ಜೋಗಿ ಎಂಬ ಕಾಡು

ಕಾಡಿನೊಳಗೆ ಕಾಲಿಡುವ ಮುನ್ನ...

chitte new front(2) chiitee new back(2)

ಜೋಗಿ ಹೊಸ ಕಾದಂಬರಿ ಬರೆದಿದ್ದಾರೆ. ಹೆಸರೇ ಸಾಕು ಒಂದೇ ಏಟಿಗೆ ಚಿತ್ ಮಾಡಿಬಿಡುತ್ತದೆ- ಚಿಟ್ಟೆ ಹೆಜ್ಜೆಯ ಜಾಡು. ಈ ಕಾದಂಬರಿಯ ಬಿಡುಗಡೆಗೆ ಮುನ್ನವೇ ಅವರು ಕಾದಂಬರಿ ಬರೆದು ಮುಗಿಸಿದ್ದಾರೆ ಎಂಬುದು ದಾಖಲೆ. ಆ ಕಾದಂಬರಿಗೆ ಜೋಗಿ ಬರೆದ ನಾಲ್ಕು ಮಾತುಗಳು ಇಲ್ಲಿದೆ. ಸಧ್ಯದಲ್ಲೇ ಅವರ ಕಾದಂಬರಿಯ ಕೆಲ ಅಧಾಯಗಳನ್ನು ನಿಮಗಾಗಿ ತರುತ್ತಿದ್ದೇವೆ-
ಚಾರ್ಮಾಡಿ ಘಾಟಿ ಹತ್ತಿ ಕೊಟ್ಟಿಗೆಹಾರ ದಾಟಿ ಮೂಡಿಗೆರೆ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದರೆ ಬಣಕಲ್ ಎಂಬ ಪುಟ್ಟ ಊರು ಎದುರಾಗುತ್ತದೆ. ಅಲ್ಲಿಂದ ಮುಂದೆ ಹೋದರೆ ಚಕಮಕಿ ಎಂಬ ವಿಚಿತ್ರ ಹೆಸರಿನ ಊರು ಸಿಗುತ್ತದೆ. ಅಲ್ಲಿಂದ ಎಡಕ್ಕೆ ಸಾಗುವ ಹಾದಿಯಲ್ಲಿ ಏಳೋ ಎಂಟೋ ಮೈಲಿ ಸಾಗಿದರೆ ಕತ್ತಲೆ ಕಾನ ಎಂಬ ಹೆಸರಿನ ಜಾಗವೊಂದು ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತದೆ. ಸದಾ ಕತ್ತಲು ಕವಿದಂತಿರುವ ಆ ಜಾಗ ಬೆಟ್ಟದ ಇಳಿಜಾರಿನಲ್ಲಿದೆ. ಎಡಭಾಗದಲ್ಲಿ ಕಡಿದಾದ ಗುಡ್ಡವೂ ಬಲಭಾಗದಲ್ಲಿ ಇಳಿಜಾರು ಭೂಮಿಯೂ ಇರುವ ಆ ಜಾಗದಲ್ಲಿ ಸುಮಾರು ಮೂವತ್ತು ವರುಷಗಳ ಹಿಂದೆ ನನ್ನ ಅಣ್ಣ ಮೂರೆಕರೆ ಜಾಗ ತೆಗೆದುಕೊಂಡು ತೋಟ ಗದ್ದೆ ಮಾಡಿದ್ದ.
ಏಳನೇ ಕ್ಲಾಸು ಓದುತ್ತಿದ್ದ ನಾನು ವಾರ್ಷಿಕ ರಜೆಯಲ್ಲಿ ಅಲ್ಲಿಗೆ ಹೋದಾಗಲೇ ನನಗೆ ಕಾಡಿನ ಖಯಾಲಿ ಶುರುವಾಗಿದ್ದು. ಎಂಟು ಕಿಲೋಮೀಟರ್ ನಡೆದು ಕತ್ಲೆಕಾನ ಸೇರಿಕೊಂಡರೆ ಆಮೇಲೆ ಬರೀ ವನವಾಸವೇ. ಸೂರ್ಯನ ಬೆಳಕೇ ಬೀಳದ ಕಾಡು. ಸದಾ ಜೌಗು ಜೌಗಾಗಿರುವ ಕಪ್ಪು ನೆಲ. ಕಾಲಿಗೆ ಅಂಟುವ ಕೆಸರು. ಮಳೆಗಾಲದಲ್ಲಿ ಕಾಲಿಗೆ ಮುತ್ತುವ ಜಿಗಣೆ. ಕಾಡಿನ ನಡುವಿನಿಂದೆಲ್ಲಿಂದಲೋ ಹರಿದು ಬರುವ ಪುಟ್ಟ ತೊರೆ. ಚಳಿಗಾಲದಲ್ಲಿ ಮುಟ್ಟಿದರೆ ಕೈ ಕೊರೆಯುವ ಥಂಡಿ ನೀರು. ಕಾಡಿನಲ್ಲಿ ಸಾಗುತ್ತಿದ್ದಂತೆ ಥಟ್ಟನೆ ಪ್ರತ್ಯಕ್ಷವಾಗಿ ಕಂಗಾಲಾಗುವ ಮುಳ್ಳು ಹಂದಿ, ರಾತ್ರಿ ಬತ್ತದ ಗದ್ದೆಗೆ ಲಗ್ಗೆ ಇಡುವುದಕ್ಕೆ ಬರುವ ಕಾಡುಹಂದಿ, ರಾತ್ರಿ ಮಲಗಿದರೆ ಮನೆಯ ಕಂಬಕ್ಕೆ ಮೈಯುಜ್ಜಿ ಇಡೀ ಮನೆ ಕಂಪಿಸುವ ಹಾಗೆ ಮಾಡುವ ಕಾಡುಕೋಣ, ಬಚ್ಚಲು ಮನೆಯ ಮಾಡಿಗೆ ಹಬ್ಬಿದ ಕಲ್ಲಂಗಡಿ ತಿನ್ನಲು ಬಂದು ಇಡೀ ಬಚ್ಚಲನ್ನೇ ಬೀಳಿಸಿಹೋಗುವ ಕಾಡಾನೆ. ಕಾಡೆಂದರೆ ಆ ಕಾಲಕ್ಕೆ ನಮಗೆ ವೀನಸ್ ಸರ್ಕಸ್ಸು. ತೋಟದ ಕೆಲಸಕ್ಕೆ ಹೋಗುವ ತರುಣರೆಲ್ಲ ಬತ್ತದ ಗದ್ದೆಯ ಬೇಲಿಗೆ ತಂತಿಯ ಉರುಳಿಟ್ಟು ಪಿಳಿಪಿಳಿ ಕಣ್ಣು ಬಿಡುವ ಮೊಲಗಳನ್ನು ಹಿಡಿಯುತ್ತಿದ್ದರು. ಉದ್ದದ ಸರಳೊಂದರ ತುದಿಯನ್ನು ಚೂಪುಮಾಡಿ ಮುದುಕನೊಬ್ಬ ನದಿಯಲ್ಲಿ ಓಡುವ ಮೀನುಗಳನ್ನು ಮಿಂಚುಳ್ಳಿಗಿಂತ ಜಾಣ್ಮೆಯಿಂದ ಚುಚ್ಚಿ ಹಿಡಿಯುತ್ತಿದ್ದ. ಎಷ್ಟೋ ಸಾರಿ ಕಾಡು ಹಂದಿಯನ್ನು ಕೋಲೊಂದಕ್ಕೆ ಕಟ್ಟಿ ಹೊತ್ತುಕೊಂಡು ಹೋಗುವ ಯುವಕರು ದಾರಿಯಲ್ಲಿ ಸಿಗುತ್ತಿದ್ದರು. ಗದ್ದೆ ಬದಿಯ ಸಂದಿಯಲ್ಲಿ, ಹೊಳೆಯ ಪೊಟರೆಗಳಲ್ಲಿ ಓಡಾಡುವ ಏಡಿಯನ್ನು ಕೈ ಹಾಕಿ ಹಿಡಿದು ಅದರ ಕಾಲುಗಳನ್ನು ಕಿತ್ತು ಜೇಬಿಗೆ ಹಾಕಿಕೊಂಡು ಮನೆಗೆ ಹೋಗಿ ಹುರಿದು ತಿನ್ನುವವರಿದ್ದರು.
ಹೀಗೆ ಕಾಡನ್ನು ಅದರ ಎಲ್ಲಾ ವೈವಿಧ್ಯದ ಜೊತೆ ಪರಿಚಯಿಸಿದ್ದು ನನ್ನ ಅಣ್ಣ ಎಚ್. ನಾರಾಯಣ ರಾವ್. ಅಣ್ಣನ ಉತ್ಸಾಹ ಎಷ್ಟಿತ್ತೆಂದರೆ ಅಲ್ಲಿಂದ ಸುಮಾರು ಅರುವತ್ತೋ ಎಪ್ಪತ್ತೋ ಕಿಲೋಮೀಟರ್ ದೂರವಿರುವ ಉಪ್ಪಿನಂಗಡಿಗೆ ಸೈಕಲ್ಲಿನಲ್ಲಿ ನಾವಿಬ್ಬರೂ ಹೊರಟುಬಿಡುತ್ತಿದ್ದೆವು. ಒಂದು ಬಾರಿ ಹಾಗೆ ಹೊರಟವರು ಚಾರ್ಮಾಡಿ ಘಾಟಿಯ ನಡುವೆ ಭೀಕರ ಮಳೆಗೆ ಸಿಕ್ಕಿಹಾಕಿಕೊಂಡು ರಸ್ತೆಗೆ ಇಡೀ ಗುಡ್ಡವೇ ಉರುಳಿ, ಮಳೆಯಲ್ಲಿ ನಡುಗುತ್ತಾ ಇಡೀ ರಾತ್ರಿ ಕಳೆದಿದ್ದೆವು.
ಇಂಥ ನೆನಪುಗಳೇ ನನ್ನನ್ನು ಕಾಡಿನ ಕತೆಯತ್ತ ಸೆಳೆದಿರಬೇಕು. ನಾನು ೧೯೮೦ರಲ್ಲಿ ಬರೆದ ಮೊದಲ ಕತೆಯೂ ಕಾಡಿನ ಕುರಿತಾಗಿತ್ತು. ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಕಾಡಿಗೆ ಹೋಗಿ, ಕಾಡಿನ ನಡುವೆ ಸಿಕ್ಕಿಹಾಕಿಕೊಂಡ ಹುಡುಗನೊಬ್ಬನ ಕತೆ ಅದು. ಅದರ ಹಸ್ತಪ್ರತಿ ಎಲ್ಲೋ ಮಾಯವಾಗಿದೆ. ಆದರೆ ಆಗ ಬರೆದ ಘಟನೆಗಳು ಸಾಕಷ್ಟು ನೆನಪಿವೆ.
ನಾನು ಹುಟ್ಟಿದೂರು ಗುರುವಾಯನಕೆರೆ. ಅಲ್ಲಿ ನಮ್ಮ ಮನೆಯ ಅಂಗಳದಲ್ಲಿ ನಿಂತು ನೋಡಿದರೆ ಕುದುರೆಮುಖ ಪರ್ವತಶ್ರೇಣಿ ನೀಲಿ ನೀಲಿಯಾಗಿ ಕಾಣಿಸುತ್ತಿತ್ತು. ಚಳಿಗಾಲದಲ್ಲಿ ಕಾಡ್ಗಿಚ್ಚು ಬಿದ್ದು ಪರ್ವತಶ್ರೇಣಿಯ ಒಂದು ಭಾಗಕ್ಕೆ ಹವಳದ ಸರ ತೊಡಿಸಿದಂತೆ ಕಾಣುತ್ತಿತ್ತು. ಗುರುವಾಯನಕೆರೆಯಿಂದ ಆರೆಂಟು ಮೈಲಿ ಸಾಗಿದರೆ ಅಳದಂಗಡಿ, ವೇಣೂರು ಮುಂತಾದ ಕಾಡಿನ ತಪ್ಪಲಲ್ಲಿರುವ ಊರುಗಳು ಸಿಗುತ್ತಿದ್ದವು. ಅಲ್ಲಿ ಮನೆ ಮಾಡಿಕೊಂಡಿದ್ದಾಗ ಹುಲಿ ಹಟ್ಟಿಗೆ ಬಂದು ಕರುಗಳನ್ನು ಕದ್ದೊಯ್ಯುತ್ತಿದ್ದ ಕತೆಗಳನ್ನು ನಮ್ಮಜ್ಜಿ ಹೇಳುತ್ತಿದ್ದರು.
ಆಮೇಲೆ ನಾನು ಉಪ್ಪಿನಂಗಡಿಗೆ ಬಂದೆ. ಅದೂ ಕಾಡಿನ ಸೆರಗಲ್ಲೇ ಇತ್ತು. ಸುಬ್ರಹ್ಮಣ್ಯ, ಸುಳ್ಯ ದಿಕ್ಕಿನ ಕಡೆ ಹೋದರೆ ದಟ್ಟವಾದ ಕಾಡು ಎದುರಾಗುತ್ತಿತ್ತು. ನಾನು ಸೈಕಲ್ ಕೊಂಡಾಗ ನಾನು, ಸುಬ್ರಾಯ, ಜಯರಾಮ ತ್ರಿಬಲ್ ರೈಡಿಂಗಲ್ಲಿ ಕಾಡಿಗೆ ಹೋಗಿ ಸುತ್ತಾಡಿ ಬರುತ್ತಿದ್ದೆವು. ಎಷ್ಟೋ ರಾತ್ರಿ ಅಲ್ಲೇ ಉಳಿದುಕೊಂಡಿದ್ದೂ ಇತ್ತು.
***
ಕಾಡಿನ ಕತೆಗಳನ್ನು ನನಗೆ ಓದಿಸಿದವರು ಕೆದಂಬಾಡಿ ಜತ್ತಪ್ಪ ರೈ. ಅವರ ಬೇಟೆಯ ಕತೆಗಳಲ್ಲಿ ಬರುವ ಕಾಡು ನಮ್ಮೂರಿನದೇ ಆಗಿತ್ತು. ಆಮೇಲೆ ಓದಿದ ಕುವೆಂಪು ಕಾದಂಬರಿ ಕಾನೂರು ಹೆಗ್ಗಡಿತಿ’ಯ ಕಾಡು ಇವತ್ತಿಗೂ ನಂಗಿಷ್ಟ. ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕಾಡಿಗಿಂತ ಕಾನೂರಿನ ಕಾಡೇ ಪ್ರಿಯ. ಆದರೆ ಕಾಡಿನ ಚಿತ್ರವನ್ನು ಅಚ್ಚಳಿಯದಂತೆ ಕಟ್ಟಿಕೊಟ್ಟವರು ಪೂರ್ಣಚಂದ್ರ ತೇಜಸ್ವಿ. ನಾನು ಅವರ ಮನೆಗೆ ಹೋದಾಗೆಲ್ಲ ಆ ಬೆಂಗಳೂರಲ್ಲಿ ಕೂತು ಎಂಥ ಬರೀತಿ ಮಾರಾಯ? ಅದೇ ಹಾದಿ, ಅದೇ ಬೀದಿ. ಅಲ್ಲಿ ಕತೆಗಳು ಹುಟ್ಟುತ್ತಾ?’ ಎಂದು ರೇಗಿಸುತ್ತಿದ್ದ ತೇಜಸ್ವಿಯವರು ನಾನು ಬರೆಯಲು ಕುಳಿತಾಗೆಲ್ಲ ಕಾಡುತ್ತಾರೆ. ಅವರು ಕಾಡಿನ ಬಗ್ಗೆ ಹೇಳಿದ ನಂತರ ಮತ್ತೇನು ಹೇಳುವುದಕ್ಕೆ ಉಳಿದಿದೆ ಎಂದು ನಾನೇ ಎಷ್ಟೋ ಸಲ ಕೇಳಿಕೊಂಡಿದ್ದೇನೆ. ಹಾಗೆ ಪ್ರಶ್ನೆಗಳ ಎದುರು ಕುಳಿತುಕೊಂಡರೆ ಉತ್ತರ ಸಿಗುವುದಿಲ್ಲ. ತುಂಬ ಪ್ರಯತ್ನಪೂರ್ವಕವಾಗಿ ಬೇರೆ ದಾರಿ ಹಿಡಿಯಲು ಯತ್ನಿಸುವುದು ಕೂಡ ಅಷ್ಟು ಸರಿಯಲ್ಲವೇನೋ?
ಕತೆಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಕಾಡು ಕಾಲಕಾಲಕ್ಕೆ ಬದಲಾಗುತ್ತಾ ಸಾಗಿದೆ. ಕಾನೂನು ಹೆಗ್ಗಡಿತಿಯ ಕಾಡಲ್ಲಿ ಭೇಟೆ ಒಂದು ಸಂಭ್ರಮ. ಕಾರಂತರ ನಾಯಕನಿಗೆ ಕಾಡು ಕಡಿದು ಅಲ್ಲಿ ಹೊಲಗದ್ದೆ ಮಾಡುವುದು ವ್ಯಕ್ತಿಯ ಸಾಧನೆ, ಛಲದ ಪ್ರತೀಕ. ತೇಜಸ್ವಿಯವರಿಗೆ ಕಾಡಿನ ನಿಗೂಢಗಳ ಕುರಿತು ಅತೀವ ಬೆರಗು. ಅದೊಂದು ಮುಗಿಯವ ಅಚ್ಚರಿಯ ಸಂತೆ.
ಆದರೆ ಇವತ್ತು ಶಿಕಾರಿ ನಿಷಿದ್ಧ. ಕಾಡನ್ನು ಕಡಿದು ಹೊಲ ಮಾಡುವುದು ಪರಿಸರ ವಿರೋಧಿ ನಿಲುವು. ನಿಗೂಢತೆಯನ್ನಷ್ಟೇ ಕಾಡು ಉಳಿಸಿಕೊಂಡಿದೆ. ಅಭಿವೃದ್ಧಿ ಯೋಜನೆ’ಗಳ ತೆಕ್ಕೆಯಿಂದ ಕಾಡನ್ನು ಹೇಗೆ ಪಾರು ಮಾಡಬೇಕು ಅನ್ನುವುದು ಇವತ್ತಿನ ಚಿಂತೆ. ಹೀಗೆ ಬದಲಾಗುತ್ತಾ ಬಂದಿರುವ ಕಾಡಿನ ಕುರಿತ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಕಾದಂಬರಿ ರೂಪುಗೊಂಡಿದೆ. ಇಲ್ಲಿ ಬರುವ ಘಟನೆಗಳು ಕಾಲ್ಪನಿಕ. ಮೂಲ ಘಟನೆಗೆ ಮಾತ್ರ ಒಂದು ಪುಟ್ಟ ಸ್ಪೂರ್ತಿಯಿದೆ.
ಕಾಡಿನ ಕತೆಗಳ ಸರಣಿಯಲ್ಲಿ ಇದು ಕೊನೆಯದು. ನದಿಯ ನೆನಪಿನ ಹಂಗು’ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಡು ಎದುರಾಗುತ್ತದೆ. ಕಾಡು ಹಾದಿಯ ಕತೆಗಳಲ್ಲೂ ಕಾಡಿದೆ. ರಾಯಭಾಗದ ರಹಸ್ಯ ರಾತ್ರಿ’ಯ ಕತೆಗಳಲ್ಲಿ ಹೆಚ್ಚಿನವು ಕಾಡಿನೊಳಗೇ ನಡೆಯುತ್ತವೆ.
***
ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ದಂಪತಿಯ ಅಕ್ಕರೆ, ಒತ್ತಾಯದಿಂದ ಇದು ಹೊರಬರುತ್ತಿದೆ. ಅಂಕಿತ ಪುಸ್ತಕಕ್ಕೆ ಕಾಲಿಟ್ಟರೆ ಸಾಕು ಪ್ರಕಾಶ್ ಅಸೈನ್‌ಮೆಂಟ್ ಕೊಟ್ಟು ಬಿಡುತ್ತಾರೆ ಎಂದು ಗೆಳೆಯ ಇಸ್ಮಾಯಿಲ್ ಮೊನ್ನೆ ಮೊನ್ನೆ ತಮಾಷೆ ಮಾಡುತ್ತಿದ್ದರು. ಹತ್ತು ಹಲವು ಸಂಗತಿಗಳಲ್ಲಿ ಮುಳುಗಿ ಹೋಗಿರುವ ನನಗೆ ಅಂಥ ಒತ್ತಾಯವಿಲ್ಲದೇ ಹೋದರೆ ಬರೆಯುವುದು ಸಾಧ್ಯವೇ ಇಲ್ಲ.
ಅಕ್ಕರೆ ಸೂಸುವ, ಓದುವ, ಪ್ರೀತಿಸುವ ಎಲ್ಲರಿಗೂ ಕೃತಜ್ಞತೆ.
-ಜೋಗಿ

‍ಲೇಖಕರು avadhi

May 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

8 ಪ್ರತಿಕ್ರಿಯೆಗಳು

 1. suresh kota

  ಬರೆವ, ಬರೆದು ನಮ್ಮನ್ನು ಮುದಗೊಳಿಸುವ ನಿಮಗೂ ಕೃತಜ್ಞತೆ.

  ಪ್ರತಿಕ್ರಿಯೆ
 2. shama

  ಈ “ಜೋಗಿ”ಯವರು ಪ್ರತಿ ಸಲವೂ ನಾನು ಊರಿಗೆ ಹೋಗುವ ದಿನವೇ ಅವರ ಪುಸ್ತಕ ಬಿಡುಗಡೆಯನ್ನು ಇಟ್ಟುಕೊಳ್ಳುವುದರ ಹಿಂದಿನ ರಹಸ್ಯ ಇನ್ನೂ ಗೊತ್ತಾಗಲಿಲ್ಲ… ತಿಳಿದವರು ಹೇಳಿ ಪ್ಲೀಸ್…

  ಪ್ರತಿಕ್ರಿಯೆ
 3. vinayaka kodsara

  ಕಾಡಿನಲ್ಲೇನೋ ಜೊಗಪ್ಪಾ ನಿನ್ನರಮನೆ…?!(ಸುಮ್ನೆ ತಮಾಷೆ ಮಾಡಿದೆ ಜೋಗಿ ಕ್ಷಮಿಸುತ್ತಾರೆಂಬ ಭರವಸೆ ಮೇಲೆ) ಅಲ್ಲ ಅದೆಷ್ಟು ಬರಿತಿರಿ ಮಾರಾಯ್ರೆ ನೀವು? ಸಿರಿಯಲ್, ಕಾಲಂ, ಪತ್ರಿಕೆ, ಕಥೆ, ಕಾದಂಬರಿ…ಹೋಯ್ ನಮಗೂ ಒಂಚೂರು ಜಾಗ ಉಳಿಸಿ ಮಾರಾಯ್ರೆ…ಆದ್ರೂ ಎಲ್ಲದರಲ್ಲೂ ಬರಹದ ಲಯ ಉಳಿಸಿಕೊಳ್ಳುವುದು ಬಹುಶಃ ಜೋಗಿ ವಿಶೇಷ…ನಾನಂತೂ ಪುಸ್ತಕಕ್ಕಾಗಿ ಕಾಯುತ್ತಿರುವೆ…

  ಪ್ರತಿಕ್ರಿಯೆ
 4. ನಾಗೇಶ್

  ಪ್ರಿಯ ಜೋಗಿಯವರೆ ನಿಮ್ಮ ಹೊಸ ಪುಸ್ತಕಕ್ಕಾಗಿ ನಾವು ಎದುರು ನೊಡುತ್ತಿದ್ದೇವು, ಮಾರಾಯೆರೆ, ನಿಮಗೆ ಒಳ್ಳೆಯದಾಗಲಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: