ಜೈಲಲ್ಲಿ ಹುಟ್ಟಿದ ಕೃಷ್ಣ ಕಟ್ಟಿದ್ದು ಬೃಂದಾವನ

-ಅಕ್ಷತಾ ಕೆ

ps2003love-posters

ಇದೆಲ್ಲ ನಡೆಯೋದು ಹೀಗೇ ಇರಬೇಕು. ಮೊದಲಿಗೆ ಪ್ರೇಮಿಗಳ ದಿನ ಆಚರಿಸಬಾರದು ಅಂತ ವರಾತ ತೆಗೆದರು. ನಿಜ ಹೇಳಬೇಕೆಂದರೆ ಅಮ್ಮಂದಿರ ದಿನ, ಪರಿಸರ ದಿನ, ಸಸ್ಯಹಾರಿಗಳ ದಿನದ ರೀತಿಯಲ್ಲೆ ಈ ಪ್ರೇಮಿಗಳ ದಿನ ಸಹ ಅಜ್ಞಾತವಾಗಿತ್ತು. ಪ್ರೇಮಿಸುವವರು ಕಾಲ ದೇಶದ ಹಂಗಿಲ್ಲದೆ ಪ್ರೇಮಿಸುತಿದ್ದರು. ಯಾವಾಗ ಈ ವರಾತ ಶುರುವಾಯಿತೋ  ಆವಾಗ ಹಳ್ಳಿ ಮೂಲೆಯಲ್ಲಿ ತಮ್ಮ ಪಾಡಿಗೆ ತಾವೇ ರೂಪಿಸಿಕೊಂಡ ಬೃಂದಾವನದಲ್ಲಿ `ಅಕೋ ರಾಧೆ, ಅವನೇ ಶ್ಯಾಮ’ ಎಂದು ನಲಿಯುತ್ತಿದ್ದ ಜೀವಗಳಿಗೂ ಓಹೋ ನಮಗೂ ಒಂದು ದಿನವಿದೆ ಎಂಬುದು ತಿಳಿಯಿತು.

ಆದರೆ ಅದರ ಮುಂದುವರೆದ ಭಾಗ ಮಾತ್ರ ಭೀಬತ್ಸ. ಇಷ್ಟು ದಿನ ಪ್ರೇಮಿಗಳ ದಿನ ಆಚರಿಸಬಾರದು ಎಂದೆಲ್ಲ ಅಡ್ಡಿ ಮಾಡುತ್ತಿದ್ದ ಮಹಾನುಭಾವರು ಈಗ ಪ್ರೇಮಿಸಲು ಬಾರದು ಎನ್ನುತ್ತಿದ್ದಾರೆ. ಅದನ್ನು ನೇರವಾಗಿ ಹೇಳಲಾಗದೇ ಪ್ರೇಮಿಗಳ ದಿನ ಹುಡುಗ ಹುಡುಗಿ ಒಟ್ಟಿಗೆ ಕಂಡರೆ ಅವರಿಗೆ ತಾಳಿ ಕಟ್ಟಿಸುತ್ತೇವೆ, ರಾಖಿ ಕಟ್ಟಿಸುತ್ತೇವೆ ಎಂಬಂತಹ ಮಾತುಗಳನ್ನು ಆಡುತಿದ್ದಾರೆ. ಅಂತೂ ಹುಡುಗ ಹುಡುಗಿಯ ನಡುವೆ ತಾಳಿ, ರಾಖಿ ಎರಡನ್ನೂ ಕಟ್ಟಿಕೊಳ್ಳದೇ ಇರುವಂತಹ, ಇವೆರಡರ ಹಂಗಿರದ ಸ್ನೇಹ ಎಂಬುದು ಇರಲೇಬಾರದು ಎನ್ನುವಂತಹ ದುರುಳರ ಆಲೋಚನೆಯಿದು.

ಅಪ್ಪ-ಅಮ್ಮಂದಿರು ನಮ್ಮ ಹುಡುಗಿ ಆ ಹುಡುಗನ ಜೊತೆ ಅಲೀಬಾರ್ದು, ನಮ್ಮ ಹುಡುಗ ಆ ಹುಡುಗಿಯನ್ನು ಪ್ರೇಮಿಸಬಾರದು ಅಂತೆಲ್ಲ ಖ್ಯಾತೆ ತೆಗೆದರೆ, ನಮ್ಮ ಹುಡುಗಿ ಚಿನ್ನದಂತವಳು ಆ ಹುಡುಗನೇ ಏನೋ ಮಳ್ಳು ಹಚ್ಚಿದ್ದಾನೆ ಎಂದೆಲ್ಲ ಮುಳು ಮುಳು ಅತ್ತರೆ, ಹುಡುಗ ಹುಡುಗಿಗೆ ಸ್ವಲ್ಪ ಮಟ್ಟಿನ ಅಡ್ಡಿ ಆತಂಕ ಒಡ್ಡಿದರೆ ಅವರ ನೋವು, ದುಃಖ ಎಲ್ಲ ಸಹಜವಾದದ್ದು. ಅದರಲ್ಲಿ ಯಾವ ರಾಜಕೀಯ ಅಥವಾ ಬೇರೆ ರೀತಿಯ ಹಿತಾಸಕ್ತಿಗಳು ಇರುವುದಿಲ್ಲ. ಸಂಸ್ಕೃತಿಯ ಉಳಿವಿನ ಹೆಸರಲ್ಲಿ ಯಾವ ಅಪ್ಪ ಅಮ್ಮನು ತಮ್ಮ ಮಕ್ಕಳ ಪ್ರೇಮಕ್ಕೆ ಅಡ್ಡಿ ಬರುವುದಿಲ್ಲ ಬದಲಿಗೆ ಬದುಕಿನ ಅನಿವಾರ್ಯತೆ, ಆತಂಕಗಳು ತಮ್ಮ ಮಕ್ಕಳ ಪ್ರೇಮಕ್ಕೆ ಅಡ್ಡಿ ಬರಲು ಕಾರಣವಾಗಿರುತ್ತವೆ. ಅದಕ್ಕೆ ಯಾವ ಅಪ್ಪ ಅಮ್ಮನು ಟಿವಿಯಲ್ಲಿ, ಪತ್ರಿಕೆಗಳಲ್ಲಿ ಕಾಣಿಸಿಕೊಂಡು, ಘೋಷಿಸಿಕೊಂಡು ತಮ್ಮ ಮಕ್ಕಳ ಪ್ರೇಮವನ್ನು ವಿರೋದಿಸುವುದಿಲ್ಲ. ಹಾಗೆ ಅಡ್ಡಿ ಮಾಡುವ ಸಂದರ್ಭದಲ್ಲೂ ಕೂಡಾ ತಮ್ಮ ಮಗ/ಮಗಳಿಗೆ ಇದರಿಂದ ನೋವಾಗುತ್ತಿದೆ ಎಂದು ಅಪ್ಪ ಅಮ್ಮಂದಿರಿಗೆ ತಿಳಿದಿರುತ್ತದೆ. ಅವರೂ ಕೂಡಾ ತಮ್ಮ ಕಾರ್ಯಕ್ಕೆ ಒಳಗೊಳಗೆ ನೋಯುತ್ತಿರುತ್ತಾರೆ. ಅಪ್ಪ, ಅಮ್ಮ ವಿರೋಧಿಸುವುದು, ಆಶೀರ್ವದಿಸುವುದು ಎಲ್ಲ ತೀರ ವೈಯಕ್ತಿಕ ಮಟ್ಟದಲ್ಲಿ ನಡೆದುಹೋಗುತ್ತದೆ. ಅದೇ ಸಂಘಟನೆ, ಸರ್ಕಾರಗಳು  ಇಂಥದ್ದರ ಮಧ್ಯೆ ಬಂದಾಗ ಇಡೀ ವಾತಾವರಣವೇ ಅಸಹನೀಯವಾಗುತ್ತದೆ. ಜೀವ ವಿರೋಧಿಯಾಗುತ್ತದೆ.

ಲಂಕೇಶರ ‘ಕಲ್ಲು ಕರಗುವ ಸಮಯ’ದಲ್ಲಿ ಲಿಂಗಾಯಿತರ ಹುಡುಗಿ ಶ್ಯಾಮಲೆ ಬೇಡರ ಹುಡುಗ ತಿಪ್ಪಣ್ಣನನ್ನು ಪ್ರೇಮಿಸುವ ವಿಷಯ ತಿಳಿದ ಶ್ಯಾಮಲೆಯ ಅಪ್ಪ ಮಲ್ಲಯ್ಯ ಅವರಿಬ್ಬರ ಪ್ರೇಮವನ್ನು ಮುಗಿಸಲು ವಿವಿಧ ಪ್ರಯತ್ನಗಳನ್ನು ಮಾಡಿ ಸೋತು ಕೊನೆಗೆ ತಿಪ್ಪಣ್ಣನನ್ನೇ ಕೊಲ್ಲಲು ಹೊರಡುತ್ತಾನೆ. ಆದರೆ ಲಜ್ಜೆ, ಪ್ರೇಮ ತುಂಬಿದ ತಿಪ್ಪಣ್ಣನೆದುರಿಗೆ ಮಲ್ಲಯ್ಯ ತೆಗೆದುಕೊಂಡು ಹೋಗಿದ್ದ ರಿವಾಲ್ವರ್ ಅವನ ಜೇಬಿನಲ್ಲೆ ಉಳಿದರೆ, ಅವನ ಬೆದರಿಕೆ, ಬಯ್ಗುಳಗಳು ಅವನನ್ನೇ ಇನ್ನಷ್ಟು ಅಸಹಾಯಕನನ್ನಾಗಿಸುತ್ತವೆ. ತಿಪ್ಪಣ್ಣ ಈ ಘಟನೆಯನ್ನು ನೆನೆಯುತ್ತಾ ನಂತರದಲ್ಲಿ ಶ್ಯಾಮಲೆಗೆ  ` ನಿಮ್ಮ ತಂದೆಯವರನ್ನು ನೆನೆದು ಅತ್ತುಬಿಟ್ಟೆ. ಆವತ್ತು ನಮ್ಮನೆಗೆ ಬಂದಾಗ ಮೇಲುಗಡೆ ಸಿಟ್ಟಿದ್ರೂ ಅವರಿಗೆ ಒಳಗೆ ಆಗ್ತಿದ್ದ ನೋವು ನನಗೆ ಗೊತ್ತಿತ್ತು. ಎರಡು ಸಲ ತೋಟದ ಹತ್ರ ಬಂದು ಹಿಂತಿರುಗಿದೆ. ಯಾಕೆ ಅಂದ್ರೆ…  ನಾನು ನಿಮ್ಮನ್ನು `ಮದುವೆಯಾಗೋಲ್ಲ’ ಅಂದಿದ್ರೆ ಅವರಿಗೂ ಬೇಸರ ಆಗ್ತಿತ್ತು.’ ಎಂದು ಹೇಳಿದ ಮಾತೇನಿದೆ ಇದು ಮಕ್ಕಳ ಪ್ರೇಮದ ವಿಷಯದಲ್ಲಿ ಅಪ್ಪ ಅಮ್ಮನ ಮನಸ್ಥಿತಿಯನ್ನು ಹಿಡಿದಿಡುತ್ತದೆ. ಆದರೆ ಇದನ್ನೆಲ್ಲ ಯಾರಿಗೆ ಹೇಳುವುದು? ಸಾಹಿತ್ಯದ ಬಗೆಗಿರಲಿ ಬದುಕಿಗೇ ವಿರೋಧಿಗಳಾಗಿರುವವರಿಗೆ ಹೇಳುವುದಾದರೂ ಏನನ್ನು?

ಪ್ರೇಮ ನಿಜವಾಗಿದ್ದರೆ ಅದು ಸತ್ಯ, ಪ್ರಾಮಾಣಿಕತೆಯನ್ನು ಹುಟ್ಟಿಸುತ್ತದೆ. ಪ್ರೇಮಿಸಲೇಬಾರದು ಎಂದು ನಿರ್ಬಂಧ ಹೇರುವವರು ಗಮನಿಸಬೇಕಾದದ್ದು ಪ್ರೇಮವನ್ನು ಕಸಿದುಕೊಂಡರೆ ನಾವು ಅವರಿಂದ ಈ ಎಲ್ಲ ಅಂಶಗಳನ್ನು ಕಸಿದುಕೊಳ್ಳುತ್ತೇವೆ ಎಂಬುದನ್ನು. ಇನ್ನು ಯಾರದು ನಿಜವಾದ ಪ್ರೇಮ. ಯಾವುದು ನಿಜವಾದ ಪ್ರೇಮ ಎಂದೆಲ್ಲ ಪರೀಕ್ಷೆ ಮಾಡುವ ಹಕ್ಕು ಸಹ ಯಾವ ಸಂಘಟನೆ, ಸಂಸ್ಥೆಗಳಿಗೂ ಇಲ್ಲ. ಪು.ತಿ.ನ ಅವರ ಗೋಕುಲ ನಿರ್ಗಮನದಲ್ಲಿ ಗೋಪಿಯರು `ನಿಲ್ಲಿಸದಿರು ವನಮಾಲಿ ಕೊಳಲಗಾನವ ನಿಲ್ಲಿಸೇ ನೀ ಕಳೆವುದೆಂತೋ ಭವಭೀತಿಯ ಕೇಶವ’ ಎಂದು ಪದೇ ಪದೇ ಬೇಡುತ್ತಲೇ ಇರುತ್ತಾರೆ. ವನಮಾಲಿಯ ಕೊಳಲಗಾನದ ಲೋಕದಿಂದ ಹೊರಬಂದ ಕೂಡಲೇ ಭವದ ಭೀತಿ ಆ ಹೆಣ್ಣು ಮಕ್ಕಳನ್ನು ಭಾಧಿಸುತ್ತದೆ. ಅಂದಿನಿಂದ ಇಂದಿನವರೆಗೂ  ಅಧಿಕಾರದಲ್ಲಿರುವವರು ಈ ಭೀತಿಯನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ವನಮಾಲಿಯ ಕೊಳಲಗಾನ ಎನ್ನುವುದು ಏನಿದೆ ಅದೊಂದು ರೂಪಕ. ಜಗತ್ತಿನ ಕ್ಷುದ್ರತೆಯನ್ನು ಮೀರಲೋಸುಗ ಕಟ್ಟಿಕೊಂಡ ರೂಪಕ. ಇಂಥ ಹಲವು ರೂಪಕಗಳ ಜಗತ್ತನ್ನು ಹೆಣ್ಣಾದವಳು ಕಟ್ಟಿಕೊಳ್ಳುತ್ತಲೇ ಇಂಥಹ ಕ್ಷುದ್ರತನವನ್ನು ಮೀರಿ ತನಗೆ ಬೇಕಾದ ಗಂಡಿನ ಆಯ್ಕೆ, ಪ್ರೇಮ ಎಲ್ಲವನ್ನು ಪಡೆದುಕೊಳ್ಳುತ್ತಲೇ ಬಂದಿದ್ದಾಳೆ.

ಕೃಷ್ಣ ಹುಟ್ಟಿದ ದೇಶ ನಮ್ಮದು. ಆತ ಪ್ರೇಮಮಯಿ. ದ್ರೌಪದಿಯಂತಹ ಶಕ್ತಿವಂತ ಹೆಣ್ಣು ಮಗಳ ಬಹು ನೆಚ್ಚಿಗೆಯ ಗೆಳೆಯ. ಮುಗ್ದ ರಾಧೆಯ ಪ್ರೇಮಿ. ಕೃಷ್ಣ ಸೃಷ್ಟಿಸಿದ್ದು ಬೃಂದಾವನ. ಕಾರಾಗೃಹದಲ್ಲಿ ಹುಟ್ಟಿದ ಕೃಷ್ಣ ಸೃಷ್ಟಿಸಿದ್ದು ಬೃಂದಾವನ. ಆತನಿಗೆ ಮನುಷ್ಯರ ಬದುಕಿನ ಬಗ್ಗೆ ಉತ್ತಮ ಪರಿಕಲ್ಪನೆಯಿತ್ತು. ಇಲ್ಲದೇ ಹೋಗಿದ್ದರೆ ಜೈಲನ್ನೇ ನಿರ್ಮಿಸುತ್ತಿದ್ದ . ಕೃಷ್ಣ ಬೃಂದಾವನ ನಿರ್ಮಿಸಿದ. ಅಲ್ಲಿ ಗಂಡಸರಷ್ಟೆ ಹೆಣ್ಣುಮಕ್ಕಳಿಗೂ ಆದ್ಯತೆಯಿತ್ತು. ತುಸು ಹೆಚ್ಚೆ ಇತ್ತೆಂದರೂ ಸರಿಯೇ. ಕೃಷ್ಣ ರಾಧೆಯರು ಸೇರಿ ನಿಮರ್ಿಸಿದ ಬೃಂದಾವನವನ್ನು ನಾಶಪಡಿಸುವ ಅಧಿಕಾರ ಯಾರಿಗೂ ಇಲ್ಲ. ಎಷ್ಟೆ ನಾಶ ಪಡಿಸಿದ್ದೇವೆಂದು ಬೀಗಿದರೂ ಅದು ನಮ್ಮೆಲ್ಲರ ಮನದ ಮೂಲೆಯಲ್ಲಿ ರೂಪಕವಾಗಿ ಬೆಳೆಯುತ್ತಲೇ ಇರುತ್ತದೆ.

‍ಲೇಖಕರು avadhi

February 12, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

4 ಪ್ರತಿಕ್ರಿಯೆಗಳು

 1. nitin muttige

  ಬೃಂದಾವನ ಕಟ್ಟಿಸಿದ ನಾಡಿನಲ್ಲಿ ಇಂದು ಪ್ರೀತಿ “ಚಡ್ಡಿ” ಯನ್ನು ಉಡುಗೋರೆಯಾಗಿ ಕೊಡುವ ತನಕ ಬಂದಿದೆಯಲ್ಲ??

  ಬರಹ ಖುಷಿಕೊಟ್ಟಿತು.

  ಪ್ರತಿಕ್ರಿಯೆ
 2. minchulli

  nimma baraha premadashte saviyaagide ide akshatha… keep going…

  btw, happy valantines day……

  love,
  shama,nandibetta

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: