ಜೋಗಿಮನೆ : ನಮ್ಮೂರ ಬಂಡಿ­ಯಲಿ ನಿಮ್ಮೂರ ಬಿಟ್ಟಾಗ….

ನಮ್ಮೂರ ಬಂಡಿ­ಯಲಿ ನಿಮ್ಮೂರ ಬಿಟ್ಟಾಗ…. 

– ಜೋಗಿ

ಉಪ್ಪಿನಂಗಡಿಯನ್ನು ಮುಂದಿಟ್ಟುಕೊಂಡು ಹೊರಟವನಿಗೆ ನೂರೆಂಟು ಪ್ರಶ್ನೆಗಳು. ಒಂದೇ ಹಿಡಿತಕ್ಕೆ ಕೈಗೆ ಸಿಗುವ ಊರಲ್ಲ ಅದು. ಹಾಗೆ ನೋಡಿದರೆ ಯಾವ ಊರೂ ಯಾವ ಕೇರಿಯೂ ನಮಗೆ ಪೂರ್ತಿಯಾಗಿ ದಕ್ಕಿರುವುದಿಲ್ಲ. ಮೊನ್ನೆ ದಾವಣಗೆರೆಗೆ ಹೋದಾಗ ಅಲ್ಲಿರುವ ಒಳ್ಳೆಯ ಬೆಣ್ಣೆ ಮಸಾಲೆ ಹೊಟೆಲು ಯಾವುದೆಂದು ಅದೇ ಊರಲ್ಲಿ ಹುಟ್ಟಿ ಬೆಳೆದವರನ್ನು ಕೇಳಿದೆ. ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಯಾವುದೇ ಇದೆಯಂತೆ ಅಂತ ಹಾರಿಕೆಯ ಉತ್ತರ ಕೊಟ್ಟರು. ಉಪ್ಪಿನಂಗಡಿಯಲ್ಲೊಂದು ಖಾಲಿದೋಸೆ ಹೊಟೆಲಿದೆ. ತುಂಬ ಚೆನ್ನಾಗಿದೆ ಅಂತ ನನಗೆ ಹೇಳಿದವರು ಸೂರಿ. ಅವರು ಯಾವತ್ತೋ ಅಲ್ಲಿ ದೋಸೆ ತಿಂದು ಮೆಚ್ಚಿಕೊಂಡಿದ್ದರು. ಉಪ್ಪಿನಂಗಡಿಯಲ್ಲಿ ಲಕ್ಷ್ಮೀನಿವಾಸ ಅನ್ನೋ ಹೊಟೇಲು ಈಗಲೂ ಇದೆಯಾ ಅಂತ ಇತ್ತೀಚೆಗೆ ಅಲ್ಲಿಗೆ ಹೋದಾಗ ಕೇಳಿದ್ದರು. ಅಲ್ಲೇ ಬೆಳೆದ ನಮಗೆ ಹೊಟೇಲಿಗೆ ಹೋಗುವ ಅಭ್ಯಾಸ ಇರಲಿಲ್ಲ. ಮನೆಯಲ್ಲಿ ದಿನವೂ ದೋಸೆ ಮಾಡುತ್ತಿದ್ದುದರಿಂದ ಹೊಟೆಲಲ್ಲಿ ದೋಸೆ ತಿನ್ನುವ ಪ್ರಸಂಗವೂ ಬರುತ್ತಿರಲಿಲ್ಲ. ಕಾಲಾಂತರದಲ್ಲಿ ಅದೆಲ್ಲ ಬದಲಾಗಿದೆ. ಆದಿತ್ಯ ಎಂಬ ಹೊಸ ಹೋಟೆಲು ಶುರುವಾಗಿ, ಅಲ್ಲಿಗೆ ಊರ ಮಂದಿಯೂ ಬರೋದಕ್ಕೆ ಶುರು ಮಾಡಿದ್ದಾರೆ. ಊರಿನ ಬಗ್ಗೆ ಅತ್ಯದ್ಭುತವಾಗಿ ಬರೆದವರು ಗೊರೂರು. ಕೋಟೆಯ ಬಗ್ಗೆ ಹೇಗೆ ತರಾಸು ಬರೆದು ಕೋಟೆಯನ್ನು ಮತ್ತೊಮ್ಮೆ ಕಟ್ಟಿದರೋ ಹಾಗೆ ಗೊರೂರು ರಾಮಸ್ವಾಮಿ ಅಯ್ಯಂಗಾರರು ಕೂಡ ಊರನ್ನು ಮತ್ತೆ ಕಟ್ಟಿದವರು. ಅದೇ ಥರ ಹನೇಹಳ್ಳಿಯನ್ನು ಕಟ್ಟಿಕೊಟ್ಟವರು ಚಿತ್ತಾಲರು. ದೂರ್ವಾಸಪುರ ಕಲ್ಪನೆಯ ಊರು ಅಲ್ಲ, ಅಂಥದ್ದೊಂದು ಊರು ನಮ್ಮೂರಿನ ಪಕ್ಕದಲ್ಲೇ ಇದೆ ಅಂತ ತೀರ್ಥಹಳ್ಳಿಯವರೊಬ್ಬರು ತಿದ್ದಿದ್ದರು. ಹೀಗೆ ಅವರವರ ಅಗತ್ಯಗಳಿಗೆ ತಕ್ಕಂತೆ, ಆಸಕ್ತಿಗಳಿಗೆ ತಕ್ಕಂತೆ ಆಯಾ ಊರು ಪರಿಚಿತವಾಗುತ್ತಾ ಹೋಗುತ್ತದೆ. ನಮ್ಮೂರಲ್ಲಿ ನಾವು ಅಷ್ಟಾಗಿ ಕಣ್ಣು ಹಾಯಿಸಿರುವುದಿಲ್ಲ. ಹೊರಗಿನಿಂದ ಬಂದವರು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುತ್ತಾರೆ. ಒಂದು ಊರಿನ ಚರಿತ್ರೆಯನ್ನು ಇತಿಹಾಸಕಾರರು ಬರೆಯುವಂತೆ, ಆ ಊರಿನ ಐತಿಹ್ಯಗಳ ಕುರಿತು ಹೊರಗಿನಿಂದ ಬಂದವರು ಬರೆದರೆ ಅದರ ಮಜವೇ ಬೇರೆ. ಮಾರ್ಕ್ ಟುಲಿ ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ ಬರೆದಾಗ ಭಾರತ ಹೀಗಿದೆಯಾ ಅನ್ನಿಸಿತ್ತು. ಅವನಿಗೆ ಕಂಡದ್ದು ನಮಗೇಕೆ ಕಾಣುವುದಿಲ್ಲ ಎಂದು ಅಚ್ಚರಿಯಾಗಿತ್ತು. ಉಪ್ಪಿನಂಗಡಿಯನ್ನು ಹೇಗೆ ಹಿಡಿಯಬೇಕು ಅಂತ ಹೊರಟವನಿಗೆ ಒಂದಷ್ಟು ಪೂರಕ ಮಾಹಿತಿ ಕೊಟ್ಟವನು ಗೆಳೆಯ ಗೋಪಿ. ಅವನ ಪ್ರಕಾರ ಊರಿನಲ್ಲೊಂದು ವಾರ ಸುತ್ತು ಹಾಕದೇ ಬರೆಯುವುದು ಸರಿಯಲ್ಲ. ಆಗಿಂದೀಗ ಆದ ಬದಲಾವಣೆಗಳನ್ನು ನೋಡಿಕೊಳ್ಳುವುದು ಒಳ್ಳೆಯದೇ. ಆದರೆ ನನ್ನ ಉದ್ದೇಶ ಉಪ್ಪಿನಂಗಡಿಯನ್ನು ಕಟ್ಟಿಕೊಡುವುದೋ, ಅಂಥ ಅಸಂಖ್ಯಾತ ಹಳ್ಳಿಗಳನ್ನು ಪ್ರತಿನಿಧಿಸುವುದೋ ಅನ್ನುವುದನ್ನು ನಾನೇ ಸ್ಪಷ್ಪಪಡಿಸಿಕೊಳ್ಳಬೇಕಿದೆ. ಅದೇ ಕಾರಣಕ್ಕೆ ನನ್ನ ಮೆಚ್ಚಿನ ಲೇಖಕರಾದ ಅರ್ಚಕ ಬಿ. ರಂಗ­ಸ್ವಾಮಿ ಅವರ ಬಂಡಿಹೊಳೆಯ ಕುರಿತ ಪುಸ್ತಕ ಓದುತ್ತಾ ಕೂತೆ. ಅವರು ಬರೆಯುತ್ತಾರೆ: ‘ಬಂಡಿ­ಹೊ­ಳೆಯು ಸಣ್ಣ ಹಳ್ಳಿ; ನೂರೈ­ವ­ತ್ತೆ­ರಡು ಮನೆ­ಗಳು ಇರು­ತ್ತವೆ. ಜನ­ಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈ­ನೂರು. ಪೂರ್ವ­ದಿ­ಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕು­ಗ­ಳಲ್ಲಿ ಹೇಮಾ­ವತಿ ನದಿ ಈ ಊರಿನ ಎಲ್ಲೆ­ಯೆಂದು ಹೇಳ­ಬ­ಹುದು. ಊರಿನ ಸುತ್ತಲೂ ಪೈರು­ಪ­ಚ್ಚೆ­ಗ­ಳಿಂದ ತುಂಬಿದ ಹೊಲ­ಗ­ದ್ದೆ­ಗಳೂ ಹಸುರು ಹುಲ್ಲಿನ ಗೋಮಾ­ಳ­ಗಳೂ ಪ್ರಕೃ­ತಿಯ ದಿನ­ಕ್ಕೊಂದು ವಿಧ­ವಾದ ಸೊಬ­ಗಿನ ನೋಟವೂ ನಮ್ಮೂ­ರಿನ ಕಳೆ­ಯನ್ನು ಹೆಚ್ಚಿ­ಸಿ­ದ್ದವು. ಊರಿನ ಸುತ್ತಲೂ ಕಳ್ಳಿ­ಬೂ­ತಾ­ಳೆ­ಗಳ ಬಲ­ವಾದ ಬೇಲಿ­ಗ­ಳಿ­ದ್ದವು. ಇತ್ತೀ­ಚೆಗೆ ಅದು ಕಮ್ಮಿ­ಯಾ­ಗು­ತ್ತಿದೆ. ಹೊರ ಊರು­ಗ­ಳಿಂದ ಬರುವ ದಾರಿ­ಗ­ಳಲ್ಲಿ ಹೇಮ­ಗಿ­ರಿ­ಯಿಂದ ಬರುವ ದಾರಿಯೇ ಸ್ವಲ್ಪ ಸುಮಾ­ರಾ­ಗಿತ್ತು. ಇದೇ ಹೆದ್ದಾರಿ. ಈ ಮಾರ್ಗ­ವಾಗಿ ಬರು­ವಾಗ ಬಲ­ಗಡೆ ಶ್ರೀಕಂ­ಠೇ­ಶ್ವರ ಸ್ವಾಮಿ ದೇವ­ಸ್ಥಾ­ನವು ಸಿಕ್ಕು­ವುದು. ಇದನ್ನು ಕಟ್ಟಿ ನೂರಾರು ವರ್ಷ­ಗ­ಳಾ­ದವು. ಆಳಿದ ಮಹಾ­ಸ್ವಾ­ಮಿ­ಯ­ವ­ರ­ರಾದ ಮುಮ್ಮಡಿ ಕೃಷ್ಣ­ರಾಜ ಒಡೆ­ಯ­ರ­ವರ ತಾಯಿ­ಯ­ವ­ರಾದ ಮಾತೃಶ್ರೀ ದೇವ­ರಾ­ಜ­ಮ್ಮ­ಣ್ಣಿ­ಯ­ವರು ಈ ದೇವ­ಸ್ಥಾ­ನ­ವನ್ನು ಕಟ್ಟಿಸಿ ಇದರ ಸೇವೆ­ಗಾಗಿ ವೃತ್ತಿ­ಗ­ಳನ್ನು ಬಿಟ್ಟಿ­ರು­ವರು. ಈ ಪುಣ್ಯಾ­ತ್ಮರ ವಿಗ್ರ­ಹವೂ ಅವರ ಜ್ಞಾಪ­ಕಾ­ರ್ಥ­ವಾಗಿ ಇದೇ ದೇವ­ಸ್ಥಾ­ನ­ದಲ್ಲಿ ಪ್ರತಿ­ಷ್ಠಾ­ಪಿ­ಸ­ಲ್ಪ­ಟ್ಟಿ­ರು­ವುದು. ಊರಿನ ದಕ್ಪಿಣ ಭಾಗ­ದಲ್ಲಿ ಸ್ವಲ್ಪ ದೂರ­ವಾಗಿ ಏಳೂ­ರ­ಮ್ಮನ ತೋಪು ಮತ್ತು ಗುಡಿ­ಗ­ಳಿವೆ. ಪೂರ್ವ­ಕಾ­ಲ­ದಲ್ಲಿ ಇಲ್ಲಿಗೆ ಸುತ್ತು­ಮು­ತ್ತ­ಲಿನ ಏಳೂರು ಶಿಡಿ ತೇರು­ಗಳು ಬಂದು ದೊಡ್ಡ ಜಾತ್ರೆ­ಯಾಗಿ ಕುಸ್ತಿ ದೊಂಬ­ರಾಟ ಎಲ್ಲ ಆಗು­ತ್ತಿ­ದ್ದ­ವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲು­ಗ­ಳಿವೆ. ಒಳಗೆ ಏಳು ದೇವ­ರು­ಗ­ಳಿವೆ. ನಮ್ಮೂ­ರಿ­ನಲ್ಲಿ ಐದಾರು ಮನೆ­ಗಳು ಬ್ರಾಹ್ಮ­ಣ­ರದು. ಉಳಿ­ದ­ದ್ದೆಲ್ಲಾ ಒಕ್ಕಲು ಮಕ್ಕ­ಳದು. ಬಡ­ಗಿ­ಗಳು ಅಕ್ಕ­ಸಾ­ಲಿ­ಗಳು, ವಾದ್ಯ­ದ­ವರು, ಅಗ­ಸರು, ಕುಂಬಾ­ರರ ಒಂದೆ­ರಡು ಮನೆ­ಗ­ಳಿ­ದ್ದವು.ಊರ ಹೊರಗೆ ದಕ್ಪಿಣ ದಿಕ್ಕಿ­ನಲ್ಲಿ ಹದಿ­ನಾರು ಗುಡಿ­ಸ­ಲು­ಗ­ಳಿ­ದ್ದ­ವಲ್ಲ ಅವೆಲ್ಲಾ ಹೊಲೆ­ಯ­ರದು. ಇವರು ತಮ್ಮ ಗುಡಿ­ಸ­ಲು­ಗಳ ಮಧ್ಯೆ ಒಂದು ಹೆಂಚಿನ ಮನೆ­ಯನ್ನು ಕಟ್ಟಿ ಅದ­ರಲ್ಲಿ ಮಾಯಮ್ಮ ದೇವ­ರ­ನ್ನಿಟ್ಟು ಪೂಜಿ­ಸು­ತ್ತಿ­ದ್ದರು. ಊರಿನ ಹವಾ­ಗು­ಣವು ಆರೋ­ಗ್ಯ­ವಾ­ಗಿ­ದ್ದಿತು. ವ್ಯವ­ಸಾ­ಯವೇ ಮುಖ್ಯ­ವಾ­ಗಿ­ದ್ದು­ದ­ರಿಂದ ತಿಪ್ಪೇ­ಗುಂ­ಡಿ­ಗಳು ಊರಿಗೆ ಸಮೀ­ಪ­ವಾ­ಗಿ­ದ್ದವು. ಹಳೇ ಸಂಪ್ರ­ದಾ­ಯದ ಬೀದಿ­ಗಳೂ ಕೆಲ­ವಿ­ದ್ದವು. ಬೆಳ­ಕಿಗೆ ಅನು­ಕೂಲ ಕಮ್ಮಿ. ದನ­ಕ­ರು­ಗ­ಳನ್ನು ಮನೆ­ಯೊ­ಳಗೆ ಕಟ್ಟು­ತ್ತಿ­ದ್ದರು. ಇತ್ತೀ­ಚೆಗೆ ಗ್ರಾಮ­ಪಂ­ಚಾಯ್ತಿ ಏರ್ಪಾ­ಡಾಗಿ ಮೇಲಿನ ಕಷ್ಟ­ಗ­ಳೆಲ್ಲ ನಿವಾ­ರ­ಣೆ­ಯಾ­ಗು­ತ್ತ­ಲಿವೆ. ಬಾಲ್ಯ­ದಲ್ಲಿ ನೋಡಿದ ಬಂಡಿ­ಹೊ­ಳೆಯು ಈಗೀಗ ಗುಣ­ಮು­ಖ­ನಾದ ರೋಗಿಯು ಹಾಸಿ­ಗೆ­ಯಿಂ­ದೆದ್ದು ತಿರು­ಗಾ­ಡು­ವಂತೆ ಕಾಣು­ತ್ತಿ­ದ್ದಿತು. ಊರೊ­ಳಗೆ ಕಾಹಿಲೆ ಹರ­ಡಿ­ದಾಗ ಆರು ಮೈಲಿ ಆಚೆ­ಗಿ­ರುವ ವೈದ್ಯರು ಬಂದು ಔಷ­ಧಿ­ಗ­ಳನ್ನು ಕೊಡು­ತ್ತಿ­ದ್ದರು. ರೈತರು ವ್ಯವ­ಸಾ­ಯ­ಕ್ಕಾಗಿ ಊರಿಗೆ ದೂರ­ವಾದ ಬೈಲು­ಗ­ಳಲ್ಲೇ ಹೆಚ್ಚಾಗಿ ಕೆಲಸ ಮಾಡು­ತ್ತಿ­ದ್ದು­ದ­ರಿಂದ ಅನಾ­ರೋ­ಗ್ಯಕ್ಕೆ ಅವ­ಕಾ­ಶವು ಕಮ್ಮಿ­ಯಾ­ಗಿತ್ತು. ­*­** ಇದು ಕೆ. ಆರ್. ಪೇಟೆ ತಾಲೂ­ಕಿನ ಬಂಡಿ­ಹೊಳೆ ಎಂಬ ಗ್ರಾಮದ ಕುರಿತು ರಂಗ­ಸ್ವಾಮಿ ಬರೆ­ದಿ­ರುವ ಈ 200 ಪುಟ­ಗಳ ಪುಸ್ತ­ಕ. ಇದನ್ನು ತೀನಂಶ್ರೀ, ಗೊರೂರು ರಾಮ­ಸ್ವಾಮಿ ಅಯ್ಯಂ­ಗಾರ್, ಜೀಶಂಪ ಮುಂತಾ­ದ­ವರು ಮೆಚ್ಚಿ­ಕೊಂ­ಡಿ­ದ್ದರು ಅನ್ನು­ವುದು ಅವರು ಬರೆದ ಪತ್ರ­ದಿಂದ ಗೊತ್ತಾ­ಗು­ತ್ತದೆ. ಗೊರೂರು 1933ರಲ್ಲೇ ಇದನ್ನು ಆಕ­ಸ್ಮಿ­ಕ­ವಾಗಿ ಓದಿ ಸಂತೋ­ಷ­ಪ­ಟ್ಟ­ದ್ದನ್ನು ಲೇಖ­ಕ­ರಿಗೆ ಬರೆದು ತಿಳಿ­ಸಿದ್ದೂ ಪುಸ್ತ­ಕದ ಕೊನೆ­ಯ­ಲ್ಲಿದೆ. ಉಪ್ಪಿನಂಗಡಿಯ ಬಗ್ಗೆ ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ವಿವರಗಳೂ ಕುತೂಹಲಕಾರಿ ಆಗಿವೆ. ಎರಡು ನದಿಗಳು ಸುತ್ತುವರಿದ ಉಪ್ಪಿನಂಗಡಿ ಅನಾದಿಕಾಲದಲ್ಲಿ ಮಂಗಳೂರಿಗೂ ಮಲೆನಾಡಿಗೂ ಸಂಪರ್ಕಸೇತು ಆಗಿತ್ತು. ಆಗಿನ್ನೂ ಬೀರೂರು ಜಂಕ್ಷನ್ ಆಗಿರಲಿಲ್ಲ. ರೇಲುಗಾಡಿಗಳು ಶುರು ಆಗಿರಲಿಲ್ಲ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ಸೇತುವೆಯನ್ನೂ ಕಟ್ಟಿರಲಿಲ್ಲ. ಆಗ ಹಡಗಿನಲ್ಲಿ ಬರುತ್ತಿದ್ದ ಸರಂಜಾಮುಗಳನ್ನು ಇಡೀ ಘಟ್ಟ ಪ್ರದೇಶಕ್ಕೆ ಕೊಂಡೊಯ್ಯಬೇಕಾದರೆ ಉಪ್ಪಿನಂಗಡಿಯ ಮೂಲಕವೇ ಹಾದು ಹೋಗಬೇಕಾಗುತ್ತಿತ್ತು. ಮುಖ್ಯವಾಗಿ ಮಂಗಳೂರಿನಿಂದ ಬರುವ ಉಪ್ಪನ್ನು ನದೀ ತೀರದ ತನಕ ಗಾಡಿಗಳಲ್ಲಿ ತಂದು, ನಂತರ ದೋಣಿಯ ಮೂಲಕ ಅವನ್ನೆಲ್ಲ ನದಿ ದಾಟಿಸಿ, ಮತ್ತೆ ಗಾಡಿಗಳಲ್ಲಿ ಒಯ್ಯುತ್ತಿದ್ದರು. ಉಪ್ಪು ಹೀಗೇ ಸಾಗಬೇಕಾದ್ದು ಅನಿವಾರ್ಯ ಆದ್ದರಿಂದ ಅದನ್ನು ಉಪ್ಪಿನ ಗಂಡಿ ಅಂತ ಕರೆದರು ಎಂಬುದು ಒಂದು ಕತೆ. ಗಂಡಿ ಅಂದರೆ ತುಳುವಿನಲ್ಲಿ ಓಣಿ. ಅದು ಉಪ್ಪಿನ ಗಾಡಿ, ಉಪ್ಪಿನ ಗಡಿ ಅಂತಲೂ ಹೇಳುವವರಿದ್ದಾರೆ. ಹೀಗೆ ಉಪ್ಪನ್ನು ತನ್ನ ಹೆಸರಲ್ಲಿಟ್ಟುಕೊಂಡ ಊರು ಕ್ರಮೇಣ ಬೆಳೆಯುತ್ತಾ ಬಂತು. ಹಾಗೆ ಬೆಳೆದು ಕೋರ್ಟು ಕಛೇರಿಗಳನ್ನೂ ಹೊಂದತೊಡಗಿತ್ತು. ಆದರೆ 1923ರಲ್ಲಿ ಬಂದ ಭೀಕರ ನೆರೆಗೆ ಇಡೀ ಊರು ಕೊಚ್ಚಿಹೋಗಿ ಅಲ್ಲಿ ಮನುಷ್ಯರು ವಾಸ ಮಾಡುತ್ತಿದ್ದ ಕುರುಹೂ ಇಲ್ಲದಂತೆ ಆಯ್ತು. ಆಗ ಇಡೀ ಊರನ್ನು ಸಮೀಪದ ಪುಟ್ಟ ಊರಿಗೆ ಸ್ಥಳಾಂತರ ಮಾಡಲಾಯಿತು. ಕೋರ್ಟು ಕಛೇರಿಗಳೆಲ್ಲ ಆ ಪುಟ್ಟ ಊರು ಸೇರಿಕೊಂಡವು. ಅದೇ ಪುತ್ತೂರು. ಮತ್ತೊಮ್ಮೆ ಅಂಥದ್ದೇ ಭೀಕರ ಮಳೆಗಾಲವನ್ನು ಊರು ಕಂಡದ್ದು 1974ರಲ್ಲಿ. ಉಪ್ಪಿನಂಗಡಿಯ ಸೇತುವೆಯನ್ನು ಕಟ್ಟಲು ಬ್ರಿಟಿಷರು ತುಂಬ ಕಾಲ ತೆಗೆದುಕೊಂಡರೆಂದೂ ಅದಕ್ಕೆ ನೂರಾರು ನರಬಲಿ ಕೊಡಬೇಕಾಯಿತೆಂದೂ ಕತೆಗಳಿವೆ. ಕೊನೆಗೆ ಊರನ್ನು ರಕ್ಷಿಸಲು ಮುಂದಾದದ್ದು ಕಾಳಿಕಾಂಬ ಎನ್ನುವುದು ಒಂದು ಕತೆ. ಸಹಸ್ರಲಿಂಗ ದೇವರು ಊರನ್ನು ಕಾಪಾಡಿದ ಎಂದು ಇನ್ನೊಂದು ಪ್ರತೀತಿ. ಆದರೆ ಕ್ರಮೇಣ ಉಪ್ಪಿನಂಗಡಿ ಹೇಗೆ ಚೇತರಿಸಿಕೊಂಡಿತು ಎಂದರೆ ವಿನಾಕಾರಣ ಅದು ಪುತ್ತೂರಿಗಿಂತ ಪ್ರಸಿದ್ಧವಾಯಿತು. ಅದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿಯನ್ನು ಸೀಳಿಕೊಂಡು ಹೋದದ್ದು. ­*­*­** ನಾಸ್ಟಾ­ಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದ­ರಿಂದ ತಪ್ಪಿ­ಸಿ­ಕೊ­ಳ್ಳು­ವುದು ಕಷ್ಟ. ರಂಗ­ಸ್ವಾಮಿ ಪುಸ್ತ­ಕ­ವನ್ನು ಓದುತ್ತಾ ಇದ್ದರೆ ಕಾಲದ ಕಾಲು­ವೆ­ಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ­ದಂತೆ ಭಾಸ­ವಾ­ಗು­ತ್ತದೆ. ಬೆಂಗ­ಳೂ­ರಿನ ಜನ­ಜಂ­ಗುಳಿ, ಟೀವಿ, ಸಿನಿಮಾ, ಮೆಜೆ­ಸ್ಟಿ­ಕ್ಕಿನ ಗದ್ದಲ, ಕ್ರಿಕೆಟ್ ಮ್ಯಾಚು ಎಲ್ಲ­ವನ್ನೂ ಮರೆ­ತು­ಬಿ­ಡ­ಬೇಕು ಅನ್ನಿ­ಸು­ತ್ತದೆ. ಊರ ತುಂಬ ದನ­ಕ­ರು­ಗಳು, ಗಾಳಿ ಮಳೆ ಬಿಸಿ­ಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾ­ಢದ ಗಾಳಿಗೆ ಮನೆ­ಯೊ­ಳಗೆ ನುಗ್ಗಿ­ಬ­ರುವ ಕಸ­ಕಡ್ಡಿ ಮರಳು ಮಣ್ಣು, ಬೇಸ­ಗೆ­ಯಲ್ಲೂ ತಣ್ಣ­ಗಿ­ರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತ­ವಾಗಿ ಒದ­ಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗ­ಲಿ­ಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿ­ಸುವ ಅಪ­ರಾಹ್ಣ, ಶಾಲೆ­ಯಲ್ಲಿ ಕನ್ನ­ಡ­ದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿ­ಯುವ ಮಕ್ಕಳು, ಹೊಳೆ­ದಂ­ಡೆ­ಯಲ್ಲಿ ಗುಟ್ಟಾಗಿ ಜಿನು­ಗುವ ಪ್ರೀತಿ, ಧೋ ಎಂದು ಸುರಿ­ಯವ ಮಳೆಗೆ ಸೋರುವ ಮನೆ­ಯೊ­ಳಗೆ ಆಡುವ ಆಟ… ನಾಗ­ರಿ­ಕತೆ ಎಲ್ಲ­ವನ್ನೂ ಮರೆ­ಸು­ತ್ತದೆ. ಹಳ್ಳಿ­ಗ­ಳಲ್ಲೇ ಉಳಿ­ದು­ಬಿ­ಟ್ಟ­ವ­ರಿಗೆ ಇವು ಲಕ್ಪು­ರಿ­ಯಲ್ಲ. ಆದರೆ ನಗ­ರಕ್ಕೆ ಬಂದು ಬೀರು­ಬಾ­ರು­ಗಳ, ಕ್ರೆಡಿಟ್ ಕಾರ್ಡು­ಗಳ, ಏಸಿ ರೂಮು­ಗಳ, ಚಿಕ್ ಬಿರಿ­ಯಾ­ನಿ­ಗಳ ಲೋಕಕ್ಕೆ ಸಂದ­ವ­ರಿಗೆ ಹಳ್ಳಿಯ ಕಷ್ಟ­ಕಾ­ರ್ಪ­ಣ್ಯದ ದಿನ­ಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜ­ನ­ಶೀ­ಲನೂ ಮಾನ­ವೀ­ಯನೂ ಆಗಿ­ದ್ದರೆ ನೆನ­ಪು­ಗ­ಳಲ್ಲೇ ಆತ ಮರು­ಹುಟ್ಟು ಪಡೆ­ಯ­ಬಲ್ಲ ಕೂಡ. ಹಾಗೆ ಮರು­ಹು­ಟ್ಟಿಗೆ ಕಾರ­ಣ­ವಾ­ಗುವ ಶಕ್ತಿ ಅರ್ಚಕ ರಂಗ­ಸ್ವಾ­ಮಿ­ಯ­ವರ ಕೃತಿ­ಗಿದೆ. ಉಪ್ಪಿನಂಗಡಿಯ ಕುರಿತು ಅಂಥದ್ದೊಂದು ಪುಸ್ತಕ ಬರೆಯಬೇಕು ಅನ್ನುವುದು ಆಶೆ.]]>

‍ಲೇಖಕರು G

August 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

6 ಪ್ರತಿಕ್ರಿಯೆಗಳು

 1. ashok

  ನಾಸ್ಟಾಲ್ಜಿಯದಿಂದ ಯಾರೂ ಸುಲಭವಾಗಿ ತಪ್ಪಿಸಿಕೊಳ್ಳಲಾರರು ಎಂಬ ತಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ಸರ್. ನಾವು ಮರೆತೇಬಿಟ್ಟೆವೆಂಬ ಊರು, ಮರೆಯಲು ಪ್ರಯತ್ನಿಸಿದ ಊರು ಬದುಕಿನ ಯಾವುದೋ ತಿರುವಿನಲ್ಲಿ ಚಿಕ್ಕದ್ಯಾವುದೋ ಘಟನೆಯ ನೆಪದಿಂದ ನೆನಪಾಗಿ ಕಾಡಲಾರಂಭಿಸುತ್ತದೆ.
  ಉಪ್ಪಿನಂಗಡಿಯ ಕುರಿತ ನಿಮ್ಮ ಪುಸ್ತಕ ಆದಷ್ಟು ಬೇಗ ನಮ್ಮನ್ನು ತಲುಪಲಿ.
  ಡಾ. ಅಶೋಕ್.ಕೆ.ಆರ್

  ಪ್ರತಿಕ್ರಿಯೆ
 2. roopa d p

  ಬಂಡಿಹೊಳೆ ಮತ್ತು ಉಪ್ಪಿನಂಗಡಿಯ ಬಗ್ಗೆ ಓದಿ ತಕ್ಷಣವೇ ನನ್ನ ಊರು ಅಡ್ಯನಡ್ಕಕ್ಕೆ ಹೋಗಿ ಬಂದೆ.

  ಪ್ರತಿಕ್ರಿಯೆ
 3. RAGHAVENDAR KARJE

  sadabhiruchiya baraha…. jogi nimma barahagalannu oduvudu tumba sadagarada sangati..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: