ಜುಗಾರಿ ಕ್ರಾಸ್ – ರವಿಶಂಕರ್ ಗುರೂಜಿಯಂತಹವರೇ ಇಂದು ಹೆಚ್ಚು ಅಪಾಯಕಾರಿಗಳು

ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ದಿನೇಶ್ ಕುಮಾರ್ ಅವರು ಬರೆದಿದ್ದ ಲೇಖನ

-ದಿನೇಶ್ ಕುಮಾರ್ ಎಸ್. ಸಿ.

ರವಿಶಂಕರ್ ಗುರೂಜಿಯಂತಹವರೇ ಇಂದು ಹೆಚ್ಚು ಅಪಾಯಕಾರಿಗಳು

ಯೋಗ ಗುರು ಸುದ್ದಿಯಲ್ಲಿದ್ದಾರೆ. ತಮ್ಮ ಆರಾಧಕರಿಂದ ಶ್ರೀ ಶ್ರೀ ಎಂದು ಕರೆಯಲ್ಪಡುವ ಅಧ್ಯಾತ್ಮ-ಯೋಗ ಗುರು ರವಿಶಂಕರ್ ಗುರೂಜಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಎಲ್‌ಟಿಟಿಇ ಜತೆ ಮಾತುಕತೆ ಮಾಡುತ್ತೇನೆ ಎಂದು ಅವರು ಒಂದಷ್ಟು ದಿನ ಸುದ್ದಿ ಮಾಡಿದ್ದರು. ಎಲ್ಲೆಲ್ಲಿ ಭಯೋತ್ಪಾದಕರು ಇದ್ದಾರೋ ಅಲ್ಲಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳುವುದು ಅವರ ಇತ್ತೀಚಿನ ಅಭ್ಯಾಸ.   ಮೊನ್ನೆಮೊನ್ನೆಯಷ್ಟೆ ತಾಲಿಬಾನ್ ಜತೆ ಮಾತುಕತೆಗೆ ನಾನು ಸಿದ್ಧ ಎಂದು ಗುರೂಜಿ ಹೇಳಿಕೊಂಡಿದ್ದರು. ಈ ತರಹದ ಹೇಳಿಕೆಗಳೇ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹತೆಯನ್ನು ತಂದುಕೊಡುತ್ತದೆ ಎಂದು ಹಲವರು ಭಾವಿಸಿರಬಹುದು. ರವಿಶಂಕರರೂ ಅದೇ ಆಸೆಯಲ್ಲಿ ಈ ಥರದ ಕೃಷ್ಣಸಂಧಾನದ ಲೊಳಲೊಟ್ಟೆ ಮಾತುಗಳನ್ನು ಆಡುತ್ತಿರಬಹುದು. ಆ ವಿಷಯ ಒತ್ತಟ್ಟಿಗಿರಲಿ, ಸದ್ಯಕ್ಕೆ ಅವರು ಸರ್ಕಾರಿ ಶಾಲೆಗಳನ್ನು ಕುರಿತು ನೀಡಿರುವ ಬೀಸುಹೇಳಿಕೆಯೊಂದನ್ನು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ರವಿಶಂಕರರ ಹೇಳಿಕೆ ವಿರುದ್ಧ ಸಾಕಷ್ಟು ಚರ್ಚೆಗಳೂ ನಡೆದಿವೆ.   ರಾಜಸ್ಥಾನದ ಜೈಪುರದಲ್ಲಿ ನಡೆದ ಸಭೆಯೊಂದರಲ್ಲಿ ರವಿಶಂಕರ ಗುರೂಜಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ನಕ್ಸಲೈಟರಾಗುತ್ತಾರೆ, ಹಿಂಸಾತ್ಮಕ ಮನೋಭಾವ ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಬರಕಾಸ್ತು ಮಾಡಿ ಅವುಗಳನ್ನು ಖಾಸಗಿ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸಬೇಕು ಎಂಬುದು ರವಿಶಂಕರರ ಹೇಳಿಕೆಯ ತಾತ್ಪರ್ಯ. ಕೇಂದ್ರ ಸಚಿವರಿಂದ ಹಿಡಿದು ಸಮಾಜದ ಎಲ್ಲ ಎಲ್ಲ ವಲಯಗಳಿಂದಲೂ ಈ ಹೇಳಿಕೆಗೆ ತೀವ್ರ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ರವಿಶಂಕರರು ತಮ್ಮ ಹೇಳಿಕೆಗೆ ಒಂದಷ್ಟು ಸ್ಪಷ್ಟನೆಯ ರೂಪದ ತಿದ್ದುಪಡಿಯನ್ನೂ ನೀಡಬೇಕಾಯಿತು. ಅವರ ತಿದ್ದುಪಡಿಯ ಪ್ರಕಾರ ಅವರ ಹೇಳಿಕೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ಈ ತಿದ್ದುಪಡಿಯಾದ ಮಾತನ್ನೇ ವಿಶ್ಲೇಷಣೆಗೆ ಒಳಪಡಿಸುವುದಾದರೂ ರವಿಶಂಕರರು ಮತ್ತೂ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.

ರವಿಶಂಕರರ ಮೂಲ ಹೇಳಿಕೆಯನ್ನು ಗಮನಿಸುವುದಾದರೆ ಸರ್ಕಾರಿ ಶಾಲೆಗಳು ನಕ್ಸಲೈಟರನ್ನು ಸೃಷ್ಟಿಸುವ ಕಾರ್ಖಾನೆಗಳಾಗಿದ್ದರೆ ಈ ದೇಶದ ತುಂಬೆಲ್ಲ ನಕ್ಸಲೈಟರೇ ತುಂಬಿರಬೇಕಿತ್ತು. ಅಥವಾ ದೇಶವಾಸಿಗಳ ಪೈಕಿ ಶೇ.೯೦ರಷ್ಟು ಜನ ಹಿಂಸಾತ್ಮಕ ಮನೋಭಾವದವರೇ ಆಗಿರಬೇಕಿತ್ತು. ಯಾಕೆಂದರೆ ದೇಶದ ಶೇ.೯೦ರಷ್ಟು ಜನರು ಒಂದಿಲ್ಲೊಂದು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿರುತ್ತಾರೆ. ಇದು ಸುಳ್ಳಾದ್ದರಿಂದ ರವಿಶಂಕರರ ಹೇಳಿಕೆ ಮೂರ್ಖತನದ್ದು ಎಂದು ಶಾಲಾ ಬಾಲಕರೇ ಸುಲಭವಾಗಿ ನಿಶ್ಚಯಿಸಿಬಿಡಬಹುದು.   ಇನ್ನು ಸರ್ಕಾರಿ ಶಾಲೆಗಳು ನಕ್ಸಲೈಟರನ್ನು ಸೃಷ್ಟಿಸುತ್ತಿವೆ ಎನ್ನುವ ರವಿಶಂಕರರು ಅದಕ್ಕೆ ಆಧಾರಗಳನ್ನು ಒದಗಿಸುವ ಗೋಜಿಗೆ ಹೋಗಿಲ್ಲ. ಇದು ಒಂದುಬಗೆಯ ಬೀಸುಹೇಳಿಕೆಯಾದ್ದರಿಂದ ರವಿಶಂಕರರ ಇಂಗಿತ ಏನೆಂಬುದನ್ನು ನಾವೇ ಊಹಿಸಬೇಕಾಗುತ್ತದೆ. ಸರ್ಕಾರಿ ಶಾಲೆಗಳು ನಕ್ಸಲೈಟರನ್ನು ಸೃಷ್ಟಿಸುತ್ತಿವೆ ಎನ್ನುವುದಾರಿ ಸರ್ಕಾರಿ ಶಾಲೆಗಳ ಬಡಪಾಯಿ ಶಿಕ್ಷಕರು ಮಕ್ಕಳಿಗೆ ಹಿಂಸಾತ್ಮಕಗೊಳ್ಳುವಂಥ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದಾಗುತ್ತದೆ. ಇದು ಸಾರಾಸಗಟಾಗಿ ದೇಶದ ಲಕ್ಷಾಂತರ ಶಿಕ್ಷಕ ಸಮೂಹವನ್ನು ಅಪಮಾನಿಸುವ, ನಿಂದಿಸುವ ಹೇಳಿಕೆಯಾಗಿಬಿಡುತ್ತದೆ.   ಇನ್ನು ರವಿಶಂಕರರ ಇದೇ ಹೇಳಿಕೆಯಲ್ಲಿ ಖಾಸಗಿ ಕ್ಷೇತ್ರದ ಗುಣಗಾನವನ್ನೂ ನಾವು ಗುರುತಿಸಬಹುದು. ಸರ್ಕಾರಿ ಅಲ್ಲದ್ದೆಲ್ಲವೂ ಅವರಿಗೆ ಶ್ರೇಷ್ಠವಾಗಿ ಕಂಡಿರಬಹುದು. ಆಧುನಿಕ ಜಗತ್ತಿನಲ್ಲಿ ಸಿರಿವಂತ ಮತ್ತು ಅತಿ ಸಿರಿವಂತ ಸಮುದಾಯದ ಸ್ವಭಾವವನ್ನೇ ರವಿಶಂಕರರು ಪ್ರದರ್ಶಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಅನಾಮತ್ತಾಗಿ ಖಾಸಗಿಯವರಿಗೆ ವಹಿಸಿಕೊಡಬೇಕು ಎಂದು ಹೇಳುವ ರವಿಶಂಕರರಿಗೆ ಖಾಸಗಿ ಕ್ಷೇತ್ರದ ಮೇಲಿರುವ ಅಪರಿಮಿತ ವಿಶ್ವಾಸ ಎದ್ದುಕಾಣುತ್ತದೆ.   ಹೇಳಿಕೇಳಿ ರವಿಶಂಕರರು ಅಧ್ಯಾತ್ಮ ಗುರು ಎನಿಸಿಕೊಂಡವರು. ಅವರನ್ನು ಯೋಗದ ವ್ಯಾಪಾರಿ ಎಂದು ಸಹ ಅವರ ಟೀಕಾಕಾರರು ಕರೆಯುತ್ತಾರೆ. ಅಧ್ಯಾತ್ಮವನ್ನು, ಯೋಗವನ್ನು ವ್ಯಾಪಾರದ ಮಟ್ಟಕ್ಕೆ ಇಳಿಸಿದವರಿಗೆ ಶಿಕ್ಷಣವನ್ನು ವ್ಯಾಪಾರಿಗಳ ತೆಕ್ಕೆಗೆ ವಹಿಸುವ ಹಂಬಲ ಇರುವುದನ್ನು ಆಶ್ಚರ್ಯದಿಂದೇನೂ ನೋಡಬೇಕಾಗಿಲ್ಲ. ಗುರೂಜಿಯವರು ನಡೆಸುವ ಸತ್ಸಂಗಕ್ಕೂ ದುಬಾರಿ ಫೀಜು ಇರುವುದರಿಂದ ಮಕ್ಕಳ ಶಿಕ್ಷಣಕ್ಕೆ ಫೀಜು-ಡೊನೇಷನ್ನು ಇರುವುದರು ಅತ್ಯಂತ ಸಹಜವೇ ಅಲ್ಲವೇ?   ಗುರೂಜಿಯವರ ಇಂಥ ಹೇಳಿಕೆಗೆ ಸಮರ್ಥಕರು ಇರುವುದೂ ನಿಜ. ಮಧ್ಯಮ-ಮೇಲ್ ಮಧ್ಯಮ ಸಮುದಾಯವೂ ಇಂಥ ಸಿನಿಕ ಹಳಹಳಿಕೆಗಳನ್ನು ಆಗಾಗ ಪ್ರದರ್ಶಿಸುವುದುಂಟು. ವಿಶೇಷವೆಂದರೆ ಇವು ಸರ್ಕಾರಿ ಶಾಲೆ, ಆಸ್ಪತ್ರೆಗಳ ಲಾಭ ಪಡೆದ ವಲಯವೂ ಹೌದು. ಆದರೆ ಮಾತಿಗೆ ನಿಂತಾಗ ಇವರಿಗೆ ಖಾಸಗಿ ಕ್ಷೇತ್ರವೇ ಆಪ್ಯಾಯಮಾನವಾಗಿ ಕಾಣುತ್ತದೆ. ಸರ್ಕಾರಿ ಶಾಲೆಗಳು ನೋಡ್ರೀ, ಅಲ್ಲಿ ಶಿಕ್ಷಕರೇ ಇಲ್ಲ, ಇದ್ದರೂ ಕಟ್ಟಡ ಇರೋದಿಲ್ಲ, ಕಟ್ಟಡ ಇದ್ರೂ ಶೌಚಾಲಯ ಇಲ್ಲ. ಕಂಪ್ಯೂಟರ್ ಇಲ್ಲ. ಇಂಥವು ಇರೋದಕ್ಕಿಂತ ಅವುಗಳನ್ನು ಖಾಸಗಿಯವರಿಗೆ ಒಪ್ಪಿಸೋದು ಒಳ್ಳೇದಲ್ವೇ ಎನ್ನುವುದು ಈ ಜನರುಗಳ ತರ್ಕ.   ಆದರೆ ಇದನ್ನು ಅಷ್ಟು ಸರಳೀಕರಿಸಿ ನೋಡಲಾಗುವುದಿಲ್ಲ. ದೇಶದ ನಿರ್ಗತಿಕ, ಬಡ, ಕೆಳ ಮಧ್ಯಮ ವರ್ಗದ ಬಹುಸಂಖ್ಯಾತ ಜನತೆಗೆ ಈಗಲೂ ಸರ್ಕಾರಿ ಶಾಲೆಗಳೇ ಶಿಕ್ಷಣ ಕೊಡಬಲ್ಲ ಏಕೈಕ ಸಾಧನಗಳು. ಅದಕ್ಕೆ ಹೊರತಾಗಿ ಈ ಜನವರ್ಗಕ್ಕೆ ಅನ್ಯಮಾರ್ಗವಿಲ್ಲ. ಒಂದು ಹೊತ್ತಿನ ಊಟ ಸಿಗುತ್ತದೆಂಬ ಕಾರಣಕ್ಕೆ ಎಷ್ಟೋ ಮಂದಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ಹೇಳಿದರೆ ಇವರುಗಳಿಗೆ ಅದು ಅರ್ಥವೇ ಆಗುವುದಿಲ್ಲ. ಯಾಕೆಂದರೆ ಆ ನೋವನ್ನು ಇವರು ಅನುಭವಿಸಿ ಗೊತ್ತಿರುವುದಿಲ್ಲ.   ರವಿಶಂಕರರ ಈ ಅಸಹನೆಯ ಹೇಳಿಕೆಗೆ ಕಾರಣವೇನು ಎಂದು ಹಲವರು ಚಿಂತಿತರಾಗಿರುವುದನ್ನು ನಾನು ಗಮನಿಸಿದ್ದೇನೆ. ರವಿಶಂಕರರ ಗ್ರಾಹಕರು ಬಂಡವಾಳಶಾಹಿಗಳು, ಸಿರಿವಂತರು, ಅತಿ ಶ್ರೀಮಂತರೇ, ಧಾರ್ಮಿಕ ವಲಯದ ಮೂಲಭೂತವಾದಿಗಳು ಆಗಿದ್ದಾರೆ. ಅವರುಗಳ ಹಿತಾಸಕ್ತಿಗಳನ್ನು ರಕ್ಷಿಸುವ ಹೊಣೆಯೂ ಗುರೂಜಿಯವರದ್ದಾಗಿರಬಹುದು. ಹೀಗಾಗಿ ಖಾಸಗೀಕರಣವೇ ಎಲ್ಲ ಸಮಸ್ಯೆಗಳಿಗೂ ಮದ್ದು ಎಂದು ಅವರು ಡಂಗೂರ ಹೊಡೆಯುವ ಅನಿವಾರ್ಯತೆಗೆ ಸಿಲುಕಿರಬಹುದು.   ಆದರೆ ಈ ಹೇಳಿಕೆ ದೇಶದ ಸಮಸ್ತ ಮಕ್ಕಳಿಗೂ ಶಿಕ್ಷಣವನ್ನು ನೀಡುವ ನಮ್ಮ ಸಂವಿಧಾನ ಮತ್ತು ಸರ್ಕಾರಗಳ ಹೊಣೆಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ಸಂವಿಧಾನವಿರೋಧಿಯೇ ಆಗಿರುತ್ತದೆ. ದೇಶದ ಎಲ್ಲ ಶಾಲೆಗಳೂ ಖಾಸಗಿಯವರ ಕೈಗೆ ಹೋದರೆ ದೇಶದ ಬಡ, ಅತಿ ಬಡವ ತನ್ನ ಮಕ್ಕಳಿಗೆ ಶಿಕ್ಷಣ ನೀಡಲಾರನಾದ್ದರಿಂದ ಇದು ಜೀವ ವಿರೋಧಿ, ಮಕ್ಕಳ ಹಕ್ಕುಗಳನ್ನು ನಿರಾಕರಿಸುವಂಥ ಹೇಳಿಕೆಯಾಗುತ್ತದೆ. ಇನ್ನು ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಹಿಂಸೆಯನ್ನು ಪ್ರಚೋದಿಸುತ್ತವೆ ಎಂಬ ಮಾತುಗಳಿಗೆ ಯಾವ ನೆಲೆಯಲ್ಲೂ ಸಮರ್ಥನೆಯಿಲ್ಲವಾದ್ದರಿಂದ ಇದು ಅತ್ಯಂತ ಅವಿವೇಕದ, ಮುಠ್ಠಾಳತನದ ಹೇಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಒಂದುವೇಳೆ ರವಿಶಂಕರರ ತಿದ್ದುಪಡಿಯಾದ ಹೇಳಿಕೆಯನ್ನೇ ಪರಿಗಣಿಸುವುದಾದರೂ ನಕ್ಸಲೈಟರ ವ್ಯಾಪ್ತಿಯ ಸರ್ಕಾರಿ ಶಾಲೆಗಳು ನಕ್ಸಲೈಟರನ್ನು ಸೃಷ್ಟಿಸುತ್ತಿವೆ ಎಂಬುದು ಮತ್ತೊಂದು ಮೂರ್ಖತನದ, ಆಧಾರರಹಿತ ಹೇಳಿಕೆಯಾಗುತ್ತದೆ. ಆ ಸರ್ಕಾರಿ ಶಾಲೆಗಳೂ ಇಲ್ಲದಿದ್ದರೆ ನಕ್ಸಲೈಟರ ಪ್ರಮಾಣ ಇನ್ನಷ್ಟು ಹೆಚ್ಚಿರುತ್ತಿತ್ತು ಎಂಬುದನ್ನಾದರೂ ರವಿಶಂಕರರು ಗುರುತಿಸಬಹುದಿತ್ತು.   ನೊಬೆಲ್ ಪ್ರಶಸ್ತಿಗಾಗಿ ಕೈ ಚಾಚಿ ನಿಂತಿರುವ ರವಿಶಂಕರರು ತಮ್ಮ ಜೈಪುರ ಘೋಷಣೆಯನ್ನು ಸಾರಾಸಗಟಾಗಿ ವಾಪಾಸು ಪಡೆದು ದೇಶದ ನಾಗರಿಕರ ಕ್ಷಮೆ ಕೋರುವುದು ಅವರಿಗೆ ಎಲ್ಲ ರೀತಿಯಲ್ಲೂ ಶ್ರೇಯಸ್ಕರವಾದ ಕ್ರಿಯೆ. ಇಲ್ಲವಾದಲ್ಲಿ ತನ್ನನ್ನು ತಾನು ಶಾಂತಿಯ ರಾಯಭಾರಿ ಎಂತಲೋ, ಧರ್ಮ ಪ್ರವರ್ತಕ ಎಂತಲೋ, ಗುರೂಜಿ ಎಂತಲೋ, ಶ್ರೀ ಶ್ರೀ ಎಂತಲೋ ಅಥವಾ ಇನ್ನೇನೋ ಹಾಳುಮೂಳು ವಿಶೇಷಣಗಳನ್ನು ಅಂಟಿಸಿಕೊಳ್ಳುವುದನ್ನಾದರೂ ಅವರು ಕೈಬಿಡಬೇಕಾಗುತ್ತದೆ.   ರವಿಶಂಕರರು ಸರ್ಕಾರಿ ಶಾಲೆಗಳು ನಕ್ಸಲೈಟರನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ. ಅವರು ಸರ್ಕಾರಿ ಶಾಲೆಗಳು ತಮ್ಮಂಥ ಯೋಗವ್ಯಾಪಾರಿಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದರೆ ಅದು ಹೆಚ್ಚು ಅನಾಹುತಕಾರಿ ಹೇಳಿಕೆಯಾಗಿರುತ್ತಿತ್ತು. ಯಾಕೆಂದರೆ ನಕ್ಸಲೈಟರಾದರೋ ಸಾಮಾಜಿಕ ಅಸಮಾನತೆ, ಶೋಷಣೆಗಳ ವಿರುದ್ಧ ಬಂಡೆದ್ದು ಅಸ್ತ್ರ ಹಿಡಿದವರು. ಆದರೆ ರವಿಶಂಕರರಂಥವರು ಊರ್ಧ್ವಮುಖಿಯಾಗಬೇಕಾದ ಸಮಾಜವನ್ನು ಹಾಳುಗೆಡಹುತ್ತ ಬರುತ್ತಾರೆ. ಇಂಥವರೇ ಇವತ್ತು ಅತಿ ಹೆಚ್ಚು ಅಪಾಯಕಾರಿ ಜನರು. *** ರವಿಶಂಕರರು ತಮ್ಮ ಮಾತನ್ನು ಸಂಪೂರ್ಣ ಹಿಂದಕ್ಕೆ ಪಡೆದು ತಮ್ಮ ಅವಿವೇಕದ ಮಾತುಗಳಿಗೆ ಕ್ಷಮೆ ಯಾಚಿಸುವವರೆಗೆ ನಮ್ಮ ಆಗ್ರಹವನ್ನು ಮುಂದುವರೆಸೋಣ. ಬನ್ನಿ ಈ ಪುಟಕ್ಕೆ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ. http://www.facebook.com/WeAreGovernmentSchoolStudents  ]]>

‍ಲೇಖಕರು G

March 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

೧ ಪ್ರತಿಕ್ರಿಯೆ

  1. Shreepad Hegde

    I fully agree with the views expressed in the article and extend my full support.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: