ಜೋಗಿ ಬರೆದಿದ್ದಾರೆ: ಆಲನಹಳ್ಳಿಯ ಪರಸಂಗ


ಕಾಡಿನಲ್ಲೊಂದು ಶಕುನ ಪಕ್ಷಿ. ಆಳುಕೂಗಿನ ಹಕ್ಕಿ ಎಂದೇ ಅದಕ್ಕೆ ಹೆಸರು. ಆ ಕಾಡಿಗೆ ಯಾರು ಕಾಲಿಟ್ಟರೂ ಅವರ ಹೆಸರು ಹಿಡಿದು ಕೂಗುತ್ತದೆ ಅದು. ತಮ್ಮ ಹೆಸರನ್ನೇ ಕರೆಯಿತೇನೋ ಎಂದು ಓಗೊಟ್ಟವರು ನೆತ್ತರು ಕಾರಿ ಸಾಯುತ್ತಾರೆ. ಕಾಡಿಗೆ ಹೋದ ಅಪ್ಪ ಹಾಗೇ ಸತ್ತಿರಬೇಕು ಎಂದು ಆ ಹುಡುಗನಿಗೆ ಗುಮಾನಿ. ಹೀಗಾಗಿ ಕಾಡಿಗೆ ಹೋದಾಗೆಲ್ಲ ಭಯ. ಎಲ್ಲಿ ತನ್ನ ಹೆಸರನ್ನು ಕೂಗಿ ಕರೆಯುತ್ತದೋ ಎಂದು ಆತಂಕ.
ಅಲ್ಲಿಂದ ಆತ ಬೆಳೆದು ದೊಡ್ಡವನಾಗಿ ನಗರಕ್ಕೆ ಬರುತ್ತಾನೆ. ನಗರದಲ್ಲಿ ಹಕ್ಕಿಯ ಭಯವಿಲ್ಲ. ಆದರೆ ಕೂಗಿ ಕರೆಯುವವರೂ ಇಲ್ಲ. ಯಾರಾದರೂ ಕೂಗಿ ಕರೆಯಲಿ ಎಂದು ಹಂಬಲಿಸುತ್ತಿರುತ್ತಾನೆ. ಆಳುಕೂಗಿನ ಹಕ್ಕಿಗಾಗಿ ಮನಸ್ಸು ಕಾತರಿಸುತ್ತದೆ.

ಈ ಕತೆಯನ್ನು ಹೇಳುತ್ತಿದ್ದದ್ದು ಶ್ರೀಕೃಷ್ಣ ಆಲನಹಳ್ಳಿ. ಇದನ್ನು ಮೊದಲು ಕೇಳಿದಾಗ ನನಗೆ ನೆನಪಾದದ್ದು ಬೇಂದ್ರೆಯ ಜೋಗಿ’ ಕವಿತೆ. ಅಲ್ಲೂ ಕೂಡ, ಊರ ತುದಿಯ ಮಸಣದಾಚೆಗಿನ ಜೋಡು ಗೂಬೆ ಕೂಗುವ ತೋಪಿನಲ್ಲಿ ಕೋಗಿಲೆಯೊಂದು ಅತ್ತ ಹೋದವನನ್ನು ಕರೆಯುತ್ತಾ ಇರುತ್ತದೆ. ಹೀಗೆ ಅಶರೀರದಿಂದ ಬರುವ ಅನೂಹ್ಯದಿಂದ ಬರುವ ಕರೆಗೆ ಕವಿ ಮಾತ್ರ ಓಗೊಡಬಲ್ಲ. ಹಾಗೆ ಓಗೊಟ್ಟ ತಕ್ಷಣ ಅವನ ಅಹಂಕಾರ ಸತ್ತು, ಕವಿಯಷ್ಟೇ ಉಳಿಯುತ್ತಾನೆ.
ಆಲನಹಳ್ಳಿ ಕೂಡ ಹಾಗೇ ಉಳಿದ ಕತೆಗಾರ. ಗುಂಗುರು ಕೂದಲಿನ, ಮೋಹಕ ಕಣ್ಣುಗಳ, ತುಂಟಮೀಸೆಯ ತರುಣನಾಗಿ ಮಾತ್ರ ಆಲನಹಳ್ಳಿ ಶ್ರೀಕೃಷ್ಣ ಕಣ್ಮುಂದೆ ಸುಳಿಯಬಲ್ಲ. ಕಾಡು’ ಕಾದಂಬರಿ ಓದುತ್ತಾ ಓದುತ್ತಾ ನಾವೆಲ್ಲ ಕಿಟ್ಟಿಯಾಗಿ ವಿಹರಿಸಿದ್ದುಂಟು. ಆ ಮುಗ್ಧತೆಯನ್ನೂ ಅದನ್ನು ಮೀರಬಲ್ಲ ಕಾಮುಕತೆಯನ್ನು ಬೆರೆಸಿದಂತೆ ಬರೆಯುತ್ತಿದ್ದ ಆಲನಹಳ್ಳಿ, ಆ ಕಾಲಕ್ಕೆ ನಿಜಕ್ಕೂ ಪ್ರಣಯರಾಜ. ಅವರ ಕುರಿತು ಅಸಂಖ್ಯ ಪ್ರೇಮಕತೆಗಳು. ಜಗಳಗಂಟ, ಹುಂಬ, ಎಲ್ಲವನ್ನೂ ಉಡಾಫೆಯಿಂದ ನೋಡುವ ದಿಟ್ಟ, ಎಲ್ಲರನ್ನೂ ಧಿಕ್ಕರಿಸಬಲ್ಲ ಧೀರ, ಕತೆಗಾರ ಹೇಗಿರಬೇಕು ಎನ್ನುವ ನಮ್ಮ ನಿರಾಕಾರ ಊಹೆಗೆ ಆಲನಹಳ್ಳಿ ಸಾಕಾರ ಮೂರ್ತಿ.
ಶ್ರೀಕೃಷ್ಣ ಆಲನಹಳ್ಳಿಗೆ ವಯಸ್ಸಾಗಲಿಲ್ಲ. ನಲವತ್ತರ ಮಿಗಲರ್ಧದಲ್ಲಿ ಕಣ್ಮರೆಯಾದ ಕೃಷ್ಣನ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೂ ಆಗಿರಲಿಲ್ಲ. ದೇವನೂರು ಮಹಾದೇವ ಒಡಲಾಳ’ ಬರೆದಾಗ ಅವರು ಆಲನಹಳ್ಳಿಯಿಂದ ಪ್ರಭಾವಿತರಾಗಿರಬಹುದೇ ಎಂಬ ಸಣ್ಣ ಗುಮಾನಿ ನಮ್ಮಲ್ಲಿ. ಮೈಸೂರು, ಹಳೇಮೈಸೂರು, ಹೆಗ್ಗಡದೇವನ ಕೋಟೆ, ಆಲನಹಳ್ಳಿ ಇವೆಲ್ಲವೂ ನಮ್ಮೂರಿನಂತಾಗಿಬಿಟ್ಟಿದ್ದವು. ದೇವನೂರು ಆಪ್ತರಾಗುವುದಕ್ಕೆ ಒಂದರ್ಥದಲ್ಲಿ ಆಲನಹಳ್ಳಿಯೇ ಕಾರಣ.
ಇದು ಕೂಡ ನಮ್ಮ ಕಲ್ಪನೆಯೇ ಇರಬಹುದು. ದೇವನೂರು ಮಹಾದೇವ ಬರೆದ ಹಾಗೆ ಆಲನಹಳ್ಳಿ ಬರೆಯಲಿಲ್ಲ. ನವ್ಯ ಪರದೇಶಗಳ ತಂತ್ರಗಾರಿಕೆ, ಕಥಾಸಂವಿಧಾನ, ಸಂಬಂಧಗಳ ಸಂಕೀರ್ಣತೆಯನ್ನು ಒಳಗೊಳ್ಳಲು ಹಪಹಪಿಸುತ್ತಿದ್ದ, ಅದನ್ನು ತನ್ನದಾಗಿಸಿಕೊಳ್ಳುವ ಒದ್ದಾಟದ್ದ ಕಾಲದಲ್ಲಿ ಅದನ್ನೆಲ್ಲ ಪಕ್ಕಕ್ಕೆ ಎಸೆದು ಮಣ್ಣಿನ ಹಾಡು’ ಬರೆದದ್ದು ಆಲನಹಳ್ಳಿ ಪ್ರತಿಭೆ. ಆ ನಂತರವೂ ಅಷ್ಟೇ, ಅವರ ಕತೆಗಳ ಮೇಲೆ ನವ್ಯದ ಪ್ರಭಾವ ಅಷ್ಟಿಷ್ಟು ಬಿದ್ದಿತ್ತೋ ಏನೋ, ಆದರೆ ಕಾದಂಬರಿಗಳೆಲ್ಲ ಆಲನಹಳ್ಳಿಯಲ್ಲೇ ಅರಳಿದಂಥವು. ಅವುಗಳಿಗೆ ಅದೆಂಥ ದೇಸಿ ಸೊಗಡು.
ಬರೆಯುತ್ತಾ ಬರೆಯುತ್ತಾ ಒಂದು ಮಾಂತ್ರಿಕ ಜಗತ್ತನ್ನು ಕಟ್ಟಿಕೊಡಬಲ್ಲ ತಾಕತ್ತಿದ್ದ ಆಲನಹಳ್ಳಿ, ಹೋರಾಟದಲ್ಲಿ ತೊಡಗಿಕೊಂಡದ್ದು, ಎಲ್ಲೋ ಜಗಳ ಆಡಿದ್ದು, ಯಾರನ್ನೋ ತಡವಿಕೊಂಡು ಜಿದ್ದಿಗೆ ಬಿದ್ದದ್ದು, ರಾತ್ರಿಪೂರ ಎಚ್ಚರಿದ್ದು ಬರೆಯುತ್ತಿದ್ದದ್ದು, ಅಸಂಖ್ಯ ಪ್ರೇಯಸಿರನ್ನು ಕಟ್ಟಿಕೊಂಡು ಅಲೆಯುತ್ತಿದ್ದದ್ದು, ಅದ್ಯಾವುದೋ ಕಾಡು ಹೊಕ್ಕು ಕೂತಿರುತ್ತಿದ್ದದ್ದು – ಇವೆಲ್ಲ ನಮ್ಮ ಊಹೆಯಲ್ಲೇ ನಿಜವಾಗುತ್ತಿದ್ದ ಸಂಗತಿಗಳು.
ಆಲನಹಳ್ಳಿ ಹಾಗಿರಲಿಲ್ಲ. ಕಾಡು’ ಕಾದಂಬರಿಯಲ್ಲಿ ಬರುವ ಕಿಟ್ಟಿ, ಇದೇ ಶ್ರೀಕೃಷ್ಣ ಎಂದು ನಾವು ನಂಬಲು ಶುರುಮಾಡಿಕೊಂಡು ಎಲ್ಲ ಗೋಜಲಾಗಿಬಿಟ್ಟಿತು. ನಂತರ ಬಂದ ಗೆಂಡೆತಿಮ್ಮ ಮತ್ತು ಭುಜಂಗಯ್ಯ ಕೂಡ ಆಲನಹಳ್ಳಿಯ ಒಳಗೆ ಅಡಗಿಕೊಂಡಿದ್ದ, ಆಗಷ್ಟೇ ಹೊರಬಂದಿರುವ ಮನುಷ್ಯರಂತೆ ಕಾಣತೊಡಗಿದರು. ನಾವೆಲ್ಲ ನಮ್ಮ ಶಕ್ತಿಮೀರಿ ಆಲನಹಳ್ಳಿಯಂತಾಗಲು ಶ್ರಮಿಸತೊಡಗಿದೆವು. ಹೆಮಿಂಗ್ವೇಯ ಹಾಗೆ ಆಲನಹಳ್ಳಿ ಕೂಡ ಸಾಹಸಿಯಾಗಿ ಕಾಣತೊಡಗಿದರು. ಬೋಧಿಲೇರನಂತೆ ಪರಮ ಸೋಮಾರಿಯೂ, ತೀವ್ರ ವ್ಯಾಮೋಹಿಯೂ, ತನ್ನ ಹಟಮಾರಿತನ, ದಿಗ್ಭ್ರಮೆಗಳನ್ನು ನೀಗಿಕೊಂಡ ಯೇಟ್ಸ್ ಕವಿಯ ಹಾಗೂ ಭಾಸವಾಗತೊಡಗಿದರು. ಆದರೆ ಕೊನೆವರೆಗೂ ನಮ್ಮನ್ನು ಬಿಡದೇ ಕಾಡಿದ್ದು ಆಳುಹಕ್ಕಿಯ ಕೂಗಿಗೆ ಬೆದರುತ್ತಿದ್ದ ಕಿಟ್ಟಿ ಎಂಬ ಆರೆಂಟು ವರುಷದ ಬಾಲಕ, ಅವನು ನೋಡುತ್ತಿದ್ದ ಗೀಜಗನ ಗೂಡು, ಅವನು ಕದ್ದು ನೋಡಿದ ಹಾದರ, ಅವನ ಮಾವ ಕರೆದುಕೊಂಡು ಹೋಗಿ ತೋರಿಸಿದ ಭಯಾನಕ ದೃಶ್ಯ, ಅವನ ಅತ್ತೆಯ ಸೊಂಟದ ನುಣುಪು.
**********
ಕಾಡು’ ಕಾದಂಬರಿಯ ಕಿಟ್ಟಿ, ಪರಸಂಗದ ಗೆಂಡೆತಿಮ್ಮ, ದಶಾವತಾರದ ಭುಜಂಗಯ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಗ್ಧರೇ. ಕಿಟ್ಟಿಯದು ಸಹಜ ಮುಗ್ಧತೆ. ಗೆಂಡೆತಿಮ್ಮ ನಮ್ಮ ಹಳ್ಳಿಯಲ್ಲಿ ಎದುರಾಗುವಂಥ ಎಡವಟ್ಟು ತರುಣ, ಭುಜಂಗಯ್ಯ ಎಲ್ಲದರಲ್ಲೂ ರೇಜಿಗೆ ಹುಟ್ಟಿ, ಮತ್ತೊಂದೇನೋ ಮಾಡಲು ಹೊರಟು ಎಲ್ಲದರಲ್ಲೂ ವಿಫಲನಾಗುವ ನಮ್ಮೊಳಗಿನ ಹುಂಬ.
ಆಲನಹಳ್ಳಿ ಅಷ್ಟು ಮುಗ್ಧರಾಗಿರಲಿಲ್ಲ ಎಂದು ಗೊತ್ತಾಗುವ ಹೊತ್ತಿಗಾಗಲೇ ಕಣ್ಮರೆಯಾಗಿದ್ದರು. ಕೆಲವು ಲೇಖಕರೇ ಹಾಗೆ, ಅವರ ಮಿತಿಗಳು ಸ್ಪಷ್ಟವಾಗುವ ಮುಂಚೆಯೇ ಬರೆಯುವುದನ್ನೂ ಬದುಕುವುದನ್ನೂ ಮುಗಿಸಿರುತ್ತಾರೆ. ಹೀಗಾಗಿ ನಮಗೆ ಅವರ ಕುರಿತು ಅದಮ್ಯವಾದ ಪ್ರೀತಿಯಷ್ಟೇ ಉಳಿಯುವಂತೆ ಮಾಡುತ್ತಾರೆ.
ಆಲನಹಳ್ಳಿ ಮುಗ್ಧನಲ್ಲ ಅನ್ನುವ ಸೂಚನೆ ಸಿಗುತ್ತಿದ್ದದ್ದು ಅವರ ಕತೆಗಳಲ್ಲಿ. ಅಲ್ಲಿ ಬರುವ ನಾಯಕರೆಲ್ಲ ಓದಿದವರು. ವಂಚಿಸಲು ಗೊತ್ತಿದ್ದವರು. ಅವಳನ್ನು ಬಿಟ್ಟು ಮತ್ತೊಬ್ಬಳಿಗಾಗಿ ಹಂಬಲಿಸಿದವರು. ಆದರೆ ಅದ್ಯಾವುದೂ ನಮಗೆ ಮುಖ್ಯ ಅನ್ನಿಸುತ್ತಲೇ ಇರಲಿಲ್ಲ. ಕತೆಯ ವಿವರಗಳಲ್ಲಿ ಆಲನಹಳ್ಳಿ ವಂಚನೆ ಮಾಡಲಿಲ್ಲ. ತನ್ನತನವನ್ನು ಬಿಟ್ಟುಕೊಡಲಿಲ್ಲ. ಅರ್ಧ ಬರೆದು ಮುಗಿಸಿದ ಕತೆಯನ್ನೂ ಓದುತ್ತಾ ಹೋದರೂ ಅಲ್ಲಿ ಕಾಣಿಸುವುದು ಭ್ರಮನಿರಸನಗೊಳ್ಳದ ಶ್ರೀಕೃಷ್ಣ. ಅವರಿಗಿದ್ದ ಆತ್ಮವಿಶ್ವಾಸ ಅಂಥದ್ದು.
ಶ್ರೀಕೃಷ್ಣ ಆಲನಹಳ್ಳಿಯ ಫಿಲಾಸಫಿ ಏನು ಎಂದು ಯೋಚಿಸಿದರೆ ಮತ್ತೆ ಮನಸ್ಸು ಗೀಜನಗೂಡಾಗುತ್ತದೆ, ನೆಲಗುಮ್ಮವಾಗುತ್ತದೆ. ಆಗಂತುಕನ ಹಾಗೆ ಅವರು ನಮ್ಮೊಳಗೆ ಹೊಕ್ಕುಬಿಟ್ಟರೆ, ನಾವು ಸುಟ್ಟ ತಿಕದ ದೇವರ ಹಾಗೆ ಓಡಾಡತೊಡಗುತ್ತೇವೆ. ಧಗಧಗಿಸುವ ಬೆಂಕಿ ಆಲನಹಳ್ಳಿಯ ಬಹುತೇಕ ಕತೆಗಳಲ್ಲಿ ರೂಪಕ. ನೀರೊಲೆಯಲ್ಲಿ ಬೆಂಕಿ ಧಗಧಗನೆ ಉರಿಯುತ್ತಿತ್ತು. ನನ್ನೊಳಗೆ ಉರಿ, ಬೆಂಕಿ, ಹೊಗೆ. ಗೌರಿ ತಣ್ಣಗೆ ಕೂತು ಸೀಗೆ ಅರೆಯುತ್ತಿದ್ದಳು’ ಎಂದು ಅವರ ತಪ್ತ’ ಕತೆ ಕೊನೆಯಾಗುತ್ತದೆ. ಆ ಸಾಲುಗಳು ಆ ಜಮಾನದ ಕನ್ನಡ ಕತೆಗಾರರನ್ನು ಎಷ್ಟರ ಮಟ್ಟಿಗೆ ಕಾಡಿತ್ತೆಂದರೆ, ನಂತರ ಬಂದ ಅನೇಕರ ಕತೆಗಳಲ್ಲೂ ಅಗ್ನಿಕುಂಡ. ಕಣ್ಣೊಳಗೆ ಧಗಧಗಿಸುವ ಬೆಂಕಿ, ಮಗುಚಿಕೊಳ್ಳುವ ಮತ್ತೊಂದು ಜಗತ್ತು, ಕಾಡುವ ಹಳವಂಡ, ಕಾಡಿನ ನಡುವೆ ನಿಗೂಢ ಹಾದಿ ಮತ್ತು ಇದ್ದಕ್ಕಿದ್ದ ಹಾಗೆ ಮುಖಾಮುಖಿಯಾಗುವ ಅಕ್ಕನ ಮಗಳು ಮತ್ತು ನಗರದಲ್ಲಿ ಆಪ್ತಳಾದ ಪ್ರೇಯಸಿ. ಕೊನೆಗೂ ನಾಯಕ ಒಲಿಯುವುದು ಯಾರಿಗೆ ಎನ್ನುವುದು ಮಾತ್ರ ನೀಲಿನೀಲಿ.
ಆಲನಹಳ್ಳಿ ಕೂಡ ತನ್ನ ಹಳ್ಳಿ ಮತ್ತು ಮೈಸೂರಿನ ಮಧ್ಯೆ ನೆಲೆಕಳಕೊಂಡು ಅಲೆದಾಡುತ್ತಿದ್ದಿರಬಹುದೇ ಎಂಬ ಗುಮಾನಿ. ಅವರು ಎಂಎ ಮುಗಿಸಿದ್ದರು ಎಂದರೆ ಯಾಕೋ ಅನುಮಾನ. ಮ್ಯಾಥ್ಯಾ ಆರ್ನಾಲ್ಡನ ಸ್ಕಾಲರ್ ಜಿಪ್ಸಿ’ಯ
ಹಾಗೆ ಆಲನಹಳ್ಳಿ ಸುಮ್ಮನೆ ಸುಮ್ಮನೆ ಆಪ್ತವಾಗುತ್ತಿದ್ದ ಪರಿ ಅನನ್ಯ. ಬಹುಶಃ ಆಲನಹಳ್ಳಿಯನ್ನು ಪ್ರೀತಿಸಿದಷ್ಟು ಗಾಢವಾಗಿ ಕನ್ನಡದ ಓದುಗರು ಪ್ರೀತಿಸಿದ ಮತ್ತೊಬ್ಬ ಲೇಖಕ ತೇಜಸ್ವಿ ಮಾತ್ರ. ತೇಜಸ್ವಿ ಪ್ರಕೃತಿಯ ನಿಗೂಢಗಳನ್ನು ಕಂಡು ಬೆರಗಾದರೆ, ಆಲನಹಳ್ಳಿ ಸಂಬಂಧದ ನಿಗೂಢ ಹೆಣಿಗೆಳನ್ನು ಕಂಡು ಬೆಚ್ಚಿನಿಂತವರು.
**********
ಅಗ್ರಹಾರ ಕೃಷ್ಣಮೂರ್ತಿ ಜೊತೆ ಆಲನಹಳ್ಳಿ ಹೇಳುತ್ತಿದ್ದರಂತೆ: ನಾನೊಂದು ಆತ್ಮಕತೆ ಬರೆಯುತ್ತಿದ್ದೇನೆ. ಮೂರು ಭಾಗಗಳಲ್ಲಿ. ಮೊದಲ ಭಾಗ ನನ್ನ ಬಾಲ್ಯ’, ಎರಡನೆಯ ಭಾಗ ನನ್ನ ಪ್ರಣಯ ಪ್ರಸಂಗಗಳು’, ಹಾಗೆ ಹೇಳುತ್ತಾ ಗಹಗಹಿಸಿ ನಗುತ್ತಾ, ಜಗತ್ತು ಹಾರಿಹೋಗುವಂತೆ ಮಾತಾಡುತ್ತಿದ್ದ ಎಂದು ಅಗ್ರಹಾರ ನೆನಪಿಸಿಕೊಂಡಿದ್ದಾರೆ. ಆಲನಹಳ್ಳಿ ಆತ್ಮಚರಿತ್ರೆಗೆ ಮೂರನೆಯ ಭಾಗವೇ ಇರಲಿಲ್ಲ. ಕತೆಗಳಲ್ಲೂ ಕಾದಂಬರಿಗಳಲ್ಲೂ ಆಲನಹಳ್ಳಿ ಬಾಲ್ಯವನ್ನೂ, ಯೌವನವನ್ನೂ ಬಿಟ್ಟು ಆಚೆ ಬರಲೇ ಇಲ್ಲ. ಬಾಲ್ಯದ ಅನುಭವಗಳನ್ನು ಗ್ರಹಿಸಲು ಕಷ್ಟಪಟ್ಟ ಹಾಗೇ, ಯೌವನದ ತಲ್ಲಣಗಳನ್ನೂ ಅವರು ಹಿಡಿಯಲು ತಡಕಾಡುತ್ತಿದ್ದಂತಿತ್ತು. ಅದನ್ನು ಮೀರಲು ಎಂತೆಂಥದೋ ಸಾಹಸಗಳಲ್ಲಿ ತೊಡಗಿಕೊಂಡ ಬಗ್ಗೆ ಅನೇಕ ದಂತಕತೆಗಳಿದ್ದವು.
ಆಲನಹಳ್ಳಿಯ ಬೆಳಗು ಹೀಗೆ ಶುರು:
ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ
ಸೂರ್ಯ: ಜಿಬರೆಗಣ್ಣೊರೆಸುತ್ತಾಕಳಿಸಿ
ಕೊಬ್ಬಿದಾಡು, ಕುರಿ, ಕೋಳಿ ಸಿಗಿದು ಸೀಳಿ
ಕಂದು ನೀಲಿ ಬಿಳಿ ಕೆಂಪು ಖಂಡಗಳ ತೂಗಿಟ್ಟು
ಬಣ್ಣಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ
ನನ್ನೂರಿನಲ್ಲಿ ಬೆಳಗಾಯಿತು.
ಮೂಡಲ ಮನೆಯನ್ನು ಮಾಂಸದಂಗಡಿ ಎಂದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ, ಪ್ರಣಯಾಸಕ್ತ ಕಿಟ್ಟಿ ಹಾಜರು:
ಮೈನೆರೆದೇಳು ವರ್ಷವಾದರಿನ್ನೂ ಒಬ್ಬಂಟಿ
ಕತ್ತಲ ಸೆರೆಯೊಳಗೆ ಕೀಲು ನೋವಿಗತ್ತು ನರಳುವ
ನಮ್ಮೂರ ವೈದಿಕರ ಮಗಳ
ಬಿಡುಗಡೆಗೆಂದು ಕಾದಿದ್ದ ಗಾಳಿ
ಹಿತ್ತಲ ಕದತಟ್ಟಿ, ಪಿಸುಪಿಸುಗುಟ್ಟಿ ಕದ್ದು ನಡೆದಾಗ
ನನ್ನೂರಿನಲ್ಲಿ ಬೆಳಗಾಯಿತು.
ಇದನ್ನೆಲ್ಲ ಆಲನಹಳ್ಳಿ ಬೆಚ್ಚಿ ಬೀಳಿಸುವುದಕ್ಕೇ ಬರೆಯುತ್ತಿದ್ದರೇನೋ ಎಂದುಕೊಂಡು ಅವರ ಕಾವ್ಯಶಕ್ತಿಯನ್ನು ನಿರ್ಲಕ್ಷಿಸಲು ಹೊರಟರೆ, ಸೊಗಸಾದ ಸಾಲುಗಳು ಎದುರಾಗುತ್ತವೆ. ಊರ್ವಶಿ’ ಪದ್ಯದಲ್ಲಿ ಕ್ರೌರ್ಯದಲಿ ಕೆಂಡಗಳ ಮುಕ್ಕಳಿಸಿದಳು, ಧಗಧಗ ಬೆಂಕಿ ಅಲೆ, ಎದೆಗೊಟ್ಟು ನಿಲಲೆ? ಇಲ್ಲ, ದಡದಡ ಬಿಟ್ಟೋಡಲೆ? ಇಲ್ಲಿ ಒಂದಕ್ಕೊಂದು ಸಂಬಂಧ ಹೇಗಿದೆ ನೋಡಿ: ಕೆಂಡಗಳ ಮುಕ್ಕಳಿಸು, ಬೆಂಕಿ ಅಲೆ, ಎದೆಗೊಟ್ಟು ನಿಲಲೆ, ದಡ ದಡ ಬಿಟ್ಟೋಡಲೆ. ಅಲೆ, ದಡ.. ಅದು ಆಲನಹಳ್ಳಿ ರೂಪಕಶಕ್ತಿ.
ಕೊನೆಗೂ ನೆನಪಾಗುವುದು ಭುಜಂಗಯ್ಯ ಮತ್ತು ಗೆಂಡೆತಿಮ್ಮ. ಕಿಟ್ಟಿ ಬೆಳೆದು ಭುಜಂಗಯ್ಯನಾಗುತ್ತಾನೋ
ಗೆಂಡೆತಿಮ್ಮನೋ ಎಂಬ ಕುತೂಹಲ.
ಜೊತೆಗೇ ಮತ್ತೊಂದು ಪ್ರಶ್ನೆ: ಕೊನೆಗೂ ಆಳುಕೂಗಿನ ಹಕ್ಕಿಯ ಕರೆಗೆ ಆಲನಹಳ್ಳಿ ಓಗೊಟ್ಟಿರಬಹುದೇ? ಆ ಹಕ್ಕಿ ನಮ್ಮ ಹೆಸರನ್ನೂ ಕೂಗಿ ಕರೆಯುತ್ತಿರಬಹುದೇ? ಅಥವಾ ನಾವು ಆಳುಕೂಗಿನ ಹಕ್ಕಿಗೆ ಹೆದರಿ, ಯಾವ ಹಕ್ಕಿ ದನಿಯನ್ನೂ ಕೇಳಿಸಿಕೊಳ್ಳಲಾರದಷ್ಟು ಕಿವುಡಾಗಿ ಬಿಟ್ಟಿದ್ದೇವಾ?

‍ಲೇಖಕರು avadhi

March 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. msmanjunatha

  ಆಲನಹಳ್ಳಿಯವರ ಯಾವ ಪುಸ್ತಕವನ್ನು ಓದಿರದಿದ್ದ ನನಗೆ ಓದಬೇಕೆಂಬ ಕುತೂಹಲ ಹುಟ್ಟಿಸಿತು ನಿಮ್ಮ ಈ ಬರಹ ತುಂಬಾ ಆತ್ಮೀಯವಾಗಿ ಪರಿಚಯಿಸಿದ್ದೀರಿ ಶ್ರೀಕೃಷ್ಣರವರನ್ನ.

  ಪ್ರತಿಕ್ರಿಯೆ
 2. suresh kota

  ..ಅಥವಾ ಆ ಹಕ್ಕಿಯೇ ವಲಸೆ ಹೋಗಿರಬಹುದೇ?

  ಪ್ರತಿಕ್ರಿಯೆ
 3. ಅಕ್ಕಿಮಂಗಲ ಮಂಜುನಾಥ

  ಈ ಲೇಖನವನ್ನು ಇವತ್ತು ಓದಿ ಸವೀತಾ ಇದ್ದೀನಿ ಜೋಗಿಯವರೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: