ಜುಗಾರಿ ಕ್ರಾಸ್ : ಶಂಕಿತರನ್ನು ಅಪರಾಧಿಗಳನ್ನಾಗಿಸುವುದು ಬೇಡ..

ಹೇಳಿ ಕೇಳಿ ‘ಜುಗಾರಿ ಕ್ರಾಸ್’ ಚರ್ಚೆಗಾಗಿ ಇರುವ ಅಂಕಣ. ರಾಜ್ಯದ ಸಮಕಾಲೀನ ವಿಷಯಗಳ ಬಗ್ಗೆ ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ.

ರಾಜ್ಯದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದಕರೆಂಬ ಆರೋಪದ ಮೇಲೆ ನಡೆದ ಬಂಧನಗಳ ಹಿನ್ನೆಲೆಯಲ್ಲಿ ನಾ ದಿವಾಕರ್ ತಮ್ಮ ನೇರ ನೋಟವನ್ನು ಮಂಡಿಸಿದ್ದಾರೆ. ಒಂದು ನೋಟ ಸಮಗ್ರ ನೋಟವಾಗಲು ಚರ್ಚೆ ಅತಿ ಮುಖ್ಯ ಹಾಗಾಗಿ ನಿಮ್ಮ ಚರ್ಚೆಗೂ ಸ್ವಾಗತ.

ನೆನಪಿಡಿ ಆಕ್ರೋಶ, ದೊಡ್ಡ ದನಿಯ ಮಾತು ಚರ್ಚೆಯಲ್ಲ. ಚರ್ಚೆ ಚರ್ಚೆಯಂತಿರಲಿ. ಪಾಲ್ಗೊಳ್ಳಿ..

– ನಾ ದಿವಾಕರ್

ಕರ್ನಾಟಕದಲ್ಲಿ ಭಯೋತ್ಪಾದಕ ಸಂಘಟನೆಗಳು ಬೇರೂರುತ್ತಿರುವುದು ಆತಂಕಕಾರಿ ವಿಷಯ. ಶಾಂತಿ, ಸೌಹಾರ್ದತೆ, ಭ್ರಾತೃತ್ವ ಮನೆಮಾಡಿರುವ ಕನ್ನಡದ ನೆಲದಲ್ಲಿ ಹಿಂಸಾತ್ಮಕ ಧೋರಣೆ ಇಲ್ಲವೆಂದೇನಿಲ್ಲ. ಜಾತಿ ವ್ಯವಸ್ಥೆಯ ಕರಾಳ ಬಾಹುಗಳು ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿದೆ. ಜಾತಿ ದೌರ್ಜನ್ಯಗಳನ್ನು, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಭಿನ್ನ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸುವುದರಿಂದ ಪ್ರಾಯಶಃ ಎಲ್ಲ ರೀತಿಯ ಹಿಂಸಾತ್ಮಕ ಕೃತ್ಯಗಳನ್ನೂ ಭಯೋತ್ಪಾದನೆಯ ಚೌಕಟ್ಟಿಗೆ ಒಳಪಡಿಸಲಾಗಿಲ್ಲ. ಆಳುವ ವರ್ಗಗಳು ಅಥವಾ ಪ್ರಭುತ್ವವನ್ನು ಪ್ರತಿನಿಧಿಸುವ ವರ್ಗಗಳು ವ್ಯಾಖ್ಯಾನಿಸುವ ರೀತಿಯಲ್ಲೇ ಭಯೋತ್ಪಾದನೆಯನ್ನು ಸಾರ್ವಜನಿಕ ವಲಯದ ಸಂಕಥನಗಳಲ್ಲೂ ಒಪ್ಪಿಕೊಳ್ಳುವುದರಿಂದ ಕರ್ನಾಟಕದ ಜನತೆ ಎದುರಿಸಿರುವ, ಎದುರಿಸುತ್ತಿರುವ, ಎದುರಿಸಲಿರುವ ಹಿಂಸಾತ್ಮಕ ಧೋರಣೆಯ ಆಕ್ರಮಣಗಳನ್ನು ಭಿನ್ನ ಸ್ವರೂಪಗಳಲ್ಲಿ ಪ್ರಮಾಣೀಕರಿಸಲಾಗುತ್ತದೆ. ಹಾಗಾಗಿ ಕಂಬಾಲಪಲ್ಲಿಯ ಹಂತಕರು, ಚರ್ಚ್ ಗಳ ಮೇಲೆ ದಾಳಿ ನಡೆಸಿದವರು, ಮಂಗಳೂರಿನ ಹೋಂಸ್ಟೇ ಹೀರೋಗಳು, ಕಾವೇರಿ ಗಲಭೆಯ ದಿಗ್ಗಜರು ಮತ್ತು ಇತ್ತೀಚಿಗೆ ಮಂಡ್ಯದ ಬಳಿ ರೈಲಿನಲ್ಲಿ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿದ ವಿದ್ಯಾರ್ಥಿ ಪಡೆಗಳು ಒಂದು ಗುಂಪಿಗೆ ಸೇರಲ್ಪಟ್ಟರೆ, ಗುಪ್ತಚರ ಇಲಾಖೆಯ ಕಾರ್ಯಾಚರಣೆಯ ಫಲವಾಗಿ ಬಂಧಿತರಾಗಿರುವ ಶಂಕಿತ ಉಗ್ರರು ಮತ್ತೊಂದು ಗುಂಪಿಗೆ ಸೇರುತ್ತಾರೆ. ಬಾಹ್ಯ ಶಕ್ತಿಗಳು ಪ್ರಚೋದಿಸುವ ಭಯೋತ್ಪಾದನೆಯನ್ನು ನಿಗ್ರಹಿಸುವ ಭರದಲ್ಲಿ ಆಂತರಿಕ ಭಯೋತ್ಪಾದನೆಯನ್ನು ಗಮನಿಸದೆ ಇರುವುದು ಸ್ವೀಕೃತ ವಿದ್ಯಮಾನ. ಇರಲಿ, ಈಗ ರಾಜ್ಯದಲ್ಲಿ ಭಯೋತ್ಪಾದನೆಯ ಭೀತಿ ಆವರಿಸಿದೆ. ಗುಪ್ತಚರ ಇಲಾಖೆಯ ಕಾರ್ಯಾಚರಣೆಯಲ್ಲಿ ಹನ್ನೊಂದು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು ನಂತರ ಮುಂಬೈನಲ್ಲಿ ಹೈದರಾಬಾದ್ ಮೂಲದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ವೈದ್ಯರು, ಸಾಫ್ಟ್ವೇರ್ ಇಂಜಿನಿಯರ್ಗಳು, ಪತ್ರಕರ್ತರೂ ಇರುವುದು ಜನಸಾಮಾನ್ಯರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಜಾಗತಿಕ ವಿದ್ಯಮಾನಗಳನ್ನು ಅರಿತಿರುವವರಿಗೆ ಇದು ಅಚ್ಚರಿಯ ವಿಷಯವೇನಲ್ಲ. ಬಿನ್ ಲಾಡೆನ್ ಸಹ ಅನೇಕಾನೇಕ ತಜ್ಞರನ್ನು, ವೃತ್ತಿಪರರನ್ನು, ಸುಶಿಕ್ಷಿತರನ್ನು ತನ್ನ ತಾಲಿಬಾನ್ ಸೇನೆಯಲ್ಲಿ ನಿಯೋಜಿಸಿದ್ದ. ಕಾಶ್ಮೀರದ ಉಗ್ರವಾದಿಗಳಲ್ಲೂ ಈ ರೀತಿಯ ಉನ್ನತ ಶಿಕ್ಷಣ ಪಡೆದ ವೃತ್ತಿಪರರಿದ್ದಾರೆ. ಇಲ್ಲಿ ಮುಖ್ಯವಾಗುವುದು ಭಯೋತ್ಪಾದಕ ಸಂಘಟನೆಗಳ ಸೈದ್ಧಾಂತಿಕ ತಳಹದಿಯೇ ಹೊರತು ವ್ಯಕ್ತಿಗತ ನೆಲೆಗಳಲ್ಲ. ರಾಜ್ಯ ಪೊಲೀಸರು ಬಂಧಿಸಿರುವ ಹನ್ನೊಂದು ಮಂದಿ ಶಂಕಿತ ಉಗ್ರರ ತಪ್ಪೊಪ್ಪಿಗೆ ಹೇಳಿಕೆಗಳನ್ನು ನೋಡಿದರೆ ರಾಜ್ಯ ಸುರಕ್ಷಿತವಾಗಿಲ್ಲ ಎಂದು ತಿಳಿಯುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಜಾಲವನ್ನು ವಿಸ್ತರಿಸಿರುವ ಲಷ್ಕರ್, ಹೂಜಿ ಮುಂತಾದ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದು ಆತಂಕಕಾರಿ ವಿಷಯವಾಗಿದೆ. ಆದರೆ ಈ ಹನ್ನೊಂದು ಜನ ಶಂಕಿತ ಉಗ್ರರು ಕೇವಲ ಶಂಕಿತರಷ್ಟೆ. ಇವರ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ. ಬಂಧಿತರ ಪೂರ್ಣ ಹೇಳಿಕೆಗಳು ದೃಢವಾಗಿಲ್ಲ. ಸಾಕ್ಷಿ ಪುರಾವೆಗಳು ಲಭ್ಯವಾದರೂ ಅದನ್ನು ಪ್ರಮಾಣೀಕರಿಸಿ ನೋಡಲಾಗಿಲ್ಲ. ಬಂಧಿತರ ಉದ್ದೇಶಗಳೇನೇ ಇರಲಿ ಪೂರ್ಣ ಸತ್ಯ ಸಾಬೀತಾಗುವವರೆಗೂ ಯಾವುದೇ ನಿದರ್ಿಷ್ಟ ಅಭಿಪ್ರಾಯಕ್ಕೆ ಬರಲಾಗುವುದಿಲ್ಲ. ಆದರೂ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ನೋಡಿದರೆ ಶಂಕಿತ ಉಗ್ರರು ಇಷ್ಟರಲ್ಲೇ ಇಡೀ ರಾಜ್ಯದಲ್ಲಿ ಭಯೋತ್ಪಾದನೆಯ ತಾಂಡವ ನೃತ್ಯ ಆಡುತ್ತಿದ್ದರೇನೋ ಎನ್ನುವಂತೆ ಭಾಸವಾಗುತ್ತದೆ. ಪೊಲೀಸ್ ಮೂಲಗಳು ನೀಡುವ ವರದಿಯನ್ನು ಆಧರಿಸಿ ತಮ್ಮದೇ ಆದ ಧೋರಣೆಗಳಿಗೆ ಅನುಸಾರವಾಗಿ ವಸ್ತುಸ್ಥಿತಿಯನ್ನು ಬಿಂಬಿಸುವ ಮಾಧ್ಯಮಗಳ ಮಾರುಕಟ್ಟೆ ತಂತ್ರ ಇಲ್ಲಿಯೂ ವ್ಯಕ್ತವಾಗುತ್ತಿರುವುದು ಗುಟ್ಟಿನ ಮಾತೇನಲ್ಲ. ಹಾಗಾಗಿಯೇ ಶಂಕಿತ ಉಗ್ರರನ್ನು ಕುರಿತ ಕಥೆಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಸಾಮಾನ್ಯವಾಗಿ ಮುದ್ರಿತ ಮತ್ತು ಶ್ರವಣ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರುವುದರಿಂದ ಈ ರೀತಿಯ ಕಪೋಲ ಕಲ್ಪಿತ ವರದಿಗಳು ಬಂಧಿಸಲ್ಪಟ್ಟಿರುವ ಅಮಾಯಕರ ಭವಿಷ್ಯವನ್ನೂ ನರಕ ಸದೃಶವಾಗಿಸುತ್ತವೆ. ಪೊಲೀಸರ ಹೇಳಿಕೆ ಗಮನಿಸಿ, ಪ್ಲೀಸ್ ಮುಂಬೈನಲ್ಲಿ ಬಂಧಿಸಲಾಗಿರುವ ಉಗ್ರರು ಹೈದರಾಬಾದ್ ನಗರ ಪಾಲಿಕೆಯ ಇಬ್ಬರು ಸದಸ್ಯರ ಹತ್ಯೆಗೆ ಸಂಚು ಹೂಡಿದ್ದರೆಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕೆಲವು ಪ್ರಮುಖ ಅಣು ಸ್ಥಾವರಗಳು ಶಂಕಿತ ಉಗ್ರರ ದಾಳಿಯ ಗುರಿಯಾಗಿತ್ತು ಎಂಬ ಮಾಧ್ಯಮಗಳ ವರದಿಯನ್ನು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿಜರ್ಿ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಬೆಂಗಳೂರಿನಲ್ಲಿ ಬಂಧಿತರಾದವರಿಗೂ, ಮುಂಬೈನಲ್ಲಿ ಬಂಧಿತರಾದವರಿಗೂ ನಂಟು ಇರುವ ಸಾಧ್ಯತೆಗಳನ್ನು ಅಲ್ಲಗಳೆದಿಲ್ಲವಾದರೂ ಇವರೆಲ್ಲರೂ ಲಷ್ಕರ್ ಅಥವಾ ಹೂಜಿ ಸಂಘಟನೆಗೆ ಸೇರಿದವರೆಂದು ಪೊಲೀಸ್ ಮೂಲಗಳು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಂಧನವನ್ನು ಕುರಿತಂತೆ ಮಾಧ್ಯಮಗಳ ವರದಿಯನ್ನು ಪ್ರಸ್ತಾಪಿಸಿದ ಮಿರ್ಜಿ, ತಮ್ಮ ತನಿಖಾ ತಂಡದಲ್ಲಿ ಕೆಲವೇ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಇವರಾರೂ ವರದಿಗಾರರೊಡನೆ ಮಾತುಕತೆ ನಡೆಸಿಲ್ಲವೆಂದೂ, ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿರುವ ಅನಾಮಧೇಯ ಅಧಿಕಾರಿಗಳು ತನಿಖೆಯಲ್ಲಿ ಪಾಲ್ಗೊಂಡಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಕಪೋಲ ಕಲ್ಪಿತ ವರದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ ಎಂದೂ ಎಚ್ಚರಿಸಿದ್ದಾರೆ. ನವದೆಹಲಿಯ ಮೂಲದ ಗುಪ್ತಚರ ಇಲಾಖೆಯ ವರದಿಯ ಪ್ರಕಾರ ಬಂಧಿತರಾಗಿರುವವರೆಲ್ಲರೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರಲ್ಲ.. ಇವರಲ್ಲಿ ಹಲವರು ಕೇವಲ ಪೂರಕವಾಗಿ ಕೆಲಸ ನಿರ್ವಹಿಸರಬಹುದು ಎಂದು ಹೇಳಲಾಗಿದೆ. ಇಬ್ಬರು ಶಂಕಿತ ಉಗ್ರರು ಮಾತ್ರ ಐಎಸ್ಐ ತರಬೇತಿ ಹೊಂದಿರುವುದು ಸಾಬೀತಾಗಿದ್ದು ಇವರುಗಳು ನಡೆಸಿದ ಬೇಹುಗಾರಿಕೆ ಕಾರ್ಯಾಚರಣೆಗಳು ದಾಳಿ ನಡೆಸುವ ಉದ್ದೇಶ ಹೊಂದಿದ್ದವೇ ಎಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸ್ ಮೂಲಗಳ ಈ ಸ್ಪಷ್ಟೀಕರಣದ ಹೊರತಾಗಿಯೂ ಮಾಧ್ಯಮಗಳಲ್ಲಿ ರಂಜನೀಯ ವರದಿಗಳನ್ನು ಬಿತ್ತರಿಸಲಾಗುತ್ತಿರುವುದು ವಿಷಾದನೀಯ, ಖಂಡನಾರ್ಹವೂ ಹೌದು. ಶಂಕಿತ ಉಗ್ರರಲ್ಲಿ ಒಬ್ಬ ಬಿನ್ ಲಾಡೆನ್ ಸತ್ತ ನಂತರ ಶೋಕಾಚರಣೆ ಆಚರಿಸಿದ್ದ ಎಂದು ಒಂದು ಸಂಜೆ ಪತ್ರಿಕೆಯಲ್ಲಿ ಹೇಳಲಾಗಿದೆ, ಮತ್ತೊಂದರಲ್ಲಿ ಈ ವ್ಯಕ್ತಿ ಇಸ್ಲಾಮಿಕ್ ತತ್ವಶಾಸ್ತ್ರದಲ್ಲಿ ವಿದ್ವಾಂಸನಾಗಿರುವುದನ್ನೇ ಮಹತ್ತರ ಮಾಹಿತಿಯಂತೆ ವರದಿ ಮಾಡಿದೆ. ಒಂದು ಕನ್ನಡ ಟಿವಿ ಚಾನಲ್ ಕರ್ನಾಟಕವನ್ನು ರಕ್ಷಿಸಿದ್ದಕ್ಕಾಗಿ ಪೊಲೀಸರಿಗೆ ಅಭಿನಂದನೆಯನ್ನೂ ಸಲ್ಲಿಸಿದೆ. ಇದು ಬೇಕಿತ್ತೇ ? ಬಂಧಿತರಾದವರೆಲ್ಲೂ ಅಪರಾಧಿಗಳಾಗುವುದಿಲ್ಲ. ಆರೋಪಗಳು ಎಷ್ಟೇ ಇದ್ದರೂ ಸಾಬೀತಾಗುವವರೆಗೂ, ಸಾಕ್ಷ್ಯಾಧಾರಗಳು ದೊರೆಯುವವರೆಗೂ ಅಪರಾಧಿಗಳಾಗುವುದಿಲ್ಲ. ಈಗಾಗಲೇ ಮೊಹಮದ್ ಹನೀಫ್ ಪ್ರಕರಣದಲ್ಲಿ ಮಾಧ್ಯಮಗಳ ಆಟಾಟೋಪಗಳು ಎಷ್ಟು ಹಾನಿ ಉಂಟುಮಾಡುತ್ತವೆ ಎಂದು ಸಾಬೀತಾಗಿದೆ 2008ರ ಮೇ ತಿಂಗಳಲ್ಲಿ ಹುಬ್ಬಳ್ಳಿಯ ನ್ಯಾಯಾಲಯದ ಬಳಿ ಸಂಭವಿಸಿದ ಬಾಂಬ್ ಸ್ಫೋಟವನ್ನೇ ತೆಗೆದುಕೊಳ್ಳಿ. ಈ ಘಟನೆಯ ಆರೋಪಿಗಳು ಸಿಮಿ ಸಂಘಟನೆಗೆ ಸೇರಿದವರು ಎಂಬ ಪೊಲೀಸ್ ಮಾಹಿತಿಯನ್ನು ಆಧರಿಸಿ ಅನೇಕ ಮುಸ್ಲಿಂ ಯುವಕರನ್ನು ಬಂಧಿಸಿ ವಿಚಾರಣಾ ಖೈದಿಗಳನ್ನಾಗಿ ಪರಿಗಣಿಸಲಾಗಿತ್ತು. ಆದರೆ ಸತ್ಯ ಹೊರಬಂದಾಗ ತಿಳಿದದ್ದು ಅದು ಶ್ರೀರಾಮಸೇನೆಯ ಕೃತ್ಯ ಎಂದು. ಹೈದರಾಬಾದ್ನ ಮೆಕ್ಕಾ ಮಸೀದಿ ಬಾಂಬ್ ಸ್ಪೋಟದ ಪ್ರಕರಣದಲ್ಲೂ 22 ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು. ಮಲೆಗಾಂವ್ ಘಟನೆಯ ನಂತರ 17 ಮುಸ್ಲಿಂ ಯುವಕರು ಶಂಕಿತ ಉಗ್ರರಾಗಿ ಬಂಧನಕ್ಕೊಳಗಾಗಿದ್ದರು. ಆದರೆ ಈ ಎರಡೂ ಘಟನೆಗಳ ಹಿಂದೆ ಹಿಂದುತ್ವವಾದಿಗಳ ಕೈವಾಡ ಇದ್ದುದು ತಿಳಿಯುವ ವೇಳೆಗೆ ಈ ಶಂಕಿತ ಉಗ್ರರ ಭವಿಷ್ಯವೇ ಸರ್ವನಾಶವಾಗಿತ್ತು. ಇವು ಕೆಲವು ಉದಾಹರಣೆಗಳಷ್ಟೇ. ಈಗ ಬಂಧನಕ್ಕೊಳಗಾಗಿರುವ 16 ಮಂದಿ ಅಪರಾಧಿಗಳೇ ಆಗಿದ್ದಲ್ಲಿ, ದೇಶದ್ರೋಹಿ ಕೃತ್ಯಗಳಲ್ಲಿ ಪಾಲ್ಗೊಂಡಿದ್ದು ಸಾಬೀತಾದಲ್ಲಿ ಅವರನ್ನು ಶಿಕ್ಷಿಸಲು ನ್ಯಾಯಾಂಗವಿದೆ, ಪೊಲೀಸ್ ಇಲಾಖೆ ಇದೆ, ಸಂವಿಧಾನದತ್ತ ನಿಯಮಗಳಿವೆ. ಮಾಧ್ಯಮಗಳು ಇವರ ಚಟುವಟಿಕೆಗಳ ಸತ್ಯಾಸತ್ಯತೆಗಳನ್ನು ಪರಾಮರ್ಶಿಸುವ ಭರದಲ್ಲಿ ತಮ್ಮದೇ ಆದ ತೀರ್ಪುಗಳನ್ನು ನೀಡುವ ಅಗತ್ಯವಿಲ್ಲ. ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ವಸ್ತುನಿಷ್ಠವಾಗಿ, ನಿರ್ಭಯತೆಯಿಂದ, ಪ್ರಾಮಾಣಿಕವಾಗಿ ವರದಿ ಮಾಡುವ ಗುರುತರ ಹೊಣೆಗಾರಿಕೆ ಹೊತ್ತಿರುವ ಮಾಧ್ಯಮಗಳು ತಮ್ಮ ಟಿಆರ್ಪಿ ರೇಟಿಂಗ್ ಅಥವಾ ಪ್ರಸಾರ ಹೆಚ್ಚಿಸಲು ತಮ್ಮದೇ ಆದ ಕಾಲ್ಪನಿಕ ವರದಿಗಳನ್ನು ಅಥವಾ ಆಧಾರವಿಲ್ಲದ ಪೊಲೀಸ್ ಮೂಲದ ವರದಿಗಳನ್ನು ರಂಜನೀಯಗೊಳಿಸಿ ವರದಿ ಮಾಡುವುದು ಭಯೋತ್ಪಾದನೆಯಷ್ಟೇ ಮಾರಕವಾದೀತು. ಈಗಾಗಲೇ ವದಂತಿಗಳಿಂದ ಆಗಿರುವ ಅನಾಹುತವನ್ನು ರಾಜ್ಯ ಪ್ರತ್ಯಕ್ಷವಾಗಿ ಅನುಭವಿಸಿದೆ. ಅಪರಾಧಿಗಳಿಗೆ ಶಿಕ್ಷೆಯಾಗಲಿ, ಆದರೆ ಅಪರಾಧವನ್ನು ನಿರೂಪಿಸುವವರೆಗೂ ತಾಳ್ಮೆಯಿಂದಿರುವ ಸೌಜನ್ಯವನ್ನು ಪ್ರಜ್ಞಾವಂತ ಸಮಾಜ ತೋರದೆ ಹೋದರೆ ಪ್ರಜಾತಂತ್ರ ವ್ಯವಸ್ಥೆ ಕುಸಿದು ಬೀಳುತ್ತದೆ. ಕನರ್ಾಟಕದ ಸಹೃದಯ ಸಮಾಜ ಮತ್ತೊಬ್ಬ ಹನೀಫ್ನನ್ನು ಸೃಷ್ಟಿಸುವುದು ಬೇಡ. ಕಾದು ನೋಡೋಣ. ತಾಳ್ಮೆ ಇರಲಿ. ಏನಂತೀರಿ ಮಾಧ್ಯಮ ಮಿತ್ರರೇ ?]]>

‍ಲೇಖಕರು G

September 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

10 ಪ್ರತಿಕ್ರಿಯೆಗಳು

 1. ಸತ್ಯ

  ಇನ್ನೊಂದು ಅಪಾಯ ಎಂದರೆ ಹೀಗೆ ಮಾಧ್ಯಮಗಳಲ್ಲಿ ಒಬ್ಬ ನಿರಪರಾಧಿಯ ಬಗ್ಗೆ ಅಪರಾಧಿ ಎಂದು ಪ್ರಕಟವಾದರೆ ಅವನಿಗೆ ಅನೇಕ ಸಮಸ್ಯೆಗಳು ಉಂಟಾಗಿ ಅವನು ನಿಜವಾಗಿಯೂ ಅಪರಾಧ ಕೃತ್ಯಗಳನ್ನು ಎಸಗಲು ಪ್ರೇರೆಪಿತನಾಗಬಹುದು … ಮಾಧ್ಯಮಗಳು ಸ್ವಲ್ಪ ಅತಿಯಾಗಿ ವರ್ತಿಸುತ್ತವೆ ಎನ್ನಿಸುತ್ತದೆ.

  ಪ್ರತಿಕ್ರಿಯೆ
 2. Sushrutha

  Diwakar re, baraha chennaagide. e thara aaropigalannu aparaadhi sthaana dalli nillisiddu monneya Mangalore na ghatane yalloo nadedithu. aaga nimma viveka chinthane ge yaava grahana hididitho? aagaloo heegeye bareyabahudithu. nange kanda haage elloo bareelilla neevu. nimmantha mahaan maanavathaavaadigalu Gumpu galannu nodi heege bareyodaa?

  ಪ್ರತಿಕ್ರಿಯೆ
 3. raghu

  alpa sakhyata ayogagalu, manava hakku ayogagala hesarinalli alpa sakyatara hita rakshanege kati baddaragiruva ayogagala hodeta sahisi polisaru karyacharane maadi tamma bhavhishyakke kallu halikolluvudilla. Hattu halavu sakshadharagillade polisaru munduvariyuvidilla ennuva satya divakararige gottirabeku. `nooru aparadhigalu tappisikondaroo obba niraparadhige shiksheyagabaradu’ ennuva adarshada palaneyadiyalli halavaru nijavada aparadhigalu kanoonina hiditadinda tappisikondiruvudu katora sathya. divakarara parokshavagi apradhigala bennige nitiruvantide.

  ಪ್ರತಿಕ್ರಿಯೆ
 4. Vinayak Hegde

  Madiddunno maharaya. Dharmada hesarinalli ee ‘mughda’ru maaduva anahutagalu enenive embudannu history odi tilidukolli. Bhayotpadane andare muslimaru annuvashtu ghatuka krutyagalige ivarugalu saakshi. Antaha sandarbhadalli police rige obba aparichita musalmanana bagge anumaana bande baruttade. Arrest kooda aagabahudu. Ee paristhithi hogabekendare musalmaanare munde bandu bhayotpadana krutyagalige kadivaana haakabeku. Avara pakkada maneyalliruva bhayotpadakaranna hididu kodali. Aaga ellarigoo muslimara mele nambike baruvudu. Avattu ellarannu anumaanadinda noduvudu kooda nilluttade. Nimmantha so called ‘Budhhijeevigalu’ avara ghatuka kryutyagalige police uttara kottaga mosale kanneeru haakuva badalu avarannu educate maadi samajada mukhya vahinige tanni. Nimma maatige avattadaru swalpa bele baruvudu. (Naavu eshtandru komuvadigalu. Heegagi naavu educate maadalu hodare kesarikarana aaguttade. Adakke nimage aa kelasa maadalu heliddu.) Aa kelasa aaguvudilla endadare ee taraha asambhadda barahagalanna neevu bareyadiruvude olitu.

  ಪ್ರತಿಕ್ರಿಯೆ
 5. ಸಂದೀಪ್ ಕಾಮತ್

  ಆರೋಪಿಗಳು ನಿಜವಾಗಿಯೂ ಅಪರಾಧಿಗಳೇ ಅನ್ನೋದನ್ನು ತಿಳಿಯಲು ಭಾರತದಲ್ಲಿ ಬಹಳಷ್ಟು ತಿಂಗಳು(ಕೆಲವೊಮ್ಮೆ ವರ್ಷಗಳು) ಕಾಯಬೇಕು. ಅಷ್ಟರಲ್ಲಿ ಬಿಸಿ ಮಸಾಲೆದೋಸೆ ತಣ್ಣಗಾಗಿರುತ್ತದೆ. ಗಿರಾಕಿ ಸಿಗೋದಿಲ್ಲ!
  ಹಾಗಾಗಿ ಪಾಪ ನಮ್ಮ ಮಾಧ್ಯಮದವರಿಗೂ ನಿಮ್ಮ ಸಲಹೆ ಪಾಲಿಸೋದು ಕಷ್ಟ!
  ಬೇರೆ ದೇಶದಲ್ಲಿ ಆರೋಪ ಸಾಬೀತಾಗೋವರೆಗೂ ಆರೋಪಿ ನಿರಪರಾಧಿ. ಆದರೆ ನಮ್ಮ ದೇಶದಲ್ಲಿ ಅವನು/ಅವಳು ನಿರಪರಾಧಿ ಅನ್ನೋದು ಸಾಬೀತಾಗೋ ತನಕ ಅಪರಾಧಿ! [ಜನರ ಕಣ್ಣಲ್ಲಿ!]

  ಪ್ರತಿಕ್ರಿಯೆ
 6. ನಾ ದಿವಾಕರ

  Here I have never said the arrested are innocent. Nor I have stood by minorities, in the sense it is defined by vinayak. Nor I have accused the police of wrong doing. My concern is about the romanticisation of the entire episode by media. See today’s papers. Mirji has warned media not to trivialise the issue. Ex. Udayavanai has wrongly reported that Sringeri is under threat. Kaiga was never under threat as per police records. but Even central minister has said so. My concern is the innocents. If the 17 arrested are involved in terrorist activities let them go to gallows but the trial should be the legal fraternity under constitutional scheme not by the media and the so called cultural police. And Sushrutha has not read my article on mangalore attack. There culprits were right in front of the camera but media hided them but highlighted the victims. Is it not true. Let’s not look things with myopic view. False reports and trivialised sensationalism will spoil the prospects of innocents who might not have committed any crime nor abetted it. And when it comes to terrorism why should our discourse centre on religious identity. Indian terrorism has disproved it. I have quoted instances. If muslims are to be educated about it so be Hindu groups. They are few and far but effective. First let us define mainstream society and then try to bring people into it. At a time when educated class is confining themselves to secluded caste identities building enclaves of communal colours, It is farcical to talk of main stream. This word has become as vulgar as terrorism. Who is to define mainstream, like terrorism et all it is the dominant class and who will pay the price , it is of course the poor, downtrodden and probably middle class. Be it muslim or Hindu terrorism has corrupted our mindset so too the society at large. Let humanity prevail and media has larger role to play in it. This is crux of the matter and theme of the artice.

  ಪ್ರತಿಕ್ರಿಯೆ
 7. ಕೆ.ಆರ್. ಮೂರ್ತಿ

  ಭಾರತದಲ್ಲಿ ಹೃದಯ ಹೃದಯಗಳ ಬೆಸುಗೆ ದಿನದಿನಕ್ಕೂ ದೂರದ ಮಾತಾಗುತ್ತಿದ್ದರೂ ಭಯೋತ್ಪಾದಕ ಘಟನೆಗಳನ್ನು ಒಂದಕ್ಕೊಂದು ಜೋಡಿಸಿ ನೋಡುವ ಮತ್ತು ಇಸ್ಲಾಂ ಭಯೋತ್ಪಾದನೆ ಎಂದೊಡನೆ ಹಿಂದೂ ಭಯೋತ್ಪಾದನೆ ಎನ್ನುವ ಪ್ರತಿಧ್ವನಿ ಬರುವಂತೆ ಮಾಡುವ ಇಂಜಿನಿಯರಿಂಗ್‌ನಲ್ಲಿ ದಿನದಿನಕ್ಕೂ ಪ್ರಪಂಚವನ್ನು ಮೀರಿಸುವ ನಿಪುಣರಾಗುತ್ತಿದ್ದೇವೆ.
  ಈ ಲೇಖನದಲ್ಲಿ, ‘ತಪ್ಪು ಮಾಡಿದ್ದಾರೆಂದು ನ್ಯಾಯಾಲಯ ನಿಜಕ್ಕೂ ಸಿದ್ದ ಮಾಡುವವರೆಗೆ ಅವರನ್ನು ದೂರಬೇಡಿ’ ಎನ್ನುವ ಒಂದು ಸಾಲಿನ ಮತ್ತು ಸಾದುವಾದ ಅಭಿಪ್ರಾಯವನ್ನು ಮಂಡಿಸಲು ಲೇಖಕರು ಯಾರೋ ಚರ್ಚಿಗೆ ಕಲ್ಲು ಹೊಡೆದದ್ದು, ಯಾರೋ ಗೂಳಿಗಳು ಮಂಗಳೂರಿನ ಪಾರ್ಟಿ ಮನೆಗೆ ನುಗ್ಗಿದ್ದು ಎಂದು ಪ್ರಾರಂಭಿಸಿ, ಮಲೆಗಾಂವ್‍ನಲ್ಲಿ ಸ್ಫೋಟ ನಡೆಸಿದ್ದು ಹಿಂದೂಗಳೇ ಎಂದು ಭದ್ರವಾಗಿ ಹೇಳಿ (ಅದು ಇನ್ನೂ ವಿಚಾರಣೆಯಲ್ಲಿದೆ. ವಿಚಾರಣೆಯಾಗದೆ ದೂರಬೇಡಿ ಎನ್ನುತ್ತ ತಾವು ಹೇಳಲು ಹೊರಟ ತಮ್ಮ ಮಾತನ್ನು ತಾವೇ ಭಂಗಮಾಡುತ್ತ), ಹುಬ್ಬಳ್ಳಿಯ ಸ್ಪೋಟಕ್ಕೆ ಶ್ರೀರಾಮಸೇನೆಯನ್ನು ದೂರಿ … ಜನರನ್ನು ಈ ರೀತಿ ಗೊಂದಲ ಬೀಳಿಸುವ ಉದ್ದೇಶವಾದರೂ ಏನು? ಇವರ ಲೇಖನವನ್ನು ಓದುತ್ತಿದ್ದರೆ ನನಗೆ, ಈ ಥರಹದ ಘಟನೆ ನಡೆದಾಗಲೆಲ್ಲಾ ಪದೇಪದೇ ಟಿವಿಯಲ್ಲಿ ಕಾಣಿಸಿಕೊಳ್ಳುವ ದಿಗ್ವಿಜಯ್ ಸಿಂಗ್ ಎನ್ನುವ ಮೂರ್ಖನ ನೆನಪಾಗುತ್ತದೆ. ಈತ ಕಾಂಗ್ರೆಸ್ ಪಕ್ಷದಿಂದ ಅಸ್ಸಾಂಗೆ ಮೇಲ್ವಿಚಾರಕ. ಅಸ್ಸಾಂನಲ್ಲಿ ನಡೆಯುತ್ತಿರುವ ಹಿಂಸಾಚಾರದ ಪ್ರಶ್ನೆಗಳನ್ನು ಟೈಮ್ಸ್ ನೌ ಚಾನಲ್‍ನವರು ಕೇಳುತ್ತಿದ್ದಂತೆ ಅವನು ಪದೇ ಪದೇ ‘ಈ ಹಿಂಸಾಕಾಂಡವು ಗುಜರಾತ್ ಹಿಂಸಾಕಾಂಡದಂತಲ್ಲ’ ಎಂದು ಮಾತು ಮಾತಿಗೂ ಹೋಲಿಕೆ ಕೊಡುತ್ತಿದ್ದ. ಒಂದು ಬಗೆಯ ಧ್ವನಿಯಲ್ಲಿ ಹಿಂಸೆಯನ್ನೂ ಸಮರ್ಥಿಸಬಹುದು ಎನ್ನುವುದನ್ನು ನಾಚಿಕೆಯಿಲ್ಲದೆ ಪ್ರದರ್ಶಿಸುತ್ತಿದ್ದ.
  ಮಂಗಳೂರಿನ ಪಾರ್ಟಿ ಮನೆಗೆ ನುಗ್ಗಿದ ಗೂಳಿಗಳನ್ನು ಮುಸ್ಲಿಂ ಭಯೋತ್ಪಾದಕರೊಂದಿಗೆ ಹೋಲಿಸದೆ, ಈಗ ಅಪಾಧಿತರಾಗಿರುವ ೧೭ ಜನರನ್ನು ಶ್ರೀರಾಮ ಸೈನ್ಯದೊಂದಿಗೆ ಹಿಡಿದು ನೋಡದೆ ಮಾತನಾಡಲೇ ಬರುವುದಿಲ್ಲವೆ ನಮಗೆ? ಭಯೋತ್ಪಾದಕರಿಗಿಂತಲೂ ಹೆಚ್ಚಿನ ದೂರ್ತತನವನ್ನು ‘ಮರೆಯ ಸಮರ್ಥನೆ’ಯ ನಾವು ಪ್ರದರ್ಶಿಸುತ್ತಿದ್ದೇವೆ, ಹಿಂದೂವಾಗಲೀ, ಮುಸ್ಲೀಂ ಆಗಲಿ.
  – ಕೆ.ಆರ್. ಮೂರ್ತಿ

  ಪ್ರತಿಕ್ರಿಯೆ
 8. mahadev

  ಕೊಲೆ ಮಾಡಲು ಸಂಚು ನಡೆಸಿದವರು ಉಗ್ರರಾಗುವುದೆಂದರೆ ಅಪಹಾಸ್ಯವಲ್ಲವೇ…?

  ಪ್ರತಿಕ್ರಿಯೆ
 9. yammar

  ನಾ.ದಿವಾಕರ್ ಅವರ ವಿಚಾರಗಳಿಗೆ ನಾನು ಸಹಮತ ವ್ಯಕ್ತಪಡಿಸುತ್ತ ಕೆಲವೊಂದು ವಿಷಯಗಳನ್ನು ಇಲ್ಲಿ ಚರ್ಚಿಸಲು ಬಯಸುತ್ತೇನೆ. ಮಾಧ್ಯಮಗಳಿಗೆ ತನ್ನದೇ ಆದ ಜವಬ್ದಾರಿ ಇದೆ. ಅದನ್ನು ಮರೆತು ಎಲ್ಲೋ ಕುಳಿತು ಯಾರೋ ಹೇಳಿದ್ದನ್ನು ಕೇಳಿ ತಮ್ಮ ತಿಟೆಯನ್ನು ತೀರಿಸಿಕೊಳ್ಳುವ ನಮ್ಮ ಮಾಧ್ಯಮ ಮಿತ್ರರು ಈಗ ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ.
  ಒಂದು ಜೀವಂತ ಉದಾಹರಣೆಯನ್ನು ನಾನು ತಮ್ಮ ಮುಂದೆ ಇಡುತ್ತೇನೆ. ಭಟ್ಕಳ ಉತ್ತರಕನ್ನಡ ಜಿಲ್ಲೆಯ ಸುಂದರ ನೈಸರ್ಗಿಕ ತಾಣ ಇಲ್ಲಿ ಹಿಂದು ಮುಸ್ಲಿಮರು ಬಹುದಿನಗಳಿಂದಲೂ ಅನೋನ್ಯವಾಗಿ ಬಾಳಿ ಬದುಕುತ್ತಿದ್ದಾರೆ. ಇಲ್ಲಿನ ಅನೇಕ ಹಿಂದುಗಳು ಮುಸ್ಲಿಮ್ ಸಮುದಾಯದವರ ಮನೆ,ಅಂಗಡಿಗಳಲ್ಲಿ ಈಗಲೂ ದುಡಿಯುತ್ತಿದ್ದಾರೆ. ಹಿಂದೆ ಹಿಂದುಗಳ ಮದುವೆಗೆ ತಮ್ಮ ಮನೆಯಲ್ಲಿನ ಒಡವೆ ಬಂಗಾರಗಳನ್ನು ಮುಸ್ಲಿಮರು ಧಾರೆ ಎರೆದು ನೀಡಿದ ಪ್ರಸಂಗಗಳನ್ನು ಈಗಲೂ ಹಿರಿಯರು ಸ್ಮರಿಸಿಕೊಳ್ಳುತ್ತಾರೆ. ಇಂತಹ ವಾತವರಣ ಅಲ್ಲಿರುವಾಗ ಕೆಲವು ರಾಜಕೀಯ(ಸಂಘಪರಿವಾರ ಕೃಪಪೋಷಿತ) ದಿಂದಾಗಿ ಅಲ್ಲಿ ಹಿಂದು-ಮುಸ್ಲಿಮರ ಮನಸ್ಸಿನಲ್ಲಿ ಹುಳಿ ಹಿಂಡುವ ಕೆಲಸ ನಡೆಯಿತು. ಅದು ಮುಗಿದು ಈಗ ಮತ್ತೆ ಉತ್ತಮ ಸೌಹಾರ್ಧತೆ ಕಾಪಾಡಿಕೊಂಡು ಹೋಗುತ್ತಿದ್ದ ಭಟ್ಕಳದ ಜನತೆ ಮಾಧ್ಯಮಗಳು ಹುಳಿ ಹಿಂಡಿ ಬೆಂಕಿಹಚ್ಚು ಪ್ರಯತ್ನಗಳು ಮಾಡುತ್ತಿವೆ. ಪತ್ರಿಕೆಯು ಭಟ್ಕಳದ ಮಸೀದಿಗಳಲ್ಲಿ ಬಾಂಬುಗಳು ತಯಾರಾಗುತ್ತವೆ, ಇವು ನಿಷೇಧಿತ ಪ್ರದೇಶಗಳು, ಇಲ್ಲಿ ಒಂದು ನರಪಿಳ್ಳೆಯೂ ಹೋಗುವಂತಿಲ್ಲ ಎಂದು ಬರೆದು ತನ್ನ ತಿರುಚಲು ಬುದ್ದಿಯನ್ನು ತೋರಿಸಿತು. ಸಿರ್ಸಿಯ ವರದಿಗಾರನೊಬ್ಬ ಅಲ್ಲಿ ಕುಳಿತು ಭಟ್ಕಳ ಕುರಿತಂತೆ ಸುಳ್ಳಿನ ಕತೆಯನ್ನು ಹಣೆಯತೊಡಗಿದ. ಇದರಿಂದಾಗಿ ಇಡಿ ಭಟ್ಕಳದ ಜನತೆ ಆ ಪತ್ರಿಕೆಯ ವಿರುದ್ದ ಈಗ ಕಾನೂನು ಸಮರ ಹೂಡಿದೆ. ಒಂದು ಇಡೀ ಭಟ್ಕಳ ಬಂದ್ ಆಚರಿಸಿ ಆ ವರದಿಗಾರ, ಸಂಪಾದಕ, ಪ್ರಕಾಶಕನನ್ನು ಬಂಧಿಸಬೇಕೆಂಬ ಬೇಡಿಕೆಯನ್ನು ಇಟ್ಟಿದೆ.
  ಒಂದು ಊರು ಪತ್ರಿಕೆಯ ಸುಳ್ಳು ವರದಿ ಬಗ್ಗೆ ಬಂದ್ ಆಚರಿಸುತ್ತಿರುವುದು ಬಹುಶ ಇದೇ ಮೊದಲು ಅನ್ನಬೇಕು. ಹಾಗೆ ಅವರು ಮಾಡಬೇಕಾದರೆ ಅಲ್ಲಿ ಜನರ ಮನಸ್ಸು ಎಷ್ಟೊಂದು ನೋವು ಆಗಿರಬಹುದು ಸ್ವಲ್ಪ ಯೋಚಿಸಿ ನೋಡಿ. ಜಗತ್ತಿನ ಯಾವ ಮೂಲೆಯಲ್ಲಿ ಭಯೋತ್ಪಾದನ ಕೃತ್ಯಗಳು ನಡೆಯಲಿ ನೇರವಾಗಿ ಅದರ ವಾಸನೆ ಭಟ್ಕಳಕ್ಕೆ ಬಡಿಯುತ್ತದೆ. ಪತ್ರಿಕೆಗಳು ಭಟ್ಕಳದ ಹೆಸರನ್ನು ಹೇಳಿ ಇಲ್ಲಿಂದಲೆ ಭಯೋತ್ಪಾದನೆ ನಡೆದಿದೆ ಎನ್ನುತ್ತವೆ. ಇಷ್ಟೊಂದು ದೊಡ್ಡ ಸುಳ್ಳು ಹೇಳುವುದು ಈ ಪತ್ರಿಕೆಗಳಿಗೆ ಬೇಕಾಗಿತ್ತ? ಅನ್ನುವುದು ನನ್ನ ಪ್ರಶ್ನೆ.
  ಇದನ್ನು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಅಲ್ಲಗೆಳೆಯುತ್ತ ಬಂದಿದ್ದಾರೆ. ಇಲ್ಲಿ ಯಾವುದೇ ಭಯೋತ್ಪಾದಕರಾಗಲಿ, ಭಯೋತ್ಪಾದನೆ ಕೃತ್ಯಗಳಾಗಲಿ ನಡೆದಿಲ್ಲ ಎಂದು ಪದೇ ಪದೇ ಸ್ಪಷ್ಟೀಕರಣ ನೀಡಿದರೂ ಅದಾವುದನ್ನು ಪ್ರಕಟಿಸದ ಪತ್ರಿಕೆಗಳು ಒಂದು ಸಮುದಾಯದ ವಿರುದ್ದ ಜನರಲ್ಲಿ ಅಪನಂಬಿಕೆ ಮೂಡುವಂತಹ ವರದಿಗಳನ್ನು ಗೀಚಿ ತಮ್ಮ ಕರ್ತವ್ಯ ಮುಗಿಯಿತು ಎಂದು ಕೈತೊಳೆದುಕೊಳ್ಳುತ್ತಾರೆ. ಇದು ಯಾಕೆ ಆಗುತ್ತಿದೆ ಎಂದರೆ ಪ್ರಮುಖ ಪತ್ರಿಕೆಗಳಲ್ಲಿನ ಪ್ರಮುಖ ಹುದ್ದೆಗಳಲ್ಲಿ ಬರೇ ಸಂಘಪರಿವಾರಿಗಳೇ ತುಂಬಿಕೊಂಡಿದ್ದು ಅವರಿಗೆ ಬಡಿದ ಹಿಂದುತ್ವದ ಹುಚ್ಚಿನಿಂದ ಇಷ್ಟೆಲ್ಲ ಅನಾಹುತಗಳನ್ನು ಸೃಷ್ಟಿಸುತ್ತಿದ್ದಾರೆ ಹೊರತು ಮತ್ತೇನು ಇದರಲ್ಲಿ ಹುರಳಿಲಿಲ್ಲ ಎನ್ನಬಹುದು.
  -ಎಂ.ಆರ್.ಮಾನ್ವಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: