ಜೋಗಿ ಬರೆದಿದ್ದಾರೆ: ಆ ಮಗುವಿನ ಪುಟ್ಟ ಕಣ್ಣುಗಳಲ್ಲಿ ಅಪ್ಪ ತೀರಿಕೊಂಡಿದ್ದ

-ಜೋಗಿ

door1

ಆ ಮಗುವಿನ ಪುಟ್ಟ ಕಣ್ಣುಗಳಲ್ಲಿ ಅಪ್ಪ ತೀರಿಕೊಂಡಿದ್ದ ಅವನೊಬ್ಬ ಫ್ಲಾಗ್ ಮನ್. ರೇಲು ಹಾದಿಯ ಬದಿಯಲ್ಲಿ ಕುಳಿತು ಪ್ರತಿ ದಿನ ಹಾದು ಹೋಗುವ ಒಂದೋ ಎರಡೋ ರೇಲುಗಳಿಗೆ ಬಾವುಟ ಬೀಸುವುದು ಅವನ ಕೆಲಸ. ತನಗೆ ಬುದ್ಧಿ ಬಂದಾಗಿನಿಂದ ಆತ ಅದೇ ಕೆಲಸ ಮಾಡಿಕೊಂಡು ಬಂದಿದ್ದಾನೆ. ಊರಿನ ಮಂದಿಗೂ ಅವನ ಕೆಲಸವೇನು ಅನ್ನುವುದು ಗೊತ್ತಿದೆ. ಅವನು ಯಾವಾಗ ಎಲ್ಲೆಲ್ಲಿರುತ್ತಾನೆ ಅನ್ನುವುದೂ ಜನಕ್ಕೆ ಗೊತ್ತಿದೆ. ಉದಾಹರಣೆಗೆ ಭಾನುವಾರ ಅವನು ದೇವಸ್ಥಾನದ ಮುಂದಿರುವ ಕಲ್ಲುಬೆಂಚಿನ ಮೇಲೆ ಕೂತಿದ್ದು ಕಾಣಿಸದೇ ಇದ್ದರೆ ಆತ ಕಾಯಿಲೆ ಬಿದ್ದಿದ್ದಾನೆ ಎಂದು ಜನ ಸುಲಭವಾಗಿ ಊಹಿಸುತ್ತಿದ್ದರು. ಒಮ್ಮೆ ರೇಲಿನಿಂದ ಸಿಡಿದ ಹೊತ್ತಿ ಉರಿಯುವ ಕಲ್ಲಿದ್ದಲ ತುಂಡು ಕಾಲಿಗೆ ಬಡಿದದ್ದು, ಇನ್ನೊಮ್ಮೆ ಯಾರೋ ರೇಲಿನಿಂದ ಎಸೆದ ಬಾಟಲಿಯೊಂದು ಎದೆಗೆ ಬಡಿದದ್ದು ಬಿಟ್ಟರೆ ಅವನು ಅಪಘಾತಕ್ಕೆ ಈಡಾದದ್ದೇ ಇಲ್ಲ.

ಅವನ ಹೆಸರು ಕೇಶು ಎಂದಿಟ್ಟುಕೊಳ್ಳಿ. ತಾನು, ತನ್ನ ಉದ್ಯೋಗ; ಅವನು ಇರುವುದೇ ಹಾಗೆ ಎಂದರು ಜನ. ಯಾವತ್ತೂ ಬದಲಾಗದ ಸ್ಮಶಾನದ ರಸ್ತೆಯ ಹಾಗೆ. ಅವನ ಬದುಕು ಎಷ್ಟು ನೀರಸವಾಗಿತ್ತೆಂದರೆ ಜನರಿಗೇ ಅದು ಬೋರಾಗಲು ಶುರುವಾಗಿತ್ತು. ಇಷ್ಟೊಂದು ನೀರಸವಾಗಿ ಈಗ ಹೇಗೆ ಬದುಕುತ್ತಿದ್ದಾನೆ ಎಂದು ಎಲ್ಲರೂ ರೇಜಿಗೆ ಪಟ್ಟುಕೊಳ್ಳುತ್ತಿದ್ದ ಒಂದು ದಿನ ಅವನೊಂದು ಸಣಕಲು ಹೆಣ್ಣಿನೊಂದಿಗೆ ಪ್ರತ್ಯಕ್ಪನಾದ.

ಜನರಿಗೆ ಕೇಶು ಬಗ್ಗೆ ಆಸಕ್ತಿ ಮೂಡಿತು. ಮಾತಾಡುವುದಕ್ಕೊಂದು ವಿಷಯ ಸಿಕ್ಕಂತಾಯಿತು. ಕೇಶು ಕರಕೊಂಡು ಬಂದ ಹುಡುಗಿ ಅವನಿಗೆ ತಕ್ಕವಳಲ್ಲ. ಇವನೋ ಕಟ್ಟುಮಸ್ತಾದ, ತುಂಬುತೋಳಿನ ದೃಢಕಾಯ. ಆಕೆಯೋ ಪೀಚಲು ಹುಡುಗಿ ಎಂದು ಮಾತಾಡಿಕೊಂಡರು. ಅವರಿಬ್ಬರು ಜೊತೆಗಿರುವ ಕ್ಪಣಗಳನ್ನು ಊಹಿಸಿ ಗುಟ್ಟಾಗಿ ನಕ್ಕರು. ನೋಡನೋಡುತ್ತಿದ್ದಂತೆ ದೇವಸ್ಥಾನಕ್ಕೆ ಕೇಶು ಮತ್ತು ಅವನ ಹೆಂಡತಿ ಬರತೊಡಗಿದರು. ಕ್ರಮೇಣ ಜನರು ಅವರಿಬ್ಬರ ವಿಪರ್ಯಾಸದ ಗಾತ್ರಕ್ಕೆ ಹೊಂದಿಕೊಂಡುಬಿಟ್ಟರು. ಅವರಿಗೆ ಮಾತಾಡುವುದಕ್ಕೆ ಮತ್ತೊಂದು ವಿಷಯವನ್ನು ಒದಗಿಸಿದ ಕೇಶು. ಅವನಿಗೊಂದು ಮಗುವಾಗಿತ್ತು. ಮಾತಿಗೆ ಸಿಕ್ಕ ಸುದ್ದಿ ಅದಲ್ಲ. ಹೆರಿಗೆಯಲ್ಲಿ ಅವನ ಹೆಂಡತಿ ತೀರಿಕೊಂಡಿದ್ದಳು.

ಹೆಂಡತಿ ಸತ್ತ ಸುದ್ದಿಗೆ ಅಂಥ ರೋಚಕತೆ ಇರುವುದಿಲ್ಲ. ಅದರಲ್ಲಿ ಒಂಥರದ ಅನುಕಂಪ ಮತ್ತು ನಿರಾಳತೆ ಬೆರೆತುಕೊಂಡಿರುತ್ತದೆ. ಎರಡನ್ನೂ ಬೇರ್ಪಡಿಸಿ ಮಾತಾಡುವುದು ಕಷ್ಟವಾಗುತ್ತದೆ. ಹೀಗಾಗಿ ಜನ ಆ ಸುದ್ದಿಯನ್ನು ಜಾಸ್ತಿ ಹಿಂಜಲಿಲ್ಲ. ಆದರೆ ಹೆಂಡತಿ ಸತ್ತ ತಿಂಗಳಿಗೇ ಕೇಶು ಮತ್ತೊಬ್ಬ ಹುಡುಗಿಯನ್ನು ಮದುವೆಯಾದ. ಕೇಶುವಿನಂತೆಯೇ ದಷ್ಟಪುಷ್ಟಳಾಗಿದ್ದ ಹೊಸ ಹೆಂಡತಿಯ ಜೊತೆಗೇ ಮನೆಗೆ ಕಾಲಿಟ್ಟ ಮೂರು ಸಂಗತಿಗಳೆಂದರೆ; ಅಹಂಕಾರ, ಜಗಳಗಂಟಿತನ ಮತ್ತು ಕೆಂಡಾಮಂಡಲ ಸಿಟ್ಟು.

ಇಡೀ ಊರಿಗೆ ಒಂದು ಶತಮಾನಕ್ಕಾಗುವಷ್ಟು ಮಾತಿಗೆ ವಸ್ತು ಸಿಕ್ಕಿತು. ಇಬ್ಬರೂ ಮೊದಲ ವರುಷ ಭೀಕರವಾಗಿ ಜಗಳ ಆಡುವುದನ್ನು ಜನ ಕೇಳಿಸಿಕೊಂಡರು. ಎರಡನೆಯ ವರುಷ ಕೇಶುವಿನ ಧ್ವನಿ ಕೇಳಿಸುತ್ತಿರಲಿಲ್ಲ; ಹೆಂಡತಿ ರಂಭಾ ರೋಟಿ ಕಿರುಚುತ್ತಿದ್ದಳು. ಮೂರನೆ ವರುಷ ಅವಳಿಗೊಂದು ಮಗುವಾಯಿತು. ಆಗ ಕೇಶುವಿನ ಮೊದಲ ಮಗುವಿಗೆ ಮೂರು ವರುಷ.

ತನ್ನ ಮಗುವಿಗೆ ಕೇಶು ಇಟ್ಟ ಹೆಸರು ಶಂಕು. ಶಂಕುವಿನ ಬಗ್ಗೆ ಹೆಂಡತಿ ರೇಗಾಡಿದಾಗೆಲ್ಲ ಕೇಶುವಿನ ರಕ್ತ ಕುದಿಯುತ್ತಿತ್ತು. ಅವಳನ್ನು ಜೋರಾಗಿ ಗದರಿಸಿಬಿಡುತ್ತಿದ್ದ. ಹೀಗಾಗಿ ಶಂಕುವಿನ ಬಗ್ಗೆ ಆಕೆ ಮಾತಾಡುವುದಕ್ಕೇ ಹೋಗುತ್ತಿರಲಿಲ್ಲ. ಕ್ರಮೇಣ ಕೇಶು ಇಲ್ಲದ ಹೊತ್ತಲ್ಲಿ ಆಕೆ ಶಂಕುವನ್ನು ಬೈಯುವುದಕ್ಕೆ ಶುರುಮಾಡಿದಳು. ಜನಕ್ಕೆ ಮತ್ತೊಂದು ಸುದ್ದಿ ಸಿಕ್ಕಿತು. ಕೇಶುವಿನ ಎರಡನೆಯ ಹೆಂಡತಿ ರಾಕ್ಪಸಿ ಅನ್ನುವ ವಿಚಾರವನ್ನು ಅವರೆಲ್ಲ ಮನಸೋ ಇಚ್ಚೆ ಜಗ್ಗಾಡಿದರು.

ಅವರವರ ನಡುವೆಯೇ ಬಣಗಳಾದವು. ಶಂಕುವನ್ನು ಹೊಡೆದರೆ ಕೇಶು ಸಿಟ್ಟಾಗುತ್ತಾನೆ. ಹೆಂಡತಿಯನ್ನೇ ಹೊಡೆದಟ್ಟುತ್ತಾನೆ ಎಂದು ಒಂದು ಬಣವೂ ಅವನು ಹಾಗೆಲ್ಲ ಮಾಡೋಲ್ಲ ಎಂದು ಇನ್ನೊಂದು ಬಣವೂ ಮಾತಾಡಿಕೊಂಡಿತು. ಹೀಗಿರುವಾಗ ಒಂದು ದಿನ ಆತ ರಾತ್ರಿ ಬಂದಾಗ ಶಂಕು ಅಳುತ್ತಾ ಮಲಗಿದ್ದ. ಕತ್ತಲಲ್ಲೇ ಅವನ ಕೆನ್ನೆಯ ಮೇಲೆ ಕಂಬನಿ ಧಾರೆಯಾಗುವುದನ್ನು ಕೇಶು ಕಂಡುಕೊಂಡ.

ಆವತ್ತು ಕೇಶುವಿಗೆ ಸಿಟ್ಟು ಬಂದಿತ್ತು. ಸಿಟ್ಟಿನಲ್ಲಿ ಆತ ಮುಷ್ಟಿ ಕಟ್ಟಿ ಹೆಂಡತಿಯನ್ನು ಗುದ್ದಿ ಸಾಯಿಸಬೇಕು ಅಂದುಕೊಂಡ. ಆದರೆ ಬಂದ ಸಿಟ್ಟನ್ನು ಹಾಗೇ ತಡೆದುಕೊಂಡ. ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ‘ಶಂಕುವಿನ ಮೇಲೂ ಸ್ವಲ್ಪ ಕನಿಕರವಿರಲಿ’ ಎಂದು ಗದ್ಗದಿತನಾಗಿ ಹೇಳಿದ್ದನ್ನು ಪಕ್ಕದ ಮನೆಯವಳು ಅಳುತ್ತಾ ಹಲವರಿಗೆ ಹೇಳಿದಳು.

ಇದಾದ ಎರಡು ವಾರಗಳ ನಂತರ ಕೇಶು ಡ್ಯೂಟಿಗೆ ಹೋದ. ಅಲ್ಲಿಗೆ ಹೋದ ನಂತರ ರಾತ್ರಿಯ ತಿಂಡಿಯನ್ನು ಮರೆತೇ ಬಂದಿದ್ದೇನೆ ಅನ್ನೋದು ಅವನಿಗೆ ನೆನಪಾಯಿತು. ಮಧ್ಯಾಹ್ನವೂ ಆತ ಏನೂ ತಿಂದಿರಲಿಲ್ಲ. ತಿಂಡಿಯಿಲ್ಲದೇ ಚಳಿಯಲ್ಲಿ ಇಡೀ ರಾತ್ರಿ ಕಳೆಯುವುದು ಕಷ್ಟ ಎನ್ನಿಸಿ ಮನೆಗೆ ವಾಪಸ್ಸು ಮರಳಿದ; ಮನೆಗೆ ಹತ್ತಿರವಾಗುತ್ತಿದ್ದಂತೆ ಯಾರೋ ಜೋರಾಗಿ ಕಿರುಚುವ ಸದ್ದು ಕೇಳಿಸಿತು. ಅದು ತನ್ನ ಮಗ ಶಂಕುವಿನ ಅಳು ಅನ್ನುವುದೂ ಅರಿವಾಯಿತು. ಸಿಟ್ಟಿನಿಂದ ಬೀಸ ಬೀಸ ಹೆಜ್ಜೆಹಾಕಿ ಮನೆ ಹತ್ತಿರ ಬಂದ. ಅಲ್ಲಿ ಹೆಂಡತಿ ಶಂಕುವನ್ನು ಬಾಯಿಗೆ ಬಂದ ಹಾಗೆ ಬೈಯುವುದು ಕೇಳಿಸಿತು. ಅವಳನ್ನು ಹಿಡಕೊಂಡು ಜಪ್ಪಬೇಕು ಅಂದುಕೊಂಡು ವೇಗವಾಗಿ ಒಳಗೆ ನುಗ್ಗಿದ.

ಕೇಶುವಿನ ಎರಡನೆಯ ಹೆಂಡತಿ ಈತ ಥಟ್ಟನೆ ನುಗ್ಗಿದ ಅಚ್ಚರಿಯಿಂದ ಪಾರಾಗಲೆಂಬಂತೆ ತಾನು ದಬದಬ ಗುದ್ದುತ್ತಿದ್ದ ಶಂಕುವನ್ನು ಪಕ್ಕಕ್ಕೆ ಬಿಟ್ಟು ತನ್ನ ಪುಟ್ಟ ಮಗುವಿನ ಬಾಟಲಿಗೆ ಹಾಲು ತುಂಬಿಸತೊಡಗಿದಳು. ಅವಳನ್ನೇ ಕೇಶು ಸಿಟ್ಟಿನಿಂದ ನೋಡಿದ. ಅವಳ ತುಂಬಿದ ಮೈ ತನ್ನನ್ನು ನಡುಗಿಸುತ್ತಿದೆ ಅನ್ನಿಸಿತು. ಅದನ್ನು ಮೀರುವ ಶಕ್ತಿ ತನಗಿಲ್ಲ ಅನ್ನಿಸಿತು. ಕೇಶು ಮೌನವಾಗಿ ಬೆಂಚಿನ ಮೇಲಿಟ್ಟಿದ್ದ ತಿಂಡಿಯ ಕಟ್ಟನ್ನೆತ್ತಿಕೊಂಡು ತಾನು ಬಂದಿದ್ದು ಇದಕ್ಕೋಸ್ಕರವೇ ಎಂಬಂತೆ ಕತ್ತುಕೊಂಕಿಸಿ ಸೂಚಿಸಿ, ತಾನು ಏನನ್ನೂ ನೋಡಿಲ್ಲ ಎಂಬಂತೆ ನಿಧಾನವಾಗಿ ಮೆಟ್ಟಿಲಿಳಿದು ಹೊರಟು ಹೋದದ್ದನ್ನು ಪುಟ್ಟ ಶಂಕು ನೋವಿನಿಂದ ಆಳಕ್ಕಿಳಿದ ಕಣ್ಣುಗಳಿಂದ ನೋಡಿದ.

ಈ ಕತೆ ಬರೆದವನು ಜರ್ಮನಿಯ ಗೆರ್ಹಾರ್ಟ್ ಹಾಪ್ಟ್ಮನ್

‍ಲೇಖಕರು avadhi

November 18, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

3 ಪ್ರತಿಕ್ರಿಯೆಗಳು

  1. Santhosh Ananthapura

    beautiful Sirji. ಭಾವನೆಗಳನ್ನು ಹೆಕ್ಕಿ ತೆಗೆಯುವಲ್ಲಿ ನೀವು ನಿಸ್ಸೀಮರು. ನಿಜಕ್ಕೂ ಆ ಮಗುವಿನ ಕಣ್ಣಲ್ಲಿ ಅವನ ಅಪ್ಪ ತೀರಿ ಹೋಗಿದ್ದ. keep posting such a good ones.

    ಪ್ರತಿಕ್ರಿಯೆ
  2. sharada naik

    ಒದುತ್ತ ಹೋದಂತೆ ಮನಸ್ಸು ಭಾರವಾಯ್ತು. ಒಂದು ಕ್ಷಣ ಆ ಮಗು ಕಣ್ಮುಂದೆ ಬಂತು. ಇಂಥ ಸೂಕ್ಷ್ಮಗಳನ್ನು ಮನತಟ್ಟುವಂತೆ ಬರಿತಿರಲ್ಲಾ ಖುಷಿಯಾಗುತ್ತೆ.ಹೀಗೆ ಬರಿತಾನೇ ಇರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: