ಜೋಗಿ ಕಾದಂಬರಿ ಹೊಸ ಭಾಗ

 
ಭಾಗ-3
jogijpg11
ಗಡಿಚಾಮುಂಡಿಯ ಸಾನ್ನಿಧ್ಯದಲ್ಲಿ….

 
ಶಿವ ಕಾರಿನಲ್ಲಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ. ವಾಗ್ಲೆಯವರು ಬರದೇ ನಾನೇನೂ ಮಾಡುವಂತಿರಲಿಲ್ಲ. ಆ ಪ್ರದೇಶದ ಬಗ್ಗೆ ವಾಗ್ಲೆಯವರಿಗೆ ಸಾಕಷ್ಟು ವಿವರಗಳು ಗೊತ್ತಿದ್ದವು. ಅವರಿಗೋಸ್ಕರ ಕಾಯುತ್ತಾ ನಾನೂ ನಿದ್ದೆ ಹೋದೆ. ಎದ್ದಾಗ ಮಧ್ಯಾಹ್ನವಾಗಿತ್ತು. ಮತ್ತೆ ಹಸಿವು ಶುರುವಾಗಿತ್ತು.
ವಾಗ್ಲೆಯವರನ್ನು ಭೇಟಿಯಾಗದೇ ಮುಂದುವರಿಯುವ ಹಾಗೇ ಇರಲಿಲ್ಲ. ಅವರು ಕಳುಹಿಸಿಕೊಟ್ಟ ಲಾರ್ಡ್ ಕೃಷ್ಣಪ್ಪ ಕೈ ಕೊಟ್ಟಿದ್ದರಿಂದ, ಅವರೇ ಬಂದು ಬೇರೆಯವರನ್ನು ಜೊತೆಗೆ ಕಳುಹಿಸಬೇಕಿತ್ತು. ಸಾಂತು ನಮ್ಮ ಜೊತೆ ಬರುವುದಕ್ಕೆ ತುದಿಗಾಲಲ್ಲಿ ನಿಂತಿದ್ದ.
ನಾನು ವಾಗ್ಲೆಗೆ ಫೋನ್ ಮಾಡಿದೆ. ಅವರ ಮೊಬೈಲು ಫೋನು ವ್ಯಾಪ್ತಿಪ್ರದೇಶದ ಹೊರಗಿತ್ತು. ಸಕಲೇಶಪುರದಿಂದ ಹೊರಟು ಮಂಜರಾಬಾದ್ ಕೋಟೆ ದಾಟಿದೆವೆಂದರೆ ಅಲ್ಲಿಂದ ಗಡಿಚಾಮುಂಡಿ ಕ್ಷೇತ್ರದ ತನಕ ಮೊಬೈಲು ರೇಂಜ್ ಸಿಗುವುದಿಲ್ಲ. ಕಾಯುವ ಬದಲು ಗಡಿಗೆ ಹೋಗಿ ಅಲ್ಲೇನಾದರೂ ತಿಂದು ಬರೋಣ ಎಂದುಕೊಂಡೆವು. ಶಿವನೂ ಹಸಿದಿದ್ದ. ಅವನಿಗೆ ಡಯಾಬಿಟೀಸ್ ಇದ್ದದ್ದರಿಂದ ಹೊತ್ತು ಹೊತ್ತಿಗೆ ಏನಾದರೂ ತಿನ್ನಲೇಬೇಕಿತ್ತು.
7
ನಿಮ್ಮ ಸಾಹೇಬ್ರು ಬಂದ್ರೆ ಹೇಳಿ. ಇಲ್ಲೇ ಹೋಗಿ ಬರ್ತೀವಿ ಅಂತ ಸಾಂತುವಿಗೆ ಹೇಳಿ ಬರಲು ನಾನು ಮತ್ತೆ ಫಾರೆಸ್ಟ್ ಆಫೀಸಿನತ್ತ ಕಾಲು ಹಾಕುತ್ತಿದ್ದಂತೆ ಸಾಂತು ನಮ್ಮ ಕಡೆಗೇ ಓಡಿ ಬರುವುದು ಕಾಣಿಸಿತು. ವಾಗ್ಲೆಯವರ ಫೋನ್ ಬಂದಿರಬಹುದು ಎಂದುಕೊಂಡು ಅವನಿಗಾಗಿ ಕಾದೆ.
ಸಾಹೇಬ್ರು ಬರೋದು ಲೇಟಾಗ್ತಾದಂತೆ.. ಗೇಟಲ್ಲಿ ಏನೋ ಪ್ರಾಬ್ಲೆಮ್ಮಾಗಿದೆ ಎನ್ನುತ್ತಾ ಸಾಂತು ನಾವಿದ್ದಲ್ಲಿಗೆ ಬಂದ. ಮಾರನಹಳ್ಳಿಯ ಸಮೀಪ ಇರುವ ಫಾರೆಸ್ಟ್ ಗೇಟಿಗೆ ಒಂದು ಕಾರು ಡಿಕ್ಕಿ ಹೊಡೆದು ಜಖಂ ಆಗಿದೆ. ಕಾನಡ್ಕ ಟೀ ಎಸ್ಟೇಟಿನವರ ಕಾರು. ದೊಡ್ಡ ಗಲಾಟೆ ಆಗ್ತಿದೆ ಅಂತ ಸಾಂತು ಗಾಬರಿಯಲ್ಲಿ ಹೇಳಿದ. ಅದಕ್ಕೆ ಗಲಾಟೆ ಯಾಕಾಗಬೇಕು ಅನ್ನುವುದು ನನಗೆ ಅರ್ಥವಾಗಲಿಲ್ಲ.
ಗಡಿಯಲ್ಲಿರುವ ಪುಟ್ಟ ಹೊಟೆಲಿನಲ್ಲಿ ಬಿಸಿಬಿಸಿ ಗಂಜಿ, ಮೀನು ಸಾರು, ಹುರಿದ ಮೀನು ಕಾಯುತ್ತಿತ್ತು. ಹೊಟೆಲಿನ ಮಾಲಿಕ ಮಮ್ಮದೆ  ನನಗೆ ಹಳೆಯ ಪರಿಚಯ. ಕಾಣೆಮೀನಿನ ಗಸಿ ಮಾಡಿಟ್ಟಿದ್ದ. ರಾತ್ರಿಯೂ ಇಲ್ಲಿಗೇ ಊಟಕ್ಕೆ ಬನ್ನಿ. ಏಡಿ ಗಸಿ ಮಾಡ್ತೀನಿ ಅಂತ ಆಶೆ ಹುಟ್ಟಿಸಿದ. ಬೆಂಗಳೂರಲ್ಲಿ ಸಿಗುವ ಒಂದೆರಡು ಕೇಜಿ ತೂಗುವ ದೊಡ್ಡ ಏಡಿಗಳಿಗಿಂತ ಸಣ್ಣ ಕೊರಕಲುಹಳ್ಳಗಳ ಕಲ್ಲುಗಳ ನಡುವೆ ಅವಿತುಕೊಂಡಿರುವ ಏಡಿಗಳೇ ರುಚಿ. ಹೀಗಾಗಿ ರಾತ್ರಿಯೂಟ ಅಲ್ಲೇ ಎಂದು ನಿರ್ಧರಿಸಿದೆವು.
ಕಾಡಿನಲ್ಲಿ ಕಣ್ಮರೆಯಾದ ಚಾರಣಿಗರ ಬಗ್ಗೆ ಮಮ್ಮದೆಯ ಹತ್ತಿರ ವಿಚಾರಿಸಿದೆ. ಅವನಿಗೆ ಅವರ ಬಗ್ಗೆ ಗೊತ್ತಿತ್ತು. ಆದರೆ, ಕಾಣೆಯಾದವರ ಬಗ್ಗೆ ಅವನಲ್ಲಿ ಯಾವ ಅನುಕಂಪವೂ ಇರಲಿಲ್ಲ. ಹೆಣ್ಮಕ್ಕಳನ್ನು ಕರಕೊಂಡು ಮಜಾ ಮಾಡೋದಕ್ಕೆ ಬರ್ತಾರೆ. ಅಲ್ಲಿ ಕುಡಿದು ತಿಂದು ಮಜಾ ಮಾಡಿ ಹೋಗ್ತಾರೆ. ಹಾಗೇ ಆಗಬೇಕು. ಇನ್ನೊಂದು ನಾಲ್ಕು ಜನ ಕಾಣೆಯಾದ್ರೆ ಅವರ ಕಾಟವಾದ್ರೂ ತಪ್ಪುತ್ತೆ’ ಎಂದು ಕೆಟ್ಟ ಬೈಗುಳ ಸೇರಿಸಿ ಬೈದುಕೊಂಡ. ಅವರು ಮೂವರೇ ಬಂದಿದ್ದು ಮಾರಾಯ. ಎಲ್ಲರನ್ನೂ ಒಂದೇ ಥರ ನೋಡಬೇಡ ಎಂದೆ. ಮಮ್ಮದೆಗೆ ಅದೇನೂ ನಾಟಿದಂತೆ ಕಾಣಲಿಲ್ಲ.
ಇಷ್ಟು ಹೊತ್ತಿಗೆ ವಾಗ್ಲೆ ಮರಳಿರಬಹುದು ಎಂದುಕೊಂಡು ನಾವು ವಾಪಸ್ಸು ಹೊರಟೆವು. ಇದ್ದಕ್ಕಿದ್ದಂತೆ ಒಂದರ ಹಿಂದೊಂದರಂತೆ ಲಾರಿಗಳೂ ಕಾರುಗಳೂ ಬಸ್ಸುಗಳೂ ಎದುರಾದವು. ಆ ಹೊತ್ತಲ್ಲಿ ಶಿರಾಡಿ ಘಾಟಿಯಲ್ಲಿ ವಾಹನಗಳ ದಟ್ಟಣೆ ಅಷ್ಟೇನೂ ಇರುವುದಿಲ್ಲ. ಈ ಮೆರವಣಿಗೆ ಯಾಕೆ ಎಂದು ನನಗೆ ಆಶ್ಟರ್ಯವಾಯಿತು. ಗಡಿಯಿಂದ ಫಾರೆಸ್ಟು
ಆಫೀಸಿಗೆ ಏಳು ಕಿಲೋಮೀಟರ್ ಕ್ರಮಿಸುವುದಕ್ಕೆ ನಮಗೆ ಒಂದು ಗಂಟೆ ಬೇಕಾಯಿತು..
ನಾವು ವಾಪಸ್ಸು ಬರುವ ಹೊತ್ತಿಗೆ ವಾಗ್ಲೆ ಬಂದಿದ್ದರು. ತುಂಬಾ ಸುಸ್ತಾದಂತೆ ಕಾಣುತ್ತಿದ್ದರು. ನಿಮ್ಮನ್ನು ತುಂಬಾ ಕಾಯಿಸಿಬಿಟ್ಟೆ ಅನ್ನುತ್ತಲೇ ಹಳ್ಳಿಯವರನ್ನು ಬಾಯಿಗೆ ಬಂದಂತೆ ಬೈಯತೊಡಗಿದರು. ಅವರ ಸಿಟ್ಟು ನೋಡಿದರೆ ಅಲ್ಲಿ ದೊಡ್ಡ ಅನಾಹುತವೇ ಆಗಿರಬೇಕು ಅಂದುಕೊಂಡೆ.
ಅಂಥದ್ದೇನೂ ಆಗಿಲ್ಲ. ಆ ಹುಡುಗ ಕಾರು ತಗೊಂಡು ಹೋಗಿ ಗೇಟಿಗೆ ಡಿಕ್ಕಿ ಹೊಡೆದಿದ್ದಾನೆ. ಹೊಸ ಹೊಂಡಾ ಸಿಟಿ ಕಾರು. ಬಾನೆಟ್ಟಿಗೆ ಡ್ಯಾಮೇಜ್ ಆಗಿದೆ. ಲೈಟು ಒಡೆದುಹೋಗಿದೆ. ಅವನೇನೂ ಮಾಡೋ ಹಾಗಿಲ್ಲ. ಫಾರೆಸ್ಟ್ ಗೇಟಿನ ಹತ್ತಿರ ಕಾರು ನಿಧಾನವಾಗಿ ನಡೆಸಬೇಕು ಅಂತ ಕಾನೂನಿದೆ. ನಾವೇ ಅವನ ಮೇಲೆ ಕೇಸ್ ಹಾಕಬಹುದು. ಆದ್ರೆ ಈ ಹಳ್ಳ ಜನ ದರಿದ್ರ ಕಣ್ರೀ. ಇವರಿಗೋಸ್ಕರ ಬೆಂಗಳೂರು ಬಿಟ್ಟು ಬಂದು ಕೆಲಸ ಮಾಡ್ತೀವಲ್ಲ. ನಮ್ಮ ಕರ್ಮ ಅಂತ ವಾಗ್ಲೆ ಹೇಳಿದಾಗ ನನಗೇನೂ ಅರ್ಥವಾಗಲಿಲ್ಲ. ಅದರಲ್ಲಿ ಹಳ್ಳಿಯವರ ಪಾತ್ರ ಏನಿದೆ ಅಂತ ಕುತೂಹಲವಾಯಿತು.
ವಾಗ್ಲೆ ವಿವರಿಸಿದರು:
ಕಾನಡ್ಕ ಎಸ್ಟೇಟಿನ ಚಂದ್ರೇಗೌಡರ ಮಗ ಸುದೀಪ್ ರಾತ್ರಿ ಮನೆಗೆ ಬಂದಿದ್ದನಂತೆ. ಬೆಳಗ್ಗೆ ಅವನು ವಾಪಸ್ಸು ಹೋಗುವ ಹೊತ್ತಿಗೆ ಫಾರೆಸ್ಟ್ ಗೇಟಿಗೆ ಡಿಕ್ಕಿ ಹೊಡೆದಿದ್ದನಂತೆ. ಗೇಟಿನಿಂದ ತುಂಬ ದೂರವಿರಬೇಕಾದರೇ ಸುದೀಪ್ ಜೋರಾಗಿ ಹಾರ್ನ್ ಮಾಡುತ್ತಾ ಬಂದಿದ್ದಾನೆ. ಗೇಟಿನ ಹತ್ತಿರ ಹಾರ್ನ್ ಮಾಡಬಾರದು ಅಂತ ಕಾನೂನಿದೆ. ಇವನು ಹಾರ್ನ್ ಹೊಡೆದದ್ದರಿಂದ ಸಿಟ್ಟಾಗಿ ಗೇಟು ತೆಗೆಯುತ್ತಿದ್ದ ಗಾರ್ಡ್ ಮಾದೇವ ಗೇಟು ಕ್ಲೋಸ್ ಮಾಡಿದ್ದಾನೆ. ಗೇಟು ತೆರೆಯುತ್ತಿದ್ದಾನೆ ಅಂತ ವೇಗ ಹೆಚ್ಚಿಸಿಕೊಂಡ ಸುದೀಪ್ ಕಾರು ಗೇಟಿಗೆ ಡಿಕ್ಕಿ ಹೊಡೆದಿದೆ. ಸುದೀಪ್ ಕಾರಿನಿಂದ ಇಳಿದು ಸಿಕ್ಕಾಪಟ್ಟೆ ಕೂಗಾಡಿದ್ದಾನೆ. ಮಾದೇವನಿಗೆ ಸಿಟ್ಟು ಬಂದು ಸುದೀಪನಿಗೆ ಹೊಡೆಯಲು ಹೋಗಿದ್ದಾನೆ.
ಅಷ್ಟೇ ಆಗಿದ್ದರೆ ಎಲ್ಲಾ ಮುಗೀತಿತ್ತು. ಅಷ್ಟು ಹೊತ್ತಿಗೆ ಹಳ್ಳಿಯವರೆಲ್ಲ ಸೇರಿದ್ದಾರೆ. ಎಲ್ಲರೂ ಸೇರಿ ಮಾದೇವನಿಗೆ ಹೊಡೆದಿದ್ದಾರೆ. ಅವನ ಜೊತೆಗಿರುವವರಿಗೂ ಏಟು ಬಿದ್ದಿದೆ.  ಗಲಾಟೆ ಜೋರಾಗಿ ಹಳ್ಳಿಯವರು ರಸ್ತೆ ತಡೆ ಮಾಡಿದ್ದಾರೆ.
ಅಷ್ಟು ಸಣ್ಣ ಘಟನೆಗೆ ಇಷ್ಟೆಲ್ಲ ರಾದ್ಧಾಂತ ಯಾಕೆ ಅಂತ ಶಿವ ಅಚ್ಚರಿಯಿಂದ ಕೇಳಿದ. ವಾಗ್ಲೆ ಅದು ಕಣ್ಣಿಗೆ ಕಾಣುವಷ್ಟು ಸಣ್ಣ ಪ್ರಸಂಗ ಅಲ್ಲ. ಅದರ ಹಿಂದೆ ಎಷ್ಟೋ ವರ್ಷಗಳ ಸಿಟ್ಟಿದೆ ಅಂದರು. ಹೇಳ್ತೀನಿ ಕೇಳಿ, ಹಳ್ಳಿ ಅಂತೀರಿ. ಮುಗ್ಧರು ಅಂತೀರಿ. ಕಾಡು ಉಳಿಸಿ ಅಂತೀರಿ. ಇಲ್ಲಿ ಏನೇನು ಸಮಸ್ಯೆ ಇದೆ ಅಂತ ಇಲ್ಲಿದ್ರೇ ಗೊತ್ತಾಗೋದು ಎಂದು ವಾಗ್ಲೆ ಆ ರಾಜಕೀಯ ಅಧ್ಯಾಯವನ್ನು ತೆರೆದಿಟ್ಟರು. ಈ ವಾದವನ್ನು ನಾನು ಬೇಕಾದಷ್ಟು ಕೇಳಿದ್ದೆ. ಇದನ್ನೇ ಮುಂದಿಟ್ಟು ಅನೇಕರು ಜವಾಬ್ದಾರಿಯಿಂಗ ನುಣುಚಿಕೊಳ್ಳುವುದನ್ನೂ ಕಂಡಿದ್ದೆ. ವಾಗ್ಲೆ ಕೂಡ ಹಾಗೇ ಮಾಡುತ್ತಿದ್ದಾರೆ ಅನ್ನಿಸಿತು.
ಆ ಫಾರೆಸ್ಟ್ ಗೇಟಿರುವ ಜಾಗದಲ್ಲೊಂದು ರೈತಸಂಘದ ಬ್ರಾಂಚ್ ಇದೆ. ಹೊನ್ನಳ್ಳಿ ಸೀತಾರಾಮ ಅಂತ ಒಬ್ಬ ಅದರ ಅಧ್ಯಕ್ಷ. ಸಣ್ಣ ಸಣ್ಣ ಕಾಫಿ ತೋಟ ಇಟ್ಟುಕೊಂಡ ರೈತರು ಪ್ರತಿವರ್ಷ ಕಾಡು ಒತ್ತುವರಿ ಮಾಡ್ತಾರೆ. ಗುಟ್ಟಾಗಿ ಬೇಟೆ ಆಡ್ತಾರೆ. ಅವರಿಗೂ ಫಾರೆಸ್ಟ್ ಡಿಪಾರ್ಟ್‌ಮೆಂಟಿಗೂ ನಿತ್ಯ ಜಗಳ.
ಆರು ತಿಂಗಳ ಹಿಂದೆ ಸೋಮಣ್ಣ ಅನ್ನೋ ರೈತ ಸಂಘದ ಸದಸ್ಯ ಮನೆ ಕಟ್ಟೋದಕ್ಕೆಂದು ಮರ ಕಡಿಯುತ್ತಿರುವಾಗ ಫಾರೆಸ್ಟ್ ಡಿಪಾರ್ಟ್‌ಮೆಂಟಿನವರ ಕೈಗೆ ಸಿಕ್ಕಿಬಿದ್ದ. ಅವನ ಮೇಲೆ ಕೇಸು ಹಾಕಿ ಕೋರ್ಟಿಗೆ ಅಲೆದಾಡಿಸಿದ್ದೂ ಆಯ್ತು. ಆಗ ನಡೆದ ಜಗಳದಲ್ಲಿ ಹಳ್ಳಿಯವರು ಫಾರೆಸ್ಟ್ ಡಿಪಾರ್ಟ್‌ಮೆಂಟ್ ಸಿಬ್ಬಂದಿಗಳ ನಮೇಲೆ ಕೈ ಮಾಡಿದ್ದರು. ಆ ಸೇಡಿಟ್ಟುಕೊಂಡ ಫಾರೆಸ್ಟ್ ಸಿಬ್ಬಂದಿ ಕಾಡಿನಲ್ಲಿ ಒಣಗಿ ಮುರಿದು ಬಿದ್ದ ಕಟ್ಟಿಗೆ ಹೆಕ್ಕುವವರ ಮೇಲೂ ಕೇಸ್ ಹಾಕಿ ಕಿರುಕುಳ ಕೊಡಲು ಶುರುಮಾಡಿದರು. ಹೀಗಾಗಿ ಫಾರೆಸ್ಟ್ ಡಿಪಾರ್ಟ್‌ಮೆಂಟ್ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಒಂದು ಶೀತಲ ಯುದ್ದ ನಡೆಯುತ್ತಲೇ ಇತ್ತು.
ಸುದೀಪ್ ಕಾರು ಗೇಟಿಗೆ ಡಿಕ್ಕಿ ಹೊಡೆದಾಗ ಆ ಹಳೆಯ ಸಿಟ್ಟನ್ನು ತೀರಿಸಿಕೊಳ್ಳಲು ಅವರೆಲ್ಲ ಒಂದಾಗಿದ್ದಾರೆ. ಸುದೀಪ್ ಪರವಾಗಿ ನಿಂತಿದ್ದಾರೆ. ಅವರನ್ನು ರಾಜಿ ಮಾಡಿಸೋದಕ್ಕೆ ಸಾಕು ಸಾಕಾಯ್ತು. ಇದು ಮುಗಿಯೋ ಕತೆಯಲ್ಲ ಅಂದರು ವಾಗ್ಲೆ. ರಸ್ತೆ ತಡೆ ಮಾಡಿ ಒಂದು ಮೈಲುದ್ದ ಗಾಡಿಗಳು ಪೈಲಪ್ ಆಗಿದ್ವು. ಈಗ ಕ್ಲಿಯರ್ ಮಾಡಿ ಬಂದೆ. ದಿನಾ ಇಂಥದ್ದೇ ಒಂದು ರಗಳೆ ಎಂದು ವಾಗ್ಲೆಯವರು ಹೇಳಿದಾಗಲೇ, ನಮಗೆ ಅಷ್ಟೊಂದು ವಾಹನಗಳು ಎದುರಾದದ್ದೇಕೆ ಎಂಬುದು ನನಗೆ ಅರ್ಥವಾದದ್ದು.
ಹೋಗ್ಲಿ ಬಿಡಿ. ನಿಮ್ಮ ಅರ್ಧ ದಿನ ವೇಸ್ಟಾಯ್ತು.. ಸಾರಿ’  ಅನ್ನುತ್ತಾ ವಾಗ್ಲೆ ಸಿಕ್ಕಿದ್ನ ಗಾರ್ಡ್ ಕೃಷ್ಣಪ್ಪ’ ಕೇಳಿದರು. ಸಿಕ್ಕಿದ್ದ, ಹೀಗೆ ಸಿಕ್ಕಿ ಹಾಗೆ ಮಾಯವಾದ. ಬೆಂಗಳೂರಿಗೆ ಹೋಗಿದ್ದಾನಂತೆ ಅಂದೆ. ಸಿಟ್ಟಲ್ಲಿ ಟೇಬಲ್ಲನ್ನು ಬಲವಾಗಿ ಕುಟ್ಟುತ್ತಾ ಹೋದ್ನಾ ಬಡ್ಡೀಮಗ. ಇನ್ನು ಅವನು ಬರೋದು ಒಂದು ವಾರವೋ ತಿಂಗಳೋ ಆಗುತ್ತೆ. ಅವನೊಂದು ಪೀಡೆ’ ಅಂತ ಬೈದರು. ಅವನಿಗೆ ಹೇಳೋರು ಕೇಳೋರು ಇಲ್ವಾ ಅಂತ ಕೇಳಿದ ಶಿವ. ಅವನಿಗೆ ಲಾರ್ಡ್ ಕೃಷ್ಣಪ್ಪನ ಪ್ರಭಾವಗಳು ಗೊತ್ತಿರಲಿಲ್ಲ.
ಅವನನ್ಯಾರ್ರೀ ಕೇಳೋರು. ಆ ಎಂಎಲ್‌ಎ ಸಪೋರ್ಟಲ್ಲಿ ಮೆರೀತಿದ್ದಾನೆ. ಇಂಥವರು ಸೇರ್ಕೊಂಡೇ ಡಿಪಾರ್ಟ್‌ಮೆಂಟ್ ಹಾಳಾಗಿದ್ದು’ ಅಂತ ವಾಗ್ಲೆ ಮತ್ತಷ್ಟು ಬೈದರು. ನಿಮ್ಮ ಜೊತೆ ಸಾಂತೂನ ಕಳಿಸ್ತೀನಿ ಅಂದರು.
ನನಗೆ ಇದ್ದಕ್ಕಿದ್ದ ಹಾಗೆ ರಾತ್ರಿ ನೋಡಿದ ಬೆಳಕು ನೆನಪಾಯಿತು. ಅದನ್ನು ಅವರಿಗೆ ಹೇಳಿದೆ. ಅವರಿಗೆ ಆ ಬಗ್ಗೆ ಏನೂ ಗೊತ್ತೇ ಇರಲಿಲ್ಲ. ಹೌದೇನ್ರೀ, ಎಲ್ಲಾದರೂ ಕಾಡಿಗೆ ಬೆಂಕಿ ಬಿದ್ದಿತ್ತೋ ಏನೋ.. ಅದೂ ಈ ರೈತರದೇ ಕೆಲಸ. ನಮಗೆ ಕಷ್ಟ ಕೊಡೋದಕ್ಕೆ ಅಂತ ಹೀಗೆಲ್ಲ ಮಾಡ್ತಿರ್ತಾರೆ. ಆದರೆ ಆ ಏರಿಯಾ ನಮಗೆ ಬರೋಲ್ಲ. ಸುಬ್ರಹ್ಮಣ್ಯ ರೇಂಜ್‌ಗೆ ಸೇರುತ್ತೆ’ ಅಂತ ಸಮಾಧಾನದ ನಿಟ್ಟುಸಿರಿಟ್ಟರು.
ಅಷ್ಟರಲ್ಲಿ ಸಾಂತು ಟೀ ತಂದಿಟ್ಟ. ಇವರ ಜೊತೆ ಹೋಗಿ, ಆ ಗಡಿಯ ಹತ್ತಿರ ಕಾಡಿಗಿಳಿಯುವ ದಾರಿ ತೋರ್‍ಸು. ಇವತ್ತು ಜಾಸ್ತಿ ಡೀಪ್ ಹೋಗಬೇಡಿ. ನಾಳೆ ಬೆಳಗ್ಗೆ ನೋಡೋಣ’ ಅಂದರು. ಸಾಂತು ಖುಷಿಯಿಂದ ತಲೆಯಾಡಿಸಿದ.

‍ಲೇಖಕರು avadhi

December 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

  1. ಅಶೋಕ ಉಚ್ಚಂಗಿ

    ‘ಆ ಏರಿಯಾ ನಮಗೆ ಬರೋಲ್ಲ. ಸುಬ್ರಹ್ಮಣ್ಯ ರೇಂಜ್‌ಗೆ ಸೇರುತ್ತೆ’ ಅಂತ ಗುಂಡ್ಯ ಆರ್ ಎಫ್ ಒ ಹೇಳಿದ್ದು ತಪ್ಪೆನಿಸುತ್ತೆ.ಶಿವ ಮತ್ತು ಕತೆಗಾರ ಕುಳಿತು ಬಂಗಾರದ ಬೆಳಕನ್ನು ನೋಡಿದ್ದು ದೋಣಿಗಾಲ್ ಮತ್ತು ಯಡಕುಮೇರಿ ನಡುವಿನ ಕಾಡು.ನನ್ನ ತಿಳುವಳಿಕೆಯ ಪ್ರಕಾರ ಅದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ವಲಯಕ್ಕೆ ಸೇರುತ್ತೆ.ಈ ಭಾಗದಲ್ಲಿ ಕಾಗಿನೇರಿ ಮತ್ತು ಕಂಚನ್ ಕುಮರಿ ರಕ್ಷಿತಾರಣ್ಯಗಳಿವೆ.ಇವು ಸಕಲೇಶಪುರ ತಾಲೂಕಿನ ಯಡಕುಮರಿ ಗ್ರಾಮಕ್ಕೆ ಸೇರಿವೆ.
    ಅಶೋಕ ಉಚ್ಚಂಗಿ
    http://mysoremallige01.blogspot.com/

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: