ಜೋಗಿಮನೆ : ಆ ಒಂದು ಕ್ಷಣದಲ್ಲಿ ಕಳೆದುಕೊಂಡಿದ್ದೇನು ಅನ್ನುವುದು..

ಅವನು ತಾಯಿ, ಅವನೇ ತಂದೆ: ಹೆಣ್ಣೂ ಗಂಡೂ ಒಂದೇ – ಜೋಗಿ ಜೋಗಿಮನೆ

ಪ್ರೆಗ್ನೆಂಟ್ ಕಿಂಗ್ ನಾಟಕದ ಒಂದು ದೃಶ್ಯ

  ಕೆಲವೊಂದು ಕ್ಷಣಗಳು ನಮಗೇ ಗೊತ್ತಿಲ್ಲದ ಹಾಗೆ ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತವೆ. ಯಾರ ಜತೆಗೋ ಮಾತಾಡುತ್ತಾ ಕೂತಿರುತ್ತೀರಿ. ಅವರು ತುಂಬ ಆಸಕ್ತಿಪೂರ್ಣವಾಗಿ ಮಾತಾಡುತ್ತಿದ್ದಾರೆ. ಆ ಮಾತಿನ ನಡುವೆಯೇ ನಿಮಗೆ ಇನ್ನಿಲ್ಲದ ನಿದ್ದೆ ಬಂದುಬಿಡುತ್ತದೆ. ಒಂದೇ ಕ್ಷಣ. ಮತ್ತೆ ಥಟ್ಟನೆ ಎಚ್ಚರವಾಗುತ್ತದೆ. ಆ ಒಂದು ಕ್ಷಣದಲ್ಲಿ ಕಳೆದುಕೊಂಡಿದ್ದೇನು ಅನ್ನುವುದು ಮಾತ್ರ ಯಾವತ್ತೂ ಗೊತ್ತಾಗುವುದೇ ಇಲ್ಲ.   ಅಂಥದ್ದೊಂದು ವಿಸ್ಮೃತಿ ನಿದ್ದೆಯ ರೂಪದಲ್ಲಿ ಬರಬಹುದು, ಅನ್ಯಮನಸ್ಕತೆಯಾಗಿ ಬರಬಹುದು. ಅದೇಕೆ ಹಾಗಾಗುತ್ತದೆ ಅಂತ ಹೇಳಲಾಗದು. ಒಮ್ಮೆ ಸ್ವಿಚ್ ಆ- ಮಾಡಿ ಥಟ್ಟನೆ ಆನ್ ಮಾಡಿದಂತೆ. ಆ ಒಂದು ಕ್ಷಣದಲ್ಲಿ ಕಳಕೊಂಡದ್ದನ್ನು ಮತ್ತೆ ಪಡಕೊಳ್ಳಲಾಗುವುದೇ ಇಲ್ಲ. ಇಡೀ ಜೀವನದಲ್ಲಿ ಪಡಕೊಂಡದ್ದಕಿಂತ ಹೆಚ್ಚಿನದು ಕಳಕೊಂಡ ಆ ಒಂದು ಕ್ಷಣದಲ್ಲಿತ್ತೇನೋ ಎಂಬ ಕಳವಳ.   ದೂರ ಪ್ರಯಾಣಗಳಲ್ಲಿ ಹಾಗಾಗುತ್ತದೆ. ಅದಕ್ಕೇ ನಾವು ಕೆಲವೊಂದು ಕೆಲಸಗಳನ್ನು ಒಂಟಿಯಾಗಿಯೇ ಮಾಡಬೇಕು. ಪ್ರವಾಸ, ಓದು, ಧ್ಯಾನ ಮತ್ತು ಪ್ರಾರ್ಥನೆ- ಏಕಾಂತದಲ್ಲೇ -ಲಿಸುತ್ತದೆ. ತುಂಬ ಮಂದಿಯನ್ನು ಕಟ್ಟಿಕೊಂಡು ಪ್ರವಾಸ ಹೋದರೆ ನಿಮಗೆ ಅದು ಅನ್ಯದೇಶ ಅನ್ನಿಸುವುದೇ ಇಲ್ಲ. ಮನೆಯಲ್ಲೋ ನಿಮ್ಮೂರಲ್ಲೇ ಇದ್ದಂತೆಯೇ ಭಾಸವಾಗುತ್ತದೆ. ಓದು ಕೂಡ ಅಷ್ಟೇ. ಗುಂಪಿನಲ್ಲಿ ಓದುತ್ತಾ ಕೂತರೆ ಪಾತ್ರಗಳು ನಿಮ್ಮೊಳಗೆ ಇಳಿಯಲು ನಿರಾಕರಿಸುತ್ತವೆ. ಅವು ರಂಜನೆ ನೀಡುತ್ತವೆ. ಪಾತ್ರಗಳಷ್ಟೇ ಆಗುತ್ತವೆ. ನಿಮ್ಮ ಮೈಮೇಲೆ ಅವು ಆವಾಹನೆ ಆಗುವುದಿಲ್ಲ. ನಮ್ಮೊಳಗೆ ದೇವರು ಬರುವ ಹಾಗೆ ಪಾತ್ರಗಳು ಬಾರದೇ ಹೋದಾಗ ಯಾವ ಕೃತಿಯೂ ನಮಗೆ ಆಪ್ತವಾಗುವುದಿಲ್ಲ. ಅರ್ಥವೂ ಆಗುವುದಿಲ್ಲ. ಆ ಪಾತ್ರದ ತುಮುಲ, ಸಂಘರ್ಷ ಮತ್ತು ತಾತ್ವಿಕತೆ ನಮ್ಮದಾಗುವುದಿಲ್ಲ.   ಒಂದು ಪಾತ್ರದ ದ್ವಂದ್ವ ನಮ್ಮದಾಗುವುದು ಹೇಗೆ? ಆ ಪಾತ್ರವನ್ನು ಕಾಡುವ ಪ್ರಶ್ನೆ ನಮ್ಮನ್ನೂ ಕಾಡಬೇಕು? ಒಂದು ಪುಟ್ಟ ಕತೆ ಕೇಳಿ. ಆತ ತಾಯಿಗೆ ಒಬ್ಬನೇ ಮಗ. ತಾಯಿ ಅವನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಾಳೆ. ಅವನು ಬೆಳೆದು ಯುವಕನಾಗಿದ್ದಾನೆ. ತಾಯಿಗೆ ವಯಸ್ಸಾಗಿದೆ.   ಅದೇ ಹೊತ್ತಿಗೆ ಆ ನಾಡಿಗೊಂದು ವಿಪತ್ತು ಬಂದು ಒದಗುತ್ತದೆ. ವೈರಿಗಳು ಮುತ್ತಿಗೆ ಹಾಕಿ ನಾಡನ್ನು ಕಬಳಿಸಲು ಸಂಚು ಹೂಡಿದ್ದಾರೆ. ಎಲ್ಲಾ ಯುವಕರೂ ಯುದ್ಧದಲ್ಲಿ ಭಾಗವಹಿಸಬೇಕು ಎಂದು ರಾಜ ವಿನಂತಿ ಮಾಡಿಕೊಳ್ಳುತ್ತಾನೆ.   ಈತನನ್ನು ದ್ವಂದ್ವ ಕಾಡುತ್ತದೆ. ತಾನೀಗ ಏನು ಮಾಡಬೇಕು. ತಾಯಿಯ ಜೊತೆಗಿದ್ದು ಆಕೆಯ ಆರೈಕೆ ಮಾಡಬೇಕಾ? ನಾಡಿಗಾಗಿ ಹೋರಾಡಿ ನಾಡನ್ನು ಕಾಪಾಡಬೇಕಾ? ತಾಯಿಯೋ ತಾಯಿನಾಡೋ? ಈ ಕತೆ ಇಲ್ಲಿಗೇ ನಿಂತರೆ, ನಾವು ಆ ಕತೆಯೊಳಗೆ ಹೋಗಿಬಿಟ್ಟರೆ ಆತನ ಧ್ವಂದ್ವ ನಮ್ಮದೂ ಆಗುತ್ತದೆ. ಇದಕ್ಕೆ ಕತೆಗಾರ ಕೊಟ್ಟ ಉತ್ತರ ಏನೇ ಆಗಿರಬಹುದು. ನಮ್ಮ ಉತ್ತರ ಬೇರೆಯೇ ಆಗಿರಬಹುದು. ಇವತ್ತಿನ ಸಂದರ್ಭದಲ್ಲಿ ಈ ಕೆಟ್ಟ ರಾಜಕೀಯ ವ್ಯವಸ್ಥೆ ಕಂಡು ರೋಸಿಹೋದ ಮಗ ತಾಯಿಯೇ ಸಾಕು ಅನ್ನಬಹುದು. ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಬದುಕಿದ್ದ ಯುವಕ, ತಾಯಿನಾಡೇ ಶ್ರೇಷ್ಟ ಎಂದು ಭಾವಿಸಿದ್ದಿರಬಹುದು. ಕಾಲಕಾಲಕ್ಕೆ ಉತ್ತರಗಳು ಬದಲಾಗುತ್ತಾ ಹೋಗುತ್ತವೆ. ಓದುಗನೊಳಗೂ!   ಹೀಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ ಕತೆಯೊಂದು ಕಣ್ತಪ್ಪಿನಿಂದ ನನ್ನೊಳಗೇ ಇಳಿದಿರಲಿಲ್ಲ. ಇತ್ತೀಚೆಗೆ ದೇವದತ್ತ್ ಪಟ್ಟನಾಯ್ಕ್ ನಾಟಕ ಬರೆಯುವ ತನಕ ಅದರ ಸಂಘರ್ಷ ಕೂಡ ಹೊಳೆದಿರಲಿಲ್ಲ. ಎಷ್ಟೋ ಸಾರಿ ಕೇಳಿದ, ಓದಿದ ಕತೆಯೇ ಆಗಿದ್ದರೂ ಅದರ ಸೂಕ್ಷ್ಮ ತಿಳಿದುಕೊಳ್ಳುವುದು ಕಷ್ಟ. ನಮ್ಮ ಉಡಾ- ಮತ್ತು ಅನ್ಯಮನಸ್ಕತೆ ಬಹಳಷ್ಟು ಸಲ ನಮ್ಮ ದಾರಿ ತಪ್ಪಿಸುತ್ತದೆ. ಅದೊಂದು ಸರಳವಾದ, ಮೂಢನಂಬಿಕೆಯ ಕತೆ ಅಂದುಕೊಂಡು ನಾವು ಸುಮ್ಮನಾಗುತ್ತೇವೆ. ಆದರೆ ನಮ್ಮ ಪುರಾಣದ ಪ್ರತಿಯೊಂದು ಕತೆಯೂ ಉಪಕತೆಯೂ ವಿಚಿತ್ರವಾದ ಶಕ್ತಿಯಿದೆ. ಅದು ತನ್ನೊಳಗೆ ನಮ್ಮ ಚಿಂತನೆಯನ್ನೇ ಬದಲಾಯಿಸಬಲ್ಲ ಪ್ರಶ್ನೆಯೊಂದನ್ನು ಹುದುಗಿಟ್ಟುಕೊಂಡಿರುತ್ತದೆ.   ಈ ಕತೆ ನೋಡಿ: ಆಗಷ್ಟೇ ಮದುವೆ ಆಗಿರುವ ದಂಪತಿಯ ಕತ್ತನ್ನು ಐಂದ್ರಜಾಲಿಕನೊಬ್ಬ ಕತ್ತರಿಸುತ್ತಾನೆ. ಅವನು ಪ್ರಕಾಂಡ ಮಾಯಾವಿ. ಹಾಗೆ ಕತ್ತರಿಸಿದ ಕತ್ತನ್ನು ಅವನು ಮರಳಿ ಜೋಡಿಸುತ್ತಾನೆ. ಹಾಗೆ ಜೋಡಿಸುವ ಹೊತ್ತಿಗೆ ಒಂದು ಸಣ್ಣ ತಪ್ಪು ನಡೆದುಹೋಗುತ್ತದೆ. ಹೆಂಡತಿಯ ತಲೆಯನ್ನು ಗಂಡನಿಗೂ ಗಂಡನ ತಲೆಯನ್ನು ಹೆಂಡತಿಗೂ ಜೋಡಿಸಿಬಿಟ್ಟಿದ್ದಾನೆ ಜಾದೂಗಾರ.   ಈಗ ಹೇಳಿ, ಹೆಂಡತಿ ಯಾರು? ಗಂಡ ಯಾರು? ಗಂಡಸಿನ ತಲೆಯಿದ್ದವನೇ? ಅವನ ದೇಹ ಹೆಣ್ಣಿನದು. ಅವನು ಗರ್ಭ ಧರಿಸಬಲ್ಲ, ಹೆರಬಲ್ಲ. ಮಗುವಿಗೆ ಅವನು ತಾಯಿ. ಜಗತ್ತಿನ ಪಾಲಿಗೆ ಆ ಮಗುವಿನ ತಂದೆ. ಒಂದರ್ಥದಲ್ಲಿ ತಂದೆಯೂ ಹೌದು, ತಾಯಿಯೂ ಹೌದು. ಆದರೆ ತಂದೆಯೆಂದರೆ ತಂದೆಯಲ್ಲ. ಆ ಮಗುವಿನ ಜನ್ಮಕ್ಕೆ ಕಾರಣಳಾದದ್ದು ತಾಯಿ. ತಾಯಿ ಮುಖದ ತಂದೆ, ತಂದೆ ಮುಖದ ತಾಯಿ. ನಿರ್ಧಾರ ಮಾಡಬೇಕಾದವರು ಯಾರು? ಅಽಕಾರ ಯಾರಿಗೆ ಜಾಸ್ತಿ? ತಂದೆಯಂತೆ ಕಾಣುತ್ತಿರುವ ನನ್ನ ತಾಯಿಯೇ ಎಂದು ಮಗು ತಾಯಿಯನ್ನು ಕರೆಯಬೇಕು!   -೨-   ಇದಕ್ಕಿಂತ ವಿಚಿತ್ರವಾದ ಕತೆಯೊಂದು ಮಹಾಭಾರತದಲ್ಲಿದೆ. ಅವನ ಹೆಸರು ಯವನಾಶ್ವ. ಅವನಿಗೆ ನೂರಾರು ಮಂದಿ ರಾಣಿಯರು. ಆದರೂ ಅವನಿಗೆ ಮಕ್ಕಳಾಗಿಲ್ಲ. ಅದರಿಂದಾಗಿ ಬೇಸರಗೊಂಡ ಆತ ಭೃಗು ಮುನಿಗಳ ಬಳಿ ಪರಿಹಾರ ಕೇಳುತ್ತಾನೆ. ಭೃಗು ಮುನಿಗಳು ಪುತ್ರಕಾಮೇಷ್ಠಿ ಯಾಗ ಮಾಡುವಂತೆ ಹೇಳುತ್ತಾರೆ. ಅದಕ್ಕೊಪ್ಪುವ ಯವನಾಶ್ವ, ಯಾಗ ಮಾಡುತ್ತಾನೆ. ಭೃಗು ಮುನಿಗಳೇ ಯಾಗ ನಡೆಸಿಕೊಡುತ್ತಾರೆ. ಯಾಗದ ನಡುವೆ ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ಕಮಂಡಲದಲ್ಲಿ ಇಟ್ಟಿರುತ್ತಾರೆ ಭೃಗು. ತುಂಬ ದಾಹವಾಯಿತೆಂದು ಆ ನೀರಿನ ಮಹತ್ವ ತಿಳಿಯದೇ ಯವನಾಶ್ವ ಅದನ್ನು ಕುಡಿದುಬಿಡುತ್ತಾನೆ.   ಕಾಲಕ್ರಮೇಣ ಅವನೇ ಒಂದು ಮಗುವಿಗೆ ಜನ್ಮನೀಡುತ್ತಾನೆ. ಆ ಮಗುವಿನ ಹೆಸರು ಮಾಂಧಾತ. ಮಾಂಧಾತನಿಗೆ ಯವನಾಶ್ವ ತಾಯಿಯೂ ಹೌದು ತಂದೆಯೂ ಹೌದು. ಎರಡು ಪೂರಕವಾದ ಮತ್ತು ವಿರುದ್ಧವಾದ ಶಕ್ತಿಗಳು ಒಂದೇ ಬಿಂದುವಿನಲ್ಲಿ ಸಂಽಸಿದಾಗ ಏನಾಗಬಹುದು? ಬೀಜ ಮತ್ತು ಭೂಮಿ ಒಂದೇ ಆದ ಅಪೂರ್ವ ಸಂಗಮದ -ಲ ಅದು. ತಂದೆಯೂ ಅವನೇ ತಾಯಿಯೂ ಅವನೇ. ಮಾಂಧಾತ ಅವನನ್ನು ಏನಂತ ಕರೆಯಬೇಕು? ಅಮ್ಮ ಅಂದರೂ ತಪ್ಪಿಲ್ಲ, ಅಪ್ಪ ಎಂದರೂ ತಪ್ಪಿಲ್ಲ.   ಯವನಾಶ್ವ ಹೇಳುತ್ತಾನೆ. ನಾನು ಗಂಡಸಾ, ಗೊತ್ತಿಲ್ಲ. ನನಗೇ ಖಚಿತವಿಲ್ಲ. ಗಂಡಸಿನ ಹಾಗೆ ನನ್ನ ದೇಹದ ಆಚೆ ನಾನು ಜೀವವೊಂದನ್ನು ಸೃಷ್ಟಿಸಿದ್ದೇನೆ. ಅದೇ ಹೊತ್ತಿಗೆ, ಆ ಜೀವ ಹೆಣ್ಣಿನಲ್ಲಾಗುವಂತೆ ನನ್ನೊಳಗೇ ಸೃಷ್ಟಿಯಾಗುತ್ತಿದೆ. ಹಾಗಿದ್ದರೆ ನಾನು ಏನಾದ ಹಾಗಾಯಿತು?   ಅದು ಯವನಾಶ್ವನ ಪ್ರಶ್ನೆ. ಇದು ಬಂಧನವೋ ಬಿಡುಗಡೆಯೋ ಗೊತ್ತಾಗುತ್ತಿಲ್ಲ ಅನ್ನುತ್ತಾನೆ ಅವನು. ಈ ಮಧ್ಯೆ ಅವನ ತಾತ್ವಿಕ ಪ್ರಶ್ನೆ, ರಾಜತಾಂತ್ರಿಕ ಪ್ರಶ್ನೆಯೂ ಬರುತ್ತದೆ. ಮಕ್ಕಳಿಲ್ಲದವನು ರಾಜನಾಗುವಂತಿಲ್ಲ. ಅದು ನಿಯಮ. ಹೀಗಾಗಿ ಪಟ್ಟವೇರುವುದಕ್ಕೆ ಅವನಿಗೆ ಮಗ ಬೇಕೇ ಬೇಕು. ಯವನಾಶ್ವನಿಗೆ ಕೊನೆಗೂ ಮಗ ಹುಟ್ಟುತ್ತಾನೆ. ಆದರೆ ಯವನಾಶ್ವ ತಂದೆಯಾದನೋ ತಾಯಿಯಾದಳೋ? ತಾಯಿಯಾದರೆ ಅವಳು ಪಟ್ಟವೇರುವಂತಿಲ್ಲ. ಹೆಣ್ಣಿಗೆ ಪಟ್ಟದ ಹಕ್ಕಿಲ್ಲ. ತಂದೆಯಾದರೆ ಮಗುವನ್ನು ಹೊತ್ತು ಹೆತ್ತದ್ದು ಹೇಗೆ?   ಈ ದ್ವಂದ್ವಕ್ಕೆ ಉತ್ತರವೇ ಇಲ್ಲವೇ?   -೩-   ಹೆಣ್ಣು ಗಂಡಿನ ಸಂಬಂಧ, ಪರಸ್ಪರ ಇಬ್ಬರೂ ಒಂದೇ ಆಗುವ ಪವಾಡ, ಇಬ್ಬರೂ ಒಬ್ಬರೇ ಆಗಬೇಕಾದ ಅನಿವಾರ್ಯತೆ, ಕಂಪ್ಯಾಟಿಬಿಲಿಟಿಯ ಪ್ರಶ್ನೆ, ಹೊರಗೆ ಸೃಷ್ಟಿಸುವುದು ಮತ್ತು ಒಳಗೇ ಸೃಷ್ಟಿಸುವದಕ್ಕಿರುವ ವ್ಯತ್ಯಾಸ- ಇವನ್ನೆಲ್ಲ ಈ ಕತೆ ಎಷ್ಟು ಸೊಗಸಾಗಿ ಹೇಳುತ್ತದೆ ನೋಡಿ. ಬಹುಶಃ ಇದನ್ನು ಇಡಿಯಾಗಿ ಅರ್ಥ ಮಾಡಿಕೊಂಡರೆ ಗಂಡ ಹೆಂಡತಿ ನಡುವೆ ಜಗಳವೇ ಹುಟ್ಟಲಿಕ್ಕಿಲ್ಲ. ಭಾವನಾತ್ಮಕ ವ್ಯತ್ಯಾಸಗಳನ್ನು ಮಾತ್ರವಲ್ಲ, ದೈಹಿಕವಾದ ಅಂತರವನ್ನೂ ಕೂಡ ನಗಣ್ಯ ಎಂಬಂತೆ ತಳ್ಳಿಹಾಕಿ ತಮಾಶೆ ನೋಡುವ ಕತೆಯಿದು. ಇಲ್ಲಿ ಮೇಲು ಕೀಳಿನ ಪ್ರಶ್ನೆಯಿಲ್ಲ. ಅಹಂಕಾರದ ಪ್ರಸ್ತಾಪವಿಲ್ಲ. ನೂರು ಹೆಂಡಿರ ಪೈಕಿ ಯಾರೂ ತಾಯಿಯಲ್ಲ. ಹುಟ್ಟಿದ ಮಗ ಎಲ್ಲರಿಗೂ ಮಗ, ಯಾರಿಗೂ ಮಗನಲ್ಲ. ಹೀಗಾಗಿ ಅವರ ನಡುವೆಯೂ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಯಾರೊಬ್ಬರೂ ರಾಜಮಾತೆ ಎಂದು ಹೆಮ್ಮೆ ಪಡುವಂತಿಲ್ಲ. ರಾಜನೂ ಅವನೇ ರಾಣಿಯೂ ಅವನೇ ಮುಂದೊಂದು ದಿನ ರಾಜಮಾತೆಯೂ ಅವನೇ.   ಗಂಡ ಹೆಂಡತಿ ಜಗಳ ಆಡುವುದಕ್ಕೆ ಏನು ಕಾರಣವೋ ಗೊತ್ತಿಲ್ಲ. ತನ್ನನ್ನು ಈತ ಕಡೆಗಣಿಸುತ್ತಿದ್ದಾನೆ ಎಂದು ಅವಳಿಗೆ ಬೇಸರ ಎನ್ನುತ್ತಾನೆ ಅವನು. ತುಂಬ ಅನ್ಯೋನ್ಯವಾಗಿದ್ದಾಗ ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ ಅಂತ ಅವನು. ಅದೂ ಒಂದು ಅರ್ಥದಲ್ಲಿ ಸರಿಯೇ ಅನ್ನಬಹುದಾದರೂ ಅಂಥ ಅನ್ಯೋನ್ಯತೆ ತಾನಾಗಿಯೇ ಸಾಧ್ಯವಾಗಬೇಕು. ನಮ್ಮ ಹಿರಿಯ ಮಿತ್ರರೊಬ್ಬರು ಅಪರಿಚಿತರನ್ನು ಯಾವತ್ತೂ ಪೂರ್ವಾನುಮತಿಯಿಲ್ಲದೇ ಭೇಟಿ ಆಗುತ್ತಿರಲಿಲ್ಲ. ಅವರು ಅದಕ್ಕೆ ಕೊಡುತ್ತಿದ್ದ ಕಾರಣ ಒಂದೇ- ಅಪರಿಚಿತರು ಬಂದಾಗ ನಾವು ಅತೀವ ಎಚ್ಚರದ ಸ್ಥಿತಿಯಲ್ಲಿರಬೇಕಾಗುತ್ತದೆ. ನಮ್ಮ ಪಾಡಿಗೆ ನಾವಿರೋದಕ್ಕೆ ಸಾಧ್ಯ ಆಗೋದಿಲ್ಲ. ಅವರು ಬರುತ್ತಿದ್ದಂತೆ ಎದ್ದು ನಿಲ್ಲಬೇಕು. ನಮಸ್ಕಾರ ಅನ್ನಬೇಕು. ಅವರನ್ನು ಓಲೈಸುತ್ತಲೇ ಇರಬೇಕು. ಆದರೆ ಆತ್ಮೀಯರು ಬಂದಾಗ ನಾವು ಹೇಗಿದ್ದೀವೋ ಹಾಗೇ ಮುಂದುವರೀಬಹುದು.   ಆತ್ಮೀಯತೆಯ ವ್ಯಾಖ್ಯಾನ ಅಂದರೆ ಅದೇ. ಒಂದು ಮಧುರವಾದ ಸಂಬಂಧ ಏನನ್ನೂ ನಿರೀಕ್ಷಿಸುತ್ತಿರುವುದಿಲ್ಲ. ಹುಟ್ಟುಹಬ್ಬಕ್ಕೊಂದು ಹಾರೈಕೆ ಹೇಳಲಿಲ್ಲ, ನಾನು ಒಳಗೆ ಬಂದಿದ್ದನ್ನು ನೀನು ಗಮನಿಸಲೇ ಇಲ್ಲ, ಗುಡ್ ಮಾರ್ನಿಂಗ್ ಹೇಳಲಿಲ್ಲ ಎಂದೆಲ್ಲ ಸಂಗಾತಿ ರೇಗಿದರೆ ಅದೊಂದು ಕೃತಕ ಸಂಬಂಧ. ಅಕ್ಕರೆಯೂ ಆಪ್ತತೆಯೂ ಇದ್ದರೆ ಅವರು ಬಂದದ್ದೂ ಹೋದದ್ದೂ ನಮ್ಮ ಗಮನಕ್ಕೇ ಬರಕೂಡದು. ಬಂದರೂ ಅದು ತಂಗಾಳಿಯ ಹಾಗೆ, ಹೂವಿನ ಪರಿಮಳದ ಹಾಗಿರಬೇಕು. ನಮ್ಮನ್ನು ಅದು ಮುದಗೊಳಿಸಬೇಕೇ ಹೊರತು, ನಮ್ಮ ಗಮನವನ್ನು ತನ್ಮಯತೆಯನ್ನು ಬೇಡುವಂತಿರಬಾರದು.   ನಾನೇ ತಾಯಿ, ನಾನೇ ತಂದೆ ಅನ್ನುವ ಸ್ಥಿತಿಗೆ ಪ್ರತಿ ಗಂಡೂ, ಪ್ರತಿ ಹೆಣ್ಣೂ ಭಾವನಾತ್ಮಕವಾಗಿ ತಲುಪಲು ಸಾಧ್ಯವಾ ಅಂತ ಯೋಚಿಸಿದೆ. ಅದು ಅರ್ಧನಾರೀಶ್ವರತ್ವ ಅಲ್ಲ. ಅಲ್ಲಿ ಬೇಧವೇ ಇಲ್ಲ. ಹೊರರೂಪದಲ್ಲಿ ಯಾವ ಬದಲಾವಣೆಯೂ ಆಗಿರುವುದಿಲ್ಲ. ಬದಲಾಗಿರುವುದು ಒಳಜಗತ್ತು. ಸೃಜನಶೀಲತೆ ಮತ್ತು ಕರ್ತೃತ್ವಶಕ್ತಿ ಮಾತ್ರ.]]>

‍ಲೇಖಕರು G

June 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

೧ ಪ್ರತಿಕ್ರಿಯೆ

 1. D.RAVI VARMA

  ಒಂದು ಮಧುರವಾದ ಸಂಬಂಧ ಏನನ್ನೂ ನಿರೀಕ್ಷಿಸುತ್ತಿರುವುದಿಲ್ಲ. ಹುಟ್ಟುಹಬ್ಬಕ್ಕೊಂದು ಹಾರೈಕೆ ಹೇಳಲಿಲ್ಲ, ನಾನು ಒಳಗೆ ಬಂದಿದ್ದನ್ನು ನೀನು ಗಮನಿಸಲೇ ಇಲ್ಲ, ಗುಡ್ ಮಾರ್ನಿಂಗ್ ಹೇಳಲಿಲ್ಲ ಎಂದೆಲ್ಲ ಸಂಗಾತಿ ರೇಗಿದರೆ ಅದೊಂದು ಕೃತಕ ಸಂಬಂಧ. ಅಕ್ಕರೆಯೂ ಆಪ್ತತೆಯೂ ಇದ್ದರೆ ಅವರು ಬಂದದ್ದೂ ಹೋದದ್ದೂ ನಮ್ಮ ಗಮನಕ್ಕೇ ಬರಕೂಡದು. ಬಂದರೂ ಅದು ತಂಗಾಳಿಯ ಹಾಗೆ, ಹೂವಿನ ಪರಿಮಳದ ಹಾಗಿರಬೇಕು. ನಮ್ಮನ್ನು ಅದು ಮುದಗೊಳಿಸಬೇಕೇ ಹೊರತು, ನಮ್ಮ ಗಮನವನ್ನು ತನ್ಮಯತೆಯನ್ನು ಬೇಡುವಂತಿರಬಾರದು.
  ನಾನೇ ತಾಯಿ, ನಾನೇ ತಂದೆ ಅನ್ನುವ ಸ್ಥಿತಿಗೆ ಪ್ರತಿ ಗಂಡೂ, ಪ್ರತಿ ಹೆಣ್ಣೂ ಭಾವನಾತ್ಮಕವಾಗಿ ತಲುಪಲು ಸಾಧ್ಯವಾ ಅಂತ ಯೋಚಿಸಿದೆ. ಅದು ಅರ್ಧನಾರೀಶ್ವರತ್ವ ಅಲ್ಲ. ಅಲ್ಲಿ ಬೇಧವೇ ಇಲ್ಲ. ಹೊರರೂಪದಲ್ಲಿ ಯಾವ ಬದಲಾವಣೆಯೂ ಆಗಿರುವುದಿಲ್ಲ. ಬದಲಾಗಿರುವುದು ಒಳಜಗತ್ತು. ಸೃಜನಶೀಲತೆ ಮತ್ತು ಕರ್ತೃತ್ವಶಕ್ತಿ ಮಾತ್ರ.
  ಜೋಗಿ, ಸರ್.
  ನಮಸ್ಕಾರ. ನಿಮ್ಮ ಲೇಖನ ನನ್ನನ್ನು ತುಂಬಾ ಕಾಡುತ್ತಿದೆ. ಇಲ್ಲಿ ನೀವು ಬರೆದಿರುವ ಹೆಣ್ಣು ಗಂಡಿನ ಸಂಭಂದಗಳು ,ಹಿಂದಿನ ಕಾಲದ ಹೆಣ್ಣು ಗಂಡಿನ ಸಂಭಂದಗಳಿಗೂ ಅಜ ಗಜಾಂತರ ವ್ಯತ್ಯಾಸವಿದೆ ಅನಿಸುವುದಿಲ್ಲವೇ,ಅಸ್ತೆಲ್ಲ ದೂರ ಏಕೆ .ನಮ್ಮಮ್ಮ ,ಅಪ್ಪರ ಬದುಕಿಗೂ ,ಇಂದಿನ ನಮ್ಮ ಬದುಕಿಗೂ ಕೂಡ ಎಲ್ಲೋ ದೊಡ್ಡ ಗ್ಯಾಪ್ ಇದೆಯಲ್ಲವೇ, ಅಲ್ಲಿ ಏನು ಇರಲಿಲ್ಲ,ಆದರೆ ಎಲ್ಲವು ಇತ್ತು, ಇಲ್ಲಿ ಈಗ ಎಲ್ಲವು ಇದೆ,ಆದರೆ ಏನು ಇಲ್ಲ ಇಲ್ಲೊಬ್ಬ ತಾನು ತನ್ನ ಹೆಂಡತಿಗೆ ಎಲ್ಲವನ್ನು ಮಾಡಿಕೊಟ್ಟೆ,ಮನೆ,ಒಡವೆ,ಅಲೆದಾಟ, ಆದರೆ ಆಕೆ ತನಗೆನನ್ನು ಕೊಡಲಿಲ್ಲ ಎಂದು ಹಳಹಳಿಸುತ್ತಾನೆ .ನನಗೆ ಮತ್ತೆ ಮತ್ತೆ ಕದುವಪ್ರಸ್ನೆ ಎಂದರೆ ಬೇಂದ್ರೆ ಕಾವ್ಯದಲ್ಲಿ ಬರುವ ಹೆಂಡತಿ ಹೇಳುವ ಹಾಗೆ ” ನಾನು ಬಡವಿ ಆತ ಬಡವ ಒಲವೆ ನಮ್ಮಬದುಕು .ಆತ ಕೊಟ್ಟ ವಡವೆ”” ವಸ್ತ್ರ ತೊಲ್ಗ್ಲಿಗೆ,ತೋಳಬಂದಿ,ಕೆನ್ನೆ ತುಂಬಾ ಮುತ್ತು ” ಅಥವಾ ದೂರದಬೆಟ್ಟದ ಹಾಡಿನಂತೆ “ಪ್ರೀತಿನೆ ಆ ದ್ಯಾವ್ರು ತಂದ ಅಸ್ತಿ ನಮ್ಮ ಬಾಳ್ವೆಗೆ,ಹಸಿವಿನಲ್ಲೂ ಹಬ್ಬನೆ, ದಿನವು ನಿತ್ಯವೂ ಗಾಯಿರೀ, ನನ್ನ ನಿನ್ನ ಬಾಳ್ವೆಗೆ,” ಈ ಎಲ್ಲವು ಬರೀ ಕಾವ್ಯಕ್ಕೆ ಮಾತ್ರ ಸೀಮಿತವಾದ ಬದುಕೇ, ಏಕೆಂದರೆ ನಾನು ನೋಡುತ್ತಿರುವ, ನನಗೆ ಕಾಣುತ್ತಿರುವ ಬದುಕಿನಲ್ಲಿ ಆ ಸಂಭಂದಗಳ ಆತ್ಮೀಯತೆ ಆಗಲಿ,ಅನ್ಯೊಂನತೆಯಾಗಲಿ ಒಳ ಮತ್ತು ಹೊರ ಬದುಕು ಇಲ್ಲಿ tisilodeyuvude ಇಲ್ಲ, ಎಲ್ಲ ಖಾಲಿ ಖಾಲಿ , ಹಾಗಂತ ಬದುಕು ನಿಂತಿಲ್ಲ , ಚಲನತೆ ಇದೆ,ಹುಟ್ಟು ಸಾವುಗಳ ಪ್ರಕ್ರಿಯೆಯು ಇದೆ, ಆದರೆ……..ಅದ್ಯಾಕೆ ಬದುಕು ಕುಯಿಗೊಡ್ತ್ತಿದೆ, ನನ್ನನ್ನು ಕಾಡುತ್ತಲೇ ಇದೆ.
  ನಿಮ್ಮ ಬರಹ ನನಗೆ ಅದು ಬರಹ ಅನ್ನಿಸುವುದಿಲ್ಲ, ಇಲ್ಲೇ ನಮ್ಮ ಪಕ್ಕದಲ್ಲಿ ಕೂತು ಒಂದು ಪಿಸುಮಾತು,ಒಂದು ಹಳಹಳಿಕೆ, ಒಂದು ಸಾಂತ್ವನ, ಮುದಗೊಳಿಸುವ ಕಥೆ ಎಲ್ಲವು ಇದೆ ನಿಮ್ಮಬರಹಕ್ಕೆ,ಚಿಂತನೆಗೆ ,ಬದುಕಿನ ಅದಮ್ಯ ಪ್ರೀತಿಗೆ ನನ್ನ ಪ್ರೀತಿಪೂರ್ವಕ ವಂದನೆಗಳು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: