'ಜುಗಾರಿ ಕ್ರಾಸ್' ಬಿಸಿಯಾಗಿದೆ..ನೀವೂ ಬನ್ನಿ

ಹೇಳಿಕೇಳಿ ‘ಜುಗಾರಿ ಕ್ರಾಸ್’ ಚರ್ಚೆ, ವಾದ, ವಿವಾದಕ್ಕಾಗಿಯೇ ಇರುವ ವೇದಿಕೆ. ಎಸ್ ಸಿ ದಿನೇಶ್ ಕುಮಾರ್  ‘ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ….’ ಲೇಖನ ಬರೆದು ಡಬ್ಬಿಂಗ್ ಆಗಬೇಕಾದರ ಔಚಿತ್ಯದ ಬಗ್ಗೆ ಗಮನ ಸೆಳೆದಿದ್ದರು. ಆ ಲೇಖನ ಇಲ್ಲಿದೆ. ಅಮೀರ್ ಖಾನ್ ಅವರ ‘ಸತ್ಯಮೇವ ಜಯತೆ’ ಕನ್ನಡಕ್ಕೆ ಡಬ್ ಆಗಬಾರದು ಎಂದು ದನಿ ಎತ್ತಿರುವ ಸಂದರ್ಭದಲ್ಲಿ ದಿನೇಶ್ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ. ಚರ್ಚೆಗೆ ಸ್ವಾಗತ. ನೀವೂ ಭಾಗವಹಿಸಿ. ಅಶೋಕ್  ಶೆಟ್ಟರ್ ….. ಕಳಪೆ ಮಾಲು ಸೃಷ್ಟಿಸಿ “ಮಹಾಜನಗಳೇ ಇದು ಕರ್ನಾಟಕದಲ್ಲಿ ಸೃಷ್ಟಿಯಾದದ್ದು, ಇದನ್ನೇ ನೀವು ಕೊಳ್ಳಬೇಕು” ಎಂದರೆ ಹಲವು ಆಯ್ಕೆಗಳು ಮುಕ್ತವಾಗಿ ಲಭ್ಯವಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಡೆಯುವದಿಲ್ಲ. ಅತ್ಯಂತ ಯಶಸ್ವಿ ಹಿಂದಿ ಕಾಮೆಡಿ ಚಿತ್ರಗಳನ್ನು ಕೆಡಿಸಿ ಕೆರ ಹಿಡಿದ ರೀತಿಯಲ್ಲಿ ರಿಮೇಕ್ ಮಾಡಿದ ಉದಾಹರಣೆಗಳು ಕನ್ನಡದಲ್ಲಿವೆ.ಕೆಲಸಕ್ಕೆ ಬಾರದ ವಿತಂಡವಾದಗಳನ್ನು, ಕಿತ್ತಾಟಗಳನ್ನ್ನುಕೈಬಿಟ್ಟು ವಾಸ್ತವ ಸ್ಥಿತಿಯನ್ನ ಮುಕ್ತವಾಗಿ ನೋಡಿ ಅಗತ್ಯವಿರುವ ಬದಲಾವಣೆಗಳನ್ನು ತಂದುಕೊಳ್ಳುವ ಪ್ರಾಮಾಣಿಕತೆ ತೋರದಿದ್ದರೆ ಜನರ ವ್ಯಾಪಕ ನಿರಾಕರಣೆಗೆ ಒಳಗಾಗುವದೊಂದೇ ಗತಿ… ರಾಜಾರಾಂ ತಲ್ಲೂರು : ನಿಜಕ್ಕೆಂದರೆ ನನಗೆ “ಸಂಸ್ಕೃತ ಭಾಷೆ ಉಳಿಸಿ” ಹೋರಾಟಕ್ಕೂ “ಡಬ್ಬಿಂಗ್ ಸಾರಾಸಗಟು ಬೇಡ” ವಾದಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಸಿನಿಮಾ ಭಾಷೆಯನ್ನು ಮೀರಿದ ಮಾಧ್ಯಮ. ಜಗತ್ತಿನ ಯಾವುದೇ ಭಾಷೆಯಲ್ಲಿನ ಅತ್ಯುತ್ತಮ ಎನ್ನಿಸುವ ಸಿನಿಮಾಗಳನ್ನು ನಾವು ಡಬ್ಬಿಂಗ್ ಇಲ್ಲದೇ ಹೆಚ್ಚೆಂದರೆ ಸಬ್ ಟೈಟಲ್ ಗಳ ಸಹಾಯದಿಂದ ಆನಂದಿಸಿದ್ದೇವೆ. ಸಿನಿಮಾದಲ್ಲಿ ಕಾಳು-ಜೊಳ್ಳು ಆರಿಸುವವರು ಅಂತಿಮವಾಗಿ ಪ್ರೇಕ್ಷಕರೇ ಹೊರತು ಸಿನಿ ಉದ್ದಿಮೆದಾರರಾಗಲೀ ಸಿನಿ ಕಸುಬುದಾರರಾಗಲೀ ಅಲ್ಲ. ಹಾಗಾಗಿ, ಡಬ್ಬಿಂಗ್ ಸಾರಾಸಗಟು ಬೇಡ ಎಂದರೆ, ಅದು “ಸಂಸ್ಕೃತ ಉಳಿಸಿ” ಎಂದು ಗೋಗರೆದಂತೆಯೇ ಕೇಳಿಸುತ್ತದೆ. ಬಹು ಸಂಸ್ಕೃತಿ ಡಬ್ಬಿಂಗ್ ನಿಂದ ನಾಶ ಆಗುತ್ತದೆ ಎಂಬ ವಾದ ಮೇಲ್ನೋಟಕ್ಕೆ ಹೌದು ಅನ್ನಿಸುತ್ತದಾದರೂ, ಕಳೆದ ೧೦೦ ವರ್ಷಗಳ ಇತಿಹಾಸ ಗಮನಿಸಿದರೆ ಈ ರೀತಿಯ ಆಯ್ಕೆಗಳಲ್ಲಿ ನಾವು ನಮ್ಮ ಅನುಕೂಲಕ್ಕೆ ಬೇಕಾದ್ದನ್ನು ಆರಿಸಿಕೊಂಡು ಬೇಡದ್ದನ್ನು ಬಿಟ್ಟದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಉದಾಹರಣೆಗೆ ಅಟೊಮೊಬೈಲ್ ಉದಾರೀಕರಣದ ಹೆಸರಲ್ಲಿ ಅಂಬಾಸೆಡರ್ ಕಾರು ಮೂಲೆಗೆ ಸರಿದದ್ದು. ಹಾಗಾಗಿ, ಒಂದು ದಿಕ್ಕನ್ನು ಹಿಡಿದು ಹೊರಟಿರುವ ಪ್ರವಾಹಕ್ಕೆ (ಅದು ಸರಿಯೋ ತಪ್ಪೋ ಎಂಬುದು ಈಗ ನಮ್ಮ ಹಿಡಿತದಲ್ಲಿಲ್ಲ) ಅಡ್ಡ ತಡೆ ಕಟ್ಟುವ ಪ್ರಯತ್ನಗಳು ಒಟ್ಟಂದದಲ್ಲಿ ನೋಡಿದಾಗ ಕೇವಲ ಗೊಣಗುವಿಕೆಯ ಮಟ್ಟಕ್ಕೆ ಸೀಮಿತವಾಗುತ್ತವೆ. ಟೀನಾ ಶಶಿಕಾಂತ್ : ದಿನೇಶ, ಬಹಳ ಉತ್ತಮವಾದ ಲೇಖನ. ಬಹುಶಃ ಈ ರೀತಿಯ ದೃಷ್ಟಿಕೋನದಿಂದ ಯೋಚಿಸುವ ಕಷ್ಟವನ್ನೂ ನಮ್ಮ ಸಿನೆರಂಗದವರು ತೆಗೆದುಕೊಂಡಿಲ್ಲ. ಅದಕ್ಕೇ ಈ ದುರ್ಗತಿ ನಮಗೆ. ಇತ್ತೀಚಿನ ಹೆಚ್ಚಿನಮಟ್ಟಿಗಿನ ಸಿನೆಮಾಗಳನ್ನಂತೂ ನನ್ನ ಭಾಷೆಯವು ಎಂದು ಹೇಳಿಕೊಳ್ಳಲೇ ಬೇಸರವಾಗುತ್ತದೆ. ’ಏನೋ ಇದೆ’ ಎಂದು ಭರವಸೆ ಹುಟ್ಟಿಸಿದವರೆಲ್ಲ ಕ್ರಮೇಣ ಇತರರ ಹಾಗೆ ಪೊಳ್ಳಾಗುತ್ತ ನಿರಾಶೆಗೆ ದೂಕುತ್ತ ಇದಾರೆ. ಡಬ್ಬಿಂಗ್ ಅನ್ನ ಒಳಗೊಂಡಿರುವ ನಮ್ಮ ಇತರ ಭಾರತೀಯ ಭಾಷೆಗಳಾ ಸಿನೆಮಾಗಳಿಗೆಲ್ಲೂ ತೊಂದರೆಯಾಗಿಲ್ಲ, ಬದಲಾಗಿ ಅಲ್ಲಿನ ಪ್ರೇಕ್ಷಕರಿಗೆ ಹೆಚ್ಚಿನದು ದೊರಕಿದೆ ಮತ್ತು ಹೀಗೆ ಹೊಸದನ್ನು ಕಂಡ ಅವರ ಅನುಭವ ತಮ್ಮ ಭಾಷಾ ಸಿನೆಮಾದಿಂದ ಹೆಚ್ಚಿನದನ್ನು ಬಯಸುವಂತೆ ಮಾಡಿದೆ. ಅಲ್ಲಿನ ಸಿನೆತಂತ್ರಜ್ಞಾನವನ್ನ ಉತ್ತಮಗೊಳಿಸಿದೆ. ಅಲ್ಲೆಲ್ಲೂ ಪ್ರಾದೇಶಿಕ ಸಿನೆಮಾ ಮುಳುಗಿಹೋಗಲಿಲ್ಲ. ಹಾಗಿದ್ದಾಗ ನಮಗೇಕೆ ಡಬ್ಬಿಂಗ್ ಅಂದರೆ ಕೈಕಾಲು ನಡುಕ? ನಮ್ಮ ಹುಳುಕು ಮುಚ್ಚುವ ಧಾವಂತವಿದು. ಹೊಸದನ್ನು ಬೇಡ ಎಂದರೆ ಕಳೆದುಕೊಳ್ಳುವವರು ನಾವೇನೆ. ಆಲ್ಲವೆ? ಯಾರೋ ಒಂದಿಷ್ಟು ಜನ ಎಲ್ಲೋ ಕೂತು ನಮ್ಮ ಪ್ರೇಕ್ಷಕರಿಗೇನು ಬೇಕು, ಬೇಡ ಎಂದು ಅದು ಹೇಗೆ ನಿರ್ಧಾರ ಮಾಡುತ್ತಾರೆ? ನಮ್ಮನ್ನು ಕೇಳಿ ಸ್ವಾಮೀ.. ನಾವು ಹೇಳುತ್ತೇವೆ!! ರಾಘವೇಂದ್ರ ಜೋಶಿ : ಇಷ್ಟಕ್ಕೂ ಕನ್ನಡಕ್ಕೆ ಡಬ್ಬಿಂಗ್ ಬೇಕಾಗಿಲ್ಲ ಅಂತ ಇಂಡಸ್ಟ್ರಿಯವರು ನಿರ್ಧರಿಸುವದು ಸರಿ ಕಾಣಲಿಲ್ಲ.ಹಾಗೊಂದು ವೇಳೆ ಈ ನಿರ್ಧಾರ ಸರಿ ಅಂತ ಅನ್ನುವದಾದರೆ “ಟೈಟಾನಿಕ್” ನಂಥ ಚಿತ್ರವನ್ನು ಕನ್ನಡದಲ್ಲೇ ಮಾಡಿ ನೋಡುವ.ಆಗ ಈ ನಿರ್ಧಾರವನ್ನು ಮೆಚ್ಚಿಕೊಳ್ಳಬಹುದೇನೋ..ಒಳ್ಳೆಯದು,ಆಸಕ್ತಿಕರವಾದದ್ದು,ಅಮೋಘವಾದದ್ದು-ಇದೆಲ್ಲವನ್ನೂ ನಾನು ನನ್ನ ಕನ್ನಡ ಭಾಷೆಯಲ್ಲೇ ನೋಡಬಯಸುತ್ತೇನೆ.ಕನ್ನಡದಲ್ಲೇ ನೋಡುವದರ ಮೂಲಕ ನನ್ನ ಖುಷಿಯನ್ನು ದ್ವಿಗುಣಗೊಳಿಸಲು ಬಯಸುತ್ತೇನೆ.ಮತ್ತು ಕನ್ನಡದಲ್ಲೇ ನೋಡುವದರ ಮೂಲಕ ನಾನು ಜಾಸ್ತಿ relate ಆಗಬಲ್ಲೆ ಅಂತ ನನ್ನ ವೈಯಕ್ತಿಕ ಭಾವನೆ.. ಈಗ ಹೇಳಿ: ಕನ್ನಡದ ಮಾರುಕಟ್ಟೆ ಸೀಮಿತ ಅಂತ ಹೇಳಿಕೊಂಡು,ಡಬ್ಬಿಂಗ್ ಎಂಬ ಗುರಾಣಿ ಹಿಡಿದು ಮಾಡಬಹುದಾದ ಈ ಎಲ್ಲ ಸಾಧ್ಯತೆಗಳನ್ನು ನಾಶ ಮಾಡಬೇಕೆ? ಬಜೆಟ್ ಇಲ್ಲ,ಮಾರುಕಟ್ಟೆ ಇಲ್ಲ,ಕತೆ ಇಲ್ಲ,ಇದಿಲ್ಲ-ಅದಿಲ್ಲ ಅಂತೆಲ್ಲ ಹೇಳಿ,ಸುಮ್ಮನೇ ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ ಹೇಳಿಕೊಂಡು ಸುಮ್ಮನಿರಬೇಕೆ? ಇಲ್ಲಿ ನನಗೊಂದು ತಮಾಷೆ ನೆನಪಾಗುತ್ತಿದೆ: ಇರುವೆಯೊಂದು ಸಕ್ಕರೆ ತುಣುಕಿನ ಸುತ್ತ ಗಿರಗಿಟ್ಲೆ ತಿರುಗುತ್ತಿದೆ.ಪಹರೆ ಕಾಯುತ್ತಿದೆ.ಬೇರೆ ಯಾವ ಇರುವೆಗೂ ಈ ಸಕ್ಕರೆಯನ್ನು ತಿನ್ನಲು ಬಿಡುತ್ತಿಲ್ಲ ತಾನೂ ತಿನ್ನುತ್ತಿಲ್ಲ.ಯಾಕೆಂದರೆ ಆ ಇರುವೆಗೆ ಡಯಾಬಿಟೀಸ್! ಇದು ಇವತ್ತಿನ ಪರಿಸ್ಥಿತಿಯ ವ್ಯಂಗ್ಯ… ರಾಘವೇಂದ್ರ ತೆಕ್ಕಾರ್ : ದೇಶಕ್ಕೆ ಅನ್ನ ಕೊಡುವ ರೈತ ಜಾಗತಿಕ ಮಾರುಕಟ್ಟೆಯ ಎದುರು ಸ್ಪರ್ಧೆಗೆ ಬಿದ್ದಿದ್ದಾನೆ, ಆ ಮೂಲಕ ತಾನು ಬೆಳೆಯುತಿದ್ದಾನೆ,ಹಾಗಿರಬೇಕಾದರೆ ಇವರಿಗೇನು ಕಷ್ಟ, ಸ್ಪರ್ಧೆಗೆ ಬಿದ್ದು ಜಯಿಸಲಿ, ಆ ಮೂಲಕ ತಮ್ಮ ಅಭಿರುಚಿಯನ್ನ ಬೆಳೆಸಿ ಕನ್ನಡ ಚಿತ್ರ ಮಾಧ್ಯಮಕ್ಕೆ ಕೊಡುಗೆಯನ್ನ ನೀಡಲಿ. ಗೆಳೆಯನೊಬ್ಬ ಹೇಳುತಿದ್ದ ಶಿವರಾಜ್ ಕುಮಾರ್ ಪುನೀತ್ ಇತರ ನಾಯಕರ ಜಾಗದಲ್ಲಿ ಬೇರೆ ನಟ ನಟಿಯರ ಕಟೌಟುಗಳು ಎದ್ದು ನಿಲ್ಲುತ್ತಲ್ಲ ಅಂತ? ತಪ್ಪೇನು ನಾವು ಖುಷಿ ಪಡಬೇಕಾದ್ದು ಆ ಕಟೌಟು ಬರಹಗಳು ಕನ್ನಡದಲ್ಲಿದೆಯೆಂದು. ಡಬ್ಬಿಂಗ್ ವಿರೋಧಿ ನೀತಿ ಪ್ರಜಾಪ್ರಭುತ್ವ ವಿರೋಧಿ, ನಮ್ಮ ಹಕ್ಕುಗಳನ್ನು ಇವರ ಸ್ವಾರ್ಥಕ್ಕಾಗಿ ಕಸಿದುಕೊಳ್ಳಲು ಇವರ್ಯಾರು.? ತಮ್ಮ ಚಿತ್ರಗಳನ್ನು ಪರಭಾಷೆಗೆ ಡಬ್ ಮಾಡಿ ಕಾಸು ಮಾಡೊ ಇವರಿಗೆ ಕನ್ನಡದಲ್ಲಿ ಡಬ್ಬಿಂಗ್ ವಿರೋಧ ಮಾಡಕ್ಕೆ ನೈತಿಕತೆಯಾದರು ಏನಿದೆ? ಹರ್ಶಿಣಿ  : ನನ್ನ ಪ್ರಕಾರ ಒಂದು ಚಿತ್ರವನ್ನು ಬೇರೆ ಭಾಷೆಗೆ ಭಾಷಾಂತರಿಸಿ , ನಕಲು ಪಡೆದಂತಾಗುವುದಲ್ಲದೆ, ಅವರ ವಾಣಿಜ್ಯಿ ಕರಣ ಮನೋಭಾವಕ್ಕೆ ನಾವೇ ಇಂಬು ಕೊಟ್ಟಂತಾಗುತ್ತದೆ. ನಮ್ಮ ಕನ್ನಡಿಗರೇ ತಮ್ಮತನ ಬಳಸಿ , ಸಂಸ್ಕೃತಿಯ ಮೆರುಗು ಹಚ್ಚಿ ಕಾರ್ಯಕ್ರಮ ಮಾಡಿದರೆ …ಚೆನ್ನಲ್ಲವೇ..?? ಸರ್ .. ಅರುಣ್ : Harshini, ಸಿನೆಮಾ ಒಂದು ಉದ್ಯಮವೇ ಪ್ರತಿ ವರ್ಶ ತಯಾರಾಗುವ ೯೯.೯೯% ಚಿತ್ರಗಳು ವಾಣಿಜ್ಯದ ದ್ರುಶ್ಟಿಯಿಂದಲೇ ತಯಾರಾಗುವುದು. ಇದು ತಪ್ಪಲ್ಲ. ಸಿನೆಮಾ ಸಂಸ್ಕ್ರುತಿಯನ್ನು ಪ್ರತಿನಿದಿಸುತ್ತೆ ಅಂತ ಹೇಳೊಕ್ಕೆ ಆಗಲ್ಲ. ಇವತ್ತಿನ ಕನ್ನಡದ ಹಲವಾರು ಸಿನೆಮಾಗಳನ್ನು ನೋಡಿದ್ರೆ ಸಿನೆಮಾದಲ್ಲಿ ಇರುವ ಸಂಸ್ಕ್ರುತಿಗೂ ಕನ್ನಡಿಗರ ಸಂಸ್ಕ್ರುತಿಗೂ ಸಂಬಂದಾನೆ ಇಲ್ಲದಿರುವುದು ಕಾಣುತ್ತೆ. ಅದ್ದರಿಂದ ಸಿನೆಮಾ ಸಂಸ್ಕ್ರುತಿಯನ್ನು ಪ್ರತಿನಿದಿಸುತ್ತೆ ಅನ್ನೊದು ಸುಳ್ಳು. ಇವೆಲ್ಲಕ್ಕಿಂತ ಹೆಚ್ಚಾಗಿ. ಯಾವ ಸಿನೆಮಾ ನೋಡಬೇಕು ಯಾವ ಸಿನೆಮಾ ನೋಡಬಾರದು ಎನ್ನುವುದನ್ನು ಚಿತ್ರರಂಗದವರು ನಿರ್ದರಿಸಿದರೆ ಹೇಗೆ? ಅದನ್ನು ನೋಡುಗ ನಿರ್ದರಿಸಬೇಕು ಅಲ್ಲವೇ? ನೀವು ಯಾವ ಸಿನೆಮಾ ನೋಡಬೇಕು ಎನ್ನುವುದನ್ನ ನಾನು ನಿರ್ದರಿಸಿದರೆ ನಿಮಗೆ ಏನನ್ನಿಸಬೇಡ. ಅದೇ ರೀತಿ ನಾನು ಯಾವ ಸಿನೆಮಾ ನೋಡಬೇಕು ಎನ್ನುವುದನ್ನು ಇನ್ನೊಬ್ಬರು ಯಾಕೆ ನಿರ್ದರಿಸುತ್ತಿದ್ದಾರೆ. ಹೀಗೆ ನಿರ್ದರಿಸುವುದು ಪಾಳೇಗಾರಿಕೆ ನೀತಿಯಲ್ಲವೇ? ಮೋಹನ್  ದೇವಾಡಿಗ ೫೦೦೦ ಕನ್ನಡಿಗ ಕಾರ್ಮಿಕರು ಬೀದಿಗೆ ಬರುತ್ತಾರೆಂಬ ವಾದದ ಬಗ್ಗೆ ನಿಮ್ಮ ಸ್ಪಷ್ಟ ಪ್ರತಿಕ್ರಿಯೆ ಲೇಖನದಲ್ಲಿ ವ್ಯಕ್ತವಾಗಿಲ್ಲ. ಡಬ್ಬಿಂಗ್ ವಿರೋಧದಿಂದಾಗಿ ಒರಿಜಿನಲ್ ಕೊಡಬೇಕೆಂಬ ಒತ್ತಡ ಇರುವುದನ್ನು ಅಲ್ಲಗಳೆಯುವಂತಿಲ್ಲ. ನೀವು ಬೊಟ್ಟು ಮಾಡುವ ಕತ್ತಿ ಚೂರಿಯ ಸಂಸ್ಕೃತಿಯ ನಡುವೆ “ಮಠ” “ಮುಕ್ತ ಮುಕ್ತ”,” ಮುಂಗಾರು ಮಳೆ”, “ಸಿದ್ಲಿಂಗು” ವಂತಹ ಒಳ್ಳೆಯ ಒರಿಜಿನಲ್ ಪ್ರಯತ್ನಗಳನ್ನು ಏಕೆ ಮರೆಯುತ್ತೀರಿ ? ವಸಂತ್  ಶೆಟ್ಟಿ ಇಲ್ಲದಿರುವ ಗುಮ್ಮ ಕಲ್ಪಿಸಿಕೊಂಡು ಭಯ ಪಡುವವರೇ ಹೆಚ್ಚಾಗಿದ್ದಾರೆ. ಡಬ್ಬಿಂಗ್ ಬಂದ ಕೂಡಲೇ ಕಂಡ ಕಂಡಿದ್ದೆಲ್ಲ ಡಬ್ ಆಗಿ ಬರುತ್ತೆ ಅನ್ನುವವರು ಕನ್ನಡಿಗರ ಅಭಿರುಚಿಯನ್ನೇ ಕೀಳು ಅನ್ನುವ ಆರೋಪ ಮಾಡಿದಂತಾಗುತ್ತೆ. ಅದೇನೇ ಡಬ್ ಆಗಿ ಬರಲಿ, ಅದು ನಮ್ಮ ಬುದ್ದಿಗೆ ಚುರುಕು ಮುಟ್ಟಿಸುತ್ತಿಲ್ಲವೋ, ನಮಗೊಂದು value add ಕೊಡುತ್ತಿಲ್ಲವೋ ಅಂತಹವನ್ನು ಮೂಸೂ ನೋಡದೇ ಆಚೆಗಿಡುತ್ತಾನೆ ಕನ್ನಡಿಗ. ಅಮಿತಾಬ್ ಬಚ್ಚನ್ ಕರೋಡಪತಿ ಅಂತ ಬಂದ್ರೂ ಪುನೀತ್ ಅವರ ಕೋಟ್ಯಾಧಿಪತಿ ಮುಂದೆ ಪಿಚ್ಚಾಗುತ್ತಾರಷ್ಟೇ. ಗ್ರಾಹಕರ ಆಯ್ಕೆಗಳು ಅಷ್ಟು unique ಆಗಿರುತ್ತವೆ. ಅವರ ಪರವಾಗಿ ಯಾರೋ ನಾಲ್ಕು ಜನ “ಫತ್ವಾ” ಹೊರಡಿಸುವುದನ್ನು ಬಿಟ್ಟು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗ್ರಾಹಕನಿಗೆ ತನ್ನ ನುಡಿಯಲ್ಲೇ ತನ್ನ ಜ್ಞಾನ, ಮನರಂಜನೆಯ ಎಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳುವ ಆಯ್ಕೆ ಕೊಡಬೇಕು. ಪ್ರಿಯಾಂಕ್  ಭಾರ್ಗವ್ ಒಳ್ಳೆಯ ಬರಹ. ಬ್ಯಾಂಕುಗಳಲ್ಲಿ ಕಂಪ್ಯೂಟರ್ ಅಳವಡಿಸೋಣ ಅಂದಾಗಲೂ ಇದೆ ತರಹದ ವಿರೋಧ ಬಂದಿತ್ತು. ಕಂಪ್ಯೂಟರ್ ಬಂದರೆ, ೫೦,೦೦೦ ಜನ ಗುಮಾಸ್ತರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಭೂತ ತೋರಿಸಲಾಗಿತ್ತು. ಆದರೆ, ಇವತ್ತಿನ ದಿನ ಕಂಪ್ಯೂಟರ್ ಅಳವಡಿಕೆ ಚೆನ್ನಾಗಿ ಆಗಿದೆ. ಗ್ರಾಹಕರಿಗೆ ತಮ್ಮ ಬ್ಯಾಂಕು ಕೆಲಸಗಳನ್ನ ಬೇಗನೆ ಮಾಡಿಕೊಳ್ಳಲು ಸಾಧ್ಯವಾಗಿದೆ. ಮುಂಚಿನಂತೆ ೧,೦೦೦ ರುಪಾಯಿ ತೆಗೆಯಲು ಅರ್ಧ ಗಂಟೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಇಲ್ಲ. ಮೇಲಾಗಿ, ಬ್ಯಾಂಕುಗಳು ಹೆಚ್ಚಿನ ರೆಂಬೆ-ಕೊಂಬೆಗಳನ್ನು ತೆಗೆದು ಹೆಚ್ಚಿನ ಜನರಿಗೆ ಕೆಲಸ ಕೊಟ್ಟಿದಾವೆ. ಮೊಬೈಲ್ ಫೋನುಗಳು ಬಂದಾಗಲೂ, ಎಸ್.ಟಿ.ಡಿ. ಬೂತ್ ಇಟ್ಟುಕೊಂಡಿರುವವರು ಬೀದಿಗೆ ಬಂದು ಬೀಳುತ್ತಾರೆ ಎಂಬ ಕೂಗು ಎದ್ದಿತ್ತು. ಸಾವಿರಗಟ್ಟಲೆ ಜನ ಎಸ್.ಟಿ.ಡಿ. ಬೂತ್ ಇಟ್ಟುಕೊಂಡು ಬದುಕು ನಡೆಸುತ್ತಿದ್ದಾರೆ, ಅವರೆಲ್ಲರ ಬದುಕು ಹಾಳಾಗುತ್ತೆ ಹಂಗಾಗಿ ಮೊಬೈಲು ಫೋನು ಬೇಡ ಅಂತ ವಾದ ಇಟ್ಟವರಿದ್ದರು. ಅಂತಹ ವಾದ ಮಾಡಿದವರೇ, ಇವತ್ತು ಮೊಬೈಲ್ ಫೋನು ಬಳಸುತ್ತಿರುವುದನ್ನ ಕಾಣಬಹುದು. ಎಸ್.ಟಿ.ಡಿ ಬೂತ್ ಇಟ್ಟುಕೊಂಡಿದ್ದವರು, ಇವತ್ತು ಮೊಬೈಲ್ ಫೋನಿನ ಕರೆನ್ಸಿ ಮಾರಿಕೊಂಡು ಹೆಚ್ಚಿನ ವ್ಯಾಪಾರ ಮಾಡಿ ಹಾಯಾಗಿದ್ದಾರೆ. ಡಬ್ಬಿಂಗ್ ಬಂದರೆ, ಜನರ ಕೆಲಸ ಹೋಗುತ್ತೆ ಎಂಬುದೂ ಇದೆ ರೀತಿ ಭೂತ ತೋರಿಸುವ ಕೆಲಸ ಅಷ್ಟೇ. ಡಬ್ಬಿಂಗ್-ನಿಂದ ಹೆಚ್ಚಿನ ಜನರು ಕನ್ನಡ ಸಿನೆಮಾ, ಧಾರಾವಾಹಿ ನೋಡಲು ತೊಡಗುತ್ತಾರೆ. ಇವತ್ತಿಗಿನ್ತಾ ಮೇಲೆ ಬೆಳೆದು ನಿಲ್ಲುತ್ತದೆ ನಮ್ಮ ಮಾರುಕಟ್ಟೆ. ಡಬ್ಬಿಂಗ್ ಮಾಡುವ ಕಲಾವಿದರಿಗೆ, ಅದಕ್ಕೆ ತಕ್ಕ ಸ್ಕ್ರಿಪ್ಟ್ ಬರೆಯುವವರಿಗೆ ಬೇಡಿಕೆ ಹೆಚ್ಚುತ್ತದೆಯೇ ಹೊರತು, ಕಮ್ಮಿಯಾಗುವುದಿಲ್ಲ. ಕೆಲಸಗಳು ಹೆಚ್ಚು ಹುಟ್ಟಿಕೊಳ್ಳುತ್ತವೆ, ಕಮ್ಮಿಯಾಗೋಲ್ಲ. ಆನಂದ್ : ನಿಮ್ಮ ಮಾತುಗಳಿಗೆ ನನ್ನ ಬೆಂಬಲವಿದೆ. ಸಂಸ್ಕ್ರುತಿ ರಕ್ಷಣೆಯ ಭಾರದ ಮಾತುಗಳನ್ನಾಡೊ ಜನರ ನಿಜ ಆಸಕ್ತಿ ತಮ್ಮ ಚಿತ್ರರಂಗಕ್ಕೆ ಸ್ಪರ್ಧೆ ಇರಬಾರದು ಎನ್ನುವುದು ಮಾತ್ರವೇ ಆಗಿರುವಂತಿದೆ. ಡಬ್ಬಿಂಗ್ ನಿಷೇಧ ತೆರವಾಗಲೀ ಎನ್ನುವವರೆಲ್ಲಾ ಇಲ್ಲಿ ಸಹಿ ಮಾಡಿ! https://www.change.org/petitions/suvarna-tv-telecast-satyameva-jayate-in-kannada  ]]>

‍ಲೇಖಕರು G

April 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

10 ಪ್ರತಿಕ್ರಿಯೆಗಳು

 1. ಟಿ.ಕೆ. ದಯಾನಂದ

  ಬೇರೇ ಆಪ್ಷನ್ನೇ ಇಲ್ಲ ಕಣ್ರೀ.. ಪಕ್ಕದ ರಾಜ್ಯದ ಮ್ಕಕಳು ನ್ಯಾಟ್ ಜಿಯೋ, ಡಿಸ್ಕವರಿ, ಅನಿಮಲ್ ಪ್ಲಾನೆಟ್ ಮೂಲಕ ಅವರದ್ದೇ ಪ್ರಾದೇಶಿಕ ಭಾಷೆಯಲ್ಲಿ ಡಬ್ ಆದ ಸ್ಟೀಫನ್ ಹಾಕಿಂಗನ “ಇನ್ ಟು ದಿ ಯೂನಿವರ್ಸ್” ಸಿರೀಸ್ ಮೂಲಕ ಸೌರವ್ಯೂಹದ ಬ್ರಹ್ಮಾಂಡ ಅಚ್ಚರಿಗಳನ್ನು ಅರ್ಥ ಮಾಡಿಕೊಳ್ಳುವಾಗ ತಮ್ಮದಲ್ಲದ ಇಂಗ್ಲೀಷು ಭಾಷೆಯಲ್ಲಿ ಅದನ್ನು ಎಟುಕಿಸಿಕೊಳ್ಳಲು ಪಡಿಪಾಟಲು ಬೀಳುವ ಕರ್ಮ ನಮ್ಮ ಮಕ್ಕಳದ್ದು. ಕನ್ನಡ ಟಿವಿ ಸಿನಿಮಾರಂಗದ ಪಾಳೇಗಾರರು ಈ ಕಾರ್ಯಕ್ರಮಗಳನ್ನು ಜ್ಞಾನಶಾಖೆಯನ್ನು ವಿಸ್ತರಿಸುವ ಇಂತಹ ಟಿವಿ ಚೆನಲ್ ಗಳ ಡಬ್ಬಿಂಗ್ ಗೆ ಪ್ರತಿಭಟಿಸುತ್ತ “ಕನ್ನಡದಲ್ಲಿ ಈ ಬಗೆಯ ಜ್ಞಾನ ಸಿಗಬಾರದು ಕನ್ನಡದ ಮಕ್ಕಳೆಲ್ಲರೂ ಹಾಳಾಗಿಹೋಗಲಿ” ಅಂತ ಅಡ್ಡಡ್ಡ ಮಲಗಿಬಿಟ್ಟಿದ್ದಾರೆ. ಹಾಗಾಗಿ ಕನ್ನಡದಲ್ಲಿ ಸಿಗದ ಈ ಜ್ಞಾನಶಾಖೆಯನ್ನು ತೆಲುಗು ಹಿಂದಿ ತಮಿಳು ಕಲಿತಾದರೂ ನಮ್ಮ ಮಕ್ಕಳು ಅರ್ಥ ಮಾಡಿಕೊಳ್ಳಲೆಂದು ಬೇರೆ ದಾರಿಯೇ ಇಲ್ಲದೆ ನನ್ನ ಮನೆಯ ಮಕ್ಕಳಿಗೆ ಅನ್ಯಬಾಷೆಗಳನ್ನು ಕಲಿಸುತ್ತಿದ್ದೇನೆ. ಇದನ್ನು ಪ್ರತಿಭಟಿಸುವವರು ದಯವಿಟ್ಟು ಡಬ್ಬಿಂಗ್ ಗೆ ಅಡ್ಡಡ್ಡ ಮಲಗಿ, ನಮ್ಮ ಮಕ್ಕಳ ಅರಿವು ವಿಸ್ತರಣೆಗೆ ಅಡ್ಡನಿಂತು ಬೊಂಬಡ ಹೊಡೆಯುತ್ತಿರುವವರನ್ನು ಕಾಲು ಹಿಡಿದು ಸೈಡಿಗೆ ಎಳೆದು ಬಿಸಾಕಿ ಸ್ವಾಮಿ.

  ಪ್ರತಿಕ್ರಿಯೆ
 2. Dinesh Kumar S.C.

  ಡಬ್ಬಿಂಗ್ ಬರದಂತೆ ತಡೆಯಲು ಪ್ರಾಣತ್ಯಾಗದ ಮಾತುಗಳನ್ನು ಆಡಿರುವ ಶಿವರಾಜ ಕುಮಾರ್ ಅವರಿಗೆ ನನ್ನದೊಂದು ಪ್ರೀತಿಯ ಕಿರುಪತ್ರ.
  ಪ್ರಿಯ ಶಿವಣ್ಣ,
  ನೀವಂದ್ರೆ ನಮಗೆ ಇಷ್ಟ. ನಿಮ್ಮ ಅಪ್ಪಾಜಿ ಅಂದ್ರೆ ಮತ್ತೂ ಇಷ್ಟ. ಅವರು ಇಡೀ ಕನ್ನಡ ಜನಸಮೂಹದಿಂದ ಅಣ್ಣಾವ್ರು ಅನಿಸಿಕೊಂಡವರು. ಅವರನ್ನು ಯಾರೂ ತಮ್ಮ ಇಷ್ಟಾನಿಷ್ಟಗಳಿಗೆ ಕಟ್ಟಿಹಾಕಿಕೊಳ್ಳಬಾರದು.
  “ಇದೇ ರೀತಿ ಇನ್ನೂ ಮುಂದುವರಿದರೆ ಚೆನ್ನಾಗಿರುವುದಿಲ್ಲ. ಅಪ್ಪಾಜಿ ಆಶಯಕ್ಕೆ ವಿರುದ್ಧವಾಗಿ ಹೋದರೆ ಸುಮ್ಮನಿರಲ್ಲ. ಎಲ್ಲಾ ಭಾಷೆ, ಎಲ್ಲಾ ನಟರ ಚಿತ್ರಗಳ ಮೇಲೆ ನಮಗೆ ಅಭಿಮಾನವಿದೆ. ಆದರೆ ಇತ್ತೀಚಿಗೆ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ತೀವ್ರ ಅಸಮಾಧಾನವಾಗಿದೆ. ಅಪ್ಪಾಜಿಯ ಮೇಲೆ ಆಣೆ ಮಾಡುತ್ತೇನೆ, ನಾನು ಜೀವ ಹೋಗುವವರೆಗೂ ಹೋರಾಟಕ್ಕೆ ಸಿದ್ಧ. ನಾನು ಹೋದರೆ ತಮ್ಮ, ತಮ್ಮನ ಮಕ್ಕಳು ಇದ್ದಾರೆ. ನಾನು ಯಾರಿಗೂ ಕೇರ್ ಮಾಡೊಲ್ಲ” ಅಂತ ನೀವು ಹೇಳಿದ್ದೀರಿ.
  ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಾಗ, ನೆರೆ ಬಂದು ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದಾಗ, ಬೆಂಗಳೂರು ಜನರು ಒಳಚರಂಡಿ ನೀರನ್ನೇ ಶುದ್ಧಗೊಳಿಸಿ ಕುಡಿಯಬೇಕು ಎಂದು ಕಾವೇರಿ ನ್ಯಾಯಮಂಡಳಿ ಆದೇಶ ಹೊರಡಿಸಿದಾಗ, ಕನ್ನಡದ ಮಕ್ಕಳ ಉದ್ಯೋಗವನ್ನು ಇನ್ಯಾವುದೋ ರಾಜ್ಯಗಳ ಜನರು ಅಕ್ರಮವಾಗಿ ಕಿತ್ತುಕೊಂಡಾಗ ಹೀಗೆ ಪ್ರಾಣತ್ಯಾಗದ ಮಾತನ್ನು ಚಿತ್ರೋದ್ಯಮದವರು ಆಡಿದ ಉದಾಹರಣೆ, ನಡೆದುಕೊಂಡ ಉದಾಹರಣೆಯೂ ಇಲ್ಲ.
  ಅದು ಹಾಗಿರಲಿ, ಅಣ್ಣಾವ್ರು ಗೋಕಾಕ್ ವರದಿ ಜಾರಿಗಾಗಿ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಿದರು. ಕನ್ನಡವೇ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂಬುದು ಆ ಆಂದೋಲನದ ಮೂಲಗುರಿಯಾಗಿತ್ತು. ಇವತ್ತು ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಎಗ್ಗಿಲ್ಲದೆ ಮೆರೆಯುತ್ತಿವೆ. ಅಣ್ಣಾವ್ರು ಬದುಕಿದ್ದರೆ, ಇವತ್ತಿನ ಸ್ಥಿತಿಯಲ್ಲಿ ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಇರಲಿ ಎಂದು ಹೇಳುತ್ತಿದ್ದರೇನೋ, ಇದು ಅಣ್ಣಾವ್ರ ಅಭಿಮಾನಿಗಳಾದ ನನ್ನಂಥವರ ಅನಿಸಿಕೆ.
  ಯಾಕೆ ಡಬ್ಬಿಂಗ್ ವಿಷಯ ಬಂದಾಗಲೆಲ್ಲ ಕನ್ನಡ ಚಿತ್ರರಂಗದವರು ಇಷ್ಟೊಂದು ಕೆರಳುತ್ತಾರೆ ಶಿವಣ್ಣ? ಈಗ ನೋಡಿ, ನೀವು ಕೂಡ ನೂರು ಸಿನಿಮಾ ಮಾಡಿದ್ದೀರಿ. ಅದರಲ್ಲಿ ಕನ್ನಡದ ಕಥೆಗಳೆಷ್ಟು, ರೀಮೇಕ್ ಸಿನಿಮಾಗಳೆಷ್ಟು? ಎಷ್ಟು ಸಿನಿಮಾಗಳಿಗೆ ಪರಭಾಷಾ ನಟಿಯರನ್ನು ಕರೆತರಲಾಗಿದೆ? ಎಷ್ಟು ಸಿನಿಮಾಗಳಲ್ಲಿ ಬೇರೆ ಭಾಷೆ ಸಿನಿಮಾಗಳ ತುಣುಕುಗಳನ್ನು ಕದ್ದು ತೂರಿಸಲಾಗಿದೆ? ಇದೆಲ್ಲ ನಿಮಗೆ ಗೊತ್ತಿರುವಂಥದ್ದೇ, ಇದನ್ನು ತಡೆಯುವುದೂ ಸಹ ನಿಮ್ಮ ಕೈಯಲ್ಲಿಲ್ಲ.
  ಬೇರೆ ಭಾಷೆ ಸಿನಿಮಾಗಳ ಹಂಗಲ್ಲೇ ಬದುಕುತ್ತಿರುವ ಕನ್ನಡ ಚಿತ್ರೋದ್ಯಮ ಡಬ್ಬಿಂಗ್ ವಿಷಯದಲ್ಲಿ ಮಾತ್ರ ತೊಡೆತಟ್ಟಿ ನಿಲ್ಲುವುದು ಹಾಸ್ಯಾಸ್ಪದ ಅನಿಸೋದಿಲ್ವೇ? ಅದೆಲ್ಲ ಹೋಗಲಿ, ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳಿಗೆ ಯಾಕೆ ಡಬ್ ಮಾಡ್ತೀರಿ? ಆ ಭಾಷೆ ನಟರು ಪ್ರಾಣ ಕಳೆದುಕೊಂಡರೂ ಪರವಾಗಿಲ್ಲವೇ?
  ಶಿವಣ್ಣ, ಪ್ರಾಣ ಕಳೆದುಕೊಳ್ಳುವ ಮಾತು ಬೇಡ. ಕನ್ನಡ ಭಾಷೆಯ ಉಳಿವಿಗಾಗಿಯೇ ಇವತ್ತು ಡಬ್ಬಿಂಗ್ ಬೇಕಾಗಿರೋದು. ಬೇರೆ ಭಾಷೆಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ಅದರ ಡಬ್ಬಿಂಗ್ ಆವೃತ್ತಿಗಳನ್ನು ನಾವು ನೋಡುತ್ತೇವೆ. ಚೆನ್ನಾಗಿಲ್ಲದಿದ್ದರೆ ತಿರಸ್ಕರಿಸುತ್ತೇವೆ. ಹಾಗೆ ನೋಡಿದರೆ ನಮಗೆ ಶಾರೂಕ್, ಚಿರಂಜೀವಿ, ರಜಿನಿಗಿಂತ ನೀವೇ ಇಷ್ಟ. ನಿಮ್ಮ ಸಿನಿಮಾಗಳು ಸ್ಪರ್ಧೆ ಮಾಡಲಿ ಬಿಡಿ, ಯಾಕೆ ಈ ಅಂಜುಬುರುಕುತನ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ?
  ಕಡೇದಾಗಿ ಒಂದು ಮಾತು. ಅಣ್ಣಾವ್ರು ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡಿದಾಗ ಇದ್ದ ಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಡಬ್ಬಿಂಗ್ ವಿವಾದಕ್ಕೆ ದಯವಿಟ್ಟು ಅಣ್ಣಾವ್ರನ್ನು ಎಳೆಯಬೇಡಿ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬ ಸಿನಿಮಾ ನೋಡುಗನಿಗೂ ಅವನದೇ ಆದ ಮೂಲಭೂತ ಸ್ವಾತಂತ್ರ್ಯವಿರುತ್ತದೆ. ಅದನ್ನು ಗೌರವಿಸೋಣ.
  ಪ್ರೀತಿಯಿಂದ

  ಪ್ರತಿಕ್ರಿಯೆ
  • ಗಿರೀಶ್ ಕಾರ್ಗದ್ದೆ

   ಈ ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರ ಮನಸ್ತಿತಿಯು ಸ್ವಾರ್ಥ ಹಾಗು ಸ್ವಂತ ಹಿತಾಸಕ್ತಿಯಿಂದ ಕೂಡಿದೆ ಮತ್ತು ಕನ್ನಡ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ಯಾವುದೇ ಕಾರ್ಯಕ್ರಮವನ್ನು ಕನ್ನಡದಲ್ಲೇ ನೋಡುವುದು ಕನ್ನಡ ಪ್ರೀತಿಯೋ ಅಥವಾ ಬೇರೆ ಭಾಷೆಯಲ್ಲಿ ನೋಡುವುದೋ? ಅಷ್ಟಕ್ಕೂ ಕಾರ್ಮಿಕ ಹಿತಾಸಕ್ತಿ ಬಗ್ಗೆ ಮಾತನಾಡುವ ಇವರು, ಕನ್ನಡ ಚಿತ್ರಗಳನ್ನು ತೆಲುಗು ತಮಿಳಿಗೆ ಡಬ್ ಮಾಡುವುದೇಕೆ? ತನ್ನ ಲಾಭಕ್ಕಾಗಿ ಕನ್ನಡಾಭಿಮಾನ ಎಂಬ ಗುರಾಣಿಯನ್ನು ಬಳಸುತ್ತಿದ್ದಾರೆ. ಇದರ ಬಗ್ಗೆ ಕನ್ನಡ ಪ್ರೇಕ್ಷಕ ಎಚ್ಚೆತ್ತು ಕೊಳ್ಳಲಿ. ಪಟ್ಟಭದ್ರ ಹಿತಾಸಕ್ತರ ಆಸೆಬಡುಕುತನ ಮತ್ತು ಸ್ವಾರ್ಥ ಕೊನೆಯಾಗಬೇಕು.

   ಪ್ರತಿಕ್ರಿಯೆ
 3. ಪ್ರವೀಣ್ ಸೂಡ

  ನೋಡಿ ನಾನು ಹೆದರಿದ್ದೆ ಡಬ್ಬಿಂಗ್ ಬಂದ್ರೆ ಕನ್ನಡತನ ಉಳಿಯಲ್ಲ ಅದಕ್ಕೆ ಡಬ್ಬಿಂಗ್ ಬೇಡ ಅಂತ, ಈಗಲು ಡಬ್ಬಿಂಗ್ ಬಂದ್ರೆ ಕನ್ನಡತನ ಉಳಿಯತ್ತೆ ಬೆಳೆಯತ್ತೆ ಅಂತಾನು ಹೇಳ್ತಾ ಇಲ್ಲ, ಆದ್ರೆ ಈಗಿನ ನಮ್ಮ ಕನ್ನಡ ಚಿತ್ರರಂಗ ಹಾಗು ಕಿರಿತೆರೆ ನಮಗೆ ಕೊಡ್ತಾ ಇರೋ ಕಾರ್ಯಕ್ರಮ ಕನ್ನಡತನನ ಸಂಸ್ಕೃತಿನ ಉಳುಸ್ತಾ ಇದಿಯ? ಮುಂದೆ ಉಳಿಸತ್ತ? ಕೊನೆ ಪಕ್ಷ ನಂ ಕನ್ನಡ ಜನ ಬೇರೆ ಭಾಷೆಯಲ್ಲಿ ನೆಡಿಯೋ ಅದೆಷ್ಟೊ ಜ್ಞಾನ ವಿಸ್ತರಣೆ ಕಾರ್ಯಕ್ರಮನ ಬೇರೆ ಭಾಷೆಲಿ ನೋಡೋದು ಬಿಟ್ಟು ಕನ್ನಡದಲ್ಲೆ ನೋಡ್ಲಿ ಬಿಡಿ. ಸಂಸ್ಕೃತಿ ಉಳಿವಿಕೆ ಬಗ್ಗೆ ಮಾತಾಡೊ ಜನ, ಕಾನೂನು ಪಾಲಿಸೋದು ಕಲಿಲಿ ಮೊದಲು, ಪ್ರಜಾಭ್ರಭುತ್ವದ ದೇಶದಲ್ಲಿ ಪ್ರಜಾ ನಿರ್ಧಾರಕ್ಕೆ ಆದ್ರು ಬೆಲೆ ಸಿಗಲಿ.

  ಪ್ರತಿಕ್ರಿಯೆ
 4. Anand G

  ನನ್ನ ಮನೆಯ ಮುಂದಿನ ಮನೆಯವರು ತಮಿಳು ಜನ. ಅವರ ಮಕ್ಕಳೂ ನನ್ನ ಮಕ್ಕಳೂ ಗೆಳೆಯರು… ಬೆಂಗಳೂರಿನಲ್ಲಿದ್ದೂ ಅವರಿಗೆ ತಮಿಳಲ್ಲೇ “ಸತ್ಯಮೇವ ಜಯತೆ” ನೋಡೋ ಅವಕಾಶ, ಅದಕ್ಕೆ ಹೆಮ್ಮೆ.. ನನ್ನ ಮಕ್ಕಳು ಅವರ ಮುಂದೆ ಪೆಚ್ಚು ಪೆಚ್ಚು! ಹೇಳಿ… ಇದು ಹೀಗಾಗಬೇಕಾ? ಇನ್ನೂ ಏನು ಯೋಚನೆ ಮಾಡ್ತಿದೀರಾ? ಪಿಟಿಷನ್ ಗೆ ಸಹಿ ಹಾಕಿಲ್ಲದಿದ್ದರೆ ಈಗಲೇ ಹಾಕಿ.
  Suvarna TV: Telecast "Satyameva Jayate" in Kannada
  http://www.change.org

  ಪ್ರತಿಕ್ರಿಯೆ
 5. ಉಷಾಕಟ್ಟೆಮನೆ

  ಒಂದು ಕಾಲದಲ್ಲಿ ನಟನೆಯೂ ಸೇರಿದಂತೆ ಕನ್ನಡ ಸಿನೇಮಾ ತಯಾರಿಕೆಯಲ್ಲಿ ತೊಡಗಿಕೊಳ್ಳುವುದೆಂದರೆ ಅದು ಕಲಾಸೇವೆಯ ಭಾಗವಾಗಿತ್ತು; ಆದರೆ ಇಂದು ಅದು ಒಂದು ಉದ್ಯೋಗ ಮಾತ್ರ. ಅನ್ನದ ದಾರಿ. ಹಾಗಾಗಿ ಆ ಕ್ಷೇತ್ರದಲ್ಲಿ ವ್ಯಕ್ತಿ ಪೂಜೆಯೆಂಬುದು ಇರಕೂಡದು ಮತ್ತು ಅದನ್ನು ಕಲಾಸೇವೆ, ಕನ್ನಡದ ಸೇವೆ ಎಂದೆಲ್ಲಾ ಕರೆಯಬಾರದು.
  ಇನ್ನೊಂದು ಮುಖ್ಯವಿಚಾರ ಏನೆಂದರೆ ಕನ್ನಡ ಚಾನಲ್ ಗಳು ಮತ್ತು ಕನ್ನಡ ಚಿತ್ರರಂಗ ಅವಿನಾಭಾವ ಸಂಬಂಧ ಹೊಂದಿದೆ. ಅವರು ಸಿನೇಮಾದ ಹಾಡು ಕ್ಲಿಪ್ಪಿಂಗ್ಸ್ ಕೊಡದಿದ್ದರೆ ಇವರ ಚಾನಲ್ ಗೆ ಟಿಅರ್ ಪಿ ಬರಲಾರದು. ಅವರಿಗೆ ಇವರಿಲ್ಲದಿದ್ದರೆ ಸಿನೇಮಾಕ್ಕೆ ಪ್ರಚಾರ ದೊರೆಯಲಾರದು. ಅವರ ಹೊಂದಾಣಿಕೆಯಿಂದ ಕನ್ನಡದ ಪ್ರೇಕ್ಷಕ ಮತ್ತು ಕನ್ನಡ ಭಾಷೆ ಸೊರಗುತ್ತದೆ. ಹಾಗಾಗಿ ಚಿತ್ರರಂಗದ ಒಳಗಡೆಯೇ ಇರುವ ಕನ್ನಡಪರ ಇರುವ ಮನಸ್ಸುಗಳು ಈಗ ಕ್ರಿಯಾಶೀಲವಾಗಬೇಕಾಗಿದೆ

  ಪ್ರತಿಕ್ರಿಯೆ
 6. ವಿಜಯಕುಮಾರ ನರಗುಂದ

  ಇಂದು ನಮ್ಮ ಸಂಸ್ಕೃತಿಯನ್ನೆ ಮರೆಸುತ್ತಿರುವ ತಲೆ ಬುಡವಿಲ್ಲದ ಚಿತ್ರಗಳ ಉದ್ಧಾರಕ್ಕೆ ಎನ್ ಜಿ ಸಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ನಲ್ಲಿ ಬರುವ ಅಪರೂಪದ ಮಾಹಿತಿಯೊಳಗೊಂಡ ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲಿಯೂ ಪ್ರಸಾರವಾಗಿ ಮಕ್ಕಳ ಜ್ಞಾನ ಬಂಢಾರ ಉತ್ತಮಗೊಳ್ಳಲಿ. ನಮ್ಮವರಿಂದ ಎಂದು ನಿರ್ಮಿಸಲಾಗದ ಹಾಲಿವುಡ್ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಆ ಅದ್ಭುತ ಅನುಭೂತಿಯನ್ನು ನಾವು ಅನುಭವಿಸುವಂತಾಗಲಿ. ಈಗಾಗಲೇ ಡಬ್ಬಿಂಗ್ ಗೆ ಬೆಂಬಲ ವ್ಯಕ್ತಪಡಿಸಿರುವ ಹಲವರು ಡಬ್ಬಿಂಗ್ ಯಾಕೆ ಬೇಕು ಎಂಬ ಪ್ರಬುದ್ಧ ಸಮರ್ಥನೆಯನ್ನು ಹಂಚಿಕೊಂಡಿದ್ದಾರೆ. ಜ್ಞಾನ ವೃದ್ಧಿಗೆ, ಹೊಸ ತನಕ್ಕೆ ಸದಾ ತೆರೆದು ಕೊಳ್ಳಲೆ ಬೇಕು. ಇಲ್ಲದಿದ್ದರೆ ನಿಂತ ನೀರು ರಾಡಿಯಾಗುತ್ತದೆ, ಕೊಚ್ಚೆಯಾಗುತ್ತದೆ. ಅದರ ಪ್ರತಿ ಫಲನ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಮ್ಮ ಬೇಳೆ ಬೇಯೋದಿಲ್ಲ ಎಂಬ ಒನ್ ಲೈನ್ ಅಜೆಂಡಾ ಇಟ್ಟಕೊಂಡವರು ಮಾತ್ರ ಡಬ್ಬಿಂಗ್ ನ್ನು ಹೇಗಾದರು ದೂರ ಇಡೋಣ ಎಂದು ಇಲ್ಲದ ಗುಲ್ಲೆಬ್ಬಿಸುತ್ತಿದ್ದಾರೆ. ಡಬ್ಬಿಂಗ್ ಬೇಕೋ, ಬೇಡವೋ ಎಂಬುದರ ಆಯ್ಕೆ ಪ್ರೇಕ್ಷಕರದ್ದೆ ಹೊರತು ಚಿತ್ರರಂಗದವರದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ನೆಲದ ಕಾನೂನಿಗೆ ಡಬ್ಬಿಂಗ್ ಅಪರಾಧವಲ್ಲ. ನ್ಯಾಯಾಲಯದ ಮೆಟ್ಟಿಲೇರಿದರೆ ತೀರ್ಪು ಏನಾಗಬಹುದು ಎಂಬುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಅಲ್ಲವೇ!

  ಪ್ರತಿಕ್ರಿಯೆ
 7. veeranna madiwalara

  ಇಂದಿನ ಕನ್ನಡ ಚಿತ್ರರಂಗದ ನಡೆ ಕೇವಲ ಭೋಗಪ್ರಧಾನವಾದದ್ದು. ಕೇವಲ ಹಣ ಕೇಂದ್ರಿತವಾದದ್ದು. ಡಬ್ಬಿಂಗ್ ವಿರೋಧದ ಹಿಂದಿರುವುದು ಇದೇ ಹಿನ್ನೆಲೆಯ ಯೋಚನೆ. ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಕನ್ನಡ ಚಿತ್ರರಂಗದ ಅಘೋಷಿತ ನಾಯಕ ಅಂಬರೀಷ್ “ ಮುಚ್ಚೋದಾದ್ರೆ ಮುಚ್ಚಲಿ ಬಿಡಿ ಅದರಿಂದೇನು ಆಗೋದಿದೆ.” ಎಂಬ ಮಾತುಗಳನ್ನು ಗಮನಿಸಿದರೆ ಇವರ ನಾಡ ಪ್ರೇಮ ಅಥ೵ವಾಗುತ್ತದೆ. ಹಿಂದಾದರೆ ಚಿತ್ರರಂಗಕ್ಕೊಂದು ಮೌಲ್ಯವಿತ್ತು, ಇಂದು ಕನ್ನಡಿಗರ ಬದುಕನ್ನು ಹಾಳುಗೆಡವಿರುವುದರಲ್ಲಿ ಇವರ ಕೊಡುಗೆಯೇನು ಕಡಿಮೆಯಲ್ಲ. ಡಬ್ಬಿಂಗ್ ಬಂದರೆ ತಾವು ಉಳಿವಿಗಾಗಿ ಹೋರಾಡಬೇಕಾಗುತ್ತದೆ ಎಂಬುದು ಇವರ ಆಳದ ನೋವು. ಡಬ್ಬಿಂಗ್ ಸಾಧ್ಯವಾದರೆ ಕನ್ನಡ ಬದುಕಿನ ಘನತೆ ಹೆಚ್ಚುತ್ತದೆ. ಜಗತ್ತು ಹತ್ತಿರವಾಗುತ್ತದೆ. ಸಾಹಿತ್ಯದಲ್ಲಿ ಅನುವಾದವೇ ಬೇಡವೆಂದಿದ್ದರೆ, ಇಂದು ನಾವು ಕಾಣುತ್ತಿರುವ ನಮ್ಮ ಭಾಷೆಯ ಅಂತ೵ಶಕ್ತಿ ಎಲ್ಲಿರುತ್ತಿತ್ತು? ಇಡೀ ಕನಾ೵ಟಕ ಇಂದು ಎದುರಿಸುತ್ತಿರುವ ತಲ್ಲಣಗಳಿಗೆ ಪರಿಹಾರದ ವಿಷಯದಲ್ಲಿ ನಿಮಿಷವಾದರೂ ಸಮಯವಿದೆಯಾ ಇವರಿಗೆ, ಮಚ್ಚು, ಲಾಂಗು, ರಕ್ತದಲ್ಲಿ ಮುಳುಗೇಳುವುದೇ ಬಂಡವಾಳಮಾಡಿಕೊಂಡಿರುವವರಿಗೆ…

  ಪ್ರತಿಕ್ರಿಯೆ
 8. Sunil

  ಡಬ್ಬಿಂಗ್ ಬಂದರೆ ಕನ್ನಡ ಉದ್ದಾರ ಆಗುತ್ತಾ? ಕನ್ನಡ ಬೆಳೆಯುತ್ತ?
  ಹೌದು..
  ಪರಭಾಷೆ ಸಿನಿಮಾಗಳು ಇವಾಗ ಕರ್ನಾಟಕದ ಮೂಲೆ ಮೂಲೆಗಳಿಗೆ ಪ್ರದರ್ಶನಗೊಳುತ್ತಿವೆ, ನಮ್ಮ ಜನ ಅವನ ನೋಡಿ ಅವರ ಬಾಷೆ ಕಲಿಯುತ್ತ ಇದಾರೆ.
  ಒಳ್ಳೇದು, ಬೇರೆ ಭಾಷೆ ಕಲಿಯಬೇಕು.
  ಆದರೆ ಆ ಭಾಷೆ ಜನಗಳ ಜೊತೆ ವ್ಯವರಿಸುವಾಗ ಅವರ ಭಾಷೆನಲೆ ಮಾತನಾಡುತಾರೆ. ಬೇರೆ ಭಾಷೆ ಜನ ಕನ್ನಡ, ಹೇಗೆ, ಏಕೆ, ಕಲಿಯುತಾರೆ??
  ತಮ್ ತಮ್ ಭಾಷೆನಲೇ ವ್ಯವಹಾರ ಮಾಡಿಕೊಂಡ ಇರುತಾರೆ.ಬೆಂಗಳೂರಿನಲ್ಲಿ ಆಗಿರೋದು ಇದೆ… ಬೆಂಗಳೂರುನಲಿ ಕನ್ನಡ ಹುಡುಕೋ ಪರಿಸ್ಥಿತಿ ನಿರ್ಮಾಣ ಆಗುತೆ.
  ಡಬ್ಬಿಂಗ್ ತನ್ನಿ!! ಇಲ್ಲ ಪರಭಾಷೆ ಸಿನಿಮಾಗಳು ರಾಜ್ಯದ ಇತರ ಕಡೆ ಬಿಡುಗಡೆ ಆಗೋದು ತಡಿರಿ.
  ಅದು ಆಗೋ ಮಾತ್ ಅಲ್ಲ.
  ಎಲ್ಲ ಚಿತ್ರಗಳನು ಡಬ್ಬ ಮಾಡೋದು ಬೇಕಿಲ್ಲ, ಒಳ್ಳೆ ಸಿನಿಮಾಗಳನು ಡಬ್ಬ ಮಾಡಿ,
  ೫೦೦೦ ಕನ್ನಡಿಗ ಕಾರ್ಮಿಕರು ಬೀದಿಗೆ ಬರುತ್ತಾರೆಂಬ ವಾದ ಸರಿ ಇಲ್ಲ.ಅಷ್ಟಕು ಡಬ್ಬಿಂಗ್ ಬಂದರೆ ಸಿನಿಮಾ ನಿರ್ಮಾಣ ಮಾಡಬಾರದು ಅಂತ ಯಾರು ಹೇಳ್ತಿಲ್ಲ.
  ಪೈಪೋಟಿ ಹೆಚ್ಚಿದಾಗಲೇ ಗುಣಮಟ್ಟವೂ ಹೆಚ್ಚಲು ಸಾಧ್ಯ
  ಡಬ್ಬಿಂಗ್ ಇಂದ ಉದ್ಯೋಗ ಸೃಷ್ಟಿ ಆಗೋಲ್ವಾ? ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಬರಲ್ವಾ?
  ೧೯೮೪ರಾಲಿ ರಾಮಾಯಣ ಡಬ್ಬ ಆಗಿದ್ರೆ ನಮ್ ಜನ ಹಿಂದಿ ಕಲಿಯೋದು ಬೇಕಿರಲಿಲ್ಲ. ಇವಾಗ ಹಿಂದಿ ಕನ್ನಡಕೆ ಒಂದು ದೊಡ್ಡ ಕಂಟಕ ಆಗಿದೆ,ಮುಂದಕ್ಕೆ ತೆಲುಗು,ತಮಿಳು, ಅವಾಗ ಮಾಡಿರೋ ತಪ್ಪು ಇವಾಗ ಬೆಂಗಳೂರು ಅನುಭವಿಸ್ತಾ ಇದಾರೆ.

  ಪ್ರತಿಕ್ರಿಯೆ
 9. Naveen B.

  5000 kannada karmikaru bidige belthare antha … navu saviraru varshada kannada bhasheyannu sayisitha iddive.. 20 varshaga hinde.. karnatakada jana kannada bettu bere yava bhashe bartha iralilla. Chikkamagaluru antha achcha kannadada pradeshadalli evattu Telugu vijrumbista ide andre adakke telugu cinimagale karana..Ade telugu cinima kannadakke dubb agi bande bere bhashe kaliyoke avakasha erolla.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: