ಜೋಗಿ ಕಾಲ೦ : ಆ ನಗುವಿಗೆ ವಯಸ್ಸಾಗುವುದಿಲ್ಲ

– ಜೋಗಿ

ಗುರುವಾಯನಕೆರೆ

ಒಂದೂರಿನ ಆತ್ಮಚರಿತ್ರೆ

ಉಪಸಂಹಾರ

ಕಲೆ : ವಿಜಯ್ ಊರಲ್ಲದ ಊರಿನಲ್ಲಿ.. ಕೆಲವೊಮ್ಮೆ ಬಾಲ್ಯದ ದಿನಗಳು, ನೆನಪುಗಳು ಹೇಗೆ ಕಾಡುತ್ತವೆಂದರೆ ಅವುಗಳಿಂದ ಪಾರಾಗಲಿಕ್ಕಾಗದರೂ ಲೇಖಕ ಒಂದು ಬೃಹತ್ ಕಾದಂಬರಿಯನ್ನು ಬರೆಯಬೇಕು. ಬಾಲ್ಯದ ಮತ್ತು ಯೌವನದ ಓದು ಮತ್ತು ಅನುಭವವನ್ನು ಹೇಳಿ ಹಗುರಾಗದೇ ಹೋದರೆ, ಜೀವನ ಪೂರ್ತಿ ಅದೇ ಕಾಡುತ್ತಿರುತ್ತದೆ. ನಮ್ಮೂರಿನ ನೆನಪುಗಳೆಲ್ಲ ಪೂರ್ತಿ ನೆನಪುಗಳೇ. ಅಲ್ಲಿ ನೋಡಿದ್ದು, ಕೇಳಿದ್ದು, ಬೇರೆಲ್ಲೋ ಕೇಳಿದ್ದು,ಎಲ್ಲೋ ಸಿಕ್ಕವರು, ಕಂಡವರು ಅಲ್ಲಿ ಬಂದು ಹೋಗಿದ್ದಾರೆ. ಒಬ್ಬ ವ್ಯಕ್ತಿಗೆ ಹಲವಾರು ಗುಣಗಳು ಆರೋಪಿತವಾಗಿದ್ದರೂ ಆಗಿರಬಹುದು. ಲೇಖಕನಿಗೆ ಫೋಟೊಗ್ರಾಫಿಕ್  ಮೆಮೊರಿ ಇರಬೇಕು ಅನ್ನುವವರಿದ್ದಾರೆ. ನನ್ನ ಪ್ರಕಾರ ಅದು ಅಷ್ಟು ಅಗತ್ಯವೇನಲ್ಲ. ನೆನಪು ಅಸ್ಪಷ್ಟವಾಗಿದ್ದಾಗಲೇ ರೂಪಕವಾಗಬಲ್ಲದು. ಯಥಾವತ್ತಾಗಿ ಬರೆದಾಗ ಅದು ಚರಿತ್ರೆಯೋ ವರದಿಯೋ ಆಗುತ್ತದೆ. ನಮ್ಮೂರಿನ ಬಗ್ಗೆ ನಾವೇನು ಬರೆಯಬಹುದು ಅನ್ನುವ ಪ್ರಶ್ನೆಯನ್ನು ತರುಣ ಬರಹಗಾರರೆಲ್ಲರೂ ಕೇಳಿಕೊಂಡಿರುತ್ತಾರೆ. ಎಷ್ಟೋ ಸಲ, ನಮ್ಮೂರಲ್ಲಿ ಅಂಥದ್ದೇನೂ ಇಲ್ಲ ಎಂದು ಅನೇಕರಿಗೆ ಅನ್ನಿಸಿರಬಹುದು. ಅದರ ಅರ್ಥ ಆ ಊರು ನಿಮ್ಮಲ್ಲಿ ನೆನಪುಗಳಲ್ಲಿ ಬಿತ್ತುವಲ್ಲಿ ಸೋತಿದೆ ಅಂತಾಗಲೀ, ನಿಮ್ಮ ನೆನಪುಗಳು ಮಸುಕಾಗಿವೆ ಎಂದಾಗಲೀ ಅಲ್ಲ. ಆ ನೆನಪುಗಳು ಒಂದು ರೂಪ ಪಡಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಅದು ಹರಳುಗಟ್ಟುವ ತನಕ ಹೊರಬರುವ ತನಕ ಕಾಯದೇ ವಿಧಿಯಿಲ್ಲ. ವ್ಯಕ್ತಿಗಳು ಕೂಡ ವಿಚಿತ್ರ ಸಂದರ್ಭದಲ್ಲಿ ನೆನಪಾಗುತ್ತಾರೆ. ನಮ್ಮೂರಲ್ಲಿ ನಶ್ಯ ಹಾಕುತ್ತಿದ್ದ ಕಮ್ಮಾರನೊಬ್ಬನಿದ್ದ. ಅವನು ಮೂಗಿಗೆ ಒಂದು ಹಿಡಿ ನಶ್ಯ ತುರುಕಿಸಿಕೊಂಡು ಭಯಂಕರ ಸದ್ದಿನೊಂದಿಗೆ ಸೀನುತ್ತಿದ್ದ. ಆ ಸದ್ದಿಗೆ ದಾರಿಹೋಕರು ಬೆಚ್ಚಿಬೀಳುತ್ತಿದ್ದರು. ಅವನ ಮುಂದಿರುವ ತಿದಿ ಒಮ್ಮೆ ಝಗ್ಗನೆ ಬೆಳಗುತ್ತಿತ್ತು. ಅವನು ಅಪರಾತ್ರಿಯಲ್ಲಿ ನಶ್ಯ ಹಾಕಿ ಇಡೀ ಊರಿಗೇ ಕೇಳಿಸುವಂತೆ ಸೀನಿ ಮಕ್ಕಳನ್ನೆಲ್ಲ ಬೆಚ್ಚಿ ಬೀಳಿಸುತ್ತಿದ್ದ. ಅವನ ಪ್ರಾಣವನ್ನು ಇದೇ ನಶ್ಯ ಕಾಪಾಡಿದ ಒಂದು ಘಟನೆ ನಡೆಯಿತು. ನಮ್ಮೂರಲ್ಲಿ ಒಂದು ಕಾಲಕ್ಕೆ ಕತ್ತೆ ಕಿರುಬದ ಕಾಟ ವಿಪರೀತ. ಕತ್ತೆ ಕಿರುಬಗಳು ಅಷ್ಟೇನೂ ಅಪಾಯಕಾರಿ ಅಲ್ಲದಿದ್ದರೂ ದನಕರುಗಳನ್ನು ಕದ್ದುಕೊಂಡು ಹೋಗುತ್ತಿದ್ದವು. ಪುಟ್ಟ ಮಕ್ಕಳನ್ನೂ ಕಚ್ಚಿಕೊಂಡು ಹೋಗುತ್ತಿದ್ದವು. ಬೇಸಗೆಯಲ್ಲಿ ಸೆಕೆ ತಾಳಲಾರದೇ ಜಗಲಿಯಲ್ಲಿ ಮಲಗಿದವರ ತೊಡೆಗೋ ತೋಳಿಗೋ ಕಚ್ಚಿ ಮಾಂಸ ಕಿತ್ತುಕೊಂಡು ಓಡಿಹೋಗುತ್ತಿದ್ದ ಧೈರ್ಯಶಾಲಿ ಕಿರುಬಗಳೂ ಇದ್ದವು. ಈ ನಶ್ಯ ಹಾಕುವ ಕಮ್ಮಾರ ಕೂಡ ಒಂದು ದಿನ ಮನೆಯ ಜಗಲಿಯಲ್ಲಿ ನಿದ್ದೆ ಹೋಗಿದ್ದ. ಪಕ್ಕದಲ್ಲೇ ಒಂದು ಕಾಗದಲ್ಲಿ ನಶ್ಯ ಇಟ್ಟಿದ್ದ. ಅವನನ್ನು ಕಚ್ಚಲೆಂದು ಬಂದ ಕಿರುಬ ನಶ್ಯವನ್ನು ಮೂಸಿ ನೋಡಿದೆ. ಅದು ಉಸಿರೆಳೆದುಕೊಂಡ ರಭಸಕ್ಕೆ ಕಾಗದದಲ್ಲಿದ್ದ ಅಷ್ಟೂ ನಶ್ಯವೂ ಅದರ ಮೂಗು ಸೇರಿರಬೇಕು. ಕಿರುಬ ವಿಕಾರ ದನಿಯಲ್ಲಿ ಕಿರುಚಿ, ಭೀಕರವಾಗಿ ಸೀನುತ್ತಾ ಕಾಡಿನ ಕಡೆಗೆ ಓಡಿಹೋಗಿತ್ತು. ರಾತ್ರಿಯಿಡೀ ಅದು ಸೀನುತ್ತಿದ್ದದ್ದು ಕೇಳಿಸುತ್ತಿತ್ತು. ಈಗ ನಾನು ಕಮ್ಮಾರನನ್ನು ನೆನಪಿಸಿಕೊಂಡರೆ, ಅವನೇ ನೆನಪಾಗುತ್ತಾನೆ. ಆ ಕಿರುಬ ಮತ್ತು ನಶ್ಯವೇ ನಾನು ಅವನನ್ನು ಯಾವತ್ತೂ ಮರೆಯದಂತೆ ಮಾಡಿದೆ. ಹೀಗೆ ನೆನಪಿರುವ ಇನ್ನೊಬ್ಬ ಮನುಷ್ಯ ಎಲ್ಲರ ಮನೆಗೂ ಹಾಲು ತಂದು ಹಾಕುತ್ತಿದ್ದ ನಾರಾಯಣ. ಈ ಹಾಲು ಹಾಕುವ ನಾರಾಯಣನಿಗೆ ಹಸುವಾಗಲೀ ಎಮ್ಮೆಗಳಾಗಲೀ ಇರಲಿಲ್ಲ. ಆತ ಬೆಳಗಾಗೆದ್ದು ಶೆಟ್ಟರ ಮನೆಗೆ ಹೋಗಿ, ಅವರು ಕರೆದಿಟ್ಟ ಹಾಲನ್ನೆತ್ತಿಕೊಂಡು ಕರಾವಿನ ಮನೆಗಳಿಗೆ ಹಾಕುತ್ತಿದ್ದ. ನಮ್ಮೂರಲ್ಲಿ ಮನೆಯಿಂದ ಮನೆಗೆ ಕನಿಷ್ಟ ಒಂದು ಮೈಲಿ ಅಂತರ ಇರುತ್ತಿತ್ತು. ಹೀಗಾಗಿ ಅವನು ಏಳೆಂಟು ಮನೆಗಳಿಗೆ ಹಾಲು ಹಾಕುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿತ್ತು. ಹೀಗಾಗಿ ವಾರದಲ್ಲಿ ಮೂರೋ ನಾಲ್ಕೋ ದಿನ ಕೆಲಸ ಮಾಡಿ, ಇದ್ದಕ್ಕಿದ್ದಂತೆ ನಾಪತ್ತೆ ಆಗುತ್ತಿದ್ದ. ಈ ನಾರಾಯಣ ಈ ಮಧ್ಯೆ ಸಣ್ಣದೊಂದು ಕಳ್ಳವ್ಯವಹಾರವನ್ನೂ ಆರಂಭಿಸಿದ್ದ. ಶೆಟ್ಟರು ಕೊಟ್ಟ ಹಾಲಿನಿಂದ ಒಂದು ಕುಡ್ತೆ ಹಾಲು ಎತ್ತಿಟ್ಟು, ಮಿಕ್ಕ ಹಾಲಿಗೆ ಒಂದು ಕುಡ್ತೆ ನೀರು ಬೆರೆಸಿ ಹಂಚುತ್ತಿದ್ದ. ಅವನ ಈ ಹುನ್ನಾರ ಯಾರಿಗೂ ಗೊತ್ತಿಲ್ಲದೇ ಇದ್ದದ್ದರಿಂದ ಹಾಲು ತೆಳುವಾಗಿದೆ ಅಂತ ಎಲ್ಲರೂ ಶೆಟ್ಟರನ್ನು ಒಳಗೊಳಗೇ ಬೈದುಕೊಳ್ಳುತ್ತಿದ್ದರು. ಎದುರು ಹೇಳುವ ಧೈರ್ಯ ಮಾತ್ರ ಯಾರಿಗೂ ಇರಲಿಲ್ಲ, ತಾನು ಕದ್ದ ಹಾಲನ್ನು ದಾರಿಯಲ್ಲೊಂದು ಪೊದೆಯಲ್ಲಿ ಮುಚ್ಚಿಟ್ಟು ಅವನು ಎಲ್ಲರಿಗೂ ಹಾಲು ಕೊಟ್ಟು ಬರುತ್ತಿದ್ದ, ಮನೆಗೆ ಹೋಗುವ ಮುಚ್ಚಿಟ್ಟ ಹಾಲನ್ನು ಮನೆಗೆ ಒಯ್ಯುತ್ತಿದ್ದ. ಈ ನಾರಾಯಣ ಇದ್ದಕ್ಕಿದ್ದಂತೆ ನಾಪತ್ತೆಯಾದ. ಒಂದೆರಡು ದಿನ ಅವನು ಹೀಗೆ ಕೈ ಕೊಡುತ್ತಿದ್ದುದರಿಂದ ಶೆಟ್ಟರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಐದಾರು ದಿನ ಅವನು ಕಾಣದೇ ಹೋದಾಗ ನಾರಾಯಣನ ಮನೆಗೆ ಹೋಗಿ ವಿಚಾರಿಸಿಕೊಂಡು ಬರುವಂತೆ ಮಗನನ್ನು ಕಳುಹಿಸಿದರು. ಅಲ್ಲಿ ಹೋಗಿ ನೋಡಿದರೆ ನಾರಾಯಣ ಹೊಸಿಲ ಬಳಿ ಕೈ ಮುಗಿದು ಕೂತಿದ್ದ. ಹೊಸಿಲ ಈಚೆ ಬದಿಯಲ್ಲಿ ಸುಮಾರು ಆರೆಂಟು ಅಡಿ ಉದ್ದದ ಕಾಳಿಂಗ ಸರ್ಪ ಹೆಡೆಯೆತ್ತಿ ನಿಂತಿತ್ತು. ಹೊಸಿಲಾಚೆ ನಾರಾಯಣ ಕೃಶನಾಗಿ, ನಿದ್ದೆ, ಊಟ, ತಿಂಡಿಯಿಲ್ಲದೇ ಹಾಗೆ ಕೂತುಬಿಟ್ಟಿದ್ದ. ಶೆಟ್ಟರ ಮಗ ಗಾಬರಿಯಾಗಿ ಮನೆಗೆ ಓಡಿ ಹೋಗಿ ಶೆಟ್ಟರಿಗೆ ವಿಷಯ ತಿಳಿಸಿದ. ಶೆಟ್ಟರು ಬಂದು ನೋಡಿದರೆ ಅದೇ ದೃಶ್ಯ. ಆಮೇಲೆ ದೇವಸ್ಥಾನದ ಪುರೋಹಿತರನ್ನು ಕರೆಸಿ, ಕಾಳಿಂಗ ಸರ್ಪಕ್ಕೆ ಪೂಜೆ ಮಾಡಿ, ಶೆಟ್ಟರು ಸೇರಿದಂತೆ ಎಲ್ಲರೂ ಸರ್ಪವನ್ನು ಅಲ್ಲಿಂದ ತೆರಳುವಂತೆ ವಿನಂತಿ ಮಾಡಿಕೊಂಡರು. ಈ ಪೂಜೆಯಿಂದ ಸಂಪ್ರೀತವಾದ ಕಾಳಿಂಗ ಸರ್ಪ ತನ್ನ ಪಾಡಿಗೆ ತಾನು ಹರಿದು ಹೋಯಿತು. ಅಷ್ಟು ದೂರ ಹೋಗಿದ್ದು ಕಂಡಿತು. ಆಮೇಲೆ ಮಾಯವಾಯಿತು ಎಂದು ಎಲ್ಲರೂ ಮಾತಾಡಿಕೊಂಡರು. ಸರ್ಪ ಐದಾರು ದಿನ ನಾರಾಯಣನನ್ನು ದಿಗ್ಭಂಧನದಲ್ಲಿ ಇಟ್ಟಿದ್ದೇಕೆ ಅಂತ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ನಾರಾಯಣ ಹಾಲು ಕದ್ದಿಡುತ್ತಿದ್ದ ಪೊದೆಯ ಪಕ್ಕದಲ್ಲೇ ಆ ಕಾಳಿಂಗ ಸರ್ಪ ವಾಸ ಮಾಡುತ್ತಿದ್ದೆಂದು ಕಾಣುತ್ತದೆ. ಆವತ್ತು ಬಚ್ಚಿಟ್ಟ ಹಾಲು ತೆಗೆದುಕೊಳ್ಳಲು ಹೋದಾಗ ಅವನಿಗೆ ಅದರ ಬಾಲ ಕಾಣಿಸಿದೆ. ಸಾಮಾನ್ಯ ಕೇರೆ ಹಾವು ಅಂದುಕೊಂಡು ತನ್ನ ಕೈಯಲ್ಲಿದ್ದ ಕೋಲಿನಿಂದ ಬಾಲಕ್ಕೆ ಬಡಿದಿದ್ದಾನೆ ನಾರಾಯಣ. ಅದು ಭುಸುಗುಟ್ಟುತ್ತಾ ತಿರುಗಿ ನೋಡಿದೆ, ನಾರಾಯಣನನ್ನು ಅಟ್ಟಿಸಿಕೊಂಡು ಬಂದಿದೆ. ಬಂದು ಅವನ ಮನೆಯ ಬಾಗಿಲ ಬಳಿ ನಿಂತುಬಿಟ್ಟಿದೆ. ನಾರಾಯಣ ಹೊರಗೆ ಬರುವುದನ್ನೇ ಕಾಯುತ್ತಿದೆ. ನಾರಾಯಣ ಒಳಗೆ ಹೋಗಿ ಬಾಗಿಲು ಹಾಕಲೂ ಆಗದೇ ಕುಸಿದು ಬಿದ್ದಿದ್ದಾನೆ. ನಂತರ ಎದ್ದು ಕೂತು ಸರ್ಪಕ್ಕೆ ಕೈ ಮುಗಿದು ಹೋಗು ಅಂದಿದ್ದಾನೆ. ಸರ್ಪ ಹೋಗಿಲ್ಲ. ಮುಗಿದ ಕೈಯ ಸ್ಥಿತಿಯನ್ನು ಬದಲಾಯಿಸಲೂ ಸರ್ಪ ಬಿಟ್ಟಿಲ್ಲ. ಅವನು ಒಂಚೂರು ಅಲ್ಲಾಡಿದರೂ ಸರ್ಪ ಬುಸುಗುಟ್ಟುತ್ತಾ ಅವನನ್ನು ಐದು ದಿನ ಅದೇ ಸ್ಥಿತಿಯಲ್ಲಿ ಇರಿಸಿಬಿಟ್ಟಿತ್ತು. ಈ ಕತೆಯಲ್ಲಿ ಎಷ್ಟು ಸತ್ಯಾಂಶ ಅಂತ ನಮಗೆ ನಂಬಲಿಕ್ಕೆ ಕಷ್ಟ ಆಗುತ್ತಿತ್ತು. ಆದರೆ ಹಾಗೆ ಸರ್ಪದ ಕೈಲಿ ದಿಗ್ಭಂಧನ ಮಾಡಿಸಿಕೊಂಡ ನಂತರ ಅವನು ಊರು ಬಿಟ್ಟು ಓಡಿ ಹೋದ. ಮತ್ತೆ ನಮ್ಮೂರಿನ ಮಂದಿ ಅವನನ್ನು ನೋಡಲಿಲ್ಲ. ಹೀಗೆ ಎಂತೆಂಥದೋ ಕತೆಗಳ ಮೂಲಕ ನಿಮಗೆ ನಿಮ್ಮೂರಿನ ಮಂದಿ ನೆನಪಾಗಬಹುದು. ಮುಖಗಳು ಕಣ್ಣೆದುರು ಸುಳಿಯಬಹುದು. ನಮ್ಮ ಹಳ್ಳಿಯನ್ನು ನೆನಪಿಸಿಕೊಳ್ಳುವ ಮೂಲಕ ನಾವು ಮತ್ತೆ ನಮ್ಮ ಬಾಲ್ಯಕ್ಕೆ ಪ್ರವೇಶ ಪಡೆಯುತ್ತೇವೆ. ಅದು ಸ್ಪುರಿಸುವ ಸಂಗತಿಗಳು ನಮ್ಮ ಸುಪ್ತ ಜಗತ್ತಿನ ಯಾವುದೋ ಒಂದು ಕೊಂಡಿಯನ್ನು ಎತ್ತಿ ವರ್ತಮಾನದತ್ತ ಎಸೆಯುತ್ತದೆ. ಹೀಗೆ ಎರಡು ಜಗತ್ತುಗಳೂ ಜೀವಂತವಾಗಿಬಿಡುತ್ತವೆ. ಎಷ್ಟೋ ಸಾರಿ ನಾವು ಹುಟ್ಟಿದೂರಿನ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳುವುದೂ ಇದೆ. ನಾನು ಗುರುವಾಯನಕೆರೆ ಅಂದಾಗ ವಿದೇಶದಲ್ಲಿರೋ ಮಿತ್ರರೊಬ್ಬರು ಅದು ನಮ್ಮೂರು ಅಂದರು. ನಮ್ಮಜ್ಜ ಅಲ್ಲಿದ್ದರಂತೆ. ನಾನು ಯಾವತ್ತೂ ಹೋಗಿಲ್ಲ . ನಮ್ಮಜ್ಜ ಮಾತ್ರ ಕೊನೆ ತನಕ ಆ ಊರಿನ ಹೆಸರು ಹೇಳುತ್ತಲೇ ಇದ್ದರು ಅಂತ ಹೇಳಿದರು. ಅವರು ಕೊನೆಯ ದಿನಗಳಲ್ಲಿ ಹೈದರಾಬಾದಿನಲ್ಲಿ ನೆಲೆಸಿದ್ದರಂತೆ. ಅಂಥ ಹಿರಿಯರು ಯಾರಿದ್ದಾರೆ ಅಂತ ಹುಡುಕಿದರೆ ಒಬ್ಬರೂ ನೆನಪಾಗಲೊಲ್ಲರು. ಗೆಳೆಯ ಕುಂಟಿನಿಗೆ ನಮ್ಮೂರಿನ ಚಂದಚಂದದ ಫೋಟೋ ಬೇಕು ಅಂದಾಗ ಅಲ್ಲಿ ಫೋಟೋ ತೆಗೆಯುವುದಕ್ಕೇನಿದೆ. ಒಂದು ಕೆರೆ ಮತ್ತು ಅಂಕುಡೊಂಕು ರಸ್ತೆ. ಆ ಊರಿಗೆ ಒಂದು ಸ್ವರೂಪವೇ ಇಲ್ಲ ಅಂತ ತಳ್ಳಿಹಾಕಿದ. ಈ ಫೋಟೋಗಳೇ ಚಂದ ಅಂತ ಹೇಗೆ ಹೇಳುವುದೆಂದು ಗೊತ್ತಾಗದೆ ಸುಮ್ಮನಾದೆ. ನೆನಪುಗಳಲ್ಲಿ ಜೀವಂತವಾಗಿರುವ ಊರು ಯಾವತ್ತೂ ಸುಂದರವಾಗಿರುತ್ತದೆ. ಬಾಲ್ಯದಲ್ಲಿ ನೋಡಿ ಮೆಚ್ಚಿದ ಆ ವಯಸ್ಸಿನ ಮುಖ ಮಾತ್ರ ನಮ್ಮಲ್ಲಿ ಅಚ್ಚೊತ್ತಿದಂತೆ ಉಳಿದಿರುತ್ತದೆ. ನಮಗೆಷ್ಟೇ ವಯಸ್ಸಾದರೂ ಆ ಮುಖಕ್ಕೆ ಆ ನಗುವಿಗೆ ವಯಸ್ಸಾಗುವುದಿಲ್ಲ. ಊರಿಗೂ ಅಷ್ಟೇ]]>

‍ಲೇಖಕರು G

July 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

2 ಪ್ರತಿಕ್ರಿಯೆಗಳು

  1. Mallikarjuna Hosapalya

    ಈ ಲೇಖನ ಓದುತ್ತಾ ನಮ್ಮ ಹಳ್ಳಿ ನೆನಪಾಯಿತು. ಐವತ್ತೇ ಮನೆಗಳ ಕುಗ್ರಾಮವಾದರೂ ಅತ್ಯಂತ ಕಲರ್ ಫುಲ್ ಹಳ್ಳಿ. ಪ್ರೇಮ ವಿವಾಹಗಳಿಗೆ ಎತ್ತಿದ ಕೈ. ಎಷ್ಟೋ ವರ್ಷಗಳ ಹಿಂದೆ ಪಾವಗಡದ ಕಡೆಯಿಂದ ವಲಸೆ ಬಂದು ಇಲ್ಲಿ ನೆಲೆಯೂರಿದ್ದರಿಂದ ತೆಲುಗು ಮಾತೃಭಾಷೆ. ಕನ್ನಡವೂ ಉಂಟು. ’ನಾಕಿ ಗೊತ್ತೇ ಲೇದು’ ಎಂಬ ಕಂದೆಲಗು ಮಾತಾಡುವವರೇ ಹೆಚ್ಚು. ಮಕ್ಕಳು ಕನ್ನಡ ತೆಲುಗು ಎರಡನ್ನೂ ಸರಾಗವಾಗಿ ಕಲಿಯುತ್ತಾ ಬೆಳೆಯುತ್ತಿದ್ದಾರೆ. ವಿವಾಹೇತರ ಸಂಬಂಧಗಳು ನಮ್ಮೂರಲ್ಲಿ ಉಸಿರಾಟದಷ್ಟೇ ಸಹಜ. ಗೊಲ್ಲರ ಚಿತ್ತಕ್ಕನನ್ನು ಅಂಜಿನಪ್ಪ, ಅಂಜಿನಪ್ಪನ ಹೆಂಡತಿಯನ್ನು ಈರಣ್ಣ, ಚಿತ್ತಕ್ಕನ ಮಗಳು ನಾಗಣ್ಣನನ್ನು, ನಾಗಣ್ಣನ ಮಗಳು ಚಿತ್ತಕ್ಕನ ಮಗ ತಿಮ್ಮಣ್ಣನನ್ನು ಇಟ್ಟುಕೊಂಡು ಸಂಭ್ರಮದಿಂದ ಬದುಕುತ್ತಿದ್ದಾರೆ. ಹಾಗೂ ಈ ಪಟ್ಟಿ ಕೊನೆ ಮೊದಲಿಲ್ಲದ್ದು. ಬರೆಯುವುದಕ್ಕೇ ರೋಮಾಂಚನವಾಗುತ್ತದೆ. ಎಲ್ಲರ ವಿಷಯ ಎಲ್ಲರಿಗೂ ಗೊತ್ತು. ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆ ನೋಡಿದರೆ ಈಗಿನ ಹೊಸ ತಲೆಮಾರೇ ಸ್ವಲ್ಪ ಡಲ್ಲು. ಒಂದು ಬಾರಿ ಯಾರು ಯಾರನ್ನು ಇಟ್ಟುಕೊಂಡಿದ್ದಾರೆ ಎಂಬ ಬೃಹತ್ ಪಟ್ಟಿ ತಯಾರಿಸಲು ನಾವು ಹುಡುಗರು ಕೊತೆವು. ನಕ್ಕೂ ನಕ್ಕೂ ಸಾಕಾಯಿತೇ ಹೊರತು ಪಟ್ಟಿ ಮುಗಿಯಲಿಲ್ಲ. ಬೇಟಕ್ಕಷ್ಟೇ ಅಲ್ಲ ಕರಡಿ ಬೇಟೆಗೂ ಬಲೇ ಫೇಮಸ್ ನಮ್ಮೂರು.

    ಪ್ರತಿಕ್ರಿಯೆ
  2. surekha

    ಸರ್ ಕಥೆ ಚೆನಾಗಿದೆ. ನಾನು ಈಗ ನಿಮ್ಮ ಜೋಗಿ ಮನೆ ಪುಸ್ತಕ ಓದುತಿದ್ದೇನೆ. ತುಂಬಾನೇ ಹಿಡಿಸಿತು ಸರ್. ಇದೇ ರೀತಿಯ ಬರವಣಿಗೆಗೆ ಇರಬೇಕು ನಿಮಗೆ ಅಷ್ಟೊಂದು ಜನ ಫ್ಯಾನ್ಸ್ ಇರೋದು ಅಲ್ವ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: