ಅಶ್ವತ್ಥ ವೃಕ್ಷಕ್ಕೊಂದು ಸುತ್ತು ಬಂದು..

ಅಶ್ವಥ್  ಎಂಬ ನಾದದ  ಜೀವ ಇಲ್ಲವಾದದ್ದು ನೋವು ತಂದಿದೆ. ಮೊನ್ನೆ ಮೊನ್ನೆ ತಾನೇ ಅಶ್ವಥ್ ಅವರ ಹುಟ್ಟುಹಬ್ಬಕ್ಕಾಗಿ ಹೊರತರುತ್ತಿದ್ದ ಗೌರವ ಗ್ರಂಥಕ್ಕೆ ಜೋಗಿ ಬರೆದ ಲೇಖನ ಇಲ್ಲಿದೆ. ಕಂಬನಿಯೊಂದಿಗೆ-
ಸೊಗಸಾಗಿ ಹಾಡ್ತಾರೆ, ತುಂಬ ಚೆನ್ನಾಗಿ ಬಿಸಿಬೇಳೆ ಬಾತ್ ಮಾಡ್ತಾರೆ, ಶ್ರಮಜೀವಿ ಗಾಯಕ, ಕವಿಗಳೆಂದರೆ ಪಂಚಪ್ರಾಣ, ಕವಿಯ ಮನಸ್ಸು ಅರ್ಥ ಮಾಡಿಕೊಂಡು ರಾಗ ಹಾಕ್ತಾರೆ, ಹೊಟ್ಟೆ ತುಂಬ ನಗಿಸ್ತಾರೆ, ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ, ಕನ್ನಡದ ಗೀತೆಗಳಿಗೆ ನಿಜಕ್ಕೂ ದನಿಯಾದವರು, ಒಂದು ಜನಾಂಗದ ಕಿವಿ ತೆರೆಸಿದ ಹಾಡುಗಾರ, ವಿಭಿನ್ನ ರಾಗಗಳನ್ನು ವಿಶಿಷ್ಟ ಮಟ್ಟುಗಳನ್ನು ಹಾಕಿ ಸುಗಮ ಸಂಗೀತ ಪ್ರಪಂಚವನ್ನು ವಿಸ್ತರಿಸಿದವರು, ಕನ್ನಡದ ಕೆಸೆಟ್ ಕವಿಗಳ ಭಾವ-ನೆಂಟ..
ತಾವು ಮಾಡಿದ್ದೇ ಸರಿ ಅಂತಾರೆ. ತಾವು ಹಾಡಿದ್ದೇ ರಾಗ ಅಂತಾರೆ. ಸುಮ್ನೆ ರೇಗ್ತಾರೆ, ಬೇರೆಯವರನ್ನು ಹಂಗಿಸ್ತಾರೆ, ಮತ್ತೊಬ್ಬರನ್ನು ಒಪ್ಪಿಕೊಳ್ಳೋದಿಲ್ಲ, ಕಾಲು ಕೆರೆದು ಜಗಳಕ್ಕೆ ಬರ್ತಾರೆ, ಟೀಕಿಸಿದರೆ ಮನೆಗೇ ಹೋಗಿ ಬೈತಾರೆ, ಕಾಲೆಳೀತಾರೆ, ಮೇಲೆ ಬರೋಕೆ ಬಿಡೋಲ್ಲ, ಶಿಷ್ಯಬಳಗವನ್ನು ಹುಟ್ಟುಹಾಕಲೇ ಇಲ್ಲ, ಮನುಷ್ಯ ಸರಿಯಿಲ್ಲ..
ಹಾಗಂತ ಸಿ ಅಶ್ವತ್ಥರನ್ನು ಅವರ ಕಾಲದ ಮಂದಿ ಹೊಗಳುತ್ತಾ, ನಿಂದಿಸುತ್ತಾ, ಬೆರಗಾಗುತ್ತಾ, ಟೀಕಿಸುತ್ತಾ ಮಾತಾಡುವುದಿದೆ. ಅವೆಲ್ಲವನ್ನು ಕಿರುನಗೆಯೆಂಬ ಕಸಬರಿಕೆಯಲ್ಲಿ ಗುಡಿಸಿ ಮೂಲೆಗೆ ಸರಿಸಬಲ್ಲಷ್ಟು ಪ್ರಬುದ್ಧತೆಯನ್ನು ಅಶ್ವತ್ಥ್ ಗಳಿಸಿಕೊಂಡಿದ್ದಾರೆ. ಅವರನ್ನೀಗ ಮೆಚ್ಚಿ ಮಾತಾಡುವುದೋ ಚುಚ್ಚಿ ನೋಯಿಸುವುದೋ ಮಾಡಿದರೆ ಅದರಿಂದ ಅವರಿಗೇನೂ ಆಗುವುದಿಲ್ಲ. ಅವರೀಗ ಕನ್ನಡದ ಒಂದು ಉಜ್ವಲ ಹೆಸರು. ಭಾವಗಾಯನದ ದೊರೆ. ಅವರಂತೆ ಹಾಡಲು ಹೊರಟವರದ್ದೆಲ್ಲ ಭಾವದ ಮೇಲೆ ಗಾಯನದ ಬರೆ!
ಯಾರೊಪ್ಪಿದರೂ ಬಿಟ್ಟರೂ ಅಶ್ವತ್ಥರು ಇರುವುದೇ ಹಾಗೆ, ಇರಬೇಕಾದದ್ದೇ ಹಾಗೆ. ಹಾಗಿದ್ದರಷ್ಟೇ ಅವರನ್ನು ಗುರುತು ಹಿಡಿಯಲು ಸಾಧ್ಯ. ಹೀಗೆ ಹಾಡು ಎಂದು ಅಬ್ಬರಿಸಿದರು, ಯಾರಿಗೋ ಬೈದರು, ಇನ್ಯಾರನ್ನೋ ಮನೆಯಿಂದ ಓಡಿಸಿದರು, ಕನ್ನಡವೇ ಸತ್ಯ ಅಂತ ಹೋದರೆ ಆಗೋಲ್ಲ ಅಂದರು, ಕೇಳಿದ ಹಾಡು ಹಾಡಲಿಲ್ಲ, ಕೆಂಚಾಲೋ ಮಂಚಾಲೋ ಅಂತ ಹಾಡ್ತಾರೆ ಅಂತ ಮೆಚ್ಚುತ್ತಾ, ಸಿಟ್ಟು ಮಾಡಿಕೊಳ್ಳುತ್ತಾ ಗೊಣಗುತ್ತಾ ಇರುವವರಿಗೆಲ್ಲರಿಗೂ ಅಶ್ವತ್ಥರ ಪ್ರತಿಭೆ ಏನೆಂಬುದು ಗೊತ್ತು.
ಹೀಗೆ ಏಕಕಾಲಕ್ಕೆ ಟೀಕೆಗೂ ಮೆಚ್ಟುಗೆಗೂ ಪಾತ್ರವಾಗುವ ವ್ಯಕ್ತಿ ನಿಜಕ್ಕೂ ಪ್ರತಿಭಾವಂತನಾಗಿರುತ್ತಾನೆ. ತನ್ನ ಕ್ಷೇತ್ರದಲ್ಲಿ ಏನೋ ಒಂದು ಸಾಧನೆ ಮಾಡಿರುತ್ತಾನೆ. ಉಳಿದವರು ಮಾಡದೇ ಇದ್ದದ್ದನ್ನು ಸಾಧಿಸಿ ದೊಡ್ಡವನಾಗಿರುತ್ತಾನೆ. ಅವನ ಸಿಟ್ಟು ಸೆಡವುಗಳೂ ವಿಕ್ಷಿಪ್ತ ಆಲಾಪಗಳೂ ಆಮೇಲೆ ಅಂಟಿಕೊಳ್ಳುತ್ತವೆ. ಆದರೆ ಆರಂಭದ ದಿನಗಳಲ್ಲಿ ತಾನು ಎಷ್ಟು ಕಷ್ಟಪಟ್ಟೆ ಎಂಬುದು ಅವನಿಗಷ್ಟೇ ಗೊತ್ತಿರುತ್ತದೆ. ತನ್ನನ್ನು ತುಳಿದವರ ನೆನಪು, ಹಳಿದವರ ಸ್ಮರಣೆ ಮತ್ತು ಬಿಟ್ಟು ಮುಂದಕ್ಕೆ ನಡೆದವರ ಬೆನ್ನಿನ ಗುರುತು ಅಂಥವರಿಗೆ ನಿಚ್ಚಳವಾಗಿರುತ್ತದೆ.
ಅಶ್ವತ್ಥರಿಗೆ ಈಗ ಎಪ್ಪತ್ತು. ಆ ಸಂದರ್ಭಕ್ಕೆ ಅವರು ಸನ್ನದ್ಧರಾಗುತ್ತಿದ್ದಾರೆ. ಅಶ್ವತ್ಥರಿಗೆ ಎಪ್ಪತ್ತಾಗುವುದೆಂದರೆ ತಮಾಷೆಯಲ್ಲ. ಎಲ್ಲರಿಗೂ ಆದಂತೆ ಅಶ್ವತ್ಥರಿಗೆ ಎಪ್ಪತ್ತಾಗುವುದಿಲ್ಲ. ದಶಕವೊಂದು ಸದ್ದಿಲ್ಲದೆ ಬಂದು ಗುರುತಿಲ್ಲದೆ ಹೊರಟುಹೋಗುವುದಕ್ಕೆ ಅವರು ಯಾವತ್ತೂ ಬಿಟ್ಟಿಲ್ಲ. ಅವರಿಗೆ ಹಾಡುತ್ತಾ ವಯಸ್ಸಾಗುತ್ತದೆ. ಸಂಭ್ರಮಿಸುತ್ತಾ ಆ ಕಾಲಘಟ್ಟವನ್ನು ಅವರು ದಾಟುತ್ತಾರೆ. ಆವತ್ತು ಇಡೀ ಕನ್ನಡ ನಾಡೇ ಅವರ ಸ್ವರಕ್ಕೆ ಮರುಳಾಗಬೇಕು. ಅವರ ಹೊಸ ಗೆಳೆಯರು ಆ ಸಂಭ್ರಮಕ್ಕೆ ಸಾಕ್ಷಿಯಾಗಬೇಕು. ಹೊಸ ಗೆಳೆಯರು ಯಾಕೆ ಎಂದರೆ ಹಳೆಯ ಗೆಳೆಯರಿಂದ ಅವರು ಕಳಚಿಕೊಂಡಾಗಿರುತ್ತದೆ. ಆ ಮಟ್ಟಿಗೆ ಅವರು ಪ್ರತಿವಸಂತಕ್ಕೂ ಚಿಗುರುವ ಮಾಮರ. ಅಲ್ಲಿ ಹೊಸ ಚಿಗುರು, ಹೊಸ ಒಗರು.
++
ಅಶ್ವತ್ಥರು ಸಂಭ್ರಮದ ಹಾಡನ್ನು ಕೂಡ ವಿಷಾದದಿಂದ ಹಾಡಲು ಆರಂಭಿಸಿದ್ದಾರೆ ಅಂತ ಅವರ ಅಭಿಮಾನಿಗಳಿಗೆ ಅನ್ನಿಸತೊಡಗಿ ಹತ್ತು ವರುಷಗಳೇ ಆಗಿವೆ. ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ಎಂಬ ಉಲ್ಲಾಸದ ಗೀತೆ, ಅವರ ಇಂಚರ’ ದಲ್ಲಿ ಕೊಂಚ ಬೇಸರದ ಗೀತೆಯಾಗಿ ಮಾರ್ಪಟ್ಟಿದೆ. ಆ ಬದಲಾವಣೆ ಅವರನ್ನು ಕೇಳುತ್ತಾ ಬಂದ ಜೀವಕ್ಕೂ ಆಗಿರುವುದರಿಂದ ಕೆಲವರಿಗಾದರೂ ಅದು ಸಹ್ಯವಾದೀತು. ಆದರೆ ಎಲ್ಲರೂ ಅದನ್ನು ಮೆಚ್ಚುತ್ತಾರೆಂಬ ಖಾತ್ರಿಯಿಲ್ಲ.
ಕ್ರಮೇಣ ಅಶ್ವತ್ಥ್ ಖಾಸಗಿ ವಲಯವನ್ನೂ ಆಪ್ತವೃತ್ತವನ್ನೂ ಒಳಬಳಗವನ್ನೂ ಕಳಕೊಂಡರೇನೋ ಅನ್ನಿಸುವಷ್ಟು ಜನಪ್ರಿಯರಾದರು. ಐದಾರು ವರುಷಗಳ ಹಿಂದೆ ಕೂಡ ಅವರು ಬನ್ರೀ ಹಾಡು ಕೇಳೋಣ ಅಂತ ಒಂದಷ್ಟು ಮಂದಿಯನ್ನು ಕರೆದು ಕೂರಿಸಿ ಸುಮ್ಮನೆ ಹಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅಂಥ ಆಪ್ತಗಾಯನ ನಡೆಯುತ್ತಿಲ್ಲ ಅಂದರೆ ಅದಕ್ಕೆ ಅಶ್ವತ್ಥರು ಕಾರಣ ಅಲ್ಲ. ಅವರು ಇವತ್ತಿಗೂ ಅದಕ್ಕೆ ಸಿದ್ಧ. ಆದರೆ ಅವರ ಹಾಡು ಕೇಳುವವರು ಬದಲಾಗಿದ್ದಾರೆ. ಅಶ್ವತ್ಥ್ ನಮ್ಮನ್ನೆಲ್ಲ ಮೀರಿದವರು ಎಂಬ ಭಾವನೆ ಅವರಿಗೂ ಅವರ ಗೆಳೆಯರಿಗೂ ಏಕಕಾಲದಲ್ಲಿ ಹುಟ್ಟಿದಂತಿದೆ. ಹೀಗಾಗಿ ಎಲ್ಲಾ ಜನಪ್ರಿಯ ವ್ಯಕ್ತಿಗಳ ಹಾಗೆ ಅಶ್ವತ್ಥರು ಕೂಡ ಏಕಕಾಲಕ್ಕೆ ಸ್ಥಾವರ ಮತ್ತು ಜಂಗಮ. ಅಲ್ಲಮ ಮತ್ತು ಗುಹೇಶ್ವರ! ದ್ವೈತ ಮತ್ತು ಅದ್ವೈತ, ಬೆಳಕು ಮತ್ತು ನೆರಳು.
ಕನ್ನಡದಲ್ಲಿ ಹೊಸದೇನು ನಡೆದರೂ ಅಲ್ಲಿ ವೈ ಎನ್ ಕೆ ಹಾಜರಿರುತ್ತಿದ್ದರು ಎಂಬ ಮಾತಿದೆ. ಎಪ್ಪತ್ತರ ದಶಕದಲ್ಲಿ ಅದು ನಿಜವೂ ಆಗಿತ್ತು. ಹೊಸ ನಾಟಕ, ಹೊಸ ಸಿನಿಮಾ, ಹೊಸ ಸಾಹಿತ್ಯ, ಹೊಸ ಕವಿತೆ ಎಲ್ಲವೂ ವೈಎನ್‌ಕೆ ಕಣ್ಣೆದುರಲ್ಲೇ ಕಣ್ತೆರೆದವು. ಅದು ಅಶ್ವತ್ಥರ ವಿಚಾರದಲ್ಲೂ ನಿಜವೇ. ಅವರು ಆಧುನಿಕ ರಂಗಭೂಮಿಗೆ, ಹೊಸ ಅಲೆಯ ಚಿತ್ರರಂಗಕ್ಕೆ, ಹೊಸಬರ ಗೀತೆಗಳಿಗೆ ದನಿಯಾದರು, ರಾಗವಾದರು. ಕಾಕನಕೋಟೆಯಿಂದ ನಾಗಮಂಡಲದ ತನಕ ಅವರು ಪ್ರತಿಯೊಂದನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಅತ್ಯುತ್ಸಾಹ ಮತ್ತು ಕಟ್ಟುವ ಸಂಭ್ರಮದ ಒಂದು ದೊಡ್ಡ ಬಳಗವೇ ಅಲ್ಲಿತ್ತು. ಆ ಬಳಗದ ಸದಸ್ಯರಾಗಿ ಅಶ್ವತ್ಥರೂ ಇದ್ದರು.
ಇವತ್ತು ಆ ಬಳಗ ಒಡೆದು ಹೋಗಿದೆ. ಹೊಸಬರು ಒಂದಾಗುತ್ತಿಲ್ಲ. ತರುಣ ಲೇಖಕರು ಜೊತೆಯಾಗಿ ಸಿನಿಮಾ ಮಾಡುತ್ತಿಲ್ಲ, ಪತ್ರಿಕೆ ಮಾಡುತ್ತಿಲ್ಲ, ನಾಟಕ ಕೂಡ ಬರೆಯುತ್ತಿಲ್ಲ. ವಿಭಿನ್ನ ಮನಸ್ಸು ವಿಶಿಷ್ಟವಾಗಿ ಒಂದುಗೂಡಿ ಸೃಷ್ಟಿಸುತ್ತಿದ್ದ ಮಾಯಾಲೋಕ ಮಾಯವಾಗಿದೆ. ಇವತ್ತು ನನ್ನ ಪಾಡಿಗೆ ನಾನು, ಅವನ ಪಾಡಿಗೆ ಅವನು. ಒಂದು ವೇಳೆ ಒಂದಾದರೂ ಅದಕ್ಕೆ ಪ್ರತಿಭೆ ಕಾರಣವಾಗಿರುವುದಿಲ್ಲ. ಸುಗ್ಗಿ ಮಾಡೋಣ ಬಾರವ್ವಾ ಗೆಳತಿ, ನೀ ಸುಮ್ಮನ್ಯಾಕ ಕುಳತೀ… ಅಂತ ಕರೆಯುವವರೂ ಇಲ್ಲ, ಬರುವವರೂ ಇಲ್ಲ. ಅವರೇ ಹಾಡಿದ ಗೀತೆಯ ಸಾಲಿನಂತೆ – ಎದೆಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ – ಎಂದರೆ ಅದು ಖಂಡಿತಾ ನಿರಾಶವಾದ ಅಲ್ಲ. ವಾಸ್ತವದ ಚಿತ್ರಣ ಅಷ್ಟೇ.
++
ಮೊನ್ನೆ ಮೊನ್ನೆ ಅಶ್ವತ್ಥ್ ಸಂಗೀತ ನೀಡಿದ ಕುವೆಂಪು ಗೀತೆಯನ್ನು ರೈತರ ನಾಡಗೀತೆಯಾಗಿ ಸ್ವೀಕಾರ ಮಾಡಲಾಯಿತು. ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ… ಎಂದು ಅಶ್ವತ್ಥರು ಹಾಡುತ್ತಿದ್ದರೆ ಆ ಕಾಲಕ್ಕೆ ರೋಮಾಂಚನ. ಮೊನ್ನೆ ಮೊನ್ನೆ ಸಿಕ್ಕ ಗೆಳೆಯನೊಬ್ಬನಿಗೆ ಅಶ್ವತ್ಥರ ಹಾಡೊಂದನ್ನು ಕೇಳಿಸಿದೆ. ಅವನಿಗೆ ಅಷ್ಟೇನೂ ರುಚಿಸಿದಂತೆ ಕಾಣಲಿಲ್ಲ. ರಘು ದೀಕ್ಷಿತ್ ಹಾಡಿದ್ದೇನಾದರೂ ಇದೆಯಾ ಎಂದು ಕೇಳಿದ. ಇವತ್ತಿನ ಗಾಯಕರಿಗೆ ರಾಗ ರಸ, ಪದ ಕಸ. ಅಶ್ವತ್ಥರು ಯಾವತ್ತೂ ಅಕ್ಷರದಿಂದ ದೂರ ಸರಿದವರಲ್ಲ. ಅವರು ಹಾಡಿದ್ದು ಎಷ್ಟೋ ಸಾರಿ ಕವಿತಾ ವಾಚನದಂತೆ, ರಂಗರೂಪದಂತೆ ಕೇಳಿಸುತ್ತಿತ್ತು. ಅದೇ ಅವರ ಶಕ್ತಿ.
ಅಶ್ವತ್ಥ್ ಇತ್ತೀಚೆಗೆ ಸಂಗೀತ ನೀಡಿದ ಕೆಸೆಟ್ಟೊಂದು ಹೇಗೋ ಕೈ ಸೇರಿತು. ಅದರಲ್ಲಿರುವ ಹಾಡುಗಳಲ್ಲೂ ಸತ್ವ ಇರಲಿಲ್ಲ. ಹಾಡಿನ ಧಾಟಿಯಲ್ಲೂ ಕಸುವಿರಲಿಲ್ಲ. ಅದೊಂದು ಮುಗಿದ ಯುಗ ಎಂದು ಕರೆಯಬಹುದೇ ಎಂದು ಯೋಚಿಸಿದೆ. ಆದರೆ ಬೆಂಗಳೂರಿಗಷ್ಟೇ, ಕೆಸೆಟ್ ಕೊಳ್ಳುವ ಶಕ್ತಿಯಿದ್ದವರಿಗಷ್ಟೇ ಸೀಮಿತವಾಗಿದ್ದ ಅಶ್ವತ್ಥರು, ವೇದಿಕೆಯೇರಿ ಕನ್ನಡವೇ ಸತ್ಯ ಎಂದು ಹಾಡಿ ಕೋಟ್ಯಂತರ ಮಂದಿಯನ್ನು ತಲುಪುತ್ತಿದ್ದಾರೆ. ಇವತ್ತಿಗೂ ಬಳ್ಳಾರಿಯಲ್ಲೋ ಬೀದರದಲ್ಲೋ ಮಂಗಳೂರಲ್ಲೋ ಅವರು ರಂಗ ಏರಿದರೆ, ಹತ್ತಿಪ್ಪತ್ತು ಸಾವಿರ ಮಂದಿ ಸೇರುತ್ತಾರೆ. ಅವರನ್ನು ನೋಡುತ್ತಾ ನೋಡುತ್ತಾ ಅಶ್ವತ್ಥರು ಉತ್ಸಾಹ ಇಮ್ಮಡಿಯಾಗಿ ಹಾಡುತ್ತಾರೆ.
ವಚನದಿಂದ ಬಹುವಚನಕ್ಕೆ, ಅಲ್ಲಿಂದ ನಿರ್ವಚನಕ್ಕೆ ಸಂದಿರುವಂತೆ ಕಾಣಿಸುವ ಅಶ್ವತ್ಥರು ಕೊಂಚ ಸೊರಗಿದ್ದಾರೆ. ಅದಕ್ಕೆ ಅವರ ಕೊರಗೂ ಕಾರಣ. ಖ್ಯಾತಿಯ ಬೆನ್ನು ಹತ್ತುವುದನ್ನು ಅವರೀಗ ಧಾರಾಳವಾಗಿ ನಿಲ್ಲಿಸಬಹುದು. ಖ್ಯಾತಿಯ ಬೆನ್ನಟ್ಟುವುದು ಎಂಬುದು ಕೂಡ ಒಂದು ಅರ್ಥದಲ್ಲಿ ನನಗೆ ಅರ್ಥವಾಗದ ಪದಪುಂಜ. ಅವರು ಅದರ ಹಿಂದಿದ್ದಾರೋ ಮುಂದಿದ್ದಾರೋ ಸ್ವಷ್ಪವಿಲ್ಲ.
ತೂಗುಮಂಚದ ಒಂದೆರಡು ಹಾಡುಗಳಲ್ಲಿ ಏರುಜವ್ವನದಲ್ಲಿ ಕಾಣಿಸಿಕೊಂಡ ಅಶ್ವತ್ಥರು ಈಗ ನಮಗೆ ಸಿಗುವುದು ಹಳೆಯ ಹಾಡುಗಳಲ್ಲಿ. ಇವತ್ತಿಗೂ ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು.. ಎಂಬ ಹಾಡಿಗೆ ಮನಸ್ಸು ತುಡಿಯುತ್ತದೆ. ಯಾವ ಮೋಹನ ಮುರಳಿಯ ಸಂಯೋಜನೆಯನ್ನು ಮೀರಿಸುವಂಥ ಮೊದಲ ದಿನ ಮೌನ…’ ಎಂಬ ಗೀತೆಯನ್ನು ಕೊಟ್ಟಿದ್ದಾರಲ್ಲ ಎಂದು ಹೆಮ್ಮೆ ಎನಿಸುತ್ತದೆ.
ಅಸಂಖ್ಯ ತಮಾಷೆ, ಅಸಾಧ್ಯ ಸಿಟ್ಟು , ಅಹಂ ಬ್ರಹ್ಮಾಸ್ಮಿ ಎಂಬ ತತ್ವದಲ್ಲಿ ಗಾಢ ನಂಬಿಕೆ, ತನ್ನ ತುತ್ತೂರಿಯನ್ನು ತಾನೇ ಊದಬೇಕು ಎಂಬ ಹಠ- ಇವಿಷ್ಟನ್ನೂ ಒಳಗೊಂಡಂತೆ ಕಾಣಿಸುವ ಜಗಳಗಂಟ ಪ್ರತಿಭೆಗೆ, ಅವರ ಅತ್ಯುತ್ಸಾಹಕ್ಕೆ, ಅದಮ್ಯ ಚೈತನ್ಯಕ್ಕೆ, ಏನಾದರೂ ಮಾಡುತಿರು ತಮ್ಮ ಎಂಬ ಕ್ರಿಯಾಶೀಲತೆಗೆ ನಮಸ್ಕಾರ.
ಜಿಎಸ್‌ಎಸ್ ಬರೆದ ಎರಡು ಸಾಲು ಅವರಿಗೂ ಅನ್ಲಯಿಸುವಂತಿವೆ:
ಎಲ್ಲಿದೆ ನಂದನ? ಎಲ್ಲಿದೆ ಬಂಧನ?
ಎಲ್ಲಾ ಇದೆ ಈ ನಿನ್ನೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸಿಹಿಯಿದೆ ನಾಲಗಗೆ.
ಅಶ್ವತ್ಥರು ಒಳಗಿನ ತಿಳಿಯನ್ನು ಕಾಲ ಕಲಕದೇ ಇರಲಿ

‍ಲೇಖಕರು avadhi

December 29, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

7 ಪ್ರತಿಕ್ರಿಯೆಗಳು

 1. d.s.ramaswamy

  ಕೇಶವ ಹೇಳಿದ್ದಕ್ಕೆ ನನ್ನ ಅನುಮೋದನೆ. ಜೋಗಿಯವರ ಯಾವತ್ತೂ ಬರಹಗಳಲ್ಲಿ ಆರ್ದತೆ ಮತ್ತು ಆತ್ಮೀಯತೆಯ ಜೊತೆಜೊತೆಗೇ ವಿಮರ್ಶೆಯ ಚಾಚೂ ಇರುತ್ತವೆ. ಅಶ್ವತ್ಥರ ಕುರಿತ ಬರಹವೂ ಸಕಾಲಿಕ ಹಾಗೇ ಅವರ ಇತಿಮಿತಿಗಳನ್ನೂ ಸ್ಪಶ್ಟವಾಗಿ ಹೇಳಿರುವ ಗಂದೆದೆ!

  ಪ್ರತಿಕ್ರಿಯೆ
 2. ಅನಿಕೇತನ ಸುನಿಲ್

  Ashwath sir na Aswatha vrukhakke holisuruvudu santasa tanditu..nija namma Ashwath sir irdiddre ivattu kanna sugamasangeetha kshetra ee mattakke beleyuttiralilla….avara haadu endindigu nava naveena nannedege.
  Ashwath obba holisalasaadhya pratibhe….avarige nanna koti namana.
  Ashwath indininda nooru kaala arogyavaagi baalali…kannadammana seve maadali anta haaraisuttene 🙂
  Sunil

  ಪ್ರತಿಕ್ರಿಯೆ
 3. D.M.Sagar,Dr.

  “ಹೀಗೆ ಏಕಕಾಲಕ್ಕೆ ಟೀಕೆಗೂ ಮೆಚ್ಟುಗೆಗೂ ಪಾತ್ರವಾಗುವ ವ್ಯಕ್ತಿ ನಿಜಕ್ಕೂ ಪ್ರತಿಭಾವಂತನಾಗಿರುತ್ತಾನೆ. ತನ್ನ ಕ್ಷೇತ್ರದಲ್ಲಿ ಏನೋ ಒಂದು ಸಾಧನೆ ಮಾಡಿರುತ್ತಾನೆ. ಉಳಿದವರು ಮಾಡದೇ ಇದ್ದದ್ದನ್ನು ಸಾಧಿಸಿ ದೊಡ್ಡವನಾಗಿರುತ್ತಾನೆ. ಅವನ ಸಿಟ್ಟು ಸೆಡವುಗಳೂ ವಿಕ್ಷಿಪ್ತ ಆಲಾಪಗಳೂ ಆಮೇಲೆ ಅಂಟಿಕೊಳ್ಳುತ್ತವೆ. ಆದರೆ ಆರಂಭದ ದಿನಗಳಲ್ಲಿ ತಾನು ಎಷ್ಟು ಕಷ್ಟಪಟ್ಟೆ ಎಂಬುದು ಅವನಿಗಷ್ಟೇ ಗೊತ್ತಿರುತ್ತದೆ. ತನ್ನನ್ನು ತುಳಿದವರ ನೆನಪು, ಹಳಿದವರ ಸ್ಮರಣೆ ಮತ್ತು ಬಿಟ್ಟು ಮುಂದಕ್ಕೆ ನಡೆದವರ ಬೆನ್ನಿನ ಗುರುತು ಅಂಥವರಿಗೆ ನಿಚ್ಚಳವಾಗಿರುತ್ತದೆ” – I liked this paragraph as it stands as a “remote but distinct island”. Also, this paragraph seems to be universally true. Awesome writing: D.M.Sagar,Dr.

  ಪ್ರತಿಕ್ರಿಯೆ
 4. Santhosh Ananthapura

  Very aptly said about Sri.Ashwath. Only you can write this kind of article. which includes, affection,love and criticism. Hats of to you Sir ji.. 🙂

  ಪ್ರತಿಕ್ರಿಯೆ
 5. dundiraj

  oduga mechi ahudahudennabekada lekhana.aste sundara chitra.lekhana odi ashwath khushiyinda naguthiruvanthide.

  ಪ್ರತಿಕ್ರಿಯೆ

Trackbacks/Pingbacks

 1. Twitter Trackbacks for ಜೋಗಿ ಬರೆದಿದ್ದಾರೆ: ಅಶ್ವತ್ಥ ವೃಕ್ಷಕ್ಕೊಂದು ಸುತ್ತು ಬಂದು.. « ಅವಧಿ [avadhi.wordpress.com] on Topsy.com - [...] ಜೋಗಿ ಬರೆದಿದ್ದಾರೆ: ಅಶ್ವತ್ಥ ವೃಕ್ಷಕ್ಕೊಂ... avadhi.wordpress.com/2009/10/25/%E0%B2%9C%E0%B3%8B%E0%B2%97%E0%B2%BF-%E0%B2%AC%E0%B2%B0%E0%B3%86%E0%B2%A6%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86-%E0%B2%85%E0%B2%B6%E0%B3%8D%E0%B2%B5%E0%B2%A4%E0%B3%8D – view page – cached ಸೊಗಸಾಗಿ ಹಾಡ್ತಾರೆ, ತುಂಬ ಚೆನ್ನಾಗಿ ಬಿಸಿಬೇಳೆ ಬಾತ್ ಮಾಡ್ತಾರೆ, ಶ್ರಮಜೀವಿ ಗಾಯಕ,...…

ಇದಕ್ಕೆ ಪ್ರತಿಕ್ರಿಯೆ ನೀಡಿ ಕೇಶವCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: