ರವರ, ಮೇಲು -ಡೀಲುಗಳ ಡೀಟೇಲುಗಳನ್ನೆಲ್ಲ ಸೇರಿಸಿ ಪ್ರಕ ಟಿಸಿದರೆ ಸಾಹಿತ್ಯಾಸಕ್ತರಿಗೆ ಸಾಕಷ್ಟು ಉಪಯೋಗವಾಗುತ್ತದೆ; ಸಂಚಿಕೆಯ ಆಳ, ಅಗಲ, ತೂಕವೂ ಹೆಚ್ಚುತ್ತದೆ ಹಾಗೂ ‘ಸಾಹಿತಿ-ಮಾಹಿತಿ’ ಖ್ಯಾತಿಯ ಚಂಪಾ ಅವರ ಶ್ರಮವೂ ಒಂದಿಷ್ಟು ಕಡಿಮೆಯಾಗುತ್ತದೆ!

ಸದರಿ ಸಂಚಿಕೆಯು ಭಾರತದಲ್ಲೇ ಪ್ರಿಂಟ್ ಆಗಿರುವುದು ಅಮೆರಿಕದಲ್ಲಿರುವ ಜಾಗತೀಕರಣದ ‘ದೇಸಿ ಕೂಸು’ಗಳಿಗೆ ಅಷ್ಟಾಗಿ ರುಚಿಸುತ್ತಿಲ್ಲವೆಂಬ ಮಾಹಿತಿ ಬಂದಿರುವುದರಿಂದ ಮುಂದಿನ ಸಂಚಿಕೆಯನ್ನು ಅಮೆರಿಕಾದಲ್ಲೇ ಪ್ರಿಂಟ್ ಮಾಡಿಸುವುದರಿಂದ ‘ದೇಶಕಾಲ’ದ ಗುಣಮಟ್ಟ ಅಂತರರಾಷ್ಟ್ರೀಯ ಮಟ್ಟಕ್ಕೆಮುಟ್ಟುವುದರಲ್ಲಿ ಸಂಶಯವಿಲ್ಲ!

ಸಂಪಾದಕರಿಗೊಂದು ಸವಿಮಾತು

ತಾವು ಮೊದಲು ತಮ್ಮ ಪತ್ರಿಕೆಯನ್ನು ಹೊರತರಲು ಆಲೋಚಿಸಿದಾಗ ಅದಕ್ಕೆ ಶೀರ್ಷಿಕೆಕೆಯನ್ನು ತೆಗೆದುಕೊಂಡಿದ್ದು ಕುವೆಂಪು ಅವರ ಪದ್ಯವೊಂದರಿಂದ. ಅವರ ‘ಕಾಲ-ದೇಶ’ ಎನ್ನುವ ಪದವನ್ನು ತಾವು ಉಲ್ಟಾ ಹೊಡೆದು ಹಾಕಿಕೊಂಡಿದ್ದಾಗಿ ತಾವೇ ಹೇಳಿಕೊಂಡಿದ್ದೀರಿ. ಅವರಿಂದ ಶೀರ್ಷಿಕೆ ಪಡೆದ ಋಣದ ಭಾರ ಇಳಿಸಿಕೊಳ್ಳಲೋ ಎಂಬಂತೆ ಕುವೆಂಪು ಅವರ ಕೈ ಬರಹವನ್ನು ತಮ್ಮ ‘ಪೂರ್ವಸೂರಿ’ಗಳಾದ ಸೇಡಿಯಾಪು ಕೃಷ್ಣ ಭಟ್ಟ, ವಿ. ಜಿ. ಭಟ್ಟ, ಭಟ್ಟ ಮತ್ತು ಭಟ್ಟ ಇಂತಹವರ ‘ಫುಲ್ಪೇಜ್’ ಕೈಬರಹಗಳ ನಡುವೆ ಇಡಲು ಜಾಗವಿಲ್ಲದೆ ಇನ್ನೆಲ್ಲೋ ಮೂಲೆಯಲ್ಲಿ ಎರಡೇ ಸಾಲು ‘ಸ್ಕ್ಯಾನ್’ ಮಾಡಿ ಇಟ್ಟಿರುವುದು ಈ ನಾಡಿನ ಯಾವ ಶೂದ್ರ ಲೇಖಕನಿಗೂ, ಕುವೆಂಪುಪ್ರಿಯನಿಗೂ ದುಃಖ ತಂದಿಲ್ಲವೆಂಬ ಸಂತೋಷ ಸಮಾಚಾರವನ್ನು ತಮಗೆ ತಿಳಿಸಲು ಹರ್ಷಿಸುತ್ತೇವೆ. ‘ಶ್ಯಾನುಭಾಗತನ’ದ ಮುಂದೆ ‘ಗೌಡಿಕೆ’ಯ ಬುಡುಬುಡಿಕೆಯೆಲ್ಲ ನಡೆಯುವುದಿಲ್ಲವೆಂಬ ಸತ್ಯ ತಮಗೆ ಗೊತ್ತೇ ಇದೆ. ಹಾಗಾಗಿ ಮುಂದಿನ ಮುದ್ರಣ ದಲ್ಲಿ ಕುವೆಂಪು ಅವರ ಕೈಬರಹವನ್ನು ಬಿಟ್ಟರೂ ನಡೆಯುತ್ತೆ; ಹೇಗೂ ಆ ಜಾಗದಲ್ಲಿ ಇಡಲು ಇನ್ಯಾರದಾದರೂ ಭಟ್ಟರ ಕೈ ತಮಗೆ ಸಿಕ್ಕೇ ಸಿಗುತ್ತೆ!

ಇಡಿ; ಮಸ್ತ್ ಮಜಾ ನೋಡಿ!

‍ಲೇಖಕರು avadhi

June 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

26 ಪ್ರತಿಕ್ರಿಯೆಗಳು

 1. ಗುಡ್ಡಪ್ಪ

  >> ಚರ್ಚೆ ಸಂಯಮ ಕಳೆದುಕೊಳ್ಳದಂತಿರಲಿ…

  ಇದೇ ಮಾತು ಚರ್ಚೆ ಶುರುಮಾಡುವವರಿಗೆ ಅರ್ಥವಾಗಿದ್ದರೆ ಎಷ್ಟು ಚನ್ನಾಗಿತ್ತು !!

  ಎಲ್ಲವನ್ನೂ ಜಾತಿಯ ಕನ್ನಡಕ ಹಾಕಿಕೊಂಡು ನೋಡುವುದು ತೀರ ಸಣ್ಣತನ..

  ಪ್ರತಿಕ್ರಿಯೆ
 2. Paarvathi cheeranahally

  caste is only truth in this country !, It rules every thing in India, visibly or invisibly. it’s alive ! take it easy sir. let us start debate. hope for healthy outcome ? !
  ( of course, am not read article. this is for guddappa’s comment )
  – Paarvathi cheeranahally, mysooru

  ಪ್ರತಿಕ್ರಿಯೆ
 3. Meena

  ಲೇಖನದ ಪರಿಚಯ ವಾಕ್ಯದಲ್ಲಿ
  “ಕನ್ನಡದ ಸಾಹಿತ್ಯವನ್ನ, ಜಾತಿ, ಧರ್ಮ, ಲಿಂಗ ಆಧಾರಿತ ಚರ್ಚೆಯನ್ನ ಗಂಭೀರವಾಗಿ ನೋಡುತ್ತಾ ಬಂದಿರುವ, ಆ ಚರ್ಚೆಯನ್ನು ಜೀವಂತವಾಗಿಟ್ಟಿರುವ ಇಬ್ಬರು ಲೇಖಕರಾದ ” ಎಂಬಲ್ಲಿ ಕನ್ನಡ ಸಾಹಿತ್ಯವನ್ನ ಜಾತಿ, ಧರ್ಮ, ಲಿಂಗ ಆಧಾರಿತವೆನ್ನುವ ಕಾಮಾಲೆ ಕಣ್ಣುಗಳಿಂದಲೇ ನೋಡುತ್ತಾ ತನ್ಮೂಲಕ ಅದನ್ನು ಗೊಬ್ಬರದ ಗುಂಡಿಯಾಗಿಸುವ ಎಲ್ಲ ಪ್ರಯತ್ನಗಳಲ್ಲೂ ಕ್ರಿಯಶೀಲರಾಗಿರುವ ಇಬ್ಬರು ಲೇಖಕರಾದ ಎಂದಿದ್ದಲ್ಲಿ ಇಡೀ ಬರಹಕ್ಕೆ ಒಂದು “ತೂಕ” ಬರುತ್ತಿತ್ತು. ಅಲ್ಲದೇ ಲೇಖಕ ಮಹಾಶಯರಿಗೂ ಅದು ಭೇಷ್ ಎಂದಂತೆ ಅನಿಸುತ್ತಿತ್ತೇನೋ… ಏನಂತೀರಿ?
  – ಮೀನಾ

  ಪ್ರತಿಕ್ರಿಯೆ
 4. ಡಿ.ಎಸ್.ರಾಮಸ್ವಾಮಿ

  ಪ್ರಿಯ ಐಜೂರು ಅವರಲ್ಲಿ,
  ನಮಸ್ಕಾರ. ಈಗಷ್ಟೇ ಗೌರಿ ಲಂಕೇಶ್ ಪತ್ರಿಕಯಲ್ಲಿ ಲೇಖನ ಓದಿ ಮುಗಿಸಿ, ಇಮೇಲ್ ನೋಡಿದರೆ ಅದೇ ಲೇಖನ ಗೆಳೆಯ ಸಂದೀಪ ನಾಯಕ್ ಫಾರ್ವರ್ಡ್ ಮಾಡಿದ್ದಾನೆ. ಪತ್ರಿಕೆಯಲ್ಲಿನ ಲೇಖನಕ್ಕಿಂತಲೂ ಮೂಲ ಲೇಖನ ಹೆಚ್ಚು powerful ಆಗಿದೆ. ಬರಹದ ಶೈಲಿ ಮತ್ತು ವ್ಯಂಗ್ಯ ಇಷ್ಟವಾದರೂ ಒಟ್ಟೂ ಲೇಖನದ ಮೂಲಕ ನೀವೇನು ಹೇಳಹೊರಟಿದ್ದೀರೋ ಅನ್ನುವುದಕ್ಕಿಂತಲೂ ನೀವೂ ಸಹ ಅದೇ ಜಾತಿಕಾರಣದಿಂದಲೇ ದೇಶಕಾಲದ ಇಡೀ ಕೆಲಸವನ್ನು ಸಾರಾಸಗಟಾಗಿ ಬೈದಿದ್ದೀರಿ ಅನ್ನಿಸಿತು.

  ಇಷ್ಟಕ್ಕೂ ಪ್ರತಿ ಪತ್ರಿಕೆಯೂ ಒಂದೊಂದು ಹಿಡ್ಡನ್ ಅಜೆಂಡಾ ಇಟ್ಟುಕೊಂಡೇ ವಿಶೇಷ ಸಂಚಿಕೆ ರೂಪಿಸುತ್ತವೆಂಬ ಸಾಮಾನ್ಯ ಸತ್ಯ ನಮ್ಮೆಲ್ಲರಿಗೂ ಗೊತ್ತು. ಅದು ಕಮರ್ಷಿಯಲ್ ಆಗಿರಬಹುದು ಅಥವಾ ಆ ಪತ್ರಿಕೆ ಒಪ್ಪಿಕೊಂಡ ತತ್ವ ಸಿದ್ಧಾಂತವೇ ಆಗಿರಬಹುದು. ಮೂಲ ’ಲಂಕೇಶ್ ಪತ್ರಿಕೆ’ ನಮ್ಮೆಲ್ಲರಲ್ಲೂ ಹುಟ್ಟಿಸಿದ್ದ ಜಾಗೃತಿ, ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ಚಿಂತನೆಗಳನ್ನು ಈಗಿನ ಎರಡೆರಡು ಲಂಕೇಶ್ ಆಗಲೀ ಅಥವ ನೀವಿಬ್ಬರೂ ಕೆಲಸ ಮಾಡಿದ ಕನ್ನಡ ಟೈಮ್ಸ್ ಆಗಲಿ ಮಾಡಲು ಸಾಧ್ಯವಾಯಿತೇ ಅನ್ನುವುದೂ ಇಲ್ಲಿ ಮುಖ್ಯ.

  ನೀವು ಒಪ್ಪಿ ಅಥವ ಬಿಡಿ. ದೇಶಕಾಲ ವಿಶೇಷದಲ್ಲಿರುವ ಅನಂತಮೂರ್ತಿ, ಜಯಂತ ಕಾಯ್ಕಿಣಿ, ಕಾಗಿನೆಲೆ, ನುಗಡೋಣಿಯವರುಗಳ ಕತೆ, ವಸುದೇಂಧ್ರನ ಕಾದಂಬರಿ, ಕನ್ನಡ ನಾಡಿನ ಭವಿಷ್ಯ ಕುರಿತಂತೆ ಇರುವ ಸಂದರ್ಶನಗಳ ಮಾಲಿಕೆ, ನಿಜಕ್ಕೂ ಬಹಳ ಕಾಲ ಮನಸ್ಸಲ್ಲಿ ನಿಲ್ಲುವಂಥವು. ಆದರೆ ೨೧ ಲೇಖಕರ ಆಯ್ಕೆ, ೨೧ ಪುಸ್ತಕಗಳು ಇತ್ಯಾದಿ ಯಾದಿಯೆಲ್ಲ ಅವರವರ ಮರ್ಜಿಗಳು. ಈಗ ಅದೇ ಆಯ್ಕೆಸಮಿತಿಗೆ ಕೇಳಿದರೆ ಬೇರೆಯದೇ ಪಟ್ಟಿಕೊಟ್ಟಾರು. ಸಂಚಿಕೆಯ ಬೆಲೆಯ ಬಗ್ಗೆ ನಿಮ್ಮ ತಕರಾರು ಒಪ್ಪಬಹುದಾದರೂ ಜಾಹೀರಾತಿನ ಬೆಂಬಲವಿಲ್ಲದೇ ಪ್ರಕಾಶನ ಕೆಲಸ ಎಷ್ಟು ದುಬಾರಿಯದು ಎನ್ನುವುದೂ ಎಲ್ಲರಿಗೂ ತಿಳಿದ ಸತ್ಯವೇ ಆಗಿದೆ.

  ಕಡೆಗೊಂದು ಮಾತು: ನೀವು ಬಹುತೇಕ ಲೇಖಕರನ್ನು ಜಾತಿಕಾರಣದಿಂದಲೇ ಒಪ್ಪುವ/ನಿರಾಕರಿಸುವ ಅಪಾಯದ ಹಾದಿ ತುಳಿಯುತ್ತಲಿದ್ದೀರಿ. ಏಕೆಂದರೆ ಮೊನ್ನೆ ಕೆಂಡಸಂಪಿಗೆಯ ಕುರಿತು ಬರೆದಾಗಲೂ ಅನ್ಯಥಾ ಜಾತಿಯನ್ನೇ ಮೂಲವನ್ನಾಗಿಸಿಕೊಂಡೇ ನಿಮ್ಮೆಲ್ಲ ವಾದವನ್ನೂ ಮಂಡಿಸಿದ್ದಿರಿ. ಇಂಥ ಮಾತುಗಳು ಮುಜುಗರ ಹುಟ್ಟಿಸುತ್ತವೆ.ಇನ್ನು ಅಕಾರಣ ಎಲ್ಲರನ್ನೂ ಚೆಡ್ಡಿಗಳನ್ನಾಗಿಸುವುದು ಮತ್ತು ಬೈರಪ್ಪನವರ ಹೆಸರು ಎಳೆದು ತರುವುದು ಏಕೆ? ಕುವೆಂಪು ಅವರನ್ನು ಕೇವಲ ಶೂದ್ರತ್ವದಿಂದಲೇ ನೋಡುವುದೂ ಕೂಡ ಅಪಾಯಕಾರಿ.ಇದು ನನ್ನ ಪ್ರಾಮಾಣಿಕ ಅನ್ನಿಸಿಕೆ. ಈ ಮೂಲಕ ದೇಶಕಾಲವನ್ನಾಗಲೀ ಅಥವ ವಿಜಯಕರ್ನಾಟಕವನ್ನಾಗಲೀ ಬೆಂಬಲಿಸುತ್ತಿಲ್ಲ. ಹೆಚ್ಚು ಹೆಚ್ಚು ಪಾರದರ್ಶಕವಾಗುತ್ತಿರುವ ಈ ಕಾಲದಲ್ಲಾದರೂ ನಾವೆಲ್ಲ ದೈನೇಸಿತನ ಬಿಟ್ಟು ನಿಜವನ್ನೇ ನಂಬುವವರಾಗೋಣ. ವಿಶ್ವಾಸವಿರಲಿ.
  -ಡಿ.ಎಸ್.ರಾಮಸ್ವಾಮಿ

  ಪ್ರತಿಕ್ರಿಯೆ
 5. Rajashekhar Malur

  Very powerful article. Extremely well written. I wish it was true. How many centuries more are required to take out this complex…?

  ಪ್ರತಿಕ್ರಿಯೆ
 6. Poornapragna

  ಶ್ರೀ ರಾಮಸ್ವಾಮಿ ಅವರ ಪ್ರತಿಕ್ರಿಯೆ ಸಮಂಜಸವಾಗಿದೆ ಎಂದು ನನ್ನ ಅನಿಸಿಕೆ. ದೇಶ-ಕಾಲದ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ ಅದ್ದೆಯವರು “ಅಗ್ನಿ”ಯಲ್ಲಿ ಮೊಟ್ಟ ಮೊದಲನೆಯದಾಗಿ ಟೀಕಿಸಿದ್ದರು. ಅಲ್ಲಿಯ ತನಕ ನಾನು ಅದನ್ನು ಗಮನಿಸಿರಲಿಲ್ಲ!!

  ಆದರೆ ವಿಶೇಷಾಂಕದ ಸಾಹಿತ್ಯಕ ಮೌಲಯಗಳನ್ನೂ ರಾಮಸ್ವಾಮಿ ಅವರ ಹೇಳಿದಂತೆ ಅಲ್ಲಗಳಿಯುವ ಹಾಗಿಲ್ಲ. ಪಟ್ಟಿಗಳ ವಿಷಯದಲ್ಲಿ ಭಿನ್ನಾಭಿಪ್ರಾಯ ಸರ್ವೇ ಸಾಮಾನ್ಯ. ಅದನ್ನು ಯಾರು ಅಷ್ಟು ಗಣನೆಗೆ ತೆಗೆದುಕೊಳ್ಳುವುದಿಲ್ಲ. ವಿಶೇಷಾಂಕಕ್ಕೆ ಬರೆದಂತಹ ಹಾಗು ಅದರಲ್ಲಿ ಪಾಲ್ಗೊಂಡoತಹ ಎಲ್ಲರನ್ನು ಸಾರ ಸಗಟಾಗಿ ಜಾತಿವಾದಿಗಳೆಂದು ಜರಿಯುವುದು ಸೂಕ್ತವಲ್ಲ. ನನಗನ್ನಿಸುವ ಪ್ರಕಾರ deliberate ಆಗಿ ಎಲ್ಲೂ ಮೇಲ್ಜಾತಿಯ ದರ್ಬಾರು ನಡೆದಿರುವ ಹಾಗೆ ಕಾಣೆ. ಹಾಗಾಗಿ ಸಾಹಿತ್ಯಕ ದೃಷ್ಟಿಯಿಂದ ನಾವು ವಿಶೇಷಾಂಕದ ಬಗ್ಗೆ ಚರ್ಚಿಸ ಬೇಕಾಗಿದೆಯೇ ಹೊರತು ಜಾತಿಗಳನ್ನೂ ಮುಂದಿತ್ತುಕೊಂಡಲ್ಲ. ಹಾಗೆ ನೋಡಿದರೆ ದೇಶ-ಕಾಲದ ಸಂಚಿಕೆಗಳಲ್ಲಿ ಎಲ್ಲಾ ರೀತಿಯ ಬರಹಗಾರರು ಭಾಗವಹಿಸಿದ್ದಾರೆ.

  ಕುವೆಂಪು ಅವರ ಕೈಬರಹವನ್ನು ಬಿಟ್ಟಿರುವುದು ಮಾತ್ರ ಸ್ವಲ್ಪ ಆಶ್ಚರ್ಯವೇ ಸರಿ. ಏಕೆ ಎಂದು ದೇಶ-ಕಾಲದ ಸಂಪಾದಕರು ಉತ್ತರಿಸಿದರೆ ಚೆನ್ನಾಗಿರುತ್ತೆ.

  ಪ್ರತಿಕ್ರಿಯೆ
 7. sritri

  ವ್ಯಂಗ್ಯದಲ್ಲಿ ಜೋಗಿಯನ್ನೂ ಮೀರಿಸುವಂತಿದೆ ಈ ಲೇಖನ 🙂

  ಪ್ರತಿಕ್ರಿಯೆ
 8. sangeetha

  ಕನ್ನಡ ಸಾಹಿತ್ಯ ಮೂಲೆಗುಂಪಾಗುತ್ತಾ, ಕನ್ನಡ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ “ದೇಶ ಕಾಲ” ದಂತಹ ಪತ್ರಿಕೆಯೊಂದನ್ನು ರೂಪಿಸಿ , ಪೋಷಿಸಿ ಬೆಳೆಸುತ್ತಿರುವ ವಿವೇಕ ಶಾನುಭಾಗರ ಮತ್ತು ಅವರ ಬೆಂಬಲವಾಗಿ ನಿಂತಿರುವ ಲೇಖಕರ ಮೇಲೆ ಜರಿದು ಬೀಳುವಂತೆ, ಸುಧೀರ್ಘವಾಗಿ ಹೊಮ್ಮಿರುವ ಲೇಖನದ ಮೂಲ ಉದ್ದೇಶವಂತೂ ಸ್ಪ್ಷಷ್ಟವಾಗಿದೆ.
  ದೇಶ ಕಾಲದ ಹೆಸರು ಕೂಡಾ ಇಲ್ಲಿ ಟೀಕಾಪ್ರಹಾರಕ್ಕೆ ಬಲಿಯಾಗಿದೆ. ದೇಶ ಕಾಲ ವಿಶೇಷ ದಲ್ಲಿ ಪ್ರಕಟವಾದ ಅಪೂರ್ವ ಕತೆಗಳು, ಆ ಕತೆಗಳಲ್ಲಿ ಮೂಡಿ ಬಂದಿರುವ ಹೊಸ ಸಂವೇದನೆಗಳು ಲೇಖಕರ ಗಮನಕ್ಕೆ ಬಾರದಿರಲು ಕಾರಣವೇನು?
  ಕಾವ್ಯದ ಬಗ್ಗೆ ಮೂಡಿ ಬಂದಿರುವ ಅನಿಸಿಕೆಯೇನೋ ಒಪ್ಪಿಕೊಳ್ಳುವಂತಿದೆ. “ಹಳೆ ಪಾತ್ರೆ ಕಬ್ಬಿಣ ” ಕೂಡಾ ಕಾವ್ಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

  ಪ್ರತಿಕ್ರಿಯೆ
 9. ರವೀ

  ದೇಶ ಕಾಲ ಓದಿದ ನಂತರ ಎಲ್ಲೋ ಏನೋ ಹದ ತಪ್ಪಿದೆ ಅನಿಸುತ್ತಿತ್ತು. ನಾಟಿ ಹಸುಗಳಿಗೆ ಜರ್ಸಿ ತಳಿಯ ವೀರ್ಯಧಾರಣೆ ಮಾಡಿ ಹುಟ್ಟಿದ ಕರು ಗಂಡಾದರೆ ಆಗುವ ಅಭಾಸ ಅಲ್ಲಿತ್ತು. ಅಗ್ರಹಾರವೊಂದರ ಮಧ್ಯೆ ಕೂತು ಸಂಚಿಕೆ ರೂಪಿಸಿರಬಹುದೆಂಬ ಮಂಜುನಾಥ ಲತಾ ಹಾಗೂ ಚಂದ್ರಶೇಖರ ಐಜೂರರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಆದರೆ ’ಅಗ್ರಹಾರ’ ವನ್ನು ವ್ಯಾಖ್ಯಾನಿಸುವಾಗ ಉಳ್ಳವರ ಕಾಲನಿಗಳು ಇಂದಿನ ಸಾಹಿತ್ಯ ಜಗತ್ತನ್ನು ಅಗಾಧವಾದ ಶೂದ್ರ, ದಲಿತ ದರ್ಶನ ಪ್ರಪಂಚಗಳನ್ನು ದಾಟಿ ನಿಯಂತ್ರಿಸುತ್ತಿರುವುದು ಎಷ್ಟು ಆತಂಕಕಾರಿ ಎಂಬುದನ್ನು ಹೇಳಬಹುದಿತ್ತು.

  ಎಲ್ಲಾ ಬರಹಗಳನ್ನು, ಲೇಖಕರನ್ನು ಜಾತಿಯ ಹಣೆಪಟ್ಟಿಯಿಂದ ಗುರುತಿಸುವ ಪರಿ ಅಪಾಯಕಾರಿ ಎಂದು ರಾಮಾಸ್ವಾಮಿಯವರಂತಹ ಕಮ್ಯುನಿಸ್ಟ್ ಹಣೆಪಟ್ಟಿಯ ಲೇಖಕರು ಹೇಳುತ್ತಾರಾದರೂ ಆ ಜಾತಿಗಳೇ ಬರಹಗಳ ದಿವ್ಯತೆಯನ್ನು ಗುರುತಿಸುವ ಮಾನದಂಡಗಳಾಗಿ ಹೋಗುವ ಅಪಾಯವನ್ನೂ ಅವರು ಗುರುತಿಸುವುದಿಲ್ಲ. ದೇಶಕಾಲ- ಕಾಲ ದೇಶಗಳನ್ನು, ಅದೂ ಸದ್ಯದ ಭಟ್-ಬರಹ-ಲೇಖಕ ಪರಂಪರೆಯ ಮೂಲಕ ಮೀರುತ್ತದೆಂದು ಅಂದುಕೊಳ್ಳುವುದು ಅದರ ಮುಖಬೆಲೆಯಷ್ಟೇ ಸುಳ್ಳು ಮೂರ್ಖತನ.

  ಹಾಗೆಯೆ ಸಾಹಿತ್ಯ ವಿಮರ್ಶೆ ಎಂಬುದು ಸಾಹಿತ್ಯ ಸೃಷ್ಟಿಯ ಹಿಂದೆ ಪ್ರಭಾವ ಬೀರಿರಬಹುದಾದ ಪ್ರಭಾವಿ ಜಗತ್ತಿನ ವಿಮರ್ಶೆಯೂ ಹೌದು.

  ದೇಶಕಾಲದ ಹಿಂದೆ ಅಂಥದ್ದೊಂದು ಢಾಳವೆನಿಸುವ ಪ್ರಭಾವೀ ಜಗತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದೆ.

  ಅವರ ಪ್ರಾಮಾಣಿಕ ಸಾಹಿತ್ಯ ಕಾಳಜಿಯನ್ನು ಶ್ಲಾಘಿಸೋಣ.

  ಪ್ರತಿಕ್ರಿಯೆ
 10. Poornapragna

  ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುವವರಿಗೆ ಯಾಕೆ ನಾವು Labelಗಳನ್ನು ಕೊಡುತ್ತೀವಿ ಅಂತ ನನಗೆ ಅರ್ಥ ಆಗೋದಿಲ್ಲ. ಕುವೆಂಪು ಅವರನ್ನು ನಾವು ಏನಂತ ಕರೀಬೇಕು? ಒಬ್ಬ ಒಕ್ಕಲಿಗ ಸಾಹಿತಿ ಅಂತಲೋ ಅಥವಾ ಕನ್ನಡ ಭಾಷೆ ಕಂಡಿರುವಂತ ಒಬ್ಬ ಮಹಾನ್ ಮೇಧಾವಿ ಅಂತಲೋ? ಬೇಂದ್ರೆಯವರನ್ನು ನಾವು ಏನಂತ ಕರೀಬೇಕು? ಜುಟ್ಟು ಜನಿವಾರ ಇರೋ ಬ್ರಾಹ್ಮಣ ಸಾಹಿತಿ ಅಂತಲೋ ಅಥವಾ ಕನ್ನಡದ ಒಬ್ಬ ಮಹಾನ್ ಸಾಹಿತಿ ಅಂತಲೋ? ಹಾಗೆಯೇ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾದೀತು.

  ನಮಗೆ ಇಲ್ಲಿ ಬೇಕಾಗಿರುವುದು ಸಾಹಿತ್ಯ ಮತ್ತು ಅದರಲ್ಲಿರುವ ಮೌಲ್ಯಗಳೇ ಹೊರತು ಅದನ್ನು ಯಾರು ಬರೆದಿದ್ದಾನೆ ಅನ್ನುವುದಲ್ಲ. ನಾವು ದಿವಂಗತ ಎನ್ ಕೆ ಹನುಮಂತಯ್ಯನವರನ್ನು ಓದುವುದು ಅವರು ಯಾವ ಜಾತಿಯವರು ಎನ್ನುವುದಕ್ಕಲ್ಲ. ಅವರು ಏನು ಬರೆದಿದ್ದಾರೆ ಅನ್ನೋದರಿಂದ. ಸಾಹಿತ್ಯ ಮತ್ತು ಸಂಗೀತಕ್ಕೆ ಜಾತಿಯನ್ನು ಎಳೆತರೋದು ನಿಲ್ಲಿಸೋಣ. ಲೇಖಕರ ಸಿದ್ದಾಂತವನ್ನು – ರಾಜಕೀಯ ಅಥವಾ ಸಾಮಾಜಿಕ – ವಿಮರ್ಶಿಸೋಣ. ಚರ್ಚಿಸೋಣ. ಲೇಖಕರ ಜಾತಿಯನ್ನಲ್ಲ.

  ಒಟ್ಟಿನಲ್ಲಿ ಕನ್ನಡದಲ್ಲಿ, ಕನ್ನಡಕ್ಕಾಗಿ ಒಂದು ಒಳ್ಳೆಯ ಕೆಲಸ ಆಗಿದೆ. ಅದನ್ನು ಪ್ರಶಂಶಿಸೋಣ. ತಪ್ಪುಗಳು ಆಗಿರಬಹುದು. ತಪ್ಪುಗಳನ್ನ ವಿಜ್ರುಂಬಿಸಿ ಸರಿಯಾದದ್ದನ್ನು ಮೂಲೆ ಗುಂಪು ಮಾಡುವುದು ಬೇಡ. ಮೊನ್ನೆ ಒಂದು ಪುಸ್ತಕ ಬಿಡುಗಡೆಯಲ್ಲಿ ಎಚ್. ಎಸ್. ವಿ. ಹೇಳಿದಂತೆ ಈಗ ಕನ್ನಡ ಸಾಹಿತ್ಯದ ವಸಂತ ಕಾಲ. ಅದನ್ನು ಹಾರ್ದಿಕವಾಗಿ ಒಟ್ಟಾಗಿ ಸ್ವಾಗತಿಸೋಣ.

  ಪ್ರತಿಕ್ರಿಯೆ
 11. subbanna

  ಹಿ೦ದೆ ಶಿವರಾಮ ಕಾರ೦ತರು ಹೇಳಿದ ಬರ ನೆರೆ ಅ೦ತ ನಾವು ಮಸಾಲೆ ದೋಸೆ ತಿನ್ನುವುದನ್ನು ಬಿಡ್ತೇವಾ ? ನೆನಪಾಯಿತು.

  ಪ್ರತಿಕ್ರಿಯೆ
 12. aditi

  zÉñÀPÁ®zÀ d£À ¢ªÁ½AiÀiÁV ±ÀvÀªÀiÁ£ÀUÀ¼É PÀ¼É¢ªÉ.
  CªÀgÀ eÉÆvÉ ¸ÀĪÀÄä£É ZÀZÉð ªÀiÁr PÁ®ºÀgÀt ªÀiÁqÀ¨ÉÃr.
  ±ÀæªÀÄ¥ÀlÄÖ §gÉAiÉÆÃt. MA¢®è MAzÀÄ PÁ® CªÀgÀ ºÀĹvÀ£À,
  DvÀäªÀAZÀ£ÉUÁV GVAiÀÄÄvÀÛzÉ. gÁdQÃAiÀÄzÀ°è F gÉrØ ¸ÀºÉÆÃzÀgÀgÀÄ
  JµÀÄÖ ¤®ðdÓgÁVzÁÝgÉÆ ¸Á»vÀåzÀ°è F zÉñÀPÁ®zÀ d£À zsÀÆvÀðgÁVzÁÝgÉ.
  ¦èøï CªÀgÀ DvÀäUÀ¼ÀÄ PÉƼÉAiÀÄ®Ä ©lÄÖ ©r……

  ಪ್ರತಿಕ್ರಿಯೆ
 13. ಅಶೋಕವರ್ಧನ

  ೧. ನಾನು ಪರ್ವತಾರೋಹಣ ಕೂಟ ಕಟ್ಟಿದೆ (೧೯೭೬ರ ಸುಮಾರಿಗೆ). ಸಲಕರಣೆ ಸಂಗ್ರಹಿಸುವ ಉದ್ದೇಶದಿಂದ ವಾರ್ಷಿಕ ಸದಸ್ಯ ಶುಲ್ಕ ಹದಿನೈದು ಸಂಗ್ರಹಿಸಿದೆ. ಹತ್ತೋ ಹನ್ನೆರಡೋ ಸದಸ್ಯರಾದರೂ ಕಾಡುಬೆಟ್ಟ ಅಲೆಯುವುದು ನಡೆಸಿಯೇ ಇದ್ದೆ. ಒಂದು ವರ್ಷ ಕಳೆದ ಮೇಲೆ ಒಂದರಲ್ಲೂ ಭಾಗವಹಿಸದ ಒಬ್ಬ ಸದಸ್ಯ ಕೂಟದ ರಚನೆಯ ಶೋಧಕ್ಕಿಳಿದ – ಇದು ಪ್ರಜಾಸತ್ತಾತ್ಮಕವೋ? ಎಲ್ಲ ಸದಸ್ಯರ ಅನುಕೂಲ ನೋಡಿ ಒಂದು ಸಭೆ ಯಾಕೆ ಕರೆದಿಲ್ಲ? ಇತ್ಯಾದಿ. ನಾನವನ ಹದಿನೈದು ರೂಪಾಯಿ ಹಿಂದಿರುಗಿಸಿ, ಔಪಚಾರಿಕ ಕೂಟ ಕಟ್ಟುವ ಉತ್ಸಾಹ ಕಳಚಿಕೊಂಡೆ (ಆರೋಹಣ ಇಂದಿಗೂ ಕ್ರಿಯಾಶೀಲವಾಗಿಯೇ ಇದೆ).
  ೨. ವಾರದಲ್ಲೊಮ್ಮೆ ಬರುವ ಬಿಡುವನ್ನು ಪೂರ್ಣ ಬಳಸಿಕೊಂಡು ಕಾಡು, ಬೆಟ್ಟ ಸುತ್ತುತ್ತಿದ್ದೆ. ಭಾಷಣ-ಭಯಂಕರ ಪರಿಸರ ವಾದಿಯೊಬ್ಬರು ಅದೇ ಕಾಡುಬೆಟ್ಟ ವಲಯದಲ್ಲಿ ಬರುವ ಜನ, ಸಂಸ್ಕೃತಿಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಇವರು ಮೂಲದಲ್ಲಿ ಪಿತ್ರಾರ್ಜಿತ ಸ್ವಂತ ಆಸ್ತಿಯನ್ನು ಹಡಬೆಬಿಟ್ಟು, ಲೋಕೋದ್ಧಾರ ಮಾಡುವ ಮುಖವಾಡದಲ್ಲಿ ಇನ್ಯಾರಲ್ಲೋ ಪರಪುಟ್ಟನಾಗಿದ್ದುಕೊಂಡು ವೇದಿಕೆ ಮತ್ತು ಮಾಧ್ಯಮಗಳಿಗೆ ‘ನುಡಿಸೇವೆ’ ಧಾರಾಳ ಕೊಡುತ್ತಿದ್ದರು. ನಾನೇ ಹುಟ್ಟಿಸಿ, ಕಟ್ಟಿದ ಅಂಗಡಿ ಆರೋಗ್ಯಪೂರ್ಣವಾಗಿ ಮೂವತ್ತೈದರ ಹರಯ ದಾಟಿ ನಡೆದಿದೆ. ನಾನು ಕಾಡು, ಬೆಟ್ಟ ಸುತ್ತುವುದನ್ನು ಬಿಟ್ಟಿಲ್ಲ.
  ೩. ಶಿವರಾಮ ಕಾರಂತರ ಯಕ್ಷಗಾನ ಪ್ರಯೋಗವನ್ನು ನೋಡಿದ ಪಂಡಿತರೊಬ್ಬರು ಸುದೀರ್ಘ ಪತ್ರ ಬರೆದು – ಹೀಗಲ್ಲ ಹಾಗೆ, ಹಾಗಲ್ಲ ಹೀಗೆ ಎಂದರಂತೆ. ಕಾರಂತರ ಮರುಟಪಾಲಿನ ಚುಟುಕು ಹೇಳಿತಂತೆ – ಸಲಹೆಗಳು ಚೆನ್ನಾಗಿವೆ, ನೀವ್ಯಾಕೆ ಪ್ರಯೋಗಿಸಬಾರದು?
  ೪. ದೇಶಕಾಲದ ಸಾಧನೆ ಅದ್ಭುತ. ಕೊರತೆಗಳು ಎಂದೂ ಮುಗಿದದ್ದಲ್ಲ. ಸಲಹೆಗಳು ಖಂಡಿತಾ ಬೇಕು. ಪ್ರಾತಿನಿಧ್ಯ, ಧಿಕ್ಕಾರ ಇತ್ಯಾದಿ ‘ಮೌಲ್ಯ’ಗಳು ಸ್ಪಷ್ಟವಾಗಿ ಸ್ವಾರ್ಥಮೂಲ!
  ಅಶೋಕವರ್ಧನ

  ಪ್ರತಿಕ್ರಿಯೆ
 14. Neelagara

  ವಿವೇಕ್ ಶಾನಬೋಗ್ ಮತ್ತು ಜಯಂತ್ ಕಾಯ್ಕಿಣಿ ಅವರು ಪಾಪ ಹಿಂಗ್ ಮಾಡ್ದೆ ಇನ್ನೆಂಗ್ ಮಾಡಿರು ಹೇಳಿ ಮಂಜು ಮತ್ತು ಐಜೂರ್. ಸುಮ್ನೆ ತಲೆ ಕೆಡಿಸ್ಕಂಡ್ ಇಷ್ಟೊಂದು ದೊಡ್ಡ ಲೇಖನ ಬರೆದಿದ್ದೀರ. ಲೇಖನ ತುಂಬಾ ಹರಿತವಾಗಿದೆ ಮತ್ತು ನಿಮ್ಮ ಪ್ರಶ್ಣೆಗಳೂ ಮತ್ತು ಆತಂಕಗಳೂ ಕೂಡ ಅಷ್ಟೇ ಪ್ರಾಮಾಣಿಕವಾಗಿದೆ. ಅವರು ಅಷ್ಟೊಂದು sensible ಆಗಿಲ್ಲ ಮಂಜ. ಈ ದೇಷದಲ್ಲಿ ಜಾತಿಯನ್ನ ಒಪ್ಪಿಕೊಂಡು ಅದನ್ನ ಪ್ರಜ್ಞಾಪೂರಕವಾಕಿ ಮೀರುವರು ತುಂಬಾ ಕಡಿಮೆ. ಇನ್ನು ಸಾಹಿತ್ಯದ ವಿಷಯಕ್ಕೆ ಬಂದರೆ ಅವರ ಆಯ್ಕೆ ಅವರ ಮನೋಭಾವ ಮತ್ತು ದೋರಣೆಯನ್ನು ತೋರುತ್ತದ್ದೆ. ಇತಿಹಾಸದಿಂದ ಇವರ್ಯಾರು ಪಾಟ ಕಲಿತಿಲ್ಲ. ಲಂಕೇಶ್ ಅಂತವರನ್ನು ನೋಡಿಯೂ ತಿಳುವಳಿಕೆ ಬಂದಿಲ್ಲ ಎಂದರೆ ಇನ್ನೇನು ತಾನೆ ಮಾಡ್ಬೇಕು. ಏನೋ ಅವರ ಹೋಟ್ಟೆ ಪಾಡಿಗೆ ಮಾಡ್ಕಂಡಿದಾರೆ. ಬಿಟ್ಟುಬಿಟಿ ಅವರನ್ನು, ಯಾಕ್ ಪಾಪ ಸುಮ್ನೆ ಅವರನ್ನು ಹಾಕಂಡು ಅರಿತಿರ..?…..:):):)

  ಪ್ರತಿಕ್ರಿಯೆ
 15. harsha

  Dear editor… Pls publish here in Jugari Cross The continued deabte over DEshakala Special issue ( by Rahamat Tarikere, G.rajashekar, Phaniraj). U can see Them in Gauri Lankesh of this week.

  ಪ್ರತಿಕ್ರಿಯೆ
 16. ಅಜಕ್ಕಳ ಗಿರೀಶ

  ಮಾನ್ಯ ಮಂಜುನಾಥ ಲತಾ ಮತ್ತ್ ಐಜೂರ್ ಅವರೆ,
  ನಿಮ್ಮ ಲೇಖನ, ಜಾತಿ ನೋಡಿಯೇ ಒದಬೇಕು ಎಂದು ವಾದಿಸುವಂಥ ಲೇಖನ. ಸಾಹಿತ್ಯವನ್ನು ನಮ್ಮ ನಡುವಿನ ಸಾಮಾಜಿಕ ಸಾಂಸ್ಕೃತಿಕ ಬದುಕಿನ ಹಿನ್ನೆಲೆಯಲ್ಲಿ ನೋಡುವುದು ತಪ್ಪು ಎಂದು ಯಾರೂ ಹೇಳಲಾರರು. ಆದರೆ ನಿಮ್ಮ ವಾದವನ್ನು ಗಮನಿಸಿದರೆ ಅಥವಾ ನಿಮ್ಮ ವಾದವನ್ನು ಕತೆ, ಕವನ ಮೊದಲಾದ ಸೃಜನಶೀಲ ರಚನೆಗಳ ಹೊರತಾದ ಬರಹ, ಚಿಂತನೆಗಳಿಗೂ ವಿಸ್ತರಿಸಿದರೆ ಅಂಥ ಚಿಂತನೆ ಮಾಡುವ ಹಕ್ಕು ಕೂಡ ಕೇವಲ ಶೂದ್ರ ದಲಿತರಿಗೆ ಮಾತ್ರ ಇದೆ ಎನ್ನಬೇಕಾಗುತ್ತದೆ. ಈಗಾಗಲೇ ಹಲವು ಪ್ರತಿಕ್ರಿಯೆಗಳು ತೋರಿಸಿರುವಂತೆ ಬರೆದವನ ಜಾತಿ ಯಾವುದು ಎನ್ನುವುದನ್ನು ಆಧರಿಸಿದ ವಿಮರ್ಶೆಯನ್ನು ಈ ಮಟ್ಟಕ್ಕೆ ಎಳೆಯುವುದು ಅಪಾಯಕಾರಿ. (ಅದು ಬ್ರಾಹ್ಮಣರಿಗೆ ಮಾತ್ರ ಅಪಾಯಕಾರಿ ಎಂದು ನೀವು ಯಥಾಪ್ರಕಾರ ವ್ಯಂಗ್ಯ ಮಾಡುವುದಾದರೆ ನನ್ನ ಮೌನ). ದೇಶಕಾಲ ಪರಮ ಶ್ರೇಷ್ಟವಾಗಿ ಬಂದಿದೆ ಎಂದು ನಾನು ಹೇಳುವುದಿಲ್ಲ. ಅದರಲ್ಲಿರುವ ಬರಹಗಳನ್ನು ನೀವು ನಿಮ್ಮ ಸೈದ್ಧ್ಗಾಂತಿಕ ಹಿನ್ನೆಲೆಯಲ್ಲಿ ಗಂಭೀರವಾಗಿ ವಿಮರ್ಶಿಸಿದರೆ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಉಪಕಾರವಾಗುತ್ತಿತ್ತು. ಇನ್ನು ಕುವೆಂಪು ಅವರ ಕೈಬರಹವನ್ನು ಹಾಕಿ ಒಂದಿಡೀ ಪುಟವನ್ನು ಖಾಲಿ ಬಿಟ್ಟದ್ದು ಅವರಿಗೆ ಉಳಿದವರಿಗಿಂತಲೂ ಹೆಚ್ಚು ಮಹತ್ವ ಕೊಟ್ತಂತಾಗಿದೆ ಎಂದು ನನಗೆ ಕಂಡಿತ್ತು. ಅಷ್ಟೇ ಅಲ್ಲ ಕುವೆಂಪು ಅವರ ಈ ಹೇಳಿಕೆ ಉಳಿದ “ಭಟ್ರುಗಳ” ಕೈಬರಹಗಳಂತೆ ಒಂದು ಯಾಂತ್ರಿಕ ಮೊದಲ ಪುಟವೋ ಇನ್ನೊಂದೋ ಅಲ್ಲದೆ ಒಂದು ದಾರ್ಶನಿಕ ಹೇಳಿಕೆ ಕೂಡ ಹೌದು. ಇಡೀ ಕಲಿಯುವ ಅಥವಾ ಅರಿವಿನ ಪ್ರಕ್ರಿಯೆಯ ಕುರಿತ ದಾರ್ಶನಿಕ ಹೇಳಿಕೆ ಅದು; ಕೇವಲ ವ್ಯಾಕರಣಕ್ಕೆ ಸಂಬಂಧಿಸಿದ್ದಲ್ಲ. ಅದರ ಮಹತ್ವವನ್ನು ಕಂಡೇ ಹಾಕಿರಬಹುದು. ಒಳ ಮುಖಪುಟಗಳಲ್ಲಿ ಕಾರಾಂತರದ್ದು ಗೊಕಾಕರದ್ದು ಕೈಬರಹಗಳು ಕೂಡ ಇಲ್ಲ.(ನಿಮ್ಮ ಲೇಖನ ಓದಿದಮೇಲೆ ನಾನು ಹುಡುಕಿದ್ದು) ನುಗಡೋಣಿಯಂಥವರ ಒಳ್ಳೆ ಕತೆಗಳನ್ನು ಮೀಸಲಾತಿ ನೀತಿಯಿಂದ ಹಾಕಿದ್ದಾರೆ ಎಂದು ಹೇಳುವ ಮೂಲಕ ನೀವು ಆ ಲೇಖಕರಿಗೆ ಅವಮಾನ ಮಾಡುತ್ತಿದ್ದೀರಿ. “ಸಂಚಿಕೆಗೆ ಬರೆಯುವ ಮುಂಚೆ ದೇಶಕಾಲದಿಂದ ಬಂದ ಆಫರ್ ನೋಡಿಯೇ ಮೂರ್ಚೆ ಹೋಗಿದ್ದ ಕೆಲ ಶೂದ್ರ ದಲಿತ ಲೇಖಕರು ದೇಶಕಾಲ ಹೊರ ಬರುತ್ತಲೇ ಅದರ ಜಾತೀಯತೆಯ ಪರಿಮಳಕ್ಕೆ ಮೂರ್ಚೆ ಹೋಗತೊಡಗಿದ್ದಾರೆ.” ಎಂದಿದ್ದೀರಿ. ಇದು ಬೇಜವಾಬುದಾರಿ ಹೇಳಿಕೆ ಯಾಕೆಂದರೆ ಅಂಥ ಲೇಖಕರ ಹೆಸರನ್ನು ನೀವು ಹೇಳಿಲ್ಲ. ಅವರಾರೂ ಕಳೆದ ಕೆಲ ವರ್ಷಗಳಿಂದ ಬರುತ್ತಿರುವ ದೇಶಕಾಲವನ್ನು ನೋಡಿಯೇ ಇರಲಿಲ್ಲವೇ? ಆ ಪತ್ರಿಕೆಯ ತಾತ್ವಿಕತೆ ಈ ವಿಶೇಷ ಸಂಚಿಕೆ ಬಂದ ಕೂಡಲೇ ತಿರಸ್ಕಾರಯೋಗ್ಯ ಆದದ್ದೆ? ಇದೇ ಪ್ರಶ್ನೆ ಚೆನ್ನಿಯವರಿಗೂ ಕೇಳಬೇಕಾಗಿದೆ. ರಮೇಶರ(ಕವಿ) ಬಗ್ಗೆ ದೇಶಕಾಲದಲ್ಲಿ ಬರೆದ ಬಗ್ಗೆ ಈಗ ಅವರಿಗೆ ಮುಜುಗರ ಆಗಿದೆ ಅಂದರೆ ಮುಂಚೆ ಯಾವ ಮಾಹಿತಿಯು ಇಲ್ಲದೆ ಅವರು ಒಬ್ಬ ಕವಿ ಬಗ್ಗೆ ಬರೆಯಲು ಒಪ್ಪಿದ್ದರೆ? ಅಂದರೆ ಅವರೂ ದೇಶಕಾಲದಿಂದ ಬರೆಯಲು ಬಂದ ಆಫರ್ ನಿಂದ ರೋಮಾಂಚಿತರಾಗಿ ಮೂರ್ಚೆ ಹೋಗಿದ್ದರೆ? ನಮಸ್ಕಾರ -ಅಜಕ್ಕಳ.

  ಪ್ರತಿಕ್ರಿಯೆ
 17. H. Anandarama Shastry

  ದೇಶ:
  ಹಿಂದು ಧರ್ಮ-ಅನ್ಯ ಧರ್ಮ;
  ತಥಾಕಥಿತ ಮೇಲ್ಜಾತಿ-ಕೆಳಜಾತಿ;
  ಬಿಳಿದೊಗಲು-ಕರಿದೊಗಲು;
  ಸಿರಿತನ-ಬಡತನ;
  ಅಧಿಕಾರ-ದಾಸ್ಯ;
  ವಿದ್ಯಾವಂತ-ನಿರಕ್ಷರ ಕುಕ್ಷಿ;
  ಎಡಪಂಥೀಯ-ಬಲಪಂಥೀಯ;
  ಪುರೋಹಿತಶಾಹಿ-ದಲಿತಪರ
  ಯಾಜಮಾನ್ಯ-ಊಳಿಗ;
  ಪುರುಷಪ್ರಾಧಾನ್ಯ-ಸ್ತ್ರೀವಾದ;
  ಇಂಗ್ಲಿಷ್ ಭಾಷೆ-ಪ್ರಾದೇಶಿಕ ಭಾಷೆ;
  ಹಿಂದಿ ಭಾಷೆ-ಅನ್ಯ ಮಾತೃಭಾಷೆ;
  ಮಾತೃಭಾಷೆ-ಅನ್ಯಭಾಷೆ;
  ಉತ್ತರ-ದಕ್ಷಿಣ;
  ಸಮನ್ವಯ ಸಾಹಿತ್ಯ-ಬಂಡಾಯ ಸಾಹಿತ್ಯ;
  ಸುಂದರ ಸಾಹಿತ್ಯ-ಕ್ರಾಂತಿಕಾರಕ ಸಾಹಿತ್ಯ;
  ಇತ್ಯಾದಿ
  ಘರ್ಷಣೆಗಳ ಕೋಶ.

  ಕಾಲ:
  ಮೇಲೆ ಹೇಳಿರುವ ಜೋಡಿಗಳಲ್ಲಿ,
  ಉಭಯ ವಸ್ತುಗಳೂ ಒಂದು ಇನ್ನೊಂದರೊಡನೆ,
  ಒಂದು ಜೋಡಿಯ ಒಂದು ವಸ್ತುವು
  ಇನ್ನೊಂದು ಜೋಡಿಯ ಇನ್ನೊಂದು ವಸ್ತುವಿನೊಡನೆ,
  ಇತ್ಯಾದಿ
  ವಿವಿಧ ಬಗೆಗಳಲ್ಲಿ (ಸಂ)ಘರ್ಷಣೆಗಿಳಿದಿರುವ ಕಾಲ.

  ಇದು
  ನಮ್ಮ ಇಂದಿನ
  ದೇಶ-ಕಾಲ.

  ಪ್ರತಿಕ್ರಿಯೆ
 18. muralidharan

  manju, latha avare idenidu e nimma lekhana. Oduvudakku mujguravagutte.
  yaranne Agli avrugala manassige novagadanthe heeyalisabeku.jati jatiya kandara neevu madiddalla, navu madiddalla. inthaha dodda,doddala lekhanadinda badalavane sadhyavilla. modalu Bharatada yavude arji namuneglalli jatiya kalam tegedu hakuvanthaha horatavannu huttu haki, Aga navu nimmodane irutteve.

  ಪ್ರತಿಕ್ರಿಯೆ
 19. mallanagoudar

  here is the response of mr.k. phaniraj to manjunath lata-chandrashekar aijoor article

  ವಾಗ್ವಾದ ಭಂಜಕರು
  ಪ್ರಿಯ ಕ್ಯಾಪ್ಟನ್,
  ಪತ್ರಿಕೆಯ ಜುಲೈ ೭, ೨೦೧೦ರ ಸಂಚಿಕೆಯಲ್ಲಿ, ಮುಖಪುಟದಲ್ಲೇ ಓದುಗರು ಗಮನಿಸಬೇಕಾದ ಪ್ರಮುಖ ಲೇಖನವೆಂಬ ಸೂಚನೆ ಸಹಿತ, ಪ್ರಕಟವಾಗಿರುವ ಮಂಜುನಾಥ್ ಲತಾ ಮತ್ತು ಚಂದ್ರಶೇಖರ್ ಐಜೂರರ ದೇಶ ಇದೇನಹಾ! ಕಾಲ ಇದೇನಹಾ! ಲೇಖನದ ವಿಕೃತತೆಂದ ನಾನು ಆಘಾತಗೊಂಡಿದ್ದೇನೆ. ಅದನ್ನು ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ. ನೀವು ಈ ಪತ್ರವನ್ನು ಪ್ರಸ್ತುತ ಲೇಖನದ ಜೊತೆ ನಾನು ನಡೆಸಲು ಇಚ್ಛಿಸುವ ವೈಚಾರಿಕ ವಾಗ್ವಾದ ಎಂದು ಖಂಡಿತ ಪರಿಗಣಿಸಕೂಡದು; ವೈಚಾರಿಕ ವಾಗ್ವಾದಕ್ಕೆ ತಕ್ಕುದಾದ ಯಾವುದೇ ಅವಕಾಶವನ್ನೂ ಲೇಖಕರು ನಮಗೆ ನೀಡಿಲ್ಲ. ಲೇಖಕರು ಒಂದು ಕೋರ್ಟ್ ಮಾರ್ಷಲ್ ನಡೆಸಿದ್ದಾರೆ; ದೇಶಕಾಲದ ಸಂಪಾದಕರನ್ನು ಕಟಕಟೆಯಲ್ಲಿ ನಿಲ್ಲಿಸಿ, ಸಿದ್ಧಪಡಿಸಿದ ಅಪರಾಧಗಳ ಪಟ್ಟಿಯನ್ನು ಗತ್ತಿನಲ್ಲಿ ಓದಿ, ಸಜೆಯನ್ನು ಘೋಸಿದ ಮೇಲೆ ವಾಗ್ವಾದಕ್ಕೆ ಸ್ಥಾನವೆಲ್ಲಿದೆ? ಲೇಖಕರ ತೀರ್ಪಿನಿಂದ ಆದ ಆಘಾತಕ್ಕೆ ಕಾರಣವನ್ನು ವಿವರಿಸುವುದಕ್ಕೆ ಮಾತ್ರ ಈ ಪತ್ರ ಬರೆಯುತ್ತಿದ್ದೇನೆ.
  ನಾನು ಕಳೆದ ೧೨ ವರ್ಷಗಳಿಂದ ಪತ್ರಿಕೆಗೆ ಬರೆಯುತ್ತಿದ್ದೇನೆ ಮಾತ್ರವಲ್ಲ ಪತ್ರಿಕೆಯಲ್ಲಿ ಪ್ರಕಟವಾದ ಕೆಲವು ಲೇಖನಗಳ ವಿಷಯದಲ್ಲಿ ವಾಗ್ವಾದವನ್ನೂ ಮಾಡಿದ್ದೇನೆ. ಶ್ರೀಯವರು ಆಶೀಶ್ ನಂದಿ ಸಂಪಾದಕತ್ವದ ಹೊಸ ಶತಮಾನದ ಹೊಸ ಪರಿಭಾಷೆಗಳು ಪುಸ್ತಕದ ಬಗ್ಗೆ ವಿಮರ್ಶೆಯನ್ನು ಬರೆದಿದ್ದಾಗ, ಅವರು ಮತ್ತು ನಾನು ಮೂರು ವಾರಗಳ ಕಾಲ ವಾಗ್ವಾದ ನಡೆಸಿದ್ದೆವು. ಈ ವಾಗ್ವಾದದಲ್ಲಿ ನಾವಿಬ್ಬರೂ ವಾಕ್ಯ-ವಾಕ್ಯಗಳ ವಾಚ್ಯಾರ್ಥ ಮತ್ತು ಧ್ವನ್ಯಾರ್ಥಗಳನ್ನು ಬಗೆ ಬಗೆದು, ಎಷ್ಟೋ ಕಡೆಗಳಲ್ಲಿ ಮೊನಚಾದ ಭಾಷೆಯಲ್ಲಿ ಪ್ರತಿವಾದಿಯ ವೈಚಾರಿಕ ನಿಲುವನ್ನು ಚುಚ್ಚಿದ್ದೆವು. ಪತ್ರಿಕೆಯಲ್ಲಿ ಪ್ರಕಟವಾಗುವ ಶಿವಸುಂದರರ ಅಂಕಣದ ಕೆಲವು ಬರಹಗಳಲ್ಲಿ ವ್ಯಕ್ತವಾದ ವಿಚಾರಗಳ ಬಗ್ಗೆ ನಾನು ತೀವ್ರ ವಿರೋಧ ಸೂಚಿಸಿ ಅವರಿಗೆ ಪ್ರತಿಕ್ರಿಯೆ ಕಳಿಸುತ್ತಿದ್ದೇನೆ- ಅಂತಹ ಪ್ರತಿಕ್ರಿಯೆಗಳ ಕುರಿತು ಶಿವಸುಂದರ್ ನನ್ನ ಜೊತೆ ಸಂವಾದವನ್ನು ನಡೆಸುತ್ತಿದ್ದಾರೆ. ಹೋದ ವರ್ಷವಷ್ಟೇ, ನಾವೆಲ್ಲ ತುಂಬ ಗೌರವಿಸುವ ಜಿ.ರಾಜಶೇಖರ್ ಪತ್ರಿಕೆಯಲ್ಲಿ ಬರೆದ ಲೇಖನ ಒಂದಕ್ಕೆ ನಾನು ವಿರೋಧ ಸೂಚಿಸಿ ಬರೆದಿದ್ದೆ; ಹಲವಾರು ವರ್ಷಗಳ ಹಿಂದೆ ನಾವಿಬ್ಬರೂ ಸಂಕ್ರಮಣ ಪತ್ರಿಕೆಯಲ್ಲಿ ಎರಡು ಸಾರಿ ದೀರ್ಘ ವಾಗ್ವಾದ ನಡೆಸಿದ್ದೆವು. ಲಂಕೇಶರ ಸಂಪಾದಕತ್ವದ ಪತ್ರಿಕೆಯಲ್ಲಿ ಪ್ರಕಟವಾದ ಲಂಕೇಶ್-ತೇಜಸ್ವಿ, ಲಂಕೇಶ್-ರಾಮದಾಸ್, ಲಂಕೇಶ್-ಜಿ.ರಾಜಶೇಖರ್ ಇವರುಗಳ ವಾದ-ಪ್ರತಿವಾದ, ಯು.ಆರ್.ಅನಂತಮೂರ್ತಿಯವರ ಭಾರತೀಯ ಸಂಸ್ಕೃತಿ ಮತ್ತು ಲೇಖಕ ಎಂಬ ಖ್ಯಾತ ಪ್ರಬಂಧಕ್ಕೆ ಪ್ರತಿಕ್ರಿಯೆಯಾಗಿ ಬರೆದ ಕರ್ನಾಟಕ ಸಂಸ್ಕೃತಿ ಮತ್ತು ಲೇಖಕ ಬರಹಗಳು ಇಂದಿಗೂ ಅಮೂಲ್ಯವಾಗಿರುವ ಪಠ್ಯಗಳು. ದಶಕಗಳ ಹಿಂದೆ ರುಜುವಾತುವಿನಲ್ಲಿ ಪಟ್ಟಾಭಿರಾಮ ಸೋಮಯಾಜಿ ಮತ್ತು ಜಿ.ರಾಜಶೇಖರ್ ಭಾರತೀಯ ಸಂಸ್ಕೃತಿಯ ಸ್ವಕೀಯತೆ-ಪರಕೀಯತೆ ಕುರಿತು ನಡೆಸಿದ ಚರ್ಚೆ ಇಂದಿಗೂ ನನಗೆ ನೆನಪಿದೆ. ಶೂದ್ರ ತಪಸ್ವಿ ಕುರಿತು ಕುವೆಂಪು ಮತ್ತು ಮಾಸ್ತಿಯವರ ನಡುವೆ ನಡೆದ ಪ್ರಸಿದ್ಧ ವಾಗ್ವದದ ಮೂಲದಿಂದ ಕನ್ನಡ ಸಾಹಿತ್ಯದಲ್ಲಿ ಹಲವು ನಮೂನೆಯ ವೈಚಾರಿಕ ಹೊಳೆಗಳು ಹುಟ್ಟಿಕೊಂಡವು. ಹಾಗೆಯೇ, ಸಾಹಿತ್ಯ ಕೃತಿ/ರಂಗ ಕೃತಿಗಳ ಮೂಲಕ ಕೃತಿಕಾರರ ವೈಚಾರಿಕತೆಯನ್ನು ತೀಷ್ಣವಾಗಿ ವಿಮರ್ಶಿಸುವ ಬರಹಗಳು ಕನ್ನಡದಲ್ಲಿ ವಿಪುಲವಾಗಿವೆ. ಕನ್ನಡದ ಬರಹಗಳಲ್ಲಿ ಇಂತಹದೊಂದು ವಾಗ್ವಾದ ಪರಂಪರೆಯ ಕಾರಣವಾಗಿ ಮರ್ಯಾದೆಯ ಎಲ್ಲೆಯನ್ನು ಮೀರದೆಯೂ ಅತಿಯಾದ ನೆಲೆಗಳಿಂದ ವಾಗ್ವದ ನಡೆಸುವ ಗುಣ ಕನ್ನಡದ ಬರವಣಿಗೆಯಲ್ಲಿ ಸಹಜವಾಗಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಇದಕ್ಕೆ ಕಾರಣವೂ ಇದೆ. ಕನ್ನಡದಲ್ಲಿ ವಾಗ್ವಾದವನ್ನು ಅದರ ಅತಿಯಾದ ನೆಲೆಗಳಲ್ಲಿ ನಡೆಸುವುದರಲ್ಲಿ ಚಂಪಾ ನಿಷ್ಣತರು; ಅವರು ವ್ಯಕ್ತಿಯೊಬ್ಬ ಆಡಿದ ಒಂದು ಮಾತು, ಭಾಷಣದ ಒಂದು ತುಣುಕು, ಬರೆದ ಒಂದು ಸಾಲು- ಇಂತಹ ಮಿತವಾದ ಸಂಪನ್ಮೂಲಗಳನ್ನು ಹಿಡಿದು, ಅದನ್ನು ಆ ವ್ಯಕ್ತಿ ಹಿಂದೆ ಆಡಿದ-ಮಾಡಿದ-ಬರೆದ ಕೃತಿಗಳಿಗೆ ಪೊಣಿಸಿ ಕುಟುಕುವುದು ಸಾಮಾನ್ಯ; ಎಷ್ಟೋ ಸಾರಿ ಆಡಿದ ಮಾತಿನ ಸನ್ನಿವೇಶವನ್ನು ಹಗುರಗೊಳಿಸಿ ಟೀಕೆ ಮಾಡುವುದು ಅತಿ ಎನಿಸುತ್ತದೆ; ಆದರೆ ಎಂದೂ ಅವರು ಆಡದ ಮಾತುಗಳನ್ನು, ಬರೆಯದ ಸಾಲುಗಳನ್ನು ಆರೋಪಿಸಿ ಟೀಕಿಸಿದ್ದನ್ನು ನಾನು ಕಾಣೆ. ಹಾಗೆಯೇ, ತಾನು ಟೀಕಿಸುವ ವ್ಯಕ್ತಿಯ ಇತರ ಸಾಧ್ಯತೆಗಳನ್ನು ಅವರು ಮರೆಯುವುದಿಲ್ಲ, ಅವರನ್ನು ತನ್ನ ನೈತಿಕ ಮೇಲ್ಮೆಯ ಪ್ರದರ್ಶನದಲ್ಲಿ ಕೀಳಾಗಿ ಕಂಡದ್ದಿಲ್ಲ. ಅವರ ಗೃಹಿತ ತಪ್ಪು ಎಂದು ವಾದಿಸುವುದಕ್ಕೆ ಸಾಧ್ಯವಿರುವಷ್ಟು ಅವಕಾಶ ಅವರ ಬರಹಗಳಲ್ಲಿ ಇಂದಿಗೂ ಉಳಿದಿದೆ. ಗಿರೀಶ್ ಕಾರ್ನಾಡ್ ಕಾವೇರಿ ವಿವಾದದಲ್ಲಿ ಟ್ರಿಬ್ಯುನಲ್ ನೀಡಿದ ತೀರ್ಪನ್ನು ಸಂವಿಧಾನದ ಬಗ್ಗೆ ನಂಬಿಕೆ ಇರುವವರು ಗೌರವಿಸಬೇಕು; ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನಿಸಿದಲ್ಲಿ ಸರಕಾರ ಕಾನೂನು ರೀತ್ಯಾ ಸಂವಿಧಾನಿಕ ಹೋರಾಟ ನಡೆಸಬೇಕೆ ವಿನಹ ಜನ ಭಾಷೆಯ ನೆಪದಲ್ಲಿ ವಿವೇಚನಾರಹಿತವಾದ ಜನಜಂಗುಳಿಯ ಹಿಂಸೆಯನ್ನು ನಡೆಸುವುದು ತಪ್ಪು ಎಂದು ಹೇಳಿದ್ದೆ ಒಂದು ವಿವಾದವಾತು; ಈ ವಿವಾದವನ್ನೆತ್ತಿಕೊಂಡು ಕೆ.ವಿ.ತಿರುಮಲೇಶ್ ಗಿರೀಶ್ ಕಾರ್ನಾಡರು ಕನ್ನಡದ ಸಾಮಾನ್ಯ ಜನರ ಆತಂಕ-ಆಕ್ರೋಶಗಳನ್ನು ಕೀಳಾಗಿ ಕಂಡಿದ್ದಾರೆಂಬ ನೆಲೆಂದ ಕಾರ್ನಾಡರ ಜೀವನಕ್ರಮವೂ, ಅವರಿಗೆ ದಕ್ಕಿದ್ದ ಸ್ಥಾನಮಾನಗಳೂ ಬೀದಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾಮಾನ್ಯ ಜನರಿಗೆ ಋಣಿಯಾಗಿರಬೇಕೆಂದು, ಜನರ ಆಕ್ರೋಶಿತ ಹಿಂಸಾಕೃತ್ಯಗಳನ್ನು ಟೀಕಿಸುವುದರ ಮೂಲಕ ಗಿರೀಶ್ ತಮ್ಮ ಅಹಂಕಾರವನ್ನು ಪ್ರದರ್ಶಿಸುತ್ತಿದ್ದಾರೆಂದೂ, ಇದು ಜನತೆಗೆ ಬಗೆವ ದ್ರೋಹವೆಂದೂ ಕಟು ಶಬ್ದಗಳಲ್ಲಿ ಟೀಕಿಸುವ ಲೇಖನವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಬರೆದರು. ನಂತರ ನಾಲ್ಕು ವಾರಗಳ ಕಾಲ ತಿರುಮಲೇಶರ ಬರಹವನ್ನು ಸಮರ್ಥಿಸುವ ಹಾಗು ವಿರೋಧಿಸುವ ಪ್ರತಿಕ್ರಿಯೆಗಳು ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡವು. ನನ್ನ ಪ್ರಕಾರ, ಗಿರೀಶರ ಹೇಳಿಕೆಯ ಸನ್ನಿವೇಶದ ಅರ್ಥವನ್ನು, ಸಾಹಿತಿಯ ಸಾಮಾಜಿಕ ಜವಬ್ದಾರಿಯನ್ನು ಮತ್ತು ಆಕ್ರೋಶಿತ ಜನಸಮೂಹವನ್ನೂ ತಿರುಮಲೇಶ್ ಅತಿ ಸರಳಗೊಳಿಸಿ, ನೈತಿಕ ಮೇಲ್ಮೆಯ ಉನ್ಮಾದಿತ ಭಾಷೆಯಲ್ಲಿ ಬರೆದಿದ್ದರು; ಇದರ ಪರಿಣಾಮವಾಗಿ, ಬಹುಪಾಲು ಪ್ರತಿಕ್ರಿಯೆಗಳು ಅವರ ಲೇಖನವನ್ನು ನೆಪ ಮಾತ್ರವಾಗಿಟ್ಟುಕೊಂಡು, ವಾದದ ಜಾಡನ್ನೇ ತಿರುಚಿ, ಸಲ್ಲದ ಆರೋಪಗಳನ್ನು ಗಿರೀಶರ ಮೇಲೆ ಹೋರಿಸಿ, ದೂಸುವ ಮಟ್ಟಕ್ಕೆ ಇಳಿದವು. ಗಿರೀಶರ ಹೇಳಿಕೆಯನ್ನು, ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಗುಂಪುಗಳ ವರಸೆಗಳನ್ನು ತಿರುಮಲೇಶ್ ಗ್ರಹಿಸಿದ ರೀತಿ ತಪ್ಪಾಗಿತ್ತು ಎಂದು ವಾದಿಸಿದರೂ, ತಿರುಮಲೇಶ್ ಗಿರೀಶ್ ಆಡದ ಮಾತುಗಳನ್ನು ಆಡಿದ್ದಾರೆ ಎಂದಾಗಲಿ, ನಡೆಯದ ಪ್ರತಿಭಟನೆಗಳು ನಡೆದಿವೆ ಎಂದಾಗಲೀ ಹೇಳಿದ್ದಿಲ್ಲ; ಆದರೆ, ಅವರ ಗ್ರಹಿಕೆಯ ಸ್ವರೂಪದ ಪರಿಣಾಮವಾಗಿ ಹಲವಾರು ಮಂದಿ ಗಿರೀಶರನ್ನು ಕಟಕಟೆಯಲ್ಲಿ ನಿಲ್ಲಿಸಿ ಸುಳ್ಳು ಆರೋಪಗಳನ್ನು ಅವರ ಮೇಲೆ ಹೋರಿಸಿದರು. ಈ ಇಡಿ ವಾಗ್ವಾದ ಅತಿಗೆ ಹೋಗುವುದರ ಮಿತಿಯನ್ನು ಜಾಹಿರುಪಡಿಸಿತು.
  ಸಾರ್ವಜನಿಕ ಮಾತು, ಬರೆದ ಕೃತಿಗಳ ಪಠ್ಯಗಳಲ್ಲಿ ಇದೆ ಎಂದು ನಾವು ಭಾವಿಸುವ ವೈಚಾರಿಕ-ಸೈದ್ಧಾಂತಿಕ-ಸಾಮಾಜಿಕ ನಿಲುವುಗಳನ್ನು ನಿರ್ದಾಕ್ಷಿಣ್ಯವಾಗಿ ಎದುರು ಹಾಕಿಕೊಂಡು ಟೀಕೆ-ವಾದಗಳನ್ನು ಮಾಡಬೇಕು ನಿಜ; ಈ ರೀತಿಯಲ್ಲಿ ಸ್ಥಾಪಿತ ಮೌಲ್ಯಗಳನ್ನು ಅಲುಗಾಡಿಸಿ, ಹೊಸ ಬಗೆಯ ವಿಚಾರಗಳಿಗೆ ಆಯಾಮಗಳನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ಕೂಡ ನಾನು ಒಪ್ಪುತ್ತೇನೆ. ಆದರೆ, ಇಂತಹ ಅಪೇಕ್ಷೆಗಳನ್ನು ಈಡೇರಿಸಲು ಸಂವಾದಕ್ಕೆ ಮುಂದಾಗುವ ಜನ ಕೆಲವು ಪ್ರಾಥಮಿಕ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ; ಆಡಿದ ಮಾತುಗಳನ್ನು ಪೂರ್ಣವಾಗಿ ಕೇಳಿಸಿಕೊಳ್ಳುವುದು/ಪಠ್ಯವನ್ನು ಪೂರ್ಣವಾಗಿ ಓದಿಕೊಳ್ಳುವುದು, ಮಾತು/ಕೃತಿಯ ಸನ್ನಿವೇಶವನ್ನು ಗ್ರಹಿಸುವುದು, ಎದುರಸಲಿರುವ ವ್ಯಕ್ತಿಯ ಹಿಂದಿನ ಮಾತು/ಕೃತಿಗಳ ಬಗ್ಗೆ- ವಾಗ್ವಾದದ ವಸ್ತುವಿಗೆ ತಕ್ಕಷ್ಟಾದರೂ- ಜ್ಞಾನ ಸಂಪಾದಿಸುವುದು ಮತ್ತು ಹೇಳ ಬೇಕಾದದ್ದನ್ನು ಭಾಷೆಯಲ್ಲಿಯೇ ಸಾಧಿಸಬೇಕಾದ್ದರಿಂದ, ವಾಗ್ವಾದದ ಉದ್ದೇಶಕ್ಕೆ ತಕ್ಕುದಾದ ಭಾಷೆಯನ್ನು ಎಚ್ಚರದಿಂದ ಕಟ್ಟಿಕೊಳ್ಳುವುದು-ಇವುಗಳನ್ನು ಪೂರೈಸಿಕೊಳ್ಳಬೇಕು. ಇಷ್ಟು ಶ್ರಮವಹಿಸದೇ ಇದ್ದಲ್ಲಿ, ನೈತಿಕ ಆಹಂಕಾರದ ಪ್ರದರ್ಶನ, ಸೈದ್ಧಾಂತಿಕ ಮೇಲ್ಮೆಯ ದಾದಾಗಿರಿ, ಸಾರ್ವಜನಿಕ ವ್ಯಕ್ತಿ ನಿಂದನೆಗಳ ವಿಕೃತಿಯನ್ನು ವಾಗ್ವಾದದ ನೆಪದಲ್ಲಿ ಮೆರೆಯಬಹುದಷ್ಟೇ. ಇಂತಹ ವಿಕೃತಿಗಳಿಗೆ ಸಾರ್ವಜನಿಕ ಚರ್ಚೆಯ ಮುಖವಾಡ ತೊಡಿಸಿ, ತನಗೆ ಪಥ್ಯವಾಗದ ವ್ಯಕ್ತಿ-ವಿಚಾರಗಳನ್ನು ಬಡಿದು ಬಾಯ್ಮುಚ್ಚಿಸುವ ಹತ್ಯಾರವನ್ನು ತಯಾರು ಮಾಡಿದ ಕೀರ್ತಿ ಖಂಡಿತಕ್ಕೂ ವಿಜಯ ಕರ್ನಾಟಕಕ್ಕೆ ಸಲ್ಲಬೇಕು; ಆವರಣ ಕಾದಂಬರಿ ಮತ್ತು ಮತಾಂತರದ ವಿಷಯಗಳಲ್ಲಿ ಈ ತಂತ್ರವನ್ನು ವಿ.ಕ. ಯಶಸ್ವಿಯಾಗಿ ಪ್ರದರ್ಶಿಸಿದೆ. ವಿ.ಕ.ದ ಅಂಕಣಕಾರ ಪ್ರತಾಪ ಸಿಂಹನಂತೂ ವಿಕೃತತೆಯ ಕತ್ತಿ ಝಳಪಿಸುತ್ತ ವಾಗ್ವಾದದ ಮರ್ಯಾದೆಗಳನ್ನೆಲ್ಲ ಕೊಚ್ಚಿ ಹಾಕುವುದರಲ್ಲಿ ನಿಸ್ಸೀಮ. ಎರಡು ವಾರಗಳ ಕೆಳಗೆ, ಯು.ಆರ್.ಅನಂತಮೂರ್ತಿಯವರು ಪ್ರಜಾವಾಣಿಯ ತಮ್ಮ ಅಂಕಣದಲ್ಲಿ ಮಾವೋವಾದದ ಕುರಿತು ಬರೆದ ಲೇಖನದ ವಿರುದ್ಧ ಈ ಪುರುಷೋತ್ತಮ ನಡೆಸಿದ ನೂರಒಂದನೇ ಸಾಹಾಸದ ವಿಕೃತಿಯ ಬಗ್ಗೆ ಜಿ.ರಾಜಶೇಖರ್ ಪತ್ರಿಕೆಯ ಜುಲೈ ೭ರ ಸಂಚಿಕೆಯಲ್ಲಿ ವಿವರವಾಗಿ ಬರೆದಿದ್ದಾರೆ; ಕನ್ನಡದ ೫೦ ಬರಹಗಾರರು ಒಟ್ಟಾಗಿ ಪ್ರತಾಪ ಸಿಂಹನ ವಿಕೃತಿಯನ್ನು ಖಂಡಿಸಿ ವಿ.ಕ.ಕ್ಕೆ ಪ್ರತಿಭಟನಾ ಪತ್ರವನ್ನೂ ಬರೆದಿದ್ದಾರೆ. ಇದರ ಬೆನ್ನಿಗೇ, ಪತ್ರಿಕೆಯಲ್ಲಿ ದೇಶ-ಕಾಲ ಪತ್ರಿಕೆಯ ವಿಶೇಷಾಂಕದ ವಿರುದ್ಧ ಮಂಜುನಾಥ್ ಲತಾ ಮತ್ತು ಚಂದ್ರಶೇಖರ್ ಐಜೂರ್ ಪ್ರತಾಪ ಸಿಂಹನಿಗಿಂತ ತಾವೇನು ಕಮ್ಮಿ ಇಲ್ಲ ಸ್ಪರ್ಧೆಯ ಹುಮ್ಮಸ್ಸಿನಲ್ಲಿ ಬರೆದಿದ್ದಾರೆ.
  ಲತಾ-ಐಜೂರರ ಬರಹವನ್ನು ಪ್ರತಾಪ ಸಿಂಹನ ಬರಹಗಳಿಗೆ ಹೋಲಿಸುವುದು ಸರಿಯೇ? ಹೌದು-ಯಾಕೆಂದು ಹೇಳುತ್ತೇನೆ. ಲೇಖಕರು ಮೊದಲು, ನಮ್ಮ ಸಮಾಜದಲ್ಲಿ ನಲುಗುತ್ತಿರುವ ಜನರ ಬಗ್ಗೆ ತಾವು ಟೀಕಿಸಲು ಹೊರಟಿರುವ ವ್ಯಕ್ತಿಗಳು ಅರ್ಧ ಪೈಸೆ ಕಾಳಜಿಯೂ ಇಲ್ಲದೆ ಐಷಾರಾಮದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ನೈತಿಕ ವರಸೆಯಲ್ಲಿ ಆಪರಾಧ ಹೋರಿಸುತ್ತಾರೆ. ಇದು ವಿಚಾರಣೆಗೆ ಸಾಕಾಗುವಷ್ಟು ಗಟ್ಟಿಯಾದ ಅಪರಾಧ ಎಂಬ ಸಮರ್ಥನೆಯೊಂದಿಗೆ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ಅಪರಾಧಗಳ ಪಟ್ಟಿ ಬಿಚ್ಚುತ್ತಾರೆ. ನಂತರ ದೇಶಕಾಲ ವಿಶೇಷಾಂಕದಲ್ಲಿರುವ ಸಾಹಿತ್ಯ ಮತ್ತು ಸಾಹಿತಿಗಳ ಮೌಲ್ಯಗಳನ್ನು ಪರಿಶೀಲಿಸುವ ಜರೂರೇ ಇಲ್ಲ ಎಂಬ ದ್ರಾಷ್ಟ್ಯದಲ್ಲಿ ಬ್ರಾಹ್ಮಣ ಗುಂಪುಗಾರಿಕೆ, ಶೂದ್ರರಿಗೆ ಅಪಮಾನ, ಎನ್.ಆರ್.ಐ.ಗಳ ನಾಲಿಗೆ ರುಚಿ ತಣಿಸಲು ರಚಿಸಿರುವ ಸಾಹಿತ್ಯ, ಶೂದ್ರ-ದಲಿತ ಲೇಖಕರನ್ನು ಬೆಸ್ತು ಬೀಳಿಸಿರುವುದು, ಚೆಡ್ಡಿಗಳಿಗೆ ಬೆಂಬಲ- ಇತ್ಯಾದಿ ಅಪರಾಧಗಳನ್ನು ವಿಶೇಷಾಂಕದ ಸಂಪಾದಕರು ಮಾಡಿದ್ದಾರೆ ಎಂಬ ಏಕಪಕ್ಷೀಯ ತೀರ್ಪು ನೀಡುತ್ತಾರೆ. ಆಸಕ್ತ ಓದುಗರು ಈ ವಾದಕ್ರಮವನ್ನು ಪ್ರತಾಪ ಸಿಂಹನ ವಿಕೃತ ಸಾಹಸಗಳ ಜೊತೆ ಹೋಲಿಕೆ ಮಾಡಿ ನಿರ್ಣಯಕ್ಕೆ ಬರಬಹುದು. ಓದುಗರು ಕನಿಷ್ಠ ಈ ವಿಶೇಷಾಂಕಕ್ಕೆ ಬರೆದಿರುವ ಸಾಹಿತಿಗಳ ಇಡಿ ಪಟ್ಟಿಯನ್ನು ನಮೂದಿಸಿಟ್ಟುಕೊಂಡು, ಮುಂಬರಲಿರುವ ಕನ್ನಡದ ದೀಪಾವಳಿ ವಿಶೇಷಾಂಕ, ವಾರಪತ್ರಿಕೆ, ಮಾಸಪತ್ರಿಕೆಗಳೂ, ಹಿಂದೆ ಬಂದಿರುವ-ಮುಂದೆ ಬರಲಿರುವ ಸಾಹಿತ್ಯ ಅಕ್ಯಾಡಮಿಗಳ ರ್ವಾಕ, ದಶರ್ವಾಕ ಸಂಕಲನಗಳಲ್ಲಿ ನಮೂದಾಗಿರುವ/ನಮೂದಾಗುವ ಸಾಹಿತಿಗಳ ಹೆಸರಿನ ಜೊತೆ ತಾಳೆ ಹಾಕಿ ನೋಡಿ ಅಪರಾಧಗಳ ಸತ್ಯಾಸತ್ಯತೆಗಳನ್ನು ಮನಗಾಣುವ ಸಾಧ್ಯತೆಯೂ ಇದೆ. ಅದಕ್ಕೆ ಈ ಇಬ್ಬರು ನ್ಯಾಯಾಧೀಶರ ಮಾರ್ಗದರ್ಶನದ ಅವಶ್ಯಕತೆ ಇಲ್ಲ. ಆದರೆ, ಸೇಡಿಯಾಪು ಕೃಷ್ಣಭಟ್ಟರನ್ನ ಭಟ್ಟ, ಭಟ್ಟ ಎಂದು ಲೇವಡಿ ಮಾಡುವ, ಕೆ.ವಿ.ಪುಟ್ಟಪ್ಪನವರ ಸಾಹಿತ್ಯ, ಹಸ್ತಪ್ರತಿ ಹಾಗು ನೈತಿಕತೆಯ ಪೂರ ಕಾಪಿರೈಟನ್ನು ತಾವೇ ಹೊಂದಿದ್ದೇವೆ ಎನ್ನುವ ಹಾಗೆ ಹಾರಾಡುವ, ವೈಚಾರಿಕತೆ-ವಾಗ್ವದಗಳ ಘನತೆಗೆ ಕವಡೆ ಬೆಲೆಯನ್ನೂ ಕೊಡದ ಲೇಖಕದ್ವಯರ ವಿಕೃತಿಗೇನು ಹೇಳುವುದು? ವಾಗ್ವಾದ ಭಂಜಕರು!
  ಕ್ಯಾಪ್ಟನ್, ಕೊನೆಗೆ ಒಂದು ಉತ್ತರದಾತ್ವದ ನಿರ್ವಹಣೆ ಇದೆ. ದೇಶಕಾಲ ವಿಶೇಷಾಂಕದಲ್ಲಿ ತಮ್ಮ ಹೆಸರು ಸೇರಿಕೊಂಡಿರುವುದರ ಬಗ್ಗೆ ಮುಜುಗರಗೊಂಡು ಕೈ ಕೈ ಹಿಸುಕಿಕೊಳ್ಳುತ್ತಿರುವ ರಾಜೇಂದ್ರ ಚೆನ್ನಿ ಮತ್ತು ಇತರ ಕೆಲವು ಲೇಖಕರಿದ್ದಾರೆ ಎಂದು ಲತಾ-ಐಜೂರ್ ಹೇಳಿಕೊಂಡಿದ್ದಾರೆ. ಇವರುಗಳು ಏನು ನಿಲುವು ತೆಗೆದುಕೊಳ್ಳುತ್ತಾರೋ ನನಗೆ ತಿಳಿಯದು. ನಾನು ದೇಶಕಾಲಕ್ಕೆ ಕೆಲವು ಬರಹಗಳನ್ನು ಬರೆದಿದ್ದೇನೆ- ವಿಶೇಷಾಂಕಕ್ಕೂ ಒಂದು ಬರಹ ಬರೆದಿದ್ದೇನೆ. ಜಿ.ರಾಜಶೇಖರರ ಜೊತೆ ಒಂದು ವರ್ಷಗಳ ಕಾಲ ಪುಸ್ತಕ ವಿಮರ್ಶೆಯ ಅಂಕಣವನ್ನು ನಡೆಸಿಕೊಟ್ಟಿದ್ದೇನೆ. ವಿವೇಕರ ಬಗ್ಗೆ ಇರುವ ಗೌರವದಿಂದಲೇ ಈ ಕೆಲಸಗಳನ್ನು ನಾನು ಮಾಡಿದ್ದೇನೆ. ಇದರ ಬಗ್ಗೆ ನನಗೆ ಈಗಲೂ ಯಾವ ಸಂಕೋಚವೂ ಇಲ್ಲ.
  ಲತಾ-ಐಜೂರರ ಲೇಖನ ಮತ್ತು ಜಿ.ರಾಜಶೇಖರ್ ಪ್ರತಾಪ ಸಿಂಹ ಹಾಗು ವಿ.ಕ.ದ ವಿಕಾರಗಳನ್ನು ವಿಶ್ಲೇಸಿರುವ ಮಾತು ಸೋತ ಕರ್ನಾಟಕ ಎದುರು ಬದುರಾಗಿ ಪ್ರಕಟವಾಗಿರುವುದು ಆಕಸ್ಮಿಕವಿರಬಹುದು; ಈ ಪುಟ ವಿನ್ಯಾಸದಿಂದ ಒಂದು ಸೂಕ್ಷ್ಮವಾದ ಕಾರ್ಯ ಸಿದ್ಧಿಸಿದೆ: ಮಾತು ಸೋತ ಕರ್ನಾಟಕದ ಕನ್ನಡಿಯ ಎದುರು ನಿಂತು, ದೇಶವಿದೇನಹಾ!‘ಕಾಲವಿದೇನಹಾ ತನ್ನ ಮುಖವನ್ನು ನೋಡಿಕೊಳ್ಳುತ್ತಿದೆ.
  – ಕೆ.ಫಣಿರಾಜ್

  ಪ್ರತಿಕ್ರಿಯೆ
 20. mallanagoudar

  and the reponse by g rajashekar for the same article

  ಈ ಅಸಹನೆ ಸಾಹಿತ್ಯ ವಿಮರ್ಶೆಯ ವಿಧಾನವಲ್ಲ
  ಪತ್ರಿಕೆಯ ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ”ದೇಶವಿದೇ ನಹಾ! ಕಾಲವಿದೇನಹಾ!”ಎಂಬ ಲೇಖನದಿಂದ ನನಗೆ ಆಘಾತವಾಗಿದೆ. ವ್ಯಂಗ್ಯ, ಅಪಹಾಸ್ಯ, ಸುಳ್ಳು ಆರೋಪ ಮತ್ತು ಒಂದಿಷ್ಟು ಬೈಗುಳುದ ಮಾತುಗಳನ್ನು ಹೊರತುಪಡಿಸಿ ಆ ಲೇಖನ ’ದೇಶ ಕಾಲ’ ಹಾಗೂ ಅದರ ವಿಶೇಷಾಂಕದ ಬಗ್ಗೆ ಏನು ಹೇಳಲು ಹವಣಿಸುತ್ತಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಲೇಖನದ ಮೊದಲಿಗೇ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರನ್ನು ಪ್ರಸ್ತಾಪಿಸಿ ದೇಶ ಕಾಲ ವಿಶೇಷಾಂಕ ಓದುಗರನ್ನೂ ಸಂಪಾದಕರನ್ನು ಹಂಗಿಸಲಾಗಿದೆ. ಇದು ಎತ್ತಣಿಂದೆತ್ತಣ ಸಂಬಂಧ? ಹೀಗೆ ಹಂಗಿಸುವುದರಿಂದ ಆ ಪ್ರವಾಹ ಸಂತ್ರಸ್ತರಿಗೆ ಏನು ಪ್ರಯೋಜನ? ಅದೇ ಲೇಖನದಲ್ಲಿ ಹಲವೆಡೆ ’ದೇಶ ಕಾಲ’ ಮೇಲುಜಾತಿ ಮತ್ತ ಪ್ರತಿಷ್ಟಿತ ವರ್ಗಗಳಿಗೆ ತಕ್ಕುದಾದ ಮತ್ತು ಅವರಿಗೆ ಮಾತ್ರ ಮೀಸಲಾಗಿರುವ ಪತ್ರಿಕೆ ಎಂಬ ಮಾತನ್ನು ನೇರವಾಗಿ ಹೇಳದೆ, ಸುತ್ತು ಬಳಸು ಮಾತಿಗಳಲ್ಲಿ ಸೂಚಿಸಲಾಗಿದೆ ’ದೇಶ ಕಾಲ’ ವಿಶೇಷಾಂಕದ ಬರಹಗಾರರ ಪಟ್ಟಿಯೇ ಆ ಆಪಾದನೆ ಸುಳ್ಳು ಎಂದು ಸಾಬೀತು ಮಾಡುವುದರಿಂದ, ದಲಿತ, ಶೂದ್ರ ಲೇಖಕರನ್ನು ವಿಶೇಷಾಂಕದ ಜಗಲಿ ಪಡುಸಾಲೆಗಳಲ್ಲಿ ಉಳಿದ ಜಾಗಗಳಲ್ಲಿ ಕುಳ್ಳಿರಿಸಲಾಗಿದೆ ಎಂಬ ಷರಾವನ್ನು ಸಹ ಮೇಲೆ ಕಾಣಿಸಿದ ಲೇಖನದ ಲೇಖಕದ್ವಯರು ಸೇರಿಸಿದ್ದಾರೆ. ಅವರ ಮಾತನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಸ್ವತಃ ಆ ಲೇಖಕರಿಗೆ ತಮ್ಮ ಮಾತಿನಲ್ಲಿ ನಂಬಿಕೆ ಇಲ್ಲ . ಸಾಹಿತಿಗಳ ಹಾಗೆ ಸಾಹಿತ್ಯ ವಿಮರ್ಶಕರು ಸಹ, ತಮ್ಮ ಅನಿಸಿಕೆಗಳನ್ನು ಸಂಕೇತ, ರೂಪಕ, ಅನ್ಯೋಕ್ತಿ ಇತ್ಯಾದಿ ಪ್ರತಿಮಾ ವಿಧಾನಗಳಲ್ಲಿ ಮಂಡಿಸತೊಡಗಿದರೆ ಆಗಬಹುದಾದ ಅನರ್ಥಗಳಿಗೆಲ್ಲಾ ಈ ಲೇಖನ ಒಂದು ಪ್ರಮಾಣ ಎಂಬಂತಿದೆ. ಲೇಖನದಲ್ಲಿ ಯಾವ ಮಾತನ್ನು ಯಾರ ಬಗ್ಗೆ ಹೇಳಲಾಗಿದೆ ಎಂದು ‘ಪತ್ತೆ ಮಾಡಲು’ ದೇಶ ಕಾಲ ವಿಶೇಷಾಂಕವನ್ನು ಬಿಡಿಸಿಟ್ಟುಕೊಂಡು ಪುಟಪುಟ ತಪಾಸಣೆ ನಡೆಸಬೇಕಾಗುತ್ತದೆ. ಉದಾಹರಣೆಗೆ ವಿಶೇಷಾಂಕದ ಕೆಲವು ಬರಹಗಳು, ಈ ಲೇಖಕದ್ವಯರಿಗೆ “ಗರ್ಭಪಾತವಾಗಿ ಚೆಲ್ಲಾಪಿಲ್ಲಿಯಾಗಿ ಹೊರಚೆಲ್ಲಿದ ಭ್ರೂಣದ ಚೂರು” ಗಳಂತೆ ಕಂಡಿವೆ. ಈ ಹೋಲಿಕೆಯಿಂದ ಅಸಹ್ಯವೆನ್ನಿಸಿದರೂ ಯಾರ ಬಗ್ಗೆ ಇದನ್ನು ಬಳಸಲಾಗಿದೆ ಎಂದು ಕೆಟ್ಟ ಕುತೂಹಲದಲ್ಲಿ ವಿಶೇಷಾಂಕವನ್ನು ನಾನು ಮೊಗಚಾಡಿದೆ. ಈ ಪತ್ತೇದಾರಿಯಿಂದ ವ್ಯರ್ಥಕಾಲಹರಣವಷ್ಟೇ ಆಯಿತು
  ’ದೇಶ ಕಾಲ’ದ ಲೇಖಕರಷ್ಟೇ ಯಾಕೆ ಯಾವ ಲೇಖಕ ವಿಮರ್ಶಾತೀತರಲ್ಲ. ಆದರೆ ಅವರ ಬಗ್ಗೆ ನಮ್ಮ ಅಸಮಾಧಾನವಿದ್ದರೆ ಮೊದಲು ಅವರನ್ನು ಹೆಸರಿಸಿ ಅವರ ಕೃತಿಗಳನ್ನು ಉದಾಹರಿಸಿ ನಮ್ಮ ಅನಿಸಿಕೆಗಳನ್ನು ಸಮರ್ಥಿಸುವುದು ವಿಮರ್ಶೆಯ ವಿಧಾನ. ಆದರೆ ಪ್ರಸ್ತುತ ಲೇಖನ ವಿಮರ್ಶೆಯ ಈ ಕನಿಷ್ಠ ಮರ್ಯಾದೆಯನ್ನು ಸಹ ಇಟ್ಟುಕೊಂಡಿಲ್ಲ. ಆದ್ದರಿಂದ ಲೇಖನದ ’ದೇಶ ಕಾಲ’ದ ಬಗ್ಗೆ ಪತ್ರಿಕೆಯ ಓದುಗರಲ್ಲಿ ಹುಟ್ಟಿಸಬಹುದಾದ ಅಪಕಲ್ಪನೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಬಯಸುತ್ತೇನೆ.
  ೧) ’ದೇಶ ಕಾಲ’- ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಸಾಹಿತ್ಯಿಕ, ವೈಚಾರಿಕ ಪತ್ರಿಕೆಯಾಗಿದ್ದು ಕಳೆದ ಐದು ವರ್ಷಗಳಿಂದ ಇದು ಕ್ಲುಪ್ತ ಕಾಲದಲ್ಲಿ ಹೊರ ಬರುತ್ತಿದೆ.
  ೨) ಈ ಪತ್ರಿಕೆಯ ಸಂಪಾದಕ ವಿವೇಕ ಶಾನಭಾಗ; ಪ್ರಕಾಶಕರೂ ಅವರೇ; ಚಂದದಾರರಿಗೆ ಅದನ್ನು ಮುಟ್ಟಿಸುವ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ವಿವೇಕ ಶಾನಭಾಗ ಮತ್ತು ಅವರ ಒಬ್ಬಿಬ್ಬರು ಗೆಳೆಯರ ಶ್ರಮದಿಂದಾಗಿ ಮಾತ್ರ ಪತ್ರಿಕೆ ಹೊರಬರುತ್ತಿದೆ. ದೇಶ ಕಾಲ ಯಾವುದೇ ಸರ್ಕಾರೀ ಸಂಸ್ಥೆ, ವಿಶ್ವ ವಿದ್ಯಾಲಯ, ಮಠ, ಪ್ರತಿಷ್ಠಾನ ಇತ್ಯಾದಿ ಅಧಿಕಾರ ಕೇಂದ್ರಗಳ ಪ್ರಕಟಣೆ ಅಲ್ಲ. ಹಾಗಾಗಿ ಅದರ ಸಂಪಾದಕರು ಸ್ವತ: ತಾನೇ ಹಾಕಿಕೊಂಡಿರುವ ಅಭಿರುಚಿ ಮತ್ತು ವಿವೇಚನಗಳ ಮಾನದಂಡ ಹೊರತುಪಡಿಸಿ, ತನ್ನ ಪತ್ರಿಕೆಗಳ ಬಗ್ಗೆ ಯಾರಿಗೂ ವಿವರಣೆ ನೀಡ ಬೇಕಾದದ್ದಿಲ್ಲ.
  ೩) ’ದೇಶ ಕಾಲ’ಕ್ಕೆ ಐದು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಕಟವಾದ ವಿಶೇಷಾಂಕದಲ್ಲಿ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಡ್, ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲ, ಶ್ರೀನಿವಾಸ ವೈದ್ಯ , ಅಬ್ದುಲ್ ರಶೀದ್, ಗುರುಪ್ರಸಾದ ಕಾಗಿನೆಲೆ, ಪ್ರಹ್ಲಾದ ಅಗಸನ ಕಟ್ಟೆ, ಸುನಂದಾ ಪ್ರಕಾಶ ಕಡಮೆ, ಬಿ.ಟಿ. ಜಾಹ್ನವಿ, ಜೋಗಿ, ಮೊಗಳ್ಳಿ ಗಣೇಶ್, ಕೆ.ಸತ್ಯನಾರಾಯಣ ಮತ್ತು ಅಮರೇಶ್ ನುಗಡೋಣಿಯವರ ಕತೆಗಳಿವೆ; ವಸುಧೇಂದ್ರರ ಕಿರು ಕಾದಂಬರಿ, ರಘುನಂದನ್‌ರ ಪೂರ್ಣಪ್ರಮಾಣದ ನಾಟಕ, ರಾಘವೇಂದ್ರ ಪಾಟೀಲರ ನೀಳ್ಗತೆ ಮತ್ತು ಕುಂವೀಯವರ ಆತ್ಮಚರಿತ್ರೆಯ ಆಯ್ದ ಪುಟಗಳಿವೆ. ವೈದೇಹಿಯವರ ಎರಡು ವಿಶಿಷ್ಟ ಸಂದರ್ಶನ ಲೇಖನಗಳ ಜೊತೆ, ವೀರಪ್ಪ ಮೊಯ್ಲಿ, ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ, ಕೆ.ಎಸ್.ಪುಟ್ಟಣ್ಣಯ್ಯ, ಸುರೇಶ್‌ಕುಮಾರ್ ಮತ್ತು ಕೃಷ್ಣ ಭೈರೇಗೌಡರ ಜೊತೆ ಪ್ರಕಾಶ ಬೆಳವಾಡಿ ನಡೆಸಿರುವ ಸಂದರ್ಶನಗಳಿವೆ. ವಿಶೇಷಾಂಕದಲ್ಲಿ ಕೆ.ವಿ.ಅಕ್ಷರ, ಕೆ.ಸಚ್ಚಿದಾನಂದನ್, ಲಕ್ಷ್ಮೀಶ ತೋಳ್ಪಾಡಿ, ಎಂ.ಎಸ್. ಶ್ರೀರಾಮ್ ಹಾಗೂ ಎಸ್.ಆರ್. ವಿಜಯಶಂಕರರ ಲೇಖನಗಳೊಂದಿಗೆ, ಚಿತ್ರಕಾರ ಎಸ್.ಜಿ.ವಾಸುದೇವ್ ಅವರ ಜೊತೆ ಪ್ರತಿಭಾನಂದಕುಮಾರ್ ಹಾಗೂ ರಂಗಕರ್ಮಿ ಇಕ್ಬಾಲ್ ಜೊತೆ ಎಸ್.ದಿವಾಕರ್ ನಡೆಸಿರುವ ಶಬ್ದ-ರೇಖೆಗಳ ಕುತೂಹಲಕಾರಿ ಪ್ರಯೋಗಗಳಿವೆ. ಕನ್ನಡದಲ್ಲಿ ಈಗ ಬರೆಯುತ್ತಿರುವ ಪ್ರತಿಭಾವಂತಕವಿಗಳ ಜೊತೆ ಯುವ ಕವಿಗಳೂ ಸೇರಿದಂತೆ ೨೫ ಕವಿಗಳ ಪದ್ಯಗಳನ್ನು ವಿಶೇಷಾಂಕ ಒಳಗೊಂಡಿದೆ. ಅದೂ ಅಲ್ಲದೆ ವಿಶೇಷಾಂಕದಲ್ಲಿ ೨೧ ವಿಮರ್ಶಕರು, ೨೧ನೆಯ ಶತಮಾನದ ಭರವಸೆ ಹುಟ್ಟಿಸುವ ೨೧ ಲೇಖಕರ ಬಗ್ಗೆ ಬರೆದಿದ್ದರೆ, ಬಿ.ಎಲ್.ನಾಗಭೂಷಣಸ್ವಾಮಿ, ಟಿ.ಪಿ.ಅಶೋಕ್ ಮತ್ತು ಸಿ.ಎನ್.ರಾಮಚಂದ್ರನ್ ೨೧ನೆಯ ಶತಮಾನದ ೨೧ ಮುಖ್ಯ ಕೃತಿಗಳನ್ನು ಹೆಸರಿಸಿ ಅವುಗಳ ಬಗ್ಗೆ ಬರೆದಿದ್ದಾರೆ. ಇದೊಂದು ಸಚಿತ್ರ ಸಂಪುಟವಾಗಿದ್ದು, ಇಲ್ಲಿ ಅಚ್ಚಾಗಿರುವ ಚಿತ್ರಗಳು ಸಹ ಸದಭಿರುಚಿಯದ್ದಾಗಿದೆ. ಸಮಕಾಲೀನ ಕನ್ನಡ ಬರವಣಿಗೆಯ ಕೆಲವು ಉತ್ತಮ ಮಾದರಿಗಳನ್ನು ಒದಗಿಸುವ ಈ ವಿಶೇಷಾಂಕದಲ್ಲಿ ಕಂಡುಬರದ ಏಕೈಕ ಮುಖ್ಯ ಲೇಖಕರೆಂದರೆ ಹೆಚ್.ಎಸ್.ಶಿವಪ್ರಕಾಶ್. ಅವರ ಗೈರುಹಾಜರಿ ಸಂಪಾದಕರ ವ್ಯಕ್ತಿಗತ ಪೂರ್ವಾಗ್ರಹದಿಂದ ಆಗಿರುವಂತಹದ್ದಲ್ಲ ಎಂಬ ವಿಶ್ವಾಸ ನನಗಂತೂ ಇದೆ.
  ೪) ’ದೇಶಕಾಲ’ದ ಎಲೈಟಿಸ್ಟ್ ಧೋರಣೆ ಬಗ್ಗೆ ಕೆಲವು ಎಡಪಂಥೀಯರು ಆಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಇದು ವಿಚಿತ್ರವಾಗಿರುವ ಲೇಬಲ್. ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಶಾಲೆ, ಕಾಲೇಜು, ಕ್ರೀಡೆ, ಹೋಟೆಲ್, ಆಸ್ಪತ್ರೆ ಮುಂತಾದವುಗಳನ್ನು ಎಲೈಟಿಸ್ಟ್ ಎಂದು ತಿರಸ್ಕರಿಸುವುದು ಸರಿ. ಸಾಹಿತ್ಯ ನಿಯತಕಾಲಿಕವೊಂದರ ಸೊಗಸಾದ ಮುದ್ರಣ, ವಿನ್ಯಾಸ, ಬರವಣಿಗೆಯ ಕಸಬುಗಾರಿಕೆಇವೆಲ್ಲ ಯಾವತ್ತಿನಿಂದ ಎಲೈಟಿಸ್ಟ್ ಆದವು? ಹಾಗಾದರೆ ತಮ್ಮ ವೃತ್ತಿಗಳಲ್ಲಿ ಅಸಾಧಾರಣ ನೈಪುಣ್ಯ ಪಡೆದಿರುವ ರೈತರು, ಬಡಗಿಗಳು, ಅಕ್ಕಸಾಲಿಗರು, ನೇಕಾರರು ಮುಂತಾದವರು ಸಹ ಎಲೈಟಿಸ್ಟ್‌ಗಳೋ? ದೇಶಕಾಲವನ್ನು ಎಲೈಟಿಸ್ಟ್ ಎಂದು ಹೀಗಳೆಯುವವರು, ಅದರಲ್ಲಿ ಪ್ರಕಟವಾಗಿರುವ ಒಂದು ಬರಹದ ಉದಾಹರಣೆಯಿಂದಲಾದರೂ ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಒರಟುಒರಟಾಗಿ ಬರೆಯುವುದರಿಂದ ಶೋಷಿತರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ; ಶೋಷಿತರ ಚಳುವಳಿಗಳಿಗೂ ಈ ಬಗೆಯ ವಿಮರ್ಶೆಯಿಂದ ಏನೂ ಆಗಬೇಕಾದದ್ದಿಲ್ಲ.
  -ಜಿ.ರಾಜಶೇಖರ

  ಪ್ರತಿಕ್ರಿಯೆ
 21. mallanagoudar

  and finally the response by dr.rahamat tarikere

  ಮಂಜುನಾಥ್ ಹಾಗೂ ಐಜೂರ್ ಅವರು ‘ದೇಶಕಾಲ’ ವಿಶೇಷ ಸಂಚಿಕೆ ಇಟ್ಟುಕೊಂಡು ಕರ್ನಾಟಕ ಸಾಂಸ್ಕೃತಿಕ ರಾಜಕಾರಣದ ವಿಶ್ಲೇಷಣೆ ಮಾಡಿದ್ದನ್ನು ಓದಿದೆ. ಪತ್ರಿಕೆ, ಪ್ರಕಾಶನ, ಸಾಹಿತ್ಯಕ ಕಾರ್ಯಕ್ರಮ ಮುಂತಾದವುಗಳಲ್ಲಿ ತಮ್ಮ ಜಾತಿಯವರನ್ನೇ ಗುಡ್ಡೆಹಾಕಿಕೊಂಡು, ಸಾಮಾಜಿಕ ಸಮಾನತೆಯ ಬ್ಯಾಲನ್ಸಿಗಾಗಿ ಉಳಿದವರನ್ನು ಇಟ್ಟುಕೊಳ್ಳುವ ಸುಪ್ತ ಜಾತೀಯತೆ ಕುರಿತ ಅವರು ಆಕ್ರೋಶ ವ್ಯಕ್ತಮಾಡಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳಬಹುದು. ಈ ಪ್ರವೃತ್ತಿಗೆ ಕರ್ನಾಟಕದಲ್ಲಿ ಬೇಕಾದಷ್ಟು ನಿದರ್ಶನಗಳಿವೆ. ಈಚೆಗೆ ಬೆಂಗಳೂರಿನಲ್ಲಿ ಇದು ಜಾಸ್ತಿಯೂ ಆದಂತಿದೆ.
  ‘ದೇಶಕಾಲ’ ಪತ್ರಿಕೆಯ ಸಾಹಿತ್ಯದ ಪರಿಕಲ್ಪನೆ ಬಗ್ಗೆ ನನಗೂ ಭಿನ್ನಮತವಿದೆ. ಅದು ಕೆ.ವಿ.ಸುಬ್ಬಣ್ಣನವರು ಹಿಂದೊಮ್ಮೆ ವಿರೋಧಿಸಿದ್ದ ‘ಶ್ರೇಷ್ಠತೆಯ ವ್ಯಸನ’ವನ್ನು ಕೊಂಚ ಅಂಟಿಸಿಕೊಂಡಿರಬಹುದೇ ಎಂದೂ ಅನಿಸಿದೆ. ಅದರಲ್ಲೂ ವಿಶೇಷ ಸಂಚಿಕೆಯಲ್ಲಿರುವ ೨೧ನೇ ಶತಮಾನದ ಹೊಸಲೇಖಕರ ಇಲ್ಲವೇ ಶ್ರೇಷ್ಠ ಪುಸ್ತಕಗಳ ಪಟ್ಟಿಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಈ ಬಗೆಯ ಭಿನ್ನಮತವು ಯಾರೇ ಮಾಡುವ ಪಟ್ಟಿಗಳಿಗೂ- ಸ್ವತಃ ಲಂಕೇಶ್ ಸಂಪಾದಿಸಿದ ‘ಅಕ್ಷರ ಹೊಸಕಾವ್ಯ’ದ ಎರಡನೇ ಆವೃತ್ತಿಗೂ- ಅನ್ವಯವಾಗುತ್ತದೆ. ಅದರ ಬಗ್ಗೆ ಪ್ರಶ್ನೆ ಎತ್ತುವುದು ಮತ್ತು ಚರ್ಚಿಸುವುದು ನಮಗೆಲ್ಲರಿಗೂ ಸಾಧ್ಯವಾಗಬೇಕು.
  ಆದರೆ ನನ್ನ ಈ ಇಬ್ಬರು ಮಿತ್ರರು ತಮ್ಮ ಭಿನ್ನಮತ ಇಟ್ಟುಕೊಂಡು ಮಾಡಿರುವ ವಿಶ್ಲೇಷಣೆ ಮತ್ತು ಧಾಟಿ ಮಾತ್ರ, ಅಪರಾಧಿಗಳನ್ನು ಹುಡುಕಿ ಶಿಕ್ಷೆಕೊಡುವ ಸ್ವಯಂಘೋಷಿತ ನ್ಯಾಯಾಧೀಶರದ್ದಾಗಿದೆ. ಇಲ್ಲಿರುವ ವಿಡಂಬನೆ, ಅಸೂಕ್ಷ್ಮತೆ ಮತ್ತು ಅಸಹನೆಯಿಂದ ಗಂಭೀರ ಸಂವಾದವೊಂದನ್ನು ಹುಟ್ಟುಹಾಕುವುದು ಸಾಧ್ಯವೇ? ಎದುರಿಗಿರುವವರ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವುದಕ್ಕೂ ನಿರಾಕರಿಸುವ ಫ್ಯಾಸಿಸಂ ನಮ್ಮ ಸಮಾಜದ ಸಂದುಮೂಲೆಗಳನ್ನೂ ಆವರಿಸಿಕೊಳ್ಳುತ್ತಿರುವ ಹೊತ್ತಿದು. ಇದಕ್ಕೆ ಪ್ರತಿಯಾಗಿ, ಸಮಾನ ಮನಸ್ಕರು ವಿಶಾಲ ನೆಲೆಯಲ್ಲಿ ಒಂದಾಗಿ, ಸಾಂಸ್ಕೃತಿಕ-ರಾಜಕೀಯ ಪರ್ಯಾಯ ಹುಡುಕಬೇಕು ಎಂದು ನಾವೆಲ್ಲ ಚಡಪಡಿಸುತ್ತಿರುವ ಈ ಹೊತ್ತಲ್ಲಿ, ಸಂವಾದಕ್ಕೆ ಬೇಕಾದ ಗುಣ ನಮಗೆಲ್ಲರಿಗೂ ತೀರ ಅಗತ್ಯವಾಗಿದೆ. ಇಲ್ಲದಿದ್ದರೆ ನಮಗೂ ‘ವಿಜಯ ಕರ್ನಾಟಕದ’ ಕೆಲವು ಅಂಕಣಕಾರರಿಗೂ ಫರಕೇ ಉಳಿಯುವುದಿಲ್ಲ.
  ನಾನು ಈಚೆಗೆ ಕಥಾಕಮ್ಮಟದಲ್ಲಿ, ಹೊಸತಲೆಮಾರಿನ ಲೇಖಕರೊಬ್ಬರು ಬರೆದ ನಾನು ಇಷ್ಟಪಟ್ಟ ಕತೆಯನ್ನು ಓದಿ ವಿಶ್ಲೇಷಿಸಿದೆ. ನಾನು ತೆರಳಿದ ನಂತರ ಅಲ್ಲಿ, ನಾನು ಯಾಕೆ ಬ್ರಾಹ್ಮಣ ಲೇಖಕರನ್ನೇ ಆರಿಸಿಕೊಂಡೆ ಎಂದು ಕಮ್ಮಟದ ತರುಣರು ಚರ್ಚಿಸಿದರೆಂದು ಹಿಂದಿನಿಂದ ತಿಳಿದುಬಂದಿತು. ಶ್ರೀನಿವಾಸ ವೈದ್ಯರ ‘ಹಳ್ಳಬಂತು ಹಳ್ಳ’ ಕಾದಂಬರಿ ಮೇಲೆ ಮಿತ್ರರೊಬ್ಬರು, ಅದೊಂದು ಕೆಟ್ಟಕೃತಿ ಎಂಬಂತೆ ಬರೆದ ಪುಸ್ತಕ ವಿಮರ್ಶೆ ಓದಿದಾಗಲೂ ಕಂಗಾಲಾಯಿತು. ಎಲ್ಲವನ್ನು ಜಾತಿಯ ನೆಲೆಗೆ ತಂದಿಟ್ಟು ನೋಡುವ ಪೂರ್ವಗ್ರಹವೊಂದು ಜಾತ್ಯತೀತ ಎಂದುಕೊಳ್ಳುವ ಹೊಸತಲೆಮಾರಿನ ಗೆಳೆಯರಲ್ಲಿ ಮೊಳೆಯುತ್ತಿದೆಯೇ? ಜನಪರ ಚಳವಳಿಗಳಲ್ಲಿ ಜೀವದ ಹಂಗುಬಿಟ್ಟು ಕೆಲಸ ಮಾಡುವ ಅನೇಕ ‘ಬ್ರಾಹ್ಮಣ’ ಸಂಗಾತಿಗಳ ಬಗ್ಗೆ ಕೂಡ ಕೆಲವರು ಅನುಮಾನದ ಮಾತಾಡುವುದನ್ನು ಕೇಳಿ ನನಗೆ ಗಾಬರಿಯಾದದ್ದಿದೆ. ‘ನಾಗರಬೆತ್ತ’ ಕತೆ ಬರೆದ ಸೇಡಿಯಾಪು ಅವರನ್ನು ಭಟ್ಟರು ಎಂಬ ಕಾರಣಕ್ಕೆ ಗೇಲಿ ಮಾಡುವುದಾದರೆ, ಚರ್ಚೆ ಎಲ್ಲಿಗೆ ಹೋಗಿ ನಿಲ್ಲಬಹುದು? ಸಾರಾಸಗಟು ಬ್ರಾಹ್ಮಣ ವಿರೋಧಕ್ಕೂ, ಮುಸ್ಲಿಮರನ್ನು ಕುರಿತ ಮತೀಯವಾದಿ ಪೂರ್ವಗ್ರಹಕ್ಕೂ ವ್ಯತ್ಯಾಸ ಕಡಿಮೆ.
  ಕನ್ನಡ ಸಾಹಿತ್ಯ ಲೋಕದಲ್ಲಿ ಬಹುರೂಪದಲ್ಲಿ ಸುಪ್ತವಾಗಿರುವ ಜಾತಿಯ/ ಗುಂಪುಗಾರಿಕೆಯ ಅಂಶವನ್ನು ಲಂಕೇಶ್, ತೇಜಸ್ವಿ, ಕುವೆಂಪು, ದೇವನೂರು ಮುಂತಾದ ಹಿರೀಕರು, ಗುರುತಿಸುತ್ತ ವಿಮರ್ಶಿಸುತ್ತ ಪ್ರತಿಭಟಿಸುತ್ತ ಬಂದವರೇ. ಅದನ್ನು ಅವರು ಘನತೆಯಿಂದ ಸಾಹಿತ್ಯಕ ಸೂಕ್ಷ್ಮತೆ ಬಿಟ್ಟುಕೊಡದೆ ಮಾಡಿದರು. ನಾವೆಲ್ಲರೂ ನಮ್ಮ ತಾತ್ವಿಕ ಭಿನ್ನಮತ ಬಿಟ್ಟುಕೊಡದೆ ಇಂತಹ ಸಾಂಸ್ಕೃತಿಕ ರಾಜಕಾರಣದ ಪ್ರಶ್ನೆಗಳನ್ನು ಚರ್ಚಿಸಲು ಸಾಧ್ಯವಾಗಬೇಕು; ಅದನ್ನು ಸಂವಾದದ ಪರಿಭಾಷೆಯಲ್ಲಿ ಹೇಳಲೂ ಸಾಧ್ಯವಾಗಬೇಕು. ಇಲ್ಲದಿದ್ದರೆ, ಕುರುಡು ಜಾತಿಪೂರ್ವಗ್ರಹದ ಹುದುಲಿನಲ್ಲಿ ಅದನ್ನು ಟೀಕಿಸುವ ನಾವೂ ಸಿಕ್ಕಿಕೊಳ್ಳುತ್ತೇವೆ. ಸಾಹಿತ್ಯಕ ವಿಷಯದಲ್ಲಿ ತೋರುವ ಸೂಕ್ಷ್ಮತೆ-ಅಸೂಕ್ಷ್ಮತೆಗಳೇ ನಮ್ಮ ಸಾಮಾಜಿಕ ರಾಜಕೀಯ ಪ್ರಜ್ಞೆಯಲ್ಲೂ ವಿಸ್ತರಣೆ ಪಡೆಯುತ್ತವೆಯಾದ್ದರಿಂದ, ನಾವು ನಮ್ಮ ಮಾತು ನಮಗೇ ತಿರುಗಿ ಬಡಿಯದಂತೆ ಎಚ್ಚರವಹಿಸಬೇಕಿದೆ.
  – ರಹಮತ್ ತರೀಕೆರೆ

  ಪ್ರತಿಕ್ರಿಯೆ
 22. K.V.Tirumalesh

  Dear Phaniraj
  Responses by Rahmat, Rajashekhar, you and others are very sober and thought-provoking; I hope younger people will learn how to conduct a useful debate from these. I haven’t seen the special number of Deshakaala yet. But I know Vivek and am sympathetic to what he has been doing. I don’t think he will deliberately promote any factionalism.
  He has been devoting his time and money for bringing out a good journal. The first issue of it came to me when I was in Iowa and it impressed me very much, for it appeared to have an international standard. Althouth I do not value any journal or book for its external appearance, I still like beautiful production. This is beside the point anyway. What is important to note is, as Rajashekhar has pointed out, Vivek is the editor and one has to appreciate his judgement in the selection of texts for each issue. We may disagree with his selection but that has to be without prejudice. Bringing in caste, creed and religion unwarrantedly makes one no better than what one riticizes.
  In this context you mentioned my `attack’ on Girish Karnad and certain bad consequences thereof. I fully apologise for that outburst of mine–indeed I had said so in my final response in Prajavani–and today am ashamed of it. (A point to be noted: some of the rhetorical questions I put to writers in my article were based on similar points that Rilke makes in his novel `The Notebook of Laurids Brigge’ which I had been translating at the time.) I did it in a surcharged atmosphere. Being always away from Karnataka and Kannada, a recluse and an exile almost, I probably was trying to be more virtuous like Caesar’s wife!
  KVTirumalesh, Arabia

  ಪ್ರತಿಕ್ರಿಯೆ
 23. ಚೈತನ್ಯ

  “ಕನ್ನಡದ ಸಾಹಿತ್ಯವನ್ನ, ಜಾತಿ, ಧರ್ಮ, ಲಿಂಗ ಆಧಾರಿತ ಚರ್ಚೆಯನ್ನ ಗಂಭೀರವಾಗಿ ನೋಡುತ್ತಾ ಬಂದಿರುವ, ಆ ಚರ್ಚೆಯನ್ನು ಜೀವಂತವಾಗಿಟ್ಟಿರುವ ಇಬ್ಬರು ಲೇಖಕರಾದ ಮಂಜುನಾಥ ಲತಾ ಹಾಗೂ ಚಂದ್ರಶೇಖರ ಐಜೂರು” ಎಂಬುದನ್ನು ಎಲ್ಲ ಓದಿದ ಮೇಲೆ ಒಂದು ಸಲ ಓದಿದರೆ ಜೋರಾಗಿ ನಗಬೇಕೆನಿಸುತ್ತದೆ…….. ಅವರು ಗಂಭೀರವಾಗಿ ನೋಡುತ್ತಾ ಬಂದಿದ್ದರೆ ಎಷ್ಟೋ ಚೆನ್ನಾಗಿತ್ತು.. ಯಾವಾಗಿ ವ್ಯಕ್ತ ಪಡಿಸಿದರೋ ಅಲ್ಲಿಗೆ ಜಾತ್ಯಾತೀತ ನೆಲೆಯಲ್ಲು ತಮ್ಮನ್ನು ತಾವು ಕಂಡುಕೊಂಡರು. ಇದರ ಹಿಂದೆಯೂ ಹಿಡನ್ ಅಜೆಂಡಾ ಇದೆ ಅನ್ನೋದಕ್ಕೆ ನನಗಂತೂ ಯಾವುದೇ ಮುಜುಗರ ಇಲ್ಲ…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: