ಜೋಗಿಯ ‘ಹರಕೆಯ ಬಾಡೂಟ’

ಹೊಸ ಕಾದಂಬರಿ

jogijpg12

ಭಾಗ-೪

ಸಾಂತು ಅಷ್ಟೊಂದು ಉತ್ಸಾಹದಿಂದ ನಮ್ಮೊಡನೆ ಹೊರಟದ್ದು ನಮಗೆ ಸಹಾಯ ಮಾಡಲಿಕ್ಕಲ್ಲ ಅನ್ನುವುದು ಗಡಿ ತಲುಪುತ್ತಿದ್ದಂತೆಯೇ ನಮಗಿಬ್ಬರಿಗೂ ಅರಿವಾಯಿತು. ಆವತ್ತು ಗಡಿಯಲ್ಲಿ ಜಾತ್ರೆಯಿತ್ತು. ಜಾತ್ರೆಯೆಂದರೆ ಗಡಿ ಚಾಮುಂಡಿಗೆ ವರುಷಪೂರ್ತಿ ಹರಕೆ ಹೊತ್ತವರು ಹರಕೆ ಸಲ್ಲಿಸುವ ದಿನ. ನಾವು ಅಲ್ಲಿಗೆ ಹೋಗುವ ಹೊತ್ತಿಗೆ ಅಲ್ಲಿ ಗಿಜಿಗುಟ್ಟುವಷ್ಟು ಜನ ಜಮಾಯಿಸಿದ್ದರು. ಟೆಂಪೋಗಳಲ್ಲಿಲಾರಿಗಳಲ್ಲಿ ಹಾಕಿಕೊಂಡು ಬಂದ ಹಂದಿಗಳು ಹರಕೆಯ ಗಳಿಗೆಗಾಗಿ ಕಾಯುತ್ತಿದ್ದವು. ಅವುಗಳಲ್ಲಿ ಕೆಲವನ್ನು ಬಾಯಿಕಟ್ಟಿ ಹಾಗೆ ಬಿಟ್ಟಿದ್ದರು. ಅವು ಮಾರಣಾಂತಿಕವಾಗಿ ಅರಚಿಕೊಳ್ಳುತ್ತಿದ್ದವು. ಆ ಸದ್ದನ್ನು ತಮಟೆ ಸದ್ದು ಮೀರಿಸುತ್ತಿತ್ತು.

ಅಲ್ಲಿಗೆ ಹೋಗುತ್ತಿದ್ದಂತೆ ಸಾಂತು ನಾಟಕ ಶುರುಮಾಡಿದ. ಅಲ್ಲಿ ಜಾತ್ರೆ ನಡೆಯುತ್ತಿದ್ದದ್ದು ತನಗೆ ಗೊತ್ತೇ ಇರಲಿಲ್ಲ ಎಂಬಂತೆ ಏನ್ಸಾರ್ಇವತ್ತು ನಾವಲ್ಲಿಗೆ ಹೋಗೋ ಹಾಗೇ ಇಲ್ಲ. ಗಡಿ ಚಾಮುಂಡಮ್ಮನ ಹರಕೆ ಸಂದಾಯದ ದಿನ ಇವತ್ತು. ಕಾಡಿನ ಪ್ರವೇಶ ನಿಷಿದ್ದ ಅಂದ. ಅದಕ್ಕೂ ಇದಕ್ಕೂ ಏನು ಸಂಬಂಧ ಅಂತ ಶಿವ ರೇಗಿದ್ದಕ್ಕೆ ಸಂಬಂಧ ಯಾರಿಗೆ ಗೊತ್ತು ಸಾರ್. ಅದೊಂದು ಸಂಪ್ರದಾಯ. ಇವತ್ತು ಕಾಡಿಗೆ ಇಳಿಯುವಂತಿಲ್ಲ ಅಂದ. ಆ ಸಂಪ್ರದಾಯ ಇತ್ತೋ ಇಲ್ಲವೋ ಅವನಂತೂ ಜಾತ್ರೆ ನೋಡಿ ಭರ್ಜರಿ ಬಾಡಿನೂಟ ಹೊಡೆಯುವುದಕ್ಕೆ ತೀರ್ಮಾನಿಸಿದಂತಿತ್ತು.

21

ನಮಗೆ ಅಂಥ ಸಂಪ್ರದಾಯ ಏನಿಲ್ಲನಡೀ ಹೋಗೋಣ ಅಂದೆ. ನಿಮಗೆ ಹೇಗಾದರೂ ನಡೆಯುತ್ತೆ ಸಾರ್. ನಾನು ಇದೇ ಜಾಗಕ್ಕೆ ಸೇರಿದವನು. ಇದನ್ನೆಲ್ಲ ಪಾಲಿಸಲೇಬೇಕು. ನಾಳೆ ಹೆಚ್ಚು ಕಡಿಮೆ ಆದರೆ ಯಾರು ಬರ್ತಾರೆ ಹೇಳಿ. ಗಡಿ ಚಾಮುಂಡಿಯ ಮಹಿಮೆ ನಿಮಗೆ ಗೊತ್ತಿಲ್ಲ. ಅವಳ ಮಾತು ಉಲ್ಲಂಘನೆ ಮಾಡಿದವರು ಒಂದೇ ವರುಷದಲ್ಲಿ ರಕ್ತ ಕಾರಿ ಸತ್ತಿದ್ದಾರೆ. ಸರ್ವನಾಶ ಆಗಿಹೋಗಿದ್ದಾರೆ ಎಂದು ನಮ್ಮನ್ನೂ ಹೆದರಿಸುವ ದಾಟಿಯಲ್ಲಿ ಮಾತಾಡತೊಡಗಿದ. ಅವನನ್ನು ಒತ್ತಾಯದಿಂದ ಕರೆದೊಯ್ಯುವುದು ಉಪಯೋಗ ಇಲ್ಲ ಅಂದುಕೊಂಡು ಹೋಗ್ಲಿ ಬಿಡೋನೀನಿಲ್ಲೇ ಇರು. ನಮಗೆ ದಾರಿ ತೋರಿಸು. ನಾವಾದ್ರೂ ಒಂದು ಸ್ವಲ್ಪ ದೂರ ಹೋಗಿ ಬರ್ತೇವೆ ಅಂದೆ.

ನೀವು ಎಷ್ಟು ದೂರ ಅಂತ ಹೋಗ್ತೀರಿ. ಹೋಗಿ ತಲುಪುವಷ್ಟರಲ್ಲೇ ಕತ್ತಲಾಗಿರುತ್ತೆ. ನಿಮಗೆ ಈ ಜಾಗದ ಪರಿಚಯ ಚೆನ್ನಾಗಿರುವ ಒಬ್ಬರನ್ನು ಪರಿಚಯ ಮಾಡಿಸ್ತೇನೆ ಬನ್ನಿ. ಕಾಡಿನ ಒಳಗೆ ಹೋಗುವ ಮುಂಚೆ ಅವರ ಹತ್ರ ಮಾತಾಡಿದರೆ ನಿಮಗೆ ತುಂಬಾ ಅನುಕೂಲ ಆಗುತ್ತೆ ಅಂತ ಸಾಂತು ಕಾರನ್ನು ಹಿಂದೆ ತಿರುಗಿಸುವಂತೆ ಹೇಳಿದ.

ನನಗೆ ಸಿಟ್ಟು ಬಂತು. ವಾಗ್ಲೆಗೆ ಫೋನ್ ಮಾಡಿ ಇವನಿಗೊಂದು ಪಾಠ ಕಲಿಸಬೇಕು ಅನ್ನಿಸಿತು. ಆದರೆನಾಳೆಯಾದರೂ ನಮ್ಮ ಜೊತೆ ಬರಬೇಕಾದವನು ಅವನೇ ಆಗಿದ್ದರಿಂದ ನಾನು ಆ ಕೆಲಸ ಮಾಡುವುದಕ್ಕೆ ಹೋಗಲಿಲ್ಲ. ಹಿರಿಯ ಅಧಿಕಾರಿಗಳಿಗಿಂತ ಕಾಡಿನ ಜಾಡು ಗೊತ್ತಿರುವ ಇಂಥವರೇ ಮುಖ್ಯ. ಇವರು ದಾರಿತಪ್ಪಿಸಿದರೆ ನಮ್ಮ ಪ್ರಯತ್ನವೆಲ್ಲ ವ್ಯರ್ಥವಾಗುವ ಸಾಧ್ಯತೆ ಇತ್ತು.

ಸಾಂತು ಹಳ್ಳಕೊಳ್ಳದ ಹಾದಿಯಲ್ಲಿ ನಮ್ಮನ್ನು ಮೂರೋ ನಾಲ್ಕೋ ಕಿಲೋಮೀಟರ್ ಕರೆದುಕೊಂಡು ಹೋಗಿ ಹಳೆಯ ಕಾಲದ ಮನೆಯೊಂದರ ಮುಂದೆ ತಂದುಬಿಟ್ಟ. ಯಾರ ಮನೆ ಇದು. ನಾವು ಹೀಗೆ ಹೇಳದೇ ಕೇಳದೇ ಹೋದರೆ ಏನಂದುಕೊಳ್ಳೋದಿಲ್ಲ ಅವರು ಅಂತ ಕೇಳಿದೆ. ನಾನೆಲ್ಲ ಹೇಳ್ತೀನಿ ನೀವು ನಡೀರಿ ಸಾರ್ ಎಂದು ಸಾಂತು ನಮ್ಮನ್ನು ಕರೆದುಕೊಂಡು ಮನೆಗೆ ಹೋದ.

ಇನ್ನೂರು ಮುನ್ನೂರು ವರುಷಗಳ ಹಳೆಯ ಮನೆ ಅದು. ಅಷ್ಟು ದೊಡ್ಡ ಮನೆಯಲ್ಲಿ ಯಾರೂ ಇದ್ದಂತಿರಲಿಲ್ಲ. ಸಾಂತು ಆ ಮನೆ ಚಿರಪರಿಚಿತ ಎಂಬಂತೆ ಸೀದಾ ಒಳಗೆ ಹೋದ. ನಾವು ಅಂಗಳದಲ್ಲೇ ನಿಂತು ಕಾದೆವು.

ನಾನು ಮನೆಯನ್ನೊಮ್ಮೆ ಹೊರಗಿನಿಂದಲೇ ನೋಡಿದೆ. ಒಂದು ಕಾಲದಲ್ಲಿ ಶ್ರೀಮಂತಿಕೆಜನ ತುಂಬಿ ತುಳುಕುತ್ತಿದ್ದ ಮನೆಯಂತೆ ಕಾಣುತ್ತಿತ್ತು. ಹೆಬ್ಬಾಗಿಲು ದಾಟಿ ಒಳಗೆ ಹೋದರೆ ವಿಶಾಲವಾದ ಅಂಗಳ. ಅಂಗಳದ ನಡುವೆ ಒಣಗಿದ ತುಳಸೀಗಿಡ. ನಾಲ್ಕೂ ಸುತ್ತ ಜಗಲಿ. ಅಲ್ಲಲ್ಲಿ ಒಂದೊಂದು ಕೋಣೆ. ಮನೆಯ ಪಕ್ಕದಲ್ಲೇ ಒಂದು ಹಳೆಯ ಮಾರಿಸ್ ಮೈನರ್ ಕಾರು ನಿಂತಿತ್ತು. ಅದನ್ನು ಓಡಿಸದೇ ಶತಮಾನಗಳೇ ಕಳೆದಂತೆ ಕಾಣಿಸುತ್ತಿತ್ತು. ಟೈರುಗಳು ಪಂಚರ್ರಾಗಿ ಚಪ್ಪಟೆಯಾಗಿದ್ದವು. ಅದರಾಚೆಗೆ ಟಾಪಿಲ್ಲದ ಕಡುಹಸುರು ಬಣ್ಣದ ಮಹೀಂದ್ರ ಜೀಪು ಅನಾಥವಾಗಿ ನಿಂತಿತ್ತು.

ಬನ್ನಿ ಸಾರ್. ಕರೀತಿದ್ದಾರೆ ಎಂದು ಸಾಂತು ನಮ್ಮನ್ನು ಒಳಗೆ ಕರೆದುಕೊಂಡು ಹೋದ. ಹೊರಬಾಗಿಲಿಗೆ ಒತ್ತಿಕೊಂಡಂತಿದ್ದ ಕೋಣೆಯಲ್ಲಿ ಕಿಟಕಿಯ ಪಕ್ಕ ಈಸಿಚೇರು ಹಾಕಿಕೊಂಡು ಸುಮಾರು ಎಂಬತ್ತು ವರ್ಷ ಪ್ರಾಯದ ಹಿರಿಯರೊಬ್ಬರು ಕೂತಿದ್ದರು. ಗೋಡೆಯಲ್ಲಿ ಹಳೆಯ ಫೋಟೋಗಳಿದ್ದವು. ಅವುಗಳಲ್ಲಿ ಕೋವಿ ಹಿಡಕೊಂಡ ಬ್ರಿಟಿಷ್ ಅಧಿಕಾರಿಯೊಬ್ಬ ಸತ್ತು ಬಿದ್ದ ಹುಲಿಯ ಮೇಲೆ ಬಲಗಾಲಿಟ್ಟುಕೊಂಡು ನಿಂತಿದ್ದ. ಮತ್ತೊಂದು ಫೋಟೋದಲ್ಲಿ ನಾಲ್ಕು ಮಂದಿ ಸತ್ತ ಹುಲಿಯನ್ನು ಹೊತ್ತುಕೊಂಡು ಬರುತ್ತಿದ್ದರು. ಅದರ ಪಕ್ಕದಲ್ಲಿ ಎರಡು ಕೋವಿಗಳನ್ನು ಗೋಡೆಯಲ್ಲಿ ಸಿಗಿಸಿಟ್ಟಿದ್ದರು.

ನಾನು ಹೇಳಿದ್ನಲ್ಲ ಶೆಟ್ರೇ.. ಇವರೇ ಅವರು ಅಂದ. ಅವನೇನು ಹೇಳಿರಬಹುದು ಎಂದು ನಾನು ಯೋಚಿಸತೊಡಗಿದೆ. ಹಿರಿಯರು ನಮ್ಮನ್ನು ಕಣ್ಣೆತ್ತಿ ನೋಡಿ ಕೂತ್ಕೊಳ್ಳಿ ಎಂದು ಸನ್ನೆ ಮಾಡಿದರು. ನಾವು ಅವರೆದುರಿಗೆ ಇದ್ದ ಇಬ್ಬರು ಕೂರಬಹುದಾದ ಮರದ ಕುರ್ಚಿಯಲ್ಲಿ ಕೂತೆವು. ಆ ಕುರ್ಚಿಯಲ್ಲಿ ಯೂರೂ ಕೂರದೇ ಎಷ್ಟೋ ವರುಷಗಳಾದಂತೆ ಅದರ ಹಿಡಿಯಲ್ಲಿ ಇಷ್ಟು ದಪ್ಪ ಧೂಳಿತ್ತು.

ಹಿರಿಯರು ಗೊರಗೊರ ದನಿಯಲ್ಲಿ ಏನೋ ಅಂದರು. ನನಗೆ ಅದೇನು ಅಂತ ಅರ್ಥವಾಗದೆ ಶಿವನ ಮುಖ ನೋಡಿದರೆ ಅವನು ನನ್ನ ಮುಖ ನೋಡುತ್ತಿದ್ದ. ಸಾಂತು ನೀವು ಇವರ ಜೊತೆ ಮಾತಾಡ್ತೀರಿ. ಅರ್ಧ ಗಂಟೇಲಿ ಬಂದುಬಿಡ್ತೀನಿ ಎಂದು ಶೆಟ್ರೇ ಸ್ವಲ್ಪ ಸೈಕಲ್ ತಗೊಂಡು ಹೋಗ್ತೀನಿ ಅಂತ ಹೇಳಿ ಮಾಯವಾದ.

ಅವರು ಏನು ಹೇಳುತ್ತಿದ್ದಾರೆ ಅನ್ನುವುದು ನನಗೆ ಅರ್ಥವಾಗಬೇಕಾದರೆ ಅರ್ಧ ಗಂಟೆ ಬೇಕಾಯಿತು. ಅಷ್ಟರಲ್ಲೇ ಒಂದೆರಡು ಸಾರಿ ರೇಷ್ಮೆ ಸೀರೆಯುಟ್ಟು ಮೈ ತುಂಬ ಬಂಗಾರ ಹೇರಿಕೊಂಡಿದ್ದ ಮಹಿಳೆಯೊಬ್ಬರು ಬಂದೂ ಬಂದೂ ಜಾಸ್ತಿ ಮಾತಾಡಿಸಬೇಡಿ. ಅವರಿಗೆ ಉಬ್ಬಸ ಅಂತ ಹೇಳಿ ಹೋದರು. ಅವರ ಮುಂದೆ ಒಂದೂವರೆ ಗಂಟೆ ಕೂತ ನನಗೆ ಅರ್ಥವಾದದ್ದು ಇಷ್ಟು.

ಅವರ ಹೆಸರು ಸೀನಪ್ಪ ಶೆಟ್ಟಿ. ತೊಂಬತ್ತೆರಡು ವರುಷವಾಗಿದೆ. ಆ ಊರಿಗೆ ಗುರಿಕಾರರಾಗಿದ್ದವರು. ಭೂ ಮಸೂದೆ ಕಾಯಿದೆಯಲ್ಲಿ ಭೂಮಿ ಕಳಕೊಂಡಿದ್ದಾರೆ. ಮನೆಯೊಂದೇ ಉಳಿದಿದೆ. ಮಕ್ಕಳಿಲ್ಲ. ಒಂದು ಕಾಲದಲ್ಲಿ ಹೆಸರಾಂತ ಬೇಟೆಗಾರ. ಕೆನೆತ್ ಆಂಡರ್‌ಸನ್ ಕೂಡ ಅವರನ್ನು ಬೇಟೆಗೆ ಕರೆದುಕೊಂಡು ಹೋಗುತ್ತಿದ್ದ. ಪುತ್ತೂರು ಸುಳ್ಯ ಕಾರ್ಕಳ ವೇಣೂರು ಆಗುಂಬೆ ಮುಂತಾದ ಕಡೆ ಸಾಕಷ್ಟು ಹುಲಿಬೇಟೆ ಆಡಿದ್ದಾರೆ. ಕೆನೆತ್ ಅಂಡರ್‌ಸನ್ ಅವರಿಗೆ ಅತ್ಯುತ್ತಮ ಶಿಕಾರಿದಾರ ಎಂದು ಬಿರುದು ಕೊಟ್ಟಿದ್ದಾರೆ.

ಅವರು ನಮ್ಮನ್ನೂ ಬೇಟೆಯಾಡಲು ಬಂದವರು ಎಂದುಕೊಂಡಿದ್ದರು. ಫಾರೆಸ್ಟ್ ಡಿಪಾರ್ಟುಮೆಂಟು ಸರಿಯಿಲ್ಲ. ಕಾಡಿಗೆ ಹೋಗೋದು ಅಪಾಯಕಾರಿ ಎಂದರು. ಬೇಟೆ ಆಡಿದರೆ ಜೈಲಿಗೆ ಹಾಕುತ್ತಾರೆ ಎಂದು ಎಚ್ಚರಿಕೆ ಕೊಟ್ಟರು. ನಾವು ಬೇಟೆ ಆಡುವುದಕ್ಕೆ ಬಂದಿದ್ದಲ್ಲ. ಕಾಡಿನಲ್ಲಿ ಕಾಣೆಯಾದವರನ್ನು ಹುಡುಕಿಕೊಂಡು ಬಂದಿದ್ದೇವೆ ಎಂದು ನಾನೆಷ್ಟೇ ಕಷ್ಟಪಟ್ಟರೂ ಅವರಿಗೆ ಹೇಳುವುದಕ್ಕೆ ಸಾಧ್ಯವಾಗಲೇ ಇಲ್ಲ.

ಒಳಗಿನಿಂದ ಬಂಗಾರಮ್ಮ ಮತ್ತೊಮ್ಮೆ ಬಂದು ನೀವು ಹೊರಡಿ ಎಂದು ನೇರವಾಗಿಯೇ ಹೇಳಿದರು. ಆ ಮನೆಗೆ

ನಮ್ಮನ್ನು ತಂದುಬಿಟ್ಟದ್ದಕ್ಕಾಗಿ ಅವನನ್ನು ಬೈಯುತ್ತಾ ನಾವು ಕಾರು ಹತ್ತಿದೆವು. ಒಂಟಿ ಮುದುಕರ ಕೈಗೆ ಯಾವತ್ತೂ ಸಿಕ್ಕಿಹಾಕಿಕೊಳ್ಳಬಾರದು ಎಂಬ ನನ್ನ ನಿರ್ಧಾರ ಈ ಘಟನೆಯಿಂದ ಮತ್ತಷ್ಟು ಬಲವಾಯಿತು. ಸಾಂತು ಸಿಕ್ಕರೆ ಅವನಿಗೆ ಹೊಡೆದೇ ಬಿಡಬೇಕು ಎಂಬಷ್ಟು ಸಿಟ್ಟಲ್ಲಿ ಶಿವ ಕುದಿಯುತ್ತಿದ್ದ.

ಆ ಕೆಟ್ಟ ರಸ್ತೆಯಲ್ಲಿ ನಾವು ಅರ್ಧ ದಾರಿ ಬರುವ ಹೊತ್ತಿಗೆ ಸಾಂತು ಎದುರಾದ. ಅವನು ಸೈಕಲ್ಲಿನ ಸಮೇತ ರಸ್ತೆಪಕ್ಕದಲ್ಲಿ ಅಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದ್ದ. ಸೈಕಲ್ಲಿನ ಕ್ಯಾರಿಯರ್‌ನಲ್ಲಿ ಆಗಷ್ಟೇ ತಲೆಕಡಿದ ಹಂದಿಯಿತ್ತು. ಅದರಿಂದ ಸುರಿದ ರಕ್ತ ಅವನ ಪಕ್ಕದಲ್ಲೇ ಹೆಪ್ಪುಗಟ್ಟಿತ್ತು.

ಸತ್ತು ಗಿತ್ತು ಹೋಗಿದ್ದಾನೋ ನೋಡು ಮಾರಾಯ ಅಂದೆ. ಬಡ್ಡೀಮಗ ಕುಡಿದು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಸಾಯ್ಲಿ ಅವನು ಅಂತ ಶಿವ ಅಸಹನೆಯಿಂದ ಹೇಳಿದ. ಮತ್ತೆ ನಾವು ಗಡಿ ತಲುಪುವ ಹೊತ್ತಿಗೆ ಗಂಟೆ ಆರಾಗಿತ್ತು. ಕಾಡಿನ ಮೇಲೆ ಕತ್ತಲು ಇಳಿಯುತ್ತಿತ್ತು. ನವೆಂಬರ್ ಕೊನೆಯ ವಾರವಾದ್ದರಿಂದ ಆರೂವರೆಗೆಲ್ಲ ಕತ್ತಲು ಕವಿಯುತ್ತಿತ್ತು. ಹೀಗಾಗಿ ನಾವು ಕಾಡಿನೊಳಗೆ ಹೋಗುವುದಕ್ಕೆ ಸಾಧ್ಯವೇ ಇರಲಿಲ್ಲ.

ಇವರನ್ನೆಲ್ಲ ನಂಬಿಕೊಂಡು ಈ ಕೆಲಸ ಮಾಡೋಕ್ಕಾಗಲ್ಲ. ನಾಳೆ ಬೇರೆ ಯಾರನ್ನಾದರೂ ಹುಡುಕಬೇಕು. ನೆಲ್ಯಾಡಿಯಲ್ಲಿ ಜೋಸೆಫ್ ಅಂತ ಮಲಯಾಳಂ ಮನೋರಮಾದ ರಿಪೋರ್ಟರ್ ಇದ್ದಾನಂತೆ. ಅವನಿಗೆ ಸಾವಿರ ರುಪಾಯಿ ಕೊಟ್ಟರೆ ನಮ್ಮೊಂದಿಗೆ ಬರುತ್ತಾನಂತೆ. ಮಮ್ಮೂಟ್ಟಿಯ ಯಾವುದೋ ಸಿನಿಮಾ ಶೂಟಿಂಗಿಗೆ ಈ ಪ್ರದೇಶವನ್ನೆಲ್ಲ ತೋರಿಸಿದ್ದೇ ಅವನಂತೆ ಎಂದ ಶಿವ. ಅವನನ್ನೇ ಕರೆದುಕೊಂಡು ಹೋಗುವುದು ಸೂಕ್ತ ಎಂದು ನಿರ್ಧರಿಸಿ ಮತ್ತೆ ಗುಂಡ್ಯಕ್ಕೆ ಮರಳುವ ತೀರ್ಮಾನ ಮಾಡಿದೆವು.

ನಾನು ರಾತ್ರಿ ವಾಗ್ಲೆಯವರಿಗೆ ಫೋನ್ ಮಾಡಿ ಸಾಂತುವಿನ ಪ್ರಸಂಗ ಹೇಳಿದೆ. ಲೋಫರ್ ಸೂಳೇಮಗ. ಅವನು ಹೀಗೇ ಅಂತ ಗೊತ್ತಿರಲಿಲ್ಲ. ಬರ್ಲಿ ನಾಳೆ. ಅವನನ್ನು ಡಿಸ್ಮಿಸ್ ಮಾಡಿಬಿಡ್ತೀನಿ. ನೀವೊಂದು ಕೆಲಸ ಮಾಡಿಬೆಳಗ್ಗೆ ಬನ್ನಿನಾನೇ ನಿಮ್ಮ ಜೊತೆಗೆ ಬರ್ತೀನಿ. ಈ ಲೌಡಿಮಕ್ಕಳನ್ನು ನಂಬಿಕೊಳ್ಳೋ ಹಾಗಿಲ್ಲ ಎಂದು ವಾಗ್ಲೆ ಹೀನಾಮಾನ ಬೈದರು.

ಅವರೂ ಫುಲ್ ಟೈಟಾಗಿರಬೇಕು ಅಂತ ಶಿವ ಅನುಮಾನ ವ್ಯಕ್ತಪಡಿಸಿದ. ಅವರ ಮಾತು ಕೇಳಿದ ಮೇಲೆ ನನಗೂ ಯಾವ ಅನುಮಾನವೂ ಉಳಿದಿರಲಿಲ್ಲ.

ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ. ಎರಡು ದಿನ ಏನೂ ಆಗದೇ ಸರಿದುಹೋಗಿತ್ತು. ಕಾಡಿನ ಒಳಗೆ ಹೋಗಿ ಅವರನ್ನು ಪತ್ತೆ ಮಾಡುವುದು ಹಾಗಿರಲಿಕಾಡನ್ನು ಪ್ರವೇಶಿಸುವುದಕ್ಕೇ ಸಾಧ್ಯವಾಗುತ್ತಿಲ್ಲವಲ್ಲ. ನಾಳೆ ವಾಗ್ಲೆ ಬರುತ್ತಾರಾಮತ್ತೇನೋ ಸಮಸ್ಯೆ ಎದುರಾಯಿತು ಎಂದು ಕೈ ಕೊಟ್ಟರೇ ಏನು ಮಾಡುವುದು. ಜೋಸೆಫ್ ನಮಗೆ ಎಷ್ಟರ ಮಟ್ಟಿಗೆ ಸಹಾಯ ಮಾಡಬಹುದು ಎಂದು ಯೋಚಿಸುತ್ತಾ ಹೊಟೆಲಿನ ಕಿಟಕಿ ಹತ್ತಿರವೇ ಕೂತಿದ್ದೆ.

ನಡುರಾತ್ರಿ ದಾಟುತ್ತಿದ್ದಂತೆ ಕಾಡಿನ ನಡುವಿನಿಂದಶಿರಾಡಿ ಘಟ್ಟದ ಬುಡದಲ್ಲಿ ವೇಗವಾಗಿ ಬೆಳಕೊಂದು ಚಲಿಸುವುದು ಕಾಣಿಸಿತು. ಆ ಬೆಳಕು ಹಾವಿನ ಹಾಗೆ ಕಾಡನ್ನು ಸೀಳಿಕೊಂಡು ಧಾವಿಸುತ್ತಿತ್ತು. ನಾನು ಶಿವನನ್ನು ಎಬ್ಬಿಸಿ ಕಿಟಕಿಯ ಸಮೀಪ ಕರೆತರುವಷ್ಟರಲ್ಲಿ ಅಂಥ ಬೆಳಕು ಅಲ್ಲಿ ನುಸುಳಿಕೊಂಡು ಹೋದದ್ದೇ ಸುಳ್ಳೇನೋ ಎಂಬಂತೆ ಇಡಿ ಕಾಡು ಕತ್ತಲೆಯಲ್ಲಿ ಮಲಗಿತ್ತು.

ಶಿವ ನನ್ನನ್ನೊಮ್ಮೆ ಅನುಕಂಪದಿಂದ ನೋಡಿ ಆಕಳಿಸುತ್ತಾ ಮತ್ತೆ ಮಲಗಿದ.

‍ಲೇಖಕರು avadhi

December 18, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. guru

    nijakku adenta belaku nanagantu kutuhala tadeyoke agta illa swami. bega bega bariri

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: